ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 23

ಯೆಹೋವ ಜೊತೆಗಿದ್ದಾನೆ, ನೀವು ಒಂಟಿಯಲ್ಲ

ಯೆಹೋವ ಜೊತೆಗಿದ್ದಾನೆ, ನೀವು ಒಂಟಿಯಲ್ಲ

‘ಯಾರೆಲ್ಲ ಆತನಿಗೆ ಮೊರೆ ಇಡ್ತಾರೋ, ಅವ್ರೆಲ್ಲರಿಗೆ ಯೆಹೋವ ಹತ್ರಾನೇ ಇರ್ತಾನೆ.’—ಕೀರ್ತ. 145:18.

ಗೀತೆ 106 ಯೆಹೋವನ ಸ್ನೇಹವನ್ನು ಗಳಿಸುವುದು

ಕಿರುನೋಟ *

1. ಯೆಹೋವನ ಆರಾಧಕರಿಗೆ ಕೆಲವೊಮ್ಮೆ ಯಾಕೆ ಒಂಟಿತನ ಕಾಡುತ್ತೆ?

ನಮ್ಮಲ್ಲಿ ಯಾರಿಗೆ ತಾನೇ ಒಂಟಿತನದ ಭಾವನೆ ಕಾಡಲ್ಲ ಹೇಳಿ? ಕೆಲವರಿಗೆ ಯಾವಾಗ್ಲೋ ಒಂದ್ಸಲ ಕಾಡುತ್ತೆ ಇನ್ನು ಕೆಲವರಿಗೆ ಯಾವಾಗ್ಲೂ ಕಾಡುತ್ತೆ. ಕೆಲವೊಮ್ಮೆ ನಮ್ಮ ಜೊತೆ ತುಂಬಾ ಜನ ಇದ್ರೂ ನಾವು ಒಂಟಿ ಅಂತ ಅನಿಸುತ್ತೆ. ಕೆಲವರು ಹೊಸ ಸಭೆಗೆ ಬಂದಾಗ ‘ನನಗಿಲ್ಲಿ ಯಾರು ಫ್ರೆಂಡ್ಸ್‌ ಇಲ್ಲ’ ಅಂತ ಅನಿಸಬಹುದು. ಇನ್ನು ಕೆಲವರು ತುಂಬಿದ ಕುಟುಂಬದಲ್ಲಿ ಬೆಳೆದಿರುತ್ತಾರೆ. ಅವರನ್ನೆಲ್ಲ ಬಿಟ್ಟು ಬೇರೆ ಕಡೆ ಬಂದಾಗ ಅವ್ರಿಗೆ ಒಂಟಿತನ ಕಾಡುತ್ತೆ. ಇನ್ನು ಕೆಲವರಿಗೆ ತುಂಬಾ ಹತ್ರದವರು ಯಾರಾದ್ರೂ ತೀರಿಕೊಂಡಾಗ ‘ನನಗಿನ್ನು ಯಾರಿದ್ದಾರೆ ಒಂಟಿ ಆಗಿಬಿಟ್ನಲ್ಲಾ’ ಅಂತ ತುಂಬಾ ನೋವಾಗುತ್ತೆ. ಹೊಸದಾಗಿ ಸತ್ಯ ಕಲಿತಾ ಇರೋರಿಗೆ ಸಂಬಂಧಿಕರಿಂದ, ಸ್ನೇಹಿತರಿಂದ ವಿರೋಧ ಬಂದಾಗ ‘ನನ್ನನ್ನ ಎಲ್ರೂ ದೂರ ಮಾಡಿಬಿಟ್ರಲ್ಲಾ’ ಅಂತ ಬೇಜಾರಾಗಬಹುದು.

2. ಈ ಲೇಖನದಲ್ಲಿ ನಾವು ಯಾವ್ಯಾವ ಪ್ರಶ್ನೆಗಳಿಗೆ ಉತ್ತರ ತಿಳುಕೊಳ್ಳುತ್ತೇವೆ?

2 ಒಂಟಿತನ ಕಾಡಿದಾಗ ನಮಗೆಷ್ಟು ನೋವಾಗುತ್ತೆ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ಅದ್ರಿಂದ ಹೊರಗೆ ಬಂದು ಖುಷಿಯಾಗಿ ಇರೋಕೆ ಯೆಹೋವ ದೇವರು ಖಂಡಿತ ಸಹಾಯ ಮಾಡ್ತಾರೆ. ಹಾಗಾದ್ರೆ ಯೆಹೋವ ದೇವರು ಹೇಗೆ ಸಹಾಯ ಮಾಡ್ತಾರೆ? ಒಂಟಿತನದಿಂದ ಹೊರಗೆ ಬರೋಕೆ ನಾವೇನು ಮಾಡಬೇಕು? ಸಭೆಯಲ್ಲಿ ಯಾರಿಗಾದ್ರೂ ಒಂಟಿತನ ಕಾಡ್ತಾ ಇದ್ರೆ ನಾವು ಹೇಗೆ ಸಹಾಯ ಮಾಡಬಹುದು? ಈ ಎಲ್ಲಾ ಪ್ರಶ್ನೆಗಳಿಗೆ ನಾವು ಈ ಲೇಖನದಲ್ಲಿ ಉತ್ತರ ತಿಳಿಯೋಣ.

ಯೆಹೋವ ನಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆ

ದೇವದೂತನನ್ನ ಕಳಿಸಿ ನೀನು ಒಂಟಿಯಲ್ಲ ಅಂತ ಎಲೀಯನಿಗೆ ಯೆಹೋವ ಧೈರ್ಯ ತುಂಬುತ್ತಿದ್ದಾರೆ (ಪ್ಯಾರ 3 ನೋಡಿ)

3. ಯೆಹೋವ ಎಲೀಯನಿಗೆ ಹೇಗೆ ಕಾಳಜಿ ತೋರಿಸಿದ್ರು?

