ಜೀವನ ಕಥೆ
ನಾವು ಯಾವತ್ತೂ ಯೆಹೋವನಿಗೆ ಇಲ್ಲ ಅಂದಿಲ್ಲ
ಭೀಕರ ಚಂಡಮಾರುತಕ್ಕೆ ನದಿಯ ನೀರೆಲ್ಲ ಕೆಸರಾಗಿತ್ತು ಮತ್ತು ಅಲ್ಲಿದ್ದಂಥ ದೊಡ್ಡದೊಡ್ಡ ಕಲ್ಲುಗಳನ್ನು ನೀರು ಕೊಚ್ಚಿಕೊಂಡು ಹೋಗ್ತಿತ್ತು. ಸೇತುವೆನೂ ಬಿದ್ದುಹೋಗಿತ್ತು. ನಾನು, ನಮ್ಮ ಯಜಮಾನ್ರು ಹಾರ್ವೀ ಮತ್ತು ಅಮಿಸ್ ಭಾಷೆಯ ಭಾಷಾಂತರಕಾರ ನದಿಯ ದಡದಲ್ಲಿ ನಿಂತಿದ್ವಿ. ನಮಗೆ ತುಂಬ ಭಯ ಆಗಿತ್ತು, ನದಿಯನ್ನ ದಾಟೋದು ಹೇಗಂತ ಯೋಚಿಸ್ತಾ ಹಾಗೇ ನಿಂತುಬಿಟ್ಟಿದ್ವಿ. ಆಚೆ ದಡದಲ್ಲಿ ನಿಂತಿದ್ದ ನಮ್ಮ ಸಹೋದರರು ನಾವು ಹೇಗೆ ಈ ನದಿ ದಾಟ್ತೀವಿ ಅಂತ ಗಾಬರಿಯಿಂದ ನೋಡ್ತಾ ನಿಂತಿದ್ರು. ಕೊನೆಗೂ ಧೈರ್ಯ ಮಾಡಿ ನದಿ ದಾಟೋಕೆ ರೆಡಿಯಾದ್ವಿ. ಮೊದ್ಲಿಗೆ ನಮ್ಮ ಚಿಕ್ಕ ಕಾರನ್ನ ಸ್ವಲ್ಪ ದೊಡ್ಡದಿದ್ದ ಟ್ರಕ್ ಒಳಗೆ ಹತ್ತಿಸಿದ್ವಿ. ಕಾರು ಅಲುಗಾಡದಂತೆ ಕಟ್ಟೋಕೆ ಹಗ್ಗವಾಗಲಿ ಚೈನಾಗಲಿ ಇರ್ಲಿಲ್ಲ. ಟ್ರಕ್ ಮೆಲ್ಲಗೆ ನದಿಗೆ ಇಳಿತು ಮತ್ತು ನಿಧಾನವಾಗಿ ಚಲಿಸ್ತು. ನಮಗೆ ಭಯಕ್ಕೆ ಆಚೆ ದಡ ಇನ್ನೂ ತುಂಬ ದೂರ ಇದೆ ಅಂತ ಅನಿಸ್ತು. ಯೆಹೋವನಿಗೆ ಪ್ರಾರ್ಥಿಸುತ್ತನೇ ಇದ್ವಿ. ಕೊನೆಗೂ ಆ ನದಿಯನ್ನ ಸುರಕ್ಷಿತವಾಗಿ ದಾಟಿದ್ವಿ. ಈ ಘಟನೆ ನಡೆದಿದ್ದು 1971 ರಲ್ಲಿ. ಆಗ ನಾವು ನಮ್ಮ ಮನೆಯಿಂದ ಸಾವಿರಾರು ಕಿಲೋ ಮೀಟರ್ ದೂರದಲ್ಲಿರೋ ತೈವಾನಿನ ಪೂರ್ವ ಕರಾವಳಿಯಲ್ಲಿದ್ವಿ. ಬನ್ನಿ, ನಮ್ಮ ಕಥೆ ಹೇಳ್ತೀನಿ.
ಯೆಹೋವನನ್ನ ಪ್ರೀತಿಸೋಕೆ ಕಲಿತ್ವಿ
ಹಾರ್ವೀಯವ್ರ ಊರು ಪಶ್ಚಿಮ ಆಸ್ಟ್ರೇಲಿಯದ ಮಿಡ್ಲೆಂಡ್ ಜಂಕ್ಷನ್. ಹಾರ್ವೀನೂ ಸೇರಿ ಒಟ್ಟು ನಾಲ್ಕು ಜನ ಅಣ್ಣತಮ್ಮಂದಿರು. ಅವ್ರಲ್ಲಿ ಹಾರ್ವೀನೇ ದೊಡ್ಡವ್ರು. 1930 ರ ದಶಕದಲ್ಲಿ ಹಾರ್ವೀ ಕುಟುಂಬಕ್ಕೆ ಸತ್ಯ ಸಿಕ್ತು. ಆ ಸಮಯದಲ್ಲಿ ಆಸ್ಟ್ರೇಲಿಯದಲ್ಲಿ ತುಂಬ ಬಡತನ ಇತ್ತು. ಹಾರ್ವೀಗೆ ಯೆಹೋವನ ಮೇಲೆ ಪ್ರೀತಿ ಇದ್ದಿದ್ರಿಂದ 14 ನೇ ವರ್ಷದಲ್ಲಿ ದೀಕ್ಷಾಸ್ನಾನ ತಗೊಂಡ್ರು. ಸಭೆಯಲ್ಲಿ ಏನೇ ಕೆಲ್ಸ ಕೊಟ್ರೂ ಅದಕ್ಕೆ ಇಲ್ಲ ಅಂತ ಹೇಳಬಾರ್ದು ಅನ್ನೋದನ್ನ ಅವ್ರು ಸ್ವಲ್ಪದರಲ್ಲೇ ಕಲಿತ್ರು. ಅವ್ರು ಚಿಕ್ಕವರಿದ್ದಾಗ ಒಂದ್ಸಲ ಒಬ್ಬ ಸಹೋದರ ಅವ್ರ ಹತ್ರ ಬಂದು “ಮೀಟಿಂಗಲ್ಲಿ ಕಾವಲಿನಬುರುಜು ಓದಕ್ಕಾಗುತ್ತಾ?” ಅಂತ ಕೇಳಿದ್ರು. ಅದಕ್ಕೆ ಹಾರ್ವೀ ಒಪ್ಪಲಿಲ್ಲ, ಅದನ್ನು ಓದುವಷ್ಟು ಅರ್ಹತೆ ಇಲ್ಲ ಅಂತ ಅವ್ರಿಗೆ ಅನಿಸ್ತು. ಆಗ ಆ ಸಹೋದರ “ಯೆಹೋವನ ಸಂಘಟನೆಯಲ್ಲಿ ಯಾರಾದ್ರೂ ನಿನಗೆ ಒಂದು ಕೆಲ್ಸ ಕೊಟ್ರೆ ನೀನು ಆ ಕೆಲ್ಸ ಮಾಡೋಕೆ ಅರ್ಹನಾಗಿದ್ದೀಯ ಅನ್ನೋ ನಂಬಿಕೆ ಅವ್ರಿಗಿರುತ್ತೆ ಅಂತ ಅರ್ಥ” ಅಂದ್ರು.—2 ಕೊರಿಂ. 3:5.
