ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 36

ಯುವಕರ ಬಲಕ್ಕೆ ಬೆಂಬಲ ಕೊಡಿ

ಯುವಕರ ಬಲಕ್ಕೆ ಬೆಂಬಲ ಕೊಡಿ

“ಯುವಕರ ಬಲಾನೇ ಅವ್ರ ಗೌರವ.”—ಜ್ಞಾನೋ. 20:29.

ಗೀತೆ 69 ನಿನ್ನ ಮಾರ್ಗಗಳನ್ನು ನನಗೆ ತಿಳಿಸು

ಕಿರುನೋಟ *

1. ವಯಸ್ಸಾಗಿರೋ ಸಹೋದರ ಸಹೋದರಿಯರು ಏನು ಮಾಡಬಹುದು?

ನಿಮಗೆ ವಯಸ್ಸಾಗ್ತಾ ಹೋದಂತೆ ಯೆಹೋವನ ಸೇವೆ ಹೆಚ್ಚು ಮಾಡೋಕೆ ಆಗಲ್ಲ ಅನ್ನೋ ಭಯ ಕಾಡುತ್ತೆ. ನಿಜ, ಯುವಕರಾಗಿದ್ದಾಗ ಇದ್ದ ಶಕ್ತಿ ಈಗ ಇಲ್ಲ. ಆದ್ರೆ ಇಲ್ಲಿ ತನಕ ನಿಮಗೆ ಸಿಕ್ಕಿರೋ ಅನುಭವಗಳನ್ನ ನೀವು ಯುವಕರ ಜೊತೆ ಹಂಚಿಕೊಳ್ಳಬಹುದು. ಆಗ ಅವರು ತುಂಬ ವಿಷಯಗಳನ್ನ ಕಲಿತಾರೆ ಮತ್ತು ಯೆಹೋವನ ಸಂಘಟನೆಯಲ್ಲಿ ಸಿಗೋ ನೇಮಕವನ್ನ ಚೆನ್ನಾಗಿ ಮಾಡಿಕೊಂಡು ಹೋಗ್ತಾರೆ. ಒಬ್ಬ ವಯಸ್ಸಾದ ಹಿರಿಯ ಹೀಗೆ ಹೇಳ್ತಾರೆ, “ನನಗೆ ವಯಸ್ಸಾಗಿರೋದ್ರಿಂದ ತುಂಬ ಕೆಲಸಗಳನ್ನ ಮಾಡೋಕೆ ಆಗ್ತಿಲ್ಲ. ಆದ್ರೆ ಆ ಕೆಲಸಗಳನ್ನ ಯುವಕರು ಮಾಡೋದನ್ನ ನೋಡುವಾಗ ತುಂಬ ಖುಷಿ ಆಗುತ್ತೆ.”

2. ಈ ಲೇಖನದಲ್ಲಿ ನಾವೇನು ಕಲಿತೀವಿ?

2 ವಯಸ್ಸಾದ ಸಹೋದರ ಸಹೋದರಿಯರ ಜೊತೆ ಯುವಕರು ಸ್ನೇಹ ಬೆಳೆಸಿಕೊಳ್ಳೋದ್ರಿಂದ ಏನೆಲ್ಲಾ ಪ್ರಯೋಜನ ಇದೆ ಅಂತ ಹಿಂದಿನ ಲೇಖನದಲ್ಲಿ ಕಲಿತ್ವಿ. ಈ ಲೇಖನದಲ್ಲಿ, ವಯಸ್ಸಾಗಿರೋ ಸಹೋದರರು ಯುವಕರ ಜೊತೆ ಸೇರಿ ಕೆಲಸ ಮಾಡೋಕೆ ದೀನತೆ, ನಮ್ರತೆ, ಉಪಕಾರ ನೆನಸಿಕೊಳ್ಳೋ ಗುಣ ಮತ್ತು ಧಾರಾಳ ಮನಸ್ಸು ಹೇಗೆ ಸಹಾಯ ಮಾಡುತ್ತೆ? ಇದ್ರಿಂದ ಸಭೆಗೆ ಏನು ಪ್ರಯೋಜನ? ಅಂತ ನೋಡೋಣ.

ದೀನತೆ ತೋರಿಸಿ

3. (ಎ) ಫಿಲಿಪ್ಪಿ 2:3, 4ರ ಪ್ರಕಾರ ದೀನತೆ ಅಂದ್ರೇನು? (ಬಿ) ಇದನ್ನ ಯಾಕೆ ಬೆಳೆಸಿಕೊಳ್ಳಬೇಕು?

3 ವಯಸ್ಸಾದವರಿಗೆ ದೀನತೆ ಇದ್ರೆ ಯುವಕರಿಗೆ ಕಲಿಸೋದು ಸುಲಭ. ಯಾಕಂದ್ರೆ ದೀನತೆ ಇರೋ ವ್ಯಕ್ತಿ ಬೇರೆಯವರನ್ನ ತನಗಿಂತ ಶ್ರೇಷ್ಠವಾಗಿ ನೋಡ್ತಾನೆ. (ಫಿಲಿಪ್ಪಿ 2:3, 4 ಓದಿ.) ಈ ಗುಣ ಇದ್ರೆ ವಯಸ್ಸಾದವರು ತಾವು ಮಾಡಿದ ತರಾನೇ ಎಲ್ಲಾ ಕೆಲಸಗಳನ್ನ ಬೇರೆಯವರೂ ಮಾಡಬೇಕು ಅಂತ ಹಠಹಿಡಿಯಲ್ಲ. ಒಂದು ಕೆಲಸವನ್ನ ಬೇರೆ ಬೇರೆ ವಿಧಗಳಲ್ಲೂ ಮಾಡಬಹುದು ಅಂತ ಅರ್ಥಮಾಡ್ಕೊಳ್ತಾರೆ. ಆ ವಿಧಗಳು ಬೈಬಲ್‌ ತತ್ವಗಳಿಗೆ ಹೊಂದಾಣಿಕೆಯಲ್ಲಿದ್ರೆ ಸಾಕು. (ಪ್ರಸಂ. 7:10) “ಈ ಲೋಕ ಬದಲಾಗ್ತಾನೇ ಇದೆ” ಅನ್ನೋದನ್ನ ವಯಸ್ಸಾದವರು ಮನಸ್ಸಲ್ಲಿಡಬೇಕು. (1 ಕೊರಿಂ. 7:31) ಅವರಿಗೆ ತುಂಬ ಅನುಭವ ಇದ್ರೂ ಹೊಸ ಸನ್ನಿವೇಶಗಳಿಗೆ ತಕ್ಕ ಹಾಗೆ ಹೊಂದಾಣಿಕೆ ಮಾಡ್ಕೊಬೇಕು.

