ವಾಚಕರಿಂದ ಪ್ರಶ್ನೆಗಳು
ಕ್ರೈಸ್ತರು ಯಾಕೆ ಮೆಸೆಜ್ ಕಳಿಸೋ ಆ್ಯಪ್ಗಳನ್ನು ಬಳಸೋ ವಿಷ್ಯದಲ್ಲಿ ಎಚ್ಚರಿಕೆ ವಹಿಸಬೇಕು?
ಕೆಲವು ಕ್ರೈಸ್ತರು ಕುಟುಂಬದವರ ಜೊತೆ, ತಮ್ಮ ಸ್ನೇಹಿತರ ಜೊತೆ ಸಂಪರ್ಕದಲ್ಲಿ ಇರೋಕೆ ವಾಟ್ಸ್ ಆ್ಯಪ್ ಮತ್ತು ಬೇರೆ ಆ್ಯಪ್ಗಳನ್ನು ಬಳಸ್ತಾರೆ. ಆದ್ರೆ ಇದನ್ನು ಬಳಸೋ ವಿಷ್ಯದಲ್ಲಿ ಪ್ರೌಢ ಕ್ರೈಸ್ತರು ಈ ಬೈಬಲ್ ಬುದ್ಧಿವಾದವನ್ನು ಮನಸ್ಸಲ್ಲಿ ಇಡ್ತಾರೆ: “ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ, ಆದ್ರೆ ಅನುಭವ ಇಲ್ಲದವನು ಮುಂದೆ ಹೋಗಿ ನಷ್ಟ ಅನುಭವಿಸ್ತಾನೆ.”—ಜ್ಞಾನೋ. 27:12.
ಯೆಹೋವ ನಮ್ಮನ್ನು ಅಪಾಯದಿಂದ ಕಾಪಾಡೋಕೆ ಬಯಸ್ತಾನೆ. ನಾವು ಒಡಕು ತರುವವರಿಂದ, ಬಹಿಷ್ಕಾರ ಆದವರಿಂದ ಅಥವಾ ತಪ್ಪಾದ ಬೋಧನೆಗಳನ್ನು ಕಲಿಸುವವರಿಂದ ದೂರ ಇರಬೇಕು ಅಂತ ಆತ ಬೈಬಲಲ್ಲಿ ಸಲಹೆ ಕೊಟ್ಟಿದ್ದಾನೆ. ಹಾಗಾಗಿ ನಾವು ಅಂಥವರ ಸಹವಾಸ ಮಾಡಲ್ಲ. (ರೋಮ. 16:17; 1 ಕೊರಿಂ. 5:11; 2 ಯೋಹಾ. 10, 11) ಅಷ್ಟೇ ಅಲ್ಲ, ಸಭೆಗೆ ಬರೋ ಎಲ್ರೂ ಬೈಬಲ್ ನಿಯಮಗಳನ್ನು ಪಾಲಿಸ್ತಾ ಇರಲ್ಲ. (2 ತಿಮೊ. 2:20, 21) ಹಾಗಾಗಿ ಒಬ್ಬರ ಸ್ನೇಹ ಮಾಡೋ ಮುಂಚೆ ನಾವು ಯೋಚನೆ ಮಾಡಿ ಸ್ನೇಹ ಮಾಡಬೇಕು. ಮೆಸೆಜ್ ಕಳಿಸೋ ವಿಷ್ಯದಲ್ಲಂತೂ ತುಂಬ ಹುಷಾರಾಗಿ ಇರಬೇಕು. ಯಾಕಂದ್ರೆ ಸಿಕ್ಕಸಿಕ್ಕವರಿಗೆಲ್ಲ ನಾವು ಮೆಸೆಜ್ ಕಳಿಸಿದ್ರೆ ಕೆಟ್ಟವರು ಯಾರು ಅಂತ ಕಂಡುಹಿಡಿದು ಅವರಿಂದ ದೂರ ಇರೋಕೆ ಕಷ್ಟ ಆಗುತ್ತೆ.
