ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 48

ನಿಮ್ಮ ಗಮನ ಭವಿಷ್ಯದ ಮೇಲಿರಲಿ

ನಿಮ್ಮ ಗಮನ ಭವಿಷ್ಯದ ಮೇಲಿರಲಿ

“ನೆಟ್ಟಗೆ ದೃಷ್ಟಿಸು; ನಿನ್ನ ಕಣ್ಣುಗಳು ನಿನ್ನ ಮುಂದೆಯೇ ಇರಲಿ.”—ಜ್ಞಾನೋ. 4:25.

ಗೀತೆ 143 ಕತ್ತಲೆಯಲ್ಲಿ ಬೆಳಕು

ಕಿರುನೋಟ *

1-2. ಜ್ಞಾನೋಕ್ತಿ 4:25 ರಲ್ಲಿರೋ ಸಲಹೆಯನ್ನ ನಾವು ಹೇಗೆ ಅನ್ವಯಿಸಿಕೊಳ್ಳಬಹುದು? ಒಂದು ಉದಾಹರಣೆ ಕೊಡಿ.

ಈ ಮುಂದಿನ ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಿ. ಒಬ್ಬ ವೃದ್ಧ ಸಹೋದರಿ ಹಿಂದಿನ ಸವಿನೆನಪುಗಳ ಬಗ್ಗೆ ಯೋಚಿಸ್ತಿದ್ದಾರೆ. ಈಗ ಅವ್ರಿಗೆ ತುಂಬ ಕಷ್ಟಗಳಿದ್ರೂ ತಮ್ಮಿಂದಾದಷ್ಟು ಯೆಹೋವನ ಸೇವೆ ಮಾಡ್ತಿದ್ದಾರೆ. (1 ಕೊರಿಂ. 15:58) ಹೊಸಲೋಕದಲ್ಲಿ ತಾನು, ತನ್ನ ಸ್ನೇಹಿತರು, ಕುಟುಂಬದವ್ರು ಎಲ್ರೂ ಒಟ್ಟಿಗಿದ್ದು ಆನಂದಿಸ್ತಿರೋದನ್ನ ಅವ್ರು ಪ್ರತಿದಿನ ಚಿತ್ರಿಸಿಕೊಳ್ತಾರೆ. ಇನ್ನೊಬ್ಬ ಸಹೋದರಿಗೆ ಸಭೆಯಲ್ಲಿರೋ ಒಬ್ರು ಹಿಂದೆ ತುಂಬಾ ನೋವು ಮಾಡಿದ್ರ ಬಗ್ಗೆ ನೆನಪಾಗುತ್ತೆ. ಆದ್ರೆ ಅದನ್ನೇ ಮನಸ್ಸಿನಲ್ಲಿಟ್ಟು ಅಸಮಾಧಾನದಿಂದ ಇರೋದು ಬೇಡ ಅಂತ ನಿರ್ಧರಿಸ್ತಾರೆ. (ಕೊಲೊ. 3:13) ಒಬ್ಬ ಸಹೋದರನಿಗೆ ಹಿಂದೆ ಮಾಡಿದ ತಪ್ಪುಗಳು ನೆನಪಾಗ್ತವೆ. ಆದ್ರೆ ಅವ್ನು ಅದ್ರ ಬಗ್ಗೆನೇ ಚಿಂತೆ ಮಾಡೋ ಬದಲು ಯೆಹೋವನಿಗೆ ನಂಬಿಗಸ್ತನಾಗಿ ಸೇವೆಮಾಡೋದ್ರ ಕಡೆಗೆ ಗಮನಹರಿಸ್ತಾನೆ.—ಕೀರ್ತ. 51:10.

2 ಈ ಮೂವರು ಸಹೋದರ ಸಹೋದರಿಯರಲ್ಲೂ ಯಾವ ವಿಷ್ಯ ಸಾಮಾನ್ಯವಾಗಿದೆ? ಅವ್ರಿಗೆ ಹಿಂದೆ ನಡೆದಿದ್ದು ನೆನಪಿದೆ. ಆದ್ರೆ ಅವ್ರು ಅದ್ರ ಬಗ್ಗೆನೇ ಯೋಚಿಸ್ತಾ ಕೂರಲಿಲ್ಲ. ಬದ್ಲಿಗೆ ಅವ್ರು ತಮ್ಮ ಪೂರ್ತಿ ಗಮನವನ್ನ ಭವಿಷ್ಯದ ಮೇಲೆ ಇಟ್ರು.—ಜ್ಞಾನೋಕ್ತಿ 4:25 ಓದಿ.

3. ನಮ್ಮ ಗಮನವೆಲ್ಲಾ ಭವಿಷ್ಯದ ಮೇಲಿರಬೇಕು ಯಾಕೆ?

3 ನಮ್ಮ ಗಮನವೆಲ್ಲಾ ಭವಿಷ್ಯದ ಮೇಲಿರಬೇಕು ಯಾಕೆ? ಒಬ್ಬ ವ್ಯಕ್ತಿ ರಸ್ತೆಯಲ್ಲಿ ನಡೀವಾಗ ಹಿಂದೆ ತಿರುಗಿ ನೋಡ್ತಾ ಇದ್ರೆ ಸರಿಯಾಗಿ ನಡ್ಕೊಂಡು ಹೋಗೋಕಾಗಲ್ಲ. ಅದೇ ರೀತಿ ನಾವು ನಮ್ಮ ಜೀವನದಲ್ಲಿ ಹಿಂದೆ ನಡೆದ ಘಟನೆಗಳನ್ನ ಯಾವಾಗ್ಲೂ ನೆನಪಿಸ್ಕೊಳ್ತಾ ಇದ್ರೆ ಯೆಹೋವನ ಸೇವೆಯನ್ನು ಸರಿಯಾಗಿ ಮಾಡೋಕಾಗಲ್ಲ.—ಲೂಕ 9:62.

4. ಈ ಲೇಖನದಲ್ಲಿ ನಾವು ಏನನ್ನು ಚರ್ಚಿಸ್ತೇವೆ?

4 ನಾವು ಹಿಂದಿನ ವಿಷ್ಯಗಳನ್ನೇ ಯೋಚಿಸ್ತಾ ಕೂರುವಂತೆ ಮಾಡೋ ಮೂರು ವಿಷ್ಯಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸ್ತೇವೆ. ಅವು ಯಾವುವೆಂದ್ರೆ, (1) ಹಿಂದಿನ ದಿನಗಳೇ ಚೆನ್ನಾಗಿತ್ತು ಅನ್ನೋ ಯೋಚನೆ (2) ಅಸಮಾಧಾನ ಮತ್ತು (3) ತಪ್ಪಿತಸ್ಥ ಮನೋಭಾವ. ಇವುಗಳಲ್ಲಿ ಪ್ರತಿಯೊಂದರ ಬಗ್ಗೆ ನಾವು ಚರ್ಚಿಸುವಾಗ “ಹಿಂದಿನ ವಿಷಯಗಳನ್ನು ಮರೆತುಬಿಟ್ಟು ಮುಂದಿನ ವಿಷಯಗಳ” ಬಗ್ಗೆ ಯೋಚಿಸ್ತಾ ಇರಲು ಬೈಬಲ್‌ ತತ್ವಗಳು ಹೇಗೆ ಸಹಾಯ ಮಾಡುತ್ತವೆ ಅಂತ ನೋಡ್ತೇವೆ.—ಫಿಲಿ. 3:13.

