ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 44

ಯೆಹೋವ ಶಾಶ್ವತ ಪ್ರೀತಿ ತೋರಿಸೋ ದೇವರು

ಯೆಹೋವ ಶಾಶ್ವತ ಪ್ರೀತಿ ತೋರಿಸೋ ದೇವರು

“[ಯೆಹೋವನ] ಪ್ರೀತಿ ಶಾಶ್ವತ.”—ಕೀರ್ತ. 136:1.

ಗೀತೆ 18 ದೇವರ ನಿಷ್ಠಾ ಪ್ರೀತಿ

ಕಿರುನೋಟ *

1. ಯೆಹೋವ ದೇವರ ಆಸೆ ಏನು?

ಯೆಹೋವ ದೇವರಿಗೆ ಶಾಶ್ವತ ಪ್ರೀತಿ ತೋರಿಸೋಕೆ ತುಂಬ ಇಷ್ಟ. (ಹೋಶೇ. 6:6) ಆತನ ಸೇವಕರಾದ ನಾವೂ ಆ ಪ್ರೀತಿ ತೋರಿಸಬೇಕು ಅನ್ನೋದೇ ಆತನ ಆಸೆ. ಅದಕ್ಕೆ “ಶಾಶ್ವತ ಪ್ರೀತಿಯನ್ನ ಪ್ರೀತಿಸಬೇಕು” ಅಂತ ಯೆಹೋವ ದೇವರು ಪ್ರವಾದಿ ಮೀಕನಿಂದ ಹೇಳಿಸಿದನು. (ಮೀಕ 6:8, ಪಾದಟಿಪ್ಪಣಿ) ಶಾಶ್ವತ ಪ್ರೀತಿ ಅಂದ್ರೇನು ಅಂತ ನಾವೀಗ ತಿಳಿದುಕೊಳ್ಳೋಣ.

2. ಶಾಶ್ವತ ಪ್ರೀತಿ ಅಂದ್ರೇನು?

2 ಶಾಶ್ವತ ಪ್ರೀತಿ ಅಂದ್ರೇನು? ಈ ಪದ ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರದಲ್ಲಿ ಸುಮಾರು 230 ಬಾರಿ ಇದೆ. ಬೈಬಲಿನ ಪದವಿವರಣೆಯಲ್ಲಿ ಈ ಪದಕ್ಕೆ ಏನರ್ಥ ಇದೆ ಅಂದ್ರೆ “ಬದ್ಧತೆ, ಸಮಗ್ರತೆ, ನಿಷ್ಠೆ, ಆಪ್ತ ಬಾಂಧವ್ಯದಿಂದ ಹುಟ್ಟೋ ಪ್ರೀತಿಯನ್ನ ಸೂಚಿಸೋಕೆ ಇದನ್ನ ಬಳಸಲಾಗಿದೆ. ಇದು ಸಾಮಾನ್ಯವಾಗಿ ಮನುಷ್ಯರ ಮೇಲೆ ದೇವರಿಗಿರೋ ಪ್ರೀತಿಯನ್ನ ಸೂಚಿಸುತ್ತೆ. ಮನುಷ್ಯರ ಮಧ್ಯ ಕೂಡ ಈ ಪ್ರೀತಿ ಇರುತ್ತೆ.” ಶಾಶ್ವತ ಪ್ರೀತಿ ತೋರಿಸುವುದರಲ್ಲಿ ಯೆಹೋವ ದೇವರೇ ಎತ್ತಿದ ಕೈ. ಈ ಲೇಖನದಲ್ಲಿ ಯೆಹೋವ ದೇವರು ನಮಗೆ ಹೇಗೆ ಶಾಶ್ವತ ಪ್ರೀತಿ ತೋರಿಸ್ತಾನೆ ಅಂತ ನೋಡೋಣ. ಮುಂದಿನ ಲೇಖನದಲ್ಲಿ ಯೆಹೋವ ದೇವರ ತರ ನಾವೂ ಹೇಗೆ ಒಬ್ಬರಿಗೊಬ್ಬರು ಈ ಶಾಶ್ವತ ಪ್ರೀತಿ ತೋರಿಸಬಹುದು ಅನ್ನೋದನ್ನ ನೋಡೋಣ.

ಯೆಹೋವ “ಧಾರಾಳವಾಗಿ ಶಾಶ್ವತ ಪ್ರೀತಿ” ತೋರಿಸೋ ದೇವರು

3. ತನ್ನ ಬಗ್ಗೆ ಯೆಹೋವ ದೇವರು ಮೋಶೆಗೆ ಏನು ಹೇಳಿದನು?

3 ಯೆಹೋವ ದೇವರು ಇಸ್ರಾಯೇಲ್ಯರನ್ನ ಈಜಿಪ್ಟ್‌ನಿಂದ ಬಿಡಿಸಿಕೊಂಡು ಬಂದ ಸ್ವಲ್ಪದರಲ್ಲೇ ತನ್ನ ಹೆಸರು ಮತ್ತು ಗುಣಗಳ ಬಗ್ಗೆ ಮೋಶೆಗೆ ಹೇಳಿದ್ದು: “ಯೆಹೋವ, ಯೆಹೋವ, ಕರುಣೆ ಮತ್ತು ಕನಿಕರ ಇರೋ ದೇವರು, ತಟ್ಟಂತ ಕೋಪ ಮಾಡ್ಕೊಳ್ಳಲ್ಲ, ಧಾರಾಳವಾಗಿ ಶಾಶ್ವತ ಪ್ರೀತಿ ತೋರಿಸ್ತಾನೆ, ಯಾವಾಗ್ಲೂ ಸತ್ಯವಂತ ಆಗಿರ್ತಾನೆ. ಶಾಶ್ವತ ಪ್ರೀತಿನ ಸಾವಿರಾರು ಪೀಳಿಗೆ ಜನ್ರಿಗೆ ತೋರಿಸ್ತಾನೆ, ತಪ್ಪು ಅಪರಾಧ ಪಾಪಗಳನ್ನ ಕ್ಷಮಿಸ್ತಾನೆ.” (ವಿಮೋ. 34:6, 7) ಯೆಹೋವ ದೇವರು ಈ ಮಾತುಗಳಿಂದ ತನ್ನ ಶಾಶ್ವತ ಪ್ರೀತಿಯ ಬಗ್ಗೆ ಇರೋ ವಿಶೇಷತೆಯನ್ನ ಮೋಶೆಗೆ ಹೇಳ್ತಿದ್ದಾನೆ. ಅದೇನು?

