ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 5

“ಪ್ರತಿಯೊಬ್ಬ ಪುರುಷನಿಗೆ ಕ್ರಿಸ್ತ ಯಜಮಾನ”

“ಪ್ರತಿಯೊಬ್ಬ ಪುರುಷನಿಗೆ ಕ್ರಿಸ್ತ ಯಜಮಾನ”

“ಪ್ರತಿಯೊಬ್ಬ ಪುರುಷನಿಗೆ ಕ್ರಿಸ್ತ ಯಜಮಾನ.”—1 ಕೊರಿಂ. 11:3.

ಗೀತೆ 112 ಮಹಾ ದೇವರಾದ ಯೆಹೋವನು

ಕಿರುನೋಟ *

1. ಕೆಲವ್ರು ತಮ್ಮ ಹೆಂಡ್ತಿ ಮಕ್ಕಳ ಜೊತೆ ಹೇಗೆ ನಡ್ಕೊಳ್ತಾರೆ ಮತ್ತು ಯಾಕೆ?

ಕುಟುಂಬದ ಯಜಮಾನ ತನ್ನ ಹೆಂಡ್ತಿ ಮಕ್ಕಳ ಜೊತೆ ಹೇಗೆ ನಡ್ಕೊಬೇಕು ಅಂತ ನಿಮಗನಿಸುತ್ತೆ? ಕೆಲವ್ರು ತಾವು ಬೆಳೆದು ಬಂದ ಕುಟುಂಬದಲ್ಲಿ, ಸುತ್ತ ಇರೋ ಸಮಾಜದಲ್ಲಿ ಪುರುಷರು ತಮ್ಮ ಹೆಂಡ್ತಿ ಮಕ್ಕಳ ಜೊತೆ ನಡ್ಕೊಳ್ತಿದ್ದ ರೀತಿನ ನೋಡಿರ್ತಾರೆ. ಅದೇ ತರ ಇವ್ರೂ ನಡ್ಕೊತಾರೆ. ಯುರೋಪಿನ ಯಾನಿತಾ ಅನ್ನೋ ಸಹೋದರಿ ಹೀಗೆ ಹೇಳ್ತಾಳೆ: “ನಮ್ಮ ಕಡೆ ಜನ್ರು ಹೆಂಗಸ್ರನ್ನ ತುಂಬ ಕೀಳಾಗಿ ನೋಡ್ತಾರೆ. ಅವ್ರನ್ನ ಆಳುಗಳ ತರ ನಡೆಸ್ಕೊಳ್ತಾರೆ.” ಅಮೆರಿಕದಲ್ಲಿರೋ ಲೂಕ್‌ ಅನ್ನೋ ಸಹೋದರ ಹೀಗೆ ಹೇಳ್ತಾರೆ: “ಹೆಣ್ಣುಮಕ್ಕಳಿಗೆ ತಮ್ಮ ಅಭಿಪ್ರಾಯ ಹೇಳೋ ಹಕ್ಕಿಲ್ಲ, ಅವ್ರು ಸುಮ್ಮನಿರಬೇಕು ಅಂತ ಕೆಲವು ಅಪ್ಪಂದಿರು ತಮ್ಮ ಗಂಡುಮಕ್ಕಳಿಗೆ ಕಲಿಸ್ತಾರೆ.” ಆದ್ರೆ ಹೆಂಡ್ತಿ ಜೊತೆ ಗಂಡ ಈ ತರ ನಡ್ಕೊಳ್ಳೋದು ಯೆಹೋವನಿಗೆ ಇಷ್ಟ ಇಲ್ಲ. (ಮಾರ್ಕ 7:13 ಹೋಲಿಸಿ.) ಹಾಗಾದ್ರೆ ಒಬ್ಬ ಪುರುಷ ಕುಟುಂಬದ ಒಳ್ಳೇ ಯಜಮಾನ ಆಗೋಕೆ ಏನು ಮಾಡ್ಬೇಕು?

2. ಕುಟುಂಬದ ಯಜಮಾನ ಏನನ್ನ ತಿಳ್ಕೊಳ್ಳಬೇಕು ಮತ್ತು ಯಾಕೆ?

2 ಒಬ್ಬ ಪುರುಷ ಕುಟುಂಬದ ಒಳ್ಳೇ ಯಜಮಾನ ಆಗ್ಬೇಕಂದ್ರೆ ಮೊದ್ಲಿಗೆ ಯೆಹೋವ ತನ್ನಿಂದ ಏನು ಬಯಸ್ತಾನೆ ಅನ್ನೋದನ್ನ ಅವನು ಅರ್ಥ ಮಾಡ್ಕೋಬೇಕು. ಅಷ್ಟೇ ಅಲ್ಲ, ಈ ಅಧಿಕಾರವನ್ನ ಯೆಹೋವ ತನಗೆ ಯಾಕೆ ಕೊಟ್ಟಿದ್ದಾನೆ ಮತ್ತು ಈ ವಿಷ್ಯದಲ್ಲಿ ತಾನು ಯೆಹೋವ ಮತ್ತು ಯೇಸುವಿಂದ ಏನು ಕಲಿಬಹುದು ಅನ್ನೋದನ್ನೂ ತಿಳ್ಕೊಬೇಕು. ಒಬ್ಬ ಪುರುಷ ಯಾಕೆ ಈ ಎಲ್ಲಾ ವಿಷ್ಯಗಳನ್ನ ತಿಳ್ಕೊಳ್ಳಲೇಬೇಕು? ಯಾಕಂದ್ರೆ ಯೆಹೋವ ಅವನಿಗೆ ಸ್ವಲ್ಪ ಮಟ್ಟಿಗಿನ ಅಧಿಕಾರ ಕೊಟ್ಟಿದ್ದಾನೆ ಮತ್ತು ಆ ಅಧಿಕಾರವನ್ನ ಸರಿಯಾಗಿ ಬಳಸ್ಬೇಕು ಅಂತ ಬಯಸ್ತಾನೆ.—ಲೂಕ 12:48ಬಿ.

ಗಂಡನಿಗೆ ಯೆಹೋವ ಯಾವ ಅಧಿಕಾರ ಕೊಟ್ಟಿದ್ದಾನೆ?

3. ಒಂದನೇ ಕೊರಿಂಥ 11:3 ನೇ ವಚನ ಅಧಿಕಾರದ ಬಗ್ಗೆ ಏನು ತಿಳ್ಸುತ್ತೆ?

3 ಒಂದನೇ ಕೊರಿಂಥ 11:3 ಓದಿ. ಈ ವಚನ ಯಾರ್ಯಾರಿಗೆ ಯಾವ್ಯಾವ ಅಧಿಕಾರ ಇದೆ ಅಂತ ವಿವರಿಸುತ್ತೆ. ಎಲ್ರ ಮೇಲೆ ಅಧಿಕಾರ ಇರೋದು ಯೆಹೋವನಿಗೆ. ತನ್ನ ಅಧೀನತೆಯಲ್ಲಿರೋ ಬೇರೆಯವ್ರಿಗೂ ಯೆಹೋವ ಸ್ವಲ್ಪ ಮಟ್ಟಿಗಿನ ಅಧಿಕಾರ ಕೊಟ್ಟಿದ್ದಾನೆ. ಆದ್ರೆ ಅಧಿಕಾರ ಪಡ್ಕೊಂಡಿರುವವ್ರು ಅದನ್ನ ಬಳಸೋ ವಿಷ್ಯದಲ್ಲಿ ಯೆಹೋವನಿಗೆ ಲೆಕ್ಕ ಒಪ್ಪಿಸ್ಬೇಕು. (ರೋಮ. 14:10; ಎಫೆ. 3:14, 15) ಯೆಹೋವ ಯೇಸುಗೆ ಸಭೆ ಮೇಲೆ ಅಧಿಕಾರ ಕೊಟ್ಟಿದ್ದಾನೆ. ಆದ್ರೆ ಸಭೆಯವ್ರ ಜೊತೆ ನಡ್ಕೊಳ್ಳೋ ವಿಷ್ಯದಲ್ಲಿ ಯೇಸು ಯೆಹೋವನಿಗೆ ಲೆಕ್ಕ ಒಪ್ಪಿಸ್ಬೇಕು. (1 ಕೊರಿಂ. 15:27) ಯೆಹೋವ ಗಂಡನಿಗೆ ಹೆಂಡ್ತಿ ಮಕ್ಕಳ ಮೇಲೆ ಅಧಿಕಾರ ಕೊಟ್ಟಿದ್ದಾನೆ. ಆದ್ರೆ ಗಂಡ ತನ್ನ ಕುಟುಂಬದ ಜೊತೆ ನಡ್ಕೊಳ್ಳೋ ವಿಷ್ಯದಲ್ಲಿ ಯೆಹೋವ ಮತ್ತು ಯೇಸು ಇಬ್ರಿಗೂ ಲೆಕ್ಕ ಒಪ್ಪಿಸ್ಬೇಕು.—1 ಪೇತ್ರ 3:7.