ವಯಸ್ಸಾದವರು ಬೇರೆಯವರ ಹತ್ರ ತಮ್ಮ ಅನುಭವ ಹಂಚಿಕೊಳ್ಳೋಕೆ ಜಿಪುಣತನ ತೋರಿಸಲ್ಲ (ಪ್ಯಾರ 4-5 ನೋಡಿ) *

4. ನೇಮಕ ಬದಲಾದಾಗ ಸರ್ಕಿಟ್‌ ಮೇಲ್ವಿಚಾರಕರು ಲೇವಿಯರ ತರ ಏನು ಮಾಡ್ತಾರೆ?

4 ದೀನತೆ ಇರೋ ವಯಸ್ಸಾದ ಸಹೋದರ ಸಹೋದರಿಯರಿಗೆ ಅವರ ಇತಿಮಿತಿಗಳ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ. ಉದಾಹರಣೆಗೆ, ಸರ್ಕಿಟ್‌ ಮೇಲ್ವಿಚಾರಕರಿಗೆ 70 ವರ್ಷ ದಾಟಿದ ಮೇಲೆ ಅವರ ನೇಮಕ ಬದಲಾಗುತ್ತೆ. ಆಗ ಕೆಲವರಿಗೆ ಕಷ್ಟ ಆಗಬಹುದು. ಯಾಕಂದ್ರೆ ಆ ಸರ್ಕಿಟ್‌ ಕೆಲಸ ಅವರಿಗೆ ತುಂಬ ಇಷ್ಟವಾಗಿರುತ್ತೆ. ಸಹೋದರ ಸಹೋದರಿಯರಿಗಾಗಿ ಸೇವೆ ಮಾಡೋದ್ರಲ್ಲಿ ತುಂಬ ಖುಷಿ ಪಡೆದಿರುತ್ತಾರೆ. ಈಗಲೂ ಅದೇ ಕೆಲಸ ಮಾಡಬೇಕು ಅನ್ನೋ ಆಸೆ ಇರಬಹುದು. ಆದ್ರೆ ಈಗ ಅವರಿಗೆ ವಯಸ್ಸಾಗಿರೋದ್ರಿಂದ ಈ ಕೆಲಸವನ್ನ ಯುವಕರು ಮಾಡಿದ್ರೆ ಚೆನ್ನಾಗಿರುತ್ತೆ ಅಂತನೂ ಅವರು ಅರ್ಥಮಾಡ್ಕೊಳ್ತಾರೆ. ಹೀಗೆ ಅವರು ಇಸ್ರಾಯೇಲ್ಯರ ಕಾಲದಲ್ಲಿದ್ದ ಲೇವಿಯರ ತರ ನಡ್ಕೊಳ್ತಾರೆ. ಲೇವಿಯರು 50 ವರ್ಷ ಆದಮೇಲೆ ದೇವದರ್ಶನ ಗುಡಾರದಲ್ಲಿ ಸೇವೆ ಮಾಡೋದನ್ನ ನಿಲ್ಲಿಸಬೇಕಿತ್ತು. ಹಾಗಂತ ಅವರು ಬೇಜಾರು ಮಾಡಿಕೊಳ್ತಿರಲಿಲ್ಲ, ತಮ್ಮ ಕೈಲಾದ ಸೇವೆ ಮಾಡ್ತಾ ಯುವಕರಿಗೆ ಸಹಾಯ ಮಾಡ್ತಿದ್ರು. (ಅರ. 8:25, 26) ನೇಮಕ ಬದಲಾದ ಸರ್ಕಿಟ್‌ ಮೇಲ್ವಿಚಾರಕರು ಮುಂಚಿನ ತರ ಸಭೆಗಳನ್ನ ಭೇಟಿ ಮಾಡದಿದ್ರೂ ಯಾವ ಸಭೆಯಲ್ಲಿ ಇದ್ದಾರೋ ಆ ಸಭೆಗೆ ಆಶೀರ್ವಾದ ಆಗಿದ್ದಾರೆ.

5. ಡ್ಯಾನ್‌ ಮತ್ತು ಕೇಟಿ ಅವರ ಅನುಭವದಿಂದ ಏನು ಕಲಿತ್ರಿ?

