ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 22

ದೀಕ್ಷಾಸ್ನಾನ ತಗೊಳ್ಳೋಕೆ ವಿದ್ಯಾರ್ಥಿಗೆ ಸಹಾಯ ಮಾಡಿ

ದೀಕ್ಷಾಸ್ನಾನ ತಗೊಳ್ಳೋಕೆ ವಿದ್ಯಾರ್ಥಿಗೆ ಸಹಾಯ ಮಾಡಿ

“ದೀಕ್ಷಾಸ್ನಾನ ತಗೊಳ್ಳಿ.”—ಅ. ಕಾ. 2:38.

ಗೀತೆ 101 ರಾಜ್ಯ ಸತ್ಯವನ್ನು ಪ್ರಸಿದ್ಧಪಡಿಸುವುದು

ಕಿರುನೋಟ *

1. ಬೇರೆ-ಬೇರೆ ಕಡೆಯಿಂದ ಯೆರೂಸಲೇಮಿಗೆ ಬಂದಿದ್ದವರಿಗೆ ಯೆಹೂದ್ಯರು ಏನು ಮಾಡೋಕೆ ಹೇಳಿದ್ರು?

ಆ ದಿನ ಯೆರೂಸಲೇಮಲ್ಲಿ ಒಂದು ದೊಡ್ಡ ಅದ್ಭುತನೇ ನಡಿತು. ಬೇರೆ ಬೇರೆ ದೇಶದಿಂದ, ಬೇರೆ ಬೇರೆ ಭಾಷೆ ಮಾತಾಡೋ ಜನರು ಅವತ್ತು ಯೆರೂಸಲೇಮಿಗೆ ಬಂದಿದ್ರು. ಅವರ ಹತ್ತಿರ ಅವರವರ ಭಾಷೆಯಲ್ಲೇ ಕೆಲವು ಯೆಹೂದ್ಯರು ಮಾತಾಡೋಕೆ ಶುರುಮಾಡಿದ್ರು. ಇದನ್ನ ನೋಡಿದಾಗ ಜನರಿಗೆ ತುಂಬ ಆಶ್ಚರ್ಯ ಆಯ್ತು. ಅವರಿಗೆ ಇನ್ನೂ ಆಶ್ಚರ್ಯ ಆಗಿದ್ದ ವಿಷಯ ಏನಂದ್ರೆ ಯೆಹೂದ್ಯರು ಹೇಳಿದ ಆ ಸಂದೇಶ. ನೀವು ಯೇಸು ಕ್ರಿಸ್ತನಲ್ಲಿ ನಂಬಿಕೆ ಇಟ್ರೆ ರಕ್ಷಣೆ ಪಡೀತೀರ ಅಂತ ಹೇಳಿದ್ರು. ಅದಕ್ಕೆ ಅವರು “ನಾವೇನು ಮಾಡಬೇಕು?” ಅಂತ ಕೇಳಿದಾಗ, ಪೇತ್ರ “ದೀಕ್ಷಾಸ್ನಾನ ತಗೊಳ್ಳಿ” ಅಂತ ಹೇಳಿದ.—ಅ. ಕಾ. 2:37, 38.

ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕ ಹಿಡುಕೊಂಡು ನಮ್ಮ ಸಹೋದರ ಮತ್ತು ಹೆಂಡತಿ ಒಬ್ಬ ಯುವಕನಿಗೆ ಸ್ಟಡಿ ಮಾಡ್ತಿದ್ದಾರೆ (ಪ್ಯಾರ 2 ನೋಡಿ)

2. ಈ ಲೇಖನದಲ್ಲಿ ನಾವೇನು ಕಲಿತೀವಿ? (ಮುಖಪುಟ ಚಿತ್ರ ನೋಡಿ)

2 ಇದೆಲ್ಲದಕ್ಕಿಂತ ದೊಡ್ಡ ಆಶ್ಚರ್ಯ ಏನು ಗೊತ್ತಾ? ಅವತ್ತು ಅಲ್ಲಿಗೆ ಬಂದಿದ್ದವರಲ್ಲಿ 3,000 ಜನ ದೀಕ್ಷಾಸ್ನಾನ ತಗೊಂಡು ಯೇಸುವಿನ ಶಿಷ್ಯರಾದ್ರು. ಶಿಷ್ಯರಾಗಿ ಮಾಡಿ ಅಂತ ಯೇಸು ತನ್ನ ಹಿಂಬಾಲಕರಿಗೆ ಕೊಟ್ಟ ಕೆಲಸದ ಮೊದಲನೇ ಹೆಜ್ಜೆ ಇದು. ಆ ಕೆಲಸ ಇವತ್ತಿನ ತನಕ ನಡಿತಾನೇ ಇದೆ. ಒಂದನೇ ಶತಮಾನದಲ್ಲಿ ಆದ ಹಾಗೆ ಈಗ ಸಿಹಿಸುದ್ದಿ ತಿಳುಕೊಂಡ ತಕ್ಷಣ ಕೆಲವೇ ಗಂಟೆಗಳಲ್ಲಿ ದೀಕ್ಷಾಸ್ನಾನ ತಗೊಳ್ಳೋಕೆ ಆಗಲ್ಲ. ಅದಕ್ಕೆ ತಿಂಗಳುಗಳು, ವರ್ಷಗಳು ಬೇಕಾಗುತ್ತೆ. ಅದು ನಿಮಗೂ ಗೊತ್ತು. ನಿಮ್ಮ ಬೈಬಲ್‌ ವಿದ್ಯಾರ್ಥಿ ದೀಕ್ಷಾಸ್ನಾನ ತಗೊಳ್ಳೋಕೆ ನೀವು ಹೇಗೆ ಸಹಾಯ ಮಾಡಬಹುದು ಅಂತ ಈ ಲೇಖನದಲ್ಲಿ ಕಲಿಯೋಣ.

ಕಲಿತಿದ್ದನ್ನ ಪಾಲಿಸೋಕೆ ಸಹಾಯ ಮಾಡಿ

3. ಮತ್ತಾಯ 28:19, 20 ಹೇಳೋ ಪ್ರಕಾರ ಬೈಬಲ್‌ ವಿದ್ಯಾರ್ಥಿ ದೀಕ್ಷಾಸ್ನಾನ ತಗೊಳ್ಳೋಕೆ ಏನು ಮಾಡಬೇಕು?