4. ಯೆಹೋವ ಮತ್ತು ಯೇಸುಗೆ ಯಾವ ಅಧಿಕಾರ ಇದೆ?

4 ಸ್ವರ್ಗದಲ್ಲಿರೋ ಮತ್ತು ಭೂಮಿಯಲ್ಲಿರೋ ಎಲ್ರಿಗೂ ಯೆಹೋವ ಯಜಮಾನ ಆಗಿರೋದ್ರಿಂದ ತನ್ನ ಮಕ್ಕಳಿಗೆ ನಿಯಮಗಳನ್ನ ಕೊಡೋ ಹಕ್ಕು ಆತನಿಗಿದೆ ಮತ್ತು ಅದನ್ನು ಜಾರಿಗೆ ತರೋ ಅಧಿಕಾರನೂ ಇದೆ. (ಯೆಶಾ. 33:22) ಯೇಸು ಕ್ರೈಸ್ತ ಸಭೆಯ ಯಜಮಾನ ಆಗಿರೋದ್ರಿಂದ ಸಭೆಯವ್ರಿಗೆ ನಿಯಮಗಳನ್ನ ಕೊಡೋ ಹಕ್ಕು ಮತ್ತು ಅದನ್ನ ಜಾರಿಗೆ ತರೋ ಅಧಿಕಾರ ಅವನಿಗಿದೆ.—ಗಲಾ. 6:2; ಕೊಲೊ. 1:18-20.

5. (ಎ) ಕ್ರೈಸ್ತ ಕುಟುಂಬದ ಯಜಮಾನನಿಗೆ ಯಾವ ಅಧಿಕಾರ ಇದೆ? (ಬಿ) ಅವನ ಅಧಿಕಾರಕ್ಕೆ ಯಾವ ಮಿತಿ ಇದೆ?

5 ಯೆಹೋವ ಮತ್ತು ಯೇಸುಗೆ ಇರುವಂತೆಯೇ ಕ್ರೈಸ್ತ ಕುಟುಂಬದ ಯಜಮಾನನಿಗೂ ತನ್ನ ಕುಟುಂಬದವ್ರಿಗೆ ನಿಯಮಗಳನ್ನ ಕೊಡೋ ಅಧಿಕಾರ ಇದೆ. (ರೋಮ. 7:2; ಎಫೆ. 6:4) ಆದ್ರೆ ಅವನಿಗಿರೋ ಅಧಿಕಾರಕ್ಕೆ ಕೆಲವು ಮಿತಿ ಇದೆ. ಉದಾಹರಣೆಗೆ, ಅವನು ತನ್ನ ಮನಸ್ಸಿಗೆ ಬಂದಂತೆ ನಿರ್ಧಾರಗಳನ್ನ ಮಾಡೋಕೆ ಆಗಲ್ಲ. ದೇವರ ವಾಕ್ಯದಲ್ಲಿರೋ ತತ್ವವನ್ನ ಆಧರಿಸಿ ನಿಯಮಗಳನ್ನ ಮಾಡ್ಬೇಕು. (ಜ್ಞಾನೋ. 3:5, 6) ತನ್ನ ಕುಟುಂಬದ ಸದಸ್ಯರಲ್ಲದವ್ರಿಗೆ ‘ಇದನ್ನ ಮಾಡಿ, ಅದನ್ನ ಮಾಡ್ಬೇಡಿ’ ಅಂತ ಹೇಳೋ ಅಧಿಕಾರ ಅವನಿಗಿಲ್ಲ. (ರೋಮ. 14:4) ಅವನ ಮಗನೋ ಮಗಳೋ ಬೆಳೆದು ದೊಡ್ಡವರಾಗಿ ಮದ್ವೆ ಮಾಡ್ಕೊಂಡು ಹೋದ್ರೆ ಅವ್ರು ಅವನ ಅಧಿಕಾರದ ಕೆಳಗೆ ಇರೋದಿಲ್ಲ. ಆದ್ರೆ ಆ ಮಕ್ಕಳಿಗೆ ತಮ್ಮ ತಂದೆಯ ಮೇಲೆ ಗೌರವ ಇದ್ದೇ ಇರುತ್ತೆ.—ಮತ್ತಾ. 19:5.

ಯೆಹೋವ ಗಂಡನಿಗೆ ಯಾಕೆ ಅಧಿಕಾರ ಕೊಟ್ಟಿದ್ದಾನೆ?

6. ಯೆಹೋವ ಕೆಲವ್ರಿಗೆ ಯಾಕೆ ಅಧಿಕಾರ ಕೊಟ್ಟಿದ್ದಾನೆ?

6 ಯೆಹೋವನಿಗೆ ತನ್ನ ಮಕ್ಕಳ ಮೇಲೆ ಪ್ರೀತಿ ಇರೋದ್ರಿಂದಲೇ ಕೆಲವ್ರಿಗೆ ಅಧಿಕಾರ ಕೊಟ್ಟಿದ್ದಾನೆ. ಇದು ಆತನಿಂದ ಸಿಕ್ಕಿರೋ ಉಡುಗೊರೆ. ಈ ಏರ್ಪಾಡಿಂದ ಯೆಹೋವನ ಕುಟುಂಬದಲ್ಲಿ ಶಾಂತಿ ಇದೆ ಮತ್ತು ಎಲ್ಲಾ ವಿಷ್ಯಗಳು ವ್ಯವಸ್ಥಿತವಾಗಿ ನಡಿತಿದೆ. (1 ಕೊರಿಂ. 14:33, 40) ಒಂದ್ವೇಳೆ ನಮ್ಮ ಕುಟುಂಬನ ಯಾರು ನೋಡ್ಕೊತಾರೆ, ಯಾರು ತೀರ್ಮಾನ ಮಾಡ್ತಾರೆ ಅನ್ನೋದು ಗೊತ್ತಿಲ್ಲದೇ ಹೋದ್ರೆ ಪರಿಸ್ಥಿತಿ ಹೇಗಿರುತ್ತೆ ಅಂತ ಸ್ವಲ್ಪ ಯೋಚಿಸಿ. ಕುಟುಂಬದಲ್ಲಿ ಎಲ್ಲಾ ಅಸ್ತವ್ಯಸ್ತವಾಗಿರುತ್ತೆ ಮತ್ತು ಯಾರೂ ಖುಷಿಯಾಗಿರಲ್ಲ.

7. ಎಫೆಸ 5:25, 28 ರ ಪ್ರಕಾರ ಗಂಡಂದಿರು ಹೆಂಡ್ತಿಯರ ಜೊತೆ ಹೇಗೆ ನಡ್ಕೊಬೇಕು ಅಂತ ಯೆಹೋವ ಬಯಸ್ತಾನೆ?

