ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 20

ಸೋತು ಹೋಗಬೇಡಿ ಸಾರುತ್ತಾ ಇರಿ

ಸೋತು ಹೋಗಬೇಡಿ ಸಾರುತ್ತಾ ಇರಿ

“ಬೀಜ ಬಿತ್ತೋಕೆ ಶುರು ಮಾಡು . . . ನಿಲ್ಲಿಸಬೇಡ.”—ಪ್ರಸಂ. 11:6.

ಗೀತೆ 96 ಯೋಗ್ಯರನ್ನು ಹುಡುಕಿ

ಕಿರುನೋಟ *

ಯೇಸು ಸ್ವರ್ಗಕ್ಕೆ ಹೋದ ಮೇಲೆ ಆತನ ಶಿಷ್ಯರು ಯೆರೂಸಲೇಮಲ್ಲಿ ಮತ್ತು ಇನ್ನೂ ಬೇರೆಬೇರೆ ಕಡೆ ಹೋಗಿ ಹುರುಪಿಂದ ಸಿಹಿಸುದ್ದಿ ಸಾರಿದರು (ಪ್ಯಾರ 1 ನೋಡಿ)

1. (ಎ) ಯೇಸು ಹೇಗೆ ಸೇವೆ ಮಾಡಿದನು? (ಬಿ) ಅವನ ಮಾದರಿಯನ್ನು ಶಿಷ್ಯರು ಹೇಗೆ ಅನುಕರಿಸಿದರು? (ಮುಖಪುಟ ಚಿತ್ರ ನೋಡಿ.)

ಯೇಸು ಸಾರುತ್ತಿದ್ದ ಸಂದೇಶವನ್ನು ಜನರು ಕೆಲವೊಮ್ಮೆ ಕೇಳಿಸಿಕೊಳ್ಳುತ್ತಾ ಇರಲಿಲ್ಲ. ಆದ್ರೂ ಇವತ್ತಲ್ಲ ನಾಳೆ ಕೇಳಿಸಿಕೊಳ್ತಾರೆ ಅಂತ ನಿರೀಕ್ಷೆ ಇಟ್ಟು ಹುರುಪಿಂದ ಸಾರುತ್ತಾ ಇದ್ದನು. ಅದೇ ತರ ಶಿಷ್ಯರು ಸೋತು ಹೋಗದೆ ಸಾರುತ್ತಾ ಇರಬೇಕು ಅಂತ ಬಯಸಿದನು. (ಯೋಹಾ. 4:35, 36) ಶಿಷ್ಯರು ಯೇಸು ಜೊತೆ ಇದ್ದಾಗ ಹುರುಪಿಂದ ಸಿಹಿಸುದ್ದಿ ಸಾರುತ್ತಾ ಇದ್ದರು. (ಲೂಕ 10:1, 5-11, 17) ಆದ್ರೆ ಅವನನ್ನು ಬಂಧಿಸಿ ಅವನಿಗೆ ಮರಣಶಿಕ್ಷೆ ಕೊಟ್ಟಾಗ ಶಿಷ್ಯರ ಹುರುಪು ತಣ್ಣಗಾಯ್ತು. (ಯೋಹಾ. 16:32) ಅವನು ಜೀವಂತವಾಗಿ ಎದ್ದುಬಂದ ಮೇಲೆ ತನ್ನ ಶಿಷ್ಯರು ಸಿಹಿಸುದ್ದಿ ಸಾರೋಕೆ ಹೆಚ್ಚು ಗಮನ ಕೊಡಬೇಕು ಅಂತ ಬಯಸಿದನು. ಅವನು ಸ್ವರ್ಗಕ್ಕೆ ಹೋದ ಮೇಲೆ ಶಿಷ್ಯರು ತುಂಬ ಹುರುಪಿಂದ ಸೇವೆ ಮಾಡುತ್ತಿದ್ದರು. ಅವರಿಗೆ ಎಷ್ಟು ಹುರುಪು ಇತ್ತೆಂದರೆ ಅವರ ಶತ್ರುಗಳು “ನೀವು ಯೆರೂಸಲೇಮಲ್ಲಿ ಒಬ್ಬರನ್ನೂ ಬಿಡದೆ ಎಲ್ರಿಗೂ ಕಲಿಸ್ತಾ ಇದ್ದೀರ” ಅಂತ ದೂರಿದ್ರು.—ಅ. ಕಾ. 5:28.

2. ಯೆಹೋವ ದೇವರು ಸಾರುವ ಕೆಲಸವನ್ನು ಹೇಗೆ ಆಶೀರ್ವದಿಸಿದ್ದಾನೆ?

2 ಒಂದನೇ ಶತಮಾನದಲ್ಲಿ ಕ್ರೈಸ್ತರು ಹೇಗೆ ಸೇವೆ ಮಾಡಬೇಕು ಅಂತ ಯೇಸು ಮಾರ್ಗದರ್ಶನ ಕೊಟ್ಟನು. ಅವರ ಪ್ರಯತ್ನವನ್ನು ಯೆಹೋವ ಆಶೀರ್ವದಿಸಿದನು. ಇದರಿಂದ ತುಂಬ ಜನ ಸತ್ಯ ಕಲಿತ್ರು. ಉದಾಹರಣೆಗೆ, ಕ್ರಿಸ್ತ ಶಕ 33ರ ಪಂಚಾಶತ್ತಮ ಹಬ್ಬದಲ್ಲಿ ಸುಮಾರು 3,000 ಜನ ದೀಕ್ಷಾಸ್ನಾನ ಪಡಕೊಂಡರು. (ಅ. ಕಾ. 2:41) ಮುಂದಕ್ಕೆ ಸತ್ಯ ಕಲಿಯುವವರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತ್ತಾ ಹೋಯ್ತು. (ಅ. ಕಾ. 6:7) ಆದರೆ ಕೊನೇ ದಿನಗಳಲ್ಲಿ ಇದಕ್ಕಿಂತ ಹೆಚ್ಚು ಜನ ಸತ್ಯ ಕಲಿತಾರೆ ಅಂತ ಯೇಸು ಭವಿಷ್ಯವಾಣಿ ಹೇಳಿದ್ದನು.—ಯೋಹಾ. 14:12; ಅ. ಕಾ. 1:8.

3-4. (ಎ) ಕೆಲವು ದೇಶಗಳಲ್ಲಿ ಸೇವೆ ಮಾಡೋಕೆ ಯಾಕೆ ಕಷ್ಟ ಆಗುತ್ತೆ? (ಬಿ) ಈ ಲೇಖನದಲ್ಲಿ ನಾವು ಏನು ಚರ್ಚಿಸ್ತೀವಿ?

