ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 12

ಪ್ರೀತಿ ದ್ವೇಷವನ್ನು ಗೆಲ್ಲುತ್ತೆ

ಪ್ರೀತಿ ದ್ವೇಷವನ್ನು ಗೆಲ್ಲುತ್ತೆ

“ನೀವು ಒಬ್ಬರನ್ನೊಬ್ರು ಪ್ರೀತಿಸ್ತಾ ಇರಬೇಕಂತ ನಾನು ಈ ವಿಷ್ಯಗಳನ್ನ ನಿಮಗೆ ಹೇಳ್ತಾ ಇದ್ದೀನಿ. ಲೋಕ ನಿಮ್ಮನ್ನ ದ್ವೇಷಿಸಿದ್ರೆ ಅದು ನಿಮ್ಮನ್ನ ದ್ವೇಷಿಸೋ ಮುಂಚೆ ನನ್ನನ್ನ ದ್ವೇಷಿಸಿತು ಅಂತ ನೆನಪಿಸ್ಕೊಳ್ಳಿ.”—ಯೋಹಾ. 15:17, 18.

ಗೀತೆ 154 ತಾಳಿಕೊಳ್ಳುತ್ತಾ ಇರೋಣ

ಕಿರುನೋಟ *

1. ಮತ್ತಾಯ 24:9 ರ ಪ್ರಕಾರ ಜನರು ನಮ್ಮನ್ನ ದ್ವೇಷಿಸಿದರೆ ನಾವು ಯಾಕೆ ಆಶ್ಚರ್ಯಪಡಬಾರದು?

ನಮಗೆ ಬೇರೆಯವರ ಪ್ರೀತಿ ಬೇಕು. ನಾವೂ ಬೇರೆಯವರನ್ನ ಪ್ರೀತಿಸಬೇಕು. ಯಾಕಂದ್ರೆ ಯೆಹೋವ ನಮ್ಮನ್ನ ಸೃಷ್ಟಿ ಮಾಡಿರೋದೇ ಹಾಗೆ. ಅದಕ್ಕೇ ನಮ್ಮನ್ನ ಯಾರಾದರೂ ದ್ವೇಷಿಸಿದ್ರೆ ನಮ್ಗೆ ತುಂಬ ನೋವಾಗುತ್ತೆ, ಕೆಲವೊಮ್ಮೆ ಭಯನೂ ಆಗುತ್ತೆ. ಉದಾಹರಣೆಗೆ ಯುರೋಪಿನಲ್ಲಿರೋ ಜಾರ್ಜಿನಾ * ಅನ್ನೋ ಸಹೋದರಿ ಹೀಗೆ ಹೇಳ್ತಾಳೆ: “ಯೆಹೋವನ ಸೇವೆ ಮಾಡಬೇಕು ಅಂತ ನಾನು ತೀರ್ಮಾನ ಮಾಡಿದಾಗ ನನಗೆ 14 ವರ್ಷ. ಅದು ನಮ್ಮ ಅಮ್ಮಾಗೆ ಇಷ್ಟ ಆಗಲಿಲ್ಲ. ಅವರು ನನ್ನನ್ನ ತುಂಬ ದ್ವೇಷಿಸಿದರು. ಆಗ ನಂಗೆ ‘ನಾನು ಯಾರಿಗೂ ಬೇಡವಾದವಳು ತುಂಬ ಕೆಟ್ಟವಳೇನೋ’ ಅಂತ ಅನಿಸ್ತಿತ್ತು.” ಡ್ಯಾನಿಲೋ ಅನ್ನೋ ಸಹೋದರ ಹೀಗೆ ಬರೀತಾರೆ: “ನಾನೊಬ್ಬ ಯೆಹೋವನ ಸಾಕ್ಷಿ ಅನ್ನೋ ಕಾರಣಕ್ಕೆ ಸೈನಿಕರು ನನ್ನನ್ನ ಹೊಡೆದ್ರು ಅವಮಾನ ಮಾಡಿದ್ರು ಬೆದರಿಕೆ ಹಾಕಿದ್ರು. ಆಗ ನಂಗೆ ತುಂಬ ಭಯ ಆಯ್ತು ಬೇಜಾರಾಯ್ತು.” ಈ ತರ ಜನರು ನಮ್ಮನ್ನ ದ್ವೇಷಿಸಿದಾಗ ನಮ್ಗೆ ತುಂಬ ನೋವಾಗುತ್ತೆ. ಆದ್ರೆ ಇದು ಆಶ್ಚರ್ಯಪಡೋ ವಿಷ್ಯವಲ್ಲ. ಯಾಕಂದ್ರೆ ಜನರು ನಮ್ಮನ್ನ ದ್ವೇಷಿಸ್ತಾರೆ ಅಂತ ಯೇಸು ಮುಂಚೆನೇ ಹೇಳಿದ್ದನು.—ಮತ್ತಾಯ 24:9 ಓದಿ.

2-3. ಯೇಸುವಿನ ಹಿಂಬಾಲಕರನ್ನ ಲೋಕದ ಜನ ಯಾಕೆ ದ್ವೇಷಿಸ್ತಾರೆ?

2 ಯೇಸುವಿನ ಹಿಂಬಾಲಕರನ್ನ ಲೋಕದ ಜನರು ದ್ವೇಷಿಸ್ತಾರೆ. ಯಾಕೆ? ಯಾಕಂದ್ರೆ ಯೇಸು ತರನೇ ನಾವು ಸಹ ‘ಈ ಲೋಕದ ಜನರ ತರ ಇರಲ್ಲ.’ (ಯೋಹಾ. 15:17-19) ನಾವು ಈಗಿನ ಸರಕಾರಕ್ಕೆ ಗೌರವ ತೋರಿಸೋದಾದರೂ ರಾಜಕೀಯ ವಿಷಯದಲ್ಲಿ ತಲೆಹಾಕಲ್ಲ, ಧ್ವಜಕ್ಕೆ ಸಲ್ಯೂಟ್‌ ಮಾಡಲ್ಲ, ರಾಷ್ಟ್ರಗೀತೆಯನ್ನ ಹಾಡಲ್ಲ. ನಮ್ಮ ಆರಾಧನೆ ಭಕ್ತಿ ಏನಿದ್ರೂ ಯೆಹೋವನಿಗೆ ಮಾತ್ರ. ಮನುಷ್ಯರನ್ನ ಆಳುವ ಹಕ್ಕು ಆತನಿಗೆ ಮಾತ್ರ ಇದೆ. ಆದ್ರೆ ಇದನ್ನ ಸೈತಾನ ಮತ್ತು ಅವನ ಸಂತಾನ ಒಪ್ಪಲ್ಲ. ಆದ್ರೆ ನಾವು ಯೆಹೋವನ ಆಡಳಿತವನ್ನ ಬೆಂಬಲಿಸುತ್ತೇವೆ. (ಆದಿ. 3:1-5, 15) ದೇವರ ಆಡಳಿತ ಮನುಷ್ಯರ ಎಲ್ಲಾ ಕಷ್ಟಗಳನ್ನ ತೆಗೆದು ಹಾಕುತ್ತೆ ಮತ್ತು ಎಲ್ಲಾ ವಿರೋಧಿಗಳನ್ನ ನಾಶಮಾಡುತ್ತೆ ಅಂತ ನಾವು ಜನರಿಗೆ ಸಾರುತ್ತೇವೆ. (ದಾನಿ. 2:44; ಪ್ರಕ. 19:19-21) ಈ ಸಂದೇಶ ಒಳ್ಳೆಯವರಿಗೆ ಸಿಹಿಸುದ್ದಿ, ಕೆಟ್ಟವರಿಗೆ ಕಹಿಸುದ್ದಿ.—ಕೀರ್ತ. 37:10, 11.

