ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 47

ಬದಲಾವಣೆ ಮಾಡಿಕೊಳ್ಳೋಕೆ ತಯಾರಾಗಿದ್ದೀರಾ?

ಬದಲಾವಣೆ ಮಾಡಿಕೊಳ್ಳೋಕೆ ತಯಾರಾಗಿದ್ದೀರಾ?

“ಕೊನೆಯದಾಗಿ ಸಹೋದರರೇ, ಸಂತೋಷಪಡುತ್ತಾ, ಪುನಃ ಸರಿಹೊಂದಿಸಲ್ಪಡುತ್ತಾ . . . ಇರಿ.”—2 ಕೊರಿಂ. 13:11.

ಗೀತೆ 65 “ಇದೇ ಮಾರ್ಗ”

ಕಿರುನೋಟ *

1. ಮತ್ತಾಯ 7:13, 14 ರ ಪ್ರಕಾರ ನಮ್ಮ ಜೀವನ ಒಂದು ಪ್ರಯಾಣದ ತರ ಇದೆ ಅಂತ ಯಾಕೆ ಹೇಳ್ಬಹುದು?

ನಮ್ಮ ಜೀವನ ಒಂದು ಪ್ರಯಾಣದ ತರ ಇದೆ. ನಾವು ಯೆಹೋವನ ಆಳ್ವಿಕೆಯಿರೋ ಹೊಸ ಲೋಕಕ್ಕೆ ತಲುಪಬೇಕಿದೆ. ಪ್ರತಿದಿನ ನಾವೆಲ್ರೂ ಜೀವದ ದಾರಿಯಲ್ಲೇ ನಡೆಯೋಕೆ ಪ್ರಯತ್ನಿಸ್ತೇವೆ. ಆದ್ರೆ ಯೇಸು ಹೇಳಿದ ಹಾಗೆ ಆ ದಾರಿ ಇಕ್ಕಟ್ಟಾಗಿದೆ ಮತ್ತು ಕೆಲವೊಮ್ಮೆ ಆ ದಾರಿಯಲ್ಲಿ ನಡೆಯೋಕೆ ಕಷ್ಟ ಆಗುತ್ತೆ. (ಮತ್ತಾಯ 7:13, 14 ಓದಿ.) ಜೊತೆಗೆ ನಾವು ಅಪರಿಪೂರ್ಣರಾಗಿದ್ದೇವೆ. ಆದ್ರಿಂದ ಆ ದಾರಿ ಬಿಟ್ಟು ಬೇರೆ ಕಡೆ ಹೋಗೋ ಸಾಧ್ಯತೆ ಇದೆ.—ಗಲಾ. 6:1.

2. ಈ ಲೇಖನದಲ್ಲಿ ನಾವೇನನ್ನು ಕಲಿಯುತ್ತೇವೆ? (“ ಸರಿಯಾದ ದಾರಿಯಲ್ಲಿ ನಡಿಯೋಕೆ ಸಹಾಯ ಮಾಡುತ್ತೆ ದೀನತೆ” ಚೌಕ ನೋಡಿ.)

2 ಜೀವಕ್ಕೆ ನಡೆಸೋ ಇಕ್ಕಟ್ಟಾದ ದಾರಿಯಲ್ಲಿ ನಾವು ನಡೀತಾ ಇರಬೇಕಂದ್ರೆ ನಮ್ಮ ಯೋಚನೆಯಲ್ಲಿ, ಇಷ್ಟಾನಿಷ್ಟಗಳಲ್ಲಿ ಮತ್ತು ನಾವು ನಡ್ಕೊಳ್ಳೋ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳೋಕೆ ತಯಾರಿರಬೇಕು. ಅಪೊಸ್ತಲ ಪೌಲನು ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ‘ಪುನಃ ಸರಿಹೊಂದಿಸಿಕೊಳ್ಳಿರಿ’ ಅಂತ ಹೇಳಿದ್ನು. (2 ಕೊರಿಂ. 13:11) ಈ ಸಲಹೆಯನ್ನ ನಾವು ಸಹ ಅನ್ವಯಿಸಿಕೊಳ್ಬೇಕು. ಬದಲಾವಣೆ ಮಾಡಿಕೊಳ್ಳೋಕೆ ಬೈಬಲ್‌ ನಮಗೆ ಹೇಗೆ ಸಹಾಯ ಮಾಡುತ್ತೆ ಮತ್ತು ಜೀವಕ್ಕೆ ನಡೆಸೋ ದಾರಿಯಲ್ಲೇ ನಡೆಯೋಕೆ ಪ್ರೌಢ ಕ್ರೈಸ್ತರು ಅಥ್ವಾ ಸಭೆಯಲ್ಲಿ ಒಳ್ಳೇ ಮಾದರಿ ಇಟ್ಟಿರೋ ಕ್ರೈಸ್ತರು ನಮಗೆ ಹೇಗೆ ಸಹಾಯ ಮಾಡ್ತಾರೆ ಅಂತ ಈ ಲೇಖನದಲ್ಲಿ ನೋಡ್ತೇವೆ. ಯೆಹೋವನ ಸಂಘಟನೆ ಕೊಡೋ ಮಾರ್ಗದರ್ಶನ ಪಾಲಿಸೋಕೆ ನಮಗೆ ಯಾಕೆ ಕಷ್ಟ ಆಗ್ಬಹುದು ಅಂತಾನೂ ನೋಡ್ತೇವೆ. ನಾವು ಬದಲಾವಣೆ ಮಾಡಿಕೊಳ್ವಾಗ್ಲೂ ಸಂತೋಷದಿಂದ ಯೆಹೋವನ ಸೇವೆಯನ್ನ ಮಾಡೋಕೆ ದೀನತೆ ನಮಗೆ ಹೇಗೆ ಸಹಾಯ ಮಾಡುತ್ತೆ ಅಂತಾನೂ ಕಲಿಯುತ್ತೇವೆ.

ದೇವರ ವಾಕ್ಯದ ಸಹಾಯದಿಂದ ಬದಲಾವಣೆ ಮಾಡಿಕೊಳ್ಳಿ

3. ದೇವರ ವಾಕ್ಯ ನಾವು ಯಾವ ವಿಷ್ಯ ತಿಳ್ಕೊಳ್ಳೋಕೆ ಸಹಾಯ ಮಾಡುತ್ತೆ?

