ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

‘ನಾನು ಬೇರೆಯವರಿಂದ ತುಂಬಾ ಕಲಿತೆ’

‘ನಾನು ಬೇರೆಯವರಿಂದ ತುಂಬಾ ಕಲಿತೆ’

ಅವತ್ತು ರಾತ್ರಿ ಬರೀ ಕಗ್ಗತ್ತಲು. ಅಲ್ಜೀರಿಯಾದ ಬೆಟ್ಟಗಳ ಹತ್ತಿರ ಫ್ರೆಂಚ್‌ ಸೈನ್ಯ ಕ್ಯಾಂಪ್‌ ಹಾಕಿತ್ತು. ಆ ಸೈನ್ಯದಲ್ಲಿ ನಾನಿದ್ದೆ. ಅಲ್ಲಿ ಆಗಾಗ ಯುದ್ಧ ನಡಿತಿತ್ತು. ಕೈಯಲ್ಲಿ ಮೆಶಿನ್‌ ಗನ್‌ ಹಿಡ್ಕೊಂಡು ಮರಳಿನ ಮೂಟೆಗಳ ಹಿಂದೆ ನಾನೊಬ್ಬನೇ ನಿಂತಿದ್ದೆ. ಆಗ ನನಗೆ ಹತ್ತತ್ರ 20 ವರ್ಷ. ನಂಗೆ ಸಾಯೋಕೂ ಇಷ್ಟ ಇರಲಿಲ್ಲ, ಬೇರೆಯವರನ್ನ ಸಾಯಿಸೋಕೂ ಇಷ್ಟ ಇರಲಿಲ್ಲ. ದಿಢೀರಂತ ಯಾರೋ ನನ್ನ ಕಡೆ ಬರೋ ತರ ಸದ್ದು ಕೇಳಿಸ್ತು. ನನ್ನ ಜೀವನೇ ನಡುಗಿ ಬಿಡ್ತು. “ಅಯ್ಯೋ ದೇವರೇ” ಅಂತ ಕಿರುಚಿ ಬಿಟ್ಟೆ!

ಈ ಘಟನೆ ನನ್ನ ಜೀವನವನ್ನೇ ಬದಲಾಯಿಸಿ ಬಿಡ್ತು. ಆಗಲೇ ನಾನು ದೇವರ ಬಗ್ಗೆ ತಿಳ್ಕೊಳ್ಳೋಕೂ ಶುರುಮಾಡಿದ್ದು. ಆ ರಾತ್ರಿ ಮುಂದೇನಾಯಿತು ಅಂತ ಹೇಳೋಕೆ ಮುಂಚೆ ನಾನು ನನ್ನ ಬಾಲ್ಯದ ಬಗ್ಗೆ ಹೇಳೋಕೆ ಇಷ್ಟಪಡ್ತೀನಿ. ಅಷ್ಟೇ ಅಲ್ಲ ದೇವರ ಬಗ್ಗೆ ತಿಳ್ಕೊಬೇಕು ಅನ್ನೋ ಆಸೆ ಯಾಕೆ ಬಂತು ಅಂತನೂ ಹೇಳ್ತೀನಿ.

ಅಪ್ಪನಿಂದ ಕಲಿತ ಪಾಠಗಳು

ನಾನು 1937ರಲ್ಲಿ ಉತ್ತರ ಫ್ರಾನ್ಸ್‌ನ ಗೆನನ್‌ ಅನ್ನೋ ಪಟ್ಟಣದಲ್ಲಿ ಹುಟ್ಟಿದೆ. ಅಲ್ಲಿ ಕಲ್ಲಿದ್ದಲು ಗಣಿ ಇತ್ತು. ನಮ್ಮಪ್ಪ ಅಲ್ಲಿ ಕೆಲಸ ಮಾಡುತ್ತಿದ್ದರು. ಕಷ್ಟಪಟ್ಟು ದುಡಿಯೋ ಬೆಲೆ ನಂಗೆ ಗೊತ್ತಾಗಿದ್ದು ಅವರಿಂದಾನೇ. ಅಷ್ಟೇ ಅಲ್ಲ ಅವರಿಗೆ ಅನ್ಯಾಯ ಅಂದ್ರೆ ಆಗುತ್ತಿರಲಿಲ್ಲ. ಅಲ್ಲಿ ಕೆಲಸ ಮಾಡುತ್ತಿದ್ದ ಜನರ ಮೇಲೆ ಯಜಮಾನರು ಹಕ್ಕು ಚಲಾಯಿಸುತ್ತಿದ್ದರು, ಅನ್ಯಾಯ ಮಾಡುತ್ತಿದ್ದರು. ಆ ಜನರಿಗೆ ನ್ಯಾಯ ಕೊಡಿಸಬೇಕು ಅಂತ ನಮ್ಮಪ್ಪ ಮುಷ್ಕರಗಳನ್ನ ಚಳುವಳಿಗಳನ್ನ ಮಾಡುತ್ತಿದ್ದರು. ಇದೆಲ್ಲದ್ರ ಜೊತೆ ಪಾದ್ರಿಗಳು ಜನರ ಮೇಲೆ ದಬ್ಬಾಳಿಕೆ ಮಾಡುವುದನ್ನ ನಮ್ಮಪ್ಪ ಗಮನಿಸುತ್ತಿದ್ದರು. ಆ ಪಾದ್ರಿಗಳು ಐಷಾರಾಮಿ ಜೀವನ ನಡೆಸುತ್ತಿದ್ದರೂ ಜನರತ್ರ ಊಟ, ದುಡ್ಡನ್ನೆಲ್ಲಾ ಕಿತ್ತುಕೊಳ್ತಿದ್ದರು. ಅದಕ್ಕೆ ನಮ್ಮಪ್ಪ ಧರ್ಮದ ಬಗ್ಗೆ ಏನೂ ಕಲಿಸಲಿಲ್ಲ. ದೇವರ ಬಗ್ಗೆ ಮಾತೇ ಎತ್ತುತ್ತಾ ಇರಲಿಲ್ಲ.

