ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 27

ಯೆಹೋವನ ತರ ನಾವೂ ಸಹಿಸಿಕೊಳ್ಳೋಣ

ಯೆಹೋವನ ತರ ನಾವೂ ಸಹಿಸಿಕೊಳ್ಳೋಣ

“ನಿಮ್ಮ ತಾಳ್ಮೆನೇ ನಿಮ್ಮ ಪ್ರಾಣ ಕಾಪಾಡುತ್ತೆ.”—ಲೂಕ 21:19.

ಗೀತೆ 78 ದೀರ್ಘ ಸಹನೆ

ಕಿರುನೋಟ *

1-2. ಯೆಶಾಯ 65:16, 17ರಲ್ಲಿರೋ ಯೆಹೋವ ದೇವರ ಮಾತುಗಳನ್ನ ನಾವು ಯಾಕೆ ಮನಸ್ಸಲ್ಲಿ ಇಟ್ಟುಕೊಳ್ಳಬೇಕು?

ಇಸವಿ 2017ರ “ಎಂದಿಗೂ ಪ್ರಯತ್ನ ಬಿಡಬೇಡಿ” ಅನ್ನೋ ಅಧಿವೇಶನವನ್ನ ನಾವೆಲ್ಲ ಹಾಜರಾಗಿದ್ವಿ. ನಮಗೆ ಬರೋ ಕಷ್ಟಗಳನ್ನ ಹೇಗೆ ಸಹಿಸ್ಕೊಬೇಕು ಅಂತ ಆ ಅಧಿವೇಶನದಲ್ಲಿ ಕಲಿತ್ವಿ. ಅದಾಗಿ 4 ವರ್ಷ ಆಯ್ತು. ನಾವಿನ್ನೂ ಈ ಸೈತಾನನ ಲೋಕದಲ್ಲಿ ಕಷ್ಟಗಳನ್ನ ಸಹಿಸಿಕೊಳ್ತಾ ಇದ್ದೀವಿ.

2 ನಿಮಗೆ ಇತ್ತೀಚೆಗೆ ಸಹಿಸ್ಕೊಳ್ಳೋಕೆ ಕಷ್ಟ ಆಗೋ ಯಾವುದಾದ್ರು ಘಟನೆ ನಡೀತಾ? ಕೆಲವರಿಗೆ ತುಂಬ ಹತ್ರದವರು ತೀರಿಹೋಗಿದ್ದಾರೆ, ದೊಡ್ಡ ಕಾಯಿಲೆಯಿಂದ ನರಳುತ್ತಿದ್ದಾರೆ, ವಯಸ್ಸಾಗಿರೋದ್ರಿಂದ ತುಂಬ ಕಷ್ಟಪಡುತ್ತಿದ್ದಾರೆ, ನೈಸರ್ಗಿಕ ವಿಪತ್ತು, ಅಪರಾಧ ಮತ್ತು ಹಿಂಸೆಯನ್ನ ಅನುಭವಿಸುತ್ತಿದ್ದಾರೆ, ಕೋವಿಡ್‌ 19 ಬಂದಿದ್ರಿಂದ ಜೀವನಾನೇ ತಲೆಕೆಳಗಾಗಿದೆ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ತರದ ಕಷ್ಟಗಳು ಬಂದಿವೆ. ಆದ್ರೂ ನಾವು ಹೊಸ ಲೋಕಕ್ಕೋಸ್ಕರ ಕಾಯ್ತಾ ಇದ್ದೀವಿ. ಅಲ್ಲಿ ಯಾವ ಕಷ್ಟನೂ ಇರಲ್ಲ. ಈಗ ನಾವು ಅನುಭವಿಸುತ್ತಿರೋ ಕಷ್ಟಗಳ ನೆನಪೂ ಬರಲ್ಲ.ಯೆಶಾಯ 65:16, 17 ಓದಿ.

3. ನಾವೀಗ ಏನನ್ನ ಕಲಿಬೇಕು ಮತ್ತು ಯಾಕೆ?

3 ಈ ಸೈತಾನನ ಲೋಕದಲ್ಲಿ ಜೀವನ ಸಾಗಿಸೋದು ತುಂಬ ಕಷ್ಟ. ಮುಂದೆ ಇನ್ನೂ ಕಷ್ಟ ಆಗುತ್ತೆ. (ಮತ್ತಾ. 24:21) ಅದನ್ನೆಲ್ಲ ಸಹಿಸ್ಕೊಳ್ಳೋಕೆ ನಾವು ಈಗಿನಿಂದಲೇ ಕಲೀಬೇಕು. ಯಾಕಂದ್ರೆ “ನಿಮ್ಮ ತಾಳ್ಮೆನೇ ನಿಮ್ಮ ಪ್ರಾಣ ಕಾಪಾಡುತ್ತೆ” ಅಂತ ಯೇಸು ಹೇಳಿದ್ದಾನೆ. (ಲೂಕ 21:19) ಈಗಾಗ್ಲೇ ತುಂಬ ಜನ ನಮ್‌ ತರ ಕಷ್ಟಗಳನ್ನ ಸಹಿಸಿಕೊಂಡಿದ್ದಾರೆ. ಅವರಿಂದನೂ ನಾವು ಕಲೀಬಹುದು.

4. ಸಹಿಸಿಕೊಳ್ಳೋ ವಿಷಯದಲ್ಲಿ ಯೆಹೋವ ದೇವರೇ ಯಾಕೆ ಎಲ್ಲರಿಗಿಂತ ಒಳ್ಳೇ ಮಾದರಿ?

4 ಸಹಿಸಿಕೊಳ್ಳೋ ವಿಷಯದಲ್ಲಿ ಎಲ್ಲರಿಗಿಂತ ಒಳ್ಳೇ ಮಾದರಿ ಇಟ್ಟಿರೋದು ಯಾರು ಗೊತ್ತಾ? ಯೆಹೋವ ದೇವರು. ಯಾಕಂದ್ರೆ ಸೈತಾನನ ಲೋಕದಲ್ಲಿ ತುಂಬಿರೋ ಕಷ್ಟಗಳನ್ನ ಚಿಟಿಕೆ ಹೊಡಿಯುವಷ್ಟರಲ್ಲಿ ಸರಿ ಮಾಡೋ ಶಕ್ತಿ ಯೆಹೋವ ದೇವರಿಗಿದೆ. ಆದ್ರೂ ಅದನ್ನ ಮಾಡಬೇಕಾಗಿರೋ ದಿನಕ್ಕೋಸ್ಕರ ಕಾಯ್ತಾ ಇದ್ದಾರೆ. (ರೋಮ. 9:22) ಅಲ್ಲಿ ತನಕ ಅವರು ಎಷ್ಟೋ ವಿಷಯಗಳನ್ನ ಸಹಿಸ್ಕೊಳ್ತಾರೆ. ಅದ್ರಲ್ಲಿ 9 ವಿಷಯಗಳನ್ನ ನಾವೀಗ ನೋಡೋಣ.

