ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 49

ಸತ್ತವರಿಗೆ ಖಂಡಿತ ಮರುಜೀವ ಸಿಗುತ್ತೆ!

ಸತ್ತವರಿಗೆ ಖಂಡಿತ ಮರುಜೀವ ಸಿಗುತ್ತೆ!

“ಪುನರುತ್ಥಾನವಾಗುವುದೆಂದು . . . ದೇವರಲ್ಲಿ ನಾನೂ ನಿರೀಕ್ಷೆ ಇಟ್ಟಿದ್ದೇನೆ.”—ಅ. ಕಾ. 24:15.

ಗೀತೆ 111 ಆತ ಕರೆಯುವ

ಕಿರುನೋಟ *

1-2. ಕ್ರೈಸ್ತರು ಮುಖ್ಯವಾಗಿ ಯಾವುದನ್ನ ಆಸೆಯಿಂದ ಎದುರುನೋಡ್ತಾರೆ?

ಜನ್ರಿಗೆ ಜೀವನದಲ್ಲಿ ತುಂಬ ಆಸೆಗಳಿರುತ್ತವೆ. ಉದಾಹರಣೆಗೆ, ಕೆಲವ್ರು ಒಳ್ಳೇ ಜೀವನ ಸಂಗಾತಿ ಸಿಗಬೇಕಂತ ಆಸೆಪಡ್ತಾರೆ. ಇನ್ನು ಕೆಲವ್ರು ತಮ್ಮ ಮಕ್ಕಳು ಬೆಳೆದು, ದೊಡ್ಡವರಾದ ಮೇಲೆ ಒಳ್ಳೇ ವ್ಯಕ್ತಿಗಳಾಗಬೇಕು ಅಂತ ಇಷ್ಟಪಡ್ತಾರೆ. ಯಾರಿಗಾದ್ರೂ ಗಂಭೀರ ಕಾಯಿಲೆ ಇದ್ರೆ ಬೇಗ ವಾಸಿಯಾಗಬೇಕು ಅಂತ ಬಯಸ್ತಾರೆ. ಕ್ರೈಸ್ತರಾಗಿರೋ ನಮಗೂ ಈ ಎಲ್ಲಾ ಆಸೆಗಳಿವೆ. ಆದ್ರೆ ಎಲ್ಲಾ ಆಸೆಗಳಿಗಿಂತ ಮುಖ್ಯವಾಗಿ ಹೊಸಲೋಕದಲ್ಲಿ ಶಾಶ್ವತವಾಗಿ ಜೀವಿಸಬೇಕನ್ನೋ ಆಸೆ ನಮಗಿದೆ. ಅದಕ್ಕಾಗಿ ಎದುರುನೋಡ್ತಿದ್ದೇವೆ. ಜೊತೆಗೆ, ನಮ್ಮ ಆಪ್ತರಲ್ಲಿ ಯಾರಾದ್ರೂ ತೀರಿಹೋಗಿರೋದಾದ್ರೆ ಅವ್ರು ಮರುಜೀವ ಪಡೆದು ನಮ್ಮ ಜೊತೆ ಶಾಶ್ವತವಾಗಿ ಜೀವಿಸಬೇಕು ಅಂತನೂ ಇಷ್ಟಪಡ್ತೇವೆ.

2 ಅಪೊಸ್ತಲ ಪೌಲ ಹೀಗೆ ಹೇಳಿದನು: “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು . . . ದೇವರಲ್ಲಿ ನಾನೂ ನಿರೀಕ್ಷೆ ಇಟ್ಟಿದ್ದೇನೆ.” (ಅ. ಕಾ. 24:15) ಇದನ್ನ ಪೌಲ ಹೇಳಿದ್ದಕ್ಕಿಂತ ತುಂಬ ವರ್ಷಗಳ ಹಿಂದೆನೇ ಯೋಬ ಸಹ ಪುನರುತ್ಥಾನ ಆಗುತ್ತೆ ಅಂತ ಹೇಳಿದ್ದ. ಒಂದ್ವೇಳೆ ತಾನು ಸಾಯೋದಾದ್ರೆ ದೇವ್ರು ತನ್ನನ್ನು ನೆನಪಲ್ಲಿಟ್ಟುಕೊಂಡು ಮತ್ತೆ ಜೀವ ಕೊಡ್ತಾನೆ ಅನ್ನೋ ಭರವಸೆ ಯೋಬನಿಗಿತ್ತು.—ಯೋಬ 14:7-10, 12-15.

3. ಒಂದನೇ ಕೊರಿಂಥ 15 ನೇ ಅಧ್ಯಾಯದಲ್ಲಿರೋ ವಿಷಯಗಳನ್ನ ತಿಳ್ಕೊಳ್ಳೋದ್ರಿಂದ ನಿಮಗ್ಯಾವ ಪ್ರಯೋಜನ ಸಿಗುತ್ತೆ?

3 “ಸತ್ತವರ ಪುನರುತ್ಥಾನ” ಆಗುತ್ತೆ ಅನ್ನೋದು ಬೈಬಲಿನ ಮುಖ್ಯ ಬೋಧನೆಗಳಲ್ಲಿ ಒಂದಾಗಿದೆ. (ಇಬ್ರಿ. 6:1, 2) 1 ಕೊರಿಂಥ 15 ನೇ ಅಧ್ಯಾಯದಲ್ಲಿ ಪೌಲನು ಪುನರುತ್ಥಾನದ ಬಗ್ಗೆ ಅನೇಕ ವಿಷಯಗಳನ್ನ ತಿಳಿಸಿದ. ಈ ವಿಷಯಗಳ ಬಗ್ಗೆ ಓದಿದಾಗ ಒಂದನೇ ಶತಮಾನದಲ್ಲಿದ್ದ ಕ್ರೈಸ್ತರ ನಂಬಿಕೆ ಖಂಡಿತ ಬಲವಾಗಿರುತ್ತೆ. ನೀವು ಸಹ ಪುನರುತ್ಥಾನ ಆಗುತ್ತೆ ಅಂತ ತುಂಬ ವರ್ಷಗಳಿಂದ ನಂಬ್ತಾ ಇರಬಹುದು. ಆದ್ರೂ 1 ಕೊರಿಂಥ 15 ನೇ ಅಧ್ಯಾಯದಲ್ಲಿ ಬರೆದಿರೋ ವಿಷಯಗಳನ್ನ ತಿಳ್ಕೊಳ್ಳೋದ್ರಿಂದ ನಿಮ್ಮ ನಂಬಿಕೆ ಇನ್ನೂ ಹೆಚ್ಚಾಗುತ್ತೆ.

4. ನಮ್ಮ ಆಪ್ತರ ಪುನರುತ್ಥಾನ ಆಗುತ್ತೆ ಅಂತ ನಾವ್ಯಾಕೆ ದೃಢಭರವಸೆಯಿಂದ ಹೇಳಬಹುದು?

