ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 38

ಯೆಹೋವನಿಗೆ ಮತ್ತು ಸಭೆಯವರಿಗೆ ಪ್ರೀತಿ ತೋರಿಸ್ತಾ ಇರಿ

ಯೆಹೋವನಿಗೆ ಮತ್ತು ಸಭೆಯವರಿಗೆ ಪ್ರೀತಿ ತೋರಿಸ್ತಾ ಇರಿ

“ನನ್ನ ತಂದೆ ನಿಮ್ಮ ತಂದೆ . . . ಆಗಿರುವವನ ಹತ್ರ ಹೋಗ್ತಾ ಇದ್ದೀನಿ.”—ಯೋಹಾ. 20:17.

ಗೀತೆ 152 ಯೆಹೋವ ನೀನೇ ಆಶ್ರಯ

ಕಿರುನೋಟ *

1. ಯೆಹೋವ ದೇವರನ್ನ ನಾವು ಹೇಗೆ ನೋಡಬೇಕು?

“ಎಲ್ಲ ಸೃಷ್ಟಿಗಳಿಗಿಂತ ಮೊಟ್ಟಮೊದ್ಲು ಸೃಷ್ಟಿಯಾದ” ಯೇಸು ಮತ್ತು ಕೋಟ್ಯಾಂತರ ದೇವದೂತರು ಯೆಹೋವ ದೇವರ ಕುಟುಂಬದಲ್ಲಿದ್ದಾರೆ. (ಕೊಲೊ. 1:15; ಕೀರ್ತ. 103:20) ಯೇಸು ಭೂಮಿಯಲ್ಲಿದ್ದಾಗ ಜನರಿಗೆ ಯೆಹೋವ ದೇವರನ್ನ ಅಪ್ಪಾ ಅಂತ ಕರೆಯೋಕೆ ಕಲಿಸಿದರು. ತನ್ನ ಶಿಷ್ಯರ ಜೊತೆ ಮಾತಾಡುವಾಗ ಯೆಹೋವ ದೇವರನ್ನ “ನನ್ನ ತಂದೆ ನಿಮ್ಮ ತಂದೆ” ಅಂತ ಹೇಳಿದರು. (ಯೋಹಾ. 20:17) ನಾವು ಯೆಹೋವ ದೇವರಿಗೆ ನಮ್ಮನ್ನ ಸಮರ್ಪಣೆ ಮಾಡ್ಕೊಂಡು ದೀಕ್ಷಾಸ್ನಾನ ಪಡಕೊಂಡಾಗ ಸಹೋದರ ಸಹೋದರಿಯರ ಪ್ರೀತಿಯ ಕುಟುಂಬಕ್ಕೆ ನಾವು ಕಾಲಿಡುತ್ತೀವಿ.—ಮಾರ್ಕ 10:29, 30.

2. ಈ ಲೇಖನದಲ್ಲಿ ನಾವು ಏನು ಚರ್ಚಿಸ್ತೀವಿ?

2 ಯೆಹೋವ ದೇವರನ್ನ ಅಪ್ಪ ತರ ನೋಡೋಕೆ ಕೆಲವರಿಗೆ ಕಷ್ಟ ಆಗುತ್ತೆ. ಇನ್ನೂ ಕೆಲವರಿಗೆ ನಮ್ಮ ಸಹೋದರ ಸಹೋದರಿಯರನ್ನ ಹೇಗೆ ಪ್ರೀತಿಸೋದು ಅಂತ ಗೊತ್ತಿರಲ್ಲ. ಯೆಹೋವನನ್ನು ಪ್ರೀತಿಯ ಅಪ್ಪ ತರ ನೋಡೋಕೆ ಮತ್ತು ಆತನ ಜೊತೆ ಒಳ್ಳೇ ಸ್ನೇಹ ಬೆಳೆಸಿಕೊಳ್ಳೋಕೆ ಯೇಸು ನಮಗೆ ಹೇಗೆ ಸಹಾಯ ಮಾಡ್ತಾರೆ ಅಂತ ಈ ಲೇಖನದಲ್ಲಿ ನೋಡೋಣ. ಯೆಹೋವ ದೇವರ ತರಾನೇ ನಾವು ಸಹೋದರ ಸಹೋದರಿಯರನ್ನ ಹೇಗೆಲ್ಲಾ ಪ್ರೀತಿಸಬಹುದು ಅಂತನೂ ನೋಡೋಣ.

ನೀವು ಯೆಹೋವನಿಗೆ ಹತ್ರ ಆಗಬೇಕು ಅನ್ನೋದೇ ಆತನ ಆಸೆ

3. ಯೇಸು ಕಲಿಸಿದ ಪ್ರಾರ್ಥನೆಯಿಂದ ಯೆಹೋವ ದೇವರ ಬಗ್ಗೆ ಏನು ಗೊತ್ತಾಗುತ್ತೆ?

3 ಯೇಸು ಯೆಹೋವ ದೇವರನ್ನ ಪ್ರೀತಿಯ ಅಪ್ಪ ತರ ನೋಡಿದ್ರು. ನಾವು ಯೆಹೋವ ದೇವರನ್ನ ಹಾಗೇ ನೋಡಬೇಕು ಅನ್ನೋದೇ ಯೇಸುವಿನ ಆಸೆ. ಯಾಕಂದ್ರೆ ದೇವರು ಹೆತ್ತ ತಂದೆ ತಾಯಿ ತರ ನಮ್ಮನ್ನ ನಿಜವಾಗಲೂ ಪ್ರೀತಿಸ್ತಾರೆ. ನಾವು ಆತನ ಹತ್ರ ಯಾವಾಗ ಬೇಕಾದ್ರೂ ಮಾತಾಡಬಹುದು. ಆತನು ಯಾವತ್ತೂ ಒರಟಾಗಿ ನಡ್ಕೊಳಲ್ಲ, ನಮ್ಮ ಭಾವನೆಗಳನ್ನ ಅರ್ಥಮಾಡಿಕೊಳ್ತಾರೆ. ಇದು ನಮಗೆ ಯೇಸು ತನ್ನ ಶಿಷ್ಯರಿಗೆ ಕಲಿಸಿದ ಪ್ರಾರ್ಥನೆಯಿಂದ ಗೊತ್ತಾಗುತ್ತೆ. ಯೇಸು ಪ್ರಾರ್ಥನೆ ಮಾಡುವಾಗ “ಅಪ್ಪಾ” ಅಂತ ಶುರುಮಾಡಿದ್ರು. (ಮತ್ತಾ. 6:9) ಒಂದುವೇಳೆ “ಸರ್ವಶಕ್ತ”, ‘ಸೃಷ್ಟಿಕರ್ತ’, “ಯುಗಯುಗಕ್ಕೂ ರಾಜ” ಅನ್ನೋ ಬಿರುದುಗಳನ್ನ ಹೇಳಿ ಶುರುಮಾಡಿದ್ರೂ ತಪ್ಪಾಗ್ತಿರಲಿಲ್ಲ. (ಆದಿ. 49:25; ಯೆಶಾ. 40:28; 1 ತಿಮೊ. 1:17) ಯಾಕಂದ್ರೆ ಇವೆಲ್ಲಾ ಯೆಹೋವ ದೇವರ ಬಿರುದುಗಳು. ಆದ್ರೂ “ಅಪ್ಪಾ” ಅಂತ ಕರೆದು ಯೇಸು ಪ್ರಾರ್ಥಿಸಿದರು.