3 ನಾವು ದೇವರ ನೀತಿ ನಿಯಮದ ಪ್ರಕಾರ ನಡಿಯೋದರಿಂದನೂ ಲೋಕದ ಜನ ನಮ್ಮನ್ನ ದ್ವೇಷಿಸ್ತಾರೆ. ದೇವರ ನೀತಿ ನಿಯಮಕ್ಕೂ ಲೋಕದ ಜನರ ನೀತಿ ನಿಯಮಕ್ಕೂ ಅಜಗಜಾಂತರ ವ್ಯತ್ಯಾಸ. ಉದಾಹರಣೆಗೆ, ಹಿಂದೆ ಯೆಹೋವ ದೇವರು ಸೊದೋಮ್‌ ಗೊಮೋರವನ್ನ ಯಾವ ಕಾರಣಕ್ಕೆ ನಾಶಮಾಡಿದನೋ ಅಂಥ ಲೈಂಗಿಕ ನಡತೆಯನ್ನ ಇವತ್ತು ಜನ ಒಪ್ತಾರೆ ಮತ್ತು ರಾಜಾರೋಷವಾಗಿ ಅದೇ ತರ ನಡಕೊಳ್ತಾರೆ. (ಯೂದ 7) ಆದ್ರೆ ನಾವು ಬೈಬಲಲ್ಲಿ ಇರೋ ತರ ನಡಕೊಳ್ತೀವಿ. ಅದಕ್ಕೇ ಜನ ನಮ್ಮನ್ನ ಗೇಲಿ ಮಾಡ್ತಾರೆ ಮತ್ತು ವಿಶಾಲ ಮನಸ್ಸಿಲ್ಲದ ಜನ ಅಂತ ಬೈತಾರೆ.—1 ಪೇತ್ರ 4:3, 4.

4. ಜನರು ನಮ್ಮನ್ನ ದ್ವೇಷಿಸಿದಾಗ ಸಹಿಸಿಕೊಳ್ಳೋಕೆ ಯಾವ ಗುಣಗಳು ಸಹಾಯ ಮಾಡುತ್ತೆ?

4 ಜನರು ನಮ್ಮನ್ನ ದ್ವೇಷಿಸಿದಾಗ, ಅವಮಾನ ಮಾಡಿದಾಗ ಅದನ್ನ ಸಹಿಸಿಕೊಳ್ಳೋಕೆ ಯಾವ್ದು ಸಹಾಯ ಮಾಡುತ್ತೆ? ಯೆಹೋವನ ಮೇಲಿರೋ ಬಲವಾದ ನಂಬಿಕೆ ಸಹಾಯ ಮಾಡುತ್ತೆ. ನಂಬಿಕೆ ಗುರಾಣಿ ತರ ಇದೆ. ಅದು ‘ಸೈತಾನನ ಬೆಂಕಿ ತರ ಇರೋ ಎಲ್ಲಾ ಬಾಣಗಳನ್ನ ಆರಿಸುತ್ತೆ.’ (ಎಫೆ. 6:16) ನಮ್ಮಲ್ಲಿ ನಂಬಿಕೆ ಜೊತೆ ಪ್ರೀತಿನೂ ಇರಬೇಕು. ಯಾಕೆ? ಯಾಕಂದ್ರೆ ‘ಪ್ರೀತಿ ಇರುವವನು ಬೇಗ ಸಿಟ್ಟುಮಾಡಿಕೊಳ್ಳಲ್ಲ.’ ಅವನು ಎಲ್ಲವನ್ನ ಸಹಿಸಿಕೊಳ್ತಾನೆ, ಎಲ್ಲವನ್ನ ತಾಳಿಕೊಳ್ತಾನೆ. (1 ಕೊರಿಂ. 13:4-7, 13) ಜನರ ದ್ವೇಷವನ್ನ ತಾಳಿಕೊಳ್ಳೋಕೆ ಯೆಹೋವ ದೇವರ ಮೇಲಿರೋ ಪ್ರೀತಿ, ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಮತ್ತು ನಮ್ಮನ್ನ ದ್ವೇಷಿಸುವವರ ಮೇಲಿರೋ ಪ್ರೀತಿ ಹೇಗೆ ಸಹಾಯ ಮಾಡುತ್ತದೆ ಅಂತ ಈಗ ನೋಡೋಣ.

ಯೆಹೋವನ ಮೇಲಿರೋ ಪ್ರೀತಿ ಸಹಾಯ ಮಾಡುತ್ತೆ

5. ಯೇಸುಗೆ ತನ್ನ ಅಪ್ಪನ ಮೇಲೆ ಪ್ರೀತಿ ಇದ್ದಿದರಿಂದ ಏನು ಮಾಡಿದನು?

5 ಯೇಸುವಿನ ಶತ್ರುಗಳು ಅವನನ್ನ ಸಾಯಿಸೋ ಹಿಂದಿನ ರಾತ್ರಿ ತನ್ನ ಹಿಂಬಾಲಕರಿಗೆ ಹೀಗಂದನು: ‘ನಾನು ನನ್ನ ಅಪ್ಪನನ್ನ ಪ್ರೀತಿಸ್ತೀನಿ ಮತ್ತು ಅಪ್ಪ ನನಗೆ ಹೇಳಿದ ತರಾನೇ ಮಾಡ್ತಾ ಇದ್ದೀನಿ.’ (ಯೋಹಾ. 14:31) ಯೇಸುಗೆ ಯೆಹೋವನ ಮೇಲೆ ಅಷ್ಟು ಪ್ರೀತಿ ಇದ್ದಿದರಿಂದನೇ ಅಂಥ ದೊಡ್ಡ ಕಷ್ಟವನ್ನ ಸಹಿಸಿಕೊಂಡನು. ಅದೇ ತರ ನಮ್ಗೂ ಯೆಹೋವನ ಮೇಲೆ ಪ್ರೀತಿ ಇದ್ರೆ ಏನೇ ಕಷ್ಟಬಂದರೂ ಸಹಿಸಿಕೊಳ್ತೇವೆ.

6. ರೋಮನ್ನರಿಗೆ 5:3-5 ರ ಪ್ರಕಾರ ಯೆಹೋವನ ಜನರಿಗೆ ಹಿಂಸೆ ಬಂದಾಗ ಅವರು ಏನು ಮಾಡ್ತಾರೆ?