4 ಯೇಸು ತೀರಿಹೋದ್ರೂ ಯೆಹೋವ ದೇವ್ರು ಪುನಃ ಅವನಿಗೆ ಜೀವ ಕೊಟ್ಟನು. ಹಾಗಾಗಿ ತೀರಿಹೋಗಿರೋ ನಮ್ಮ ಆಪ್ತರಿಗೆ ಕೂಡ ಯೆಹೋವ ಪುನಃ ಜೀವ ಕೊಡ್ತಾನೆ ಅಂತ ನಾವು ನಂಬಬಹುದು. ಕೊರಿಂಥದವರಿಗೆ ಪೌಲ ಮೊದಲ ಸಲ “ಸುವಾರ್ತೆ” ಸಾರಿದಾಗ ಯೇಸುವಿನ ಪುನರುತ್ಥಾನದ ಬಗ್ಗೆನೂ ಹೇಳಿದ್ದ. (1 ಕೊರಿಂ. 15:1, 2) ಒಬ್ಬ ಕ್ರೈಸ್ತನು ಯೇಸುವಿಗೆ ಪುನರುತ್ಥಾನ ಆಗಿದೆ ಅನ್ನೋದನ್ನ ನಂಬದೆ ಹೋದ್ರೆ ಅವನ ಕ್ರೈಸ್ತ ನಂಬಿಕೆ ವ್ಯರ್ಥ ಅಂತನೂ ಪೌಲ ಹೇಳಿದ. (1 ಕೊರಿಂ. 15:17) ಯೇಸುವಿನ ಪುನರುತ್ಥಾನವೇ ಬೇರೆಲ್ಲಾ ಜನರಿಗೂ ಪುನರುತ್ಥಾನ ಆಗುತ್ತೆ ಅನ್ನೋದಕ್ಕೆ ಆಧಾರವಾಗಿದೆ.

5-6. ಒಂದನೇ ಕೊರಿಂಥ 15:3, 4 ರಲ್ಲಿ ತಿಳಿಸಲಾಗಿರೋ ಮಾತುಗಳಿಂದ ನಾವು ಯಾವ ವಿಷ್ಯವನ್ನು ನಂಬಬಹುದು?

5 ಒಂದನೇ ಕೊರಿಂಥ 15 ನೇ ಅಧ್ಯಾಯದ ಆರಂಭದಲ್ಲಿ ಪೌಲನು ಮೂರು ಮುಖ್ಯ ವಿಷ್ಯಗಳನ್ನ ತಿಳಿಸಿದ. (1) ‘ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತನು.’ (2) ಅವನನ್ನು ‘ಹೂಣಿಡಲಾಯಿತು.’ (3)  “ಶಾಸ್ತ್ರಗ್ರಂಥಕ್ಕನುಸಾರ ಮೂರನೆಯ ದಿನದಲ್ಲಿ” ಅವನು “ಎಬ್ಬಿಸಲ್ಪಟ್ಟನು.”—1 ಕೊರಿಂಥ 15:3, 4 ಓದಿ.

6 ಯೇಸು ಸತ್ತಿದ್ದು, ಹೂಣಿಡಲ್ಪಟ್ಟಿದ್ದು ಮತ್ತು ಪುನರುತ್ಥಾನ ಆಗಿದ್ದು ನಮಗೆ ಯಾವ ವಿಷ್ಯದಲ್ಲಿ ಭರವಸೆ ಇಡೋಕೆ ಸಹಾಯ ಮಾಡುತ್ತೆ? ಅನೇಕ ವರ್ಷಗಳ ಮುಂಚೆನೇ ಪ್ರವಾದಿ ಯೆಶಾಯನು ಮೆಸ್ಸೀಯ ‘ಜೀವಲೋಕದಿಂದ ಕೀಳಲ್ಪಡುತ್ತಾನೆ’ ಮತ್ತು ‘ದುಷ್ಟರ ಮಧ್ಯೆ ಅವನನ್ನು ಹೂಣಿಡಲಾಗುತ್ತೆ’ ಅಂತ ತಿಳಿಸಿದ್ದ. ಅಷ್ಟೇ ಅಲ್ಲ, ಮೆಸ್ಸೀಯನು “ಬಹುಜನ ದ್ರೋಹಿಗಳ ಪಾಪವನ್ನು ಹೊರುತ್ತಾನೆ” ಅಂತನೂ ಯೆಶಾಯ ತಿಳಿಸಿದ. ಯೇಸು ತನ್ನ ಪ್ರಾಣವನ್ನೇ ವಿಮೋಚನಾ ಮೌಲ್ಯವಾಗಿ ಕೊಡೋ ಮೂಲಕ ನಮ್ಮೆಲ್ಲರ ಪಾಪವನ್ನು ಹೊತ್ತನು. (ಯೆಶಾ. 53:8, 9, 12; ಮತ್ತಾ. 20:28; ರೋಮ. 5:8) ಹಾಗಾಗಿ ಯೇಸು ಸತ್ತಿದ್ದು, ಹೂಣಿಡಲ್ಪಟ್ಟಿದ್ದು ಮತ್ತು ಪುನರುತ್ಥಾನವಾಗಿದ್ದು, ಪಾಪ ಮತ್ತು ಮರಣದಿಂದ ನಮಗೆ ಬಿಡುಗಡೆ ಸಿಗುತ್ತೆ ಮತ್ತು ತೀರಿಹೋಗಿರೋ ನಮ್ಮ ಆಪ್ತರನ್ನು ನಾವು ಪುನಃ ನೋಡಬಹುದು ಅನ್ನೋ ವಿಷ್ಯ ನಂಬಲು ಬಲವಾದ ಆಧಾರ ಕೊಡುತ್ತೆ.

ಕಣ್ಣಾರೆ ಕಂಡವರು ಕೊಟ್ಟ ಸಾಕ್ಷಿ

7-8. ಯೇಸುಗೆ ನಿಜವಾಗಿಯೂ ಪುನರುತ್ಥಾನ ಆಗಿತ್ತು ಅನ್ನೋದಕ್ಕೆ ಯಾವ ಆಧಾರಗಳಿವೆ?

7 ಮುಂದೆ ಪುನರುತ್ಥಾನ ಆಗುತ್ತೆ ಅನ್ನೋದನ್ನ ನಾವು ನಂಬಬೇಕಂದ್ರೆ ಮೊದಲಿಗೆ ಯೇಸುವಿಗೆ ಪುನರುತ್ಥಾನವಾಯ್ತು ಅಂತ ನಂಬಬೇಕು. ಯೆಹೋವನು ನಿಜವಾಗ್ಲೂ ಯೇಸುನ ಪುನರುತ್ಥಾನ ಮಾಡಿದನು ಅನ್ನೋದಕ್ಕೆ ಯಾವ ಆಧಾರಗಳಿವೆ ಅಂತ ಈಗ ನೋಡೋಣ.