3 ನಮ್ಮ ಯೋಚನೆಗಳನ್ನ, ಭಾವನೆಗಳನ್ನ ನಾವೇ ಪರೀಕ್ಷಿಸಿಕೊಳ್ಳೋಕೆ ಆಗಲ್ಲ. ಯಾಕಂದ್ರೆ ನಮ್ಮ ಹೃದಯ ವಂಚಕ. ಅದು ಯಾವಾಗ್ಲೂ ನಮಗೆ ಸರಿಯಾಗಿರೋದನ್ನೇ ಮಾಡೋಕೆ ಪ್ರೇರೇಪಿಸುತ್ತೆ ಅಂತ ಹೇಳೋಕಾಗಲ್ಲ. (ಯೆರೆ. 17:9) ನಾವು ‘ಸುಳ್ಳಾದ ತರ್ಕಗಳನ್ನು’ ಮಾಡಿ ನಮ್ಮನ್ನು ನಾವೇ ವಂಚಿಸಿಕೊಳ್ಬಹುದು. (ಯಾಕೋ. 1:22) ಹಾಗಾಗಿ ನಮ್ಮನ್ನು ಪರೀಕ್ಷೆ ಮಾಡ್ಕೊಬೇಕಂದ್ರೆ ದೇವರ ವಾಕ್ಯವನ್ನ ಉಪಯೋಗಿಸ್ಬೇಕು. ನಾವು ನಿಜವಾಗಿಯೂ ಎಂಥವರಾಗಿದ್ದೇವೆ, ನಮ್ಮ ಹೃದಯದ ‘ಆಲೋಚನೆಗಳು ಮತ್ತು ಸಂಕಲ್ಪಗಳು’ ಏನಾಗಿವೆ ಅಂತ ದೇವರ ವಾಕ್ಯದಿಂದ ಗೊತ್ತಾಗುತ್ತೆ. (ಇಬ್ರಿ. 4:12, 13) ದೇವರ ವಾಕ್ಯ ಎಕ್ಸ್‌-ರೇ ಮೆಷಿನ್‌ ತರ ಇದೆ. ಅದು ನಾವು ಒಳಗೆ ಎಂಥ ವ್ಯಕ್ತಿಗಳಾಗಿದ್ದೇವೆ ಅಂತ ತಿಳ್ಕೊಳ್ಳೋಕೆ ಸಹಾಯ ಮಾಡುತ್ತೆ. ಆದ್ರೆ ದೇವರ ವಾಕ್ಯದ ಅಥ್ವಾ ದೇವಸೇವಕರ ಸಲಹೆಯಿಂದ ನಾವು ಪ್ರಯೋಜನ ಪಡ್ಕೊಬೇಕಂದ್ರೆ ನಾವು ದೀನರಾಗಿರಬೇಕು.

4. ರಾಜ ಸೌಲ ಅಹಂಕಾರಿಯಾದ ಅಂತ ಹೇಗೆ ಗೊತ್ತಾಗುತ್ತೆ?

4 ನಮಗೆ ದೀನತೆ ಇಲ್ಲಾಂದ್ರೆ ಏನಾಗುತ್ತೆ ಅಂತ ರಾಜ ಸೌಲನ ಉದಾಹರಣೆಯಿಂದ ಗೊತ್ತಾಗುತ್ತೆ. ಸೌಲನಿಗೆ ಅಹಂಕಾರ ಎಷ್ಟು ತಲೆಗೇರಿತ್ತಂದ್ರೆ ತನ್ನ ಯೋಚನೆ ಮತ್ತು ನಡತೆಯಲ್ಲಿ ಬದಲಾವಣೆ ಮಾಡ್ಕೊಬೇಕಿದೆ ಅಂತ ಅವನು ಒಪ್ಪಿಕೊಳ್ಳಲಿಲ್ಲ, ಆ ತರ ಅವನಿಗೆ ಅನಿಸ್ಲೂ ಇಲ್ಲ. (ಕೀರ್ತ. 36:1, 2; ಹಬ. 2:4) ಉದಾಹರಣೆಗೆ, ಅಮಾಲೇಕ್ಯರನ್ನು ಸೋಲಿಸಿದ ನಂತ್ರ ಏನು ಮಾಡ್ಬೇಕಂತ ಯೆಹೋವ ದೇವ್ರು ಸೌಲನಿಗೆ ನಿರ್ದಿಷ್ಟವಾಗಿ ಹೇಳಿದ್ದನು. ಆದ್ರೆ ಸೌಲ ಯೆಹೋವನ ಮಾತಿನ ಪ್ರಕಾರ ನಡ್ಕೊಳ್ಳಲಿಲ್ಲ. ಪ್ರವಾದಿ ಸಮುವೇಲನು ಸೌಲನಿಗೆ ‘ನೀನು ಯಾಕೆ ಈ ರೀತಿ ಮಾಡಿದೆ?’ ಅಂತ ಕೇಳ್ದಾಗ ಅವನು ತನ್ನ ತಪ್ಪನ್ನ ಒಪ್ಪಿಕೊಳ್ಳಲಿಲ್ಲ. ಬದ್ಲಿಗೆ ತಾನೇನು ಅಷ್ಟು ದೊಡ್ಡ ತಪ್ಪು ಮಾಡಿಲ್ಲ ಅಂತ ಸಮರ್ಥಿಸಿಕೊಂಡ ಮತ್ತು ತನ್ನ ತಪ್ಪನ್ನು ಬೇರೆಯವ್ರ ಮೇಲೆ ಹೊರಿಸಿದ. (1 ಸಮು. 15:13-24) ಸೌಲ ಈ ತರ ಮಾಡಿದ್ದು ಇದೇ ಮೊದಲಲ್ಲ. ಇದಕ್ಕಿಂತ ಮುಂಚೆನೂ ಮಾಡಿದ್ದ. (1 ಸಮು. 13:10-14) ಸೌಲ ತನ್ನ ಯೋಚನೆಯನ್ನ ಬದಲಾಯಿಸಿಕೊಳ್ಳಲಿಲ್ಲ, ಅಹಂಕಾರಿಯಾದ. ಅದಕ್ಕೇ ಯೆಹೋವನು ಅವನನ್ನು ಖಂಡಿಸಿದನು ಮತ್ತು ತಿರಸ್ಕರಿಸಿದನು.

5. ಸೌಲನ ಉದಾಹರಣೆಯಿಂದ ನಾವೇನು ಕಲಿಬಹುದು?

5 ನಾವು ಸೌಲನ ತರ ಆಗಬಾರದಂದ್ರೆ ಈ ಪ್ರಶ್ನೆಗಳನ್ನ ಕೇಳ್ಕೊಬೇಕು: ‘ದೇವರ ವಾಕ್ಯದಿಂದ ಒಂದು ಸಲಹೆಯನ್ನ ಓದಿದಾಗ ನನ್ನ ಯೋಚನೆನೇ ಸರಿ ಅಂತ ಸಮರ್ಥಿಸಿಕೊಳ್ತೇನಾ? ನಾನು ಮಾಡ್ತಿರೋದು ಅಷ್ಟೇನು ದೊಡ್ಡ ತಪ್ಪಲ್ಲ ಅಂತ ಯೋಚಿಸ್ತೇನಾ? ನನ್ನ ತಪ್ಪನ್ನ ಬೇರೆಯವ್ರ ಮೇಲೆ ಹೊರಿಸ್ತೀನಾ?’ ಇವುಗಳಲ್ಲಿ ಯಾವುದೇ ಪ್ರಶ್ನೆಗೆ ನಮ್ಮ ಉತ್ತರ ಹೌದು ಅಂತಾದರೆ ನಮ್ಮ ಯೋಚನೆ ಮತ್ತು ಇಷ್ಟಾನಿಷ್ಟಗಳಲ್ಲಿ ಬದಲಾವಣೆ ಮಾಡ್ಕೊಬೇಕು ಅಂತ ಅರ್ಥ. ಹಾಗೆ ಮಾಡದಿದ್ದರೆ ನಾವು ಸಹ ಅಹಂಕಾರಿಗಳಾಗ್ತೇವೆ ಮತ್ತು ಯೆಹೋವ ನಮ್ಮನ್ನ ತಿರಸ್ಕರಿಸ್ತಾನೆ. ನಾವು ಆತನ ಸ್ನೇಹ ಕಳಕೊಳ್ತೇವೆ.—ಯಾಕೋ. 4:6.

