ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 47

ನಿಮ್ಮ ನಂಬಿಕೆ ಎಷ್ಟು ಗಟ್ಟಿಯಾಗಿದೆ?

ನಿಮ್ಮ ನಂಬಿಕೆ ಎಷ್ಟು ಗಟ್ಟಿಯಾಗಿದೆ?

“ದುಃಖದಲ್ಲಿ ಮುಳುಗಿಹೋಗಬೇಡಿ. ದೇವ್ರ ಮೇಲೆ ನಂಬಿಕೆ ಇಡಿ.” —ಯೋಹಾ. 14:1.

ಗೀತೆ 54 ನಮಗೆ ನಂಬಿಕೆ ಇರತಕ್ಕದ್ದು

ಕಿರುನೋಟ *

1. ನಮ್ಮ ಮನಸ್ಸಿಗೆ ಯಾವ ಪ್ರಶ್ನೆಗಳು ಬರಬಹುದು?

ಆದಷ್ಟು ಬೇಗ ಸುಳ್ಳು ಧರ್ಮ ನಾಶ ಆಗುತ್ತೆ. ಮಾಗೋಗಿನ ಗೋಗ ನಮ್ಮ ಮೇಲೆ ಆಕ್ರಮಣ ಮಾಡ್ತಾನೆ ಮತ್ತು ಅರ್ಮಗೆದೋನ್‌ ಯುದ್ಧ ನಡಿಯುತ್ತೆ. ಇದನ್ನೆಲ್ಲಾ ನೆನಸಿಕೊಂಡಾಗ ನಿಮಗೆ ಗಾಬರಿ ಆಗುತ್ತಾ? ಭಯ ಆಗುತ್ತಾ? ‘ಆ ಸಮಯದಲ್ಲಿ ಯೆಹೋವ ದೇವರಿಗೆ ನಾನು ನಿಯತ್ತಾಗಿ ಇರ್ತೀನಾ, ಇಲ್ವಾ’ ಅಂತ ಯೋಚನೆ ಆಗುತ್ತಾ? ನಿಮಗೆ ಆ ತರ ಯೋಚನೆ ಬಂದ್ರೆ ಯೇಸು ಹೇಳಿರೋ ಮಾತು ಖಂಡಿತ ಧೈರ್ಯ ಕೊಡುತ್ತೆ. “ದುಃಖದಲ್ಲಿ ಮುಳುಗಿಹೋಗಬೇಡಿ. ದೇವ್ರ ಮೇಲೆ ನಂಬಿಕೆ ಇಡಿ” ಅಂತ ಯೇಸು ಹೇಳಿದನು. (ಯೋಹಾ. 14:1) ದೇವರ ಮೇಲೆ ಪೂರ್ತಿ ನಂಬಿಕೆ ಇದ್ರೆ ಏನೇ ಕಷ್ಟ ಬಂದ್ರೂ ನಾವು ಹೆದರಲ್ಲ, ಧೈರ್ಯವಾಗಿ ಇರುತ್ತೀವಿ.

2. (ಎ) ಮುಂದೆ ಬರೋ ಕಷ್ಟಗಳನ್ನ ಧೈರ್ಯವಾಗಿ ಎದುರಿಸೋಕೆ ನಾವೀಗ ಏನು ಮಾಡಬೇಕು? (ಬಿ) ಈ ಲೇಖನದಲ್ಲಿ ಏನು ಕಲಿತೀವಿ?

2 ಈಗ ನಮಗೆ ಬಂದಿರೋ ಕಷ್ಟಗಳನ್ನ ಹೇಗೆ ಎದುರಿಸ್ತಾ ಇದ್ದೀವಿ ಅನ್ನೋದಕ್ಕೆ ನಾವು ಗಮನ ಕೊಡಬೇಕು. ಹೀಗೆ ಗಮನ ಕೊಟ್ಟಾಗ ಯಾವ ವಿಷಯದಲ್ಲಿ ನಮಗೆ ದೇವರ ಮೇಲೆ ನಂಬಿಕೆ ಕಡಿಮೆ ಆಗಿದೆ ಅಂತ ಗೊತ್ತಾಗುತ್ತೆ. ಆ ನಂಬಿಕೆಯನ್ನ ಈಗಲೇ ಬೆಳೆಸಿಕೊಳ್ಳಬೇಕು. ಆಗ ಮುಂದೆ ಬರೋ ಕಷ್ಟಗಳನ್ನ ಧೈರ್ಯವಾಗಿ ಎದುರಿಸೋಕೆ ಆಗುತ್ತೆ. ಈ ಲೇಖನದಲ್ಲಿ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ: ತನ್ನ ಶಿಷ್ಯರು ಯಾವ ನಾಲ್ಕು ವಿಷಯಗಳ ಬಗ್ಗೆ ದೇವರ ಮೇಲೆ ನಂಬಿಕೆ ಇಡಬೇಕು ಅಂತ ಯೇಸು ಹೇಳಿದನು? ಇವತ್ತು ನಮಗೆ ಯಾವೆಲ್ಲಾ ಕಷ್ಟಗಳು ಬರಬಹುದು? ಯೇಸುವಿನ ಶಿಷ್ಯರ ತರ ನಾವು ಹೇಗೆ ಪೂರ್ತಿ ನಂಬಿಕೆ ಬೆಳೆಸಿಕೊಳ್ಳಬೇಕು?

ನಮಗೆ ಬೇಕಾಗಿರೋದನ್ನ ದೇವರು ಕೊಡ್ತಾನೆ ಅಂತ ನಂಬಿ

ಯೆಹೋವನ ಮೇಲೆ ನಂಬಿಕೆ ಇದ್ರೆ ಹಣಕಾಸಿನ ತೊಂದರೆ ಬಂದ್ರೂ ಆತನ ಸೇವೆಗೆ ಗಮನ ಕೊಡ್ತೀವಿ (ಪ್ಯಾರ 3-6 ನೋಡಿ)

3. ಮತ್ತಾಯ 6:30, 33ರಲ್ಲಿ ಯೇಸು ಯಾವ ವಿಷಯದ ಮೇಲೆ ನಮಗೆ ಪೂರ್ತಿ ನಂಬಿಕೆ ಇರಬೇಕು ಅಂತ ಹೇಳಿದನು?

