ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 16

ಯೇಸು ಮಾಡಿದ ತ್ಯಾಗಕ್ಕೆ ಸದಾ ಋಣಿಗಳಾಗಿರಿ

ಯೇಸು ಮಾಡಿದ ತ್ಯಾಗಕ್ಕೆ ಸದಾ ಋಣಿಗಳಾಗಿರಿ

“ಮನುಷ್ಯಕುಮಾರ . . . ತುಂಬ ಜನ್ರಿಗಾಗಿ ತನ್ನ ಪ್ರಾಣವನ್ನ ಬಿಡುಗಡೆಯ ಬೆಲೆಯಾಗಿ ಕೊಡೋಕೆ ಬಂದ.”—ಮಾರ್ಕ 10:45.

ಗೀತೆ 149 ವಿಮೋಚನಾ ಮೌಲ್ಯಕ್ಕಾಗಿ ಕೃತಜ್ಞತೆ

ಕಿರುನೋಟ *

1-2. (ಎ) ಬಿಡುಗಡೆ ಬೆಲೆ ಅಂದರೇನು? (ಬಿ) ಯೇಸು ಯಾಕೆ ಬಿಡುಗಡೆ ಬೆಲೆ ಕೊಡಬೇಕಾಗಿತ್ತು?

ಆದಾಮ ಪರಿಪೂರ್ಣನಾಗಿದ್ದ. ಆದ್ರೆ ಅವನು ಪಾಪಮಾಡಿ ಶಾಶ್ವತವಾಗಿ ಜೀವಿಸೋ ಅವಕಾಶ ಕಳಕೊಂಡ. ಅವನಂತೆ ಅವನ ಮುಂದಿನ ಸಂತಾನಕ್ಕೂ ಶಾಶ್ವತ ಜೀವ ಸಿಗದ ತರ ಮಾಡಿಬಿಟ್ಟ. ಆದಾಮ ಬೇಕು ಬೇಕಂತ ಪಾಪ ಮಾಡಿದಕ್ಕೆ ಅವನಿಗೆ ಶಿಕ್ಷೆ ಆಗಲೇ ಬೇಕಿತ್ತು. ಆದ್ರೆ ಅವನ ಮಕ್ಕಳು ಏನೂ ತಪ್ಪು ಮಾಡಿರಲಿಲ್ಲ. ಆದಾಮ ಪಾಪ ಮಾಡಿದ್ದಕ್ಕೆ ಅವರು ಕಾರಣರಾಗಿರಲಿಲ್ಲ. (ರೋಮ. 5:12, 14) ಹಾಗಾದರೆ ಅವನ ಮಕ್ಕಳನ್ನ ಮರಣಶಿಕ್ಷೆಯಿಂದ ತಪ್ಪಿಸೋಕೆ ಆಗುತ್ತಿತ್ತಾ? ಹೌದು, ಆದಾಮನ ಸಂತಾನದವರನ್ನ ಪಾಪ ಮತ್ತು ಮರಣದಿಂದ ಹೇಗೆ ಕಾಪಾಡ್ತೀನಿ ಅಂತ ಯೆಹೋವ ದೇವರು ಒಂದೊಂದೇ ವಿಷಯ ತಿಳಿಸ್ತಾ ಬಂದನು. (ಆದಿ. 3:15) ಸರಿಯಾದ ಸಮಯ ಬಂದಾಗ ಯೆಹೋವ ತನ್ನ ಮಗನನ್ನ ಸ್ವರ್ಗದಿಂದ ಕಳಿಸಿಕೊಟ್ಟನು. ಯೇಸು ‘ತುಂಬ ಜನರಿಗಾಗಿ ತನ್ನ ಪ್ರಾಣವನ್ನು ಬಿಡುಗಡೆ ಬೆಲೆಯಾಗಿ ಕೊಟ್ಟನು.’—ಮಾರ್ಕ 10:45; ಯೋಹಾ. 6:51.

2 ಆದಾಮನಿಂದಾದ ನಷ್ಟವನ್ನು ಸರಿಪಡಿಸೋಕೆ ಯೇಸು ತನ್ನ ಪ್ರಾಣವನ್ನೇ ಬೆಲೆಯಾಗಿ ಕೊಡಬೇಕಾಗಿ ಬಂತು. ಈ ಬೆಲೆಯನ್ನೇ ಗ್ರೀಕ್‌ ಪವಿತ್ರ ಗ್ರಂಥದಲ್ಲಿ ಬಿಡುಗಡೆಯ ಬೆಲೆ ಅಂತ ಕರೆಯಲಾಗಿದೆ. (1 ಕೊರಿಂ. 15:22) ಯೇಸು ಯಾಕೆ ಬಿಡುಗಡೆ ಬೆಲೆ ಕೊಡಬೇಕಾಗಿತ್ತು? ಯಾಕಂದ್ರೆ ಯೆಹೋವನ ನಿಯಮ ಅದೇ ಆಗಿತ್ತು. ಆತನು ನಿಯಮ ಪುಸ್ತಕದಲ್ಲಿ ಪ್ರಾಣಕ್ಕೆ ಪ್ರಾಣ ಕೊಡಬೇಕು ಅನ್ನೋ ನಿಯಮ ಕೊಟ್ಟಿದ್ದನು. (ವಿಮೋ. 21:23, 24) ಆದಾಮ ಪರಿಪೂರ್ಣ ಜೀವ ಕಳಕೊಂಡ. ಅದನ್ನ ಸರಿಮಾಡೋಕೆ ಯೇಸು ಪರಿಪೂರ್ಣ ಜೀವವನ್ನ ಬಲಿಯಾಗಿ ಕೊಟ್ಟ. (ರೋಮ. 5:17) ಹೀಗೆ ಅವನು ಬಿಡುಗಡೆ ಬೆಲೆ ಮೇಲೆ ನಂಬಿಕೆ ಇಡುವ ಎಲ್ಲರಿಗೂ “ಶಾಶ್ವತಕ್ಕೂ ಇರೋ ತಂದೆ” ಆಗ್ತಾನೆ.—ಯೆಶಾ. 9:6; ರೋಮ. 3:23, 24.

3. ಯೋಹಾನ 14:31 ಮತ್ತು 15:13ರ ಪ್ರಕಾರ ಯೇಸು ತನ್ನ ಪರಿಪೂರ್ಣ ಜೀವವನ್ನ ತ್ಯಾಗ ಮಾಡೋಕೆ ಯಾಕೆ ಮುಂದೆ ಬಂದನು?