6. ರಾಜ ಸೌಲ ಮತ್ತು ರಾಜ ದಾವೀದನ ಮಧ್ಯೆ ಇದ್ದ ವ್ಯತ್ಯಾಸವನ್ನ ವಿವರಿಸಿ.

6 ರಾಜ ಸೌಲ ಮತ್ತು ಅವನ ನಂತ್ರ ರಾಜನಾದ ದಾವೀದನ ಮಧ್ಯೆ ಎಷ್ಟು ವ್ಯತ್ಯಾಸ ಇತ್ತು ಅಂತ ಗಮನಿಸಿ. ದಾವೀದ ‘ಯೆಹೋವನ ಧರ್ಮಶಾಸ್ತ್ರವನ್ನ’ ಪ್ರೀತಿಸ್ತಿದ್ದ. (ಕೀರ್ತ. 1:1-3) ಯೆಹೋವನು ದೀನರನ್ನು ರಕ್ಷಿಸ್ತಾನೆ, ಅಹಂಕಾರಿಗಳನ್ನು ವಿರೋಧಿಸ್ತಾನೆ ಅಂತ ದಾವೀದನಿಗೆ ಗೊತ್ತಿತ್ತು. (2 ಸಮು. 22:28) ಅದಕ್ಕೇ ದಾವೀದ ದೇವರ ವಾಕ್ಯವನ್ನು ಓದಿ ಅದಕ್ಕೆ ತಕ್ಕಂತೆ ತನ್ನ ಯೋಚನೆಯನ್ನ ಬದಲಾಯಿಸಿಕೊಂಡ. “ಯೆಹೋವನು ನನಗೆ ಆಲೋಚನೆಯನ್ನು ಹೇಳಿಕೊಡುತ್ತಾನೆ; ಆತನನ್ನು ಕೊಂಡಾಡುವೆನು. ರಾತ್ರಿಸಮಯಗಳಲ್ಲಿ ನನ್ನ ಅಂತರಾತ್ಮವು ನನ್ನನ್ನು ಬೋಧಿಸುತ್ತದೆ” ಅಂತ ದಾವೀದ ಬರೆದ.—ಕೀರ್ತ. 16:7.

ದೇವರ ವಾಕ್ಯ

ಸರಿಯಾದ ದಾರಿಯನ್ನು ಬಿಟ್ಟು ಬೇರೆ ಕಡೆಗೆ ಹೋದ್ರೆ ದೇವರ ವಾಕ್ಯ ನಮ್ಮನ್ನು ಎಚ್ಚರಿಸುತ್ತೆ. ನಾವು ದೀನರಾಗಿದ್ರೆ ದೇವರ ವಾಕ್ಯದ ಸಹಾಯದಿಂದ ನಮ್ಮ ತಪ್ಪಾದ ಯೋಚನೆಯನ್ನು ಸರಿಮಾಡಿಕೊಳ್ತೇವೆ (ಪ್ಯಾರ 7 ನೋಡಿ)

7. ನಾವು ದೀನರಾಗಿದ್ರೆ ಏನು ಮಾಡ್ತೇವೆ?

7 ನಾವು ಯಾವ ತರ ಯೋಚಿಸ್ತೇವೋ ಅದೇ ತರ ನಡಕೊಳ್ತೇವೆ. ಹಾಗಾಗಿ ನಾವು ದೀನರಾಗಿದ್ರೆ ದೇವರ ವಾಕ್ಯದಿಂದ ಏನನ್ನ ಓದುತ್ತೇವೋ ಅದ್ರ ಪ್ರಕಾರ ನಮ್ಮ ಯೋಚನೆಯನ್ನ ಬದಲಾಯಿಸಿಕೊಳ್ತೇವೆ. ಇದ್ರಿಂದ ನಾವು ಕೆಟ್ಟ ಕೆಲ್ಸ ಮಾಡೋಕೆ ಹೋಗಲ್ಲ. ದೇವರ ವಾಕ್ಯ ಒಂದು ರೀತಿಯಲ್ಲಿ ನಮಗೆ “ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಅಂತ ಹೇಳುತ್ತೆ. ಅಷ್ಟೇ ಅಲ್ಲ, ನಾವು ಸರಿಯಾದ ದಾರಿಯನ್ನ ಬಿಟ್ಟು ಬಲಕ್ಕಾಗಲಿ ಎಡಕ್ಕಾಗಲಿ ತಿರುಗೋದಾದ್ರೆ ನಮ್ಮನ್ನು ಎಚ್ಚರಿಸುತ್ತೆ. (ಯೆಶಾ. 30:21) ಯೆಹೋವನ ಮಾತನ್ನ ಕೇಳೋದ್ರಿಂದ ನಮಗೆ ತುಂಬ ಪ್ರಯೋಜನ ಇದೆ. (ಯೆಶಾ. 48:17) ಉದಾಹರಣೆಗೆ, ಬೇರೆಯವ್ರು ನಮ್ಮನ್ನ ತಿದ್ದಬೇಕಾದ ಪರಿಸ್ಥಿತಿ ಬರಲ್ಲ. ತಿದ್ದೋದ್ರಿಂದ ಆಗೋ ಮುಜುಗರದಿಂದಲೂ ನಾವು ತಪ್ಪಿಸಿಕೊಳ್ತೇವೆ. ಅಷ್ಟೇ ಅಲ್ಲ, ಯೆಹೋವನು ನಮ್ಮನ್ನ ಪ್ರೀತಿಯ ತಂದೆ ತರ ನೋಡಿಕೊಳ್ತಾನೆ ಅಂತ ನಮಗೆ ಅರ್ಥ ಆಗುತ್ತೆ. ಇದ್ರಿಂದ ನಾವು ಯೆಹೋವನಿಗೆ ಆಪ್ತರಾಗ್ತೇವೆ.—ಇಬ್ರಿ. 12:7.

8. ಯಾಕೋಬ 1:22-25 ರ ಪ್ರಕಾರ ನಾವು ದೇವರ ವಾಕ್ಯವನ್ನ ಹೇಗೆ ಕನ್ನಡಿ ತರ ಉಪಯೋಗಿಸಬಹುದು?