3 ಒಬ್ಬ ಬೈಬಲ್‌ ವಿದ್ಯಾರ್ಥಿಗೆ ದೀಕ್ಷಾಸ್ನಾನ ತಗೊಬೇಕು ಅಂದ್ರೆ ಅವನು ಕಲಿತಿದ್ದನ್ನ ಜೀವನದಲ್ಲಿ ಪಾಲಿಸಬೇಕು. (ಮತ್ತಾಯ 28:19, 20 ಓದಿ.) ಆಗ ಮಣ್ಣನ್ನ ಆಳವಾಗಿ ಅಗೆದು ಬಂಡೆ ಮೇಲೆ ಅಡಿಪಾಯ ಹಾಕಿ ಮನೆ ಕಟ್ಟಿದ “ಬುದ್ಧಿವಂತನ ತರ” ಆ ವಿದ್ಯಾರ್ಥಿ ಇರ್ತಾನೆ. (ಮತ್ತಾ. 7:24, 25; ಲೂಕ 6:47, 48) ಬೈಬಲ್‌ ವಿದ್ಯಾರ್ಥಿ ಕಲಿತಿದ್ದನ್ನ ಪಾಲಿಸೋಕೆ ನಾವು ಹೇಗೆ ಸಹಾಯ ಮಾಡಬಹುದು? ಅದಕ್ಕೆ ಮೂರು ಸಲಹೆಗಳನ್ನ ನಾವೀಗ ನೋಡೋಣ.

4. ಬೈಬಲ್‌ ವಿದ್ಯಾರ್ಥಿಗೆ ದೀಕ್ಷಾಸ್ನಾನ ಅನ್ನೋ ದೊಡ್ಡ ಗುರಿ ಮುಟ್ಟೋಕೆ ಹೇಗೆ ಸಹಾಯ ಮಾಡಬಹುದು? (“ ಗುರಿ ಮುಟ್ಟೋಕೆ ಸಹಾಯ ಮಾಡಿ” ಅನ್ನೋ ಚೌಕ ನೋಡಿ.)

4 ಗುರಿಗಳನ್ನ ಇಡೋಕೆ ವಿದ್ಯಾರ್ಥಿಗೆ ಕಲಿಸಿ. ನೀವು ಕಾರಲ್ಲಿ ತುಂಬ ದೂರದ ಒಂದು ಊರಿಗೆ ಹೋಗ್ತಾ ಇದ್ದೀರ ಅಂತ ಅಂದ್ಕೊಳ್ಳಿ. ಹೀಗೆ ಹೋಗ್ತಿರುವಾಗ ಮಧ್ಯ ಮಧ್ಯದಲ್ಲಿ ಸುಂದರವಾದ ಜಾಗಗಳನ್ನ ನೋಡಿದ್ರೆ ಅಲ್ಲಿ ನಿಲ್ಲಿಸುತ್ತೀರ ತಾನೇ. ಆಗ ನೀವು ಹೋಗಬೇಕಾಗಿರೋ ಊರು ತುಂಬ ದೂರ ಇದೆ ಅಂತ ಅನಿಸಲ್ಲ, ಸುಸ್ತೂ ಆಗಲ್ಲ. ಅದೇ ತರ ಬೈಬಲ್‌ ವಿದ್ಯಾರ್ಥಿಗೆ ಚಿಕ್ಕ-ಚಿಕ್ಕ ಗುರಿಗಳನ್ನ ಇಟ್ಟು ಅದನ್ನ ಮುಟ್ಟೋಕೆ ಸಹಾಯ ಮಾಡಬೇಕು. ಆಗ ದೀಕ್ಷಾಸ್ನಾನ ತಗೊಳ್ಳೋ ದೊಡ್ಡ ಗುರಿ ಮುಟ್ಟೋಕೆ ಅವರಿಗೆ ಕಷ್ಟ ಆಗಲ್ಲ. ಇದನ್ನ ಮಾಡೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನೋ ಪುಸ್ತಕದಲ್ಲಿರೋ “ಇದನ್ನ ಮಾಡಿ ನೋಡಿ” ಅನ್ನೋ ಚೌಕವನ್ನ ಬಳಸಿ. ಆ ಚೌಕದಲ್ಲಿ ಒಂದೊಂದು ಗುರಿ ಬಗ್ಗೆ ಇದೆ. ಪ್ರತಿ ಪಾಠ ಆದಮೇಲೆ ಆ ಗುರಿ, ಬೈಬಲ್‌ ವಿದ್ಯಾರ್ಥಿಗೆ ಆ ಪಾಠದಲ್ಲಿ ಕಲಿತಿದ್ದನ್ನ ಪಾಲಿಸೋಕೆ ಹೇಗೆ ಸಹಾಯ ಮಾಡುತ್ತೆ ಅಂತ ಚರ್ಚೆ ಮಾಡಿ. ನಿಮ್ಮ ಮನಸ್ಸಲ್ಲಿ ಬೇರೆ ಯಾವುದಾದ್ರೂ ಗುರಿ ಇದ್ರೆ “ಅಥವಾ” ಅನ್ನೋ ಖಾಲಿ ಜಾಗದಲ್ಲಿ ಅದನ್ನ ಬರೆಯಿರಿ. ನೀವು ಬೈಬಲ್‌ ಸ್ಟಡಿ ಮಾಡುವಾಗ ಈ ಚೌಕ ಬಳಸಿ ಚಿಕ್ಕ-ಚಿಕ್ಕ ಗುರಿಗಳ ಬಗ್ಗೆ, ದೊಡ್ಡ-ದೊಡ್ಡ ಗುರಿಗಳ ಬಗ್ಗೆ ಅವರ ಹತ್ರ ಮಾತಾಡಬಹುದು.

5. ಮಾರ್ಕ 10:17-22ರಲ್ಲಿ ಆ ಶ್ರೀಮಂತ ವ್ಯಕ್ತಿಗೆ ಯೇಸು ಏನು ಮಾಡೋಕೆ ಹೇಳಿದ ಮತ್ತು ಯಾಕೆ?

5 ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳೋಕೆ ಸಹಾಯ ಮಾಡಿ. (ಮಾರ್ಕ 10:17-22 ಓದಿ.) ಯೇಸು ಹತ್ರ ಬಂದಿದ್ದ ಶ್ರೀಮಂತ ವ್ಯಕ್ತಿಗೆ ಅವನ ಹತ್ರ ಇರೋದನ್ನೆಲ್ಲ ಮಾರಿ ತನ್ನ ಶಿಷ್ಯನಾಗೋಕೆ ಕಷ್ಟ ಆಗುತ್ತೆ ಅಂತ ಯೇಸುವಿಗೆ ಚೆನ್ನಾಗಿ ಗೊತ್ತಿತ್ತು. (ಮಾರ್ಕ 10:23) ಆದ್ರೂ ಆ ವ್ಯಕ್ತಿಗೆ ಇಷ್ಟು ದೊಡ್ಡ ಬದಲಾವಣೆ ಮಾಡ್ಕೊಳ್ಳೋಕೆ ಯೇಸು ಯಾಕೆ ಹೇಳಿದನು? ಯಾಕಂದ್ರೆ ಅವನ ಮೇಲೆ ಯೇಸುಗೆ ಪ್ರೀತಿ ಇತ್ತು. ಇದೇ ತರ ನಮ್ಮ ಬೈಬಲ್‌ ವಿದ್ಯಾರ್ಥಿಗಳು ಜೀವನದಲ್ಲಿ ಕೆಲವು ಬದಲಾವಣೆ ಮಾಡ್ಕೊಬೇಕು ಅಂತ ನಮಗೆ ಗೊತ್ತಾಗುತ್ತೆ. ಆದ್ರೆ ನಾವು ಅದನ್ನ ಹೇಳೋಕೆ ಹೋಗಲ್ಲ. ಈವಾಗಲೇ ಹೇಳೋದು ಬೇಡ, ಇನ್ನು ಸ್ವಲ್ಪ ಸಮಯ ಆಗಲಿ ಆಮೇಲೆ ಹೇಳೋಣ ಅಂತ ಅಂದ್ಕೊಳ್ತೀವಿ. ಹಳೇ ವ್ಯಕ್ತಿತ್ವ ತೆಗೆದುಹಾಕಿ ಹೊಸ ವ್ಯಕ್ತಿತ್ವ ಹಾಕೊಳ್ಳೋಕೆ ಸಮಯ ಹಿಡಿಯುತ್ತೆ ನಿಜ. (ಕೊಲೊ. 3:9, 10) ಆದ್ರೆ ಅದನ್ನ ಮುಚ್ಚಿಡದೆ ಎಷ್ಟು ಬೇಗ ನೀವು ಹೇಳ್ತೀರೋ ಅಷ್ಟು ಬೇಗ ಅವರಿಗೆ ಬದಲಾವಣೆ ಮಾಡ್ಕೊಳ್ಳೋಕೆ ಸಹಾಯ ಆಗುತ್ತೆ. ಹೀಗೆ ಮಾಡಿದ್ರೆ ಯೇಸು ತರ ನಿಮಗೂ ಅವರ ಮೇಲೆ ಪ್ರೀತಿ ಇದೆ ಅಂತ ತೋರಿಸ್ತೀರ.—ಕೀರ್ತ. 141:5; ಜ್ಞಾನೋ. 27:17.