8 ಯೇಸುಗೆ ಪುನರುತ್ಥಾನ ಆದ ಮೇಲೆ ಅವನನ್ನು ತುಂಬ ಜನ ನೋಡಿದ್ರು ಮತ್ತು ಅವ್ರು ಅದನ್ನು ಬೇರೆಯವ್ರಿಗೆ ಹೇಳಿದ್ರು. (1 ಕೊರಿಂ. 15:5-7) ಪೌಲ ಹೇಳಿದ ಪಟ್ಟಿಯಲ್ಲಿ ಮೊದಲನೇ ಸಾಕ್ಷಿ ಯಾರಂದ್ರೆ ಅಪೊಸ್ತಲ ಪೇತ್ರ (ಕೇಫ). ಯೇಸುಗೆ ಪುನರುತ್ಥಾನ ಆದ ಮೇಲೆ ಅವನನ್ನು ಪೇತ್ರ ನೋಡಿದ ಅಂತ ಅನೇಕ ಶಿಷ್ಯರೂ ಹೇಳಿದ್ರು. (ಲೂಕ 24:33, 34) ನಂತರ ಪೌಲ, “ಹನ್ನೆರಡು ಮಂದಿ” ಅಂದ್ರೆ ಅಪೊಸ್ತಲರು ಸಹ ಪುನರುತ್ಥಾನವಾಗಿರೋ ಯೇಸುವನ್ನು ನೋಡಿದ್ರು ಅಂತ ಹೇಳಿದ. ಆಮೇಲೆ ಯೇಸು “ಒಂದು ಸಮಯದಲ್ಲಿ ಐನೂರಕ್ಕಿಂತಲೂ ಹೆಚ್ಚು ಮಂದಿ ಸಹೋದರರಿಗೆ ಕಾಣಿಸಿಕೊಂಡನು.” ಇದು ಬಹುಶಃ ಮತ್ತಾಯ 28:16-20 ರಲ್ಲಿ ತಿಳಿಸಲಾದ ಸಂದರ್ಭ ಆಗಿರಬಹುದು. ಆಗ ಅವನು ಗಲಿಲಾಯದಲ್ಲಿ ಅವರಿಗೆ ಕಾಣಿಸಿಕೊಂಡಿದ್ದನು. ಯೇಸು “ಯಾಕೋಬನಿಗೂ . . . ಕಾಣಿಸಿಕೊಂಡನು.” ಈ ಯಾಕೋಬ ಬಹುಶಃ ಯೇಸುವಿನ ಮಲತಮ್ಮ ಆಗಿರಬಹುದು. ಇವನು ಯೇಸುವೇ ಮೆಸ್ಸೀಯ ಅಂತ ಶುರುವಿನಲ್ಲಿ ನಂಬಿಕೆ ಇಟ್ಟಿರಲಿಲ್ಲ. (ಯೋಹಾ. 7:5) ಆದ್ರೆ ಪುನರುತ್ಥಾನವಾಗಿದ್ದ ಯೇಸುನ ನೋಡಿದ ನಂತ್ರ ಯಾಕೋಬ ನಂಬಿಕೆ ಇಟ್ಟನು. ಪೌಲನು ಕ್ರಿಸ್ತ ಶಕ 55 ರಲ್ಲಿ ಈ ಪತ್ರವನ್ನು ಬರೆದಾಗ ಪುನರುತ್ಥಾನಗೊಂಡ ಯೇಸುವನ್ನು ನೋಡಿದ ಅನೇಕ ಜನ್ರು ಇನ್ನೂ ಬದುಕಿದ್ರು. ಹಾಗಾಗಿ ಈ ವಿಷ್ಯದಲ್ಲಿ ಯಾರಿಗಾದ್ರೂ ಸಂಶಯವಿದ್ರೆ ಅವ್ರು ಈ ಸಾಕ್ಷಿಗಳ ಹತ್ರ ಹೋಗಿ ವಿಚಾರಿಸಬಹುದಿತ್ತು.

9. ಯೇಸುಗೆ ಪುನರುತ್ಥಾನ ಆಯ್ತು ಅನ್ನೋದಕ್ಕೆ ಅಪೊಸ್ತಲರ ಕಾರ್ಯಗಳು 9:3-5 ರ ಪ್ರಕಾರ ಸ್ವತಃ ಪೌಲನೇ ಹೇಗೆ ಸಾಕ್ಷಿಯಾದ?

9 ಸಮಯಾನಂತ್ರ ಯೇಸು ಪೌಲನಿಗೂ ಕಾಣಿಸಿಕೊಂಡನು. (1 ಕೊರಿಂ. 15:8) ಪೌಲ (ಸೌಲ) ದಮಸ್ಕಕ್ಕೆ ಹೋಗ್ತಿದ್ದಾಗ ಪುನರುತ್ಥಾನ ಆಗಿದ್ದ ಯೇಸುವಿನ ಸ್ವರವನ್ನು ಕೇಳಿಸಿಕೊಂಡ ಮತ್ತು ಸ್ವರ್ಗದಲ್ಲಿರೋ ಯೇಸುವನ್ನು ದರ್ಶನದಲ್ಲಿ ನೋಡಿದ. (ಅಪೊಸ್ತಲರ ಕಾರ್ಯಗಳು 9:3-5 ಓದಿ.) ಯೇಸುಗೆ ಪುನರುತ್ಥಾನ ಆಗಿರೋದು ಸುಳ್ಳಲ್ಲ ಅನ್ನೋದಕ್ಕೆ ಪೌಲನ ಈ ಅನುಭವ ಇನ್ನೂ ಹೆಚ್ಚಿನ ಆಧಾರ ಕೊಡುತ್ತೆ.—ಅ. ಕಾ. 26:12-15.

10. ಯೇಸುಗೆ ನಿಜವಾಗಿಯೂ ಪುನರುತ್ಥಾನವಾಗಿದೆ ಅನ್ನೋದು ಪೌಲನಿಗೆ ಮನವರಿಕೆ ಆದಾಗ ಅವನೇನು ಮಾಡಿದ?

10 ಒಂದು ಸಮಯದಲ್ಲಿ ಕ್ರೈಸ್ತರನ್ನು ಹಿಂಸಿಸುತ್ತಿದ್ದ ಪೌಲನೇ ಯೇಸುಗೆ ಪುನರುತ್ಥಾನ ಆಗಿದೆ ಅಂತ ಸಾಕ್ಷಿ ಕೊಟ್ಟಾಗ ಕೆಲವ್ರು ಅದಕ್ಕೆ ಖಂಡಿತ ಗಮನ ಕೊಟ್ಟಿರಬಹುದು. ಯೇಸುಗೆ ನಿಜವಾಗಿಯೂ ಪುನರುತ್ಥಾನವಾಗಿದೆ ಅಂತ ಪೌಲನಿಗೆ ಮನವರಿಕೆ ಆದಾಗ ಅವನು ಈ ಸತ್ಯವನ್ನು ಬೇರೆಯವ್ರಿಗೂ ಮನದಟ್ಟು ಮಾಡಕ್ಕೋಸ್ಕರ ತುಂಬ ಶ್ರಮಪಟ್ಟ. ಪೌಲ ಈ ಸತ್ಯವನ್ನು ಸಾರ್ತಿದ್ದಾಗ ಜನ ಅವನನ್ನು ಹೊಡೆದ್ರು, ಜೈಲಿಗೆ ಹಾಕಿದ್ರು. ಅಷ್ಟೇ ಅಲ್ಲ, ಇದನ್ನು ಸಾರಲಿಕ್ಕಾಗಿ ಪೌಲ ಹಡಗಿನಲ್ಲಿ ಪ್ರಯಾಣಿಸ್ತಿದ್ದಾಗ ಮೂರು ಸಲ ಹಡಗುಗಳು ಒಡೆದು ಹೋದವು. (1 ಕೊರಿಂ. 15:9-11; 2 ಕೊರಿಂ. 11:23-27) ಆದ್ರೂ ಆ ಸತ್ಯನ ತಿಳಿಸೋಕೆ ಪೌಲ ತನ್ನ ಪ್ರಾಣನೇ ಕೊಡುವುದಕ್ಕೂ ಸಿದ್ಧನಿದ್ದ. ಆರಂಭದ ಕ್ರೈಸ್ತರು ಕೊಟ್ಟ ಈ ಸಾಕ್ಷಿಯಿಂದ ಯೇಸುಗೆ ನಿಜವಾಗ್ಲೂ ಪುನರುತ್ಥಾನ ಆಗಿತ್ತು ಅಂತ ನಿಮಗೆ ನಂಬಿಕೆ ಬರಲ್ವಾ? ಜೊತೆಗೆ ಮುಂದೆ ಪುನರುತ್ಥಾನ ಆಗುತ್ತೆ ಅನ್ನೋ ನಿಮ್ಮ ನಂಬಿಕೆ ಇನ್ನೂ ಹೆಚ್ಚಾಗಲ್ವಾ?

