ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಗೊತ್ತಿತ್ತಾ?

ನಿಮಗೆ ಗೊತ್ತಿತ್ತಾ?

ಬೈಬಲ್‌ ಕಾಲದಲ್ಲಿ ಜನ ಪಪೈರಸ್‌ನಿಂದ ದೋಣಿ ತಯಾರಿಸ್ತಿದ್ದರಾ?

ಪಪೈರಸ್‌ ಗಿಡ

ಪಪೈರಸ್‌ ಅನ್ನೋ ಗಿಡದಿಂದ ಹಿಂದೆ ಈಜಿಪ್ಟಿನಲ್ಲಿ ಪೇಪರ್‌ ತಯಾರಿಸುತ್ತಿದ್ದರು. * ಇದು ಹೆಚ್ಚಿನ ಜನರಿಗೆ ಗೊತ್ತಿರುವ ವಿಷಯ. ಗ್ರೀಕ್‌ನವರು ಮತ್ತು ರೋಮ್‌ನವರು ಕೂಡ ಪಪೈರಸ್‌ನಿಂದ ತಯಾರಿಸಿದ ಪೇಪರ್‌ನಲ್ಲೇ ಬರೀತಿದ್ದರು. ಆದರೆ ದೋಣಿ ತಯಾರಿಸೋಕೂ ಪಪೈರಸನ್ನು ಬಳಸ್ತಿದ್ದರು ಅನ್ನೋದು ಹೆಚ್ಚಿನವರಿಗೆ ಗೊತ್ತಿಲ್ಲ.

2. ಈಜಿಪ್ಟಿನ ಸಮಾಧಿಯೊಳಗೆ ಸಿಕ್ಕಿದ ಪಪೈರಸ್‌ ದೋಣಿಯ ಎರಡು ಮಾದರಿಗಳು

ಸುಮಾರು 2,500 ವರ್ಷಗಳ ಹಿಂದೆ ಪ್ರವಾದಿ ಯೆಶಾಯ ಹೀಗೆ ಬರೆದನು: “ಇಥಿಯೋಪ್ಯದ ನದಿಗಳ ಹತ್ತಿರ ಇರೋ” ಜನರು ‘ತಮ್ಮ ಪ್ರತಿನಿಧಿಗಳನ್ನು ಸಮುದ್ರದ ಮಾರ್ಗವಾಗಿ ಪಪೈರಸ್‌ ದೋಣಿಗಳಲ್ಲಿ ನೀರಿನ ಮೂಲಕ ಆ ಕಡೆಗೆ ಕಳಿಸಿದರು.’ ನಂತರ ಪ್ರವಾದಿ ಯೆರೆಮೀಯ ಬಾಬೆಲ್‌ ನಗರದ ಮೇಲೆ ಮೇದ್ಯ-ಪರ್ಶಿಯದ ಸೈನ್ಯ ದಾಳಿ ಮಾಡುತ್ತೆ ಮತ್ತು ಬಾಬೆಲಿನವರು ತಪ್ಪಿಸಿಕೊಳ್ಳದ ಹಾಗೆ ಅವರ “ಪಪೈರಸ್‌ ದೋಣಿಗಳನ್ನ” ಬೆಂಕಿಯಿಂದ ಸುಟ್ಟು ಬಿಡುತ್ತೆ ಅಂತ ಭವಿಷ್ಯವಾಣಿ ಹೇಳಿದನು.—ಯೆಶಾ. 18:1, 2; ಯೆರೆ. 51:32.

