ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 28

ಪೈಪೋಟಿ ಮಾಡದೆ ಒಗ್ಗಟ್ಟಾಗಿರಿ

ಪೈಪೋಟಿ ಮಾಡದೆ ಒಗ್ಗಟ್ಟಾಗಿರಿ

“ನಾವು ಅಹಂಕಾರಪಡದೆ, ಒಬ್ರ ಜೊತೆ ಒಬ್ರು ಪೈಪೋಟಿ ಮಾಡದೆ, ಅಸೂಯೆಪಡದೆ ಇರೋಣ.”—ಗಲಾ. 5:26.

ಗೀತೆ 53 ಐಕ್ಯದಿಂದ ಕೆಲಸ ಮಾಡುವುದು

ಕಿರುನೋಟ *

1. (ಎ) ಜನರು ಪೈಪೋಟಿ ಮಾಡೋದ್ರಿಂದ ಏನಾಗ್ತಿದೆ? (ಬಿ) ನಾವು ಪೈಪೋಟಿ ಮಾಡಿದ್ರೆ ಏನಾಗುತ್ತೆ?

ಲೋಕದಲ್ಲಿರೋ ಜನರು ತುಂಬ ಸ್ವಾರ್ಥಿಗಳಾಗಿ ಬಿಟ್ಟಿದ್ದಾರೆ. ಅದಕ್ಕೆ ಅವರು ಎಲ್ಲ ವಿಷಯದಲ್ಲೂ ಪೈಪೋಟಿ ಮಾಡ್ತಿದ್ದಾರೆ. ಉದಾಹರಣೆಗೆ ವ್ಯಾಪಾರಿಗಳು ಲಾಭ ಮಾಡ್ಕೊಳೋಕೆ ಬೇರೆಯವರಿಗೆ ಮೋಸ ಮಾಡ್ತಾರೆ. ಆಟಗಾರರು ಇನ್ನೊಂದು ತಂಡ ಗೆಲ್ಲಬಾರದು ಅಂತ ಆ ತಂಡದಲ್ಲಿರೋ ಆಟಗಾರರಿಗೆ ಗಾಯನೂ ಮಾಡ್ತಾರೆ. ವಿದ್ಯಾರ್ಥಿಗಳು ದೊಡ್ಡದೊಡ್ಡ ಕಾಲೇಜುಗಳಲ್ಲಿ ಸೀಟ್‌ ಸಿಗೋಕೆ ಪರೀಕ್ಷೆಯಲ್ಲಿ ಕಾಪಿ ಮಾಡ್ತಾರೆ. ಇವೆಲ್ಲ ತಪ್ಪು, ಇವು ಪಾಪದಿಂದ ತುಂಬಿರೋ “ದೇಹದ ಕೆಲಸಗಳು” ಅಂತ ಕ್ರೈಸ್ತರಾಗಿರೋ ನಾವು ಅರ್ಥಮಾಡಿಕೊಂಡಿದ್ದೀವಿ. (ಗಲಾ. 5:19-21) ಆದ್ರೂ ನಮಗೇ ಗೊತ್ತಿಲ್ಲದೆ ಸಹೋದರ ಸಹೋದರಿಯರ ಜೊತೆ ನಾವು ಪೈಪೋಟಿಗೆ ಇಳಿದು ಬಿಡಬಹುದು. ಇದ್ರಿಂದ ತುಂಬ ಅಪಾಯ ಇದೆ. ಈ ಪೈಪೋಟಿ ನಮ್ಮ ಮನಸ್ಸಲ್ಲಿ ಒಂದು ಸಲ ಬಂದುಬಿಟ್ರೆ ಸಭೆಯಲ್ಲಿರೋ ಒಗ್ಗಟ್ಟು ಒಡೆದುಹೋಗುತ್ತೆ.

2. ನಾವು ಈ ಲೇಖನದಲ್ಲಿ ಏನು ಕಲಿತೀವಿ?

2 ನಾವು ಯಾವ ಯೋಚನೆಗಳಿಂದ ದೂರ ಇರಬೇಕು? ಯಾವ ಎರಡು ಗುಣಗಳು ನಮ್ಮ ಸಹೋದರರ ಜೊತೆ ಪೈಪೋಟಿಗೆ ಇಳಿಯೋ ತರ ಮಾಡಿಬಿಡುತ್ತೆ? ಬೈಬಲ್‌ ಕಾಲದಲ್ಲಿದ್ದ ಯೆಹೋವನ ಸೇವಕರು ಪೈಪೋಟಿಗೆ ಇಳಿಯದೆ ಹೇಗೆ ಒಳ್ಳೇ ಮಾದರಿ ಆಗಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ನೋಡ್ತೀವಿ.

ಯೋಚನೆ ಮೇಲೆ ನಿಗಾ ಇಡಿ

3. ನಾವು ಯಾವುದರ ಮೇಲೆ ನಿಗಾ ಇಡಬೇಕು?

3 ನಾವು ಯಾವಾಗಲೂ ಹೇಗೆ ಯೋಚನೆ ಮಾಡ್ತೀವಿ ಅನ್ನೋದ್ರ ಮೇಲೆ ನಿಗಾ ಇಡಬೇಕು. ಬೇರೆಯವರನ್ನ ನಮ್ಮ ಜೊತೆ ಹೋಲಿಸಿಕೊಂಡು ನಾವು ಅವ್ರಿಗಿಂತ ಮೇಲು ಅಂತ ಅನಿಸಿದಾಗ ಮಾತ್ರ ನಮಗೆ ಖುಷಿ ಆಗುತ್ತಾ? ಬೇರೆಯವರಿಗಿಂತ ನಾವೇ ಚೆನ್ನಾಗಿ ಕೆಲಸ ಮಾಡೋದು ಅಂತ ತೋರಿಸಿಕೊಳ್ಳೋಕೆ ಸಭೆಯಲ್ಲಿ ನಾವು ಕೆಲಸ ಮಾಡ್ತೀವಾ ಅಥವಾ ಯೆಹೋವ ದೇವರನ್ನ ಮೆಚ್ಚಿಸೋಕೆ ಮಾಡ್ತೀವಾ ಅಂತ ಯೋಚನೆ ಮಾಡಬೇಕು.