ನಾನು, ನಮ್ಮಮ್ಮ ಮತ್ತು ನನ್ನ ದೊಡ್ಡಕ್ಕ ಇಂಗ್ಲೆಂಡ್‌ನಲ್ಲಿ ಸತ್ಯ ಕಲಿತ್ವಿ. ತುಂಬಾ ಸಮ್ಯ ಆದ್ಮೇಲೆ ಅಪ್ಪ ಸತ್ಯ ಕಲಿತ್ರು. ಆದ್ರೆ ಶುರುವಿನಲ್ಲಿ ತುಂಬ ವಿರೋಧ ಮಾಡಿದ್ರು. ಅಪ್ಪನಿಗೆ ಇಷ್ಟ ಇಲ್ಲದಿದ್ರೂ ನಾನು 9 ನೇ ವರ್ಷದಲ್ಲಿ ದೀಕ್ಷಾಸ್ನಾನ ತಗೊಂಡೆ. ಪಯನೀಯರಿಂಗ್ ಮಾಡ್ಬೇಕು, ಮುಂದಕ್ಕೆ ಮಿಷನರಿ ಆಗ್ಬೇಕು ಅಂತ ನಂಗೆ ಆಸೆ ಇತ್ತು. ಆದ್ರೆ 21 ವರ್ಷ ಆಗೋವರೆಗೂ ಪಯನೀಯರ್ ಸೇವೆ ಮಾಡಬಾರ್ದು ಅಂತ
ಅಪ್ಪ ಹೇಳ್ಬಿಟ್ರು. ಆದ್ರೆ ಅಷ್ಟರ ತನಕ ಕಾಯೋಕೆ ನಂಗೆ ಮನಸ್ಸಿರಲಿಲ್ಲ. 16 ವರ್ಷ ಆದಾಗ ಆಸ್ಟ್ರೇಲಿಯದಲ್ಲಿದ್ದ ಅಕ್ಕನ ಮನೆಗೆ ಹೋಗ್ತೀನಿ ಅಂತ ಅಪ್ಪ ಹತ್ರ ಕೇಳಿದೆ. ಅವ್ರು ಒಪ್ಪಿದ್ರು. ಕೊನೆಗೆ ನಂಗೆ 18 ವರ್ಷ ಆದಾಗ ಪಯನೀಯರ್ ಸೇವೆ ಶುರುಮಾಡಿದೆ.ಆಸ್ಟ್ರೇಲಿಯದಲ್ಲಿ ನಾನು ಹಾರ್ವೀಯನ್ನ ಭೇಟಿಯಾದೆ. ಇಬ್ರಿಗೂ ಮಿಷನರಿ ಆಗೋ ಆಸೆ ಇತ್ತು. 1951 ರಲ್ಲಿ ಮದ್ವೆಯಾದ್ವಿ. ಇಬ್ರೂ ಎರಡು ವರ್ಷ ಪಯನೀಯರ್ ಸೇವೆ ಮಾಡಿದ ಮೇಲೆ ನಮ್ಗೆ ಸರ್ಕಿಟ್ ಸೇವೆ ಮಾಡೋ ಅವಕಾಶ ಸಿಕ್ತು. ನಾವು ಪಶ್ಚಿಮ ಆಸ್ಟ್ರೇಲಿಯದಲ್ಲಿದ್ದ ಎಲ್ಲ ಸಭೆಗಳಿಗೂ ಭೇಟಿ ನೀಡಬೇಕಿತ್ತು. ಅದೊಂದು ದೊಡ್ಡ ಟೆರಿಟೊರಿ. ಒಂದು ಸಭೆಯಿಂದ ಇನ್ನೊಂದು ಸಭೆಗೆ ಹೋಗೋಕೆ ತುಂಬ ದೂರ ಪ್ರಯಾಣ ಮಾಡ್ಬೇಕಿತ್ತು. ಕೆಲವೊಮ್ಮೆ ಮರುಭೂಮಿ ಮತ್ತು ನಿರ್ಜನ ಪ್ರದೇಶಗಳನ್ನೂ ದಾಟಿ ಹೋಗ್ಬೇಕಿತ್ತು.
ನಮ್ಮ ಕನಸು ನನಸಾಯ್ತು
1954 ರಲ್ಲಿ ನಮಗೆ 25 ನೇ ಗಿಲ್ಯಡ್ ಶಾಲೆಗೆ ಹಾಜರಾಗೋಕೆ ಆಮಂತ್ರಣ ಸಿಕ್ತು. ಮಿಷನರಿ ಆಗಬೇಕೆಂಬ ನಮ್ಮ ಕನಸು ನನಸಾಗೋ ಸಮ್ಯ ಹತ್ರ ಬಂತು! ನಾವು ಹಡಗಲ್ಲಿ ಪ್ರಯಾಣ ಮಾಡಿ ನ್ಯೂಯಾರ್ಕಿಗೆ ತಲುಪಿದ್ವಿ ಮತ್ತು ಗಿಲ್ಯಡ್ ಶಾಲೆಯಲ್ಲಿ ಬೈಬಲನ್ನ ಇನ್ನೂ ಹೆಚ್ಚು ಅಧ್ಯಯನ ಮಾಡೋಕೆ ಶುರುಮಾಡಿದ್ವಿ. ಆ ಶಾಲೆಯಲ್ಲಿ ನಾವು ಸ್ಪ್ಯಾನಿಷ್ ಭಾಷೆನೂ ಕಲಿಬೇಕಿತ್ತು. ಹಾರ್ವೀಗೆ ಆ ಭಾಷೆ ಕಲಿಯೋಕೆ ತುಂಬ ಕಷ್ಟ ಆಯ್ತು. ಯಾಕಂದ್ರೆ ಸ್ಪ್ಯಾನಿಷಲ್ಲಿ ‘ಆರ್’ ಅನ್ನೋ ಅಕ್ಷರವನ್ನ ಬೇರೆ ರೀತಿಲಿ ಉಚ್ಚಾರಣೆ ಮಾಡ್ಬೇಕಿತ್ತು.