6. ನಾವು ಯಾಕೆ ಪ್ರಶ್ನೆಗಳನ್ನ ಕೇಳಬೇಕು?

6 ನಿಮ್ಮ ಬೈಬಲ್‌ ವಿದ್ಯಾರ್ಥಿಗೆ ಒಂದು ವಿಷಯದ ಬಗ್ಗೆ ಅವರು ಏನು ಯೋಚನೆ ಮಾಡ್ತಾರೆ, ಅವರ ಅಭಿಪ್ರಾಯ ಏನಂತ ತಿಳುಕೊಳ್ಳೋಕೆ ಪ್ರಶ್ನೆ ಕೇಳೋದು ತುಂಬ ಮುಖ್ಯ. ಇದ್ರಿಂದ ಅವರಿಗೆ ಇಲ್ಲಿ ತನಕ ಏನು ಅರ್ಥ ಆಗಿದೆ, ಅವರು ಏನನ್ನ ನಂಬ್ತಾರೆ ಅಂತ ನಿಮಗೆ ಅರ್ಥ ಮಾಡಿಕೊಳ್ಳೋಕೆ ಸುಲಭ ಆಗುತ್ತೆ. ಅಷ್ಟೇ ಅಲ್ಲ, ಮುಂದಕ್ಕೆ ದೊಡ್ಡ-ದೊಡ್ಡ ಬದಲಾವಣೆ ಮಾಡ್ಕೊಳ್ಳೋದರ ಬಗ್ಗೆ ವಿದ್ಯಾರ್ಥಿ ಹತ್ರ ಮಾತಾಡೋಕೆ ಸುಲಭ ಆಗುತ್ತೆ. ನಿಮ್ಮ ವಿದ್ಯಾರ್ಥಿ ಮನಸ್ಸಲ್ಲಿ ಏನಿದೆ ಅಂತ ತಿಳುಕೊಳ್ಳೋಕೆ ಸಹಾಯ ಮಾಡೋ ಪ್ರಶ್ನೆಗಳು ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನೋ ಪುಸ್ತಕದಲ್ಲಿ ಇದೆ. ಉದಾಹರಣೆಗೆ, ನಾಲ್ಕನೇ ಪಾಠದಲ್ಲಿ, “ನೀವು ಯೆಹೋವನ ಹೆಸರನ್ನ ಉಪಯೋಗಿಸಿದಾಗ ಆತನಿಗೆ ಹೇಗನಿಸುತ್ತೆ?” ಒಂಬತ್ತನೇ ಪಾಠದಲ್ಲಿ, “ಯಾವೆಲ್ಲಾ ವಿಷಯಕ್ಕೆ ಪ್ರಾರ್ಥನೆ ಮಾಡೋಕೆ ನಿಮಗೆ ಇಷ್ಟ?” ಅನ್ನೋ ಪ್ರಶ್ನೆಗಳಿವೆ. ಮೊದಮೊದಲು ಇಂಥ ಪ್ರಶ್ನೆಗಳಿಗೆ ಉತ್ತರ ಕೊಡೋಕೆ ನಿಮ್ಮ ವಿದ್ಯಾರ್ಥಿಗೆ ಕಷ್ಟ ಆಗಬಹುದು. ಅದಕ್ಕೆ ಅವರಿಗೆ ಸಮಯ ಕೊಡಿ. ಅಷ್ಟೇ ಅಲ್ಲ, ವಚನಗಳನ್ನ ಓದಿ ಅಥವಾ ಚಿತ್ರಗಳನ್ನ ನೋಡಿ ಯೋಚನೆ ಮಾಡಿ ಉತ್ತರ ಕೊಡೋದು ಹೇಗಂತ ಹೇಳಿಕೊಡಿ.

7. ವಿದ್ಯಾರ್ಥಿ ಬದಲಾವಣೆ ಮಾಡಿಕೊಳ್ಳೋಕೆ ನಾವು ಇನ್ನೂ ಏನು ಮಾಡಬೇಕು?