4. ಗಲಾತ್ಯ 6:3, 4ರ ಪ್ರಕಾರ ನಾವ್ಯಾಕೆ ನಮ್ಮನ್ನ ಬೇರೆಯವರ ಜೊತೆ ಹೋಲಿಸಿಕೊಳ್ಳಬಾರದು?

4 ಬೇರೆಯವರ ಜೊತೆ ನಮ್ಮನ್ನ ಹೋಲಿಸಿಕೊಳ್ಳಬಾರದು ಅಂತ ಬೈಬಲ್‌ ಹೇಳುತ್ತೆ. (ಗಲಾತ್ಯ 6:3, 4 ಓದಿ.) ನಾವು ಆ ತರ ಹೋಲಿಸಿಕೊಂಡಾಗ ಅವ್ರಿಗಿಂತ ನಾವು ಚೆನ್ನಾಗಿ ಕೆಲಸ ಮಾಡ್ತಾ ಇದ್ದೀವಿ ಅಂತ ಅನಿಸಿದ್ರೆ ಅಹಂಕಾರ ಬಂದುಬಿಡುತ್ತೆ. ನಮಗಿಂತ ಅವರು ಚೆನ್ನಾಗಿ ಕೆಲಸ ಮಾಡ್ತಿದ್ದಾರೆ ಅಂತ ಅನಿಸಿದ್ರೆ ನಾವು ಯಾವುದಕ್ಕೂ ಲಾಯಕ್ಕಿಲ್ಲ ಅಂತ ಅನಿಸಿಬಿಡುತ್ತೆ. ಒಟ್ಟಿನಲ್ಲಿ ಹೋಲಿಸಿಕೊಳ್ಳೋದ್ರಿಂದ ಸಮಸ್ಯೆನೇ ಜಾಸ್ತಿ. (ರೋಮ. 12:3) ಗ್ರೀಸ್‌ನಲ್ಲಿರೋ ಸಹೋದರಿ ಕತ್ರೀನ * ಏನು ಹೇಳ್ತಾರೆ ನೋಡಿ, “ಸುಂದರವಾಗಿ ಇರೋರ ಜೊತೆ, ಸೇವೆಯಲ್ಲಿ ತುಂಬ ಚೆನ್ನಾಗಿ ಮಾತಾಡುವವರ ಜೊತೆ ಮತ್ತು ಬೇರೆಯವರನ್ನ ಬೇಗ ಫ್ರೆಂಡ್ಸ್‌ ಮಾಡಿಕೊಳ್ಳುವವರ ಜೊತೆ ನಾನು ನನ್ನನ್ನೇ ಯಾವಾಗಲೂ ಹೋಲಿಸ್ಕೊಳ್ತಿದ್ದೆ. ಆಗ ‘ನಾನು ಅವರ ತರ ಇಲ್ವಲ್ಲಾ’ ಅಂತ ಅನಿಸಿ ತುಂಬ ಬೇಜಾರ್‌ ಆಗ್ತಿತ್ತು.” ನಾವು ಯಾವಾಗಲೂ ಒಂದು ವಿಷ್ಯ ಮನಸ್ಸಲ್ಲಿ ಇಡಬೇಕು. ನಾವು ಸುಂದರವಾಗಿ ಇದ್ದೀವಿ ಅಂತನೋ, ಸೇವೆಯಲ್ಲಿ ಚೆನ್ನಾಗಿ ಮಾತಾಡ್ತೀವಿ ಅಂತನೋ ಅಥವಾ ಜನ ನಮ್ಮನ್ನ ಇಷ್ಟಪಡ್ತಾರೆ ಅಂತನೋ ದೇವರು ನಮ್ಮನ್ನ ಆರಿಸಿಕೊಂಡಿಲ್ಲ. ಯೆಹೋವ ದೇವರನ್ನ ಪ್ರೀತಿಸ್ತೀವಿ, ಯೇಸು ಹೇಳಿದ ಮಾತನ್ನ ಕೇಳ್ತೀವಿ ಅಂತ ನಮ್ಮನ್ನ ಆರಿಸಿಕೊಂಡಿದ್ದಾರೆ.—ಯೋಹಾ. 6:44; 1 ಕೊರಿಂ. 1:26-31.

5. ಕೊರಿಯಾದ ಸಹೋದರನ ಉದಾಹರಣೆಯಿಂದ ನಾವೇನು ಕಲಿತ್ವಿ?

5 ‘ನನಗೆ ಸಭೆಯಲ್ಲಿ ಒಳ್ಳೇ ಹೆಸರಿದ್ಯಾ ಅಥವಾ ಜಗಳಗಂಟ ಅಂತ ಹೆಸರಿದ್ಯಾ’ ಅಂತನೂ ನಾವು ಯೋಚನೆ ಮಾಡಬೇಕು. ದಕ್ಷಿಣ ಕೊರಿಯಾದಲ್ಲಿರೋ ಸಹೋದರನ ಉದಾಹರಣೆ ನೋಡಿ. ಸಭೆಯಲ್ಲಿ ಜವಾಬ್ದಾರಿ ಸ್ಥಾನದಲ್ಲಿರೋ ಸಹೋದರರನ್ನ ನೋಡಿದಾಗೆಲ್ಲ ‘ನಾನು ಅವ್ರಿಗಿಂತ ಚೆನ್ನಾಗಿ ಮಾಡಬೇಕು’ ಅಂತ ಅವರಿಗೆ ಅನಿಸ್ತಿತ್ತು. “ಆ ಸಹೋದರರು ಮಾಡೋ ಕೆಲಸದಲ್ಲಿ ಯಾವಾಗಲೂ ತಪ್ಪು ಹುಡುಕ್ತಾ ಇದ್ದೆ. ಅವರು ಹೇಳೋದನ್ನೆಲ್ಲ ನಾನು ಒಪ್ಕೊಳ್ತಾನೇ ಇರಲಿಲ್ಲ” ಅಂತ ಅವರು ಹೇಳ್ತಾರೆ. ಇದ್ರಿಂದ ಏನಾಯ್ತು? “ಇದ್ರಿಂದ ಸಭೆಯಲ್ಲಿ ಒಗ್ಗಟ್ಟು ಇರಲಿಲ್ಲ” ಅಂತ ಸಹೋದರ ಹೇಳ್ತಾರೆ. ಅವರ ಯೋಚನೆಯಲ್ಲಿ ಏನು ತಪ್ಪಿದೆ ಅಂತ ಅವರ ಫ್ರೆಂಡ್ಸ್‌ ಅರ್ಥ ಮಾಡಿಸಿದ್ರು. ಆಗ ಸಹೋದರ ತಮ್ಮ ಯೋಚನೆ ಬದಲಾಯಿಸಿಕೊಂಡ್ರು. ಈಗ ಅವರು ಒಬ್ಬ ಒಳ್ಳೇ ಹಿರಿಯನಾಗಿ ಸೇವೆ ಮಾಡ್ತಿದ್ದಾರೆ. ಪೈಪೋಟಿ ಮಾಡಬೇಕು ಅನ್ನೋ ಯೋಚನೆ ನಮ್ಮ ಮನಸ್ಸಲ್ಲಿ ಬಂದ್ರೆ ತಕ್ಷಣ ಸರಿ ಮಾಡ್ಕೊಬೇಕು.

