ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 34

‘ಯೆಹೋವನ ಒಳ್ಳೇತನವನ್ನ ಸವಿದು ನೋಡಿ’

‘ಯೆಹೋವನ ಒಳ್ಳೇತನವನ್ನ ಸವಿದು ನೋಡಿ’

“ಯೆಹೋವ ಒಳ್ಳೆಯವನು ಅಂತ ಸವಿದು ನೋಡಿ, ಆತನನ್ನ ಆಶ್ರಯಿಸುವವನು ಭಾಗ್ಯವಂತ.”—ಕೀರ್ತ. 34:8.

ಗೀತೆ 80 ಒಳ್ಳೇತನವೆಂಬ ಗುಣ

ಕಿರುನೋಟ *

1-2. ಕೀರ್ತನೆ 34:8ರ ಪ್ರಕಾರ ಯೆಹೋವ ದೇವರು ಒಳ್ಳೆಯವರು ಅಂತ ನಮಗೆ ಗೊತ್ತಾಗಬೇಕಂದ್ರೆ ನಾವೇನು ಮಾಡಬೇಕು?

ನೀವು ನಿಮ್ಮ ಸ್ನೇಹಿತರ ಮನೆಗೆ ಹೋದಾಗ ಅವರು ಒಂದು ತಿಂಡಿ ಕೊಡ್ತಾರೆ. ಅದನ್ನ ನೀವು ಯಾವತ್ತೂ ತಿಂದಿರಲ್ಲ, ಮೊದಲ ಸಲ ನೋಡ್ತಿದ್ದೀರಿ. ಈಗ ನೀವೇನು ಮಾಡ್ತೀರಾ? ಅದರ ಪರಿಮಳ ನೋಡ್ತೀರಿ, ಅದನ್ನ ಹೇಗೆ ಮಾಡಿದ್ರಿ ಅಂತ ಕೇಳ್ತೀರಿ ಮತ್ತು ಅದನ್ನ ತಿಂದವರ ಹತ್ರ ಅಭಿಪ್ರಾಯನೂ ಕೇಳ್ತಿರಿ. ಇಷ್ಟೆಲ್ಲಾ ಮಾಡಿದ್ರೂ ಆ ತಿಂಡಿಯನ್ನ ತಿಂದು ನೋಡಿದ್ರೆನೇ ಅದರ ರುಚಿ ನಿಮಗೆ ಗೊತ್ತಾಗೋದು.

2 ನಾವು ಬೈಬಲ್‌ ಓದಿದಾಗ, ನಮ್ಮ ಪುಸ್ತಕ-ಪತ್ರಿಕೆಗಳನ್ನ ಓದಿದಾಗ ಮತ್ತು ಯೆಹೋವ ದೇವರು ಬೇರೆಯವರಿಗೆ ಹೇಗೆಲ್ಲಾ ಸಹಾಯ ಮಾಡಿದ್ದಾರೆ ಅಂತ ಕೇಳಿಸಿಕೊಂಡಾಗ ಆತನ ಒಳ್ಳೇತನದ ಬಗ್ಗೆ ಅಲ್ಪಸ್ವಲ್ಪ ಗೊತ್ತಾಗುತ್ತೆ. ಆದ್ರೆ ದೇವರ ಒಳ್ಳೇತನವನ್ನ ಅನುಭವಿಸಿದಾಗಲೇ, ಅದನ್ನ ಸವಿದಾಗಲೇ ಆತನು ಎಷ್ಟು ಒಳ್ಳೆಯವನು ಅಂತ ನಮಗೆ ಗೊತ್ತಾಗೋದು. (ಕೀರ್ತನೆ 34:8 ಓದಿ.) ಅದನ್ನ ಸವಿದು ನೋಡೋಕೆ ಇರೋ ಒಂದು ದಾರಿ ಪೂರ್ಣ ಸಮಯದ ಸೇವೆ. ದೇವರ ಆಳ್ವಿಕೆಗೆ ಮೊದಲ ಸ್ಥಾನ ಕೊಟ್ರೆ ನಮಗೆ ಬೇಕಾಗಿರೋದೆಲ್ಲಾ ಯೆಹೋವ ದೇವರು ಕೊಡ್ತಾರೆ ಅಂತ ಯೇಸು ಮಾತು ಕೊಟ್ಟಿದ್ದಾನೆ. ನಾವು ಅದನ್ನ ಬರೀ ಓದಿದ್ದೀವಿ. ಆದ್ರೆ ಅದನ್ನ ಯಾವತ್ತೂ ಸವಿದು ನೋಡಿಲ್ಲ. (ಮತ್ತಾ. 6:33) ಆದ್ರೂ ಯೇಸು ಹೇಳಿರೋ ಮಾತಿನ ಮೇಲೆ ನಂಬಿಕೆ ಇಟ್ಟು ಹೆಚ್ಚು ಸೇವೆ ಮಾಡೋಕೆ ಕೆಲವು ಬದಲಾವಣೆಗಳನ್ನ ಮಾಡಿಕೊಳ್ತೀವಿ. ಅಂದ್ರೆ ಖರ್ಚು ಕಮ್ಮಿ ಮಾಡಿಕೊಳ್ತೀವಿ, ಯಾವುದಾದ್ರೂ ಚಿಕ್ಕ ಕೆಲಸ ಹುಡುಕಿಕೊಳ್ತೀವಿ. ಹೀಗೆ ಸರಳ ಜೀವನ ಮಾಡುವಾಗ ಯೆಹೋವ ನಮಗೆ ಬೇಕಾಗಿರೋದೆಲ್ಲಾ ಕೊಡ್ತಾರೆ ಅನ್ನೋ ಮಾತು ನಮ್ಮ ಜೀವನದಲ್ಲಿ ನಿಜ ಆಗುತ್ತೆ. ಯೆಹೋವ ದೇವರು ಎಷ್ಟು ಒಳ್ಳೆಯವರು ಅಂತ ನಾವೇ ಸವಿದು ನೋಡೋಕೆ ಆಗುತ್ತೆ.

3. ಕೀರ್ತನೆ 16:1, 2ರ ಪ್ರಕಾರ ಯೆಹೋವ ಕೊಡೋ ಒಳ್ಳೆ ವಿಷಯಗಳು ಮುಖ್ಯವಾಗಿ ಯಾರಿಗೆ ಸಿಗುತ್ತೆ?

3 ಯೆಹೋವ ದೇವರು ತನ್ನನ್ನ ತಿಳಿದುಕೊಳ್ಳದೆ ಇರೋ ಜನರಿಗೂ ‘ಒಳ್ಳೇದನ್ನೇ ಮಾಡ್ತಾರೆ.’ (ಕೀರ್ತ. 145:9; ಮತ್ತಾ. 5:45) ಅದ್ರಲ್ಲೂ ತನ್ನನ್ನು ಪ್ರೀತಿಸುವಂಥ ಮತ್ತು ಪೂರ್ಣಪ್ರಾಣದಿಂದ ಸೇವೆ ಮಾಡುವಂಥ ತನ್ನ ಸೇವಕರಿಗಂತೂ ತುಂಬಾನೇ ಆಶೀರ್ವಾದ ಮಾಡ್ತಾರೆ. (ಕೀರ್ತನೆ 16:1, 2 ಓದಿ.) ಯೆಹೋವ ದೇವರು ಹೇಗೆಲ್ಲಾ ನಮ್ಮನ್ನ ಆಶೀರ್ವಾದ ಮಾಡಿ ಒಳ್ಳೇತನ ತೋರಿಸ್ತಾರೆ ಅಂತ ಈಗ ನೋಡೋಣ.

4. ಯೆಹೋವನ ಬಗ್ಗೆ ತಿಳುಕೊಳ್ಳೋಕೆ ಶುರುಮಾಡಿದಾಗ ಆತನು ಹೇಗೆಲ್ಲಾ ತನ್ನ ಒಳ್ಳೇತನ ತೋರಿಸ್ತಾನೆ?