ಹಿಂದಿನ ದಿನಗಳೇ ಚೆನ್ನಾಗಿತ್ತು ಅಂತ ಯೋಚಿಸಬೇಡಿ

ಯಾವ ವಿಷ್ಯ ನಮ್ಮ ಗಮನವನ್ನ ಭವಿಷ್ಯದ ಕಡೆಗೆ ಇಡದಂತೆ ತಡೆಯುತ್ತಿದೆ? (ಪ್ಯಾರ 5, 9, 13 ನೋಡಿ) *

5. ನಾವೇನು ಮಾಡ್ಬಾರ್ದು ಅಂತ ಪ್ರಸಂಗಿ 7:10 ಹೇಳುತ್ತೆ?

5 ಪ್ರಸಂಗಿ 7:10 ಓದಿ. ಇಲ್ಲಿ ರಾಜ ಸೊಲೊಮೋನ ಹೇಳಿದ ಮಾತಿನ ಅರ್ಥ ನಾವು ಹಿಂದಿನ ಕಾಲದ ಬಗ್ಗೆ ಯೋಚಿಸೋದೇ ತಪ್ಪು ಅಂತಾನಾ? ಅಲ್ಲ. ಬದಲಿಗೆ ಈಗಿನ ದಿನಗಳನ್ನ ಹಿಂದಿನ ಕಾಲಕ್ಕೆ ಹೋಲಿಸೋದು ಒಳ್ಳೇದಲ್ಲ ಅಂತರ್ಥ. ಹಿಂದೆ ಯೆಹೋವನು ನಮಗೆ ಕೊಟ್ಟ ಆಶೀರ್ವಾದಗಳ ಬಗ್ಗೆ ಯೋಚಿಸೋದ್ರಿಂದ ಸಂತೋಷ ಸಿಗುತ್ತೆ ಅನ್ನೋದು ನಿಜನೇ. ಆದ್ರೆ ಹಿಂದಿನ ದಿನಗಳೇ ತುಂಬ ಚೆನ್ನಾಗಿದ್ದವು, ಅದಕ್ಕೆ ಹೋಲಿಸಿದ್ರೆ ಈಗಿನ ದಿನಗಳು ಚೆನ್ನಾಗೇ ಇಲ್ಲ ಅಂತ ಯೋಚಿಸೋದು ತಪ್ಪು. ಇನ್ನೊಂದು ಬೈಬಲ್‌ ಭಾಷಾಂತರದಲ್ಲಿ ಈ ವಚನ ಹೀಗಿದೆ: “ಈ ಕಾಲಕ್ಕಿಂತ ಹಿಂದಿನ ಕಾಲವೇ ಚೆನ್ನಾಗಿತ್ತಲ್ಲವೇ ಎನ್ನಬೇಡ. ಅದು ಜ್ಞಾನವುಳ್ಳವರ ಪ್ರಶ್ನೆಯಲ್ಲ.”

ಇಸ್ರಾಯೇಲ್ಯರು ಈಜಿಪ್ಟಿಂದ ಹೊರ ಬಂದ ಮೇಲೆ ಯಾವ ತಪ್ಪು ಮಾಡಿದ್ರು? (ಪ್ಯಾರ 6 ನೋಡಿ)

6. ಹಿಂದಿನ ಜೀವನನೇ ಚೆನ್ನಾಗಿತ್ತು ಅಂತ ಯೋಚಿಸ್ತಾ ಇರೋದು ಯಾಕೆ ಒಳ್ಳೇದಲ್ಲ? ಒಂದು ಉದಾಹರಣೆ ಕೊಡಿ.

6 ಹಿಂದಿನ ಜೀವನನೇ ಚೆನ್ನಾಗಿತ್ತು ಅಂತ ಯೋಚಿಸ್ತಾ ಇರೋದು ಯಾಕೆ ಒಳ್ಳೇದಲ್ಲ? ಯಾಕಂದ್ರೆ ಆ ರೀತಿ ಯೋಚಿಸ್ವಾಗ ಹಿಂದೆ ನಡೆದ ಒಳ್ಳೇ ವಿಷ್ಯಗಳನ್ನ ಮಾತ್ರ ಯೋಚಿಸ್ತೀವಿ, ಆಗ ಅನುಭವಿಸಿದ ಕಷ್ಟಗಳ ಬಗ್ಗೆ ಯೋಚಿಸಲ್ಲ. ಹಿಂದಿನ ಕಾಲದ ಇಸ್ರಾಯೇಲ್ಯರ ಉದಾಹರಣೆ ನೋಡಿ. ಅವ್ರು ಈಜಿಪ್ಟ್‌ನಿಂದ ಹೊರಗೆ ಬಂದ ಮೇಲೆ ಅಲ್ಲಿ ಅವ್ರು ಪಟ್ಟಿದ್ದ ಕಷ್ಟನ ಮರೆತು ಬಿಟ್ರು. ಅವ್ರು ತಿನ್ನುತ್ತಿದ್ದ ಆಹಾರನ ಮಾತ್ರ ನೆನಪಿಸಿಕೊಂಡ್ರು. “ಐಗುಪ್ತದೇಶದಲ್ಲಿ ನಾವು ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸವತೆಕಾಯಿ, ಕರ್‌ಬೂಜು, ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿ ಇವು ನೆನಪಿಗೆ ಬರುತ್ತವಲ್ಲಾ” ಅಂತ ಹೇಳಿದ್ರು. (ಅರ. 11:5) ಆದ್ರೆ ನಿಜವಾಗಿಯೂ ಅವ್ರು ಆ ಆಹಾರವನ್ನ “ಬಿಟ್ಟಿಯಾಗಿ” ತಿಂದಿದ್ರಾ? ಇಲ್ಲ, ಅಲ್ಲಿ ಅವ್ರು ದಾಸರಾಗಿದ್ರು. ಈಜಿಪ್ಟಿನವ್ರು ಅವ್ರಿಂದ ತುಂಬ ಕೆಲ್ಸ ಮಾಡಿಸ್ತಿದ್ರು. ಒಂದರ್ಥದಲ್ಲಿ ಅವ್ರು ಆ ಆಹಾರಕ್ಕಾಗಿ ತುಂಬ ಬೆಲೆ ತೆರುತ್ತಿದ್ರು. (ವಿಮೋ. 1:13, 14; 3:6-9) ಆದ್ರೂ ಅವ್ರು ಹಿಂದೆ ಪಡ್ತಿದ್ದ ಕಷ್ಟಗಳನ್ನ ಮರೆತುಬಿಟ್ರು. ಆ ಜೀವನನೇ ಚೆನ್ನಾಗಿತ್ತು ಅಂತ ಯೋಚಿಸಿದ್ರು. ಯೆಹೋವ ಅವ್ರಿಗಾಗಿ ಮಾಡಿದ ಒಳ್ಳೇ ವಿಷ್ಯಗಳ ಕಡೆಗೆ ಗಮನ ಕೊಡೋಕೆ ತಪ್ಪಿಹೋದ್ರು. ಅವ್ರು ತೋರಿಸಿದ ಈ ಮನೋಭಾವ ಯೆಹೋವನಿಗೆ ಒಂಚೂರೂ ಇಷ್ಟ ಆಗ್ಲಿಲ್ಲ.—ಅರ. 11:10.