8 ದೇವರ ವಾಕ್ಯ ಕನ್ನಡಿ ತರನೂ ಇದೆ. (ಯಾಕೋಬ 1:22-25 ಓದಿ.) ಹೆಚ್ಚಿನ ಜನ ಬೆಳಿಗ್ಗೆ ಮನೆಯಿಂದ ಹೊರಡೋ ಮುಂಚೆ ಕನ್ನಡಿಯಲ್ಲಿ ನೋಡಿಕೊಳ್ತಾರೆ. ಇದ್ರಿಂದ ತಾವು ಚೆನ್ನಾಗಿ ಕಾಣ್ತಿದ್ದೇವಾ, ಕೂದಲು ಸರಿ ಮಾಡಿಕೊಳ್ಬೇಕಾ ಅಂತ ತಿಳ್ಕೊಳ್ಳೋಕಾಗುತ್ತೆ. ಅದೇ ತರ ಪ್ರತಿದಿನ ಬೈಬಲ್‌ ಓದೋದ್ರಿಂದ ನಮ್ಮ ಯೋಚನೆ, ನಮ್ಮ ನಡತೆಯಲ್ಲಿ ಏನಾದ್ರೂ ಬದಲಾವಣೆ ಮಾಡಿಕೊಳ್ಬೇಕಾ ಅಂತ ತಿಳ್ಕೊಳ್ಳೋಕಾಗುತ್ತೆ. ಅನೇಕ ಸಹೋದರ ಸಹೋದರಿಯರು ಬೆಳಿಗ್ಗೆ ಮನೆಯಿಂದ ಹೊರಡೋದಕ್ಕೂ ಮುಂಚೆ ದಿನದ ವಚನ ಓದುತ್ತಾರೆ. ನಂತ್ರ ಅವ್ರು ಓದಿದ್ದರ ಬಗ್ಗೆ ಯೋಚಿಸ್ತಾರೆ ಮತ್ತು ಕಲಿತ ವಿಷ್ಯವನ್ನ ಆ ದಿನ ಅನ್ವಯಿಸಿಕೊಳ್ಳೋದಕ್ಕೂ ಪ್ರಯತ್ನಿಸ್ತಾರೆ. ನಾವು ದಿನದ ವಚನ ಮಾತ್ರವಲ್ಲ ಪ್ರತಿದಿನ ಬೈಬಲನ್ನು ಓದಿ, ಅದ್ರ ಬಗ್ಗೆ ಧ್ಯಾನಿಸ್ಬೇಕು. ಇದು ಮಾಮೂಲಿ ವಿಷ್ಯ ಅಂತ ಅನಿಸ್ಬಹುದು. ಆದ್ರೆ ಜೀವಕ್ಕೆ ನಡೆಸೋ ಇಕ್ಕಟ್ಟಾದ ದಾರಿಯಲ್ಲೇ ನಾವು ನಡೀತಾ ಇರಬೇಕಂದ್ರೆ ಇದನ್ನ ಮಾಡೋದು ತುಂಬ ಮುಖ್ಯ.

ಪ್ರೌಢ ಕ್ರೈಸ್ತರ ಮಾತನ್ನ ಕೇಳಿ

ಪ್ರೌಢ ಕ್ರೈಸ್ತರು

ನಾವು ತಪ್ಪಾದ ದಾರಿಯಲ್ಲಿ ಹೆಜ್ಜೆ ಇಟ್ಟಾಗ ಪ್ರೌಢ ಕ್ರೈಸ್ತರು ನಮ್ಮನ್ನು ಪ್ರೀತಿಯಿಂದ ತಿದ್ದಿದ್ರೆ ನಾವು ಅವರಿಗೆ ಕೃತಜ್ಞರಾಗಿರಬೇಕು (ಪ್ಯಾರ 9 ನೋಡಿ)

9. ಒಬ್ಬ ಪ್ರೌಢ ಸಹೋದರ ಅಥ್ವಾ ಸಹೋದರಿ ನಮ್ಮನ್ನು ಯಾವಾಗ ತಿದ್ದಬಹುದು?

9 ನೀವು ಯಾವತ್ತಾದ್ರೂ ಸರಿಯಾದ ದಾರಿಯನ್ನು ಬಿಟ್ಟು ಯೆಹೋವನಿಂದ ದೂರ ಹೋಗೋ ದಾರಿಯಲ್ಲಿ ಹೆಜ್ಜೆ ಇಟ್ರಾ? (ಕೀರ್ತ. 73:2, 3) ಆಗ ಒಬ್ಬ ಪ್ರೌಢ ಸಹೋದರ ಅಥ್ವಾ ಸಹೋದರಿ ಧೈರ್ಯ ಮಾಡ್ಕೊಂಡು ನಿಮ್ಮನ್ನು ತಿದ್ದಿದ್ದಾರಾ? ಆ ಸಂದರ್ಭದಲ್ಲಿ ನೀವು ಅವ್ರ ಮಾತು ಕೇಳಿ ಅವ್ರ ಸಲಹೆಯನ್ನ ಅನ್ವಯಿಸಿಕೊಂಡಿದ್ದೀರಾ? ಹಾಗಿದ್ರೆ ನೀವು ಒಳ್ಳೇ ಕೆಲ್ಸ ಮಾಡಿದ್ದೀರಿ. ನಿಮ್ಮನ್ನ ತಿದ್ದೋಕೆ ಪ್ರಯತ್ನಿಸಿದ ಆ ಸಹೋದರ ಅಥ್ವಾ ಸಹೋದರಿಗೆ ನೀವು ಖಂಡಿತ ಕೃತಜ್ಞರಾಗಿರುತ್ತೀರಿ.—ಜ್ಞಾನೋ. 1:5.

10. ಒಬ್ಬ ಸ್ನೇಹಿತ ನಿಮ್ಮನ್ನ ತಿದ್ದಿದಾಗ ನೀವು ಹೇಗೆ ನಡ್ಕೊಬೇಕು?

10 “ಮಿತ್ರನು ಮಾಡುವ ಗಾಯಗಳು ಮೇಲಿಗಾಗಿಯೇ” ಅಂತ ದೇವರ ವಾಕ್ಯ ಹೇಳುತ್ತೆ. (ಜ್ಞಾನೋ. 27:6) ಈ ಮಾತಿನ ಅರ್ಥವೇನು? ಇದನ್ನು ತಿಳುಕೊಳ್ಳೋಕೆ ಒಂದು ಉದಾಹರಣೆ ನೋಡೋಣ. ನೀವು ರಸ್ತೆ ದಾಟೋಕೆ ನಿಂತಿದ್ದೀರಿ ಅಂದ್ಕೊಳ್ಳಿ. ಆ ರಸ್ತೆಯಲ್ಲಿ ತುಂಬ ವಾಹನಗಳು ಓಡಾಡ್ತಾ ಇವೆ. ಆದ್ರೆ ನೀವು ಮೊಬೈಲ್‌ ನೋಡೋದ್ರಲ್ಲೇ ಮುಳುಗಿಹೋಗಿದ್ದೀರಿ. ರಸ್ತೆಯನ್ನ ಗಮನಿಸದೆ ನೀವು ದಾಟೋಕೆ ಹೋಗ್ತೀರಿ. ಆಗ ತಕ್ಷಣ ನಿಮ್ಮ ಸ್ನೇಹಿತ ನಿಮ್ಮ ಕೈ ಹಿಡಿದು ರಸ್ತೆ ಬದಿಗೆ ಎಳೆದುಬಿಡ್ತಾನೆ. ಅವನು ಎಷ್ಟು ಗಟ್ಟಿಯಾಗಿ ಹಿಡಿದು ಎಳೆಯುತ್ತಾನಂದ್ರೆ ನಿಮ್ಮ ಕೈಗೆ ತುಂಬ ನೋವಾಗುತ್ತೆ. ಆದ್ರೆ ಅವನು ಹಾಗೆ ಮಾಡಿದ್ರಿಂದ ನೀವು ಒಂದು ದೊಡ್ಡ ಅನಾಹುತದಿಂದ ತಪ್ಪಿಸಿಕೊಂಡಿರುತ್ತೀರಿ. ನಿಮ್ಮ ಜೀವ ಉಳಿಯುತ್ತೆ. ನಿಮಗೆ ಕೈ ನೋವು ತುಂಬ ದಿನ ಇದ್ರೂ ಸ್ನೇಹಿತ ನಿಮ್ಮ ಕೈ ಹಿಡಿದು ಎಳೆದ ಅಂತ ನೀವು ಬೇಜಾರು ಮಾಡ್ಕೊಳ್ಳಲ್ಲ ಅಲ್ವಾ? ಅವ್ರು ಮಾಡಿರೋ ಸಹಾಯಕ್ಕೆ ನೀವು ಕೃತಜ್ಞರಾಗಿರುತ್ತೀರಿ. ಅದೇ ತರ ನಿಮ್ಮ ಮಾತು ಅಥ್ವಾ ನಡತೆ ದೇವರ ನೀತಿ ನಿಯಮದ ಪ್ರಕಾರ ಇಲ್ಲ ಅಂತ ಒಬ್ಬ ಸ್ನೇಹಿತ ಎಚ್ಚರಿಸೋದಾದ್ರೆ ನಿಮಗೆ ಮೊದ್ಲು ನೋವಾಗಬಹುದು. ಆದ್ರೆ ಅವನು ಸಲಹೆ ಕೊಟ್ಟಿದ್ದಕ್ಕೆ ಕೋಪ ಮಾಡ್ಕೊಬೇಡಿ. ಹಾಗೆ ಮಾಡೋದು ಮೂರ್ಖತನ. (ಪ್ರಸಂ. 7:9) ಅದ್ರ ಬದ್ಲಿಗೆ ಸ್ನೇಹಿತ ಧೈರ್ಯ ಮಾಡಿ ನಿಮ್ಮ ಹತ್ರ ಬಂದು ಮಾತಾಡಿದ್ದಕ್ಕೆ ಕೃತಜ್ಞರಾಗಿರಿ.