3 ಮನೆ ಯಜಮಾನನಿಗೆ ತನ್ನ ಕುಟುಂಬವನ್ನ ಚೆನ್ನಾಗಿ ನೋಡಿಕೊಳ್ಳಬೇಕು, ಚೆನ್ನಾಗಿ ದುಡಿದು ಮನೆಗೆ ತಂದುಹಾಕಬೇಕು ಅಂತ ಆಸೆ ಇರುತ್ತೆ. ಆದ್ರೆ ಕೆಲವೊಮ್ಮೆ ಅವನು ಕೆಲಸ ಕಳೆದುಕೊಳ್ಳಬಹುದು. ಎಷ್ಟೇ ಹುಡುಕಿದ್ರೂ ಒಳ್ಳೆ ಕೆಲಸ ಸಿಗದೇ ಇರಬಹುದು. ಸಿಕ್ಕಿದ್ರೂ ಬೈಬಲ್‌ ನಿಯಮವನ್ನ ಮೀರುವಂಥ ಕೆಲಸ ಸಿಗಬಹುದು. ಆಗ ತನ್ನ ಕುಟುಂಬ ನೋಡಿಕೊಳ್ಳೋಕೆ ದೇವರು ಹೇಗಾದ್ರೂ ಸಹಾಯ ಮಾಡ್ತಾನೆ ಅನ್ನೋ ನಂಬಿಕೆ ಬೆಳೆಸಿಕೊಳ್ಳಬೇಕಾಗುತ್ತೆ. ಈ ವಿಷಯದಲ್ಲಿ ದೇವರ ಮೇಲೆ ಪೂರ್ತಿ ನಂಬಿಕೆ ಬೆಳೆಸಿಕೊಳ್ಳಿ ಅಂತ ಯೇಸು ಬೆಟ್ಟದ ಭಾಷಣದಲ್ಲಿ ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾಯ 6:30, 33 ಓದಿ.) ಯೆಹೋವ ದೇವರು ನಮ್ಮ ಕೈಬಿಡಲ್ಲ ಅಂತ ಪೂರ್ತಿ ನಂಬಿಕೆ ಇದ್ರೆ ನಮ್ಮ ಗಮನ ಎಲ್ಲಾ ದೇವರ ಸೇವೆ ಮೇಲಿರುತ್ತೆ. ನಮಗೆ ಬೇಕಾಗಿರೋದನ್ನೆಲ್ಲಾ ದೇವರು ಕೊಡೋದನ್ನ ನೋಡುವಾಗ ನಾವು ಆತನಿಗೆ ಇನ್ನೂ ಹತ್ರ ಆಗ್ತೀವಿ ಮತ್ತು ಆತನ ಮೇಲಿರೋ ನಂಬಿಕೆನೂ ಜಾಸ್ತಿ ಆಗುತ್ತೆ.

4-5. ಆರ್ಥಿಕ ಸಮಸ್ಯೆ ಬಂದಾಗ ಒಂದು ಕುಟುಂಬ ಏನು ಮಾಡಿತು?

4 ವೆನೆಜುವೆಲಾದಲ್ಲಿರೋ ಸಹೋದರ ಮಿಗೇಲ್‌ ಅವರ ಅನುಭವ ನೋಡಿ. ಅವರಿಗೆ ‘ಹೊಟ್ಟೆ ಮೇಲೆ ತಣ್ಣೀರು ಬಟ್ಟೆನೇ ಗತಿ’ ಅನ್ನೋ ಪರಿಸ್ಥಿತಿ ಬಂದಾಗ ಯೆಹೋವ ಹೇಗೆ ಸಹಾಯ ಮಾಡಿದನು ಗೊತ್ತಾ? ಸಹೋದರ ಮಿಗೇಲ್‌ಗೆ ಅವರದ್ದೇ ಸ್ವಂತ ಹೊಲ ಇತ್ತು. ಅದರಲ್ಲಿ ಬರುತ್ತಿದ್ದ ಬೆಳೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ರು. ಆದರೆ ದಿಢೀರ್‌ ಅಂತ ಒಂದಿಷ್ಟು ಜನ ಗನ್‌ ಹಿಡಿದುಕೊಂಡು ಬಂದು ಅವರನ್ನ ಓಡಿಸಿಬಿಟ್ರು. ಅವರು ತಮ್ಮ ಹೊಲ ಮನೆ ಎಲ್ಲಾ ಕಳಕೊಂಡ್ರು. ಆಮೇಲೆ ಏನಾಯ್ತು? ಸಹೋದರ ಮಿಗೇಲ್‌ ಹೀಗೆ ಹೇಳ್ತಾರೆ: “ಬೇರೆಯವರಿಂದ ಒಂದು ಚಿಕ್ಕ ಹೊಲ ಬಾಡಿಗೆಗೆ ತಗೊಂಡು ಬೆಳೆ ಬೆಳೆಸಿ ಜೀವನ ಮಾಡುತ್ತಿದ್ವಿ. ಪ್ರತಿದಿನ ನಾನು ‘ಅಪ್ಪಾ ಯೆಹೋವ, ನೀವೇ ನಮ್ಮ ಕುಟುಂಬನ ನೋಡಿಕೊಳ್ಳಬೇಕು’ ಅಂತ ಪ್ರಾರ್ಥನೆ ಮಾಡ್ತಿದ್ದೆ.” ಇಷ್ಟೆಲ್ಲಾ ಕಷ್ಟ ಇದ್ರೂ ಅವರು ತಪ್ಪದೇ ಕೂಟಗಳಿಗೆ ಹೋಗ್ತಿದ್ರು ಮತ್ತು ಸೇವೆಗೆ ಹೋಗ್ತಿದ್ರು. ಯಾಕಂದ್ರೆ ಯೆಹೋವ ಅವರಿಗೆ ಬೇಕಾಗಿರೋದನ್ನೆಲ್ಲಾ ಕೊಟ್ಟೇ ಕೊಡ್ತಾನೆ ಅಂತ ಪೂರ್ತಿ ನಂಬಿದ್ರು. ಅವರ ನಂಬಿಕೆ ಸುಳ್ಳಾಗಲಿಲ್ಲ. ದೇವರು ಅವರಿಗೆ ಬೇಕಾಗಿರೋದನ್ನೆಲ್ಲಾ ಕೊಟ್ಟು ಅವರನ್ನ ನೋಡಿಕೊಂಡ್ರು.

5 ಮಿಗೇಲ್‌ ಮತ್ತು ಅವರ ಹೆಂಡತಿ ಯೂರೈ ಕಷ್ಟದ ಮೇಲಲ್ಲ, ಬದಲಿಗೆ ಯೆಹೋವ ಅವರಿಗೆ ಹೇಗೆ ಸಹಾಯ ಮಾಡ್ತಿದ್ದಾನೆ ಅನ್ನೋದರ ಮೇಲೆ ಗಮನಕೊಟ್ಟರು. ಯೆಹೋವ ಅವರಿಗೆ ಹೇಗೆಲ್ಲಾ ಸಹಾಯ ಮಾಡಿದನು? ಅವರಿಗೆ ಬೇಕಾಗಿದ್ದ ಕೆಲವು ವಸ್ತುಗಳನ್ನ ಸಭೆಯಲ್ಲಿದ್ದ ಸಹೋದರ ಸಹೋದರಿಯರು ತಂದುಕೊಟ್ರು. ಮಿಗೇಲ್‌ಗೆ ಒಂದು ಕೆಲಸ ಹುಡುಕೋಕೆ ಸಹಾಯ ಮಾಡಿದ್ರು. ಕೆಲವೊಮ್ಮೆ ಶಾಖಾ ಕಚೇರಿ ಅವರಿಗೆ ಬೇಕಾಗಿದ್ದ ವಸ್ತುಗಳನ್ನ ಕೊಡ್ತು. ಹೀಗೆ ಯೆಹೋವ ಮಿಗೇಲ್‌ ಕುಟುಂಬದ ಕೈಬಿಡಲಿಲ್ಲ. ಇದನ್ನೆಲ್ಲಾ ನೋಡಿದಾಗ ಆ ಕುಟುಂಬಕ್ಕೆ ಯೆಹೋವನ ಮೇಲಿದ್ದ ನಂಬಿಕೆ ಇನ್ನೂ ಜಾಸ್ತಿ ಆಯ್ತು. ಈ ರೀತಿ ಒಂದು ಸಲ ಸಹಾಯ ಸಿಕ್ಕಿದಾಗ ಮಿಗೇಲ್‌ ಅವರ ದೊಡ್ಡ ಮಗಳು ಯೋಸೆಲಿನ್‌ ಏನು ಹೇಳಿದ್ರು ಗೊತ್ತಾ? “ಯೆಹೋವ ದೇವರೇ ಬಂದು ನಮಗೆ ಸಹಾಯ ಮಾಡಿದ ಹಾಗೆ ಅನಿಸಿತು. ಈಗ ಯೆಹೋವ ನನ್ನ ಬೆಸ್ಟ್‌ ಫ್ರೆಂಡ್‌. ಏನೇ ಆದ್ರೂ ದೇವರು ನಮಗೆ ಸಹಾಯ ಮಾಡೇ ಮಾಡ್ತಾರೆ ಅನ್ನೋ ಪೂರ್ತಿ ನಂಬಿಕೆ ನನಗಿದೆ. ಎಲ್ಲಾ ಕಷ್ಟಗಳನ್ನ ನಾವು ಕುಟುಂಬವಾಗಿ ಎದುರಿಸಿದ್ದೀವಿ. ಹಾಗಾಗಿ ಇದಕ್ಕಿಂತ ದೊಡ್ಡ ಕಷ್ಟಗಳು ಮುಂದೆ ಬಂದ್ರೂ ಅದನ್ನ ಸಹಿಸಿಕೊಳ್ಳೋಕೆ ನಾವು ರೆಡಿ ಇದ್ದೀವಿ.”

