ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 13

ಯೆಹೋವ ನಮ್ಮನ್ನ ಹೇಗೆ ಕಾಪಾಡ್ತಾನೆ?

ಯೆಹೋವ ನಮ್ಮನ್ನ ಹೇಗೆ ಕಾಪಾಡ್ತಾನೆ?

“ನಮ್ಮ ಪ್ರಭು ನಂಬಿಗಸ್ತ. ಆತನು ನಿಮ್ಮನ್ನ ಬಲಪಡಿಸ್ತಾನೆ, ದುಷ್ಟನ ಕೈಯಿಂದ ತಪ್ಪಿಸಿ ಕಾಪಾಡ್ತಾನೆ.”—2 ಥೆಸ. 3:3.

ಗೀತೆ 63 ಸದಾ ನಿಷ್ಠರು

ಕಿರುನೋಟ *

1. ಯೇಸು ಯೆಹೋವನ ಹತ್ರ ‘ತನ್ನ ಶಿಷ್ಯರನ್ನ ಕಾಪಾಡು’ ಅಂತ ಯಾಕೆ ಬೇಡಿಕೊಂಡ?

ಯೇಸು ತನ್ನ ಶಿಷ್ಯರನ್ನು ತುಂಬ ಪ್ರೀತಿಸುತ್ತಿದ್ದ. ಹಾಗಾಗಿ ಅವನು ತೀರಿಹೋಗೋ ಹಿಂದಿನ ರಾತ್ರಿ “ಇವ್ರನ್ನ ಸೈತಾನನಿಂದ ಕಾಪಾಡು” ಅಂತ ಯೆಹೋವನ ಹತ್ರ ಬೇಡಿಕೊಂಡ. (ಯೋಹಾ. 17:14, 15) ಯೇಸು ಸ್ವರ್ಗಕ್ಕೆ ಹೋದ ಮೇಲೆ ಯೆಹೋವನ ಸೇವೆ ಮಾಡೋಕೆ ಇಷ್ಟಪಡೋ ಎಲ್ಲರಿಗೂ ಸೈತಾನ ಕಷ್ಟ ಕೊಡ್ತಾ ಇರುತ್ತಾನೆ ಅಂತ ಯೇಸುಗೆ ಗೊತ್ತಿತ್ತು. ಹಾಗಾಗಿ ಯೆಹೋವನ ಜನರಿಗೆ ರಕ್ಷಣೆಯ ಅಗತ್ಯ ಇತ್ತು. ಅದಕ್ಕೇ ಯೇಸು, ಯೆಹೋವನ ಹತ್ರ ‘ತನ್ನ ಶಿಷ್ಯರನ್ನ ಕಾಪಾಡು’ ಅಂತ ಬೇಡಿಕೊಂಡ.

2. ಯೆಹೋವ ನಮ್ಮ ಪ್ರಾರ್ಥನೆಯನ್ನ ಕೇಳ್ತಾನೆ ಅಂತ ಯಾಕೆ ನಂಬಬಹುದು?

2 ಯೆಹೋವ ತನ್ನ ಮಗನ ಪ್ರಾರ್ಥನೆಗೆ ಉತ್ತರ ಕೊಟ್ಟನು. ಯಾಕಂದ್ರೆ ಆತನಿಗೆ ಯೇಸು ಅಂದ್ರೆ ತುಂಬ ಪ್ರೀತಿ. ನಾವು ಯೇಸು ತರ ಯೆಹೋವನನ್ನು ಸಂತೋಷಪಡಿಸಿದರೆ ಯೆಹೋವ ನಮ್ಮನ್ನೂ ಪ್ರೀತಿಸ್ತಾನೆ. ಅಷ್ಟೇ ಅಲ್ಲ, ಸಹಾಯಕ್ಕಾಗಿ ಸಂರಕ್ಷಣೆಗಾಗಿ ನಾವು ಬೇಡಿಕೊಳ್ಳುವಾಗ ಆತ ನಮ್ಮ ಪ್ರಾರ್ಥನೆಗೆ ಉತ್ತರ ಕೊಡ್ತಾನೆ. ಯೆಹೋವ ತುಂಬ ಪ್ರೀತಿ ಮಾಡೋ ಅಪ್ಪ, ತನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ತಾನೆ. ಒಂದುವೇಳೆ ಚೆನ್ನಾಗಿ ನೋಡಿಕೊಂಡಿಲ್ಲ ಅಂದ್ರೆ ಆತನ ಹೆಸರಿಗೆ ಕಳಂಕ ಬಂದುಬಿಡುತ್ತೆ!

3. ಇವತ್ತು ನಮಗೆ ಯೆಹೋವ ಕೊಡೋ ರಕ್ಷಣೆ ಯಾಕೆ ಬೇಕು?

3 ಈ ಸಮಯದಲ್ಲಂತೂ ನಮಗೆ ಯೆಹೋವ ಕೊಡೋ ರಕ್ಷಣೆ ಇನ್ನೂ ಜಾಸ್ತಿನೇ ಬೇಕು. ಯಾಕಂದ್ರೆ ಸೈತಾನನನ್ನು ಸ್ವರ್ಗದಿಂದ ದೊಬ್ಬಿರೋದ್ರಿಂದ ‘ಅವನು ತುಂಬ ಕೋಪದಲ್ಲಿದ್ದಾನೆ.’ (ಪ್ರಕ. 12:12) ಕೆಲವರು ನಮ್ಮನ್ನು ತುಂಬ ವಿರೋಧಿಸ್ತಾರೆ, ಹಿಂಸೆ ಕೊಡ್ತಾರೆ. ಅವರು ತಾವು ‘ದೇವರ ಪವಿತ್ರ ಸೇವೆ ಮಾಡ್ತಿದ್ದೇವೆ’ ಅಂತ ನೆನಸೋ ತರ ಸೈತಾನ ಮಾಡಿದ್ದಾನೆ. (ಯೋಹಾ. 16:2) ಇನ್ನು ದೇವರನ್ನ ನಂಬದೇ ಇರುವವರು ಕೂಡ ನಮ್ಮನ್ನ ವಿರೋಧಿಸ್ತಾರೆ. ನಾವು ಅವರ ರೀತಿನೀತಿಗಳ ತರ ನಡಕೊಳ್ತಿಲ್ಲ ಅಂತ ಅವರಿಗೆ ನಮ್ಮ ಮೇಲೆ ಕೋಪ. ಜನ ನಮಗೆ ಹಿಂಸೆ ಕೊಡೋಕೆ ಏನೇ ಕಾರಣ ಇದ್ರೂ ನಾವು ಭಯಪಡಬೇಕಾಗಿಲ್ಲ. ಯಾಕಂದ್ರೆ “ನಮ್ಮ ಪ್ರಭು ನಂಬಿಗಸ್ತ. ಆತನು ನಿಮ್ಮನ್ನ ಬಲಪಡಿಸ್ತಾನೆ, ದುಷ್ಟನ ಕೈಯಿಂದ ತಪ್ಪಿಸಿ ಕಾಪಾಡ್ತಾನೆ” ಅಂತ ಬೈಬಲ್‌ ಹೇಳುತ್ತೆ. (2 ಥೆಸ. 3:3) ಯೆಹೋವ ನಮ್ಮನ್ನ ಹೇಗೆ ಕಾಪಾಡ್ತಾನೆ? ಆತ ನಮ್ಮನ್ನ ಕಾಪಾಡೋ ಎರಡು ವಿಧಗಳನ್ನ ನಾವೀಗ ನೋಡೋಣ.