4. ನಾವು ಯೆಹೋವ ದೇವರಿಗೆ ಹತ್ರ ಆಗಬೇಕು ಅನ್ನೋದೇ ಆತನ ಇಷ್ಟ ಅಂತ ಹೇಗೆ ಹೇಳಬಹುದು?

4 ಯೆಹೋವನನ್ನ ಪ್ರೀತಿಯ ಅಪ್ಪಾ ಅಂತ ಒಪ್ಪಿಕೊಳ್ಳೋಕೆ ನಿಮಗೆ ಕಷ್ಟ ಆಗುತ್ತಾ? ಕೆಲವರಿಗೆ ಚಿಕ್ಕವಯಸ್ಸಿಂದಾನೂ ಅವರ ಹೆತ್ತ ತಂದೆ ಪ್ರೀತಿ ತೋರಿಸಿರಲ್ಲ. ಅದಕ್ಕೆ ಯೆಹೋವನನ್ನ ಪ್ರೀತಿಯ ಅಪ್ಪಾ ಅಂತ ಒಪ್ಪಿಕೊಳ್ಳೋಕೆ ಕಷ್ಟ ಆಗಬಹುದು. ಅದನ್ನ ಯೆಹೋವ ಅರ್ಥಮಾಡಿಕೊಳ್ತಾರೆ. ನಿಮಗೆ ಕಷ್ಟವಾದ್ರೂ ಆತನನ್ನ ಅಪ್ಪ ತರ ನೋಡಬೇಕು ಅಂತ ಇಷ್ಟಪಡ್ತಾರೆ. ಯಾಕಂದ್ರೆ ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾರೆ. ನಾನು ನಿಮಗೆ ಒಳ್ಳೇ ಅಪ್ಪ ಆಗಿರ್ತೀನಿ ಅಂತ ಮಾತು ಕೊಟ್ಟಿದ್ದಾರೆ. ಅದಕ್ಕೆ ಬೈಬಲ್‌ “ದೇವರಿಗೆ ಹತ್ರ ಆಗಿ, ಆಗ ದೇವರು ನಿಮಗೆ ಹತ್ರ ಆಗ್ತಾನೆ” ಅಂತ ಹೇಳುತ್ತೆ.—ಯಾಕೋ. 4:8.

5. ಲೂಕ 10:22ರ ಪ್ರಕಾರ ಯೆಹೋವ ದೇವರಿಗೆ ಹತ್ರ ಆಗೋಕೆ ಯೇಸು ಹೇಗೆ ಸಹಾಯ ಮಾಡ್ತಾರೆ?

5 ಯೆಹೋವ ದೇವರಿಗೆ ಹತ್ರ ಆಗೋಕೆ ಯೇಸು ನಮಗೆ ಸಹಾಯ ಮಾಡ್ತಾರೆ. “ನನ್ನನ್ನ ನೋಡಿದವನು ನನ್ನ ಅಪ್ಪನನ್ನೂ ನೋಡಿದ್ದಾನೆ” ಅಂತ ಯೇಸು ಹೇಳಿದ್ರು. (ಯೋಹಾ. 14:9) ಯಾಕಂದ್ರೆ ಯೇಸು ಯೆಹೋವ ದೇವರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ ಮತ್ತು ದೇವರಲ್ಲಿರೋ ಗುಣಗಳನ್ನ ಬೆಳೆಸಿಕೊಂಡು ತೋರಿಸಿದ್ದಾರೆ. ಯೆಹೋವ ಅಪ್ಪಗೆ ಹೇಗೆ ಗೌರವ ಕೊಡಬೇಕು, ಅವರ ಮಾತನ್ನ ಹೇಗೆ ಕೇಳಬೇಕು, ಅವರ ಮನಸ್ಸು ನೋಯಿಸದೆ ಇರೋಕೆ ಏನು ಮಾಡಬೇಕು, ಖುಷಿ ಪಡಿಸೋಕೆ ಏನು ಮಾಡಬೇಕು ಅಂತ ಕುಟುಂಬದಲ್ಲಿ ದೊಡ್ಡ ಅಣ್ಣನ ತರ ಯೇಸು ನಮಗೆ ಹೇಳಿಕೊಟ್ಟಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಯೆಹೋವ ತುಂಬ ಪ್ರೀತಿ, ಕರುಣೆ ಇರೋ ದೇವರು ಅಂತ ಯೇಸು ಜನರ ಜೊತೆ ನಡ್ಕೊಂಡ ರೀತೀಲಿ ನಮಗೆ ತೋರಿಸಿಕೊಟ್ಟಿದ್ದಾರೆ. (ಲೂಕ 10:22 ಓದಿ.) ಅದ್ರಲ್ಲಿ ಕೆಲವು ಉದಾಹರಣೆಗಳನ್ನ ಈಗ ನೋಡೋಣ.

ಪ್ರೀತಿಯ ಅಪ್ಪ ಯೆಹೋವ ತನ್ನ ಮಗನ ಹತ್ರ ದೇವದೂತನನ್ನ ಕಳಿಸಿ ಧೈರ್ಯ ತುಂಬಿದ್ರು (ಪ್ಯಾರ 6 ನೋಡಿ) *

6. ಯೆಹೋವ ದೇವರು ಯೇಸುವಿನ ಪ್ರಾರ್ಥನೆಗಳನ್ನ ಕೇಳಿಸಿಕೊಂಡ್ರು ಅನ್ನೋದಕ್ಕೆ ಉದಾಹರಣೆಗಳನ್ನ ಕೊಡಿ.

