ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಗ್ಗಿಕೊಳ್ಳುವವನು ಒಳ್ಳೆ ಜೊತೆಕೆಲಸಗಾರ

ಒಗ್ಗಿಕೊಳ್ಳುವವನು ಒಳ್ಳೆ ಜೊತೆಕೆಲಸಗಾರ

“ಅತ್ಯಂತ ನಿಪುಣ ಕೆಲಸಗಾರನ ತರ ನಾನು ಆತನ ಪಕ್ಕದಲ್ಲೇ ಇದ್ದೆ. . . . ನಾನು ಆತನ ಮುಂದೆ ಯಾವಾಗ್ಲೂ ನಗುನಗ್ತಾ ಇದ್ದೆ.” (ಜ್ಞಾನೋ. 8:30) ಭೂಮಿಗೆ ಬರೋದಕ್ಕೂ ಮುಂಚೆ ಯೇಸು ಕೋಟಿಗಟ್ಟಲೆ ವರ್ಷ ಯೆಹೋವನ ಜೊತೆ ಕೆಲಸಮಾಡಿದ್ದನು ಅಂತ ಈ ವಚನದಿಂದ ನಮಗೆ ಗೊತ್ತಾಗುತ್ತೆ. ಅಷ್ಟೇ ಅಲ್ಲ, ಆ ಕೆಲಸವನ್ನ ಖುಷಿಖುಷಿಯಾಗಿ ಮಾಡುತ್ತಿದ್ದನು ಅಂತನೂ ಗೊತ್ತಾಗುತ್ತೆ.

ಯೆಹೋವನ ಜೊತೆ ಕೆಲಸ ಮಾಡಿದಾಗ ಬೇರೆಯವರ ಜೊತೆ ಹೇಗೆ ಕೆಲಸ ಮಾಡಬೇಕು ಅಂತ ಯೇಸು ಕಲಿತ. ಅವನು ಭೂಮಿಯಲ್ಲಿದ್ದಾಗ ಬೇರೆಯವರ ಜೊತೆ ಚೆನ್ನಾಗಿ ಕೆಲಸ ಮಾಡಿ ಒಳ್ಳೆ ಮಾದರಿ ಇಟ್ಟ. ಯೇಸುವಿನ ಮಾದರಿಯಿಂದ ನಾವೇನು ಕಲಿಯಬಹುದು? ಆತನ ಬಗ್ಗೆ ನಾವು ಹೆಚ್ಚು ಕಲಿತಾಗ ಮೂರು ತತ್ವಗಳನ್ನ ತಿಳಿದುಕೊಳ್ಳುತ್ತೀವಿ. ಈ ತತ್ವಗಳನ್ನ ನಾವು ಪಾಲಿಸಿದ್ರೆ ಒಗ್ಗಟ್ಟಿಂದ ಖುಷಿಖುಷಿಯಾಗಿ ನಮ್ಮ ಸಹೋದರ ಸಹೋದರಿಯರ ಜೊತೆ ಕೆಲಸ ಮಾಡಬಹುದು.

ಯೆಹೋವ ಮತ್ತು ಯೇಸು ತರ ನಿಮಗೆ ಗೊತ್ತಿರೋ ವಿಷಯನ ಬೇರೆಯವರ ಜೊತೆ ಧಾರಾಳವಾಗಿ ಹಂಚಿಕೊಳ್ಳಿ, ಮುಚ್ಚಿಡಬೇಡಿ.

ತತ್ವ 1: ‘ಒಬ್ರಿಗೊಬ್ರು ಗೌರವ ತೋರಿಸಿ’