4-5. (ಎ) ಯೆಹೋವ ಶಾಶ್ವತ ಪ್ರೀತಿಯನ್ನ ಹೇಗೆ ತೋರಿಸ್ತಾನೆ? (ಬಿ) ಯಾವ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುತ್ತೀವಿ?

4 ಯೆಹೋವ ದೇವರು ಮೋಶೆ ಹತ್ರ ಬರೀ ‘ಶಾಶ್ವತ ಪ್ರೀತಿ ತೋರಿಸ್ತೀನಿ’ ಅಂತ ಹೇಳಲಿಲ್ಲ. ಬದಲಿಗೆ ‘ಧಾರಾಳವಾಗಿ ಶಾಶ್ವತ ಪ್ರೀತಿ ತೋರಿಸ್ತೀನಿ’ ಅಂತ ಹೇಳಿದ್ದಾನೆ. ಈ ತರ ಯೆಹೋವ ದೇವರು “ಧಾರಾಳವಾಗಿ,” “ಅಪಾರವಾಗಿ” ಶಾಶ್ವತ ಪ್ರೀತಿ ತೋರಿಸ್ತಾನೆ ಅನ್ನೋ ಮಾತು ಬೈಬಲಲ್ಲಿ ಇನ್ನೂ ತುಂಬ ಸಲ ಇದೆ. (ಅರ. 14:18; ನೆಹೆ. 9:17; ಕೀರ್ತ. 86:15; 103:8; ಯೋವೇ. 2:13; ಯೋನ 4:2) ಈ ಎಲ್ಲ ವಚನಗಳು ಯೆಹೋವ ದೇವರು ತೋರಿಸೋ ಶಾಶ್ವತ ಪ್ರೀತಿ ಬಗ್ಗೆ ಹೇಳ್ತಿದೆ. ಇದ್ರಿಂದ ಯೆಹೋವ ದೇವರು ಈ ಗುಣಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾನೆ ಅಂತ ನಮಗೆ ಗೊತ್ತಾಗುತ್ತೆ. * ಅದಕ್ಕೆ ರಾಜ ದಾವೀದ “ಯೆಹೋವನೇ, ನಿನ್ನ ಶಾಶ್ವತ ಪ್ರೀತಿ ಆಕಾಶವನ್ನ . . . ಮುಟ್ಟುತ್ತೆ. ದೇವರೇ, ನಿನ್ನ ಶಾಶ್ವತ ಪ್ರೀತಿ ಎಷ್ಟೋ ಅಮೂಲ್ಯ!” ಅಂತ ಹೇಳಿದ. (ಕೀರ್ತ. 36:5, 7) ದಾವೀದನ ತರ ನಾವೂ ಯೆಹೋವ ದೇವರ ಶಾಶ್ವತ ಪ್ರೀತಿಯನ್ನು ಮೆಚ್ಚಿಕೊಳ್ಳಬೇಕು.

5 ಶಾಶ್ವತ ಪ್ರೀತಿ ಬಗ್ಗೆ ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ಎರಡು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ. ಯೆಹೋವ ಯಾರಿಗೆ ಶಾಶ್ವತ ಪ್ರೀತಿಯನ್ನ ತೋರಿಸ್ತಾನೆ? ಆ ಶಾಶ್ವತ ಪ್ರೀತಿಯಿಂದ ನಮಗೆ ಹೇಗೆಲ್ಲಾ ಒಳ್ಳೇದಾಗಿದೆ?

ಯೆಹೋವ ದೇವರು ಯಾರಿಗೆ ಶಾಶ್ವತ ಪ್ರೀತಿ ತೋರಿಸ್ತಾನೆ?

6. ಯೆಹೋವ ಯಾರಿಗೆ ಶಾಶ್ವತ ಪ್ರೀತಿ ತೋರಿಸ್ತಾನೆ?

6 ಯೆಹೋವ ದೇವರು ತನ್ನ ಶಾಶ್ವತ ಪ್ರೀತಿಯನ್ನ ವಸ್ತುಗಳಿಗಲ್ಲ, ಮನುಷ್ಯರಿಗೆ ಮಾತ್ರ ತೋರಿಸ್ತಾನೆ. ಆದ್ರೆ ಆತನು ಎಲ್ಲರಿಗೂ ಶಾಶ್ವತ ಪ್ರೀತಿ ತೋರಿಸಲ್ಲ. ಯಾರಿಗೆ ತನ್ನ ಜೊತೆ ಒಳ್ಳೆ ಸ್ನೇಹ ಸಂಬಂಧ ಇದೆಯೋ ಅವರಿಗೆ ಮಾತ್ರ ತೋರಿಸ್ತಾನೆ. ದೇವರು ತನ್ನ ಸ್ನೇಹಿತರಿಗೆ ‘ಒಳ್ಳೇ ಭವಿಷ್ಯ ಕೊಡ್ತೀನಿ’ ಅಂತ ಮಾತುಕೊಟ್ಟಿದ್ದಾನೆ. ಅದನ್ನ ಖಂಡಿತ ನೆರವೇರಿಸುತ್ತಾನೆ. ಕೊಟ್ಟ ಮಾತಿಗೆ ದೇವರು ನಿಯತ್ತಾಗಿ ನಡೆದುಕೊಳ್ಳುತ್ತಾನೆ. ತನ್ನ ಸ್ನೇಹಿತರನ್ನ ಯಾವಾಗಲೂ ಪ್ರೀತಿಸ್ತಾನೆ.

ಯೆಹೋವ ಎಲ್ಲರಿಗೂ, ಆತನನ್ನ ಆರಾಧಿಸದೇ ಇರುವವರಿಗೂ ಒಳ್ಳೆದನ್ನೇ ಮಾಡ್ತಾರೆ (ಪ್ಯಾರ 7 ನೋಡಿ) *

7. ಯೆಹೋವ ದೇವರು ಎಲ್ಲರಿಗೂ ಹೇಗೆ ಪ್ರೀತಿ ತೋರಿಸಿದ್ದಾನೆ?