7 ನಿಮ್ಮ ವಿದ್ಯಾರ್ಥಿ ಯಾವ ಬದಲಾವಣೆ ಮಾಡಿಕೊಳ್ಳಬೇಕು ಅಂತ ಗೊತ್ತಾದ ತಕ್ಷಣ ಈ ತರ ಬದಲಾವಣೆ ಮಾಡಿರೋರ ಅನುಭವಗಳನ್ನ ನೀವು ಅವರಿಗೆ ಹೇಳಿ. ನಿಮ್ಮ ವಿದ್ಯಾರ್ಥಿಗೆ ಕೂಟಗಳಿಗೆ ಬರೋಕೆ ಕಷ್ಟ ಆಗ್ತಿದ್ರೆ ಯೆಹೋವನು ನನ್ನ ಕೈ ಹಿಡಿದು ನಡಿಸಿದನು ಅನ್ನೋ ವಿಡಿಯೋ ತೋರಿಸಿ. ಈ ವಿಡಿಯೋ ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನೋ ಪುಸ್ತಕದ 14ನೇ ಪಾಠದ “ಇದನ್ನೂ ನೋಡಿ” ಅನ್ನೋ ವಿಭಾಗದಲ್ಲಿದೆ. ಈ ವಿಭಾಗದಲ್ಲಿ ಮತ್ತು “ಹೆಚ್ಚನ್ನ ತಿಳಿಯೋಣ” ಅನ್ನೋ ಇನ್ನೊಂದು ವಿಭಾಗದಲ್ಲಿ ಇಂಥ ಅನುಭವಗಳು ತುಂಬ ಇವೆ. * ಆದ್ರೆ ಹುಷಾರು! ಅನುಭವದಲ್ಲಿರೋ ಆ ವ್ಯಕ್ತಿಗೂ ನಿಮ್ಮ ವಿದ್ಯಾರ್ಥಿಗೂ ಹೋಲಿಕೆ ಮಾಡಬೇಡಿ. ಅವರಿಂದ ಮಾಡೋಕೆ ಆಗುತ್ತೆ ಅಂದ್ರೆ ನಿಮ್ಮಿಂದಾನೂ ಮಾಡೋಕೆ ಆಗುತ್ತೆ ಅಂತೆಲ್ಲ ಹೇಳಬೇಡಿ. ಆ ಬದಲಾವಣೆಯನ್ನ ಮಾಡೋಕೆ ಆಗುತ್ತಾ ಇಲ್ವಾ ಅಂತ ನಿಮ್ಮ ವಿದ್ಯಾರ್ಥಿನೇ ತೀರ್ಮಾನ ಮಾಡಲಿ. ಬೈಬಲಿಂದ ಕಲಿತಿದ್ದನ್ನ ಪಾಲಿಸೋಕೆ ವಿಡಿಯೋದಲ್ಲಿರೋ ಆ ವ್ಯಕ್ತಿಗೆ ಯಾವ ವಚನ ಅಥವಾ ಯಾವ ವಿಷಯ ಸಹಾಯ ಮಾಡ್ತು ಅನ್ನೋದನ್ನ ಮಾತ್ರ ಹೇಳಿ. ಆ ವ್ಯಕ್ತಿಗೆ ಯೆಹೋವ ದೇವರು ಹೇಗೆ ಸಹಾಯ ಮಾಡಿದ್ರು ಅನ್ನೋದನ್ನ ಅವಕಾಶ ಸಿಕ್ಕಿದಾಗೆಲ್ಲ ಹೇಳ್ತಾ ಇರಿ.

8. ಯೆಹೋವ ದೇವರನ್ನ ಪ್ರೀತಿಸೋಕೆ ವಿದ್ಯಾರ್ಥಿಗೆ ಹೇಗೆ ಕಲಿಸುತ್ತೀರಾ?

8 ಯೆಹೋವ ದೇವರನ್ನ ಪ್ರೀತಿಸೋಕೆ ಕಲಿಸಿ. ಯೆಹೋವ ದೇವರ ಗುಣಗಳ ಬಗ್ಗೆ ಆಗಾಗ ನಿಮ್ಮ ವಿದ್ಯಾರ್ಥಿಗೆ ಹೇಳ್ತಾ ಇರಿ. ಯೆಹೋವ ದೇವರು ಯಾವಾಗಲೂ ಸಂತೋಷವಾಗಿರೋ ದೇವರು. ಯೆಹೋವ ನಮ್ಮ ಪ್ರೀತಿಯ ಅಪ್ಪ ಅಂತ ನಿಮ್ಮ ವಿದ್ಯಾರ್ಥಿಗೆ ಅರ್ಥ ಮಾಡಿಸಿ. (1 ತಿಮೊ. 1:11; ಇಬ್ರಿ. 11:6) ಕಲಿತಿದ್ದನ್ನ ಜೀವನದಲ್ಲಿ ಪಾಲಿಸಿರೋದ್ರಿಂದ ತುಂಬ ಪ್ರಯೋಜನ ಇದೆ ಅಂತ ನಿಮ್ಮ ವಿದ್ಯಾರ್ಥಿಗೆ ಹೇಳಿ. ಯಾಕಂದ್ರೆ ಯೆಹೋವ ದೇವರಿಗೆ ಅವರ ಮೇಲೆ ಪ್ರೀತಿ ಇರೋದ್ರಿಂದನೇ ಅದನ್ನ ಪಾಲಿಸೋಕೆ ಹೇಳುತ್ತಿದ್ದಾರೆ ಅಂತ ವಿವರಿಸಿ. (ಯೆಶಾ. 48:17, 18) ವಿದ್ಯಾರ್ಥಿಗೆ ಯೆಹೋವನ ಮೇಲೆ ಪ್ರೀತಿ ಜಾಸ್ತಿಯಾದರೆ ಬದಲಾವಣೆ ಮಾಡಿಕೊಳ್ಳೋಕೆ ಅವರಾಗೇ ಮುಂದೆ ಬರುತ್ತಾರೆ.—1 ಯೋಹಾ. 5:3.

ನಿಮ್ಮ ವಿದ್ಯಾರ್ಥಿಯನ್ನ ಸಹೋದರ-ಸಹೋದರಿಯರಿಗೆ ಪರಿಚಯ ಮಾಡಿಸಿ

9. ಮಾರ್ಕ 10:29, 30ರ ಪ್ರಕಾರ ವಿದ್ಯಾರ್ಥಿಗೆ ತ್ಯಾಗಗಳನ್ನ ಮಾಡೋಕೆ ಯಾವುದು ಸಹಾಯ ಮಾಡುತ್ತೆ?

9 ದೀಕ್ಷಾಸ್ನಾನ ಅನ್ನೋ ಗುರಿ ಮುಟ್ಟೋಕೆ ಬೈಬಲ್‌ ವಿದ್ಯಾರ್ಥಿ ಕೆಲವು ತ್ಯಾಗಗಳನ್ನ ಮಾಡಬೇಕಾಗುತ್ತೆ. ಅಂದ್ರೆ ಅವರು ಹಣ-ಆಸ್ತಿ ಹಿಂದೆ ಹೋಗೋ ಯೋಚನೆಯನ್ನ ಬಿಟ್ಟು ಬಿಡಬೇಕಾಗಿ ಬರಬಹುದು, ಬೈಬಲ್‌ ನಿಯಮನ ಮೀರುವಂಥ ಕೆಲಸದಲ್ಲಿ ಇದ್ರೆ ಅದನ್ನ ಬಿಡಬೇಕಾಗಬಹುದು, ಯೆಹೋವ ದೇವರನ್ನ ಪ್ರೀತಿಸದೆ ಇರೋ ಸ್ನೇಹಿತರ ಸಹವಾಸ ಬಿಡಬೇಕಾಗಿ ಬರಬಹುದು, ಕುಟುಂಬದವರ ಸಂಬಂಧವನ್ನ ಕಳಕೊಳ್ಳಬಹುದು. ಇಂಥ ತ್ಯಾಗಗಳನ್ನ ಮಾಡೋಕೆ ಕೆಲವರಿಗೆ ಕಷ್ಟ ಆಗುತ್ತೆ ಅಂತ ಯೇಸು ಮೊದಲೇ ಹೇಳಿದ್ದಾನೆ. ಆದ್ರೆ ಆತನ ಶಿಷ್ಯರಾಗೋರು ಏನನ್ನೂ, ಯಾವುದನ್ನೂ ಕಳಕೊಳ್ಳಲ್ಲ, ಅವರನ್ನ ತುಂಬ ಪ್ರೀತಿಸೋ ಸಹೋದರ ಸಹೋದರಿಯರ ದೊಡ್ಡ ಕುಟುಂಬ ಸಿಗುತ್ತೆ ಅಂತ ಮಾತು ಕೊಟ್ಟಿದ್ದಾನೆ. (ಮಾರ್ಕ 10:29, 30 ಓದಿ.) ಈ ಕುಟುಂಬದ ಪ್ರೀತಿ, ಸ್ನೇಹ ಪಡಕೊಳ್ಳೋಕೆ ನಿಮ್ಮ ವಿದ್ಯಾರ್ಥಿಗೆ ಹೇಗೆ ಸಹಾಯ ಮಾಡ್ತೀರಾ?