3 ಯೇಸುವಿಗೆ ತನ್ನ ತಂದೆಯ ಮೇಲೆ ಮತ್ತು ನಮ್ಮ ಮೇಲೆ ಪ್ರೀತಿ ಇದ್ದಿದ್ದರಿಂದನೇ ತನ್ನ ಪ್ರಾಣ ಕೊಡೋಕೆ ಮುಂದೆ ಬಂದನು. (ಯೋಹಾನ 14:31; 15:13 ಓದಿ.) ಆ ಪ್ರೀತಿಯಿಂದನೇ ಕೊನೆ ತನಕ ತನ್ನ ತಂದೆಗೆ ನಿಯತ್ತಾಗಿದ್ದನು ಮತ್ತು ತನ್ನ ತಂದೆಯ ಇಷ್ಟವನ್ನೇ ಮಾಡಿದನು. ಯೇಸುವಿನ ಬಲಿದಾನದಿಂದಾಗಿ ಮನುಷ್ಯರಿಗೋಸ್ಕರ, ಈ ಭೂಮಿಗೋಸ್ಕರ ಯೆಹೋವನಿಟ್ಟ ಉದ್ದೇಶ ನೆರವೇರಿತು. ಯೇಸು ಚಿತ್ರಹಿಂಸೆ ಅನುಭವಿಸಿ ಸಾಯೋಕೆ ಯೆಹೋವ ಯಾಕೆ ಬಿಟ್ಟನು? ಬೈಬಲಿನ ಒಬ್ಬ ಲೇಖಕನಿಗೆ ಬಿಡುಗಡೆ ಬೆಲೆಯ ಮೇಲೆ ಎಷ್ಟು ಗೌರವ ಇತ್ತು? ಬಿಡುಗಡೆ ಬೆಲೆಗೆ ನಾವು ಹೇಗೆ ಗೌರವ ತೋರಿಸಬಹುದು? ಯೆಹೋವ ಮತ್ತು ಯೇಸು ನಮಗೋಸ್ಕರ ಮಾಡಿದ ತ್ಯಾಗಕ್ಕೆ ನಾವು ಹೇಗೆ ಕೃತಜ್ಞತೆ ಹೆಚ್ಚಿಸಿಕೊಳ್ಳಬಹುದು? ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ತಿಳುಕೊಳ್ತೇವೆ.

ಯೇಸು ಯಾಕೆ ಚಿತ್ರಹಿಂಸೆ ಅನುಭವಿಸಿ ಸಾಯಬೇಕಿತ್ತು?

ನಮಗೆ ಬಿಡುಗಡೆ ಬೆಲೆ ಕೊಡೋಕೆ ಯೇಸು ಪಟ್ಟ ಕಷ್ಟಗಳ ಬಗ್ಗೆ ಯೋಚಿಸಿ (ಪ್ಯಾರ 4 ನೋಡಿ)

4. ಯೇಸು ಹೇಗೆ ತೀರಿಹೋದನು? ವಿವರಿಸಿ.

4 ಯೇಸು ತೀರಿ ಹೋದ ದಿನ ಹೇಗಿತ್ತು ಅಂತ ಚಿತ್ರಿಸಿಕೊಳ್ಳಿ. ಅವನನ್ನ ಹಿಡಿಯೋಕೆ ರೋಮನ್‌ ಸೈನಿಕರು ಬಂದ್ರು. ಬೇಕಿದ್ರೆ ಆಗ ಯೇಸು ತನ್ನನ್ನ ಕಾಪಾಡಿಕೊಳ್ಳೋಕೆ ಸಾವಿರಾರು ದೇವದೂತರನ್ನ ಕರೆಸಿಕೊಳ್ಳಬಹುದಿತ್ತು. ಆದರೆ ಅವನು ಹಾಗೆ ಮಾಡಲಿಲ್ಲ. ಅವನಾಗೇ ರೋಮನ್‌ ಸೈನಿಕರಿಗೆ ಶರಣಾದ. ಅವರು ಯೇಸುಗೆ ಕಿಂಚಿತ್ತೂ ಕರುಣೆ ತೋರಿಸದೆ ಹೊಡೆದ್ರು. (ಮತ್ತಾ. 26:52-54; ಯೋಹಾ. 18:3; 19:1) ಅವರು ಚಾಟಿಯಿಂದ ಹೊಡಿತಿದ್ದಾಗ ಯೇಸುವಿನ ದೇಹದಿಂದ ಮಾಂಸ ಕಿತ್ತುಕೊಂಡು ಬರುತ್ತಿತ್ತು. ಗಾಯವಾಗಿ ರಕ್ತ ಸುರಿಯುತ್ತಿತ್ತು. ಅಷ್ಟು ರಕ್ತ ಸುರೀತಿದ್ದ ಬೆನ್ನಿನ ಮೇಲೆನೇ ಹಿಂಸಾ ಕಂಬವನ್ನ ಹೊರಿಸಿದರು. ಯೇಸು ಆ ಕಂಬವನ್ನ ಮರಣಶಿಕ್ಷೆ ವಿಧಿಸಲಿದ್ದ ಜಾಗದ ತನಕ ಹೊತ್ತುಕೊಂಡು ಹೋಗಬೇಕಿತ್ತು. ಯೇಸು ಅದನ್ನ ಎಳಕೊಂಡು ಹೋಗೋಕೆ ಶುರು ಮಾಡಿದ. ಆದ್ರೆ ಸ್ವಲ್ಪ ದೂರ ಹೋದ ಮೇಲೆ ಸೈನಿಕರು ಆ ಕಂಬವನ್ನ ಇನ್ನೊಬ್ಬನ ಮೇಲೆ ಹೊರಿಸಿದರು. (ಮತ್ತಾ. 27:32) ಮರಣಶಿಕ್ಷೆ ವಿಧಿಸಲಿದ್ದ ಜಾಗಕ್ಕೆ ಬಂದಾಗ ಸೈನಿಕರು ಆ ಕಂಬಕ್ಕೆ ಯೇಸುವಿನ ಕೈ ಕಾಲುಗಳನ್ನ ಮೊಳೆಯಿಂದ ಜಡಿದರು. ಆಮೇಲೆ ಆ ಕಂಬವನ್ನ ಎತ್ತಿ ನಿಲ್ಲಿಸಿದರು. ಅವನ ದೇಹದ ತೂಕಕ್ಕೆ ಮೊಳೆ ಜಡಿದಿದ್ದ ಜಾಗದಲ್ಲಿ ಮಾಂಸ ಹರಿದು ಬಂತು. ಇದನ್ನೆಲ್ಲಾ ನೋಡಿ ಅವನ ತಾಯಿಗೆ ಕರುಳು ಕಿತ್ತು ಬಂತು, ಸ್ನೇಹಿತರಿಗೆ ದುಃಖ ಆಯ್ತು. ಆದ್ರೆ ಯೆಹೂದಿ ನಾಯಕರು ಅವನನ್ನ ಗೇಲಿ ಮಾಡುತ್ತಿದ್ದರು. (ಲೂಕ 23:32-38; ಯೋಹಾ. 19:25) ಈ ಹಿಂಸೆಯನ್ನ ಯೇಸು ಎರಡು ನಿಮಿಷ ಅಲ್ಲ ಗಂಟೆಗಟ್ಟಲೆ ಅನುಭವಿಸಿದನು. ಅವನನ್ನ ಕಂಬದಲ್ಲಿ ಆ ತರ ನೇತು ಹಾಕಿದ್ದರಿಂದ ಅವನ ಹೃದಯ, ಶ್ವಾಸಕೋಶ ಸರಿಯಾಗಿ ಕೆಲಸ ಮಾಡ್ತಿರಲಿಲ್ಲ. ಒಂದೊಂದು ಉಸಿರೆಳೆಯೋಕೂ ಕಷ್ಟವಾಗ್ತಿತ್ತು. ಯೇಸುಗೆ ತಾನು ನಂಬಿಗಸ್ತನಾಗಿದ್ದೇನೆ ಅಂತ ಗೊತ್ತಿತ್ತು. ಅದಕ್ಕೆ ಅವನು ಕೊನೆ ಉಸಿರೆಳೆಯೋ ಮುಂಚೆ ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿದನು. ಆಮೇಲೆ ತನ್ನ ತಲೆ ಬಗ್ಗಿಸಿ ಪ್ರಾಣ ಒಪ್ಪಿಸಿದನು. (ಮಾರ್ಕ 15:37; ಲೂಕ 23:46; ಯೋಹಾ. 10:17, 18; 19:30) ನಿಜಕ್ಕೂ ಯೇಸು ತುಂಬ ನೋವು ಅವಮಾನ ಅನುಭವಿಸಿ ತೀರಿಹೋದನು.