7 ಯೆಹೋವ ದೇವರು ಎಲ್ಲಾ ಮನುಷ್ಯರಿಗೂ ಪ್ರೀತಿ ತೋರಿಸಿದ್ದಾನೆ. ಯೇಸು ನಿಕೊದೇಮ ಅನ್ನೋ ವ್ಯಕ್ತಿಗೆ ಹೇಳಿದ್ದು: “ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ. ಅದಕ್ಕೇ ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಕೊಟ್ಟನು. ಯಾಕಂದ್ರೆ ಆತನ ಮೇಲೆ ನಂಬಿಕೆ ಇಡೋ ಒಬ್ಬನೂ ನಾಶವಾಗದೆ ಶಾಶ್ವತ ಜೀವ ಪಡ್ಕೊಳ್ಳಬೇಕು ಅನ್ನೋದೇ ದೇವರ ಆಸೆ.”—ಯೋಹಾ. 3:1, 16; ಮತ್ತಾ. 5:44, 45.

ತನ್ನ ಬಗ್ಗೆ ತಿಳಿದುಕೊಳ್ಳೋ, ತನಗೆ ಭಯ ಪಡೋ, ತನ್ನನ್ನ ಪ್ರೀತಿಸೋ, ತನ್ನ ಆಜ್ಞೆಗಳನ್ನ ಪಾಲಿಸೋ ಜನರಿಗೆ ಯೆಹೋವ ಶಾಶ್ವತ ಪ್ರೀತಿ ತೋರಿಸ್ತಾನೆ ಅಂತ ರಾಜ ದಾವೀದ ಮತ್ತು ಪ್ರವಾದಿ ದಾನಿಯೇಲ ಹೇಳಿದ್ರು (ಪ್ಯಾರ 8-9 ನೋಡಿ)

8-9. (ಎ) ಯೆಹೋವ ದೇವರು ತನ್ನ ಸೇವಕರಿಗೆ ಯಾಕೆ ಶಾಶ್ವತ ಪ್ರೀತಿ ತೋರಿಸ್ತಾನೆ? (ಬಿ) ನಾವಿನ್ನೂ ಏನು ಕಲಿತೀವಿ?

8 ಯಾರಿಗೆ ತನ್ನ ಜೊತೆ ಒಳ್ಳೆ ಸ್ನೇಹ ಸಂಬಂಧ ಇದೆಯೋ ಅವರಿಗೆ ಮಾತ್ರ ಯೆಹೋವ ಶಾಶ್ವತ ಪ್ರೀತಿ ತೋರಿಸ್ತಾನೆ ಅಂತ ನೋಡಿದ್ವಿ. ಇದು ರಾಜ ದಾವೀದ ಮತ್ತು ಪ್ರವಾದಿ ದಾನಿಯೇಲ ಹೇಳಿದ ಮಾತಿಂದ ಗೊತ್ತಾಗುತ್ತೆ. ಉದಾಹರಣೆಗೆ ದಾವೀದ ಹೇಳಿದ್ದು: “ನಿನ್ನ ಬಗ್ಗೆ ತಿಳ್ಕೊಂಡಿರೋರಿಗೆ ನಿನ್ನ ಶಾಶ್ವತ ಪ್ರೀತಿಯನ್ನ . . . ತೋರಿಸ್ತಾ ಇರು.” “ಯಾರು ಯೆಹೋವನಿಗೆ ಭಯಪಡ್ತಾರೋ ಅವ್ರ ಕಡೆ ಆತನ ಪ್ರೀತಿ ಶಾಶ್ವತವಾಗಿ ಇರುತ್ತೆ.” ದಾನಿಯೇಲ ಹೇಳಿದ್ದು: ‘ಸತ್ಯ ದೇವರಾದ ಯೆಹೋವನೇ, ನಿನ್ನನ್ನ ಪ್ರೀತಿಸುವವರಿಗೆ, ನಿನ್ನ ಆಜ್ಞೆಗಳನ್ನ ಪಾಲಿಸುವವರಿಗೆ ನೀನು ಶಾಶ್ವತ ಪ್ರೀತಿ ತೋರಿಸ್ತೀಯ.’ (ಕೀರ್ತ. 36:10; 103:17; ದಾನಿ. 9:4) ಈ ವಚನದಿಂದ ನಮಗೆ ಏನು ಗೊತ್ತಾಗುತ್ತೆ? ಯೆಹೋವ ದೇವರು ಶಾಶ್ವತ ಪ್ರೀತಿಯನ್ನ ತೋರಿಸೋದು ತನ್ನ ಆರಾಧಕರಿಗೆ ಮಾತ್ರ. ಯಾಕಂದ್ರೆ ಅವರು ಆತನ ಬಗ್ಗೆ ತಿಳಿದುಕೊಂಡಿದ್ದಾರೆ, ಆತನಿಗೆ ಭಯಪಡ್ತಾರೆ, ಆತನನ್ನ ಪ್ರೀತಿಸ್ತಾರೆ ಮತ್ತು ಆತನ ಆಜ್ಞೆಗಳನ್ನ ಪಾಲಿಸ್ತಾರೆ.

9 ಯೆಹೋವ ದೇವರು, ನಾವು ಆತನ ಆರಾಧಕರಾಗೋ ಮುಂಚೆನೂ ನಮಗೆ ಪ್ರೀತಿ ತೋರಿಸುತ್ತಿದ್ದನು. (ಕೀರ್ತ. 104:14) ಈಗ ಆತನ ಆರಾಧಕರಾದ ಮೇಲೆ ನಮಗೆ ಶಾಶ್ವತ ಪ್ರೀತಿ ತೋರಿಸ್ತಿದ್ದಾನೆ. ಅಷ್ಟೇ ಅಲ್ಲ, ‘ನಿಮ್ಮ ಮೇಲೆ ನನಗಿರೋ ಶಾಶ್ವತ ಪ್ರೀತಿ ಅಳಿದುಹೋಗಲ್ಲ’ ಅಂತ ನಮಗೆ ಮಾತುಕೊಟ್ಟಿದ್ದಾನೆ. (ಯೆಶಾ. 54:10) ಆ ಪ್ರೀತಿನ ದಾವೀದ ಸವಿದುನೋಡಿ ಹೀಗೆ ಹೇಳಿದ: “ನಿಷ್ಠಾವಂತರನ್ನ ಯೆಹೋವ ವಿಶೇಷವಾಗಿ ನೋಡ್ಕೊಳ್ತಾನೆ.” (ಕೀರ್ತ. 4:3) ಯೆಹೋವ ದೇವರು ನಮಗೆ ತೋರಿಸ್ತಿರೋ ಆ ವಿಶೇಷ ಪ್ರೀತಿಗಾಗಿ ನಾವೇನು ಮಾಡಬೇಕು? ಕೀರ್ತನೆಗಾರ ಹೇಳಿದ್ದು: “ವಿವೇಕಿಗಳೆಲ್ಲ ಈ ವಿಷ್ಯಗಳನ್ನ ಗಮನಿಸ್ತಾರೆ, ಯೆಹೋವ ಶಾಶ್ವತ ಪ್ರೀತಿಯಿಂದ ಮಾಡಿದ್ದನ್ನೆಲ್ಲ ಸೂಕ್ಷ್ಮವಾಗಿ ನೋಡ್ತಾರೆ.” (ಕೀರ್ತ. 107:43) ಹಾಗಾಗಿ ಯಾವ ಮೂರು ವಿಧಗಳಲ್ಲಿ ಯೆಹೋವ ನಮಗೆ ಶಾಶ್ವತ ಪ್ರೀತಿ ತೋರಿಸಿದ್ದಾನೆ ಮತ್ತು ಅದರಿಂದ ನಮಗೆ ಹೇಗೆಲ್ಲಾ ಒಳ್ಳೇದಾಗಿದೆ ಅಂತ ಈಗ ನೋಡೋಣ.

