ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 24

ಸೈತಾನನ ಬಲೆಯಿಂದ ಖಂಡಿತ ತಪ್ಪಿಸಿಕೊಳ್ಳೋಕೆ ಆಗುತ್ತೆ.

ಸೈತಾನನ ಬಲೆಯಿಂದ ಖಂಡಿತ ತಪ್ಪಿಸಿಕೊಳ್ಳೋಕೆ ಆಗುತ್ತೆ.

“ಸೈತಾನನ ಬಲೆಯಿಂದ ತಪ್ಪಿಸಿಕೊಳ್ಳಿ.”—2 ತಿಮೊ. 2:26.

ಗೀತೆ 52 ನಿನ್ನ ಹೃದಯವನ್ನು ಕಾಪಾಡಿಕೋ

ಕಿರುನೋಟ *

1. ಸೈತಾನ ಒಬ್ಬ ಬೇಟೆಗಾರ ಅಂತ ಹೇಗೆ ಹೇಳಬಹುದು?

ಒಂದು ಪ್ರಾಣಿಯನ್ನ ಹಿಡಿಯೋದು ಅಥವಾ ಕೊಲ್ಲೋದು ಬೇಟೆಗಾರನ ಗುರಿ. ಅದಕ್ಕೆ ಅವನು ಬೇರೆ-ಬೇರೆ ತಂತ್ರಗಳನ್ನ ಬಳಸ್ತಾನೆ. ಇದರ ಬಗ್ಗೆ ಬೈಬಲ್‌ ಕೂಡ ಹೇಳುತ್ತೆ. (ಯೋಬ 18:8-10) ಅವನು ಒಂದು ಪ್ರಾಣಿಯನ್ನ ಹಿಡಿಯೋ ಮುಂಚೆ ಆ ಪ್ರಾಣಿ ಬಗ್ಗೆ ಚೆನ್ನಾಗಿ ಕಲಿತಾನೆ. ಅದು ಎಲ್ಲಿ ಹೋಗುತ್ತೆ, ಏನು ಮಾಡುತ್ತೆ, ಅದಕ್ಕೆ ಯಾವ ಆಹಾರ ಇಷ್ಟ, ಅದನ್ನ ಹಿಡಿಯೋಕೆ ಬಲೆ ಬೀಸಬೇಕಾ, ಉರ್ಲು ಹಾಕಬೇಕಾ ಅಥವಾ ಗುಂಡಿ ತೋಡಬೇಕಾ ಅಂತ ಎಲ್ಲವನ್ನ ಚೆನ್ನಾಗಿ ತಿಳ್ಕೊಂಡಿರುತ್ತಾನೆ. ಆ ಬೇಟೆಗಾರನ ತರನೇ ಸೈತಾನ ನಮ್ಮ ಬಗ್ಗೆ ಮೊದಲು ಚೆನ್ನಾಗಿ ತಿಳ್ಕೊಳ್ತಾನೆ. ನಾವು ಎಲ್ಲಿ ಹೋಗ್ತೀವಿ, ಏನ್‌ ಮಾಡ್ತೀವಿ, ನಮಗೇನು ಇಷ್ಟ ಅನ್ನೋದೆಲ್ಲ ಗಮನಿಸ್ತಾ ಇರ್ತಾನೆ. ಆಮೇಲೆ ಅದಕ್ಕೆ ತಕ್ಕಂತೆ ನಮ್ಮ ಮೇಲೆ ಬಲೆ ಬೀಸುತ್ತಾನೆ. ಒಂದುವೇಳೆ ನಾವು ಬಲೆಗೆ ಬಿದ್ರೂ ಅದರಿಂದ ತಪ್ಪಿಸಿಕೊಳ್ಳೋಕೆ ಆಗುತ್ತೆ ಅಂತ ಬೈಬಲ್‌ ಹೇಳುತ್ತೆ. ಅಷ್ಟೇ ಅಲ್ಲ, ಸೈತಾನನ ಬಲೆಗೆ ಬೀಳದೆ ಇರೋಕೆ ನಾವೇನು ಮಾಡಬೇಕು ಅಂತನೂ ಬೈಬಲ್‌ ಹೇಳಿಕೊಡುತ್ತೆ.

ಅಹಂಕಾರ ಮತ್ತು ಅತಿಯಾಸೆ ಅನ್ನೋ ಬಲೆ ಬೀಸಿ ಸೈತಾನ ಇಲ್ಲಿ ತನಕ ತುಂಬ ಜನರನ್ನ ಹಿಡಿದಿದ್ದಾನೆ (ಪ್ಯಾರ 2 ನೋಡಿ) *

2. ಯಾವ ಎರಡು ಬಲೆಗಳನ್ನ ಸೈತಾನ ಉಪಯೋಗಿಸ್ತಾನೆ?

2 ಸೈತಾನ ಹಕ್ಕಿ ಹಿಡಿಯುವವನ ತರ ಬಲೆ ಬೀಸಿ ನಮ್ಮನ್ನ ಹಿಡಿಯೋಕೆ ನೋಡ್ತಾನೆ. (ಕೀರ್ತ. 91:3) ಅಹಂಕಾರ ಮತ್ತು ಅತಿಯಾಸೆ ಅನ್ನೋ ಬಲೆಯನ್ನ ಉಪಯೋಗಿಸಿ ನಮ್ಮನ್ನ ಹಿಡಿಯೋಕೆ ಪ್ರಯತ್ನಿಸ್ತಿದ್ದಾನೆ. * ಸಾವಿರಾರು ವರ್ಷಗಳಿಂದ ಇದನ್ನ ಉಪಯೋಗಿಸಿ ತುಂಬ ಜನರನ್ನ ಹಿಡಿದಿದ್ದಾನೆ. ಸೈತಾನ ಯಾವ್ಯಾವ ತರದ ಬಲೆಗಳನ್ನ ಬೀಸ್ತಾನೆ ಅಂತ ಯೆಹೋವ ದೇವರು ನಮಗೆ ಮುಂಚೆನೇ ಹೇಳಿ ಕೊಟ್ಟಿದ್ದಾರೆ. (2 ಕೊರಿಂ. 2:11) ಹಾಗಾಗಿ ಅವನ ಬಲೆಗೆ ಬೀಳೋ ಮುಂಚೆನೇ ನಾವು ಎಚ್ಚೆತ್ತುಕೊಳ್ಳೋಕೆ ಆಗುತ್ತೆ.

ಸೈತಾನನ ಬಲೆಯಿಂದ ತಪ್ಪಿಸ್ಕೊಳ್ಳೋಕೆ, ಅವನ ಬಲೆಗೆ ಬೀಳದೇ ಇರೋಕೆ ಏನು ಮಾಡಬೇಕಂತ ಬೈಬಲಲ್ಲಿರೋ ಉದಾಹರಣೆಗಳಿಂದ ಕಲಿಬಹುದು (ಪ್ಯಾರ 3 ನೋಡಿ) *

3. ಅಹಂಕಾರ ಮತ್ತು ಅತಿಯಾಸೆ ಅನ್ನೋ ಬಲೆಗೆ ಬಿದ್ದವರ ಉದಾಹರಣೆಗಳನ್ನ ಯೆಹೋವ ದೇವರು ಬೈಬಲಲ್ಲಿ ಯಾಕೆ ಬರೆಸಿದ್ದಾರೆ?