ಶಾಲೆ ನಡಿತಿದ್ದಾಗ ಶಿಕ್ಷಕರು, ಜಪಾನ್‌ನಲ್ಲಿ ಸೇವೆ ಮಾಡೋಕೆ ಇಷ್ಟಪಡೋರು ಜ್ಯಾಪನೀಸ್ ಭಾಷೆ ಕಲಿಯೋಕೆ ಹೆಸ್ರು ಕೊಡಬಹುದು ಅಂತ ಹೇಳಿದ್ರು. ನಾವು ಹೆಸ್ರು ಕೊಡ್ಲಿಲ್ಲ. ಯೆಹೋವನ ಸಂಘಟನೆ ಎಲ್ಲಿ ಕಳಿಸುತ್ತೋ ಅಲ್ಲಿ ಹೋಗಿ ಸೇವೆ ಮಾಡೋಣ ಅಂದುಕೊಂಡ್ವಿ. ನಾವು ಹೆಸ್ರು ಕೊಡದೇ ಇದ್ದದ್ದು ಗಿಲ್ಯಡ್ ಶಿಕ್ಷಕರಾದ ಸಹೋದರ ಆಲ್ಬರ್ಟ್ ಶ್ರೋಡರ್‌ಗೆ ಗೊತ್ತಾಯ್ತು. ಅವ್ರು ನಮ್ಮ ಹತ್ರ ಬಂದು “ಇದ್ರ ಬಗ್ಗೆ ಇನ್ನೊಂದು ಸಲ ಯೋಚಿಸಿ” ಅಂತ ಹೇಳಿದ್ರು. ಆಗ್ಲೂ ನಾವು ಹೆಸ್ರು ಕೊಡ್ಲಿಲ್ಲ. ಆಗ ಸಹೋದರ ಶ್ರೋಡರ್ “ನಾವು ನಿಮ್ಮ ಹೆಸ್ರನ್ನು ಕೊಟ್ಟಿದ್ದೇವೆ, ನಿಮಗೆ ಜ್ಯಾಪನೀಸ್ ಭಾಷೆ ಕಲಿಯೋಕೆ ಅಷ್ಟು ಕಷ್ಟ ಆಗಲ್ಲ ಅನ್ಸುತ್ತೆ ನೋಡಿ” ಅಂದ್ರು. ಹಾರ್ವೀ ಈ ಭಾಷೆಯನ್ನ ಸುಲಭವಾಗಿ ಕಲಿತುಬಿಟ್ರು.
1955 ರಲ್ಲಿ ಜಪಾನ್‌ಗೆ ಹೋದ್ವಿ. ಆ ಸಮಯದಲ್ಲಿ ಇಡೀ ದೇಶದಲ್ಲಿ ಬರೀ 500 ಪ್ರಚಾರಕರಿದ್ರು. ಆಗ ಹಾರ್ವೀಗೆ 26 ವರ್ಷ, ನಂಗೆ 24 ವರ್ಷ. ನಮಗೆ ಕೋಬೆ ಪಟ್ಟಣದಲ್ಲಿ ಸೇವೆ ಮಾಡೋ ನೇಮಕ ಸಿಕ್ಕಿತ್ತು. ಅಲ್ಲಿ ಸುಮಾರು 4 ವರ್ಷ ಸೇವೆ ಮಾಡಿದ್ವಿ. ನಂತ್ರ ಮತ್ತೆ ಸಂಚರಣ ಕೆಲ್ಸ ಮಾಡೋ ಸುಯೋಗ ಸಿಕ್ತು. ತುಂಬ ಖುಷಿ ಆಯ್ತು. ನಗೋಯ ಅನ್ನೋ ಪಟ್ಟಣದ ಹತ್ರ ಸೇವೆ ಮಾಡಬೇಕಿತ್ತು. ಅಲ್ಲಿನ ಸಹೋದರ-ಸಹೋದರಿಯರು, ಆಹಾರ ಮತ್ತು ಸುಂದರ ತಾಣಗಳು ನಮಗೆ ತುಂಬ ಇಷ್ಟ ಆಯ್ತು. ಆದ್ರೆ ಸ್ವಲ್ಪ ಸಮಯದಲ್ಲೇ ನಮಗೆ ಯೆಹೋವನ ಸೇವೆಲಿ ಇನ್ನೊಂದು ನೇಮಕ ಸಿಕ್ತು. ಅದಕ್ಕೆ ಇಲ್ಲ ಅಂತ ಹೇಳೋಕೆ ಆಗ್ಲಿಲ್ಲ.
ಹೊಸ ನೇಮಕದಲ್ಲಿ ಹೊಸ ಸವಾಲುಗಳು
ಮೂರು ವರ್ಷ ನಾವು ಸರ್ಕಿಟ್ ಸೇವೆ ಮಾಡಿದ ಮೇಲೆ ಜಪಾನ್ ಬ್ರಾಂಚ್ ನಮ್ಮ ಹತ್ರ ತೈವಾನ್‌ಗೆ ಹೋಗಿ ಅಲ್ಲಿ ಅಮಿಸ್ ಜನಾಂಗಕ್ಕೆ * ಜಪಾನ್‌ನಲ್ಲಿ ಸೇವೆ ಮಾಡೋಕೆ ನಮಗೆ ತುಂಬ ಇಷ್ಟ ಇತ್ತು. ಆದ್ರೆ ತೈವಾನ್‌ಗೆ ಹೋಗಬೇಕು ಅಂದಾಗ ಸ್ವಲ್ಪ ಕಷ್ಟ ಆಯ್ತು. ಯಾವುದೇ ನೇಮಕ ಸಿಕ್ರೂ ಅದಕ್ಕೆ ಇಲ್ಲ ಅಂತ ಹೇಳಬಾರದು ಅಂತ ಹಾರ್ವೀ ನಿರ್ಧಾರ ಮಾಡಿದ್ರಿಂದ ಅಲ್ಲಿಗೆ ಹೋಗೋಕೆ ತಯಾರಾದ್ವಿ.