ಯೆಹೋವ ತೋರಿಸೋ ಶಾಶ್ವತ ಪ್ರೀತಿಯಿಂದ ನಮಗೆ ಹೇಗೆಲ್ಲಾ ಒಳ್ಳೇದಾಗಿದೆ?

ಯೆಹೋವ ತನ್ನ ಆರಾಧಕರನ್ನ ವಿಶೇಷವಾಗಿ ಆಶೀರ್ವದಿಸ್ತಾನೆ (ಪ್ಯಾರ 10-16 ನೋಡಿ) *

10. ಯೆಹೋವ ದೇವರ ಪ್ರೀತಿ ಶಾಶ್ವತ ಅಂತ ಗೊತ್ತಾಗಿದ್ರಿಂದ ನಮಗೆ ಹೇಗೆ ಒಳ್ಳೇದಾಗಿದೆ? (ಕೀರ್ತನೆ 31:7)

10 ದೇವರ ಪ್ರೀತಿಗೆ ಕೊನೆನೇ ಇಲ್ಲ. 136ನೇ ಕೀರ್ತನೆಯಲ್ಲಿ 26 ಸಲ ದೇವರ ಪ್ರೀತಿ ಶಾಶ್ವತ ಅಂತ ಇದೆ. ಒಂದನೇ ವಚನದಲ್ಲಿ ಹೀಗೆ ಹೇಳುತ್ತೆ: “ಯೆಹೋವನಿಗೆ ಧನ್ಯವಾದ ಹೇಳಿ, ಆತನು ಒಳ್ಳೆಯವನು. ಆತನ ಪ್ರೀತಿ ಶಾಶ್ವತ.” (ಕೀರ್ತ. 136:1) ಆ ಕೀರ್ತನೆಯ ಪ್ರತಿಯೊಂದು ವಚನಗಳಲ್ಲೂ “ಆತನ ಪ್ರೀತಿ ಶಾಶ್ವತ” ಅಂತ ಇದೆ. ನಾವು ಆ ವಚನಗಳನ್ನು ಓದುತ್ತಾ ಹೋದಾಗ ಯೆಹೋವ ನಮಗೆ ಎಷ್ಟು ವಿಧಗಳಲ್ಲಿ ಶಾಶ್ವತ ಪ್ರೀತಿ ತೋರಿಸಿದ್ದಾನೆ ಅನ್ನೋದನ್ನ ನೋಡಿದಾಗ ನಾವು ಆ ಪ್ರೀತಿಯಲ್ಲಿ ನಮ್ಮನ್ನೇ ಮರೆತುಬಿಡ್ತೀವಿ. ನಾವು ಆ ಪ್ರೀತಿಯಲ್ಲಿ ಕಳೆದುಹೋಗಿ ಬಿಡ್ತೀವಿ. “ಆತನ ಪ್ರೀತಿ ಶಾಶ್ವತ” ಅಂತ ಹೇಳಿರೋ ಮಾತಿಂದ ದೇವರಿಗೆ ನಮ್ಮ ಮೇಲಿರೋ ಪ್ರೀತಿ ಕಮ್ಮಿ ಆಗಲ್ಲ ಅಂತ ಗೊತ್ತಾಗುತ್ತೆ. ಕಷ್ಟ ಬಂದ್ರೂ ಆತನು ನಮ್ಮ ಜೊತೆನೇ ಇರುತ್ತಾನೆ. ಯಾವತ್ತೂ ನಮ್ಮನ್ನ ಬಿಟ್ಟುಹೋಗಲ್ಲ ಅಂತ ಗೊತ್ತಾಗುತ್ತೆ. ಇದ್ರಿಂದ ನಮಗೆ ಹೇಗೆ ಒಳ್ಳೇದಾಗಿದೆ? ನಮಗೆ ಖುಷಿ ಸಿಕ್ಕಿದೆ. ಅಷ್ಟೇ ಅಲ್ಲ, ಕಷ್ಟಗಳು ಬಂದಾಗ ಅದನ್ನ ಎದುರಿಸೋಕೆ, ಯೆಹೋವ ದೇವರ ಸೇವೆನ ಬಿಡದೇ ಇರೋಕೆ ನಮಗೆ ಧೈರ್ಯ ಸಿಕ್ಕಿದೆ.ಕೀರ್ತನೆ 31:7 ಓದಿ.

11. ಕೀರ್ತನೆ 86:5ರ ಪ್ರಕಾರ ಯೆಹೋವ ನಮ್ಮನ್ನ ಯಾಕೆ ಕ್ಷಮಿಸುತ್ತಾನೆ?