3 ನಾವ್ಯಾರೂ ಸೋತು ಹೋಗದೆ ಸಿಹಿಸುದ್ದಿ ಸಾರುತ್ತಾ ಇರಬೇಕು. ಕೆಲವು ದೇಶಗಳಲ್ಲಿ ಹೆಚ್ಚಿನ ಜನ ಬೈಬಲ್‌ ಕಲಿಯೋಕೆ ಇಷ್ಟಪಡ್ತಾರೆ. ಅಲ್ಲಿ ನಮ್ಮ ಮನೆಗೆ ಯೆಹೋವನ ಸಾಕ್ಷಿಗಳು ಯಾವಾಗ ಬರ್ತಾರೆ ಅಂತ ಕಾಯ್ತಾ ಇರ್ತಾರೆ. ಅಂಥ ದೇಶಗಳಲ್ಲಿ ಸಿಹಿಸುದ್ದಿ ಸಾರೋದು ಸುಲಭ. ಆದ್ರೆ ಇನ್ನು ಕೆಲವು ದೇಶಗಳಲ್ಲಿ ಪ್ರಚಾರಕರು ಸೇವೆಗೆ ಹೋದಾಗ ಜನ ಮನೇಲಿ ಇರೋದಿಲ್ಲ. ಮನೇಲಿ ಇದ್ದರೂ ಕೆಲವೊಮ್ಮೆ ಬೈಬಲ್‌ ಸಂದೇಶ ಕೇಳಿಸಿಕೊಳ್ಳೋಕೆ ಇಷ್ಟಪಡಲ್ಲ. ಅಂಥ ದೇಶಗಳಲ್ಲಿ ಸಿಹಿಸುದ್ದಿ ಸಾರೋಕೆ ಕಷ್ಟ ಆಗುತ್ತೆ.

4 ನೀವಿರೋ ಜಾಗದಲ್ಲಿ ಸಿಹಿಸುದ್ದಿ ಸಾರೋಕೆ ಕಷ್ಟ ಆಗುತ್ತಿದ್ದರೆ ಈ ಲೇಖನದಲ್ಲಿರೋ ಸಲಹೆಗಳು ಸಹಾಯ ಮಾಡುತ್ತೆ. ಕೆಲವು ಸಹೋದರ ಸಹೋದರಿಯರು ಹೆಚ್ಚು ಜನರನ್ನು ಭೇಟಿ ಮಾಡೋಕೆ ಏನು ಮಾಡಿದ್ದಾರೆ? ನಮ್ಮ ಸಂದೇಶವನ್ನು ಜನರು ಕೇಳಲಿ ಬಿಡಲಿ ನಾವು ಸೋತು ಹೋಗದೆ ಸಾರುತ್ತಾ ಇರಬೇಕು, ಯಾಕೆ? ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ನೋಡೋಣ.

ಜನ ಸಿಗದೆ ಇರುವಾಗ ಏನು ಮಾಡಬೇಕು?

5. ಕೆಲವೊಮ್ಮೆ ಸಿಹಿಸುದ್ದಿ ಸಾರೋಕೆ ಯಾಕೆ ಕಷ್ಟ ಆಗುತ್ತೆ?

5 ಮನೆಗಳಿಗೆ ಹೋಗಿ ಜನರಿಗೆ ಸಿಹಿಸುದ್ದಿ ಸಾರೋಕೆ ತುಂಬ ಸಾಕ್ಷಿಗಳಿಗೆ ಕಷ್ಟ ಆಗ್ತಿದೆ. ಇದಕ್ಕೆ ಬೇರೆ ಬೇರೆ ಕಾರಣ ಇದೆ. ಕೆಲವು ಜನರು ದೊಡ್ಡ-ದೊಡ್ಡ ಅಪಾರ್ಟ್‌ಮೆಂಟ್‌ ಬಿಲ್ಡಿಂಗ್‌ಗಳಲ್ಲಿ ಇರ್ತಾರೆ. ಅವರ ಪರ್ಮಿಶನ್‌ ಇಲ್ಲದೆ ಯಾರನ್ನೂ ಒಳಗೆ ಬಿಡಲ್ಲ. ಅಂಥ ಅಪಾರ್ಟ್‌ಮೆಂಟ್‌ಗಳಿಗೆ ತುಂಬ ಭದ್ರತೆ ಇರುತ್ತೆ, ಸೆಕ್ಯುರಿಟಿ ಗಾರ್ಡುಗಳು ಇರುತ್ತಾರೆ. ಇನ್ನು ಕೆಲವೊಂದು ಕಡೆ ಮನೆಮನೆ ಸೇವೆ ಮಾಡೋಕೆ ಯಾವುದೇ ಅಡೆತಡೆ ಇಲ್ಲದಿದ್ದರೂ ಮನೆಗಳಲ್ಲಿ ಜನ ಸಿಗೋದೇ ಅಪರೂಪ. ಹಳ್ಳಿಗಳಲ್ಲಿ ಜನ ಕಡಿಮೆ. ಅವರ ಮನೆಗಳೂ ದೂರ ದೂರ ಇರುತ್ತೆ. ಅಷ್ಟು ದೂರ ಪ್ರಯಾಣ ಮಾಡಿ ಹೋದರೂ ಆ ಮನೆಗಳಲ್ಲಿ ಕೆಲವೊಮ್ಮೆ ಜನ ಸಿಗಲ್ಲ. ಈ ರೀತಿಯ ಸವಾಲುಗಳು ಬಂದಾಗ ನಾವು ಸೋತು ಹೋಗದೆ, ಖುಷಿಯಾಗಿ ಸೇವೆ ಮಾಡ್ತಾ ಇರೋಕೆ ಏನು ಮಾಡಬೇಕು?

6. ಸಾರುವ ಕೆಲಸವನ್ನು ಯಾಕೆ ಮೀನು ಹಿಡಿಯುವ ಕೆಲಸಕ್ಕೆ ಹೋಲಿಸಬಹುದು?

6 ಸಿಹಿಸುದ್ದಿ ಸಾರೋ ಕೆಲಸವನ್ನು ಮೀನು ಹಿಡಿಯೋ ಕೆಲಸಕ್ಕೆ ಯೇಸು ಹೋಲಿಸಿದ್ದಾನೆ. (ಮಾರ್ಕ 1:17) ಮೀನು ಹಿಡಿಯುವವರು ಕೆಲವೊಮ್ಮೆ ಎಷ್ಟು ದಿನ ಬಲೆ ಬೀಸಿದ್ರೂ ಮೀನು ಸಿಗಲ್ಲ. ಹಾಗಂತ ಅವರು ಸೋತು ಹೋಗಲ್ಲ. ಕೆಲವು ಬದಲಾವಣೆಗಳನ್ನು ಮಾಡಿಕೊಳ್ತಾರೆ. ಮೀನು ಹಿಡಿಯುವ ಸಮಯ, ಸ್ಥಳ ಅಥವಾ ವಿಧಾನ ಬದಲಾಯಿಸ್ತಾರೆ. ಅದೇ ತರದ ಬದಲಾವಣೆಗಳನ್ನು ನಾವು ಸೇವೆಯಲ್ಲೂ ಮಾಡಿಕೊಳ್ಳಬೇಕು. ಅದೇನು ಅಂತ ಈಗ ನೋಡೋಣ.

ಮನೇಲಿ ಸಿಗದಿರೋ ಜನರಿಗೆ ಬೇರೆ ಸಮಯದಲ್ಲಿ, ಬೇರೆ ಜಾಗದಲ್ಲಿ, ಬೇರೆ ವಿಧಾನದಲ್ಲಿ ಸಾರಿ (ಪ್ಯಾರ 7-10 ನೋಡಿ) *

7. ಬೇರೆ ಸಮಯದಲ್ಲಿ ಸಾರೋದರಿಂದ ಯಾವ ಪ್ರಯೋಜನ ಸಿಗುತ್ತೆ?