10. ಮ್ಯಾನ್ವೆಲ್‌ ಅವ್ರ ಮಾತಿಂದ ನೀವೇನು ಕಲಿತ್ರಿ?

10 ವಿದ್ಯಾರ್ಥಿಗೆ ಒಳ್ಳೇ ಸ್ನೇಹಿತರಾಗಿ. ನಿಮ್ಮ ಬೈಬಲ್‌ ವಿದ್ಯಾರ್ಥಿ ಮೇಲೆ ಪ್ರೀತಿ ಇದೆ ಅಂತ ತೋರಿಸೋದು ಯಾಕೆ ಮುಖ್ಯ? ಅದಕ್ಕೆ ಉತ್ತರ, ಮೆಕ್ಸಿಕೋ ದೇಶದ ಮ್ಯಾನ್ವೆಲ್‌ ಅನ್ನೋ ಸಹೋದರನ ಮಾತಿಂದ ಕೇಳೋಣ ಬನ್ನಿ. “ನಂಗೆ ಬೈಬಲ್‌ ಕಲಿಸುವವರು ಮೊದಲು ನನ್ನ ಹತ್ರ ಸ್ವಲ್ಪ ಮಾತಾಡಿ ಆಮೇಲೆ ಸ್ಟಡಿ ಮಾಡ್ತಿದ್ರು. ಆಗ ನಂಗೆ ಹಾಯನಿಸ್ತಿತ್ತು. ಅಷ್ಟೇ ಅಲ್ಲ, ಅವ್ರ ಜೊತೆ ಏನೇ ವಿಷ್ಯ ಇದ್ರೂ ಮುಚ್ಚುಮರೆ ಇಲ್ದೆ ಹೇಳ್ಕೊತಿದ್ದೆ. ಇದ್ರಿಂದ ನನ್ನ ಮೇಲೆ ಅವ್ರಿಗೆ ಎಷ್ಟು ಪ್ರೀತಿ ಕಾಳಜಿ ಇದೆ ಅಂತ ಗೊತ್ತಾಗ್ತಿತ್ತು.”

11. ಬೈಬಲ್‌ ವಿದ್ಯಾರ್ಥಿಗಳ ಜೊತೆ ಸಮಯ ಕಳೆಯೋದ್ರಿಂದ ಯಾವ ಪ್ರಯೋಜನ ಸಿಗುತ್ತೆ?

11 ಯೇಸು ತನ್ನ ಶಿಷ್ಯರ ಜೊತೆ ಸಮಯ ಕಳೆದ ತರ ನೀವೂ ನಿಮ್ಮ ವಿದ್ಯಾರ್ಥಿಗಳ ಜೊತೆ ಸಮಯ ಕಳೀರಿ. (ಯೋಹಾ. 3:22) ಬೈಬಲಿಂದ ಕಲಿತಿದ್ದನ್ನ ವಿದ್ಯಾರ್ಥಿ ಪಾಲಿಸ್ತಾ ಇರೋದಾದ್ರೆ, ಅವರನ್ನ ಟೀ, ಕಾಫಿಗೆ ಅಥವಾ ಊಟಕ್ಕೆ ಮನೆಗೆ ಕರೆಯಬಹುದು. ಅವ್ರ ಜೊತೆ JW ಪ್ರಸಾರ ನೋಡಬಹುದು. ಬೈಬಲ್‌ ವಿದ್ಯಾರ್ಥಿಗಳ ಸ್ನೇಹಿತರು, ಸಂಬಂಧಿಕರು ಹಬ್ಬಗಳನ್ನು ಮಾಡ್ತಿರುವಾಗ ನೀವು ಆ ವಿದ್ಯಾರ್ಥಿಗಳನ್ನ ಮನೆಗೆ ಕರೆದ್ರೆ ಅವ್ರಿಗೆ ತುಂಬ ಸಹಾಯ ಆಗುತ್ತೆ. ಉಗಾಂಡದಲ್ಲಿರೋ ಸಹೋದರ ಕಸಿಬ್ವೆ ಏನು ಹೇಳ್ತಾರೆ ನೋಡಿ. “ನಂಗೆ ಬೈಬಲ್‌ ಕಲಿಸ್ತಿದ್ದವ್ರ ಜೊತೆ ಸಮಯ ಕಳೆದಿದ್ರಿಂದ ಯೆಹೋವ ದೇವ್ರ ಬಗ್ಗೆ ತುಂಬ ಕಲ್ತಿದ್ದೀನಿ. ಯೆಹೋವ ದೇವರು ತನ್ನ ಜನ್ರನ್ನ ಎಷ್ಟು ಪ್ರೀತಿಸ್ತಾರೆ, ಆತನ ಜನ್ರು ಎಷ್ಟು ಖುಷಿಖುಷಿಯಾಗಿ ಇದ್ದಾರೆ ಅಂತ ಕಣ್ಣಾರೆ ನೋಡಿದ್ದೀನಿ. ಇದೆಲ್ಲ ನಂಗೆ ದೀಕ್ಷಾಸ್ನಾನ ತಗೊಳೋಕೆ ಸಹಾಯ ಮಾಡ್ತು.”

ನಿಮ್ಮ ಜೊತೆ ಬೇರೆ ಬೇರೆ ಸಹೋದರರನ್ನ ಸ್ಟಡಿಗೆ ಕರ್ಕೊಂಡು ಹೋದ್ರೆ ವಿದ್ಯಾರ್ಥಿಗೆ ಕೂಟಗಳಿಗೆ ಬರೋಕೆ ಸಹಾಯ ಆಗುತ್ತೆ (ಪ್ಯಾರ 12 ನೋಡಿ) *

12. ನಾವು ಬೈಬಲ್‌ ಸ್ಟಡಿ ಮಾಡುವಾಗ ಬೇರೆ ಬೇರೆ ಸಹೋದರ ಸಹೋದರಿಯರನ್ನ ಯಾಕೆ ಕರ್ಕೊಂಡು ಹೋಗಬೇಕು?