5. ಯೇಸುಗೆ ಯಾವ ವಿಷಯದಿಂದ ತುಂಬ ದುಃಖ ಆಯ್ತು?

5 ತಾನು ಇಷ್ಟು ಚಿತ್ರಹಿಂಸೆ ಅನುಭವಿಸಿ ಸಾಯ್ತಿದ್ದೀನಲ್ಲಾ ಅಂತ ಯೇಸುಗೆ ದುಃಖ ಆಗಲಿಲ್ಲ. ಬದ್ಲಿಗೆ ತನ್ನ ಮೇಲೆ ಯಾವ ಆರೋಪ ಹಾಕಿ ಮರಣ ಶಿಕ್ಷೆ ವಿಧಿಸಿದ್ದಾರೋ ಅದನ್ನ ನೆನಸಿದಾಗ ಯೇಸುಗೆ ತುಂಬ ದುಃಖ ಆಯಿತು. ಅವನು ದೇವರ ವಿರುದ್ಧ ಮಾತಾಡಿದ್ದಾನೆ ಅಂತ ಜನರು ಆರೋಪ ಹಾಕಿದ್ದರು. (ಮತ್ತಾ. 26:64-66) ಈ ಮಾತಿಂದ ಯೇಸುಗೆ ತುಂಬ ನೋವಾಯಿತು. ಈ ಆರೋಪ ಹೊತ್ತುಕೊಂಡು ಸಾಯೋಕೆ ಬಿಡಬೇಡಪ್ಪಾ ಅಂತ ತನ್ನ ತಂದೆ ಹತ್ರ ಬೇಡಿಕೊಂಡನು. (ಮತ್ತಾ. 26:38, 39, 42) ಆದ್ರೆ ಯೆಹೋವ ಯಾಕೆ ತನ್ನ ಪ್ರೀತಿಯ ಮಗ ಇಷ್ಟು ಚಿತ್ರಹಿಂಸೆ ಅನುಭವಿಸಿ ಸಾಯೋಕೆ ಬಿಟ್ಟನು? ಅದಕ್ಕಿರೋ 3 ಕಾರಣಗಳನ್ನ ನಾವೀಗ ನೋಡೋಣ.

6. ಯೇಸು ಯಾಕೆ ಹಿಂಸಾ ಕಂಬದ ಮೇಲೆ ತೂಗಿ ಸಾಯಬೇಕಿತ್ತು?

6 ಒಂದನೇ ಕಾರಣ, ಯೇಸುವನ್ನ ಕಂಬಕ್ಕೆ ತೂಗು ಹಾಕಿದರೆನೇ ಯೆಹೂದ್ಯರಿಗೆ ಬಂದಿರೋ ಶಾಪದಿಂದ ಬಿಡುಗಡೆ ಸಿಗ್ತಿತ್ತು. (ಗಲಾ. 3:10, 13) ಅವರಿಗೆ ಈ ಶಾಪ ಯಾಕೆ ಬಂತು? ಅವರು ನಿಯಮ ಪುಸ್ತಕದಲ್ಲಿ ಇರೋದನ್ನೆಲ್ಲಾ ಪಾಲಿಸ್ತೇವೆ ಅಂತ ಮಾತು ಕೊಟ್ಟಿದ್ದರು. ಆದ್ರೆ ಕೊಟ್ಟ ಮಾತಿನಂತೆ ನಡಕೊಳ್ಳದೇ ಇದ್ದದ್ದರಿಂದ ಅವರಿಗೆ ಶಾಪ ಬಂತು. ಅವರಿಗೆ ಆದಾಮನಿಂದ ಬಂದ ಪಾಪ ಮತ್ತು ಮರಣದ ಜೊತೆ ಈ ಶಾಪನೂ ಇತ್ತು. (ರೋಮ. 5:12) ನಿಯಮ ಪುಸ್ತಕದ ಪ್ರಕಾರ ಒಬ್ಬ ವ್ಯಕ್ತಿ ಮರಣ ಶಿಕ್ಷೆಗೆ ಅರ್ಹವಾದ ಪಾಪ ಮಾಡಿದರೆ ಅವನನ್ನ ಸಾಯಿಸಿ, ಆಮೇಲೆ ಅವನ ಶವವನ್ನ ಕಂಬಕ್ಕೆ ನೇತು ಹಾಕಬೇಕಿತ್ತು. * (ಧರ್ಮೋ. 21:22, 23; 27:26) ಹಾಗಾಗಿ ಯೇಸುವನ್ನ ಕಂಬಕ್ಕೆ ತೂಗು ಹಾಕಿದಾಗ ಯೆಹೂದ್ಯರಿಗೆ ಬಂದ ಶಾಪವನ್ನ ತಾನೇ ಹೊತ್ತುಕೊಂಡ. ಹೀಗೆ ಅವರಿಗೆ ಶಾಪದಿಂದ ಮುಕ್ತಿ ಸಿಕ್ಕಿತು. ಯೇಸು ಇಷ್ಟೆಲ್ಲಾ ತ್ಯಾಗ ಮಾಡಿದ್ದು ತನ್ನನ್ನ ತಿರಸ್ಕರಿಸಿದ ಜನಾಂಗಕ್ಕೆ!