ಅಹಂಕಾರ ಮತ್ತು ಅಸೂಯೆಯನ್ನ ಕಿತ್ತುಹಾಕಿ

6. ಗಲಾತ್ಯ 5:26ರಲ್ಲಿ ಇರೋ ಪ್ರಕಾರ ಯಾವ ಎರಡು ಕೆಟ್ಟ ಗುಣಗಳು ಇದ್ದರೆ ನಾವು ಪೈಪೋಟಿಗೆ ಇಳಿದುಬಿಡ್ತೀವಿ?

6 ಗಲಾತ್ಯ 5:26 ಓದಿ. ಯಾವ ಎರಡು ಕೆಟ್ಟ ಗುಣಗಳಿದ್ರೆ ನಾವು ಪೈಪೋಟಿಗೆ ಇಳಿದುಬಿಡ್ತೀವಿ? ಒಂದು, ಅಹಂಕಾರ ಇನ್ನೊಂದು ಅಸೂಯೆ. ಅಹಂಕಾರ ಇರೋ ವ್ಯಕ್ತಿಗೆ ತನ್ನ ಬಗ್ಗೆ ಹೆಮ್ಮೆ ಇರುತ್ತೆ ಮತ್ತು ಸ್ವಾರ್ಥಿ ಆಗಿರ್ತಾನೆ. ಅಸೂಯೆ ಇರೋ ವ್ಯಕ್ತಿ ‘ಬೇರೆಯವರ ಹತ್ರ ಇರೋದು ನನಗೂ ಬೇಕು’ ಅಂತ ಆಸೆಪಡೋದು ಅಲ್ಲದೆ, ಅವರ ಹತ್ರ ಇರೋದನ್ನ ಕಿತ್ಕೊಳ್ಳುವುದಕ್ಕೂ ನೋಡ್ತಾನೆ. ಅವರ ಮೇಲೆ ದ್ವೇಷನೂ ಬೆಳೆಸಿಕೊಳ್ತಾನೆ. ಹಾಗಾಗಿ ಈ ಎರಡು ಗುಣಗಳು ದೊಡ್ಡ ರೋಗ ಇದ್ದ ಹಾಗೆ. ಅವು ನಮ್ಮ ಹತ್ರ ಸುಳಿಯಕ್ಕೂ ಬಿಡಬಾರದು.

7. ಅಹಂಕಾರ ಮತ್ತು ಅಸೂಯೆಯಿಂದ ಆಗೋ ಅಪಾಯನ ಒಂದು ಉದಾಹರಣೆ ಕೊಟ್ಟು ವಿವರಿಸ್ತೀರಾ?

7 ಅಹಂಕಾರ ಮತ್ತು ಅಸೂಯೆ ಪೆಟ್ರೋಲಲ್ಲಿ ಕಸ ಇದ್ದ ಹಾಗೆ. ಏರೋಪ್ಲೇನ್‌ಗೆ ಹಾಕಿರೋ ಪೆಟ್ರೋಲಲ್ಲಿ ಕಸ ಇದ್ರೆ ಪ್ಲೇನ್‌ ಏನೋ ಮೇಲೆ ಹಾರುತ್ತೆ. ಆದ್ರೆ ಹೋಗ್ತಾ-ಹೋಗ್ತಾ ಪೆಟ್ರೋಲ್‌ ಪೈಪ್‌ಗಳಲ್ಲಿ ಕಸ ಕಟ್ಟಿಕೊಳ್ಳುತ್ತೆ. ಇದ್ರಿಂದ ಇಂಜಿನ್‌ ಹಾಳಾಗುತ್ತೆ. ಪ್ಲೇನ್‌ ಇನ್ನೇನು ಕೆಳಗೆ ಇಳೀಬೇಕು ಅನ್ನುವಾಗ ಏನಾದ್ರೂ ದುರಂತ ನಡಿಯುತ್ತೆ. ಅದೇ ತರ ಒಬ್ಬ ವ್ಯಕ್ತಿಯಲ್ಲಿ ಅಹಂಕಾರ, ಅಸೂಯೆ ಇದ್ರೆ ಸ್ವಲ್ಪ ದಿನ ಯೆಹೋವನ ಸೇವೆ ಮಾಡ್ತಾನೆ ಅಷ್ಟೆ. ಆಮೇಲೆ ನಿಲ್ಲಿಸಿಬಿಡ್ತಾನೆ. (ಜ್ಞಾನೋ. 16:18) ಈ ಅಹಂಕಾರ ಮತ್ತು ಅಸೂಯೆ ನಮ್ಮಲ್ಲಿದ್ರೆ ನಮಗೂ ಅಪಾಯ ಬೇರೆಯವರಿಗೂ ಅಪಾಯ. ಹಾಗಾಗಿ ಈ ಗುಣಗಳು ನಮ್ಮಲ್ಲಿ ಬೆಳೆಯದೆ ಇರೋಕೆ ಏನು ಮಾಡಬೇಕು?

8. ನಮ್ಮಲ್ಲಿ ಅಹಂಕಾರ ಬರಬಾರದು ಅಂದ್ರೆ ಏನು ಮಾಡಬೇಕು?