5 ಸಹೋದರ ಡ್ಯಾನ್‌ ಅವರ ಉದಾಹರಣೆ ನೋಡಿ. ಅವರು 23 ವರ್ಷ ಸರ್ಕಿಟ್‌ ಮೇಲ್ವಿಚಾರಕರಾಗಿ ಸೇವೆ ಮಾಡಿದ್ರು. ಅವರಿಗೆ 70 ವರ್ಷ ಆದಾಗ ನೇಮಕ ಬದಲಾಯಿತು. ಅವರಿಗೆ ಮತ್ತು ಅವರ ಹೆಂಡತಿ ಕೇಟಿಗೆ ವಿಶೇಷ ಪಯನೀಯರ್‌ ನೇಮಕ ಸಿಕ್ತು. ಈಗಲೂ ಅವರು ಖುಷಿಯಾಗಿ ಸೇವೆ ಮಾಡ್ತಿದ್ದಾರೆ. ಅವರು ಮುಂಚೆಗಿಂತ ಬ್ಯುಸಿಯಾಗಿದ್ದಾರೆ. ಅವರಿಗೆ ಈಗ ಸಭೆಯಲ್ಲಿ ತುಂಬ ಜವಾಬ್ದಾರಿಗಳಿವೆ. ಯುವಕರಿಗೆ ಸಹಾಯಕ ಸೇವಕರಾಗೋಕೆ ಸಹಾಯ ಮಾಡ್ತಿದ್ದಾರೆ. ಪ್ರಚಾರಕರಿಗೆ ಮಹಾನಗರಗಳಲ್ಲಿ ಮತ್ತು ಜೈಲಿನಲ್ಲಿ ಸೇವೆ ಮಾಡೋದು ಹೇಗೆ ಅಂತ ತರಬೇತಿ ಕೊಡ್ತಿದ್ದಾರೆ. ವಯಸ್ಸಾದ ಸಹೋದರರು ಪೂರ್ಣ ಸಮಯದ ಸೇವೆಯಲ್ಲಿ ಇದ್ರೂ ಇಲ್ಲದಿದ್ರೂ ಬೇರೆಯವರಿಗೆ ಸಹಾಯ ಮಾಡೋಕೆ ಖಂಡಿತ ಆಗುತ್ತೆ. ಅದಕ್ಕೆ ಹೊಸ ನೇಮಕಕ್ಕೆ ಬೇಕಾದ ಹೊಂದಾಣಿಕೆ ಮಾಡಿಕೊಳ್ಳಿ, ಗುರಿಗಳನ್ನ ಇಡಿ. ನಿಮ್ಮಿಂದ ಏನು ಮಾಡೋಕೆ ಆಗಲ್ವೋ ಅದ್ರ ಮೇಲಲ್ಲ, ನಿಮ್ಮಿಂದ ಮಾಡೋಕೆ ಆಗೋ ವಿಷಯಗಳಿಗೆ ಗಮನಕೊಡಿ.

ನಮ್ರತೆ ತೋರಿಸಿ

6. ನಮ್ರತೆ ಯಾಕೆ ಮುಖ್ಯ? ಅದಕ್ಕೆ ಒಂದು ಉದಾಹರಣೆ ಕೊಡಿ.

6 ನಮ್ರತೆ ಇರೋ ವ್ಯಕ್ತಿಗೆ ತನ್ನ ಇತಿಮಿತಿಗಳ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ. (ಜ್ಞಾನೋ. 11:2) ತನ್ನಿಂದ ಏನಾಗಲ್ವೋ ಅದನ್ನ ಮಾಡೋಕೆ ಹೋಗಲ್ಲ, ಬದಲಿಗೆ ಏನಾಗುತ್ತೋ ಅದನ್ನ ಮಾಡ್ಕೊಂಡು ಖುಷಿಯಾಗಿ ಇರ್ತಾನೆ. ನಮ್ರತೆ ಇರೋ ವ್ಯಕ್ತಿಯನ್ನ ಬೆಟ್ಟದ ಮೇಲೆ ಗಾಡಿ ಹತ್ತಿಸುತ್ತಾ ಇರೋ ಡ್ರೈವರ್‌ಗೆ ಹೋಲಿಸಬಹುದು. ಆ ಡ್ರೈವರ್‌ ಗೇರ್‌ ಬದಲಾಯಿಸಿಕೊಂಡು ನಿಧಾನವಾಗಿ ಬೆಟ್ಟ ಹತ್ತಿಸಬೇಕಾಗುತ್ತೆ. ಎಷ್ಟೇ ನಿಧಾನ ಆದ್ರೂ ಅವನು ಗಾಡಿಯನ್ನ ಮುಂದಕ್ಕೆ ಓಡಿಸ್ತಾ ಇರ್ತಾನೆ. ಅದೇ ತರ ನಮ್ರತೆ ಇರೋ ವ್ಯಕ್ತಿಗೆ ತಾನು ಯಾವಾಗ ಬದಲಾವಣೆ ಮಾಡ್ಕೊಬೇಕು ಅಂತ ಚೆನ್ನಾಗಿ ಗೊತ್ತಿರುತ್ತೆ. ತನ್ನ ಇತಿಮಿತಿಗೆ ತಕ್ಕ ಹಾಗೆ ಸ್ವಲ್ಪಸ್ವಲ್ಪವಾಗಿ ಯೆಹೋವನ ಸೇವೆಮಾಡ್ತಾ, ಬೇರೆಯವರಿಗೆ ಸಹಾಯ ಮಾಡ್ತಾ ಮುಂದೆ ಹೋಗ್ತಾ ಇರ್ತಾನೆ.—ಫಿಲಿ. 4:5.

7. ಬರ್ಜಿಲೈ ಹೇಗೆ ನಮ್ರತೆ ತೋರಿಸಿದ?

7 ಬರ್ಜಿಲೈ ಏನು ಮಾಡಿದ ಅಂತ ನೋಡೋಣ. ರಾಜ ದಾವೀದ ಬರ್ಜಿಲೈಯನ್ನ ತನ್ನ ಸಲಹೆಗಾರನಾಗಿ ಇರೋಕೆ ಕರೆದ. ಆಗ ಬರ್ಜಿಲೈಗೆ 80 ವರ್ಷ. ತನ್ನ ಇತಿಮಿತಿಗಳನ್ನ ಅರ್ಥಮಾಡಿಕೊಂಡಿದ್ದ ಬರ್ಜಿಲೈ, ರಾಜನ ಜೊತೆ ಹೋಗೋಕೆ ಒಪ್ಪಿಕೊಳ್ಳಲಿಲ್ಲ. ತನ್ನ ಬದಲು ಯುವಕನಾದ ಕಿಮ್ಹಾಮನನ್ನ ಕರಕೊಂಡು ಹೋಗೋಕೆ ಹೇಳಿದ. (2 ಸಮು. 19:35-37) ಇವತ್ತು ಸಹ ವಯಸ್ಸಾದ ಸಹೋದರರು ಯುವಕರಿಗೆ ಯೆಹೋವನ ಸೇವೆ ಮಾಡೋ ಅವಕಾಶವನ್ನ ಖುಷಿಯಾಗಿ ಬಿಟ್ಟುಕೊಡ್ತಾರೆ.