4 ಯೆಹೋವ ದೇವರ ಬಗ್ಗೆ ಕಲಿತು ಅದನ್ನ ಪಾಲಿಸಿದಾಗೆಲ್ಲಾ ನಮಗೆ ಒಳ್ಳೆದೇ ಆಗ್ತಿದೆ. ನಾವು ದೇವರ ಬಗ್ಗೆ ಕಲಿತಾಗ ಆತನ ಮೇಲೆ ನಮಗೆ ಪ್ರೀತಿ ಹುಟ್ಟಿತು. ಆತನಿಗೆ ಇಷ್ಟ ಇಲ್ಲದಿರೋ ಯೋಚನೆ, ಅಭ್ಯಾಸಗಳನ್ನ ಬಿಟ್ಟುಬಿಡೋಕೆ ದೇವರು ನಮಗೆ ಸಹಾಯ ಮಾಡಿದ್ರು. (ಕೊಲೊ. 1:21) ಆಮೇಲೆ ನಾವು ನಮ್ಮ ಜೀವನವನ್ನ ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ತಗೊಂಡ್ವಿ. ನಮಗೆ ಒಳ್ಳೆ ಮನಸಾಕ್ಷಿ ಕೊಟ್ಟು, ಆತನ ಸ್ನೇಹ ಮಾಡೋ ಅವಕಾಶ ಕೊಟ್ಟಾಗ ಆತನು ತುಂಬ ಒಳ್ಳೆಯವನು ಅಂತ ಸವಿದು ನೋಡಿದ್ವಿ.—1 ಪೇತ್ರ 3:21.

5. ಸಿಹಿಸುದ್ದಿ ಸಾರುವಾಗಲೂ ದೇವರ ಒಳ್ಳೇತನವನ್ನ ಹೇಗೆ ಸವಿಯಬಹುದು?

5 ಸಿಹಿಸುದ್ದಿ ಸಾರುವಾಗಲೂ ದೇವರು ಎಷ್ಟು ಒಳ್ಳೆಯವರು ಅಂತ ಸವಿದು ನೋಡಿದ್ದೀವಿ. ನೀವು ಯೆಹೋವನ ಸಾಕ್ಷಿ ಆಗೋ ಮುಂಚೆ ಮನೆಮನೆಗೆ ಹೋಗಿ ಗುರುತು-ಪರಿಚಯ ಇಲ್ಲದವರಿಗೆ ಬೈಬಲ್‌ ಬಗ್ಗೆ ಹೇಳೋದರ ಬಗ್ಗೆ ಯೋಚನೆನೂ ಮಾಡಿರಲ್ಲ. ಅದಕ್ಕೆ ಸತ್ಯ ಕಲಿತ ಮೇಲೆ ಸಿಹಿಸುದ್ದಿ ಸಾರಬೇಕು ಅಂತ ಹೇಳಿದಾಗ ನಿಮಗೆ ಸ್ವಲ್ಪ ನಾಚಿಕೆ ಆಗಿರುತ್ತೆ. ನಮ್ಮಲ್ಲಿ ತುಂಬ ಜನರಿಗೆ ನಾಚಿಕೆ, ಭಯ ಇದೆ. ಆದ್ರೂ ಅದನ್ನ ಪಕ್ಕಕ್ಕಿಟ್ಟು ಸಾರುತ್ತಾ ಇದ್ದೀರ. ಅಷ್ಟೆ ಅಲ್ಲ, ಯೆಹೋವ ದೇವರ ಸಹಾಯದಿಂದ ಖುಷಿಖುಷಿಯಾಗಿ ಸೇವೆ ಮಾಡ್ತಾ ಇದ್ದೀರ. ನೀವು ಸೇವೆ ಮಾಡುವಾಗ ಯಾರಾದ್ರೂ ಕೋಪದಿಂದ ಮಾತಾಡಿದ್ರೂ ರೇಗಾಡದೇ, ಸಮಾಧಾನದಿಂದ ಮಾತಾಡೋಕೆ ಯೆಹೋವ ನಿಮಗೆ ಸಹಾಯ ಮಾಡಿದ್ದಾರೆ. ನಿಮ್ಮ ಮಾತನ್ನ ಕೇಳಿಸಿಕೊಳ್ಳೋಕೆ ಇಷ್ಟಪಡೋರು ಸಿಕ್ಕಿದಾಗ ಅಂಥವರಿಗೆ ಬೈಬಲ್‌ ವಚನವನ್ನ ನೆನಪಿಸಿಕೊಂಡು ತಿಳಿಸೋಕೂ ದೇವರು ನಿಮಗೆ ಸಹಾಯ ಮಾಡಿದ್ದಾರೆ. ಟೆರಿಟೊರಿಯಲ್ಲಿ ನೀವು ಹೇಳೋದನ್ನ ಜನ ಕೇಳಿಸಿಕೊಳ್ಳದೆ ಇದ್ರೂ ಸೋತುಹೋಗದೆ ಸಾರುತ್ತಾ ಇರೋ ಮನಸ್ಸನ್ನ ದೇವರು ನಿಮಗೆ ಕೊಟ್ಟಿದ್ದಾರೆ.—ಯೆರೆ. 20:7-9.

6. ಯೆಹೋವ ದೇವರು ನಮಗೆ ತರಬೇತಿ ಕೊಡ್ತಾ ಹೇಗೆ ಒಳ್ಳೇತನ ತೋರಿಸಿದ್ದಾರೆ?

6 ಸಿಹಿಸುದ್ದಿ ಸಾರೋಕೆ ಬೇಕಾದ ತರಬೇತಿ ಕೊಡುತ್ತಾ ದೇವರು ನಮಗೆ ಒಳ್ಳೇತನ ತೋರಿಸಿದ್ದಾರೆ. (ಯೋಹಾ. 6:45) ವಾರಮಧ್ಯದ ಕೂಟಗಳಲ್ಲಿ ಮಾದರಿ ಸಂಭಾಷಣೆಗಳನ್ನ ಕೊಟ್ಟು ಸೇವೆಯಲ್ಲಿ ಅದನ್ನ ಹೇಗೆ ಉಪಯೋಗಿಸಬೇಕು ಅಂತ ಕಲಿಸಿಕೊಡುತ್ತಿದ್ದಾರೆ. ಆ ವಿಡಿಯೋಗಳಲ್ಲಿ ತೋರಿಸೋ ತರ ಜನರ ಹತ್ರ ಮಾತಾಡೋಕೆ ಮೊದಮೊದಲು ನಮಗೆ ಭಯ ಆಗಿರಬಹುದು. ಆದ್ರೆ ನಾವು ಮಾತಾಡಿದ ಮೇಲೆ ತುಂಬ ಜನ ಅದನ್ನ ಖುಷಿಯಿಂದ ಕೇಳಿಸಿಕೊಂಡಿದ್ದಾರೆ. ಹೊಸಹೊಸ ವಿಧಾನಗಳನ್ನ ಬಳಸಿ ಸಾರೋದು ಹೇಗಂತ ಕೂಟಗಳಲ್ಲಿ ಮತ್ತು ಅಧಿವೇಶನಗಳಲ್ಲಿ ನಾವು ಕಲಿತಾ ಇದ್ದೀವಿ. ಈ ಹೊಸ ವಿಧಾನಗಳನ್ನ ಬಳಸುವಾಗಲೂ ಕೆಲವೊಮ್ಮೆ ನಮಗೆ ಕಷ್ಟ, ಭಯ ಆಗಬಹುದು. ಆದ್ರೆ ಅದನ್ನ ಮಾಡಿದಾಗ ಯೆಹೋವ ದೇವರು ನಿಮ್ಮನ್ನ ಆಶೀರ್ವದಿಸ್ತಾರೆ. ಪರಿಸ್ಥಿತಿ ಏನೇ ಇದ್ರೂ ನಾವು ಚೆನ್ನಾಗಿ ಸಿಹಿಸುದ್ದಿ ಸಾರಿದಾಗ ಯೆಹೋವ ದೇವರು ನಮಗೆ ಏನೆಲ್ಲಾ ಆಶೀರ್ವಾದ ಕೊಡ್ತಾರೆ ಅಂತ ಈಗ ನೋಡೋಣ. ನಾವು ಇನ್ನೂ ಹೇಗೆಲ್ಲಾ ಸೇವೆನ ಜಾಸ್ತಿ ಮಾಡಬಹುದು ಅಂತನೂ ನೋಡೋಣ.