8 ನಮ್ಮಲ್ಲಿ ಈ ಅಹಂಕಾರ ಅನ್ನೋ ಗುಣ ಬರದೇ ಇರಬೇಕಂದ್ರೆ ನಾವು ಅಪೊಸ್ತಲ ಪೌಲ ಫಿಲಿಪ್ಪಿ ಸಭೆಗೆ ಕೊಟ್ಟ ಬುದ್ಧಿವಾದನ ಮನಸ್ಸಲ್ಲಿ ಇಡಬೇಕು. “ಏನೇ ಆದ್ರೂ ಜಗಳ ಮಾಡಬೇಡಿ, ‘ನಾನೇ ಮೇಲು’ ಅಂತ ಹೆಮ್ಮೆಪಡದೆ ದೀನತೆ ತೋರಿಸಿ, ನಿಮಗಿಂತ ಬೇರೆಯವ್ರನ್ನ ಶ್ರೇಷ್ಠವಾಗಿ ನೋಡಿ.” (ಫಿಲಿ. 2:3) ನಾವು ನಮಗಿಂತ ಬೇರೆಯವರನ್ನ ಶ್ರೇಷ್ಠರಾಗಿ ನೋಡಿದ್ರೆ ಅವರಲ್ಲಿರೋ ಕೌಶಲಗಳನ್ನ ನೋಡಿ ಹೊಟ್ಟೆಕಿಚ್ಚುಪಡಲ್ಲ. ಅವರ ಜೊತೆ ಪೈಪೋಟಿ ಮಾಡಲ್ಲ. ಬದಲಿಗೆ ಅವರು ತಮ್ಮ ಕೌಶಲನ ಯೆಹೋವನ ಸೇವೆಯಲ್ಲಿ ಬಳಸ್ತಿರೋದನ್ನ ನೋಡಿ ತುಂಬ ಖುಷಿಪಡ್ತೀವಿ. ಅದೇ ತರ ಸಭೆಯಲ್ಲಿರೋ ಸಹೋದರ ಸಹೋದರಿಯರು ಪೌಲನ ಸಲಹೆನ ಪಾಲಿಸಿದ್ರೆ ಅವರು ನಮ್ಮಲ್ಲಿರೋ ಒಳ್ಳೇದನ್ನ ಗಮನಿಸ್ತಾರೆ. ಆಗ ಸಭೆಯಲ್ಲಿ ಒಗ್ಗಟ್ಟು, ಶಾಂತಿ ಇರುತ್ತೆ.

9. ನಮ್ಮಲ್ಲಿ ಹೊಟ್ಟೆಕಿಚ್ಚು ಬರಬಾರದು ಅಂದ್ರೆ ಏನು ಮಾಡಬೇಕು?

9 ನಮ್ಮಲ್ಲಿ ಹೊಟ್ಟೆಕಿಚ್ಚು ಬರಬಾರದು ಅಂದ್ರೆ ಏನು ಮಾಡಬೇಕು? ನಮ್ಮ ಇತಿಮಿತಿಗಳ ಬಗ್ಗೆ ಚೆನ್ನಾಗಿ ತಿಳುಕೊಂಡಿರಬೇಕು. ಆಗ ಬೇರೆಯವರಿಗೆ ನಮಗಿಂತ ಪ್ರತಿಭೆ ಇದೆ, ಸಾಮರ್ಥ್ಯ ಇದೆ ಅಂತ ಒಪ್ಕೊಳ್ತೀವಿ. ಅಷ್ಟೇ ಅಲ್ಲ, ಅವರಿಂದ ಕಲಿಯೋಕೆ ಪ್ರಯತ್ನ ಮಾಡ್ತೀವಿ. ಪೈಪೋಟಿಗೆ ಇಳಿಯಲ್ಲ. ಉದಾಹರಣೆಗೆ ಸಭೆಯಲ್ಲಿ ಒಬ್ಬ ಸಹೋದರ ಚೆನ್ನಾಗಿ ಭಾಷಣ ಕೊಟ್ಟಾಗ “ನೀವು ಭಾಷಣಗಳನ್ನ ಹೇಗೆ ಪ್ರಿಪೇರ್‌ ಮಾಡ್ತೀರಾ?” ಅಂತ ಕೇಳಿ ಅವರಿಂದ ಕಲಿತೀವಿ. ಒಬ್ಬ ಸಹೋದರಿ ರುಚಿರುಚಿಯಾಗಿ ಅಡುಗೆ ಮಾಡಿದಾಗ ಹೊಟ್ಟೆಕಿಚ್ಚುಪಡದೆ ಅವರಿಂದ ಕಲಿತೀವಿ. ಒಬ್ಬ ಯುವ ಸಹೋದರ ಅಥವಾ ಸಹೋದರಿಗೆ ಬೇರೆಯವರನ್ನ ಬೇಗ ಫ್ರೆಂಡ್ಸ್‌ ಮಾಡಿಕೊಳ್ಳೋ ಕಲೆ ಇದ್ರೆ ಅವರ ಹತ್ರ ಹೋಗಿ ನಾವು ಟಿಪ್ಸ್‌ ಕೇಳ್ತೀವಿ. ಹೀಗೆ ಹೊಟ್ಟೆಕಿಚ್ಚು ಅನ್ನೋ ಕಳೆಯನ್ನ ಕಿತ್ತುಹಾಕಿ ಬೇರೆಯವರಿಂದ ಕಲಿಯೋ ಗುಣ ಬೆಳೆಸಿಕೊಳ್ತೀವಿ.

ಇವರು ಪೈಪೋಟಿ ಮಾಡಲಿಲ್ಲ

ಗಿದ್ಯೋನನಿಗೆ ದೀನತೆ ಇದ್ದಿದ್ರಿಂದ ಎಫ್ರಾಯಿಮ್ಯರ ಜೊತೆ ಸಂಬಂಧ ಕಾಪಾಡ್ಕೊಂಡ (ಪ್ಯಾರ 10-12 ನೋಡಿ)

10. ಗಿದ್ಯೋನನಿಗೆ ಯಾವ ಸಮಸ್ಯೆ ಬಂತು?