7 ಬೇರೆ ಸಮಯದಲ್ಲಿ ಸಾರಿ. ಜನ ಯಾವಾಗ ಮನೆಯಲ್ಲಿ ಇರ್ತಾರೆ ಅಂತ ನೋಡಿ ಆ ಸಮಯಕ್ಕೆ ಹೋಗಿ. ಅವರು ಎಲ್ಲೇ ಹೋದ್ರೂ ಮತ್ತೆ ಮನೆಗೆ ವಾಪಸ್‌ ಬರದೆ ಇರ್ತಾರಾ? ತುಂಬ ಸಹೋದರ ಸಹೋದರಿಯರು ಮಧ್ಯಾಹ್ನ ಹೊತ್ತಲ್ಲಿ ಅಥವಾ ಸಂಜೆ ಸಾರೋಕೆ ಹೋಗ್ತಾರೆ. ಯಾಕಂದ್ರೆ ಆಗ ಜನರು ಮನೆಯಲ್ಲಿ ಇರ್ತಾರೆ. ಅಷ್ಟೇ ಅಲ್ಲ, ಆ ಸಮಯದಲ್ಲಿ ಜನ ಮನೆಯಲ್ಲಿ ಆರಾಮಾಗಿ ಇರ್ತಾರೆ, ಮಾತಾಡೋಕೆ ರೆಡಿ ಇರ್ತಾರೆ. ಸಹೋದರ ಡೇವಿಡ್‌ ಮಾಡಿದ್ದನ್ನು ನೀವೂ ಮಾಡಿ ನೋಡಿ. ಅವರು ಒಂದು ಟೆರಿಟೊರಿಯಲ್ಲಿ ಸ್ವಲ್ಪ ಹೊತ್ತು ಮನೆಮನೆ ಸೇವೆ ಮಾಡಿದ ಮೇಲೆ ಯಾವ ಮನೆಯಲ್ಲಿ ಜನ ಸಿಗಲಿಲ್ವೋ ಆ ಮನೆಗಳಿಗೆ ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಹೋಗ್ತಾರಂತೆ. ಅವರು ಹೀಗೆ ಹೇಳ್ತಾರೆ: “ಈ ರೀತಿ ಮಾಡೋದ್ರಿಂದ ತುಂಬ ಮನೆಗಳಲ್ಲಿ ಜನ ಸಿಗ್ತಾರೆ. ಇದನ್ನು ನೋಡಿದಾಗ ನಂಗೆ ಆಶ್ಚರ್ಯ ಆಗುತ್ತೆ.” *

ಮನೇಲಿ ಸಿಗದಿರೋ ಜನರಿಗೆ ಬೇರೆ ಸಮಯದಲ್ಲಿ ಸಾರಿ (ಪ್ಯಾರ 7-8 ನೋಡಿ)

8. ಪ್ರಸಂಗಿ 11:6ನ್ನು ಸೇವೆಗೆ ಹೇಗೆ ಅನ್ವಯಿಸಬಹುದು?

8 ಮೊದಲನೇ ಸಲ ಮನೆಯಲ್ಲಿ ಜನ ಸಿಗದೇ ಹೋದಾಗ ನಾವು ಸೋತು ಹೋಗಬಾರದು. ಅವರನ್ನ ಭೇಟಿ ಮಾಡೋಕೆ ಪ್ರಯತ್ನ ಮಾಡ್ತಾ ಇರಬೇಕು. ಇದನ್ನೇ ನಾವು ಈ ಲೇಖನದ ಮುಖ್ಯ ವಚನದಿಂದ ಕಲಿತೀವಿ. (ಪ್ರಸಂಗಿ 11:6 ಓದಿ.) ಸಹೋದರ ಡೇವಿಡ್‌ ಕೂಡ ಪ್ರಯತ್ನ ಬಿಟ್ಟು ಬಿಡಲಿಲ್ಲ. ಒಂದು ಮನೆಗೆ ಅವರು ತುಂಬಾ ಸಲ ಹೋದರೂ ಆ ಮನೆಯವರು ಸಿಗಲಿಲ್ಲ. ಕೊನೆಗೂ ಒಂದು ಸಲ ಸಿಕ್ಕಿಬಿಟ್ಟರು. ಆ ವ್ಯಕ್ತಿಗೆ ಬೈಬಲ್‌ ಕಲಿಯೋಕೆ ಇಷ್ಟ ಇತ್ತು. ಅವರು ಹೀಗೆ ಹೇಳಿದರು: “ಸುಮಾರು ಎಂಟು ವರ್ಷದಿಂದ ನಾನಿಲ್ಲಿದ್ದೀನಿ. ಆದ್ರೆ ಯಾವತ್ತೂ ನನಗೆ ಯೆಹೋವನ ಸಾಕ್ಷಿಗಳನ್ನು ಭೇಟಿ ಆಗೋಕೆ ಆಗಿಲ್ಲ.” ಡೇವಿಡ್‌ ಹೀಗೆ ಹೇಳ್ತಾರೆ: “ಜನರನ್ನು ಭೇಟಿ ಮಾಡೋಕೆ ಪ್ರಯತ್ನ ಮಾಡ್ತಾ ಇರುವಾಗ ಕೊನೆಗೂ ಅವರು ಸಿಕ್ಕರೆ ಅವರಲ್ಲಿ ಹೆಚ್ಚಿನವರು ನಾವು ಹೇಳೋ ಸಂದೇಶವನ್ನು ಕೇಳಿಸಿಕೊಳ್ಳೋಕೆ ಇಷ್ಟಪಡ್ತಾರೆ.”

ಮನೇಲಿ ಸಿಗದಿರೋ ಜನರಿಗೆ ಬೇರೆ ಜಾಗದಲ್ಲಿ ಸಾರಿ(ಪ್ಯಾರ 9 ನೋಡಿ)

9. ಮನೆಯಲ್ಲಿ ಸಿಗದ ಜನರನ್ನು ಭೇಟಿ ಮಾಡೋಕೆ ಕೆಲವು ಪ್ರಚಾರಕರು ಏನು ಮಾಡಿದ್ದಾರೆ?