ಸೇರಿದ ಜನ್ರಿಗೆ ಸಾರಕ್ಕಾಗುತ್ತಾ ಅಂತ ಕೇಳ್ತು. ಅಮಿಸ್ ಭಾಷೆ ಮಾತಾಡ್ತಿದ್ದ ಕೆಲವು ಸಹೋದರರು ಧರ್ಮಭ್ರಷ್ಟರಾಗಿದ್ರು. ಹಾಗಾಗಿ ಈ ಧರ್ಮಭ್ರಷ್ಟತೆಯನ್ನ ತಡೆಯೋಕೆ ಜ್ಯಾಪನೀಸ್ ಭಾಷೆ ಚೆನ್ನಾಗಿ ಮಾತಾಡೋಕೆ ಬರೋ ಒಬ್ಬ ಸಹೋದರನ ಅಗತ್ಯ ಇತ್ತು.ನಾವು 1962 ರ ನವೆಂಬರಲ್ಲಿ ತೈವಾನ್‌ಗೆ ಬಂದ್ವಿ. ಅಲ್ಲಿ ಸುಮಾರು 2,271 ಪ್ರಚಾರಕರಿದ್ರು ಮತ್ತು ಹೆಚ್ಚಿನವ್ರು ಅಮಿಸ್ ಭಾಷೆ ಮಾತಾಡ್ತಿದ್ರು. ಆದ್ರೆ ಮೊದ್ಲಿಗೆ ನಾವು ಚೈನೀಸ್ ಭಾಷೆ ಕಲಿಬೇಕಿತ್ತು. ಅದನ್ನ ಕಲಿಯೋಕೆ ನಮ್ಮ ಹತ್ರ ಇದ್ದಿದ್ದು ಒಂದೇ ಒಂದು ಪಠ್ಯಪುಸ್ತಕ ಮತ್ತು ಒಬ್ಬ ಟೀಚರ್. ಅವ್ರಿಗೆ ಇಂಗ್ಲಿಷ್ ಬರ್ತಿರಲಿಲ್ಲ. ಆದ್ರೂ ನಾವು ಚೈನೀಸ್ ಭಾಷೆ ಕಲಿತ್ವಿ.
ತೈವಾನ್‌ಗೆ ಬಂದ ಸ್ವಲ್ಪ ಸಮಯದಲ್ಲೇ ಹಾರ್ವೀಗೆ ಬ್ರಾಂಚ್ ಸೇವಕರಾಗಿ ಕೆಲ್ಸ ಮಾಡೋ ನೇಮಕ ಸಿಕ್ತು. ಬ್ರಾಂಚ್ ಟೆರಿಟೊರಿ ಚಿಕ್ಕದಿತ್ತು. ಹಾಗಾಗಿ ಹಾರ್ವೀಗೆ ಬ್ರಾಂಚ್ ಕೆಲ್ಸನೂ ಮಾಡಿಕೊಂಡು, ತಿಂಗಳಲ್ಲಿ ಮೂರು ವಾರ ಅಮಿಸ್ ಸಹೋದರರ ಜೊತೆ ಸೇವೆ ಮಾಡೋಕೂ ಸಮಯ ಸಿಗ್ತಿತ್ತು. ಹಾರ್ವೀ ಜಿಲ್ಲಾ ಮೇಲ್ವಿಚಾರಕರಾಗಿಯೂ ಸೇವೆ ಮಾಡಿದ್ರು. ಹಾಗಾಗಿ ಅವ್ರು ಸಮ್ಮೇಳನಗಳಲ್ಲಿ ಭಾಷಣ ಕೊಡಬೇಕಿತ್ತು. ಅಮಿಸ್ ಭಾಷೆಯ ಸಹೋದರರಿಗೆ ಜ್ಯಾಪನೀಸ್ ಚೆನ್ನಾಗಿ ಅರ್ಥ ಆಗ್ತಾ ಇದ್ದದ್ರಿಂದ ಹಾರ್ವೀ ಆ ಭಾಷೆಯಲ್ಲೇ ಭಾಷಣ ಕೊಡಬಹುದಿತ್ತು. ಆದ್ರೆ ಅಲ್ಲಿನ ಸರಕಾರ ಧಾರ್ಮಿಕ ಸಭೆಗಳನ್ನು ಚೈನೀಸ್ ಭಾಷೆಯಲ್ಲೇ ನಡೆಸಬೇಕು ಅಂತ ಕಾನೂನು ಮಾಡಿತ್ತು. ಹಾಗಾಗಿ ಕಷ್ಟಪಟ್ಟಾದ್ರೂ ಹಾರ್ವೀ ಚೈನೀಸ್ ಭಾಷೆಯಲ್ಲೇ ಭಾಷಣ ಕೊಡ್ತಿದ್ರು. ಅದನ್ನ ಒಬ್ಬ ಸಹೋದರ ಅಮಿಸ್ ಭಾಷೆಗೆ ಭಾಷಾಂತರಿಸ್ತಿದ್ರು.
ಆ ಸಮಯದಲ್ಲಿ ತೈವಾನ್‌ನಲ್ಲಿ ಮಿಲಿಟರಿ ಆಡಳಿತ (ಮಾರ್ಷಲ್ ಲಾ) ಇತ್ತು. ಸಮ್ಮೇಳನ ನಡೆಸೋಕೆ ಪೊಲೀಸರ ಅನುಮತಿ ಪಡ್ಕೊಬೇಕಿತ್ತು. ಅದು ಅಷ್ಟು ಸುಲಭ ಇರಲಿಲ್ಲ. ಸ್ಟೇಷನ್‌ಗೆ ತುಂಬ ಸಲ ಅಲೆದಾಡಬೇಕಿತ್ತು. ಒಂದ್ವೇಳೆ ಸಮ್ಮೇಳನದ ವಾರ ಬಂದ್ರೂ ಅದಕ್ಕಿನ್ನೂ ಪೊಲೀಸರು ಅನುಮತಿ ಕೊಡದಿದ್ರೆ ಹಾರ್ವೀ ಸ್ಟೇಷನ್‌ಗೆ ಹೋಗಿ ಕೂತುಬಿಡ್ತಿದ್ರು. ಅನುಮತಿ ಕೊಡೋ ತನಕ ಅಲ್ಲಿಂದ ಕದಲ್ತಿರಲಿಲ್ಲ. ಒಬ್ಬ ವಿದೇಶಿನ ಇಷ್ಟು ಹೊತ್ತು ಕೂರಿಸಿ ಕಾಯಿಸ್ತಾ ಇದ್ದಿದ್ದಕ್ಕೆ ಕೊನೆಗೆ ಪೊಲೀಸರಿಗೇ ನಾಚಿಕೆ ಆಗಿ ಅನುಮತಿ ಕೊಟ್ಟುಬಿಡವ್ರು. ಈ ಉಪಾಯ ಯಾವಾಗ್ಲೂ ಕೆಲ್ಸಕ್ಕೆ ಬರ್ತಿತ್ತು.