10 ಗಿದ್ಯೋನ ಮತ್ತು ಅವನ 300 ಗಂಡಸ್ರು ಯೆಹೋವ ದೇವರ ಸಹಾಯದಿಂದ ಮಿದ್ಯಾನ್ಯರನ್ನ ಸೋಲಿಸಿದ್ರು. ಇದಕ್ಕೆ ಗಿದ್ಯೋನನನ್ನ ಎಫ್ರಾಯಿಮನ ಗಂಡಸ್ರು ಹೊಗಳುವ ಬದಲು ಅವನ ಮೇಲೆ ಕೋಪ ಮಾಡ್ಕೊಂಡ್ರು. ಯುದ್ಧಕ್ಕೆ ಮೊದಲೇ ನಮ್ಮನ್ನ ಯಾಕೆ ಕರೆದಿಲ್ಲ ಅಂತ ಜಗಳ ಮಾಡಿದ್ರು. ಯೆಹೋವ ದೇವರ ಹೆಸರನ್ನ ಮತ್ತು ಅವನ ಜನರನ್ನ ಗಿದ್ಯೋನ ಕಾಪಾಡಿದ ಅಂತ ಯೋಚಿಸೋ ಬದಲು ಜನರ ಮುಂದೆ ತಮ್ಮ ಕುಲದ ಮರ್ಯಾದೆ ಹೋಗುತ್ತೆ ಅಂತ ಎಫ್ರಾಯಿಮ್ಯರು ಯೋಚಿಸಿರಬೇಕು.—ನ್ಯಾಯ. 8:1.

11. ಗಿದ್ಯೋನ ಎಫ್ರಾಯಿಮ್ಯರಿಗೆ ಏನು ಹೇಳಿದ?

11 ಗಿದ್ಯೋನ ದೀನತೆ ತೋರಿಸಿದ. ಅವನು ಎಫ್ರಾಯಿಮ್‌ ಗಂಡಸರಿಗೆ “ನಿಮಗೆ ಹೋಲಿಸಿದ್ರೆ ನಾನು ಮಾಡಿದ್ದು ಏನೇನೂ ಅಲ್ಲ” ಅಂತ ಹೇಳಿದ. ಎಫ್ರಾಯಿಮ್ಯರು ದೇವರ ಸಹಾಯದಿಂದ ಮಾಡಿದ ದೊಡ್ಡ-ದೊಡ್ಡ ಕೆಲಸಗಳನ್ನೂ ಅವರಿಗೆ ನೆನಪಿಸಿದ. ಇದರಿಂದ ಎಫ್ರಾಯಿಮ್ಯರ “ಕೋಪ ತಣ್ಣಗಾಯ್ತು.” (ನ್ಯಾಯ. 8:2, 3) ಹೀಗೆ ಗಿದ್ಯೋನ ತನ್ನ ಹೆಮ್ಮೆನ ಪಕ್ಕಕ್ಕಿಟ್ಟು ಎಫ್ರಾಯಿಮ್ಯರ ಜೊತೆ ಸಂಬಂಧ ಕಾಪಾಡಿಕೊಂಡ.

12. (ಎ) ಎಫ್ರಾಯಿಮ್ಯರಿಂದ ಏನು ಕಲಿಬಹುದು? (ಬಿ) ಗಿದ್ಯೋನನಿಂದ ಏನು ಕಲಿಬಹುದು?

12 ಎಫ್ರಾಯಿಮ್ಯರಿಂದ ನಾವೇನು ಕಲಿಬಹುದು? ನಾವು ನಮ್ಮ ಗೌರವದ ಬಗ್ಗೆನೇ ಜಾಸ್ತಿ ಯೋಚನೆ ಮಾಡಬಾರದು, ಯೆಹೋವ ದೇವರ ಗೌರವ ಉಳಿಸುವುದರ ಬಗ್ಗೆ ಯೋಚನೆ ಮಾಡಬೇಕು. ಕುಟುಂಬದ ಯಜಮಾನರೇ, ಹಿರಿಯರೇ, ಗಿದ್ಯೋನನಿಂದ ನೀವು ಯಾವ ಪಾಠ ಕಲಿಬಹುದು? ನೀವು ಮಾಡಿರೋ ಯಾವುದೋ ಒಂದು ವಿಷ್ಯದಿಂದ ಬೇರೆಯವರಿಗೆ ಬೇಜಾರಾಗಿದೆ ಅಂತ ಗೊತ್ತಾದಾಗ, ಅವರಿಗೆ ಯಾಕೆ ಬೇಜಾರಾಗಿದೆ ಅಂತ ಯೋಚನೆ ಮಾಡಿ. ಅವರು ಮಾಡಿರೋ ಒಳ್ಳೇ ವಿಷಯಗಳಿಗೆ ಶಭಾಷ್‌ ಹೇಳಿ. ಇದನ್ನ ಮಾಡೋಕೆ ನಿಮಗೆ ದೀನತೆ ಬೇಕು. ಅದ್ರಲ್ಲೂ ತಪ್ಪು ಅವರ ಕಡೆ ಇದ್ದರಂತೂ ತುಂಬಾನೇ ದೀನತೆ ಬೇಕು. ಆ ಸಮಯದಲ್ಲಿ ನೀವೇ ಸರಿ ಅಂತ ತೋರಿಸಿಕೊಡೋದಕ್ಕಿಂತ ಅವರ ಸ್ನೇಹ ಉಳಿಸಿಕೊಳ್ಳೋದು ತುಂಬ ಮುಖ್ಯ.

ಹನ್ನಗೆ ಯೆಹೋವ ದೇವರು ಎಲ್ಲ ಸರಿಮಾಡ್ತಾರೆ ಅನ್ನೋ ನಂಬಿಕೆ ಇದ್ದಿದ್ರಿಂದ ಸಮಾಧಾನವಾಗಿದ್ದಳು (ಪ್ಯಾರ 13-14 ನೋಡಿ)

13. (ಎ) ಹನ್ನಗೆ ಯಾವ ಸಮಸ್ಯೆ ಇತ್ತು? (ಬಿ) ಅದಕ್ಕೆ ಹನ್ನ ಏನು ಮಾಡಿದಳು?