6 ಮುಂಚೆ ಇದ್ದ ದೇವಸೇವಕರಿಗೂ ಯೆಹೋವನ ಮೇಲೆ ಪ್ರೀತಿ ಇದ್ದಿದ್ರಿಂದ ಹಿಂಸೆಯನ್ನ ತಾಳಿಕೊಂಡರು. ಉದಾಹರಣೆಗೆ ಯೆಹೂದಿ ಹಿರೀಸಭೆಯವರು ಅಪೊಸ್ತಲರಿಗೆ ಇನ್ನು ಮುಂದೆ ಸಿಹಿಸುದ್ದಿ ಸಾರಬಾರದು ಅಂತ ಆಜ್ಞೆ ಕೊಟ್ಟರೂ ಅಪೊಸ್ತಲರು ಸಾರುವುದನ್ನ ಮುಂದುವರಿಸಿದರು. ಅವರಿಗೆ ಯೆಹೋವನ ಮೇಲೆ ತುಂಬಾ ಪ್ರೀತಿ ಇತ್ತು. ಅದಕ್ಕೇ ‘ಮನುಷ್ಯರಿಗಿಂತ ಹೆಚ್ಚಾಗಿ ದೇವರಿಗೆ ವಿಧೇಯರಾದರು.’ (ಅ. ಕಾ. 5:29; 1 ಯೋಹಾ. 5:3) ದೇವರ ಮೇಲಿರೋ ಇಂಥ ಪ್ರೀತಿ ಇವತ್ತಿಗೂ ಅನೇಕ ಸಹೋದರ ಸಹೋದರಿಯರಿಗಿದೆ. ಅದಕ್ಕೇ ಕ್ರೂರ ಮತ್ತು ಶಕ್ತಿಶಾಲಿ ಸರಕಾರಗಳಿಂದ ಬರೋ ಹಿಂಸೆಯನ್ನ ತಾಳಿಕೊಂಡು ನಂಬಿಗಸ್ತರಾಗಿದ್ದಾರೆ. ಲೋಕ ನಮ್ಮನ್ನ ದ್ವೇಷಿಸಿದ್ರೆ ನಮ್ಗೆ ನಿರುತ್ಸಾಹ ಆಗಲ್ಲ. ಬದ್ಲಿಗೆ ನಾವು ಖುಷಿ ಪಡ್ತೀವಿ. ಅದೊಂದು ಸುಯೋಗ ಅಂತ ನೆನಸ್ತೀವಿ.—ಅ. ಕಾ. 5:41; ರೋಮನ್ನರಿಗೆ 5:3-5 ಓದಿ.

7. ಕುಟುಂಬದವರಿಂದ ಹಿಂಸೆ ಬಂದಾಗ ನಾವು ಹೇಗೆ ನಡ್ಕೊಳ್ಳಬೇಕು?

7 ಆದ್ರೆ ನಮ್ಗೆ ತುಂಬ ಕಷ್ಟವಾಗೋದು ಯಾವಾಗಂದರೆ ನಮ್ಮ ಸ್ವಂತ ಕುಟುಂಬದವರೇ ಹಿಂಸೆ ಕೊಟ್ಟಾಗ. ನಾವು ಯೆಹೋವನ ಬಗ್ಗೆ ಕಲಿಯೋಕೆ ಆರಂಭಿಸಿದಾಗ ಕುಟುಂಬದಲ್ಲಿ ಕೆಲವರು ನಮ್ಮನ್ನ ಯಾರೋ ದಾರಿ ತಪ್ಪಿಸ್ತಿದ್ದಾರೆ ಅಂತ ನೆನೆಸಬಹುದು, ಇನ್ನು ಕೆಲವರು ನಮ್ಗೆ ತಲೆ ಕೆಟ್ಟಿದೆ ಅಂತ ಯೋಚಿಸಬಹುದು. (ಮಾರ್ಕ 3:21 ಹೋಲಿಸಿ.) ನಾವು ಸತ್ಯ ಕಲಿಯದಂತೆ ತಡೆಯೋಕೆ ಅವರು ನಮ್ಗೆ ತುಂಬ ಹಿಂಸೆ ಕೊಡಬಹುದು. ಆದ್ರೆ ನಾವಾಗ ಆಶ್ಚರ್ಯಪಡಲ್ಲ. ಯಾಕಂದ್ರೆ “ಒಬ್ಬನಿಗೆ ಅವನ ಮನೆಯವ್ರೇ ಶತ್ರುಗಳಾಗ್ತಾರೆ” ಅಂತ ಯೇಸು ಹೇಳಿದ್ದಾನೆ. (ಮತ್ತಾ. 10:36) ಹಾಗಾಗಿ ಸಂಬಂಧಿಕರು ನಮ್ಮ ಜೊತೆ ಹೇಗೇ ನಡಕೊಂಡರೂ ನಾವಂತೂ ಅವರನ್ನ ಶತ್ರುಗಳ ತರ ನೋಡಲ್ಲ. ಯೆಹೋವನ ಮೇಲಿರೋ ಪ್ರೀತಿ ಹೆಚ್ಚಾಗ್ತಾ ಹೋದಂತೆ ನಾವು ಜನರನ್ನೂ ಪ್ರೀತಿಸ್ತೀವಿ. (ಮತ್ತಾ. 22:37-39) ಆದ್ರೆ ಜನರನ್ನ ಖುಷಿ ಪಡಿಸಬೇಕಂತ ಬೈಬಲಿನಲ್ಲಿರೋ ತತ್ವಗಳನ್ನ ನಿಯಮಗಳನ್ನ ಮುರಿಯಲ್ಲ.

ಸ್ವಲ್ಪ ಸಮಯಕ್ಕೆ ನಾವು ಕಷ್ಟ ಪಡಬೇಕಾಗಬಹುದು. ಆದ್ರೆ ಯೆಹೋವ ಯಾವಾಗಲೂ ನಮ್ಮ ಜೊತೆ ಇದ್ದು ನಮ್ಮನ್ನ ಸಂತೈಸ್ತಾನೆ, ಬಲಪಡಿಸ್ತಾನೆ (ಪ್ಯಾರ 8-10 ನೋಡಿ)

8-9. ಒಬ್ಬ ಸಹೋದರಿಗೆ ತುಂಬ ವಿರೋಧ ಬಂದ್ರೂ ಧೈರ್ಯವಾಗಿ ಎದುರಿಸೋಕೆ ಯಾವ್ದು ಸಹಾಯ ಮಾಡ್ತು?

8 ಆರಂಭದಲ್ಲಿ ತಿಳಿಸಲಾದ ಜಾರ್ಜಿನಾ ಅನ್ನೋ ಸಹೋದರಿಗೆ ಆಕೆಯ ತಾಯಿಯಿಂದನೇ ಹಿಂಸೆ ಬಂದರೂ ಅವಳದನ್ನ ಎದುರಿಸಿ ದೃಢವಾಗಿ ನಿಂತಳು. ಆಕೆ ಹೀಗೆ ಹೇಳ್ತಾಳೆ: “ನಾನೂ ನಮ್ಮಮ್ಮ ಇಬ್ರೂ ಒಟ್ಟಿಗೇ ಬೈಬಲ್‌ ಸ್ಟಡಿ ತಗೊಳೋಕೆ ಶುರು ಮಾಡಿದ್ವಿ. 6 ತಿಂಗಳಾದ ಮೇಲೆ ನಾನು ಕೂಟಗಳಿಗೆ ಹೋಗ್ತೀನಿ ಅಂತ ಅಮ್ಮನತ್ರ ಹೇಳಿದೆ. ಆದ್ರೆ ನಮ್ಮಮ್ಮ ತುಂಬ ವಿರೋಧಿಸಿದ್ರು. ಅವರು ಧರ್ಮಭ್ರಷ್ಟರ ಜೊತೆ ಸಹವಾಸ ಮಾಡ್ತಿದ್ದಾರೆ ಅಂತ ಗೊತ್ತಾಯ್ತು. ಧರ್ಮಭ್ರಷ್ಟರಿಂದ ಕಲಿತ ಸುಳ್ಳುಗಳನ್ನ ಉಪಯೋಗಿಸಿ ನನ್ನತ್ರ ಅಮ್ಮ ವಾದ ಮಾಡ್ತಿದ್ರು. ತುಂಬ ಅವಮಾನ ಮಾಡ್ತಿದ್ರು, ಕೂದಲು ಎಳೆಯುತ್ತಿದ್ದರು, ಕತ್ತು ಹಿಸುಕುತ್ತಿದ್ದರು, ನಮ್ಮ ಪುಸ್ತಕ-ಪತ್ರಿಕೆಗಳನ್ನ ಎಸೆಯುತ್ತಿದ್ದರು. ನಂಗೆ 15 ವರ್ಷವಾದಾಗ ದೀಕ್ಷಾಸ್ನಾನ ತಗೊಂಡೆ. ನಾನು ಯೆಹೋವನ ಆರಾಧನೆ ಮಾಡದಂತೆ ತಡಿಯೋಕೆ ನಮ್ಮಮ್ಮ ತುಂಬ ಪ್ರಯತ್ನಪಟ್ರು. ಮಾತು ಕೇಳದೆ ದಂಗೆಯೇಳುವ ಮಕ್ಕಳಿರೋ ಒಂದು ಹಾಸ್ಟೆಲ್‌ಗೆ ನನ್ನನ್ನ ಸೇರಿಸಿದರು. ಅಲ್ಲಿದ್ದವರೆಲ್ಲ ಡ್ರಗ್ಸ್‌ ತಗೊಳ್ತಿದ್ರು, ದೊಡ್ಡದೊಡ್ಡ ತಪ್ಪುಗಳನ್ನ ಮಾಡ್ತಿದ್ರು. ನಿಜಕ್ಕೂ ನಮ್ಮ ಸ್ವಂತದವರೇ ಇಷ್ಟು ಹಿಂಸೆ ಕೊಟ್ಟಾಗ ಅದನ್ನ ಸಹಿಸಿಕೊಳ್ಳೋದು ತುಂಬ ಕಷ್ಟ.”