7. ಈಗಿನ ಜೀವನಕ್ಕಿಂತ ಹಿಂದಿನ ದಿನಗಳೇ ಚೆನ್ನಾಗಿದ್ದವು ಅಂತ ಯೋಚಿಸದೇ ಇರೋಕೆ ಒಬ್ಬ ಸಹೋದರಿಗೆ ಯಾವ್ದು ಸಹಾಯ ಮಾಡ್ತು?

7 ನಾವು ಸಹ ಕೆಲವೊಮ್ಮೆ ಈಗಿನ ಜೀವನಕ್ಕಿಂತ ಹಿಂದಿನ ದಿನಗಳೇ ಚೆನ್ನಾಗಿದ್ದವು ಅಂತ ಯೋಚಿಸಬಹುದು. ಹೀಗೆ ಯೋಚಿಸದೇ ಇರೋಕೆ ನಾವೇನು ಮಾಡಬಹುದು? ಒಬ್ಬ ಸಹೋದರಿಯ ಉದಾಹರಣೆ ನೋಡಿ. ಅವ್ರು 1945 ರಲ್ಲಿ ಬ್ರೂಕ್ಲಿನ್‌ ಬೆತೆಲಿನಲ್ಲಿ ಸೇವೆ ಮಾಡೋಕೆ ಶುರುಮಾಡಿದರು. ಸ್ವಲ್ಪ ವರ್ಷಗಳಾದ ಮೇಲೆ ಬೆತೆಲಿನಲ್ಲಿದ್ದ ಒಬ್ಬ ಸಹೋದರನನ್ನು ಮದುವೆಯಾದರು. ಅವರಿಬ್ರೂ ಅನೇಕ ವರ್ಷ ಸೇವೆ ಮಾಡಿದ್ರು. ಆದ್ರೆ 1976 ರಲ್ಲಿ ಅವ್ರ ಗಂಡನ ಆರೋಗ್ಯ ಹಾಳಾಯಿತು. ತಾನಿನ್ನು ಬದುಕಲ್ಲ ಅಂತ ಆ ಸಹೋದರನಿಗೆ ಗೊತ್ತಾದಾಗ ಅವರು ತನ್ನ ಹೆಂಡ್ತಿಗೆ ಒಳ್ಳೇ ಸಲಹೆಗಳನ್ನ ಕೊಟ್ಟರು. ಅವರು ತೀರಿಹೋದ ನಂತರ ಆ ನೋವನ್ನ ತಾಳಿಕೊಳ್ಳೋಕೆ ಆ ಸಲಹೆಗಳು ಸಹೋದರಿಗೆ ತುಂಬ ಸಹಾಯ ಮಾಡಿದವು. ಆ ಸಹೋದರ ಆಕೆಗೆ ಹೀಗೆ ಹೇಳಿದ್ದರು: “ನಮ್ಮ ಮದ್ವೆ ಜೀವನ ತುಂಬ ಚೆನ್ನಾಗಿತ್ತು. ಇಂಥ ಜೀವನ ಅನೇಕರಿಗೆ ಸಿಗಲ್ಲ. ನಾವಿಬ್ರೂ ಜೊತೆಯಾಗಿ ಸೇರಿ ಮಾಡಿದ ವಿಷ್ಯಗಳನ್ನ ನಿಂಗೆ ಅಷ್ಟು ಬೇಗ ಮರೆಯೋಕಾಗಲ್ಲ. ಆದ್ರೆ ಅದ್ರ ಬಗ್ಗೆನೇ ಯೋಚಿಸ್ತಾ ಇರ್ಬೇಡ. ಸಮಯ ಹೋದಂತೆ ನಿನ್ನ ದುಃಖ ಕಡಿಮೆಯಾಗುತ್ತೆ. ‘ಯಾಕೆ ನಂಗೆ ಹೀಗಾಯ್ತು?’ ಅಂತ ಯೋಚಿಸ್ತಾ ನಿರಾಶೆಯಿಂದ ಇರ್ಬೇಡ. ನಾವಿಬ್ರೂ ಒಟ್ಟಿಗೆ ಸೇವೆ ಮಾಡಿದಾಗ ಸಿಕ್ಕ ಆಶೀರ್ವಾದಗಳ ಬಗ್ಗೆ ಸಂತೋಷಪಡು . . . ನೆನಪುಗಳು ದೇವ್ರಿಂದ ಸಿಕ್ಕಿರೋ ಉಡುಗೊರೆ.” ಇದು ಒಳ್ಳೇ ಸಲಹೆಯಾಗಿತ್ತಲ್ವಾ?

8. ಭವಿಷ್ಯದ ಕಡೆ ಗಮನ ಕೊಟ್ಟಿದ್ರಿಂದ ನಮ್ಮ ಸಹೋದರಿಗೆ ಯಾವ ಪ್ರಯೋಜನ ಸಿಕ್ತು?

8 ತನ್ನ ಗಂಡ ಕೊಟ್ಟ ಸಲಹೆಯನ್ನ ಸಹೋದರಿ ಪಾಲಿಸಿದ್ರು. ಅವ್ರು 92 ನೇ ವಯಸ್ಸಲ್ಲಿ ತೀರಿ ಹೋದ್ರು. ಅಲ್ಲಿ ತನಕ ನಂಬಿಗಸ್ತಿಕೆಯಿಂದ ಸೇವೆಮಾಡಿದ್ರು. ಅದಕ್ಕಿಂತ ಸ್ವಲ್ಪ ವರ್ಷಗಳ ಹಿಂದೆ ಆಕೆ ಹೀಗೆ ಹೇಳಿದ್ರು: “ಯೆಹೋವನಿಗೆ ಸೇವೆ ಮಾಡಿದ 63 ವರ್ಷಗಳನ್ನು ನೋಡುವಾಗ ನನ್ನ ಜೀವನ ತುಂಬ ಚೆನ್ನಾಗಿತ್ತು ಅಂತ ಹೇಳ್ಬಹುದು.” ಯಾಕೆ ಚೆನ್ನಾಗಿತ್ತು ಅಂತ ಆಕೆ ಹೀಗೆ ವಿವರಿಸಿದ್ರು: “ನಮ್ಮ ಜೀವನದಲ್ಲಿ ಸಂತೋಷ ಇರೋಕೆ ಕಾರಣ ನಾವು ಪ್ರೀತಿಯ ಸಹೋದರ ಸಹೋದರಿಯರ ಕುಟುಂಬದ ಭಾಗವಾಗಿರೋದೇ ಆಗಿದೆ. ಅವ್ರ ಜೊತೆ ಸೇರಿ ಪರದೈಸ್‌ನಲ್ಲಿ ಶಾಶ್ವತವಾಗಿ ಒಬ್ಬನೇ ಸತ್ಯದೇವರಾದ ಸೃಷ್ಟಿಕರ್ತನಾದ ಯೆಹೋವನನ್ನ ಆರಾಧಿಸೋ ನಿರೀಕ್ಷೆ ಸಹ ನಮಗೆ ಸಂತೋಷ ಕೊಡುತ್ತೆ.” * ಯೆಹೋವನು ಕೊಟ್ಟಿರೋ ಮಾತುಗಳ ಕಡೆ ಗಮನ ಕೊಟ್ಟ ಈ ಸಹೋದರಿಯಿಂದ ನಾವು ತುಂಬ ವಿಷ್ಯಗಳನ್ನ ಕಲಿಬಹುದು.