ಫ್ರಾನ್ಸ್‌ನಲ್ಲಿ ಇದ್ದ ಕೆಲವರು ವಿದೇಶಿಯರನ್ನು ಕೀಳಾಗಿ ನೋಡುತ್ತಿದ್ದರು. ಭೇದಭಾವ ಮಾಡ್ತಿದ್ರು. ಆದ್ರೆ ಇದೆಲ್ಲಾ ನನಗೆ ಇಷ್ಟ ಇರಲಿಲ್ಲ. ಯಾಕಂದ್ರೆ ನಮ್ಮಮ್ಮನೂ ಒಬ್ಬ ವಿದೇಶೀನೆ. ಅವರು ಪೋಲೆಂಡ್‌ನವರಾಗಿದ್ದರು. ನಾನು ವಲಸೆ ಬಂದವರ ಮಕ್ಕಳ ಜೊತೆ ಫುಟ್ಬಾಲ್‌ ಆಡ್ತಾ ಮಜಾ ಮಾಡ್ತಿದ್ದೆ. ಹಂಗಾಗಿ ನನಗೆ ಭೇದಭಾವ ಮಾಡೋದು ಇಷ್ಟ ಆಗ್ತಿರಲಿಲ್ಲ. ಎಲ್ಲಾ ದೇಶದವರು ಒಟ್ಟಾಗಿ ಒಗ್ಗಟ್ಟಾಗಿದ್ರೆ ಎಷ್ಟು ಚೆನ್ನಾಗಿರುತ್ತೆ ಅಂತ ಅನಿಸುತ್ತಿತ್ತು.

ಜೀವನದ ಅರ್ಥ ಏನು ಅಂತ ಗೊತ್ತಾಯ್ತು

ನಾನು ಮಿಲಿಟರಿಯಲ್ಲಿ ಇದ್ದಾಗ

ನಾನು 1957ರಲ್ಲಿ ಮಿಲಿಟರಿ ಸೇರಬೇಕಾಗಿ ಬಂತು. ಅಲ್ಜೀರಿಯಾದ ಬೆಟ್ಟದಲ್ಲಿ ಇರಬೇಕಾದರೆ ನಾನು ಮೊದಲು ಹೇಳಿದ ಆ ಘಟನೆ ನಡಿತು. ಆ ರಾತ್ರಿನೇ ನಾನು “ಅಯ್ಯೋ ದೇವರೇ” ಅಂತ ಕಿರುಚಿದ್ದು. ಆದ್ರೆ ಆವಾಗ ಬಂದಿದ್ದು ಶತ್ರುಗಳಲ್ಲ. ಒಂದು ಕಾಡುಕತ್ತೆ! ಬದುಕಿದೆಯಾ ಬಡಜೀವವೇ ಅಂದುಕೊಂಡೆ. ಈ ಘಟನೆ ಆದ್ಮೇಲೆನೇ ನಾನು ಜೀವನದ ಬಗ್ಗೆ ಯೋಚನೆ ಮಾಡಕ್ಕೆ ಶುರು ಮಾಡಿದೆ. ನಾವೆಲ್ಲ ಯಾಕೆ ಇಲ್ಲಿದ್ದೀವಿ? ದೇವರಿಗೆ ನಮ್‌ ಬಗ್ಗೆ ಸ್ವಲ್ಪನಾದರೂ ಕಾಳಜಿ ಇದ್ಯಾ? ಈ ಜಗಳ ಯುದ್ಧ ಯಾವಾಗ ಮುಗಿಯುತ್ತೆ ಅನ್ನೋ ಪ್ರಶ್ನೆಗಳು ನನ್ನ ಮನಸ್ಸನ್ನು ಕಾಡುತ್ತಿತ್ತು.

ಆಮೇಲೆ ನಾನು ರಜಾಗೆ ಅಂತ ಮನೆಗೆ ಬಂದಾಗ ಒಬ್ಬ ಯೆಹೋವನ ಸಾಕ್ಷಿ ಸಿಕ್ಕಿದ್ರು. ಅವರು ಫ್ರೆಂಚ್‌ ಭಾಷೆಯ ಕ್ಯಾಥೋಲಿಕ್‌ ಬೈಬಲನ್ನು ಕೊಟ್ರು. ಅದನ್ನ ಅಲ್ಜೀರಿಯಾಗೆ ಹೋದಮೇಲೆ ಓದೋಕೆ ಶುರು ಮಾಡಿದೆ. ಪ್ರಕಟನೆ 21:3, 4ರಲ್ಲಿ “ದೇವರ ಡೇರೆ ಜನ್ರ ಜೊತೆ ಇದೆ. . . . ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ. ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ” ಅಂತ ಹೇಳುತ್ತೆ. * ಈ ಮಾತುಗಳನ್ನು ನಾನು ಓದಿದಾಗ ನನ್ನ ಮೈ ಜುಮ್‌ ಅಂತು. ಇದೆಲ್ಲಾ ನಿಜವಾಗ್ಲೂ ನಡೆಯುತ್ತಾ ಅಂತ ಅಂದುಕೊಂಡೆ. ಆ ಸಮಯದಲ್ಲಿ ನನಗೆ ಬೈಬಲ್‌ ಬಗ್ಗೆ ದೇವರ ಬಗ್ಗೆ ಎಳ್ಳಷ್ಟೂ ಗೊತ್ತಿರಲಿಲ್ಲ.