6 ತನ್ನ ಮಕ್ಕಳು ಪ್ರಾರ್ಥನೆ ಮಾಡುವಾಗ ಯೆಹೋವ ಕೇಳಿಸಿಕೊಳ್ತಾರೆ. ತನ್ನ ಮೊದಲನೇ ಮಗ ಯೇಸು ಮಾಡಿದ ಪ್ರಾರ್ಥನೆಗಳನ್ನೆಲ್ಲ ಯೆಹೋವ ಕೇಳಿ ಸಹಾಯ ಮಾಡಿದ್ರು. ಯೇಸು ಭೂಮಿಯಲ್ಲಿದ್ದಾಗ ತುಂಬ ಸಲ ಯೆಹೋವನಿಗೆ ಪ್ರಾರ್ಥಿಸಿದ್ರು. (ಲೂಕ 5:16) ದೊಡ್ಡ ದೊಡ್ಡ ತೀರ್ಮಾನಗಳನ್ನ ಮಾಡುವಾಗ ಅಂದ್ರೆ 12 ಅಪೊಸ್ತಲರನ್ನ ಆಯ್ಕೆ ಮಾಡುವಾಗಲೂ ದೇವರಿಗೆ ಪ್ರಾರ್ಥನೆ ಮಾಡಿದ್ರು. (ಲೂಕ 6:12, 13) ಚಿಂತೆಯಲ್ಲಿ ಇದ್ದಾಗಲೂ ಯೇಸು ತುಂಬ ಸಲ ಪ್ರಾರ್ಥನೆ ಮಾಡಿದ್ದಾರೆ. ಈ ಎಲ್ಲಾ ಪ್ರಾರ್ಥನೆಗಳನ್ನ ಯೆಹೋವ ಕೇಳಿಸಿಕೊಂಡ್ರು. ಯೂದ ಇನ್ನೇನು ಯೇಸುವನ್ನ ಹಿಡಿದುಕೊಡಬೇಕು ಅನ್ನುವಾಗ ಪ್ರಾರ್ಥನೆ ಮಾಡಿ ಮುಂದೆ ಬರೋ ಕಷ್ಟಗಳನ್ನೆಲ್ಲಾ ಹೇಳಿಕೊಂಡ್ರು. ಆಗ ಯೆಹೋವ ಆ ಪ್ರಾರ್ಥನೆಯನ್ನ ಕೇಳಿ ತನ್ನ ಪ್ರೀತಿಯ ಮಗನಿಗೆ ಧೈರ್ಯ ತುಂಬೋಕೆ ಒಬ್ಬ ದೇವದೂತನನ್ನ ಕಳಿಸಿಕೊಟ್ರು.—ಲೂಕ 22:41-44.

7. ಯೆಹೋವ ದೇವರು ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡ್ತಾರೆ ಅಂತ ಗೊತ್ತಾದಾಗ ನಿಮಗೆ ಹೇಗನಿಸ್ತಿದೆ?

7 ಯೆಹೋವ ನಮ್ಮ ಪ್ರಾರ್ಥನೆಗಳನ್ನೂ ಕೇಳ್ತಾರೆ. ಸರಿಯಾದ ಸಮಯಕ್ಕೆ ಬೇಕಾದ ಸಹಾಯನೂ ಮಾಡ್ತಾರೆ. (ಕೀರ್ತ. 116:1, 2) ಭಾರತದಲ್ಲಿರೋ ಒಬ್ಬ ಸಹೋದರಿಯ ಉದಾಹರಣೆ ನೋಡಿ. ಆ ಸಹೋದರಿಗೆ ತುಂಬ ಚಿಂತೆ ಕಾಡ್ತಿತ್ತು. ಆಗ ಅವರು ಯೆಹೋವನಿಗೆ ತುಂಬ ಪ್ರಾರ್ಥನೆ ಮಾಡ್ತಿದ್ರು. ದೇವರು ಹೇಗೆ ಉತ್ತರ ಕೊಟ್ರು ಅಂತ ಸಹೋದರಿ ಹೇಳ್ತಾರೆ ನೋಡಿ. “ಮೇ 2019ರ JW ಪ್ರಸಾರದ ಮೂಲಕ ಯೆಹೋವ ನನಗೆ ಉತ್ತರ ಕೊಟ್ರು. ಚಿಂತೆ ಕಾಡುವಾಗ ಏನು ಮಾಡಬೇಕು ಅಂತ ಅದರಲ್ಲಿತ್ತು. ಇದು ನನಗೋಸ್ಕರನೇ ಇದೆ ಅಂತ ಅನಿಸ್ತು.”

8. ಯೆಹೋವ ದೇವರು ಯೇಸುವನ್ನ ಹೇಗೆಲ್ಲಾ ಪ್ರೀತಿಸಿದ್ರು?

8 ಯೇಸು ಭೂಮಿಯಲ್ಲಿದ್ದಾಗ ಯೆಹೋವ ದೇವರು ಪ್ರತಿಕ್ಷಣನೂ ಪ್ರೀತಿ ಮತ್ತು ಕಾಳಜಿ ತೋರಿಸಿದ್ರು. ಇವತ್ತು ನಮಗೂ ಅದೇ ಪ್ರೀತಿ, ಕಾಳಜಿ ತೋರಿಸ್ತಾರೆ. (ಯೋಹಾ. 5:20) ಏನೇ ಆದ್ರೂ ನಂಬಿಕೆ ಕಳಕೊಳ್ಳದೇ ಇರೋಕೆ ದೇವರು ಯೇಸುಗೆ ಸಹಾಯ ಮಾಡಿದ್ರು, ಚಿಂತೆಯಲ್ಲಿ ಮುಳುಗಿ ಹೋಗಿದ್ದಾಗ ಧೈರ್ಯ ತುಂಬಿದ್ರು. ಜೀವನ ಮಾಡೋಕೆ ಬೇಕಾಗಿದ್ದನ್ನ ಕೊಟ್ರು. ಅಷ್ಟೇ ಅಲ್ಲ, ‘ನಾನು ನನ್ನ ಮಗನನ್ನ ತುಂಬ ಪ್ರೀತಿಸ್ತೀನಿ, ಅವನು ಮಾಡೋದೆಲ್ಲ ನಂಗೆ ತುಂಬ ಖುಷಿ ತರುತ್ತೆ’ ಅಂತ ಹೇಳಿದ್ರು. (ಮತ್ತಾ. 3:16, 17) ಯೆಹೋವ ಅಪ್ಪ ತನ್ನನ್ನ ಪ್ರೀತಿಸ್ತಾರೆ, ಯಾವಾಗಲೂ ತನ್ನ ಜೊತೆನೇ ಇರ್ತಾರೆ ಅಂತ ಯೇಸುಗೆ ಗೊತ್ತಿತ್ತು. ಅದಕ್ಕೆ ಯೇಸುಗೆ ಯಾವತ್ತೂ ತಾನು ಒಂಟಿ ಅಂತ ಅನಿಸಲಿಲ್ಲ.—ಯೋಹಾ. 8:16.

9. ಯೆಹೋವ ಅಪ್ಪ ನಮ್ಮನ್ನ ಪ್ರೀತಿಸ್ತಾರೆ ಅಂತ ಹೇಗೆ ತೋರಿಸಿಕೊಟ್ಟಿದ್ದಾರೆ?