12 ಸ್ಟಡಿಗೆ ಬೇರೆ ಬೇರೆ ಸಹೋದರರನ್ನ ಕರ್ಕೊಂಡು ಹೋಗಿ. ನಾವೊಬ್ಬರೇ ಸ್ಟಡಿ ಮಾಡೋಕೆ ಹೋದ್ರೆ ಅಥವಾ ಯಾವಾಗ್ಲೂ ಒಬ್ರನ್ನೇ ನಮ್ಮ ಜೊತೆ ಸ್ಟಡಿಗೆ ಕರ್ಕೊಂಡು ಹೋದ್ರೆ ಒಳ್ಳೇದು ಅಂತ ಕೆಲವೊಮ್ಮೆ ನಮಗೆ ಅನಿಸಬಹುದು. ಆದ್ರೆ ಸ್ಟಡಿಗೆ ಬೇರೆ ಬೇರೆ ಸಹೋದರ ಸಹೋದರಿಯರನ್ನ ಕರ್ಕೊಂಡು ಹೋದ್ರೆ ವಿದ್ಯಾರ್ಥಿಗೆ ಪ್ರಯೋಜನ ಆಗುತ್ತೆ. ಮಾಲ್ಡೋವದಲ್ಲಿರೋ ಡಿಮಿಟ್ರಿ ಅನ್ನೋ ಸಹೋದರ ಹೀಗೆ ಹೇಳ್ತಾರೆ: “ನಂಗೆ ಸ್ಟಡಿ ಮಾಡೋಕೆ ಬರ್ತಿದ್ದ ಬೇರೆ ಬೇರೆ ಸಹೋದರರು ಒಂದೇ ವಿಷ್ಯನ ಬೇರೆ ಬೇರೆ ರೀತೀಲಿ ವಿವರಿಸ್ತಿದ್ರು. ಇದ್ರಿಂದ ಒಂದು ವಿಷ್ಯನ ಯಾವ್ಯಾವ ರೀತೀಲಿ ಪಾಲಿಸಬೇಕು ಅಂತ ಗೊತ್ತಾಯ್ತು. ಅಷ್ಟೇ ಅಲ್ಲ, ನಾನು ಮೊದಲ ಸಲ ಕೂಟಕ್ಕೆ ಹೋದಾಗ್ಲೂ ಮುಜುಗರ ಆಗಲಿಲ್ಲ. ಯಾಕಂದ್ರೆ ಎಷ್ಟೋ ಸಹೋದರ ಸಹೋದರಿಯರನ್ನ ನಾನು ಈಗಾಗ್ಲೇ ಪರಿಚಯ ಮಾಡ್ಕೊಂಡಿದ್ದೆ.”

13. ನಮ್ಮ ಬೈಬಲ್‌ ವಿದ್ಯಾರ್ಥಿಗಳು ಕೂಟಗಳಿಗೆ ಬರೋದು ಯಾಕೆ ಮುಖ್ಯ?

13 ವಿದ್ಯಾರ್ಥಿಯನ್ನ ಕೂಟಗಳಿಗೆ ಕರೆಯಿರಿ. ನಾವೆಲ್ಲ ಕೂಟಗಳಿಗೆ ಸೇರಿ ಬರಬೇಕು ಅಂತ ಯೆಹೋವ ದೇವರು ಆಜ್ಞೆ ಕೊಟ್ಟಿದ್ದಾರೆ. ಯಾಕಂದ್ರೆ ಇದು ಆರಾಧನೆಯ ಒಂದು ಭಾಗ. (ಇಬ್ರಿ. 10:24, 25) ಅಷ್ಟೇ ಅಲ್ಲ, ನಮ್ಮ ಸಹೋದರ ಸಹೋದರಿಯರು ಸ್ವಂತ ಕುಟುಂಬದವರ ತರ. ಮನೇಲಿ ಕುಟುಂಬದವರೆಲ್ಲ ಹೇಗೆ ಒಟ್ಟಿಗೆ ಕೂತು ಊಟ ಮಾಡ್ತೀವೋ ಹಾಗೆ ಸಭೆಯಲ್ಲಿ ನಾವೆಲ್ಲ ಸೇರಿ ಯೆಹೋವ ದೇವ್ರ ಬಗ್ಗೆ ಕಲಿತೀವಿ. ವಿದ್ಯಾರ್ಥಿ ಕೂಟಗಳಿಗೆ ಬರೋಕೆ ಶುರು ಮಾಡಿದ್ರೆ ದೀಕ್ಷಾಸ್ನಾನ ಅನ್ನೋ ಗುರಿ ಮುಟ್ಟೋಕೆ ಸುಲಭ ಆಗುತ್ತೆ. ಆದ್ರೆ ಅವ್ರಿಗೆ ಕೂಟಕ್ಕೆ ಬರೋಕೆ ಕೆಲವು ಅಡ್ಡಿತಡೆಗಳು ಇರಬಹುದು. ಆದ್ರೆ ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನೋ ಪುಸ್ತಕದಿಂದ ಈ ಅಡ್ಡಿತಡೆಗಳನ್ನ ಜಯಿಸೋಕೆ ಸಹಾಯ ಮಾಡಬಹುದು.

14. ಬೈಬಲ್‌ ವಿದ್ಯಾರ್ಥಿಗಳಿಗೆ ಕೂಟಗಳಿಗೆ ಬರೋಕೆ ಹೇಗೆ ಸಹಾಯ ಮಾಡಬಹುದು?

14 ನಿಮ್ಮ ವಿದ್ಯಾರ್ಥಿಯನ್ನ ಕೂಟಕ್ಕೆ ಕರೆಯೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ ಹತ್ತನೇ ಪಾಠ ಸಹಾಯ ಮಾಡುತ್ತೆ. ಈ ಪುಸ್ತಕ ಬಿಡುಗಡೆ ಮಾಡೋ ಮುಂಚೆ ಟೆಸ್ಟ್‌ ಮಾಡೋಕೆ ಕೆಲವು ಪ್ರಚಾರಕರಿಗೆ ಕೊಟ್ವಿ. ಅದ್ರಿಂದ ಸ್ಟಡಿ ಮಾಡಿದ ಮೇಲೆ ತುಂಬ ವಿದ್ಯಾರ್ಥಿಗಳು ಕೂಟಕ್ಕೆ ಬರೋಕೆ ಶುರುಮಾಡಿದ್ರು. ಹಾಗಂತ ನೀವು ಆ ಹತ್ತನೇ ಪಾಠ ಸ್ಟಡಿ ಮಾಡೋವರೆಗೂ ಕಾಯ್ತಾ ವಿದ್ಯಾರ್ಥಿಯನ್ನ ಕೂಟಕ್ಕೆ ಕರೆಯದೇ ಇರಬೇಡಿ. ಆದಷ್ಟು ಬೇಗ ಕರೆಯಿರಿ. ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ತರದ ಸಮಸ್ಯೆಗಳಿರಲ್ಲ. ನಿಮ್ಮ ವಿದ್ಯಾರ್ಥಿಗೆ ಏನು ಸಮಸ್ಯೆ ಇದೆ ಅಂತ ಮೊದ್ಲು ತಿಳ್ಕೊಳ್ಳಿ ಆಮೇಲೆ ಬೇಕಾಗಿರೋ ಸಹಾಯ ಕೊಡಿ. ನಿಮ್ಮ ವಿದ್ಯಾರ್ಥಿಗಳು ಕೂಟಗಳಿಗೆ ಬರೋಕೆ ತುಂಬ ಸಮಯ ಹಿಡಿಬಹುದು. ಆಗ ಬೇಜಾರು ಮಾಡ್ಕೊಬೇಡಿ. ತಾಳ್ಮೆಯಿಂದ ಇರಿ, ಪ್ರಯತ್ನ ಬಿಡಬೇಡಿ.