6. ಆರ್ಥಿಕ ಸಮಸ್ಯೆ ಬಂದಾಗ ದೇವರ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ನೀವೇನು ಮಾಡಬೇಕು?

6 ಕೈಯಲ್ಲಿ ಕಾಸಿಲ್ಲದೆ ತಲೆ ಮೇಲೆ ಕೈಹೊತ್ತು ಕೂತಿದ್ದೀರಾ? ಹಾಗಾದ್ರೆ ಯೆಹೋವ ದೇವರ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ಇದೇ ಸರಿಯಾದ ಸಮಯ. ಪ್ರಾರ್ಥನೆ ಮಾಡಿ ಮತ್ತಾಯ 6:25-34ರಲ್ಲಿ ಯೇಸು ಹೇಳಿರೋ ಮಾತುಗಳನ್ನ ಧ್ಯಾನಿಸಿ. ಈಗ ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡುತ್ತಿರೋ ಸಹೋದರ ಸಹೋದರಿಯರನ್ನ ಆತನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಅಂತ ತೋರಿಸೋ ಉದಾಹರಣೆಗಳನ್ನ ಓದಿ. (1 ಕೊರಿಂ. 15:58) ಆಗ ನಿಮಗೂ ಯೆಹೋವ ಅಪ್ಪಾ ಸಹಾಯ ಮಾಡೇ ಮಾಡ್ತಾರೆ ಅನ್ನೋ ನಂಬಿಕೆ ಬರುತ್ತೆ. ನಿಮಗೇನು ಬೇಕು, ಅದನ್ನ ಹೇಗೆ ಕೊಡಬೇಕು ಅನ್ನೋದು ಆತನಿಗೆ ಗೊತ್ತು. ಈಗ ನಿಮ್ಮ ಜೀವನದಲ್ಲಿ ದೇವರ ಸಹಾಯವನ್ನ ನೋಡುವಾಗ ಮುಂದೆ ದೊಡ್ಡ-ದೊಡ್ಡ ಕಷ್ಟಗಳು ಬಂದರೂ ಯೆಹೋವ ಸಹಾಯ ಮಾಡೇ ಮಾಡ್ತಾನೆ ಅನ್ನೋ ನಂಬಿಕೆ ನಿಮಗೆ ಬರುತ್ತೆ.—ಹಬ. 3:17, 18.

ಜೀವನ ಅಲ್ಲೋಲ-ಕಲ್ಲೋಲ ಆದಾಗ ನಂಬಿಕೆ ಬೆಳೆಸಿಕೊಳ್ಳಿ

ನಂಬಿಕೆ ಇದ್ರೆ ಜೀವನ ಅಲ್ಲೋಲ-ಕಲ್ಲೋಲ ಆದ್ರೂ ಧೈರ್ಯವಾಗಿ ಇರುತ್ತೀವಿ (ಪ್ಯಾರ 7-11 ನೋಡಿ)

7. ಶಿಷ್ಯರು ಯೆಹೋವ ದೇವರ ಮೇಲೆ ಇನ್ನೂ ಜಾಸ್ತಿ ನಂಬಿಕೆ ಬೆಳೆಸಿಕೊಳ್ಳಬೇಕಿತ್ತು ಅಂತ ಯೇಸು ಹೇಗೆ ತೋರಿಸಿಕೊಟ್ಟನು? (ಮತ್ತಾಯ 8:23-26)

7 ಮತ್ತಾಯ 8:23-26 ಓದಿ. ಒಂದುಸಲ ಯೇಸು ಮತ್ತು ಅವನ ಶಿಷ್ಯರು ಸಮುದ್ರದಲ್ಲಿ ಪ್ರಯಾಣ ಮಾಡ್ತಿದ್ರು. ಆಗ ಒಂದು ದೊಡ್ಡ ಬಿರುಗಾಳಿ ಬಂತು. ಆ ಬಿರುಗಾಳಿಗೆ ದೋಣಿಯಲ್ಲಿ ನೀರು ತುಂಬಿಕೊಳ್ತು. ಆಗ ಶಿಷ್ಯರು ತುಂಬ ಭಯಪಟ್ಟರು. ಮಲಗಿದ್ದ ಯೇಸುವನ್ನ ಅವರು ಎಬ್ಬಿಸಿ ‘ನಮ್ಮನ್ನ ಕಾಪಾಡು’ ಅಂತ ಬೇಡಿಕೊಂಡರು. ಆಗ ಯೇಸು ಅವರಿಗೆ “ಯಾಕಿಷ್ಟು ಹೆದರುತ್ತಾ ಇದ್ದೀರಾ? ನಿಮ್ಮ ನಂಬಿಕೆ ಎಲ್ಲಿ ಹೋಯ್ತು?” ಅಂತ ಕೇಳಿದ್ರು. ‘ನೀವು ದೇವರ ಮೇಲೆ ಇನ್ನೂ ಜಾಸ್ತಿ ನಂಬಿಕೆ ಬೆಳೆಸಿಕೊಳ್ಳಬೇಕು’ ಅಂತ ಶಿಷ್ಯರನ್ನ ತಿದ್ದಿದರು. ಯಾಕಂದ್ರೆ ಶಿಷ್ಯರು ಭಯಪಡದೆ ಯೆಹೋವ ತಮ್ಮನ್ನ ಕಾಪಾಡ್ತಾನೆ ಅಂತ ನಂಬಿಕೆ ಇಡಬೇಕಿತ್ತು. ನಮಗೆ ಇವತ್ತು ನಿಜವಾದ ಬಿರುಗಾಳಿನೇ ಬರಲಿ, ನಮ್ಮ ಜೀವನದಲ್ಲಿ ಬಿರುಗಾಳಿಯಂಥ ಸಮಸ್ಯೆಗಳೇ ಬರಲಿ ಯೆಹೋವನ ಮೇಲೆ ಪೂರ್ತಿ ನಂಬಿಕೆ ಇದ್ರೆ ನಾವು ಧೈರ್ಯವಾಗಿ ಇರ್ತೀವಿ.

8-9. (ಎ) ಅನೆಲ್‌ಗೆ ಯಾವ ಕಷ್ಟ ಬಂತು? (ಬಿ) ಅದನ್ನ ಧೈರ್ಯದಿಂದ ನಿಭಾಯಿಸೋಕೆ ಯಾವುದು ಸಹಾಯ ಮಾಡ್ತು?