7. ತನ್ನ ಮಗ ಕಷ್ಟ ಅನುಭವಿಸೋಕೆ ಯೆಹೋವ ಅನುಮತಿಸಿದ ಎರಡನೇ ಕಾರಣ ಯಾವುದು?

7 ಎರಡನೇ ಕಾರಣ, ಮುಂದೆ ಮಹಾ ಪುರೋಹಿತನಾಗಲಿದ್ದ ಯೇಸುಗೆ ಯೆಹೋವ ತರಬೇತಿ ಕೊಟ್ಟನು. ತುಂಬ ಕಷ್ಟಗಳು ಬಂದಾಗ ದೇವರ ಆಜ್ಞೆಗಳನ್ನ ಪಾಲಿಸೋದು ಅಷ್ಟು ಸುಲಭವಲ್ಲ ಅಂತ ಯೇಸು ಕಲಿತ. ತುಂಬ ಒತ್ತಡ ಆದಾಗ “ದೇವರಿಗೆ ಗಟ್ಟಿಯಾಗಿ ಕೂಗುತ್ತಾ ಅತ್ತು ಅತ್ತು” ಸಹಾಯಕ್ಕಾಗಿ ಬೇಡಿಕೊಂಡ. ಅವನೇ ಸ್ವತಃ ಕಷ್ಟ ಅನುಭವಿಸಿದ್ದರಿಂದ ನಮ್ಮ ಕಷ್ಟ ಅರ್ಥ ಆಗುತ್ತೆ. ಅಷ್ಟೇ ಅಲ್ಲ ನಮಗೆ ‘ಪರೀಕ್ಷೆ ಬಂದಾಗ ಸಹಾಯ ಮಾಡೋಕೂ ಅವನಿಂದ ಆಗುತ್ತೆ.’ ನಮ್ಮ ‘ಬಲಹೀನತೆಗಳನ್ನ ಅರ್ಥಮಾಡಿಕೊಳ್ಳುವಂಥ’ ಒಬ್ಬ ಮಹಾ ಪುರೋಹಿತನನ್ನ ಯೆಹೋವ ಕೊಟ್ಟಿರೋದಕ್ಕೆ ನಾವು ಚಿರಋಣಿಗಳು ಆಗಿರಬೇಕಲ್ವಾ!—ಇಬ್ರಿ. 2:17, 18; 4:14-16; 5:7-10.

8. ತನ್ನ ಮಗ ಕಷ್ಟ ಅನುಭವಿಸೋಕೆ ಯೆಹೋವ ಅನುಮತಿಸಿದ ಮೂರನೇ ಕಾರಣ ಏನು?

8 ಮೂರನೇ ಕಾರಣ, ಒಬ್ಬ ಮನುಷ್ಯನಿಗೆ ತುಂಬ ಕಷ್ಟ ಬಂದಾಗ ಅವನು ಯೆಹೋವನಿಗೆ ನಿಷ್ಠೆ ತೋರಿಸ್ತಾನಾ ಇಲ್ವಾ ಅನ್ನೋ ಪ್ರಶ್ನೆಗೆ ಯೇಸು ಉತ್ತರ ಕೊಡಬೇಕಾಗಿತ್ತು. ಯಾವ ಮನುಷ್ಯನಿಗೂ ಇದು ಸಾಧ್ಯ ಇಲ್ಲ ಅಂತ ಸೈತಾನ ಹೇಳಿದ್ದಾನೆ. ಒಬ್ಬ ಮನುಷ್ಯ ಯೆಹೋವನನ್ನು ಆರಾಧಿಸುತ್ತಾನೆ ಅಂತಾದ್ರೆ ಅದು ಅವನ ಸ್ವಾರ್ಥ ಲಾಭಕ್ಕಾಗಿ ಅನ್ನೋ ಆರೋಪವನ್ನು ಕೂಡ ಹಾಕಿದ್ದಾನೆ. ಅಷ್ಟೇ ಅಲ್ಲ ಆದಾಮನ ತರ ಅವನ ಸಂತಾನದವರೂ ಯೆಹೋವನನ್ನ ಪ್ರೀತಿಸಲ್ಲ ಅನ್ನೋದೇ ಅವನ ವಾದ. (ಯೋಬ 1:9-11; 2:4, 5) ಎಷ್ಟೇ ಕಷ್ಟ ಬಂದರೂ ಯೇಸು ನಿಯತ್ತಾಗಿ ಇರುತ್ತಾನೆ ಅಂತ ಯೆಹೋವನಿಗೆ ಪೂರ್ತಿ ನಂಬಿಕೆ ಇತ್ತು. ಹಾಗಾಗಿ ಒಬ್ಬ ಮನುಷ್ಯನಿಗೆ ಎಷ್ಟು ಸಹಿಸಿಕೊಳ್ಳೋಕೆ ಆಗುತ್ತೋ ಅಷ್ಟು ಕಷ್ಟ ಯೇಸುಗೆ ಬರೋಕೆ ಯೆಹೋವ ಅನುಮತಿಸಿದನು. ಅದೇ ತರ ಯೇಸು ಕೊನೆ ತನಕ ಯೆಹೋವನಿಗೆ ನಿಯತ್ತಾಗಿ ಇದ್ದು ಸೈತಾನ ಹೇಳಿದ್ದು ಶುದ್ಧ ಸುಳ್ಳು ಅಂತ ಸಾಬೀತು ಮಾಡಿದನು.

ಬಿಡುಗಡೆ ಬೆಲೆಗೆ ಗೌರವ ಕೊಟ್ಟ ಬೈಬಲ್‌ ಲೇಖಕ

9. ಅಪೊಸ್ತಲ ಯೋಹಾನ ನಮಗೆ ಯಾವ ಮಾದರಿ ಇಟ್ಟಿದ್ದಾನೆ?