3 ಅಹಂಕಾರ ಮತ್ತು ಅತಿಯಾಸೆ ಎಷ್ಟು ಅಪಾಯಕಾರಿ ಅಂತ ಯೆಹೋವ ದೇವರು ಕೆಲವರ ಉದಾಹರಣೆಗಳ ಮೂಲಕ ಕಲಿಸಿದ್ದಾರೆ. ಈ ಉದಾಹರಣೆಗಳನ್ನ ನೋಡುವಾಗ ತುಂಬ ವರ್ಷದಿಂದ ಸತ್ಯದಲ್ಲಿ ಇರುವವರು ಕೂಡ ಸೈತಾನನ ಬಲೆಯಲ್ಲಿ ಬಿದ್ದುಬಿಡ್ತಾರೆ ಅಂತ ಗೊತ್ತಾಗುತ್ತೆ. ಇದರ ಅರ್ಥ ಅಹಂಕಾರ ಮತ್ತು ಅತಿಯಾಸೆ ಅನ್ನೋ ಬಲೆಗೆ ಎಲ್ಲರೂ ಬಿದ್ದೇ ಬೀಳ್ತಾರೆ ಅಂತನಾ? ಇಲ್ಲ. ಯಾಕಂದ್ರೆ ನಾವು ಬೀಳಬಾರದು ಅಂತಾನೇ ಯೆಹೋವ ದೇವರು ಈ ಉದಾಹರಣೆಗಳನ್ನ “ನಮಗೆ ಎಚ್ಚರಿಕೆಯಾಗಿ” ಬೈಬಲಲ್ಲಿ ಬರೆಸಿದ್ದಾರೆ. (1 ಕೊರಿಂ. 10:11) ಹೀಗೆ ಬೇರೆಯವರ ತಪ್ಪುಗಳಿಂದ ನಾವು ಪಾಠ ಕಲಿಯೋಕೆ ಆಗುತ್ತೆ ಮತ್ತು ಸೈತಾನ ಬಲೆ ಬೀಸುವಾಗ ಅದ್ರಿಂದ ತಪ್ಪಿಸಿಕೊಳ್ಳೋಕೆ ಆಗುತ್ತೆ.

ಅಹಂಕಾರ ಅನ್ನೋ ಬಲೆ

ಪ್ಯಾರ 4 ನೋಡಿ

4. ನಮ್ಮಲ್ಲಿ ಅಹಂಕಾರ ಬೆಳೆದುಬಿಟ್ರೆ ಯಾವ ಅಪಾಯ ಇದೆ?

4 ನಾವೆಲ್ಲರು ಅಹಂಕಾರಿಗಳಾಗಬೇಕು ಅನ್ನೋದೇ ಸೈತಾನನ ಆಸೆ. ನಮ್ಮಲ್ಲಿ ಅಹಂಕಾರ ಬಂದ್ರೆ ಅವನ ತರಾನೇ ಆಗ್ತೀವಿ, ಶಾಶ್ವತ ಜೀವ ಕಳ್ಕೊಳ್ತೀವಿ ಅಂತ ಅವನಿಗೆ ಚೆನ್ನಾಗಿ ಗೊತ್ತು. ಅದಕ್ಕೇ ಅವನು ನಮಗೆ ಈ ಬಲೆ ಬೀಸ್ತಿದ್ದಾನೆ. (ಜ್ಞಾನೋ. 16:18) ಹಾಗಾಗಿ “ಹೆಮ್ಮೆಯಿಂದ ಉಬ್ಬಿ ಸೈತಾನನಿಗೆ ಸಿಗೋ ಶಿಕ್ಷೆಗೆ ಗುರಿ” ಆಗದ ಹಾಗೆ ನೋಡಿಕೊಳ್ಳಿ ಅಂತ ಪೌಲ ಹೇಳಿದ. (1 ತಿಮೊ. 3:6, 7) ನಾವು ಎಚ್ಚರಿಕೆಗೆ ಗಮನ ಕೊಟ್ಟಿಲ್ಲಾಂದ್ರೆ ಸತ್ಯಕ್ಕೆ ಹೊಸದಾಗಿ ಬಂದಿರಲಿ ಅಥವಾ ತುಂಬ ವರ್ಷಗಳಿಂದಾನೇ ಇರಲಿ ಅಪಾಯ ತಪ್ಪಿದ್ದಲ್ಲ.

5. ನಾವು ಹೇಗೆ ಅಹಂಕಾರ ತೋರಿಸಿ ಬಿಡಬಹುದು ಅಂತ ಪ್ರಸಂಗಿ 7:16, 20 ಹೇಳುತ್ತೆ?

5 ಅಹಂಕಾರ ಇರೋ ಜನರಲ್ಲಿ ಸ್ವಾರ್ಥ ತುಂಬಿರುತ್ತೆ. ನಾವು ಯೆಹೋವ ದೇವರಿಗಿಂತ ಹೆಚ್ಚಾಗಿ ನಮ್ಮ ಬಗ್ಗೆನೇ ಯೋಚನೆ ಮಾಡಬೇಕು ಮತ್ತು ಕಷ್ಟಗಳು ಬಂದಾಗ ಯೆಹೋವ ದೇವರನ್ನ ಮರೆತು ಬಿಡಬೇಕು ಅನ್ನೋದೇ ಸೈತಾನನ ಇಷ್ಟ. ಉದಾಹರಣೆಗೆ, ಸಭೆಯಲ್ಲಿ ಯಾರಾದ್ರೂ ನಮ್ಮ ಮೇಲೆ ಸುಳ್ಳಾರೋಪ ಹಾಕಿದ್ರೆ ಅಥವಾ ಅನ್ಯಾಯ ಮಾಡಿದ್ರೆ ನಾವು ಯೆಹೋವ ದೇವರನ್ನ ಮತ್ತು ನಮ್ಮ ಸಹೋದರ-ಸಹೋದರಿಯನ್ನ ದೂರಬೇಕು ಅಂತ ಕಾಯ್ತಾ ಇರ್ತಾನೆ. ನಾವದನ್ನೇ ಮಾಡಿದಾಗ ಅವನಿಗೆ ತುಂಬ ಖುಷಿ ಆಗುತ್ತೆ. ಈ ಅನ್ಯಾಯವನ್ನೆಲ್ಲ ಸರಿ ಮಾಡೋಕೆ ನಾವೇ ಏನಾದ್ರೂ ಮಾಡಬೇಕು, ಯೆಹೋವ ದೇವರು ಸರಿ ಮಾಡೋ ತನಕ ನಾವು ಕಾಯೋಕಾಗಲ್ಲ ಅಂತ ಅಂದ್ಕೊಬೇಕು ಅನ್ನೋದು ಅವನ ಬಯಕೆ.—ಪ್ರಸಂಗಿ 7:16, 20 ಓದಿ.