11. ಒಬ್ಬ ವ್ಯಕ್ತಿ ತನ್ನ ಸ್ನೇಹಿತ ಕೊಡೋ ಸಲಹೆಯನ್ನ ಯಾವಾಗ ತಿರಸ್ಕರಿಸ್ತಾನೆ?

11 ಒಬ್ಬ ವ್ಯಕ್ತಿ ಅಹಂಕಾರಿ ಆಗಿದ್ರೆ ತನ್ನ ಸ್ನೇಹಿತ ಪ್ರೀತಿಯಿಂದ ಕೊಡೋ ಒಳ್ಳೇ ಸಲಹೆಯನ್ನು ತಿರಸ್ಕರಿಸ್ತಾನೆ. ಅಹಂಕಾರಿಗಳು ತಮ್ಮ ಕಿವಿಗೆ ಇಂಪಾಗಿರುವ ವಿಷಯಗಳನ್ನ ಮಾತ್ರ ಬೇರೆಯವ್ರು ಹೇಳಬೇಕಂತ ಬಯಸ್ತಾರೆ. ಆದ್ರೆ ‘ಸತ್ಯದಿಂದ ತಮ್ಮ ಕಿವಿಗಳನ್ನು ತಿರುಗಿಸಿಕೊಳ್ಳುತ್ತಾರೆ.’ (2 ತಿಮೊ. 4:3, 4) ಅವ್ರಿಗೆ ಎಲ್ರಿಗಿಂತ ತಾವೇ ಶ್ರೇಷ್ಠ, ತಮಗೇ ಎಲ್ಲ ಗೊತ್ತಿದೆ ಅಂತ ಅನ್ಸುತ್ತೆ. ಅದಕ್ಕೇ, ತಾವು ಯಾರ ಸಲಹೆನೂ ಕೇಳೋ ಅವಶ್ಯಕತೆ ಇಲ್ಲ ಅಂತ ಅಂದುಕೊಳ್ತಾರೆ. ಆದ್ರೆ “ಏನೂ ಅಲ್ಲದವನೊಬ್ಬನು ತಾನು ಏನೊ ಆಗಿದ್ದೇನೆಂದು ನೆನಸುವುದಾದರೆ ಅವನು ತನ್ನ ಮನಸ್ಸನ್ನೇ ಮೋಸಗೊಳಿಸಿಕೊಳ್ಳುತ್ತಿದ್ದಾನೆ” ಅಂತ ಅಪೊಸ್ತಲ ಪೌಲ ಹೇಳಿದ್ದಾನೆ. (ಗಲಾ. 6:3) ಇದ್ರ ಬಗ್ಗೆ ರಾಜ ಸೊಲೊಮೋನ ಸಹ ಹೀಗೆ ಬರೆದಿದ್ದಾನೆ: “ಎಚ್ಚರದ ಮಾತಿಗೆ ಕಿವಿಗೊಡುವದನ್ನು ಬಿಟ್ಟ ಮೂರ್ಖನಾದ ಮುದಿಯರಸನಿಗಿಂತ ಜ್ಞಾನಿಯಾದ ಬಡ ಯೌವನಸ್ಥನೇ ಮೇಲು.”—ಪ್ರಸಂ. 4:13.

12. (ಎ) ಗಲಾತ್ಯ 2:11-14 ರಲ್ಲಿ ತಿಳಿಸಿದಂತೆ ಅಪೊಸ್ತಲ ಪೌಲನು ಅಪೊಸ್ತಲ ಪೇತ್ರನಿಗೆ ಸಲಹೆ ಕೊಟ್ಟಾಗ ಪೇತ್ರ ಏನು ಮಾಡಿದ? (ಬಿ) ಇದ್ರಿಂದ ನಾವೇನು ಕಲಿಬಹುದು?

12 ಅಪೊಸ್ತಲ ಪೌಲ ಎಲ್ಲರ ಎದುರಿಗೆ ಅಪೊಸ್ತಲ ಪೇತ್ರನನ್ನು ತಿದ್ದಿದಾಗ ಪೇತ್ರ ಏನು ಮಾಡಿದ ಅಂತ ಗಮನಿಸಿ. (ಗಲಾತ್ಯ 2:11-14 ಓದಿ.) ‘ಪೌಲ ಸಲಹೆ ಕೊಟ್ಟ ರೀತಿ ಸರಿ ಇಲ್ಲ, ಎಲ್ಲರ ಎದುರು ಸಲಹೆ ಕೊಟ್ಟನು’ ಅಂತ ಪೇತ್ರ ಕೋಪ ಮಾಡ್ಕೊಳ್ಳಲಿಲ್ಲ. ಬದ್ಲಿಗೆ ಅವನು ವಿವೇಕದಿಂದ ನಡ್ಕೊಂಡ. ಸಲಹೆಯನ್ನ ಸ್ವೀಕರಿಸಿದ, ಪೌಲನ ಮೇಲೆ ದ್ವೇಷ ಇಟ್ಟುಕೊಳ್ಳಲಿಲ್ಲ. ನಂತ್ರ ಅವನು ಅಪೊಸ್ತಲ ಪೌಲನನ್ನ “ಪ್ರಿಯ ಸಹೋದರ” ಅಂತ ಕರೆದ.—2 ಪೇತ್ರ 3:15.

13. ಬೇರೆಯವ್ರಿಗೆ ಸಲಹೆ ಕೊಡೋ ಮುಂಚೆ ನಾವು ಯಾವ ವಿಷ್ಯ ಯೋಚಿಸ್ಬೇಕು?