7 ಪುರುಷರಿಗೆ ಕುಟುಂಬದಲ್ಲಿ ಅಧಿಕಾರ ಇರೋದು ಒಳ್ಳೇ ಏರ್ಪಾಡೇ. ಆದ್ರೂ ಯಾಕೆ ಸ್ತ್ರೀಯರಿಗೆ ತಮ್ಮ ಗಂಡ ತಮ್ಮ ಮೇಲೆ ದಬ್ಬಾಳಿಕೆ ಮಾಡ್ತಾರೆ, ದೌರ್ಜನ್ಯ ನಡೆಸ್ತಾರೆ ಅನ್ಸುತ್ತೆ? ಯಾಕಂದ್ರೆ ಇವತ್ತು ತುಂಬ ಪುರುಷರು ಯೆಹೋವ ಕುಟುಂಬಕ್ಕೆ ಕೊಟ್ಟಿರೋ ನಿಯಮಗಳನ್ನ ಪಾಲಿಸದೆ ಜನ ಮಾಡಿರೋ ಸಂಪ್ರದಾಯ, ಪದ್ಧತಿಗಳನ್ನ ಪಾಲಿಸ್ತಾರೆ. ತಮ್ಮ ಸ್ವಾರ್ಥಕ್ಕಾಗಿ ಹೆಂಡ್ತಿಯರ ಜೊತೆ ಕ್ರೂರವಾಗಿ ನಡ್ಕೊಳ್ತಾರೆ. ಅಥ್ವಾ ಹೆಂಡ್ತಿಯರನ್ನ ಕೆಟ್ಟದಾಗಿ ನಡೆಸ್ಕೊತಾರೆ. ಉದಾಹರಣೆಗೆ, ಒಬ್ಬ ಗಂಡ ತನ್ನ ಆತ್ಮಗೌರವ ಹೆಚ್ಚಿಸಿಕೊಳ್ಳೋಕೆ ಅಥ್ವಾ ಜನ್ರ ಮುಂದೆ ತಾನೊಬ್ಬ ನಿಜವಾದ ಗಂಡಸು ಅಂತ ತೋರಿಸಿಕೊಳ್ಳೋಕೆ ಹೆಂಡ್ತಿ ಮೇಲೆ ದಬ್ಬಾಳಿಕೆ ಮಾಡ್ಬಹುದು. ಬಲವಂತವಾಗಿ ಪ್ರೀತಿ ಪಡ್ಕೊಳ್ಳೋಕೆ ಆಗದಿದ್ರೂ ಹೆದರಿಸಿ ಬೆದರಿಸಿ ಹೆಂಡ್ತಿನ ಕಂಟ್ರೋಲ್‌ನಲ್ಲಿ ಇಟ್ಕೊಳ್ತೀನಿ ಅಂತ ಯೋಚಿಸ್ಬಹುದು. * ಈ ರೀತಿಯ ಯೋಚನೆ, ನಡತೆ ತುಂಬ ದೊಡ್ಡ ತಪ್ಪು. ಯಾಕಂದ್ರೆ ಈ ತರ ನಡ್ಕೊಳ್ಳುವವ್ರು ಸ್ತ್ರೀಯರಿಗೆ ಕೊಡ್ಬೇಕಾದ ಗೌರವ ಕೊಡಲ್ಲ. ಜೊತೆಗೆ ಯೆಹೋವ ತಮ್ಮಿಂದ ಬಯಸಿದ್ದನ್ನೂ ಮಾಡಲ್ಲ.—ಎಫೆಸ 5:25, 28 ಓದಿ.   

ಒಬ್ಬ ಪುರುಷ ಒಳ್ಳೇ ಯಜಮಾನ ಆಗಲು ಏನು ಮಾಡ್ಬೇಕು?

8. ಒಬ್ಬ ಪುರುಷ ಒಳ್ಳೇ ಯಜಮಾನ ಆಗಲು ಏನು ಮಾಡ್ಬೇಕು?

8 ಯೆಹೋವ ಮತ್ತು ಯೇಸು ತಮಗಿರೋ ಅಧಿಕಾರವನ್ನ ಬಳಸೋ ತರನೇ ಕುಟುಂಬದ ಯಜಮಾನ ತನ್ನ ಅಧಿಕಾರವನ್ನ ಬಳಸಿದ್ರೆ ಆಗ ಅವನು ಒಳ್ಳೇ ಯಜಮಾನ ಆಗ್ತಾನೆ. ಈಗ ನಾವು ಯೆಹೋವ ಮತ್ತು ಯೇಸು ತೋರಿಸಿರೋ ಎರಡು ಗುಣಗಳ ಬಗ್ಗೆ ಚರ್ಚಿಸೋಣ. ಜೊತೆಗೆ ಈ ಗುಣಗಳನ್ನ ಕುಟುಂಬದ ಯಜಮಾನ ಹೇಗೆ ತನ್ನ ಕುಟುಂಬದಲ್ಲಿ ತೋರಿಸ್ಬಹುದು ಅಂತ ನೋಡೋಣ.

9. ಯೆಹೋವ ಹೇಗೆ ದೀನತೆ ತೋರಿಸ್ತಾನೆ?

9 ದೀನತೆ. ಇರೋರಲ್ಲೇ ತುಂಬ ಬುದ್ಧಿವಂತನಂದ್ರೆ ಅದು ಯೆಹೋವ ದೇವ್ರೇ. ಆದ್ರೂ ಆತ ತನ್ನ ಸೇವಕರ ಅಭಿಪ್ರಾಯಗಳನ್ನ ಕೇಳಿಸ್ಕೊಳ್ತಾನೆ. (ಆದಿ. 18:23, 24, 32) ತನ್ನ ಅಧಿಕಾರದ ಕೆಳಗಿರುವವ್ರ ಸಲಹೆನ ಕೇಳ್ತಾನೆ. (1 ಅರ. 22:19-22) ಯೆಹೋವ ಪರಿಪೂರ್ಣ ದೇವ್ರು. ಆದ್ರೆ ಈಗ ಆತ ನಮ್ಮಿಂದ ಪರಿಪೂರ್ಣತೆಯನ್ನ ನಿರೀಕ್ಷಿಸಲ್ಲ. ನಮ್ಮಂಥ ಅಪರಿಪೂರ್ಣ ಮನುಷ್ಯರಿಗೆ ಸಹಾಯ ಮಾಡ್ತಾನೆ. (ಕೀರ್ತ. 113:6, 7) ನಿಜ ಹೇಳ್ಬೇಕಂದ್ರೆ ಬೈಬಲ್‌ ಯೆಹೋವನನ್ನ “ಸಹಾಯಕ” ಅಂತ ವರ್ಣಿಸುತ್ತೆ. (ಕೀರ್ತ. 27:9; ಇಬ್ರಿ. 13:6) ರಾಜ ದಾವೀದ ತನ್ನ ಸಾಧನೆಗಳಿಗೆ ಯೆಹೋವನ ದೀನತೆ ಮತ್ತು ಆತನ ಸಹಾಯನೇ ಕಾರಣ ಅಂತ ಹೇಳಿದ.—2 ಸಮು. 22:36.

10. ಯೇಸು ಹೇಗೆ ದೀನತೆ ತೋರಿಸಿದ?