ಜಾಸ್ತಿ ಸೇವೆ ಮಾಡುವವರಿಗೆ ಆಶೀರ್ವಾದ ಸಿಕ್ಕೇ ಸಿಗುತ್ತೆ

7. ನಾವು ದೇವರ ಸೇವೆಯನ್ನು ಜಾಸ್ತಿ ಮಾಡಿದಾಗ ಯಾವ ಆಶೀರ್ವಾದ ಸಿಗುತ್ತೆ?

7 ನೀವು ಯೆಹೋವನಿಗೆ ಇನ್ನೂ ಹತ್ರ ಆಗ್ತೀರ. ಸ್ಯಾಮುವೇಲ್‌ * ಅನ್ನೋ ಹಿರಿಯರ ಉದಾಹರಣೆ ನೋಡಿ. ಅವರು ಮತ್ತು ಅವರ ಹೆಂಡತಿ ಕೊಲಂಬಿಯದಲ್ಲಿ ಪಯನೀಯರ್‌ ಸೇವೆ ಮಾಡುತ್ತಿದ್ರು. ಅಗತ್ಯ ಇರೋ ಒಂದು ಸಭೆಗೆ ಹೋಗಿ ಸೇವೆ ಮಾಡಬೇಕು ಅನ್ನೋ ಆಸೆ ಅವರಿಗಿತ್ತು. ಅದಕ್ಕಾಗಿ ಕೆಲವೊಂದು ಹೊಂದಾಣಿಕೆ, ತ್ಯಾಗಗಳನ್ನ ಮಾಡಬೇಕಾಗಿತ್ತು. “ನಾವು ಮತ್ತಾಯ 6:33ನ್ನ ಪಾಲಿಸ್ತಾ ಅಗತ್ಯ ಇಲ್ಲದಿರೋ ವಸ್ತುಗಳನ್ನ ಖರೀದಿಸೋದನ್ನ ನಿಲ್ಲಿಸಿಬಿಟ್ವಿ. ಅಷ್ಟೇ ಅಲ್ಲ, ಬೇರೆ ಮನೆಗೆ ಹೋಗಬೇಕಾದಾಗ ಸ್ವಲ್ಪ ಕಷ್ಟ ಆಯ್ತು. ಯಾಕಂದ್ರೆ ನಮ್ಮ ಹಳೇ ಮನೆಯನ್ನ ಹೇಗೆ ಬೇಕೋ ಹಾಗೆ ಕಟ್ಟಿಸಿಕೊಂಡಿದ್ವಿ, ಅದರ ಸಾಲನೆಲ್ಲ ತೀರಿಸಿಬಿಟ್ಟಿದ್ವಿ” ಅಂತ ಆ ಸಹೋದರ ಹೇಳ್ತಾರೆ. ಅವರು ಅಗತ್ಯ ಇರೋ ಕಡೆ ಹೋದಮೇಲೆ ಅವರ ಹತ್ರ ಮುಂಚೆ ಇರುತ್ತಿದ್ದ ಹಣದಲ್ಲಿ ಕಾಲು ಭಾಗನೂ ಈಗ ಅವರ ಹತ್ರ ಇರುತ್ತಿರಲಿಲ್ಲ. ಅದರಲ್ಲೇ ಜೀವನ ಮಾಡಬೇಕಿತ್ತು. “ಆದ್ರೂ ಯೆಹೋವ ದೇವರು ನಮ್ಮನ್ನ ನೋಡಿಕೊಂಡಿದ್ದಾರೆ. ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಟ್ಟಿದ್ದಾರೆ. ನಾವು ದೇವರನ್ನ ಮೆಚ್ಚಿಸಿದ್ದೀವಿ ಅನ್ನೋ ತೃಪ್ತಿ ನಮಗಿದೆ. ಅಷ್ಟೇ ಅಲ್ಲ ಇಷ್ಟು ದಿನ ನಮ್ಮನ್ನ ಎಷ್ಟು ಪ್ರೀತಿಸ್ತಾರೆ ಅಂತ ಬರೀ ಕೇಳಿದ್ವಿ, ಆದ್ರೆ ಈಗ ಅನುಭವಿಸಿ ನೋಡಿದ್ವಿ” ಅಂತ ಸಹೋದರ ಹೇಳ್ತಾರೆ. ನೀವು ದೇವರ ಸೇವೆಯನ್ನ ಹೇಗಾದ್ರೂ ಜಾಸ್ತಿ ಮಾಡಕ್ಕಾಗುತ್ತಾ? ಹಾಗೆ ಮಾಡಿದ್ರೆ ಯೆಹೋವ ದೇವರಿಗೆ ನೀವು ಇನ್ನೂ ಹತ್ರ ಆಗ್ತೀರ. ಅಷ್ಟೇ ಅಲ್ಲ ದೇವರು ನಿಮಗೆ ಬೇಕಾಗಿರೋದನ್ನ ಕೊಟ್ಟು ಚೆನ್ನಾಗಿ ನೋಡಿಕೊಳ್ತಾರೆ ಅನ್ನೋದನ್ನ ನಿಮ್ಮ ಜೀವನದಲ್ಲಿ ಸವಿದು ನೋಡ್ತೀರ.—ಕೀರ್ತ. 18:25.

8. ಐಸಾಕ್‌ ಮತ್ತು ವಿಕ್ಟೋರಿಯ ಅವರ ಅನುಭವದಿಂದ ನೀವೇನು ಕಲಿತ್ರಿ?

8 ಯೆಹೋವನ ಸೇವೆ ಮಾಡಿದಾಗ ಸಂತೋಷ, ಸಂತೃಪ್ತಿ ಸಿಗುತ್ತೆ. ಕಿರ್ಗಿಸ್ತಾನ್‌ನಲ್ಲಿ ಪಯನೀಯರಾಗಿ ಸೇವೆ ಮಾಡ್ತಿರೋ ಐಸಾಕ್‌ ಮತ್ತು ವಿಕ್ಟೋರಿಯ ಅವರ ಅನುಭವ ನೋಡಿ. ಕಟ್ಟಡ ನಿರ್ಮಾಣ ಸೇವೆಯಲ್ಲಿ ಅಥವಾ ಬೇರೆ ಯಾವುದಾದ್ರೂ ಸ್ವಯಂಸೇವೆ ಮಾಡಬೇಕು ಅಂತ ಅವರಿಗೆ ತುಂಬ ಆಸೆ ಇತ್ತು. ಅದಕ್ಕೆ ಅವರು ಸರಳ ಜೀವನ ಮಾಡುತ್ತಿದ್ರು. “ನಮಗೆ ಯಾವ ನೇಮಕ ಸಿಕ್ಕಿದ್ರೂ ಕಷ್ಟಪಟ್ಟು ದುಡಿತಿದ್ವಿ. ಸಂಜೆ ಆದಾಗ ಸುಸ್ತಾಗಿದ್ರೂ ಮನಸ್ಸಿಗೆ ನೆಮ್ಮದಿ, ತೃಪ್ತಿ ಇರುತ್ತಿತ್ತು. ನಾವು ಯೆಹೋವ ದೇವರಿಗೋಸ್ಕರ ದುಡಿತಾ ಇದ್ದಿದ್ದರಿಂದ ಜೀವನ ಸಾರ್ಥಕ ಅಂತ ಅನಿಸ್ತಿತ್ತು. ತುಂಬ ಸಹೋದರ ಸಹೋದರಿಯರು ನಮಗೆ ಫ್ರೆಂಡ್ಸ್‌ ಆದ್ರು. ಅವರ ಜೊತೆ ಕಳೆದ ಸಮಯವನ್ನ ಜೀವನದಲ್ಲಿ ಯಾವತ್ತೂ ಮರೆಯಕ್ಕಾಗಲ್ಲ” ಅಂತ ಸಹೋದರ ಹೇಳ್ತಾರೆ.—ಮಾರ್ಕ 10:29, 30.

