ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 43

ಸೋತು ಹೋಗಬೇಡಿ!

ಸೋತು ಹೋಗಬೇಡಿ!

“ಒಳ್ಳೇದು ಮಾಡೋದನ್ನ ಬಿಡೋದು ಬೇಡ.”—ಗಲಾ. 6:9.

ಗೀತೆ 98 ರಾಜ್ಯದ ಬೀಜವನ್ನು ಬಿತ್ತುವುದು

ಕಿರುನೋಟ *

1. ನಾವು ಯಾಕೆ ಖುಷಿಯಾಗಿದ್ದೀವಿ?

ನಾವು ಯೆಹೋವನ ಸಾಕ್ಷಿಗಳಾಗಿ ಇರೋದು ಎಂಥ ಸೌಭಾಗ್ಯ ಅಲ್ವಾ! ಆ ಹೆಸರಿಗೆ ತಕ್ಕ ಹಾಗೆ ಜನರಿಗೆ ದೇವರ ಬಗ್ಗೆ ಕಲಿಸ್ತಾ ಇದ್ದೀವಿ, ಅವರನ್ನ ಶಿಷ್ಯರಾಗಿ ಮಾಡ್ತಿದ್ದೀವಿ. “ಶಾಶ್ವತ ಜೀವ ಪಡೆಯೋ ಯೋಗ್ಯತೆ” ಇರೋ ಜನರಿಗೆಲ್ಲ ದೇವರ ಬಗ್ಗೆ ಕಲಿಯೋಕೆ ಸಹಾಯ ಮಾಡಿದಾಗ ನಮಗೆ ತುಂಬ ಖುಷಿಯಾಗುತ್ತೆ. (ಅ. ಕಾ. 13:48) ಯೇಸುವಿನ ಶಿಷ್ಯರು ತುಂಬ ಜನರಿಗೆ ಸಿಹಿಸುದ್ದಿ ಸಾರಿ ವಾಪಸ್‌ ಬಂದಾಗ ‘ಯೇಸುಗೆ ಎಷ್ಟು ಖುಷಿ ಆಯ್ತೋ’ ಅದೇ ತರ ನಮಗೂ ತುಂಬ ಖುಷಿಯಾಗುತ್ತೆ.—ಲೂಕ 10:1, 17, 21.

2. ನಾವು ಸಾರೋ ಕೆಲಸನ ಹೇಗೆ ಜವಾಬ್ದಾರಿಯಿಂದ ಮಾಡ್ತೀವಿ?

2 ನಾವು ಸಿಹಿಸುದ್ದಿ ಸಾರೋ ಕೆಲಸನ ತುಂಬ ಜವಾಬ್ದಾರಿಯಿಂದ ಮಾಡ್ತೀವಿ. ಪೌಲ ತಿಮೊತಿಗೆ “ನೀನು ಒಳ್ಳೇ ಮಾದರಿ ಆಗಿರೋಕೆ ಮತ್ತು ಒಳ್ಳೇ ಬೋಧಕನಾಗಿ ಇರೋಕೆ ನಿನ್ನಿಂದ ಆಗೋದನ್ನೆಲ್ಲ ಮಾಡು” ಮತ್ತು “ಹಾಗೆ ಮಾಡಿದ್ರೆ ನಿನಗೂ ರಕ್ಷಣೆ ಸಿಗುತ್ತೆ, ನಿನ್ನ ಮಾತನ್ನ ಕೇಳುವವ್ರಿಗೂ ರಕ್ಷಣೆ ಸಿಗುತ್ತೆ” ಅಂತ ಹೇಳಿದ. (1 ತಿಮೊ. 4:16) ಹೌದು, ನಾವು ಸಿಹಿಸುದ್ದಿ ಸಾರಿ ಅಪಾಯದಲ್ಲಿರೋ ಜನರ ಪ್ರಾಣಗಳನ್ನ ಕಾಪಾಡ್ತೀವಿ. ನಾವು ದೇವರ ಸರ್ಕಾರದ ಪ್ರಜೆಗಳು ಅನ್ನೋದನ್ನ ಯಾವಾಗಲೂ ಮನಸ್ಸಲ್ಲಿಟ್ಟು ಸೇವೆ ಮಾಡ್ತೀವಿ. ನಾವು ಯೆಹೋವ ದೇವರಿಗೆ ಇಷ್ಟ ಆಗೋ ತರ ನಡಕೊಳ್ತೀವಿ. ಜನರಿಗೆ ಏನನ್ನ ಸಾರುತ್ತೀವೋ ಅದನ್ನೇ ನಾವೂ ಪಾಲಿಸ್ತೀವಿ. (ಫಿಲಿ. 1:27) ನಾವು ಬೇರೆಯವರಿಗೆ ಕಲಿಸುವಾಗಲೂ ನಮ್ಮಿಂದ ಆಗೋದೆಲ್ಲ ಮಾಡ್ತೀವಿ. ಅದಕ್ಕೋಸ್ಕರ ಚೆನ್ನಾಗಿ ತಯಾರಿ ಮಾಡ್ತೀವಿ ಮತ್ತು ಯೆಹೋವನ ಆಶೀರ್ವಾದಕ್ಕಾಗಿ ಬೇಡ್ತೀವಿ.

3. ನಾವು ಸಾರುವಾಗ ಎಲ್ರೂ ಕೇಳ್ತಾರಾ? ಉದಾಹರಣೆ ಕೊಡಿ.

3 ನಾವು ಎಷ್ಟೇ ಚೆನ್ನಾಗಿ ಸೇವೆ ಮಾಡಿದ್ರೂ ಕೆಲವೊಂದು ಸಲ ಜನ ಅದಕ್ಕೆ ಸರಿಯಾಗಿ ಸ್ಪಂದಿಸಲ್ಲ. ನಾವು ಹೇಳೋದನ್ನ ಅವರು ಕೇಳಿಸಿಕೊಳ್ಳಲ್ಲ. ಜಾರ್ಜ್‌ ಲಿಂಡಲ್‌ ಅನ್ನೋ ಸಹೋದರನ ಅನುಭವ ನೋಡೋಣ. ಅವರು ಇಡೀ ಐಸ್‌ಲ್ಯಾಂಡ್‌ನಲ್ಲಿ 1929ರಿಂದ 1947ರ ತನಕ ಸಿಹಿಸುದ್ದಿ ಸಾರಿದ್ರು. ಸಾವಿರಾರು ಪುಸ್ತಕ-ಪತ್ರಿಕೆಗಳನ್ನ ಕೊಟ್ರು. ಆದ್ರೂ ಜನ ಕೇಳಲಿಲ್ಲ. ಅವರು ಬರೆದಿದ್ದು, “ಕೆಲವರು ವಿರೋಧ ಮಾಡಿದ್ರು, ಇನ್ನು ತುಂಬ ಜನರು ಕೇಳೋ ಮನಸ್ಸೇ ತೋರಿಸಲಿಲ್ಲ.” ಗಿಲ್ಯಡ್‌ ತರಬೇತಿ ಪಡಕೊಂಡಿರೋ ಮಿಷನರಿಗಳು ಬಂದು ಅಲ್ಲಿ ಸಿಹಿಸುದ್ದಿ ಸಾರಿದಾಗಲೂ ಒಬ್ರೂ ಕೇಳಲಿಲ್ಲ. ಸುಮಾರು 9 ವರ್ಷ ಆದಮೇಲೆ ಅಲ್ಲಿನ ಜನ ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ತಗೊಳ್ಳೋಕೆ ಶುರು ಮಾಡಿದ್ರು.