ಸೊಲೊಮೋನ ಆಲಯ ಕಟ್ತಾನೆ ಅಂತ ದೇವರು ಹೇಳಿದಾಗ ದಾವೀದ ಸಹಾಯ ಮಾಡಿದ (ಪ್ಯಾರ 8 ನೋಡಿ)

8. ರಾಜ ದಾವೀದ ಹೇಗೆ ನಮ್ರತೆ ತೋರಿಸಿದ?

8 ರಾಜ ದಾವೀದ ಕೂಡ ನಮ್ರತೆ ತೋರಿಸಿದ. ಯೆಹೋವ ದೇವರಿಗೋಸ್ಕರ ಒಂದು ಆಲಯ ಕಟ್ಟಬೇಕು ಅಂತ ಅವನಿಗೆ ತುಂಬ ಆಸೆ ಇತ್ತು. ಆದ್ರೆ ಅದನ್ನ ಕಟ್ಟೋಕೆ ಅವನ ಮಗನಾದ ಸೊಲೊಮೋನನನ್ನ ಯೆಹೋವ ಆರಿಸಿಕೊಂಡಿದ್ದಾರೆ ಅಂತ ಹೇಳಿದಾಗ ದಾವೀದ ಬೇಜಾರು ಮಾಡಿಕೊಳ್ಳಲಿಲ್ಲ. ಆಲಯ ಕಟ್ಟೋಕೆ ಬೇಕಾದ ಎಲ್ಲ ಸಹಾಯ ಮಾಡಿದ. (1 ಪೂರ್ವ. 17:4; 22:5) “ಸೊಲೊಮೋನ ಇನ್ನೂ ಚಿಕ್ಕವನು, ಅನುಭವ ಇಲ್ಲದವನು” ಅಂತ ಹೇಳಿ ಅವನಿಂದ ಆ ಕೆಲಸವನ್ನ ಕಿತ್ತುಕೊಳ್ಳಲಿಲ್ಲ. (1 ಪೂರ್ವ. 29:1) ಆಲಯ ಕಟ್ಟೋಕೆ ವಯಸ್ಸು, ಅನುಭವ ಮುಖ್ಯ ಅಲ್ಲ ದೇವರ ಆಶೀರ್ವಾದನೇ ಮುಖ್ಯ ಅಂತ ದಾವೀದ ಅರ್ಥಮಾಡ್ಕೊಂಡ. ದಾವೀದನ ತರ ಇವತ್ತು ವಯಸ್ಸಾದ ಸಹೋದರರು ನಮ್ರತೆ ತೋರಿಸ್ತಾರೆ. ಅವರ ನೇಮಕ ಬದಲಾದ್ರೂ ತಮ್ಮ ಕೈಲಾದ ಸೇವೆ ಮಾಡ್ತಾ ಇರ್ತಾರೆ. ಅವರು ಮುಂಚೆ ಮಾಡ್ತಾ ಇದ್ದ ನೇಮಕವನ್ನ ಈಗ ಯುವಕರು ಮಾಡ್ತಿರಬಹುದು. ಆ ಯುವಕರ ಮೇಲೆ ಯೆಹೋವನ ಆಶೀರ್ವಾದ ಖಂಡಿತ ಇರುತ್ತೆ ಅಂತ ಅರ್ಥಮಾಡಿಕೊಳ್ತಾರೆ.

9. ಸಹೋದರ ಶಿಗೆಯೋ ಹೇಗೆ ನಮ್ರತೆ ತೋರಿಸಿದ್ರು?

9 ಈಗ ಸಹೋದರ ಶಿಗೆಯೋ ಹೇಗೆ ನಮ್ರತೆ ತೋರಿಸಿದ್ರು ಅಂತ ನೋಡೋಣ. 1976ರಲ್ಲಿ ಬ್ರಾಂಚ್‌ ಕಮಿಟಿಯ ಸದಸ್ಯರಾಗಿ ನೇಮಕ ಸಿಕ್ಕಿದಾಗ ಅವರಿಗೆ 30 ವರ್ಷ. 2004ರಲ್ಲಿ ಬ್ರಾಂಚ್‌ ಕಮಿಟಿಯ ಸಂಯೋಜಕರಾದ್ರು. ಸ್ವಲ್ಪ ವರ್ಷದ ನಂತರ ಸಹೋದರನಿಗೆ, ಮುಂಚಿನ ತರ ಕೆಲಸ ಮಾಡೋಕೆ ಆಗ್ತಿಲ್ಲ ಅಂತ ಗೊತ್ತಾಯ್ತು. ಅದರ ಬಗ್ಗೆ ಪ್ರಾರ್ಥನೆ ಮಾಡಿ ತನ್ನ ಜವಾಬ್ದಾರಿಯನ್ನ ಒಬ್ಬ ಯುವ ಸಹೋದರ ವಹಿಸಿಕೊಂಡರೆ ಚೆನ್ನಾಗಿರುತ್ತೆ ಅಂತ ಅರ್ಥ ಮಾಡಿಕೊಂಡ್ರು. ಈಗ ಅವರು ಬ್ರಾಂಚ್‌ ಕಮಿಟಿಯ ಸಂಯೋಜಕನಾಗಿ ಅಲ್ಲ ಸದಸ್ಯನಾಗಿ ಸೇವೆ ಮುಂದುವರಿಸುತ್ತಿದ್ದಾರೆ. ಬರ್ಜಿಲೈ, ರಾಜ ದಾವೀದ ಮತ್ತು ಸಹೋದರ ಶಿಗೆಯೋ ತರ ನಮ್ರತೆ ಇರೋ ಸಹೋದರರು ಯುವಕರಿಂದ ಚೆನ್ನಾಗಿ ಕೆಲಸ ಮಾಡೋಕೆ ಆಗುತ್ತೆ ಅಂತ ನಂಬುತ್ತಾರೆ, ಅವರಿಗೆ ಅನುಭವ ಇಲ್ಲ ಅಂತ ನೆನಸಲ್ಲ. ಅವರ ಜೊತೆ ಸೇರಿ ಖುಷಿಖುಷಿಯಾಗಿ ಕೆಲಸ ಮಾಡ್ತಾರೆ, ಪೈಪೋಟಿ ಮಾಡಲ್ಲ.—ಜ್ಞಾನೋ. 20:29.