ಒಂದು ಗ್ರೂಪ್ನಲ್ಲಿ ತುಂಬ ಜನ ಇದ್ರಂತೂ ಒಳ್ಳೆಯವರು ಯಾರು ಕೆಟ್ಟವರು ಯಾರು ಅಂತ ಕಂಡುಹಿಡಿಯೋಕೆ ಕಷ್ಟ ಆಗುತ್ತೆ. ಕೆಲವು ಕ್ರೈಸ್ತರು ಇಂಥ ದೊಡ್ಡದೊಡ್ಡ ಗ್ರೂಪ್ಗಳಲ್ಲಿ ಇದ್ದಿದ್ರಿಂದ ತುಂಬ ಫಜೀತಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಹಾಗಾದ್ರೆ ಒಂದು ಗ್ರೂಪಲ್ಲಿ ನೂರಾರು ಜನ ಸಾವಿರಾರು ಜನ ಇದ್ರೆ ಆಗ ನಾವು ಹುಷಾರಾಗಿ ಇರೋಕೆ ಆಗುತ್ತಾ? ಅವರಲ್ಲಿ ಪ್ರತಿಯೊಬ್ಬರೂ ನಿಜವಾಗ್ಲೂ ಯಾರು, ಅವರು ಸತ್ಯದಲ್ಲಿ ಹೇಗಿದ್ದಾರೆ ಅಂತ ಕಂಡುಹಿಡಿಯೋಕೆ ಆಗುತ್ತಾ? ಅದಂತೂ ಆಗದಿರೋ ಮಾತು! ಕೀರ್ತನೆ 26:4 ರಲ್ಲಿ ಕೀರ್ತನೆಗಾರ ಏನು ಹೇಳಿದ್ದಾನೆ ಅಂತ ಸ್ವಲ್ಪ ಯೋಚಿಸಿ. ಆ ವಚನ ಹೇಳುತ್ತೆ: “[ನಾನು] ಮೋಸಗಾರರ ಸಹವಾಸ ಮಾಡಲ್ಲ, ತಮ್ಮ ನಿಜ ಸ್ವರೂಪವನ್ನ ಮುಚ್ಚಿಡೋರಿಂದ ನಾನು ದೂರ ಇರ್ತಿನಿ.” ನಮಗೆ ಚೆನ್ನಾಗಿ ಗೊತ್ತಿರುವವರಿಗೆ ಮಾತ್ರ ಮೆಸೆಜ್ ಕಳಿಸೋಕೆ ಈ ಮೆಸೆಜ್ ಆ್ಯಪ್ಗಳನ್ನು ಬಳಸೋದು ಒಳ್ಳೇದು ಅಂತ ಈ ವಚನದಿಂದ ಗೊತ್ತಾಗುತ್ತೆ ಅಲ್ವಾ?
ಒಂದು ಗ್ರೂಪಲ್ಲಿ ಕಡಿಮೆ ಜನ ಇದ್ದಾಗಲೂ ನಾವು ಎಚ್ಚರ ವಹಿಸಬೇಕು. ಗ್ರೂಪಲ್ಲಿ ಕಳಿಸೋ ಮೆಸೆಜ್ಗಳನ್ನು ಓದೋಕೆ, ಅದಕ್ಕೆ ಉತ್ತರ ಕಳಿಸೋಕೆ ನಾವು ಎಷ್ಟು ಸಮಯ ಕಳೀತಾ ಇದ್ದೇವೆ ಮತ್ತು ಆ ಗ್ರೂಪಲ್ಲಿ ಜನ ಏನೆಲ್ಲ ಮಾತಾಡ್ತಾ ಇದ್ದಾರೆ ಅನ್ನೋ ವಿಷ್ಯದಲ್ಲಿ ಎಚ್ಚರ ವಹಿಸಬೇಕು. ಹಾಗಾದ್ರೆ ಪ್ರತಿಯೊಂದು ಮೆಸೆಜ್ಗೂ ಉತ್ರ ಕಳಿಸಲೇ ಬೇಕಾ? ಅಥವಾ ಅದನ್ನು ಓದೋದ್ರಲ್ಲೇ ಹೆಚ್ಚು ಸಮಯ ಕಳೆಯೋದು ಒಳ್ಳೇದಾ? ಯೋಚಿಸಬೇಕಾದ ವಿಷಯ! ಪೌಲ ತಿಮೊತಿಗೆ ಹೇಳಿದ ಹಾಗೆ ಕೆಲವರು ‘ಹರಟೆ ಹೊಡೀತಾ ಬೇರೆಯವ್ರ ವಿಷ್ಯದಲ್ಲಿ ತಲೆಹಾಕ್ತಾರೆ.’ (1 ತಿಮೊ. 5:13) ಇವತ್ತು ಮೆಸೆಜ್ ಆ್ಯಪ್ಗಳಲ್ಲೂ ಕೆಲವೊಮ್ಮೆ ಇದೇ ನಡಿಯುತ್ತೆ.