9 ಯೆಹೋವ ಅಪ್ಪ ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರೀತಿ ತೋರಿಸ್ತಿದ್ದಾರೆ. ನಾವೆಲ್ರೂ ಅದನ್ನ ಅನುಭವಿಸಿದ್ದೀವಿ. ಉದಾಹರಣೆಗೆ ಯೆಹೋವ ನಮ್ಮನ್ನ ಆತನ ಹತ್ರ ಸೆಳೆದಿದ್ದಾರೆ. ನಾವು ಖುಷಿಯಾಗಿರೋಕೆ, ನಮಗೆ ಕಷ್ಟ ಬಂದಾಗ ಧೈರ್ಯ ತುಂಬೋಕೆ ಸಹೋದರ ಸಹೋದರಿಯರನ್ನ ಕೊಟ್ಟಿದ್ದಾರೆ. (ಯೋಹಾ. 6:44) ನಮ್ಮ ನಂಬಿಕೆ ಬಲವಾಗಿರೋಕೆ ಬೇಕಾಗಿರೋದನ್ನ ಯಾವತ್ತೂ ಕಮ್ಮಿ ಮಾಡಿಲ್ಲ. ನಮಗೆ ಜೀವನ ಮಾಡೋಕೆ ಬೇಕಾಗಿರೋದನ್ನ ಕೊಟ್ಟು ಕಾಳಜಿ ವಹಿಸ್ತಿದ್ದಾರೆ. (ಮತ್ತಾ. 6:31, 32) ನಮ್ಮನ್ನು ಯೆಹೋವ ಅಪ್ಪ ತುಂಬ ಪ್ರೀತಿಸುವುದನ್ನ ನೋಡುವಾಗ ನಮಗೂ ಆತನ ಮೇಲೆ ಪ್ರೀತಿ ಜಾಸ್ತಿ ಆಗುತ್ತಲ್ವಾ?

ಯೆಹೋವನ ತರ ನೀವೂ ಸಭೆಯವರನ್ನ ಪ್ರೀತಿಸಿ

10. ನಾವೇನು ಮಾಡಬೇಕು ಅಂತ ಯೆಹೋವ ದೇವರಿಂದ ಕಲಿತೀವಿ?

10 ಯೆಹೋವ ದೇವರು ನಿಮ್ಮನ್ನ ಎಷ್ಟು ಪ್ರೀತಿಸ್ತಾರೋ ಸಭೆಯಲ್ಲಿ ಇರುವವರನ್ನೂ ಅಷ್ಟೇ ಪ್ರೀತಿಸ್ತಾರೆ. ಆದ್ರೆ ನಮಗೆ ಅವರನ್ನ ಪ್ರೀತಿಸೋಕೆ ಮತ್ತು ಇರೋ ಪ್ರೀತಿಯನ್ನ ತೋರಿಸೋಕೆ ಕೆಲವೊಮ್ಮೆ ಕಷ್ಟ ಆಗಬಹುದು. ಯಾಕಂದ್ರೆ ನಾವು ಬೆಳೆದುಬಂದಿರೋ ರೀತಿ, ಸಂಸ್ಕೃತಿ ಬೇರೆಬೇರೆ. ಹಾಗಾಗಿ ಕೆಲವೊಮ್ಮೆ ಅವರಿಗೆ ಕಿರಿಕಿರಿ ಆಗೋ ತರ, ಮನಸ್ಸಿಗೆ ನೋವಾಗೋ ತರ ನಡ್ಕೊಂಡು ಬಿಡ್ತೀವಿ. ಆದ್ರೆ ಅವರನ್ನ ಯೆಹೋವ ಹೇಗೆ ಪ್ರೀತಿಸ್ತಾರೆ ಅಂತ ನಾವು ನೋಡಿ ಕಲಿತರೆ ಎಷ್ಟೇ ಕಷ್ಟ ಆದ್ರೂ ನಮ್ಮ ಸಹೋದರ ಸಹೋದರಿಯರನ್ನ ಪ್ರೀತಿಸೋಕೆ ಆಗುತ್ತೆ. (ಎಫೆ. 5:1, 2; 1 ಯೋಹಾ. 4:19) ಈಗ ನಾವು ಯೆಹೋವ ದೇವರ ಉದಾಹರಣೆಯಿಂದ ಕಲಿಯೋಣ.

11. ಯೆಹೋವ ದೇವರ ತರ ಯೇಸು ಹೇಗೆ “ಕೋಮಲ ಕರುಣೆ” ತೋರಿಸಿದ್ರು?

11 ಯೆಹೋವ ದೇವರು “ಕೋಮಲ ಕರುಣೆ” ತೋರಿಸ್ತಾರೆ. (ಲೂಕ 1:78) ಬೇರೆಯವರು ಕಷ್ಟ ಅನುಭವಿಸೋದನ್ನ ನೋಡುವಾಗ ಕೋಮಲ ಕರುಣೆ ಇರೋ ವ್ಯಕ್ತಿಗೆ ಸಂಕಟ ಆಗುತ್ತೆ. ಸಮಾಧಾನ ಮಾಡೋಕೆ, ಸಹಾಯ ಮಾಡೋಕೆ ತುಂಬ ಪ್ರಯತ್ನನೂ ಮಾಡ್ತಾನೆ. ಯೇಸು, ಯೆಹೋವ ದೇವರ ತರಾನೇ ಜನರಿಗೆ ಕೋಮಲ ಕರುಣೆ ತೋರಿಸಿದ್ರು. (ಯೋಹಾ. 5:19) ಒಂದುಸಲ ‘ಜನ್ರ ಗುಂಪನ್ನ ನೋಡಿದಾಗ ತುಂಬ ಕನಿಕರಪಟ್ಟರು. ಯಾಕಂದ್ರೆ ಜನರು ಕುರುಬನಿಲ್ಲದ ಕುರಿಗಳ ತರ ಇದ್ರು.’ (ಮತ್ತಾ. 9:36) ಜನರನ್ನ ನೋಡಿ ಯೇಸು ಕನಿಕರ ಪಟ್ಟಿದ್ದು ಮಾತ್ರ ಅಲ್ಲ, ಅವರಿಗೆ ಬೇಕಾದ ಸಹಾಯ ಕೂಡ ಮಾಡಿದ್ರು. ಹುಷಾರಿಲ್ಲದೆ ಇದ್ದವರನ್ನು ವಾಸಿಮಾಡಿದ್ರು. ‘ಕಷ್ಟಪಟ್ಟು ಕೆಲಸ ಮಾಡಿ ಹೊರೆ ಹೊತ್ತು ಸುಸ್ತಾದವರಿಗೆ’ ಸಹಾಯ ಮಾಡಿದ್ರು.—ಮತ್ತಾ. 11:28-30; 14:14.