11 ಶಾಶ್ವತ ಪ್ರೀತಿ ಇರೋದ್ರಿಂದ ದೇವರು ನಮ್ಮನ್ನ ಕ್ಷಮಿಸುತ್ತಾನೆ. ಒಬ್ಬ ಪಾಪಿ ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟು ತಿದ್ದಿಕೊಂಡ್ರೆ ಯೆಹೋವ ಅವನನ್ನ ಕ್ಷಮಿಸ್ತಾನೆ. ಕೀರ್ತನೆಗಾರನಾದ ದಾವೀದ ಯೆಹೋವ ದೇವರ ಬಗ್ಗೆ “ಆತನು ನಮ್ಮ ಪಾಪಗಳಿಗೆ ತಕ್ಕ ಹಾಗೆ ನಮ್ಮ ಜೊತೆ ನಡ್ಕೊಳ್ಳಲಿಲ್ಲ, ನಾವು ಮಾಡಿದ ತಪ್ಪುಗಳಿಗೆ ತಕ್ಕ ಶಿಕ್ಷೆ ಕೊಡಲಿಲ್ಲ” ಅಂತ ಹೇಳಿದ. (ಕೀರ್ತ. 103:8-11) ತಪ್ಪು ಮಾಡಿದಾಗ ನಮ್ಮ ಮನಸ್ಸಾಕ್ಷಿ ಎಷ್ಟು ಚುಚ್ಚುತ್ತೆ, ಎಷ್ಟು ದುಃಖ ಆಗುತ್ತೆ ಅಂತ ದಾವೀದನಿಗೆ ಚೆನ್ನಾಗಿ ಗೊತ್ತಿತ್ತು. ಅದನ್ನ ಅವನು ಅನುಭವಿಸಿದ್ದಾನೆ. ಆದರೆ ಅದರ ಜೊತೆ ಯೆಹೋವ “ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ” ಇರುತ್ತಾನೆ ಅನ್ನೋದೂ ಅವನಿಗೆ ಗೊತ್ತಿತ್ತು. ಯೆಹೋವ ದೇವರು ನಮ್ಮನ್ನ ಯಾಕೆ ಕ್ಷಮಿಸುತ್ತಾನೆ? ಅದಕ್ಕೆ ಉತ್ತರ ಕೀರ್ತನೆ 86:5ರಲ್ಲಿದೆ. (ಓದಿ.) ಅಲ್ಲಿ ದಾವೀದ ಪ್ರಾರ್ಥನೆ ಮಾಡುವಾಗ ಹೇಳಿದ ಹಾಗೆ ಯೆಹೋವ ನಮಗೆ ಅಪಾರವಾಗಿ ಆ ಶಾಶ್ವತ ಪ್ರೀತಿ ತೋರಿಸ್ತಾ ಇದ್ದಾನೆ. ಅದಕ್ಕೇ ನಾವು ಕ್ಷಮೆ ಕೇಳಿದಾಗ ದೇವರು ನಮ್ಮನ್ನ ಕ್ಷಮಿಸ್ತಾನೆ.

12-13. ನಾವು ಮಾಡಿದ ತಪ್ಪಿಂದ ಮನಸ್ಸಾಕ್ಷಿ ಚುಚ್ಚುತ್ತಾ ಇದ್ರೆ ಅದರಿಂದ ಹೊರಗೆ ಬರೋಕೆ ಯಾವುದು ಸಹಾಯ ಮಾಡುತ್ತೆ?

12 ನಾವು ತಪ್ಪು ಮಾಡಿದಾಗ ನಮ್ಮ ಮನಸ್ಸು ಚುಚ್ಚುವುದು ಒಳ್ಳೇದೇ. ಅದು ಪಶ್ಚಾತ್ತಾಪ ಪಡೋಕೆ, ನಮ್ಮ ತಪ್ಪುಗಳನ್ನ ತಿದ್ದಿಕೊಳ್ಳೋಕೆ ಸಹಾಯ ಮಾಡುತ್ತೆ. ಆದ್ರೆ ಕೆಲವರ ಮನಸ್ಸು ಎಷ್ಟು ಚುಚ್ಚುತ್ತೆ ಅಂದ್ರೆ ಅವರು ಆ ದುಃಖದಲ್ಲೇ ಮುಳುಗಿಹೋಗ್ತಾರೆ. ತಮ್ಮನ್ನ ಯೆಹೋವ ದೇವರು ಯಾವತ್ತೂ ಕ್ಷಮಿಸಲ್ಲ, ಎಷ್ಟೇ ಪಶ್ಚಾತ್ತಾಪ ಪಟ್ಟರೂ ಆತನ ಕ್ಷಮೆ ಸಿಗಲ್ಲ ಅಂತ ಕೊರಗುತ್ತಾ ಇರುತ್ತಾರೆ. ಆದರೆ ಯೆಹೋವ ದೇವರು ಧಾರಾಳವಾಗಿ ತನ್ನ ಶಾಶ್ವತ ಪ್ರೀತಿಯನ್ನ ತನ್ನ ಸೇವಕರಿಗೆ ತೋರಿಸುತ್ತಾನೆ ಅಂತ ಅರ್ಥಮಾಡಿಕೊಂಡಾಗ ಅಂಥ ಭಾವನೆಯಿಂದ, ನೋವಿಂದ ಹೊರಗೆ ಬರೋಕೆ ಆಗುತ್ತೆ.

13 ಇದ್ರಿಂದ ನಮಗೆ ಹೇಗೆ ಒಳ್ಳೇದಾಗಿದೆ? ನಾವು ಅಪರಿಪೂರ್ಣರಾದ್ರೂ ಒಳ್ಳೆ ಮನಸ್ಸಾಕ್ಷಿಯಿಂದ, ಖುಷಿಖುಷಿಯಾಗಿ ದೇವರ ಸೇವೆ ಮಾಡೋಕೆ ಆಗುತ್ತೆ. ಯಾಕಂದ್ರೆ ‘ಯೇಸುವಿನ ರಕ್ತ ನಮ್ಮ ಪಾಪಗಳನ್ನ ಕ್ಷಮಿಸಿದೆ.’ (1 ಯೋಹಾ. 1:7) ನಮ್ಮ ತಪ್ಪುಗಳನ್ನ ದೇವರು ಕ್ಷಮಿಸಲ್ಲ ಅಂತ ನಮ್ಮ ಮನಸ್ಸಿಗೆ ಬಂದಾಗ ನಾವು ಪಶ್ಚಾತ್ತಾಪ ಪಟ್ರೆ ಯೆಹೋವ ದೇವರು ನಮ್ಮನ್ನ ಕ್ಷಮಿಸೋಕೆ ಇಷ್ಟ ಪಡ್ತಾನೆ ಅನ್ನೋದನ್ನ ನೆನಪಿಸಿಕೊಳ್ಳಿ. ದಾವೀದ ಶಾಶ್ವತ ಪ್ರೀತಿ ಮತ್ತು ಕ್ಷಮೆ ಬಗ್ಗೆ ಮಾತಾಡುವಾಗ ಏನು ಹೇಳಿದ ಗೊತ್ತಾ? “ಆಕಾಶ ಭೂಮಿಯಿಂದ ಎಷ್ಟು ಎತ್ರದಲ್ಲಿ ಇದೆಯೋ, ಆತನಿಗೆ ಭಯಪಡೋರ ಕಡೆ ಆತನಿಗಿರೋ ಶಾಶ್ವತ ಪ್ರೀತಿನೂ ಅಷ್ಟೇ ಜಾಸ್ತಿ ಇದೆ. ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರ ಇದೆಯೋ, ಆತನು ನಮ್ಮ ಅಪರಾಧಗಳನ್ನ ನಮ್ಮಿಂದ ಅಷ್ಟೇ ದೂರ ಎಸಿತಾನೆ.” (ಕೀರ್ತ. 103:11, 12) ಯೆಹೋವ ದೇವರು ನಮ್ಮನ್ನ ‘ಉದಾರವಾಗಿ ಕ್ಷಮಿಸೋಕೆ’ ಇಷ್ಟ ಪಡ್ತಾನೆ.—ಯೆಶಾ. 55:7.