ಒಬ್ಬ ಒಳ್ಳೆ ವ್ಯಕ್ತಿ ಬೇರೆಯವರ ಜೊತೆ ಕೆಲಸ ಮಾಡುವಾಗ ದೀನತೆ ತೋರಿಸ್ತಾನೆ. ಅವರನ್ನ ಗೌರವದಿಂದ ನೋಡ್ತಾನೆ. ಎಲ್ಲರೂ ತನ್ನನ್ನೇ ಹೊಗಳಬೇಕು ಅಂತ ಬಯಸಲ್ಲ. ಇಂಥ ದೀನತೆಯನ್ನ ಯೇಸು ತನ್ನ ತಂದೆಯಿಂದ ಕಲಿತ. ಯೆಹೋವನೊಬ್ಬನೇ ಸೃಷ್ಟಿಕರ್ತನಾಗಿದ್ರೂ ಯೇಸುನೂ ತನ್ನ ಜೊತೆ ಸೇರಿ ಕೆಲಸ ಮಾಡಿರೋದು ಎಲ್ಲರಿಗೂ ಗೊತ್ತಾಗಲಿ ಅಂತ ಬೈಬಲಲ್ಲಿ ಯೆಹೋವ ಬರೆಸಿದ್ದಾನೆ. “ನಮ್ಮನ್ನ ಹೋಲುವಂಥ, . . . ಮನುಷ್ಯನನ್ನ ಮಾಡೋಣ” ಅಂತ ಯೆಹೋವ ಹೇಳಿದನು. (ಆದಿ. 1:26) ಈ ಮಾತನ್ನ ಹೇಳ್ತಿರೋ ಯೆಹೋವನಿಗೆ ಎಷ್ಟು ದೀನತೆ ಇದೆ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು.—ಕೀರ್ತ. 18:35.

ಯೇಸು ಭೂಮಿಯಲ್ಲಿದ್ದಾಗ ಇದೇ ದೀನತೆಯನ್ನ ತೋರಿಸಿದನು. ಆತನು ಒಳ್ಳೆ ಕೆಲಸಗಳನ್ನ ಮಾಡಿದಾಗ ಜನ ಅವನನ್ನ ಹೊಗಳಿದರು. ಆ ಹೊಗಳಿಕೆಯನ್ನೆಲ್ಲ ದೇವರಿಗೆ ಸಲ್ಲಿಸಿದನು. (ಮಾರ್ಕ 10:17, 18; ಯೋಹಾ. 7:15, 16) ತನ್ನ ಶಿಷ್ಯರ ಜೊತೆ ಯೇಸು ಯಾವಾಗಲೂ ಸಮಾಧಾನವಾಗಿ ಕೆಲಸ ಮಾಡುತ್ತಿದ್ದನು. ಅವರನ್ನ ಆಳುಗಳ ತರ ಅಲ್ಲ ಸ್ನೇಹಿತರ ತರ ನೋಡಿದನು. (ಯೋಹಾ. 15:15) ಅವರ ಕಾಲುಗಳನ್ನ ತೊಳೆದು ದೀನತೆಯ ಪಾಠ ಕಲಿಸಿದನು. (ಯೋಹಾ. 13:5, 12-14) ಯೇಸು ತರ ನಾವೂ ನಮಗಿಂತ ನಮ್ಮ ಸಹೋದರ ಸಹೋದರಿಯರ ಇಷ್ಟಗಳಿಗೆ ಬೆಲೆ ಕೊಡ್ತೀವಿ. ನಾವು ಹೆಸರು ಮಾಡಿಕೊಳ್ಳೋದನ್ನು ಬಿಟ್ಟು ‘ಒಬ್ರಿಗೊಬ್ರು ಗೌರವ ತೋರಿಸಬೇಕು.’ ಆಗ ಜಾಸ್ತಿ ಕೆಲಸ ಮಾಡೋಕೆ ಆಗುತ್ತೆ.—ರೋಮ. 12:10.