ಯೆಹೋವ ಏನನ್ನೆಲ್ಲಾ ಸಹಿಸ್ಕೊಳ್ತಾ ಇದ್ದಾರೆ?

5. (ಎ) ಯೆಹೋವ ದೇವರ ಹೆಸರು ಹೇಗೆ ಹಾಳಾಯ್ತು? (ಬಿ) ಅದರ ಬಗ್ಗೆ ನಿಮಗೆ ಏನು ಅನಿಸುತ್ತೆ?

5 ಯೆಹೋವ ದೇವರ ಹೆಸರು ಹಾಳಾಗಿದೆ. ಎಲ್ಲರೂ ತನ್ನ ಹೆಸರನ್ನ ಗೌರವಿಸಬೇಕು ಅಂತ ದೇವರು ಬಯಸ್ತಾರೆ. ಆತನಿಗೆ ತನ್ನ ಹೆಸರಿನ ಬಗ್ಗೆ ಹೆಮ್ಮೆಯಿದೆ. (ಯೆಶಾ. 42:8) ಸುಮಾರು 6 ಸಾವಿರ ವರ್ಷಗಳ ಹಿಂದೆ ದೇವರ ಹೆಸರಿಗೆ ಕಳಂಕ ಬಂತು. (ಕೀರ್ತ. 74:10, 18, 23) ಏದೆನ್‌ ತೋಟದಲ್ಲಿ ಪಿಶಾಚ ಆ ಕಳಂಕವನ್ನ ತಂದ. ಆದಾಮ ಹವ್ವ ಸಂತೋಷವಾಗಿರೋಕೆ ಬೇಕಾಗಿರೋದನ್ನ ದೇವರು ಕಿತ್ತುಕೊಂಡಿದ್ದಾನೆ ಅಂತ ಆರೋಪ ಹಾಕಿ ದೇವರ ಹೆಸರನ್ನ ಹಾಳು ಮಾಡಿದ. (ಆದಿ. 3:1-5) ಮನುಷ್ಯರಿಗೆ ಬೇಕಾಗಿರೋದನ್ನ ಕೊಡ್ತಿಲ್ಲ ಅನ್ನೋ ಆರೋಪ ಯೆಹೋವನ ಮೇಲೆ ಇನ್ನೂ ಹಾಗೇ ಇದೆ. ತನ್ನ ತಂದೆ ಹೆಸರು ಹಾಳಾಗಿರೋದ್ರ ಬಗ್ಗೆ ಯೇಸುವಿಗೂ ಬೇಜಾರಿದೆ. ಅದಕ್ಕೆ “ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ” ಅಂತ ಪ್ರಾರ್ಥನೆ ಮಾಡೋಕೆ ತನ್ನ ಶಿಷ್ಯರಿಗೆ ಕಲಿಸಿದ.—ಮತ್ತಾ. 6:9.

6. ಯೆಹೋವ ದೇವರು ತನಗೆ ಆಳೋಕೆ ಅಧಿಕಾರ ಇದೆ ಅಂತ ಸಾಬೀತು ಮಾಡೋಕೆ ಯಾಕೆ ಸಮಯ ತಗೊಂಡಿದ್ದಾರೆ?

6 ದೇವರ ಅಧಿಕಾರದ ವಿರುದ್ಧ ದಂಗೆ. ಯೆಹೋವ ದೇವರಿಗೆ ಸ್ವರ್ಗ ಮತ್ತು ಭೂಮಿನ ಆಳೋ ಅಧಿಕಾರ ಇದೆ. ಅವರಷ್ಟು ಚೆನ್ನಾಗಿ ಆಳೋಕೆ ಯಾರಿಂದಾನೂ ಆಗಲ್ಲ. (ಪ್ರಕ. 4:11) ಆದ್ರೆ ಸೈತಾನ, ದೇವರಿಗೆ ಆ ಅಧಿಕಾರ ಇಲ್ಲ ಅಂತ ದೇವದೂತರು ಮನುಷ್ಯರು ನೆನಸೋ ಹಾಗೆ ಮಾಡಿ ಅವರನ್ನ ದೇವರ ವಿರುದ್ಧ ಎತ್ತಿಕಟ್ಟಿದ. ತನಗೆ ಅಧಿಕಾರ ಇದ್ಯಾ ಇಲ್ವಾ ಅಂತ ಯೆಹೋವ ದೇವರು ಆಗಲೇ ತೋರಿಸಿಕೊಡೋಕೆ ಹೋಗಲಿಲ್ಲ. ಮನುಷ್ಯರು ತಮ್ಮನ್ನೇ ಆಳಿಕೊಳ್ಳೋಕೆ ಆಗಲ್ಲ ಅಂತ ಅವರಿಗೆ ಅರ್ಥ ಮಾಡಿಸೋಕೆ ಸಾಕಷ್ಟು ಸಮಯ ಕೊಟ್ರು. (ಯೆರೆ. 10:23) ಇಷ್ಟು ದಿನ ತಾಳ್ಮೆಯಿಂದ ಇದ್ದಿದ್ರಿಂದ ಯೆಹೋವ ದೇವರಿಗೆ ಮಾತ್ರನೇ ಇಡೀ ವಿಶ್ವವನ್ನ ಆಳೋಕೆ ಅಧಿಕಾರ ಇರೋದು ಮತ್ತು ಆತನ ಸರ್ಕಾರಕ್ಕೆ ಮಾತ್ರ ಭೂಮಿಯಲ್ಲಿ ನಿಜವಾದ ಶಾಂತಿ ನೆಮ್ಮದಿ ತರೋಕೆ ಆಗೋದು ಅಂತ ಸಾಬೀತಾಗುತ್ತೆ.