14. ದೇವರ ಶಾಶ್ವತ ಪ್ರೀತಿ ನಮ್ಮನ್ನ ಹೇಗೆ ಕಾಪಾಡುತ್ತೆ ಅಂತ ದಾವೀದ ಹೇಳಿದ?

14 ಯೆಹೋವ ಶಾಶ್ವತ ಪ್ರೀತಿ ತೋರಿಸೋದ್ರಿಂದ ಆತನ ಜೊತೆ ನಮ್ಮ ಸಂಬಂಧ ಯಾವತ್ತೂ ಹಾಳಾಗಲ್ಲ. ದಾವೀದ ಯೆಹೋವನ ಹತ್ರ ಪ್ರಾರ್ಥಿಸಿದಾಗ ಹೀಗೆ ಹೇಳಿದ: “ನಾನು ಬಚ್ಚಿಟ್ಟುಕೊಳ್ಳೋ ಜಾಗ ನೀನು, ಕಷ್ಟಗಳಿಂದ ನೀನು ನನ್ನನ್ನ ಕಾಪಾಡ್ತೀಯ. ನೀನು ನನ್ನನ್ನ ಬಿಡಿಸಿ ನಾಲ್ಕೂ ದಿಕ್ಕಲ್ಲಿ ಖುಷಿಯನ್ನ ತುಂಬಿಸ್ತೀಯ. . . . ಆದ್ರೆ ಯೆಹೋವನಲ್ಲಿ ಭರವಸೆ ಇಡೋರಿಗೆ ಆತನ ಶಾಶ್ವತ ಪ್ರೀತಿ ಜೊತೆಗಿರುತ್ತೆ.” (ಕೀರ್ತ. 32:7, 10) ಆಗಿನ ಕಾಲದಲ್ಲಿ ಪಟ್ಟಣದ ಗೋಡೆಗಳು ಜನರನ್ನ ಶತ್ರುಗಳಿಂದ ಕಾಪಾಡ್ತಿದ್ದವು. ಅದೇ ತರ ಯೆಹೋವನ ಶಾಶ್ವತ ಪ್ರೀತಿ ನಮ್ಮನ್ನ ಆತನಿಂದ ದೂರ ಹೋಗದ ಹಾಗೆ ಕಾಪಾಡುತ್ತೆ. ಅಷ್ಟೇ ಅಲ್ಲ, ಆತನಿಗೆ ಇನ್ನೂ ಹತ್ರ ಆಗೋಕೆ ನಮಗೆ ಸಹಾಯ ಮಾಡುತ್ತೆ.—ಯೆರೆ. 31:3.

15. ಯೆಹೋವ ದೇವರ ಶಾಶ್ವತ ಪ್ರೀತಿನ ಸುರಕ್ಷಿತ ಜಾಗ, ಭದ್ರಕೋಟೆ ಅಂತ ಹೇಗೆ ಹೇಳಬಹುದು?

15 ದೇವರು ತನ್ನ ಜನರನ್ನ ಹೇಗೆ ಕಾಪಾಡ್ತಾನೆ ಅಂತ ದಾವೀದ ಇನ್ನೊಂದು ರೀತಿಯಲ್ಲೂ ವರ್ಣಿಸಿದ್ದಾನೆ. ಅವನು ಬರೆದಿದ್ದು: “ನನಗೆ ಶಾಶ್ವತ ಪ್ರೀತಿಯನ್ನ ತೋರಿಸೋ ದೇವರೇ ನನ್ನ ಸುರಕ್ಷಿತ ಆಶ್ರಯ. ನನ್ನ ಶಾಶ್ವತ ಪ್ರೀತಿ, ನನ್ನ ಭದ್ರಕೋಟೆ ಆತನೇ, ನನ್ನ ಸುರಕ್ಷಿತ ಜಾಗ, ನನ್ನ ರಕ್ಷಕ, ನನ್ನ ಗುರಾಣಿನೂ ಆತನೇ, ನಾನು ಆತನಲ್ಲೇ ಆಶ್ರಯ ಪಡ್ಕೊಂಡಿದ್ದೀನಿ.” (ಕೀರ್ತ. 59:17; 144:2) ಯೆಹೋವನ ಶಾಶ್ವತ ಪ್ರೀತಿಯನ್ನ ಸುರಕ್ಷಿತ ಜಾಗ, ಭದ್ರಕೋಟೆ ಅಂತ ದಾವೀದ ಯಾಕೆ ಹೇಳುತ್ತಿದ್ದಾನೆ? ಯಾಕಂದ್ರೆ ನಾವು ಭೂಮಿಯ ಯಾವ ಮೂಲೆಯಲ್ಲೇ ಇರಲಿ, ಎಲ್ಲಿ ತನಕ ನಾವು ದೇವರ ಸೇವಕರಾಗಿ ಇರುತ್ತೀವೋ ಅಲ್ಲಿ ತನಕ ಆತನು ನಮ್ಮನ್ನ ಕಾಪಾಡ್ತಾನೆ. ಆತನ ಜೊತೆಗಿರೋ ನಮ್ಮ ಸ್ನೇಹನ ಕಾಪಾಡಿಕೊಳ್ಳೋಕೆ ಬೇಕಾಗಿರೋದನ್ನೆಲ್ಲಾ ನಮಗೆ ಕೊಡ್ತಾನೆ. 91ನೇ ಕೀರ್ತನೆಯನ್ನ ಬರೆದವನಿಗೂ ಹೀಗೇ ಅನಿಸ್ತು. ಅವನು “ನಾನು ಯೆಹೋವನಿಗೆ ‘ನೀನು ನನ್ನ ಆಶ್ರಯ, ನನ್ನ ಭದ್ರಕೋಟೆ’ ಅಂತ ಹೇಳ್ತೀನಿ” ಅಂದ. (ಕೀರ್ತ. 91:1-3, 9, 14) ಮೋಶೆನೂ ಈ ತರಾನೇ ಹೇಳಿದ. (ಕೀರ್ತ. 90:1, ಪಾದಟಿಪ್ಪಣಿ) ಅವನು ತೀರಿಹೋಗೋ ಮುಂಚೆ ಹೀಗೆ ಬರೆದ: “ದೇವರು ಆಗಿನ ಕಾಲದಿಂದಾನೂ ನಿನ್ನ ಆಶ್ರಯ ಆಗಿದ್ದಾನೆ, ಆತನ ಕೈಗಳು ಯಾವಾಗ್ಲೂ ನಿನಗೆ ಆಧಾರವಾಗಿ ಇರುತ್ತೆ.” (ಧರ್ಮೋ. 33:27) “ಆತನ ಕೈಗಳು ಯಾವಾಗ್ಲೂ ನಿನಗೆ ಆಧಾರವಾಗಿ ಇರುತ್ತೆ” ಅನ್ನೋ ಮಾತಿಂದ ಯೆಹೋವ ದೇವರ ಬಗ್ಗೆ ನಮಗೇನು ಗೊತ್ತಾಗುತ್ತೆ?