ಮೊದಲ ಸಲ ಬೆಟ್ಟ ಹತ್ತಿದ್ದು
ಸುವಾರ್ತೆ ಸಾರೋಕೆ ಕೆಲವೊಮ್ಮೆ ಗಂಟೆಗಟ್ಟಲೆ ನಡಿಬೇಕಿತ್ತು, ಬೆಟ್ಟ ಹತ್ತಬೇಕಿತ್ತು ಮತ್ತು ನದಿಗಳನ್ನ ದಾಟಬೇಕಿತ್ತು. ನನಗೆ ಈಗ್ಲೂ ಮೊದಲನೇ ಸಲ ಬೆಟ್ಟ ಹತ್ತಿದ್ದು ನೆನಪಿದೆ. ಆ ದಿನ ಬೆಳಗಿನ ಜಾವನೇ ಎದ್ದು ಬೇಗಬೇಗ ತಿಂಡಿ ತಿಂದ್ವಿ. ಒಂದು ದೂರದ ಹಳ್ಳಿಗೆ ಹೋಗೋಕೆ ಬೆಳಿಗ್ಗೆ ಐದೂವರೆಗೆ ಬರ್ತಿದ್ದ ಬಸ್ಸನ್ನ ಹತ್ತಿದ್ವಿ. ಆಮೇಲೆ ಒಂದು ದೊಡ್ಡ ನದಿ ದಾಟಿದ್ವಿ ಮತ್ತು ಕಡಿದಾದ ಬೆಟ್ಟ ಹತ್ತಿದ್ವಿ. ಆ ಬೆಟ್ಟ ಎಷ್ಟು ಕಡಿದಾಗಿತ್ತೆಂದ್ರೆ ನಾನು ಅದನ್ನ ಹತ್ವಾಗ ನನ್ನ ಕಣ್ಣಿನ ನೇರಕ್ಕೆ ನನ್ನ ಮುಂದೆ ಬೆಟ್ಟ ಹತ್ತುತ್ತಿದ್ದ ಸಹೋದರನ ಕಾಲು ಮಾತ್ರ ಕಾಣಿಸ್ತಿತ್ತು.
ಬೆಟ್ಟ ಹತ್ತಿದ ಮೇಲೆ ಹಾರ್ವೀ ಅಲ್ಲಿನ ಸಹೋದರರ ಜೊತೆ ಸೇವೆ ಮಾಡಿದ್ರು. ನಾನೊಬ್ಳೇ ಒಂದು ಚಿಕ್ಕ ಹಳ್ಳಿಗೆ ಹೋಗಿ ಸೇವೆ ಮಾಡಿದೆ. ಅಲ್ಲಿನ ಜನ ಜ್ಯಾಪನೀಸ್ ಭಾಷೆ ಮಾತಾಡ್ತಿದ್ರು. ಮಧ್ಯಾಹ್ನ ಸುಮಾರು 1 ಗಂಟೆಗೆ ನಂಗೆ ಹಸಿವಾಗೋಕೆ ಶುರುವಾಯ್ತು. ತುಂಬ ಹೊತ್ತು ಏನೂ ತಿಂದಿರಲಿಲ್ಲ. ತಲೆಸುತ್ತು ಬರೋ ತರ ಆಯ್ತು. ಕೊನೆಗೆ ಹಾರ್ವೀ ಸಿಕ್ಕಿದಾಗ ಅವ್ರು ಒಬ್ರೇ ಇದ್ರು. ಹಾರ್ವೀ ಸೇವೆಲಿ ಒಬ್ರಿಗೆ ಪತ್ರಿಕೆಗಳನ್ನ ಕೊಟ್ಟಾಗ ಅವ್ರು ಬದಲಿಗೆ ಮೂರು ಕೋಳಿಮೊಟ್ಟೆ ಕೊಟ್ಟಿದ್ರು. ಮೊಟ್ಟೆನ ತೂತ ಮಾಡಿ ಕುಡಿಯೋದು ಹೇಗೆ ಅಂತ ಹಾರ್ವೀ ತೋರಿಸಿದ್ರು. ನಂಗೆ ಹಸಿ ಮೊಟ್ಟೆನ ಕುಡಿಯೋಕೆ ಒಂಥರಾ ಅನಿಸಿದ್ರೂ ತುಂಬ ಹಸಿವಾಗಿದ್ರಿಂದ ಕಷ್ಟಪಟ್ಟು ಒಂದು ಮೊಟ್ಟೆ ಕುಡಿದುಬಿಟ್ಟೆ. ಇನ್ನೊಂದು ಮೊಟ್ಟೆನ ಹಾರ್ವೀ ಕುಡಿದ್ರು. ಕೊನೆಗೆ ಒಂದು ಮೊಟ್ಟೆ ಉಳೀತು. ಅದನ್ನ ಹಾರ್ವೀ ನಂಗೇ ಕೊಟ್ರು. ಯಾಕಂದ್ರೆ ಹಸಿವೆಯಿಂದ ತಲೆ ಸುತ್ತಿ ನಾನು ಬಿದ್ದು ಹೋದ್ರೆ ಬೆಟ್ಟದ ಮೇಲಿಂದ ಕೆಳಗೆ ನನ್ನನ್ನ ಹೊತ್ಕೊಂಡು ಹೋಗುವಷ್ಟು ಶಕ್ತಿ ಹಾರ್ವೀಗಿರಲಿಲ್ಲ.