6. ನೆದರ್ಲೆಂಡಿನ ಸಹೋದರಿಯಿಂದ ನೀವೇನು ಕಲಿತ್ರಿ?

6 ನೆದರ್ಲೆಂಡಲ್ಲಿರೋ ಒಬ್ಬ ಸಹೋದರಿಯ ಅನುಭವ ನೋಡಿ. ಸಭೆಯಲ್ಲಿರೋ ಸಹೋದರ ಸಹೋದರಿಯರ ತಪ್ಪುಗಳನ್ನ ನೋಡಿ ಇವರಿಗೆ ಉರಿದು ಹೋಗ್ತಿತ್ತು. ನನ್ನ ಕೈಯಲ್ಲಿ ಇದನ್ನ ಸಹಿಸಿಕೊಳ್ಳೋಕೆ ಆಗಲ್ಲ ಅಂತ ಅನಿಸಿಬಿಡ್ತು. ಆಕೆಗೆ ನಮ್ಮ ಸಹೋದರ-ಸಹೋದರಿಯರನ್ನ ಕ್ಷಮಿಸೋಕೆ ಆಗ್ತಿರಲಿಲ್ಲ. “ನಂಗೆ ಇಲ್ಲಿ ಯಾರೂ ಇಲ್ಲ, ನಾವು ಬೇರೆ ಸಭೆಗೆ ಹೋಗಿಬಿಡೋಣ” ಅಂತ ಗಂಡನಿಗೆ ಹೇಳ್ತಿದ್ದಳು. ಆದ್ರೆ ಮಾರ್ಚ್‌ 2016ರ JW ಪ್ರಸಾರ ನೋಡಿದಾಗ ಅವಳ ಯೋಚನೆ ಬದಲಾಯ್ತು. “ಸಹೋದರ ಸಹೋದರಿಯರ ತಪ್ಪುಗಳು ಕಣ್ಣಿಗೆ ಬಿದ್ದಾಗ ನಾವೇನು ಮಾಡಬೇಕು ಅಂತ ಆ ಪ್ರೋಗ್ರಾಮ್‌ನಲ್ಲಿ ಸಲಹೆಗಳನ್ನ ಕೊಟ್ಟಿದ್ದರು. ನಾನು ದೀನತೆಯಿಂದ ನನ್ನ ತಪ್ಪುಗಳನ್ನ ಸರಿ ಮಾಡೋದರ ಕಡೆಗೆ ಗಮನ ಕೊಡಬೇಕು ಬೇರೆಯವರ ತಪ್ಪುಗಳನ್ನ ಹೇಗೆ ಸರಿ ಮಾಡಬೇಕು ಅಂತ ಯೋಚಿಸುತ್ತಾ ಕೂತುಕೊಳ್ಳಬಾರದು. ನಾವೇನು ಮಾಡಬೇಕು, ಏನು ಮಾಡಬಾರದು ಅಂತ ಹೇಳೋ ಅಧಿಕಾರ ಯೆಹೋವ ದೇವರಿಗೆ ಇದೆ. ದೇವರ ಮಾತನ್ನ ಕೇಳಬೇಕು ಅಂತ JW ಪ್ರಸಾರದಿಂದ ಕಲಿತೆ” ಅಂದ್ರು. ನೋಡಿದ್ರಾ, ಸಮಸ್ಯೆಗಳು ಬಂದಾಗ ನಮ್ಮ ಬಗ್ಗೆ ಅಲ್ಲ ಯೆಹೋವ ದೇವರ ಬಗ್ಗೆ ಯೋಚನೆ ಮಾಡಬೇಕು. ನಿನ್ನ ತರ ಯೋಚನೆ ಮಾಡೋಕೆ ಸಹಾಯ ಮಾಡಪ್ಪಾ ಅಂತ ಬೇಡ್ಕೋಬೇಕು. ಬೇರೆಯವರು ಮಾಡ್ತಿರೋ ತಪ್ಪು ದೇವರಿಗೆ ಕಾಣಿಸಲ್ವಾ? ಕಾಣಿಸುತ್ತೆ. ಆದ್ರೂ ದೇವರು ಅವರ ತಪ್ಪುಗಳನ್ನ ಕ್ಷಮಿಸ್ತಿದ್ದಾರೆ. ನಾವು ಹಾಗೇ ಕ್ಷಮಿಸಬೇಕಲ್ವಾ!—1 ಯೋಹಾ. 4:20.

ಪ್ಯಾರ 7 ನೋಡಿ

7. ರಾಜ ಉಜ್ಜೀಯ ಮುಂಚೆ ಹೇಗಿದ್ದ? ಆಮೇಲೆ ಹೇಗಾದ?

7 ಯೆಹೂದದ ರಾಜ ಉಜ್ಜೀಯ ತುಂಬ ಒಳ್ಳೇ ಕೆಲಸಗಳನ್ನ ಮಾಡಿದ್ದ. ಅವನು ತುಂಬ ಯುದ್ಧಗಳನ್ನ ಗೆದ್ದಿದ್ದ, ದೊಡ್ಡ-ದೊಡ್ಡ ಪಟ್ಟಣಗಳನ್ನ ಕಟ್ಟಿದ್ದ, ಕೃಷಿಯಲ್ಲಿ ಸುಧಾರಣೆ ತಂದಿದ್ದ, ಅವನು ಸತ್ಯ ದೇವರ ಆಶೀರ್ವಾದದಿಂದ ಅಭಿವೃದ್ಧಿ ಆಗ್ತಾ ಹೋದ. (2 ಪೂರ್ವ. 26:3-7, 10) “ಆದ್ರೆ ಅವನು ಶಕ್ತಿಶಾಲಿ ಆದ್ಮೇಲೆ ಅವನ ಹೃದಯ ಅಹಂಕಾರದಿಂದ ತುಂಬಿಕೊಳ್ತು. ಅದು ಅವನನ್ನ ನಾಶಕ್ಕೆ ನಡೆಸ್ತು.” ಆಲಯದಲ್ಲಿ ಪುರೋಹಿತರು ಮಾತ್ರ ಧೂಪ ಹಾಕಬೇಕು ಅಂತ ಯೆಹೋವ ದೇವರು ಆಜ್ಞೆ ಕೊಟ್ಟಿದ್ರು. ಆದ್ರೆ ರಾಜ ಉಜ್ಜೀಯ ಯೆಹೋವನ ಮಾತನ್ನ ಕೇಳದೆ ಅಹಂಕಾರ ತೋರಿಸಿದ. ಅವನಿಗೆ ಧೂಪ ಹಾಕೋ ಅಧಿಕಾರ ಇಲ್ಲದಿದ್ರೂ ಆಲಯದಲ್ಲಿ ಧೂಪ ಹಾಕಿದ. ಯೆಹೋವ ದೇವರಿಗೆ ಇದು ಇಷ್ಟ ಆಗಲಿಲ್ಲ. ಅದಕ್ಕೆ ಉಜ್ಜೀಯನಿಗೆ ಕುಷ್ಠರೋಗ ಬರೋ ತರ ಮಾಡಿಬಿಟ್ರು. ಅವನು ಜೀವನಪೂರ್ತಿ ಕುಷ್ಠರೋಗಿ ಆಗಿದ್ದ.—2 ಪೂರ್ವ. 26:16-21.