8 ಪೊರ್ಟೋ ರಿಕೊ ಅನ್ನೋ ದ್ವೀಪದಲ್ಲಿ ಇರೋ ಸಹೋದರಿ ಅನೆಲ್‌ ಅವರ ಅನುಭವ ನೋಡಿ. ಅವರಿಗೆ ಮದುವೆ ಆಗಿಲ್ಲ. 2017ರಲ್ಲಿ ಅವರಿರೋ ಊರಲ್ಲಿ ದೊಡ್ಡ ಬಿರುಗಾಳಿ ಬಂತು. ಮರಿಯಾ ಚಂಡಮಾರುತ ಅಪ್ಪಳಿಸಿದಾಗ ಅವರ ಮನೆ ನಾಶ ಆಯ್ತು. ಅವರ ಕೆಲಸನೂ ಹೋಯ್ತು. ಅವರು ಹೇಳಿದ್ದು, “ನನಗೆ ಆಗ ಚಿಂತೆ ಆಯ್ತು. ಆದ್ರೂ ಯೆಹೋವ ದೇವರಿಗೆ ಪ್ರಾರ್ಥನೆ ಮಾಡ್ತಿದ್ದೆ, ಸೇವೆ ಮಾಡ್ತಿದ್ದೆ. ಹೀಗೆ ಯೆಹೋವ ದೇವರ ಮೇಲೆ ಪೂರ್ತಿ ನಂಬಿಕೆ ಇಡೋಕೆ ಕಲಿತೆ.”

9 ಸಂಘಟನೆ ಕೊಟ್ಟ ನಿರ್ದೇಶನಗಳನ್ನ ಪಾಲಿಸಿದ್ದರಿಂದ ಅನೆಲ್‌ಗೆ ಬಂದ ಕಷ್ಟಗಳನ್ನ ಧೈರ್ಯದಿಂದ ನಿಭಾಯಿಸೋಕೆ ಆಯ್ತು. “ಸಂಘಟನೆ ಹೇಳಿದ ತರಾನೇ ಮಾಡಿದ್ರಿಂದ ನನಗೆ ಅಷ್ಟು ಗಾಬರಿ ಆಗಲಿಲ್ಲ. ಏನೂ ಇಲ್ಲದೆ ಖಾಲಿ ಕೈಯಲ್ಲಿ ಕೂತಿದ್ದ ನನಗೆ ಸಹೋದರ ಸಹೋದರಿಯರು ಬೇಕಾಗಿದ್ದನ್ನೆಲ್ಲಾ ಕೊಟ್ರು. ನನ್ನಲ್ಲಿ ಧೈರ್ಯ ತುಂಬಿದರು. ಹೀಗೆ ಯೆಹೋವ ನನಗೆ ತುಂಬ ಸಹಾಯ ಮಾಡಿದ್ರು. ನಾನು ಕೇಳಿದ್ದಕ್ಕಿಂತ ಜಾಸ್ತಿನೇ ಸಹಾಯ ಮಾಡಿದ್ರು. ಈಗ ನನಗೆ ದೇವರ ಮೇಲಿರೋ ನಂಬಿಕೆ ಇನ್ನೂ ಜಾಸ್ತಿ ಆಗಿದೆ” ಅಂತ ಅನೆಲ್‌ ಹೇಳಿದ್ರು.

10. ಚಿಂತೆ ಕಾಡಿದಾಗ ನೀವೇನು ಮಾಡಬೇಕು?

10 ಚಂಡಮಾರುತ ಅಥವಾ ಬೇರೆ ಯಾವುದಾದ್ರೂ ನೈಸರ್ಗಿಕ ವಿಪತ್ತಿನಿಂದ ಕಷ್ಟದಲ್ಲಿದ್ದೀರಾ? ಆರೋಗ್ಯ ಸಮಸ್ಯೆ ಬಂದು ಜೀವನ ತಲೆಕೆಳಗಾಗಿದೆಯಾ? ಹೀಗಾದಾಗ ಚಿಂತೆ ಕಾಡಬಹುದು, ಏನು ಮಾಡಬೇಕು ಅಂತ ಗೊತ್ತಾಗದೇ ಹೋಗಬಹುದು. ಆದ್ರೆ ಯೆಹೋವ ದೇವರ ಮೇಲಿರೋ ನಂಬಿಕೆ ಕಳಕೊಳ್ಳಬೇಡಿ. ಮನಸ್ಸು ಬಿಚ್ಚಿ ಪ್ರಾರ್ಥನೆ ಮಾಡಿ, ಆತನಿಗೆ ಹತ್ರ ಆಗಿ. ಆತನು ಈ ಹಿಂದೆ ನಿಮಗೆ ಹೇಗೆಲ್ಲಾ ಸಹಾಯ ಮಾಡಿದ್ದಾನೆ ಅಂತ ನೆನಪಿಸಿಕೊಂಡು ಈಗಲೂ ಸಹಾಯ ಮಾಡ್ತಾನೆ ಅಂತ ನಂಬಿ. (ಕೀರ್ತ. 77:11, 12) ಯೆಹೋವ ಅವತ್ತೂ ನಿಮ್ಮ ಕೈಬಿಟ್ಟಿಲ್ಲ, ಇವತ್ತೂ ಕೈಬಿಟ್ಟಿಲ್ಲ, ಮುಂದೆನೂ ಕೈಬಿಡಲ್ಲ.

11. ನಾವು ಮೇಲ್ವಿಚಾರಕರ ಮೇಲೆ ಯಾಕೆ ನಂಬಿಕೆ ಬೆಳೆಸಿಕೊಳ್ಳಬೇಕು?

11 ಸಹೋದರಿ ಅನೆಲ್‌ ಹೇಳಿದ ತರ ಸಂಘಟನೆ ಕೊಡೋ ನಿರ್ದೇಶನಗಳನ್ನ ಪಾಲಿಸೋದರಿಂದ ನಮಗೆ ಬರೋ ಸಮಸ್ಯೆಗಳನ್ನ ಎದುರಿಸೋಕೆ ಆಗುತ್ತೆ. ಸಂಘಟನೆಯಲ್ಲಿರೋ ಮೇಲ್ವಿಚಾರಕರನ್ನ ಯೆಹೋವ ದೇವರು ಮತ್ತು ಯೇಸು ನಂಬ್ತಾರೆ. ಅದೇ ತರ ನಾವೂ ನಂಬಬೇಕು. ಕೆಲವೊಮ್ಮೆ ಅವರು ಕೊಡೋ ನಿರ್ದೇಶನಗಳು ನಮಗೆ ಅರ್ಥ ಆಗದೇ ಇದ್ರೂ ಅದನ್ನ ಪಾಲಿಸಿದ್ರೆ ಯೆಹೋವ ದೇವರ ಆಶೀರ್ವಾದ ನಮ್ಮ ಮೇಲೆ ಇರುತ್ತೆ. ಈ ರೀತಿ ನಿರ್ದೇಶನಗಳನ್ನ ಪಾಲಿಸೋದರಿಂದ ನಮ್ಮ ಜೀವ ಉಳಿಯುತ್ತೆ ಅಂತ ಬೈಬಲೂ ಹೇಳುತ್ತೆ, ದೇವರ ಸೇವಕರ ಉದಾಹರಣೆಗಳೂ ತೋರಿಸಿಕೊಡುತ್ತೆ. (ವಿಮೋ. 14:1-4; 2 ಪೂರ್ವ. 20:17) ಇಂಥ ಉದಾಹರಣೆಗಳ ಬಗ್ಗೆ ಯಾವಾಗಲೂ ಯೋಚನೆ ಮಾಡಿ. ಆಗ ಈಗಲೂ ಮುಂದಕ್ಕೂ ಸಂಘಟನೆ ಕೊಡೋ ನಿರ್ದೇಶನಗಳನ್ನ ಪಾಲಿಸಲೇಬೇಕು ಅಂತ ನೀವು ದೃಢ ತೀರ್ಮಾನ ಮಾಡ್ತೀರ. (ಇಬ್ರಿ. 13:17) ಮುಂದೆ ಬರೋ ಮಹಾ ಸಂಕಟವನ್ನ ನೆನಸ್ಕೊಂಡು ನೀವೀಗ ಭಯಪಡಲ್ಲ ಧೈರ್ಯವಾಗಿ ಇರ್ತೀರ.—ಜ್ಞಾನೋ. 3:25.