16. ಯೆಹೋವನ ಶಾಶ್ವತ ಪ್ರೀತಿಯಿಂದ ನಮಗೆ ಹೇಗೆ ಒಳ್ಳೇದಾಗಿದೆ? (ಕೀರ್ತನೆ 136:23)

16 ಯೆಹೋವ ದೇವರು ನಮಗೆ ಸುರಕ್ಷಿತ ಜಾಗ ಆಗಿರುವಾಗ ನಮಗೆ ಯಾವ ಭಯನೂ ಇರಲ್ಲ. ಆದ್ರೆ ಕೆಲವೊಂದು ಸಲ ನಾವು ಕುಗ್ಗಿಹೋಗಿಬಿಡ್ತೀವಿ. ಆಗ ಯೆಹೋವ ನಮಗೋಸ್ಕರ ಏನು ಮಾಡ್ತಾನೆ? (ಕೀರ್ತನೆ 136:23 ಓದಿ.) ತನ್ನ ಕೈಯನ್ನ ಆಧಾರವಾಗಿ ಕೊಟ್ಟು ನಮ್ಮನ್ನ ನಿಧಾನವಾಗಿ ಮೇಲೆತ್ತುತ್ತಾನೆ. (ಕೀರ್ತ. 28:9; 94:18) ನಮಗೆ ಸಹಾಯ ಮಾಡೋಕೆ ಯೆಹೋವ ಯಾವಾಗಲೂ ನಮ್ಮ ಜೊತೆ ಇರುತ್ತಾನೆ ಅಂತ ಗೊತ್ತಾಗುತ್ತೆ. ಇದ್ರಿಂದ ನಮಗೆ ಹೇಗೆ ಒಳ್ಳೇದಾಗಿದೆ? ನಾವೆಲ್ಲೇ ಇದ್ದರೂ ಯೆಹೋವ ನಮ್ಮನ್ನ ಕಾಪಾಡ್ತಾನೆ ಅನ್ನೋ ನಂಬಿಕೆ ನಮಗಿರುತ್ತೆ. ನಮ್ಮ ಪ್ರೀತಿಯ ಅಪ್ಪ ನಮ್ಮನ್ನ ಚೆನ್ನಾಗಿ ನೋಡಿಕೊಳ್ತಾನೆ ಅನ್ನೋ ಭರವಸೆ ಇರುತ್ತೆ.

ಯೆಹೋವನ ಶಾಶ್ವತ ಪ್ರೀತಿ ಯಾವತ್ತೂ ಕಮ್ಮಿ ಆಗಲ್ಲ

17. ನಾವು ಏನನ್ನ ಕಣ್ಮುಚ್ಚಿ ನಂಬಬಹುದು? (ಕೀರ್ತನೆ 33:18-22)

17 ನಾವು ಈಗಾಗಲೇ ಕಲಿತ ಹಾಗೆ ನಮಗೆ ಕಷ್ಟಗಳು ಬಂದಾಗ ಯೆಹೋವ ದೇವರು ನಮ್ಮ ಪರವಾಗಿ ನಿಂತು ಆತನಿಗೆ ನಿಯತ್ತಾಗಿರೋಕೆ ಬೇಕಾದ ಎಲ್ಲ ಸಹಾಯ ಮಾಡ್ತಾನೆ. (2 ಕೊರಿಂ. 4:7-9) ಪ್ರವಾದಿ ಯೆರೆಮೀಯ ಹೇಳಿದ್ದು: “ಯೆಹೋವ ಶಾಶ್ವತ ಪ್ರೀತಿ ತೋರಿಸಿದ್ರಿಂದಾನೇ ನಾವಿನ್ನೂ ನಾಶವಾಗದೆ ಉಳಿದಿದ್ದೀವಿ, ಆತನ ಕರುಣೆಗೆ ಕೊನೆನೇ ಇಲ್ಲ.” (ಪ್ರಲಾ. 3:22) ಯೆಹೋವ ದೇವರಿಗೆ ನಮ್ಮ ಮೇಲಿರೋ ಶಾಶ್ವತ ಪ್ರೀತಿ ಹಾಗೇ ಇರುತ್ತೆ. ಯಾವತ್ತೂ ಕಮ್ಮಿ ಆಗಲ್ಲ ಅಂತ ನಾವು ಕಣ್ಮುಚ್ಚಿ ನಂಬಬಹುದು. ಯಾಕಂದ್ರೆ “ಯೆಹೋವನ ಕಣ್ಣು ಆತನಿಗೆ ಭಯಪಡೋರ ಮೇಲಿದೆ, ಆತನ ಶಾಶ್ವತ ಪ್ರೀತಿ ಮೇಲೆ ನಿರೀಕ್ಷೆ ಇಡೋರ ಮೇಲಿದೆ” ಅಂತ ಬೈಬಲ್‌ ಹೇಳುತ್ತೆ.ಕೀರ್ತನೆ 33:18-22 ಓದಿ.