3 ನಾವು ಯಾವಾಗ್ಲೂ ಖುಷಿ ಖುಷಿಯಾಗಿ ಇರಬೇಕಂತ ಯೆಹೋವನ ಆಸೆ. ಯೆಹೋವ ನಮ್ಮಲ್ಲಿ ಪ್ರತಿಯೊಬ್ಬರಿಗೂ ತುಂಬ ಹತ್ರ ಇರೋದ್ರಿಂದ ನಮಗಾಗೋ ನೋವು ಆತನಿಗೆ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ. (ಕೀರ್ತ. 145:18, 19) ಇದಕ್ಕೊಂದು ಉದಾಹರಣೆ ನೋಡೋಣ. ಎಲೀಯನಿಗೆ ತುಂಬಾ ಕಷ್ಟ ಬಂತು. ಆ ಕಾಲದಲ್ಲಿ ಯೆಹೋವನ ಆರಾಧಕರ ಪ್ರಾಣಕ್ಕೆ ತುಂಬ ಅಪಾಯ ಇತ್ತು. ಎಲೀಯನನ್ನ ಕೊಲ್ಲೋಕೂ ಹುಡುಕ್ತಾ ಇದ್ರು. (1 ಅರ. 19:1, 2) ಯೆಹೋವನ ಆರಾಧಕರಲ್ಲಿ ನಾನೊಬ್ಬನೇ ಬದುಕಿರೋದು ಅಂತ ಅವನಿಗೆ ಭಯ, ಒಂಟಿತನ ಕಾಡ್ತು. (1 ಅರ. 19:10) ಇದ್ರ ಬಗ್ಗೆ ಯೆಹೋವನಿಗೆ ಗೊತ್ತಾದ ತಕ್ಷಣ ಅವನ ಸಹಾಯಕ್ಕೆ ಬಂದ್ರು. ಒಬ್ಬ ದೇವದೂತನನ್ನ ಕಳಿಸಿ ‘ನೀನು ಒಂಟಿಯಲ್ಲ ಯೆಹೋವನನ್ನ ಆರಾಧಿಸೋ ತುಂಬಾ ಜನ ಇದ್ದಾರೆ’ ಅಂತ ಅವನಿಗೆ ಧೈರ್ಯ ತುಂಬಿಸಿದ್ರು.—1 ಅರ. 19:5, 18.

4. ಸಂಬಂಧಿಕರಿಂದ ಸ್ನೇಹಿತರಿಂದ ದೂರ ಆದವರಿಗೆ ಯೆಹೋವ ಸಹಾಯ ಮಾಡ್ತಾರೆ ಅಂತ ಮಾರ್ಕ 10:29, 30ರಿಂದ ಹೇಗೆ ಗೊತ್ತಾಗುತ್ತೆ?

4 ಯೆಹೋವನಿಗೋಸ್ಕರ ನಮ್ಮಲ್ಲಿ ಕೆಲವರು ಕುಟುಂಬದವರನ್ನ, ಸ್ನೇಹಿತರನ್ನ ಬಿಟ್ಟು ಬಂದಿರಬಹುದು. ಇದ್ರಿಂದ ತುಂಬ ನೋವಾಗುತ್ತೆ, ಒಂಟಿತನ ಕಾಡುತ್ತೆ, ‘ಕಷ್ಟ ಬಂದಾಗ ಸಹಾಯ ಮಾಡೋಕೆ ನಮಗೆ ಯಾರೂ ಇಲ್ವಲ್ಲಾ’ ಅನ್ನೋ ಚಿಂತೆ ಕಾಡುತ್ತೆ ಅನ್ನೋದು ಯೆಹೋವ ದೇವರಿಗೆ ಚೆನ್ನಾಗಿ ಅರ್ಥ ಆಗುತ್ತೆ. ಈ ರೀತಿಯ ಚಿಂತೆ ಪೇತ್ರನಿಗೂ ಇದ್ದಿರಬಹುದು. ಅದಕ್ಕೆ ಪೇತ್ರ ಯೇಸು ಹತ್ರ “ಗುರು, ನಾವು ಎಲ್ಲ ಬಿಟ್ಟು ನಿನ್ನ ಹಿಂದೆ ಬಂದಿದ್ದೀವಿ. ನಮಗೇನು ಸಿಗುತ್ತೆ?” ಅಂತ ಕೇಳಿದ. (ಮತ್ತಾ. 19:27) ಅದಕ್ಕೆ ಯೇಸು ನೀವೇನು ಕಳಕೊಂಡಿದ್ದೀರೋ ಅದಕ್ಕಿಂತ ನೂರರಷ್ಟು ಸಿಗುತ್ತೆ, ದೊಡ್ಡ ಕುಟುಂಬನೇ ಸಿಗುತ್ತೆ ಅಂತ ಭರವಸೆ ಕೊಟ್ಟ. (ಮಾರ್ಕ 10:29, 3೦ ಓದಿ.) ಈ ದೊಡ್ಡ ಕುಟುಂಬಕ್ಕೆ ಯಜಮಾನ ಆಗಿರೋ ಯೆಹೋವ ಅಪ್ಪ, ‘ನನ್ನ ಆರಾಧನೆ ಮಾಡೋರಿಗೆ ನಾನು ಸಹಾಯ ಮಾಡೇ ಮಾಡ್ತೀನಿ’ ಅಂತ ಮಾತುಕೊಟ್ಟಿದ್ದಾರೆ. (ಕೀರ್ತ. 9:10) ಒಂಟಿತನದಿಂದ ಹೊರಬರೋಕೆ ನಮ್ಮ ಕಡೆಯಿಂದನೂ ಸ್ವಲ್ಪ ಪ್ರಯತ್ನ ಹಾಕಬೇಕು. ಅದೇನಂತ ಈಗ ನೋಡೋಣ.

ಒಂಟಿತನದಿಂದ ಹೊರಗೆ ಬರೋಕೆ ನೀವೇನು ಮಾಡಬೇಕು?

5. ಯೆಹೋವ ದೇವರು ನಮಗೆ ಮಾಡಿರೋ ಸಹಾಯನ ನೆನಸಿಕೊಂಡ್ರೆ ನಮಗೆ ಹೇಗೆ ಸಹಾಯ ಆಗುತ್ತೆ?

5 ಯೆಹೋವ ನಮಗೆ ಹೇಗೆಲ್ಲಾ ಸಹಾಯ ಮಾಡಿದ್ದಾನೆ ಅಂತ ನೆನಪಿಸಿಕೊಳ್ಳಿ. (ಕೀರ್ತ. 55:22) ಆಗ ನಿಮ್ಮ ಮನಸ್ಸು ಹಗುರ ಆಗುತ್ತೆ. ಒಂಟಿ ಅನಿಸಲ್ಲ. ಸಹೋದರಿ ಕ್ಯಾರಲ್‌ ಅವರ ಅನುಭವ ನೋಡಿ. * ಅವ್ರಿಗೆ ಮದುವೆ ಆಗಿರಲಿಲ್ಲ. ಕುಟುಂಬದಲ್ಲಿ ಅವರೊಬ್ಬರೇ ಸತ್ಯದಲ್ಲಿದ್ರು. ಅವರು ಹೀಗೆ ಹೇಳ್ತಾರೆ: “ನಂಗೆ ಕಷ್ಟ ಬಂದಾಗೆಲ್ಲ ಯೆಹೋವ ದೇವರು ಹೇಗೆಲ್ಲಾ ಸಹಾಯ ಮಾಡಿದ್ದಾರೆ ಅಂತ ನೆನಸಿಕೊಂಡಾಗ ‘ನಾನು ಒಂಟಿಯಲ್ಲ ಯೆಹೋವ ನನ್ನ ಜೊತೆ ಇದ್ದಾರೆ’ ಅಂತ ಖುಷಿ ಆಯ್ತು. ಮುಂದೆನೂ ನನ್ನ ಜೊತೆ ಇರ್ತಾರೆ ಅನ್ನೋ ಭರವಸೆನೂ ಸಿಕ್ತು.”