9. ಮಿರೇ ಸಹೋದರಿಯ ಆರೋಗ್ಯ ಚೆನ್ನಾಗಿಲ್ಲಾಂದ್ರೂ ಹೇಗೆ ಸಂತೋಷವಾಗಿ ಇದ್ದಾರೆ?

9 ಕಷ್ಟದ ಪರಿಸ್ಥಿತಿ ಇದ್ರೂ ಯೆಹೋವನ ಸೇವೆ ಮಾಡುವಾಗ ನಮಗೆ ತುಂಬ ಖುಷಿ ಸಿಗುತ್ತೆ. ಮಿರೇ ಅನ್ನೋ ಸಹೋದರಿಯ ಅನುಭವ ನೋಡಿ. ಅವರ ಗಂಡ ತೀರಿಕೊಂಡಿದ್ದಾರೆ. ಆ ಸಹೋದರಿ ಇರೋದು ವೆಸ್ಟ್‌ ಆಫ್ರಿಕದಲ್ಲಿ. ಅವರು ಡಾಕ್ಟರ್‌ ಆಗಿದ್ರು. ನಿವೃತ್ತಿ ಆದಮೇಲೆ ಪಯನೀಯರ್‌ ಸೇವೆ ಶುರು ಮಾಡಿದ್ರು. ಆ ಸಹೋದರಿಗೆ ಸಂಧಿವಾತ ಇದೆ, ಹಾಗಾಗಿ ನಡಿಯೋಕೆ ತುಂಬ ಕಷ್ಟಪಡ್ತಾರೆ. ಮನೆಮನೆ ಸೇವೆಯನ್ನ ಒಂದು ತಾಸಿಗಿಂತ ಜಾಸ್ತಿ ಮಾಡೋಕೆ ಆಗಲ್ಲ. ಆದ್ರೆ ಅವರು ತುಂಬ ಹೊತ್ತು ಸಾರ್ವಜನಿಕ ಸಾಕ್ಷಿಕಾರ್ಯ ಮಾಡ್ತಾರೆ. ಅವರಿಗೆ ತುಂಬ ಪುನರ್ಭೇಟಿಗಳು, ಬೈಬಲ್‌ ಸ್ಟಡಿಗಳಿವೆ. ಅವರಲ್ಲಿ ಕೆಲವರ ಜೊತೆ ಫೋನಲ್ಲಿ ಮಾತಾಡ್ತಾರೆ. ಇಷ್ಟು ಕಷ್ಟ ಇದ್ರೂ ಸೇವೆ ಮಾಡೋಕೆ ಸಹೋದರಿಗೆ ಯಾವುದು ಸಹಾಯ ಮಾಡ್ತು? ಅದಕ್ಕೆ ಉತ್ತರವನ್ನ ಅವರ ಮಾತಿಂದಲೇ ಕೇಳೋಣ. “ಯೆಹೋವ ಮತ್ತು ಯೇಸು ಕ್ರಿಸ್ತನ ಮೇಲೆ ನನಗೆ ಪ್ರೀತಿ ಉಕ್ಕಿ ಹರಿಯುತ್ತೆ. ನನ್ನಿಂದಾದಷ್ಟು ಸೇವೆ ಮಾಡೋಕೆ ಸಹಾಯ ಮಾಡಪ್ಪಾ ಅಂತ ಯೆಹೋವನ ಹತ್ರ ಯಾವಾಗ್ಲೂ ಬೇಡಿಕೊಳ್ತೀನಿ” ಅಂತ ಅವರು ಹೇಳ್ತಾರೆ.—ಮತ್ತಾ. 22:36, 37.

10. ಒಂದನೇ ಪೇತ್ರ 5:10ರ ತನ್ನ ಸೇವೆ ಮಾಡುವವರಿಗೆ ಯೆಹೋವ ಏನು ಕೊಡ್ತಾರೆ?

10 ಯೆಹೋವ ದೇವರಿಂದ ಇನ್ನೂ ಹೆಚ್ಚಿನ ತರಬೇತಿ ಸಿಗುತ್ತೆ. ಮಾರಿಷಸ್‌ ದ್ವೀಪದಲ್ಲಿ ಪಯನೀಯರಾಗಿ ಸೇವೆ ಮಾಡ್ತಿರೋ ಕೆನ್ನಿ ಅನ್ನೋ ಸಹೋದರ ಅನುಭವ ನೋಡಿ. ಅವರು ಸತ್ಯ ಕಲಿತಾಗ ಓದೋದನ್ನ ನಿಲ್ಲಿಸಿ ದೀಕ್ಷಾಸ್ನಾನ ತಗೊಂಡು ಪೂರ್ಣ ಸಮಯದ ಸೇವೆ ಶುರುಮಾಡಿದ್ರು. “ಪ್ರವಾದಿ ಯೆಶಾಯ ‘ನಾನಿದ್ದೀನಿ! ನನ್ನನ್ನ ಕಳಿಸು!’ ಅಂತ ದೇವರಿಗೆ ಹೇಳಿದ. ನಾನೂ ಅವನ ತರನೇ ಇರಬೇಕು ಅನ್ನೋದು ನನ್ನಾಸೆ” ಅಂತ ಸಹೋದರ ಹೇಳ್ತಾರೆ. (ಯೆಶಾ. 6:8) ಈ ಸಹೋದರ ಎಷ್ಟೋ ಕಟ್ಟಡ ನಿರ್ಮಾಣ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ ಭಾಷಾಂತರ ಡಿಪಾರ್ಟ್‌ಮೆಂಟ್‌ನಲ್ಲೂ ಕೆಲಸ ಮಾಡಿದ್ದಾರೆ. “ನನಗೆ ಸಿಕ್ಕಿರೋ ನೇಮಕಗಳನ್ನ ಚೆನ್ನಾಗಿ ಮಾಡೋಕೆ, ಕೌಶಲಗಳನ್ನ ಬೆಳೆಸಿಕೊಳ್ಳೋಕೆ ತರಬೇತಿ ಸಿಕ್ತು. ಅದಕ್ಕಿಂತ ಹೆಚ್ಚಾಗಿ ಬೇರೆ ತರಬೇತಿನೂ ನನಗೆ ಸಿಕ್ತು. ನನ್ನ ಇತಿಮಿತಿಗಳನ್ನ ಅರ್ಥಮಾಡಿಕೊಂಡೆ. ಯೆಹೋವನ ಸೇವೆ ಮಾಡೋಕೆ, ಸಹೋದರರ ಸೇವೆ ಮಾಡೋಕೆ ಬೇಕಾದ ಗುಣಗಳನ್ನ ಬೆಳೆಸಿಕೊಂಡೆ” ಅಂತ ಸಹೋದರ ಹೇಳ್ತಾರೆ. (1 ಪೇತ್ರ 5:10 ಓದಿ.) ನೀವೂ ಕೆಲವೊಂದು ಹೊಂದಾಣಿಕೆಗಳನ್ನ ಮಾಡಿಕೊಂಡು ಯೆಹೋವ ದೇವರಿಂದ ಹೆಚ್ಚಿನ ತರಬೇತಿ ಪಡಕೊಳ್ಳಬಹುದು.