ತಪ್ಪಭಿಪ್ರಾಯಗಳನ್ನು ತಿದ್ದಿದನು

11. ಕೊರಿಂಥದ ಕೆಲವು ಕ್ರೈಸ್ತರಿಗೆ ಪುನರುತ್ಥಾನದ ಬಗ್ಗೆ ತಪ್ಪಭಿಪ್ರಾಯ ಇರಲು ಕಾರಣ ಏನಿದ್ದಿರಬಹುದು?

11 ಕೊರಿಂಥ ಗ್ರೀಕ್‌ ಜನ್ರ ಪಟ್ಟಣವಾಗಿತ್ತು. ಅಲ್ಲಿನ ಕೆಲವು ಕ್ರೈಸ್ತರಿಗೆ ಪುನರುತ್ಥಾನದ ಬಗ್ಗೆ ತಪ್ಪಭಿಪ್ರಾಯ ಇತ್ತು. ಅವ್ರಲ್ಲಿ ಕೆಲವ್ರು “ಸತ್ತವರಿಗೆ ಪುನರುತ್ಥಾನವೇ ಇಲ್ಲ” ಅಂತ ಹೇಳ್ತಿದ್ರು. ಯಾಕೆ? (1 ಕೊರಿಂ. 15:12) ಯಾಕಂದ್ರೆ ಗ್ರೀಕ್‌ ತತ್ವಜ್ಞಾನಿಗಳ ಪ್ರಭಾವ ಇವರ ಮೇಲೆ ಬೀರಿರಬಹುದು. ಒಮ್ಮೆ ಪೌಲ ಇನ್ನೊಂದು ಗ್ರೀಕ್‌ ಪಟ್ಟಣವಾದ ಅಥೆನ್ಸ್‌ನಲ್ಲಿ ಯೇಸುವಿನ ಪುನರುತ್ಥಾನದ ಬಗ್ಗೆ ಸಾರ್ತಿದ್ದಾಗ ತತ್ವಜ್ಞಾನಿಗಳು ಅವನನ್ನು ಗೇಲಿಮಾಡಿದ್ದರು. ಹಾಗಾಗಿ ಕೊರಿಂಥದವ್ರಿಗೆ ತತ್ವಜ್ಞಾನಿಗಳು ಹೇಳೋದೇ ಸರಿ ಅಂತ ಅನ್ಸಿರಬಹುದು. (ಅ. ಕಾ. 17:18, 31, 32) ಇನ್ನು ಕೆಲವು ಕ್ರೈಸ್ತರಂತೂ, ಪುನರುತ್ಥಾನದ ಅರ್ಥನೇ ಬೇರೆ ಅಂತ ನೆನಸ್ತಿದ್ರು. ಅವ್ರ ಪ್ರಕಾರ, ‘ಜನ್ರು ಪಾಪಿಗಳಾಗಿರೋದ್ರಿಂದ ಸತ್ತ ಸ್ಥಿತಿಯಲ್ಲಿ ಇರ್ತಾರೆ. ಆದ್ರೆ ಕ್ರೈಸ್ತರಾದಾಗ ಅವ್ರ ಪಾಪಕ್ಕೆ ಕ್ಷಮಾಪಣೆ ಸಿಗೋದ್ರಿಂದ ಅವ್ರು ಜೀವಂತವಾಗುತ್ತಾರೆ. ಇದೇ ಪುನರುತ್ಥಾನದ ಅರ್ಥ’ ಅಂತ ಈ ಕ್ರೈಸ್ತರು ನೆನಸ್ತಿದ್ರು. ಹೀಗೆ ಏನೇ ಕಾರಣ ಕೊಟ್ರೂ ಅವ್ರ ಕ್ರೈಸ್ತ ನಂಬಿಕೆಯೇ ವ್ಯರ್ಥ ಆಗಿತ್ತು. ಯಾಕಂದ್ರೆ ಅವ್ರು ಪುನರುತ್ಥಾನವನ್ನು ನಂಬದಿರೋದು ಯೇಸುಗೆ ಪುನರುತ್ಥಾನ ಆಗಿಲ್ಲ ಅಂತ ಹೇಳಿದಂತಿತ್ತು. ದೇವ್ರು ಯೇಸುವನ್ನು ಪುನರುತ್ಥಾನ ಮಾಡದೇ ಇದ್ದಿದ್ದರೆ ವಿಮೋಚನಾ ಮೌಲ್ಯ ಕೊಟ್ಟಿಲ್ಲ ಅಂತ ಆಗ್ತಿತ್ತು ಮತ್ತು ಎಲ್ಲಾ ಮನುಷ್ಯರು ಪಾಪಿಗಳಾಗೇ ಉಳಿಯುತ್ತಿದ್ದರು. ಹಾಗಾಗಿ ಪುನರುತ್ಥಾನವನ್ನು ಯಾರು ನಂಬಲಿಲ್ಲವೋ ಅವ್ರಿಗೆ ನಿರೀಕ್ಷೆನೇ ಇಲ್ಲದಂತಾಯಿತು.—1 ಕೊರಿಂ. 15:13-19; ಇಬ್ರಿ. 9:12, 14.

12. ಯೇಸುವಿನ ಪುನರುತ್ಥಾನವು ಅದಕ್ಕೂ ಮುಂಚೆ ನಡೆದ ಪುನರುತ್ಥಾನಗಳಿಗಿಂತ ಭಿನ್ನವಾಗಿತ್ತು ಅನ್ನೋದನ್ನು ಅರ್ಥ ಮಾಡಿಕೊಳ್ಳೋಕೆ 1 ಪೇತ್ರ 3:18, 22 ಹೇಗೆ ಸಹಾಯ ಮಾಡುತ್ತೆ?