13 ಹನ್ನಳ ಉದಾಹರಣೆ ನೋಡಿ. ಅವಳ ಗಂಡ ಎಲ್ಕಾನ ಅವಳನ್ನ ತುಂಬ ಪ್ರೀತಿಸ್ತಿದ್ದ. ಅವನಿಗೆ ಪೆನಿನ್ನ ಅಂತ ಇನ್ನೊಬ್ಬ ಹೆಂಡತಿ ಇದ್ದಳು. ಆದ್ರೆ ಪೆನಿನ್ನಗಿಂತ ಹನ್ನಳ ಮೇಲೆ ಅವನಿಗೆ ಪ್ರೀತಿ ಜಾಸ್ತಿ. “ಪೆನಿನ್ನಳಿಗೆ ಮಕ್ಕಳಿದ್ರು, ಹನ್ನಗೆ ಮಕ್ಕಳಿರಲಿಲ್ಲ.” ಅದಕ್ಕೆ ಪೆನಿನ್ನ “ಅವಳನ್ನ ನೋಯಿಸಬೇಕು ಅಂತಾನೇ ಯಾವಾಗ್ಲೂ ಕೆಣಕಿ ಮಾತಾಡ್ತಿದ್ದಳು.” ಆಗ ಹನ್ನಗೆ ಬೇಜಾರ್‌ ಆಗ್ತಿತ್ತು. ಅವಳು ಯಾವಾಗಲೂ ಅಳುತ್ತಿದ್ದಳು. ಊಟನೂ ಬಿಟ್ಟುಬಿಡುತ್ತಿದ್ದಳು. (1 ಸಮು. 1:2, 6, 7) ಇಷ್ಟೆಲ್ಲ ಆದ್ರೂ ಹನ್ನ ಪೆನಿನ್ನ ಮೇಲೆ ಸೇಡು ತೀರಿಸಿಕೊಂಡಳು ಅಂತ ಬೈಬಲಲ್ಲಿ ಎಲ್ಲೂ ಇಲ್ಲ. ಅವಳು ಯೆಹೋವ ದೇವರ ಹತ್ರ ತನ್ನ ದುಃಖನೆಲ್ಲಾ ಹೇಳಿಕೊಳ್ತಾ ಇದ್ದಳು. ಇದನ್ನೆಲ್ಲಾ ಸರಿ ಮಾಡ್ತಾರೆ ಅಂತ ದೇವರ ಮೇಲೆ ನಂಬಿಕೆ ಇಟ್ಟಳು. ಚುಚ್ಚಿ ಮಾತಾಡೋದನ್ನ ಪೆನಿನ್ನ ನಿಲ್ಲಿಸಿದಳಾ ಇಲ್ವಾ ಅಂತ ಬೈಬಲ್‌ ಹೇಳಲ್ಲ. ಆದ್ರೆ ಹನ್ನಳ “ಮುಖದಲ್ಲಿ ದುಃಖ ಕಾಣಿಸ್ಲೇ ಇಲ್ಲ” ಅಂತ ಹೇಳುತ್ತೆ. ಅಂದ್ರೆ ಹನ್ನಗೆ ಇಷ್ಟೆಲ್ಲ ನೋವಿದ್ರೂ ಅವಳು ಸಮಾಧಾನವಾಗಿ ಇದ್ದಳು.—1 ಸಮು. 1:10, 18.

14. ಹನ್ನಳ ಉದಾಹರಣೆಯಿಂದ ನೀವೇನು ಕಲಿಬಹುದು?

14 ಹನ್ನಳ ಉದಾಹರಣೆಯಿಂದ ನೀವೇನು ಕಲಿಬಹುದು? ಯಾರಾದ್ರೂ ನಿಮ್ಮ ಜೊತೆ ಪೈಪೋಟಿ ಮಾಡಿದ್ರೆ ನೀವೂ ಪೈಪೋಟಿ ಮಾಡಬೇಕು ಅಂತೇನಿಲ್ಲ. ಅವರು ಕೆಟ್ಟದು ಮಾಡಿದ್ರು ಅಂತ ನೀವು ಅವರಿಗೆ ಕೆಟ್ಟದು ಮಾಡೋಕೆ ಹೋಗಬೇಡಿ. ಅವರ ಜೊತೆ ಸ್ನೇಹ ಉಳಿಸಿಕೊಳ್ಳೋಕೆ ಪ್ರಯತ್ನ ಮಾಡಿ. (ರೋಮ. 12:17-21) ಅವರು ಅದಕ್ಕೆ ಒಪ್ಪಿಕೊಳ್ಳದೇ ಇದ್ರೂ ನಿಮ್ಮ ಮನಸ್ಸಲ್ಲಿ ಸಮಾಧಾನ, ಖುಷಿ ಇರುತ್ತೆ.

ಅಪೊಲ್ಲೋಸ ಮತ್ತು ಪೌಲನಿಗೆ ತಮ್ಮ ಸೇವೆಯನ್ನ ದೇವರು ಆಶೀರ್ವಾದ ಮಾಡ್ತಾರೆ ಅಂತ ಗೊತ್ತಿದ್ರಿಂದ ಪೈಪೋಟಿಗೆ ಇಳಿಲಿಲ್ಲ (ಪ್ಯಾರ 15-18 ನೋಡಿ)

15. ಅಪೊಲ್ಲೋಸ ಮತ್ತು ಪೌಲ ಇಬ್ಬರಿಗೂ ಯಾವ ಸಾಮರ್ಥ್ಯ ಇತ್ತು?

15 ಈಗ ಅಪೊಲ್ಲೋಸ ಮತ್ತು ಅಪೊಸ್ತಲ ಪೌಲನ ಉದಾಹರಣೆ ನೋಡೋಣ. ಅವರಿಬ್ಬರಿಗೂ ಬೈಬಲ್‌ ಬಗ್ಗೆ ಒಳ್ಳೇ ಜ್ಞಾನ ಇತ್ತು. ಅವರ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ಅವರು ಜನರಿಗೆ ದೇವರ ಬಗ್ಗೆ ತುಂಬ ಚೆನ್ನಾಗಿ ಕಲಿಸ್ತಿದ್ರು. ತುಂಬ ಜನರನ್ನ ಯೇಸುವಿನ ಶಿಷ್ಯರಾಗಿ ಮಾಡಿದ್ರು. ಆದ್ರೆ ಯಾವತ್ತೂ ಒಬ್ಬರ ಮೇಲೊಬ್ಬರು ಪೈಪೋಟಿಗೆ ಇಳಿಲಿಲ್ಲ.

