ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 31

ಯೆಹೋವನ ಸಮಯಕ್ಕಾಗಿ ಕಾಯುತ್ತೀರಾ?

ಯೆಹೋವನ ಸಮಯಕ್ಕಾಗಿ ಕಾಯುತ್ತೀರಾ?

“ತಾಳ್ಮೆಯಿಂದ ಕಾಯ್ತೀನಿ.”—ಮೀಕ 7:7.

ಗೀತೆ 135 ಕಡೇ ವರೆಗೆ ತಾಳಿಕೊಳ್ಳುವುದು

ಕಿರುನೋಟ *

1-2. ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ನೋಡ್ತೀವಿ?

ನಿಮ್ಮ ಒಬ್ಬ ಸ್ನೇಹಿತ ನಿಮಗೆ ಬೇಕಾಗಿರೋ ಒಂದು ವಸ್ತುನ ತಗೊಂಡು ಬರ್ತೀನಿ ಅಂತ ಹೇಳಿದ್ದಾನೆ. ನೀವು ಅದಕ್ಕೋಸ್ಕರ ಕಾಯ್ತಾ ಇದ್ದೀರ. ಅವನು ಹೇಳಿದ ಸಮಯಕ್ಕೆ ಬಂದಿಲ್ಲಾಂದ್ರೆ ನಿಮಗೆ ಹೇಗನಿಸುತ್ತೆ? ತಲೆಕೆಟ್ಟು ಹೋಗುತ್ತೆ ಅಲ್ವಾ? ಅದಕ್ಕೇ ಜ್ಞಾನೋಕ್ತಿ 13:12 ಹೀಗೆ ಹೇಳುತ್ತೆ: ‘ಅಂದ್ಕೊಂಡಿದ್ದು ಆಗೋಕೆ ತಡ ಆದಾಗ ಬೇಜಾರಾಗುತ್ತೆ.’ ಆದ್ರೆ ನಿಮ್ಮ ಸ್ನೇಹಿತ ತಡಮಾಡ್ತಾ ಇರೋದಕ್ಕೆ ಕಾರಣ ಏನು ಅಂತ ಗೊತ್ತಾದಾಗ ತಾಳ್ಮೆಯಿಂದ ಕಾಯ್ತೀರ ಅಲ್ವಾ?

2 “ತಾಳ್ಮೆಯಿಂದ” ಕಾಯೋ ಗುಣ ಬೆಳೆಸಿಕೊಳ್ಳೋಕೆ ಯಾವ ಬೈಬಲ್‌ ತತ್ವಗಳು ಸಹಾಯ ಮಾಡುತ್ತೆ? (ಮೀಕ 7:7) ಯಾವ ಎರಡು ಸನ್ನಿವೇಶದಲ್ಲಿ ನಾವು ಯೆಹೋವನ ಸಮಯಕ್ಕಾಗಿ ಕಾಯಬೇಕಾಗುತ್ತೆ? ತಾಳ್ಮೆಯಿಂದ ಕಾಯುವವರಿಗೆ ಯೆಹೋವ ಯಾವ ಆಶೀರ್ವಾದಗಳನ್ನ ಕೊಡ್ತಾರೆ? ಈ ಪ್ರಶ್ನೆಗಳಿಗೆ ನಾವೀಗ ಉತ್ತರ ನೋಡೋಣ.

ತಾಳ್ಮೆಯನ್ನು ಕಲಿಸೋ ಬೈಬಲ್‌ ತತ್ವಗಳು

3. ಜ್ಞಾನೋಕ್ತಿ 13:11ರಿಂದ ನಾವೇನು ಕಲಿತೀವಿ?

3 ನಾವ್ಯಾಕೆ ತಾಳ್ಮೆಯಿಂದ ಇರಬೇಕು ಅಂತ ಅರ್ಥಮಾಡಿಕೊಳ್ಳೋಕೆ ಬೈಬಲಲ್ಲಿ ಇರೋ ಕೆಲವು ತತ್ವಗಳನ್ನ ನೋಡೋಣ. ಅದರಲ್ಲಿ ಒಂದು ಏನಂದ್ರೆ, “ದಿನ ಬೆಳಗಾಗುವಷ್ಟರಲ್ಲಿ ಮಾಡಿದ ಹಣ-ಆಸ್ತಿ ಕರಗಿಹೋಗುತ್ತೆ, ಸ್ವಲ್ಪಸ್ವಲ್ಪವಾಗಿ ಸೇರಿಸಿಟ್ಟ ಸೊತ್ತು ಜಾಸ್ತಿ ಆಗುತ್ತೆ.” (ಜ್ಞಾನೋ. 13:11, ಪಾದಟಿಪ್ಪಣಿ) ಈ ವಚನದಿಂದ ನಾವೇನು ಕಲಿತೀವಿ? ಒಬ್ಬ ಬುದ್ಧಿವಂತ ಏನೇ ಮಾಡಿದ್ರೂ ಚೆನ್ನಾಗಿ ಯೋಚನೆ ಮಾಡಿ ತಾಳ್ಮೆಯಿಂದ ಮಾಡ್ತಾನೆ. ಅದ್ರಿಂದ ಅವನಿಗೆ ತುಂಬ ಪ್ರಯೋಜನ ಸಿಗುತ್ತೆ.

4. ಜ್ಞಾನೋಕ್ತಿ 4:18ರಿಂದ ನಾವೇನು ಕಲಿತೀವಿ?