ಧೈರ್ಯವಾಗಿರೋಕೆ ಸಹಾಯ ಮಾಡಿ

15. ನಮ್ಮ ಬೈಬಲ್‌ ವಿದ್ಯಾರ್ಥಿಗಳಿಗೆ ಯಾಕೆ ಭಯ ಆಗುತ್ತೆ?

15 ನೀವು ಸತ್ಯ ಕಲಿತಾ ಇದ್ದಾಗ ಯೆಹೋವನ ಸಾಕ್ಷಿಯಾಗೋಕೆ ನಿಮಗೂ ಭಯ ಆಗಿತ್ತು ತಾನೆ? ಬೇರೆಯವ್ರಿಗೆ ಸಿಹಿಸುದ್ದಿ ಸಾರೋಕೆ ನನ್ನಿಂದಾಗಲ್ಲ, ಭಯ ಆಗುತ್ತೆ ಅಂತ ಅನಿಸಿರಬಹುದು. ಅಥವಾ ಸಂಬಂಧಿಕರು, ಸ್ನೇಹಿತರು ಏನಂತಾರೋ ಅನ್ನೋ ಭಯ ಇದ್ದಿರಬಹುದು. ಅದೇ ತರ ನಿಮ್ಮ ಬೈಬಲ್‌ ವಿದ್ಯಾರ್ಥಿಗಳಿಗೂ ಭಯ ಇರುತ್ತೆ. ಈ ಭಯ ಸಾಮಾನ್ಯ ಅಂತ ಯೇಸು ಮುಂಚೆನೇ ಹೇಳಿದ್ದಾನೆ. ಯಾವುದೇ ಭಯ ಇದ್ರೂ ಯೆಹೋವ ದೇವರ ಆರಾಧನೆ ಮಾಡೋದನ್ನ ಬಿಡಬಾರದು ಅಂತ ಆತನು ತನ್ನ ಶಿಷ್ಯರಿಗೆ ಹೇಳಿದ್ದನು. (ಮತ್ತಾ. 10:16, 17, 27, 28) ಯೇಸು ತನ್ನ ಶಿಷ್ಯರಿಗೆ ಧೈರ್ಯವಾಗಿರೋಕೆ ಹೇಗೆ ಸಹಾಯ ಮಾಡಿದನು? ನಾವು ನಮ್ಮ ಬೈಬಲ್‌ ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡಬಹುದು?

16. ಸಿಹಿಸುದ್ದಿ ಸಾರೋಕೆ ನಾವು ಬೈಬಲ್‌ ವಿದ್ಯಾರ್ಥಿಗೆ ಹೇಗೆ ತರಬೇತಿ ಕೊಡಬಹುದು?

16 ಸಿಹಿಸುದ್ದಿ ಸಾರೋಕೆ ತರಬೇತಿ ಕೊಡಿ. ಇದನ್ನ ಯೇಸು ಹೇಗೆ ಮಾಡಿದನು? ಶಿಷ್ಯರನ್ನ ಸಾರೋಕೆ ಕಳಿಸಿದಾಗ ಅವ್ರಿಗೂ ಭಯ ಆಗಿರಬಹುದು. ಅದಕ್ಕೆ ಯೇಸು, ಯಾರಿಗೆ ಸಾರಬೇಕು, ಏನು ಹೇಳಬೇಕು ಅಂತ ಮೊದಲೇ ಅವ್ರಿಗೆ ಕಲಿಸಿದನು. (ಮತ್ತಾ. 10:5-7) ನಿಮ್ಮ ಬೈಬಲ್‌ ವಿದ್ಯಾರ್ಥಿಗೆ ನೀವು ಹೇಗೆ ಸಹಾಯ ಮಾಡಬಹುದು? ಯಾರಿಗೆ ಸಿಹಿಸುದ್ದಿ ಸಾರಬಹುದು ಅಂತ ನಿಮ್ಮ ವಿದ್ಯಾರ್ಥಿಯನ್ನೇ ಕೇಳಿ. ಬೈಬಲ್‌ ಬಗ್ಗೆ ತಿಳ್ಕೊಳ್ಳೋಕೆ ಇಷ್ಟ ಇರುವವರು ಯಾರಾದ್ರೂ ಇದ್ದಾರಾ ಅಂತ ಕೇಳಿನೋಡಿ. ಅವ್ರ ಹತ್ರ ಏನು ಮಾತಾಡಬೇಕು ಅಂತ ಚಿಕ್ಕದಾಗಿ ಹೇಳಿಕೊಡಿ. ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಲ್ಲಿರೋ “ಕೆಲವರು ಹೀಗಂತಾರೆ” “ಕೆಲವರು ಹೀಗೆ ಕೇಳಬಹುದು” ಅನ್ನೋ ವಿಭಾಗದಲ್ಲಿ ಇರೋದನ್ನ ಪ್ರ್ಯಾಕ್ಟೀಸ್‌ ಮಾಡಿಸಿ. ಇದನ್ನ ಮಾಡುವಾಗ ಬೈಬಲನ್ನ ಉಪಯೋಗಿಸಿ ಯೋಚನೆ ಮಾಡಿ ಉತ್ತರ ಕೊಡೋದು ಹೇಗೆ ಅಂತ ನಿಮ್ಮ ವಿದ್ಯಾರ್ಥಿಗೆ ಕಲಿಸಿ.

17. ಮತ್ತಾಯ 10:19, 20, 29-31 ಬಳಸಿ ನಿಮ್ಮ ವಿದ್ಯಾರ್ಥಿ ಯೆಹೋವ ದೇವ್ರ ಮೇಲೆ ಭರವಸೆ ಇಡೋಕೆ ಹೇಗೆ ಸಹಾಯ ಮಾಡಬಹುದು?