4. ಜನ ನಾವು ಹೇಳೋ ಸಂದೇಶನ ಕೇಳಿಸಿಕೊಳ್ಳಲಿಲ್ಲ ಅಂದಾಗ ನಮಗೆ ಏನು ಅನಿಸುತ್ತೆ?

4 ಜನ ಬೈಬಲ್‌ ಸ್ಟಡಿಗೆ ಒಪ್ಪಿಕೊಳ್ಳದಿದ್ರೆ ನಮಗೆ ತುಂಬ ಬೇಜಾರಾಗುತ್ತೆ. ಯೆಹೂದ್ಯರು ಯೇಸುನೇ ಮೆಸ್ಸೀಯ ಅಂತ ಒಪ್ಪಿಕೊಳ್ಳದೆ ಇದ್ದಾಗ ಪೌಲನ “ಹೃದಯ ದುಃಖ ನೋವಿಂದ ತುಂಬ ಭಾರ” ಆಯ್ತು. ಅದೇ ತರ ನಮಗೂ ಅನಿಸಬಹುದು. (ರೋಮ. 9:1-3) ನೀವು ಒಬ್ಬರಿಗೆ ಸ್ಟಡಿ ಮಾಡ್ತಿದ್ದೀರ ಅಂದ್ಕೊಳ್ಳಿ. ಅವರಿಗೆ ಚೆನ್ನಾಗಿ ಕಲಿಸೋಕೆ ನೀವು ತುಂಬ ಪ್ರಯತ್ನ ಹಾಕ್ತಿದ್ದೀರಿ, ಅವರಿಗೋಸ್ಕರ ಪ್ರಾರ್ಥನೆ ಮಾಡ್ತಿದ್ದೀರಿ. ಆದ್ರೂ ಅವರು ಕಲಿತಿದ್ದನ್ನ ಜೀವನದಲ್ಲಿ ಪಾಲಿಸದೇ ಇರೋದನ್ನ ನೋಡಿದಾಗ ಆ ಸ್ಟಡಿನ ನಿಲ್ಲಿಸಬೇಕಾಗಿ ಬಂದಿದ್ಯಾ? ಇಲ್ಲಿ ತನಕ ನೀವು ಸ್ಟಡಿ ಮಾಡಿದವರಲ್ಲಿ ಒಬ್ರೂ ದೀಕ್ಷಾಸ್ನಾನ ತಗೊಂಡಿಲ್ವಾ? ಹೀಗಾದಾಗ ಯೆಹೋವ ದೇವರು ನಿಮ್ಮ ಸೇವೆನ ಆಶೀರ್ವದಿಸ್ತಾ ಇಲ್ಲ ಅಂತ ನಿಮಗೆ ಅನಿಸ್ತಿರಬಹುದು. ಈ ಲೇಖನದಲ್ಲಿ ಮುಂದಿನ ಎರಡು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ. (1) ಯೆಹೋವ ದೇವರು ನಮ್ಮ ಸೇವೆಯನ್ನ ಹೇಗೆ ಅಳೆಯುತ್ತಾರೆ? (2) ನಾವು ಜನರಿಗೆ ಸಿಹಿಸುದ್ದಿ ಸಾರುವಾಗ ಯಾವುದನ್ನ ಮನಸ್ಸಿನಲ್ಲಿ ಇಡಬೇಕು?

ದೇವರು ನಮ್ಮ ಸೇವೆನ ಹೇಗೆ ಅಳೆಯುತ್ತಾರೆ?

5. ಎಷ್ಟೇ ಚೆನ್ನಾಗಿ ಸೇವೆ ಮಾಡಿದ್ರೂ ನಾವು ನೆನಸಿದ ರೀತಿಯಲ್ಲಿ ಯಾಕೆ ಪ್ರತಿಫಲ ಸಿಗಲ್ಲ?

5 ದೇವರಿಗೆ ಇಷ್ಟ ಆಗೋ ತರ ಸೇವೆ ಮಾಡುವವನು “ಕೈಹಾಕೋ ಎಲ್ಲ ಕೆಲಸ ಚೆನ್ನಾಗಿ ನಡಿಯುತ್ತೆ” ಅಂತ ಬೈಬಲ್‌ ಹೇಳುತ್ತೆ. (ಕೀರ್ತ. 1:3) ಅದರ ಅರ್ಥ ಅವನು ‘ಮುಟ್ಟಿದ್ದೆಲ್ಲ ಚಿನ್ನ’ ಆಗುತ್ತೆ ಅಂತಾನಾ? ಅಂದ್ರೆ ಸಿಹಿಸುದ್ದಿ ಕೇಳಿದವರೆಲ್ಲ ಸತ್ಯ ಕಲಿತಾರೆ ಅಂತಾನಾ? ಇಲ್ಲ. ಯಾಕಂದ್ರೆ ನಾವು ಅಪರಿಪೂರ್ಣರಾಗಿದ್ದೀವಿ, ಈ ಲೋಕನೂ ಕೆಟ್ಟುಹೋಗಿದೆ. ಹಾಗಾಗಿ ಯಾವಾಗ ಬೇಕಾದ್ರೂ “ತೊಂದರೆಗಳು,” ಸಮಸ್ಯೆಗಳು ಬರಬಹುದು. ಇದರಿಂದಾಗಿ ಚೆನ್ನಾಗಿ ಸಿಹಿಸುದ್ದಿ ಸಾರೋಕೆ ಆಗಲ್ಲ. (ಯೋಬ 14:1) ಅಷ್ಟೇ ಅಲ್ಲ, ನಮ್ಮ ಸಾರೋ ಕೆಲಸಕ್ಕೆ ವಿರೋಧಿಗಳು ಅಡ್ಡಗಾಲು ಹಾಕ್ತಾರೆ. (1 ಕೊರಿಂ. 16:9; 1 ಥೆಸ. 2:18) ಹಾಗಾದ್ರೆ ಯೆಹೋವ ದೇವರು ಯಾವ ಆಧಾರದ ಮೇಲೆ ನಾವು ಚೆನ್ನಾಗಿ ಸೇವೆ ಮಾಡಿದ್ದೀವಿ ಅಂತ ಅಳೆಯುತ್ತಾರೆ? ಇದಕ್ಕೆ ಬೈಬಲ್‌ ತತ್ವಗಳಿಂದ ಉತ್ತರ ನೋಡೋಣ.