10 ಯೇಸುಗೂ ತುಂಬ ದೀನತೆ ಇದೆ. ಅವನು ಶಿಷ್ಯರಿಗೆ ಒಡೆಯ ಮತ್ತು ಗುರು ಆಗಿದ್ರೂ ಅವರ ಪಾದಗಳನ್ನ ತೊಳೆದ. ಈ ಘಟನೆಯನ್ನ ಯೆಹೋವ ಬೈಬಲಿನಲ್ಲಿ ಬರೆಸಿರೋಕೆ ಒಂದು ಕಾರಣ ಏನು? ಇದನ್ನ ಓದಿ ಎಲ್ರೂ, ಕುಟುಂಬದ ಯಜಮಾನ ಕೂಡ ಇದೇ ತರ ನಡ್ಕೊಬೇಕು ಅನ್ನೋ ಕಾರಣಕ್ಕೆ ಬರೆಸಿಟ್ಟಿದ್ದಾನೆ. ಸ್ವತಃ ಯೇಸುನೂ ಹೀಗೆ ಹೇಳಿದ: “ನಾನು ಮಾಡಿದ ತರ ನೀವು ಮಾಡಬೇಕಂತಾನೇ ಒಂದು ಮಾದರಿ ಇಟ್ಟೆ.” (ಯೋಹಾ. 13:12-17) ಯೇಸುಗೆ ತುಂಬ ಅಧಿಕಾರ ಇದ್ರೂ ಬೇರೆಯವ್ರು ತನ್ನ ಸೇವೆ ಮಾಡ್ಬೇಕು ಅಂತ ಅವನು ಯಾವತ್ತೂ ಬಯಸಲಿಲ್ಲ. ಬದ್ಲಿಗೆ ಅವನೇ ಬೇರೆಯವ್ರ ಸೇವೆ ಮಾಡಿದ.—ಮತ್ತಾ. 20:28.

ದೀನತೆ ಮತ್ತು ಪ್ರೀತಿ ಇರೋ ಕುಟುಂಬದ ಯಜಮಾನ ಮನೆಕೆಲಸದಲ್ಲೂ ಕೈಜೋಡಿಸ್ತಾನೆ ಮತ್ತು ಕುಟುಂಬದವ್ರು ಯೆಹೋವನಿಗೆ ಆಪ್ತರಾಗೋಕೆ ಸಹಾಯ ಮಾಡ್ತಾನೆ (ಪ್ಯಾರ 11, 13 ನೋಡಿ)

11. ದೀನತೆ ವಿಷ್ಯದಲ್ಲಿ ಯೆಹೋವ ಮತ್ತು ಯೇಸು ಇಟ್ಟ ಮಾದರಿಯಿಂದ ಕುಟುಂಬದ ಯಜಮಾನ ಯಾವ ಪಾಠ ಕಲಿಬಹುದು?

11 ನಾವೇನು ಕಲಿಬಹುದು? ಒಬ್ಬ ಕುಟುಂಬದ ಯಜಮಾನ ದೀನನಾಗಿದ್ರೆ ಅದನ್ನ ಅವನು ಅನೇಕ ರೀತಿಯಲ್ಲಿ ತೋರಿಸ್ತಾನೆ. ಉದಾಹರಣೆಗೆ, ಹೆಂಡ್ತಿ ಮಕ್ಕಳು ತಪ್ಪೇ ಮಾಡಬಾರ್ದು ಅಂತ ಅವನು ನಿರೀಕ್ಷಿಸಲ್ಲ. ಹೆಂಡ್ತಿ ಮಕ್ಕಳು ಅವನ ಅಭಿಪ್ರಾಯನ ಒಪ್ಪದೇ ಇರುವಾಗ್ಲೂ ಅವರ ಅಭಿಪ್ರಾಯಗಳನ್ನ ಕೇಳಿಸ್ಕೊಳ್ಳೋಕೆ ಮನಸ್ಸು ಮಾಡ್ತಾನೆ. ಅಮೆರಿಕದಲ್ಲಿರೋ ಮರ್ಲಿ ಅನ್ನೋ ಸಹೋದರಿ ಹೀಗೆ ಹೇಳ್ತಾಳೆ: “ಕೆಲ್ವೊಮ್ಮೆ ನಂಗೂ ನಮ್ಮ ಯಜಮಾನ್ರಿಗೂ ಬೇರೆಬೇರೆ ಅಭಿಪ್ರಾಯ ಇರುತ್ತೆ. ಆದ್ರೂ ಅವ್ರು ನನ್ನ ಅಭಿಪ್ರಾಯನ ಕೇಳ್ತಾರೆ ಮತ್ತು ಒಂದು ತೀರ್ಮಾನ ತಗೊಳ್ಳೋ ಮುಂಚೆ ನನ್ನ ಅಭಿಪ್ರಾಯದ ಬಗ್ಗೆನೂ ಯೋಚಿಸ್ತಾರೆ. ಆಗ ನನ್ಗೆ ‘ಅವ್ರು ನನ್ನನ್ನ ಗೌರವಿಸ್ತಾರೆ, ನಾನು ಅವ್ರಿಗೆ ತುಂಬ ಮುಖ್ಯ’ ಅಂತ ಅನಿಸುತ್ತೆ.” ದೀನತೆ ಇರೋ ಗಂಡ ಮನೆಕೆಲಸಗಳನ್ನ ಮಾಡೋಕೂ ಹಿಂಜರಿಯಲ್ಲ. ಕೆಲವು ಕಡೆ ಮನೆಕೆಲಸ ಏನಿದ್ರೂ ಹೆಂಗಸ್ರು ಮಾಡ್ಬೇಕು ಅಂತ ನೆನಸ್ತಾರೆ. ಅಂಥ ಕಡೆಯಿರೋ ಗಂಡಸ್ರಿಗೆ ಇದನ್ನ ಮಾಡೋಕೆ ಸ್ವಲ್ಪ ಕಷ್ಟ ಆಗ್ಬಹುದು. ಯಾಕೆ? ರೇಚಲ್‌ ಅನ್ನೋ ಸಹೋದರಿ ಇದ್ರ ಬಗ್ಗೆ ಹೀಗೆ ಹೇಳ್ತಾಳೆ: “ನಮ್ಮ ಸಂಸ್ಕೃತಿಯಲ್ಲಿ ಗಂಡ ಏನಾದ್ರೂ ಪಾತ್ರೆ ತೊಳೆದ್ರೆ, ಮನೆ ಕ್ಲೀನ್‌ ಮಾಡಿದ್ರೆ ಅಕ್ಕಪಕ್ಕದ ಮನೆಯವ್ರು ಮತ್ತು ಸಂಬಂಧಿಕರು ‘ಗಂಡಸ್ರ ಲಕ್ಷಣನಾ ಇದು? ಇವ್ನು ಅಮ್ಮಾವ್ರ ಗಂಡ ಇರಬೇಕು’ ಅಂತ ನೆನಸ್ತಾರೆ.” ನೀವಿರೋ ಸಮಾಜದಲ್ಲಿ ಜನ ಈ ತರ ಯೋಚಿಸ್ತಿದ್ರೆ ಯೇಸು ತನ್ನ ಶಿಷ್ಯರ ಪಾದಗಳನ್ನ ತೊಳೆದ ಅನ್ನೋದನ್ನ ಮರೆಯಬೇಡಿ. ಅದು ಆಳುಗಳು ಮಾಡೋ ಕೆಲ್ಸ ಅಂತ ಜನ ನೆನಸಿದ್ರೂ ಯೇಸು ಅದನ್ನ ಮಾಡೋಕೆ ಹಿಂಜರಿಲಿಲ್ಲ. ಒಬ್ಬ ಒಳ್ಳೇ ಯಜಮಾನನಿಗೆ ಬೇರೆಯವ್ರು ತನ್ನ ಬಗ್ಗೆ ಏನು ನೆನಸ್ತಾರೆ ಅನ್ನೋದು ಮುಖ್ಯವಾಗಿರಲ್ಲ, ತನ್ನ ಹೆಂಡ್ತಿ ಮಕ್ಕಳ ಖುಷಿ ಮುಖ್ಯವಾಗಿರುತ್ತೆ. ಒಳ್ಳೇ ಯಜಮಾನನಿಗೆ ದೀನತೆ ಜೊತೆ ಇನ್ಯಾವ ಗುಣ ಇರಬೇಕು?