ಕಮ್ಮಿ ಪ್ರಚಾರಕರು ಇರೋ ಕಡೆ ಒಂದು ದಂಪತಿ ಸಿಹಿಸುದ್ದಿ ಸಾರುತ್ತಿದ್ದಾರೆ; ಒಬ್ಬ ಯುವ ಸಹೋದರಿ ರಾಜ್ಯ ಸಭಾಗೃಹ ಕಟ್ಟೋ ಕೆಲಸದಲ್ಲಿ ಸಹಾಯ ಮಾಡ್ತಿದ್ದಾರೆ; ವಯಸ್ಸಾಗಿರೋ ಒಂದು ದಂಪತಿ ಫೋನಿಂದ ಸಿಹಿಸುದ್ದಿ ಸಾರುತ್ತಿದ್ದಾರೆ; ಇವರೆಲ್ಲ ತಮ್ಮ ಕೈಲಾದ ಸೇವೆ ಮಾಡ್ತಾ ಖುಷಿಯಾಗಿದ್ದಾರೆ (ಪ್ಯಾರ 11 ನೋಡಿ)

11. (ಎ) ದಕ್ಷಿಣ ಕೊರಿಯಾದ ಸಹೋದರಿಯರು ಸೇವೆಯನ್ನ ಜಾಸ್ತಿ ಮಾಡೋಕೆ ಏನು ಕಲಿತರು? (ಬಿ) ಇದ್ರಿಂದ ಯಾವ ಪ್ರಯೋಜನ ಸಿಕ್ತು? (ಮುಖಪುಟ ಚಿತ್ರ ನೋಡಿ.)

11 ತುಂಬ ವರ್ಷಗಳಿಂದ ಸತ್ಯದಲ್ಲಿ ಇರುವವರು ಹೊಸ ವಿಧಾನದಲ್ಲಿ ಸೇವೆ ಮಾಡುವಾಗ ಅವರಿಗೆ ತರಬೇತಿ ಬೇಕಾಗುತ್ತೆ. ಇದ್ರಿಂದ ಅವರಿಗೆ ಪ್ರಯೋಜನ ಕೂಡ ಇದೆ. ಕೊರೋನಾ ಕಾಯಿಲೆ ಸಮಯದಲ್ಲಿ ದಕ್ಷಿಣ ಕೊರಿಯಾದ ಒಂದು ಸಭೆಯವರು ಹೇಗೆ ಖುಷಿಖುಷಿಯಾಗಿ ಸೇವೆ ಮಾಡ್ತಿದ್ದಾರೆ ಅಂತ ಅಲ್ಲಿನ ಹಿರಿಯರು ಹೇಳ್ತಾರೆ: “ಆರೋಗ್ಯ ಸಮಸ್ಯೆ ಇರೋ ಸಹೋದರ ಸಹೋದರಿಯರಿಗೆ ಮುಂಚೆ ಮನೆಮನೆ ಸೇವೆ ಮಾಡೋಕೆ ಆಗ್ತಾ ಇರಲಿಲ್ಲ. ಆದ್ರೆ 80 ವಯಸ್ಸಿನ ಮೂರು ಸಹೋದರಿಯರು ಕಂಪ್ಯೂಟರ್‌ ಬಳಸಿ ಸಿಹಿಸುದ್ದಿ ಸಾರೋದು ಹೇಗೆ ಅಂತ ಕಲಿತರು. ಅವರು ಪ್ರತಿದಿನ ಸಿಹಿಸುದ್ದಿ ಸಾರುತ್ತಿದ್ದಾರೆ.” (ಕೀರ್ತ. 92:14, 15) ನೀವೂ ಹೀಗೆ ಸೇವೆಯನ್ನ ಜಾಸ್ತಿ ಮಾಡಿ ಯೆಹೋವ ದೇವರು ಎಷ್ಟು ಒಳ್ಳೆಯವರು ಅಂತ ಸವಿದು ನೋಡೋಕೆ ಇಷ್ಟಪಡ್ತೀರಾ? ಹಾಗಾದ್ರೆ ಸೇವೆಯನ್ನ ಜಾಸ್ತಿ ಮಾಡೋಕೆ ಏನು ಮಾಡಬೇಕು ಅಂತ ಈಗ ನೋಡೋಣ.

ಏನು ಮಾಡಬೇಕು?

12. ತನ್ನ ಮೇಲೆ ನಂಬಿಕೆ ಇಟ್ಟು ಸೇವೆ ಮಾಡುವವರಿಗೆ ಯೆಹೋವ ದೇವರು ಯಾವ ಮಾತು ಕೊಟ್ಟಿದ್ದಾರೆ?

12 ಯೆಹೋವನ ಮೇಲೆ ಭಾರ ಹಾಕಿ. ತನ್ನ ಮೇಲೆ ನಂಬಿಕೆ ಇಟ್ಟು ಚೆನ್ನಾಗಿ ಸೇವೆ ಮಾಡುವವರಿಗೆ, ಯೆಹೋವ ದೇವರು ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸುತ್ತೀನಿ ಅಂತ ಮಾತು ಕೊಟ್ಟಿದ್ದಾರೆ. (ಮಲಾ. 3:10) ಕೊಲಂಬಿಯದಲ್ಲಿರೋ ಫ್ಯಾಬಿಯೋಲಾ ಅನ್ನೋ ಸಹೋದರಿಯ ಜೀವನದಲ್ಲಿ ಈ ಮಾತು ನಿಜ ಆಯ್ತು. ಆ ಸಹೋದರಿಗೆ ದೀಕ್ಷಾಸ್ನಾನ ತಗೊಂಡ ಮೇಲೆ ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡಬೇಕು ಅಂತ ತುಂಬ ಆಸೆ ಇತ್ತು. ಇಡೀ ಕುಟುಂಬದ ಜವಾಬ್ದಾರಿ ಅವರ ಮೇಲಿತ್ತು. ಅವರು ಕುಟುಂಬಕ್ಕೋಸ್ಕರ ದುಡಿಯಲೇ ಬೇಕಿತ್ತು. ಹಾಗಾಗಿ ಅವರಿಗೆ ಪಯನೀಯರ್‌ ಸೇವೆ ಮಾಡೋಕೆ ಆಗ್ಲಿಲ್ಲ. ಆದ್ರೆ ಕೆಲಸದಿಂದ ನಿವೃತ್ತಿ ಆಗೋ ಸಮಯದಲ್ಲಿ ತನ್ನ ಆಸೆ ಬಗ್ಗೆ ಯೆಹೋವ ದೇವರ ಹತ್ತಿರ ತುಂಬ ಬೇಡಿಕೊಂಡ್ರು. “ಯಾರಿಗೇ ಆಗಲಿ ಪೆನ್ಶನ್‌ಗೆ ಅರ್ಜಿ ಹಾಕಿದ ಮೇಲೆ ಅದು ಬರೋಕೆ ತುಂಬ ಸಮಯ ಹಿಡಿಯುತ್ತೆ. ಆದ್ರೆ ನನಗೆ ದೇವರ ದಯೆಯಿಂದ ಅರ್ಜಿ ಹಾಕಿದ ಒಂದೇ ತಿಂಗಳಲ್ಲಿ ದುಡ್ಡು ಬರೋಕೆ ಶುರು ಆಯ್ತು. ಇದೊಂದು ಅದ್ಭುತನೇ” ಅಂತ ಸಹೋದರಿ ಹೇಳ್ತಾರೆ. ಎರಡು ತಿಂಗಳು ಆದಮೇಲೆ ಆ ಸಹೋದರಿ ಪಯನೀಯರಿಂಗ್‌ ಶುರುಮಾಡಿದ್ರು. ಈಗ ಅವರಿಗೆ 70 ವಯಸ್ಸು ದಾಟಿದೆ. 20 ವರ್ಷಗಳಿಂದ ಪಯನೀಯರ್‌ ಸೇವೆ ಮಾಡ್ತಾ ಇದ್ದಾರೆ. 8 ಜನರು ದೀಕ್ಷಾಸ್ನಾನ ತಗೊಂಡು ಯೆಹೋವನ ಆರಾಧಕರಾಗೋಕೆ ಸಹಾಯ ಮಾಡಿದ್ದಾರೆ. “ಕೆಲವೊಮ್ಮೆ ನನಗೆ ಸೇವೆ ಮಾಡೋಕೆ ಶಕ್ತಿನೇ ಇರಲ್ಲ. ಆದ್ರೆ ಪಯನೀಯರ್‌ ಸೇವೆ ಮಾಡೋಕೆ ಯೆಹೋವ ದೇವರು ಪ್ರತಿದಿನ ನನಗೆ ಸಹಾಯ ಮಾಡ್ತಿದ್ದಾರೆ” ಅಂತ ಸಹೋದರಿ ಹೇಳ್ತಾರೆ.