4 ಜ್ಞಾನೋಕ್ತಿ 4:18ರಲ್ಲಿ “ನೀತಿವಂತನ ದಾರಿ ಬೆಳಿಗ್ಗೆ ಕಾಣೋ ಕಿರಣಗಳ ತರ ಹೊಳೆಯುತ್ತೆ, ಮಟಮಟ ಮಧ್ಯಾಹ್ನ ಆಗ್ತಾ ಆ ಬೆಳಕು ಹೆಚ್ಚಾಗ್ತಾನೇ ಹೋಗುತ್ತೆ” ಅಂತ ಹೇಳುತ್ತೆ. ಯೆಹೋವ ದೇವರು ತನ್ನ ಉದ್ದೇಶನ ತನ್ನ ಜನರಿಗೆ ಹಂತ-ಹಂತವಾಗಿ ಹೇಳ್ತಾರೆ ಅಂತ ಈ ವಚನ ತಿಳಿಸುತ್ತೆ. ಈ ವಚನವನ್ನ ನಾವು ಇನ್ನೊಂದು ರೀತಿಯಲ್ಲೂ ಅನ್ವಯ ಮಾಡ್ಕೊಬಹುದು. ಹೇಗಂದ್ರೆ ಒಬ್ಬ ವ್ಯಕ್ತಿ ಯೆಹೋವನ ಜೊತೆ ಸ್ನೇಹ ಬೆಳೆಸಿಕೊಳ್ಳೋಕೆ ಸಮಯ ಹಿಡಿಯುತ್ತೆ. ಅವನು ಆ ಸ್ನೇಹವನ್ನ ತಟ್ಟಂಥ ಬೆಳೆಸಿಕೊಳ್ಳೋಕೆ ಆಗಲ್ಲ. ಬೈಬಲ್‌ ಮತ್ತು ಸಂಘಟನೆ ಹೇಳೋದನ್ನ ಚೆನ್ನಾಗಿ ಅರ್ಥಮಾಡ್ಕೊಂಡು ಪಾಲಿಸಿದ್ರೆ ಯೇಸುವಿನಲ್ಲಿರೋ ಗುಣಗಳನ್ನ ನಾವು ನಿಧಾನವಾಗಿ ಬೆಳೆಸಿಕೊಳ್ತೀವಿ. ದೇವರ ಬಗ್ಗೆನೂ ಇನ್ನೂ ಚೆನ್ನಾಗಿ ತಿಳಿದುಕೊಳ್ತಾ ಹೋಗ್ತೀವಿ. ಈಗ ಯೇಸು ಹೇಳಿರೋ ಒಂದು ಉದಾರಹರಣೆ ಬಗ್ಗೆ ನೋಡೋಣ ಬನ್ನಿ.

ಒಂದು ಗಿಡ ಸ್ವಲ್ಪಸ್ವಲ್ಪವಾಗಿ ಬೆಳಿಯೋ ಹಾಗೆ ದೇವರ ಸಂದೇಶ ಒಬ್ಬ ವ್ಯಕ್ತಿಯ ಹೃದಯದಲ್ಲಿ ನಿಧಾನವಾಗಿ ಬೆಳೆಯುತ್ತೆ (ಪ್ಯಾರ 5 ನೋಡಿ)

5. (ಎ) ಯೇಸು ಯಾವ ಉದಾಹರಣೆ ಕೊಟ್ರು? (ಬಿ) ಆ ಉದಾಹರಣೆಯ ಅರ್ಥ ಏನು?

5 ಯೇಸು ಕೊಟ್ಟ ಉದಾಹರಣೆಯಲ್ಲಿ ದೇವರ ಸಂದೇಶವನ್ನ ಒಂದು ಚಿಕ್ಕ ಬೀಜಕ್ಕೆ ಹೋಲಿಸಿದ್ದಾರೆ. ಅದು ಒಳ್ಳೇದನ್ನ ಪ್ರೀತಿಸೋ ಜನರ ಹೃದಯದಲ್ಲಿ ನಿಧಾನವಾಗಿ ಬೆಳಿಯುತ್ತೆ. ಅದರ ಬಗ್ಗೆ ಯೇಸು ಹೀಗೆ ಹೇಳಿದ್ರು: “ಬೀಜ ಮೊಳಕೆ ಒಡೆದು ಎತ್ರಕ್ಕೆ ಬೆಳೆದಿರುತ್ತೆ. ಆದ್ರೆ ಅದು ಹೇಗೆ ಅಂತ ಅವನಿಗೆ [ಬಿತ್ತುವವನಿಗೆ] ಗೊತ್ತಾಗಲ್ಲ. ನೆಲ ತನ್ನಷ್ಟಕ್ಕೆ ತಾನೇ ನಿಧಾನವಾಗಿ ಫಲ ಕೊಡುತ್ತೆ. ಮೊದಲು ಹುಲ್ಲು ಬರುತ್ತೆ, ಆಮೇಲೆ ತೆನೆ ಬಿಡುತ್ತೆ, ಕೊನೆಗೆ ಅದ್ರಲ್ಲಿ ಧಾನ್ಯ ತುಂಬಿಕೊಳ್ಳುತ್ತೆ.” (ಮಾರ್ಕ 4:27, 28) ಯೇಸುವಿನ ಮಾತಿನ ಅರ್ಥ ಏನು? ಒಂದು ಗಿಡ ಸ್ವಲ್ಪಸ್ವಲವಾಗಿ ಬೆಳಿಯೋ ಹಾಗೆ ಒಬ್ಬ ವ್ಯಕ್ತಿಯ ಹೃದಯದಲ್ಲಿ ದೇವರ ಸಂದೇಶ ನಿಧಾನವಾಗಿ ಬೆಳಿಯುತ್ತೆ. ಅಂದ್ರೆ ಬೈಬಲ್‌ ವಿದ್ಯಾರ್ಥಿಗಳು ಯೆಹೋವನಿಗೆ ಹತ್ರ ಆದ ಹಾಗೆ ಜೀವನದಲ್ಲಿ ಒಂದೊಂದೇ ಬದಲಾವಣೆ ಮಾಡಿಕೊಳ್ತಾ ಹೋಗ್ತಾರೆ. (ಎಫೆ. 4:22-24) ದೇವರ ಸಂದೇಶ ಅನ್ನೋ ಬೀಜ ಬೆಳಿಯೋ ಹಾಗೆ ಮಾಡೋದು ಯೆಹೋವ ದೇವರೇ.—1 ಕೊರಿಂ. 3:7.

6-7. ಯೆಹೋವ ದೇವರು ಭೂಮಿನ ಸೃಷ್ಟಿಮಾಡಿದ ವಿಧದಿಂದ ಆತನ ಬಗ್ಗೆ ಏನು ಗೊತ್ತಾಗುತ್ತೆ?

6 ಯೆಹೋವ ದೇವರು ಏನೇ ಮಾಡಿದ್ರೂ ಅದಕ್ಕೆ ಸಾಕಷ್ಟು ಸಮಯ ತಗೊಂಡು ಅದನ್ನ ಅಚ್ಚುಕಟ್ಟಾಗಿ ಮಾಡಿ ಮುಗಿಸ್ತಾರೆ. ತನ್ನ ಹೆಸರಿಗೆ ಗೌರವ ಸಿಗಬೇಕು, ಬೇರೆಯವರಿಗೆ ಪ್ರಯೋಜನ ಆಗಬೇಕು ಅಂತ ಯೆಹೋವ ದೇವರು ಹೀಗೆ ಮಾಡ್ತಾರೆ. ಇದಕ್ಕೊಂದು ಉದಾಹರಣೆ ನಮ್ಮ ಕಣ್ಮುಂದೆನೇ ಇದೆ. ದೇವರು ಮನುಷ್ಯನನ್ನು ಸೃಷ್ಟಿಮಾಡೋ ಮುಂಚೆ ಭೂಮಿಲಿ ಇರೋದನ್ನ ಒಂದೊಂದೇ ರೆಡಿ ಮಾಡಿ ಆಮೇಲೆ ಮನುಷ್ಯನನ್ನು ಸೃಷ್ಟಿಮಾಡಿದ್ರು.