“ತುಂಬ ಸಲಹೆಗಾರರು ಇದ್ರೆ ಸಾಧನೆ ಮಾಡಕ್ಕಾಗುತ್ತೆ” ಅಂತ ದೀನತೆ ಇರೋ ವ್ಯಕ್ತಿ ಅರ್ಥ ಮಾಡಿಕೊಳ್ತಾನೆ. (ಜ್ಞಾನೋ. 15:22) ಮನುಷ್ಯನಿಗೆ ಎಷ್ಟೇ ಬುದ್ಧಿ, ಶಕ್ತಿ, ಸಾಮರ್ಥ್ಯ, ಅನುಭವ ಇದ್ರೂ ಎಲ್ಲಾ ವಿಷ್ಯಗಳೂ ಪೂರ್ತಿಯಾಗಿ ಅವನಿಗೆ ಗೊತ್ತಿಲ್ಲ ಅನ್ನೋದನ್ನ ನಾವು ಮನಸ್ಸಲ್ಲಿಡಬೇಕು. ಯೇಸು ಕೂಡ ತನಗೆ ಎಲ್ಲಾ ವಿಷಯಗಳು ಗೊತ್ತಿಲ್ಲ ಅಂತ ಒಂದು ಸಂದರ್ಭದಲ್ಲಿ ಹೇಳಿದನು. (ಮತ್ತಾ. 24:36) ಅಷ್ಟೇ ಅಲ್ಲ, ಅಪರಿಪೂರ್ಣ ಶಿಷ್ಯರಿಗೆ ತನ್ನ ಬಗ್ಗೆ ಯಾವ ಅಭಿಪ್ರಾಯ ಇದೆ ಅಂತ ತಿಳಿದುಕೊಳ್ಳೋಕೂ ಬಯಸಿದನು. (ಮತ್ತಾ. 16:13-16) ಹಾಗಾಗಿ ಯೇಸುವಿನ ಶಿಷ್ಯರು ಅವನ ಜೊತೆ ಆರಾಮವಾಗಿ ಇರುತ್ತಿದ್ದರು. ಯೇಸು ತರಾನೇ ನಮಗೂ ಎಲ್ಲಾ ವಿಷಯನೂ ಗೊತ್ತಿಲ್ಲ ಅನ್ನೋದನ್ನ ಮನಸ್ಸಲ್ಲಿಡಬೇಕು. ಆಗ ಬೇರೆಯವರು ಏನಾದ್ರೂ ಹೇಳಿದ್ರೆ ಕೇಳ್ತೀವಿ. ಅಷ್ಟೇ ಅಲ್ಲ, ಬೇರೆಯವರ ಜೊತೆ ಒಳ್ಳೇ ಸಂಬಂಧನೂ ಇರುತ್ತೆ ಮತ್ತು ಕೆಲಸನೂ ಮಾಡಿ ಮುಗಿಸೋಕೆ ಆಗುತ್ತೆ.

ಮುಖ್ಯವಾಗಿ ಹಿರಿಯರು ಯೇಸು ತರ ದೀನತೆ ತೋರಿಸಬೇಕು. ಹಿರಿಯರ ಕೂಟದಲ್ಲಿ ಒಳ್ಳೇ ನಿರ್ಣಯ ತೆಗೆದುಕೊಳ್ಳೋಕೆ ಪವಿತ್ರ ಶಕ್ತಿ ಯಾವ ಹಿರಿಯನನ್ನ ಬೇಕಾದ್ರೂ ಬಳಸಬಹುದು. ಇದ್ರಿಂದ ಹಿರಿಯ ಮಂಡಳಿಯಾಗಿ ಒಳ್ಳೆ ನಿರ್ಣಯಗಳನ್ನ ತಗೊಳ್ಳೋಕೆ ಆಗುತ್ತೆ. ಹಿರಿಯರು ತಮ್ಮ ಅಭಿಪ್ರಾಯಗಳನ್ನ ಮುಕ್ತವಾಗಿ ಹೇಳೋ ತರ ಆ ಕೂಟ ಇರಬೇಕು. ಹೀಗೆ ಮಾಡಿದ್ರೆ ಅವರು ಮಾಡೋ ನಿರ್ಧಾರಗಳಿಂದ ಇಡೀ ಸಭೆಗೆ ಪ್ರಯೋಜನ ಆಗುತ್ತೆ.

ತತ್ವ 2: ‘ಮಣಿಯಿರಿ’

ಒಬ್ಬ ಒಳ್ಳೇ ವ್ಯಕ್ತಿ ಬೇರೆಯವರ ಜೊತೆ ಕೆಲಸ ಮಾಡುವಾಗ ತಾನು ಹೇಳಿದ್ದೇ ಆಗಬೇಕು ಅಂತ ನೆನಸಲ್ಲ, ಮಣಿತಾನೆ. ಬೇಕಾದ ಹೊಂದಾಣಿಕೆಗಳನ್ನು ಮಾಡಿಕೊಳ್ಳೋಕೆ ರೆಡಿ ಇರ್ತಾನೆ. ತನ್ನ ತಂದೆ ಎಷ್ಟೋ ಸಲ ಮಣಿದಿರೋದನ್ನ ಯೇಸು ಕಣ್ಣಾರೆ ನೋಡಿದ್ದನು. ಉದಾಹರಣೆಗೆ, ಮನುಷ್ಯರನ್ನ ಮರಣದಿಂದ ಬಿಡುಗಡೆ ಮಾಡೋಕೆ ಯೆಹೋವನೇ ಮುಂದೆ ಬಂದು ಯೇಸುವನ್ನ ಕಳಿಸಿಕೊಟ್ಟನು.—ಯೋಹಾ. 3:16.