ಮನಸ್ಸಲ್ಲಿ ಅಸಮಾಧಾನ ಇಟ್ಕೊಳ್ಳಬೇಡಿ

9. ಯಾಜಕಕಾಂಡ 19:18 ರಲ್ಲಿ ಹೇಳಿರೋ ಪ್ರಕಾರ ಬೇರೆಯವ್ರನ್ನ ಕ್ಷಮಿಸೋಕೆ ನಮ್ಗೆ ಯಾವಾಗ ಕಷ್ಟವಾಗಬಹುದು?

9 ಯಾಜಕಕಾಂಡ 19:18 ಓದಿ. ಸಭೆಯವ್ರು, ನಮ್ಮ ಸ್ನೇಹಿತರು ಅಥ್ವಾ ಸಂಬಂಧಿಕರು ನಮ್ಮ ಮನಸ್ಸಿಗೆ ನೋವಾಗೋ ತರ ನಡ್ಕೊಂಡ್ರೆ ಅವ್ರನ್ನ ಕ್ಷಮಿಸೋಕೆ ಕೆಲವೊಮ್ಮೆ ನಮ್ಗೆ ತುಂಬ ಕಷ್ಟವಾಗಬಹುದು. ಉದಾಹರಣೆಗೆ, ಒಬ್ಬ ಸಹೋದರಿ ತನ್ನ ದುಡ್ಡನ್ನ ಇನ್ನೊಬ್ಬ ಸಹೋದರಿ ಕದ್ದಿದ್ದಾಳೆ ಅಂತ ಆರೋಪ ಹೊರಿಸಿದ್ಳು. ನಂತ್ರ ಆ ಸಹೋದರಿ ಕದ್ದಿಲ್ಲ ಅಂತ ಗೊತ್ತಾಯ್ತು. ಆರೋಪ ಹೊರಿಸಿದ್ದ ಸಹೋದರಿ ತಾನು ಮಾಡಿದ್ದು ತಪ್ಪು ಅಂತ ಅರಿತು ಕ್ಷಮೆ ಕೇಳಿದ್ಳು. ಆದ್ರೆ ತಪ್ಪು ಮಾಡದೇ ಇದ್ದ ಸಹೋದರಿಗೆ ತುಂಬ ದುಃಖವಾಯ್ತು ಹಾಗೂ ನಡೆದಿದ್ದನ್ನ ಮರೆಯೋಕೆ ಕಷ್ಟವಾಯ್ತು. ನಿಮ್ಗೂ ಈ ತರ ಆಗಿದ್ಯಾ? ನಮ್ಮ ಜೀವನದಲ್ಲಿ ಈ ತರ ನಡೆಯದೇ ಇರಬಹುದು. ಆದ್ರೆ ನಮ್ಗೂ ಯಾರಾದ್ರೂ ಬೇಜಾರು ಮಾಡಿರಬಹುದು ಮತ್ತು ಅವ್ರು ಮಾಡಿದ ತಪ್ಪನ್ನ ಯಾವತ್ತೂ ಕ್ಷಮಿಸೋಕೆ ಆಗಲ್ಲ ಅಂತ ಅನಿಸ್ತಿರಬಹುದು.

10. ಒಬ್ರನ್ನ ಕ್ಷಮಿಸೋಕೆ ಕಷ್ಟ ಆದಾಗ ನಮ್ಗೆ ಯಾವ್ದು ಸಹಾಯ ಮಾಡುತ್ತೆ?

10 ಒಬ್ರನ್ನ ಕ್ಷಮಿಸೋಕೆ ಕಷ್ಟ ಆದಾಗ ನಮ್ಗೆ ಯಾವ್ದು ಸಹಾಯ ಮಾಡುತ್ತೆ? ಯೆಹೋವ ಎಲ್ಲವನ್ನೂ ನೋಡ್ತಾನೆ ಅನ್ನೋದನ್ನ ನಾವು ಮರೆಯಬಾರದು. ನಮ್ಮ ಜೀವನದಲ್ಲಿ ಏನೆಲ್ಲಾ ಆಗ್ತಿದೆ ಅಂತ ಆತನಿಗೆ ಚೆನ್ನಾಗಿ ಗೊತ್ತು. ನಮಗಾಗ್ತಿರೋ ಅನ್ಯಾಯ ಕೂಡ ಆತನಿಗೆ ಗೊತ್ತು. (ಇಬ್ರಿ. 4:13) ನಾವು ಕಷ್ಟಪಡುವಾಗ ಆತನಿಗೆ ಬೇಜಾರಾಗುತ್ತೆ. (ಯೆಶಾ. 63:9) ನಾವು ಅನುಭವಿಸಿರೋ ಅನ್ಯಾಯದಿಂದ ನಮಗೆ ಆಗ್ತಿರೋ ನೋವನ್ನ ತೆಗೆದುಹಾಕ್ತೀನಿ ಅಂತ ಆತನು ಮಾತು ಕೊಟ್ಟಿದ್ದಾನೆ.—ಪ್ರಕ. 21:3, 4.

11. ಬೇರೆಯವ್ರನ್ನ ಕ್ಷಮಿಸೋದ್ರಿಂದ ನಾವು ಹೇಗೆ ಪ್ರಯೋಜನ ಪಡಕೊಳ್ತೇವೆ?

11 ಬೇರೆಯವ್ರನ್ನ ನಾವು ಕ್ಷಮಿಸಿದ್ರೆ ನಮ್ಗೇ ಪ್ರಯೋಜನ ಅನ್ನೋದನ್ನ ನಾವು ಮರೆಯಬಾರದು. ಈ ವಿಷ್ಯ, ತಪ್ಪು ಮಾಡಿರದ ಸಹೋದರಿಗೆ ಅರ್ಥ ಆಯ್ತು. ತನ್ನ ಮೇಲೆ ಆರೋಪ ಹೊರಿಸಿದ ಸಹೋದರಿಯನ್ನ ಕ್ಷಮಿಸಿದ್ಳು ಮತ್ತು ಆಕೆಯ ಬಗ್ಗೆ ತನ್ನ ಮನಸ್ಸಿನಲ್ಲಿ ಅಸಮಾಧಾನ ಇಟ್ಟುಕೊಳ್ಳಲಿಲ್ಲ. ಬೇರೆಯವ್ರ ತಪ್ಪನ್ನ ನಾವು ಕ್ಷಮಿಸಿದ್ರೆ ನಮ್ಮ ತಪ್ಪನ್ನ ಯೆಹೋವನು ಕ್ಷಮಿಸ್ತಾನೆ ಅಂತ ಆಕೆ ಅರ್ಥಮಾಡಿಕೊಂಡ್ಳು. (ಮತ್ತಾ. 6:14) ತನ್ನ ಮೇಲೆ ಸುಳ್ಳಾರೋಪ ಹೊರಿಸಿದ ಸಹೋದರಿ ಮಾಡಿದ್ದು ತಪ್ಪು ಅಂತ ಈ ಸಹೋದರಿಗೆ ಗೊತ್ತಿತ್ತು. ಆದ್ರೂ ಅವಳು ಆಕೆಯನ್ನ ಕ್ಷಮಿಸಿಬಿಟ್ಳು. ಇದ್ರಿಂದಾಗಿ ಅವಳಿಗೆ ಖುಷಿಯಿಂದ ಇರೋಕೆ ಆಯ್ತು ಮತ್ತು ಯೆಹೋವನ ಸೇವೆ ಕಡೆಗೆ ಗಮನ ಕೊಡೋಕೆ ಆಯ್ತು.