ದೇವರು ಹೇಳಿದ ವಿಷಯಗಳನ್ನೇ ಬೈಬಲಲ್ಲಿ ಬರೆಯಲಾಗಿದೆ. ಹಾಗಾಗಿ ಹಿಂದಿನ ಕಾಲದಲ್ಲಿ ಪಪೈರಸ್‌ ಗಿಡದಿಂದ ದೋಣಿಯನ್ನು ತಯಾರಿಸುತ್ತಿದ್ದರು ಅಂತ ಅಗೆತಶಾಸ್ತ್ರಜ್ಞರು ಹೇಳೋ ಮಾತು ನಮಗೆ ಆಶ್ಚರ್ಯ ತರೋದಿಲ್ಲ. (2 ತಿಮೊ. 3:16) ಈಜಿಪ್ಟ್‌ ದೇಶದಲ್ಲಿ ಪಪೈರಸ್‌ನಿಂದ ದೋಣಿಯನ್ನು ತಯಾರಿಸುತ್ತಿದ್ದರು ಅನ್ನೋದಕ್ಕೆ ತುಂಬ ಮಾಹಿತಿಗಳು ಮತ್ತು ಪುರಾವೆಗಳು ಅಗೆತಶಾಸ್ತ್ರಜ್ಞರಿಗೆ ಸಿಕ್ಕಿವೆ. ಅವರಿಗೆ ಯಾವ ಪುರಾವೆ ಸಿಕ್ಕಿದೆ?

ಪಪೈರಸ್‌ ದೋಣಿಯನ್ನು ಹೇಗೆ ತಯಾರಿಸುತ್ತಿದ್ದರು?

ಹಿಂದೆ ಜನ ಪಪೈರಸ್‌ ಕಾಂಡಗಳನ್ನ ಸಂಗ್ರಹಿಸಿ ಅದರಿಂದ ಹೇಗೆ ದೋಣಿಯನ್ನ ತಯಾರಿಸುತ್ತಿದ್ದರು ಅನ್ನೋ ವರ್ಣಚಿತ್ರಗಳು ಮತ್ತು ಗೋಡೆ ಕೆತ್ತನೆಗಳು ಈಜಿಪ್ಟ್‌ನ ಸಮಾಧಿಗಳಲ್ಲಿ ಕಂಡುಬಂದಿದೆ. ಆಗಿನ ಗಂಡಸರು ಪಪೈರಸ್‌ ಕಾಂಡಗಳನ್ನು ಕತ್ತರಿಸಿ ಕಂತೆ-ಕಂತೆಯಾಗಿ ಕಟ್ಟಿ ನಂತರ ಎಲ್ಲಾ ಕಂತೆಗಳನ್ನು ಒಟ್ಟಿಗೆ ಕಟ್ಟಿ ಇಡುತ್ತಿದ್ದರು. ಪಪೈರಸ್‌ನ ಕಾಂಡಗಳು ತ್ರಿಕೋನಾಕಾರದಲ್ಲಿ ಇದ್ದವು. ಹಾಗಾಗಿ ಅವುಗಳನ್ನು ಒತ್ತೊತ್ತಾಗಿ ಬಿಗಿಯಾಗಿ ಕಟ್ಟಿದಾಗ ಅದು ಇನ್ನೂ ಗಟ್ಟಿಮುಟ್ಟಾಗಿ ಇರ್ತಿತ್ತು. ಎ ಕಂಪಾನಿಯನ್‌ ಟು ಏನ್ಶಿಯಂಟ್‌ ಈಜಿಪ್ಟ್‌ ಪುಸ್ತಕದ ಪ್ರಕಾರ ಪಪೈರಸ್‌ನಿಂದ ತಯಾರಿಸಿದ ದೋಣಿಗಳ ಉದ್ದ 55 ಅಡಿ ಅಂದ್ರೆ 17 ಮೀಟರ್‌ಗಿಂತ ಹೆಚ್ಚು ಉದ್ದ ಇರುತ್ತಿತ್ತಂತೆ. ಅಂದ್ರೆ ಒಂದೊಂದು ಕಡೆ ಸುಮಾರು 10ರಿಂದ 12 ಜನ ಕೂತು ದೋಣಿ ಚಲಾಯಿಸಬಹುದಿತ್ತು. ಅಷ್ಟು ಉದ್ದ ಇತ್ತು!