ಯೇಸು ಅಗತ್ಯ ಇದ್ದಾಗೆಲ್ಲ ಮಣಿದನು. ಉದಾಹರಣೆಗೆ, ಯೇಸು ಇಸ್ರಾಯೇಲ್ಯರಿಗೆ ಸಹಾಯ ಮಾಡೋಕೆ ಬಂದಿದ್ದರೂ ಫೊಯಿನಿಕೆ ಊರಿನ ಸ್ತ್ರೀಗೆ ಸಹಾಯ ಮಾಡಿದ್ದನ್ನ ನೆನಪಿಸಿಕೊಳ್ಳಿ. (ಮತ್ತಾ. 15:22-28) ಅಷ್ಟೇ ಅಲ್ಲ, ಅವನು ತನ್ನ ಶಿಷ್ಯರಿಂದ ಮಾಡೋಕೆ ಆಗದೇ ಇದ್ದಿದ್ದನ್ನ ಕೇಳುತ್ತಿರಲಿಲ್ಲ. ‘ಯೇಸು ಯಾರೋ ನಂಗೊತ್ತಿಲ್ಲ’ ಅಂತ ಎಲ್ಲರ ಮುಂದೆ ತನ್ನ ಸ್ನೇಹಿತನಾದ ಪೇತ್ರ ಹೇಳಿದ್ರೂ ಯೇಸು ಅವನನ್ನ ಕ್ಷಮಿಸಿದನು. ನಂತರ ಅವನಿಗೆ ದೊಡ್ಡದೊಡ್ಡ ಜವಾಬ್ದಾರಿಗಳನ್ನ ಕೊಟ್ಟನು. (ಲೂಕ 22:32; ಯೋಹಾ. 21:17; ಅ. ಕಾ. 2:14; 8:14-17; 10:44, 45) ನಾವು ಯೇಸು ತರಾನೇ ಇರಬೇಕು. ನಾವು ಹೇಳಿದ್ದೇ ನಡೀಬೇಕು ಅಂತ ಯೋಚನೆ ಮಾಡಬಾರದು. ಅಷ್ಟೇ ಅಲ್ಲ, ಬೇರೆಯವರಿಂದ ಆಗದೇ ಇರೋದನ್ನ ಮಾಡಿ ಅಂತ ನಾವು ಯಾವತ್ತೂ ಕೇಳಬಾರದು. ಆಗ ನಾವು ‘ಮಣಿಯುವವರು’ ಅಂತ ಎಲ್ಲರಿಗೂ ಗೊತ್ತಾಗುತ್ತೆ.—ಫಿಲಿ. 4:5.