9 ಬೇರೆ ಜಾಗದಲ್ಲಿ ಸಾರಿ. ಮನೆಯಲ್ಲಿ ಸಿಗದ ಜನರನ್ನು ಭೇಟಿ ಮಾಡೋಕೆ ಕೆಲವು ಪ್ರಚಾರಕರು ಬೇರೆ ಜಾಗಕ್ಕೆ ಹೋಗಿ ಸಾರುತ್ತಿದ್ದಾರೆ. ಉದಾಹರಣೆಗೆ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ ಬಿಲ್ಡಿಂಗ್‌ಗಳಲ್ಲಿ ಮನೆಮನೆ ಸೇವೆ ಮಾಡೋಕೆ ಪರ್ಮಿಷನ್‌ ಇರೋದಿಲ್ಲ. ಹಾಗಾಗಿ ಅಂಥ ಜನರಿಗೋಸ್ಕರ ಬೀದಿ ಸಾಕ್ಷಿಕಾರ್ಯ, ತಳ್ಳುಬಂಡಿ ಸಾಕ್ಷಿಕಾರ್ಯ ಮಾಡುತ್ತಿದ್ದಾರೆ. ಇದರಿಂದ ಮನೆಯಲ್ಲಿ ಸಿಗದ ಜನರನ್ನು ನೇರವಾಗಿ ಭೇಟಿ ಮಾಡಿ ಮಾತಾಡೋಕೆ ಆಗ್ತಿದೆ. ಅಷ್ಟೇ ಅಲ್ಲ ಪಾರ್ಕುಗಳಲ್ಲಿ ಮಾರ್ಕೆಟ್‌ಗಳಲ್ಲಿ ಮತ್ತು ಅಂಗಡಿಗಳಲ್ಲಿ ಸಿಗೋ ಜನ ಮಾತಾಡೋಕೆ ಮನಸ್ಸು ಮಾಡ್ತಾರೆ, ಪುಸ್ತಕ ಪತ್ರಿಕೆಗಳನ್ನು ತಗೊಳ್ತಾರೆ ಅನ್ನೋದು ಹೆಚ್ಚಿನ ಪ್ರಚಾರಕರ ಅನುಭವ. ಬೊಲಿವಿಯಾದಲ್ಲಿರೋ ಸರ್ಕಿಟ್‌ ಮೇಲ್ವಿಚಾರಕರಾದ ಫ್ಲೋರಾನ್‌ ಹೀಗೆ ಹೇಳ್ತಾರೆ: “ನಾವು ಮಾರ್ಕೆಟ್‌ಗಳಲ್ಲಿ, ಅಂಗಡಿಗಳಲ್ಲಿ ಸಾರೋಕೆ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯ ಒಳಗಡೆ ಹೋಗ್ತೀವಿ. ಆಗ ವ್ಯಾಪಾರಿಗಳು ಸ್ವಲ್ಪ ಫ್ರೀ ಆಗಿರುತ್ತಾರೆ. ಆಗ ಚೆನ್ನಾಗಿ ಮಾತಾಡಿ ಬೈಬಲ್‌ ಸ್ಟಡಿ ಶುರು ಮಾಡೋಕೆ ಆಗುತ್ತೆ.”

ಮನೇಲಿ ಸಿಗದಿರೋ ಜನರಿಗೆ ಬೇರೆ ವಿಧಾನದಲ್ಲಿ ಸಾರಿ ((ಪ್ಯಾರ 10 ನೋಡಿ)

10. ಜನರನ್ನು ಭೇಟಿ ಮಾಡೋಕೆ ನೀವು ಯಾವ ವಿಧಾನಗಳನ್ನು ಬಳಸಬಹುದು?

10 ಬೇರೆ ವಿಧಾನ ಬಳಸಿ. ಒಬ್ಬ ವ್ಯಕ್ತಿಯನ್ನು ಭೇಟಿ ಮಾಡಿ ಸಿಹಿಸುದ್ದಿ ಸಾರೋಕೆ ತುಂಬಾ ಸಾರಿ ಪ್ರಯತ್ನ ಮಾಡಿದ್ದೀರಿ, ಅವರ ಮನೆಗೂ ಬೇರೆಬೇರೆ ಸಮಯದಲ್ಲಿ ಹೋಗಿದ್ದೀರಿ. ಆದರೆ ಒಂದು ಸಾರಿನೂ ಸಿಗಲಿಲ್ಲ. ಅಂಥವರನ್ನ ಭೇಟಿ ಮಾಡೋಕೆ ಬೇರೆ ಯಾವುದಾದರೂ ದಾರಿ ಇದ್ಯಾ? ಕತ್ರಿನಾ ಹೀಗೆ ಹೇಳ್ತಾರೆ: “ಮನೇಲಿ ಸಿಗದ ಜನರಿಗೆ ನಾನು ಪತ್ರ ಬರಿತೀನಿ. ನಾನು ಅವರನ್ನು ನೇರವಾಗಿ ಭೇಟಿ ಮಾಡಿ ಏನು ಹೇಳಬೇಕಂತ ಇದ್ದೆ ಅನ್ನೋದನ್ನ ಅದರಲ್ಲಿ ಬರಿತೀನಿ.” ಕತ್ರಿನಾ ಅವರಿಂದ ನಾವೇನು ಕಲಿಬಹುದು? ನಮ್ಮ ಟೆರಿಟೊರಿಯಲ್ಲಿ ಇರೋ ಜನರನ್ನು ಒಂದಲ್ಲ ಒಂದು ರೀತಿಯಲ್ಲಿ ಭೇಟಿ ಮಾಡೋಕೆ ಪ್ರಯತ್ನಿಸಬೇಕು.

ಜನ ಕೇಳಿಸಿಕೊಳ್ಳದಿದ್ದರೆ ಏನು ಮಾಡಬೇಕು?

11. ಕೆಲವು ಜನರು ಯಾಕೆ ನಮ್ಮ ಸಂದೇಶ ಕೇಳಿಸಿಕೊಳ್ಳೋಕೆ ಇಷ್ಟಪಡಲ್ಲ?

11 ಕೆಲವರು ನಾವು ಹೇಳುವ ಸಂದೇಶವನ್ನು ಕೇಳಿಸಿಕೊಳ್ಳೋಕೆ ಇಷ್ಟಪಡಲ್ಲ. ಯಾಕಂದ್ರೆ ಅವರಿಗೆ ದೇವರ ಬಗ್ಗೆ ಅಥವಾ ಬೈಬಲ್‌ ಬಗ್ಗೆ ಕಲಿಬೇಕು ಅಂತ ಅನಿಸೋದೇ ಇಲ್ಲ. ಲೋಕದಲ್ಲಿ ಇಷ್ಟು ಕಷ್ಟ ಇರೋದನ್ನು ನೋಡಿ ಅವರು ದೇವರ ಮೇಲೆ ನಂಬಿಕೆ ಕಳಕೊಂಡಿರುತ್ತಾರೆ. ಧರ್ಮಗುರುಗಳು ಬೈಬಲಲ್ಲಿ ಇರೋದನ್ನು ಪಾಲಿಸ್ತೀವಿ ಅಂತ ಹೇಳುತ್ತಾರಷ್ಟೇ, ಆದರೆ ಅದೇ ತರ ನಡಕೊಳ್ಳಲ್ಲ. ಇನ್ನು ಕೆಲವರು ಕೆಲಸ, ಮನೆ ಅಥವಾ ಸಮಸ್ಯೆಗಳಲ್ಲೇ ಮುಳುಗಿಹೋಗಿರುತ್ತಾರೆ. ಅಂಥವರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಕೆ ಬೈಬಲ್‌ ಸಹಾಯ ಮಾಡುತ್ತೆ ಅಂತ ಅರ್ಥಮಾಡಿಕೊಳ್ಳಲ್ಲ. ಜನ ನಮ್ಮ ಸಂದೇಶ ಕೇಳಿಸಿಕೊಳ್ಳದೇ ಇರೋಕೆ ಕಾರಣ ಏನೇ ಇದ್ದರೂ ಸೇವೆಯಲ್ಲಿ ನಮ್ಮ ಹುರುಪು ಕಡಿಮೆ ಆಗದೇ ಇರೋಕೆ ನಾವು ಏನೆಲ್ಲಾ ಮಾಡಬಹುದು?

12. ಫಿಲಿಪ್ಪಿ 2:4ರಲ್ಲಿ ಇರೋ ಸಲಹೆಯನ್ನು ನಾವು ಸೇವೆಯಲ್ಲಿ ಹೇಗೆ ಅನ್ವಯಿಸಿಕೊಳ್ಳಬೇಕು?