9 ಇದನ್ನೆಲ್ಲಾ ಜಾರ್ಜಿನಾ ಹೇಗೆ ಸಹಿಸಿಕೊಂಡಳು? ಅವಳು ಹೀಗೆ ಹೇಳ್ತಾಳೆ: “ನಮ್ಮಮ್ಮ ನನ್ನನ್ನ ವಿರೋಧಿಸೋಕೆ ಶುರುಮಾಡಿದ ದಿನಾನೇ ನಾನು ಪೂರ್ತಿ ಬೈಬಲ್‌ ಓದಿ ಮುಗಿಸಿಬಿಟ್ಟಿದ್ದೆ. ನಂಗೆ ಬೈಬಲಲ್ಲಿ ಇರೋದೇ ಸತ್ಯ ಅನ್ನೋದು ಮನವರಿಕೆಯಾಗಿತ್ತು. ಯೆಹೋವನ ಜೊತೆ ಆಪ್ತ ಸ್ನೇಹ ಬೆಳೆದಿತ್ತು. ನಾನು ಯಾವಾಗಲೂ ಯೆಹೋವ ದೇವರಿಗೆ ಪ್ರಾರ್ಥಿಸ್ತಿದ್ದೆ. ಅವರೂ ನನ್ನ ಪ್ರಾರ್ಥನೆಗೆ ಉತ್ತರ ಕೊಡ್ತಿದ್ರು. ನಾನು ಹಾಸ್ಟೆಲ್‌ನಲ್ಲಿದ್ದಾಗ ಒಬ್ಬ ಸಹೋದರಿ ನನ್ನನ್ನ ಮನೆಗೆ ಕರೆದರು. ನಾವಿಬ್ಬರೂ ಒಟ್ಟಿಗೆ ಬೈಬಲ್‌ ಓದಿ ಅಧ್ಯಯನ ಮಾಡಿದ್ವಿ. ಸಭೆಯಲ್ಲಿದ್ದ ಬೇರೆ ಸಹೋದರ ಸಹೋದರಿಯರು ನಂಗೆ ಧೈರ್ಯ ತುಂಬಿದ್ರು. ನನ್ನನ್ನ ಮನೆಮಗಳ ತರ ನೋಡ್ಕೊಂಡರು. ನಮ್ಮನ್ನ ವಿರೋಧ ಮಾಡುವವರು ಅದು ಯಾರೇ ಆಗಿರಲಿ ಅವ್ರಿಗಿಂತ ಯೆಹೋವ ಶಕ್ತಿಶಾಲಿ ಅನ್ನೋದಂತೂ ನಂಗೆ ಚೆನ್ನಾಗಿ ಅರ್ಥ ಆಯ್ತು.”

10. ನಾವು ಯಾವ ವಿಷ್ಯದ ಮೇಲೆ ಪೂರ್ತಿ ನಂಬಿಕೆ ಇಡಬಹುದು?

10 ಅಪೊಸ್ತಲ ಪೌಲ ‘ಯಾವುದೂ ನಮ್ಮನ್ನ ಪ್ರಭು ಕ್ರಿಸ್ತ ಯೇಸುವಿನ ಮೂಲಕ ದೇವರು ತೋರಿಸೋ ಪ್ರೀತಿಯಿಂದ ದೂರ ಮಾಡೋಕೆ ಆಗಲ್ಲ‘ ಅಂತ ಬರೆದಿದ್ದಾನೆ. (ರೋಮ. 8:38, 39) ಸ್ವಲ್ಪ ಸಮಯಕ್ಕೆ ನಾವು ಕಷ್ಟ ಅನುಭವಿಸಬೇಕಾಗಬಹುದು. ಆದ್ರೆ ಯೆಹೋವ ಯಾವಾಗಲೂ ನಮ್ಮ ಜೊತೆ ಇರ್ತಾನೆ, ಸಾಂತ್ವನ ಕೊಡ್ತಾನೆ, ಕಷ್ಟಗಳನ್ನ ಸಹಿಸೋಕೆ ಶಕ್ತಿ ಕೊಡ್ತಾನೆ. ಜಾರ್ಜಿನಾ ಅನುಭವ ನೋಡಿದಂತೆ ಸಭೆಯಲ್ಲಿರೋ ಸಹೋದರ ಸಹೋದರಿಯರ ಮೂಲಕನೂ ಯೆಹೋವ ನಮ್ಗೆ ಸಹಾಯ ಮಾಡ್ತಾನೆ.

ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಸಹಾಯ ಮಾಡುತ್ತೆ

11. ಯೋಹಾನ 15:12, 13 ರಲ್ಲಿ ಯೇಸು ವಿವರಿಸಿರೋ ತರದ ಪ್ರೀತಿಯನ್ನು ಶಿಷ್ಯರು ಬೆಳೆಸಿಕೊಂಡದ್ದರಿಂದ ಅವರಿಗೆ ಹೇಗೆ ಸಹಾಯ ಆಯ್ತು? ಒಂದು ಉದಾಹರಣೆ ಕೊಡಿ.