ಉಪಕಾರ ನೆನಸಿಕೊಳ್ಳಿ

10. ಯುವಕರನ್ನ ವಯಸ್ಸಾದವರು ಹೇಗೆ ನೋಡಬೇಕು?

10 ವರ್ಷ ಕಳೆದ ಹಾಗೆ ದೇಹದಲ್ಲಿರೋ ಶಕ್ತಿನೂ ಕಡಿಮೆ ಆಗುತ್ತೆ. ಆಗ ಮುಂಚಿನ ತರ ಸಭೆ ಕೆಲಸ ಅಥವ ಬೇರೆ ಕೆಲಸಗಳನ್ನ ಮಾಡೋಕಾಗಲ್ಲ. ಆ ಕೆಲಸಗಳನ್ನ ಯುವ ಸಹೋದರ ಸಹೋದರಿಯರು ಮುಂದೆ ಬಂದು ಮಾಡ್ತಾರೆ. ಹಾಗಾಗಿ ಅವರನ್ನ ಯೆಹೋವ ದೇವರಿಂದ ಸಿಕ್ಕಿರೋ ವರವಾಗಿ ನೋಡಬೇಕು.

11. ರೂತ್‌ 4:13-16ರ ಪ್ರಕಾರ ವಯಸ್ಸಾಗಿರುವವರು ಯುವಕರಿಂದ ಸಹಾಯ ಪಡಕೊಳ್ಳೋದು ಯಾಕೆ ಒಳ್ಳೇದು?

11 ನೊವೊಮಿ ಉದಾಹರಣೆ ನೋಡೋಣ. ಅವಳು ರೂತಳಿಂದ ಸಹಾಯ ಪಡಕೊಂಡಳು. ಅವರಿಬ್ಬರೂ ವಿಧವೆಯರಾಗಿದ್ದರು. ನೊವೊಮಿ ರೂತಳಿಗೆ ತವರುಮನೆಗೆ ಹೋಗು ಅಂತ ತುಂಬ ಒತ್ತಾಯ ಮಾಡಿದಳು. ಆದ್ರೆ ರೂತಳು ‘ಇಲ್ಲ ನಾನು ಹೋಗಲ್ಲ, ನಾನು ನಿನ್ನ ಜೊತೆ ಬೆತ್ಲೆಹೇಮಿಗೆ ಬರ್ತೀನಿ’ ಅಂತ ಒಂಟಿಕಾಲಲ್ಲಿ ನಿಂತಳು. ಹಾಗಾಗಿ ನೊವೊಮಿ ‘ಸರಿ ನನ್ನ ಜೊತೆ ಬಾ’ ಅಂತ ಕರಕೊಂಡು ಹೋದಳು. (ರೂತ್‌ 1:7, 8, 18) ಇದ್ರಿಂದ ಇಬ್ಬರಿಗೂ ಸಹಾಯ ಆಯಿತಲ್ವಾ? (ರೂತ್‌ 4:13-16 ಓದಿ.) ದೀನತೆ ಇದ್ರೆ ವಯಸ್ಸಾಗಿರುವವರು ನೊವೊಮಿ ತರ ಬೇರೆಯವರ ಸಹಾಯ ಪಡಕೊಳ್ಳೋಕೆ ಯಾವಾಗಲೂ ತಯಾರಾಗಿ ಇರುತ್ತಾರೆ.

12. ಪೌಲ ಸಹಾಯ ಸ್ವೀಕರಿಸಿದ ಅಂತ ಹೇಗೆ ಹೇಳಬಹುದು?

12 ಸಹೋದರ ಸಹೋದರಿಯರು ಪೌಲನಿಗೆ ಸಹಾಯ ಮಾಡಿದಾಗ ಅದನ್ನ ಮನಸಾರೆ ಸ್ವೀಕರಿಸಿದ. ಉದಾಹರಣೆಗೆ, ಫಿಲಿಪ್ಪಿಯಲ್ಲಿದ್ದ ಸಹೋದರರು ಅವನಿಗೆ ಬೇಕಾದ ವಸ್ತುಗಳನ್ನ ಕೊಟ್ಟು ಕಳಿಸಿದಾಗ ಅವರಿಗೆ ಥ್ಯಾಂಕ್ಸ್‌ ಹೇಳಿದ. (ಫಿಲಿ. 4:16) ಅಷ್ಟೇ ಅಲ್ಲ, ತಿಮೊತಿಯಿಂದ ಪಡಕೊಂಡ ಸಹಾಯದ ಬಗ್ಗೆನೂ ಪೌಲ ಆ ಪತ್ರದಲ್ಲಿ ಬರೆದ. (ಫಿಲಿ. 2:19-22) ಪೌಲನನ್ನ ಕೈದಿಯಾಗಿ ರೋಮಿಗೆ ಕರಕೊಂಡು ಹೋಗ್ತಿದ್ದಾಗ ಸಹೋದರ ಸಹೋದರಿಯರು ಅವನಿಗೆ ಧೈರ್ಯ ತುಂಬೋಕೆ ಬಂದಿದ್ದನ್ನ ನೋಡಿ ದೇವರಿಗೆ ಥ್ಯಾಂಕ್ಸ್‌ ಹೇಳಿದ. (ಅ. ಕಾ. 28:15) ಸಾವಿರಾರು ಕಿಲೋಮೀಟರ್‌ ದೂರ ಹೋಗಿ ಸಿಹಿಸುದ್ದಿ ಸಾರೋ, ಸಭೆಗಳಿಗೆ ಪ್ರೋತ್ಸಾಹ ಕೊಡೋ ವ್ಯಕ್ತಿಯಾಗಿದ್ದ. ಹಾಗಿದ್ರೂ ಪೌಲ ‘ನನಗೆ ಬೇರೆಯವರ ಸಹಾಯ ಬೇಕಾಗಿಲ್ಲ ಅಂತ ಅಹಂಕಾರ ತೋರಿಸಲಿಲ್ಲ.’