ಯೆಹೋವ ಕೊಟ್ಟಿರೋ ರಕ್ಷಾಕವಚ

4. ಎಫೆಸ 6:13-17 ರ ಪ್ರಕಾರ ನಮ್ಮನ್ನ ಕಾಪಾಡೋಕೆ ಯೆಹೋವ ಏನನ್ನು ಕೊಟ್ಟಿದ್ದಾನೆ?

4 ಸೈತಾನ ದಾಳಿ ಮಾಡುವಾಗ ನಮ್ಮನ್ನ ಕಾಪಾಡೋಕೆ ಯೆಹೋವ ರಕ್ಷಾಕವಚವನ್ನು ಕೊಟ್ಟಿದ್ದಾನೆ. (ಎಫೆಸ 6:13-17 ಓದಿ.) ಈ ರಕ್ಷಾಕವಚ ತುಂಬ ಗಟ್ಟಿಮುಟ್ಟು ಮತ್ತು ಅದು ನಮ್ಮನ್ನ ಕಾಪಾಡುತ್ತೆ! ನಾವು ಪ್ರಯೋಜನ ಪಡಕೊಳ್ಳಬೇಕಂದ್ರೆ ರಕ್ಷಾಕವಚದ ಪ್ರತಿಯೊಂದು ಭಾಗವನ್ನು ನಾವು ಹಾಕಿಕೊಳ್ಳಬೇಕು. ಅದನ್ನ ಯಾವತ್ತೂ ತೆಗೆದಿಡಬಾರದು. ಈ ರಕ್ಷಾಕವಚದಲ್ಲಿರೋ ಪ್ರತಿಯೊಂದು ಭಾಗ ಏನನ್ನು ಸೂಚಿಸುತ್ತೆ? ಅದನ್ನು ನಾವೀಗ ನೋಡೋಣ.

5. (ಎ) ಸತ್ಯ ಅನ್ನೋ ಸೊಂಟಪಟ್ಟಿ ಏನನ್ನು ಸೂಚಿಸುತ್ತೆ? (ಬಿ) ಅದನ್ನ ನಾವು ಯಾಕೆ ಹಾಕಿಕೊಳ್ಳಬೇಕು?

5 ಸತ್ಯ ಅನ್ನೋ ಸೊಂಟಪಟ್ಟಿ: ಇದು ಬೈಬಲಲ್ಲಿರುವ ಸತ್ಯಗಳನ್ನ ಸೂಚಿಸುತ್ತೆ. ಈ ಸತ್ಯ ಅನ್ನೋ ಸೊಂಟಪಟ್ಟಿಯನ್ನು ನಾವು ಯಾಕೆ ಹಾಕಿಕೊಳ್ಳಬೇಕು? ಯಾಕಂದ್ರೆ “ಸುಳ್ಳನ್ನ ಹುಟ್ಟಿಸಿದ” ಸೈತಾನನಿಂದ ನಾವು ಮೋಸ ಹೋಗದಿರೋಕೆ ಈ ಸೊಂಟಪಟ್ಟಿಯನ್ನು ಹಾಕಿಕೊಳ್ಳಬೇಕು. (ಯೋಹಾ. 8:44) ಅವನು ಸಾವಿರಾರು ವರ್ಷಗಳಿಂದ ಸುಳ್ಳು ಹೇಳ್ತಾ “ಇಡೀ ಭೂಮಿಯಲ್ಲಿರೋ ಜನ್ರನ್ನ ತಪ್ಪುದಾರಿಗೆ ನಡಿಸ್ತಾ ಇದ್ದಾನೆ.” (ಪ್ರಕ. 12:9) ಆದ್ರೆ ಬೈಬಲಲ್ಲಿರೋ ಸತ್ಯಗಳು ನಾವು ಮೋಸ ಹೋಗದ ಹಾಗೆ ನಮ್ಮನ್ನು ಕಾಪಾಡುತ್ತೆ. ಈ ಸೊಂಟಪಟ್ಟಿಯನ್ನ ಹಾಕಿಕೊಳ್ಳೋದು ಹೇಗೆ? (1) ಯೆಹೋವನ ಬಗ್ಗೆ ಇರೋ ಸತ್ಯ ಕಲಿಬೇಕು. (2) ಆತನನ್ನು “ಪವಿತ್ರಶಕ್ತಿಗೆ ಮತ್ತು ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು.” (3) ಎಲ್ಲಾ ವಿಷಯದಲ್ಲೂ ನಾವು ಪ್ರಾಮಾಣಿಕವಾಗಿ ಇರಬೇಕು.—ಯೋಹಾ. 4:24; ಎಫೆ. 4:25; ಇಬ್ರಿ. 13:18.

ಸೊಂಟಪಟ್ಟಿ: ಬೈಬಲಲ್ಲಿರೋ ಸತ್ಯಗಳು

6. (ಎ) ನೀತಿ ಅನ್ನೋ ಎದೆಕವಚ ಏನನ್ನು ಸೂಚಿಸುತ್ತೆ? (ಬಿ) ಅದನ್ನ ನಾವು ಯಾಕೆ ಹಾಕಿಕೊಳ್ಳಬೇಕು?