3. ಈಜಿಪ್ಟ್‌ ಕೆತ್ತನೆ, ಪಪೈರಸ್‌ ದೋಣಿಯನ್ನು ತಯಾರಿಸುತ್ತಿರುವ ಚಿತ್ರ

ದೋಣಿಗಳನ್ನು ತಯಾರಿಸೋಕೆ ಪಪೈರಸನ್ನೇ ಯಾಕೆ ಬಳಸುತ್ತಿದ್ದರು?

ಯಾಕಂದ್ರೆ ನೈಲ್‌ ಕಣಿವೆಯಲ್ಲಿ ಪಪೈರಸ್‌ ಕಾಂಡಗಳು ತುಂಬ ಸಿಗುತ್ತಿತ್ತು. ಅಷ್ಟೇ ಅಲ್ಲ ಪಪೈರಸಿಂದ ದೋಣಿಗಳನ್ನು ತಯಾರಿಸುವುದು ತುಂಬಾ ಸುಲಭ ಆಗಿತ್ತು. ವರ್ಷಗಳು ಕಳೆದಂತೆ ದೊಡ್ಡದೊಡ್ಡ ಹಡಗುಗಳನ್ನು ಮರದಿಂದ ತಯಾರಿಸುತ್ತಿದ್ದರೂ ಮೀನುಗಾರರು ಮತ್ತು ಬೇಟೆಗಾರರು ಪಪೈರಸಿಂದಾನೇ ತೆಪ್ಪಗಳನ್ನು ಮತ್ತು ಚಿಕ್ಕ ದೋಣಿಗಳನ್ನು ತಯಾರಿಸುತ್ತಿದ್ದರು ಅನಿಸುತ್ತೆ.

ಹಿಂದೆ ತುಂಬಾ ವರ್ಷಗಳ ತನಕ ಜನ ಪಪೈರಸಿಂದ ತಯಾರಿಸಿದ ದೋಣಿಗಳನ್ನು ಬಳಸುತ್ತಿದ್ದರು. ಕ್ರಿಸ್ತ ಶಕ ಒಂದು ಮತ್ತು ಎರಡನೇ ಶತಮಾನದ ಮಧ್ಯದಲ್ಲಿ ಜೀವಿಸಿದ ಗ್ರೀಕ್‌ ಬರಹಗಾರನಾದ ಪ್ಲುಟಾರ್ಕ್‌ ಆಗಿನ ಸಮಯದಲ್ಲಿ ಕೆಲವು ಜನ ಪಪೈರಸಿಂದ ಮಾಡಿದ ದೋಣಿಗಳನ್ನು ಉಪಯೋಗಿಸುತ್ತಿದ್ದರು ಅಂತ ಹೇಳಿದ್ದಾನೆ.

^ ಪ್ಯಾರ. 3 ಸಾಮಾನ್ಯವಾಗಿ ಪಪೈರಸ್‌ ಗಿಡ ಜೌಗು ಪ್ರದೇಶಗಳಲ್ಲಿ ಮತ್ತು ನಿಧಾನವಾಗಿ ನೀರು ಹರಿಯುವ ನದಿಯ ದಡದಲ್ಲಿ ಬೆಳೆಯುತ್ತೆ. ಈ ಗಿಡ ಹೆಚ್ಚುಕಡಿಮೆ 16 ಅಡಿ ಅಂದ್ರೆ 5 ಮೀಟರ್‌ ಉದ್ದ ಬೆಳೆಯುತ್ತೆ ಮತ್ತು ಬುಡದ ಹತ್ರ ಇದರ ಕಾಂಡ 6 ಇಂಚು ಅಂದ್ರೆ 15 ಸೆಂಟಿ ಮೀಟರ್‌ ದಪ್ಪ ಇರುತ್ತೆ.