12 ಕಾಳಜಿ ಇದೆ ಅಂತ ತೋರಿಸಿ. ಆಗ ಮೊದಲು ಬೇಡ ಅಂದವರು ಕೂಡ ಸಿಹಿಸುದ್ದಿ ಕೇಳಿಸಿಕೊಳ್ಳೋಕೆ ಮನಸ್ಸು ಮಾಡ್ತಾರೆ. (ಫಿಲಿಪ್ಪಿ 2:4 ಓದಿ.) ಸಹೋದರ ಡೇವಿಡ್‌ ಏನು ಹೇಳ್ತಾರೆ ನೋಡಿ: “ನಾವು ಸಿಹಿಸುದ್ದಿ ಸಾರೋಕೆ ಹೋದಾಗ ಯಾರಾದ್ರೂ ಬೇಡ ಅಂದ್ರೆ ಬೈಬಲ್‌ ಬಗ್ಗೆ ಅಥವಾ ನಮ್ಮ ಪುಸ್ತಕ-ಪತ್ರಿಕೆಗಳ ಬಗ್ಗೆ ಮಾತಾಡದೆ ‘ನಿಮಗೆ ಕೇಳಿಸಿಕೊಳ್ಳೋಕೆ ಯಾಕೆ ಇಷ್ಟ ಇಲ್ಲ ಅಂತ ತಿಳುಕೊಳ್ಳಬಹುದಾ?’ ಅಂತ ಕೇಳಿ.” ನಾವು ಪ್ರೀತಿ ಕಾಳಜಿ ತೋರಿಸಿದರೆ ಜನ ಅದನ್ನು ಬೇಗ ಗುರುತಿಸುತ್ತಾರೆ. ನಾವು ಹೇಳಿದ ಮಾತು ಅವರಿಗೆ ನೆನಪಿರಲಿಕ್ಕಿಲ್ಲ. ಆದರೆ ನಾವು ತೋರಿಸಿದ ಕಾಳಜಿ ಅವರಿಗೆ ನೆನಪಿರುತ್ತೆ. ಒಂದುವೇಳೆ ನಾವು ಮಾತಾಡೋಕೆ ಅವರು ಅವಕಾಶನೇ ಕೊಡದಿದ್ದರೂ ನಮ್ಮ ಮುಖದಿಂದ, ನಾವು ನಡಕೊಳ್ಳುವ ರೀತಿಯಿಂದ ಅವರ ಮೇಲೆ ನಮಗೆ ಕಾಳಜಿ ಇದೆ ಅಂತ ತೋರಿಸಿಕೊಡಬಹುದು.

13. ಮನೆಯವರಿಗೆ ಪ್ರಯೋಜನ ಆಗೋ ತರ ನಾವು ಹೇಗೆ ಮಾತಾಡಬಹುದು?

13 ಜನರ ಮೇಲೆ ಕಾಳಜಿ ಇದೆ ಅಂತ ನಾವು ಹೇಗೆ ತೋರಿಸಬಹುದು? ಅವರಿಗೆ ಪ್ರಯೋಜನ ಆಗುವಂಥ ವಿಷಯಗಳ ಬಗ್ಗೆ ನಾವು ಮಾತಾಡಬೇಕು. ಉದಾಹರಣೆಗೆ ಮನೇಲಿ ಮಕ್ಕಳಿದ್ದಾರೆ ಅಂತ ಗೊತ್ತಾದರೆ, ಮಕ್ಕಳನ್ನು ಹೇಗೆ ಬೆಳೆಸಬೇಕು, ಕುಟುಂಬದಲ್ಲಿ ಸಂತೋಷವಾಗಿ ಇರಬೇಕಂದರೆ ಏನು ಮಾಡಬೇಕು ಅಂತ ಬೈಬಲ್‌ ಕೊಡೋ ಸಲಹೆನ ತೋರಿಸಬಹುದು. ಇಂಥ ವಿಷಯಗಳಲ್ಲಿ ಹೆತ್ತವರಿಗೆ ಆಸಕ್ತಿ ಇರಬಹುದು. ಮನೆಗೆ ಬಿಗಿಭದ್ರತೆ ಮಾಡಿರೋದನ್ನು ನೋಡಿದಾಗ, ಈಗ ನಡಿತಾ ಇರೋ ಅಪರಾಧಗಳ ಬಗ್ಗೆ ಮನೆಯವರ ಹತ್ರ ಮಾತಾಡಿ ಅದಕ್ಕಿರೋ ಶಾಶ್ವತ ಪರಿಹಾರದ ಬಗ್ಗೆ ಬೈಬಲಿಂದ ತೋರಿಸಿದ್ರೆ ಅವರಿಗೆ ಖುಷಿ ಆಗುತ್ತೆ. ಹೀಗೆ ಪ್ರತಿಯೊಬ್ಬರ ಹತ್ರ ಮಾತಾಡುವಾಗಲೂ ಬೈಬಲ್‌ ಅವರಿಗೆ ಹೇಗೆ ಸಹಾಯ ಮಾಡುತ್ತೆ ಅಂತ ಅರ್ಥ ಮಾಡಿಸೋಕೆ ಪ್ರಯತ್ನಿಸಿ. ಕತ್ರಿನಾ ಹೀಗೆ ಹೇಳ್ತಾರೆ: “ನನ್ನ ಜೀವನದಲ್ಲಿ ಬೈಬಲ್‌ ಹೇಗೆ ಸಹಾಯ ಮಾಡಿದೆ ಅಂತ ಆಗಾಗ ನೆನಪಿಸಿಕೊಳ್ತೀನಿ.” ಇದರಿಂದ ಏನು ಪ್ರಯೋಜನ ಆಗಿದೆ? ಕತ್ರಿನಾ ಜನರ ಹತ್ರ ಮಾತಾಡುವಾಗ ಬೈಬಲ್‌ ನಿಜವಾಗ್ಲೂ ಸಹಾಯ ಮಾಡುತ್ತೆ ಅನ್ನೋ ವಿಷಯದಲ್ಲಿ ಒಂಚೂರೂ ಸಂಶಯ ಇಲ್ಲದೆ ಮಾತಾಡುತ್ತಾರೆ. ಇದು ಜನರ ಮೇಲೆ ಒಳ್ಳೇ ಪರಿಣಾಮನೂ ಬೀರುತ್ತಿದೆ.

14. ಸೇವೆಗೆ ಹೋದಾಗ ಒಬ್ಬರು ಇನ್ನೊಬ್ಬರಿಗೆ ಹೇಗೆ ಸಹಾಯ ಮಾಡಬೇಕು ಅಂತ ಜ್ಞಾನೋಕ್ತಿ 27:17ರಿಂದ ಕಲಿತೀವಿ?