6. ಒಂಟಿತನದಿಂದ ಹೊರಗೆ ಬರೋಕೆ 1 ಪೇತ್ರ 5:9, 10 ನಮಗೆ ಹೇಗೆ ಸಹಾಯ ಮಾಡುತ್ತೆ?

6 ನೋವಿಂದ ಹೊರಗೆ ಬರೋಕೆ ಸಹೋದರ ಸಹೋದರಿಯರಿಗೆ ಯೆಹೋವ ದೇವರು ಹೇಗೆ ಸಹಾಯ ಮಾಡ್ತಿದ್ದಾರೆ ಅಂತ ನೋಡಿ. (1 ಪೇತ್ರ 5:9, 10 ಓದಿ.) ಸಹೋದರ ಹಿರೋಷಿ ಅವರ ಅನುಭವ ನೋಡಿ. ಅವರು ತುಂಬಾ ವರ್ಷಗಳಿಂದ ಒಬ್ಬರೇ ಸತ್ಯದಲ್ಲಿದ್ದಾರೆ. ಅವರು ಹೀಗೆ ಹೇಳ್ತಾರೆ: “ಸಭೆಯಲ್ಲಿರೋ ಸಹೋದರ ಸಹೋದರಿಯರನ್ನ ಗಮನಿಸಿದೆ. ಅವರಲ್ಲಿ ಪ್ರತಿಯೊಬ್ರ ಜೀವನದಲ್ಲೂ ಒಂದಲ್ಲಾ ಒಂದು ಕಷ್ಟ ಇತ್ತು. ಆದ್ರೂ ಅವರು ಆ ಕಷ್ಟಗಳ ಮೇಲೆ ಗಮನ ಇಡದೆ ಯೆಹೋವ ದೇವರ ಸೇವೆಗೆ ಗಮನ ಕೊಟ್ಟಿದ್ದನ್ನ ನೋಡುವಾಗ ನಮ್ಮಂಥವರಿಗೆ ತುಂಬ ಪ್ರೋತ್ಸಾಹ ಸಿಗುತ್ತೆ.”

7. ಪ್ರಾರ್ಥನೆ ನಿಮಗೆ ಹೇಗೆ ಸಹಾಯ ಮಾಡಿದೆ?

7 ಯಾವಾಗ್ಲೂ ಪ್ರಾರ್ಥಿಸಿ, ಬೈಬಲ್‌ ಓದಿ, ಕೂಟಗಳಿಗೆ ಹಾಜರಾಗಿ. ಯೆಹೋವನ ಹತ್ರ ಮನಸ್ಸು ಬಿಚ್ಚಿ ಮಾತಾಡಿ. (1 ಪೇತ್ರ 5:7) ಮಾರ್ಸಿಲ್‌ ಅನ್ನೋ ಯುವ ಸಹೋದರಿಯ ಅನುಭವ ನೋಡಿ. ಅವಳ ಕುಟುಂಬದಲ್ಲಿ ಯಾರೂ ಸತ್ಯದಲ್ಲಿ ಇರಲಿಲ್ಲ. ಹಾಗಾಗಿ ಅವಳಿಗೆ ಒಂಟಿತನ ಕಾಡ್ತಿತ್ತು. “ನಾನು ಒಂಟಿತನದಿಂದ ಹೊರಗೆ ಬರೋಕೆ ಯಾವಾಗ್ಲೂ ಯೆಹೋವನಿಗೆ ಪ್ರಾರ್ಥನೆ ಮಾಡ್ತಿದ್ದೆ. ಅವರು ನನಗೆ ಅಪ್ಪಾ ತರ. ನನಗೆ ಅನ್ಸಿದ್ದೆಲ್ಲಾ ಮನಸ್ಸು ಬಿಚ್ಚಿ ಅವ್ರಿಗೆ ಹೇಳ್ತಾ ಇದ್ದೆ. ನನಗೆ ಒಂಟಿ ಅನಿಸಿದಾಗೆಲ್ಲ ಪ್ರಾರ್ಥನೆ ಮಾಡ್ತಿದ್ದೆ” ಅಂತ ಹೇಳಿದ್ರು.

ಒಂಟಿ ಭಾವನೆಯಿಂದ ಹೊರಗೆ ಬರೋಕೆ ನಮ್ಮ ವೆಬ್‌ಸೈಟಲ್ಲಿರೋ ಆಡಿಯೋ ರೆಕಾರ್ಡಿಂಗ್‌ ಸಹಾಯ ಮಾಡುತ್ತೆ (ಪ್ಯಾರ 8 ನೋಡಿ) *

8. ಬೈಬಲ್‌ ಓದಿ ಧ್ಯಾನಿಸೋದ್ರಿಂದ ನಿಮಗೆ ಹೇಗೆ ಸಹಾಯ ಆಗಿದೆ?

8 ಬೈಬಲನ್ನ ದಿನಾಲೂ ಓದಿ. ಯೆಹೋವ ದೇವರು ತನ್ನ ಆರಾಧಕರಿಗೆ ಪ್ರೀತಿ ತೋರಿಸಿದ ಘಟನೆಗಳ ಬಗ್ಗೆ ಓದಿ ಧ್ಯಾನಿಸ್ತಾ ಇರಿ. ಸಹೋದರಿ ಬಿಯಾಂಕಾ ಸತ್ಯ ಕಲಿತಾ ಇದ್ದಿದ್ರಿಂದ ಅವರ ಕುಟುಂಬದವರು ಬೈತಾ ಇದ್ರು. ಅವರು ಹೇಳ್ತಾರೆ: “ಬೈಬಲ್‌ ಕಾಲದಲ್ಲಿ ನನ್ನ ತರಾನೇ ಕಷ್ಟ ಅನುಭವಿಸ್ತಿದ್ದ ಯೆಹೋವನ ಆರಾಧಕರ ಬಗ್ಗೆ ಬೈಬಲಿಂದ ಓದಿ ಧ್ಯಾನಿಸಿದಾಗ ನಂಗೆ ತುಂಬಾ ಸಹಾಯ ಆಯ್ತು.” ಕೆಲವು ಸಹೋದರ ಸಹೋದರಿಯರಿಗೆ ಕೀರ್ತನೆ 27:10, ಯೆಶಾಯ 41:10ರಲ್ಲಿ ಇರೋ ಮಾತುಗಳು ತುಂಬಾ ನೆಮ್ಮದಿ ಕೊಡುತ್ತೆ. ಒಂಟಿತನದಿಂದ ಹೊರಗೆ ಬರೋಕೆ ಅಂತ ಇನ್ನೂ ಕೆಲವು ವಚನಗಳನ್ನು ಅವರು ಆಗಾಗ ನೆನಪಿಸಿಕೊಳ್ತಾರೆ ಇನ್ನು ಕೆಲವರು ಮೀಟಿಂಗಿಗೆ ತಯಾರಿ ಮಾಡುವಾಗ, ಬೈಬಲ್‌ ಓದುವಾಗ ಆಡಿಯೋ ರೆಕಾರ್ಡಿಂಗ್‌ ಕೇಳಿಸಿಕೊಳ್ತಾರೆ. ಇದ್ರಿಂದ ಅವರ ಒಂಟಿ ಭಾವನೆ ದೂರ ಆಗಿದೆ.