8. ನಾವು ಅಹಂಕಾರಿಗಳು ಆಗದೆ ಇರೋಕೆ 1 ಕೊರಿಂಥ 4:6, 7 ಹೇಗೆ ಸಹಾಯ ಮಾಡುತ್ತೆ?

8 ನಾವು ಉಜ್ಜೀಯನ ತರ ಅಹಂಕಾರದಿಂದ ತಪ್ಪು ಮಾಡಿಬಿಡಬಹುದಾ? ಸಹೋದರ ಜೋಸ್‌ ಅವರ ಉದಾಹರಣೆಯನ್ನ ನೋಡಿ. ಅವರು ಒಬ್ಬ ದೊಡ್ಡ ಬಿಜಿ಼ನೆಸ್‌ ಮ್ಯಾನ್‌ ಆಗಿದ್ದರು, ಸಭೆಯಲ್ಲಿ ಒಳ್ಳೇ ಹೆಸರು ಇತ್ತು. ಅವರು ಹಿರಿಯರಾಗಿದ್ರು, ಸಮ್ಮೇಳನ, ಅಧಿವೇಶನಗಳಲ್ಲಿ ಭಾಷಣ ಕೊಡುತ್ತಿದ್ದರು. ಸರ್ಕಿಟ್‌ ಮೇಲ್ವಿಚಾರಕರೂ ಅವರ ಹತ್ತಿರ ಸಲಹೆ ಕೇಳುತ್ತಿದ್ದರು. ಆದ್ರೆ ಆಮೇಲೆ ಏನಾಯಿತು? ಅವರ ಮಾತಲ್ಲೇ ಕೇಳಿ. “ನನ್ನ ಬುದ್ಧಿವಂತಿಕೆಯಿಂದಾನೇ, ನನ್ನ ಅನುಭವದಿಂದಾನೇ ನಾನು ಇಷ್ಟೆಲ್ಲ ಮಾಡಿರೋದು ಅಂತ ಅಂದುಕೊಂಡಿದ್ದೆ. ನಂಗೆ ಎಲ್ಲಾ ಗೊತ್ತು ಅನ್ನೋ ಅಹಂಕಾರ ಇತ್ತು. ಯೆಹೋವ ದೇವರು ಕೊಟ್ಟ ಎಚ್ಚರಿಕೆಗಳನ್ನ, ಸಲಹೆಗಳನ್ನ ನಾನು ಕಿವಿಗೆ ಹಾಕೊಳ್ತಾ ಇರಲಿಲ್ಲ.” ಅವರು ಮುಂದೆ ದೊಡ್ಡ ತಪ್ಪು ಮಾಡಿಬಿಟ್ರು. ಅವರಿಗೆ ಬಹಿಷ್ಕಾರ ಆಯ್ತು. ಕೆಲವು ವರ್ಷಗಳ ನಂತರ ಅವರು ಮತ್ತೆ ಯೆಹೋವನ ಸಾಕ್ಷಿಯಾದ್ರು. ಈಗ ಅವರು ಏನು ಹೇಳ್ತಾರೆ ಅಂತ ಕೇಳಿ: “ನಮಗೆ ಸ್ಥಾನ-ಮಾನ ಮುಖ್ಯ ಅಲ್ಲ. ದೇವರ ಮಾತನ್ನ ಕೇಳೋದೇ ಮುಖ್ಯ ಅಂತ ಯೆಹೋವ ದೇವರು ನನಗೆ ಕಲಿಸಿದರು.” ನಾವು ಅಹಂಕಾರಿಗಳಾದ್ರೆ ಯೆಹೋವನ ಕೆಲಸಕ್ಕೆ ಲಾಯಕ್ಕಿಲ್ಲ. ಯಾಕಂದ್ರೆ ನಮ್ಮಲ್ಲಿರೋ ಪ್ರತಿಭೆ, ಸಾಮರ್ಥ್ಯ, ಕೌಶಲ್ಯ, ಸಭೆಯಲ್ಲಿ ಸಿಗೋ ಸುಯೋಗಗಳು ಇವೆಲ್ಲ ಯೆಹೋವ ದೇವರಿಂದನೇ ಬಂದಿರೋದು.1 ಕೊರಿಂಥ 4:6, 7 ಓದಿ.

ಅತಿಯಾಸೆ ಅನ್ನೋ ಗುಂಡಿ

ಪ್ಯಾರ 9 ನೋಡಿ

9. ಅತಿಯಾಸೆಯಿಂದ ಸೈತಾನ ಮತ್ತು ಹವ್ವ ಏನು ಮಾಡಿದ್ರು?

9 ಅತಿಯಾಸೆ ಅಂದ ತಕ್ಷಣ ಸೈತಾನ ನೆನಪಾಗ್ತಾನೆ. ಬೇರೆ ದೇವದೂತರ ತರ ಇವನಿಗೂ ಯೆಹೋವ ತುಂಬ ಸುಯೋಗಗಳನ್ನ ಕೊಟ್ಟಿದ್ರು. ಆದ್ರೆ ಅದು ಅವನಿಗೆ ಸಾಕಾಗಲಿಲ್ಲ. ಯೆಹೋವ ದೇವರಿಗೆ ಸಿಗೋ ಆರಾಧನೆ ನನಗೆ ಬೇಕು, ನಾನು ದೇವರ ತರ ಆಗಬೇಕು ಅಂತ ಅವನು ಆಸೆಪಟ್ಟ. ಅವನ ತರ ಮನುಷ್ಯರು ಕೂಡ ಅತಿಯಾಸೆ ಅನ್ನೋ ಕೆಟ್ಟ ಗುಣವನ್ನ ಬೆಳೆಸ್ಕೊಬೇಕು ಅನ್ನೋದೇ ಅವನ ಗುರಿ. ಈ ಗುರಿ ಅವನಿಗೆ ಇವಾಗ ಬಂದಿದ್ದಲ್ಲ ಆದಾಮನ ಕಾಲದಿಂದಲೂ ಇತ್ತು. ಆದಾಮ-ಹವ್ವರಿಗೆ ಊಟಕ್ಕೆ ಬೇಕಾಗಿರೋದನ್ನೆಲ್ಲಾ ಯೆಹೋವ ದೇವರು ಕೊಟ್ಟಿದ್ರು. ಅವರು ಒಂದು ಮರದ ಹಣ್ಣನ್ನ ಬಿಟ್ಟು ಆ ತೋಟದಲ್ಲಿರೋ ಬೇರೆಲ್ಲಾ ಮರದ ಹಣ್ಣನ್ನ ತಿನ್ನಬಹುದಿತ್ತು. (ಆದಿ. 2:16) ಆದ್ರೆ ಆ ಮರದ ಹಣ್ಣನ್ನ ತಿನ್ನಲೇಬೇಕು ಅನ್ನೋ ಆಸೆನ ಸೈತಾನ ಹವ್ವಳ ಮನಸ್ಸಲ್ಲಿ ಹುಟ್ಟಿಸಿದ. ಇದ್ರಿಂದ ಹವ್ವಳ ಮನಸ್ಸಲ್ಲಿ ಅತಿಯಾಸೆ ಬೆಳಿತು. ಅವಳು ಇರೋದ್ರಲ್ಲಿ ತೃಪ್ತಿ ಪಡಲಿಲ್ಲ. ಮುಂದೆ ಏನಾಯಿತು ಅಂತ ನಮಗೆಲ್ಲಾ ಚೆನ್ನಾಗಿ ಗೊತ್ತು. ಅವಳು ಪಾಪ ಮಾಡಿದಳು. ಪ್ರಾಣಾನೇ ಕಳಕೊಂಡು ಬಿಟ್ಟಳು.—ಆದಿ. 3:16, 19