11 ಯೇಸು ತೀರಿ ಹೋಗೋ ಹಿಂದಿನ ರಾತ್ರಿ ತನ್ನ ಶಿಷ್ಯರಿಗೆ ಒಬ್ಬರನ್ನೊಬ್ಬರು ಪ್ರೀತಿಸ್ತಾ ಇರಿ ಅಂತ ಹೇಳಿದನು. (ಯೋಹಾನ 15:12, 13 ಓದಿ.) ಅವರಲ್ಲಿ ನಿಸ್ವಾರ್ಥ ಪ್ರೀತಿ ಇದ್ರೆ ಅವ್ರ ಮಧ್ಯ ಒಗ್ಗಟ್ಟಿರುತ್ತೆ, ಲೋಕದ ದ್ವೇಷವನ್ನ ತಾಳಿಕೊಳ್ಳೋಕೆ ಆಗುತ್ತೆ ಅಂತ ಯೇಸುಗೆ ಗೊತ್ತಿತ್ತು. ಥೆಸಲೊನೀಕ ಸಭೆಯ ಉದಾಹರಣೆ ನೋಡಿ. ಆ ಸಭೆ ಶುರುವಾದಾಗಿಂದ ಅಲ್ಲಿದ್ದ ಸಹೋದರ ಸಹೋದರಿಯರಿಗೆ ತುಂಬ ಹಿಂಸೆ ಬಂತು. ಆದ್ರೂ ಅವರು ಒಬ್ಬರನ್ನೊಬ್ಬರು ಪ್ರೀತಿಸ್ತಿದ್ರು, ಯೆಹೋವನಿಗೆ ನಿಷ್ಠಾವಂತರಾಗಿದ್ರು, ಮತ್ತು ಬೇರೆಯವರಿಗೆ ಒಳ್ಳೇ ಮಾದರಿಯಾಗಿದ್ದರು. (1 ಥೆಸ. 1:3, 6, 7) ಆದ್ರೂ ಪೌಲ ಅವರಿಗೆ ‘ಇನ್ನೂ ಜಾಸ್ತಿ ಪ್ರೀತಿಸಿ’ ಅಂತ ಉತ್ತೇಜಿಸಿದನು. (1 ಥೆಸ. 4:9, 10) ಅವರಲ್ಲಿ ಪ್ರೀತಿ ಇದ್ದರೆ ಮನನೊಂದವರಿಗೆ ಸಂತೈಸ್ತಾರೆ, ಬಲ ಇಲ್ಲದವರಿಗೆ ಆಧಾರವಾಗಿ ಇರ್ತಾರೆ ಅಂತ ಪೌಲನಿಗೆ ಚೆನ್ನಾಗಿ ಗೊತ್ತಿತ್ತು. (1 ಥೆಸ. 5:14) ಅವರು ಪೌಲ ಕೊಟ್ಟ ಸಲಹೆಯಂತೆ ನಡಕೊಂಡರು. ಅದಕ್ಕೇ ಅವನು ಒಂದು ವರ್ಷದ ನಂತರ ಬರೆದ 2 ನೇ ಪತ್ರದಲ್ಲಿ ಹೀಗೆ ಹೇಳಿದ: “ಪ್ರತಿಯೊಬ್ರಲ್ಲೂ ಒಬ್ರಿಗೆ ಇನ್ನೊಬ್ರ ಮೇಲಿರೋ ಪ್ರೀತಿ ಜಾಸ್ತಿ ಆಗ್ತಿದೆ.” (2 ಥೆಸ. 1:3-5) ಅವ್ರ ಮಧ್ಯೆ ಪ್ರೀತಿ ಇದ್ದಿದ್ರಿಂದನೇ ಅವ್ರಿಗೆ ಬಂದ ಕಷ್ಟನ ವಿರೋಧನ ತಾಳಿಕೊಂಡರು.

ನಮ್ಮ ಮಧ್ಯೆ ಪ್ರೀತಿಯಿದ್ದರೆ ಲೋಕದ ದ್ವೇಷವನ್ನ ಸಹಿಸಿಕೊಳ್ತೀವಿ (ಪ್ಯಾರ 12 ನೋಡಿ) *

12. ಯುದ್ಧ ನಡೀತಿದ್ದಾಗ ಒಂದು ದೇಶದಲ್ಲಿ ಸಹೋದರ ಸಹೋದರಿಯರು ಹೇಗೆ ಪ್ರೀತಿ ತೋರಿಸಿದರು?

12 ಈಗಾಗಲೇ ತಿಳಿಸಿದ ಸಹೋದರ ಡ್ಯಾನಿಲೋ ಮತ್ತು ಅವರ ಪತ್ನಿಯ ಅನುಭವ ನೋಡಿ. ಅವರಿದ್ದ ದೇಶದಲ್ಲಿ ಯುದ್ಧ ನಡೀತಿತ್ತು. ಆ ಮೇಲೆ ಅವರ ಪಟ್ಟಣದಲ್ಲೇ ಯುದ್ಧ ಶುರುವಾಯ್ತು. ಆದ್ರೂ ಅವರಿಬ್ಬರು ಕೂಟಗಳಿಗೆ ಹೋಗೋದನ್ನ ಮುಂದುವರಿಸಿದ್ರು. ತಮ್ಮ ಕೈಲಾದಷ್ಟು ಸೇವೆಯನ್ನೂ ಮಾಡ್ತಿದ್ದರು ಮತ್ತು ತಮ್ಮ ಹತ್ರ ಇದ್ದ ಆಹಾರವನ್ನ ಬೇರೆ ಸಹೋದರ ಸಹೋದರಿಯರ ಜೊತೆ ಹಂಚಿಕೊಂಡರು. ಆ ಮೇಲೆ ಒಂದು ದಿನ ಅವರ ಮನೆಗೆ ಸೈನಿಕರು ದಿಢೀರಂತ ನುಗ್ಗಿದರು. ಆಗ ಏನಾಯ್ತು ಅಂತ ಡ್ಯಾನಿಲೋ ಹೀಗೆ ಹೇಳ್ತಾರೆ: “ನಾನು ಯೆಹೋವನ ಆರಾಧನೆ ನಿಲ್ಲಿಸಲೇಬೇಕು ಅಂತ ಅವರು ಒತ್ತಾಯ ಮಾಡಿದ್ರು. ನಾನದಕ್ಕೆ ಒಪ್ಪಲಿಲ್ಲ, ಆಗ ತುಂಬ ಹೊಡೆದರು. ನನ್ನನ್ನ ಹೆದರಿಸೋಕೆ ನನ್ನ ತಲೆ ಮೇಲಿಂದ ಗುಂಡು ಹಾರಿಸಿದರು. ಅಲ್ಲಿಂದ ಹೊರಡೋ ಮುಂಚೆ ಮುಂದಿನ ಸಲ ಬಂದಾಗ ನನ್ನ ಹೆಂಡ್ತಿಯನ್ನ ರೇಪ್‌ ಮಾಡ್ತೀವಿ ಅಂತ ಬೆದರಿಕೆ ಹಾಕಿದ್ರು. ಈ ವಿಷ್ಯ ಗೊತ್ತಾದ ಕೂಡ್ಲೇ ನಮ್ಮ ಸಹೋದರರು ನಮ್ಮಿಬ್ಬರನ್ನೂ ಒಂದು ಟ್ರೈನ್‌ ಹತ್ತಿಸಿ ಬೇರೆ ಊರಿಗೆ ಕಳುಹಿಸಿಕೊಟ್ರು. ಅವರು ತೋರಿಸಿದ ಪ್ರೀತಿಯನ್ನ ನಾವು ಯಾವತ್ತೂ ಮರೆಯಲ್ಲ. ನಾವು ಹೊಸ ಊರಿಗೆ ಹೋದಾಗ ಅಲ್ಲಿರೋ ಸಹೋದರರು ನಮ್ಗೆ ಊಟ ಕೊಟ್ರು. ನನಗೊಂದು ಕೆಲಸ ಮತ್ತು ಒಂದು ಮನೆಯನ್ನೂ ಹುಡುಕಿ ಕೊಟ್ರು. ಅವರು ತೋರಿಸಿದ ಈ ಪ್ರೀತಿಯಿಂದಾಗಿ, ಯುದ್ಧದ ಕಾರಣದಿಂದ ತಮ್ಮ ಮನೆ ಬಿಟ್ಟು ನಿರಾಶ್ರಿತರಾಗಿ ಬರೋ ಬೇರೆ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ನಮಗಾಯ್ತು.” ನಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಇದ್ದರೆ ಲೋಕದ ದ್ವೇಷನ ಸಹಿಸಿಕೊಂಡು ಹೋಗೋಕೆ ಆಗುತ್ತೆ ಅಂತ ಇಂಥ ಅನುಭವಗಳಿಂದ ಗೊತ್ತಾಗುತ್ತೆ.