9 ಅನೇಕ ಕ್ರೈಸ್ತರಿಗೆ ಜೀವನದಲ್ಲಿ ಬೇರೆಬೇರೆ ರೀತಿಯ ಕಷ್ಟಗಳು ಬಂತು, ವಿರೋಧನೂ ಬಂತು. ಅವರಿಗೆ ಎಷ್ಟೇ ವಯಸ್ಸಾಗಿದ್ದರೂ ಬಿಡುಗಡೆ ಬೆಲೆ ಮೇಲೆ ನಂಬಿಕೆ ಇದ್ದಿದ್ರಿಂದ ಸಿಹಿ ಸುದ್ದಿ ಸಾರಿದರು ಮತ್ತು ಬಂದ ಕಷ್ಟಗಳನ್ನೆಲ್ಲ ತಾಳಿಕೊಂಡರು. ನಾವೀಗ ಅಪೊಸ್ತಲ ಯೋಹಾನನ ಉದಾಹರಣೆ ನೋಡೋಣ. ಅವನು ಸುಮಾರು 60ಕ್ಕೂ ಹೆಚ್ಚು ವರ್ಷ ಕ್ರಿಸ್ತನ ಬಗ್ಗೆ ಮತ್ತು ಬಿಡುಗಡೆ ಬೆಲೆ ಬಗ್ಗೆ ಸತ್ಯವನ್ನು ಎಡೆಬಿಡದೆ ಸಾರಿದನು. ‘ಇವನಿಂದ ನಮಗೆ ಸಮಸ್ಯೆ ಬರಬಹುದು’ ಅಂತ ನೆನಸಿ ರೋಮನ್‌ ಸರ್ಕಾರ ನೂರರ ಆಸುಪಾಸಿನಲ್ಲಿದ್ದ ಯೋಹಾನನನ್ನು ಪತ್ಮೋಸ್‌ ದ್ವೀಪದ ಜೈಲಿಗೆ ಹಾಕಿತು. ಯೋಹಾನ “ದೇವರ ಬಗ್ಗೆ ಮಾತಾಡಿದ್ರಿಂದ, ಯೇಸು ಬಗ್ಗೆ ಸತ್ಯ ಹೇಳಿದ್ರಿಂದ” ಅವನನ್ನ ಜೈಲಿಗೆ ಹಾಕಿದ್ರು! (ಪ್ರಕ. 1:9) ನಂಬಿಕೆ ಮತ್ತು ತಾಳ್ಮೆ ತೋರಿಸುವುದರಲ್ಲಿ ಯೋಹಾನ ಒಳ್ಳೆ ಮಾದರಿ ಇಟ್ಟಿದ್ದಾನೆ.

10. ಯೋಹಾನ ಬಿಡುಗಡೆ ಬೆಲೆಗೆ ತುಂಬಾ ಗೌರವ ಕೊಟ್ಟನು ಅಂತ ಆತನು ಬರೆದಿರುವ ಪುಸ್ತಕಗಳಿಂದ ಹೇಗೆ ಗೊತ್ತಾಗುತ್ತದೆ?

10 ಯೋಹಾನನಿಗೆ ಯೇಸು ಮೇಲೆ ತುಂಬಾ ಪ್ರೀತಿ ಇತ್ತು ಮತ್ತು ಬಿಡುಗಡೆ ಬೆಲೆ ಮೇಲೆ ತುಂಬಾ ಗೌರವ ಇತ್ತು ಅಂತ ಆತನು ಬರೆದಿರುವ ಪುಸ್ತಕಗಳಿಂದ ಗೊತ್ತಾಗುತ್ತೆ. ಬಿಡುಗಡೆ ಬೆಲೆ ಬಗ್ಗೆ ಅಥವಾ ಅದರಿಂದ ಆಗುವ ಪ್ರಯೋಜನದ ಬಗ್ಗೆ ತನ್ನ ಪುಸ್ತಕಗಳಲ್ಲಿ ನೂರಕ್ಕೂ ಹೆಚ್ಚು ಸಲ ಬರೆದಿದ್ದಾನೆ. ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ: “ಯಾರಾದ್ರೂ ಪಾಪ ಮಾಡೋದಾದ್ರೆ ಅವ್ರಿಗೆ ಸಹಾಯ ಮಾಡೋಕೆ ತಂದೆ ಹತ್ರ ನೀತಿವಂತನಾಗಿರೋ ಯೇಸು ಕ್ರಿಸ್ತ ಇದ್ದಾನೆ.” (1 ಯೋಹಾ. 2:1, 2) ಅಷ್ಟೇ ಅಲ್ಲ ಜನರಿಗೆ “ಯೇಸು ಬಗ್ಗೆ ಸಾಕ್ಷಿ ಕೊಡೋದೇ” ತುಂಬಾ ಮುಖ್ಯ ಅಂತನೂ ಯೋಹಾನ ಬರೆದಿದ್ದಾನೆ. (ಪ್ರಕ. 19:10) ಇದರಿಂದ ಯೋಹಾನನಿಗೆ ಬಿಡುಗಡೆ ಬೆಲೆಯ ಮೇಲೆ ತುಂಬಾ ಗೌರವ ಇತ್ತು ಅಂತ ಗೊತ್ತಾಗುತ್ತೆ. ಯೋಹಾನನಂತೆ ನಾವು ಹೇಗೆ ಬಿಡುಗಡೆ ಬೆಲೆ ಮೇಲೆ ಗೌರವ ತೋರಿಸಬಹುದು?

ಬಿಡುಗಡೆ ಬೆಲೆಗೆ ಗೌರವ ತೋರಿಸೋದು ಹೇಗೆ?

ನಮಗೆ ಬಿಡುಗಡೆ ಬೆಲೆ ಮೇಲೆ ಗೌರವ ಇದ್ರೆ ತಪ್ಪು ಮಾಡೋ ಆಸೆಗೆ ಬಲಿಬೀಳಲ್ಲ (ಪ್ಯಾರ 11 ನೋಡಿ) *

11. ತಪ್ಪು ಮಾಡೋಕೆ ಒತ್ತಡ ಬಂದಾಗ ನಾವೇನು ಮಾಡಬೇಕು?