ಪ್ಯಾರ 10 ನೋಡಿ

10. ಅತಿಯಾಸೆಯ ಗುಂಡಿಗೆ ಬಿದ್ದಾಗ ದಾವೀದನಿಗೆ ಏನಾಯ್ತು?

10 ಯೆಹೋವ ದೇವರು ರಾಜ ದಾವೀದನಿಗೆ ತುಂಬ ಆಶೀರ್ವಾದ ಮಾಡಿದ್ರು. ಆಸ್ತಿ-ಅಂತಸ್ತು ಕೊಟ್ಟಿದ್ರು, ಎಷ್ಟೋ ಯುದ್ಧಗಳಲ್ಲಿ ಜಯ ಕೊಟ್ಟಿದ್ರು. ದೇವರು ಲೆಕ್ಕನೇ ಇಲ್ಲದಷ್ಟು ಒಳ್ಳೇದನ್ನ ಕೊಟ್ಟಿದ್ದಾನೆ ಅಂತ ಅವನು ತೃಪ್ತಿ ಆಗಿದ್ದ. (ಕೀರ್ತ. 40:5) ಆದ್ರೆ ಬರ್ತಾ-ಬರ್ತಾ ಅವನ ಮನಸ್ಸಲ್ಲಿ ಅತಿಯಾಸೆ ಬೇರು ಬಿಡ್ತು. ದಾವೀದನಿಗೆ ತುಂಬ ಹೆಂಡತಿಯರು ಇದ್ದರೂ ಬೇರೊಬ್ಬನ ಹೆಂಡತಿ ಮೇಲೆ ಕಣ್ಣು ಹಾಕಿದ. ಹಿತ್ತಿಯನಾದ ಊರೀಯನ ಹೆಂಡತಿ ಬತ್ಷೆಬೆ ಜೊತೆ ವ್ಯಭಿಚಾರ ಮಾಡಿದ. ಅವಳು ಗರ್ಭಿಣಿ ಆದಳು. ಅಷ್ಟೇ ಅಲ್ಲ, ದಾವೀದ ಅವಳ ಗಂಡನನ್ನೂ ಕೊಲ್ಲಿಸಿದ. (2 ಸಮು. 11:2-15) ಇಷ್ಟು ವರ್ಷಗಳಿಂದ ಯೆಹೋವ ದೇವರಿಗೆ ನಿಯತ್ತಾಗಿದ್ದವನು ಈಗ ಅತಿಯಾಸೆ ಅನ್ನೋ ಗುಂಡಿಯಲ್ಲಿ ಬಿದ್ದುಬಿಟ್ಟ. ಇದ್ರಿಂದ ಅವನ ಜೀವನದಲ್ಲಿ ತುಂಬ ಕಷ್ಟಗಳನ್ನ ಎದುರಿಸಬೇಕಾಯ್ತು. ಆದ್ರೆ ಮುಂದಕ್ಕೆ ದಾವೀದ ತಪ್ಪನ್ನ ಒಪ್ಕೊಂಡು ತಿದ್ದಿಕೊಂಡ. ಯೆಹೋವ ದೇವರು ಅವನನ್ನ ಕ್ಷಮಿಸಿದ್ರಿಂದ ದಾವೀದನಿಗೆ ಖುಷಿ ಆಯ್ತು.—2 ಸಮು. 12:7-13.

11. ಎಫೆಸ 5:3, 4ರಲ್ಲಿ ಹೇಳೋ ಪ್ರಕಾರ ನಾವು ಅತಿಯಾಸೆಯ ಗುಂಡಿಗೆ ಬೀಳದೇ ಇರೋಕೆ ಏನು ಮಾಡಬೇಕು?

11 ದಾವೀದನ ಉದಾಹರಣೆಯಿಂದ ನಮಗೇನು ಗೊತ್ತಾಗುತ್ತೆ? ಯೆಹೋವ ದೇವರು ನಮಗೆ ಕೊಟ್ಟಿರೋ ವಿಷಯಗಳನ್ನ ಮರಿಯದೇ ಮನಸ್ಸಲ್ಲಿ ಇಟ್ಟುಕೊಂಡ್ರೆ ಅತಿಯಾಸೆ ಅನ್ನೋ ಗುಂಡಿಗೆ ಬೀಳದೇ ತಪ್ಪಿಸ್ಕೊಳ್ಳಬಹುದು ಅಂತ ಗೊತ್ತಾಗುತ್ತೆ. (ಎಫೆಸ 5:3, 4 ಓದಿ.) ಅಷ್ಟೇ ಅಲ್ಲ, ನಾವು ಇರೋದ್ರಲ್ಲೇ ತೃಪ್ತಿಯಾಗಿ ಇರಬೇಕು. ನಾವು, ಸತ್ಯ ಕಲಿತಾ ಇರೋರಿಗೆ ದಿನಾ ಒಂದೊಂದು ಆಶೀರ್ವಾದನ ನೆನಸ್ಕೊಂಡು ಯೆಹೋವನಿಗೆ ಥ್ಯಾಂಕ್ಸ್‌ ಹೇಳಿ ಅಂತ ಹೇಳಿಕೊಡ್ತೀವಿ. ಅಂದ್ರೆ ವಾರಕ್ಕೆ 7 ವಿಷಯಗಳಿಗೆ ಥ್ಯಾಂಕ್ಸ್‌ ಹೇಳಿದ ಹಾಗೆ ಆಯ್ತು. (1 ಥೆಸ. 5:18) ನಾವೂ ಹಾಗೇ ಮಾಡಬೇಕು. ಯೆಹೋವ ದೇವರು ನಮಗೆ ಏನೆಲ್ಲಾ ಕೊಟ್ಟಿದ್ದಾರೋ, ಅದ್ರ ಬಗ್ಗೆ ಧ್ಯಾನಿಸುವಾಗ ಋಣಿಗಳಾಗಿ ಇರುತ್ತೀವಿ, ಋಣಿಗಳಾಗಿದ್ರೆ ತೃಪ್ತರಾಗಿ ಇರುತ್ತೀವಿ. ತೃಪ್ತರಾಗಿದ್ರೆ ಅತಿಯಾಸೆ ನಮ್ಮಲ್ಲಿ ಬೆಳಿಯಲ್ಲ.