16. ಅಪೊಲ್ಲೋಸ ಎಂಥ ವ್ಯಕ್ತಿ ಆಗಿದ್ದ?

16 ಒಂದನೇ ಶತಮಾನದಲ್ಲಿ ವಿದ್ಯಾಭ್ಯಾಸಕ್ಕಂತ ಎಲ್ರೂ ಅಲೆಕ್ಸಾಂದ್ರಿಯಕ್ಕೆ ಬರುತ್ತಿದ್ರು. ಅಪೊಲ್ಲೋಸ ಆ ಊರಿನವನೇ. ಅವನು ಚೆನ್ನಾಗಿ ಭಾಷಣ ಕೊಡೋಕೆ ಕಲ್ತಿದ್ದ. “ಅವನಿಗೆ ಎಲ್ಲಾ ವಚನಗಳು ಚೆನ್ನಾಗಿ ಗೊತ್ತಿದ್ದವು.” (ಅ. ಕಾ. 18:24) ಅವನು ಸ್ವಲ್ಪ ಸಮಯ ಕೊರಿಂಥದಲ್ಲಿದ್ದ. ಅಲ್ಲಿದ್ದ ಸಹೋದರರಿಗೆ ಬೇರೆಯವರಿಗಿಂತ, ಪೌಲನಿಗಿಂತಾನೂ ಅವನಂದ್ರೆನೇ ತುಂಬ ಇಷ್ಟ ಇತ್ತು. (1 ಕೊರಿಂ. 1:12, 13) ಹಾಗಂತ ಅಪೊಲ್ಲೋಸ ಸಹೋದರರನ್ನ ತನ್ನ ಕಡೆ ಎಳ್ಕೊಂಡು ಸಭೆಯನ್ನ ಒಡಿಯೋಕೆ ಪ್ರಯತ್ನಿಸಿದ್ನಾ? ಇಲ್ಲ. ಅವನು ಕೊರಿಂಥ ಬಿಟ್ಟು ಹೋಗಿ ಸ್ವಲ್ಪ ಸಮಯ ಆದಮೇಲೆ ಪೌಲನೇ ಅವನನ್ನ ವಾಪಸ್‌ ಅಲ್ಲಿಗೆ ಹೋಗೋಕೆ ಹೇಳ್ತಾನೆ. (1 ಕೊರಿಂ. 16:12) ಅಪೊಲ್ಲೋಸ ಸಭೆಯಲ್ಲಿ ಒಡಕು ತರ್ತಾನೆ ಅನ್ನೋದಾಗಿದ್ರೆ ಪೌಲ ಅವನನ್ನ ವಾಪಸ್‌ ಕೊರಿಂಥಕ್ಕೆ ಹೋಗೋಕೆ ಹೇಳ್ತಿರಲಿಲ್ಲ. ಇದ್ರಿಂದ ಅಪೊಲ್ಲೋಸನ ಬಗ್ಗೆ ಏನು ಗೊತ್ತಾಗುತ್ತೆ? ಅವನು ತನಗೆ ಸಾಮರ್ಥ್ಯ ಇದೆ ಅಂತ ಅಹಂಕಾರ ಪಡಲಿಲ್ಲ. ಬದಲಿಗೆ ಅದನ್ನ ದೇವರ ಬಗ್ಗೆ ಸಾರೋಕೆ ಮತ್ತೆ ಸಹೋದರರನ್ನ ಬಲಪಡಿಸೋಕೆ ಉಪಯೋಗಿಸಿದ. ಅವನಿಗೆ ತುಂಬ ದೀನತೆನೂ ಇತ್ತು. ಯಾಕಂದ್ರೆ ಅಕ್ವಿಲ್ಲ ಮತ್ತು ಪ್ರಿಸ್ಕಿಲ್ಲ ಅವನಿಗೆ ‘ದೇವರ ಮಾರ್ಗದ ಬಗ್ಗೆ ಇನ್ನೂ ಸರಿಯಾಗಿ ವಿವರಿಸಿದಾಗ’ ಅವನು ಬೇಜಾರು ಮಾಡ್ಕೊಂಡಿಲ್ಲ.—ಅ. ಕಾ. 18:24-28.

17. ಸಭೆಯ ಒಗ್ಗಟ್ಟಿಗಾಗಿ ಪೌಲ ಏನು ಮಾಡಿದ?

17 ಅಪೊಲ್ಲೋಸನ ಸಾಮರ್ಥ್ಯದ ಬಗ್ಗೆ ಪೌಲನಿಗೆ ಚೆನ್ನಾಗಿ ಗೊತ್ತಿತ್ತು. ಆದ್ರೆ ಅವನು ತನಗಿಂತ ಎಲ್ಲಿ ಜಾಸ್ತಿ ಹೆಸ್ರು ಮಾಡಿಬಿಡ್ತಾನೋ ಅಂತ ಪೌಲ ಯಾವತ್ತೂ ಭಯಪಡಲಿಲ್ಲ. ಪೌಲನಿಗೆ ದೀನತೆ ಇತ್ತು. ತನ್ನ ಇತಿಮಿತಿ ಬಗ್ಗೆ ಅವನಿಗೆ ಚೆನ್ನಾಗಿ ಗೊತ್ತಿತ್ತು. ಇದು ಕೊರಿಂಥದವರಿಗೆ ಅವನು ಕೊಟ್ಟ ಸಲಹೆಯಿಂದ ಗೊತ್ತಾಗುತ್ತೆ. ಅಲ್ಲಿದ್ದ ಕೆಲವು ಸಹೋದರರು, “ನಾನು ಪೌಲನ ಶಿಷ್ಯ” ಅಂತ ಹೇಳ್ಕೊಳ್ತಾ ಇದ್ರು. ಆಗ ಪೌಲ ಅವರ ಗಮನನ ತನ್ನ ಕಡೆಯಿಂದ ಯೆಹೋವ ದೇವರ ಕಡೆ ಮತ್ತು ಯೇಸು ಕ್ರಿಸ್ತನ ಕಡೆ ತಿರುಗಿಸಿದ.—1 ಕೊರಿಂ. 3:3-6.

18. ಒಂದನೇ ಕೊರಿಂಥ 4:6, 7ರಲ್ಲಿ ಇರೋ ಹಾಗೆ ಅಪೊಲ್ಲೋಸ ಮತ್ತು ಪೌಲನಿಂದ ನಾವೇನು ಕಲಿತೀವಿ?