1959ರಲ್ಲಿ ನನ್ನ ಮಿಲಿಟರಿ ಟ್ರೈನಿಂಗ್‌ ಮುಗೀತು. ಅದಾದ್ಮೇಲೆ ಫ್ರಾಂಸ್ವಾ ಅನ್ನೋ ಯೆಹೋವನ ಸಾಕ್ಷಿಯನ್ನು ಭೇಟಿ ಮಾಡಿದೆ. ಅವರು ನನಗೆ ಬೈಬಲಿಂದ ತುಂಬ ವಿಷಯಗಳನ್ನು ಹೇಳಿಕೊಟ್ಟರು. ದೇವರಿಗೆ ಹೆಸರಿದೆ ಅದು ಯೆಹೋವ ಅಂತ ಹೇಳಿಕೊಟ್ಟರು. (ಕೀರ್ತ. 83:18) ಇದಷ್ಟೇ ಅಲ್ಲ ಯೆಹೋವ ದೇವರು ಆದಷ್ಟು ಬೇಗ ಈ ಭೂಮಿನ ಪರದೈಸ್‌ ಮಾಡ್ತಾರೆ, ಇಲ್ಲಿರೋ ಅನ್ಯಾಯಗಳನ್ನೆಲ್ಲಾ ಕಿತ್ತೆಸೆಯುತ್ತಾರೆ, ಪ್ರಕಟನೆ 21:3, 4ರಲ್ಲಿ ಕೊಟ್ಟ ಮಾತನ್ನು ಪಾಲಿಸ್ತಾರೆ ಅಂತ ಹೇಳಿಕೊಟ್ಟರು.

ಅವರು ಹೇಳಿಕೊಟ್ಟಿದ್ದೆಲ್ಲ ನಿಜ ಅನಿಸ್ತು. ನಂಗೆ ತುಂಬಾ ಇಷ್ಟ ಆಯ್ತು. ಅದರ ಜೊತೆಗೆ ಈ ಪಾದ್ರಿಗಳ ಮೇಲೆ ಕೋಪನೂ ಬಂತು. ಯಾಕಂದ್ರೆ ಅವರು ಬೈಬಲಲ್ಲಿ ಇಲ್ಲದಿರೋ ವಿಷಯಗಳನ್ನು ಜನರಿಗೆ ಹೇಳಿಕೊಡುತ್ತಿದ್ದರು. ನಾನಿನ್ನೂ ಅಪ್ಪನ ಥರಾನೇ ಇದ್ದೆ. ಅನ್ಯಾಯದ ವಿರುದ್ಧ ಹೋರಾಡಬೇಕು, ಎಲ್ಲ ಈಗಲೇ ಸರಿ ಮಾಡಿಬಿಡಬೇಕು ಅಂತ ಅನಿಸುತ್ತಿತ್ತು.

ಫ್ರಾಂಸ್ವಾ ಮತ್ತು ಜೊತೆಯಲ್ಲಿದ್ದ ಸಹೋದರರು ನಾನು ಸಮಾಧಾನವಾಗಿ ಇರೋಕೆ ಸಹಾಯ ಮಾಡಿದರು. ನಾವು ಕ್ರೈಸ್ತರು, ನಮ್ಮ ಕೆಲಸ ತೀರ್ಪು ಮಾಡೋದಲ್ಲ, ಇದನ್ನೆಲ್ಲಾ ದೇವರು ಆದಷ್ಟು ಬೇಗ ಸರಿ ಮಾಡ್ತಾನೆ ಅಂತ ಜನರಿಗೆ ನಿರೀಕ್ಷೆ ಕೊಡೋದು ಅಂತ ಅವರು ಹೇಳಿದರು. ಯೇಸು ಮಾಡಿದ್ದೂ ಇದನ್ನೇ. ತನ್ನ ಹಿಂಬಾಲಕರಿಗೆ ಮಾಡೋಕೆ ಹೇಳಿದ್ದೂ ಇದನ್ನೇ. (ಮತ್ತಾ. 24:14; ಲೂಕ 4:43) ಜನರು ತಮ್ಮ ನಂಬಿಕೆಗಳ ಬಗ್ಗೆ ಹೇಳುವಾಗ ಅವರತ್ರ ಜಾಣತನದಿಂದ ಮನಸ್ಸಿಗೆ ನೋವಾಗದ ಹಾಗೆ ಮಾತಾಡೋಕೆ ಕಲಿಬೇಕಿತ್ತು. ಬೈಬಲ್‌ ಹೇಳೋ ಹಾಗೆ “ದೇವರ ಸೇವಕನಿಗೆ ಜಗಳ ಮಾಡೋ ಅಗತ್ಯ ಇಲ್ಲ. ಅವನು ಎಲ್ರ ಜೊತೆ ಮೃದುವಾಗಿ ನಡ್ಕೊಬೇಕು.”—2 ತಿಮೊ. 2:24.