ನಾವು ಮನೆಮನೆ ಸೇವೆ ಮಾಡಲಿ, ಪತ್ರ ಅಥವಾ ಫೋನಿಂದ ಸೇವೆ ಮಾಡಲಿ ಯೆಹೋವ ನಮ್ಮ ಪ್ರಯತ್ನಕ್ಕೆ ತುಂಬ ಬೆಲೆ ಕೊಡ್ತಾರೆ (ಪ್ಯಾರ 6 ನೋಡಿ)

6. ನಾವು ಮಾಡೋ ಸೇವೆಯನ್ನ ಯೆಹೋವ ಯಾವ ಆಧಾರದ ಮೇಲೆ ಅಳೆಯುತ್ತಾರೆ?

6 ನಾವು ಸೋತು ಹೋಗದೆ ಶ್ರಮಪಟ್ಟು ಸಿಹಿಸುದ್ದಿ ಸಾರೋದನ್ನ ಯೆಹೋವ ನೋಡ್ತಾರೆ. “ನೀವು ಪವಿತ್ರ ಜನ್ರಿಗೆ ಸೇವೆ ಮಾಡಿದ್ರಿ, ಇನ್ನೂ ಮಾಡ್ತಾ ಇದ್ದೀರ. ನಿಮ್ಮ ಈ ಕೆಲಸವನ್ನ ದೇವರ ಹೆಸ್ರಿಗಾಗಿ ನೀವು ತೋರಿಸಿದ ಪ್ರೀತಿಯನ್ನ ದೇವರು ಮರಿಯಲ್ಲ. ಯಾಕಂದ್ರೆ ಆತನು ಅನ್ಯಾಯ ಮಾಡಲ್ಲ” ಅಂತ ಪೌಲ ಹೇಳಿದ. (ಇಬ್ರಿ. 6:10) ಯೆಹೋವ ದೇವರು ನಾವು ಪಡುತ್ತಾ ಇರೋ ಶ್ರಮವನ್ನ, ನಾವು ತೋರಿಸ್ತಿರೋ ಪ್ರೀತಿಯನ್ನ ನೋಡಿ ನಾವು ಮಾಡ್ತಿರೋ ಸೇವೆನ ಅಳೆಯುತ್ತಾರೆ. ಜನ ನಮ್ಮ ಸಂದೇಶ ಕೇಳಿಸಿಕೊಳ್ತಾರಾ ಇಲ್ವಾ ಅನ್ನೋದ್ರ ಮೇಲೆ ನಾವು ಮಾಡ್ತಿರೋ ಸೇವೆನ ಅಳೆಯಲ್ಲ. ನಮ್ಮ ಬೈಬಲ್‌ ವಿದ್ಯಾರ್ಥಿ ಸತ್ಯ ಕಲಿತು ದೀಕ್ಷಾಸ್ನಾನ ಪಡಕೊಳ್ಳದೇ ಇದ್ರೂ ನಾವು ಪಟ್ಟ ಶ್ರಮವನ್ನ ಯೆಹೋವ ದೇವರು ಮರಿಯಲ್ಲ. ಹಾಗಾಗಿ “ನೀವು ಒಡೆಯನಿಗಾಗಿ ಮಾಡೋ ಕೆಲಸ ವ್ಯರ್ಥ ಆಗಲ್ಲ” ಅಂತ ಪೌಲ ಕೊರಿಂಥದವರಿಗೆ ಹೇಳಿದ ಮಾತನ್ನ ನೀವು ಮನಸ್ಸಲ್ಲಿಡಿ.—1 ಕೊರಿಂ. 15:58.

7. ಪೌಲ ಹೇಳಿದ ಮಾತಿಂದ ನಾವೇನು ಕಲಿತೀವಿ?

7 ಪೌಲ ಒಬ್ಬ ಒಳ್ಳೇ ಮಿಷನರಿ ಆಗಿದ್ದ. ಅವನು ಎಷ್ಟೋ ಕಡೆ ಹೊಸ-ಹೊಸ ಸಭೆಗಳನ್ನ ಮಾಡಿದ. ಅವನು ಸರಿಯಾಗಿ ಕಲಿಸಲ್ಲ ಅಂತ ಕೆಲವರು ಅವನ ಬಗ್ಗೆ ತಪ್ಪಾಗಿ ಹೇಳಿದಾಗ ಅವನು ಯಾವತ್ತೂ ‘ನಾನು ತುಂಬ ಜನರನ್ನ ಸತ್ಯಕ್ಕೆ ಕರ್ಕೊಂಡು ಬಂದ ಒಳ್ಳೇ ಬೋಧಕ’ ಅಂತ ಕೊಚ್ಚಿಕೊಳ್ಳಲಿಲ್ಲ. ಬದಲಿಗೆ ತಾನು “ಒಳ್ಳೇ ಸೇವಕ” ಅಂತ ಬರೀತಾನೆ. (2 ಕೊರಿಂ. 11:23) ಯೆಹೋವ ದೇವರು ನಮ್ಮನ್ನ, ನಾವು ಹಾಕೋ ಪ್ರಯತ್ನವನ್ನ, ಸೋತು ಹೋಗದೆ ಸೇವೆ ಮಾಡೋದನ್ನ ನೋಡ್ತಾರೆ ಅನ್ನೋದನ್ನ ಪೌಲನಿಂದ ಕಲಿತೀವಿ.

8. ಸೇವೆ ಬಗ್ಗೆ ನಾವು ಏನನ್ನ ಮನಸ್ಸಲ್ಲಿ ಇಡಬೇಕು?