6 ನೀತಿ ಅನ್ನೋ ಎದೆಕವಚ: ಇದು ಯೆಹೋವನ ನೀತಿನಿಯಮಗಳನ್ನು ಸೂಚಿಸುತ್ತೆ. ಈ ಎದೆಕವಚವನ್ನು ನಾವು ಯಾಕೆ ಹಾಕಿಕೊಳ್ಳಬೇಕು? ಒಬ್ಬ ಸೈನಿಕನ ಹೃದಯವನ್ನ ಈಟಿನೋ ಕತ್ತಿನೋ ತೂರಿಹೋಗದಂತೆ ಎದೆಕವಚ ಕಾಪಾಡುತ್ತೆ. ಅದೇ ತರ, ನೀತಿ ಅನ್ನೋ ಎದೆಕವಚ ನಮ್ಮ ಸಾಂಕೇತಿಕ ಹೃದಯ ಅಂದ್ರೆ ಒಳ್ಳೇ ವ್ಯಕ್ತಿತ್ವವನ್ನ ಲೋಕದ ಪ್ರಭಾವದಿಂದ ಹಾಳಾಗದ ಹಾಗೆ ಕಾಪಾಡುತ್ತೆ. (ಜ್ಞಾನೋ. 4:23) ನಾವು ಯೆಹೋವನನ್ನು ಪೂರ್ಣ ಹೃದಯದಿಂದ ಪ್ರೀತಿಸಬೇಕು ಮತ್ತು ಆರಾಧಿಸಬೇಕು ಅಂತ ಆತ ಬಯಸ್ತಾನೆ. (ಮತ್ತಾ. 22:36, 37) ಆದ್ರೆ ನಮ್ಮ ಮನಸ್ಸು ಚಂಚಲ ಆಗಬೇಕು ಅಂತ ಸೈತಾನ ಬಯಸ್ತಾನೆ. ಅದಕ್ಕಾಗಿ ಅವನು ಲೋಕದಲ್ಲಿರುವ ವಸ್ತುಗಳ ಕಡೆಗೆ, ಯೆಹೋವ ಇಷ್ಟ ಪಡದಿರುವಂಥ ವಿಷಯಗಳ ಕಡೆಗೆ ನಮ್ಮ ಮನಸ್ಸನ್ನು ಸೆಳೆಯೋಕೆ ಪ್ರಯತ್ನಿಸ್ತಾನೆ. (ಯಾಕೋ. 4:4; 1 ಯೋಹಾ. 2:15, 16) ನಾವು ಅವನ ಈ ಬಲೆಗೆ ಬೀಳದಿದ್ರೆ ಹಿಂಸೆ ಕೊಟ್ಟಾದ್ರೂ ಯೆಹೋವನ ನಿಯಮಗಳನ್ನ ಮುರಿಯೋ ತರ ಮಾಡೋಕೆ ಪ್ರಯತ್ನಿಸ್ತಾನೆ.

ಎದೆಕವಚ: ಯೆಹೋವನ ನೀತಿನಿಯಮಗಳು

7. ನಾವು ನೀತಿ ಅನ್ನೋ ಎದೆಕವಚ ಹಾಕಿಕೊಂಡಿದ್ದೀವಿ ಅಂತ ಹೇಗೆ ತೋರಿಸಿಕೊಡ್ತೀವಿ?

7 ಯೆಹೋವನ ದೃಷ್ಟಿಯಲ್ಲಿ ಯಾವುದು ಸರಿ ಯಾವುದು ತಪ್ಪು ಅಂತ ನಾವು ಅರ್ಥಮಾಡಿಕೊಂಡು ಅದೇ ತರ ಜೀವಿಸಿದ್ರೆ ನಾವು ನೀತಿ ಅನ್ನೋ ಎದೆಕವಚ ಹಾಕಿಕೊಂಡಿದ್ದೀವಿ ಅಂತ ತೋರಿಸಿಕೊಡ್ತೀವಿ. (ಕೀರ್ತ. 97:10) ಯೆಹೋವನ ನೀತಿನಿಯಮಗಳು ಉಸಿರುಗಟ್ಟಿಸೋ ತರ ಇದೆ ಅಂತ ಕೆಲವರು ನೆನಸ್ತಾರೆ. ನಾವೂ ಈ ತರ ನೆನಸಿ ಯೆಹೋವನ ನೀತಿನಿಯಮಗಳನ್ನ ಪಾಲಿಸದೇ ಹೋದ್ರೆ ಏನಾಗುತ್ತೆ? ಒಬ್ಬ ಸೈನಿಕ ಯುದ್ಧ ನಡೆಯುತ್ತಿರುವಾಗ ಎದೆಕವಚ ಭಾರವಾಗಿದೆ, ತುಂಬ ಕಷ್ಟ ಆಗ್ತಿದೆ ಅಂತ ಅದನ್ನು ಬಿಚ್ಚಿಟ್ಟರೆ ಅವನ ಗತಿ ಏನಾಗುತ್ತೆ? ನಮಗೆ ಅವನ ಗತಿ ಬರಬಾರದು. ಯೆಹೋವನನ್ನು ಪ್ರೀತಿಸುವವ್ರಿಗೆ ಆತನ ಆಜ್ಞೆಗಳನ್ನ ಪಾಲಿಸೋದು “ಅಷ್ಟೇನೂ ಕಷ್ಟ ಅಲ್ಲ,” ಅದು ಜೀವ ಕಾಪಾಡುತ್ತೆ ಅಂತ ಅವ್ರಿಗೆ ಚೆನ್ನಾಗಿ ಗೊತ್ತು.—1 ಯೋಹಾ. 5:3.

8. ಸಿಹಿಸುದ್ದಿಯನ್ನ ಸಾರೋಕೆ ಚಪ್ಪಲಿಗಳನ್ನ ಹಾಕೊಂಡು ಸಿದ್ಧವಾಗಿರೋದು ಅನ್ನೋದರ ಅರ್ಥ ಏನು?