7 ಯೆಹೋವ ದೇವರು ಭೂಮಿನ ಸೃಷ್ಟಿಮಾಡುವಾಗ ಅದರ ‘ಉದ್ದ ಅಗಲ ಅಳೆದ್ರು, ಆಧಾರ ಕಂಬಗಳನ್ನ ಇಟ್ರು, ಮೂಲೆಗಲ್ಲು ಇಟ್ರು’ ಅಂತ ಬೈಬಲ್‌ ಹೇಳುತ್ತೆ. (ಯೋಬ 38:5, 6) ಎಲ್ಲಾ ಕೆಲಸ ಮುಗಿಸಿದ ಮೇಲೆ ಅದು ಹೇಗಿದೆ ಅಂತ ನೋಡೋಕೆ ಸಮಯನೂ ಮಾಡ್ಕೊಂಡ್ರು. (ಆದಿ. 1:10, 12) ದೇವರು ಭೂಮಿಲಿ ಒಂದೊಂದೇ ಕೆಲಸ ಮಾಡ್ತಾ ಇರೋದನ್ನ ನೋಡಿದಾಗ ದೇವದೂತರು ತುಂಬ ‘ಖುಷಿಯಿಂದ ಜೈಕಾರ ಹಾಕಿದ್ರು.’ (ಯೋಬ 38:7) ಯೆಹೋವ ದೇವರಿಂದ ನಾವೇನು ಕಲಿಬಹುದು? ಯೆಹೋವ ದೇವರು ಭೂಮಿ, ನಕ್ಷತ್ರ, ಪ್ರಾಣಿ, ಪಕ್ಷಿ ಎಲ್ಲವನ್ನ ಸೃಷ್ಟಿಮಾಡೋಕೆ ಸಾವಿರಾರು ವರ್ಷ ತಗೊಂಡ್ರು. ಇದನ್ನೆಲ್ಲಾ ತುಂಬ ಯೋಚ್ನೆ ಮಾಡಿ ಅಚ್ಚುಕಟ್ಟಾಗಿ ಮಾಡಿ ಮುಗಿಸಿ ನೋಡಿದಾಗ ‘ಅವು ತುಂಬ ಚೆನ್ನಾಗಿತ್ತು’ ಅಂತ ಹೇಳಿದ್ರು.—ಆದಿ. 1:31.

8. ನಾವೀಗ ಏನನ್ನು ಚರ್ಚಿಸುತ್ತೀವಿ?

8 ತಾಳ್ಮೆಯಿಂದ ಕಾಯೋದು ಮುಖ್ಯ ಅಂತ ತೋರಿಸೋ ಕೆಲವು ತತ್ವಗಳನ್ನ ನಾವು ಇಲ್ಲಿ ತನಕ ನೋಡಿದ್ವಿ. ಈಗ ತಾಳ್ಮೆ ತೋರಿಸಬೇಕಾದ ಎರಡು ಸನ್ನಿವೇಶಗಳನ್ನ ನೋಡೋಣ.

ಯಾವಾಗೆಲ್ಲಾ ತಾಳ್ಮೆಯಿಂದ ಕಾಯಬೇಕು?

9. ನಾವು ಯಾವಾಗ ತಾಳ್ಮೆಯಿಂದ ಕಾಯಬೇಕಾಗುತ್ತೆ?

9 ನಮ್ಮ ಪ್ರಾರ್ಥನೆಗಳಿಗೆ ತಕ್ಷಣ ಉತ್ರ ಸಿಗದೇ ಇದ್ದಾಗ ಕಾಯಬೇಕಾಗುತ್ತೆ. ಉದಾಹರಣೆಗೆ, ಕಷ್ಟ ತಾಳಿಕೊಳ್ಳೋಕೆ ಅಥವಾ ಒಂದು ಕೆಟ್ಟ ಅಭ್ಯಾಸ ಬಿಟ್ಟುಬಿಡೋಕೆ ಸಹಾಯ ಮಾಡಪ್ಪಾ ಅಂತ ಪ್ರಾರ್ಥನೆ ಮಾಡಿರುತ್ತೀರ ಅಂದ್ಕೊಳ್ಳಿ. ಅದಕ್ಕೆ ಉತ್ರ ಸಿಗದೇ ಇದ್ದಾಗ ‘ಇನ್ನೆಷ್ಟು ದಿನ ಕಾಯಬೇಕಪ್ಪಾ’ ಅಂತ ನಿಮಗೆ ಅನಿಸಬಹುದು. ಯೆಹೋವ ದೇವರು ನಮ್ಮ ಪ್ರಾರ್ಥನೆಗಳಿಗೆ ಯಾಕೆ ತಕ್ಷಣ ಉತ್ರ ಕೊಡಲ್ಲಾ?

10. ಕೆಲವೊಂದು ಸಲ ಪ್ರಾರ್ಥನೆ ಮಾಡಿದ ಮೇಲೆ ಉತ್ತರಕ್ಕೋಸ್ಕರ ನಾವು ಯಾಕೆ ಕಾಯಬೇಕಾಗುತ್ತೆ?