13. ಯುವಜನರು ಮಾಡ್ತಿರೋ ಸಹಾಯವನ್ನ ನೆನಪಿಸಿಕೊಳ್ತೀರ ಅಂತ ನೀವು ಹೇಗೆ ತೋರಿಸಿಕೊಡ್ತೀರಿ?

13 ವಯಸ್ಸಾದವರೇ, ಯುವಜನರು ಮಾಡೋ ಸಹಾಯವನ್ನ ನೆನಪಿಸಿಕೊಳ್ತೀರಿ ಅಂತ ನೀವು ಹೇಗೆ ತೋರಿಸ್ತೀರ? ನಿಮಗೆ ಎಲ್ಲಾದ್ರೂ ಹೋಗಿ ಬರೋಕೆ, ಶಾಪಿಂಗ್‌ ಮಾಡೋಕೆ ಅಥವಾ ಬೇರೆ ಏನಾದ್ರೂ ಸಹಾಯ ಮಾಡಿದಾಗ ಅದನ್ನ ಸ್ವೀಕರಿಸಿ. ಅವರ ಮೂಲಕ ಯೆಹೋವ ದೇವರು ಪ್ರೀತಿ ತೋರಿಸ್ತಿದ್ದಾರೆ, ಸಹಾಯ ಮಾಡ್ತಿದ್ದಾರೆ ಅನ್ನೋದನ್ನ ಮನಸ್ಸಲ್ಲಿಡಿ. ಆಗ ನೀವು ಅವರ ಫ್ರೆಂಡ್‌ ಆಗ್ತೀರ. ಯುವಜನರು ಯೆಹೋವನ ಜೊತೆ ಒಳ್ಳೇ ಸ್ನೇಹ ಬೆಳೆಸಿಕೊಳ್ಳೋಕೆ ನೀವು ಸಹಾಯ ಮಾಡಿ. ಅವರು ಸಭೆಯವರಿಗೆ ಸಹಾಯ ಮಾಡೋದನ್ನ ನೋಡುವಾಗ ತುಂಬ ಖುಷಿ ಆಗುತ್ತೆ ಅಂತ ಹೇಳಿ. ಅವರ ಜೊತೆ ಸಮಯ ಕಳೆಯಿರಿ, ನಿಮ್ಮ ಅನುಭವಗಳನ್ನ ತಿಳಿಸಿ. ಹೀಗೆ ಮಾಡಿದಾಗ, ಇಂಥ ಯುವಜನರನ್ನ ಕೊಟ್ಟು ಯೆಹೋವ ನಿಮಗೆ ಮಾಡಿರೋ ‘ಸಹಾಯವನ್ನ ನೀವು ತುಂಬ ನೆನಪಿಸಿಕೊಳ್ತೀರ’ ಅಂತನೂ ತೋರಿಸಿಕೊಡ್ತೀರಿ.—ಕೊಲೊ. 3:15; ಯೋಹಾ. 6:44; 1 ಥೆಸ. 5:18.

ಧಾರಾಳವಾಗಿ ಕೊಡಿ

14. ದಾವೀದ ಹೇಗೆ ಧಾರಾಳ ಮನಸ್ಸು ತೋರಿಸಿದ?

14 ವಯಸ್ಸಾಗಿರೋ ಸಹೋದರ ಸಹೋದರಿಯರು ಹೇಗೆ ಧಾರಾಳವಾಗಿ ಕೊಡಬಹುದು ಅನ್ನೋದನ್ನ ರಾಜ ದಾವೀದನಿಂದ ಕಲಿಬಹುದು. ಆಲಯ ಕಟ್ಟೋಕೆ ದಾವೀದ ತನ್ನ ಕೈಯಿಂದ ತುಂಬ ಹಣ ಹಾಕಿದ. ಬೇಕಾದಷ್ಟು ವಸ್ತುಗಳನ್ನೂ ಕೊಟ್ಟ. (1 ಪೂರ್ವ. 22:11-16; 29:3, 4) ಆಲಯ ಕಟ್ಟೋದು ಅವನಲ್ಲ, ಅವನ ಮಗ ಸೊಲೊಮೋನ, ಈ ಆಲಯ ಕಟ್ಟಿದ ಮೇಲೆ ಆ ಹೆಸರು ಸೊಲೊಮೋನನಿಗೇ ಹೋಗುತ್ತೆ ಅಂತ ದಾವೀದನಿಗೆ ಗೊತ್ತಿತ್ತು. ಆದ್ರೂ ಆಲಯ ಕಟ್ಟೋಕೆ ಸಹಾಯ ಮಾಡಿದ. ಇವತ್ತೂ ಯೆಹೋವನ ಸಂಘಟನೆಯಲ್ಲಿ ತುಂಬ ಕಟ್ಟಡ ನಿರ್ಮಾಣ ಕೆಲಸಗಳು ನಡೀತಿವೆ. ಅಲ್ಲಿ ಹೋಗಿ ಕೆಲಸ ಮಾಡೋಕೆ ಶಕ್ತಿ ಇಲ್ಲಾಂದ್ರೂ ನಿಮ್ಮ ಕೈಲಾದಷ್ಟು ಕಾಣಿಕೆ ಕೊಟ್ಟು ಸಹಾಯ ಮಾಡಬಹುದು. ಅಷ್ಟೇ ಅಲ್ಲ ನೀವು ಕಲಿತ ಜೀವನದ ಪಾಠಗಳನ್ನ ಯುವಜನರಿಗೆ ಹೇಳಿ ಕೊಡಬಹುದು. ಇದು ಧಾರಾಳ ಮನಸ್ಸು ತೋರಿಸೋ ಇನ್ನೊಂದು ವಿಧ.