8 ಶಾಂತಿಯ ಸಿಹಿಸುದ್ದಿಯನ್ನ ಸಾರೋಕೆ ಚಪ್ಪಲಿಗಳನ್ನು ಹಾಕೊಂಡು ಸಿದ್ಧವಾಗಿರಿ ಅಂತ ಪೌಲ ಹೇಳಿದ್ದಾನೆ. ದೇವರ ಆಳ್ವಿಕೆ ಬಗ್ಗೆ ಇರೋ ಸಿಹಿಸುದ್ದಿಯನ್ನ ಸಾರೋಕೆ ನಾವು ಯಾವಾಗಲೂ ತಯಾರಾಗಿರಬೇಕು ಅನ್ನೋದು ಇದರ ಅರ್ಥ. ನಾವು ಬೇರೆಯವ್ರಿಗೆ ಬೈಬಲ್‌ ಸಂದೇಶವನ್ನ ಸಾರಿದಾಗ ಮೊದಲು ನಮ್ಮ ನಂಬಿಕೆ ಬಲವಾಗುತ್ತೆ. ಅವಕಾಶ ಸಿಕ್ಕಿದಾಗೆಲ್ಲಾ ನಾವು ಸಿಹಿಸುದ್ದಿಯನ್ನ ಸಾರುತ್ತೇವೆ. ಕೆಲಸದ ಜಾಗದಲ್ಲಿ, ಸ್ಕೂಲಲ್ಲಿ, ವ್ಯಾಪಾರ ಕ್ಷೇತ್ರದಲ್ಲಿ, ಮನೆಮನೆ ಸೇವೆ ಮಾಡುವಾಗ, ಶಾಪಿಂಗ್‌ ಮಾಡುವಾಗ, ಸತ್ಯದಲ್ಲಿ ಇಲ್ಲದಿರೋ ಸಂಬಂಧಿಕರನ್ನು ಭೇಟಿ ಆದಾಗ, ಪರಿಚಯ ಇರುವವರ ಹತ್ರ ಹೀಗೆ ಎಲ್ಲರಿಗೂ ಸಾರುತ್ತೇವೆ. ಅಷ್ಟೇ ಯಾಕೆ, ಮನೆಯಿಂದ ಹೊರಗೆ ಹೋಗೋಕೆ ಆಗದಿದ್ದಾಗಲೂ ಸಿಹಿಸುದ್ದಿ ಸಾರುತ್ತೇವೆ. ನಾವು ಭಯಪಟ್ಟುಕೊಂಡು ಸಾರೋದನ್ನ ನಿಲ್ಲಿಸಿಬಿಟ್ರೆ ಏನಾಗುತ್ತೆ? ಯುದ್ಧ ನಡೆಯುವಾಗ ಚಪ್ಪಲಿ ಬಿಚ್ಚಿಡೋ ಸೈನಿಕನ ತರ ನಾವು ಇರುತ್ತೀವಿ. ಚಪ್ಪಲಿ ಬಿಚ್ಚಿಟ್ಟರೆ ಸೈನಿಕನ ಕಾಲಿಗೆ ಗಾಯ ಆಗುತ್ತೆ, ಬೇರೆಯವರು ದಾಳಿ ಮಾಡೋಕೆ ಬಂದ್ರೆ ಅವನಿಗೆ ತಪ್ಪಿಸಿಕೊಳ್ಳೋಕೆ ಕಷ್ಟ ಆಗುತ್ತೆ. ಅಷ್ಟೇ ಅಲ್ಲ, ಅವನ ಅಧಿಕಾರಿ ಕೊಡೋ ಆಜ್ಞೆಗಳನ್ನ ಪಾಲಿಸೋಕೂ ಕಷ್ಟ ಆಗುತ್ತೆ.

ಚಪ್ಪಲಿ: ಸಿಹಿಸುದ್ದಿ ಸಾರೋಕೆ ಸಿದ್ಧವಾಗಿರೋದು

9. ನಂಬಿಕೆ ಅನ್ನೋ ದೊಡ್ಡ ಗುರಾಣಿಯನ್ನ ಯಾಕೆ ಹಿಡುಕೊಂಡಿರಬೇಕು?

9 ನಂಬಿಕೆ ಅನ್ನೋ ದೊಡ್ಡ ಗುರಾಣಿ: ಇದು ಯೆಹೋವನ ಮೇಲೆ ನಮಗಿರೋ ನಂಬಿಕೆಯನ್ನು ಸೂಚಿಸುತ್ತೆ. ಆತ ಕೊಟ್ಟಿರೋ ಮಾತುಗಳನ್ನೆಲ್ಲಾ ನೆರವೇರಿಸ್ತಾನೆ ಅನ್ನೋ ಪೂರ್ತಿ ನಂಬಿಕೆ ನಮಗಿದೆ. ಆ ನಂಬಿಕೆ ಇರೋದ್ರಿಂದ ನಮಗೆ “ಸೈತಾನನ ಬೆಂಕಿ ತರ ಇರೋ ಎಲ್ಲ ಬಾಣಗಳನ್ನ ಆರಿಸೋಕೆ ಆಗುತ್ತೆ.” ನಾವು ಯಾವಾಗಲೂ ಈ ದೊಡ್ಡ ಗುರಾಣಿಯನ್ನ ಯಾಕೆ ಹಿಡುಕೊಂಡೇ ಇರಬೇಕು? ಗುರಾಣಿಯನ್ನ ಹಿಡುಕೊಂಡೇ ಇದ್ದರೆ ಧರ್ಮಭ್ರಷ್ಟರು ಸುಳ್ಳುಗಳನ್ನು ಹೇಳಿದಾಗ ನಾವು ಮೋಸ ಹೋಗಲ್ಲ, ನಾವು ಸತ್ಯದಲ್ಲಿರೋ ಕಾರಣ ಜನರು ನಮ್ಮನ್ನ ಗೇಲಿ ಮಾಡಿದಾಗ ಬೇಜಾರಾಗಲ್ಲ. ಅಷ್ಟೇ ಅಲ್ಲ, ಯೆಹೋವನ ನಿಯಮಗಳನ್ನ ಮುರಿಯೋಕೆ ಬೇರೆಯವರು ನಮಗೆ ಒತ್ತಡ ಹಾಕಿದಾಗ ಅದನ್ನ ವಿರೋಧಿಸೋಕೆ ಶಕ್ತಿ ಇರುತ್ತೆ. ಉದಾಹರಣೆಗೆ, ಕೆಲಸದ ಜಾಗದಲ್ಲಿ ಅಥ್ವಾ ಸ್ಕೂಲಲ್ಲಿ ಯೆಹೋವನಿಗೆ ಇಷ್ಟ ಇಲ್ಲದಿರೋ ವಿಷಯವನ್ನ ಮಾಡೋಕೆ ಯಾರಾದ್ರೂ ಹೇಳಿದ್ರೆ ನಾವದನ್ನ ಮಾಡಲ್ಲ. (1 ಪೇತ್ರ 3:15) ಒಳ್ಳೇ ಸಂಬಳ ಸಿಗೋ ಕೆಲಸಕ್ಕೋಸ್ಕರ ಕೂಟಗಳನ್ನ ಸೇವೆಯನ್ನ ತಪ್ಪಿಸಬೇಕಾಗಿ ಬಂದ್ರೆ ನಾವು ಆ ಕೆಲಸಕ್ಕೇ ಹೋಗಲ್ಲ. (ಇಬ್ರಿ. 13:5, 6) ಎಷ್ಟೇ ವಿರೋಧ ಬಂದ್ರೂ ಹೆದರಿಕೊಂಡು ನಾವು ಯೆಹೋವನ ಸೇವೆ ನಿಲ್ಲಿಸಲ್ಲ.—1 ಥೆಸ. 2:2.