ಅನ್ಯಾಯ ಆದಾಗ ದೇವರ ಮೇಲೆ ನಂಬಿಕೆ ಇಡಿ

ಪ್ರಾರ್ಥನೆ ಮಾಡ್ತಾ ಇದ್ರೆ ಯೆಹೋವನ ಮೇಲೆ ನಂಬಿಕೆ ಜಾಸ್ತಿ ಆಗುತ್ತೆ (ಪ್ಯಾರ 12 ನೋಡಿ)

12. ಅನ್ಯಾಯ ಸಹಿಸ್ಕೊಳ್ಳೋಕೆ ನಮಗೆ ನಂಬಿಕೆ ಯಾಕೆ ಮುಖ್ಯ? (ಲೂಕ 18:1-8)

12 ಅನ್ಯಾಯ ಆದಾಗ ದೇವರ ಮೇಲೆ ನಂಬಿಕೆ ಇದ್ರೆ ಅದನ್ನ ಸಹಿಸಿಕೊಳ್ಳೋಕೆ ಆಗುತ್ತೆ ಅಂತ ಯೇಸುಗೆ ಗೊತ್ತಿತ್ತು. ಅದಕ್ಕೆ ದೇವರ ಮೇಲೆ ನಂಬಿಕೆ ಬೆಳೆಸಿಕೊಳ್ಳಿ ಅಂತ ಕಲಿಸೋಕೆ ಯೇಸು ಶಿಷ್ಯರಿಗೆ ಒಂದು ಉದಾಹರಣೆ ಹೇಳಿದರು. ಒಬ್ಬ ವಿಧವೆ ನ್ಯಾಯಕೊಡಿಸಿ ಅಂತ ಒಬ್ಬ ನ್ಯಾಯಾಧೀಶನ ಹತ್ರ ಹೋದಳು. ಆದ್ರೆ ಆ ನ್ಯಾಯಾಧೀಶ ತುಂಬ ಕೆಟ್ಟವನು. ಅವಳು ಹೇಳೋದನ್ನ ಕಿವಿಗೇ ಹಾಕೊಳ್ತಾ ಇರಲಿಲ್ಲ. ಆದ್ರೆ ಅವಳು ಈ ತರ ಪದೇಪದೇ ಹೋಗಿ ನ್ಯಾಯ ಕೇಳ್ತಾ ಇದ್ರೆ ಒಂದಲ್ಲಾ ಒಂದು ದಿನ ನ್ಯಾಯಾಧೀಶ ನ್ಯಾಯ ಕೊಡಿಸ್ತಾನೆ ಅಂತ ನಂಬಿಕೆ ಇಟ್ಟು ಅವಳು ಅವನ ಹತ್ರ ಹೋಗ್ತಿದ್ದಳು. ಕೊನೆಗೆ ಆ ನ್ಯಾಯಾಧೀಶ ಬೇರೆ ದಾರಿಯಿಲ್ಲದೆ ಅವಳಿಗೆ ನ್ಯಾಯ ಕೊಡಿಸಿದ. ಇದರಿಂದ ನಮಗೇನು ಪಾಠ? ಯೆಹೋವ ದೇವರು ಒಳ್ಳೇ ನ್ಯಾಯಾಧೀಶ. ಆ ಕೆಟ್ಟ ನ್ಯಾಯಾಧೀಶನೇ ಕೊನೆಗೂ ನ್ಯಾಯ ಕೊಡಿಸಿದ ಅಂದಮೇಲೆ “ದೇವರು ತಾನು ಆರಿಸ್ಕೊಂಡಿರೋ ಜನ ಹಗಲು-ರಾತ್ರಿ ಬೇಡ್ಕೊಂಡ್ರೆ ನ್ಯಾಯ ಕೊಡದೇ ಇರ್ತಾನಾ?” ಅಂತ ಯೇಸು ಹೇಳಿದನು. (ಲೂಕ 18:1-8 ಓದಿ.) ಆಮೇಲೆ ಯೇಸು “ಮನುಷ್ಯಕುಮಾರ ಬರುವಾಗ ಭೂಮಿ ಮೇಲೆ ಇಂಥ ನಂಬಿಕೆಯನ್ನ ನೋಡ್ತಾನಾ?” ಅಂತ ಕೇಳಿದನು. ಯಾಕಂದ್ರೆ ಇವತ್ತು ನಮಗೂ ಕೆಲವೊಮ್ಮೆ ಅನ್ಯಾಯ ಆಗಬಹುದು. ಆಗ ವಿಧವೆ ತರ ನಾವೂ ನಮಗಾದ ಅನ್ಯಾಯನ ಯೆಹೋವ ಇವತ್ತಲ್ಲ ನಾಳೆ ಸರಿಮಾಡ್ತಾನೆ ಅಂತ ನಂಬಿಕೆ ಇಡಬೇಕು. ಅಷ್ಟೇ ಅಲ್ಲ, ಪದೇಪದೇ ಪ್ರಾರ್ಥನೆ ಮಾಡಿ ನ್ಯಾಯಕ್ಕೋಸ್ಕರ ಬೇಡಿಕೊಳ್ಳಬೇಕು. ಕೆಲವೊಮ್ಮೆ ಯೆಹೋವ ನಾವು ನೆನಸದೇ ಇರೋ ರೀತಿಯಲ್ಲಿ ಉತ್ತರ ಕೊಡ್ತಾನೆ.

13. ಪ್ರಾರ್ಥನೆ ಹೇಗೆ ಒಂದು ಕುಟುಂಬವನ್ನ ಕಾಪಾಡ್ತು?