ಪ್ಯಾರ 12 ನೋಡಿ

12. ಅತಿಯಾಸೆಯಿಂದ ಇಸ್ಕರಿಯೂತ ಯೂದ ಏನು ಮಾಡಿದ?

12 ಇಸ್ಕರಿಯೂತ ಯೂದ ಅತಿಯಾಸೆಯಿಂದ ನಂಬಿಕೆದ್ರೋಹಿಯಾದ. ಅವನು ಮುಂಚೆ ಹಾಗಿರಲಿಲ್ಲ. (ಲೂಕ 6:13, 16) ಯಾಕಂದ್ರೆ ಯೇಸುನೇ ಅವನನ್ನ ಅಪೊಸ್ತಲನಾಗಿ ಆಯ್ಕೆ ಮಾಡಿದ್ದು. ಯೂದ ಒಳ್ಳೇ ವ್ಯಕ್ತಿನೇ ಆಗಿದ್ದ. ಅದಕ್ಕೆ ಹಣದ ವ್ಯವಹಾರ ನೋಡಿಕೊಳ್ಳೋಕೆ ಯೇಸು ಅವನ ಹತ್ರ ಹಣದ ಪೆಟ್ಟಿಗೆಯನ್ನ ಕೊಟ್ಟಿದ್ರು. ಯೇಸು ಮತ್ತು ಅಪೊಸ್ತಲರು ಈ ದುಡ್ಡನ್ನ ಸಿಹಿಸುದ್ದಿ ಸಾರೋ ಕೆಲಸಕ್ಕೆ ಖರ್ಚು ಮಾಡ್ತಿದ್ರು. ಇನ್ನೊಂದು ಅರ್ಥದಲ್ಲಿ ಹೇಳೋದಾದ್ರೆ ಆ ದುಡ್ಡು, ಈಗ ಲೋಕವ್ಯಾಪಕ ಕೆಲಸಕ್ಕಾಗಿ ನಾವು ಕೊಡೋ ಕಾಣಿಕೆಗೆ ಸಮ. ಅತಿಯಾಸೆಯಿಂದ ಅಪಾಯ ಆಗುತ್ತೆ ಅಂತ ಯೇಸು ಹೇಳುವಾಗೆಲ್ಲ ಯೂದ ಅವನ ಜೊತೆನೇ ಇದ್ದು ಕೇಳಿಸಿಕೊಂಡಿದ್ದರೂ ದುಡ್ಡನ್ನ ಕದಿಯೋಕೆ ಶುರುಮಾಡಿದ. (ಮಾರ್ಕ 7:22, 23; ಲೂಕ 11:39; 12:15) ಯೂದ ಯೇಸು ಕೊಟ್ಟ ಎಚ್ಚರಿಕೆಗಳನ್ನ ಕಿವಿಗೆ ಹಾಕಿಕೊಳ್ಳಲೇ ಇಲ್ಲ.

13. ಯೂದನ ಬಣ್ಣ ಯಾವಾಗ ಬಯಲಾಯ್ತು?

13 ಯೇಸು ತೀರಿಹೋಗೋಕೆ ಇನ್ನೇನು ಸ್ವಲ್ಪ ದಿನ ಇತ್ತಷ್ಟೆ. ಆಗ ಯೂದನ ಬಣ್ಣ ಬಯಲಾಯ್ತು. ಯೇಸು ಮತ್ತು ಅವನ ಶಿಷ್ಯರು ಸಿಮೋನನ ಮನೆಗೆ ಊಟಕ್ಕೆ ಹೋಗಿದ್ರು. ಅಲ್ಲಿಗೆ ಮಾರ್ಥ ಮತ್ತು ಮರಿಯನೂ ಹೋಗಿದ್ರು. ಎಲ್ರೂ ಊಟ ಮಾಡ್ತಿದ್ದಾಗ ಮರಿಯ ದುಬಾರಿಯಾದ ಸುಗಂಧ ತೈಲ ತಗೊಂಡು ಯೇಸು ತಲೆ ಮೇಲೆ ಸುರಿಯೋಕೆ ಶುರು ಮಾಡಿದಳು. ಇದನ್ನ ನೋಡಿದಾಗ ಯೂದ ಮತ್ತು ಬೇರೆ ಶಿಷ್ಯರಿಗೆ ಉರಿದುಹೋಯ್ತು. ಯಾಕಂದ್ರೆ ಆ ಸುಗಂಧ ತೈಲ ಮಾರಿದ್ರೆ ಅದ್ರಿಂದ ಬರೋ ಹಣನ ಸೇವೆಗೆ ಉಪಯೋಗಿಸಬಹುದಲ್ಲಾ ಅಂತ ಬೇರೆ ಶಿಷ್ಯರು ಯೋಚಿಸಿದ್ರು. ಆದ್ರೆ ಯೂದನ ಯೋಚನೆನೇ ಬೇರೆಯಾಗಿತ್ತು. ಅವನೊಬ್ಬ ಕಳ್ಳ, ಹಣದ ಪೆಟ್ಟಿಗೆಯಿಂದ ದುಡ್ಡು ಕದೀತಿದ್ದ. ಈ ಅತಿಯಾಸೆಯಿಂದಾನೇ ಯೂದ ಮುಂದೆ ಯೇಸುಗೆ ದ್ರೋಹ ಬಗೆದ. ಒಬ್ಬ ಗುಲಾಮನನ್ನ ಮಾರೋ ಬೆಲೆಗೆ ಯೇಸುವನ್ನ ಹಿಡಿದುಕೊಟ್ಟ.—ಯೋಹಾ. 12:2-6; ಮತ್ತಾ. 26:6-16; ಲೂಕ 22:3-6.

14. ಲೂಕ 16:13ರಲ್ಲಿರೋ ಸಲಹೆನ ಒಬ್ಬ ದಂಪತಿ ಹೇಗೆ ಪಾಲಿಸಿದ್ರು?