12. ಯೆಹೋವ ಮತ್ತು ಯೇಸು ನಮ್ಮ ಮೇಲಿರೋ ಪ್ರೀತಿಯಿಂದ ಏನೆಲ್ಲಾ ಮಾಡಿದ್ದಾರೆ?

12 ಪ್ರೀತಿ. ಯೆಹೋವ ಏನೇ ಮಾಡಿದ್ರೂ ಅದಕ್ಕೆ ನಮ್ಮ ಮೇಲಿರೋ ಪ್ರೀತಿನೇ ಕಾರಣ. (1 ಯೋಹಾ. 4:7, 8) ಆತ ನಮ್ಮೆಲ್ಲಾ ಅಗತ್ಯಗಳನ್ನ ಪೂರೈಸ್ತಾನೆ. ನಾವು ಆತನಿಗೆ ಆಪ್ತರಾಗೋಕೆ ಏನೆಲ್ಲಾ ಬೇಕೋ ಅದನ್ನ ಆತ ತನ್ನ ವಾಕ್ಯವಾದ ಬೈಬಲ್‌ ಮತ್ತು ಸಂಘಟನೆಯ ಮೂಲಕ ಕೊಡ್ತಿದ್ದಾನೆ. ನಮ್ಮ ಮೇಲೆ ಆತನಿಗೆ ಪ್ರೀತಿ ಇದೆ ಅನ್ನೋದನ್ನ ಬೇರೆಬೇರೆ ರೀತಿಯಲ್ಲಿ ತೋರಿಸ್ತಾನೆ. ನಮ್ಮ ಜೀವನಕ್ಕೆ ಬೇಕಾದ ಅಗತ್ಯಗಳನ್ನೂ ಕೊಡ್ತಾನಾ? ‘ನಮ್ಮ ಖುಷಿಗಾಗಿ ಎಲ್ಲವನ್ನೂ ತುಂಬಿತುಳುಕುವಷ್ಟು ಕೊಡ್ತಾನೆ’ ಅಂತ ಬೈಬಲ್‌ ಹೇಳುತ್ತೆ. (1 ತಿಮೊ. 6:17) ನಾವು ತಪ್ಪು ಮಾಡಿದಾಗ ನಮ್ಮನ್ನ ಪ್ರೀತಿಸೋದನ್ನ ನಿಲ್ಲಿಸಲ್ಲ, ನಮ್ಮನ್ನ ತಿದ್ದುತ್ತಾನೆ. ನಮ್ಮ ಮೇಲಿನ ಪ್ರೀತಿಯಿಂದ ಯೇಸುನ ಬಿಡುಗಡೆ ಬೆಲೆಯಾಗಿ ಕೊಟ್ಟಿದ್ದಾನೆ. ಯೇಸುಗೂ ನಾವಂದ್ರೆ ತುಂಬ ಪ್ರೀತಿ. ನಮಗೋಸ್ಕರ ತನ್ನ ಜೀವವನ್ನೇ ಕೊಟ್ಟಿದ್ದಾನೆ. (ಯೋಹಾ. 3:16; 15:13) ನಿಷ್ಠಾವಂತ ಸೇವಕರ ಮೇಲೆ ಯೆಹೋವ ಮತ್ತು ಯೇಸುಗಿರೋ ಪ್ರೀತಿಯ ಬಂಧವನ್ನ ಯಾವುದ್ರಿಂದಲೂ ಯಾರಿಂದಲೂ ಮುರಿಯೋಕಾಗಲ್ಲ.—ಯೋಹಾ. 13:1; ರೋಮ. 8:35, 38, 39.

13. ಕುಟುಂಬದ ಯಜಮಾನನಿಗೆ ಕುಟುಂಬದವ್ರ ಮೇಲೆ ಯಾಕೆ ಪ್ರೀತಿ ಇರಬೇಕು? (“ ಮದ್ವೆಯಾದ ಹೊಸದ್ರಲ್ಲಿ ಹೆಂಡ್ತಿಯ ಗೌರವ ಸಂಪಾದಿಸೋಕೆ ಗಂಡ ಏನು ಮಾಡ್ಬೇಕು?” ಚೌಕ ನೋಡಿ.)

13 ನಾವೇನು ಕಲಿಬಹುದು? ಕುಟುಂಬದ ಯಜಮಾನ ಏನೇ ಮಾಡಿದ್ರೂ ಅದಕ್ಕೆ ಪ್ರೀತಿನೇ ಪ್ರೇರಣೆ ಆಗ್ಬೇಕು. ಈ ಗುಣ ಯಾಕೆ ಅಷ್ಟು ಮುಖ್ಯ? ಇದ್ರ ಬಗ್ಗೆ ಅಪೊಸ್ತಲ ಯೋಹಾನ ಹೀಗೆ ಹೇಳ್ತಾನೆ: “ಕಣ್ಣಿಗೆ ಕಾಣೋ ಸಹೋದರನನ್ನ ಪ್ರೀತಿ ಮಾಡಿಲ್ಲಾಂದ್ರೆ ಕಣ್ಣಿಗೆ ಕಾಣದ ದೇವರನ್ನ ಹೇಗೆ ಪ್ರೀತಿ ಮಾಡಕ್ಕಾಗುತ್ತೆ?” (1 ಯೋಹಾ. 4:11, 20) ಅದ್ರಲ್ಲೂ ಯೆಹೋವ, ಯೇಸು ತರ ಇರಬೇಕು ಅಂತ ಬಯಸುವಂಥ ಮತ್ತು ತನ್ನ ಕುಟುಂಬನ ಪ್ರೀತಿಸುವಂಥ ಒಬ್ಬ ಪುರುಷ ತನ್ನ ಕುಟುಂಬದವ್ರ ಎಲ್ಲಾ ಅಗತ್ಯಗಳನ್ನ ನೋಡ್ಕೊತಾನೆ. ಅಂದ್ರೆ ಅವ್ರು ಯೆಹೋವನಿಗೆ ಆಪ್ತರಾಗೋಕೆ ಸಹಾಯ ಮಾಡ್ತಾನೆ, ತಾನು ಅವ್ರನ್ನ ತುಂಬ ಪ್ರೀತಿಸ್ತೇನೆ ಅಂತ ತೋರಿಸಿಕೊಡ್ತಾನೆ ಮತ್ತು ಅವ್ರ ಜೀವನಕ್ಕೆ ಬೇಕಾದ ಅಗತ್ಯಗಳನ್ನೂ ಪೂರೈಸ್ತಾನೆ. (1 ತಿಮೊ. 5:8) ಅವನು ತನ್ನ ಮಕ್ಕಳಿಗೆ ತರಬೇತಿ ಕೊಡ್ತಾನೆ, ಅವ್ರನ್ನ ತಿದ್ದುತ್ತಾನೆ. ಅಷ್ಟೇ ಅಲ್ಲ, ಯೆಹೋವನಿಗೆ ಮಹಿಮೆ ತರುವಂಥ ಮತ್ತು ತನ್ನ ಕುಟುಂಬಕ್ಕೆ ಪ್ರಯೋಜನ ಆಗುವಂಥ ತೀರ್ಮಾನಗಳನ್ನ ಯಾವಾಗ್ಲೂ ಮಾಡ್ತಾನೆ. ಈಗ ನಾವು ಕುಟುಂಬದ ಯಜಮಾನನಿಗೆ ಇರೋ ಜವಾಬ್ದಾರಿಗಳನ್ನ ಒಂದೊಂದಾಗಿ ಚರ್ಚಿಸೋಣ ಮತ್ತು ಈ ವಿಷ್ಯದಲ್ಲಿ ಕುಟುಂಬದ ಯಜಮಾನ ಯೆಹೋವ ಮತ್ತು ಯೇಸುನ ಹೇಗೆ ಅನುಕರಿಸಬಹುದು ಅಂತ ನೋಡೋಣ.