ಅಬ್ರಹಾಮ-ಸಾರ, ಯಾಕೋಬ ಮತ್ತು ಯೋರ್ದನ್‌ ನದಿ ದಾಟಿದ ಪುರೋಹಿತರು ಹೇಗೆ ಮೊದಲು ನಂಬಿಕೆ ತೋರಿಸಿದ್ರು? (ಪ್ಯಾರ 13 ನೋಡಿ)

13-14. ಯೆಹೋವ ದೇವರ ಮೇಲೆ ನಂಬಿಕೆ ಇಟ್ಟು ಜಾಸ್ತಿ ಸೇವೆ ಮಾಡೋಕೆ ಯಾರ ಉದಾಹರಣೆಗಳು ಸಹಾಯ ಮಾಡುತ್ತೆ?

13 ಯೆಹೋವನ ಮೇಲೆ ನಂಬಿಕೆ ಇಟ್ಟವರನ್ನ ನೋಡಿ ಕಲಿರಿ. ಕಷ್ಟಪಟ್ಟು ದೇವರ ಸೇವೆ ಮಾಡಿದ ತುಂಬ ಜನರ ಉದಾಹರಣೆ ಬೈಬಲಲ್ಲಿದೆ. ಯೆಹೋವ ದೇವರ ಮೇಲೆ ಅವರಿಗಿರೋ ನಂಬಿಕೆನ ಮೊದಲು ತೋರಿಸಿಕೊಟ್ರು. ಆಮೇಲೆ ಯೆಹೋವ ದೇವರು ಅವರನ್ನ ಆಶೀರ್ವಾದ ಮಾಡಿದ್ರು. ಅಬ್ರಹಾಮನಿಗೆ ‘ಎಲ್ಲಿಗೆ ಹೋಗಬೇಕು ಅಂತ ಗೊತ್ತಿಲ್ಲದಿದ್ರೂ’ ಯೆಹೋವನ ಮಾತು ಕೇಳಿ ಹೊರಟುಬಿಟ್ಟ. ಆಗ ಯೆಹೋವ ದೇವರು ಅವನನ್ನ ಆಶೀರ್ವದಿಸಿದ್ರು. (ಇಬ್ರಿ. 11:8) ಯಾಕೋಬ ಮೊದಲು ದೇವದೂತನ ಜೊತೆ ಹೋರಾಡಿದ. ಆಮೇಲೆ ಯೆಹೋವ ದೇವರು ಅವನನ್ನ ಆಶೀರ್ವದಿಸಿದರು. (ಆದಿ. 32:24-30) ಇಸ್ರಾಯೇಲ್ಯರು ಇನ್ನೇನು ಕಾನಾನ್‌ ದೇಶಕ್ಕೆ ಕಾಲಿಡಬೇಕು ಅಂತ ಇದ್ದಾಗ ಪುರೋಹಿತರು ತುಂಬಿ ಹರಿತಿದ್ದ ಯೋರ್ದನ್‌ ನದಿಗೆ ಮೊದಲು ಕಾಲಿಟ್ಟರು. ಆಗ ನದಿಯ ನೀರು ನಿಂತು ಜನರೆಲ್ಲಾ ಆರಾಮವಾಗಿ ನದಿ ದಾಟೋ ತರ ಯೆಹೋವ ದೇವರು ಮಾಡಿದ್ರು.—ಯೆಹೋ. 3:14-16.

14 ಯೆಹೋವ ದೇವರ ಮೇಲೆ ನಂಬಿಕೆ ಇಟ್ಟು ಹೆಚ್ಚು ಸೇವೆ ಮಾಡಿ ಖುಷಿಖುಷಿಯಾಗಿರೋ ಸಹೋದರ ಸಹೋದರಿಯರ ಅನುಭವಗಳು ಇವತ್ತು ನಮ್ಮ ಕಣ್ಮುಂದೆನೇ ಇದೆ. ಇವರನ್ನ ನೋಡಿನೂ ನಾವು ಕಲಿಬಹುದು. ಪೀಟರ್‌ ಮತ್ತು ಡಯಾನ ಅವರ ಉದಾಹರಣೆ ನೋಡಿ. ಇವರು “ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು” ಅನ್ನೋ ಸರಣಿ ಲೇಖನಗಳನ್ನ ಯಾವಾಗ್ಲೂ ಓದ್ತಿದ್ರು. * ಸಹೋದರ ಸಹೋದರಿಯರು ಯೆಹೋವನ ಸೇವೆನ ಹೇಗೆ ಹೆಚ್ಚು ಮಾಡಿದ್ದಾರೆ ಅಂತ ಓದಿ ಖುಷಿಪಡ್ತಿದ್ರು. “ಬೇರೆಯವರು ಒಂದು ರುಚಿಯಾದ ತಿಂಡಿನ ತಿಂತಿದ್ದಾರೆ ಅಂದ್ಕೊಳ್ಳಿ. ಅದನ್ನ ನೋಡಿದ್ರೆ ನಮಗೂ ತಿನ್ನಬೇಕು ಅಂತ ಅನಿಸುತ್ತೆ ಅಲ್ವಾ? ಅದೇ ತರ ಈ ಅನುಭವಗಳನ್ನ ಓದಿದಾಗ ಅವರ ತರಾನೇ ನಾವು ಸೇವೆ ಮಾಡಬೇಕು, ಯೆಹೋವ ದೇವರು ಎಷ್ಟು ಒಳ್ಳೆಯವರು ಅಂತ ಸವಿದು ನೋಡಬೇಕು ಅಂತ ಅನಿಸುತ್ತೆ” ಅಂತ ಪೀಟರ್‌ ಹೇಳ್ತಾರೆ. ಪೀಟರ್‌ ಮತ್ತು ಡಯಾನ ಸ್ವಲ್ಪ ದಿನ ಆದಮೇಲೆ ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡೋಕೆ ಶುರುಮಾಡಿದ್ರು. ಅವರ ತರ ನೀವೂ ಈ ಲೇಖನಗಳನ್ನ ಓದಿದ್ದೀರಾ? jw.org ವೆಬ್‌ಸೈಟಲ್ಲಿರೋ “ದೂರದ ಕ್ಷೇತ್ರದಲ್ಲಿ ಸಾರುತ್ತಿರುವುದು—ಆಸ್ಟ್ರೇಲಿಯಾ” ಮತ್ತು “ದೂರದ ಊರಿಗೆ ಸುವಾರ್ತೆ—ಐರ್ಲೆಂಡ್‌” ಅನ್ನೋ ವಿಡಿಯೋಗಳನ್ನ ನೋಡಿದ್ದೀರಾ? ಸೇವೆಯನ್ನ ಹೆಚ್ಚು ಮಾಡೋಕೆ ಇದ್ರಿಂದ ನಿಮಗೂ ಸಲಹೆಗಳು ಸಿಗಬಹುದು.

15. ನಾವ್ಯಾಕೆ ಒಳ್ಳೆ ಸ್ನೇಹಿತರನ್ನ ಮಾಡಿಕೊಳ್ಳಬೇಕು?