18 ಅಪೊಲ್ಲೋಸ ಮತ್ತು ಪೌಲನಿಂದ ನಾವೇನು ಕಲಿಬಹುದು? ನಾವು ಜಾಸ್ತಿ ಯೆಹೋವ ದೇವರ ಸೇವೆ ಮಾಡಿರಬಹುದು, ತುಂಬ ಜನರಿಗೆ ದೀಕ್ಷಾಸ್ನಾನ ತಗೊಳ್ಳೋಕೆ ಸಹಾಯ ಮಾಡಿರಬಹುದು. ಆದ್ರೆ ಇದೆಲ್ಲ ಆಗಿದ್ದು ಯೆಹೋವ ದೇವರ ಆಶೀರ್ವಾದದಿಂದಾನೇ ಅನ್ನೋದನ್ನ ಮನಸ್ಸಲ್ಲಿಡಬೇಕು. ಇವ್ರಿಂದ ಇನ್ನೂ ಒಂದು ಪಾಠ ಕಲಿತೀವಿ. ಸಭೆಯಲ್ಲಿ ಜವಾಬ್ದಾರಿ ಜಾಸ್ತಿ ಆದಷ್ಟು ಸಭೆಯ ಒಗ್ಗಟ್ಟನ್ನ ಕಾಪಾಡೋ ಜವಾಬ್ದಾರಿನೂ ಜಾಸ್ತಿ ಆಗುತ್ತೆ. ಹಾಗಾಗಿ ಸಭೆಯವರೆಲ್ಲ ಒಗ್ಗಟ್ಟಿಂದ ಇರೋಕೆ ಹಿರಿಯರು ಮತ್ತು ಸಹಾಯಕ ಸೇವಕರು ಸಹಾಯ ಮಾಡ್ತಾರೆ. ಅವರು ಯಾವಾಗಲೂ ಬೈಬಲಿಂದನೇ ನಮಗೆ ಬುದ್ಧಿವಾದ ಕೊಡ್ತಾರೆ. ಸಭೆಯವರು ತಮ್ಮ ಮಾತಲ್ಲ, ಯೇಸು ಮಾತನ್ನ ಕೇಳಬೇಕು, ಅವನ ತರ ಇರಬೇಕು ಅಂತ ಕಲಿಸ್ತಾರೆ.1 ಕೊರಿಂಥ 4:6, 7 ಓದಿ.

19. ನಮ್ಮಲ್ಲಿ ಪ್ರತಿಯೊಬ್ಬರು ಏನು ಮಾಡಬೇಕು? (“ ಪೈಪೋಟಿ ಮಾಡಬೇಡಿ” ಅನ್ನೋ ಚೌಕ ಸಹ ನೋಡಿ.)

19 ನಮ್ಮೆಲ್ಲರಿಗೂ ದೇವರು ಬೇರೆಬೇರೆ ಸಾಮರ್ಥ್ಯಗಳನ್ನ ಕೊಟ್ಟಿದ್ದಾರೆ. ಅವುಗಳನ್ನ “ಇನ್ನೊಬ್ರ ಸೇವೆ ಮಾಡೋಕೆ” ಬಳಸಬೇಕು. (1 ಪೇತ್ರ 4:10) ನಾವು ಮಾಡೋ ಸೇವೆ ಅಷ್ಟೇನು ದೊಡ್ಡದಲ್ಲ ಅಂತ ನಮಗೆ ಅನಿಸಬಹುದು. ಚಿಕ್ಕಚಿಕ್ಕ ಇಟ್ಟಿಗೆಗಳು ಹೇಗೆ ಒಂದು ಮನೆಯನ್ನ ಕಟ್ಟುತ್ತೋ ಹಾಗೇ ನೀವು ಮಾಡೋ ಚಿಕ್ಕಚಿಕ್ಕ ವಿಷ್ಯಗಳು ಸಭೆಯ ಒಗ್ಗಟ್ಟನ್ನ ಕಟ್ಟುತ್ತೆ. ಹಾಗಾಗಿ ಮನಸ್ಸಲ್ಲಿ ಪೈಪೋಟಿ ಅನ್ನೋ ವಿಷ ಗಿಡ ಚಿಗುರಿದಾಗೆಲ್ಲ ಕಿತ್ತು ಹಾಕೋಣ. ಸಭೆಯ ಒಗ್ಗಟ್ಟನ್ನ ಕಾಪಾಡಿಕೊಳ್ಳೋಕೆ ನಮ್ಮಿಂದ ಆಗೋದೆಲ್ಲಾ ಮಾಡೋಣ.—ಎಫೆ. 4:3.

ಗೀತೆ 95 “ಯೆಹೋವನು ಒಳ್ಳೆಯವನೆಂದು ಸವಿದು ನೋಡಿರಿ”

^ ಪ್ಯಾರ. 5 ಒಂದು ಮಡಿಕೆಯಲ್ಲಿ ಚಿಕ್ಕ ಚಿಕ್ಕ ಬಿರುಕುಗಳು ಬಂದ್ರೂ ಬೇಗ ಒಡೆದುಹೋಗುತ್ತೆ. ಅದೇ ತರ ಸಭೆಯಲ್ಲಿ ಚಿಕ್ಕಚಿಕ್ಕ ವಿಷಯಕ್ಕೆ ಪೈಪೋಟಿ ಶುರುವಾದರೂ ಸಭೆ ಒಡೆದುಹೋಗುತ್ತೆ. ಆಗ ಸಭೆಯಲ್ಲಿ ಒಗ್ಗಟ್ಟಿರಲ್ಲ. ನಾವೂ ನೆಮ್ಮದಿಯಿಂದ ದೇವರನ್ನ ಆರಾಧನೆ ಮಾಡಕ್ಕಾಗಲ್ಲ. ಹಾಗಾಗಿ ಪೈಪೋಟಿ ಮಾಡದೆ ಒಗ್ಗಟ್ಟಿಂದ ಇರೋದು ಹೇಗಂತ ಈ ಲೇಖನದಲ್ಲಿ ನೋಡೋಣ.

^ ಪ್ಯಾರ. 4 ಹೆಸರು ಬದಲಾಗಿದೆ.