‘ತಪ್ಪು ಮಾಡಿಬಿಟ್ಟೆನಲ್ಲಾ’ ಅಂತ ಕೊರಗ್ತಾ ಇರಬೇಡಿ

12. ಒಂದನೇ ಯೋಹಾನ 3:19, 20 ರಿಂದ ನಾವೇನು ಕಲಿತೇವೆ?

12 ಒಂದನೇ ಯೋಹಾನ 3:19, 20 ಓದಿ. ನಮೆಲ್ಲರಿಗೂ ಕೆಲವೊಮ್ಮೆ ತಪ್ಪಿತಸ್ಥ ಮನೋಭಾವ ಕಾಡುತ್ತೆ. ಉದಾಹರಣೆಗೆ, ಕೆಲವರು ಸತ್ಯ ಕಲಿಯೋ ಮುಂಚೆ ಮಾಡಿದ ತಪ್ಪನ್ನ ನೆನಸಿಕೊಂಡು ಕೊರಗ್ತಾ ಇರ್ತಾರೆ. ಇನ್ನು ಕೆಲವ್ರಿಗೆ ದೀಕ್ಷಾಸ್ನಾನ ಆದ ಮೇಲೆ ಮಾಡಿದ ತಪ್ಪಿನ ಬಗ್ಗೆ ದೋಷಿ ಭಾವನೆ ಕಾಡುತ್ತೆ. ಇಂಥ ಭಾವನೆಗಳು ಕಾಡೋದು ಸಹಜ. (ರೋಮ. 3:23) ನಾವು ಸರಿಯಾದದ್ದನ್ನೇ ಮಾಡಬೇಕು ಅಂತ ಬಯಸೋದಾದ್ರೂ ಅನೇಕ ಬಾರಿ ಎಡವುತ್ತೇವೆ. (ಯಾಕೋ. 3:2; ರೋಮ. 7:21-23) ನಾವು ಮಾಡಿದ ತಪ್ಪಿನ ಬಗ್ಗೆ ನಮ್ಮ ಮನಸ್ಸು ಚುಚ್ಚುವಾಗ ನಮ್ಗೆ ಇಷ್ಟ ಆಗಲ್ಲ. ಆದ್ರೂ ತಪ್ಪಿತಸ್ಥ ಮನೋಭಾವ ಇರೋದು ಒಳ್ಳೇದೇ. ಯಾಕೆಂದ್ರೆ ಅಂಥ ಮನೋಭಾವ ಇರುವಾಗ ನಾವು ತಪ್ಪನ್ನ ಬೇಗ ತಿದ್ದಿಕೊಂಡು ಸರಿಯಾದ ದಾರಿಯಲ್ಲಿ ನಡಿತೇವೆ. ಜೊತೆಗೆ ಅಂಥ ತಪ್ಪುಗಳನ್ನ ಪುನಃ ಮಾಡದೇ ಇರೋಕೆ ದೃಢತೀರ್ಮಾನ ಮಾಡ್ತೇವೆ.—ಇಬ್ರಿ. 12:12, 13.

13. ನಾವು ಮಾಡಿದ ತಪ್ಪಿನ ಬಗ್ಗೆ ಯಾಕೆ ಮಿತಿಮೀರಿ ಯೋಚಿಸಬಾರದು?

13 ಆದ್ರೆ ಕೆಲವೊಮ್ಮೆ ನಾವು ಮಾಡಿದ ತಪ್ಪಿನ ಬಗ್ಗೆ ಮಿತಿಮೀರಿ ಯೋಚಿಸ್ತಿರ್ತೀವೆ. ಆ ತಪ್ಪಿನ ಬಗ್ಗೆ ಈಗಾಗ್ಲೇ ಪಶ್ಚಾತ್ತಾಪ ಪಟ್ಟಿರುತ್ತೇವೆ, ಯೆಹೋವನೂ ಅದನ್ನ ಕ್ಷಮಿಸಿರ್ತಾನೆ. ಆದ್ರೂ ನಮಗೆ ತಪ್ಪಿತಸ್ಥ ಮನೋಭಾವ ಕಾಡ್ತಾ ಇರುತ್ತೆ. ಇದು ತುಂಬ ಅಪಾಯಕಾರಿ. (ಕೀರ್ತ. 31:10; 38:3, 4) ಯಾಕೆ? ಹಿಂದೆ ಮಾಡಿದ ತಪ್ಪಿನ ಬಗ್ಗೆ ಯೋಚಿಸ್ತಾ ಕೊರಗ್ತಿದ್ದ ಒಬ್ಬ ಸಹೋದರಿಯ ಉದಾಹರಣೆ ನೋಡಿ. ಆಕೆ ಹೀಗೆ ಹೇಳ್ತಾಳೆ: “ನಾನು ಯೆಹೋವನ ಸೇವೆಯಲ್ಲಿ ಏನು ಮಾಡಿದ್ರೂ ವ್ಯರ್ಥ ಅಂತ ನೆನಸ್ತಿದ್ದೆ. ಯಾಕಂದ್ರೆ, ನಾನು ಎಂಥ ತಪ್ಪುಗಳನ್ನ ಮಾಡಿದ್ದೀನಂದ್ರೆ ನಾಶನದ ಸಮ್ಯದಲ್ಲಿ ನಾನು ಪಾರಾಗಲ್ಲ ಅಂತ ಅನಿಸ್ತಿತ್ತು.” ನಮ್ಮಲ್ಲಿ ಅನೇಕರಿಗೆ ಇದೇ ರೀತಿ ಅನಿಸಬಹುದು. ಆದ್ರೆ ಮಾಡಿದ ತಪ್ಪಿನ ಬಗ್ಗೆ ಮಿತಿಮೀರಿ ಕೊರಗದೇ ಇರೋದು ತುಂಬ ಮುಖ್ಯ. ಯಾಕೆಂದ್ರೆ ನಾವು ಮಾಡಿದ ತಪ್ಪನ್ನು ಯೆಹೋವನು ಕ್ಷಮಿಸಿದ ಮೇಲೂ ‘ನಾನು ಯಾವ್ದಕ್ಕೂ ಲಾಯಕ್ಕಿಲ್ಲ’ ಅಂತ ಯೋಚಿಸಿ ಯೆಹೋವನ ಸೇವೆಯನ್ನ ನಿಲ್ಲಿಸಿಬಿಟ್ರೆ ಸೈತಾನನಿಗೆ ತುಂಬ ಖುಷಿಯಾಗುತ್ತೆ.—2 ಕೊರಿಂ. 2:5-7, 11 ಹೋಲಿಸಿ.

14. ಯೆಹೋವ ನಮ್ಮ ತಪ್ಪನ್ನ ನಿಜವಾಗಿಯೂ ಕ್ಷಮಿಸ್ತಾನೆ ಅಂತ ಹೇಗೆ ತಿಳುಕೊಳ್ಳಬಹುದು?