ಸಭೆಯವರಿಗೆ ಯೆಹೋವ ದೇವರ ತರ ಕರುಣೆ, ಧಾರಾಳ ಮನಸ್ಸು ತೋರಿಸಿ ಪ್ಯಾರ 12-14 ನೋಡಿ) *

12. ಸಭೆಯವರಿಗೆ ನಾವು ಹೇಗೆಲ್ಲಾ ಕೋಮಲ ಕರುಣೆ ತೋರಿಸಬಹುದು?

12 ನಮ್ಮ ಸಹೋದರ ಸಹೋದರಿಯರು ಯಾವ ಕಷ್ಟದಲ್ಲಿದ್ದಾರೆ ಅಂತ ಅರ್ಥಮಾಡಿಕೊಂಡ್ರೆ ಅವರಿಗೆ ಕೋಮಲ ಕರುಣೆ ತೋರಿಸೋಕೆ ನಮ್ಮಿಂದಾಗುತ್ತೆ. ಉದಾಹರಣೆಗೆ ಒಬ್ಬ ಸಹೋದರಿಗೆ ತುಂಬ ಹುಷಾರಿಲ್ಲದೆ ಇದ್ದಾಗ ಅವರು ಅದನ್ನ ಹೇಳದೇ ಇದ್ರೂ ಯಾರಾದ್ರೂ ಸಹಾಯ ಮಾಡಿದಾಗ ಅವರಿಗೆ ತುಂಬ ಖುಷಿ ಆಗುತ್ತೆ. ಆ ಸಹೋದರಿಯ ಕುಟುಂಬಕ್ಕೆ ಏನಾದ್ರೂ ಸಹಾಯ ಬೇಕಾ, ಅಡುಗೆ ಮಾಡಿಕೊಡಬೇಕಾ, ಮನೆ ಕ್ಲೀನ್‌ ಮಾಡಿಕೊಡಬೇಕಾ ಅಂತ ನೋಡಿ. ಸಭೆಯಲ್ಲಿ ಒಬ್ಬ ಸಹೋದರ ಕೆಲಸ ಕಳಕೊಂಡಿದ್ದಾರೆ ಅಂತ ಗೊತ್ತಾದ್ರೆ ನಿಮ್ಮ ಕೈಲಿ ಎಷ್ಟಾಗುತ್ತೋ ಅಷ್ಟು ಹಣ ಕೊಡಬಹುದು. ನೀವೇ ಕೊಟ್ಟಿದ್ದು ಅಂತ ಗೊತ್ತಾಗಬಾರದು ಅಂದ್ರೆ ಗೊತ್ತಾಗದ ಹಾಗೆ ಕೊಡಬಹುದು. ಆಗ ಅವರಿಗೆ ಇನ್ನೊಂದು ಕೆಲಸ ಸಿಗೋ ತನಕ ಜೀವನ ಮಾಡೋಕೆ ಸ್ವಲ್ಪ ಸಹಾಯ ಆಗುತ್ತೆ.

13-14. ನಾವು ಹೇಗೆ ಯೆಹೋವನ ತರ ಧಾರಾಳ ಮನಸ್ಸು ತೋರಿಸಬಹುದು?

13 ಯೆಹೋವ ಅಪ್ಪ ತನ್ನ ಮಕ್ಕಳಿಗೆ ಧಾರಾಳವಾಗಿ ಕೊಡ್ತಾರೆ. (ಮತ್ತಾ. 5:45) ಸಹೋದರ ಸಹೋದರಿಯರು ಬಂದು ನಮ್ಮ ಹತ್ರ ಸಹಾಯ ಕೇಳೋ ತನಕ ನಾವು ಕಾಯಬಾರದು. ಯೆಹೋವನ ತರ ನಾವೇ ಮುಂದೆ ಹೋಗಿ ಸಹಾಯ ಮಾಡಬೇಕು. ಸೂರ್ಯ ಹುಟ್ಟಲಿ ಅಂತ ನಾವು ದಿನಾ ದೇವರ ಹತ್ರ ಬೇಡಿಕೊಳ್ತೀವಾ? ಇಲ್ಲ. ನಾವು ಕೇಳಿಕೊಳ್ಳದೇ ಇದ್ರೂ ಪ್ರತಿದಿನ ಸೂರ್ಯ ಹುಟ್ಟೋ ತರ ದೇವರು ಮಾಡ್ತಾರೆ. ಅದನ್ನ ಕೊಟ್ಟಿರೋದಕ್ಕೆ ಥ್ಯಾಂಕ್ಸ್‌ ಹೇಳುವವರಿಗೂ, ಹೇಳದೇ ಇರುವವರಿಗೂ ಪ್ರಯೋಜನ ಆಗಲಿ ಅಂತ ಅದನ್ನ ಕೊಟ್ಟಿದ್ದಾರೆ. ನಮಗೆ ಬೇಕಾಗಿರೋದನ್ನೆಲ್ಲಾ ಕೊಡ್ತಾ ಇರೋದ್ರಿಂದ ಯೆಹೋವನಿಗೆ ನಮ್ಮ ಮೇಲೆ ತುಂಬ ಪ್ರೀತಿ ಇದೆ ಅಂತ ಗೊತ್ತಾಗುತ್ತೆ. ಇಷ್ಟು ಧಾರಾಳವಾಗಿ ಕೊಡೋ ಯೆಹೋವ ಅಪ್ಪನನ್ನ ನಾವೂ ಪ್ರೀತಿಸಬೇಕಲ್ವಾ?