13 ನಿಮ್ಮ ಸ್ನೇಹಿತನಿಗೆ ಸಲಹೆ ಕೊಡ್ಬೇಕು ಅಂತ ನಿಮಗೆ ಅನಿಸೋದಾದ್ರೆ ನೀವೇನು ಮಾಡ್ಬೇಕು? ಅವನ ಹತ್ರ ಹೋಗಿ ಮಾತಾಡೋ ಮುಂಚೆ, ‘ನಾನು ಅತೀ ನೀತಿವಂತನ ತರ ನಡ್ಕೊತಿದ್ದೀನಾ?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ. (ಪ್ರಸಂ. 7:16) ಅತೀ ನೀತಿವಂತನಾಗಿರೋ ವ್ಯಕ್ತಿ ಯೆಹೋವನ ಮಟ್ಟಗಳಿಗನುಸಾರ ತೀರ್ಪು ಮಾಡಲ್ಲ. ಬದ್ಲಿಗೆ ತನಗೇನು ಸರಿ ಅನ್ಸುತ್ತೋ ಅದ್ರ ಪ್ರಕಾರ ಜನ್ರನ್ನು ಅಳೆಯುತ್ತಾನೆ. ಅವನು ಬೇರೆಯವ್ರಿಗೆ ಅಷ್ಟೊಂದು ಕರುಣೆ ತೋರಿಸಲ್ಲ. ನೀವು ನಿಮ್ಮನ್ನೇ ಪರೀಕ್ಷೆ ಮಾಡಿಕೊಂಡ ಮೇಲೂ ನಿಮ್ಮ ಸ್ನೇಹಿತನಿಗೆ ಸಲಹೆ ಕೊಡಲೇಬೇಕು ಅಂತ ನಿಮಗೆ ಅನಿಸೋದಾದ್ರೆ ಅವನ ಹತ್ರ ಸಮಸ್ಯೆ ಏನು ಅಂತ ಸ್ಪಷ್ಟವಾಗಿ ಹೇಳಿ. ಅವನು ತನ್ನ ತಪ್ಪನ್ನ ಅರ್ಥಮಾಡಿಕೊಳ್ಳೋಕೆ ಪ್ರಶ್ನೆಗಳನ್ನ ಕೇಳಿ. ಸಲಹೆ ಕೊಡ್ವಾಗ ಬೈಬಲನ್ನು ಉಪಯೋಗಿಸಿ. ಯಾಕಂದ್ರೆ ನಿಮ್ಮ ಸ್ನೇಹಿತ ನಿಮಗಲ್ಲ, ಯೆಹೋವನಿಗೆ ಲೆಕ್ಕ ಒಪ್ಪಿಸಬೇಕಾಗಿದೆ. (ರೋಮ. 14:10) ನಿಮಗೇನು ಅನ್ಸುತ್ತೋ ಅದನ್ನ ಹೇಳಬೇಡಿ. ಬದ್ಲಿಗೆ ದೇವರ ವಾಕ್ಯದಲ್ಲಿರೋ ಸಲಹೆಯನ್ನ ಉಪಯೋಗಿಸಿ. ಬೇರೆಯವ್ರಿಗೆ ಸಲಹೆ ಕೊಡ್ವಾಗ ಯೇಸು ತರ ಪ್ರೀತಿಯಿಂದ ಮಾತಾಡಿ, ಕಠೋರವಾಗಿ ಅಲ್ಲ. (ಜ್ಞಾನೋ. 3:5; ಮತ್ತಾ. 12:20) ಯಾಕಂದ್ರೆ ನಾವು ಹೇಗೆ ಬೇರೆಯವ್ರ ಜೊತೆ ನಡ್ಕೊಳ್ತೇವೋ ಅದೇ ತರ ಯೆಹೋವ ನಮ್ಮ ಜೊತೆ ನಡ್ಕೊಳ್ತಾನೆ.—ಯಾಕೋ. 2:13.

ಯೆಹೋವನ ಸಂಘಟನೆ ಕೊಡೋ ನಿರ್ದೇಶನಗಳನ್ನ ಪಾಲಿಸಿ

ದೇವರ ಸಂಘಟನೆ

ದೇವರ ವಾಕ್ಯದಲ್ಲಿರೋ ಸಲಹೆಯನ್ನ ನಾವು ಅನ್ವಯಿಸಿಕೊಳ್ಳೋದು ಹೇಗಂತ ತಿಳುಕೊಳ್ಳಲಿಕ್ಕಾಗಿ ದೇವರ ಸಂಘಟನೆ ನಮಗೆ ಸಾಹಿತ್ಯಗಳನ್ನ, ವಿಡಿಯೋಗಳನ್ನ ಕೊಟ್ಟಿದೆ ಮತ್ತು ಕೂಟಗಳನ್ನ ಏರ್ಪಡಿಸಿದೆ. ಕೆಲವೊಮ್ಮೆ ಆಡಳಿತ ಮಂಡಲಿ ಸಂಘಟನೆಯ ಏರ್ಪಾಡಿನಲ್ಲಿ ಬದಲಾವಣೆಗಳನ್ನ ಮಾಡುತ್ತೆ (ಪ್ಯಾರ 14 ನೋಡಿ)

14. ಯೆಹೋವನ ಸಂಘಟನೆ ನಮಗೆ ಏನನ್ನು ಕೊಡ್ತಾ ಇದೆ?

14 ಯೆಹೋವನು ಭೂಮಿಯಲ್ಲಿರೋ ತನ್ನ ಸಂಘಟನೆಯ ಮೂಲಕ ನಮಗೆ ಜೀವದ ದಾರಿಯಲ್ಲಿ ನಡೆಯಲು ಬೇಕಾದಂಥ ಮಾರ್ಗದರ್ಶನಗಳನ್ನ ಕೊಡುತ್ತಾ ಇದ್ದಾನೆ. ದೇವರ ವಾಕ್ಯದಲ್ಲಿರೋ ಸಲಹೆಯನ್ನ ಅನ್ವಯಿಸಿಕೊಳ್ಳೋದು ಹೇಗಂತ ತಿಳುಕೊಳ್ಳಲಿಕ್ಕಾಗಿ ಈ ಸಂಘಟನೆ ನಮಗೆ ವಿಡಿಯೋ, ಪ್ರಕಾಶನಗಳನ್ನ ಕೊಡ್ತಾ ಇದೆ ಮತ್ತು ಕೂಟಗಳನ್ನ ಏರ್ಪಡಿಸುತ್ತಿದೆ. ಇವುಗಳ ಮೂಲಕ ಸಂಘಟನೆ ಕೊಡೋ ಮಾಹಿತಿ ಮೇಲೆ ನಾವು ಪೂರ್ತಿ ಭರವಸೆ ಇಡಬಹುದು. ಯಾಕಂದ್ರೆ ಇದು ಬೈಬಲ್‌ ಮೇಲಾಧರಿತವಾಗಿದೆ. ಸಾರೋ ಕೆಲಸ ಹೇಗೆ ಮಾಡಿದ್ರೆ ಚೆನ್ನಾಗಿರುತ್ತೆ ಅನ್ನೋ ನಿರ್ಣಯಗಳನ್ನ ಆಡಳಿತ ಮಂಡಲಿಯು ಪವಿತ್ರಾತ್ಮದ ಸಹಾಯದಿಂದ ಮಾಡುತ್ತೆ. ಆದ್ರೂ ತನ್ನ ನಿರ್ಣಯಗಳು ಫಲಕಾರಿಯಾಗ್ತಾ ಇದ್ಯಾ, ಏನಾದ್ರೂ ಬದಲಾವಣೆ ಮಾಡಿಕೊಳ್ಬೇಕಾ ಅಂತ ಅದು ಪರೀಕ್ಷಿಸುತ್ತೆ. ಯಾಕೆ? ಯಾಕಂದ್ರೆ “ಈ ಲೋಕದ ದೃಶ್ಯವು ಮಾರ್ಪಡುತ್ತಾ ಇದೆ.” ಹಾಗಾಗಿ ಹೊಸ ಸನ್ನಿವೇಶಕ್ಕೆ ತಕ್ಕಂತೆ ಯೆಹೋವನ ಸಂಘಟನೆ ಬದಲಾವಣೆಗಳನ್ನ ಮಾಡಿಕೊಳ್ಳುತ್ತೆ.—1 ಕೊರಿಂ. 7:31.