ಮುಜುಗರ ತಂದಂಥ ಸನ್ನಿವೇಶ
ಒಂದು ಸರ್ಕಿಟ್ ಸಮ್ಮೇಳನಕ್ಕೆ ಹೋದಾಗ ನಂಗೆ ಮುಜುಗರ ತರುವಂಥ ಸನ್ನಿವೇಶ ಎದುರಾಯ್ತು. ನಾವು ಉಳ್ಕೊಂಡಿದ್ದ ಸಹೋದರರ ಮನೆ ಪಕ್ಕದಲ್ಲೇ ರಾಜ್ಯ ಸಭಾಗೃಹ ಇತ್ತು. ಅಮಿಸ್ ಜನ್ರು ಸ್ನಾನ ಮಾಡೋದು ತುಂಬ ಮುಖ್ಯ ಅಂತ ನೆನಸ್ತಿದ್ರು. ಸರ್ಕಿಟ್ ಮೇಲ್ವಿಚಾರಕರ ಪತ್ನಿ ನಮಗೆ ಸ್ನಾನಕ್ಕೆ ತಯಾರಿ ಮಾಡಿದ್ರು. ಹಾರ್ವೀ ಸ್ವಲ್ಪ ಬಿಝಿಯಾಗಿದ್ರಿಂದ “ನೀನೇ ಮೊದ್ಲು ಸ್ನಾನ ಮಾಡ್ಕೊ” ಅಂತ ನಂಗೆ ಹೇಳಿದ್ರು. ಅಲ್ಲಿ ಹೋಗಿ ನೋಡಿದಾಗ ಸ್ನಾನಕ್ಕೆ ಅಂತ ಒಂದು ಬಕೆಟ್‌ನಲ್ಲಿ ತಣ್ಣೀರಿತ್ತು, ಇನ್ನೊಂದು ಬಕೆಟ್‌ನಲ್ಲಿ ಬಿಸಿನೀರಿತ್ತು ಮತ್ತು ಇನ್ನೊಂದು ಬಕೆಟ್ ಖಾಲಿ ಇತ್ತು. ನಂಗೆ ತುಂಬ ಗಾಬರಿಯಾದ ವಿಷ್ಯ ಏನಂದ್ರೆ ಇವನ್ನೆಲ್ಲಾ ಸರ್ಕಿಟ್ ಮೇಲ್ವಿಚಾರಕರ ಪತ್ನಿ ಮನೆ ಹೊರಗಡೆ ಇಟ್ಟಿದ್ರು. ಅಲ್ಲಿ ಸ್ನಾನ ಮಾಡಿದ್ರೆ ಪಕ್ಕದಲ್ಲೇ ರಾಜ್ಯ ಸಭಾಗೃಹದಲ್ಲಿ ಸಮ್ಮೇಳನದ ತಯಾರಿ ನಡೆಸ್ತಿದ್ದ ಸಹೋದರರಿಗೆ ಚೆನ್ನಾಗಿ ಕಾಣಿಸ್ತಿತ್ತು. ಆ ಸಹೋದರಿ ಹತ್ರ ಒಂದು ಪರದೆ ಸಿಗುತ್ತಾ ಅಂತ ಕೇಳಿದೆ. ಆಗ ಅವ್ರು ಪ್ಲಾಸ್ಟಿಕ್ ಶೀಟ್ ತಂದುಕೊಟ್ರು. ಆ ಪ್ಲಾಸ್ಟಿಕ್ ಶೀಟ್ ಕವರ್ ಮಾಡಿ ಸ್ನಾನ ಮಾಡಿದ್ರೂ ಎಲ್ಲಾ ಕಾಣೋ ತರ ಇತ್ತು. ಮನೆ ಹಿಂದೆ ಹೋಗಿ ಯಾರಿಗೂ ಕಾಣದಿರೋ ತರ ಸ್ನಾನ ಮಾಡೋಣ ಅಂದ್ಕೊಂಡೆ. ಆದ್ರೆ ಅಲ್ಲಿ ಬಾತುಕೋಳಿಗಳು ಇದ್ವು. ಅವುಗಳ ಹತ್ರ ಹೋದ್ರೆ ಕುಕ್ತಾ ಇದ್ವು. ಒಳ್ಳೇ ಫಜೀತಿಲಿ ಸಿಕ್ಕಿಹಾಕಿಕೊಂಡಂಗೆ ಅನಿಸ್ತು. ಕೊನೆಗೆ, ‘ಹೇಗೂ ಎಲ್ಲಾ ಸಹೋದರರು ಅವ್ರವ್ರ ಕೆಲ್ಸದಲ್ಲಿ ಬಿಝಿ ಇದ್ದಾರೆ, ನಾನು ಸ್ನಾನ ಮಾಡೋದನ್ನ ಯಾರೂ ಗಮನಿಸಲ್ಲ ಅನ್ಸುತ್ತೆ, ಸ್ನಾನ ಮಾಡದಿದ್ರೆ ಅದನ್ನೂ ತಪ್ಪಾಗಿ ತಿಳ್ಕೊಬಹುದು’ ಅಂತ ಅಂದುಕೊಂಡು ಸ್ನಾನ ಮಾಡೇ ಬಿಟ್ಟೆ.
ಅಮಿಸ್ ಭಾಷೆಯಲ್ಲಿ ಸಾಹಿತ್ಯ
ಅಮಿಸ್ ಭಾಷೆಯ ಸಹೋದರರ ನಂಬಿಕೆಯನ್ನ ಇನ್ನಷ್ಟು ಬಲಪಡಿಸಬೇಕು ಅಂತ ಹಾರ್ವೀಗೆ ಅನಿಸ್ತು. ಯಾಕಂದ್ರೆ ಆ ಸಹೋದರರಲ್ಲಿ ಹೆಚ್ಚಿನವ್ರಿಗೆ ಓದುಬರಹ ಬರ್ತಿರಲಿಲ್ಲ ಮತ್ತು ಅವ್ರ ಭಾಷೆಯಲ್ಲಿ ನಮ್ಮ ಒಂದು ಪ್ರಕಾಶನವೂ ಇರ್ಲಿಲ್ಲ. ಇದ್ರ ಮಧ್ಯದಲ್ಲೇ ಅಮಿಸ್ ಭಾಷೆಯನ್ನ ಇಂಗ್ಲಿಷ್ ಅಕ್ಷರದಲ್ಲಿ ಬರೆಯೋದು ಶುರುವಾಗಿತ್ತು. ಈ ಸಹೋದರ ಸಹೋದರಿಯರಿಗೆ ಅವ್ರದ್ದೇ ಭಾಷೆಯಲ್ಲಿ ಓದೋಕೆ ಬರೆಯೋಕೆ ಕಲಿಸ್ಬೇಕು ಅಂತ ನಿರ್ಧರಿಸಿದ್ವಿ. ಇದಷ್ಟು ಸುಲಭ ಇರಲಿಲ್ಲ. ಓದುಬರಹ ಕಲಿತ ಮೇಲೆ ಸಹೋದರ ಸಹೋದರಿಯರು ಅವ್ರಾಗಿಯೇ ಯೆಹೋವನ ಬಗ್ಗೆ ಕಲಿತುಕೊಳ್ಳೋಕೆ ಶುರುಮಾಡಿದ್ರು. 1966 ರ ಆಸುಪಾಸಿನಲ್ಲಿ ಅಮಿಸ್ ಭಾಷೆಯ ಪ್ರಕಾಶನಗಳು ಲಭ್ಯವಾದವು. 1968 ರಲ್ಲಿ ಅಮಿಸ್ ಭಾಷೆಯ ಮೊದಲ ಕಾವಲಿನಬುರುಜು ಪತ್ರಿಕೆ ಮುದ್ರಣವಾಯ್ತು!