10 ಯೆಹೋವ ದೇವರು ನಮ್ಮ ಪ್ರಾರ್ಥನೆಗಳನ್ನ ಗಮನಕೊಟ್ಟು ಕೇಳಿಸಿಕೊಳ್ತಾರೆ. (ಕೀರ್ತ. 65:2) ಆತನ ಮೇಲೆ ನಮಗೆಷ್ಟು ನಂಬಿಕೆಯಿದೆ ಅಂತ ನಾವು ಮಾಡೋ ಪ್ರಾರ್ಥನೆಯಿಂದ ಗೊತ್ತಾಗುತ್ತೆ. (ಇಬ್ರಿ. 11:6) ‘ನಿನ್ನನ್ನ ಮೆಚ್ಚಿಸಕ್ಕೆ ಸಹಾಯ ಮಾಡಪ್ಪಾ’ ಅಂತ ಪ್ರಾರ್ಥನೆ ಮಾಡಿದ ಮೇಲೆ ಅದೇ ತರ ನಡೆದುಕೊಳ್ತಾ ಇದ್ದೀವ ಅಂತನೂ ದೇವರು ಗಮನಿಸುತ್ತಾರೆ. (1 ಯೋಹಾ. 3:22) ಹಾಗಾಗಿ ‘ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡೋಕೆ ಸಹಾಯ ಮಾಡಪ್ಪಾ’ ಅಂತ ಪ್ರಾರ್ಥನೆ ಮಾಡಿದ ಮೇಲೆ ನಮ್ಮ ಪ್ರಯತ್ನನೂ ಇರಬೇಕು, ತಾಳ್ಮೆಯಿಂದ ಕಾಯ್ತಾ ಇರಬೇಕು. ಕೆಲವೊಮ್ಮೆ ನಮ್ಮ ಪ್ರಾರ್ಥನೆಗಳಿಗೆ ತಕ್ಷಣ ಉತ್ರ ಸಿಕ್ಕಿಬಿಡಲ್ಲ. ಅದಕ್ಕೆ “ಕೇಳ್ತಾ ಇರಿ, ದೇವರು ನಿಮಗೆ ಕೊಡ್ತಾನೆ. ಹುಡುಕ್ತಾ ಇರಿ, ನಿಮಗೆ ಸಿಗುತ್ತೆ. ತಟ್ಟುತ್ತಾ ಇರಿ, ತೆರಿಯುತ್ತೆ. ಯಾಕಂದ್ರೆ ಕೇಳೋ ಪ್ರತಿಯೊಬ್ಬನೂ ಪಡ್ಕೊಳ್ತಾನೆ, ಹುಡುಕೋ ಪ್ರತಿಯೊಬ್ಬನಿಗೆ ಸಿಗುತ್ತೆ, ತಟ್ಟೋ ಪ್ರತಿಯೊಬ್ಬನಿಗೆ ಬಾಗಿಲು ತೆರೆಯುತ್ತೆ” ಅಂತ ಯೇಸು ಹೇಳಿದ್ದಾರೆ. (ಮತ್ತಾ. 7:7, 8) ಯೇಸು ಹೇಳಿದ ತರ ನಾವು “ಪ್ರಾರ್ಥನೆ ಮಾಡ್ತಾ” ಇದ್ರೆ ಯೆಹೋವ ದೇವರು ಖಂಡಿತ ನಮ್ಮ ಪ್ರಾರ್ಥನೆಗಳನ್ನ ಕೇಳಿ ಅದಕ್ಕೆ ಉತ್ರ ಕೊಡ್ತಾರೆ.—ಕೊಲೊ. 4:2.

ದೇವರ ಮೇಲೆ ನಂಬಿಕೆಯಿಟ್ಟು ಪ್ರಾರ್ಥನೆ ಮಾಡ್ತಾ ಕಾಯಬೇಕು (ಪ್ಯಾರ 11 ನೋಡಿ) *

11. ನಮ್ಮ ಪ್ರಾರ್ಥನೆಗೆ ಉತ್ತರ ಸಿಗ್ತಿಲ್ಲ ಅನಿಸಿದ್ರೆ ಯಾವುದನ್ನ ಮನಸ್ಸಲ್ಲಿ ಇಡಬೇಕು? (ಇಬ್ರಿಯ 4:16)

11 ಪ್ರಾರ್ಥನೆಗೆ ಉತ್ತರ ಸಿಗದಿದ್ದಾಗ ‘ಇನ್ನೆಷ್ಟು ದಿನ ಕಾಯಬೇಕಪ್ಪಾ’ ಅಂತ ಅನಿಸಬಹುದು. ಆದ್ರೆ ನಮಗೆ “ಸಹಾಯ ಬೇಕಿದ್ದಾಗ” ಸರಿಯಾದ ಸಮಯದಲ್ಲಿ ಸಹಾಯ ಮಾಡ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾರೆ. (ಇಬ್ರಿಯ 4:16 ಓದಿ.) ಅದಕ್ಕೆ ನಾವು ಅಂದುಕೊಂಡ ಸಮಯದಲ್ಲಿ ಉತ್ತರ ಸಿಗದಿದ್ರೆ ಯೆಹೋವ ದೇವರನ್ನ ದೂರಬಾರದು. ಉದಾಹರಣೆಗೆ ನಮ್ಮಲ್ಲಿ ತುಂಬ ಜನ ದೇವರ ಸರ್ಕಾರ ಭೂಮಿಗೆ ಬರಲಿ ಅಂತ ಪ್ರಾರ್ಥನೆ ಮಾಡ್ತಾ ವರ್ಷಗಳಿಂದ ಕಾಯ್ತಾ ಇದ್ದಾರೆ. ದೇವರ ಸರ್ಕಾರಕ್ಕಾಗಿ ಪ್ರಾರ್ಥನೆ ಮಾಡಿ ಅಂತ ಯೇಸುನೂ ಹೇಳಿದ್ರು. (ಮತ್ತಾ. 6:10) ನಾವು ಅಂದುಕೊಂಡ ಸಮಯಕ್ಕೆ ಅಂತ್ಯ ಬಂದಿಲ್ಲ ಅಂತ ದೇವರ ಮೇಲೆ ನಂಬಿಕೆ ಕಳಕೊಂಡ್ರೆ ಅದು ಮೂರ್ಖತನ. (ಹಬ. 2:3; ಮತ್ತಾ. 24:44) ಅದರ ಬದಲು ದೇವರ ಮೇಲೆ ನಂಬಿಕೆ ಇಟ್ಟು ಪ್ರಾರ್ಥನೆ ಮಾಡ್ತಾ ಆ ದಿನಕ್ಕೋಸ್ಕರ ಕಾಯಬೇಕು. ಅದು ಬುದ್ಧಿವಂತರ ಲಕ್ಷಣ. ಯೆಹೋವ ದೇವರು ಈಗಾಗಲೇ ಅಂತ್ಯ ತರೋ “ದಿನ ಮತ್ತು ಸಮಯ” ತೀರ್ಮಾನ ಮಾಡಿದ್ದಾರೆ. ಆ ಸಮಯಕ್ಕೆ ಖಂಡಿತ ಅಂತ್ಯ ಆಗುತ್ತೆ. ಆಗ ನಮಗೆ ಯೆಹೋವನ ಸಮಯನೇ ಸರಿಯಾಗಿತ್ತು ಅಂತ ಅರ್ಥ ಆಗುತ್ತೆ.—ಮತ್ತಾ. 24:36; 2 ಪೇತ್ರ 3:15.