15. ಕೆಲವು ಪ್ರಚಾರಕರಿಗೆ ಯಾವ ಸಮಸ್ಯೆ ಎದುರಾಗಿದೆ?

15 ದೇವರ ಸಂಘಟನೆ ನಮಗೆ ಬೈಬಲ್‌ ಬೋಧನೆಗಳ ಬಗ್ಗೆ ಹೊಸ ವಿವರಣೆ ಕೊಟ್ಟಾಗ, ನೈತಿಕ ನಿಯಮಗಳ ಬಗ್ಗೆ ಮಾರ್ಗದರ್ಶನ ಕೊಟ್ಟಾಗ ನಾವದನ್ನು ಸುಲಭವಾಗಿ ಸ್ವೀಕರಿಸುತ್ತೇವೆ. ಆದ್ರೆ ನಮ್ಮ ಜೀವನದ ಮೇಲೆ ಪರಿಣಾಮ ಬೀರುವಂಥ ಬೇರೆ ಕೆಲವು ಬದಲಾವಣೆಗಳನ್ನು ಮಾಡಿದಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಉದಾಹರಣೆಗೆ, ಇತ್ತೀಚಿನ ವರ್ಷಗಳಲ್ಲಿ ಆರಾಧನಾ ಸ್ಥಳಗಳನ್ನ ಕಟ್ಟೋದಕ್ಕೆ ಮತ್ತು ಅದನ್ನ ಸುಸ್ಥಿತಿಯಲ್ಲಿ ಇಡೋದಕ್ಕೆ ತಗಲೋ ಖರ್ಚು ತುಂಬ ಹೆಚ್ಚಾಗಿದೆ. ಹಾಗಾಗಿ ಆಡಳಿತ ಮಂಡಲಿಯು, ಇರೋ ರಾಜ್ಯ ಸಭಾಗೃಹಗಳನ್ನೇ ಸಾಧ್ಯವಾದಷ್ಟು ಹೆಚ್ಚು ಸಭೆಗಳು ಉಪಯೋಗಿಸಬೇಕು ಅಂತ ನಿರ್ದೇಶನ ಕೊಟ್ಟಿದೆ. ಹಾಗಾಗಿ ಕೆಲವು ಸಭೆಗಳನ್ನ ಬೇರೆ ಸಭೆಗಳ ಜೊತೆ ಸೇರಿಸಲಾಗಿದೆ ಮತ್ತು ಇನ್ನು ಕೆಲವು ರಾಜ್ಯ ಸಭಾಗೃಹಗಳನ್ನ ಮಾರಲಾಗಿದೆ. ಹೀಗೆ ಉಳಿತಾಯ ಮಾಡಿದ ಹಣವನ್ನ ರಾಜ್ಯ ಸಭಾಗೃಹದ ಅಗತ್ಯ ತುಂಬ ಇರೋ ಸ್ಥಳಗಳಲ್ಲಿ ಅವುಗಳನ್ನ ಕಟ್ಟೋಕೆ ಉಪಯೋಗಿಸಲಾಗಿದೆ. ನಿಮ್ಮ ರಾಜ್ಯ ಸಭಾಗೃಹವನ್ನ ಮಾರಿರೋದಾದ್ರೆ ಅಥ್ವಾ ನಿಮ್ಮ ಸಭೆಯನ್ನ ಬೇರೆ ಸಭೆಗಳ ಜೊತೆ ಸೇರಿಸಿರೋದಾದ್ರೆ ಈ ಹೊಸ ಸನ್ನಿವೇಶಕ್ಕೆ ಹೊಂದಿಕೊಳ್ಳೋಕೆ ನಿಮಗೆ ಕಷ್ಟ ಆಗಬಹುದು. ಕೆಲವು ಪ್ರಚಾರಕರು ಈಗ ಕೂಟಗಳಿಗೆ ಹಾಜರಾಗೋಕೆ ತುಂಬ ದೂರ ಪ್ರಯಾಣ ಮಾಡಬೇಕಾಗಿದೆ. ರಾಜ್ಯ ಸಭಾಗೃಹಗಳನ್ನ ಕಟ್ಟೋಕೆ ಅಥ್ವಾ ಅದನ್ನ ಸುಸ್ಥಿತಿಯಲ್ಲಿ ಇಡೋಕೆ ಕೆಲಸ ಮಾಡಿದ ಸಹೋದರ ಸಹೋದರಿಯರಿಗೆ ‘ಇದನ್ನ ಯಾಕೆ ಈಗ ಮಾರುತ್ತಿದ್ದಾರೆ?’ ಅಂತ ಅನಿಸ್ಬಹುದು. ಅಥ್ವಾ ತಮ್ಮ ಸಮಯ, ಪ್ರಯತ್ನ ವ್ಯರ್ಥ ಆಯ್ತು ಅಂತನೂ ಅನಿಸ್ಬಹುದು. ಆದ್ರೂ ಅವ್ರು ಈ ಹೊಸ ಏರ್ಪಾಡಿಗೆ ಪೂರ್ತಿ ಸಹಕಾರ ಕೊಡ್ತಿದ್ದಾರೆ. ಅವ್ರನ್ನು ಶ್ಲಾಘಿಸಲೇಬೇಕು.

16. ಕೊಲೊಸ್ಸೆ 3:23, 24 ರಲ್ಲಿರೋ ಸಲಹೆಯನ್ನ ಅನ್ವಯಿಸಿದ್ರೆ ನಾವು ಖುಷಿಯಾಗಿರ್ತೇವೆ ಅಂತ ಹೇಗೆ ಹೇಳ್ಬಹುದು?