ಆದ್ರೆ ತೈವಾನ್ ಸರಕಾರ ಚೈನೀಸ್ ಭಾಷೆಯಲ್ಲಿ ಇಲ್ಲದ ಪ್ರಕಾಶನಗಳನ್ನು ವಿತರಿಸಬಾರದು ಅಂತ ನಿರ್ಬಂಧ ಹೇರಿತ್ತು. ಹಾಗಾಗಿ ಅಮಿಸ್ ಭಾಷೆಯ ಕಾವಲಿನಬುರುಜು ಪತ್ರಿಕೆಯನ್ನು ನಮ್ಮ ಸಹೋದರರಿಗೆ ತಲುಪಿಸಲಿಕ್ಕೆ ನಾವು ಬೇರೆಬೇರೆ ವಿಧಾನ ಬಳಸಿದ್ವಿ. ಉದಾಹರಣೆಗೆ, ಸ್ವಲ್ಪ ಸಮಯಕ್ಕೆ ಮ್ಯಾಂಡರೀನ್ ಚೈನೀಸ್ ಮತ್ತು ಅಮಿಸ್ ಎರಡೂ ಭಾಷೆಯಲ್ಲೂ ಇರುವಂಥ ಕಾವಲಿನಬುರುಜು ಪತ್ರಿಕೆಯನ್ನ ಬಳಸಿದ್ವಿ. ಇದ್ರ ಬಗ್ಗೆ ಯಾರಾದ್ರೂ ಹೆಚ್ಚು ಕೇಳಿದ್ರೂ ಸ್ಥಳೀಯ ಜನ್ರಿಗೆ ಚೈನೀಸ್ ಭಾಷೆ ಕಲಿಸ್ತಿದ್ದೇವೆ ಅಂತ ಹೇಳಬಹುದಿತ್ತು. ಆಗಿನಿಂದ ಯೆಹೋವನ ಸಂಘಟನೆ ಅಮಿಸ್ ಭಾಷೆಯಲ್ಲಿ ಪುಸ್ತಕ, ಪತ್ರಿಕೆಗಳನ್ನು ಪ್ರಕಾಶಿಸುತ್ತಲೇ ಅ. ಕಾ. 10:34, 35.
ಬಂದಿದೆ. ಇದ್ರಿಂದ ನಮ್ಮ ಪ್ರೀತಿಯ ಸಹೋದರ ಸಹೋದರಿಯರು ಬೈಬಲ್ ಸತ್ಯಗಳನ್ನ ಕಲಿಯೋಕಾಗಿದೆ.—ಸಭೆಯ ಶುದ್ಧೀಕರಣ
1960-70 ರ ದಶಕದಲ್ಲಿ ಅಮಿಸ್ ಸಹೋದರರಲ್ಲಿ ಅನೇಕರು ದೇವರ ನೀತಿ-ನಿಯಮದ ಪ್ರಕಾರ ನಡ್ಕೊಳ್ತಿರಲಿಲ್ಲ. ಅವ್ರಿಗೆ ಬೈಬಲ್ ತತ್ವಗಳು ಚೆನ್ನಾಗಿ ಅರ್ಥ ಆಗಿರ್ಲಿಲ್ಲ. ಕೆಲವ್ರು ಅನೈತಿಕ ಜೀವನ ನಡೆಸ್ತಿದ್ರು, ತುಂಬ ಕುಡಿತಾ ಇದ್ರು, ಸುಪಾರಿ-ತಂಬಾಕು ಸೇವನೆ ಮಾಡ್ತಿದ್ರು. ಹಾರ್ವೀ ಅನೇಕ ಸಭೆಗಳನ್ನ ಭೇಟಿ ಮಾಡಿ ಇಂಥ ವಿಷ್ಯಗಳ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ ಅನ್ನೋದನ್ನ ಸಹೋದರರಿಗೆ ಅರ್ಥ ಮಾಡಿಸೋಕೆ ತುಂಬ ಪ್ರಯತ್ನ ಹಾಕಿದ್ರು. ಈ ಕೆಲ್ಸದ ಮೇಲೆನೇ ಒಂದು ಸಭೆಗೆ ಹೋಗ್ತಿದ್ದಾಗ ಆರಂಭದಲ್ಲಿ ತಿಳಿಸಿದ ಘಟನೆ ನಡೆದಿದ್ದು.
ದೀನತೆ ಇದ್ದ ಸಹೋದರರು ಬದಲಾವಣೆ ಮಾಡ್ಕೊಳ್ಳೋಕೆ ಮನಸ್ಸು ಮಾಡಿದ್ರು. ಆದ್ರೆ ತುಂಬ ಜನ ಅದಕ್ಕೆ ಹಿಂಜರಿದ್ರು. ಕೇವಲ 20 ವರ್ಷದಲ್ಲೇ ತೈವಾನಿನಲ್ಲಿದ್ದ ಪ್ರಚಾರಕರ ಸಂಖ್ಯೆ 2,450 ರಿಂದ ಸುಮಾರು 900 ಕ್ಕೆ ಇಳಿದುಬಿಡ್ತು. ಇದ್ರಿಂದ ನಮಗೆ ತುಂಬ ನಿರುತ್ಸಾಹ ಆಯ್ತು. ಆದ್ರೆ ಸಂಘಟನೆಯಲ್ಲಿ ಅಶುದ್ಧತೆ ಇದ್ರೆ ಯೆಹೋವನ ಆಶೀರ್ವಾದ ಇರಲ್ಲ ಅಂತ ಗೊತ್ತಿತ್ತು. (2 ಕೊರಿಂ. 7:1) ಸ್ವಲ್ಪ ಸಮಯದ ನಂತ್ರ ಎಲ್ಲಾ ಸಭೆಗಳಲ್ಲೂ ಯೆಹೋವನನ್ನು ಸರಿಯಾದ ರೀತಿಯಲ್ಲಿ ಆರಾಧನೆ ಮಾಡೋದು ಶುರುವಾಯ್ತು. ಯೆಹೋವನ ಆಶೀರ್ವಾದದಿಂದ ಈಗ ತೈವಾನ್‌ನಲ್ಲಿ 11,000ಕ್ಕಿಂತ ಹೆಚ್ಚು ಪ್ರಚಾರಕರಿದ್ದಾರೆ.
1980 ರಿಂದ ಅಮಿಸ್ ಸಹೋದರ ಸಹೋದರಿಯರ ನಂಬಿಕೆ ಬಲವಾಯ್ತು. ಹಾಗಾಗಿ ಹಾರ್ವೀ ಚೈನೀಸ್ ಭಾಷೆ ಮಾತಾಡ್ತಿದ್ದ ಸಹೋದರರಿಗೆ ಹೆಚ್ಚು ಸಮಯ ಕೊಡಕ್ಕಾಯ್ತು. ಅನೇಕ ಸಹೋದರಿಯರ ಗಂಡಂದಿರು ಸತ್ಯದಲ್ಲಿ ಇರ್ಲಿಲ್ಲ. ಅಂಥವ್ರಿಗೆ ಸತ್ಯ ಕಲಿಸಿದ್ದು ಹಾರ್ವೀಗೆ ತುಂಬ ಸಂತೋಷ ಕೊಡ್ತು. ಒಬ್ಬ ಸಹೋದರಿಯ ಗಂಡ ಮೊದಲ ಸಲ ಯೆಹೋವನಿಗೆ ಪ್ರಾರ್ಥಿಸಿದಾಗ ಹಾರ್ವೀ ತುಂಬ ಖುಷಿಪಟ್ಟಿದ್ದು ನಂಗೆ ಈಗ್ಲೂ ನೆನಪಿದೆ. ಒಳ್ಳೇ ಮನ್ಸಿರೋ ಜನ್ರಿಗೆ ಸತ್ಯ ಕಲಿಸಿದ್ದಕ್ಕೆ ನಂಗೂ ತುಂಬ ಖುಷಿ ಸಿಕ್ತು. ನನ್ನ ಒಬ್ಬ ಬೈಬಲ್ ವಿದ್ಯಾರ್ಥಿಯ ಮಗ ಮತ್ತು ಮಗಳ ಜೊತೆ ತೈವಾನಿನ ಬ್ರಾಂಚ್‌ನಲ್ಲಿ ಕೆಲ್ಸ ಮಾಡೋ ಆಶೀರ್ವಾದ ನಂಗೆ ಸಿಕ್ತು.