13 ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ದ ಕಾಂಗೋ ಅನ್ನೋ ದೇಶದಲ್ಲಿರೋ ಸಹೋದರಿ ವೆರೋನಿಕಾ ಅವರ ಅನುಭವ ನೋಡಿ. ಅವರ ಗಂಡ ಸತ್ಯದಲ್ಲಿರಲಿಲ್ಲ. ಅವರಿಗೆ 15 ವರ್ಷದ ಮಗಳಿದ್ದಳು. ಅವರಿದ್ದ ಊರಿನ ಮೇಲೆ ಸೈನಿಕರು ದಾಳಿ ಮಾಡಿದರು. ಆಗ ಈ ಮೂರು ಜನನೂ ಊರು ಬಿಟ್ಟು ಓಡಿಹೋಗಬೇಕಾಗಿ ಬಂತು. ಊರು ಬಿಟ್ಟು ಓಡ್ತಿದ್ದಾಗ ಸೈನಿಕರು ಅವರನ್ನ ಅಡ್ಡಹಾಕಿ ಕೊಂದುಬಿಡ್ತೀವಿ ಅಂತ ಬೆದರಿಕೆ ಹಾಕಿದ್ರು. ಆಗ ವೆರೋನಿಕಾ ಅಳೋಕೆ ಶುರು ಮಾಡಿದರು. ಅವರ ಮಗಳು ಅವರನ್ನ ಸಮಾಧಾನ ಮಾಡ್ತಾ ಜೋರಾಗಿ ಪ್ರಾರ್ಥನೆ ಮಾಡಿದಳು. ಪ್ರಾರ್ಥನೆಯಲ್ಲಿ ಯೆಹೋವ ದೇವರ ಹೆಸರನ್ನ ಆಗಾಗ ಹೇಳ್ತಿದ್ದಳು. ಅವಳು ಪ್ರಾರ್ಥನೆ ಮಾಡಿ ಮುಗಿಸಿದಾಗ ಅಲ್ಲಿದ್ದ ಕಮಾಂಡರ್‌ ಬಂದು “ಪುಟ್ಟಿ, ಯಾರು ನಿನಗೆ ಪ್ರಾರ್ಥನೆ ಮಾಡೋಕೆ ಹೇಳಿಕೊಟ್ಟಿದ್ದು” ಅಂತ ಕೇಳಿದ್ರು. ಅದಕ್ಕೆ ಅವಳು “ಮತ್ತಾಯ 6:9-13ರಲ್ಲಿ ಒಂದು ಪ್ರಾರ್ಥನೆ ಇದೆಯಲ್ಲಾ ಅದನ್ನ ಓದಿ ನಮ್ಮ ಅಮ್ಮ ಹೇಳಿಕೊಟ್ಟರು” ಅಂದಳು. ಆಗ ಕಮಾಂಡರ್‌, “ಮಗಳೇ ನಾವು ನಿಮಗೆ ಏನೂ ಮಾಡಲ್ಲ ಬಿಟ್ಟುಬಿಡ್ತೀವಿ. ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಕಾಪಾಡಲಿ” ಅಂತ ಹೇಳಿದರು.

14. (ಎ) ಇನ್ಯಾವ ಸಂದರ್ಭದಲ್ಲಿ ನಾವು ನಂಬಿಕೆಯನ್ನ ಬೆಳೆಸಿಕೊಳ್ಳಬೇಕಾಗುತ್ತೆ? (ಬಿ) ದೇವರ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

14 ಇಂಥ ಉದಾಹರಣೆಗಳನ್ನ ನೋಡಿದಾಗ ಪ್ರಾರ್ಥನೆಗೆ ತುಂಬ ಶಕ್ತಿಯಿದೆ ಅಂತ ಗೊತ್ತಾಗುತ್ತೆ. ಆದ್ರೆ ಕೆಲವೊಮ್ಮೆ ನಾವು ಪ್ರಾರ್ಥನೆ ಮಾಡಿದ ತಕ್ಷಣ ನಮಗೆ ಉತ್ತರ ಸಿಗದೇ ಇರಬಹುದು, ಅದ್ಭುತವಾಗಿ ನಮ್ಮ ಸಮಸ್ಯೆ ಬಗೆಹರಿಯದೇ ಇರಬಹುದು. ಆಗ ನಾವು ದೇವರ ಮೇಲೆ ನಂಬಿಕೆ ಕಳಕೊಳ್ಳಬಾರದು, ಇನ್ನೂ ಜಾಸ್ತಿ ನಂಬಿಕೆ ಬೆಳೆಸಿಕೊಳ್ಳಬೇಕು. ಅದಕ್ಕೆ ನಾವೇನು ಮಾಡಬೇಕು? ಯೇಸು ಉದಾಹರಣೆಯಲ್ಲಿ ಹೇಳಿದ ವಿಧವೆ ತರ ನಾವು ಇರಬೇಕು. ಯೆಹೋವ ದೇವರಿಗೆ ಪ್ರಾರ್ಥನೆ ಮಾಡ್ತಾ ಇರಬೇಕು. ಯೆಹೋವ ನಮ್ಮ ಕೈಬಿಡಲ್ಲ, ಇವತ್ತಲ್ಲ ನಾಳೆ ಒಂದಲ್ಲಾ ಒಂದು ರೀತಿಯಲ್ಲಿ ನಮಗೆ ಉತ್ತರ ಕೊಟ್ಟೇ ಕೊಡ್ತಾನೆ ಅಂತ ಪೂರ್ತಿ ನಂಬಬೇಕು. ಪವಿತ್ರಶಕ್ತಿ ಕೊಡಪ್ಪಾ ಅಂತ ಬೇಡ್ತಾನೇ ಇರಬೇಕು. (ಫಿಲಿ. 4:13) ಆದಷ್ಟು ಬೇಗ ಯೆಹೋವ ನಮ್ಮನ್ನ ತುಂಬ ಆಶೀರ್ವದಿಸ್ತಾನೆ. ಈಗ ಪಡ್ತಿರೋ ಕಷ್ಟ, ನೋವನ್ನೆಲ್ಲ ನಾವು ಮರೆತುಬಿಡ್ತೀವಿ. ಇವತ್ತು ನಮಗೆ ಬರ್ತಿರೋ ಕಷ್ಟಗಳನ್ನ ದೇವರ ಸಹಾಯದಿಂದ ಸಹಿಸಿಕೊಂಡ್ರೆ ಮುಂದೆ ಬರೋ ಕಷ್ಟಗಳನ್ನೂ ನಮ್ಮಿಂದ ಸಹಿಸಿಕೊಳ್ಳೋಕೆ ಆಗುತ್ತೆ.—1 ಪೇತ್ರ 1:6, 7.

ಬೆಟ್ಟದಂಥ ಕಷ್ಟಗಳನ್ನ ತಾಳಿಕೊಳ್ಳೋಕೆ ನಂಬಿಕೆ ಬೇಕು

15. ಮತ್ತಾಯ 17:19, 20ರ ಪ್ರಕಾರ ಶಿಷ್ಯರಿಗೆ ಏನಾಯ್ತು?

15 ಮತ್ತಾಯ 17:19, 20 ಓದಿ. ಯೇಸುವಿನ ಶಿಷ್ಯರು ತುಂಬ ಸಲ ಕೆಟ್ಟ ದೇವದೂತರನ್ನ ಬಿಡಿಸಿದ್ರು. ಆದ್ರೆ ಒಂದು ಸಲ ಬಿಡಿಸೋಕೆ ಆಗಲಿಲ್ಲ. ಯಾಕೆ? ಯಾಕಂದ್ರೆ ಶಿಷ್ಯರಿಗೆ ನಂಬಿಕೆ ಕಮ್ಮಿ ಇತ್ತು ಅಂತ ಯೇಸು ಹೇಳಿದನು. ಅಷ್ಟೇ ಅಲ್ಲ, ಯೆಹೋವ ದೇವರ ಮೇಲೆ ಅವರಿಗೆ ಸಾಕಷ್ಟು ನಂಬಿಕೆ ಇದ್ರೆ ಬೆಟ್ಟದಂಥ ಕಷ್ಟಗಳು ಬಂದರೂ ಅದನ್ನ ಎದುರಿಸೋಕೆ ಆಗುತ್ತೆ ಅಂತಾನೂ ಯೇಸು ಹೇಳಿದನು. ಇವತ್ತು ನಮಗೂ ಬೆಟ್ಟದಂಥ ಕಷ್ಟಗಳು ಬರಬಹುದು. ಆಗ ನಾವೇನು ಮಾಡಬೇಕು?