9. ಕೂಟಗಳು ನಿಮಗೆ ಹೇಗೆ ಸಹಾಯ ಮಾಡಿವೆ?

9 ನಿಮಗೆ ಎಷ್ಟೇ ಕಷ್ಟ ಆದ್ರೂ ಕೂಟಗಳಿಗೆ ಹೋಗೋದನ್ನ ತಪ್ಪಿಸಬೇಡಿ. ಯಾಕಂದ್ರೆ ಅಲ್ಲಿ ಕಲಿಯೋ ವಿಷ್ಯಗಳಿಂದ ನಿಮಗೆ ಪ್ರೋತ್ಸಾಹ ಸಿಗುತ್ತೆ. ಅಷ್ಟೇ ಅಲ್ಲ, ಸಹೋದರ ಸಹೋದರಿಯರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಆಗುತ್ತೆ. (ಇಬ್ರಿ. 10:24, 25) ಸಹೋದರಿ ಮಾರ್ಸೆಲ್‌ ಹೀಗೆ ಹೇಳ್ತಾರೆ, “ನಂಗೆ ನಾಚಿಕೆ ಸ್ವಭಾವ ಇದ್ರೂ ನಾನು ಒಂದು ಮೀಟಿಂಗ್‌ ಮಿಸ್‌ ಮಾಡ್ತಾ ಇರಲಿಲ್ಲ. ಒಂದಾದ್ರೂ ಉತ್ತರ ಕೊಡೋಕೆ ಪ್ರಯತ್ನ ಮಾಡ್ತಿದ್ದೆ. ಇದ್ರಿಂದ ‘ನಾನು ಒಂಟಿಯಲ್ಲ ನನ್‌ ಜೊತೆ ದೊಡ್ಡ ಕುಟುಂಬನೇ ಇದೆ’ ಅಂತ ಈಗ ಖುಷಿಯಾಗಿದ್ದೀನಿ.”

10. ನಾವ್ಯಾಕೆ ನಂಬಿಗಸ್ತ ಸಹೋದರ-ಸಹೋದರಿಯರ ಸ್ನೇಹವನ್ನ ಬೆಳೆಸಿಕೊಳ್ಳಬೇಕು?

10 ನಂಬಿಗಸ್ತ ಸಹೋದರ ಸಹೋದರಿಯರ ಸ್ನೇಹ ಬೆಳೆಸಿಕೊಳ್ಳಿ. ಅವರು ನಿಮಗಿಂತ ದೊಡ್ಡವರೇ ಆಗಿರಲಿ, ಅವರ ಸಂಸ್ಕೃತಿ ಬೇರೆನೇ ಇರಲಿ ಅವರಿಂದ ತುಂಬ ವಿಷಯ ಕಲಿಯೋಕಾಗುತ್ತೆ. ಯಾಕಂದ್ರೆ “ವಯಸ್ಸಾದವರಲ್ಲಿ ವಿವೇಕ ಇರುತ್ತೆ” ಅಂತ ಬೈಬಲ್‌ ಹೇಳುತ್ತೆ. (ಯೋಬ 12:12) ಚಿಕ್ಕ ವಯಸ್ಸಿನ ಸಹೋದರ ಸಹೋದರಿಯರಿಂದ ವಯಸ್ಸಾದವರು ಕೂಡ ತುಂಬ ವಿಷಯ ಕಲಿಯೋಕಾಗುತ್ತೆ. ಇದಕ್ಕೊಂದು ಒಳ್ಳೇ ಉದಾಹರಣೆ ದಾವೀದ, ಯೋನಾತಾನ. ಅವರಿಬ್ಬರು ಒಳ್ಳೆ ಸ್ನೇಹಿತರಾಗಿದ್ರು. ದಾವೀದ ಯೋನಾತಾನನಿಗಿಂತ ವಯಸ್ಸಲ್ಲಿ ತುಂಬ ಚಿಕ್ಕವನಾಗಿದ್ದ. ಆದ್ರೆ ಅದು ಅವರ ಸ್ನೇಹಕ್ಕೆ ಅಡ್ಡಿಯಾಗಲಿಲ್ಲ. (1 ಸಮು. 18:1) ಅವ್ರಿಗೆ ಎಷ್ಟೇ ದೊಡ್ಡ ದೊಡ್ಡ ಸಮಸ್ಯೆಗಳು ಬಂದ್ರೂ ಯೆಹೋವನ ಆರಾಧನೆಯನ್ನ ಬಿಟ್ಟುಬಿಡದೆ ಇರೋಕೆ ಒಬ್ಬರಿಗೊಬ್ಬರು ಹೆಗಲು ಕೊಟ್ಟು ಸಹಾಯ ಮಾಡ್ಕೊಂಡ್ರು. (1 ಸಮು. 23:16-18) ಸತ್ಯದಲ್ಲಿ ಒಬ್ಬರೇ ಇರೋ ಸಹೋದರಿ ಐರಿನ್‌ ಹೀಗೆ ಹೇಳ್ತಾರೆ, “ನಮ್ಮ ಸಹೋದರ ಸಹೋದರಿಯರು ಅಪ್ಪ ಅಮ್ಮನ ತರ, ಅಣ್ಣ ತಮ್ಮನ ತರ, ಅಕ್ಕ ತಂಗಿಯರ ತರ ಇದ್ದಾರೆ. ಯೆಹೋವ ದೇವರು ಇವ್ರನ್ನ ಉಪಯೋಗಿಸಿ ‘ನಮ್ಗೆ ಕುಟುಂಬ ಇಲ್ವಲ್ಲಾ’ ಅನ್ನೋ ಕೊರಗನ್ನ ನೀಗಿಸುತ್ತಿದ್ದಾರೆ.”

11. ಒಳ್ಳೆ ಸ್ನೇಹಿತರಾಗೋಕೆ ನೀವೇನು ಮಾಡ್ತೀರಿ?