16 ನಾವು ಯೆಹೋವನಿಗಾಗಿ ಕೆಲಸ ಮಾಡ್ತಿದ್ದೇವೆ ಮತ್ತು ಆತನು ತನ್ನ ಸಂಘಟನೆಯನ್ನ ಮಾರ್ಗದರ್ಶಿಸ್ತಿದ್ದಾನೆ ಅನ್ನೋದನ್ನ ನಾವು ನೆನಪಲ್ಲಿಟ್ಟರೆ ಏನೇ ಆದ್ರೂ ನಮ್ಮ ಸಂತೋಷನ ಕಳಕೊಳ್ಳಲ್ಲ. (ಕೊಲೊಸ್ಸೆ 3:23, 24 ಓದಿ.) ದೇವಾಲಯವನ್ನ ಕಟ್ಟುವಾಗ ಕಾಣಿಕೆಯನ್ನ ಕೊಟ್ಟ ರಾಜ ದಾವೀದನು ನಮಗೆ ಒಳ್ಳೇ ಮಾದರಿಯಾಗಿದ್ದಾನೆ. ಅವನು “ನಾವು ಈ ಪ್ರಕಾರ ಸ್ವೇಚ್ಛೆಯಿಂದ ಕಾಣಿಕೆಗಳನ್ನು ಸಮರ್ಪಿಸಲು ಶಕ್ತಿಹೊಂದಿದ್ದಕ್ಕೆ ನಾನಾಗಲಿ ನನ್ನ ಪ್ರಜೆಗಳಾಗಲಿ ಎಷ್ಟರವರು? ಸಮಸ್ತವು ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು” ಅಂತ ಹೇಳಿದನು. (1 ಪೂರ್ವ. 29:14) ನಾವು ಕಾಣಿಕೆಗಳನ್ನ ಕೊಡ್ವಾಗ, ಯೆಹೋವನು ನಮಗೆ ಏನು ಕೊಟ್ಟಿದ್ದಾನೋ ಅದನ್ನೇ ವಾಪಸ್‌ ಆತನಿಗೆ ಕೊಟ್ಟ ಹಾಗೆ ಇರುತ್ತೆ. ಹಾಗಿದ್ರೂ ಆತನ ಕೆಲಸ ಮಾಡಕ್ಕೋಸ್ಕರ ನಾವು ನಮ್ಮ ಸಮಯ, ಶಕ್ತಿ ಮತ್ತು ಹಣವನ್ನ ಉಪಯೋಗಿಸಿದ್ರೆ ಯೆಹೋವನಿಗೆ ತುಂಬ ಖುಷಿ ಆಗುತ್ತೆ.—2 ಕೊರಿಂ. 9:7.

ಇಕ್ಕಟ್ಟಾದ ದಾರಿಯಲ್ಲೇ ನಡೆಯಿರಿ

17. ನೀವು ಬದಲಾವಣೆ ಮಾಡಿಕೊಳ್ಳೋ ಅವಶ್ಯಕತೆ ಇದೆ ಅಂತ ಅನಿಸೋದಾದ್ರೆ ಯಾಕೆ ನಿರಾಶರಾಗಬಾರದು?

17 ಜೀವಕ್ಕೆ ನಡೆಸೋ ಇಕ್ಕಟ್ಟಾದ ದಾರಿಯಲ್ಲೇ ನಾವು ನಡಿಬೇಕಂದ್ರೆ ಯೇಸುವಿನ ಮಾದರಿಯನ್ನ ಅನುಕರಿಸಬೇಕು. (1 ಪೇತ್ರ 2:21) ನೀವು ಬದಲಾವಣೆಯನ್ನ ಮಾಡ್ಕೊಬೇಕು ಅಂತ ಅನಿಸೋದಾದ್ರೆ ನಿರಾಶರಾಗಬೇಡಿ. ಯಾಕಂದ್ರೆ ಯೆಹೋವನ ಮಾರ್ಗದರ್ಶನವನ್ನ ಪಾಲಿಸೋಕೆ ನೀವು ಬಯಸ್ತಿದ್ದೀರಿ ಅಂತ ಇದು ತೋರಿಸಿಕೊಡುತ್ತೆ. ನಾವೆಲ್ರೂ ಅಪರಿಪೂರ್ಣರಾಗಿರೋದ್ರಿಂದ ಈಗ ನಾವು ಯೇಸುವಿನ ಮಾದರಿಯನ್ನ ನೂರಕ್ಕೆ ನೂರರಷ್ಟು ಅನುಕರಿಸಬೇಕು ಅಂತ ಯೆಹೋವನು ನಿರೀಕ್ಷಿಸಲ್ಲ.

18. ಹೊಸ ಲೋಕದಲ್ಲಿ ಜೀವನ ಮಾಡೋ ಅವಕಾಶ ಪಡಿಬೇಕಂದ್ರೆ ನಾವೇನು ಮಾಡ್ಬೇಕು?

18 ನಾವೆಲ್ರೂ ನಮ್ಮ ಗಮನವನ್ನ ಭವಿಷ್ಯದ ಮೇಲೆ ಇಡೋಣ ಮತ್ತು ನಮ್ಮ ಯೋಚನೆ, ಇಷ್ಟಾನಿಷ್ಟಗಳು ಹಾಗೂ ನಾವು ನಡಕೊಳ್ಳೋ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳೋಕೆ ಯಾವಾಗಲೂ ತಯಾರಾಗಿರೋಣ. (ಜ್ಞಾನೋ. 4:25; ಲೂಕ 9:62) ನಾವು ದೀನರಾಗಿದ್ದು, “ಸಂತೋಷಪಡುತ್ತಾ, ಪುನಃ ಸರಿಹೊಂದಿಸಲ್ಪಡುತ್ತಾ” ಅಂದ್ರೆ ಬದಲಾವಣೆ ಮಾಡಿಕೊಳ್ತಾ ಇರೋಣ. (2 ಕೊರಿಂ. 13:11) ಹಾಗೆ ಮಾಡೋದಾದ್ರೆ, “ಪ್ರೀತಿ ಮತ್ತು ಶಾಂತಿಯ ದೇವರು” ನಮ್ಮ ಜೊತೆ ಇರುತ್ತಾನೆ. ಅಷ್ಟೇ ಅಲ್ಲ, ಆತನು ನಮಗೆ ಈಗ ಸಂತೋಷವಾಗಿರೋಕೆ ಸಹಾಯ ಮಾಡ್ತಾನೆ ಮತ್ತು ಮುಂದೆ ಹೊಸ ಲೋಕದಲ್ಲಿ ಜೀವನ ಮಾಡೋ ಅವಕಾಶವನ್ನ ಕೊಡ್ತಾನೆ.

ಗೀತೆ 29 ಸಮಗ್ರತೆಯ ಮಾರ್ಗದಲ್ಲಿ ನಡೆಯುವುದು

^ ಪ್ಯಾರ. 5 ನಮ್ಮ ಯೋಚನೆಯಲ್ಲಿ, ಇಷ್ಟಾನಿಷ್ಟಗಳಲ್ಲಿ ಮತ್ತು ನಾವು ನಡ್ಕೊಳ್ಳೋ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳೋಕೆ ನಮಗೆ ಕಷ್ಟ ಅನಿಸ್ಬಹುದು. ಆದ್ರೆ ನಾವ್ಯಾಕೆ ಬದಲಾವಣೆಗಳನ್ನ ಮಾಡಿಕೊಳ್ಬೇಕು ಮತ್ತು ಖುಷಿಯಿಂದ ಆ ಬದಲಾವಣೆಗಳನ್ನ ಮಾಡ್ಕೊಳ್ಳೋದು ಹೇಗೆ ಅಂತ ಈ ಲೇಖನದಲ್ಲಿ ನೋಡ್ತೇವೆ.

^ ಪ್ಯಾರ. 76 ಚಿತ್ರ ವಿವರಣೆ: ಯುವ ಸಹೋದರ ತಾನು ಮಾಡಿದ ತಪ್ಪಾದ ನಿರ್ಣಯದಿಂದ ಏನೆಲ್ಲಾ ಆಯ್ತು ಅಂತ ವಿವರಿಸುವಾಗ ಇನ್ನೊಬ್ಬ ಸಹೋದರ (ಬಲಗಡೆಯಲ್ಲಿ) ತಾನು ಅವನಿಗೆ ಸಲಹೆ ಕೊಡ್ಬೇಕಾ ಬೇಡ್ವಾ ಅಂತ ನಿರ್ಣಯಿಸೋದಕ್ಕಾಗಿ ತಾಳ್ಮೆಯಿಂದ ಕೇಳಿಸಿಕೊಳ್ತಿದ್ದಾನೆ.