8 ಯೆಹೋವ ದೇವರು ನಾವು ಮಾಡೋ ಸೇವೆಯನ್ನ ನೋಡಿ ಖುಷಿಪಡ್ತಾರೆ. ಯೇಸು 70 ಶಿಷ್ಯರನ್ನ ಸಿಹಿಸುದ್ದಿ ಸಾರೋಕೆ ಕಳಿಸಿದಾಗ ಸೇವೆ ಮಾಡಿ ಖುಷಿಪಟ್ರು. ಅವರು ವಾಪಸ್‌ ಬಂದು ಯೇಸು ಹತ್ರ “ನಿನ್ನ ಹೆಸ್ರಲ್ಲಿ ಆಜ್ಞೆ ಕೊಟ್ರೆ ಕೆಟ್ಟ ದೇವದೂತರೂ ನಮ್ಮ ಮಾತು ಕೇಳ್ತಿದ್ದಾರೆ” ಅಂತ ಹೇಳಿ ಖುಷಿಪಟ್ರು. ಅದಕ್ಕೆ ಯೇಸು “ಕೆಟ್ಟ ದೇವದೂತರು ನಿಮ್ಮ ಮಾತು ಕೇಳ್ತಿದ್ದಾರೆ ಅನ್ನೋದಕ್ಕೆ ಸಂತೋಷಪಡದೆ, ನಿಮ್ಮ ಹೆಸ್ರನ್ನ ಸ್ವರ್ಗದಲ್ಲಿ ಬರೆದಾಗಿದೆ ಅನ್ನೋದಕ್ಕೆ ಖುಷಿಪಡಿ” ಅಂತ ಹೇಳಿ ಅವರನ್ನ ತಿದ್ದಿದನು. (ಲೂಕ 10:17-20) ಶಿಷ್ಯರಿಗೆ ಮುಂದೆ ಈ ತರ ಒಳ್ಳೇ ಅನುಭವಗಳು ಸಿಗಲ್ಲ ಅಂತ ಯೇಸುಗೆ ಗೊತ್ತಿತ್ತು. ಆ ಶಿಷ್ಯರು ಸಿಹಿಸುದ್ದಿ ಸಾರಿದವರಲ್ಲಿ ಎಷ್ಟು ಜನ ಮುಂದೆ ಕ್ರೈಸ್ತರಾದರೋ ನಮಗೆ ಗೊತ್ತಿಲ್ಲ. ಹಾಗಾಗಿ ಶಿಷ್ಯರು ಯಾವಾಗಲೂ ಸಂತೋಷದಿಂದ ಸೇವೆ ಮಾಡಬೇಕಂದ್ರೆ ಒಂದು ವಿಷಯ ಮನಸ್ಸಲ್ಲಿ ಇಡಬೇಕಾಗಿತ್ತು. ಅದೇನಂದ್ರೆ ಸಿಹಿಸುದ್ದಿ ಸಾರಿದಾಗ ಜನ ಕೇಳ್ತಾರಾ ಇಲ್ವಾ ಅನ್ನೋದು ಮುಖ್ಯ ಅಲ್ಲ. ನಾವು ಹಾಕೋ ಪ್ರಯತ್ನದಿಂದ ಯೆಹೋವನಿಗೆ ಸಂತೋಷ ಆಗುತ್ತೆ ಅನ್ನೋದು ಮುಖ್ಯ.

9. ಸೋತುಹೋಗದೆ ಸಾರಿದ್ರೆ ಏನಾಗುತ್ತೆ ಅಂತ ಗಲಾತ್ಯ 6:7-9 ಹೇಳುತ್ತೆ?

9 ಸೋತುಹೋಗದೆ ಸಾರಿದರೆ ನಮಗೆ ಶಾಶ್ವತ ಜೀವ ಸಿಗುತ್ತೆ. ನಾವು ಜನರಿಗೆ ದೇವರ ಸರ್ಕಾರದ ಸಂದೇಶ ಸಾರಿ ಕಲಿಸುವಾಗ “ಪವಿತ್ರಶಕ್ತಿಯನ್ನ” ಬಿತ್ತುತ್ತೀವಿ. ಯಾಕಂದ್ರೆ ನಾವು ಸೇವೆ ಮಾಡುವಾಗ ಪವಿತ್ರಶಕ್ತಿ ನಮ್ಮನ್ನ ಮಾರ್ಗದರ್ಶಿಸೋಕೆ ಬಿಟ್ಟುಕೊಡ್ತೀವಿ. ಹಾಗಾಗಿ ನಮ್ಮ ಬೈಬಲ್‌ ವಿದ್ಯಾರ್ಥಿ ದೀಕ್ಷಾಸ್ನಾನ ಪಡೆದುಕೊಳ್ಳಲಿ ಪಡೆದುಕೊಳ್ಳದೇ ಇರಲಿ ನಾವು ಖುಷಿಯಾಗಿ ಸೇವೆ ಮಾಡ್ತಾ ಇರ್ತೀವಿ. ನಾವು “ಸುಸ್ತಾಗದೆ,” ಬಿಟ್ಟುಬಿಡದೆ ಸೇವೆ ಮಾಡಿದ್ರೆ ದೇವರು ನಮಗೆ ಶಾಶ್ವತ ಜೀವ ಕೊಡ್ತೀನಿ ಅಂತ ಮಾತು ಕೊಟ್ಟಿದ್ದಾರೆ.ಗಲಾತ್ಯ 6:7-9 ಓದಿ.

ಸಿಹಿಸುದ್ದಿ ಸಾರುವಾಗ ಏನನ್ನ ಮನಸ್ಸಲ್ಲಿ ಇಡಬೇಕು?

10. ನಾವು ಸಾರೋ ಸಂದೇಶನ ಕೆಲವರು ಕೇಳ್ತಾರೆ, ಕೆಲವರು ಕೇಳಲ್ಲ. ಯಾಕೆ?