11 ಪಾಪ ಮಾಡಬೇಕು ಅನ್ನೋ ಆಸೆಗೆ ಬಲಿ ಬೀಳಬೇಡಿ. ನಮಗೆ ನಿಜವಾಗ್ಲೂ ಬಿಡುಗಡೆ ಬೆಲೆ ಮೇಲೆ ಗೌರವ ಇದ್ರೆ ‘ನಮಗೆ ಏನಾದ್ರೂ ತಪ್ಪು ಮಾಡಬೇಕು ಅಂತ ಅನಿಸಿದ್ರೆ ಮಾಡಿಬಿಡೋಣ. ಅದಕ್ಕೆ ಯಾಕೆ ತಲೆ ಕೆಡಿಸಿಕೊಳ್ಳಬೇಕು? ಕ್ಷಮೆ ಕೇಳಿದರೆ ಮುಗಿತಲ್ಲ’ ಅಂತ ಯೋಚಿಸಬಾರದು. ಅದ್ರ ಬದಲಿಗೆ ಏನು ಮಾಡಬೇಕು? ತಪ್ಪು ಮಾಡೋಕೆ ಒತ್ತಡ ಬಂದಾಗ ‘ನನಗೋಸ್ಕರ ಯೆಹೋವ ಮತ್ತು ಯೇಸು ಇಷ್ಟೆಲ್ಲಾ ಮಾಡಿರುವಾಗ ನನ್ನಿಂದ ಹೇಗೆ ತಪ್ಪು ಮಾಡೋಕೆ ಆಗುತ್ತೆ?’ ಅಂತ ಯೋಚಿಸಬೇಕು. ಜೊತೆಗೆ, ‘ಬಲ ಕೊಡಪ್ಪಾ’ ಅಂತ ಯೆಹೋವ ಹತ್ರ ಪ್ರಾರ್ಥಿಸಬೇಕು. “ಕಷ್ಟ ಬಂದಾಗ ಸೋತು ಹೋಗದ ಹಾಗೆ ಕಾಪಾಡು” ಅಂತ ಬೇಡಿಕೊಳ್ಳಬೇಕು.—ಮತ್ತಾ. 6:13.

12. ಒಂದು ಯೋಹಾನ 3:16-18ರಲ್ಲಿ ಕೊಟ್ಟಿರುವ ಸಲಹೆ ಪ್ರಕಾರ ನಾವೇನು ಮಾಡಬೇಕು?

12 ನಿಮ್ಮ ಸಹೋದರ ಸಹೋದರಿಯರನ್ನ ಪ್ರೀತಿಸಿ. ನಮಗೆ ಬಿಡುಗಡೆ ಬೆಲೆ ಮೇಲೆ ಗೌರವ ಇದ್ರೆ ಸಹೋದರ ಸಹೋದರಿಯರನ್ನ ಪ್ರೀತಿಸುತ್ತೇವೆ. ಯಾಕಂದ್ರೆ ಯೇಸು ನಮಗೋಸ್ಕರ ಮಾತ್ರ ಅಲ್ಲ ಸಹೋದರ ಸಹೋದರಿಯರಿಗೋಸ್ಕರನೂ ತನ್ನ ಪ್ರಾಣ ಕೊಟ್ಟಿದ್ದಾನೆ. ಅಂದ್ರೆ ಅವರನ್ನು ತುಂಬಾ ಪ್ರೀತಿಸುತ್ತಾನೆ. (1 ಯೋಹಾನ 3:16-18 ಓದಿ.) ಹಾಗಾದ್ರೆ ನಮ್ಮ ನಡೆನುಡಿಯಲ್ಲಿ, ಆ ಸಹೋದರ-ಸಹೋದರಿಯರ ಮೇಲೆ ಪ್ರೀತಿ ಇದೆ ಅಂತ ತೋರಿಸಿಕೊಡಬೇಕು. (ಎಫೆ. 4:29, 31–5:2) ಅವರಿಗೆ ತುಂಬಾ ಹುಷಾರಿಲ್ಲದಿದ್ದಾಗ ಅಥವಾ ಯಾವುದಾದರೂ ನೈಸರ್ಗಿಕ ವಿಪತ್ತು ಸಂಭವಿಸಿದಾಗ ನಾವು ಸಹಾಯ ಮಾಡುತ್ತೇವೆ ನಿಜ. ಆದರೆ ಅವರು ನಡ್ಕೊಂಡ ರೀತಿ ಅಥವಾ ಹೇಳಿದ ಮಾತಿನಿಂದ ಬೇಜಾರಾದ್ರೆ ನಾವೇನು ಮಾಡ್ತೀವಿ?

13. ನಾವ್ಯಾಕೆ ಬೇರೆಯವರನ್ನ ಕ್ಷಮಿಸಬೇಕು?

13 ಸಭೆಯಲ್ಲಿ ಯಾರ ಮೇಲಾದರೂ ನೀವು ದ್ವೇಷ ಕಟ್ಟಿಕೊಂಡಿದ್ದೀರಾ? (ಯಾಜ. 19:18) ಆ ತರ ದ್ವೇಷ ಇದ್ರೆ ಈ ಬುದ್ಧಿವಾದಕ್ಕೆ ಗಮನಕೊಡಿ: “ಬೇರೆಯವರು ತಪ್ಪು ಮಾಡಿದ್ರೂ ಒಬ್ರನ್ನೊಬ್ರು ಸಹಿಸ್ಕೊಳ್ತಾ ಇರಿ. ಮನಸ್ಸಲ್ಲಿ ಏನೂ ಇಟ್ಕೊಳ್ಳದೆ ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾ ಇರಿ. ಯೆಹೋವ ನಿಮ್ಮನ್ನ ಉದಾರವಾಗಿ ಕ್ಷಮಿಸಿದ ತರಾನೇ ನೀವೂ ಕ್ಷಮಿಸಿ.” (ಕೊಲೊ. 3:13) ಸಭೆಯಲ್ಲಿರುವವರು ನಿಮ್ಮನ್ನ ನೋಯಿಸಿದಾಗೆಲ್ಲ ಅವರನ್ನ ಕ್ಷಮಿಸೋದಾದರೆ ಬಿಡುಗಡೆ ಬೆಲೆಯನ್ನ ಮಾತ್ರವಲ್ಲ ಯೆಹೋವ ದೇವರನ್ನು ನೀವು ಗೌರವಿಸುತ್ತೀರಿ ಅಂತ ಅರ್ಥ. ಈ ಗೌರವವನ್ನು ಹೆಚ್ಚಿಸಿಕೊಳ್ಳೋಕೆ ಏನು ಮಾಡಬೇಕು ಅಂತ ಈಗ ನೋಡೋಣ.

ಬಿಡುಗಡೆ ಬೆಲೆ ಬಗ್ಗೆ ಗೌರವ ಹೆಚ್ಚಿಸಿಕೊಳ್ಳುವುದು ಹೇಗೆ?

14. ಬಿಡುಗಡೆ ಬೆಲೆಯ ಮೇಲೆ ಗೌರವ ಹೆಚ್ಚಿಸಿಕೊಳ್ಳೋಕೆ ನಾವೇನು ಮಾಡಬೇಕು?