14 ನೀವು ಒಂದೇ ಸಮಯದಲ್ಲಿ ದೇವರಿಗೂ ದುಡ್ಡಿಗೂ ದಾಸರಾಗಿ ಇರೋಕೆ ಆಗಲ್ಲ ಅಂತ ಯೇಸು ಶಿಷ್ಯರಿಗೆ ಹೇಳಿದನು. (ಲೂಕ 16:13 ಓದಿ.) ಆ ಮಾತು ಇವತ್ತಿಗೂ ನೂರಕ್ಕೆ ನೂರು ಸತ್ಯ. ಇದಕ್ಕೊಂದು ಉದಾಹರಣೆ ರೊಮೇನಿಯಾದಲ್ಲಿರೋ ಒಂದು ದಂಪತಿ. ಅವರಿಗೆ ವಿದೇಶದಲ್ಲಿ ಒಳ್ಳೇ ಸಂಬಳ ಸಿಗೋ ಕೆಲಸ ಸಿಕ್ಕಿದಾಗ ತುಂಬ ಖುಷಿಯಾಯ್ತು. ಅವರು ಹೀಗೆ ಹೇಳ್ತಾರೆ “ನಾವು ಬ್ಯಾಂಕಲ್ಲಿ ತುಂಬ ಸಾಲ ಮಾಡ್ಕೊಂಡಿದ್ವಿ. ಯೆಹೋವ ದೇವರು ನಮ್ಮ ಕಷ್ಟಗಳಿಗೆ ಈ ಕೆಲಸದ ಮೂಲಕ ಉತ್ತರ ಕೊಡ್ತಿದಾರೆ ಅಂತ ಅಂದ್ಕೊಂಡಿದ್ವಿ. ಆದ್ರೆ ಆ ಕೆಲಸಕ್ಕೆ ಸೇರಿಕೊಂಡ್ರೆ, ಯೆಹೋವನ ಸೇವೆಗೆ ಸಮಯನೇ ಸಿಗಲ್ಲ ಅಂತ ಅವರಿಗೆ ಆಮೇಲೆ ಗೊತ್ತಾಯ್ತು. ಅದಕ್ಕೆ ಅವರು 2008, ಆಗಸ್ಟ್‌ 15ರ ಕಾವಲಿನಬುರುಜುವಿನಲ್ಲಿ ಬಂದ “ಪೂರ್ಣಹೃದಯದಿಂದ ನಿಷ್ಠೆ ಕಾಪಾಡಿಕೊಳ್ಳಿ” ಅನ್ನೋ ಲೇಖನನ ಓದಿದ್ರು. ದುಡ್ಡು ಮಾಡೋಕೆ ನಾವು ಬೇರೆ ದೇಶಕ್ಕೆ ಹೋದ್ರೆ, ನಮ್ಮ ಮತ್ತು ಯೆಹೋವ ದೇವರ ಸಂಬಂಧ ಹಾಳಾಗುತ್ತೆ. ದುಡ್ಡಿಗೊಸ್ಕರ ಯೆಹೋವನ ಜೊತೆಯಿರೋ ನಮ್ಮ ಸ್ನೇಹನ ಬಿಟ್ಟುಕೊಡಬೇಕಾಗುತ್ತೆ ಅಂತ ಅನಿಸ್ತು.” ಅದಕ್ಕವರು ಆ ಕೆಲಸ ಬೇಡ ಅಂತ ತೀರ್ಮಾನಿಸಿದ್ರು. ಆ ಸಹೋದರನಿಗೆ ಅವರಿರೋ ದೇಶದಲ್ಲೇ ಒಂದು ಕೆಲಸ ಸಿಕ್ತು. ಅದ್ರಿಂದ ಬರುತ್ತಿದ್ದ ಸಂಬಳ ಅವರ ಖರ್ಚಿಗೆ ಸಾಕಾಗ್ತಿತ್ತು. “ಯೆಹೋವನ ಕೈಯಿಂದ ಮಾಡಕ್ಕಾಗದೇ ಇರೋ ವಿಷ್ಯ ಯಾವುದೂ ಇಲ್ಲ” ಅಂತ ಆ ಸಹೋದರಿ ಹೇಳ್ತಾರೆ. ಈ ದಂಪತಿಗಳು ದುಡ್ಡಿಗೆ ದಾಸರಾಗದೇ ಯೆಹೋವನಿಗೆ ದಾಸರಾಗಿದ್ರಿಂದ ಖುಷಿಖುಷಿಯಾಗಿದ್ದಾರೆ.

ಸೈತಾನನ ಬಲೆಗೆ ಬೀಳಬೇಡಿ

15. ಸೈತಾನನ ಬಲೆಯಿಂದ ತಪ್ಪಿಸಿಕೊಳ್ಳೋಕೆ ಆಗುತ್ತೆ ಅಂತ ನಾವು ಹೇಗೆ ಹೇಳಬಹುದು?

15 ನಮ್ಮಲ್ಲಿ ಅಹಂಕಾರ ಅಥವಾ ಅತಿಯಾಸೆ ಅನ್ನೋ ಗುಣ ಒಂಚೂರು ಕಾಣಿಸಿದ್ರೂ ಏನು ಮಾಡಬೇಕು? ತಕ್ಷಣ ಅದನ್ನ ಸರಿ ಮಾಡ್ಕೊಬೇಕು. ಸೈತಾನ ನಮ್ಮನ್ನ ಜೀವಂತವಾಗಿ ಹಿಡಿದ್ರೂ ಅವನ ಬಲೆಯಿಂದ ತಪ್ಪಿಸಿಕೊಳ್ಳಬಹುದು ಅಂತ ಪೌಲ ಹೇಳಿದ. (2 ತಿಮೊ. 2:26) ದಾವೀದನಿಗೂ ಇದೇ ಆಗಿದ್ದು. ನಾತಾನ ಅವನಿಗೆ ಸಲಹೆ ಕೊಟ್ಟಾಗ ಅವನು ತನ್ನ ತಪ್ಪನ್ನ ಒಪ್ಕೊಂಡು ತಿದ್ದಿಕೊಂಡ. ಅದಕ್ಕೆ ಯೆಹೋವ ದೇವರು ಅವನನ್ನ ಕ್ಷಮಿಸಿದ್ರು. ಒಂದುವೇಳೆ ನೀವು ಸೈತಾನನ ಬಲೆಗೆ ಬಿದ್ರೆ ಯೆಹೋವ ದೇವರ ಸಹಾಯದಿಂದ ನಿಮಗೂ ತಪ್ಪಿಸಿಕೊಳ್ಳೋಕೆ ಆಗುತ್ತೆ. ಯಾಕಂದ್ರೆ ಸೈತಾನನಿಗಿಂತ ಯೆಹೋವ ದೇವರು ಶಕ್ತಿಶಾಲಿ.

16. ಸೈತಾನನ ಬಲೆಗೆ ಬೀಳದೇ ಇರೋಕೆ ನಾವೇನು ಮಾಡಬೇಕು?