11 ನಿಮಗೆ ನಾಚಿಕೆ ಸ್ವಭಾವ ಇದ್ರೆ ಹೊಸ ಫ್ರೆಂಡ್ಸ್‌ ಮಾಡಿಕೊಳ್ಳೋಕೆ ಕಷ್ಟ ಆಗಬಹುದು. ರತ್ನ ಅನ್ನೋ ಸಹೋದರಿಯ ಅನುಭವ ನೋಡಿ. ಅವ್ರಿಗೆ ಸ್ವಲ್ಪ ನಾಚಿಕೆ ಸ್ವಭಾವ ಇತ್ತು. ಕುಟುಂಬದಿಂದ ವಿರೋಧ ಬಂದ್ರೂ ಸತ್ಯ ಕಲಿತ್ರು. ಅವರು ಹೀಗೆ ಹೇಳ್ತಾರೆ: “ನಾನು ಸಹೋದರ-ಸಹೋದರಿಯರ ಸಹಾಯ ಪಡಕೊಳ್ಳೋಕೆ ಹಿಂಜರಿತಿದ್ದೆ. ಆದ್ರೆ ಹಾಗೆ ಮಾಡಬಾರದು ಅಂತ ಆಮೇಲೆ ಗೊತ್ತಾಯ್ತು.” ನಿಮ್ಮ ಸಮಸ್ಯೆ ಬಗ್ಗೆ ಬೇರೆಯವರ ಮುಂದೆ ಹೇಳಿಕೊಳ್ಳೋಕೆ ಕಷ್ಟ ಆಗಬಹುದು. ಆದ್ರೆ ಮನಸ್ಸುಬಿಚ್ಚಿ ಮಾತಾಡಿದ್ರೆನೇ ಒಳ್ಳೆ ಸ್ನೇಹಿತರನ್ನು ಮಾಡಿಕೊಳ್ಳೋಕೆ ಆಗೋದು. ನಿಮ್ಮ ಸ್ನೇಹಿತರು ನಿಮಗೆ ಸಹಾಯ ಮಾಡೋಕೆ ಮುಂದೆ ಬರ್ತಾರೆ. ಆದರೆ ನೀವು ನಿಮ್ಮ ಸಮಸ್ಯೆನಾ ಅವರ ಹತ್ರ ಹೇಳ್ಕೊಬೇಕು.

12. ಯೆಹೋವನ ಸೇವೆ ಮಾಡೋದ್ರಿಂದ ನಿಮಗೆ ಹೇಗೆ ಒಳ್ಳೆ ಸ್ನೇಹಿತರು ಸಿಕ್ತಾರೆ?

12 ಸಹೋದರ ಸಹೋದರಿಯರ ಜೊತೆ ಹೆಚ್ಚು ಸೇವೆ ಮಾಡಿದಾಗ ಒಳ್ಳೆ ಸ್ನೇಹಿತರಾಗಬಹುದು. “ಸಹೋದರ ಸಹೋದರಿಯರ ಜೊತೆ ಸೇರಿ ಸಿಹಿಸುದ್ದಿ ಸಾರುವಾಗ ಮತ್ತು ಯೆಹೋವನ ಸೇವೆಗೆ ಸಂಬಂಧಿಸಿದ ಬೇರೆ ಕೆಲಸಗಳನ್ನು ಮಾಡುವಾಗ ನಾನು ತುಂಬಾ ಸ್ನೇಹಿತರನ್ನ ಮಾಡ್ಕೊಂಡೆ. ಈ ಸ್ನೇಹಿತರ ಮೂಲಕ ಯೆಹೋವ ದೇವರು ನಂಗೆ ಯಾವಾಗ್ಲೂ ಸಹಾಯ ಮಾಡ್ತಾ ಬಂದಿದ್ದಾರೆ” ಅಂತ ಕ್ಯಾರಲ್‌ ಹೇಳ್ತಾರೆ. ಒಳ್ಳೆ ಸ್ನೇಹಿತರನ್ನ ಮಾಡಿಕೊಳ್ಳೋದ್ರಿಂದ ಎಷ್ಟೊಂದು ಪ್ರಯೋಜನ ಇದೆ ಅಲ್ವಾ. ಒಂಟಿತನದಿಂದ ಹೊರಗೆ ಬರೋಕೆ ಯೆಹೋವ ದೇವರು ನಮಗೆ ಇಂಥ ಸ್ನೇಹಿತರನ್ನ ಕೊಟ್ಟಿದ್ದಾನೆ.—ಜ್ಞಾನೋ. 17:17.

ನಾವೆಲ್ಲಾ ಒಂದೇ ಕುಟುಂಬದವರು

13. ನಮ್ಮೆಲ್ರಿಗೂ ಯಾವ ಜವಾಬ್ದಾರಿ ಇದೆ?

13 ಸಭೆಯಲ್ಲಿ ಎಲ್ಲರು ಖುಷಿಖುಷಿಯಾಗಿ ಇರೋ ತರ ನೋಡ್ಕೊಳ್ಳೋದು ನಮ್ಮೆಲ್ಲರ ಜವಾಬ್ದಾರಿ. (ಯೋಹಾ. 13:35) ನಾವು ಮಾತಾಡೋ ವಿಷ್ಯ ಮತ್ತು ನಡ್ಕೊಳ್ಳೋ ರೀತಿ ಅವರ ಮೇಲೆ ಒಳ್ಳೆ ಪ್ರಭಾವ ಬೀರಬಹುದು. ಒಬ್ಬ ಸಹೋದರಿಗೆ ಸಭೆಯವರಿಂದ ಎಷ್ಟು ಸಹಾಯ ಆಯ್ತು ಅಂತ ಅವರ ಮಾತಿಂದಲೇ ಕೇಳಿ. “ನಾನು ಸತ್ಯ ಕಲ್ತಾಗ ನಮ್ಮ ಸಹೋದರ ಸಹೋದರಿಯರೇ ನನ್ನ ಸ್ವಂತ ಕುಟುಂಬದವರ ತರ ಆದ್ರು. ತುಂಬಾ ಸಹಾಯ ಮಾಡಿದ್ರು. ಅವರು ಸಹಾಯ ಮಾಡ್ದೆ ಇದ್ದಿದ್ರೆ ನಂಗೆ ಸತ್ಯ ಕಲಿಯೋಕೆ ಆಗ್ತಿರಲಿಲ್ಲ.” ಕುಟುಂಬದಲ್ಲಿ ಬೇರೆ ಯಾರು ಸತ್ಯದಲ್ಲಿ ಇಲ್ದೆ ಇರೋದ್ರಿಂದ ಒಂಟಿತನದ ನೋವಲ್ಲಿ ಇರುವವರಿಗೆ ನಾವು ಹೇಗೆ ಪ್ರೀತಿ ತೋರಿಸಬಹುದು?

14. ಹೊಸಬರ ಜೊತೆ ಸ್ನೇಹ ಬೆಳೆಸೋಕೆ ನಾವೇನು ಮಾಡಬೇಕು?