7. (ಎ) ಯೆಹೋವ ದೇವರ ವಿರುದ್ಧ ಯಾರೆಲ್ಲಾ ತಿರುಗಿಬಿದ್ರು? (ಬಿ) ಈ ತರ ತಿರುಗಿಬೀಳುವವರಿಗೆ ದೇವರು ಮುಂದೆ ಏನು ಮಾಡ್ತಾರೆ?

7 ಯೆಹೋವ ದೇವರ ವಿರುದ್ಧ ಆತನ ಮಕ್ಕಳೇ ತಿರುಗಿಬಿದ್ರು. ಯೆಹೋವ ದೇವರು ದೇವದೂತರನ್ನ, ಮನುಷ್ಯರನ್ನ ಪರಿಪೂರ್ಣವಾಗಿ ಸೃಷ್ಟಿ ಮಾಡಿದ್ರು. ಆದ್ರೆ ಒಬ್ಬ ದೇವದೂತನಾಗಿದ್ದ ಸೈತಾನ ದೇವರ ವಿರುದ್ಧ ತಿರುಗಿಬಿದ್ದು ವಿರೋಧಿಯಾದ. ಅಷ್ಟೇ ಅಲ್ಲ, ಪರಿಪೂರ್ಣರಾಗಿದ್ದ ಆದಾಮ ಹವ್ವನೂ ದೇವರ ವಿರುದ್ಧ ತಿರುಗಿಬೀಳೋ ತರ ಮಾಡಿದ. ಹೋಗ್ತಾ ಹೋಗ್ತಾ ಇವರ ಜೊತೆ ಬೇರೆ ದೇವದೂತರು, ಮನುಷ್ಯರು ಸೇರಿಕೊಂಡ್ರು. (ಯೂದ 6) ತನಗೇ ಅಂತ ಆರಿಸಿಕೊಂಡಿದ್ದ ಇಸ್ರಾಯೇಲ್‌ ಜನರೂ ಸುಳ್ಳು ದೇವರುಗಳನ್ನ ಆರಾಧನೆ ಮಾಡಿದ್ರು. (ಯೆಶಾ. 63:8, 10) ಇವ್ರೆಲ್ಲಾ ಹೀಗೆ ನಂಬಿಕೆ ದ್ರೋಹ ಮಾಡಿದಾಗ ಯೆಹೋವ ದೇವರಿಗೆ ತುಂಬ ಬೇಜಾರಾಯ್ತು. ಇದನ್ನೆಲ್ಲಾ ದೇವರು ಸಹಿಸಿಕೊಂಡ್ರು. ಇನ್ನೂ ಸಹಿಸಿಕೊಳ್ತಾನೇ ಇದ್ದಾರೆ. ಆದ್ರೆ ಈ ತರ ತಿರುಗಿಬೀಳುವವರನ್ನ ಮುಂದೆ ನಾಶ ಮಾಡ್ತಾರೆ. ಆಗ ಇಂಥವರನ್ನ ಸಹಿಸಿಕೊಳ್ತಾ ಇರೋ ಯೆಹೋವನ ಜನರಿಗೆ ನೆಮ್ಮದಿ ಸಿಗುತ್ತೆ.

8-9. (ಎ) ಯೆಹೋವ ದೇವರ ಬಗ್ಗೆ ಸೈತಾನ ಏನೆಲ್ಲಾ ಸುಳ್ಳು ಹೇಳಿದ್ದಾನೆ? (ಬಿ) ನಾವೇನು ಮಾಡಬೇಕು?

8 ಸೈತಾನ ಯೆಹೋವ ದೇವರ ಬಗ್ಗೆ ಸುಳ್ಳುಗಳನ್ನ ಹೇಳ್ತಾ ಬಂದಿದ್ದಾನೆ. ಯೋಬ ಯೆಹೋವ ದೇವರಿಗೆ ನಿಯತ್ತಾಗಿದ್ದ. ಆದ್ರೆ ಅವನು ಸ್ವಾರ್ಥದಿಂದ ಯೆಹೋವನ ಆರಾಧನೆ ಮಾಡ್ತಿದ್ದಾನೆ ಅಂತ ಸೈತಾನ ಸುಳ್ಳು ಹೇಳಿದ. ಹೀಗೆ ಯೆಹೋವ ದೇವರ ಹೆಸರನ್ನ ಆತನ ಸೇವಕರ ಹೆಸರನ್ನ ಸೈತಾನ ಹಾಳು ಮಾಡಿದ. (ಯೋಬ 1:8-11; 2:3-5) ಅವನು ಇವತ್ತೂ ಅದನ್ನೇ ಮಾಡ್ತಿದ್ದಾನೆ. (ಪ್ರಕ. 12:10) ಸೈತಾನ ಹೇಳಿರೋದೆಲ್ಲ ಸುಳ್ಳು, ನಾವು ಯೆಹೋವ ದೇವರನ್ನ ಆರಾಧನೆ ಮಾಡ್ತಿರೋದು ಪ್ರೀತಿಯಿಂದ ಸ್ವಾರ್ಥದಿಂದ ಅಲ್ಲ ಅಂತ ನಾವು ಸಾಬೀತು ಮಾಡಬೇಕು. ಅದಕ್ಕಾಗಿ ಏನೇ ಕಷ್ಟ ಬಂದ್ರೂ ನಾವು ಸಹಿಸಿಕೊಳ್ಳಬೇಕು, ಯೆಹೋವ ದೇವರಿಗೆ ನಿಯತ್ತಾಗಿ ಇರಬೇಕು. ಹೀಗೆ ನಾವು ಸಹಿಸಿಕೊಂಡ್ರೆ, ಯೋಬನ ತರ ನಮಗೂ ಆಶೀರ್ವಾದ ಸಿಗುತ್ತೆ.—ಯಾಕೋ. 5:11.