ನಾನು ಬದಲಾವಣೆಗಳನ್ನೆಲ್ಲ ಮಾಡಿಕೊಂಡು 1959ರ ಸರ್ಕಿಟ್‌ ಅಸೆಂಬ್ಲಿಯಲ್ಲಿ ದೀಕ್ಷಾಸ್ನಾನ ಪಡ್ಕೊಂಡೆ. ನಾನು ಅಲ್ಲಿ ಆ್ಯಂಜಲ್‌ ಅನ್ನೋ ಸಹೋದರಿಯನ್ನು ಭೇಟಿ ಮಾಡಿದೆ. ಅವರು ನನಗೆ ತುಂಬಾ ಇಷ್ಟ ಆದ್ರು. ಆಮೇಲೆ ಅವರು ಹೋಗ್ತಿದ್ದ ಸಭೆಗೆ ನಾನು ಹೋಗೋಕೆ ಶುರು ಮಾಡಿದೆ. ಕೊನೆಗೆ 1960ರಲ್ಲಿ ನಾವಿಬ್ಬರೂ ಮದುವೆ ಆದ್ವಿ. ಅವಳು ಯೆಹೋವನಿಂದ ಸಿಕ್ಕಿದ ವರ. ಮುತ್ತಿನಂಥ ಹೆಂಡತಿಯನ್ನು ಕೊಟ್ಟಿದ್ದಕ್ಕೆ ನಾನು ಯೆಹೋವನಿಗೆ ಥ್ಯಾಂಕ್ಸ್‌ ಹೇಳ್ತೀನಿ.—ಜ್ಞಾನೋ. 19:14.

ನನ್ನ ಮದುವೆ ದಿನ

ಸಹೋದರರಿಂದ ಕಲಿತ ಪಾಠಗಳು

ಅನುಭವ ಇರೋ ಸಹೋದರರಿಂದ ನಾನು ಇಲ್ಲಿ ತನಕ ತುಂಬಾ ಪಾಠಗಳನ್ನು ಕಲಿತಿದ್ದೀನಿ. ಅದರಲ್ಲಿ ಮುಖ್ಯವಾಗಿ ಕಲಿತಿದ್ದೇನೆಂದ್ರೆ, ನಾವು ಒಂದು ನೇಮಕವನ್ನು ಚೆನ್ನಾಗಿ ಮಾಡಬೇಕೆಂದರೆ ಒಂದು, ನಾವು ದೀನರಾಗಿರಬೇಕು. ಇನ್ನೊಂದು, ಜ್ಞಾನೋಕ್ತಿ 15:22ರಲ್ಲಿ ಹೇಳಿರುವ ಮಾತನ್ನು ಪಾಲಿಸಬೇಕು. ಆ ವಚನದಲ್ಲಿ “ತುಂಬ ಸಲಹೆಗಾರರು ಇದ್ರೆ ಸಾಧನೆ ಮಾಡಕ್ಕಾಗುತ್ತೆ” ಅಂತ ಹೇಳುತ್ತೆ.

1965ರಲ್ಲಿ ಫ್ರಾನ್ಸ್‌ನ ಸಂಚರಣಾ ಕೆಲಸದಲ್ಲಿ

ಈ ಮಾತುಗಳು ಎಷ್ಟು ನಿಜ ಅಂತ 1964ರಲ್ಲಿ ಗೊತ್ತಾಯ್ತು. ಆಗ ನಾನು ಸರ್ಕಿಟ್‌ ಮೇಲ್ವಿಚಾರಕರಾಗಿ ಸೇವೆ ಮಾಡೋಕೆ ಆರಂಭಿಸಿದೆ. ಎಲ್ಲಾ ಸಭೆಗಳಿಗೂ ಹೋಗಿ ಸಹೋದರ ಸಹೋದರಿಯರನ್ನು ಬಲಪಡಿಸುತ್ತಿದ್ದೆ. ನನಗಾಗ ಬರೀ 27 ವರ್ಷ. ನನ್ನಿಂದ ಚಿಕ್ಕಪುಟ್ಟ ತಪ್ಪುಗಳೂ ಆಗ್ತಿತ್ತು. ನಾನು ನನ್ನ ತಪ್ಪುಗಳಿಂದ ಪಾಠ ಕಲಿತೆ. ಎಲ್ಲಕ್ಕಿಂತ ಹೆಚ್ಚಾಗಿ ಅನುಭವವಿರುವ ಸಹೋದರರಿಂದ ತುಂಬ ಪಾಠಗಳನ್ನು ಕಲಿತೆ.

ನಾನು ಸರ್ಕಿಟ್‌ ಮೇಲ್ವಿಚಾರಕರಾದ ಹೊಸದ್ರಲ್ಲಿ ನಡೆದ ಒಂದು ಘಟನೆ ಬಗ್ಗೆ ಹೇಳ್ತೀನಿ. ಪ್ಯಾರಿಸ್‌ ಸಭೆಯನ್ನು ಭೇಟಿ ಮಾಡಿ ಇನ್ನೇನು ಬೇರೆ ಸಭೆಗೆ ಹೋಗಬೇಕು ಅನ್ನುವಾಗ ತುಂಬಾ ಒಳ್ಳೆಯ ಅನುಭವ ಇದ್ದ ಒಬ್ಬ ಸಹೋದರ “ನಿಮ್ಮತ್ರ ಸ್ವಲ್ಪ ಮಾತಾಡಬಹುದಾ?” ಅಂತ ಕೇಳಿದರು. ನಾನು “ಸರಿ” ಅಂದೆ.