ನಂಬಿಕೆ ಇದ್ರೆ ಎಷ್ಟೇ ಕಷ್ಟ-ದುಃಖ ಇದ್ರೂ ಯೆಹೋವನ ಸೇವೆ ಮಾಡ್ತೀವಿ (ಪ್ಯಾರ 16 ನೋಡಿ)

16. ಗೆಡಿಯವರಿಗೆ ನೋವನ್ನ ಸಹಿಸಿಕೊಳ್ಳೋಕೆ ಯಾವುದು ಸಹಾಯ ಮಾಡ್ತು?

16 ಗ್ವಾಟೆಮಾಲದಲ್ಲಿ ಇರೋ ಸಹೋದರಿ ಗೆಡಿ ಅವರ ಅನುಭವ ನೋಡಿ. ಅವರು ಒಂದಿನ ಕೂಟ ಮುಗಿಸಿ ಮನೆಗೆ ಬರುತ್ತಾ ಇದ್ರು. ಆಗ ರೌಡಿಗಳು ಬಂದು ಅವರ ಗಂಡನನ್ನ ಕೊಂದುಬಿಟ್ರು. ಈ ಕಷ್ಟವನ್ನ ಆ ಸಹೋದರಿ ಹೇಗೆ ಸಹಿಸಿಕೊಂಡ್ರು? ಸಹೋದರಿ ಗೆಡಿ ಹೇಳೋದು, “ನಾನು ಪ್ರಾರ್ಥನೆ ಮಾಡಿ ಭಾರನೆಲ್ಲ ಯೆಹೋವನ ಮೇಲೆ ಹಾಕ್ತಿದ್ದೆ. ಆಗ ಮನಸ್ಸಿಗೆ ನೆಮ್ಮದಿ ಸಿಗ್ತಿತ್ತು. ನಮ್ಮ ಕುಟುಂಬದವರು, ಸಭೆಯಲ್ಲಿರೋ ಸ್ನೇಹಿತರು ನನಗೆ ಬೇಕಾದ ಎಲ್ಲಾ ಸಹಾಯ ಮಾಡಿದ್ರು. ಪ್ರತಿದಿನ ನಾನು ದೇವರ ಸೇವೆಗೆ ಗಮನ ಕೊಡ್ತೀನಿ. ನಾಳೆ ಬಗ್ಗೆ ಯೋಚನೆ ಮಾಡೋಕೆ ಹೋಗಲ್ಲ. ಇದರಿಂದ ನನ್ನ ಚಿಂತೆ ಕಮ್ಮಿ ಆಗಿದೆ. ಯೆಹೋವ ನನ್ನನ್ನ ಚೆನ್ನಾಗಿ ನೋಡಿಕೊಂಡ್ರು. ಈ ಕಷ್ಟನ ಸಹಿಸಿಕೊಳ್ಳೋಕೆ ನನಗೆ ಯೆಹೋವ ಸಹಾಯ ಮಾಡಿದ್ದಾರೆ. ಮುಂದೆ ಬರೋ ಕಷ್ಟಗಳನ್ನ ಸಹಿಸಿಕೊಳ್ಳೋಕೆ ಯೆಹೋವ, ಯೇಸು ನನಗೆ ಸಹಾಯ ಮಾಡೇ ಮಾಡ್ತಾರೆ, ಸಂಘಟನೆನೂ ಸಹಾಯ ಮಾಡುತ್ತೆ ಅಂತ ನಂಬಿದ್ದೀನಿ.”

17. ಬೆಟ್ಟದಂಥ ಸಮಸ್ಯೆಗಳು ಬರುವಾಗ ನಾವೇನು ಮಾಡಬೇಕು?

17 ಸಹೋದರಿ ಗೆಡಿಯವರ ತರ ನೀವೂ ಯಾರನ್ನಾದರೂ ಕಳಕೊಂಡು ದುಃಖದಲ್ಲಿ ಇದ್ದೀರಾ? ಸತ್ತು ಪುನಃ ಜೀವ ಪಡಕೊಂಡಿರುವವರ ಉದಾಹರಣೆಗಳು ಬೈಬಲಲ್ಲಿದೆ. ಅದನ್ನ ಓದಿ, ಪುನಃ ಜೀವ ಕೊಡೋಕೆ ಶಕ್ತಿ ಇರೋ ಯೆಹೋವ ದೇವರ ಮೇಲೆ ನಿಮ್ಮ ನಂಬಿಕೆ ಜಾಸ್ತಿ ಮಾಡಿಕೊಳ್ಳಿ. ಮನೇಲಿ ಯಾರಿಗಾದ್ರೂ ಬಹಿಷ್ಕಾರ ಆಗಿರೋದರಿಂದ ಬೇಜಾರಲ್ಲಿ ಇದ್ದೀರಾ? ಹಾಗಾದ್ರೆ ವೈಯಕ್ತಿಕ ಅಧ್ಯಯನ ಮಾಡಿ. ಆಗ ಯೆಹೋವ ದೇವರು ತಗೊಳ್ಳೋ ಶಿಸ್ತು ಕ್ರಮನೇ ಸರಿಯಾಗಿದೆ ಅಂತ ನಿಮಗೆ ನಂಬಿಕೆ ಬರುತ್ತೆ. ನಿಮಗೆ ಏನೇ ಕಷ್ಟ ಬರಲಿ ಅದನ್ನ ನಂಬಿಕೆ ಬೆಳೆಸಿಕೊಳ್ಳೋಕೆ ಒಂದು ಅವಕಾಶವಾಗಿ ನೋಡಿ. ನಿಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ಯೆಹೋವನ ಹತ್ರ ಹೇಳಿಕೊಳ್ಳಿ. ಒಂಟಿಯಾಗಿ ಇರಬೇಡಿ, ಸಹೋದರ-ಸಹೋದರಿಯರ ಜೊತೆ ಆದಷ್ಟು ಬೆರೆಯಿರಿ. (ಜ್ಞಾನೋ. 18:1) ಕೆಲವು ವಿಷಯಗಳನ್ನ ಮಾಡುವಾಗ ನೀವು ಕಳಕೊಂಡಿರುವವರು ನಿಮ್ಮ ನೆನಪಿಗೆ ಬಂದುಬಿಡಬಹುದು. ಹಾಗಂತ ಆ ವಿಷಯಗಳಿಂದ ದೂರ ಇದ್ದುಬಿಡಬೇಡಿ. (ಕೀರ್ತ. 126:5, 6) ಕೂಟಕ್ಕೆ ಹೋಗೋದನ್ನ, ಸೇವೆಗೆ ಹೋಗೋದನ್ನ, ಬೈಬಲ್‌ ಓದೋದನ್ನ ತಪ್ಪಿಸಬೇಡಿ. ದೇವರು ಮುಂದೆ ನಿಮಗೆ ಕೊಡೋ ಆಶೀರ್ವಾದಗಳ ಬಗ್ಗೆ ಯೋಚನೆ ಮಾಡ್ತಾ ಇರಿ. ಈಗ ಯೆಹೋವ ನಿಮಗೆ ಹೇಗೆಲ್ಲಾ ಸಹಾಯ ಮಾಡ್ತಾ ಇದ್ದಾನೆ ಅನ್ನೋದನ್ನೂ ಯೋಚನೆ ಮಾಡಿ. ಆಗ ಆತನ ಮೇಲಿರೋ ನಿಮ್ಮ ನಂಬಿಕೆ ಇನ್ನೂ ಜಾಸ್ತಿ ಆಗುತ್ತೆ.