14 ನಮ್ಮಲ್ಲೂ ತುಂಬ ಸಹೋದರ ಸಹೋದರಿಯರು ಯೆಹೋವನ ತರಾನೇ ಬೇರೆಯವರಿಗೆ ಧಾರಾಳ ಮನಸ್ಸಿಂದ ಸಹಾಯ ಮಾಡಿದ್ದಾರೆ. ಉದಾಹರಣೆಗೆ 2013ರಲ್ಲಿ ಹೈಯಾನ್‌ ಅನ್ನೋ ದೊಡ್ಡ ತೂಫಾನು ಫಿಲಿಪ್ಪೀನ್ಸ್‌ಗೆ ಬಡಿದಾಗ ತುಂಬ ನಷ್ಟ ಆಯ್ತು. ಎಷ್ಟೋ ಸಹೋದರ ಸಹೋದರಿಯರು ಮನೆ, ಆಸ್ತಿ-ಪಾಸ್ತಿನೆಲ್ಲಾ ಕಳಕೊಂಡ್ರು. ಆಗ ಬೇರೆಬೇರೆ ದೇಶದಿಂದ ಸಹೋದರರು ತಕ್ಷಣ ಅವರ ಸಹಾಯಕ್ಕೆ ಬಂದ್ರು. ತುಂಬ ಸಹೋದರ ಸಹೋದರಿಯರು ಕಾಣಿಕೆ ಕೊಟ್ರು. ಇನ್ನು ಕೆಲವರು ಅಲ್ಲಿಗೆ ಹೋಗಿ ಹಾಳಾದ ಮನೆಗಳನ್ನ ರಿಪೇರಿ ಮಾಡಿದ್ರು, ಕೆಲವರಿಗೆ ಹೊಸ ಮನೆಯನ್ನೇ ಕಟ್ಟಿಕೊಟ್ರು. ಹೀಗೆ ಒಂದು ವರ್ಷದೊಳಗೆ ಸುಮಾರು 750 ಮನೆಗಳನ್ನ ಕಟ್ಟಿಕೊಟ್ರು. ಇತ್ತೀಚೆಗೆ ಈ ಕೊರೋನ ಸಮಯದಲ್ಲೂ ಸಹೋದರ ಸಹೋದರಿಯರು ಒಬ್ಬರಿಗೊಬ್ಬರು ತುಂಬ ಸಹಾಯ ಮಾಡ್ತಿದ್ದಾರೆ. ಅವರ ತರ ನಾವೂ ಸಹಾಯ ಮಾಡೋಕೆ ಯಾವಾಗಲೂ ತಯಾರಿರಬೇಕು. ಆಗ ನಮಗೂ ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದೆ ಅಂತ ತೋರಿಸಿಕೊಡ್ತೀವಿ.

15-16. ಕೊಲೊಸ್ಸೆ 3:13ರಲ್ಲಿ ಹೇಳೋ ಪ್ರಕಾರ ಯೆಹೋವ ದೇವರ ತರ ನಾವೂ ಏನು ಮಾಡಬೇಕು?

15 ಯೆಹೋವ ನಮ್ಮನ್ನ ಉದಾರವಾಗಿ ಕ್ಷಮಿಸ್ತಾರೆ. (ಕೊಲೊಸ್ಸೆ 3:13 ಓದಿ.) ಪ್ರತಿದಿನ ನಾವು ಮಾಡೋ ತಪ್ಪುಗಳನ್ನ ಯೆಹೋವ ಅಪ್ಪ ಕ್ಷಮಿಸ್ತಾರೆ. (ಕೀರ್ತ. 103:10-14) ಶಿಷ್ಯರು ತಪ್ಪು ಮಾಡಿದಾಗ ಯೇಸು ಕ್ಷಮಿಸಿದ್ರು. ನಮ್ಮ ಪಾಪಗಳಿಗೆ ಕ್ಷಮೆ ಸಿಗಬೇಕು ಅಂತ ತನ್ನ ಪ್ರಾಣವನ್ನೇ ಕೊಟ್ಟರು. (1 ಯೋಹಾ. 2:1, 2) ಯೆಹೋವ ಮತ್ತು ಯೇಸು ನಮ್ಮನ್ನ ಕ್ಷಮಿಸೋದನ್ನ ನೋಡುವಾಗ ಅವರ ಮೇಲಿರೋ ಪ್ರೀತಿ ಇನ್ನೂ ಜಾಸ್ತಿ ಆಗುತ್ತೆ ಅಲ್ವಾ?

16 ಒಬ್ಬರನ್ನೊಬ್ಬರು ‘ಉದಾರವಾಗಿ ಕ್ಷಮಿಸಿದಾಗ’ ನಮ್ಮ ಮಧ್ಯೆ ಇರೋ ಪ್ರೀತಿ ಇನ್ನೂ ಜಾಸ್ತಿ ಆಗುತ್ತೆ. (ಎಫೆ. 4:32) ಕೆಲವೊಮ್ಮೆ ಕ್ಷಮಿಸೋಕೆ ಕಷ್ಟ ಆಗಬಹುದು. ಆದ್ರೂ ನಾವು ಕ್ಷಮಿಸಬೇಕು. ಒಬ್ಬ ಸಹೋದರಿಗೆ ಕ್ಷಮಿಸೋಕೆ ಕಷ್ಟ ಆದಾಗ “ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸಿರಿ” ಅನ್ನೋ ಕಾವಲಿನಬುರುಜುವಿನ ಲೇಖನ ಸಹಾಯ ಮಾಡ್ತು. * ಅವರು ಹೇಳಿದ್ದು “ಕ್ಷಮಿಸೋದ್ರಿಂದ ನನಗೇ ಒಳ್ಳೇದು ಅಂತ ಆ ಲೇಖನದಲ್ಲಿ ಕಲಿತೆ. ನಾವು ಒಬ್ಬರನ್ನ ಕ್ಷಮಿಸ್ತೀವಿ ಅಂದ್ರೆ ಅವರು ಮಾಡಿದ್ದು ಸರಿ ಅಂತಾಗಲಿ ಅಥವಾ ಅವರಿಂದ ನಮಗೆ ನೋವಾಗಿಲ್ಲ ಅಂತಾಗಲಿ ಅರ್ಥ ಅಲ್ಲ. ಬದಲಿಗೆ ಕೋಪ, ದ್ವೇಷನ ಮನಸ್ಸಿಂದ ತೆಗೆದುಹಾಕಿ ಸಮಾಧಾನವಾಗಿ ಇರೋದು ಅಂತ ಅರ್ಥ.” ನಾವು ನಮ್ಮ ಸಹೋದರ ಸಹೋದರಿಯರನ್ನ ಉದಾರವಾಗಿ ಕ್ಷಮಿಸುವಾಗ ಯೆಹೋವ ದೇವರ ತರ ನಾವು ಅವರನ್ನ ಪ್ರೀತಿಸ್ತೀವಿ ಅಂತ ತೋರಿಸಿಕೊಡ್ತೀವಿ.

ಪ್ರೀತಿಯ ಕುಟುಂಬಕ್ಕಾಗಿ ಥ್ಯಾಂಕ್ಸ್‌ ಹೇಳಿ

ಚಿಕ್ಕವರು ದೊಡ್ಡವರು ಎಲ್ಲರೂ ಸಹೋದರ ಸಹೋದರಿಯರಿಗೆ ಪ್ರೀತಿ ತೋರಿಸ್ತಾರೆ (ಪ್ಯಾರ 17 ನೋಡಿ) *

17. ಮತ್ತಾಯ 5:16ರಲ್ಲಿ ಹೇಳೋ ತರ ನಾವು ಹೇಗೆ ಯೆಹೋವನ ಹೆಸರಿಗೆ ಕೀರ್ತಿ ತರಬಹುದು?