ಗುರಾಣಿ: ಯೆಹೋವನ ಮೇಲೆ, ಆತನು ಕೊಟ್ಟಿರೋ ಮಾತುಗಳ ಮೇಲೆ ನಮಗಿರೋ ನಂಬಿಕೆ

10. (ಎ) ರಕ್ಷಣೆ ಅನ್ನೋ ಶಿರಸ್ತ್ರಾಣ ಏನನ್ನು ಸೂಚಿಸುತ್ತೆ? (ಬಿ) ಅದನ್ನು ನಾವು ಯಾಕೆ ಹಾಕಿಕೊಳ್ಳಬೇಕು?

10 ರಕ್ಷಣೆ ಅನ್ನೋ ಶಿರಸ್ತ್ರಾಣ: ಇದು ಯೆಹೋವ ನಮಗೆ ಕೊಡೋ ನಿರೀಕ್ಷೆಯನ್ನ ಸೂಚಿಸುತ್ತೆ. ಯೆಹೋವ ನಮಗೆ ಯಾವ ನಿರೀಕ್ಷೆ ಕೊಟ್ಟಿದ್ದಾನೆ? ನಾವು ಆತ ಹೇಳೋ ತರ ನಡಕೊಂಡ್ರೆ ನಮಗೆ ಬಹುಮಾನ ಕೊಡ್ತೀನಿ, ಒಂದುವೇಳೆ ನಾವು ತೀರಿಹೋದ್ರೂ ನಮಗೆ ಮತ್ತೆ ಜೀವ ಕೊಡ್ತೀನಿ ಅನ್ನೋ ಮಾತು ಕೊಟ್ಟಿದ್ದಾನೆ. (1 ಥೆಸ. 5:8; 1 ತಿಮೊ. 4:10; ತೀತ 1:1, 2) ಒಬ್ಬ ಸೈನಿಕನ ತಲೆಯನ್ನ ಶಿರಸ್ತ್ರಾಣ ಕಾಪಾಡೋ ತರಾನೇ ನಿರೀಕ್ಷೆ ನಾವು ಯೋಚನೆ ಮಾಡೋ ರೀತಿಯನ್ನು ಕಾಪಾಡುತ್ತೆ. ಹೇಗೆ? ನಮಗೆ ನಿರೀಕ್ಷೆ ಇದ್ದರೆ ದೇವರು ಕೊಟ್ಟಿರೋ ಮಾತುಗಳ ಬಗ್ಗೆ ಯೋಚಿಸ್ತಾ ಇರುತ್ತೀವಿ ಮತ್ತು ನಮಗೆ ಎಷ್ಟೇ ಕಷ್ಟ ಬಂದ್ರೂ ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಈ ಶಿರಸ್ತ್ರಾಣವನ್ನ ಹಾಕೊಂಡಿದ್ದೀವಿ ಅಂತ ನಾವು ಹೇಗೆ ತೋರಿಸಿಕೊಡ್ತೀವಿ? ದೇವರು ಯೋಚಿಸೋ ತರಾನೇ ನಾವೂ ಯೋಚಿಸ್ತೀವಿ. ಉದಾಹರಣೆಗೆ, ಈ ಲೋಕದ ಹಣ ಆಸ್ತಿ ಮೇಲಲ್ಲ, ದೇವರ ಮೇಲೆ ನಾವು ಭರವಸೆ ಇಡ್ತೀವಿ.—ಕೀರ್ತ. 26:2; 104:34; 1 ತಿಮೊ. 6:17.

ಶಿರಸ್ತ್ರಾಣ: ಶಾಶ್ವತ ಜೀವನದ ನಿರೀಕ್ಷೆ

11. (ಎ) ಪವಿತ್ರ ಶಕ್ತಿ ಅನ್ನೋ ಕತ್ತಿ ಏನನ್ನು ಸೂಚಿಸುತ್ತೆ? (ಬಿ) ಅದನ್ನು ನಾವು ಯಾಕೆ ಬಳಸಬೇಕು?

11 ಪವಿತ್ರ ಶಕ್ತಿ ಅನ್ನೋ ಕತ್ತಿ: ಇದು ಬೈಬಲನ್ನು ಸೂಚಿಸುತ್ತೆ. ಅದಕ್ಕೆ ತುಂಬ ಶಕ್ತಿ ಇದೆ. ಅದು ಸುಳ್ಳು ಬೋಧನೆಗಳನ್ನ ಬಯಲು ಮಾಡಿ, ಜನರನ್ನು ಅದ್ರಿಂದ ಬಿಡಿಸುತ್ತೆ. ಅಷ್ಟೇ ಅಲ್ಲ, ಕೆಟ್ಟ ಚಟಗಳನ್ನ ಬಿಟ್ಟುಬಿಡೋಕೆ ಜನರಿಗೆ ಸಹಾಯ ಮಾಡುತ್ತೆ. (2 ಕೊರಿಂ. 10:4, 5; 2 ತಿಮೊ. 3:16, 17; ಇಬ್ರಿ. 4:12) ವೈಯಕ್ತಿಕ ಅಧ್ಯಯನ ಮಾಡೋದ್ರಿಂದ ಮತ್ತು ದೇವರ ಸಂಘಟನೆ ಕೊಡೋ ತರಬೇತಿಯಿಂದ ನಾವು ಈ ಕತ್ತಿಯನ್ನ ಚೆನ್ನಾಗಿ ಬಳಸೋಕೆ ಕಲಿಯುತ್ತೀವಿ. (2 ತಿಮೊ. 2:15) ಇಲ್ಲಿ ತನಕ ದೇವರು ಕೊಟ್ಟಿರೋ ರಕ್ಷಾಕವಚದ ಬಗ್ಗೆ ನೋಡಿದ್ವಿ. ನಮ್ಮನ್ನು ಕಾಪಾಡೋಕೆ ಯೆಹೋವ ಇನ್ನೂ ಏನೆಲ್ಲಾ ಕೊಟ್ಟಿದ್ದಾನೆ ಅಂತ ಈಗ ನೋಡೋಣ.