9 ಸೈತಾನ ಧರ್ಮಗುರುಗಳ ಬಾಯಿಂದ “ಯೆಹೋವ ದೇವರು ಕ್ರೂರಿ, ನಮಗೆ ಅವನೇ ಕಷ್ಟ ಕೊಡ್ತಿರೋದು” ಅಂತ ಹೇಳಿಸ್ತಿದ್ದಾನೆ. ಯಾವುದಾದ್ರು ಮಗು ತೀರಿಕೊಂಡಾಗ “ಸ್ವರ್ಗದಲ್ಲಿ ದೇವದೂತರು ಬೇಕಾಗಿದ್ದಾರೆ ಅದಕ್ಕೆ ದೇವರು ಮಕ್ಕಳನ್ನ ಕರ್ಕೊಂಡ” ಅಂತ ಕೆಲವು ಧರ್ಮಗುರುಗಳು ಹೇಳ್ತಾರೆ. ಸೈತಾನ ದೇವರ ಬಗ್ಗೆ ಎಷ್ಟು ದೊಡ್ಡ-ದೊಡ್ಡ ಸುಳ್ಳುಗಳನ್ನ ಹೇಳಿದ್ದಾನೆ ನೋಡಿ. ಆದ್ರೆ ಯೆಹೋವ ದೇವರು ಏನಂತ ನಮಗೆ ಚೆನ್ನಾಗಿ ಗೊತ್ತು. ಅವರು ಯಾವತ್ತೂ ನಮಗೆ ಕಷ್ಟ ಕೊಡಲ್ಲ. ಅದಕ್ಕೆ ನಮಗೆ ಹುಷಾರಿಲ್ಲದಾಗ ಅಥವಾ ಯಾರಾದ್ರು ತೀರಿಕೊಂಡಾಗ ನಾವು ದೇವರನ್ನ ಬೈಯಲ್ಲ. ಮುಂದೆ ಇದನ್ನೆಲ್ಲ ಸರಿ ಮಾಡೇ ಮಾಡ್ತಾರೆ ಅಂತ ನಂಬುತ್ತೀವಿ. ಯೆಹೋವ ತುಂಬ ಒಳ್ಳೇ ದೇವರು, ನಮ್ಮನ್ನ ತುಂಬ ಪ್ರೀತಿಸ್ತಾರೆ ಅಂತ ಜನರಿಗೆ ಹೇಳ್ತೀವಿ. ಆಗ ದೇವರು ಹಂಗಿಸುವವನಿಗೆ ಸರಿಯಾಗಿ ಉತ್ತರ ಕೊಡಕ್ಕಾಗುತ್ತೆ.—ಜ್ಞಾನೋ. 27:11.

10. ಕೀರ್ತನೆ 22:23, 24ರಿಂದ ಯೆಹೋವ ದೇವರ ಬಗ್ಗೆ ಏನು ಗೊತ್ತಾಗುತ್ತೆ?

10 ಯೆಹೋವನ ಜನ್ರು ಕಷ್ಟ ಪಡ್ತಿದ್ದಾರೆ. ಯೆಹೋವ ಕನಿಕರ, ದಯೆ ಇರೋ ದೇವರು. ನಾವು ಅಪರಿಪೂರ್ಣತೆಯಿಂದ, ಕಾಯಿಲೆಯಿಂದ, ಹಿಂಸೆಯಿಂದ ಬೇರೇನೇ ಕಾರಣದಿಂದ ಕಷ್ಟ ಪಡೋದನ್ನ, ಅಳೋದನ್ನ ದೇವರಿಗೆ ನೋಡಕ್ಕಾಗಲ್ಲ. (ಕೀರ್ತನೆ 22:23, 24 ಓದಿ.) ಅವರಿಗೆ ತುಂಬ ಬೇಜಾರಾಗುತ್ತೆ. ನಮ್ಮ ನೋವನ್ನ ಅರ್ಥ ಮಾಡಿಕೊಳ್ತಾರೆ. ನಮ್ಮ ಕಷ್ಟವನ್ನ ತೆಗೆದುಹಾಕಬೇಕು ಅಂತ ದೇವರಿಗೆ ಆಸೆಯಿದೆ. ಅದನ್ನ ದೇವರು ಖಂಡಿತ ಮಾಡ್ತಾರೆ. (ವಿಮೋಚನಕಾಂಡ 3:7, 8 ಮತ್ತು ಯೆಶಾಯ 63:9 ಹೋಲಿಸಿ.) ಮುಂದೆ ಒಂದಿನ ನಮ್ಮ ಕಣ್ಣೀರನ್ನೆಲ್ಲಾ ಒರಸಿಬಿಡ್ತಾರೆ. ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ.—ಪ್ರಕ. 21:4.

11. ತೀರಿಹೋಗಿರೋ ತನ್ನ ಸೇವಕರ ಬಗ್ಗೆ ಯೆಹೋವ ದೇವರು ಏನನ್ನೆಲ್ಲಾ ನೆನಸಿಕೊಳ್ತಾ ಇರಬಹುದು?

11 ತನ್ನ ಸ್ನೇಹಿತರು ತೀರಿಹೋದಾಗ ದೇವರಿಗೆ ಬೇಜಾರಾಗುತ್ತೆ. ಸಾಯೋ ತನಕ ನಿಯತ್ತಾಗಿದ್ದ ತನ್ನ ಸೇವಕರನ್ನ ಯೆಹೋವ ದೇವರು ಮತ್ತೆ ನೋಡೋಕೆ ಕಾಯ್ತಾ ಇದ್ದಾರೆ. (ಯೋಬ 14:15) ತನ್ನ ಸ್ನೇಹಿತ ಅಬ್ರಹಾಮನನ್ನ ದೇವರು ಅದೆಷ್ಟು ಸಾರಿ ಜ್ಞಾಪಿಸಿಕೊಂಡಿರುತ್ತಾರೋ ಏನೋ. (ಯಾಕೋ. 2:23) ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಜೊತೆ ಮಾತಾಡೋ ಹಾಗೆ ಮೋಶೆ ಜೊತೆ ಮಾತಾಡೋಕೆ ದೇವರು ಕಾಯ್ತಾ ಇರಬಹುದಲ್ವಾ? (ವಿಮೋ. 33:11) ದಾವೀದ ಮತ್ತು ಬೇರೆ ಕೀರ್ತನೆಗಾರರ ಬಾಯಿಂದ ಸ್ತುತಿಯ ಹಾಡುಗಳನ್ನ ಕೇಳಿಸಿಕೊಳ್ಳೋಕೆ ತುದಿಗಾಲಲ್ಲಿ ನಿಂತಿರಬೇಕಲ್ವಾ? (ಕೀರ್ತ. 104:33) ತನ್ನ ಗೆಳೆಯರಾದ ಇವರೆಲ್ಲಾ ತೀರಿಹೋಗಿದ್ರೂ ಯೆಹೋವ ದೇವರು ಇವರನ್ನ ಮರೆತಿಲ್ಲ. (ಯೆಶಾ. 49:15) ಅವರ ಬಗ್ಗೆ ಪ್ರತಿಯೊಂದನ್ನೂ ದೇವರು ನೆನಪಿಟ್ಟುಕೊಂಡಿದ್ದಾರೆ. ಅವರೆಲ್ಲಾ ಆತನ ದೃಷ್ಟಿಯಲ್ಲಿ ಇನ್ನೂ ಬದುಕಿದ್ದಾರೆ. (ಲೂಕ 20:38) ಮುಂದೆ ಒಂದಿನ ಅವರಿಗೆ ಮತ್ತೆ ಜೀವ ಕೊಟ್ಟು ಎಬ್ಬಿಸ್ತಾರೆ. ಅವರ ಪ್ರಾರ್ಥನೆಗಳನ್ನ ಮತ್ತೆ ಕೇಳಿಸಿಕೊಳ್ತಾರೆ. ಅವರು ಮಾಡೋ ಆರಾಧನೆ ಮತ್ತು ಸೇವೆಯನ್ನ ನೋಡಿ ಮತ್ತೆ ಖುಷಿಪಡ್ತಾರೆ. ನಮ್ಮವರು ಯಾರಾದ್ರು ತೀರಿಕೊಂಡು ಅವರ ನೆನಪು ಕಾಡ್ತಿದ್ರೆ ಇದನ್ನೆಲ್ಲಾ ಮನಸ್ಸಲ್ಲಿ ಇಟ್ಟುಕೊಳ್ಳೋಣ. ಆಗ ನಮಗೆ ನೆಮ್ಮದಿ ಸಿಗುತ್ತೆ.