ವಿರೋಧಿಗಳ ಮೇಲಿರೋ ಪ್ರೀತಿ ಸಹಾಯ ಮಾಡುತ್ತೆ

13. ನಾವು ಯೆಹೋವನ ಸೇವೆ ಮಾಡ್ತಿರೋದಿಕ್ಕೆ ಜನ ನಮ್ಮನ್ನ ದ್ವೇಷಿಸಿದ್ರೆ ಅದನ್ನ ತಾಳಿಕೊಳ್ಳೋಕೆ ಪವಿತ್ರ ಶಕ್ತಿ ಹೇಗೆ ಸಹಾಯ ಮಾಡುತ್ತೆ?

13 ಶತ್ರುಗಳನ್ನ ಪ್ರೀತಿಸ್ತಾ ಇರಿ ಅಂತ ಯೇಸು ತನ್ನ ಹಿಂಬಾಲಕರಿಗೆ ಹೇಳಿದನು. (ಮತ್ತಾ. 5:44, 45) ಇದು ಸುಲಭನಾ? ಖಂಡಿತ ಇಲ್ಲ. ಆದ್ರೆ ಈ ವಿಷಯದಲ್ಲಿ ಪವಿತ್ರ ಶಕ್ತಿ ನಮ್ಗೆ ಸಹಾಯ ಮಾಡುತ್ತೆ. ಪ್ರೀತಿ, ತಾಳ್ಮೆ, ದಯೆ, ಸೌಮ್ಯತೆ ಮತ್ತು ಸ್ವನಿಯಂತ್ರಣದಂಥ ಗುಣಗಳನ್ನ ಬೆಳೆಸೋಕೆ ನಮ್ಗೆ ಪವಿತ್ರ ಶಕ್ತಿ ಸಹಾಯಮಾಡುತ್ತೆ. (ಗಲಾ. 5:22, 23) ಬೇರೆಯವರ ದ್ವೇಷವನ್ನ ಸಹಿಸಿಕೊಳ್ಳೋಕೂ ಈ ಗುಣಗಳು ಸಹಾಯ ಮಾಡುತ್ತೆ. ಸತ್ಯದಲ್ಲಿರೋ ಗಂಡನೋ ಹೆಂಡ್ತಿನೋ ಮಕ್ಕಳೋ ಅಥವಾ ನೆರೆಯವರೋ ಈ ಗುಣಗಳನ್ನ ತೋರಿಸಿದ್ದರಿಂದ ಅವರನ್ನ ವಿರೋಧಿಸ್ತಿದ್ದವರು ಈಗ ತಮ್ಮ ಮನಸ್ಸು ಬದಲಾಯಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ಸತ್ಯಕ್ಕೂ ಬಂದಿದ್ದಾರೆ. ನಮ್ಮನ್ನ ದ್ವೇಷಿಸುವವರನ್ನ ಪ್ರೀತಿಸೋಕೆ ನಮ್ಗೆ ಕಷ್ಟವಾದ್ರೆ ಈ ವಿಷ್ಯದಲ್ಲಿ ಪವಿತ್ರ ಶಕ್ತಿ ಕೊಟ್ಟು ಸಹಾಯ ಮಾಡಪ್ಪಾ ಅಂತ ಯೆಹೋವನತ್ರ ಪ್ರಾರ್ಥಿಸೋಣ. (ಲೂಕ 11:13) ಯೆಹೋವ ದೇವರು ನಮ್ಗೆ ಏನೇ ಮಾಡೋಕೆ ಹೇಳಿದರೂ ಅದು ನಮ್ಮ ಒಳ್ಳೇದಕ್ಕೆ ಅನ್ನೋದನ್ನ ಯಾವತ್ತಿಗೂ ಮರೆಯದಿರೋಣ.—ಜ್ಞಾನೋ. 3:5-7.

14-15. ಗಂಡ ಅಷ್ಟು ಕಷ್ಟ ಕೊಟ್ರೂ ಯಾಸ್ಮಿನ್‌ ಪ್ರೀತಿಯಿಂದ ನಡಕೊಳ್ಳೋಕೆ ರೋಮನ್ನರಿಗೆ 12:17-21 ಹೇಗೆ ಸಹಾಯ ಮಾಡ್ತು?

14 ಸಹೋದರಿ ಯಾಸ್ಮಿನ್‌ ಉದಾಹರಣೆ ನೋಡಿ. ಅವಳು ಯೆಹೋವನ ಸಾಕ್ಷಿಯಾದಾಗ ಅವಳ ಗಂಡ ‘ಸಾಕ್ಷಿಗಳು ಅವಳ ತಲೆ ಕೆಡಿಸಿದ್ದಾರೆ’ ಅಂದುಕೊಂಡ. ಯೆಹೋವನ ಆರಾಧನೆ ಮಾಡದಂತೆ ತಡೆಯೋಕೆ ಏನೇನೋ ಪ್ರಯತ್ನ ಮಾಡಿದ. ತುಂಬ ಅವಮಾನ ಮಾಡಿದ. ಅವಳನ್ನ ಬೆದರಿಸೋಕೆ ಮತ್ತು ಕುಟುಂಬ ಒಡೆಯುತ್ತಿದ್ದಾಳೆ ಅಂತ ಆರೋಪ ಹೊರಿಸೋಕೆ ಸಂಬಂಧಿಕರನ್ನ, ಧರ್ಮಗುರುವನ್ನ, ಮಂತ್ರವಾದಿಯನ್ನ ಕರೆಸಿದ. ಒಂದು ಸಲ ಕೂಟ ನಡೆಯುತ್ತಿದ್ದಾಗ ರಾಜ್ಯ ಸಭಾಗೃಹಕ್ಕೇ ಬಂದು ಸಹೋದರರಿಗೆ ಕೆಟ್ಟಕೆಟ್ಟದಾಗಿ ಬೈದುಬಿಟ್ಟ. ಗಂಡ ಇಷ್ಟು ಕಷ್ಟ ಕೊಡ್ತಿದ್ದರಿಂದ ಯಾಸ್ಮಿನ್‌ ಕೆಲವೊಮ್ಮೆ ತುಂಬ ಅಳ್ತಿದ್ದಳು.

15 ಸಭೆಯಲ್ಲಿ ಸಹೋದರ ಸಹೋದರಿಯರು ಯಾಸ್ಮಿನ್‌ಗೆ ಸಮಾಧಾನ ಮಾಡ್ತಿದ್ರು ಮತ್ತು ಅವಳಿಗೆ ಧೈರ್ಯ ತುಂಬ್ತಿದ್ರು. ಹಿರಿಯರು ರೋಮನ್ನರಿಗೆ 12:17-21 ರಲ್ಲಿರೋ (ಓದಿ) ಸಲಹೆಯನ್ನ ಅನ್ವಯಿಸೋಕೆ ಪ್ರೋತ್ಸಾಹ ಕೊಟ್ರು. ಯಾಸ್ಮಿನ್‌ ಹೀಗೆ ಹೇಳ್ತಾಳೆ: “ಈ ಸಲಹೆ ಪಾಲಿಸೋಕೆ ಕಷ್ಟವಾಗ್ತಿತ್ತು. ಅದಕ್ಕೆ ಯೆಹೋವ ದೇವರತ್ರ ‘ಸಹಾಯ ಮಾಡಪ್ಪಾ’ ಅಂತ ಬೇಡಿಕೊಳ್ತಿದ್ದೆ ಮತ್ತು ಅದನ್ನ ಪಾಲಿಸೋಕೆ ನನ್ನಿಂದ ಆದ ಪ್ರಯತ್ನ ಮಾಡ್ತಿದ್ದೆ. ನಮ್ಮ ಯಜಮಾನರು ಅಡಿಗೆ ಮನೆಯಲ್ಲಿ ಬೇಕುಬೇಕಂತ ಕಸ ಚೆಲ್ಲುತ್ತಿದ್ದರು. ನಾನು ಏನು ಮಾತಾಡದೆ ಕ್ಲೀನ್‌ ಮಾಡ್ತಿದ್ದೆ. ಅವರು ನಂಗೆ ಅವಮಾನ ಮಾಡಿದಾಗ ನಾನು ಸಮಾಧಾನವಾಗಿ ಮಾತಾಡ್ತಿದ್ದೆ. ಅವರಿಗೆ ಹುಷಾರಿಲ್ಲದಾಗ ಅವರನ್ನ ಚೆನ್ನಾಗಿ ನೋಡ್ಕೊಂಡೆ.”