10 ನಾವು ಸಿಹಿಸುದ್ದಿ ಸಾರಿದಾಗ ಅದನ್ನ ಕೇಳ್ತಾರಾ ಇಲ್ವಾ ಅನ್ನೋದು ಅವರ ಮನಸ್ಥಿತಿ ಮೇಲೆ ಹೊಂದಿಕೊಂಡಿರುತ್ತೆ. ಇದರ ಬಗ್ಗೆ ಯೇಸು ಹೇಳಿದ ಒಂದು ಉದಾಹರಣೆ ನೋಡೋಣ. ಆ ಉದಾಹರಣೆಯಲ್ಲಿ ರೈತ ಬಿತ್ತುವಾಗ ಬೇರೆ-ಬೇರೆ ನೆಲದಲ್ಲಿ ಬೀಜ ಬಿದ್ದವು. ಆದ್ರೆ ಒಂದು ನೆಲದಲ್ಲಿ ಮಾತ್ರ ಫಲ ಬಂತು. (ಲೂಕ 8:5-8) ಯೇಸು ಆ ಬೇರೆ-ಬೇರೆ ನೆಲವನ್ನ ಜನರ ಮನಸ್ಥಿತಿಗೆ ಹೋಲಿಸಿದ್ರು. ಜನ ‘ದೇವರ ಸಂದೇಶಕ್ಕೆ’ ಬೇರೆ-ಬೇರೆ ತರ ಸ್ಪಂದಿಸ್ತಾರೆ ಅಂತ ಯೇಸು ಹೇಳಿದ್ರು. (ಲೂಕ 8:11-15) ಆದ್ರೆ ಆ ನೆಲ ಫಲ ಕೊಡೋದು ಕೊಡದೇ ಇರೋದು ಆ ರೈತನ ಕೈಯಲ್ಲಿಲ್ಲ. ಅದೇ ತರ ಜನರ ಹೃದಯದಲ್ಲಿ ದೇವರ ಸಂದೇಶ ಬೆಳೆಸೋದು ನಮ್ಮ ಕೈಯಲ್ಲಿಲ್ಲ. ಯಾಕಂದ್ರೆ ಅದು ಕೇಳುವವರ ಮನಸ್ಸಿನ ಮೇಲೆ ಹೊಂದಿಕೊಂಡಿರುತ್ತೆ. ಬೀಜ ಬಿತ್ತುತ್ತಾ ಇರೋದಷ್ಟೇ ನಮ್ಮ ಜವಾಬ್ದಾರಿ. ಪೌಲ ಹೇಳಿದ ಹಾಗೆ “ಪ್ರತಿಯೊಬ್ಬನಿಗೂ ಅವನು ಪಟ್ಟ ಶ್ರಮಕ್ಕೆ ತಕ್ಕ ಹಾಗೆ ಪ್ರತಿಫಲ ಸಿಗುತ್ತೆ,” ಅವನು ಮಾಡಿದ ಸಾಧನೆಗೆ ಅಲ್ಲ.—1 ಕೊರಿಂ. 3:8.

ನೋಹ ತುಂಬ ವರ್ಷ ಸಾರಿದ್ರೂ ಜನ ಕೇಳಲಿಲ್ಲ. ಅವನ ಕುಟುಂಬದವರು ಮಾತ್ರ ಹಡಗಿನೊಳಗೆ ಹೋದ್ರು. ಆದ್ರೂ ದೇವರು ಹೇಳಿದ್ದನ್ನೆಲ್ಲ ನೋಹ ಮಾಡಿದ್ರಿಂದ ದೇವರಿಗೆ ಖುಷಿಯಾಯ್ತು! (ಪ್ಯಾರ 11 ನೋಡಿ)

11. ಜನ ಕೇಳಿಸಿಕೊಳ್ಳದೇ ಇದ್ರೂ ನೋಹ ಸಾರಿದ್ದನ್ನ ನೋಡಿ ಯೆಹೋವ ದೇವರು ಯಾಕೆ ಖುಷಿಪಟ್ರು? (ಮುಖಪುಟ ಚಿತ್ರ ನೋಡಿ.)

11 ಜನ ನಮ್ಮ ಸಂದೇಶ ಕೇಳದೆ ಇರೋದು ಹೊಸದೇನಲ್ಲ. ಹಿಂದಿನ ಕಾಲದಲ್ಲೂ ಯೆಹೋವನ ಸೇವಕರು ಸಾರಿದ ಸಂದೇಶನ ಜನ ಕೇಳಲಿಲ್ಲ. ಉದಾಹರಣೆಗೆ, ನೋಹ ಹತ್ತಾರು ವರ್ಷಗಳಿಂದ “ನೀತಿಯ ಬಗ್ಗೆ ಸಾರಿದ.” (2 ಪೇತ್ರ 2:5) ಅವನು ಹೇಳೋ ಸಂದೇಶನ ಜನ ಕೇಳಿಸಿಕೊಳ್ತಾರೆ ಅಂದುಕೊಂಡಿದ್ದ. ಆದ್ರೆ ಜನ ಕೇಳಿಸಿಕೊಳ್ತಾರೆ ಅನ್ನೋ ಯಾವ ಸೂಚನೆಯನ್ನೂ ಯೆಹೋವ ದೇವರು ಕೊಟ್ಟಿರಲಿಲ್ಲ. ಬದಲಿಗೆ ನೋಹ ಹಡಗು ಕಟ್ಟುವಾಗ, “ನೀನು ಹಡಗೊಳಗೆ ಹೋಗಬೇಕು. ನಿನ್ನ ಜೊತೆ ನಿನ್ನ ಹೆಂಡತಿ, ಗಂಡುಮಕ್ಕಳು ಸೊಸೆಯಂದಿರು ಹೋಗಬೇಕು” ಅಂತ ದೇವರು ಹೇಳಿದ್ರು. (ಆದಿ. 6:18) ಹಡಗಿನ ಗಾತ್ರ ಎಷ್ಟಿರಬೇಕು ಅಂತ ಯೆಹೋವ ಹೇಳಿದಾಗ ನೋಹನಿಗೆ ತಾನು ಹೇಳೋ ಸಂದೇಶನ ತುಂಬ ಜನ ಕೇಳಲ್ಲ ಅಂತ ಗೊತ್ತಾಗಿರಬೇಕು. (ಆದಿ. 6:15) ಹೌದು, ಯಾರೂ ನೋಹನ ಮಾತನ್ನ ಕೇಳಲಿಲ್ಲ. (ಆದಿ. 7:7) ನೋಹ ಜನರಿಗೆ ಸರಿಯಾಗಿ ಸಾರಿಲ್ಲ ಅಂತ ಯೆಹೋವ ಅಂದುಕೊಂಡ್ರಾ? ಇಲ್ಲ. ದೇವರು ಹೇಳಿದ್ದನ್ನೆಲ್ಲ ನೋಹ ಮಾಡಿದ್ರಿಂದ ದೇವರಿಗೆ ಖುಷಿ ಆಯ್ತು.—ಆದಿ. 6:22.

12. ವಿರೋಧ ಇದ್ರೂ ಯೆರೆಮೀಯ ಖುಷಿಯಿಂದ ಸಾರುತ್ತಾ ಇದ್ದಿದ್ದಕ್ಕೆ ಕಾರಣ ಏನು?