14 ಬೇರೆಯವರ ಸಹಾಯ ಪಡಕೊಳ್ಳಿ. ಒಂದನೇ ಶತಮಾನದಲ್ಲಿ, ಹೇಗೆ ಸಾರಬೇಕು ಹೇಗೆ ಬೋಧಿಸಬೇಕು ಅಂತ ಪೌಲ ತಿಮೊತಿಗೆ ಕಲಿಸಿದ. ಅದೇ ವಿಧಾನಗಳನ್ನು ಸಭೆಯಲ್ಲಿ ಇರುವವರಿಗೆ ಕಲಿಸೋಕೆ ಅವನನ್ನು ಪ್ರೋತ್ಸಾಹಿಸಿದ. (1 ಕೊರಿಂ. 4:17) ತಿಮೊತಿ ತರ ನಾವು ಸಹ ಸಭೆಯಲ್ಲಿ ಅನುಭವ ಇರೋ ಪ್ರಚಾರಕರಿಂದ ಕಲಿಬಹುದು. (ಜ್ಞಾನೋಕ್ತಿ 27:17 ಓದಿ.) ಶಾನ್‌ ಅನ್ನೋ ಸಹೋದರನ ಉದಾಹರಣೆ ನೋಡಿ. ಸ್ವಲ್ಪ ಸಮಯಕ್ಕೆ ಅವರು ಒಂದು ಹಳ್ಳಿಯಲ್ಲಿ ಪಯನೀಯರ್‌ ಸೇವೆ ಮಾಡುತ್ತಿದ್ದರು. ಅಲ್ಲಿ ಹೆಚ್ಚಿನವರು ತಮ್ಮ ಧರ್ಮನೇ ಸಾಕು ಅಂತ ಇದ್ದರು. ಅದಕ್ಕೆ ಶಾನ್‌ ಹೇಳುವ ಸಂದೇಶವನ್ನು ಕೇಳಿಸಿಕೊಳ್ಳುತ್ತಾ ಇರಲಿಲ್ಲ. ಆದರೂ ಶಾನ್‌ ಸೋತು ಹೋಗದೆ ಸಂತೋಷವಾಗಿ ಸಾರುತ್ತಾ ಇರೋಕೆ ಏನು ಮಾಡಿದ್ರು? ಅವರ ಮಾತಲ್ಲೇ ಕೇಳಿ: “ಹೆಚ್ಚಾಗಿ ನಾನು ಸೇವೆಗೆ ಹೋಗುವಾಗ ಒಬ್ಬನೇ ಹೋಗ್ತಾ ಇರಲಿಲ್ಲ. ಇನ್ನೊಬ್ಬರನ್ನ ಕರಕೊಂಡು ಹೋಗುತ್ತಿದ್ದೆ. ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗೋ ಟೈಮಲ್ಲಿ ಜನರಿಗೆ ಇನ್ನೂ ಚೆನ್ನಾಗಿ ಹೇಗೆ ಕಲಿಸಬಹುದು ಅಂತ ಒಬ್ಬರಿಗೊಬ್ಬರು ಮಾತಾಡಿಕೊಳ್ತಾ ಇದ್ವಿ. ಈಗಾಗಲೆ ಮಾತಾಡಿದ ಮನೇಲಿ ಮನೆಯವರು ಏನು ಹೇಳಿದ್ರು, ಅದಕ್ಕೆ ನಾವೇನು ಅಂದ್ವಿ ಅಂತ ನೆನಪಿಸಿಕೊಳ್ಳುತ್ತಿದ್ವಿ. ಮತ್ತೆ ಇದೇ ತರ ಸನ್ನಿವೇಶ ಬಂದರೆ ಹೇಗೆ ಮಾತಾಡಬಹುದು ಅಂತನೂ ಚರ್ಚಿಸುತ್ತಿದ್ವಿ.”

15. ಸೇವೆಗೆ ಹೋಗೋ ಮುಂಚೆ ಪ್ರಾರ್ಥನೆ ಮಾಡೋದು ಯಾಕೆ ಮುಖ್ಯ?

15 ಯೆಹೋವನ ಹತ್ರ ಪ್ರಾರ್ಥಿಸಿ. ಪ್ರತಿಸಾರಿ ಸೇವೆಗೆ ಹೋಗುವಾಗೆಲ್ಲ ಪ್ರಾರ್ಥನೆ ಮಾಡಿ ಹೋಗಿ. ಪವಿತ್ರ ಶಕ್ತಿಯ ಸಹಾಯ ಇಲ್ಲದೆ ನಮ್ಮಿಂದ ಏನೂ ಮಾಡಕ್ಕಾಗಲ್ಲ. (ಕೀರ್ತ. 127:1; ಲೂಕ 11:13) ಪ್ರಾರ್ಥನೆ ಮಾಡುವಾಗ ಯಾವ ಸಹಾಯ ಬೇಕು ಅಂತ ನಿರ್ದಿಷ್ಟವಾಗಿ ಕೇಳಿ. ಉದಾಹರಣೆಗೆ, ನಾವು ಹೇಳುವ ಸಂದೇಶವನ್ನು ಕೇಳೋಕೆ ಮತ್ತು ಯೆಹೋವನ ಬಗ್ಗೆ ಕಲಿಯೋಕೆ ಇಷ್ಟಪಡೋ ಜನರನ್ನು ತೋರಿಸಿಕೊಡಪ್ಪಾ ಅಂತ ಕೇಳಿ. ಅದೇ ತರ ಪ್ರಯತ್ನನೂ ಹಾಕಿ. ನೀವು ಭೇಟಿ ಆಗೋ ಪ್ರತಿಯೊಬ್ಬರಿಗೂ ಸಿಹಿಸುದ್ದಿ ಸಾರಿ.

16. ವೈಯಕ್ತಿಕ ಅಧ್ಯಯನ ಮಾಡೋದು ನಮ್ಮ ಸೇವೆಗೆ ಹೇಗೆ ಸಹಾಯ ಮಾಡುತ್ತೆ? ವಿವರಿಸಿ.

16 ವೈಯಕ್ತಿಕ ಅಧ್ಯಯನ ಮಾಡೋಕೆ ಸಮಯ ಮಾಡಿಕೊಳ್ಳಿ. “ದೇವರು ಇಷ್ಟಪಡೋ ವಿಷ್ಯಗಳು ಯಾವಾಗ್ಲೂ ಒಳ್ಳೇದಾಗಿ, ಪರಿಪೂರ್ಣವಾಗಿ, ಸರಿಯಾಗಿ ಇರುತ್ತೆ ಅಂತ ಪರೀಕ್ಷಿಸಿ” ಅರ್ಥ ಮಾಡಿಕೊಳ್ಳಬೇಕು ಅಂತ ಬೈಬಲ್‌ ಹೇಳುತ್ತೆ. (ರೋಮ. 12:2) ಹಾಗಾಗಿ ನಾವು ಮೊದಲು ಬೈಬಲ್‌ ಅಧ್ಯಯನ ಮಾಡಿ ದೇವರ ಬಗ್ಗೆ ಚೆನ್ನಾಗಿ ತಿಳುಕೊಳ್ಳಬೇಕು. ಆಗಲೇ ಯಾವುದೇ ಸಂಶಯ ಇಲ್ಲದೆ ಪೂರ್ತಿ ನಂಬಿಕೆಯಿಂದ ಜನರ ಹತ್ರ ಮಾತಾಡೋಕೆ ಆಗುತ್ತೆ. ಕತ್ರಿನಾ ಹೀಗೆ ಹೇಳ್ತಾರೆ: “ಸ್ವಲ್ಪ ಸಮಯದ ಹಿಂದೆ ಬೈಬಲಿನ ಮೂಲಭೂತ ಬೋಧನೆಗಳ ಬಗ್ಗೆ ನನ್ನ ನಂಬಿಕೆಯನ್ನ ಇನ್ನೂ ಬಲಪಡಿಸಿಕೊಳ್ಳಬೇಕು ಅಂತ ಅನಿಸ್ತು. ಅದಕ್ಕಾಗಿ ನಾನು ದೇವರಿದ್ದಾನೆ, ಬೈಬಲ್‌ ನಿಜವಾಗ್ಲೂ ದೇವರು ಬರೆಸಿರೋ ಗ್ರಂಥ, ದೇವರಿಗೆ ಈಗಲೂ ಒಂದು ಸಂಘಟನೆ ಇದೆ ಅನ್ನೋದರ ಬಗ್ಗೆ ಚೆನ್ನಾಗಿ ಅಧ್ಯಯನ ಮಾಡಿ ತಿಳುಕೊಂಡೆ.” ಈ ರೀತಿ ವೈಯಕ್ತಿಕ ಅಧ್ಯಯನ ಮಾಡಿದ್ದರಿಂದ ಕತ್ರಿನಾಗೆ ನಂಬಿಕೆನೂ ಬಲ ಆಯ್ತು. ಸೋತು ಹೋಗದೆ ಸಿಹಿಸುದ್ದಿ ಸಾರುತ್ತಾ ಇರೋಕೂ ಆಯ್ತು.