15 ಒಳ್ಳೆ ಸ್ನೇಹಿತರನ್ನ ಮಾಡಿಕೊಳ್ಳಿ. ಯಾವತ್ತೂ ತಿನ್ನದೇ ಇರೋ ಒಂದು ತಿಂಡಿ ತಿನ್ನುವಾಗ ಬೇರೆಯವರ ಜೊತೆ ಸೇರಿ ತಿಂದ್ರೆ ಅದನ್ನ ತಿನ್ನೋಕೆ ಧೈರ್ಯ ಬರುತ್ತೆ. ಯೆಹೋವ ದೇವರ ಸೇವೆನೇ ಮುಖ್ಯ ಅಂತ ನೆನಸಿರೋ ಸ್ನೇಹಿತರು ನಮ್ಮ ಜೊತೆ ಇದ್ರೆ ನಾವು ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡ್ತೀವಿ ಮತ್ತು ಆತನ ಸೇವೆನ ಹೆಚ್ಚು ಮಾಡ್ತೀವಿ. ಇದೆಷ್ಟು ನಿಜ ಅಂತ ಡೇವಿಡ್‌ ಮತ್ತು ವೆರೊನಿಕ ಅವರ ಅನುಭವದಿಂದ ಗೊತ್ತಾಗುತ್ತೆ. “ನಮ್ಮ ಕುಟುಂಬದವರು ಮತ್ತು ಸ್ನೇಹಿತರು ಯೆಹೋವನ ಸೇವೆನ ಜಾಸ್ತಿ ಮಾಡೋಕೆ ನಮಗೆ ಪ್ರೋತ್ಸಾಹ ಕೊಟ್ರು. ಆದ್ರೆ ಹೊಸ ಗುರಿ ಇಟ್ಟು ಸೇವೆ ಮಾಡೋಕೆ ನಮಗೆ ಸ್ವಲ್ಪ ಭಯ ಇತ್ತು. ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಟ್ಟ ಸಹೋದರ ಸಹೋದರಿ ಜೊತೆ ಸ್ನೇಹ ಬೆಳೆಸಿಕೊಂಡಾಗ ನಮಗೆ ಧೈರ್ಯ ಬಂತು” ಅಂತ ಸಹೋದರ ಹೇಳ್ತಾರೆ. ಈಗ ಅವರು ಸರ್ಬಿಯ ದೇಶದಲ್ಲಿ ವಿಶೇಷ ಪಯನೀಯರ್‌ ಸೇವೆ ಮಾಡ್ತಿದ್ದಾರೆ.

16. ತ್ಯಾಗ ಮಾಡೋಕೆ ರೆಡಿ ಇರಬೇಕು ಅಂತ ಲೂಕ 12:16-21ರಲ್ಲಿರೋ ಉದಾಹರಣೆಯಿಂದ ಹೇಗೆ ಗೊತ್ತಾಗುತ್ತೆ?

16 ಯೆಹೋವನಿಗೋಸ್ಕರ ತ್ಯಾಗ ಮಾಡಿ. ಯೆಹೋವನಿಗೋಸ್ಕರ ತ್ಯಾಗ ಮಾಡಬೇಕು ಅಂದ್ರೆ ಅದರರ್ಥ ಎಲ್ಲಾನೂ ಬಿಟ್ಟುಬಿಡಬೇಕು ಅಂತ ಅಲ್ಲ. (ಪ್ರಸಂ. 5:19, 20) ನಮ್ಮ ಸುಖ-ಸೌಕರ್ಯಗಳನ್ನ ನೋಡ್ತಾ ಯೆಹೋವ ದೇವರ ಸೇವೆನ ಬಿಟ್ಟುಬಿಡಬಾರದು ಅಂತ ಅದರರ್ಥ. ಯೇಸುವಿನ ಉದಾಹರಣೆಯಲ್ಲಿದ್ದ ಶ್ರೀಮಂತ ವ್ಯಕ್ತಿ ತನ್ನ ಸುಖ-ಸೌಕರ್ಯಗಳಿಗೆ ಗಮನಕೊಟ್ಟ. ದೇವರನ್ನ ಬಿಟ್ಟುಬಿಟ್ಟ. ಅವನು ಮಾಡಿದ ತಪ್ಪನ್ನ ನಾವು ಮಾಡಬಾರದು. (ಲೂಕ 12:16-21 ಓದಿ.) ಫ್ರಾನ್ಸ್‌ ದೇಶದಲ್ಲಿರೋ ಸಹೋದರ ಚಾರ್ಲ್ಸ್‌ ಅವರ ಅನುಭವ ನೋಡಿ. “ನಾನು ನನ್ನ ಕುಟುಂಬಕ್ಕೆ ಮತ್ತು ಯೆಹೋವ ದೇವರಿಗೆ ಸಮಯನೇ ಕೊಡ್ತಿರಲಿಲ್ಲ” ಅಂತ ಸಹೋದರ ಹೇಳ್ತಾರೆ. ಆದ್ರೆ ಆಮೇಲೆ ಅವರು ಮತ್ತು ಅವರ ಹೆಂಡತಿ ಪಯನೀಯರ್‌ ಸೇವೆ ಮಾಡೋಣ ಅಂತ ತೀರ್ಮಾನ ಮಾಡಿದ್ರು. ಅದಕ್ಕೋಸ್ಕರ ಅವರು ಕೆಲಸ ಬಿಟ್ರು. ಮನೆ, ಆಫೀಸ್‌ಗಳನ್ನ ಕ್ಲೀನ್‌ ಮಾಡೋ ಒಂದು ಚಿಕ್ಕ ಕೆಲಸ ಮಾಡೋಕೆ ಶುರುಮಾಡಿದ್ರು. ಕಡಿಮೆ ದುಡ್ಡಲ್ಲಿ ಜೀವನ ಮಾಡಿ ಖುಷಿಯಾಗಿದ್ರು. “ಈಗ ನಾವು ಜಾಸ್ತಿ ಯೆಹೋವನ ಸೇವೆ ಮಾಡ್ತಾ ಇರೋದ್ರಿಂದ ಜೀವನ ಸಾರ್ಥಕ ಅಂತ ಅನಿಸುತ್ತೆ. ನಾವು ಬೈಬಲ್‌ ಸ್ಟಡಿಗಳನ್ನ ಮಾಡ್ತಾ, ಪುನರ್ಭೇಟಿಗಳನ್ನ ಮಾಡ್ತಾ ಜನರಿಗೆ ಯೆಹೋವನ ಬಗ್ಗೆ ಕಲಿಸಿ ಖುಷಿಯಾಗಿದ್ದೀವಿ” ಅಂತ ಚಾರ್ಲ್ಸ್‌ ಹೇಳ್ತಾರೆ.

17. ಒಬ್ಬ ಸಹೋದರಿಗೆ ಫೋನ್‌ ಮೂಲಕ ಸಿಹಿಸುದ್ದಿ ಸಾರೋಕೆ ಯಾವುದು ಸಹಾಯ ಮಾಡ್ತು?

17 ಹೊಸಹೊಸ ವಿಧಾನಗಳಲ್ಲಿ ಸೇವೆ ಮಾಡಿ. (ಅ. ಕಾ. 17:16, 17; 20:20, 21) ಅಮೆರಿಕಾದಲ್ಲಿ ಪಯನೀಯರ್‌ ಸೇವೆ ಮಾಡ್ತಾ ಇರೋ ಶರ್ಲಿ ಅನ್ನೋ ಸಹೋದರಿಯ ಅನುಭವ ನೋಡಿ. ಕೊರೋನ ಕಾಯಿಲೆ ಬಂದ ಮೇಲೆ ಅವರು ಸೇವೆ ಮಾಡ್ತಿದ್ದ ವಿಧಾನದಲ್ಲಿ ಕೆಲವು ಹೊಂದಾಣಿಕೆಗಳನ್ನ ಮಾಡಿಕೊಳ್ಳಬೇಕಾಯ್ತು. ಜನರಿಗೆ ಫೋನ್‌ ಮಾಡಿ ಸಿಹಿಸುದ್ದಿ ಸಾರೋಕೆ ಆ ಸಹೋದರಿಗೆ ಮೊದಮೊದಲು ಕಷ್ಟ ಆಗ್ತಿತ್ತು. ಆದ್ರೆ ಸರ್ಕಿಟ್‌ ಮೇಲ್ವಿಚಾರಕರ ಭೇಟಿಯ ಸಮಯದಲ್ಲಿ ಫೋನ್‌ ಮೂಲಕ ಸಿಹಿಸುದ್ದಿ ಸಾರೋಕೆ ತರಬೇತಿ ಸಿಕ್ತು. ಆಮೇಲೆ ಅವರು ಫೋನ್‌ ಮೂಲಕನೇ ಸಿಹಿಸುದ್ದಿ ಸಾರೋಕೆ ಶುರುಮಾಡಿದ್ರು. ಇದ್ರಿಂದ ಅವರಿಗೆ ಈ ರೀತಿ ಸೇವೆ ಮಾಡೋಕೆ ಸುಲಭ ಆಯ್ತು.