ಕತ್ತಿ: ಬೈಬಲ್‌

ಹೋರಾಡೋಕೆ ನಮಗೆ ಬೇರೆಯವರ ಸಹಾಯನೂ ಇದೆ

12. ನಮಗೆ ಯಾರ ಸಹಾಯನೂ ಬೇಕು? ಮತ್ತು ಯಾಕೆ?

12 ಒಬ್ಬ ಸೈನಿಕನಿಗೆ ಎಷ್ಟೇ ಅನುಭವ ಇದ್ದರೂ ಒಂದು ದೊಡ್ಡ ಸೈನ್ಯದ ವಿರುದ್ಧ ಅವನೊಬ್ಬನೇ ಹೋರಾಡಿ ಗೆಲ್ಲೋಕೆ ಆಗಲ್ಲ. ಅವನಿಗೆ ಬೇರೆ ಸೈನಿಕರ ಸಹಾಯ ಬೇಕೇ ಬೇಕು. ಅದೇ ತರ, ಸೈತಾನ ಮತ್ತು ಅವನ ಕಡೆಯವರ ವಿರುದ್ಧ ಹೋರಾಡಿ ಗೆಲ್ಲೋಕೆ ನಮ್ಮೊಬ್ಬರಿಂದನೇ ಆಗಲ್ಲ. ನಮಗೆ ನಮ್ಮ ಸಹೋದರ ಸಹೋದರಿಯರ ಸಹಾಯನೂ ಬೇಕು. ಅದಕ್ಕಾಗಿ ಯೆಹೋವ ನಮಗೆ “ಲೋಕದಲ್ಲಿ ಎಲ್ಲ ಕಡೆ ಇರೋ ಸಹೋದರರನ್ನ” ಕೊಟ್ಟಿದ್ದಾನೆ.—1 ಪೇತ್ರ 2:17.

13. ಇಬ್ರಿಯ 10:24, 25 ರ ಪ್ರಕಾರ ಕೂಟಗಳಿಂದ ನಮಗೆ ಯಾವ ಸಹಾಯ ಸಿಗುತ್ತೆ?

13 ನಾವು ಕೂಟಗಳಿಗೆ ಹೋದಾಗ ಸಹೋದರ ಸಹೋದರಿಯರಿಂದ ಸಹಾಯ ಪಡಕೊಳ್ಳುತ್ತೇವೆ. (ಇಬ್ರಿಯ 10:24, 25 ಓದಿ.) ನಮಗೆ ಕೆಲವೊಮ್ಮೆ ನಿರುತ್ಸಾಹ ಆಗುತ್ತೆ. ಆಗೆಲ್ಲಾ ಅದರಿಂದ ಹೊರಬರೋಕೆ ಕೂಟಗಳು ಸಹಾಯ ಮಾಡುತ್ತೆ. ಸಹೋದರ ಸಹೋದರಿಯರು ಕೊಡೋ ಮನದಾಳದ ಉತ್ತರಗಳನ್ನು ಕೇಳಿ ನಮಗೆ ಖುಷಿ ಆಗುತ್ತೆ. ಬೈಬಲಾಧಾರಿತ ಭಾಷಣಗಳು, ಡೆಮೋಗಳು ಯೆಹೋವನನ್ನು ಆರಾಧಿಸೋ ನಮ್ಮ ತೀರ್ಮಾನವನ್ನು ಇನ್ನೂ ಗಟ್ಟಿ ಮಾಡುತ್ತೆ. ಕೂಟಗಳ ಮುಂಚೆ, ಕೂಟಗಳ ನಂತರ ಎಲ್ಲರ ಹತ್ರ ಮಾತಾಡೋದ್ರಿಂದ ನಮ್ಮ ನಂಬಿಕೆ ಬಲ ಆಗುತ್ತೆ. (1 ಥೆಸ. 5:14) ಅಷ್ಟೇ ಅಲ್ಲ, ನಾವು ಕೂಟಗಳಿಗೆ ಹೋಗೋದ್ರಿಂದ ಬೇರೆಯವ್ರಿಗೆ ಸಹಾಯ ಮಾಡೋ ಅವಕಾಶನೂ ಸಿಗುತ್ತೆ. ಇದ್ರಿಂದ ನಮಗೆ ಖುಷಿ ಆಗುತ್ತೆ. (ಅ. ಕಾ. 20:35; ರೋಮ. 1:11, 12) ಕೂಟಗಳು ನಮಗೆ ಇನ್ನೂ ಹೇಗೆಲ್ಲಾ ಸಹಾಯ ಮಾಡುತ್ತೆ? ಇನ್ನೂ ಚೆನ್ನಾಗಿ ಸೇವೆ ಮಾಡೋಕೆ ನಮಗೆ ಕೂಟಗಳು ಸಹಾಯ ಮಾಡುತ್ತೆ. ಉದಾಹರಣೆಗೆ, ಬೋಧನಾ ಸಲಕರಣೆಯನ್ನ ಚೆನ್ನಾಗಿ ಬಳಸೋಕೆ ಕಲಿಯುತ್ತೀವಿ. ಹಾಗಾಗಿ ಕೂಟಗಳಿಗೆ ಚೆನ್ನಾಗಿ ತಯಾರಿ ಮಾಡಿ ಹಾಜರಾಗಿ. ಕೂಟಗಳು ನಡೆಯುವಾಗ ಗಮನಕೊಟ್ಟು ಕೇಳಿಸಿಕೊಳ್ಳಿ. ಕೂಟದ ನಂತರ ಕಲಿತದ್ದನ್ನು ಅನ್ವಯಿಸಿಕೊಳ್ಳಿ. ಇದನ್ನೆಲ್ಲಾ ಮಾಡಿದರೆ ನೀವು ‘ಕ್ರಿಸ್ತ ಯೇಸುವಿನ ಒಳ್ಳೇ ಸೈನಿಕರಾಗುತ್ತೀರಿ.’—2 ತಿಮೊ. 2:3.