ಅದಕ್ಕವರು “ಬ್ರದರ್‌ ಲೂಯಿ, ಒಬ್ಬ ಡಾಕ್ಟರ್‌ ಹುಷಾರಿಲ್ಲದವರ ಮನೆಗೆ ಹೋದ್ರೆ ಮೊದಲು ಯಾರನ್ನ ನೋಡ್ತಾರೆ?” ಅಂತ ಕೇಳಿದ್ರು.

“ಹುಷಾರಿಲ್ಲದೆ ಇರೋರನ್ನ” ಅಂತ ಅಂದೆ.

ಅದಕ್ಕವರು “ಕರೆಕ್ಟ್‌, ಆದ್ರೆ ನೀವು ಬರೀ ಸಭೆಯ ಹಿರಿಯರ ಜೊತೆ, ಅನುಭವ ಇರೋ ಪ್ರಚಾರಕರ ಜೊತೆ ಸಮಯ ಕಳೆಯುತ್ತಿದ್ದೀರ. ಆದ್ರೆ ನಮ್‌ ಸಭೆಯಲ್ಲಿ ಕುಗ್ಗಿ ಹೋದವರು, ಹೊಸಬರು, ಮಾತಾಡೋಕೆ ಸಂಕೋಚ ಪಡುವವರು ತುಂಬಾ ಜನ ಇದ್ದಾರೆ. ಅವ್ರ ಜೊತೆ ಸಮಯ ಕಳೆಯಬಹುದಿತ್ತಲ್ವಾ? ಆಗ ಅವರಿಗೆ ತುಂಬಾ ಖುಷಿಯಾಗಿರೋದು. ಅವರ ಜೊತೆ ಒಂದು ಹೊತ್ತು ಊಟ ಮಾಡಿದ್ರೂ ಅವರು ತುಂಬಾ ಖುಷಿ ಪಡುತ್ತಿದ್ದರು” ಅಂದ್ರು.

ಆ ಸಹೋದರ ಪ್ರೀತಿಯಿಂದ ನನಗೆ ಕೊಟ್ಟ ಬುದ್ಧಿವಾದವನ್ನು ನಾನು ಇವತ್ತಿಗೂ ಮರೆತಿಲ್ಲ. ನನ್ನಿಂದ ತಪ್ಪಾಯ್ತು ಅಂತ ಒಪ್ಪಿಕೊಳ್ಳೋಕೆ ಮೊದಲು ನನಗೆ ಕಷ್ಟ ಆಯ್ತು. ಆದರೆ ಆ ಸಹೋದರನಿಗೆ ಯೆಹೋವನ ಜನರ ಮೇಲೆ ಇದ್ದ ಪ್ರೀತಿ, ಕಾಳಜಿಯನ್ನ ನೋಡಿದಾಗ ನನ್ನ ತಪ್ಪನ್ನು ತಿದ್ದಿಕೊಂಡೆ. ಈ ತರ ಒಳ್ಳೇ ಸಹೋದರರನ್ನು ಕೊಟ್ಟಿರುವುದಕ್ಕೆ ನಾನು ಯೆಹೋವನಿಗೆ ಆಭಾರಿಯಾಗಿದ್ದೇನೆ.

1969ರಿಂದ 1973ರ ವರೆಗೆ ಪ್ಯಾರಿಸ್‌ನ ಕೊಲಂಬ್‌ನಲ್ಲಿ ನಡೆದ ಎರಡು ಅಂತರರಾಷ್ಟ್ರೀಯ ಅಧಿವೇಶನದಲ್ಲಿ ನಾನು ಊಟದ ವ್ಯವಸ್ಥೆ ನೋಡಿಕೊಳ್ಳಬೇಕಿತ್ತು. 1973ರ ಅಧಿವೇಶನದಲ್ಲಿ ಸುಮಾರು 60 ಸಾವಿರ ಜನರಿಗೆ ಐದು ದಿನದ ಊಟದ ವ್ಯವಸ್ಥೆ ಮಾಡಬೇಕಿತ್ತು. ಇದನ್ನೆಲ್ಲಾ ಹೆಂಗಪ್ಪಾ ಮಾಡೋದು ಅಂತ ಯೋಚನೆ ಮಾಡುತ್ತಿದ್ದೆ. ಆಗ ಜ್ಞಾನೋಕ್ತಿ 15:22ರಲ್ಲಿ ಹೇಳಿದ ಮಾತು ಮತ್ತೆ ನೆನಪಿಗೆ ಬಂತು. ಅದಕ್ಕೆ ನಾನು ಅನುಭವ ಇರೋ ಸಹೋದರರ ಹತ್ರ ಒಂದು ಮಾತು ಕೇಳಿದೆ. ಅವರಲ್ಲಿ ಕೆಲವರು ಮಾಂಸ ಮಾರಾಟ ಮಾಡುತ್ತಿದ್ದರು, ಕೆಲವರು ರೈತರಾಗಿದ್ದರು, ಇನ್ನು ಕೆಲವರಿಗೆ ಅಡುಗೆ ಚೆನ್ನಾಗಿ ಬರುತ್ತಿತ್ತು ಮತ್ತು ಕೆಲವರಿಗೆ ವ್ಯಾಪಾರ ವ್ಯವಹಾರ ಚೆನ್ನಾಗಿ ಗೊತ್ತಿತ್ತು. ಹೀಗೆ ನಾವೆಲ್ಲ ಸೇರಿ ಆ ಜವಾಬ್ದಾರಿನ ಚೆನ್ನಾಗಿ ಮಾಡಕ್ಕೆ ಆಯ್ತು.