18. ನಮ್ಮ ಗುರಿ ಮುಟ್ಟೋಕೆ ಏನಾದ್ರು ತಡೆ ಬಂದ್ರೆ ಏನು ಮಾಡಬೇಕು?

18 ಗುರಿಯಿಟ್ಟು ಮುಟ್ಟೋಕೆ ಪ್ರಯತ್ನಿಸಿ. ನಮಗೆ ಕಷ್ಟ ಬಂದಾಗ ಅದರ ಬಗ್ಗೆ ಪ್ರಾರ್ಥನೆ ಮಾಡಬೇಕು ಮತ್ತು ಅದಕ್ಕೆ ಏನು ಮಾಡಬೇಕೋ ಅದನ್ನ ಹುಷಾರಾಗಿ ಯೋಚನೆ ಮಾಡಬೇಕು. (ಜ್ಞಾನೋ. 3:21) ಸೋನಿಯಾ ಅನ್ನೋ ಸಹೋದರಿಯ ಅನುಭವ ನೋಡಿ. ಅವರು ಯುರೋಪ್‌ನಲ್ಲಿ ರೊಮಾನಿ ಭಾಷಾ ಗುಂಪಲ್ಲಿ ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡ್ತಿದ್ದಾರೆ. “ನಾನು ನನ್ನ ಗುರಿಗಳನ್ನ ಒಂದು ಪೇಪರಲ್ಲಿ ಬರೆದು ಕಾಣೋ ತರ ಅದನ್ನ ಎಲ್ಲಾದ್ರೂ ಇಡ್ತೀನಿ. ನನ್ನ ಟೇಬಲ್‌ ಮೇಲೆ ಒಂದು ಚಿತ್ರ ಇಟ್ಟಿದ್ದೀನಿ. ಅದರಲ್ಲಿ ಕವಲು ಒಡೆದಿರೋ ರಸ್ತೆಗಳ ಚಿತ್ರ ಇದೆ. ಏನಾದ್ರೂ ತೀರ್ಮಾನ ಮಾಡಬೇಕಾದಾಗ ಆ ಚಿತ್ರ ನೋಡ್ತೀನಿ. ಯಾವ ತೀರ್ಮಾನ ತಗೊಂಡ್ರೆ ನನ್ನ ಗುರಿ ಮುಟ್ಟೋಕೆ ಆಗುತ್ತೆ ಅಂತ ಯೋಚನೆ ಮಾಡ್ತೀನಿ. ಸಮಸ್ಯೆ ಬಂದಾಗ ಅದನ್ನ ಒಂದು ಗೋಡೆ ತರ ಅಲ್ಲ ಸೇತುವೆ ತರ ನೋಡ್ತೀನಿ” ಅಂತ ಸೋನಿಯಾ ಹೇಳ್ತಾರೆ. ಒಂದು ಸಮಸ್ಯೆ ಇದ್ರೆ ಅದಕ್ಕೆ ಪರಿಹಾರ ಇದ್ದೇ ಇರುತ್ತೆ ಅನ್ನೋದನ್ನ ಅವರು ಯಾವಾಗ್ಲೂ ಮನಸ್ಸಲ್ಲಿ ಇಡ್ತಾರೆ.

19. ನಾವು ಯೆಹೋವ ದೇವರಿಗೆ ಹೇಗೆ ಧನ್ಯವಾದ ಹೇಳಬಹುದು?

19 ಯೆಹೋವ ದೇವರು ನಮ್ಮನ್ನ ತುಂಬ ಆಶೀರ್ವದಿಸಿದ್ದಾರೆ. ಅದಕ್ಕೆ ನಾವು ಆತನಿಗೆ ಧನ್ಯವಾದ ಹೇಳ್ತಾ ಇರಬೇಕು. ಅಷ್ಟೇ ಅಲ್ಲ, ಆತನಿಗೆ ಒಳ್ಳೆ ಹೆಸರು ಬರೋ ತರ ಯಾವಾಗ್ಲೂ ನಡಕೊಳ್ಳಬೇಕು. (ಇಬ್ರಿ. 13:15) ಅದ್ರಲ್ಲಿ ಒಂದು ವಿಧ ಹೆಚ್ಚು ಸೇವೆ ಮಾಡೋದು. ನಾವು ಯೆಹೋವ ದೇವರಿಗೋಸ್ಕರ ಜಾಸ್ತಿ ಸೇವೆ ಮಾಡಿದ್ರೆ ಆತನು ಆಶೀರ್ವಾದದ ಸುರಿಮಳೆಯನ್ನೇ ಸುರಿಸ್ತಾನೆ. ಹಾಗಾಗಿ ಪ್ರತಿದಿನ “ಯೆಹೋವ ಒಳ್ಳೆಯವನು ಅಂತ ಸವಿದು ನೋಡಿ.” ಆಗ “ನನ್ನನ್ನ ಕಳಿಸಿದ ದೇವರ ಇಷ್ಟ ಮಾಡಿ ಆತನು ಕೊಟ್ಟ ಕೆಲಸ ಮುಗಿಸೋದೇ ನನ್ನ ಊಟ” ಅಂತ ಯೇಸು ಹೇಳಿದ ತರ ನಾವೂ ಹೇಳಕ್ಕಾಗುತ್ತೆ.—ಯೋಹಾ. 4:34.

ಗೀತೆ 95 “ಯೆಹೋವನು ಒಳ್ಳೆಯವನೆಂದು ಸವಿದು ನೋಡಿರಿ”

^ ಪ್ಯಾರ. 5 ಎಲ್ಲಾ ಒಳ್ಳೇ ವಿಷಯಗಳು ಯೆಹೋವ ದೇವರಿಂದ ಬಂದಿವೆ. ಒಳ್ಳೆಯವರಿಗೆ ಕೆಟ್ಟವರಿಗೆ ಎಲ್ಲರಿಗೂ ದೇವರು ಒಳ್ಳೆದನ್ನೇ ಕೊಡ್ತಾರೆ. ಅದ್ರಲ್ಲೂ ತನ್ನ ಆರಾಧಕರಿಗೆ ಒಳ್ಳೇದು ಮಾಡೋಕೆ ತುಂಬ ಇಷ್ಟಪಡ್ತಾರೆ. ಈ ಲೇಖನದಲ್ಲಿ ನಾವು, ಯೆಹೋವ ದೇವರು ತನ್ನ ಆರಾಧಕರಿಗೆ ಹೇಗೆಲ್ಲಾ ಒಳ್ಳೇದನ್ನು ಮಾಡ್ತಾರೆ ಅಂತ ನೋಡೋಣ. ನಮ್ಮ ಸಹೋದರ ಸಹೋದರಿಯರು ಹೆಚ್ಚು ಸೇವೆ ಮಾಡಿ ಯೆಹೋವನ ಒಳ್ಳೇತನವನ್ನು ಹೇಗೆ ಸವಿದು ನೋಡ್ತಿದ್ದಾರೆ ಅಂತನೂ ನೋಡೋಣ.

^ ಪ್ಯಾರ. 7 ಕೆಲವು ಹೆಸರುಗಳು ಬದಲಾಗಿವೆ.

^ ಪ್ಯಾರ. 14 ಈ ಲೇಖನಗಳು ಮುಂಚೆ ಕಾವಲಿನಬುರುಜು ಪತ್ರಿಕೆಯಲ್ಲಿ ಬರುತ್ತಿತ್ತು. ಆದ್ರೆ ಈಗ jw.org ವೆಬ್‌ಸೈಟಲ್ಲಿ ಬರುತ್ತೆ. ನಮ್ಮ ಬಗ್ಗೆ > ಅನುಭವಗಳು > ದೇವರ ಸೇವೆಲಿ ಗುರಿಮುಟ್ಟಿ ನೋಡಿ.