14 ಬಿಡುಗಡೆ ಬೆಲೆ ಕೊಟ್ಟಿದ್ದಕ್ಕೆ ಯೆಹೋವನಿಗೆ ಧನ್ಯವಾದ ಹೇಳಿ. ಭಾರತದಲ್ಲಿರುವ 83 ವರ್ಷದ ಜೊಯಾನ ಅನ್ನೋ ಸಹೋದರಿ ಹೀಗೆ ಹೇಳ್ತಾರೆ: “ನಾನು ಪ್ರತಿದಿನ ಪ್ರಾರ್ಥನೆಯಲ್ಲಿ ಬಿಡುಗಡೆ ಬೆಲೆಗೋಸ್ಕರ ಯೆಹೋವನಿಗೆ ಧನ್ಯವಾದ ಹೇಳ್ತೀನಿ.” ಪ್ರತಿದಿನ ಪ್ರಾರ್ಥನೆಯಲ್ಲಿ ಅವತ್ತು ಮಾಡಿರುವ ತಪ್ಪುಗಳನ್ನು ಹೇಳಿಕೊಂಡು ಯೆಹೋವನ ಹತ್ರ ಕ್ಷಮಿಸಪ್ಪಾ ಅಂತ ಬೇಡಿಕೊಳ್ಳಿ. ನೀವೊಂದು ದೊಡ್ಡ ತಪ್ಪು ಮಾಡಿರೋದಾದರೆ ಹಿರಿಯರ ಸಹಾಯ ನಿಮಗೆ ಬೇಕಾಗುತ್ತೆ. ಅವರು ನೀವು ಹೇಳೋದನ್ನೆಲ್ಲಾ ಕೇಳಿಸಿಕೊಳ್ಳುತ್ತಾರೆ. ಆಮೇಲೆ ಬೈಬಲನ್ನು ಉಪಯೋಗಿಸಿ ಪ್ರೀತಿಯಿಂದ ನಿಮಗೆ ಬುದ್ಧಿವಾದ ಕೊಡುತ್ತಾರೆ. ನಿಮ್ಮ ಜೊತೆ ಪ್ರಾರ್ಥನೆಯನ್ನೂ ಮಾಡುತ್ತಾರೆ. ಬಿಡುಗಡೆ ಬೆಲೆಯ ಆಧಾರದ ಮೇಲೆ ನಿಮ್ಮನ್ನ ಕ್ಷಮಿಸುವಂತೆ ಬೇಡಿಕೊಳ್ಳುತ್ತಾರೆ. ‘ಆಗ ನಿಮಗೆ ಒಳ್ಳೇದಾಗುತ್ತೆ’ ಅಂದ್ರೆ ಯೆಹೋವನ ಜೊತೆ ಪುನಃ ಒಳ್ಳೆ ಸಂಬಂಧ ಪಡ್ಕೊಳ್ಳೋಕೆ ಸಹಾಯ ಆಗುತ್ತೆ.—ಯಾಕೋ. 5:14-16.

15. ಬಿಡುಗಡೆ ಬೆಲೆಯ ಬಗ್ಗೆ ಓದಿ ಧ್ಯಾನಿಸೋಕೆ ಯಾಕೆ ಸಮಯ ಮಾಡಿಕೊಳ್ಳಬೇಕು?

15 ಬಿಡುಗಡೆ ಬೆಲೆಯ ಬಗ್ಗೆ ಧ್ಯಾನಿಸಿ. 73 ವರ್ಷದ ಸಹೋದರಿ ರಾಜಮಣಿ ಹೀಗೆ ಹೇಳ್ತಾರೆ. “ಯೇಸು ಪಟ್ಟ ಚಿತ್ರಹಿಂಸೆ ಬಗ್ಗೆ ಓದುವಾಗೆಲ್ಲ ನನ್ನ ಕಣ್ಣಲ್ಲಿ ನೀರು ಬರುತ್ತೆ.” ದೇವರ ಮಗ ಎಷ್ಟು ಕಷ್ಟ ಪಟ್ಟಿದ್ದಾನೆ ಅಂತ ಯೋಚಿಸುವಾಗ ನಮ್ಮ ಕಣ್ಣಲ್ಲೂ ನೀರು ಬರಬಹುದು. ಆದರೆ ಯೇಸು ಮಾಡಿದ ತ್ಯಾಗದ ಬಗ್ಗೆ ಯೋಚಿಸಿದರೆ ಆತನ ಮೇಲೆ ಮತ್ತು ಆತನ ತಂದೆಯ ಮೇಲೆ ನಮಗಿರುವ ಪ್ರೀತಿ ಇನ್ನು ಜಾಸ್ತಿ ಆಗುತ್ತೆ. ನೀವು ಬಿಡುಗಡೆ ಬೆಲೆ ಬಗ್ಗೆ ಇನ್ನೂ ಹೆಚ್ಚು ಕಲಿಯೋಕೆ, ಧ್ಯಾನಿಸೋಕೆ ಸಮಯ ಮಾಡಿಕೊಳ್ಳಬಹುದಲ್ವಾ!

ಯೇಸು ತನ್ನ ಮರಣದ ಸ್ಮರಣೆಯನ್ನು ಶಿಷ್ಯರು ಹೇಗೆ ಮಾಡಬೇಕು ಅಂತ ಸರಳ ಊಟದ ಮೂಲಕ ತೋರಿಸಿಕೊಡುತ್ತಿದ್ದಾನೆ (ಪ್ಯಾರ 16 ನೋಡಿ)

16. ಬಿಡುಗಡೆ ಬೆಲೆ ಬಗ್ಗೆ ಬೇರೆಯವರಿಗೆ ಕಲಿಸೋದರಿಂದ ನಮಗೆ ಯಾವ ಪ್ರಯೋಜನ ಸಿಗುತ್ತೆ? (ಮುಖಪುಟ ಚಿತ್ರ ನೋಡಿ.)