12. ಯೆಹೋವ ದೇವರು ಇನ್ನೂ ಯಾವುದನ್ನ ಸಹಿಸಿಕೊಳ್ತಾ ಇದ್ದಾರೆ?

12 ಕೆಟ್ಟವರು ಜನರಿಗೆ ತೊಂದರೆ ಕೊಡ್ತಿದ್ದಾರೆ. ಏದೆನಲ್ಲಿ ಮನುಷ್ಯರು ದಂಗೆ ಎದ್ದಾಗಲೇ ಭೂಮಿಯಲ್ಲಿ ಕೆಟ್ಟತನ ಇನ್ನೂ ಜಾಸ್ತಿ ಆಗುತ್ತಾ ಹೋಗುತ್ತೆ ಅಂತ ಯೆಹೋವ ದೇವರಿಗೆ ಗೊತ್ತಾಯ್ತು. ಇವತ್ತಂತೂ ಅನ್ಯಾಯ ಅಕ್ರಮ ತುಂಬಿಕೊಂಡಿದೆ. ಅಮಾಯಕರಿಗೆ, ಅನಾಥರಿಗೆ, ವಿಧವೆಯರಿಗೆ ಅನ್ಯಾಯ ಆಗ್ತಿದೆ. (ಜೆಕ. 7:9, 10) ಯೆಹೋವನನ್ನ ಆರಾಧಿಸ್ತಿರೋ ಜನರಿಗೆ ಕೆಟ್ಟದಾಗ್ತಿದೆ, ಅವರನ್ನ ಜೈಲಿಗೆ ಹಾಕ್ತಿದ್ದಾರೆ. ಇದೆಲ್ಲಾ ಯೆಹೋವ ದೇವರಿಗೆ ಒಂಚೂರೂ ಇಷ್ಟ ಆಗಲ್ಲ. ತುಂಬ ಬೇಜಾರಾಗುತ್ತೆ. ಆದ್ರೂ ಸಹಿಸಿಕೊಳ್ತಾ ಇದ್ದಾರೆ. ನೀವೂ ಸಹಿಸಿಕೊಳ್ಳೋದನ್ನ ನೋಡಿದಾಗ ಆತನಿಗೆ ನಿಮ್ಮ ಮೇಲಿರೋ ಪ್ರೀತಿ ಇನ್ನೂ ಜಾಸ್ತಿ ಆಗುತ್ತೆ.

13. (ಎ) ಇವತ್ತು ಜನರು ಯಾವ್ಯಾವ ನೀಚ ಕೆಲಸಗಳನ್ನ ಮಾಡ್ತಿದ್ದಾರೆ? (ಬಿ) ಅಂಥವರನ್ನ ದೇವರು ಮುಂದೆ ಏನು ಮಾಡ್ತಾರೆ?

13 ಲೈಂಗಿಕ ಅನೈತಿಕತೆ ಮಿತಿಮೀರಿ ಹೋಗಿದೆ. ದೇವರ ಸ್ವರೂಪದಲ್ಲಿ ಸೃಷ್ಟಿಯಾಗಿರೋ ಮನುಷ್ಯರನ್ನ ನೀಚತನಕ್ಕೆ ಇಳಿಸೋದು ಅಂದ್ರೆ ಸೈತಾನನಿಗೆ ಒಂಥರಾ ಮಜಾ. ಆದ್ರೆ ಯೆಹೋವ ದೇವರಿಗೆ ಬೇಜಾರಾಗುತ್ತೆ. ನೋಹನ ಕಾಲದಲ್ಲಿ “ಮನುಷ್ಯರ ಕೆಟ್ಟತನ ಭೂಮಿಯಲ್ಲಿ ತುಂಬ ಹೆಚ್ಚಾಗಿರೋದನ್ನ” ನೋಡಿದಾಗ, ದೇವರು “ಭೂಮಿಯಲ್ಲಿ ಸೃಷ್ಟಿ ಮಾಡಿದ ಮನುಷ್ಯರಿಂದಾಗಿ ತುಂಬ ದುಃಖಪಟ್ಟು ಹೃದಯದಲ್ಲಿ ನೊಂದ್ಕೊಂಡನು.” (ಆದಿ. 6:5, 6, 11) ಇವತ್ತು ಮನುಷ್ಯರು ತುಂಬ ನೀಚರಾಗಿದ್ದಾರೆ. ಲೈಂಗಿಕ ಅನೈತಿಕತೆಯಲ್ಲಿ ಮುಳುಗಿಹೋಗಿದ್ದಾರೆ. ಇಂಥ ನಡತೆ ಗಂಡು-ಹೆಣ್ಣಿನ ಮಧ್ಯ ಮಾತ್ರ ಅಲ್ಲ ಗಂಡು-ಗಂಡಿನ ಮಧ್ಯ ಹೆಣ್ಣು-ಹೆಣ್ಣಿನ ಮಧ್ಯನೂ ನಡೀತಿದೆ. ಇನ್ನೂ ಬೇರೆ-ಬೇರೆ ತರದ ಲೈಂಗಿಕ ಅನೈತಿಕತೆಯನ್ನ ಜನ ನಡಿಸ್ತಿದ್ದಾರೆ. (ಎಫೆ. 4:18, 19) ಇದನ್ನೆಲ್ಲ ನೋಡಿದಾಗ ಸೈತಾನನಿಗೆ ತುಂಬ ಖುಷಿಯಾಗುತ್ತೆ. ಅದ್ರಲ್ಲೂ ಯೆಹೋವನ ಆರಾಧಕರು ಇಂಥ ದೊಡ್ಡ-ದೊಡ್ಡ ತಪ್ಪುಗಳನ್ನ ಮಾಡಿದಾಗಂತೂ ಅವನಿಗೆ ಇದ್ದಿದ್ದೂ ಖುಷಿಯಾಗುತ್ತೆ. ಆದ್ರೆ ದೇವರು ಎಲ್ಲಾ ತರದ ಲೈಂಗಿಕ ಅನೈತಿಕತೆಯನ್ನ ದ್ವೇಷಿಸ್ತಾನೆ. ಇಂಥ ಕೆಟ್ಟ ಕೆಲಸಗಳನ್ನ ಮಾಡೋರನ್ನ ಮುಂದೆ ನಾಶ ಮಾಡಿಬಿಡ್ತಾನೆ.