14 ಅವರ ಜೊತೆ ಸ್ನೇಹ ಬೆಳೆಸೋಕೆ ನಾವೇ ಮುಂದಾಗಬೇಕು. ಸಭೆಗೆ ಹೊಸಬರು ಬಂದಾಗ ನಾವು ಪ್ರೀತಿಯಿಂದ ಸೇರಿಸಿಕೊಳ್ಳಬೇಕು. (ರೋಮ. 15:7) ‘ನೀವು ಹೇಗಿದ್ದೀರಾ’ ಅಂತ ಕೇಳಿ ಸುಮ್ಮನಾಗೋದಲ್ಲ. ಅವ್ರ ಜೊತೆ ಫ್ರೆಂಡ್‌ಶಿಪ್‌ ಮಾಡ್ಕೋಬೇಕು ಅಂತ ಮನಸ್ಸಲ್ಲಿಟ್ಟು ಮಾತಾಡಬೇಕು. ನಾವು ಪ್ರೀತಿ ಕಾಳಜಿಯಿಂದ ಮಾತಾಡುತ್ತಿದ್ದೇವೆ ಅಂತ ಅವ್ರಿಗೆ ಗೊತ್ತಾಗಬೇಕು. ಅವರ ಕಷ್ಟಗಳನ್ನು ಸಮಸ್ಯೆಗಳನ್ನು ತಿಳುಕೊಳ್ಳೋಕೆ ಪ್ರಯತ್ನಿಸಬೇಕು. ಹಾಗಂತ ಅವ್ರ ಸ್ವಂತ ವಿಚಾರಗಳಿಗೆ ತಲೆ ಹಾಕಬಾರದು. ಯಾಕಂದ್ರೆ ಕೆಲವರು ಕೆಲವು ವಿಷಯಗಳನ್ನ ಎಲ್ಲರ ಹತ್ರ ಹೇಳಿಕೊಳ್ಳೋಕೆ ಇಷ್ಟಪಡಲ್ಲ. ಅದಕ್ಕೆ ನಾವು ಕೆದಕಿ ಕೇಳೋಕೆ ಹೋಗಬಾರದು. ಹಿಂದೆ ಮುಂದೆ ಯೋಚ್ನೆ ಮಾಡಿ ಪ್ರಶ್ನೆಗಳನ್ನು ಕೇಳಬೇಕು. ಉದಾಹರಣೆಗೆ ‘ನೀವು ಹೇಗೆ ಸತ್ಯ ಕಲಿತ್ರಿ’ ಅಂತ ಕೇಳಬಹುದು. ಇಂಥ ಪ್ರಶ್ನೆಗಳಿಗೆ ಅವರು ಉತ್ತರ ಕೊಡುವಾಗ ತಾಳ್ಮೆಯಿಂದ ಕೇಳಿಸ್ಕೋಬೇಕು.

15. ಅನುಭವ ಇರೋ ಸಹೋದರ ಸಹೋದರಿಯರು ಹೇಗೆ ಸಹಾಯ ಮಾಡಬಹುದು?

15 ಅನುಭವ ಇರೋ ಸಹೋದರ-ಸಹೋದರಿಯರು ಅದರಲ್ಲೂ ಹಿರಿಯರು ತೋರಿಸೋ ಕಾಳಜಿಯಿಂದ ಸಭೆಯಲ್ಲಿರುವ ಎಲ್ಲರ ನಂಬಿಕೆ ಬಲವಾಗುತ್ತೆ. ಮೆಲಿಸಾ ಅನ್ನೋ ಸಹೋದರಿಯ ಉದಾಹರಣೆ ನೋಡೋಣ. ಅವ್ರ ಅಮ್ಮ ಮೆಲಿಸಾರನ್ನ ಸತ್ಯದಲ್ಲಿ ಬೆಳೆಸಿದ್ರು. ಮೆಲಿಸಾ ಹೀಗೆ ಹೇಳ್ತಾರೆ, “ಹಿರಿಯರು ಎಷ್ಟೇ ಬಿಜಿ಼ ಇದ್ರೂ ನನಗೋಸ್ಕರ ಸಮಯ ಮಾಡಿಕೊಳ್ತಿದ್ರು. ನಾನು ಸತ್ಯ ಕಲಿತಾಗಿಂದ ಹಿರಿಯರು ತಂದೆ ತರ ಕಾಳಜಿಯಿಂದ ನನ್ನನ್ನ ನೊಡ್ಕೊಂಡಿದ್ದಾರೆ. ನಾನು ಮಾತಾಡೋದನ್ನ ಕೇಳಿಸಿಕೊಳ್ಳೋಕೆ ಯಾವಾಗ್ಲೂ ರೆಡಿ ಇರುತ್ತಿದ್ರು. ಅವ್ರಿಗೆಲ್ಲ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ.” ಮೋರಿಸ್‌ ಅನ್ನೋ ಸಹೋದರನಿಗೆ ಸತ್ಯ ಕಲಿಸಿದ ಸಹೋದರ ಸತ್ಯ ಬಿಟ್ಟು ಹೋದಾಗ ಬೇಜಾರಾಯ್ತು ಒಂಟಿತನ ಕಾಡ್ತು. ಆಗ ಅವನಿಗೆ ಹಿರಿಯರು ಸಹಾಯ ಮಾಡಿದ್ರು. ಅದರ ಬಗ್ಗೆ ಸಹೋದರ ಮೋರಿಸ್‌ ಹೀಗೆ ಹೇಳ್ತಾರೆ: “ಹಿರಿಯರು ನಂಗೆ ಕಾಳಜಿ ತೋರಿಸಿದಾಗ ತುಂಬ ಖುಷಿಯಾಯ್ತು. ಅವರು ಆಗಾಗ ನನ್ನತ್ರ ಮಾತಾಡ್ತಿದ್ರು. ಸೇವೆಗೆ ಕರ್ಕೊಂಡು ಹೋಗ್ತಿದ್ರು. ಅವರು ಬೈಬಲಿಂದ ಕಲಿತ ವಿಷಯಗಳನ್ನು ನನ್ನ ಜೊತೆ ಹಂಚಿಕೊಳ್ಳುತ್ತಿದ್ದರು. ನನ್ನನ್ನ ಆಟ ಆಡೋಕೂ ಕರ್ಕೊಂಡು ಹೋಗ್ತಿದ್ರು.” ಈಗ ಮೆಲಿಸಾ ಮತ್ತು ಮೋರಿಸ್‌ ಪೂರ್ಣ ಸಮಯದ ಸೇವೆ ಮಾಡುತ್ತಿದ್ದಾರೆ.

ಒಂಟಿತನ ಕಾಡ್ತಿರುವವರ ಜೊತೆ ನಿಮಗೆ ಸಮಯ ಕಳಿಯೋಕೆ ಆಗುತ್ತಾ? (ಪ್ಯಾರ 16-19 ನೋಡಿ) *

16-17. ಒಂಟಿತನ ಕಾಡುವವರಿಗೆ ನಾವು ಇನ್ನೂ ಹೇಗೆಲ್ಲ ಸಹಾಯ ಮಾಡಬಹುದು?