1973ರಲ್ಲಿ ನನ್ನನ್ನು ನನ್ನ ಹೆಂಡತಿಯನ್ನು ಫ್ರಾನ್ಸ್‌ನ ಬೆತೆಲ್‌ ಸೇವೆ ಮಾಡೋಕೆ ಕರೆದರು. ಆಫ್ರಿಕಾದ ಕ್ಯಾಮರೂನ್‌ ದೇಶದಲ್ಲಿರೋ ನಮ್ಮ ಸಹೋದರರಿಗೆ ಪುಸ್ತಕ ಪತ್ರಿಕೆಗಳನ್ನು ತಗೊಂಡು ಹೋಗಿ ಕೊಡೋ ನೇಮಕ ನನಗೆ ಸಿಕ್ತು. ಆದ್ರೆ ಇದು ನನಗೆ ಸ್ವಲ್ಪ ಕಷ್ಟ ಅನಿಸ್ತು. ಯಾಕಂದ್ರೆ 1970ರಿಂದ 1993ರವರೆಗೂ ಅಲ್ಲಿಯ ಯೆಹೋವನ ಸಾಕ್ಷಿಗಳನ್ನು ಬ್ಯಾನ್‌ ಮಾಡಿದ್ರು. ಇದನ್ನು ಹೆಂಗಪ್ಪಾ ಮಾಡೋದು ಅಂತ ಯೋಚನೆ ಆಯ್ತು. ಅದನ್ನು ನೋಡಿ ಬ್ರಾಂಚ್‌ ಮೇಲ್ವಿಚಾರಕ ನನ್ನತ್ರ ಬಂದು “ಕ್ಯಾಮರೂನಲ್ಲಿರೋ ನಮ್ಮ ಸಹೋದರರಿಗೆ ಆಧ್ಯಾತ್ಮಿಕ ಆಹಾರ ಬೇಕಾಗಿದೆ. ನಾವವರಿಗೆ ಆಹಾರ ಕೊಡೋಣ” ಅಂತ ಹೇಳಿದ್ರು. ಆಮೇಲೆ ನಾನು ಧೈರ್ಯವಾಗಿ ನೇಮಕವನ್ನು ಮಾಡಿ ಮುಗಿಸಿದೆ.

ನೈಜೀರಿಯದಲ್ಲಿ ಕ್ಯಾಮರೂನ್‌ ಸಾಕ್ಷಿಗಳ ಜೊತೆ ವಿಶೇಷ ಕೂಟ, 1973

ಕ್ಯಾಮರೂನ್‌ ಗಡಿಯಲ್ಲಿದ್ದ ದೇಶಗಳಿಗೆ ನಾನು ಪುಸ್ತಕ, ಪತ್ರಿಕೆಗಳನ್ನು ತಗೊಂಡು ಹೋಗ್ತಿದ್ದೆ. ಅಲ್ಲಿಗೆ ಕ್ಯಾಮರೂನ್‌ ಹಿರಿಯರು ಬರ್ತಿದ್ರು. ಅವರು ತುಂಬಾ ಧೈರ್ಯಶಾಲಿಗಳು. ಬುದ್ಧಿವಂತಿಕೆಯಿಂದ ನಮ್ಮ ಪತ್ರಿಕೆಗಳನ್ನು ಕ್ಯಾಮರೂನ್‌ಗೆ ತಲುಪಿಸೋಕೆ ಬೇಕಾಗಿರುವ ಎಲ್ಲ ವ್ಯವಸ್ಥೆಯನ್ನು ಮಾಡುತ್ತಿದ್ದರು. ಸುಮಾರು 20 ವರ್ಷಗಳ ತನಕ ಹೀಗೆ ನಡಿತು. ಅಲ್ಲಿದ್ದ ಸಹೋದರ ಸಹೋದರಿಯರಿಗೆ ಒಂದು ಕಾವಲಿನಬುರುಜು ಆಗಲಿ ನಮ್ಮ ರಾಜ್ಯ ಸೇವೆ ಆಗಲಿ ಸಿಗದೇ ಹೋಗ್ಲಿಲ್ಲ. ಇದೆಲ್ಲ ನಡೆಯುವಾಗ ಯೆಹೋವ ದೇವರೇ ನಮ್ಮ ಜೊತೆ ಇದ್ದು ಸಹಾಯ ಮಾಡಿದರು.

ಕ್ಯಾಮರೂನ್‌ನಿಂದ ಬಂದ ಸರ್ಕಿಟ್‌ ಮೇಲ್ವಿಚಾರಕರು ಮತ್ತು ಅವರ ಪತ್ನಿಯರ ಜೊತೆ ನಾನು ಮತ್ತು ಆ್ಯಂಜಲ್‌ ನೈಜೀರಿಯದಲ್ಲಿ, 1977

ಹೆಂಡತಿಯಿಂದ ಕಲಿತ ಪಾಠಗಳು

ನಂಗೆ ಆ್ಯಂಜಲ್‌ ಪರಿಚಯವಾದ ಹೊಸದ್ರಲ್ಲಿ ಅವಳಿಗೆ ಯೆಹೋವನ ಜೊತೆ ಆಪ್ತ ಸ್ನೇಹ ಇರೋದನ್ನು ಗಮನಿಸಿದೆ. ಅವಳಲ್ಲಿದ್ದ ಇನ್ನೂ ಕೆಲವು ಒಳ್ಳೆ ಗುಣಗಳು ಮದುವೆ ಆದ್ಮೇಲೆ ಗೊತ್ತಾಯ್ತು. ಮದುವೆ ಆದ ದಿನ ಸಾಯಂಕಾಲ ‘ನಾವಿಬ್ರೂ ಯೆಹೋವನಿಗೆ ಪೂರ್ಣ ಸಮಯದ ಸೇವೆ ಮಾಡುವುದರ ಬಗ್ಗೆ ಪ್ರಾರ್ಥಿಸಿ’ ಅಂತ ಹೇಳಿದ್ಲು. ಆ ಪ್ರಾರ್ಥನೆಗೆ ಯೆಹೋವ ದೇವರು ಉತ್ತರ ಕೊಟ್ಟರು.