14. ಮನುಷ್ಯ ಯಾವುದನ್ನೆಲ್ಲ ಹಾಳು ಮಾಡ್ತಿದ್ದಾನೆ?

14 ಜನರು ಭೂಮಿನ ಹಾಳು ಮಾಡ್ತಿದ್ದಾರೆ. ಮನುಷ್ಯ ಮನುಷ್ಯನಿಗೆ ಹಾನಿ ಮಾಡೋದೂ ಅಲ್ಲದೇ, ದೇವರು ನೋಡಿಕೊಳ್ಳೋಕೆ ಕೊಟ್ಟಿರೋ ಈ ಭೂಮಿಗೆ ಮತ್ತು ಪ್ರಾಣಿಗಳಿಗೂ ಹಾನಿ ಮಾಡ್ತಿದ್ದಾನೆ. (ಪ್ರಸಂ. 8:9; ಆದಿ. 1:28) “ಮನುಷ್ಯರು ಹೀಗೇ ಮಾಡ್ತಿದ್ರೆ ಇನ್ನು ಕೆಲವು ವರ್ಷಗಳಲ್ಲಿ ಹತ್ತು ಲಕ್ಷ ಜಾತಿಯ ಪ್ರಾಣಿಗಳು ಭೂಮಿಯಿಂದ ಕಣ್ಮರೆ ಆಗಿಬಿಡುತ್ತವೆ” ಅಂತ ವಿಜ್ಞಾನಿಗಳು ಹೇಳ್ತಾರೆ. * ಅವರು ಪರಿಸರ ಉಳಿಸಿ ಅಂತ ಚಳುವಳಿ ಮಾಡ್ತಿರೋದು ಇದಕ್ಕೇ. ಆದ್ರೆ ಸಮಾಧಾನ ಕೊಡೋ ವಿಷ್ಯ ಏನಂದ್ರೆ ಯೆಹೋವ ದೇವರು ಭೂಮಿನ ನಾಶ ಮಾಡ್ತಿರೋ ಜನರನ್ನ ನಾಶ ಮಾಡ್ತಾರೆ ಮತ್ತು ಇಡೀ ಭೂಮಿನ ಪರದೈಸ್‌ ಮಾಡ್ತಾರೆ.—ಪ್ರಕ. 11:18; ಯೆಶಾ. 35:1.

ಯೆಹೋವ ದೇವರಿಂದ ನಮಗಿರೋ ಪಾಠ

15-16. ನಾವು ಯಾಕೆ ಯೆಹೋವ ದೇವರ ತರ ತಾಳ್ಮೆಯಿಂದ ಇರಬೇಕು?

15 ಸಾವಿರಾರು ವರ್ಷಗಳಿಂದ ದೇವರು ಏನನ್ನೆಲ್ಲಾ ಸಹಿಸಿಕೊಳ್ತಿದ್ದಾರೆ ನೋಡಿ. (“ ಯೆಹೋವ ದೇವರು ಏನೆಲ್ಲಾ ಸಹಿಸಿಕೊಳ್ತಿದ್ದಾರೆ?” ಅನ್ನೋ ಚೌಕ ನೋಡಿ.) ಯೆಹೋವ ದೇವರು ಬೇಕು ಅಂದ್ರೆ ಈ ಲೋಕದಲ್ಲಿರೋ ಕೆಟ್ಟತನವನ್ನೆಲ್ಲ ಚಿಟಿಕೆ ಹೊಡಿಯುವಷ್ಟರಲ್ಲಿ ಸರಿ ಮಾಡಿಬಿಡಬಹುದು. ಆದ್ರೆ ತಾಳ್ಮೆಯಿಂದ ಇದ್ದಾರೆ. ಇದ್ರಿಂದ ಯೆಹೋವ ದೇವರಿಗೆ ನಮ್ಮ ಮೇಲೆ ಎಷ್ಟು ಪ್ರೀತಿಯಿದೆ ಅಂತ ಗೊತ್ತಾಗುತ್ತೆ. ಅದನ್ನ ಅರ್ಥ ಮಾಡಿಕೊಳ್ಳೋಕೆ ಒಂದು ಉದಾಹರಣೆ ನೋಡಿ. ಹೊಟ್ಟೆಯಲ್ಲಿರುವ ಮಗುಗೆ ದೊಡ್ಡ ಕಾಯಿಲೆ ಇದೆ ಅಂತ ಅಪ್ಪ ಅಮ್ಮಾಗೆ ಗೊತ್ತಾಗುತ್ತೆ. “ಅದು ಹುಟ್ಟಿದ ಮೇಲೆ ತುಂಬ ಕಷ್ಟ ಪಡಬೇಕಾಗುತ್ತೆ, ಜಾಸ್ತಿ ದಿನ ಬದುಕಲ್ಲ” ಅಂತ ಡಾಕ್ಟರ್‌ ಹೇಳ್ತಾರೆ. ಆ ಮಗುನ ಸಾಕೋದು ಅಷ್ಟು ಸುಲಭ ಅಲ್ಲ ಅಂತ ಗೊತ್ತಿದ್ರೂ ಆ ಅಪ್ಪ ಅಮ್ಮ ಮಗುಗೆ ಜನ್ಮ ಕೊಡ್ತಾರೆ. ಅಷ್ಟೇ ಅಲ್ಲ, ಆ ಮಗುಗೆ ಬೇಕಾಗಿರೋದನ್ನೆಲ್ಲ ಕೊಟ್ಟು ಚೆನ್ನಾಗಿ ಸಾಕ್ತಾರೆ. ಅವರು ಇದನ್ನೆಲ್ಲ ಮಾಡೋಕೆ ಕಾರಣ ಆ ಮಗು ಮೇಲಿರೋ ಪ್ರೀತಿನೇ.