ನಾವು ಯಾಕೆ ಸೋತು ಹೋಗಬಾರದು?

17. ಯೇಸು ಸೋತು ಹೋಗದೆ ಸಾರುತ್ತಾ ಇರೋಕೆ ಕಾರಣ ಏನಾಗಿತ್ತು?

17 ಯೇಸು ಸಾರಿದಾಗ ಕೆಲವರು ಕೇಳಿಸಿಕೊಳ್ಳಲಿಲ್ಲ. ಹಾಗಂತ ಯೇಸು ಸೋತು ಹೋಗಲಿಲ್ಲ. ಸಾರುತ್ತಾ ಇದ್ದನು. ಯಾಕೆ? ಯಾಕಂದ್ರೆ ಜನರು ಸತ್ಯ ತಿಳುಕೊಳ್ಳೋದು ಎಷ್ಟು ಮುಖ್ಯ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಅಷ್ಟೇ ಅಲ್ಲ ದೇವರ ಆಳ್ವಿಕೆ ಬಗ್ಗೆ ಇರೋ ಸಂದೇಶವನ್ನು ಎಷ್ಟಾಗುತ್ತೋ ಅಷ್ಟು ಜನರು ಕೇಳಿಸಿಕೊಳ್ಳೋಕೆ ಅವಕಾಶ ಕೊಡಬೇಕು ಅನ್ನೋ ಆಸೆನೂ ಇತ್ತು. ಕೆಲವರು ಮೊದಲು ಕೇಳಿಸಿಕೊಳ್ಳದೇ ಇದ್ದರೂ ಆಮೇಲೆ ಕೇಳಿಸಿಕೊಳ್ತಾರೆ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಅವನ ಕುಟುಂಬದಲ್ಲೇ ಏನಾಯ್ತು ನೋಡಿ. ಯೇಸು ಮೂರೂವರೆ ವರ್ಷ ಸೇವೆ ಮಾಡಿದನು. ಆ ಟೈಮಲ್ಲಿ ಅವನ ತಮ್ಮಂದಿರಲ್ಲಿ ಒಬ್ಬನೂ ಅವನ ಶಿಷ್ಯನಾಗಲಿಲ್ಲ. (ಯೋಹಾ. 7:5) ಆದರೆ ಅವನು ಮತ್ತೆ ಜೀವಂತವಾಗಿ ಎದ್ದು ಬಂದಮೇಲೆ ಅವರು ಕ್ರೈಸ್ತರಾದರು.—ಅ. ಕಾ. 1:14.

18. ನಾವು ಸೋತು ಹೋಗದೆ ಸಾರುತ್ತಾ ಇರಬೇಕು ಯಾಕೆ?

18 ಇವತ್ತು ನಾವು ಸಿಹಿಸುದ್ದಿ ಸಾರಿದವರಲ್ಲಿ ನಾಳೆ ಯಾರು ಸತ್ಯ ಕಲಿತಾರೆ ಅಂತ ಹೇಳಕ್ಕಾಗಲ್ಲ. ಕೆಲವರು ಬೇಗ ಸತ್ಯ ಕಲಿತಾರೆ, ಇನ್ನು ಕೆಲವರು ಸಮಯ ತಗೊಳ್ತಾರೆ. ನಮ್ಮ ಸಂದೇಶವನ್ನು ಕೇಳೋಕೆ ಇಷ್ಟಪಡದಿರೋ ಜನ ಕೂಡ ನಮ್ಮ ಒಳ್ಳೇ ನಡತೆ ನೋಡಿ, ಛಲ ನೋಡಿ ಮುಂದೆ ಒಂದಿನ ದೇವರನ್ನು ಹೊಗಳಿದರೂ ಹೊಗಳಬಹುದು.—1 ಪೇತ್ರ 2:12.

19. ಒಂದನೇ ಕೊರಿಂಥ 3:6, 7ರಿಂದ ನಾವೇನು ಕಲಿತೀವಿ?

19 ನಿಜ, ನಾವು ಗಿಡ ನೆಡುತ್ತೀವಿ, ನೀರು ಹಾಕ್ತೀವಿ. ಆದ್ರೆ ಬೆಳೆಸುವವನು ದೇವರು ಅನ್ನೋದನ್ನು ಮರಿಬಾರದು. (1 ಕೊರಿಂಥ 3:6, 7 ಓದಿ.) ಇಥಿಯೋಪ್ಯದಲ್ಲಿರೋ ಸಹೋದರ ಗೆಟಹೂನ್‌ ಹೀಗೆ ಹೇಳ್ತಾರೆ: “20ಕ್ಕಿಂತ ಹೆಚ್ಚು ವರ್ಷ ನಮ್ಮೂರಲ್ಲಿ ನಾನೊಬ್ಬನೇ ಸಾಕ್ಷಿಯಾಗಿದ್ದೆ. ಆದ್ರೆ ಈಗ 14 ಪ್ರಚಾರಕರು ಇದ್ದೀವಿ. ಅವರಲ್ಲಿ ನನ್ನ ಹೆಂಡತಿ ಮತ್ತೆ ಮೂರು ಮಕ್ಕಳು ಸೇರಿ 13 ಜನಕ್ಕೆ ದೀಕ್ಷಾಸ್ನಾನ ಆಗಿದೆ. ಕೂಟಗಳಿಗೆ ಕಡಿಮೆ ಅಂದ್ರೆ 30 ಜನ ಹಾಜರಾಗ್ತಾರೆ.” ಗೆಟಹೂನ್‌ ತಾಳ್ಮೆ ಕಳಕೊಳ್ಳದೆ ಸಿಹಿಸುದ್ದಿ ಸಾರುತ್ತಾ ಇದ್ರು. ಯೆಹೋವ ಅದಕ್ಕೆ ಪ್ರತಿಫಲ ಕೊಟ್ಟನು. ಒಳ್ಳೇ ಮನಸ್ಸಿರೋ ಜನರನ್ನು ತನ್ನ ಸಂಘಟನೆ ಕಡೆಗೆ ಸೆಳೆದನು. ಇದನ್ನು ನೋಡಿದಾಗ ಗೆಟಹೂನ್‌ಗೆ ಖುಷಿ ಆಯ್ತು.—ಯೋಹಾ. 6:44.