ಯೋಸೇಫನ ತರ ನಾವು ಹೇಗೆ ತಾಳ್ಮೆ ತೋರಿಸಬಹುದು? (ಪ್ಯಾರ 12-14 ನೋಡಿ)

12. ನಮಗೆ ಯಾವಾಗ ತಾಳ್ಮೆ ತೋರಿಸೋಕೆ ಕಷ್ಟ ಆಗುತ್ತೆ?

12 ಅನ್ಯಾಯ ಆದಾಗ ಸರಿಯಾಗೋ ತನಕ ಕಾಯಬೇಕು. ಲೋಕದಲ್ಲಿ ಜನ್ರು ಗಂಡು-ಹೆಣ್ಣು ಅಂತ ಭೇದಭಾವ ಮಾಡ್ತಾರೆ, ಬೇರೆ ದೇಶ, ಜಾತಿ, ಸಂಸ್ಕೃತಿಯನ್ನ ಕೀಳಾಗಿ ನೋಡ್ತಾರೆ. ಇನ್ನೂ ಕೆಲವರು ಅಂಗವಿಕಲತೆ, ಮಾನಸಿಕ ಕಾಯಿಲೆ ಇರುವವರ ಜೊತೆ ಚೆನ್ನಾಗಿ ನಡಕೊಳ್ಳೋದಿಲ್ಲ. ಬೈಬಲ್‌ ಹೇಳೋ ತರ ನಡ್ಕೊಳ್ಳೋದ್ರಿಂದ ಎಷ್ಟೋ ಯೆಹೋವನ ಸಾಕ್ಷಿಗಳಿಗೆ ಅನ್ಯಾಯ ಆಗ್ತಿದೆ. ಒಂದುವೇಳೆ ನಮಗೆ ಯಾರಾದ್ರೂ ಅನ್ಯಾಯ ಮಾಡಿದ್ರೆ ಯೇಸು ಹೇಳಿದ ಮಾತನ್ನ ಮನಸ್ಸಲ್ಲಿ ಇಡಬೇಕು. ಅದೇನಂದ್ರೆ “ಕೊನೇ ತನಕ ತಾಳ್ಕೊಳ್ಳುವವನಿಗೆ ರಕ್ಷಣೆ ಸಿಗುತ್ತೆ.” (ಮತ್ತಾ. 24:13) ಸಭೆಯಲ್ಲೇ ಯಾರಾದ್ರೂ ನಿಮಗೆ ಅನ್ಯಾಯ ಮಾಡಿದ್ರೆ ನೀವೇನು ಮಾಡ್ತೀರಾ? ಹಿರಿಯರಿಗೆ ಹೇಳಿದ ಮೇಲೆ ಅದನ್ನ ಅವರು ನೋಡಿಕೊಳ್ಳೋಕೆ ಬಿಡ್ತೀರಾ? ಯೆಹೋವ ದೇವರು ಹೇಳೋ ತರಾನೇ ಹಿರಿಯರು ಅದನ್ನ ಸರಿಮಾಡೋ ತನಕ ನೀವು ಕಾಯ್ತೀರಾ? ಇಂಥ ಸಮಯದಲ್ಲಿ ಹಿರಿಯರು ಏನು ಮಾಡ್ತಾರೆ ಅಂತ ಈಗ ನೋಡೋಣ.

13. ಸಭೆಯಲ್ಲಿ ಯಾರಾದ್ರೂ ದೊಡ್ಡ ತಪ್ಪು ಮಾಡಿದ್ದು ಹಿರಿಯರಿಗೆ ಗೊತ್ತಾದ್ರೆ ಏನು ಮಾಡ್ತಾರೆ?

13 ಸಭೆಯಲ್ಲಿ ಯಾರಾದ್ರೂ ದೊಡ್ಡ ತಪ್ಪು ಮಾಡಿದ್ದು ಹಿರಿಯರಿಗೆ ಗೊತ್ತಾದ್ರೆ ಏನು ಮಾಡ್ತಾರೆ? ಅವರು ನಿಜವಾಗ್ಲೂ ಏನು ನಡೆದಿದೆ ಅಂತ ಅರ್ಥಮಾಡಿಕೊಳ್ಳೋಕೆ ‘ಸ್ವರ್ಗದಿಂದ ಬರೋ ವಿವೇಕಕ್ಕಾಗಿ’ ಪ್ರಾರ್ಥಿಸುತ್ತಾರೆ. (ಯಾಕೋ. 3:17) ತಪ್ಪು ಮಾಡಿದವರನ್ನ ‘ತಿದ್ದಿ ಸರಿದಾರಿಗೆ’ ತರೋದೇ ಹಿರಿಯರ ಉದ್ದೇಶ. (ಯಾಕೋ. 5:19, 20) ಅದರ ಜೊತೆ ಸಭೆಯನ್ನ ಕಾಪಾಡೋ ಮತ್ತು ಅನ್ಯಾಯ ಆದವರಿಗೆ ಸಮಾಧಾನ ಮಾಡೋ ಜವಾಬ್ದಾರಿ ಹಿರಿಯರ ಮೇಲಿದೆ. (2 ಕೊರಿಂ. 1:3, 4) ಹಾಗಾಗಿ ಒಂದು ದೊಡ್ಡ ತಪ್ಪು ನಡೆದಾಗ ನಿಜ ಏನು ಅಂತ ಅವರು ತಿಳ್ಕೊಬೇಕಾಗುತ್ತೆ. ಅದಕ್ಕೆ ಸಮಯ ಹಿಡಿಯುತ್ತೆ. ನಿಜ ಏನು ಅಂತ ತಿಳ್ಕೊಂಡ ಮೇಲೆ ಅವರು ಚೆನ್ನಾಗಿ ಪ್ರಾರ್ಥನೆ ಮಾಡ್ತಾರೆ. ತಪ್ಪು ಮಾಡಿರೋ ವ್ಯಕ್ತಿಗೆ ಬುದ್ಧಿವಾದ ಹೇಳಿ “ಸರಿಯಾದ ಪ್ರಮಾಣದಲ್ಲಿ” ತಿದ್ದುತ್ತಾರೆ. (ಯೆರೆ. 30:11) ಹಿರಿಯರು ಒಂದು ತೀರ್ಮಾನ ಮಾಡುವಾಗ ದುಡುಕಲ್ಲ, ತುಂಬ ತಡನೂ ಮಾಡಲ್ಲ. ಹೀಗೆ ಹಿರಿಯರು ಯೆಹೋವ ದೇವರು ಇಷ್ಟ ಪಡೋ ತರ ಸಮಸ್ಯೆನ ಬಗೆಹರಿಸೋಕೆ ಪ್ರಯತ್ನ ಹಾಕಿದಾಗ ಇಡೀ ಸಭೆಗೆ ಒಳ್ಳೆದಾಗುತ್ತೆ. ಹಿರಿಯರು ಹೀಗೆಲ್ಲಾ ಮಾಡಿದ ಮೇಲೂ ಅನ್ಯಾಯ ಆದ ಕೆಲವರಿಗೆ ನೋವು ಇನ್ನೂ ಕಮ್ಮಿ ಆಗಿರಲ್ಲ. ಆ ನೋವನ್ನ ಕಮ್ಮಿ ಮಾಡಿಕೊಳ್ಳೋಕೆ ಏನು ಮಾಡಬೇಕು?