14. ಯಾರ ಸಹಾಯನೂ ನಮಗಿದೆ?

14 ಕೋಟಿಗಟ್ಟಲೆ ಇರೋ ದೇವದೂತರ ಸಹಾಯ ನಮಗಿದೆ. ಒಬ್ಬ ದೇವದೂತನಿಗೆ ಎಷ್ಟು ಶಕ್ತಿ ಇದೆ ಅಂತ ನಮಗೆ ಚೆನ್ನಾಗಿ ಗೊತ್ತು. (ಯೆಶಾ. 37:36) ಹಾಗಿರುವಾಗ ದೇವದೂತರ ಸೈನ್ಯಕ್ಕೆ ಇನ್ನೆಷ್ಟು ಶಕ್ತಿ ಇರಬಹುದು! ಯಾವ ಮನುಷ್ಯನಿಗೇ ಆಗಲಿ ಕೆಟ್ಟ ದೇವದೂತನಿಗೇ ಆಗಲಿ ಇಷ್ಟು ಶಕ್ತಿ ಇರೋ ಯೆಹೋವನ ಸೈನ್ಯದ ಮುಂದೆ ನಿಲ್ಲಕ್ಕಾಗಲ್ಲ. ಯೆಹೋವ ಎಲ್ಲರಿಗಿಂತ ಶಕ್ತಿಶಾಲಿ. ನಮ್ಮ ಜೊತೆ ಆತನೊಬ್ಬ ಇದ್ದರೆ ಸಾಕು, ನಮ್ಮ ವಿರುದ್ಧ ಅದೆಷ್ಟೇ ಜನ ಬಂದ್ರೂ ನಾವು ಭಯಪಡಬೇಕಾಗಿಲ್ಲ. (ನ್ಯಾಯ. 6:16) ಈ ಮಾತು ನೂರಕ್ಕೆ ನೂರು ಸತ್ಯ. ನಿಮ್ಮ ಜೊತೆ ಕೆಲಸ ಮಾಡುವವರು, ಸ್ಕೂಲಲ್ಲಿ ಇರುವವರು ಅಥ್ವಾ ಸತ್ಯದಲ್ಲಿಲ್ಲದ ಸಂಬಂಧಿಕರು ಹೇಳೋ ಮಾತು ಅಥ್ವಾ ಮಾಡೋ ವಿಷಯದಿಂದಾಗಿ ನಿಮಗೆ ಭಯ ಆದ್ರೆ ಈ ಮಾತನ್ನು ಯಾವಾಗಲೂ ನೆನಪಿಡಿ. ನೀವೊಬ್ಬರೇ ಈ ಹೋರಾಟ ಮಾಡಬೇಕಾಗಿಲ್ಲ. ಯೆಹೋವ ಹೇಳೋ ತರ ನೀವು ನಡಕೊಂಡ್ರೆ ಆತ ಯಾವಾಗಲೂ ನಿಮಗೆ ಸಹಾಯ ಮಾಡ್ತಾನೆ.

ಯೆಹೋವ ಮುಂದಕ್ಕೂ ನಮ್ಮನ್ನ ಕಾಪಾಡ್ತಾನೆ

15. ಯೆಶಾಯ 54:15, 17 ರ ಪ್ರಕಾರ ಸಾರೋ ಕೆಲಸವನ್ನ ಯಾಕೆ ಯಾರಿಂದಲೂ ನಿಲ್ಲಿಸೋಕೆ ಆಗಲ್ಲ?

15 ಈ ಲೋಕ ಸೈತಾನನ ಕೈಯಲ್ಲಿ ಇರೋದ್ರಿಂದ ಜನ ನಮ್ಮನ್ನ ಬೇರೆಬೇರೆ ಕಾರಣಗಳಿಗೆ ದ್ವೇಷಿಸ್ತಾರೆ. ಉದಾಹರಣೆಗೆ, ನಾವು ಯಾವುದೇ ರಾಜಕೀಯ ಪಕ್ಷವನ್ನ ಬೆಂಬಲಿಸಲ್ಲ, ಸೈನ್ಯಕ್ಕೆ ಸೇರಲ್ಲ. ನಾವು ದೇವರ ಹೆಸರನ್ನ ಜನರಿಗೆ ತಿಳಿಸುತ್ತೀವಿ. ಆತನ ಆಳ್ವಿಕೆ ಮಾತ್ರ ಇಡೀ ಲೋಕಕ್ಕೆ ಶಾಂತಿ ತರುತ್ತೆ ಅಂತ ಸಾರುತ್ತೀವಿ. ಆತನ ನೀತಿನಿಯಮಗಳನ್ನ ಪಾಲಿಸ್ತೀವಿ. ಈ ಲೋಕವನ್ನು ಆಳುತ್ತಿರೋ ಸೈತಾನ ದೊಡ್ಡ ಸುಳ್ಳುಗಾರ, ಕೊಲೆಗಾರ ಅಂತ ಬಯಲು ಪಡಿಸ್ತೀವಿ. (ಯೋಹಾ. 8:44) ಸೈತಾನನ ಈ ಲೋಕದ ನಾಶನ ತುಂಬ ಹತ್ತಿರದಲ್ಲಿದೆ ಅಂತ ಜನರಿಗೆಲ್ಲಾ ಹೇಳ್ತೀವಿ. ಈ ಎಲ್ಲಾ ಕಾರಣಗಳಿಂದಾಗಿ ಜನ ನಮ್ಮನ್ನ ದ್ವೇಷಿಸಿದ್ರೂ ನಮ್ಮ ಸಾರುವ ಕೆಲಸವನ್ನ ಸೈತಾನ ಆಗಲಿ ಅವನ ಕಡೆಯವರಾಗಲಿ ನಿಲ್ಲಿಸೋಕಾಗಲ್ಲ. ಯೆಹೋವನ ಹೆಸರಿಗೆ ಗೌರವ ತರೋಕೆ ನಮ್ಮ ಕೈಲಾಗಿದ್ದನ್ನೆಲ್ಲಾ ನಾವು ಮಾಡುತ್ತಾ ಇರುತ್ತೀವಿ. ಸೈತಾನ ಶಕ್ತಿಶಾಲಿ ಆಗಿದ್ರೂ ಲೋಕದಲ್ಲೆಲ್ಲಾ ನಡೆಯುತ್ತಿರೋ ಸಾರೋ ಕೆಲಸವನ್ನ ಅವನಿಂದ ನಿಲ್ಲಿಸೋಕೆ ಆಗಿಲ್ಲ. ಯೆಹೋವನ ರಕ್ಷಣೆ ನಮ್ಮ ಮೇಲಿರೋದೇ ಇದಕ್ಕೆಲ್ಲಾ ಕಾರಣ.—ಯೆಶಾಯ 54:15, 17 ಓದಿ.