20. ಸಾರುವ ಕೆಲಸವನ್ನು ಯಾವುದಕ್ಕೆ ಹೋಲಿಸಲಾಗಿದೆ?

20 ಯೆಹೋವ ದೇವರಿಗೆ ಎಲ್ಲರೂ ಅಮೂಲ್ಯರೇ. ಈ ಲೋಕ ಇನ್ನು ಸ್ವಲ್ಪ ಸಮಯದಲ್ಲಿ ನಾಶ ಆಗುತ್ತೆ. ಅಷ್ಟರೊಳಗೆ ಎಲ್ಲಾ ದೇಶಗಳಿಂದ ಜನರನ್ನು ಕಾಪಾಡೋಕೆ ತನ್ನ ಮಗನ ಜೊತೆ ಕೈಜೋಡಿಸಿ ಕೆಲಸ ಮಾಡೋ ಅವಕಾಶವನ್ನು ದೇವರು ನಮಗೆ ಕೊಟ್ಟಿದ್ದಾನೆ. (ಹಗ್ಗಾ. 2:7) ಒಂದು ಗಣಿ ಒಳಗೆ ಸ್ವಲ್ಪ ಜನ ಸಿಕ್ಕಿಹಾಕಿಕೊಂಡಿದ್ದಾರೆ ಅಂದುಕೊಳ್ಳಿ. ಅವರನ್ನು ಕಾಪಾಡೋ ಟೀಮ್‌ನಲ್ಲಿ ನೀವೂ ಇದ್ದೀರಿ. ಸ್ವಲ್ಪ ಜನರನ್ನು ಮಾತ್ರ ಕಾಪಾಡೋಕೆ ಆದ್ರೂ ನಿಮ್ಮ ಇಡೀ ಟೀಮ್‌ ಮಾಡಿದ ಕೆಲಸ ಸಾರ್ಥಕ. ಸಾರುವ ಕೆಲಸ ಕೂಡ ಇದೇ ತರ ಇದೆ. ಈ ಸೈತಾನನ ಲೋಕದಿಂದ ಎಷ್ಟು ಜನ ಬದುಕಿ ಉಳಿತಾರೋ ನಮಗೆ ಗೊತ್ತಿಲ್ಲ. ಆದರೆ ಯೆಹೋವ ನಮ್ಮಲ್ಲಿ ಯಾರನ್ನು ಬೇಕಾದರೂ ಉಪಯೋಗಿಸಿ ಜನರನ್ನು ಕಾಪಾಡಬಹುದು. ಬೊಲಿವಿಯಾದಲ್ಲಿ ಇರೋ ಆ್ಯಂಡ್ರೂಸ್‌ ಹೀಗೆ ಹೇಳ್ತಾರೆ: “ಒಬ್ಬ ವ್ಯಕ್ತಿ ಸತ್ಯ ಕಲಿತು ದೀಕ್ಷಾಸ್ನಾನ ತಗೊಳ್ಳುವುದರ ಹಿಂದೆ ಒಬ್ಬರ ಪ್ರಯತ್ನ ಅಲ್ಲ, ಇಡೀ ಗುಂಪಿನ ಪ್ರಯತ್ನ ಇರುತ್ತೆ ಅನ್ನೋದನ್ನ ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀನಿ.” ನಾವು ಕೂಡ ಇದೇ ರೀತಿ ಯೋಚನೆ ಮಾಡಬೇಕು. ಹಾಗೆ ಮಾಡಿದ್ರೆ ಯೆಹೋವ ದೇವರು ನಮ್ಮನ್ನು ಆಶೀರ್ವದಿಸುತ್ತಾನೆ. ಅಷ್ಟೇ ಅಲ್ಲ, ಸೋತು ಹೋಗದೆ ಸಂತೋಷವಾಗಿ ಸಾರುತ್ತಾ ಇರುತ್ತೀವಿ.

ಗೀತೆ 47 ಸುವಾರ್ತೆಯನ್ನು ಪ್ರಕಟಿಸಿರಿ

^ ಪ್ಯಾರ. 5 ನಾವು ಸೇವೆಗೆ ಹೋದಾಗ ಕೆಲವೊಮ್ಮೆ ಮನೆಗಳಲ್ಲಿ ಜನರು ಸಿಗಲ್ಲ, ಸಿಕ್ಕಿದ್ರೂ ನಾವು ಹೇಳುವ ಸಂದೇಶವನ್ನು ಕೇಳೋಕೆ ಕೆಲವರು ಇಷ್ಟ ಪಡಲ್ಲ. ಆಗ ನಾವೇನು ಮಾಡಬೇಕು? ಅದರ ಬಗ್ಗೆ ಈ ಲೇಖನದಲ್ಲಿ ಕೆಲವು ಒಳ್ಳೇ ಸಲಹೆಗಳಿವೆ.

^ ಪ್ಯಾರ. 7 ಈ ಲೇಖನದಲ್ಲಿರೋ ಸಲಹೆಗಳನ್ನು ಪಾಲಿಸುವಾಗ ಡೇಟಾ ಸಂರಕ್ಷಣಾ ಕಾನೂನನ್ನು ಮೀರದಂತೆ ನೋಡಿಕೊಳ್ಳಿ.

^ ಪ್ಯಾರ. 60 ಚಿತ್ರ ವಿವರಣೆ: (ಮೇಲಿಂದ ಕೆಳಗೆ): ಒಬ್ಬ ಗಂಡ-ಹೆಂಡತಿ ಜನರು ಹೆಚ್ಚಾಗಿ ಮನೇಲಿ ಇಲ್ಲದಿರೋ ಟೆರಿಟೊರಿಯಲ್ಲಿ ಸೇವೆ ಮಾಡ್ತಿದ್ದಾರೆ. ಮೊದಲನೇ ಮನೆಯವನು ಕೆಲಸಕ್ಕೆ ಹೋಗಿದ್ದಾನೆ. ಎರಡನೇ ಮನೆಯವಳು ಡಾಕ್ಟರ್‌ ಹತ್ರ ಹೋಗಿದ್ದಾಳೆ. ಮೂರನೇ ಮನೆಯವಳು ಶಾಪಿಂಗ್‌ ಹೋಗಿದ್ದಾಳೆ. ಮೊದಲನೇ ವ್ಯಕ್ತಿಗೆ ಸಾಯಂಕಾಲ ಅವನ ಮನೆಗೆ ಹೋಗಿ ಸಾರುತ್ತಿದ್ದಾರೆ. ಎರಡನೇ ಸ್ತ್ರೀಯನ್ನು ಭೇಟಿ ಮಾಡೋಕೆ ಕ್ಲೀನಿಕ್‌ ಹತ್ರ ಸಾರ್ವಜನಿಕ ಸಾಕ್ಷಿಕಾರ್ಯ ಮಾಡ್ತಿದ್ದಾರೆ. ಮೂರನೇ ಸ್ತ್ರೀಗೆ ಫೋನ್‌ ಮಾಡಿ ಸಾರುತ್ತಿದ್ದಾರೆ.