17 ಲೋಕದ ಯಾವ ಮೂಲೆಗೆ ಹೋದ್ರೂ ನಮ್ಮನ್ನ ಪ್ರೀತಿಸೋ ಸಹೋದರ ಸಹೋದರಿಯರು ಇದ್ದಾರೆ. ಈ ಕುಟುಂಬದವರಾಗಿ ಇರೋದು ಒಂದು ಹೆಮ್ಮೆಯ ವಿಷಯ. ಈ ಪ್ರೀತಿಯ ಕುಟುಂಬಕ್ಕೆ ಇನ್ನೂ ಜಾಸ್ತಿ ಜನ ಸೇರಿ ಯೆಹೋವ ದೇವರನ್ನ ಆರಾಧಿಸಬೇಕು ಅನ್ನೋದೇ ನಮ್ಮ ಆಸೆ. ಹಾಗಾಗಿ ದೇವರ ಹೆಸರಿಗೆ ಮತ್ತು ನಮ್ಮ ಸಹೋದರ ಸಹೋದರಿಯರ ಹೆಸರಿಗೆ ಮಸಿ ಬಳಿಯೋ ಕೆಲಸವನ್ನ ನಾವು ಯಾವತ್ತೂ ಮಾಡಬಾರದು. ಆಗ ಜನರು ನಮ್ಮ ಒಳ್ಳೇ ನಡತೆ ನೋಡಿ ಯೆಹೋವನ ಬಗ್ಗೆ ಕಲಿಯೋಕೆ ಮುಂದೆ ಬರ್ತಾರೆ, ಆತನನ್ನ ಆರಾಧಿಸ್ತಾರೆ.ಮತ್ತಾಯ 5:16 ಓದಿ.

18. ಧೈರ್ಯದಿಂದ ಸಿಹಿಸುದ್ದಿ ಸಾರೋಕೆ ಯಾವುದು ಸಹಾಯ ಮಾಡುತ್ತೆ?

18 ನಾವು ಯೆಹೋವ ಅಪ್ಪ ಹೇಳಿದ ಹಾಗೆ ನಡ್ಕೊಂಡಾಗ ಕೆಲವರು ನಮಗೆ ಅವಮಾನ ಮಾಡಬಹುದು, ಹಿಂಸೆ ಕೊಡಬಹುದು. ಹಾಗಾಗಿ ದೇವರ ಬಗ್ಗೆ ಬೇರೆಯವರ ಹತ್ರ ಮಾತಾಡೋಕೆ ಭಯ ಆಗಬಹುದು. ಆಗ ಯೆಹೋವ ಮತ್ತು ಯೇಸು ನಮಗೆ ಸಹಾಯ ಮಾಡೋಕೆ ಯಾವಾಗ್ಲೂ ರೆಡಿ ಇರ್ತಾರೆ ಅನ್ನೋದನ್ನ ಮನಸ್ಸಲ್ಲಿಡಬೇಕು. ಅಂಥ ಸಮಯದಲ್ಲಿ ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಅಂತ ಚಿಂತೆ ಮಾಡಬೇಡಿ ಅಂತ ಯೇಸು ಶಿಷ್ಯರಿಗೆ ಹೇಳಿದ್ರು. ಯಾಕಂದ್ರೆ “ಏನು ಮಾತಾಡಬೇಕು ಅನ್ನೋದು ಆ ಕ್ಷಣದಲ್ಲಿ ನಿಮಗೆ ಗೊತ್ತಾಗುತ್ತೆ. ಅಲ್ಲಿ ನೀವು ಮಾತಾಡಲ್ಲ, ನಿಮ್ಮ ತಂದೆ ಕೊಡೋ ಪವಿತ್ರಶಕ್ತಿ ನಿಮ್ಮನ್ನ ಮಾತಾಡಿಸುತ್ತೆ” ಅಂತ ಯೇಸು ಹೇಳಿದ್ರು.—ಮತ್ತಾ. 10:19, 20.

19. ರಾಬರ್ಟ್‌ ಹೇಗೆ ಸಾಕ್ಷಿ ಕೊಟ್ರು?

19 ಸಹೋದರ ರಾಬರ್ಟ್‌ ಅವರ ಅನುಭವ ನೋಡಿ. ಇವರು ದಕ್ಷಿಣ ಆಫ್ರಿಕದವರು. ಕೆಲವು ವರ್ಷಗಳ ಹಿಂದೆ ಹೊಸದಾಗಿ ಬೈಬಲ್‌ ಕಲಿತಾ ಇದ್ದಾಗ ಅವರು ಮಿಲಿಟರಿಗೆ ಯಾಕೆ ಸೇರಲ್ಲ ಅಂತ ಕೋರ್ಟಲ್ಲಿ ಹೇಳಬೇಕಾದ ಪರಿಸ್ಥಿತಿ ಬಂತು. “ನಾನು ನನ್ನ ಸಹೋದರರನ್ನ ಪ್ರೀತಿಸೋದ್ರಿಂದ ಮಿಲಿಟರಿಗೆ ಸೇರೋಕೆ ಆಗಲ್ಲ” ಅಂತ ಧೈರ್ಯವಾಗಿ ಹೇಳಿದ್ರು. ಅದಕ್ಕೆ ನ್ಯಾಯಾಧೀಶರು “ಯಾರು ನಿನ್ನ ಸಹೋದರರು?” ಅಂತ ಕೇಳಿದ್ರು. ಈ ಪ್ರಶ್ನೆ ಕೇಳ್ತಾರೆ ಅಂತ ರಾಬರ್ಟ್‌ ಅಂದುಕೊಂಡೇ ಇರಲಿಲ್ಲ. ಆದ್ರೆ ತಕ್ಷಣ ಅವತ್ತಿನ ದಿನವಚನ ಅವರ ಮನಸ್ಸಿಗೆ ಬಂತು. ಅದು ಮತ್ತಾಯ 12:50. ಅದು ಹೇಳುತ್ತೆ “ಸ್ವರ್ಗದಲ್ಲಿರೋ ನನ್ನ ತಂದೆಯ ಇಷ್ಟದ ಪ್ರಕಾರ ನಡಿಯೋರೆ ನನ್ನ ಅಮ್ಮ, ಅಣ್ಣತಮ್ಮ, ಅಕ್ಕತಂಗಿ.” ನ್ಯಾಯಾಧೀಶರು ಇನ್ನೂ ತುಂಬ ಪ್ರಶ್ನೆಗಳನ್ನ ಕೇಳಿದ್ರು. ಅದಕ್ಕೆಲ್ಲಾ ರಾಬರ್ಟ್‌ ಉತ್ತರ ಕೊಟ್ರು. ಹೊಸದಾಗಿ ಸತ್ಯ ಕಲಿತಾ ಇದ್ರೂ ಅವರಿಗೆ ಯೆಹೋವ ಪವಿತ್ರ ಶಕ್ತಿ ಕೊಟ್ಟು ಸಹಾಯ ಮಾಡಿದ್ರು. ರಾಬರ್ಟ್‌ ಬಗ್ಗೆ ದೇವರಿಗೆ ಹೆಮ್ಮೆ ಆಗಿರಬೇಕು! ನಾವು ದೇವರ ಮೇಲೆ ಭಾರ ಹಾಕಿ ಧೈರ್ಯವಾಗಿ ಆತನ ಬಗ್ಗೆ ಸಾಕ್ಷಿ ಹೇಳುವಾಗ ಆತನಿಗೆ ನಮ್ಮ ಬಗ್ಗೆ ಹೆಮ್ಮೆ ಅನಿಸುತ್ತೆ.