ನಾನು ಯೆಹೋವ ದೇವರ ಮೇಲೆ ಪೂರ್ತಿ ನಂಬಿಕೆ ಇಡೋಕೆ ಅವಳು ನನಗೆ ಸಹಾಯ ಮಾಡಿದಳು. ಉದಾಹರಣೆಗೆ 1973ರಲ್ಲಿ ನಮ್ಮನ್ನ ಬೆತೆಲಿಗೆ ಕರೆದ್ರು. ನಂಗೆ ಹೋಗೋಕೆ ಅಷ್ಟು ಇಷ್ಟ ಆಗ್ಲಿಲ್ಲ. ಯಾಕಂದ್ರೆ ನನಗೆ ಸರ್ಕಿಟ್‌ ಕೆಲಸ ತುಂಬಾ ಇಷ್ಟ ಆಗಿತ್ತು. ಆದರೆ ಆ್ಯಂಜಲ್‌ ನನಗೆ ‘ನಾವು ಯೆಹೋವ ದೇವರಿಗೆ ಸಮರ್ಪಿಸಿಕೊಂಡಿದ್ದೀವಲ್ಲ. ಅಂದಮೇಲೆ ನಾವು ಯೆಹೋವನ ಸಂಘಟನೆ ಏನು ಹೇಳಿದ್ರೂ ಅದನ್ನ ಮಾಡಬೇಕಲ್ವಾ?’ ಅಂತ ಕೇಳಿದ್ಲು. (ಇಬ್ರಿ. 13:17) ನಂಗೂ ಅದು ಸರಿ ಅನಿಸಿತು. ಅದಕ್ಕೆ ನಾವು ಬೆತೆಲಿಗೆ ಹೋದ್ವಿ. ಇವತ್ತಿನವರೆಗೂ ನನ್ನ ಹೆಂಡತಿ ತೋರಿಸಿದ ಜಾಣತನ, ಅವಳಲ್ಲಿರೋ ಒಳ್ಳೆ ಯೋಚನೆ, ಯೆಹೋವನ ಜೊತೆ ಇರೋ ಅವಳ ಸ್ನೇಹ ಇವೆಲ್ಲಾ ನಮ್ಮ ಸಂಬಂಧ ಗಟ್ಟಿ ಮಾಡಿದೆ. ಅಷ್ಟೇ ಅಲ್ಲ ಒಳ್ಳೆ ನಿರ್ಣಯ ಮಾಡೋಕೆ ನಮ್ಗೆ ಸಹಾಯ ಮಾಡಿದೆ.

ಫ್ರಾನ್ಸ್‌ನ ಬೆತೆಲಿನ ಗಾರ್ಡನ್‌ನಲ್ಲಿ ಆ್ಯಂಜಲ್‌ ಜೊತೆ

ಈಗ ನಮ್ಗೆ ಇಷ್ಟು ವಯಸ್ಸಾಗಿದ್ದರೂ ಆ್ಯಂಜಲ್‌ ನನಗೆ ತುಂಬಾ ಸಹಕಾರ ಕೊಡುತ್ತಿದ್ದಾಳೆ. ಉದಾಹರಣೆಗೆ ನಾವು ಬೈಬಲ್‌ ಶಾಲೆಗೆ ಹೋಗಬೇಕಂತ ಇಂಗ್ಲಿಷ್‌ ಕಲಿಯೋಕೆ ತುಂಬಾ ಪ್ರಯತ್ನ ಮಾಡ್ತಿದ್ದೀವಿ. ಅದಕ್ಕೋಸ್ಕರ ನಮ್ಗೆ 75 ವರ್ಷವಾಗಿದ್ದರೂ ಇಂಗ್ಲಿಷ್‌ ಸಭೆಗೆ ಹೋಗೋಕೆ ಶುರು ಮಾಡಿದ್ದೀವಿ. ನಾನು ಫ್ರಾನ್ಸ್‌ನ ಬ್ರಾಂಚ್‌ ಕಮಿಟಿ ಸದಸ್ಯನಾಗಿದ್ದರಿಂದ ಈಕಡೆ ಕೆಲಸಗಳು ಜಾಸ್ತಿ ಇರುತ್ತಿತ್ತು ಆಕಡೆ ಭಾಷೆನೂ ಕಲಿಬೇಕಿತ್ತು. ಇದು ನನಗೆ ಸ್ವಲ್ಪ ಕಷ್ಟ ಆಗ್ತಿತ್ತು ಆದರೆ ನಾನು ಮತ್ತು ಆ್ಯಂಜಲ್‌ ಇಬ್ಬರೂ ಒಬ್ಬರಿಗೊಬ್ಬರು ಸಹಾಯ ಮಾಡ್ತಿದ್ದೀವಿ. ನಮಗೆ 80 ದಾಟಿದೆ. ನಾವೀಗಲೂ ಇಂಗ್ಲಿಷ್‌ ಮತ್ತು ಫ್ರೆಂಚ್‌ ಭಾಷೆಯಲ್ಲಿ ಮೀಟಿಂಗಿಗೆ ತಯಾರಿ ಮಾಡ್ತೀವಿ. ನಾವು ಆಗಾಗ ಇಂಗ್ಲಿಷ್‌ ಸಭೆಗೂ ಹೋಗ್ತಾ ಇರ್ತೀವಿ. ಆ ಸಭೆ ಜೊತೆಗೆ ಸೇವೆನೂ ಮಾಡ್ತೀವಿ. ಇಂಗ್ಲಿಷ್‌ ಕಲಿಯೋಕೆ ನಾವು ಹಾಕಿದ ಪ್ರಯತ್ನವನ್ನು ಯೆಹೋವ ಆಶೀರ್ವದಿಸಿದ್ದಾರೆ.