14 ಆದ್ರೂ ‘ಯೆಹೋವ ನನ್ನ ತಪ್ಪನ್ನ ನಿಜವಾಗಲೂ ಕ್ಷಮಿಸ್ತಾನಾ?’ ಅನ್ನೋ ಪ್ರಶ್ನೆ ನಮ್ಮ ಮನಸ್ಸಿಗೆ ಬರಬಹುದು. ಈ ಪ್ರಶ್ನೆ ನಿಮ್ಮ ಮನಸ್ಸಿಗೆ ಬಂದಿದೆ ಅಂದ್ರೆ, ಯೆಹೋವ ನಿಮ್ಮ ತಪ್ಪನ್ನ ಕ್ಷಮಿಸ್ತಾನೆ ಅಂತರ್ಥ. ತುಂಬ ವರ್ಷಗಳ ಹಿಂದೆ ಬಂದ ಕಾವಲಿನಬುರುಜುವಿನಲ್ಲಿ, ಸತ್ಯಕ್ಕೆ ಬರೋ ಮುಂಚೆ ನಮ್ಮಲ್ಲಿದ್ದ ದುಶ್ಚಟದಿಂದ ಹೊರಬಂದ ಮೇಲೂ ಅದನ್ನ ಮತ್ತೆ ಮಾಡಿಬಿಟ್ರೆ ನಮಗೆ ಹೇಗನಿಸುತ್ತೆ ಅಂತ ತಿಳಿಸಲಾಗಿದೆ. ಆ ಲೇಖನ ಹೀಗೆ ಹೇಳುತ್ತೆ: “ನಿರಾಶರಾಗ್ಬೇಡಿ. ಯೆಹೋವ ಕ್ಷಮಿಸೋಕೆ ಆಗದಿರುವಷ್ಟು ದೊಡ್ಡ ತಪ್ಪು ಮಾಡಿಬಿಟ್ಟಿದ್ದೀವಿ ಅಂತ ಯಾವತ್ತಿಗೂ ಯೋಚಿಸ್ಬೇಡಿ. ಆ ತರ ನೀವು ಯೋಚಿಸ್ಬೇಕು ಅಂತ ಸೈತಾನ ಬಯಸ್ತಾನೆ. ನೀವು ತಪ್ಪು ಮಾಡಿದ್ದಕ್ಕೆ ನಿಮ್ಗೆ ತುಂಬ ದುಃಖ ಇದ್ರೆ, ‘ತಪ್ಪು ಮಾಡಿಬಿಟ್ಟೆನಲ್ಲಾ’ ಅಂತ ಪರಿತಪಿಸ್ತಿದ್ರೆ ಅದು ನೀವು ಒಬ್ಬ ಒಳ್ಳೇ ವ್ಯಕ್ತಿ ಅಂತ ತೋರಿಸಿಕೊಡುತ್ತೆ. ಅಷ್ಟೇ ಅಲ್ಲ, ಯೆಹೋವನು ನಿಮ್ಮ ತಪ್ಪನ್ನ ಕ್ಷಮಿಸ್ತಾನೆ ಅಂತಾನೂ ಅದು ತೋರಿಸಿಕೊಡುತ್ತೆ. ನಿಮ್ಮನ್ನ ಕ್ಷಮಿಸುವಂತೆ, ಶುದ್ಧ ಮನಸ್ಸಾಕ್ಷಿ ಕೊಡುವಂತೆ ಮತ್ತು ಆ ತಪ್ಪನ್ನ ಪುನಃ ಮಾಡದೇ ಇರೋಕೆ ಸಹಾಯ ಮಾಡುವಂತೆ ಯೆಹೋವನಿಗೆ ದೀನತೆಯಿಂದ ಪ್ರಾರ್ಥಿಸ್ತಾ ಇರಿ. ಒಂದು ಮಗು ಹೇಗೆ ಒಂದೇ ಸಮಸ್ಯೆ ಬಗ್ಗೆ ಪದೇಪದೇ ತನ್ನ ತಂದೆ ಹತ್ರ ಹೋಗಿ ಹೇಳುತ್ತೋ ಅದೇ ತರ ನೀವು ನಿಮ್ಮ ಬಲಹೀನತೆಯಿಂದ ಹೊರಬರೋಕೆ ಸಹಾಯ ಮಾಡುವಂತೆ ಯೆಹೋವನ ಹತ್ರ ಪದೇಪದೇ ಕೇಳ್ತಾ ಇರಿ. ಆಗ ಯೆಹೋವನು ಅಪಾತ್ರ ದಯೆ ತೋರಿಸ್ತಾ ನಿಮಗೆ ಸಹಾಯ ಮಾಡ್ತಾನೆ.” *

15-16. ಕೆಲವು ಸಹೋದರ ಸಹೋದರಿಯರಿಗೆ ಯೆಹೋವ ತಮ್ಮ ತಪ್ಪನ್ನ ಕ್ಷಮಿಸಿದ್ದಾನೆ ಅನ್ನೋದು ಅರ್ಥ ಆದಾಗ ಅವ್ರಿಗೆ ಹೇಗನಿಸಿದೆ?

15 ತುಂಬ ಸಹೋದರ ಸಹೋದರಿಯರಿಗೆ ತಾವು ಕ್ಷಮೆಗೆ ಅರ್ಹರಲ್ಲ ಅಂತ ಅನಿಸಿದ್ರೂ ಯೆಹೋವ ತಮ್ಮ ತಪ್ಪನ್ನ ಕ್ಷಮಿಸಿದ್ದಾನೆ ಅನ್ನೋದನ್ನ ಅರ್ಥಮಾಡ್ಕೊಂಡಾಗ ಸಾಂತ್ವನ ಸಿಕ್ಕಿದೆ. ಉದಾಹರಣೆಗೆ, “ಬದುಕು ಬದಲಾದ ವಿಧ” ಅನ್ನೋ ಸರಣಿಯಲ್ಲಿ ಕೆಲವು ವರ್ಷಗಳ ಹಿಂದೆ ಬಂದ ಒಂದು ಲೇಖನದಿಂದ ಒಬ್ಬ ಸಹೋದರನಿಗೆ ತುಂಬ ಉತ್ತೇಜನ ಸಿಕ್ತು. ಆ ಲೇಖನದಲ್ಲಿ ತಿಳಿಸಲಾದ ಸಹೋದರಿಗೆ ತಾನು ಹಿಂದೆ ಮಾಡಿದ ತಪ್ಪಿನಿಂದಾಗಿ ಯೆಹೋವ ತನ್ನನ್ನ ಪ್ರೀತಿಸ್ತಾನೆ ಅನ್ನೋದನ್ನ ಅರ್ಥಮಾಡ್ಕೊಳ್ಳೋಕೆ, ನಂಬೋಕೆ ಕಷ್ಟ ಆಯ್ತು. ದೀಕ್ಷಾಸ್ನಾನ ತಗೊಂಡು ಅನೇಕ ವರ್ಷಗಳಾದ ಮೇಲೂ ಆ ಭಾವನೆ ಆಕೆಗಿತ್ತು. ಆದ್ರೆ ಅವಳು ವಿಮೋಚನಾ ಮೌಲ್ಯದ ಬಗ್ಗೆ ಚೆನ್ನಾಗಿ ಯೋಚಿಸಿದಾಗ ಯೆಹೋವ ತನ್ನನ್ನೂ ಪ್ರೀತಿಸ್ತಾನೆ ಅನ್ನೋದನ್ನ ಅರ್ಥಮಾಡ್ಕೊಂಡಳು. *