15. ಪೌಲ ಹೇಗೆ ಧಾರಾಳ ಮನಸ್ಸು ತೋರಿಸಿದ?

15 ಈಗ ಪೌಲನ ಉದಾಹರಣೆ ನೋಡೋಣ. ಅವನಲ್ಲೂ ಧಾರಾಳ ಮನಸ್ಸಿತ್ತು. ಅದಕ್ಕೆ ಮಿಷನರಿ ಕೆಲಸ ಮಾಡುವಾಗ ತಿಮೊತಿಯನ್ನ ತನ್ನ ಜೊತೆ ಕರಕೊಂಡ. ಜನರಿಗೆ ಸಾರೋದು ಹೇಗೆ, ಕಲಿಸೋದು ಹೇಗೆ ಅಂತ ತಿಮೊತಿಗೆ ಹೇಳಿಕೊಡೋಕೆ ಜಿಪುಣತನ ತೋರಿಸಲಿಲ್ಲ. (ಅ. ಕಾ. 16:1-3) ಇದ್ರಿಂದ ತಿಮೊತಿಗೆ ಒಳ್ಳೇ ಬೋಧಕನಾಗೋಕೆ ಸಹಾಯ ಆಯ್ತು. (1 ಕೊರಿಂ. 4:17) ಪೌಲನಿಂದ ಕಲಿತ ವಿಷಯಗಳನ್ನೆಲ್ಲಾ ತಿಮೊತಿ ಬೇರೆಯವರಿಗೂ ಕಲಿಸಿದ.

16. ಶಿಗೆಯೋ ಯುವ ಸಹೋದರರಿಗೆ ಯಾಕೆ ತರಬೇತಿ ಕೊಟ್ರು?

16 ಯುವ ಸಹೋದರರಿಗೆ ತರಬೇತಿ ಕೊಟ್ರೆ ಎಲ್ಲಿ ತಮ್ಮ ನೇಮಕ ಕಳೆದುಕೊಂಡು ಬಿಡ್ತೀವೋ ಅಂತ ವಯಸ್ಸಾದವರು ಭಯಪಡಲ್ಲ. ಸಹೋದರ ಶಿಗೆಯೋ ಏನು ಮಾಡಿದ್ರು ಅಂತ ನೋಡಿ. ತುಂಬ ವರ್ಷಗಳಿಂದ ತಮ್ಮ ಜೊತೆ ಬ್ರಾಂಚ್‌ ಕಮಿಟಿಯಲ್ಲಿದ್ದ ಸಹೋದರರಿಗೆ ಅವರು ತರಬೇತಿ ಕೊಡ್ತಾ ಬಂದ್ರು. ಆ ದೇಶದಲ್ಲಿ ದೇವರ ಸೇವೆ ನಿಲ್ಲಬಾರದು, ಚೆನ್ನಾಗಿ ನಡಿಬೇಕು ಅನ್ನೋ ಉದ್ದೇಶದಿಂದ ಎಲ್ರಿಗೂ ತರಬೇತಿ ಕೊಟ್ರು. ಇದ್ರಿಂದ ಯಾವ ಪ್ರಯೋಜನ ಸಿಕ್ತು? ಸ್ವಲ್ಪ ವರ್ಷದ ನಂತರ ಬ್ರಾಂಚ್‌ ಕಮಿಟಿಯ ಸಂಯೋಜಕನ ಸ್ಥಾನಕ್ಕೆ ಒಳ್ಳೇ ತರಬೇತಿ ಪಡೆದಿರೋ ಯುವ ಸಹೋದರನನ್ನ ಆರಿಸಿಕೊಳ್ಳೋಕೆ ಸುಲಭ ಆಯ್ತು. ಸಹೋದರ ಶಿಗೆಯೋಗೆ 45ಕ್ಕೂ ಹೆಚ್ಚು ವರ್ಷಗಳಿಂದ ಬ್ರಾಂಚ್‌ ಕಮಿಟಿಯ ಸದಸ್ಯನಾಗಿ ಕೆಲಸ ಮಾಡಿ ಅನುಭವ ಇದೆ. ಆ ಅನುಭವದಿಂದ ಕಲಿತದ್ದನ್ನ ಯುವ ಸಹೋದರರಿಗೆ ಈಗಲೂ ಕಲಿಸ್ತಾ ಇದ್ದಾರೆ. ಶಿಗೆಯೋ ತರ ಇರೋ ಸಹೋದರರು ಸಂಘಟನೆಯಲ್ಲಿ ಇರೋದು ದೊಡ್ಡ ಆಶೀರ್ವಾದ!

17. ಲೂಕ 6:38ರಲ್ಲಿ ಹೇಳೋ ಹಾಗೆ ವಯಸ್ಸಾದವರು ಏನು ಮಾಡಬೇಕು?