16 ಸೈತಾನನ ಬಲೆಗೆ ಬಿದ್ದು ಕಷ್ಟಪಟ್ಟು ತಪ್ಪಿಸಿಕೊಳ್ಳೋದಕ್ಕಿಂತ ಬೀಳದೇ ಇರೋದೇ ಲೇಸು. ಹಾಗೆ ಬೀಳದೇ ಇರೋಕೆ ನಮ್ಮ ಸ್ವಂತ ಶಕ್ತಿಯಿಂದ ಆಗಲ್ಲ. ಅದಕ್ಕೆ ಯೆಹೋವ ದೇವರ ಸಹಾಯ ಬೇಕೇ ಬೇಕು. ಯಾಕಂದ್ರೆ ತುಂಬ ವರ್ಷಗಳಿಂದ ಸತ್ಯದಲ್ಲಿರೋ ಸಹೋದರ ಸಹೋದರಿಯರೇ ಈ ಅಹಂಕಾರ, ಅತಿಯಾಸೆ ಅನ್ನೋ ಬಲೆಗೆ ಬಿದ್ದುಬಿಟ್ಟಿದ್ದಾರೆ. ಹಾಗಾಗಿ ಪ್ರತಿದಿನ ಯೆಹೋವನ ಹತ್ರ ‘ನನ್ನಲ್ಲಿ ಏನಾದ್ರು ಈ ಗುಣಗಳಿದ್ರೆ ತೋರಿಸಿಕೊಡಪ್ಪಾ’ ಅಂತ ಬೇಡಿ. (ಕೀರ್ತ. 139:23, 24) ಸೈತಾನ ಬಲೆ ಬೀಸಿದಾಗ ಅದರಲ್ಲಿ ಬೀಳದ ಹಾಗೆ ಎಚ್ಚರವಹಿಸಿ.

17. ನಮ್ಮ ವಿರೋಧಿಯಾಗಿರೋ ಸೈತಾನನಿಗೆ ಮುಂದೆ ಏನಾಗುತ್ತೆ?

17 ಸಾವಿರಾರು ವರ್ಷಗಳಿಂದ ಸೈತಾನ ತುಂಬ ಜನರನ್ನ ಬೇಟೆಯಾಡಿದ್ದಾನೆ. ಆದ್ರೆ ಬೇಗನೆ ಯೆಹೋವ ದೇವರು ಅವನನ್ನ ಹಿಡಿದು ಬಂಧನದಲ್ಲಿಟ್ಟು ಆಮೇಲೆ ನಾಶ ಮಾಡ್ತಾನೆ. (ಪ್ರಕ. 20:1-3, 10)ಆ ದಿನಕ್ಕಾಗಿ ನಾವೆಲ್ಲರೂ ಕಾಯ್ತಾ ಇದ್ದೀವಿ. ಅಲ್ಲಿ ತನಕ ಸೈತಾನನ ಬಲೆಗೆ ಬೀಳದೇ ಇರೋ ತರ ಹುಷಾರಾಗಿರಿ. ಅಹಂಕಾರ ಮತ್ತು ಅತಿಯಾಸೆ ನಿಮ್ಮಲ್ಲಿ ಬರದೇ ಇರೋ ತರ ನೋಡ್ಕೊಳ್ಳಿ. ಏನೇ ಆದ್ರೂ ಸೈತಾನನನ್ನ ವಿರೋಧಿಸೋಕೆ ಪ್ರಯತ್ನಿಸಿ. ಆಗ ಅವನು ನಿಮ್ಮನ್ನ ಬಿಟ್ಟು ಓಡಿಹೋಗ್ತಾನೆ.—ಯಾಕೋ. 4:7.

ಗೀತೆ 61 ನಾನು ಯಾವ ರೀತಿಯ ವ್ಯಕ್ತಿಯಾಗಿರಬೇಕು?

^ ಪ್ಯಾರ. 5 ಸೈತಾನ ಒಬ್ಬ ನುರಿತ ಬೇಟೆಗಾರ. ನಾವು ಎಷ್ಟೇ ವರ್ಷದಿಂದ ಸತ್ಯದಲ್ಲಿ ಇದ್ದರೂ ನಮ್ಮನ್ನ ಹಿಡಿಯೋಕೆ ಪ್ರಯತ್ನಿಸ್ತಾನೆ. ಸೈತಾನ ನಮ್ಮಲ್ಲಿ ಅಹಂಕಾರ ಮತ್ತು ಅತಿಯಾಸೆಯನ್ನ ಬೆಳೆಸಿ ಯೆಹೋವನಿಂದ ನಮ್ಮನ್ನ ಹೇಗೆ ದೂರ ಮಾಡ್ತಾನೆ ಅಂತ ಈ ಲೇಖನದಲ್ಲಿ ಕಲಿತೀವಿ. ಈ ಎರಡು ಬಲೆಗಳನ್ನ ಬೀಸಿ ಅವನು ಈಗಾಗಲೇ ತುಂಬ ಜನರನ್ನ ಹಿಡಿದಿದ್ದಾನೆ. ಆದರೆ ನಾವು ಆ ಬಲೆಗೆ ಬೀಳದೆ ಇರೋಕೆ ಏನು ಮಾಡಬೇಕು ಅಂತ ಈ ಲೇಖನದಲ್ಲಿ ಕಲಿತೀವಿ.

^ ಪ್ಯಾರ. 2 ಪದವಿವರಣೆ: ಬೇರೆಯವರಿಗಿಂತ ನಾನೇ ಶ್ರೇಷ್ಠ ಅನ್ನೋ ಭಾವನೆನೇ ಅಹಂಕಾರ. ಹಣ, ಅಧಿಕಾರ, ಲೈಂಗಿಕತೆ ಮತ್ತು ಬೇರೆ ವಿಷಯಗಳು ಇನ್ನೂ ಬೇಕು ಅನ್ನೋ ಭಾವನೆನೇ ಅತಿಯಾಸೆ.

^ ಪ್ಯಾರ. 53 ಚಿತ್ರ ವಿವರಣೆ: ಒಬ್ಬ ಸಹೋದರ ಬೇರೆಯವರು ಕೊಡ್ತಿರೋ ಒಳ್ಳೇ ಸಲಹೆಗಳನ್ನ ಒಪ್ಪಿಕೊಳ್ಳದೇ ಅಹಂಕಾರ ತೋರಿಸ್ತಿದ್ದಾರೆ. ಒಬ್ಬ ಸಹೋದರಿ ಈಗಾಗಲೇ ತುಂಬ ವಸ್ತುಗಳನ್ನ ತಗೊಂಡಿದ್ದಾರೆ, ಆದ್ರೂ ಇನ್ನೂ ಬೇಕು ಅಂತ ಆಸೆ ಪಡ್ತಿದ್ದಾರೆ.

^ ಪ್ಯಾರ. 55 ಚಿತ್ರ ವಿವರಣೆ: ದೇವದೂತನೂ ಅಹಂಕಾರಿಯಾದ, ಉಜ್ಜೀಯನೂ ಅಹಂಕಾರಿಯಾದ. ತಿನ್ನಬಾರದು ಅಂತ ಯೆಹೋವ ದೇವರು ಹೇಳಿದ ಮರದ ಹಣ್ಣನ್ನ ಹವ್ವ ತಿನ್ನೋಕೆ, ದಾವೀದ ಬತ್ಷೆಬೆ ಜೊತೆ ವ್ಯಭಿಚಾರ ಮಾಡೋಕೆ, ಯೂದ ಹಣ ಕದಿಯೋಕೆ ಅತಿಯಾಸೆನೇ ಕಾರಣ.