16 ಅವರನ್ನ ಅರ್ಥ ಮಾಡ್ಕೊಂಡು ಬೇಕಾದ ಸಹಾಯ ಮಾಡಿ. (ಗಲಾ. 6:10) ಲಿಯೋ ಅನ್ನೋ ಸಹೋದರ ಕುಟುಂಬದಿಂದ ದೂರ ಇದ್ದು ಬೇರೆ ದೇಶದಲ್ಲಿ ಮಿಷನರಿಯಾಗಿ ಸೇವೆ ಮಾಡ್ತಿದ್ದಾರೆ. ಆ ಸಹೋದರ ಹೀಗೆ ಹೇಳ್ತಾರೆ: “ಸರಿಯಾದ ಸಮಯಕ್ಕೆ ಸಿಗೋ ಒಂದು ಚಿಕ್ಕ ಸಹಾಯನೂ ತುಂಬಾ ಖುಷಿ ನೆಮ್ಮದಿ ಕೊಡುತ್ತೆ. ನಂಗೆ ಒಂದಿನ ಕಾರ್‌ ಆಕ್ಸಿಡೆಂಟ್‌ ಆದಾಗ ನಾನು ತುಂಬಾ ಭಯಪಟ್ಟೆ. ಹೇಗೋ ಮಾಡಿ ಮನೆಗೆ ಬಂದೆ ಆದ್ರೆ ಆ ಗಾಬರಿ, ಭಯ ಇನ್ನೂ ಹೋಗಿರಲಿಲ್ಲ. ಅವತ್ತು ಒಂದು ಫ್ಯಾಮಿಲಿ ನನ್ನನ್ನ ಊಟಕ್ಕೆ ಕರೆದ್ರು. ಅಲ್ಲಿ ನಾನು ಏನು ಊಟ ಮಾಡ್ದೆ ಅಂತ ನೆನಪಿಲ್ಲ. ಆದ್ರೆ ಅವರು ತಾಳ್ಮೆಯಿಂದ ನನ್ನ ಮಾತು ಕೇಳಿಸಿಕೊಂಡಿದ್ದನ್ನ ನಾನು ಇನ್ನೂ ಮರೆತಿಲ್ಲ. ಅವತ್ತು ಅವ್ರ ಮನೆಯಿಂದ ಹೊರಗೆ ಬರುವಾಗ ನನ್ನ ಮನಸ್ಸು ಹಗುರವಾಗಿತ್ತು.”

17 ನಮ್ಗೆ ಸಮ್ಮೇಳನಗಳಿಗೆ ಅಧಿವೇಶನಗಳಿಗೆ ಹೋಗೋದಂದ್ರೆ ತುಂಬಾ ಇಷ್ಟ ಆಗುತ್ತೆ. ಯಾಕಂದ್ರೆ ಅಲ್ಲಿ ಸಹೋದರ ಸಹೋದರಿಯರ ಜೊತೆ ಇರುತ್ತೀವಿ. ಅಲ್ಲಿ ಕಲಿತ ವಿಷ್ಯಗಳನ್ನ ಮಾತಾಡುತ್ತಾ ಖುಷಿ ಖುಷಿಯಾಗಿ ಇರುತ್ತೀವಿ. ಆದ್ರೆ ಸಹೋದರಿ ಕ್ಯಾರಲ್‌ ಹೀಗೆ ಹೇಳ್ತಾರೆ: “ಕೆಲವೊಮ್ಮೆ ಸಮ್ಮೇಳನಕ್ಕೆ ಅಧಿವೇಶನಕ್ಕೆ ಹಾಜರಾಗೋದು ತುಂಬಾ ಕಷ್ಟ ಆಗುತ್ತೆ. ಯಾಕಂದ್ರೆ ನನ್ನ ಅಕ್ಕಪಕ್ಕ ನೂರಾರು ಸಾವಿರಾರು ಜನ ಇದ್ರೂನೂ ನಂಗೆ ಆ ಖುಷಿ ಇರಲ್ಲ. ಅಲ್ಲಿ ಎಲ್ಲರೂ ಕುಟುಂಬವಾಗಿ ಜೊತೆ ಜೊತೆಯಾಗಿ ಇರ್ತಾರೆ. ಆದ್ರೆ ನನಗೆ ಯಾರೂ ಇಲ್ಲ ನಾನೊಬ್ಬಳೇ ಅಂತ ಅನ್ಸುತ್ತೆ.” ಇನ್ನೂ ಕೆಲವರಿಗೆ ತಮ್ಮ ಗಂಡ ಅಥವಾ ಹೆಂಡ್ತಿ ತೀರಿಹೋದಾಗ ಮೊದಲನೇ ಸಲ ಸಮ್ಮೇಳನ ಅಥವಾ ಅಧಿವೇಶನಕ್ಕೆ ಹಾಜರಾಗೋದು ತುಂಬಾ ಕಷ್ಟ ಆಗುತ್ತೆ. ಈ ತರ ಕಷ್ಟದಲ್ಲಿರುವ ಯಾರಾದ್ರೂ ಸಹೋದರ-ಸಹೋದರಿಯರು ನಿಮಗೆ ಪರಿಚಯ ಇದ್ದಾರಾ? ಮುಂದಿನ ಸಾರಿ ಅಂಥವರನ್ನ ಅಧಿವೇಶನಗಳಿಗೆ, ಸಮ್ಮೇಳನಗಳಿಗೆ ನಿಮ್ಮ ಕುಟುಂಬದ ಜೊತೆ ಕರ್ಕೊಂಡು ಹೋಗಬಹುದಲ್ವಾ?

18. ಎರಡನೇ ಕೊರಿಂಥ 6:11-13ರಲ್ಲಿ ಇರುವ ವಿಷಯವನ್ನ ಹೇಗೆ ಪಾಲಿಸಬೇಕು?

18 ಅವರ ಜೊತೆ ಸಮಯ ಕಳೀರಿ. ‘ನಮ್ಮ ಹೃದಯದ ಬಾಗಿಲನ್ನು ವಿಶಾಲವಾಗಿ ತೆರಿಬೇಕು.’ ಅಂದ್ರೆ ಸಭೆಯವ್ರ ಜೊತೆ ಸಮಯ ಕಳೆಯುವಾಗ, ಒಂಟಿ ಭಾವನೆ ಕಾಡ್ತಾ ಇರೋರನ್ನ ಕೂಡಾ ಸೇರಿಸಿಕೊಳ್ಳಬೇಕು. (2 ಕೊರಿಂಥ 6:11-13 ಓದಿ.) “ಸಹೋದರ ಸಹೋದರಿಯರು ನನ್ನನ್ನು ಅವ್ರ ಮನೆಗೆ ಕರೆದಾಗ ಅಥವಾ ಹೊರಗಡೆ ಎಲ್ಲಾದರೂ ಕರ್ಕೊಂಡು ಹೋದಾಗ ನಂಗೆ ತುಂಬಾ ಖುಷಿಯಾಗ್ತಿತ್ತು” ಅಂತ ಸಹೋದರಿ ಮೆಲಿಸಾ ಹೇಳ್ತಾರೆ. ನಿಮ್ಮ ಸಭೆಯಲ್ಲಿ ನೀವು ಯಾರನ್ನ ಮನೆಗೆ ಕರಿಬೇಕು ಅಂತ ಅಂದ್ಕೊಂಡಿದ್ದೀರಾ?