16. ಮಹಾ ಸಂಕಟದ ಸಮಯದಲ್ಲಿ ಯೆಹೋವ ತನ್ನ ಜನರನ್ನ ಹೇಗೆ ಕಾಪಾಡ್ತಾನೆ?

16 ಮುಂದೆ ಏನಾಗುತ್ತೆ? ಮಹಾ ಸಂಕಟದ ಸಮಯದಲ್ಲಿ ಯಾರೂ ಕನಸುಮನಸ್ಸಲ್ಲೂ ನೆನಸದ ರೀತಿಯಲ್ಲಿ ಯೆಹೋವ ದೇವರು ನಮ್ಮನ್ನು ಸಂರಕ್ಷಿಸ್ತಾನೆ. ಆತ ಭೂಮಿಯ ರಾಜರ ಮೂಲಕ ಮಹಾ ಬಾಬೆಲನ್ನ ಅಂದ್ರೆ ಸುಳ್ಳು ಧರ್ಮಗಳ ಸಾಮ್ರಾಜ್ಯವನ್ನ ನಾಶ ಮಾಡುವಾಗ ತನ್ನ ನಿಷ್ಠಾವಂತ ಸೇವಕರನ್ನ ಕಾಪಾಡ್ತಾನೆ. (ಪ್ರಕ. 17:16-18; 18:2, 4) ನಂತ್ರ ಹರ್ಮಗೆದೋನ್‌ನಲ್ಲಿ ಸೈತಾನನ ಲೋಕದ ಉಳಿದ ಭಾಗಗಳನ್ನ ನಾಶ ಮಾಡುವಾಗ ತನ್ನ ಜನರನ್ನ ಕಾಪಾಡ್ತಾನೆ.—ಪ್ರಕ. 7:9, 10; 16:14, 16.

17. ನಾವು ಯೆಹೋವನ ಜೊತೆ ಇರೋದು ಯಾಕೆ ಮುಖ್ಯ?

17 ನಾವು ಯೆಹೋವನ ಜೊತೆ ಇದ್ದರೆ ನಮಗೆ ಶಾಶ್ವತ ಹಾನಿ ತರೋಕೆ ಸೈತಾನನಿಂದ ಸಾಧ್ಯನೇ ಇಲ್ಲ. ನಿಜ ಹೇಳಬೇಕಂದ್ರೆ, ಶಾಶ್ವತ ಹಾನಿ ಆಗೋದು ಅವನಿಗೆ. (ರೋಮ. 16:20) ಹಾಗಾಗಿ ರಕ್ಷಾಕವಚವನ್ನ ಪೂರ್ತಿ ಹಾಕೊಳ್ಳಿ, ಅದನ್ನ ಯಾವಾಗಲೂ ಬಳಸ್ತಾ ಇರಿ! ಸೈತಾನನ ವಿರುದ್ಧ ನೀವೊಬ್ಬರೇ ಹೋರಾಡೋಕೆ ಹೋಗಬೇಡಿ. ಸಹೋದರ ಸಹೋದರಿಯರ ಸಹಾಯ ಪಡಕೊಳ್ಳಿ. ಯೆಹೋವ ಹೇಳಿದ ತರಾನೇ ಮಾಡಿ. ಹೀಗೆ ಮಾಡಿದ್ರೆ ಪ್ರೀತಿಯ ಅಪ್ಪ ಯೆಹೋವ ನಿಮ್ಮನ್ನ ಬಲಪಡಿಸ್ತಾನೆ ಮತ್ತು ಕಾಪಾಡ್ತಾನೆ.—ಯೆಶಾ. 41:10.

ಗೀತೆ 132 ವಿಜಯ ಗೀತೆ

^ ಪ್ಯಾರ. 5 ‘ನಿಮ್ಮನ್ನ ಬಲಪಡಿಸ್ತೀನಿ’ ಅಂತ ಯೆಹೋವ ಬೈಬಲಲ್ಲಿ ನಮಗೆ ಮಾತು ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಆತನ ಜೊತೆ ಇರೋ ಸಂಬಂಧವನ್ನು ಹಾಳು ಮಾಡುವಂಥ ಮತ್ತು ನಮಗೆ ಶಾಶ್ವತ ಹಾನಿ ತರುವಂಥ ವಿಷಯಗಳಿಂದ ಕಾಪಾಡ್ತೀನಿ ಅಂತನೂ ಮಾತು ಕೊಟ್ಟಿದ್ದಾನೆ. ಈ ಲೇಖನದಲ್ಲಿ ನಾವು ಮುಂದಿನ ಪ್ರಶ್ನೆಗಳಿಗೆ ಉತ್ತರ ತಿಳುಕೊಳ್ತೀವಿ: ನಮಗೆ ಯಾಕೆ ರಕ್ಷಣೆ ಬೇಕು? ಯೆಹೋವ ನಮ್ಮನ್ನ ಹೇಗೆ ಕಾಪಾಡ್ತಾನೆ? ಯೆಹೋವ ಕೊಡೋ ಸಹಾಯ ಪಡಕೊಳ್ಳೋಕೆ ನಾವೇನು ಮಾಡಬೇಕು?