14. ಸಭೆಯಲ್ಲಿ ಯಾರಿಂದಾದ್ರೂ ನಿಮಗೆ ಅನ್ಯಾಯ ಆಗಿದ್ರೆ ಯಾರ ಉದಾಹರಣೆ ಸಹಾಯ ಮಾಡುತ್ತೆ?

14 ನಿಮ್ಮ ಸಭೆಯಲ್ಲಿರೋ ಸಹೋದರ ಅಥವಾ ಸಹೋದರಿಯಿಂದ ನಿಮಗೆ ಅನ್ಯಾಯ ಆಗಿದ್ಯಾ? ಹಾಗಾದ್ರೆ ಆ ಅನ್ಯಾಯ ಸರಿಹೋಗೋ ತನಕ ತಾಳ್ಮೆಯಿಂದ ಇರೋಕೆ ಸಹಾಯ ಮಾಡೋ ಒಳ್ಳೇ ಉದಾಹರಣೆಗಳು ಬೈಬಲಲ್ಲಿ ಇವೆ. ಈಗ ಯೋಸೇಫನ ಉದಾಹರಣೆ ನೋಡೋಣ. ಅವನಿಗೆ ತನ್ನ ಅಣ್ಣಂದಿರಿಂದಾನೇ ಅನ್ಯಾಯ ಆಯ್ತು. ಆಗ ಅವನಿಗೆ ತುಂಬ ಬೇಜಾರಾಯ್ತು. ಆದ್ರೆ ಅವನು ಅವರ ಮೇಲೆ ಕೋಪ, ದ್ವೇಷ ಬೆಳೆಸಿಕೊಳ್ಳಲಿಲ್ಲ. ಬದಲಿಗೆ ಯೆಹೋವನ ಕೆಲಸಕ್ಕೆ ಪೂರ್ತಿ ಗಮನ ಕೊಟ್ಟ. ಅವನ ತಾಳ್ಮೆಯನ್ನ ಯೆಹೋವ ಗಮನಿಸಿದ್ರು ಮತ್ತು ಪ್ರತಿಫಲ ಕೊಟ್ರು. (ಆದಿ. 39:21) ಯೆಹೋವ ದೇವರು ತನ್ನನ್ನ ಹೇಗೆ ಆಶೀರ್ವದಿಸಿದ್ದಾರೆ ಅನ್ನೋದನ್ನ ಅರ್ಥಮಾಡ್ಕೊಂಡ. ಹಾಗಾಗಿ ತನಗೆ ನೋವು ಮಾಡಿದವರನ್ನ ಯೋಸೇಫ ಕ್ಷಮಿಸಿದ. (ಆದಿ. 45:5) ಸರಿಯಾದ ಸಮಯದಲ್ಲಿ ಯೆಹೋವ ಅನ್ಯಾಯವನ್ನ ಸರಿ ಮಾಡ್ತಾರೆ ಅಂತ ಯೋಸೇಫನ ತರ ನಾವೂ ನಂಬಬೇಕು.—ಕೀರ್ತ. 7:17; 73:28.

15. ಅನ್ಯಾಯ ಆದಾಗ ತಾಳ್ಮೆಯಿಂದ ಇರೋಕೆ ಸಹೋದರಿಗೆ ಯಾವುದು ಸಹಾಯ ಮಾಡ್ತು?

15 ಸಭೆಯವರಿಂದ ಚಿಕ್ಕಪುಟ್ಟ ವಿಷ್ಯದಲ್ಲೂ ನಮಗೆ ಬೇಜಾರಾಗಬಹುದು. ಸಭೆಯವರಿಂದಾಗಲಿ, ಹೊರಗಿನವರಿಂದಾಗಲಿ ನಮಗೆ ಬೇಜಾರಾದಾಗ ಬೈಬಲ್‌ ತತ್ವಗಳನ್ನ ಪಾಲಿಸೋದ್ರಿಂದ ಆ ಸಮಸ್ಯೆನಾ ತಾಳಿಕೊಳ್ಳೋಕೆ ನಮಗೆ ಆಗುತ್ತೆ. (ಫಿಲಿ. 2:3, 4) ಒಂದು ಉದಾಹರಣೆ ನೋಡೋಣ. ಒಬ್ಬ ಸಹೋದರಿ ಜೊತೆ ಕೆಲಸಮಾಡುತ್ತಿದ್ದ ಸ್ತ್ರೀ, ಸಹೋದರಿಯ ಬಗ್ಗೆ ಕೆಟ್ಟದಾಗಿ ಸುಳ್ಳು ಸುದ್ದಿಗಳನ್ನ ಹಬ್ಬಿಸಿದ್ರು. ಆಗ ಆ ಸಹೋದರಿ ಅವರ ಮೇಲೆ ಕೋಪ ಮಾಡಿಕೊಳ್ಳಲಿಲ್ಲ. ಬದಲಿಗೆ ಯೇಸು ಬಗ್ಗೆ ಯೋಚನೆ ಮಾಡಿದ್ರು. ಜನರು ಯೇಸುಗೆ ಅವಮಾನ ಮಾಡಿದಾಗ ಅವನು ಅವರಿಗೆ ಅವಮಾನ ಮಾಡಲಿಲ್ಲ. (1 ಪೇತ್ರ 2:21, 23) ಯೇಸುವಿನ ಉದಾಹರಣೆಯನ್ನ ಮನಸ್ಸಲ್ಲಿಟ್ಟು ತನಗಾದ ಅನ್ಯಾಯದ ಬಗ್ಗೆ ಮಾತಾಡೋಕೆ ಹೋಗಲಿಲ್ಲ. ಆಮೇಲೆ ಆ ಸ್ತ್ರೀಗೆ ಹುಷಾರು ಇರಲಿಲ್ಲ, ಅದಕ್ಕೆ ಟೆನ್ಷನ್‌ ಅಲ್ಲಿ ಇದ್ರು ಅಂತ ನಮ್ಮ ಸಹೋದರಿಗೆ ಗೊತ್ತಾಯ್ತು. ಹಾಗಾಗಿ ಆ ಸ್ತ್ರೀ ಬೇಕುಬೇಕಂತ ಹಾಗೆಲ್ಲಾ ಮಾತಾಡಲಿಲ್ಲ ಅಂತ ಸಹೋದರಿ ಅರ್ಥ ಮಾಡಿಕೊಂಡ್ರು. ‘ಆ ಸಮಸ್ಯೆನ ದೊಡ್ಡದು ಮಾಡದೇ ಅಲ್ಲಿಗೆ ಬಿಟ್ಟಿದ್ದು ಒಳ್ಳೇದಾಯ್ತಪ್ಪ’ ಅಂತ ಆ ಸಹೋದರಿಗೆ ಸಮಾಧಾನ ಆಯ್ತು.