ಪ್ರೌಢ ಕ್ರೈಸ್ತರು ಒಬ್ಬ ಸಹೋದರ ಅಥವಾ ಸಹೋದರಿ ಬಗ್ಗೆ ತಪ್ಪಾದ ವಿಷ್ಯಗಳನ್ನು ಅಥವಾ ಗುಟ್ಟಿನ ವಿಷ್ಯಗಳನ್ನು ಬೇರೆಯವರಿಗೆ ಹೇಳಕ್ಕೂ ಹೋಗಲ್ಲ, ಬೇರೆಯವರಿಂದ ಕೇಳಿಸಿಕೊಳ್ಳೋದೂ ಇಲ್ಲ. (ಕೀರ್ತ. 15:3; ಜ್ಞಾನೋ. 20:19) ಅಷ್ಟೇ ಅಲ್ಲ ನಮ್ಮ ಸಹೋದರರ ಬಗ್ಗೆ ರೆಕ್ಕೆ-ಪುಕ್ಕ ಸೇರಿಸಿರೋ, ಶಾಕಿಂಗ್ ಆಗಿರೋ, ಸತ್ಯ ಅಂತ ಸಾಬೀತು ಆಗದಿರೋ ವಿಷ್ಯಗಳನ್ನು ಕೂಡ ಹೇಳಲ್ಲ, ಕೇಳಿಸಿಕೊಳ್ಳೋದೂ ಇಲ್ಲ. (ಎಫೆ. 4:25) jw.org ವೆಬ್ಸೈಟಿನಲ್ಲಿ ಮತ್ತು ಪ್ರತಿ ತಿಂಗಳು ಬರೋ jw ಪ್ರಸಾರದಲ್ಲೇ ನಮಗೆ ಬೇಕಾದಷ್ಟು ಮಾಹಿತಿ ಸಿಗುತ್ತೆ. ಅದ್ರಲ್ಲಿ ಬರೋ ಪ್ರತಿ ಮಾಹಿತಿನೂ ಸತ್ಯವಾಗಿ ಇರುತ್ತೆ ಮತ್ತು ಎಲ್ಲಾ ವಿಷ್ಯವನ್ನೂ ಬೈಬಲ್ ಆಧರಿತವಾಗಿ ಹೇಳೋದ್ರಿಂದ ಅವುಗಳನ್ನು ನಾವು ನಂಬಬಹುದು.