ನಮ್ಮನ್ನ ವಿರೋಧಿಸುವವರಿಗೆ ಪ್ರೀತಿ ತೋರಿಸಿದರೆ ಅವರು ಬದಲಾಗಬಹುದು (ಪ್ಯಾರ 16-17 ನೋಡಿ) *

16-17. ಯಾಸ್ಮಿನ್‌ ಉದಾಹರಣೆಯಿಂದ ನೀವೇನು ಕಲಿತ್ರಿ?

16 ಯಾಸ್ಮಿನ್‌ ಗಂಡನಿಗೆ ಪ್ರೀತಿ ತೋರಿಸಿದ್ದಕ್ಕೆ ಒಳ್ಳೆ ಪ್ರತಿಫಲ ಸಿಕ್ತು. ಅವಳು ಹೀಗೆ ಹೇಳ್ತಾಳೆ: “ಈಗ ನಮ್ಮ ಯಜಮಾನರು ನನ್ನನ್ನ ತುಂಬ ನಂಬ್ತಾರೆ. ಯಾಕಂದ್ರೆ ನಾನು ಯಾವಾಗಲೂ ಸತ್ಯವನ್ನೇ ಹೇಳ್ತೀನಿ ಅಂತ ಅವರಿಗೆ ಗೊತ್ತು. ಮನೇಲಿ ಧರ್ಮದ ಬಗ್ಗೆ ಮಾತು ಬಂದಾಗ ಸಮಾಧಾನವಾಗಿ ಕೇಳ್ತಾರೆ, ಜಗಳ ಆಡಲ್ಲ. ಅಷ್ಟೇ ಅಲ್ಲ ಕೂಟಗಳಿಗೆ ಹೋಗೋಕೂ ಬಿಡ್ತಾರೆ. ಈಗ ನಾವು ಪ್ರೀತಿಯಿಂದ ಇದ್ದೀವಿ, ನಮ್ಮ ಮಧ್ಯ ಶಾಂತಿ ಸಮಾಧಾನ ಇದೆ. ಒಂದಲ್ಲ ಒಂದು ದಿನ ನಮ್ಮ ಯಜಮಾನರು ಸತ್ಯ ಕಲಿತಾರೆ, ನನ್ನ ಜೊತೆ ಸೇರಿ ಯೆಹೋವನನ್ನ ಆರಾಧಿಸ್ತಾರೆ ಅನ್ನೋ ನಂಬಿಕೆ ನನಗಿದೆ.”

17 ‘ಪ್ರೀತಿ ಇರುವವನು ಎಲ್ಲವನ್ನ ಸಹಿಸ್ಕೊಳ್ತಾನೆ, ಎಲ್ಲವನ್ನ ನಂಬ್ತಾನೆ, ಎಲ್ಲವನ್ನ ನಿರೀಕ್ಷಿಸ್ತಾನೆ, ಎಲ್ಲವನ್ನ ತಾಳ್ಕೊಳ್ತಾನೆ’ ಅಂತ ಯಾಸ್ಮಿನ್‌ ಅನುಭವ ತೋರಿಸಿಕೊಡುತ್ತೆ. (1 ಕೊರಿಂ. 13:4, 7) ದ್ವೇಷಕ್ಕೆ ಶಕ್ತಿಯಿದೆ, ಅದು ತುಂಬ ನೋವು ಕೊಡುತ್ತೆ. ಆದ್ರೆ ಅದಕ್ಕಿಂತ ಪ್ರೀತಿಗೆ ತುಂಬ ಶಕ್ತಿಯಿದೆ, ಅದು ಜನರ ಹೃದಯ ಗೆಲ್ಲುತ್ತೆ. ಅಷ್ಟೇ ಅಲ್ಲ ಯೆಹೋವನ ಹೃದಯಕ್ಕೆ ಸಂತೋಷ ತರುತ್ತೆ. ಒಂದುವೇಳೆ ವಿರೋಧಿಗಳ ಮನಸ್ಸು ಬದಲಾಗದಿದ್ರೂ ನಾವು ಸಂತೋಷವಾಗಿಯೇ ಇರಬಹುದು. ಅದು ಹೇಗೆ?

ದ್ವೇಷಿಸಿದ್ರೂ ಸಂತೋಷವಾಗಿರಬಹುದು

18. ಜನ ನಮ್ಮನ್ನ ದ್ವೇಷಿಸಿದಾಗ ಸಂತೋಷವಾಗಿ ಇರಬಹುದು ಯಾಕೆ?

18 ‘ಜನ ನಿಮ್ಮನ್ನ ದ್ವೇಷಿಸಿದಾಗ ಸಂತೋಷವಾಗಿ ಇರ್ತಿರ’ ಅಂತ ಯೇಸು ಹೇಳಿದನು. (ಲೂಕ 6:22) ಜನರ ದ್ವೇಷ ಕಟ್ಟಿಕೊಳ್ಳೋದು ನಮ್ಗೆ ಇಷ್ಟನೂ ಆಗಲ್ಲ, ನಂಬಿಕೆಯಿಂದಾಗಿ ನಮ್ಗೆ ಹಿಂಸೆ ಬರೋದು ಸಂತೋಷನೂ ಕೊಡಲ್ಲ. ಹಾಗಾದ್ರೆ ಜನ ದ್ವೇಷಿಸಿದ್ರೂ ನಾವು ಸಂತೋಷವಾಗಿ ಇರಬೇಕು ಅಂತ ಯೇಸು ಯಾಕೆ ಹೇಳಿದನು? ಮೂರು ಕಾರಣಗಳನ್ನ ನೋಡಿ. (1) ನಾವು ಜನರ ದ್ವೇಷವನ್ನ ಸಹಿಸಿಕೊಂಡ್ರೆ ದೇವರಿಗೆ ಸಂತೋಷವಾಗುತ್ತೆ. (1 ಪೇತ್ರ 4:13, 14) (2) ನಮ್ಮ ನಂಬಿಕೆಯ ಗುಣಮಟ್ಟ ಹೆಚ್ಚಿ ಅದು ಇನ್ನೂ ಬಲವಾಗುತ್ತೆ. (1 ಪೇತ್ರ 1:7) (3) ಬೆಲೆನೇ ಕಟ್ಟೋಕೆ ಆಗದ ಬಹುಮಾನ ಅಂದ್ರೆ ಶಾಶ್ವತ ಜೀವ ಸಿಗುತ್ತೆ!—ರೋಮ. 2:6, 7.

19. ಹೊಡೆತ ತಿಂದ್ರೂ ಅಪೊಸ್ತಲರು ಯಾಕೆ ಸಂತೋಷವಾಗಿದ್ರು?