ಕುಟುಂಬದ ಯಜಮಾನನಿಗೆ ಇರೋ ಜವಾಬ್ದಾರಿಗಳೇನು?

14. ಕುಟುಂಬದವ್ರೆಲ್ಲಾ ಯೆಹೋವನಿಗೆ ಆಪ್ತರಾಗೋಕೆ ಕುಟುಂಬದ ಯಜಮಾನ ಹೇಗೆ ಸಹಾಯ ಮಾಡ್ಬೇಕು?

14 ಕುಟುಂಬದವ್ರು ಯೆಹೋವನಿಗೆ ಆಪ್ತರಾಗೋಕೆ ಸಹಾಯ ಮಾಡ್ಬೇಕು. ಯೇಸು ತನ್ನ ಹಿಂಬಾಲಕರ ನಂಬಿಕೆಯನ್ನ ಬಲಪಡಿಸೋಕೆ ತನ್ನಿಂದ ಆಗೋದನ್ನೆಲ್ಲಾ ಮಾಡ್ತಿದ್ದ. ಈ ವಿಷ್ಯದಲ್ಲಿ ಅವನು ಯೆಹೋವ ತರನೇ ಇದ್ದ. (ಮತ್ತಾ. 5:3, 6; ಮಾರ್ಕ 6:34) ಅದೇ ತರ ಕುಟುಂಬದ ಯಜಮಾನನೂ ಇರಬೇಕು. ತನ್ನ ಕುಟುಂಬದವ್ರೆಲ್ಲಾ ಯೆಹೋವನಿಗೆ ಆಪ್ತರಾಗೋಕೆ ಸಹಾಯ ಮಾಡೋದೇ ಅವನಿಗೆ ಎಲ್ಲಕ್ಕಿಂತ ಮುಖ್ಯ ವಿಷ್ಯ ಆಗಿರಬೇಕು. (ಧರ್ಮೋ. 6:6-9) ಇದಕ್ಕಾಗಿ ಅವನು ತನ್ನ ಕುಟುಂಬದ ಜೊತೆ ಕೂತು ಬೈಬಲ್‌ ಓದ್ಬೇಕು, ಅದನ್ನ ಅಧ್ಯಯನ ಮಾಡ್ಬೇಕು, ಕೂಟಗಳಿಗೆ ಹಾಜರಾಗ್ಬೇಕು, ಸಿಹಿಸುದ್ದಿ ಸಾರಬೇಕು ಮತ್ತು ಅವ್ರೆಲ್ಲಾ ಯೆಹೋವನ ಸ್ನೇಹ ಕಾಪಾಡಿಕೊಳ್ಳೋಕೆ ಸಹಾಯ ಮಾಡ್ಬೇಕು.

15. ಕುಟುಂಬದವ್ರನ್ನ ತಾನು ತುಂಬ ಪ್ರೀತಿಸ್ತೀನಿ ಅಂತ ಕುಟುಂಬದ ಯಜಮಾನ ಹೇಗೆ ತೋರಿಸ್ಬಹುದು?

15 ಕುಟುಂಬದವ್ರನ್ನ ತಾನು ತುಂಬ ಪ್ರೀತಿಸ್ತೀನಿ ಅಂತ ತೋರಿಸಿಕೊಡ್ಬೇಕು. ಯೇಸುನ ತಾನು ತುಂಬ ಪ್ರೀತಿಸ್ತೀನಿ ಅಂತ ಯೆಹೋವ ಎಲ್ಲರ ಮುಂದೆ ಹೇಳಿದನು. (ಮತ್ತಾ. 3:17) ಯೇಸು ಕೂಡ ತನ್ನ ಶಿಷ್ಯರ ಮೇಲಿದ್ದ ಪ್ರೀತಿನ ತೋರಿಸ್ತಿದ್ದ ಮತ್ತು ಮಾತಲ್ಲಿ ಹೇಳ್ತಿದ್ದ. ಅವನ ಶಿಷ್ಯರು ಕೂಡ ಅವನನ್ನ ಪ್ರೀತಿಸ್ತೀವಿ ಅಂತ ಹೇಳಿದ್ರು. (ಯೋಹಾ. 15:9, 12, 13; 21:16) ಒಬ್ಬ ಕುಟುಂಬದ ಯಜಮಾನ ತನ್ನ ಹೆಂಡ್ತಿ ಮಕ್ಕಳ ಮೇಲೆ ಪ್ರೀತಿ ಇದೆ ಅನ್ನೋದನ್ನ ತೋರಿಸಿಕೊಡ್ಬೇಕು. ಉದಾಹರಣೆಗೆ, ಅವ್ರ ಜೊತೆ ಕೂತು ಬೈಬಲ್‌ ಓದಿ ಅಧ್ಯಯನ ಮಾಡ್ಬೇಕು. ಜೊತೆಗೆ, ಅವ್ರ ಮೇಲೆ ತನಗೆ ಪ್ರೀತಿ ಇದೆ ಮತ್ತು ಅವ್ರು ತನಗೆ ತುಂಬ ಮುಖ್ಯ ಅನ್ನೋದನ್ನ ಮಾತಲ್ಲಿ ಹೇಳ್ಬೇಕು. ಸೂಕ್ತ ಸಂದರ್ಭ ಬಂದಾಗ ಬೇರೆಯವ್ರ ಮುಂದೆ ಅವ್ರನ್ನ ಹೊಗಳಬೇಕು.—ಜ್ಞಾನೋ. 31:28, 29.

ಕುಟುಂಬದವ್ರ ಅಗತ್ಯಗಳನ್ನ ಪೂರೈಸಬೇಕು, ಆಗ ಯೆಹೋವನಿಗೆ ಖುಷಿ ಆಗುತ್ತೆ (ಪ್ಯಾರ 16 ನೋಡಿ)

16. (ಎ) ಕುಟುಂಬದ ಯಜಮಾನನಿಗೆ ಇನ್ನೂ ಯಾವ ಜವಾಬ್ದಾರಿ ಇದೆ? (ಬಿ) ಅವನು ಯಾವ ಎಚ್ಚರ ವಹಿಸ್ಬೇಕು?

16 ಕುಟುಂಬದವ್ರಿಗೆ ಬೇಕಾಗಿದ್ದನ್ನ ತಂದುಹಾಕ್ಬೇಕು. ಇಸ್ರಾಯೇಲ್ಯರು ಯೆಹೋವನ ಮಾತು ಕೇಳದೇ ಶಿಕ್ಷೆ ಅನುಭವಿಸುವಾಗ್ಲೂ ಯೆಹೋವ ಅವ್ರ ಅಗತ್ಯಗಳನ್ನ ನೋಡ್ಕೊಂಡನು. (ಧರ್ಮೋ. 2:7; 29:5) ಆತ ಇವತ್ತು ಸಹ ನಮ್ಮ ಅಗತ್ಯಗಳನ್ನ ಪೂರೈಸ್ತಾನೆ. (ಮತ್ತಾ. 6:31-33; 7:11) ಯೇಸು ಕೂಡ ತನ್ನನ್ನ ಹಿಂಬಾಲಿಸ್ತಿದ್ದವ್ರಿಗೆ ಊಟ ಕೊಟ್ಟ. (ಮತ್ತಾ. 14:17-20) ಕಾಯಿಲೆ ಬಿದ್ದವ್ರನ್ನ ವಾಸಿ ಮಾಡಿದ. (ಮತ್ತಾ. 4:24) ಕುಟುಂಬದ ಯಜಮಾನ ಕುಟುಂಬದವ್ರ ಅಗತ್ಯಗಳನ್ನ ಪೂರೈಸ್ಬೇಕು. ಆಗ ಯೆಹೋವನಿಗೆ ಖುಷಿಯಾಗುತ್ತೆ. ಆದ್ರೆ ಕುಟುಂಬದ ಯಜಮಾನ ಎಚ್ಚರ ವಹಿಸ್ಬೇಕಾದ ಒಂದು ವಿಷ್ಯ ಇದೆ. ಅದೇನಂದ್ರೆ ಅವನು ದುಡಿಮೆಯಲ್ಲೇ ಮುಳುಗಿ ಹೋಗಬಾರ್ದು. ಹಾಗೆ ಮಾಡಿದ್ರೆ ಕುಟುಂಬದವ್ರು ಯೆಹೋವನಿಗೆ ಆಪ್ತರಾಗೋಕೆ ಸಹಾಯ ಮಾಡಲು ಮತ್ತು ಅವ್ರನ್ನ ತಾನು ಪ್ರೀತಿಸ್ತೀನಿ ಅಂತ ತೋರಿಸಲು ಅವನು ಸೋತು ಹೋಗ್ತಾನೆ.