2017ರಲ್ಲಿ ನಮಗೆ ಇನ್ನೂ ಒಂದು ಆಶೀರ್ವಾದ ಸಿಕ್ತು. ಅದೇನಂದರೆ ನ್ಯೂಯಾರ್ಕಿನ ಪ್ಯಾಟರ್‌ಸನ್‌ನಲ್ಲಿ ನಡೆದ ಬ್ರಾಂಚ್‌ ಕಮಿಟಿ ಸದಸ್ಯರಿಗಾಗಿ ಮತ್ತು ಅವರ ಪತ್ನಿಯರಿಗಾಗಿ ನಡೆಸುವ ಕ್ಲಾಸಿಗೆ ಹಾಜರಾಗೋ ಅವಕಾಶ ಸಿಕ್ತು.

ಯೆಹೋವ ಮಹಾ ಬೋಧಕ ಅನ್ನೋದ್ರಲ್ಲಿ ಸಂಶಯನೇ ಇಲ್ಲ. (ಯೆಶಾ. 30:20) ಹಾಗಾಗಿ ನಾವು ಯುವಕರಾಗಿರಲಿ ಅಥವಾ ವಯಸ್ಸಾದವರಾಗಿರಲಿ ನಮಗೆಲ್ಲರಿಗೂ ಒಳ್ಳೇ ಶಿಕ್ಷಣ ಸಿಕ್ಕೇ ಸಿಗುತ್ತೆ. (ಧರ್ಮೋ. 4:5-8) ನಾನೊಂದು ವಿಷಯ ಗಮನಿಸಿದ್ದೇನೆಂದರೆ ಯುವ ಸಹೋದರ-ಸಹೋದರಿಯರು ಅನುಭವ ಇರೋ ಸಹೋದರ-ಸಹೋದರಿಯರ ಮಾತನ್ನು ಕೇಳಬೇಕು. ಜೊತೆಗೆ ಯೆಹೋವ ದೇವರ ಮಾತನ್ನು ಕೇಳಬೇಕು. ಹಾಗೆ ಮಾಡಿದ್ರೆ ಜೀವನದಲ್ಲಿ ಒಳ್ಳೆ ನಿರ್ಣಯಗಳನ್ನು ಮಾಡೋಕಾಗುತ್ತೆ. ಕೊನೇ ತನಕ ಯೆಹೋವನಿಗೆ ನಿಯತ್ತಿಂದ ಕೆಲಸ ಮಾಡೋಕಾಗುತ್ತೆ. “ವಿವೇಕಿಗೆ ಕಲಿಸು, ಅವನು ಇನ್ನಷ್ಟು ವಿವೇಕಿಯಾಗ್ತಾನೆ” ಅಂತ ಜ್ಞಾನೋಕ್ತಿ 9:9 ಹೇಳೋದು ಎಷ್ಟು ನಿಜ ಅಲ್ವಾ?

ನಾನೀಗಲೂ ಒಂದೊಂದು ಸಲ 60 ವರ್ಷಗಳ ಹಿಂದೆ ಅಲ್ಜೀರಿಯಾದ ಬೆಟ್ಟದ ಹತ್ರ ನಿಂತಿದ್ದಾಗ ನಡೆದ ಘಟನೆಯನ್ನು ನೆನೆಸಿಕೊಳ್ತಾ ಇರ್ತೀನಿ. ಮುಂದೆ ನನಗೆ ಇಂಥ ಒಳ್ಳೇ ಜೀವನ ಸಿಗುತ್ತೆ ಅಂತ ಕನಸು ಮನಸ್ಸಲ್ಲೂ ನೆನಸಿರಲಿಲ್ಲ. ಯೆಹೋವ ದೇವರು ನನಗೆ ಮತ್ತು ಆ್ಯಂಜಲ್‌ಗೆ ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸಿ ಬಿಟ್ಟಿದ್ದಾನೆ. ಯೆಹೋವ ದೇವರಿಂದ, ನಮ್ಮ ಸಹೋದರ-ಸಹೋದರಿಯರಿಂದ ಇಲ್ಲಿ ತನಕ ತುಂಬ ವಿಷಯಗಳನ್ನ ಕಲಿತಿದ್ದೀನಿ. ಇನ್ನು ಮುಂದೆನೂ ಕಲಿಯೋ ದೃಢ ತೀರ್ಮಾನ ಮಾಡಿದ್ದೀನಿ.

^ ಪ್ಯಾರ. 11 ಪವಿತ್ರ ಬೈಬಲ್‌ ಹೊಸಲೋಕ ಭಾಷಾಂತರ.