19 ಯೇಸು ಹೇಳಿದ ಈ ಸಂತೋಷವನ್ನ ಅಪೊಸ್ತಲರು ಆತ ತೀರಿಹೋಗಿ ಎದ್ದು ಬಂದ ಸ್ವಲ್ಪ ಸಮಯದಲ್ಲೇ ಅನುಭವಿಸಿದರು. ಆ ಸಮಯದಲ್ಲಿ ವಿರೋಧಿಗಳು ಅಪೊಸ್ತಲರನ್ನ ‘ಚೆನ್ನಾಗಿ ಹೊಡೆದು ನೀವಿನ್ನು ಸಾರಲೇಬಾರದು’ ಅಂತ ಆಜ್ಞೆ ಕೊಟ್ಟಿದ್ದರು. ಆದ್ರೆ ಅಪೊಸ್ತಲರು ಖುಷಿ ಕಳಕೊಳ್ಳಲಿಲ್ಲ. ಯಾಕೆ? “ಯಾಕಂದ್ರೆ ಯೇಸು ಹೆಸ್ರಿಂದಾಗಿ ಅವಮಾನಪಡೋ ದೊಡ್ಡ ಅವಕಾಶ ಸಿಕ್ಕಿದ್ದಕ್ಕೆ ಅವ್ರಿಗೆ ತುಂಬ ಖುಷಿ ಆಯ್ತು.” (ಅ. ಕಾ. 5:40-42) ಅವ್ರಿಗೆ ಶತ್ರುಗಳ ಮೇಲಿನ ಭಯಕ್ಕಿಂತ ಹೆಚ್ಚಾಗಿ ಒಡೆಯನ ಮೇಲೆ ಪ್ರೀತಿ ಇತ್ತು. ಹಾಗಾಗಿ ಎಷ್ಟೇ ವಿರೋಧ ಬಂದ್ರೂ ಸಿಹಿಸುದ್ದಿಯನ್ನ ಸಾರುತ್ತಾ ಇದ್ರು. ಇದೇ ತರ ನಮ್ಮ ಎಷ್ಟೋ ಸಹೋದರ ಸಹೋದರಿಯರು ಕಷ್ಟ ಬಂದ್ರೂ ಯೆಹೋವನಿಗೆ ನಂಬಿಗಸ್ತರಾಗಿದ್ದಾರೆ. ಅವರ ಕೆಲಸವನ್ನ, ಅವರು ದೇವರ ಹೆಸರಿಗಾಗಿ ತೋರಿಸೋ ಪ್ರೀತಿಯನ್ನ ದೇವರು ಮರೆಯಲ್ಲ ಅಂತ ಅವರಿಗೆ ಚೆನ್ನಾಗಿ ಗೊತ್ತು.—ಇಬ್ರಿ. 6:10.

20. ಮುಂದಿನ ಲೇಖನದಲ್ಲಿ ಏನನ್ನ ಚರ್ಚಿಸ್ತೀವಿ?

20 ಸೈತಾನನ ಲೋಕ ಇರೋವರೆಗೂ ಜನರ ದ್ವೇಷ ವಿರೋಧ ಇದ್ದೇ ಇರುತ್ತೆ. (ಯೋಹಾ. 15:19) ಹಾಗಂತ ನಾವು ಭಯಪಡಬೇಕಾಗಿಲ್ಲ. ಯಾಕಂದ್ರೆ ಯೆಹೋವ ನಿಷ್ಠಾವಂತರನ್ನ ‘ಬಲಪಡಿಸ್ತಾನೆ ಮತ್ತು ಕಾಪಾಡ್ತಾನೆ.’ ಇದ್ರ ಬಗ್ಗೆ ಮುಂದಿನ ಲೇಖನದಲ್ಲಿ ಚರ್ಚಿಸ್ತೀವಿ. (2 ಥೆಸ. 3:3) ಈ ಲೇಖನದಲ್ಲಿ ಕಲಿತ ಹಾಗೆ ಯೆಹೋವನನ್ನು, ನಮ್ಮ ಸಹೋದರ ಸಹೋದರಿಯರನ್ನು, ನಮ್ಮನ್ನ ದ್ವೇಷಿಸ್ತಾ ಇರುವವರನ್ನೂ ಪ್ರೀತಿಸ್ತಾ ಇರೋಣ. ಹೀಗೆ ಮಾಡಿದರೆ ಸಭೆಯಲ್ಲಿ ಒಗ್ಗಟ್ಟಿರುತ್ತೆ, ನಮ್ಮ ನಂಬಿಕೆ ಬಲ ಆಗುತ್ತೆ, ಯೆಹೋವನ ಹೆಸರಿಗೆ ಗೌರವ ತರುತ್ತೀವಿ ಮತ್ತು ದ್ವೇಷಕ್ಕಿಂತ ಪ್ರೀತಿ ಶಕ್ತಿಶಾಲಿ ಅಂತ ತೋರಿಸಿಕೊಡ್ತೀವಿ.

ಗೀತೆ 72 ಪ್ರೀತಿಯ ಗುಣವನ್ನು ಬೆಳೆಸುವುದು

^ ಪ್ಯಾರ. 5 ಜನರ ದ್ವೇಷ ಸಹಿಸಿಕೊಳ್ಳೋಕೆ ಯೆಹೋವನ ಮೇಲಿರೋ ಪ್ರೀತಿ, ನಮ್ಮ ಸಹೋದರ ಸಹೋದರಿಯರ ಮೇಲಿರೋ ಪ್ರೀತಿ, ನಮ್ಮನ್ನ ದ್ವೇಷಿಸುವವರ ಮೇಲಿನ ಪ್ರೀತಿನೂ ಹೇಗೆ ಸಹಾಯ ಮಾಡುತ್ತೆ ಅಂತ ಈ ಲೇಖನದಲ್ಲಿ ನೋಡ್ತೀವಿ. ಜನ ನಮ್ಮನ್ನ ದ್ವೇಷಿಸಿದರೂ ಸಂತೋಷವಾಗಿರಬಹುದು ಅಂತ ಯೇಸು ಯಾಕೆ ಹೇಳಿದನು ಅಂತನೂ ನೋಡ್ತೀವಿ.

^ ಪ್ಯಾರ. 1 ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 58 ಚಿತ್ರ ವಿವರಣೆ: ಡ್ಯಾನಿಲೋಗೆ ಸೈನಿಕರು ಬೆದರಿಕೆ ಹಾಕಿದಾಗ ಸಹೋದರರು ಅವನನ್ನ ಮತ್ತು ಅವನ ಪತ್ನಿಯನ್ನ ಬೇರೆ ಊರಿಗೆ ಕಳುಹಿಸಿದರು. ಆ ಊರಲ್ಲಿದ್ದ ಸಹೋದರರು ಪ್ರೀತಿಯಿಂದ ಬರಮಾಡಿಕೊಂಡು ಸಹಾಯಮಾಡಿದರು.

^ ಪ್ಯಾರ. 60 ಚಿತ್ರ ವಿವರಣೆ: ಯಾಸ್ಮಿನ್‌ ಗಂಡ ಅವಳನ್ನ ತುಂಬ ವಿರೋಧಿಸ್ತಿದ್ದ. ಆಗ ಹಿರಿಯರು ಅವಳಿಗೆ ಒಳ್ಳೇ ಸಲಹೆ ಕೊಟ್ರು. ಅವಳು ಆ ಸಲಹೆಯನ್ನ ಪಾಲಿಸಿದಳು ಮತ್ತು ಗಂಡನಿಗೆ ಹುಷಾರಿಲ್ಲದಾಗ ಚೆನ್ನಾಗಿ ನೋಡ್ಕೊಂಡಳು. ಹೀಗೆ ಒಳ್ಳೇ ಪತ್ನಿಯಾಗೋಕೆ ಪ್ರಯತ್ನಿಸಿದಳು.