17. ಯೆಹೋವ ಮತ್ತು ಯೇಸು ಹೇಗೆ ನಮಗೆ ತರಬೇತಿ ಕೊಡ್ತಾರೆ, ನಮ್ಮನ್ನ ತಿದ್ದುತ್ತಾರೆ?

17 ತರಬೇತಿ ಕೊಡ್ಬೇಕು. ಯೆಹೋವ ನಮಗೆ ತರಬೇತಿ ಕೊಡ್ತಾನೆ ಮತ್ತು ನಮ್ಮನ್ನ ತಿದ್ದುತ್ತಾನೆ. ಇದನ್ನೆಲ್ಲಾ ನಮ್ಮ ಒಳ್ಳೇದಕ್ಕೆ ಆತ ಮಾಡೋದು. (ಇಬ್ರಿ. 12:7-9) ಯೇಸು ಸಹ ತನ್ನ ಅಧಿಕಾರದ ಕೆಳಗಿರುವವ್ರಿಗೆ ಪ್ರೀತಿಯಿಂದ ತರಬೇತಿ ಕೊಡ್ತಾನೆ. (ಯೋಹಾ. 15:14, 15) ಅವನು ಕೊಡೋ ಸಲಹೆ ಖಡಕ್‌ ಆಗಿದ್ರೂ ಅದನ್ನ ಮೃದುವಾಗಿ ಕೊಡ್ತಾನೆ. (ಮತ್ತಾ. 20:24-28) ನಮ್ಮಲ್ಲಿ ಅಪರಿಪೂರ್ಣತೆ ಇರೋದ್ರಿಂದ ನಾವು ಆಗಾಗ ತಪ್ಪು ಮಾಡ್ತಾ ಇರ್ತೇವೆ ಅಂತ ಯೇಸುಗೆ ಚೆನ್ನಾಗಿ ಗೊತ್ತು.—ಮತ್ತಾ. 26:41.

18. ಕುಟುಂಬದ ಯಜಮಾನ ಏನನ್ನ ಮನಸ್ಸಲ್ಲಿಡಬೇಕು?

18 ಯೆಹೋವ ಮತ್ತು ಯೇಸು ತರ ಇರೋಕೆ ಬಯಸೋ ಕುಟುಂಬದ ಯಜಮಾನ ತನ್ನ ಹೆಂಡ್ತಿ ಮಕ್ಕಳು ಅಪರಿಪೂರ್ಣರು, ಅವ್ರಿಂದ ತಪ್ಪುಗಳಾಗುತ್ತೆ ಅನ್ನೋದನ್ನ ಮನಸ್ಸಲ್ಲಿಡುತ್ತಾನೆ. ಹಾಗಾಗಿ ಅವ್ರ ಮೇಲೆ ಕೋಪದಿಂದ ‘ಕೆಂಡ ಕಾರಲ್ಲ.’ (ಕೊಲೊ. 3:19) ಯಾಕಂದ್ರೆ ತಾನೂ ಅಪರಿಪೂರ್ಣನೇ ಅನ್ನೋದು ಅವನಿಗೆ ಗೊತ್ತಿರುತ್ತೆ. ಹಾಗಾಗಿ ಗಲಾತ್ಯ 6:1 ರಲ್ಲಿರೋ ತತ್ವವನ್ನ ಅನ್ವಯಿಸ್ತಾನೆ ಮತ್ತು ‘ಮೃದುವಾಗಿ ತಿದ್ದಿ ಅವರನ್ನ ಮತ್ತೆ ಸರಿ ದಾರಿಗೆ ತರೋಕೆ’ ಪ್ರಯತ್ನಿಸ್ತಾನೆ. ಯೇಸು ತರ ಒಳ್ಳೇ ಮಾದರಿ ಇಟ್ರೆ ಬೇರೆಯವ್ರಿಗೆ ಕಲಿಸೋದು ಸುಲಭ ಅಂತ ಅರ್ಥಮಾಡಿಕೊಳ್ತಾನೆ.—1 ಪೇತ್ರ 2:21.

19-20. ನಿರ್ಧಾರ ಮಾಡೋ ವಿಷ್ಯದಲ್ಲಿ ಒಬ್ಬ ಕುಟುಂಬದ ಯಜಮಾನ ಯೆಹೋವ ಮತ್ತು ಯೇಸುವನ್ನು ಹೇಗೆ ಅನುಕರಿಸ್ಬಹುದು?

19 ಕುಟುಂಬದವ್ರಿಗೆ ಒಳ್ಳೇದಾಗುವಂಥ ನಿರ್ಧಾರಗಳನ್ನ ಮಾಡ್ಬೇಕು. ಯೆಹೋವ ಮಾಡೋ ನಿರ್ಧಾರಗಳಿಂದ ಯಾವಾಗ್ಲೂ ಬೇರೆಯವ್ರಿಗೆ ಒಳ್ಳೇದೇ ಆಗುತ್ತೆ. ಉದಾಹರಣೆಗೆ, ಆತ ಒಬ್ಬನೇ ಇರೋ ಬದ್ಲು ಜೀವಿಗಳನ್ನ ಸೃಷ್ಟಿ ಮಾಡಿದ. ತನ್ನ ಖುಷಿಗಾಗಿ ಅಲ್ಲ ಆ ಜೀವಿಗಳು ಆನಂದಿಸಬೇಕು ಅಂತ ಸೃಷ್ಟಿ ಮಾಡಿದ. ನಮ್ಮ ಪಾಪದ ಪರಿಹಾರಕ್ಕಾಗಿ ಆತ ತನ್ನ ಮಗನ ಪ್ರಾಣನ ಬಲಿ ಕೊಡ್ಬೇಕು ಅಂತ ಯಾರೂ ಬಲವಂತ ಮಾಡ್ಲಿಲ್ಲ. ಆದ್ರೂ ನಮಗೆ ಒಳ್ಳೇದಾಗಲಿ ಅಂತ ತನ್ನ ಮಗನನ್ನ ಕಳಿಸಿದನು. ಯೇಸು ಸಹ ಬೇರೆಯವ್ರಿಗೆ ಒಳ್ಳೇದಾಗಬೇಕು ಅನ್ನೋದನ್ನ ಮನಸ್ಸಲ್ಲಿಟ್ಟೇ ನಿರ್ಧಾರಗಳನ್ನ ಮಾಡ್ತಿದ್ದ. (ರೋಮ. 15:3) ಉದಾಹರಣೆಗೆ, ಅವನಿಗೆ ಒಂದು ಸಮಯದಲ್ಲಿ ಸುಸ್ತಾಗಿದ್ರೂ ವಿಶ್ರಾಂತಿ ತಗೊಳ್ಳದೇ ಜನ್ರ ಗುಂಪಿಗೆ ಕಲಿಸಿದ.—ಮಾರ್ಕ 6:31-34.