ಅವ್ರನ್ನ ಕಳ್ಕೊಂಡೆ
ಹೆಚ್ಚುಕಡಿಮೆ 59 ವರ್ಷ ಸಂತೋಷದ ಜೀವನ ನಡೆಸಿದ ಮೇಲೆ 2010 ರ ಜನವರಿ 1 ರಂದು ನನ್ನ ಪ್ರೀತಿಯ ಹಾರ್ವೀ ತೀರಿಹೋದ್ರು. ಅವ್ರಿಗೆ ಕ್ಯಾನ್ಸರ್ ಇತ್ತು. ಅವ್ರು ಸುಮಾರು 60 ವರ್ಷ ಪೂರ್ಣ ಸಮಯ ಸೇವೆ ಮಾಡಿದ್ರು! ನಂಗೆ ಅವ್ರು ತುಂಬ ನೆನಪಾಗ್ತಾರೆ. ಆದ್ರೆ ಎರಡು ಸುಂದರ ದೇಶಗಳಲ್ಲಿ ಅವ್ರ ಜೊತೆ ಸೇವೆ ಮಾಡಿದ ಖುಷಿ ನನಗಿದೆ. ಏಷ್ಯಾದ ಎರಡು ಕಷ್ಟದ ಭಾಷೆಗಳನ್ನ ಮಾತಾಡೋಕೆ ನಾವು ಕಲಿತ್ವಿ. ಹಾರ್ವೀಯಂತೂ ಬರೆಯೋಕೂ ಕಲಿತ್ರು.
ಹಾರ್ವೀ ತೀರಿಹೋಗಿ ಸುಮಾರು 4 ವರ್ಷಗಳ ನಂತ್ರ ಆಡಳಿತ ಮಂಡಲಿ ನಂಗೆ ತುಂಬ ವಯಸ್ಸಾಗಿದ್ರಿಂದ ಆಸ್ಟ್ರೇಲಿಯಕ್ಕೆ ವಾಪಸ್ ಹೋಗೋಕೆ ಹೇಳ್ತು. ಆಗ ನಂಗೆ ತೈವಾನಿಂದ ಹೋಗೋಕೆ ಮನ್ಸಿರಲಿಲ್ಲ. ಆದ್ರೆ ಯೆಹೋವನ ಸಂಘಟನೆಗೆ ಯಾವುದೇ ಕಾರಣಕ್ಕೂ ಇಲ್ಲ ಅಂತ ಹೇಳಬಾರ್ದು ಅಂತ ಹಾರ್ವೀ ನಂಗೆ ಕಲಿಸಿದ್ರು. ಹಾಗಾಗಿ ನಾನು ಆಸ್ಟ್ರೇಲಿಯಕ್ಕೆ ಹೋದೆ. ಆಡಳಿತ ಮಂಡಲಿ ಮಾಡಿದ ತೀರ್ಮಾನ ಸರಿಯಾಗಿತ್ತು ಅಂತ ಆಮೇಲೆ ನಂಗೆ ಅರ್ಥ ಆಯ್ತು.
ಇವತ್ತು ನಾನು ಆಸ್ಟ್ರಲೇಷ್ಯಾ ಬ್ರಾಂಚ್‌ನಲ್ಲಿ ಕೆಲಸ ಮಾಡ್ತಿದ್ದೀನಿ. ಶನಿವಾರ-ಭಾನುವಾರ ಸ್ಥಳೀಯ ಸಭೆಯವ್ರ ಜೊತೆ ಸೇರಿ ಸೇವೆಗೆ ಹೋಗ್ತೀನಿ. ಬೆತೆಲ್‌ಗೆ ಚೈನೀಸ್ ಮತ್ತು ಜ್ಯಾಪನೀಸ್ ಭಾಷೆ ಮಾತಾಡುವವ್ರು ಬಂದ್ರೆ ಅವ್ರಿಗೆ ಬೆತೆಲ್ ಟೂರ್ ಮಾಡ್ತೀನಿ. ತೀರಿಹೋದವ್ರನ್ನ ಪುನಃ ಎಬ್ಬಿಸ್ತೀನಿ ಅಂತ ಯೆಹೋವ ಕೊಟ್ಟಿರೋ ಮಾತು ನೆರವೇರುವ ದಿನಕ್ಕಾಗಿ ನಾನು ಕಾಯ್ತಿದ್ದೀನಿ. ಯಾವುದೇ ಕಾರಣಕ್ಕೂ ಯೆಹೋವನಿಗೆ ಇಲ್ಲ ಅಂತ ಹೇಳಬಾರ್ದು ಅಂತ ತೀರ್ಮಾನ ಮಾಡಿದ್ದ ನನ್ನ ಹಾರ್ವೀ ಈಗ ಯೆಹೋವನ ಸ್ಮರಣೆಯಲ್ಲಿ ಜೋಪಾನವಾಗಿದ್ದಾರೆ ಅಂತ ನಂಗೆ ಗೊತ್ತು.—ಯೋಹಾ. 5:28, 29.
^ ಪ್ಯಾರ. 14 ಈಗ ತೈವಾನಿನ ಅಧಿಕೃತ ಭಾಷೆ ಚೈನೀಸ್. ಆದ್ರೆ ತುಂಬ ವರ್ಷಗಳ ತನಕ ಜ್ಯಾಪನೀಸ್ ಭಾಷೆನೇ ಅಧಿಕೃತ ಭಾಷೆಯಾಗಿತ್ತು. ಹಾಗಾಗಿ ಅಲ್ಲಿನ ಬೇರೆಬೇರೆ ಬುಡಕಟ್ಟಿನ ಜನಾಂಗಕ್ಕೆ ಸೇರಿದವ್ರು ಜ್ಯಾಪನೀಸ್ ಭಾಷೆ ಮಾತಾಡ್ತಾರೆ.