12 ಇನ್ನೊಬ್ಬರ ಉದಾಹರಣೆ ನೋಡಿ. ಪ್ರವಾದಿ ಯೆರೆಮೀಯ 40ಕ್ಕಿಂತ ಜಾಸ್ತಿ ವರ್ಷ ಸಾರಿದ್ರೂ ಅಲ್ಲಿನ ಜನ ಅವನು ಹೇಳೋದನ್ನ ಕೇಳಿಸಿಕೊಳ್ಳಲಿಲ್ಲ, ವಿರೋಧ ಮಾಡಿದ್ರು. ಅವರು ಅವನಿಗೆ ತುಂಬ “ಅವಮಾನ, ಗೇಲಿ” ಮಾಡಿದ್ರು. ಅದಕ್ಕೆ ಅವನು ಇನ್ಮೇಲೆ ಸಾರೋದೇ ಬೇಡ ಅಂತ ಅಂದುಕೊಂಡ. (ಯೆರೆ. 20:8, 9) ಆದ್ರೂ ಯೆರೆಮೀಯ ಬಿಟ್ಟುಕೊಟ್ಟಿಲ್ಲ. ಅವನು ಖುಷಿಯಿಂದ ಸಾರೋಕೆ ಯಾವ ವಿಷಯ ಸಹಾಯ ಮಾಡಿತು? ಅವನು ಮುಖ್ಯವಾಗಿ ಎರಡು ವಿಷಯಗಳಿಗೆ ಗಮನ ಕೊಟ್ಟ. ಒಂದು, ಅವನು ಹೇಳ್ತಿದ್ದ ಸಂದೇಶದಲ್ಲಿ ‘ಜನರ ಭವಿಷ್ಯ ಚೆನ್ನಾಗಿರಬೇಕು, ಅವರು ಒಳ್ಳೇದನ್ನ ಎದುರುನೋಡಬೇಕು’ ಅನ್ನೋ ವಿಷಯನೂ ಇತ್ತು. (ಯೆರೆ. 29:11) ಎರಡು, ಯೆಹೋವ ತನ್ನ ಸಂದೇಶನ ಜನರಿಗೆ ತಿಳಿಸೋಕೆ ಅವನನ್ನ ಆರಿಸಿಕೊಂಡಿದ್ದರು. (ಯೆರೆ. 15:16) ನಾವು ಇವತ್ತು ಸಾರುವಾಗ ಜನರಿಗೆ ಮುಂದೆ ಒಳ್ಳೇ ಭವಿಷ್ಯ ಇದೆ ಅಂತ ಹೇಳ್ತಿದ್ದೀವಿ ಮತ್ತು ಯೆಹೋವನ ಸಾಕ್ಷಿಗಳು ನಾವು. ಈ ಎರಡು ವಿಷಯಗಳನ್ನ ಮನಸ್ಸಲ್ಲಿ ಇಟ್ರೆ ನಾವು ಹೇಳೋ ಸಂದೇಶನ ಜನ ಕೇಳಲಿ ಬಿಡಲಿ ನಾವು ಖುಷಿಯಿಂದ ಸಾರುತ್ತಾ ಇರುತ್ತೀವಿ.

13. ಮಾರ್ಕ 4:26-29ರಲ್ಲಿ ಯೇಸು ಕೊಟ್ಟ ಉದಾಹರಣೆಯಿಂದ ನಾವೇನು ಕಲಿಬಹುದು?

13 ಬೈಬಲ್‌ ವಿದ್ಯಾರ್ಥಿಗೆ ದೇವರ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ಸಮಯ ಹಿಡಿಯುತ್ತೆ. ಇದನ್ನ ಅರ್ಥ ಮಾಡಿಕೊಳ್ಳೋಕೆ ಯೇಸು ಹೇಳಿದ ಒಂದು ಉದಾಹರಣೆ ನೋಡೋಣ. ಒಬ್ಬ ರೈತ ಬೀಜ ಬಿತ್ತಿ ನಿದ್ದೆ ಮಾಡ್ತಾನೆ. (ಮಾರ್ಕ 4:26-29 ಓದಿ.) ಆ ಬೀಜಗಳು ಮೊಳಕೆ ಹೊಡೆದು ನಿಧಾನವಾಗಿ ಬೆಳೆದು ಫಲ ಕೊಡೋಕೆ ತುಂಬಾ ದಿನಗಳು ಆಗುತ್ತೆ. ಅದು ಬೇಗ ಫಲ ಕೊಡಬೇಕಂತ ಅವನು ಅವಸರ ಪಡಲ್ಲ. ಹಾಗೇ ನಮ್ಮ ಬೈಬಲ್‌ ವಿದ್ಯಾರ್ಥಿಗಳು ದೇವರ ಮೇಲೆ ಪಟ್ಟಂತ ನಂಬಿಕೆ ಬೆಳೆಸಿಕೊಳ್ಳಬೇಕು ಅಂತ ನಾವು ಅವಸರ ಪಡಕ್ಕಾಗಲ್ಲ. ಅವರು ಕಲಿತಿದ್ದನ್ನ ಜೀವನದಲ್ಲಿ ಪಾಲಿಸೋಕೆ ಸಮಯ ಹಿಡಿಯುತ್ತೆ. ಹಾಗಾಗಿ ನಮ್ಮ ಬೈಬಲ್‌ ವಿದ್ಯಾರ್ಥಿಗಳು ಬೇಗ ಪ್ರಗತಿ ಮಾಡುತ್ತಿಲ್ಲವಲ್ಲಾ ಅಂತ ಬೇಜಾರು ಮಾಡ್ಕೊಬಾರದು. ಆ ರೈತನ ತರ ತಾಳ್ಮೆ ತೋರಿಸಬೇಕು.—ಯಾಕೋ. 5:7, 8.

14. ಕೆಲವು ಕಡೆ ಜನರು ಸತ್ಯಕ್ಕೆ ಬರೋಕೆ ವರ್ಷಗಳೇ ಹಿಡಿಯುತ್ತೆ ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ.