20 ಕುಟುಂಬಕ್ಕೋಸ್ಕರ ಒಳ್ಳೇ ನಿರ್ಧಾರಗಳನ್ನ ಮಾಡೋದು ಅಷ್ಟು ಸುಲಭ ಅಲ್ಲ, ಆದ್ರೆ ಅದನ್ನ ಮಾಡ್ಲೇಬೇಕು ಹಗುರವಾಗಿ ತಗೊಳ್ಳೋ ಹಾಗಿಲ್ಲ ಅನ್ನೋದನ್ನ ಕುಟುಂಬದ ಯಜಮಾನ ಅರ್ಥಮಾಡ್ಕೊಂಡಿರುತ್ತಾನೆ. ಹಿಂದೆಮುಂದೆ ಯೋಚನೆ ಮಾಡದೇ ಅಥ್ವಾ ಆ ಕ್ಷಣಕ್ಕೆ ಅವನಿಗೆ ಏನನಿಸುತ್ತೋ ಅದ್ರ ಆಧಾರದ ಮೇಲೆ ನಿರ್ಧಾರ ಮಾಡಲ್ಲ. ಬದ್ಲಿಗೆ ಯೆಹೋವನಿಗೆ ಇಷ್ಟ ಆಗೋ ತರ ನಿರ್ಧಾರ ಮಾಡೋಕೆ ಪ್ರಯತ್ನಿಸ್ತಾನೆ. * (ಜ್ಞಾನೋ. 2:6, 7) ಹೀಗೆ ಅವನು ಬರೀ ತನ್ನ ಬಗ್ಗೆ ಯೋಚಿಸದೇ ಬೇರೆಯವ್ರ ಬಗ್ಗೆನೂ ಯೋಚಿಸ್ತಾನೆ.—ಫಿಲಿ. 2:4.

21. ಮುಂದಿನ ಲೇಖನದಲ್ಲಿ ನಾವು ಏನನ್ನ ಚರ್ಚಿಸ್ತೇವೆ?

21 ಯೆಹೋವ ಕುಟುಂಬದ ಯಜಮಾನರಿಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾನೆ ಮತ್ತು ಕುಟುಂಬದ ಯಜಮಾನ ಅದನ್ನ ಚೆನ್ನಾಗಿ ನಿರ್ವಹಿಸ್ಕೊಂಡು ಹೋಗ್ಬೇಕು ಅಂತ ಬಯಸ್ತಾನೆ. ಒಬ್ಬ ಗಂಡ ಯೆಹೋವ ಮತ್ತು ಯೇಸು ತರ ಬೇರೆಯವ್ರ ಜೊತೆ ನಡ್ಕೊಳ್ಳೋಕೆ ತನ್ನಿಂದಾದ ಎಲ್ಲಾ ಪ್ರಯತ್ನ ಮಾಡೋದಾದ್ರೆ ಅವನು ಒಳ್ಳೇ ಯಜಮಾನ ಆಗ್ತಾನೆ. ಅವನ ಹೆಂಡ್ತಿನೂ ತನಗಿರೋ ಜವಾಬ್ದಾರಿಗಳನ್ನ ಚೆನ್ನಾಗಿ ನಿರ್ವಹಿಸಿದ್ರೆ ಅವರ ಸಂಸಾರ ಹಾಲುಜೇನಿನಂತೆ ಇರುತ್ತೆ. ಒಬ್ಬ ಹೆಂಡ್ತಿ ತನ್ನ ಗಂಡನ ಅಧಿಕಾರಕ್ಕೆ ಹೇಗೆ ಅಧೀನತೆ ತೋರಿಸ್ಬಹುದು ಮತ್ತು ಅಧೀನತೆ ತೋರಿಸೋಕೆ ಕೆಲವೊಮ್ಮೆ ಅವಳಿಗೆ ಯಾಕೆ ಕಷ್ಟ ಆಗ್ಬಹುದು? ಈ ಪ್ರಶ್ನೆಗಳಿಗೆ ಮುಂದಿನ ಲೇಖನದಲ್ಲಿ ಉತ್ತರ ನೋಡ್ತೇವೆ.

ಗೀತೆ 108 ಯೆಹೋವನ ರಾಜ್ಯಕ್ಕಾಗಿ ಆತನನ್ನು ಸ್ತುತಿಸಿ

^ ಪ್ಯಾರ. 5 ಒಬ್ಬ ಪುರುಷನಿಗೆ ಮದ್ವೆಯಾದಾಗ ಅವನು ಹೊಸ ಕುಟುಂಬದ ಯಜಮಾನ ಆಗ್ತಾನೆ. ಈ ಲೇಖನದಲ್ಲಿ ಯೆಹೋವ ಕುಟುಂಬದಲ್ಲಿ ಗಂಡನಿಗೆ ಯಾವ ಅಧಿಕಾರ ಕೊಟ್ಟಿದ್ದಾನೆ, ಯಾಕೆ ಕೊಟ್ಟಿದ್ದಾನೆ ಮತ್ತು ಯೆಹೋವ, ಯೇಸುವಿನಿಂದ ಗಂಡ ಏನು ಕಲಿಬಹುದು ಅಂತ ಚರ್ಚಿಸ್ತೀವಿ. ಎರಡನೇ ಲೇಖನದಲ್ಲಿ ಗಂಡ-ಹೆಂಡ್ತಿ ಯೇಸುವಿನಿಂದ ಮತ್ತು ಬೈಬಲಿನಲ್ಲಿರೋ ಬೇರೆಯವ್ರ ಉದಾಹರಣೆಗಳಿಂದ ಏನು ಕಲಿಬಹುದು ಅಂತ ನೋಡ್ತೀವಿ. ಕೊನೆದಾಗಿ ಮೂರನೇ ಲೇಖನದಲ್ಲಿ ಸಹೋದರರು ಸಭೆಯಲ್ಲಿ ತಮಗಿರೋ ಅಧಿಕಾರವನ್ನ ಹೇಗೆ ಬಳಸ್ಬೇಕು ಅಂತ ಚರ್ಚಿಸ್ತೀವಿ.

^ ಪ್ಯಾರ. 7 ಕೆಲವು ಫಿಲಂಗಳಲ್ಲಿ, ನಾಟಕಗಳಲ್ಲಿ, ಮಕ್ಕಳ ಕಥೆ ಪುಸ್ತಕಗಳಲ್ಲಿ ಗಂಡನು ಹೆಂಡ್ತಿ ಮೇಲೆ ಕೈ ಮಾಡೋದು, ಬೈಯೋದು ಇದೆಲ್ಲಾ ಮಾಮೂಲಿ ಅನ್ನೋ ತರ ತೋರಿಸ್ತಾರೆ. ಹಾಗಾಗಿ ಗಂಡನು ಹೆಂಡ್ತಿ ಮೇಲೆ ದಬ್ಬಾಳಿಕೆ ಮಾಡೋದ್ರಲ್ಲಿ ಏನೂ ತಪ್ಪಿಲ್ಲ ಅಂತ ಜನ ನೆನಸ್ತಾರೆ.

^ ಪ್ಯಾರ. 20 ಒಳ್ಳೇ ನಿರ್ಧಾರ ಹೇಗೆ ಮಾಡ್ಬಹುದು ಅನ್ನೋದ್ರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 2011 ಏಪ್ರಿಲ್‌ 15 ರ ಕಾವಲಿನಬುರುಜುವಿನ ಪುಟ 13-17 ರಲ್ಲಿರೋ “ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಿರಿ” ಲೇಖನ ನೋಡಿ.