16 ಈ ಅನುಭವದಿಂದ ಆ ಸಹೋದರನಿಗೆ ಸಹಾಯ ಆಯ್ತಾ? ಅವನು ಬರೆಯೋದು: “ನಾನು ಯುವ ಪ್ರಾಯದಲ್ಲಿದ್ದಾಗ ತುಂಬ ಅಶ್ಲೀಲ ಚಿತ್ರಗಳನ್ನ ನೋಡ್ತಿದ್ದೆ. ನಂತ್ರ ಅದನ್ನ ಬಿಟ್ಟುಬಿಟ್ಟಿದ್ದೆ. ಆದ್ರೆ ಮತ್ತೆ ಇತ್ತೀಚೆಗೆ ಅದನ್ನ ನೋಡಿದೆ. ಆಗ ಹಿರಿಯರ ಸಹಾಯ ತಗೊಂಡೆ ಮತ್ತು ಆ ಸಮಸ್ಯೆಯಿಂದ ಹೊರಬಂದೆ. ದೇವ್ರು ಈಗಲೂ ನನ್ನನ್ನ ಪ್ರೀತಿಸ್ತಾನೆ, ನನಗೆ ಕರುಣೆ ತೋರಿಸ್ತಾನೆ ಅಂತ ಹಿರಿಯರು ಭರವಸೆ ನೀಡಿದ್ರು. ಆದ್ರೂ ನಂಗೆ ಕೆಲವೊಮ್ಮೆ, ‘ನಾನು ಏನಕ್ಕೂ ಲಾಯಕ್ಕಿಲ್ಲ, ಯೆಹೋವನು ನನ್ನನ್ನ ಪ್ರೀತಿಸಲ್ಲ’ ಅಂತ ಅನಿಸುತ್ತೆ. ಆ ಅನುಭವ (ಸಹೋದರಿಯ) ಓದಿ ನಂಗೆ ತುಂಬ ಸಹಾಯ ಆಗಿದೆ. ‘ದೇವ್ರು ನನ್ನನ್ನ ಪ್ರೀತಿಸಲ್ಲ’ ಅಂತ ಅನಿಸಿದಾಗೆಲ್ಲಾ ಒಂದು ಅರ್ಥದಲ್ಲಿ ‘ನನ್ನ ತಪ್ಪಿನ ನಿವಾರಣೆಗಾಗಿ ದೇವರ ಮಗ ಕೊಟ್ಟ ಯಜ್ಞ ಸಾಕಾಗಲ್ಲ’ ಅಂತ ಹೇಳಿದ ಹಾಗಿರುತ್ತೆ ಅಂತ ನನಗೀಗ ಅರ್ಥ ಆಗಿದೆ. ನಾನು ಆ ಲೇಖನನ ಕಟ್‌ ಮಾಡ್ಕೊಂಡು ಒಂದು ಕಡೆ ಇಟ್ಕೊಂಡಿದ್ದೀನಿ. ಯಾವಾಗೆಲ್ಲಾ ಯೆಹೋವನು ನನ್ನನ್ನ ಪ್ರೀತಿಸಲ್ವೇನೋ ಅಂತ ಅನಿಸುತ್ತೋ ಆಗೆಲ್ಲಾ ಆ ಲೇಖನವನ್ನ ಓದಿ ಅದ್ರ ಬಗ್ಗೆ ಧ್ಯಾನಿಸ್ತೀನಿ.”

17. ಅಪೊಸ್ತಲ ಪೌಲ ಯಾಕೆ ಹಿಂದೆ ತಾನು ಮಾಡಿದ ತಪ್ಪುಗಳ ಬಗ್ಗೆ ಕೊರಗ್ತಾ ಕೂರಲಿಲ್ಲ?

17 ಅಪೊಸ್ತಲ ಪೌಲನ ಅನುಭವನೂ ಈ ಅನುಭವಗಳ ತರನೇ ಇತ್ತು. ಅವನು ಕ್ರೈಸ್ತನಾಗೋ ಮುಂಚೆ ಕೆಲವು ಗಂಭೀರ ತಪ್ಪುಗಳನ್ನ ಮಾಡಿದ್ದ. ತಾನು ಮಾಡಿರೋ ತಪ್ಪು ಪೌಲನಿಗೆ ಚೆನ್ನಾಗಿ ನೆನಪಿತ್ತು. ಆದ್ರೆ ಮೂರೊತ್ತೂ ಅದ್ರ ಬಗ್ಗೆನೇ ಯೋಚಿಸ್ತಿರಲಿಲ್ಲ. (1 ತಿಮೊ. 1:12-15) ಪೌಲ ವಿಮೋಚನಾ ಮೌಲ್ಯದಿಂದ ತನ್ನ ತಪ್ಪಿಗೆ ಕ್ಷಮೆ ಸಿಕ್ಕಿದೆ ಮತ್ತು ಅದು ಯೆಹೋವನಿಂದ ತನಗೋಸ್ಕರನೇ ಬಂದಿರೋ ಒಂದು ಉಡುಗೊರೆ ಅನ್ನೋದನ್ನ ಚೆನ್ನಾಗಿ ಅರ್ಥಮಾಡ್ಕೊಂಡಿದ್ದ. (ಗಲಾ. 2:20) ಹಾಗಾಗಿ ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಯೋಚಿಸ್ತಾ ಅವನು ಕೊರಗಲಿಲ್ಲ, ಬದಲಿಗೆ, ಯೆಹೋವನಿಗೆ ತನ್ನಿಂದಾದಷ್ಟು ಉತ್ತಮವಾದ ಸೇವೆ ಮಾಡಬೇಕು ಅನ್ನೋದ್ರ ಕಡೆಗೆ ಗಮನ ಕೊಟ್ಟ.

ನಿಮ್ಮ ಗಮನ ಹೊಸ ಲೋಕದ ಮೇಲಿರಲಿ

ನಮ್ಮ ಗಮನವನ್ನ ಭವಿಷ್ಯದ ಮೇಲಿಡೋಣ (ಪ್ಯಾರ 18-19 ನೋಡಿ) *

18. ನಾವು ಈ ಲೇಖನದಲ್ಲಿ ಏನು ಕಲಿತ್ವಿ?

18 ನಾವು ಈ ಲೇಖನದಲ್ಲಿ ಏನು ಕಲಿತ್ವಿ? (1) ಹಿಂದೆ ನಡೆದ ಒಳ್ಳೇ ವಿಷ್ಯಗಳನ್ನ ನೆನಪಿಸಿಕೊಳ್ಳೋದು ಒಳ್ಳೇದೇ. ಯಾಕಂದ್ರೆ ಸವಿನೆನಪುಗಳು ಯೆಹೋವನಿಂದ ಸಿಕ್ಕಿರೋ ಉಡುಗೊರೆ. ಆದ್ರೆ ಹಿಂದೆ ನಮ್ಮ ಜೀವನ ಎಷ್ಟೇ ಚೆನ್ನಾಗಿದ್ರೂ ಮುಂದೆ ಹೊಸ ಲೋಕದಲ್ಲಿ ಸಿಗೋ ಜೀವನ ಅದಕ್ಕಿಂತ ಚೆನ್ನಾಗಿರುತ್ತೆ. (2) ಕೆಲವ್ರು ನಮಗೆ ನೋವು ಮಾಡಿರಬಹುದು. ಆದ್ರೆ ನಾವು ಅವ್ರನ್ನ ಕ್ಷಮಿಸಿದಾಗಲೇ ನಾವು ಬೇರೆ ವಿಷ್ಯಗಳ ಕಡೆಗೆ ಗಮನ ಕೊಡೋಕಾಗುತ್ತೆ. (3) ನಾವು ತುಂಬ ತಪ್ಪು ಮಾಡಿಬಿಟ್ಟಿದ್ದೀವಿ ಅನ್ನೋ ಕೊರಗು ನಮಗಿದ್ರೆ ಯೆಹೋವನ ಸೇವೆಯನ್ನ ಸಂತೋಷದಿಂದ ನಮಗೆ ಮಾಡೋಕಾಗಲ್ಲ. ಹಾಗಾಗಿ ಪೌಲನ ತರ ನಾವು ಸಹ ಯೆಹೋವ ನಮ್ಮನ್ನ ಕ್ಷಮಿಸಿದ್ದಾನೆ ಅಂತ ನಂಬಬೇಕು.