18-19. (ಎ) ನಾವೇನು ಮನಸ್ಸಲ್ಲಿಡಬೇಕು? (ಬಿ) ಮುಂದಿನ ಲೇಖನದಲ್ಲಿ ಏನು ಕಲಿತೀವಿ?

18 ನಾವು ಯಾವ ವಿಷಯನ ಮನಸ್ಸಲ್ಲಿಡಬೇಕು? ಯೆಹೋವ ದೇವರು, ನಾವು ಆತನ ಆರಾಧಕರಾಗೋ ಮುಂಚೆನೂ ನಮಗೆ ಪ್ರೀತಿ ತೋರಿಸುತ್ತಿದ್ದನು. ಈಗ ಆತನ ಆರಾಧಕರಾದ ಮೇಲೆ ನಮಗೆ ಶಾಶ್ವತ ಪ್ರೀತಿ ತೋರಿಸ್ತಿದ್ದಾನೆ. ಆ ಪ್ರೀತಿಯಿಂದಾನೇ ಯೆಹೋವ ದೇವರು ನಮ್ಮ ಕೈ ಹಿಡಿದು ಕಾಪಾಡ್ತಿದ್ದಾನೆ. ಯಾವಾಗಲೂ ನಮ್ಮ ಜೊತೆನೇ ಇರುತ್ತಾನೆ. ನಮಗೆ ಮುಂದೆ ಒಳ್ಳೇ ಭವಿಷ್ಯ ಕೊಡ್ತೀನಿ ಅಂತ ಕೊಟ್ಟಿರೋ ಮಾತನ್ನ ನಡೆಸುತ್ತಾನೆ. ಆತನ ಜೊತೆ ನಮ್ಮ ಸ್ನೇಹ ಯಾವಾಗಲೂ ಹೀಗೇ ಇರಬೇಕು ಅಂತ ಆಸೆ ಪಡ್ತಾನೆ. (ಕೀರ್ತ. 46:1, 2, 7) ಹಾಗಾಗಿ ನಮಗೆ ಎಂಥ ಕಷ್ಟಾನೇ ಬರಲಿ ಆತನಿಗೆ ನಿಯತ್ತಾಗಿರೋಕೆ ಬೇಕಾಗಿರೋದನ್ನೆಲ್ಲ ಕೊಟ್ಟು ಯೆಹೋವ ನಮ್ಮನ್ನ ಬಲಪಡಿಸ್ತಾನೆ.

19 ಯೆಹೋವ ದೇವರು ತನ್ನ ಸೇವಕರಿಗೆ ಹೇಗೆಲ್ಲಾ ಶಾಶ್ವತ ಪ್ರೀತಿ ತೋರಿಸಿದ್ದಾನೆ ಅಂತ ನೋಡಿದ್ವಿ. ಆ ಶಾಶ್ವತ ಪ್ರೀತಿಯನ್ನ ಬೇರೆಯವರಿಗೆ ಹೇಗೆ ತೋರಿಸಬೇಕು ಅಂತ ಮುಂದಿನ ಲೇಖನದಲ್ಲಿ ನೋಡೋಣ.

ಗೀತೆ 85 ಯೆಹೋವನಿಂದ ದೊರೆಯುವ ಪೂರ್ಣ ಪ್ರತಿಫಲ

^ ಪ್ಯಾರ. 5 ಶಾಶ್ವತ ಪ್ರೀತಿ ಅಂದ್ರೇನು? ಅದನ್ನ ಯೆಹೋವ ಯಾರಿಗೆ ತೋರಿಸ್ತಾನೆ? ಅದನ್ನ ಪಡೆದುಕೊಂಡವರಿಗೆ ಹೇಗೆಲ್ಲಾ ಒಳ್ಳೇದಾಗಿದೆ? ಈ ಎಲ್ಲಾ ಪ್ರಶ್ನೆಗಳಿಗೂ ಮೊದಲ ಎರಡು ಲೇಖನಗಳಲ್ಲಿ ಉತ್ತರ ತಿಳಿದುಕೊಳ್ಳುತ್ತೀವಿ.

^ ಪ್ಯಾರ. 4 ದೇವರು ಧಾರಾಳವಾಗಿ ಶಾಶ್ವತ ಪ್ರೀತಿ ತೋರಿಸೋದರ ಬಗ್ಗೆ ಬೇರೆ ವಚನಗಳಲ್ಲೂ ಇದೆ.—ನೆಹೆಮೀಯ 13:22; ಕೀರ್ತನೆ 69:13; 106:7; ಪ್ರಲಾಪ 3:32 ನೋಡಿ.

^ ಪ್ಯಾರ. 54 ಚಿತ್ರ ವಿವರಣೆ: ಯೆಹೋವ ದೇವರು ತನ್ನ ಸೇವಕರಿಗೆ ಮಾತ್ರ ಅಲ್ಲ, ಎಲ್ಲರಿಗೂ ಹೇಗೆ ಪ್ರೀತಿ ತೋರಿಸಿದ್ದಾನೆ ಅಂತ ಚಿಕ್ಕ-ಚಿಕ್ಕ ಚಿತ್ರಗಳಲ್ಲಿದೆ. ಇವೆಲ್ಲಕ್ಕಿಂತ ತುಂಬ ಮುಖ್ಯವಾದದ್ದು ತನ್ನ ಮಗನನ್ನ ನಮಗಾಗಿ ಕೊಟ್ಟಿದ್ದೇ.

^ ಪ್ಯಾರ. 64 ಚಿತ್ರ ವಿವರಣೆ: ಯಾರು ಬಿಡುಗಡೆ ಬೆಲೆ ಮೇಲೆ ನಂಬಿಕೆ ಇಟ್ಟು ಯೆಹೋವನ ಸೇವೆ ಮಾಡ್ತಾರೋ ಅಂಥವರನ್ನ ಯೆಹೋವ ವಿಶೇಷವಾಗಿ ನೋಡ್ತಾನೆ. ಅವರಿಗೆ ಬರೀ ಪ್ರೀತಿ ಅಲ್ಲ, ಶಾಶ್ವತ ಪ್ರೀತಿ ತೋರಿಸ್ತಾನೆ. ಅದನ್ನ ಹೇಗೆಲ್ಲಾ ತೋರಿಸ್ತಾನೆ ಅಂತ ಚಿಕ್ಕಚಿಕ್ಕ ಚಿತ್ರಗಳಲ್ಲಿದೆ.