12 “ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ” ಅಂತ ಪೌಲನಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೇ “ಮರಣದಲ್ಲಿ ನಿದ್ರೆಹೋದವರಲ್ಲಿ [ಯೇಸು] ಪ್ರಥಮಫಲವಾಗಿದ್ದಾನೆ” ಅಂತ ಅವನು ಹೇಳಿದ. ಯಾವ ಅರ್ಥದಲ್ಲಿ ಯೇಸು ಪ್ರಥಮಫಲವಾಗಿದ್ದ? ಯೇಸುವಿನ ಪುನರುತ್ಥಾನ ಇದಕ್ಕೂ ಮುಂಚೆ ಭೂಮಿಯಲ್ಲಾದ ಬೇರೆಲ್ಲಾ ಪುನರುತ್ಥಾನಕ್ಕಿಂತ ಉನ್ನತವಾಗಿತ್ತು. ಯಾಕಂದ್ರೆ ಯೇಸುಗಿಂತ ಮುಂಚೆ ಪುನರುತ್ಥಾನ ಆದವ್ರು ಮತ್ತೆ ತೀರಿಹೋದ್ರು. ಆದ್ರೆ ಯೇಸುಗೆ ಪುನರುತ್ಥಾನ ಆದಾಗ ಕಣ್ಣಿಗೆ ಕಾಣದಿರೋ ದೇಹ ಸಿಗ್ತು. ಅಷ್ಟೇ ಅಲ್ಲ, ಅವನು ಸ್ವರ್ಗಕ್ಕೆ ಹೋದನು. ಈ ತರ ಆತ್ಮಜೀವಿಯಾಗಿ ಪುನರುತ್ಥಾನ ಆದವ್ರಲ್ಲಿ ಮತ್ತು ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋದ ಮಾನವರಲ್ಲಿ ಯೇಸುನೇ ಮೊದಲ ವ್ಯಕ್ತಿಯಾಗಿದ್ದಾನೆ. ಹಾಗಾಗಿ ಯೇಸು “ಪ್ರಥಮಫಲವಾಗಿದ್ದಾನೆ” ಅಂತ ಪೌಲ ಹೇಳಿದ್ದು ಸರಿಯಾಗೇ ಇತ್ತು.—1 ಕೊರಿಂ. 15:20; ಅ. ಕಾ. 26:23; 1 ಪೇತ್ರ 3:18, 22 ಓದಿ.

ಅವರು “ಜೀವಿತರಾಗುವರು”

13. ಆದಾಮ ಮತ್ತು ಯೇಸು ಮಧ್ಯೆ ಇರೋ ಯಾವ ವ್ಯತ್ಯಾಸವನ್ನು ಪೌಲ ತಿಳಿಸಿದ್ದಾನೆ?

13 ಒಬ್ಬ ಮನುಷ್ಯನ ಸಾವಿನಿಂದ, ಕೋಟ್ಯಂತರ ಜನ್ರಿಗೆ ಜೀವ ಸಿಗುತ್ತೆ ಅಂತ ಪೌಲ ಹೇಳಿದನು. ಅದು ಹೇಗೆ ಸಾಧ್ಯ ಅನ್ನೋದಕ್ಕೂ ತಕ್ಕ ಉತ್ತರ ಕೊಟ್ಟನು. ಆದಾಮನು ಪಾಪ ಮಾಡಿದ್ರಿಂದ ಮನುಷ್ಯರ ಮೇಲೆ ಏನು ಪರಿಣಾಮ ಆಯ್ತು ಮತ್ತು ಕ್ರಿಸ್ತನ ಯಜ್ಞದಿಂದ ನಮಗೇನು ಸಿಗುತ್ತೆ ಅನ್ನೋದನ್ನು ಪೌಲ ವಿವರಿಸಿದ್ದಾನೆ. ಅವನು ಆದಾಮನ ಬಗ್ಗೆ ತಿಳಿಸುತ್ತಾ ‘ಒಬ್ಬ ಮನುಷ್ಯನ ಮೂಲಕ ಮರಣವು ಬಂತು’ ಅಂತ ಬರೆದ. ಆದಾಮ ಪಾಪ ಮಾಡಿದಾಗ ಅವನೂ ಸತ್ತು ಹೋದನು ಮತ್ತು ಅವನ ಸಂತತಿಯವರೆಲ್ಲಾ ಸಾಯುತ್ತಿದ್ದಾರೆ. ಅವನು ಮಾಡಿದ ತಪ್ಪಿನ ಕೆಟ್ಟ ಪರಿಣಾಮಗಳನ್ನು ನಾವು ಇವತ್ತಿಗೂ ಅನುಭವಿಸ್ತಾ ಇದ್ದೇವೆ. ಆದ್ರೆ ದೇವ್ರು ತನ್ನ ಮಗನನ್ನು ಪುನರುತ್ಥಾನ ಮಾಡಿದ್ರಿಂದ ಮುಂದೆ ನಮಗೆ ಒಂದು ಒಳ್ಳೇ ಜೀವನ ಸಿಗುತ್ತೆ. ಯೇಸು ಬಗ್ಗೆ ತಿಳಿಸುತ್ತಾ ಪೌಲ “ಪುನರುತ್ಥಾನವೂ ಒಬ್ಬ ಮನುಷ್ಯನಿಂದಲೇ ಆಗುತ್ತದೆ” ಅಂತ ಬರೆದ. ಹೇಗಂದ್ರೆ “ಆದಾಮನಿಂದಾಗಿ ಎಲ್ಲರೂ ಸಾಯುತ್ತಿರುವಂತೆಯೇ ಕ್ರಿಸ್ತನಿಂದಾಗಿ ಎಲ್ಲರೂ ಜೀವಿತರಾಗುವರು” ಅಂತ ಅವನು ಹೇಳಿದ.—1 ಕೊರಿಂ. 15:21, 22.

14. ಆದಾಮನಿಗೆ ಪುನರುತ್ಥಾನ ಆಗುತ್ತಾ? ವಿವರಿಸಿ.

14 ‘ಆದಾಮನಿಂದಾಗಿ ಎಲ್ಲರೂ ಸಾಯುತ್ತಿದ್ದಾರೆ’ ಅಂತ ಪೌಲ ಹೇಳಿದ. ಈ ಮಾತಿನ ಅರ್ಥ ಏನು? ಆದಾಮನಿಂದಲೇ ಎಲ್ಲಾ ಜನರು ಪಾಪಿಗಳಾದ್ರು ಮತ್ತು ಅಪರಿಪೂರ್ಣರಾದ್ರು. ಇದ್ರಿಂದ ಎಲ್ಲರೂ ಸಾಯ್ತಿದ್ದಾರೆ. (ರೋಮ. 5:12) ಆದಾಮನು ಪರಿಪೂರ್ಣ ಮನುಷ್ಯನಾಗಿದ್ದ. ಅವನು ಬೇಕುಬೇಕಂತನೇ ದೇವರ ಆಜ್ಞೆಯನ್ನು ಮುರಿದನು. ಹಾಗಾಗಿ ಮೆಸ್ಸೀಯ ಕೊಟ್ಟಿರೋ ವಿಮೋಚನಾ ಮೌಲ್ಯದಿಂದ ಅವನಿಗೆ ಯಾವುದೇ ಪ್ರಯೋಜನ ಸಿಗಲ್ಲ. ಅವನನ್ನು ಪುನಃ ಜೀವಂತವಾಗಿ ಎಬ್ಬಿಸಲ್ಲ. ಈಗಲೂ ಯಾರು ದೇವರ ಆಜ್ಞೆಗಳನ್ನು ಬೇಕುಬೇಕಂತನೇ ಮುರಿಯುತ್ತಾರೋ ಅವ್ರಿಗೂ ಆದಾಮನಿಗಾದ ಗತಿಯೇ ಆಗುತ್ತೆ. ಮುಂದೆ “ಮನುಷ್ಯಕುಮಾರನು” ನ್ಯಾಯವಿಚಾರಣೆ ಮಾಡ್ವಾಗ ಇಂಥ ಜನರನ್ನು ‘ಆಡುಗಳು’ ಅಂತ ತೀರ್ಪು ಮಾಡುತ್ತಾನೆ ಮತ್ತು “ಅವರು ನಿತ್ಯಛೇದನಕ್ಕೆ ಹೋಗುತ್ತಾರೆ” ಅಂದ್ರೆ ಆದಾಮನ ತರ ಇವ್ರು ಸಹ ಪುನಃ ಜೀವಂತವಾಗಿ ಎದ್ದು ಬರಲ್ಲ.—ಮತ್ತಾ. 25:31-33, 46; ಇಬ್ರಿ. 5:9.