19. ಹೊಸ ಲೋಕದಲ್ಲಿ ನಾವು ಹಿಂದಿನ ಜೀವನದ ಬಗ್ಗೆ ನೆನಸ್ತಾ ಕೊರಗೋದಿಲ್ಲ ಅಂತ ಹೇಗೆ ಹೇಳಬಹುದು?

19 ಹೊಸ ಲೋಕದಲ್ಲಿ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ನಮಗಿದೆ. ಆಗ ನಾವು ಹಿಂದೆ ನಡೆದ ವಿಷ್ಯಗಳನ್ನ ನೆನಸಿಕೊಂಡು ಕೊರಗ್ತಾ ಕೂತಿರಲ್ಲ. ಆ ಸಮ್ಯದ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ: “ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು.” (ಯೆಶಾ. 65:17) ವರ್ಷಾನುಗಟ್ಟಲೆ ಯೆಹೋವನ ಸೇವೆ ಮಾಡ್ಕೊಂಡು ಬಂದಿರೋ ಸಹೋದರ ಸಹೋದರಿಯರಿಗೆ ಈಗ ವಯಸ್ಸಾಗಿದೆ. ಆದ್ರೆ ಹೊಸಲೋಕದಲ್ಲಿ ಅವ್ರು ಪುನಃ ಯೌವನಸ್ಥರಾಗ್ತಾರೆ. (ಯೋಬ 33:25) ಹಾಗಾಗಿ, ಹಿಂದಿನ ಜೀವನದ ಬಗ್ಗೆ ಯೋಚಿಸ್ತಾ ಅದ್ರಲ್ಲೇ ಮುಳುಗದಿರೋಣ. ಬದಲಿಗೆ, ಹೊಸಲೋಕದ ಕಡೆಗೆ ಗಮನಕೊಡೋಣ. ಅಲ್ಲಿ ಜೀವಿಸಬೇಕಂದ್ರೆ ಈಗೇನು ಮಾಡ್ಬೇಕೋ ಅದನ್ನ ಮಾಡ್ತಾ ಮುಂದುವರಿಯೋಣ.

ಗೀತೆ 129 ನಮ್ಮ ನಿರೀಕ್ಷೆಯನ್ನು ದೃಢವಾಗಿ ಹಿಡಿದುಕೊಳ್ಳುವುದು

^ ಪ್ಯಾರ. 5 ನಮ್ಮ ಜೀವನದಲ್ಲಿ ಹಿಂದೆ ನಡೆದ ವಿಷ್ಯಗಳ ಬಗ್ಗೆ ನೆನಪಿಸಿಕೊಳ್ಳೋದು ಒಳ್ಳೇದೇ. ಆದ್ರೆ ಹಿಂದಿನದ್ದನ್ನೇ ಯಾವಾಗ್ಲೂ ನೆನಪಿಸಿಕೊಳ್ತಾ ಇದ್ರೆ ನಾವು ಯೆಹೋವನಿಗೋಸ್ಕರ ಈಗೇನು ಮಾಡಬಹುದೋ ಅದನ್ನ ಬಿಟ್ಟುಬಿಡುತ್ತೇವೆ ಮತ್ತು ಮುಂದೆ ಯೆಹೋವನು ನಮ್ಗೆ ಕೊಡಲಿರೋ ಆಶೀರ್ವಾದಗಳನ್ನು ಮರೆತುಬಿಡ್ತೇವೆ. ಹಿಂದಿನ ವಿಷ್ಯಗಳ ಬಗ್ಗೆ ಯೋಚನೆ ಮಾಡ್ತಾ ಅದ್ರಲ್ಲೇ ಮುಳುಗಿ ಹೋಗುವಂತೆ ಮಾಡುವ ಮೂರು ವಿಷ್ಯಗಳ ಬಗ್ಗೆ ನಾವು ಈ ಲೇಖನದಲ್ಲಿ ಚರ್ಚಿಸ್ತೇವೆ. ಈ ಮೂರು ವಿಷ್ಯಗಳಿಂದ ನಾವು ದೂರ ಇರೋಕೆ ನಮ್ಗೆ ಸಹಾಯ ಮಾಡೋ ಬೈಬಲ್‌ ತತ್ವಗಳನ್ನು ಮತ್ತು ಆಧುನಿಕ ದಿನದ ಉದಾಹರಣೆಗಳನ್ನು ನೋಡ್ತೇವೆ.

^ ಪ್ಯಾರ. 14 1954, ಫೆಬ್ರವರಿ 15 ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ ಪುಟ 123 ನೋಡಿ.

^ ಪ್ಯಾರ. 58 ಚಿತ್ರ ವಿವರಣೆ: ಒಂದುವೇಳೆ ನಾವು ನಮ್ಮ ಹಿಂದಿನ ಜೀವನ ತುಂಬಾ ಚೆನ್ನಾಗಿತ್ತು ಅಂತ ಯೋಚಿಸ್ತಾ ಇದ್ರೆ, ಮನಸ್ಸಲ್ಲಿ ಅಸಮಾಧಾನ ಇಟ್ಕೊಂಡಿದ್ರೆ ಅಥವಾ ನಾವು ತುಂಬ ತಪ್ಪು ಮಾಡಿಬಿಟ್ಟಿದ್ದೀವಿ ಅಂತ ಯಾವಾಗ್ಲೂ ಕೊರಗ್ತಾ ಇದ್ರೆ ಆ ಯೋಚನೆಗಳು ನಮ್ಮನ್ನ ಹಿಂದಕ್ಕೆ ಎಳಿತಾ ಇರುತ್ತೆ ಹೊರತು ಜೀವಕ್ಕೆ ನಡೆಸೋ ದಾರಿಯಲ್ಲಿ ಮುಂದೆ ಹೋಗೋಕೆ ಬಿಡಲ್ಲ.

^ ಪ್ಯಾರ. 65 ಚಿತ್ರ ವಿವರಣೆ: ನಾವು ಹಿಂದಿನ ವಿಷ್ಯಗಳ ಬಗ್ಗೆ ಯೋಚಿಸೋದನ್ನ ನಿಲ್ಸಿದ್ರೆ ನಮ್ಮ ಮನಸ್ಸು ಹಗುರ ಆಗುತ್ತೆ ಮತ್ತು ನಾವು ಖುಷಿಯಾಗಿ ಇರುತ್ತೇವೆ. ನಮ್ಮೊಳಗೆ ಒಂದು ಹೊಸ ಶಕ್ತಿ ಹುಟ್ಟುತ್ತೆ. ದೇವರ ಸೇವೆಯಲ್ಲಿ ಮುಂದೆ ಹೋಗೋಕಾಗುತ್ತೆ.