14 ಕೆಲವು ಕಡೆ ಜನ ಸತ್ಯಕ್ಕೆ ಬರೋಕೆ ವರ್ಷಗಳೇ ಹಿಡಿಯುತ್ತೆ. ಸಹೋದರಿ ಗ್ಲ್ಯಾಡಿಸ್‌ ಮತ್ತು ರೂಬಿ ಆ್ಯಲೆನ್‌ ಅವರ ಉದಾಹರಣೆ ನೋಡಿ. ಅವರಿಬ್ಬರು ಅಕ್ಕತಂಗಿ. ಅವರಿಗೆ 1959ರಲ್ಲಿ, ಕೆನಡದ ಕ್ವಿಬೆಕ್‌ನಲ್ಲಿರೋ ಒಂದು ಪಟ್ಟಣದಲ್ಲಿ ರೆಗ್ಯುಲರ್‌ ಪಯನೀಯರಾಗಿ ಸೇವೆ ಮಾಡೋ ಅವಕಾಶ ಸಿಕ್ತು. * ಆದ್ರೆ ಜನ ಅಲ್ಲಿದ್ದ ಕ್ಯಾಥೋಲಿಕ್‌ ಚರ್ಚಿಗೆ ಮತ್ತು ಪಾದ್ರಿಗಳಿಗೆ ಹೆದರಿಕೊಂಡು ಸಿಹಿಸುದ್ದಿ ಕೇಳಿಸಿಕೊಳ್ತಾನೇ ಇರಲಿಲ್ಲ. ಗ್ಲ್ಯಾಡಿಸ್‌ ಹೇಳಿದ್ದು “ನಾವು 8 ತಾಸು ಸೇವೆ ಮಾಡುತ್ತಿದ್ವಿ. ಹೀಗೆ ಎರಡು ವರ್ಷ ಸೇವೆ ಮಾಡಿದ್ವಿ. ಆದ್ರೆ ಯಾರೂ ನಾವು ಹೇಳೋದನ್ನ ಕೇಳಿಸಿಕೊಳ್ತಾ ಇರಲಿಲ್ಲ. ಜನ ಬಾಗಿಲು ತೆರೆದು ನಮ್ಮನ್ನ ನೋಡಿದ ತಕ್ಷಣ ಬಾಗಿಲು ಮುಚ್ಚಿಬಿಡುತ್ತಿದ್ರು. ಆದ್ರೂ ನಾವು ಸೇವೆ ನಿಲ್ಲಿಸಲಿಲ್ಲ, ಸೇವೆ ಮಾಡ್ತಾನೇ ಇದ್ವಿ.” ವರ್ಷಗಳು ಕಳೀತಾ ಇದ್ದ ಹಾಗೆ ಆ ಪಟ್ಟಣದಲ್ಲಿದ್ದ ಜನರ ಮನಸ್ಸು ಬದಲಾಯ್ತು. ಅವರು ಈ ಸಂದೇಶ ಕೇಳೋಕೆ ಶುರುಮಾಡಿದ್ರು. ಈಗ ಆ ಪಟ್ಟಣದಲ್ಲಿ ಮೂರು ಸಭೆಗಳಿವೆ.—ಯೆಶಾ. 60:22.

15. ಒಬ್ಬ ವ್ಯಕ್ತಿ ಪ್ರಗತಿಮಾಡಿ ದೀಕ್ಷಾಸ್ನಾನ ಪಡೆದುಕೊಳ್ಳೋಕೆ ಯಾರೆಲ್ಲಾ ಸಹಾಯ ಮಾಡಬೇಕು ಅಂತ 1 ಕೊರಿಂಥ 3:6, 7 ಹೇಳುತ್ತೆ?

15 ಒಬ್ಬ ವ್ಯಕ್ತಿ ಸತ್ಯ ಕಲಿತು ದೀಕ್ಷಾಸ್ನಾನ ಪಡಕೊಳ್ಳೋಕೆ ಇಡೀ ಸಭೆನೇ ಸಹಾಯ ಮಾಡಬೇಕು. (1 ಕೊರಿಂಥ 3:6, 7ಓದಿ.) ಹೇಗೆ ಅಂತ ಒಂದು ಉದಾಹರಣೆ ನೋಡೋಣ. ಒಬ್ಬ ಸಹೋದರ ಆಸಕ್ತಿ ಇರೋ ವ್ಯಕ್ತಿಗೆ ಕರಪತ್ರ ಅಥವಾ ಪತ್ರಿಕೆ ಕೊಡ್ತಾರೆ. ಆದ್ರೆ ಪುನರ್ಭೇಟಿ ಮಾಡೋಕೆ ಆಗದೆ ಇದ್ದಾಗ ಬೇರೆ ಸಹೋದರನಿಗೆ ಹೋಗೋಕೆ ಹೇಳ್ತಾರೆ. ಆಗ ಆ ಸಹೋದರ ಭೇಟಿ ಮಾಡಿ ಬೈಬಲ್‌ ಅಧ್ಯಯನ ಶುರುಮಾಡ್ತಾರೆ. ಆಮೇಲೆ ಬೇರೆ-ಬೇರೆ ಸಹೋದರರನ್ನ ಆ ಸ್ಟಡಿಗೆ ಕರಕೊಂಡು ಹೋಗ್ತಾರೆ. ಯೆಹೋವ ದೇವರ ಬಗ್ಗೆ ಜಾಸ್ತಿ ತಿಳಿದುಕೊಳ್ಳೋಕೆ ಆ ವ್ಯಕ್ತಿಗೆ ಇವರೆಲ್ಲ ಸಹಾಯ ಮಾಡ್ತಾರೆ. ಕೊನೆಗೆ ಆ ವ್ಯಕ್ತಿ ದೀಕ್ಷಾಸ್ನಾನ ಪಡಕೊಳ್ಳುವಾಗ ಇವರೆಲ್ಲ ಖುಷಿಪಡ್ತಾರೆ.—ಯೋಹಾ. 4:35-38.

16. ಆರೋಗ್ಯ ಚೆನ್ನಾಗಿಲ್ಲ ಅಂದ್ರೂ, ಮುಂಚಿನಷ್ಟು ಸೇವೆ ಮಾಡೋಕೆ ಆಗಿಲ್ಲ ಅಂದ್ರೂ ಹೇಗೆ ಖುಷಿಯಾಗಿ ಸೇವೆ ಮಾಡಬಹುದು?