16 ಬಿಡುಗಡೆ ಬೆಲೆ ಬಗ್ಗೆ ಬೇರೆಯವರಿಗೂ ಕಲಿಸಿ. ಯೇಸು ಮಾಡಿದ ತ್ಯಾಗದ ಬಗ್ಗೆ ಬೇರೆಯವರಿಗೆ ಕಲಿಸುವಾಗೆಲ್ಲ ಬಿಡುಗಡೆ ಬೆಲೆಯ ಬಗ್ಗೆ ನಮಗಿರೋ ಗೌರವ ಹೆಚ್ಚುತ್ತೆ. ಯೇಸು ನಮಗೋಸ್ಕರ ಯಾಕೆ ಪ್ರಾಣ ಕೊಟ್ಟನು ಅಂತ ಕಲಿಸೋಕೆ ಬೈಬಲ್‌ ಆಧಾರಿತ ಪತ್ರಿಕೆಗಳು ಪುಸ್ತಕಗಳು ನಮಗೆ ಸಹಾಯ ಮಾಡುತ್ತೆ. ಅದ್ರಲ್ಲಿ ಒಂದು, ದೇವರಿಂದ ನಿಮಗೊಂದು ಸಿಹಿಸುದ್ದಿ! ಅನ್ನೋ ಬ್ರೋಷರ್‌ನಲ್ಲಿರೋ “ಯೇಸು ಯಾರು?” ಅನ್ನೋ ನಾಲ್ಕನೇ ಪಾಠ. ಇನ್ನೊಂದು, ಬೈಬಲ್‌ ನಮಗೆ ಏನು ಕಲಿಸುತ್ತದೆ? ಅನ್ನೋ ಪುಸ್ತಕದ “ನಮ್ಮನ್ನು ಪಾಪದಿಂದ ಬಿಡಿಸಲು ದೇವರು ಮಾಡಿದ ಏರ್ಪಾಡು” ಅನ್ನೋ ಐದನೇ ಅಧ್ಯಾಯ. ಪ್ರತಿವರ್ಷ ನಡೆಯೋ ಯೇಸುವಿನ ಮರಣದ ಸ್ಮರಣೆಗೆ ಹಾಜರಾಗಿ. ಆ ಕಾರ್ಯಕ್ರಮಕ್ಕೆ ಬೇರೆಯವರನ್ನೂ ಕರೆಯಿರಿ. ಇದರಿಂದ ನಿಮಗೆ ಬಿಡುಗಡೆ ಬೆಲೆಯ ಬಗ್ಗೆ ಗೌರವ ಹೆಚ್ಚಾಗುತ್ತೆ. ತನ್ನ ಮಗನ ಬಗ್ಗೆ ಕಲಿಸೋಕೆ ಯೆಹೋವ ನಮಗೆ ಅವಕಾಶ ಕೊಟ್ಟು ಗೌರವಿಸಿದ್ದಾನೆ ಅಲ್ವಾ!

17. ಬಿಡುಗಡೆ ಬೆಲೆ ದೇವರು ಮಾನವಕುಲಕ್ಕೆ ಕೊಟ್ಟಿರುವ ಅತಿ ದೊಡ್ಡ ಉಡುಗೊರೆ ಆಗಿದೆ ಯಾಕೆ?

17 ಬಿಡುಗಡೆ ಬೆಲೆ ಬಗ್ಗೆ ಗೌರವ ಬೆಳೆಸಿಕೊಂಡು ಹೆಚ್ಚಿಸಿಕೊಳ್ಳಬೇಕು ಅಂತ ಈ ಲೇಖನದಲ್ಲಿ ಕಲಿತ್ವಿ. ಬಿಡುಗಡೆ ಬೆಲೆಯಿಂದಾಗಿ, ನಾವು ಅಪರಿಪೂರ್ಣರಾಗಿದ್ದರೂ ಯೆಹೋವನ ಜೊತೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳಲು ಆಗುತ್ತೆ. ಸೈತಾನ ಹಾಳು ಮಾಡಿರೋ ಕೆಲಸಗಳನ್ನ ಸರಿ ಮಾಡೋಕೆ ಆಗುತ್ತೆ. (1 ಯೋಹಾ. 3:8) ಈ ಭೂಮಿಗಾಗಿ ಯೆಹೋವ ಇಟ್ಟಿರೋ ಉದ್ದೇಶ ನೆರವೇರುತ್ತೆ. ಅಂದ್ರೆ ಇಡೀ ಭೂಮಿ ಪರದೈಸ್‌ ಆಗುತ್ತೆ. ಅಲ್ಲಿ ಯೆಹೋವನನ್ನು ಪ್ರೀತಿಸುವ ಮತ್ತು ಆರಾಧಿಸುವ ಜನರು ಮಾತ್ರ ಇರುತ್ತಾರೆ. ಹಾಗಾಗಿ ಇಡೀ ಮಾನವಕುಲಕ್ಕೆ ದೇವರು ಕೊಟ್ಟಿರುವ ಅತಿ ದೊಡ್ಡ ಉಡುಗೊರೆ ಈ ಬಿಡುಗಡೆ ಬೆಲೆ. ಈ ಉಡುಗೊರೆಗೆ ಗೌರವ ತೋರಿಸೋಕೆ ಪ್ರತಿದಿನ ನಮ್ಮಿಂದ ಆಗೋದನ್ನೆಲ್ಲ ಮಾಡೋಣ.

ಗೀತೆ 148 ಕೊಟ್ಟೆ ನೀ ಮಗನ

^ ಪ್ಯಾರ. 5 ಯೇಸು ಯಾಕೆ ಅಷ್ಟು ಚಿತ್ರಹಿಂಸೆ ಅನುಭವಿಸಿ ಸಾಯಬೇಕಿತ್ತು? ಇದಕ್ಕೆ ಉತ್ತರ ಈ ಲೇಖನದಲ್ಲಿ ಇದೆ. ಅಷ್ಟೇ ಅಲ್ಲ ಯೇಸು ಕೊಟ್ಟ ಬಿಡುಗಡೆ ಬೆಲೆಗೆ ನಮ್ಮ ಕೃತಜ್ಞತೆ ಹೆಚ್ಚಿಸಲು ಕೂಡ ಈ ಲೇಖನ ಸಹಾಯ ಮಾಡುತ್ತೆ.

^ ಪ್ಯಾರ. 6 ಆ ಕಾಲದಲ್ಲಿ ರೋಮಿನ ಜನ ಅಪರಾಧಿಗಳನ್ನ ಜೀವಂತವಾಗಿ ಕಂಬಕ್ಕೆ ಜಡಿಯುತ್ತಿದ್ದರು ಅಥವಾ ಕಟ್ಟುತ್ತಿದ್ದರು. ಅದೇ ರೀತಿಯಲ್ಲಿ ಜನರು ತನ್ನ ಮಗನನ್ನ ಸಾಯಿಸುವಾಗ ಯೆಹೋವ ಬಿಟ್ಟುಕೊಟ್ಟನು.

^ ಪ್ಯಾರ. 55 ಚಿತ್ರ ವಿವರಣೆ: ಈ ಚಿತ್ರದಲ್ಲಿರುವ ಸಹೋದರರು ಪಾಪ ಮಾಡಬೇಕು ಅನ್ನೋ ಆಸೆಗೆ ಅಥವಾ ಒತ್ತಡಕ್ಕೆ ಮಣಿಯುತ್ತಿಲ್ಲ. ಅಶ್ಲೀಲ ಚಿತ್ರ ನೋಡುತ್ತಿಲ್ಲ, ಸಿಗರೇಟ್‌ ಸೇದುತ್ತಿಲ್ಲ, ಲಂಚ ತಗೊಳ್ಳುತ್ತಿಲ್ಲ.