“ಇನ್ನೂ ಹೆಚ್ಚು ನಂಬಿಕೆ ಕೊಡು”

18. ನಿಮ್ಮ ನಂಬಿಕೆ ಕಮ್ಮಿ ಆಗಿದೆ ಅಂತ ಗೊತ್ತಾದ್ರೆ ನೀವೇನು ಮಾಡಬೇಕು?

18 ಒಂದು ಕಷ್ಟ ಬಂದಾಗಲೇ ನಮಗೆ ದೇವರ ಮೇಲೆ ಎಷ್ಟು ನಂಬಿಕೆ ಇದೆ ಅಂತ ಗೊತ್ತಾಗುತ್ತೆ. ಒಂದುವೇಳೆ ನಮಗೆ ನಂಬಿಕೆ ಕಮ್ಮಿ ಇದೆ ಅಂತ ಗೊತ್ತಾದ್ರೆ ಬೇಜಾರು ಮಾಡಿಕೊಳ್ಳಬೇಡಿ. ಯೆಹೋವ ದೇವರ ಮೇಲೆ ಇನ್ನೂ ನಂಬಿಕೆ ಬೆಳೆಸಿಕೊಳ್ಳೋಕೆ ಪ್ರಯತ್ನಪಡಿ. “ನಮಗೆ ಇನ್ನೂ ಹೆಚ್ಚು ನಂಬಿಕೆ ಕೊಡು” ಅಂತ ಅಪೊಸ್ತಲರು ಬೇಡಿಕೊಂಡ ಹಾಗೆ ನೀವೂ ಬೇಡಿಕೊಳ್ಳಿ. (ಲೂಕ 17:5) ಈ ಲೇಖನದಲ್ಲಿ ಬಂದ ಅನುಭವಗಳ ಬಗ್ಗೆ ಯೋಚನೆ ಮಾಡಿ. ಮಿಗೇಲ್‌ ಮತ್ತು ಯೂರೈ ತರ ಯೆಹೋವ ದೇವರು ಸಹಾಯ ಮಾಡಿದ ಕ್ಷಣಗಳನ್ನೆಲ್ಲ ನೆನಪಿಸಿಕೊಳ್ತಾ ಇರಿ. ವೆರೋನಿಕಾ ಅವರ ಮಗಳು ಮತ್ತು ಅನೆಲ್‌ ತರ ಯೆಹೋವ ದೇವರಿಗೆ ಯಾವಾಗಲೂ ಪ್ರಾರ್ಥನೆ ಮಾಡಿ. ಸಹೋದರಿ ಗೆಡಿ ತರ ಸಭೆಯವರು, ಕುಟುಂಬದವರು ಸಹಾಯ ಮಾಡಿದಾಗ ಯೆಹೋವ ದೇವರೇ ಸಹಾಯ ಮಾಡಿದ್ದು ಅಂತ ನಂಬಿ. ಈಗ ನಿಮಗೆ ಬರೋ ಕಷ್ಟಗಳನ್ನ ದೇವರ ಸಹಾಯದಿಂದ ಎದುರಿಸಿ. ಆಗ ಮುಂದೆ ಏನೇ ಕಷ್ಟ ಬಂದ್ರೂ ದೇವರು ಸಹಾಯ ಮಾಡೇ ಮಾಡ್ತಾನೆ ಅನ್ನೋ ನಂಬಿಕೆ ಇನ್ನೂ ಜಾಸ್ತಿ ಆಗುತ್ತೆ.

19. ಯೇಸು ತರ ನಮಗೆ ಯಾವ ನಂಬಿಕೆ ಇರಬೇಕು?

19 ತನ್ನ ಶಿಷ್ಯರು ನಾಲ್ಕು ಸಂದರ್ಭಗಳಲ್ಲಿ ಯೆಹೋವ ದೇವರ ಮೇಲಿರೋ ನಂಬಿಕೆಯನ್ನ ಜಾಸ್ತಿ ಮಾಡಿಕೊಳ್ಳಬೇಕು ಅಂತ ಯೇಸು ಹೇಳಿಕೊಟ್ಟನು. ಅವರು ನಂಬಿಕೆ ಬೆಳೆಸಿಕೊಂಡ್ರೆ ಮುಂದೆ ಬರೋ ಕಷ್ಟಗಳನ್ನ ಖಂಡಿತ ಯೆಹೋವ ದೇವರ ಸಹಾಯದಿಂದ ಸಹಿಸಿಕೊಳ್ತಾರೆ ಅಂತ ಯೇಸುಗೆ ನಂಬಿಕೆ ಇತ್ತು. (ಯೋಹಾ. 14:1; 16:33) ಅದೇ ತರ ದೊಡ್ಡ ಗುಂಪು ದೇವರ ಮೇಲೆ ನಂಬಿಕೆ ಬೆಳೆಸಿಕೊಂಡ್ರೆ ಮುಂದೆ ಮಹಾ ಸಂಕಟವನ್ನ ಪಾರಾಗ್ತಾರೆ ಅಂತಾನೂ ಯೇಸುಗೆ ನಂಬಿಕೆ ಇದೆ. (ಪ್ರಕ. 7:9, 14) ಪಾರಾಗುವ ಆ ಗುಂಪಲ್ಲಿ ನೀವೂ ಇರುತ್ತೀರಾ? ಈಗ ಕಷ್ಟ ಬಂದಾಗೆಲ್ಲ ನೀವು ದೇವರ ಮೇಲೆ ನಂಬಿಕೆ ಬೆಳೆಸಿಕೊಂಡ್ರೆ ದೇವರ ಸಹಾಯದಿಂದ ಮಹಾ ಸಂಕಟವನ್ನ ಖಂಡಿತ ಪಾರಾಗುತ್ತೀರಿ!—ಇಬ್ರಿ. 10:39.

ಗೀತೆ 81 “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”

^ ಪ್ಯಾರ. 5 ನಮ್ಮೆಲ್ಲರಿಗೂ ಈ ಕೆಟ್ಟ ಲೋಕ ಬೇಗ ನಾಶ ಆಗಬೇಕು ಅಂತ ಆಸೆ ಇದೆ. ಆದ್ರೆ ಅಲ್ಲಿವರೆಗೆ ನಮ್ಮ ನಂಬಿಕೆ ಗಟ್ಟಿಯಾಗಿರುತ್ತಾ, ಕಷ್ಟಗಳನ್ನ ಎದುರಿಸೋಕೆ ಆಗುತ್ತಾ ಅಂತ ಕೆಲವರಿಗೆ ಅನಿಸಬಹುದು. ನಾವು ಈ ಲೇಖನದಲ್ಲಿ ಕೆಲವು ಸಹೋದರ ಸಹೋದರಿಯರ ಉದಾಹರಣೆ ನೋಡೋಣ. ದೇವರ ಮೇಲೆ ನಮಗಿರೋ ನಂಬಿಕೆನ ಹೇಗೆ ಗಟ್ಟಿಮಾಡಿಕೊಳ್ಳಬಹುದು ಅಂತ ಅವರಿಂದ ಕಲಿಯೋಣ.