16 ನಿಮ್ಮಲ್ಲಿ ಕೆಲವರಿಗೆ ಆರೋಗ್ಯ ಸರಿಯಿಲ್ಲದೇ ಇರಬಹುದು ಅಥವಾ ಮುಂಚಿನ ತರ ಸೇವೆ ಮಾಡೋಕೆ ಶಕ್ತಿ ಇಲ್ಲದೆ ಇರಬಹುದು. ಆದ್ರೂ ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡಕೊಳ್ಳೋದ್ರಲ್ಲಿ ನಿಮ್ಮ ಪಾಲೂ ಇರುತ್ತೆ. ಅದಕ್ಕೆ ನೀವು ಖುಷಿಪಡಿ. ಇದನ್ನ ಅರ್ಥ ಮಾಡಿಕೊಳ್ಳೋಕೆ ಒಂದು ಉದಾಹರಣೆ ನೋಡಿ. ರಾಜ ದಾವೀದ ಮತ್ತು ಅವನ ಕಡೆಯವರ ಹೆಂಡತಿ-ಮಕ್ಕಳನ್ನ ಅಮಾಲೇಕ್ಯರು ಎತ್ತಿಕೊಂಡು ಹೋಗಿಬಿಡ್ತಾರೆ. ಆಗ ಈಗಾಗಲೇ ಯುದ್ಧ ಮುಗಿಸಿ ಬಂದಿದ್ದ 200 ಗಂಡಸರು ಅಮಾಲೇಕ್ಯರ ಹತ್ರ ಹೋಗಿ ಹೆಂಡತಿ-ಮಕ್ಕಳನ್ನ ಬಿಡಿಸಿಕೊಂಡು ಬರೋಕೆ ದಾವೀದನ ಜೊತೆ ಹೋಗಲ್ಲ. ಅವರು ಸೊತ್ತುಗಳನ್ನ ಕಾಯ್ತಾ ಅಲ್ಲೇ ಇರುತ್ತಾರೆ. ಆದ್ರೂ ಕೊನೆಯಲ್ಲಿ, ಹೆಂಡತಿ-ಮಕ್ಕಳನ್ನ ಬಿಡಿಸಿಕೊಳ್ಳೋಕೆ ತನ್ನ ಜೊತೆ ಬಂದವರಿಗೂ ಬರದವರಿಗೂ ಕೊಳ್ಳೆಯ ಪಾಲನ್ನ ಸಮವಾಗಿ ಹಂಚೋಕೆ ದಾವೀದ ಹೇಳ್ತಾನೆ. (1 ಸಮು. 30:21-25) ಈ ಉದಾಹರಣೆಯಿಂದ ನಾವೇನು ಕಲಿತೀವಿ? ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡಕೊಳ್ಳೋಕೆ ಸಭೆಯಲ್ಲಿರೋ ಎಲ್ಲರ ಶ್ರಮನೂ ಇರುತ್ತೆ. ಹಾಗಾಗಿ ನಮ್ಮಿಂದ ಎಷ್ಟು ಸೇವೆ ಮಾಡೋಕೆ ಆಗುತ್ತೋ ಅಷ್ಟು ಮಾಡುತ್ತಾ ಖುಷಿಯಾಗಿರೋಣ.

17. ನಾವು ಯೆಹೋವ ದೇವರಿಗೆ ಯಾಕೆ ಥ್ಯಾಂಕ್ಸ್‌ ಹೇಳಬೇಕು?

17 ನಾವು ಯೆಹೋವ ದೇವರಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ. ಯಾಕಂದ್ರೆ ನಾವು ಆತನನ್ನ ಆರಾಧಿಸೋಕೆ ಜನರನ್ನ ಒತ್ತಾಯ ಮಾಡಕ್ಕಾಗಲ್ಲ ಅಂತ ಆತನಿಗೆ ಗೊತ್ತು. ನಾವು ಸೇವೆ ಮಾಡೋಕೆ ಎಷ್ಟು ಶ್ರಮ ಹಾಕ್ತಾ ಇದ್ದೀವಿ, ಆತನ ಮೇಲೆ ನಮಗೆ ಎಷ್ಟು ಪ್ರೀತಿ ಇದೆ ಅಂತ ನೋಡಿ ಅವರು ನಮ್ಮ ಸೇವೆನ ಅಳೆಯುತ್ತಾ ಇದ್ದಾರೆ. ಅಷ್ಟೇ ಅಲ್ಲ, ನಮ್ಮ ಕೈಲಾದ ಸೇವೆ ಮಾಡ್ತಾ ಹೇಗೆ ಖುಷಿಯಾಗಿರಬೇಕು ಅಂತಾನೂ ಹೇಳಿಕೊಡ್ತಾ ಇದ್ದಾರೆ. (ಯೋಹಾ. 14:12) ಜನರು ಕೇಳಲಿ ಬಿಡಲಿ, ನಾವು ಸೋತುಹೋಗದೇ ಸೇವೆ ಮಾಡಿದ್ರೆ ದೇವರು ಖುಷಿಪಡ್ತಾರೆ.

ಗೀತೆ 92 “ವಾಕ್ಯವನ್ನು ಸಾರು”

^ ಪ್ಯಾರ. 5 ನಾವು ಸಿಹಿಸುದ್ದಿ ಸಾರಿದಾಗ ಜನರು ಚೆನ್ನಾಗಿ ಕೇಳಿಸಿಕೊಂಡ್ರೆ ತುಂಬ ಖುಷಿಯಾಗುತ್ತೆ, ಕೇಳಿಸಿಕೊಂಡಿಲ್ಲ ಅಂದ್ರೆ ಬೇಜಾರಾಗುತ್ತೆ. ನಿಮ್ಮ ಬೈಬಲ್‌ ವಿದ್ಯಾರ್ಥಿ ಕಲಿತಿದ್ದನ್ನ ಪಾಲಿಸದೇ ಇದ್ರೆ ಅಥವಾ ನೀವು ಸ್ಟಡಿ ಮಾಡಿರುವವರಲ್ಲಿ ಒಬ್ಬರೂ ದೀಕ್ಷಾಸ್ನಾನ ತಗೊಳ್ಳದೇ ಇದ್ರೆ ಇನ್ನೂ ಬೇಜಾರಾಗುತ್ತೆ. ಇದಕ್ಕೆಲ್ಲ ಕಾರಣ ನಾವು ಚೆನ್ನಾಗಿ ಸ್ಟಡಿ ಮಾಡಿಲ್ಲ ಅಂತಾನಾ? ಯೆಹೋವ ದೇವರು ನಮ್ಮ ಸೇವೆಯನ್ನ ಹೇಗೆ ಅಳೆಯುತ್ತಾರೆ? ಜನರು ಕೇಳಿಸಿಕೊಂಡರೂ, ಕೇಳದೇ ಇದ್ರೂ ನಾವು ಖುಷಿಯಾಗಿ ಇರೋದು ಹೇಗೆ? ಈ ಲೇಖನದಲ್ಲಿ ನೋಡೋಣ.

^ ಪ್ಯಾರ. 14 ಸೆಪ್ಟೆಂಬರ್‌ 1, 2002ರ ಕಾವಲಿನಬುರುಜುವಿನಲ್ಲಿ ಗ್ಲ್ಯಾಡಿಸ್‌ ಆ್ಯಲೆನ್‌ ಅವರ ಜೀವನ ಕಥೆ ಇದೆ. “ನಾನು ಏನನ್ನೂ ಬದಲಾಯಿಸಲು ಇಷ್ಟಪಡೆನು!” ಅನ್ನೋ ಲೇಖನ ನೋಡಿ.