ಪುನರುತ್ಥಾನ ಆಗಿ ಸ್ವರ್ಗಕ್ಕೆ ಹೋದವ್ರಲ್ಲಿ ಯೇಸು ಮೊದಲನೇ ವ್ಯಕ್ತಿ (ಪ್ಯಾರ 15-16 ನೋಡಿ) *

15. “ಎಲ್ಲರೂ ಜೀವಿತರಾಗುವರು” ಅಂತ ಪೌಲ ಹೇಳಿದ್ರಲ್ಲಿ ಯಾರು ಕೂಡ ಸೇರಿದ್ದಾರೆ?

15 “ಕ್ರಿಸ್ತನಿಂದಾಗಿ ಎಲ್ಲರೂ ಜೀವಿತರಾಗುವರು” ಅಂತ ಪೌಲ ಹೇಳಿದ್ದನ್ನು ಗಮನಿಸಿ. (1 ಕೊರಿಂ. 15:22) ಪೌಲನು ಈ ಪತ್ರವನ್ನು ಕೊರಿಂಥದಲ್ಲಿದ್ದ ಅಭಿಷಿಕ್ತ ಕ್ರೈಸ್ತರಿಗೆ ಬರೆದ. ಅವ್ರು ಸತ್ತ ನಂತ್ರ ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗಲಿದ್ದರು. ಆ ಕ್ರೈಸ್ತರು, “ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿ ಪವಿತ್ರೀಕರಿಸಲ್ಪಟ್ಟವರೂ ಪವಿತ್ರ ಜನರಾಗುವುದಕ್ಕೆ ಕರೆಯಲ್ಪಟ್ಟವರೂ” ಆಗಿದ್ದರು. ಅಷ್ಟೇ ಅಲ್ಲ, ಪೌಲನು “ಕ್ರಿಸ್ತನೊಂದಿಗೆ ಐಕ್ಯದಲ್ಲಿ ಮರಣದಲ್ಲಿ ನಿದ್ರೆಹೋದವರ” ಬಗ್ಗೆನೂ ತಿಳಿಸಿದನು. (1 ಕೊರಿಂ. 1:2; 15:18; 2 ಕೊರಿಂ. 5:17) ‘ಕ್ರಿಸ್ತನ ಮರಣಕ್ಕೆ ಸದೃಶವಾದ ಮರಣದಲ್ಲಿ ಅವನೊಂದಿಗೆ ಐಕ್ಯಗೊಳಿಸಲ್ಪಟ್ಟಿರುವವರು ಅವನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನದಲ್ಲಿ ಅವನೊಂದಿಗೆ ಐಕ್ಯಗೊಳಿಸಲ್ಪಡುತ್ತಾರೆ’ ಅಂತ ಪೌಲನು ದೇವರ ಪ್ರೇರಣೆಯಿಂದ ಇನ್ನೊಂದು ಪತ್ರದಲ್ಲಿ ಬರೆದ. (ರೋಮ. 6:3-5) ಯೇಸು ಆತ್ಮಜೀವಿಯಾಗಿ ಪುನರುತ್ಥಾನವಾದನು ಮತ್ತು ಸ್ವರ್ಗಕ್ಕೆ ಹೋದನು. ಅದೇರೀತಿ ‘ಕ್ರಿಸ್ತನೊಂದಿಗೆ ಐಕ್ಯರಾಗಿರುವವರು’ ಅಂದ್ರೆ ಅಭಿಷಿಕ್ತ ಕ್ರೈಸ್ತರೂ ಆತ್ಮಜೀವಿಗಳಾಗಿ ಪುನರುತ್ಥಾನ ಆಗ್ತಾರೆ ಮತ್ತು ಸ್ವರ್ಗಕ್ಕೆ ಹೋಗ್ತಾರೆ.

16. ಪೌಲನು ಯೇಸುವನ್ನ “ಪ್ರಥಮಫಲ” ಅಂತ ಯಾಕೆ ಕರೆದನು?

16 ಕ್ರಿಸ್ತನು “ಮರಣದಲ್ಲಿ ನಿದ್ರೆಹೋದವರಲ್ಲಿ ಪ್ರಥಮಫಲವಾಗಿ” ಎಬ್ಬಿಸಲ್ಪಟ್ಟಿದ್ದಾನೆ ಅಂತ ಪೌಲನು ಬರೆದ. ಈಗಾಗಲೇ ಭೂಮಿಯಲ್ಲಿ ಲಾಜರನನ್ನು ಮತ್ತು ಬೇರೆಯವರನ್ನು ಪುನರುತ್ಥಾನ ಮಾಡಲಾಗಿತ್ತು. ಹಾಗಿದ್ರೂ ಯೇಸುವನ್ನು “ಪ್ರಥಮಫಲ” ಅಂತ ಯಾಕೆ ಕರೆಯಲಾಯ್ತು? ಯಾಕಂದ್ರೆ ಆತ್ಮಜೀವಿಯಾಗಿ ಪುನರುತ್ಥಾನ ಆದವರಲ್ಲಿ ಮತ್ತು ಪುನರುತ್ಥಾನದ ನಂತ್ರ ಶಾಶ್ವತ ಜೀವನ ಪಡೆದವರಲ್ಲಿ ಪ್ರಥಮ ವ್ಯಕ್ತಿ ಯೇಸುನೇ ಆಗಿದ್ದನು. ಯೇಸುನ ಇಸ್ರಾಯೇಲ್ಯರು ದೇವರಿಗೆ ಅರ್ಪಿಸುತ್ತಿದ್ದ ‘ಪ್ರಥಮಫಲಕ್ಕೆ’ ಹೋಲಿಸಬಹುದು. ಇದ್ರ ಜೊತೆಗೆ ಪೌಲನು ಯೇಸುವನ್ನ “ಪ್ರಥಮಫಲ” ಅಂತ ಕರೆಯೋ ಮೂಲಕ ಅವನ ನಂತ್ರ ಬೇರೆಯವ್ರು ಸಹ ಸ್ವರ್ಗಕ್ಕೆ ಹೋಗ್ತಾರೆ ಅಂತ ಸೂಚಿಸಿದನು. ಅಪೊಸ್ತಲರು ಮತ್ತು ‘ಕ್ರಿಸ್ತನೊಂದಿಗೆ ಐಕ್ಯರಾಗಿರುವ’ ಬೇರೆಯವರು ಯೇಸು ತರನೇ ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗ್ತಾರೆ.