17 ವೃದ್ಧ ಸಹೋದರ ಸಹೋದರಿಯರೇ, ನಂಬಿಕೆ ಮತ್ತು ನಿಯತ್ತಿಂದ ಯೆಹೋವನ ಸೇವೆ ಮಾಡ್ತಾ ಇದ್ರೆ ಜೀವನದಲ್ಲಿ ಖುಷಿಯಾಗಿ ಇರಬಹುದು ಅನ್ನೋದಕ್ಕೆ ನೀವೇ ಸಾಕ್ಷಿ. ಬೈಬಲ್‌ ಹೇಳೋದನ್ನ ಅರ್ಥಮಾಡ್ಕೊಂಡು ಜೀವನದಲ್ಲಿ ಪಾಲಿಸಿದ್ರೆ ತುಂಬ ಒಳ್ಳೇದಾಗುತ್ತೆ ಅಂತ ನೀವು ತೋರಿಸಿಕೊಟ್ಟಿದ್ದೀರ. ಏನು ಮಾಡಿದ್ರೆ ಏನಾಗುತ್ತೆ ಮತ್ತು ಸನ್ನಿವೇಶಕ್ಕೆ ತಕ್ಕ ಹಾಗೆ ಹೊಂದಾಣಿಕೆ ಮಾಡಿಕೊಳ್ಳೋದು ತುಂಬ ಮುಖ್ಯ ಅಂತ ನಿಮಗೆ ಗೊತ್ತು. ಯಾಕಂದ್ರೆ ನಿಮಗೆ ತುಂಬ ಅನುಭವ ಇದೆ. ನೀವು ಇತ್ತೀಚೆಗೆ ದೀಕ್ಷಾಸ್ನಾನ ಪಡಕೊಂಡರೂ ನಿಮ್ಮಿಂದ ತುಂಬ ವಿಷಯ ಕಲಿಬಹುದು. ಹಾಗಾಗಿ ನೀವೀಗ ಎಷ್ಟು ಖುಷಿಯಾಗಿದ್ದೀರ ಅಂತ ಯುವಜನರಿಗೆ ಹೇಳಿ. ನಿಮ್ಮ ಅನುಭವದ ಮಾತುಗಳಿಂದ, ಸಲಹೆಗಳಿಂದ ಅವರಿಗೆ ತುಂಬ ಸಹಾಯ ಆಗುತ್ತೆ. ನಿಮ್ಮ ಅನುಭವ ದೊಡ್ಡ ಗೋಡೌನ್‌ ಇದ್ದ ಹಾಗೆ. ಅದ್ರಿಂದ ಧಾರಾಳವಾಗಿ “ಕೊಡೋದನ್ನ ರೂಢಿ ಮಾಡ್ಕೊಳ್ಳಿ.” ಆಗ ಯೆಹೋವ ದೇವರು ನಿಮ್ಮನ್ನು ಧಾರಾಳವಾಗಿ ಆಶೀರ್ವಾದ ಮಾಡ್ತಾರೆ.ಲೂಕ 6:38 ಓದಿ.

18. ವಯಸ್ಸಾದವರು ಮತ್ತು ಯುವಜನರು ಒಟ್ಟಿಗೆ ಕೆಲಸ ಮಾಡಿದ್ರೆ ಏನಾಗುತ್ತೆ?

18 ಪ್ರೀತಿಯ ವೃದ್ಧ ಸಹೋದರ ಸಹೋದರಿಯರೇ, ಯುವಜನರ ಹತ್ರ ಒಳ್ಳೇ ಸ್ನೇಹ ಬೆಳೆಸಿಕೊಳ್ಳಿ. ಇದ್ರಿಂದ ನಿಮಗೂ ಅವರಿಗೂ ಸಹಾಯ ಆಗುತ್ತೆ. (ರೋಮ. 1:12) ವಯಸ್ಸಾದವರಿಗೆ ಇರುವಷ್ಟು ವಿವೇಕ, ಅನುಭವ ಯುವಜನರಿಗೆ ಇರಲ್ಲ. ಯುವಜನರಿಗೆ ಇರುವಷ್ಟು ಶಕ್ತಿ, ಬಲ ವಯಸ್ಸಾದವರಿಗೆ ಇರಲ್ಲ. ಹಾಗಾಗಿ ನಾವೆಲ್ಲರೂ ಸೇರಿ ಕೆಲಸ ಮಾಡಿದ್ರೆ, ಯೆಹೋವ ದೇವರಿಗೆ ಒಳ್ಳೆ ಹೆಸರು ಬರುತ್ತೆ, ಸಭೆನೂ ಬಲವಾಗಿರುತ್ತೆ.

ಗೀತೆ 121 ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ

^ ಪ್ಯಾರ. 5 ನಮ್ಮ ಸಭೆಯಲ್ಲಿ ತುಂಬ ಯುವ ಸಹೋದರ ಸಹೋದರಿಯರಿದ್ದಾರೆ. ಅವರು ಯೆಹೋವನ ಸಂಘಟನೆಯಲ್ಲಿ ಕೆಲಸ ಮಾಡೋಕೆ ಮುಂದೆ ಬರ್ತಿದ್ದಾರೆ. ಇದೊಂದು ದೊಡ್ಡ ಆಶೀರ್ವಾದ. ವಯಸ್ಸಾದವರು ಯಾವ ಸಂಸ್ಕೃತಿ ಮತ್ತು ಹಿನ್ನೆಲೆಯಿಂದ ಬಂದಿದ್ರೂ ಸಭೆಯಲ್ಲಿರುವ ಯುವಜನರಿಗೆ ಸಹಾಯ ಮಾಡಬಹುದು. ಆಗ ಆ ಯುವಜನರು ಯೆಹೋವನ ಸೇವೆಯನ್ನ ಇನ್ನೂ ಜಾಸ್ತಿ ಮಾಡೋಕೆ ಆಗುತ್ತೆ.

^ ಪ್ಯಾರ. 55 ಚಿತ್ರ ವಿವರಣೆ: ಒಬ್ಬ ಸರ್ಕಿಟ್‌ ಮೇಲ್ವಿಚಾರಕನಿಗೆ 70 ವರ್ಷ ಆದಾಗ ಅವರಿಗೆ ಮತ್ತು ಅವರ ಹೆಂಡತಿಗೆ ಹೊಸ ನೇಮಕ ಸಿಕ್ತು. ಅವರಿಗೆ ತುಂಬ ವರ್ಷ ಸೇವೆಮಾಡಿದ ಅನುಭವ ಇದೆ. ಹಾಗಾಗಿ ಹೊಸ ಸಭೆಗೆ ಹೋದಮೇಲೆ ಅಲ್ಲಿರೋ ಸಹೋದರರಿಗೆ ತರಬೇತಿ ಕೊಡ್ತಿದ್ದಾರೆ.