19. ಕೆಲವು ಸಹೋದರ ಸಹೋದರಿಯರ ಜೊತೆ ನಾವು ಯಾವಾಗ ಸಮಯ ಕಳೆದ್ರೆ ಚೆನ್ನಾಗಿರುತ್ತೆ?

19 ಕುಟುಂಬದವರೆಲ್ಲ ಸೇರಿ ಹಬ್ಬ ಆಚರಣೆ ಮಾಡ್ತಾ ಇರುವಾಗ ಸತ್ಯದಲ್ಲಿ ಒಬ್ರೇ ಇರೋರಿಗೆ ಕಷ್ಟ ಆಗಬಹುದು. ಇನ್ನು ಕೆಲವರ ಪ್ರೀತಿಪಾತ್ರರು ತೀರಿಕೊಂಡಿರುತ್ತಾರೆ. ಪ್ರತಿವರ್ಷ ಆ ದಿನ ಬಂದಾಗೆಲ್ಲ ಅವ್ರ ನೆನಪು ಕಾಡುತ್ತೆ, ದುಃಖ ಆಗುತ್ತೆ. ಇಂಥ ಸಮಯದಲ್ಲಿ ನಾವು ಅವರ ಜೊತೆ ಇದ್ದು ಸಮಯ ಕಳೆದ್ರೆ ಅವರಿಗೆ ಖುಷಿ ಆಗುತ್ತೆ. ಹೀಗೆ ನಾವು ಅವ್ರಿಗೆ ನಿಜವಾದ ಕಾಳಜಿ ತೋರಿಸಬಹುದು.—ಫಿಲಿ. 2:20.

20. ಮತ್ತಾಯ 12:48-50ರಲ್ಲಿ ಯೇಸು ಹೇಳಿದ ಮಾತುಗಳು ಒಂಟಿತನ ಕಾಡುವವರಿಗೆ ಹೇಗೆ ಖುಷಿ ಕೊಡುತ್ತೆ?

20 ಒಂಟಿತನ ಕಾಡೋಕೆ ನಮ್ಗೆ ಬೇರೆ ಬೇರೆ ಕಾರಣಗಳಿರಬಹುದು. ಆದ್ರೆ ಯೆಹೋವ ದೇವರಿಗೆ ನಮ್ಮ ನೋವೆಲ್ಲಾ ಅರ್ಥ ಆಗುತ್ತೆ ಅನ್ನೋದನ್ನ ಯಾವತ್ತೂ ಮರೀಬಾರದು. ಸಹೋದರ-ಸಹೋದರಿಯರ ಮೂಲಕ ನಮ್ಗೆ ಬೇಕಾದ ಸಹಾಯ ಕೊಡ್ತಾನೆ. (ಮತ್ತಾಯ 12:48-50 ಓದಿ.) ಅದೇ ತರ ನಾವು ಸಹ ಒಂಟಿತನ ಕಾಡ್ತಾ ಇರೋ ಸಹೋದರ ಸಹೋದರಿಯರಿಗೆ ಸಹಾಯ ಮಾಡಬೇಕು. ಆಗ ನಾವು ಯೆಹೋವ ದೇವ್ರಿಗೆ ಋಣಿಗಳು ಅಂತ ತೋರಿಸ್ತೀವಿ. ಅದೇನೇ ಆದ್ರೂ ನಾವು ಯಾವತ್ತೂ ಒಂಟಿಯಲ್ಲ. ಯೆಹೋವ ದೇವರು ಯಾವಾಗ್ಲೂ ನಮ್ಮ ಜೊತೆ ಇದ್ದಾರೆ.

ಗೀತೆ 2 ಯೆಹೋವನೇ, ನಿನಗೆ ಕೃತಜ್ಞರು

^ ಪ್ಯಾರ. 5 ‘ನನಗೆ ಯಾರೂ ಇಲ್ಲ ನಾನು ಒಂಟಿ’ ಅಂತ ನಿಮಗೆ ಯಾವಾಗಾದ್ರೂ ಅನಿಸಿದೆಯಾ? ನೀವೇನೂ ಯೋಚನೆ ಮಾಡಬೇಡಿ. ನಿಮ್ಮ ನೋವು ಏನಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ನಿಮಗೆ ಸಹಾಯ ಮಾಡೋಕೆ ಯೆಹೋವ ತುದಿಗಾಲಲ್ಲಿ ನಿಂತಿದ್ದಾನೆ. ನಿಮಗೆ ಒಂಟಿತನದ ಭಾವನೆ ಕಾಡ್ತಿದ್ರೆ ನೀವೇನು ಮಾಡಬೇಕು? ನಿಮ್ಮ ಸಭೆಯಲ್ಲಿ ಯಾರಿಗಾದರೂ ಒಂಟಿತನದ ಭಾವನೆ ಕಾಡ್ತಿದ್ರೆ ಅವ್ರಿಗೆ ನೀವು ಹೇಗೆ ಸಹಾಯ ಮಾಡಬಹುದು? ಇದ್ರ ಬಗ್ಗೆ ಈ ಲೇಖನದಲ್ಲಿ ಕಲಿತೀವಿ.

^ ಪ್ಯಾರ. 5 ಕೆಲವು ಹೆಸರು ಬದಲಾಗಿದೆ.

^ ಪ್ಯಾರ. 60 ಚಿತ್ರ ವಿವರಣೆ: ಹೆಂಡತಿಯನ್ನು ಕಳಕೊಂಡಿರೋ ಒಬ್ಬ ಸಹೋದರ ನಮ್ಮ ವೆಬ್‌ಸೈಟಲ್ಲಿರೋ ಆಡಿಯೋ ರೆಕಾರ್ಡಿಂಗ್‌ ಕೇಳಿಸಿಕೊಂಡು ಪ್ರಯೋಜನ ಪಡ್ಕೊಳ್ತಿದ್ದಾರೆ.

^ ಪ್ಯಾರ. 62 ಚಿತ್ರ ವಿವರಣೆ: ಒಬ್ಬ ಸಹೋದರ ಮತ್ತು ಅವರ ಮಗಳು ವಯಸ್ಸಾದ ಒಬ್ಬ ಸಹೋದರನ ಮನೆಗೆ ಹೋಗಿ ಅವ್ರಿಗೆ ಕಾಳಜಿ ತೋರಿಸ್ತಿದ್ದಾರೆ.