16. ನಿಮಗೆ ಅನ್ಯಾಯ ಆಗಿದ್ರೆ ಯಾವ ವಿಷಯ ನೆಮ್ಮದಿ ಕೊಡುತ್ತೆ? (1 ಪೇತ್ರ 3:12)

16 ನಮಗೆ ದೊಡ್ಡ ಅನ್ಯಾಯನೇ ಆಗಿರಲಿ ಅಥವಾ ಚಿಕ್ಕ ನೋವೇ ಆಗಿರಲಿ, ನಾವು ಯಾವಾಗ್ಲೂ ಒಂದು ವಿಷಯ ಮನಸ್ಸಲ್ಲಿಡಬೇಕು. ಯೆಹೋವ ದೇವರು “ಹೃದಯ ಒಡೆದು ಹೋಗಿರೋರಿಗೆ” ಯಾವಾಗ್ಲೂ ಹತ್ರಾನೇ ಇರ್ತಾರೆ. (ಕೀರ್ತ. 34:18) ನಿಮಗೆ ನೋವಾದಾಗ ನಿಮ್ಮ ಭಾರನೆಲ್ಲಾ ಯೆಹೋವನ ಮೇಲೆ ಹಾಕಿ ಸಹಿಸಿಕೊಳ್ಳೋದನ್ನ ನೋಡುವಾಗ ಆತನು ನಿಮ್ಮನ್ನ ಖಂಡಿತ ಮೆಚ್ಚಿಕೊಳ್ತಾನೆ. (ಕೀರ್ತ. 55:22) ಈ ಭೂಮಿ ಮೇಲೆ ಆಗ್ತಿರೋ ಎಲ್ಲಾ ಅನ್ಯಾಯನ ದೇವರು ಗಮನಿಸ್ತಾ ಇದ್ದಾರೆ ಮತ್ತು ಅದಕ್ಕೆ ತಕ್ಕ ತೀರ್ಪು ಕೊಡ್ತಾರೆ. (1 ಪೇತ್ರ 3:12 ಓದಿ.) ನಿಮ್ಮ ಸಮಸ್ಯೆ ಇನ್ನೂ ಬಗೆಹರಿದಿಲ್ಲಾಂದ್ರೆ ಯೆಹೋವ ದೇವರು ಅದನ್ನ ಸರಿಮಾಡೋ ತನಕ ಕಾಯ್ತಿರಾ?

ತಾಳ್ಮೆಯಿಂದ ಸಿಗೋ ಆಶೀರ್ವಾದಗಳು

17. ಯೆಶಾಯ 30:18ರಲ್ಲಿ ಯೆಹೋವ ದೇವರು ಯಾವ ಮಾತು ಕೊಟ್ಟಿದ್ದಾರೆ?

17 ನಿಮ್ಮ ತಾಳ್ಮೆಗೆ ಯೆಹೋವ ದೇವರು ಮುಂದೆ ತನ್ನ ಸರ್ಕಾರದಲ್ಲಿ ತುಂಬ ಆಶೀರ್ವಾದ ಕೊಡ್ತಾರೆ. “ನಿಮಗೆ ಕೃಪೆ ತೋರಿಸೋಕೆ ಯೆಹೋವ ತಾಳ್ಮೆಯಿಂದ ಕಾಯ್ತಿದ್ದಾನೆ, ನಿಮಗೆ ಕರುಣೆ ತೋರಿಸೋಕೆ ಆತನು ಹೆಜ್ಜೆ ತಗೊಳ್ತಾನೆ, ಯಾಕಂದ್ರೆ ಯೆಹೋವ ನ್ಯಾಯವಂತ ದೇವರು. ಆತನ ಮೇಲೆ ನಿರೀಕ್ಷೆ ಇಟ್ಕೊಂಡಿರೋ ಎಲ್ರೂ ಸಂತೋಷವಾಗಿ ಇರ್ತಾರೆ.” ಅಂತ ಯೆಶಾಯ 30:18 ಹೇಳುತ್ತೆ. ಯೆಹೋವ ದೇವರು ಎಲ್ಲಾನೂ ಸರಿಮಾಡ್ತಾರೆ ಅಂತ ಯಾರೆಲ್ಲಾ ಕಾಯ್ತಾ ಇದ್ದಾರೋ ಅವರಿಗೆ ಈಗ ಮಾತ್ರ ಅಲ್ಲ, ಹೊಸಲೋಕದಲ್ಲೂ ಆಶೀರ್ವಾದಗಳು ಸಿಗುತ್ತೆ.

18. ಹೊಸಲೋಕದಲ್ಲಿ ಯಾವೆಲ್ಲಾ ಆಶೀರ್ವಾದಗಳು ಸಿಗುತ್ತೆ?

18 ಹೊಸಲೋಕದಲ್ಲಿ ನಾವು ಈಗ ಅನುಭವಿಸುತ್ತಿರೋ ಕಷ್ಟ, ಚಿಂತೆ ಇರಲ್ಲ. ಅನ್ಯಾಯ, ನೋವೂ ಇರಲ್ಲ. (ಪ್ರಕ. 21:4) ಅಲ್ಲಿ ನಮಗೆ ಯಾವ ಕೊರತೆನೂ ಇರಲ್ಲ. ಯೆಹೋವ ದೇವರು ನಮಗೆ ಬೇಕಾಗಿರೋದನ್ನ ಧಾರಾಳವಾಗಿ ಕೊಡ್ತಾರೆ. (ಕೀರ್ತ. 72:16; ಯೆಶಾ. 54:13) ಆಗ ನಮ್ಮ ಜೀವನದಲ್ಲಿ ಸಂತೋಷ ತುಂಬಿ ತುಳುಕುತ್ತೆ.