20. ನಾವೇನು ಮಾಡ್ತಾ ಇರಬೇಕು? (ಯೋಹಾನ 17:11, 15)

20 ಯೆಹೋವ ಅಪ್ಪ ಇಂಥ ಒಳ್ಳೇ ಕುಟುಂಬ ಕೊಟ್ಟಿರೋದಕ್ಕೆ ನಾವು ತುಂಬ ಥ್ಯಾಂಕ್ಸ್‌ ಹೇಳಬೇಕು. ಯೆಹೋವ ದೇವರಂಥ ಪ್ರೀತಿಯ ಅಪ್ಪ ಬೇರೆ ಯಾರೂ ಇಲ್ಲ. ನಮ್ಮ ಸಹೋದರ ಸಹೋದರಿಯರು ನಮ್ಮನ್ನ ತುಂಬ ಪ್ರೀತಿಸ್ತಾರೆ. ಇದಕ್ಕೆ ನಾವು ಋಣಿಗಳಾಗಿರಬೇಕು. ದೇವರು ತೋರಿಸ್ತಿರೋ ಪ್ರೀತಿ ಮೇಲೆ ನಾವು ಸಂಶಯಪಡೋ ತರ ಮಾಡೋಕೆ, ಸಹೋದರರ ಮಧ್ಯೆ ಇರೋ ಒಗ್ಗಟ್ಟನ್ನ ಒಡಿಯೋಕೆ ಸೈತಾನ ಮತ್ತು ಅವನ ಕಡೆಯವರು ಪ್ರಯತ್ನ ಮಾಡ್ತಾ ಇದ್ದಾರೆ. ‘ಇವೆಲ್ಲದ್ರಿಂದ ಕಾಪಾಡು’ ಅಂತ ಯೇಸು ನಮ್ಮ ಪರವಾಗಿ ಯೆಹೋವನ ಹತ್ರ ಬೇಡಿಕೊಂಡಿದ್ದಾರೆ. ಯಾಕಂದ್ರೆ ನಾವೆಲ್ಲ ಒಗ್ಗಟ್ಟಾಗಿ ಇರಬೇಕು ಅನ್ನೋದೇ ಯೇಸುವಿನ ಆಸೆ. (ಯೋಹಾನ 17:11, 15 ಓದಿ.) ಯೆಹೋವ ನಮ್ಮನ್ನ ಒಗ್ಗಟ್ಟಾಗಿ ಇಟ್ಟಿದ್ದಾರೆ, ಕಾಪಾಡ್ತಿದ್ದಾರೆ. ಹಾಗಾಗಿ ದೇವರು ನಮ್ಮನ್ನ ಪ್ರೀತಿಸ್ತಾರೆ, ಸಹಾಯ ಮಾಡ್ತಾರೆ ಅಂತ ಯೇಸು ನಂಬಿದ ತರ ನಾವೂ ನಂಬಬೇಕು. ಯೆಹೋವ ಅಪ್ಪನನ್ನು, ಸಹೋದರ ಸಹೋದರಿಯರನ್ನು ನಾವೂ ಪ್ರೀತಿಸ್ತಾ ಇರಬೇಕು!

ಗೀತೆ 122 ಲಕ್ಷಾಂತರ ಸೋದರರು

^ ಪ್ಯಾರ. 5 ನಾವು ಸಹೋದರ ಸಹೋದರಿಯರ ಜೊತೆ ಒಂದೇ ಕುಟುಂಬದ ತರ ಇರೋದು ದೊಡ್ಡ ಆಶೀರ್ವಾದ. ಅದಕ್ಕೆ ನಮ್ಮ ಮಧ್ಯೆ ಇರೋ ಪ್ರೀತಿ ಭಾಂದವ್ಯನ ಇನ್ನೂ ಚೆನ್ನಾಗಿ ಬೆಳೆಸಬೇಕು. ಇದಕ್ಕಾಗಿ ಪ್ರೀತಿಯ ಅಪ್ಪ ಯೆಹೋವ, ಯೇಸು ಮತ್ತು ನಮ್ಮ ಸಹೋದರ ಸಹೋದರಿಯರು ನಮ್ಮನ್ನ ಹೇಗೆ ಪ್ರೀತಿಸ್ತಾರೆ ಅಂತ ತಿಳುಕೊಳ್ಳಬೇಕು. ಅವರ ತರನೇ ನಾವು ಬೇರೆಯವರನ್ನ ಪ್ರೀತಿಸಬೇಕು.

^ ಪ್ಯಾರ. 57 ಚಿತ್ರ ವಿವರಣೆ: ಗೆತ್ಸೇಮನೆ ತೋಟದಲ್ಲಿ ಯೇಸುವಿಗೆ ಧೈರ್ಯ ತುಂಬೋಕೆ ಯೆಹೋವ ಒಬ್ಬ ದೇವದೂತನನ್ನ ಕಳಿಸಿದ್ದಾರೆ.

^ ಪ್ಯಾರ. 59 ಚಿತ್ರ ವಿವರಣೆ: ಕೊರೋನ ಸಮಯದಲ್ಲಿ ನಮ್ಮ ಸಹೋದರರಿಗೆ ಹಂಚೋಕೆ ಆಹಾರ ಸಾಮಾಗ್ರಿಗಳನ್ನ ಕೆಲವು ಸಹೋದರರು ಪ್ಯಾಕ್‌ ಮಾಡ್ತಾ ಇದ್ದಾರೆ.

^ ಪ್ಯಾರ. 61 ಚಿತ್ರ ವಿವರಣೆ: ಜೈಲಲ್ಲಿರೋ ಸಹೋದರನಿಗೆ ಧೈರ್ಯ ತುಂಬೋಕೆ ಪತ್ರ ಬರಿತಾ ಇರೋ ಮಗುವಿಗೆ ಅಮ್ಮ ಸಹಾಯ ಮಾಡ್ತಿದ್ದಾರೆ.