16 ಆದಾಮ ಹವ್ವ ತಪ್ಪು ಮಾಡಿದ್ರಿಂದ ಮನುಷ್ಯರೆಲ್ಲಾ ಪಾಪಿಗಳಾಗೇ ಹುಟ್ಟುತ್ತಿದ್ದಾರೆ. ಆದ್ರೂ ಯೆಹೋವ ದೇವರು ಅವರನ್ನ ಪ್ರೀತಿಸ್ತಾರೆ ಅವರ ಕಾಳಜಿ ವಹಿಸ್ತಾರೆ. (1 ಯೋಹಾ. 4:19) ಉದಾಹರಣೆಯಲ್ಲಿ ಹೇಳಿದ ಆ ಮಗುವಿಗೆ ಬಂದ ಕಷ್ಟನ ತೆಗೆದು ಹಾಕೋಕೆ ಅಪ್ಪ ಅಮ್ಮಗೆ ಆಗಲ್ಲ. ಆದ್ರೆ ಯೆಹೋವ ದೇವರಿಗೆ ತನ್ನ ಮಕ್ಕಳಿಗೆ ಬಂದಿರೋ ಕಷ್ಟನ ತೆಗೆದು ಹಾಕೋಕೆ ಆಗುತ್ತೆ. ಅದನ್ನ ಯಾವಾಗ ಮಾಡಬೇಕು ಅಂತಾನೂ ತೀರ್ಮಾನ ತಗೊಂಡಿದ್ದಾರೆ. (ಮತ್ತಾ. 24:36) ದೇವರು ತಾಳ್ಮೆಯಿಂದ ಇರೋದನ್ನ ನೋಡುವಾಗ ನಾವೂ ತಾಳ್ಮೆಯಿಂದ ಇರಬೇಕು ಅಂತ ಅನಿಸುತ್ತಲ್ವಾ?

17. ಇಬ್ರಿಯ 12:2, 3ನ್ನ ನೋಡಿದಾಗ ನಾವೂ ಯಾಕೆ ಸಹಿಸ್ಕೊಬೇಕು ಅನಿಸುತ್ತೆ?

17 ನಿಜವಾಗ್ಲೂ ಯೆಹೋವ ದೇವರು ಸಹಿಸ್ಕೊಳ್ಳೋದರಲ್ಲಿ ಎಲ್ಲರಿಗಿಂತ ಒಳ್ಳೇ ಮಾದರಿ ತೋರಿಸಿದ್ದಾರೆ. ಅವರನ್ನ ನೋಡಿ ಯೇಸು ಕೂಡ ತನಗೆ ಬಂದ ಕಷ್ಟಗಳನ್ನ ಸಹಿಸಿಕೊಂಡ್ರು. ಯೇಸು ಭೂಮಿಯಲ್ಲಿದ್ದಾಗ ಜನ ಅವರ ಬಗ್ಗೆ ತುಂಬ ಕೆಟ್ಟಕೆಟ್ಟದಾಗಿ ಮಾತಾಡಿದ್ರು, ಅವಮಾನ ಮಾಡಿದ್ರು. ಹಿಂಸಾಕಂಬಕ್ಕೆ ಹಾಕಿ ಶಿಕ್ಷೆ ಕೊಟ್ರು. ಆದ್ರೂ ಯೇಸು ಇದನ್ನೆಲ್ಲಾ ಸಹಿಸಿಕೊಂಡ್ರು. (ಇಬ್ರಿಯ 12:2, 3 ಓದಿ.) ಯೆಹೋವ ದೇವರ ಮಾದರಿಯನ್ನ ನೆನಸಿಕೊಂಡಾಗ ನಮಗೆ ಬರೋ ಕಷ್ಟಗಳನ್ನ ಸಹಿಸಿಕೊಳ್ಳೋಕೆ ಶಕ್ತಿ ಸಿಗುತ್ತೆ.

18. ಎರಡನೇ ಪೇತ್ರ 3:9ರ ಪ್ರಕಾರ ಯೆಹೋವ ದೇವರು ತಾಳ್ಮೆ ತೋರಿಸಿದ್ದು ಯಾಕೆ ಒಳ್ಳೇದೇ ಆಯ್ತು?

18 ಎರಡನೇ ಪೇತ್ರ 3:9 ಓದಿ. ಲೋಕದಲ್ಲಿರೋ ಕೆಟ್ಟತನವನ್ನ ಯಾವಾಗ ನಾಶ ಮಾಡಬೇಕು ಅಂತ ತೀರ್ಮಾನ ಮಾಡಿ ದೇವರು ತಾಳ್ಮೆಯಿಂದ ಇದ್ದಾರೆ. ಇದ್ರಿಂದ ನಮಗೆ ಒಳ್ಳೇದೇ ಆಗಿದೆ. ಲಕ್ಷಾಂತರ ಜನರು ಆತನ ಬಗ್ಗೆ ತಿಳಿದುಕೊಳ್ಳೋಕೆ ಆಗಿದೆ. ಇವತ್ತು ಆತನನ್ನ ಆರಾಧಿಸೋ ದೊಡ್ಡ ಗುಂಪೇ ಇದೆ. ಅವರೆಲ್ಲಾ ಈ ಭೂಮಿಯಲ್ಲಿ ಹುಟ್ಟಿ ದೇವರ ಬಗ್ಗೆ ಕಲಿತು ಆತನನ್ನ ಪ್ರೀತಿಸಿ ದೀಕ್ಷಾಸ್ನಾನ ತಗೊಳ್ಳೋ ತನಕ ದೇವರು ಕಾದಿದ್ದಾರೆ. ಲೋಕ ನಾಶ ಆಗುವಾಗ ಈ ಲಕ್ಷಾಂತರ ಜನರು ಬದುಕುತ್ತಾರೆ. ಹಾಗಾಗಿ ಯೆಹೋವ ದೇವರು ಇಷ್ಟು ದಿನ ತಾಳ್ಮೆಯಿಂದ ಇದ್ದಿದ್ದಕ್ಕೆ ನಾವು ಋಣಿಗಳಾಗಿರಬೇಕು.