ಕೆಲವು ಯೆಹೋವನ ಸಾಕ್ಷಿಗಳು ಒಂದು ವಸ್ತುವನ್ನು ಮಾರಾಟ ಮಾಡೋಕೆ, ಖರೀದಿ ಮಾಡೋಕೆ ಅಥವಾ ಅದ್ರ ಬಗ್ಗೆ ಜಾಹೀರಾತು ಕೊಡೋಕೆ ಅಥವಾ ಸಹೋದರ ಸಹೋದರಿಯರಿಗೆ ಉದ್ಯೋಗದ ಅವಕಾಶಗಳ ಬಗ್ಗೆ ತಿಳಿಸೋಕೆ ಈ ಮೆಸೆಜ್ ಆ್ಯಪ್ಗಳನ್ನು ಬಳಸ್ತಾರೆ. ಇದೇನಿದ್ರೂ ವ್ಯಾಪಾರ-ವ್ಯವಹಾರಕ್ಕೆ ಸಂಬಂಧಪಟ್ಟ ವಿಷ್ಯಗಳು. ಯೆಹೋವನ ಆರಾಧನೆಗೆ ಸಂಬಂಧಪಟ್ಟ ವಿಷ್ಯ ಅಲ್ಲವೇ ಅಲ್ಲ. ‘ಹಣದಾಸೆ ಇಲ್ಲದಿರೋ’ ಕ್ರೈಸ್ತರು ದುಡ್ಡು ಮಾಡಕ್ಕಾಗಿ ತಮ್ಮ ಸಹೋದರರನ್ನು ಯಾವತ್ತಿಗೂ ಬಳಸಲ್ಲ.—ಇಬ್ರಿ. 13:5.
ಕಷ್ಟದಲ್ಲಿರೋ ಸಹೋದರರಿಗೆ ಸಹಾಯ ಮಾಡೋಕೆ ಮತ್ತು ವಿಪತ್ತು ಪರಿಹಾರಕ್ಕಾಗಿ ಹಣ ಸಂಗ್ರಹ ಮಾಡೋಕೆ ಈ ಆ್ಯಪ್ಗಳನ್ನು ಬಳಸಬಹುದಾ? ನಿಜ, ಸಹೋದರರ ಮೇಲೆ ಪ್ರೀತಿ ಇರೋದ್ರಿಂದ ಅವರಿಗೆ ಕಷ್ಟ ಬಂದಾಗ ಸಹಾಯ ಮಾಡಬೇಕು ಅಂತ ಅನಿಸುತ್ತೆ. (ಯಾಕೋ. 2:15, 16) ಆದ್ರೆ ಇನ್ನೂ ಚೆನ್ನಾಗಿ ಸಹಾಯ ಮಾಡೋಕೆ ಸಭೆ ಅಥವಾ ಶಾಖಾ ಕಚೇರಿ ಕೆಲವು ಏರ್ಪಾಡುಗಳನ್ನು ಮಾಡಿರುತ್ತೆ. ಒಂದುವೇಳೆ ನಾವು ದೊಡ್ಡದೊಡ್ಡ ಗ್ರೂಪ್ಗಳಲ್ಲಿ ಮೆಸೆಜ್ ಕಳಿಸಿ ಹಣ ಸಂಗ್ರಹ ಮಾಡಿದ್ರೆ ಸಭೆ ಅಥವಾ ಶಾಖಾ ಕಚೇರಿ ಮಾಡಿದ ಏರ್ಪಾಡುಗಳಿಗೆ ಅಡ್ಡಿ ಆಗುತ್ತೆ. (1 ತಿಮೊ. 5:3, 4, 9, 10, 16) ಸಹೋದರ ಸಹೋದರಿಯರನ್ನು ನೋಡಿಕೊಳ್ಳೋ ವಿಷ್ಯದಲ್ಲಿ ನಮಗೆ ವಿಶೇಷ ಜವಾಬ್ದಾರಿ ಸಿಕ್ಕಿದೆ ಅಂತ ಬೇರೆಯವರು ನೆನಸೋ ತರ ನಡಕೊಳ್ಳಬಾರದು.
ಒಟ್ಟಾರೆ ಏನೇ ಮಾಡಿದ್ರೂ ದೇವರಿಗೆ ಗೌರವ ತರೋ ಹಾಗೆ ಮಾಡೋಣ. (1 ಕೊರಿಂ. 10:31) ಮೆಸೆಜ್ ಆ್ಯಪ್ಗಳನ್ನಾಗಲಿ, ಬೇರೆ ಟೆಕ್ನಾಲಜಿಗಳನ್ನಾಗಲಿ ಬಳಸೋ ಮುಂಚೆ ಅವುಗಳಿಂದ ಆಗೋ ಅಪಾಯದ ಬಗ್ಗೆ ಯೋಚಿಸೋಣ, ಎಚ್ಚರ ವಹಿಸೋಣ.