17. ‘ಕ್ರಿಸ್ತನೊಂದಿಗೆ ಐಕ್ಯರಾದವರು’ ತಮ್ಮ ಸ್ವರ್ಗೀಯ ಬಹುಮಾನವನ್ನು ಯಾವಾಗ ಪಡೆಯಲಿದ್ದರು?

17 ಪೌಲನು ಕೊರಿಂಥದವರಿಗೆ ಪತ್ರ ಬರೆದ ಸಮಯದಲ್ಲಿ ‘ಕ್ರಿಸ್ತನೊಂದಿಗೆ ಐಕ್ಯರಾದವರ’ ಸ್ವರ್ಗೀಯ ಪುನರುತ್ಥಾನ ಇನ್ನು ಶುರುವಾಗಿರಲಿಲ್ಲ. ಅದು ಮುಂದೆ ಆಗಲಿಕ್ಕಿದೆ ಅನ್ನೋದನ್ನ ಸೂಚಿಸುತ್ತಾ ಪೌಲನು “ಪ್ರತಿಯೊಬ್ಬನು ತನ್ನ ಸ್ವಂತ ದರ್ಜೆಯಲ್ಲಿ ಎಬ್ಬಿಸಲ್ಪಡುವನು: ಕ್ರಿಸ್ತನು ಪ್ರಥಮಫಲ, ಅನಂತರ ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಅವನಿಗೆ ಸೇರಿದವರು ಎಬ್ಬಿಸಲ್ಪಡುವರು” ಅಂತ ಬರೆದನು. (1 ಕೊರಿಂ. 15:23; 1 ಥೆಸ. 4:15, 16) ಇವತ್ತು ನಾವು ಕ್ರಿಸ್ತನ “ಸಾನ್ನಿಧ್ಯದ” ಸಮಯದಲ್ಲಿ ಜೀವಿಸ್ತಾ ಇದ್ದೇವೆ. ಹಿಂದೆ ತೀರಿಹೋಗಿದ್ದ ಅಭಿಷಿಕ್ತ ಕ್ರೈಸ್ತರು ಸ್ವರ್ಗೀಯ ಬಹುಮಾನವನ್ನು ಪಡ್ಕೊಳ್ಳೋಕೆ ಮತ್ತು ‘ಕ್ರಿಸ್ತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನದಲ್ಲಿ ಅವನೊಂದಿಗೆ ಐಕ್ಯರಾಗೋಕೆ’ ಸಾನ್ನಿಧ್ಯದ ಸಮಯದವರೆಗೂ ಕಾಯಬೇಕಿತ್ತು.

ನಿಮ್ಮ ನಿರೀಕ್ಷೆ ಸುಳ್ಳಾಗಲ್ಲ!

18. (ಎ) ಸ್ವರ್ಗದ ಪುನರುತ್ಥಾನದ ನಂತರ ಇನ್ನೊಂದು ರೀತಿಯ ಪುನರುತ್ಥಾನವೂ ಇದೆ ಅಂತ ನಮಗೆ ಹೇಗೆ ಗೊತ್ತು? (ಬಿ) ಒಂದನೇ ಕೊರಿಂಥ 15:24-26 ರಲ್ಲಿ ಹೇಳೋ ಪ್ರಕಾರ ಸ್ವರ್ಗದಲ್ಲಿ ಏನೆಲ್ಲಾ ನಡೆಯುತ್ತೆ?

18 ಪೌಲ ಮತ್ತು ಸ್ವರ್ಗಕ್ಕೆ ಹೋಗುವ ಬೇರೆಯವ್ರು “ಸತ್ತವರೊಳಗಿಂದಾಗುವ ಮುಂಚಿತವಾದ ಪುನರುತ್ಥಾನವನ್ನು” ಪಡೆಯುತ್ತಾರೆ ಅಂತ ಬೈಬಲ್‌ ಹೇಳುತ್ತೆ. (ಫಿಲಿ. 3:11) ಇದರರ್ಥ ಆ ಪುನರುತ್ಥಾನದ ನಂತರ ಇನ್ನೊಂದು ಪುನರುತ್ಥಾನ ಆಗಲಿಕ್ಕಿದೆ. ಈ ಪುನರುತ್ಥಾನವನ್ನೇ ಯೋಬ ಮನಸ್ಸಲ್ಲಿಟ್ಟು, ದೇವರು ತನ್ನನ್ನು ಪುನಃ ಎಬ್ಬಿಸುತ್ತಾನೆ ಅಂತ ಹೇಳಿದ. (ಯೋಬ 14:15) ಯೇಸು ಎಲ್ಲ ಸರಕಾರಗಳನ್ನು, ಅಧಿಕಾರವನ್ನು, ಶಕ್ತಿಯನ್ನು ನಿರ್ಮೂಲ ಮಾಡುವಾಗ “ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಅವನಿಗೆ ಸೇರಿದವರು” ಸಹ ಅವನ ಜೊತೆಯಲ್ಲಿ ಸ್ವರ್ಗದಲ್ಲಿ ಇರುತ್ತಾರೆ. ಆಗ ‘ಕೊನೆಯ ಶತ್ರುವಾದ ಮರಣವೂ’ ನಿರ್ಮೂಲ ಆಗುತ್ತೆ. ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋದವರು ಯಾವತ್ತೂ ಸಾಯಲ್ಲ. ಆದ್ರೆ ಕ್ರಿಸ್ತನ ಜೊತೆ ಸ್ವರ್ಗದಲ್ಲಿ ಜೀವಿಸೋ ನಿರೀಕ್ಷೆ ಇಲ್ಲದಿರುವಂಥ ನಂಬಿಗಸ್ತ ಕ್ರೈಸ್ತರಿಗೆ ಏನಾಗುತ್ತೆ?—1 ಕೊರಿಂಥ 15:24-26 ಓದಿ.

19. ಸ್ವರ್ಗದಲ್ಲಿ ಜೀವಿಸೋ ನಿರೀಕ್ಷೆ ಇಲ್ಲದಿರುವಂಥ ನಂಬಿಗಸ್ತ ಕ್ರೈಸ್ತರಿಗೆ ಏನಾಗುತ್ತೆ?

19 ಸ್ವರ್ಗದಲ್ಲಿ ಜೀವಿಸೋ ನಿರೀಕ್ಷೆ ಇಲ್ಲದಿರುವಂಥ ನಂಬಿಗಸ್ತ ಕ್ರೈಸ್ತರಿಗೆ ಏನಾಗುತ್ತೆ? ಅದ್ರ ಬಗ್ಗೆ ಪೌಲ ಹೀಗೆ ಹೇಳಿದ್ದಾನೆ: “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು . . . ನಾನೂ ನಿರೀಕ್ಷೆ ಇಟ್ಟಿದ್ದೇನೆ.” (ಅ. ಕಾ. 24:15) ಅನೀತಿವಂತರಂತೂ ಸ್ವರ್ಗಕ್ಕೆ ಹೋಗಲ್ಲ. ಹಾಗಾಗಿ ಭೂಮಿಯಲ್ಲಿ ಸಹ ಪುನರುತ್ಥಾನ ಆಗುತ್ತೆ ಅಂತ ಪೌಲನ ಮಾತುಗಳಿಂದ ಗೊತ್ತಾಗುತ್ತೆ.