19. (ಎ) ನಾವೇನು ಮಾಡಬೇಕು? (ಬಿ) ಆಗ ನಮಗೆ ಯಾವ ಆಶೀರ್ವಾದ ಸಿಗುತ್ತೆ?

19 ಸೈತಾನ ಯೆಹೋವ ದೇವರಿಗೆ ಇಷ್ಟೆಲ್ಲಾ ನೋವು ಮಾಡಿದ್ರೂ ಇಷ್ಟೆಲ್ಲಾ ಆರೋಪಗಳನ್ನ ಹಾಕಿದ್ರೂ ಯೆಹೋವ ದೇವರು ಖುಷಿಯಾಗಿದ್ದಾರೆ. (1 ತಿಮೊ. 1:11) ಹೀಗೆ ಖುಷಿಯಾಗಿ ಎಲ್ಲವನ್ನ ಸಹಿಸಿಕೊಳ್ಳೋದು ಹೇಗೆ ಅಂತ ನಾವು ಯೆಹೋವ ದೇವರಿಂದ ಕಲಿತ್ವಿ. ಮುಂದೆ ಯೆಹೋವ ದೇವರು ಖಂಡಿತವಾಗ್ಲೂ ಅವರ ಹೆಸರನ್ನ ಪವಿತ್ರೀಕರಿಸ್ತಾರೆ. ಇಡೀ ವಿಶ್ವವನ್ನ ಆಳೋ ಅಧಿಕಾರ ಅವರೊಬ್ಬರಿಗೇ ಇರೋದು ಅನ್ನೋದನ್ನ ಜನರಿಗೆ ಅರ್ಥ ಮಾಡಿಸ್ತಾರೆ. ಭೂಮಿಯಲ್ಲಿರೋ ಎಲ್ಲಾ ಕೆಟ್ಟತನಕ್ಕೂ ಕೊನೆ ತರ್ತಾರೆ ಮತ್ತು ನಮಗೆ ಈಗಿರೋ ಎಲ್ಲಾ ಕಷ್ಟಗಳನ್ನ ತೆಗೆದು ಹಾಕ್ತಾರೆ. ಹಾಗಾಗಿ ನಾವು ಸಹಿಸಿಕೊಳ್ಳೋಣ. ಯೆಹೋವ ದೇವರು ಇಲ್ಲಿ ತನಕ ಸಹಿಸಿಕೊಂಡು ಬಂದಿದ್ದಾರೆ ಅನ್ನೋ ಧೈರ್ಯ ತಗೊಂಡು ಖುಷಿಖುಷಿಯಾಗಿ ಇರೋಣ. “ಕಷ್ಟಗಳನ್ನ ಸಹಿಸ್ಕೊಳ್ಳೋ ವ್ಯಕ್ತಿ ಖುಷಿಯಾಗಿ ಇರ್ತಾನೆ. ಯಾಕಂದ್ರೆ ಅವನಿಗೆ ದೇವರ ಮೆಚ್ಚಿಗೆ ಮತ್ತು ಜೀವದ ಕಿರೀಟ ಸಿಗುತ್ತೆ. ಯೆಹೋವ ತನ್ನನ್ನ ಯಾರು ಪ್ರೀತಿಸ್ತಾರೋ ಅಂಥವ್ರಿಗೆ ಜೀವದ ಕಿರೀಟ ಕೊಡ್ತೀನಿ ಅಂತ ಮಾತು ಕೊಟ್ಟಿದ್ದಾನೆ.”—ಯಾಕೋ. 1:12.

ಗೀತೆ 134 ಸರ್ವವೂ ನೂತನವಾಗುವಾಗ ನಿನ್ನನ್ನು ನೋಡು

^ ಪ್ಯಾರ. 5 ನಮ್ಮೆಲ್ಲರಿಗೂ ಒಂದಲ್ಲ ಒಂದು ತರದ ಕಷ್ಟ ಇದೆ. ಎಷ್ಟೋ ಕಷ್ಟಗಳಿಗೆ ನಮಗೆ ಈಗಲೇ ಪರಿಹಾರ ಸಿಗಲ್ಲ. ಅವನ್ನ ನಾವು ಸಹಿಸ್ಕೊಬೇಕಾಗುತ್ತೆ. ನಮ್ಮ ತರ ಯೆಹೋವ ದೇವರು ತುಂಬ ವಿಷಯಗಳನ್ನ ಸಹಿಸ್ಕೊಳ್ತಾ ಇದ್ದಾರೆ. ಅದ್ರಲ್ಲಿ 9 ವಿಷಯಗಳನ್ನ ನಾವು ಈ ಲೇಖನದಲ್ಲಿ ನೋಡೋಣ. ಹೀಗೆ ಯೆಹೋವ ದೇವರು ಸಹಿಸ್ಕೊಂಡಿದ್ರಿಂದ ಏನೆಲ್ಲಾ ಒಳ್ಳೇದಾಗಿದೆ ಮತ್ತು ಯೆಹೋವ ದೇವರಿಂದ ನಾವು ಯಾವ ಪಾಠ ಕಲಿಬಹುದು ಅಂತನೂ ನೋಡ್ತೀವಿ.

^ ಪ್ಯಾರ. 14 ಇಲ್ಲಿ ಒಂದು ಪ್ರಾಣಿಯ ನಿರ್ದಿಷ್ಟ ಜಾತಿಯ ಬಗ್ಗೆ ಮಾತಾಡ್ತಾ ಇದೆ. ಆದ್ರೆ ಬೈಬಲಲ್ಲಿ ಹೇಳಿರೋ ಜಾತಿ ಅನ್ನೋ ಪದಕ್ಕೆ ಬೇರೆಬೇರೆ ಪ್ರಾಣಿಗಳ ಗುಂಪು ಅನ್ನೋ ಅರ್ಥ ಇದೆ.