17 ಯೆಹೋವ ದೇವರ ಮೇಲೆ ಭರವಸೆ ಇಡೋಕೆ ಕಲಿಸಿ. ಯೆಹೋವ ದೇವರಿಗೆ ಪ್ರೀತಿ ಇರೋದ್ರಿಂದ ಸಹಾಯ ಮಾಡೇ ಮಾಡ್ತಾರೆ ಅಂತ ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾಯ 10: 19, 20, 29-31 ಓದಿ.) ಅದೇ ತರ ನಿಮ್ಮ ವಿದ್ಯಾರ್ಥಿಗೂ ಸಹಾಯ ಮಾಡ್ತಾರೆ ಅನ್ನೋದನ್ನ ಆಗಾಗ ನೆನಪಿಸಿ. ಪ್ರಾರ್ಥನೆ ಮಾಡುವಾಗ ನಿಮ್ಮ ವಿದ್ಯಾರ್ಥಿಯ ಗುರಿಗಳ ಬಗ್ಗೆನೂ ಪ್ರಾರ್ಥಿಸಿ. ಆಗ ಅವರು ಯೆಹೋವ ದೇವರ ಮೇಲೆ ಭರವಸೆ ಇಡೋಕೆ ಕಲಿತಾರೆ. ಪೋಲೆಂಡಲ್ಲಿರೋ ಸಹೋದರ ಫ್ರಾಂಚಿಶೆಕ್‌ ಹೀಗೆ ಹೇಳ್ತಾರೆ, “ನಂಗೆ ಬೈಬಲ್‌ ಕಲಿಸ್ತಿದ್ದವರು ನನ್ನ ಗುರಿಗಳನ್ನ ಮುಟ್ಟೋಕೆ ಸಹಾಯ ಮಾಡಪ್ಪಾ ಅಂತ ನನಗೋಸ್ಕರ ಯೆಹೋವನ ಹತ್ರ ಬೇಡಿಕೊಳ್ತಿದ್ರು. ಅವರು ಮಾಡಿದ ಪ್ರಾರ್ಥನೆಗೆ ಯೆಹೋವ ದೇವರು ಉತ್ತರ ಕೊಟ್ಟಿದ್ದನ್ನ ನೋಡಿದಾಗ ನಾನೂ ಪ್ರಾರ್ಥನೆ ಮಾಡೋಕೆ ಶುರುಮಾಡ್ದೆ. ನಾನು ಹೊಸ ಕೆಲಸಕ್ಕೆ ಸೇರಿಕೊಂಡಾಗ ನಂಗೆ ಮೀಟಿಂಗ್‌ ಮತ್ತು ಅಧಿವೇಶನಕ್ಕೆ ಹೋಗೋಕೆ ರಜಾ ಬೇಕಿತ್ತು. ಆಗ್ಲೂ ನಾನು ಯೆಹೋವ ದೇವರಿಗೆ ಪ್ರಾರ್ಥನೆ ಮಾಡ್ದಾಗ ದೇವರು ನಂಗೆ ಸಹಾಯ ಮಾಡಿದ್ರು.”

18. ನಾವು ಹಾಕೋ ಪ್ರಯತ್ನ ನೋಡುವಾಗ ಯೆಹೋವ ದೇವರಿಗೆ ಹೇಗನಿಸುತ್ತೆ?

18 ಯೆಹೋವ ದೇವರಿಗೆ ನಮ್ಮ ಬೈಬಲ್‌ ವಿದ್ಯಾರ್ಥಿಗಳ ಮೇಲೆ ತುಂಬ ಪ್ರೀತಿ ಕಾಳಜಿ ಇದೆ. ಹಾಗಾಗಿ ಅವ್ರಿಗೆ ಯೆಹೋವನ ಜೊತೆ ಒಳ್ಳೇ ಸ್ನೇಹ ಬೆಳೆಸಿಕೊಳ್ಳೋಕೆ ಸಹಾಯ ಮಾಡುವಾಗ ದೇವರು ಅದನ್ನ ಮೆಚ್ಚುತ್ತಾರೆ ಮತ್ತು ನಮ್ಮನ್ನೂ ತುಂಬ ಪ್ರೀತಿಸ್ತಾರೆ. (ಯೆಶಾ. 52:7) ನಿಮಗೆ ಬೈಬಲ್‌ ಸ್ಟಡಿ ಇಲ್ಲಾಂದ್ರೆ ಬೇಜಾರು ಮಾಡ್ಕೊಬೇಡಿ. ಬೇರೆಯವ್ರ ಬೈಬಲ್‌ ಸ್ಟಡಿಗೆ ಹೋಗಿ ಅವರು ದೀಕ್ಷಾಸ್ನಾನ ಪಡಿಯೋಕೆ ಸಹಾಯ ಮಾಡಿ.

ಗೀತೆ 144 ಜೀವದ ಹೊಣೆ

^ ಪ್ಯಾರ. 5 ನಾವು ಈ ಲೇಖನದಲ್ಲಿ, ಯೇಸು ಜನರಿಗೆ ಶಿಷ್ಯರಾಗೋಕೆ ಹೇಗೆ ಸಹಾಯ ಮಾಡಿದನು ಮತ್ತು ನಾವು ಇವತ್ತು ಹೇಗೆ ಸಹಾಯ ಮಾಡಬಹುದು ಅಂತ ಕಲಿತೀವಿ. ಅಷ್ಟೇ ಅಲ್ಲ, “ಎಂದೆಂದೂ ಖುಷಿಯಾಗಿ ಬಾಳೋಣ!” ಅನ್ನೋ ಹೊಸ ಪುಸ್ತಕವನ್ನ ಹೇಗೆ ಉಪಯೋಗಿಸಬೇಕು ಅಂತನೂ ಕಲಿತೀವಿ. ದೀಕ್ಷಾಸ್ನಾನ ತಗೊಳ್ಳೋಕೆ ಈ ಪುಸ್ತಕ ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತೆ.

^ ಪ್ಯಾರ. 7 ಇಂಥ ಇನ್ನೂ ಅನುಭವಗಳು (1) ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಅನ್ನೋ ಪುಸ್ತಕದಲ್ಲಿ ಸಿಗುತ್ತೆ. ಅದರಲ್ಲಿ “ಬೈಬಲ್‌” ವಿಭಾಗದ ಕೆಳಗೆ “ಪ್ರಾಯೋಗಿಕ ಮೌಲ್ಯ” ಅನ್ನೋ ವಿಭಾಗದಲ್ಲಿ “ಬದುಕನ್ನೇ ಬದಲಾಯಿಸಿತು ಬೈಬಲ್‌, ಬದುಕು ಬದಲಾದ ವಿಧ” (ಕಾವಲಿನಬುರುಜು ಸರಣಿ ಲೇಖನ) (2) JW ಲೈಬ್ರರಿ ಆ್ಯಪ್‌ನಲ್ಲಿ “ಮೀಡಿಯಾ” ವಿಭಾಗದಲ್ಲಿ “ಸಂದರ್ಶನಗಳು ಮತ್ತು ಅನುಭವಗಳು” ಅನ್ನೋದನ್ನ ನೋಡಿ.

^ ಪ್ಯಾರ. 62 ಚಿತ್ರ ವಿವರಣೆ: ನಮ್ಮ ಸಹೋದರ ಯುವಕನಿಗೆ ಸ್ಟಡಿ ಮಾಡ್ತಿದ್ದಾರೆ. ಅವರು ತನ್ನ ಹೆಂಡತಿಯನ್ನ ಆ ಸ್ಟಡಿಗೆ ಕರ್ಕೊಂಡು ಹೋಗಿದ್ದಾರೆ. ಆಮೇಲೆ ಬೇರೆ ಸಹೋದರರನ್ನ ಸ್ಟಡಿಗೆ ಕರ್ಕೊಂಡು ಹೋಗಿದ್ದಾರೆ.