ತೀರಿಹೋದವರು ಪುನಃ ಎದ್ದು ಬರ್ತಾರೆ ಅಂತ ನಮಗೆ ಪೂರ್ತಿ ಭರವಸೆ ಇರೋದ್ರಿಂದ ಮುಂದೆ ಸಂತೋಷದ ಜೀವನ ಸಿಗುತ್ತೆ ಅಂತ ಎದುರು ನೋಡಬಹುದು (ಪ್ಯಾರ 20 ನೋಡಿ) *

20. ಸತ್ತವರು ಮತ್ತೆ ಬದುಕಿ ಬರುತ್ತಾರೆ ಅನ್ನೋ ದೃಢಭರವಸೆ ನಿಮಗೆ ಯಾಕಿದೆ?

20 ಪುನರುತ್ಥಾನ ಖಂಡಿತ ಆಗುತ್ತೆ! ಭೂಮಿಯಲ್ಲಿ ಪುನರುತ್ಥಾನ ಆಗುವವರಿಗೆ ಇಲ್ಲೇ ಶಾಶ್ವತವಾಗಿ ಜೀವಿಸೋ ಅವಕಾಶ ಸಿಗುತ್ತೆ. ಈ ಮಾತು ನಿಜ ಆಗುತ್ತೆ ಅಂತ ನೀವು ನಂಬಬಹುದು. ತೀರಿಹೋಗಿರೋ ನಿಮ್ಮ ಪ್ರಿಯರು ಮತ್ತೆ ಬದುಕಿ ಬರುತ್ತಾರೆ ಅನ್ನೋದ್ರ ಬಗ್ಗೆ ಯೋಚಿಸ್ವಾಗ ನಿಮಗೆ ಸಾಂತ್ವನ ಸಿಗುತ್ತೆ. ಕ್ರಿಸ್ತನು ಮತ್ತು ಆತನ ಜೊತೆ ಇರುವವ್ರು ‘ಸಾವಿರ ವರ್ಷ ರಾಜರಾಗಿ ಆಳುವಾಗ’ ಈ ಪುನರುತ್ಥಾನ ನಡೆಯುತ್ತೆ. (ಪ್ರಕ. 20:6) ಈ ಸಾವಿರ ವರ್ಷದ ಆಳ್ವಿಕೆ ಆರಂಭವಾಗುವ ಮುಂಚೆನೇ ಒಂದ್ವೇಳೆ ನಿಮ್ಮ ಜೀವ ಹೋಗೋದಾದ್ರೂ ಪುನಃ ನಿಮಗೆ ಜೀವ ಸಿಗುತ್ತೆ. ಈ “ನಿರೀಕ್ಷೆಯು ಆಶಾಭಂಗಕ್ಕೆ ನಡೆಸುವುದಿಲ್ಲ.” (ರೋಮ. 5:5) ಬದ್ಲಿಗೆ ನಮಗೆ ಬಲ ಕೊಡುತ್ತೆ ಮತ್ತು ದೇವರ ಸೇವೆಯನ್ನ ಸಂತೋಷದಿಂದ ಮಾಡೋಕೆ ಸಹಾಯ ಮಾಡುತ್ತೆ. 1 ಕೊರಿಂಥ 15 ನೇ ಅಧ್ಯಾಯದಿಂದ ನಾವು ಇನ್ನೂ ಅನೇಕ ವಿಷ್ಯಗಳನ್ನು ಕಲಿಬಹುದು. ಅವುಗಳ ಬಗ್ಗೆ ಮುಂದಿನ ಲೇಖನದಲ್ಲಿ ನೋಡ್ತೇವೆ.

ಗೀತೆ 12 ನಿತ್ಯಜೀವದ ವಾಗ್ದಾನ

^ ಪ್ಯಾರ. 5 ಒಂದನೇ ಕೊರಿಂಥ 15 ನೇ ಅಧ್ಯಾಯದಲ್ಲಿ ಸತ್ತವರು ಮತ್ತೆ ಬದುಕಿ ಬರೋದ್ರ ಬಗ್ಗೆ ಅಥವಾ ಸತ್ತವರ ಪುನರುತ್ಥಾನದ ಬಗ್ಗೆ ತಿಳಿಸಲಾಗಿದೆ. ಸತ್ತವರ ಪುನರುತ್ಥಾನ ಆಗುತ್ತೆ ಅಂತ ನಾವ್ಯಾಕೆ ನಂಬಬಹುದು? ಯೇಸು ಕೂಡ ಸತ್ತ ನಂತ್ರ ಮತ್ತೆ ಜೀವಂತವಾಗಿ ಎದ್ದುಬಂದನು ಅಂತ ನಂಬೋದಕ್ಕೆ ಏನು ಆಧಾರ ಇದೆ? ಈ ಪ್ರಶ್ನೆಗಳಿಗೆ ಮತ್ತು ಪುನರುತ್ಥಾನದ ಬಗ್ಗೆ ಇರುವ ಇತರ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ಈ ಲೇಖನದಲ್ಲಿ ನೋಡ್ತೇವೆ.

^ ಪ್ಯಾರ. 56 ಚಿತ್ರ ವಿವರಣೆ: ಪುನರುತ್ಥಾನ ಆಗಿ ಸ್ವರ್ಗಕ್ಕೆ ಹೋದವರಲ್ಲಿ ಮೊದಲನೇ ವ್ಯಕ್ತಿ ಯೇಸು. (ಅ. ಕಾ. 1:9) ಆಮೇಲೆ ಪುನರುತ್ಥಾನ ಆಗಿ ಸ್ವರ್ಗಕ್ಕೆ ಹೋದವ್ರಲ್ಲಿ ಕೆಲವರು ಯಾರಂದ್ರೆ ತೋಮ, ಯಾಕೋಬ, ಲುದ್ಯ, ಯೋಹಾನ, ಮರಿಯ ಮತ್ತು ಪೌಲ.

^ ಪ್ಯಾರ. 58 ಚಿತ್ರ ವಿವರಣೆ: ಒಬ್ಬ ಸಹೋದರನ ಹೆಂಡತಿ ತೀರಿಹೋಗಿದ್ದಾರೆ. ಅವರು ಆಕೆ ಜೊತೆ ಸೇರಿ ತುಂಬ ವರ್ಷ ಯೆಹೋವನ ಸೇವೆ ಮಾಡಿದ್ದರು. ಆಕೆಯ ಪುನರುತ್ಥಾನ ಆಗುತ್ತೆ ಅನ್ನೋ ದೃಢಭರವಸೆಯಿಂದ ಆ ಸಹೋದರ ಯೆಹೋವನಿಗೆ ನಿಷ್ಠೆಯಿಂದ ಸೇವೆ ಮಾಡ್ತಿದ್ದಾರೆ.