19. ಯೆಹೋವ ದೇವರು ನಮಗೆ ಯಾಕೆ ತರಬೇತಿ ಕೊಡ್ತಿದ್ದಾರೆ?

19 ಹೊಸಲೋಕಕ್ಕೆ ಹೋಗೋಕೆ ಯೆಹೋವ ಈಗಿಂದಾನೇ ನಮಗೆ ತರಬೇತಿ ಕೊಡುತ್ತಿದ್ದಾರೆ. ಕೆಟ್ಟ ಅಭ್ಯಾಸಗಳನ್ನ ಬಿಟ್ಟು ಒಳ್ಳೇ ಗುಣಗಳನ್ನ ಬೆಳೆಸಿಕೊಳ್ಳೋಕೆ ಸಹಾಯ ಮಾಡ್ತಿದ್ದಾರೆ. ಹಾಗಾಗಿ ಅನ್ಯಾಯ ಆದಾಗ ಯೆಹೋವನ ಮೇಲಿರೋ ನಂಬಿಕೆ ಕಳಕೊಳ್ಳಬೇಡಿ. ಆತನ ಸೇವೆ ಮಾಡೋದನ್ನ ಬಿಟ್ಟುಬಿಡಬೇಡಿ. ಮುಂದೆ ಎಲ್ಲ ಸರಿಹೋಗುತ್ತೆ. ಅಲ್ಲಿ ತನಕ ತಾಳ್ಮೆಯಿಂದ ಕಾಯೋಣ.

ಗೀತೆ 81 “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”

^ ಪ್ಯಾರ. 5 ತುಂಬ ವರ್ಷದಿಂದ ಸೇವೆ ಮಾಡಿರೋ ಸಹೋದರ ಅಥವಾ ಸಹೋದರಿ ‘ಇಷ್ಟು ವರ್ಷ ಈ ದುಷ್ಟಲೋಕದಲ್ಲಿ ನಾನು ಬದುಕಿರುತ್ತೀನಿ ಅಂತ ಕನಸುಮನಸ್ಸಲ್ಲೂ ಅಂದ್ಕೊಂಡಿರಲಿಲ್ಲ’ ಅಂತ ಹೇಳಿದ್ದು ನಿಮಗೆ ನೆನಪಿದ್ಯಾ? ಯೆಹೋವ ದೇವರು ಬೇಗ ಅಂತ್ಯ ತರಬೇಕು ಅಂತ ನಾವೆಲ್ಲಾ ಆಸೆಪಡ್ತೀವಿ. ಕಷ್ಟ ಬಂದಾಗಂತೂ ದೇವರ ಸರ್ಕಾರ ಬೇಗ ಬರಬೇಕು ಅಂತ ಯೋಚಿಸ್ತೀವಿ. ಆದ್ರೂ ನಾವೆಲ್ಲರೂ ತಾಳ್ಮೆಯಿಂದ ಕಾಯಬೇಕಾಗುತ್ತೆ. ಈ ಲೇಖನದಲ್ಲಿ, ತಾಳ್ಮೆಯಿಂದ ಕಾಯೋ ಗುಣ ಬೆಳೆಸಿಕೊಳ್ಳೋಕೆ ಸಹಾಯ ಮಾಡೋ ಬೈಬಲ್‌ ತತ್ವಗಳ ಬಗ್ಗೆ ಕಲಿತೀವಿ. ಜೊತೆಗೆ ನಾವು ತಾಳ್ಮೆಯಿಂದ ಇರಬೇಕಾದ ಎರಡು ಸನ್ನಿವೇಶಗಳ ಬಗ್ಗೆ ನೋಡುತ್ತೀವಿ ಮತ್ತು ತಾಳ್ಮೆಯಿಂದ ಕಾಯುವಾಗ ಸಿಗೋ ಆಶೀರ್ವಾದಗಳ ಬಗ್ಗೆನೂ ಚರ್ಚಿಸ್ತೀವಿ.

^ ಪ್ಯಾರ. 56 ಚಿತ್ರ ವಿವರಣೆ ಪುಟ: ಚಿಕ್ಕವಯಸ್ಸಿಂದಾನೂ ಒಬ್ಬ ಸಹೋದರಿ ಯೆಹೋವ ದೇವರಿಗೆ ಪ್ರಾರ್ಥಿಸುತ್ತಾ ಬಂದಿದ್ದಾಳೆ. ಆ ಸಹೋದರಿ ಚಿಕ್ಕವಳಿದ್ದಾಗ ಅವಳ ಅಪ್ಪ-ಅಮ್ಮ ಹೇಗೆ ಪ್ರಾರ್ಥನೆ ಮಾಡಬೇಕು ಅಂತ ಹೇಳಿಕೊಟ್ಟಿದ್ರು. ದೊಡ್ಡವಳಾದ ಮೇಲೆ ಪಯನೀಯರ್‌ ಸೇವೆ ಮಾಡುವಾಗ ‘ಸೇವೆನ ಚೆನ್ನಾಗಿ ಮಾಡೋಕೆ ಸಹಾಯ ಮಾಡಪ್ಪಾ’ ಅಂತ ಪ್ರಾರ್ಥನೆ ಮಾಡ್ತಿದ್ದಾಳೆ. ಮದುವೆಯಾದ ಮೇಲೆ ಅವಳ ಗಂಡನಿಗೆ ಹುಷಾರಿಲ್ಲದೆ ಇದ್ದಾಗ ‘ಈ ಕಷ್ಟನ ತಾಳಿಕೊಳ್ಳೋಕೆ ಶಕ್ತಿಕೊಡಪ್ಪಾ’ ಅಂತ ಬೇಡಿಕೊಳ್ತಾ ಇದ್ದಾಳೆ. ಅವಳ ಗಂಡ ತೀರಿಕೊಂಡ ಮೇಲೂ ಆಕೆ ಪ್ರಾರ್ಥನೆ ಮಾಡ್ತಾ ಇದ್ದಾಳೆ. ಇಷ್ಟು ದಿನ ಯೆಹೋವ ತನ್ನ ಪ್ರಾರ್ಥನೆಗೆ ಉತ್ತರ ಕೊಟ್ಟಿದ್ದನ್ನ ನೆನಸಿಕೊಂಡು ಮುಂದೆನೂ ತನ್ನ ಪ್ರಾರ್ಥನೆಗೆ ಉತ್ತರ ಕೊಡ್ತಾರೆ ಅಂತ ನಂಬಿಕೆ ಇಟ್ಟಿದ್ದಾಳೆ.