ನಮಗೆ ಮಣಿಯೋ ಗುಣ ಇದ್ರೆ ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡ್ತೀವಿ. ಯೇಸು ಎಲ್ಲರ ಜೊತೆನೂ ಚೆನ್ನಾಗಿ ಇರುತ್ತಿದ್ದನು. ಎಲ್ಲರ ಜೊತೆನೂ ಬೆರೆಯುತ್ತಿದ್ದನು. ಅದನ್ನ ನೋಡಿ ಅವನ ಶತ್ರುಗಳು “ಇವನು . . . ಪಾಪಿಗಳ ಗೆಳೆಯ, ತೆರಿಗೆ ವಸೂಲಿ ಮಾಡುವವರ ಸ್ನೇಹಿತ” ಅಂತ ಹೇಳಿದ್ರು. (ಮತ್ತಾ. 11:19) ನಮ್ಮ ತರ ಬೇರೆಯವರು ಕೆಲಸ ಮಾಡದಿದ್ರೂ ನಾವು ಭೇದಭಾವ ಮಾಡದೆ ಖುಷಿಯಿಂದ ಕೆಲಸ ಮಾಡ್ತೀವಾ? ಲೂಯಿಸ್‌ ಅನ್ನೋ ಸಹೋದರ ಬೆತೆಲಲ್ಲಿ ಮತ್ತು ಸಂಚರಣಾ ಮೇಲ್ವಿಚಾರಕನಾಗಿ ಸೇವೆ ಮಾಡುವಾಗ ತುಂಬ ಸಹೋದರರ ಜೊತೆ ಕೆಲಸ ಮಾಡಿದ್ದಾರೆ. ಸಹೋದರ ಹೀಗೆ ಹೇಳ್ತಾರೆ: “ಬೇರೆಬೇರೆ ಸಹೋದರರ ಜೊತೆ ಕೆಲಸ ಮಾಡೋದು ಬೇರೆಬೇರೆ ಗಾತ್ರದ ಕಲ್ಲುಗಳಿಂದ ಒಂದು ಗೋಡೆ ಕಟ್ಟೋ ತರ ಇರುತ್ತೆ. ಆ ಕಲ್ಲುಗಳನ್ನ ಸರಿಪಡಿಸಿಕೊಂಡು ಕಟ್ಟಿದ್ರೆ ಒಂದು ಗಟ್ಟಿಮುಟ್ಟಾದ ಗೋಡೆಯನ್ನ ಕಟ್ಟೋಕೆ ಆಗುತ್ತೆ. ಅದೇ ತರ ನಾನು ಬೇರೆಯವರ ಜೊತೆ ಸೇವೆ ಮಾಡುವಾಗ ನನ್ನಲ್ಲಿ ಕೆಲವು ವಿಷಯಗಳನ್ನ ಸರಿಪಡಿಸಿಕೊಂಡೆ. ಇದರಿಂದ ಚೆನ್ನಾಗಿ, ಖುಷಿಖುಷಿಯಾಗಿ ಸೇವೆ ಮಾಡೋಕೆ ಆಯ್ತು.”

ಒಬ್ಬ ಒಳ್ಳೆ ಜೊತೆಕೆಲಸಗಾರ ಎಲ್ಲರನ್ನೂ ತನ್ನ ಕಪಿಮುಷ್ಠಿಯಲ್ಲೇ ಇಟ್ಟುಕೊಳ್ಳಬೇಕು ಅಂತ ಅವರಿಗೆ ಕಲಿಸಬೇಕಾದ ವಿಷಯಗಳನ್ನ ಕಲಿಸದೆ ಇರಲ್ಲ.

ನಾವು ನಮ್ಮ ಸಹೋದರ ಸಹೋದರಿಯರಿಗೆ ಹೇಗೆ ಮಣಿಯಬಹುದು? ನಮ್ಮ ಸೇವಾ ಗುಂಪಲ್ಲಿರೋ ಸಹೋದರ ಸಹೋದರಿಯರಿಗೆ ಬೇರೆಬೇರೆ ಜವಾಬ್ದಾರಿಗಳಿರುತ್ತೆ. ವಯಸ್ಸಿನ ಅಂತರ ಇರುತ್ತೆ. ಆದ್ರೂ ನಾವು ಅವರನ್ನ ಅರ್ಥಮಾಡಿಕೊಂಡು ಅವರ ಸಮಯ, ಪರಿಸ್ಥಿತಿಗೆ ತಕ್ಕ ಹಾಗೆ ಹೊಂದಾಣಿಕೆ ಮಾಡಿಕೊಂಡ್ರೆ ಅವರೂ ನಮ್ಮ ಜೊತೆ ಖುಷಿಯಾಗಿ ಸೇವೆ ಮಾಡ್ತಾರೆ. ಹೀಗೆ ನಮ್ಮ ಸೇವಾ ಗುಂಪಿನ ಜೊತೆ ಸೇವೆ ಮಾಡುವಾಗ ಮಣಿಯೋ ಗುಣ ತೋರಿಸಬಹುದು.

ತತ್ವ 3: ‘ಹಂಚಿಕೊಳ್ಳಿ’

ಒಳ್ಳೇ ಕೆಲಸಗಾರನಿಗೆ ‘ಹಂಚ್ಕೊಳ್ಳೋ’ ಮನಸ್ಸಿರುತ್ತೆ. (1 ತಿಮೊ. 6:18) ಯೆಹೋವ ಯಾವುದನ್ನೂ ಮುಚ್ಚಿಡದೇ ಎಲ್ಲವನ್ನೂ ಯೇಸುಗೆ ಕಲಿಸಿಕೊಟ್ಟನು. ದೇವರು “ಆಕಾಶವನ್ನು ಮಾಡಿದಾಗ” ಯೇಸು ‘ಆತನ ಜೊತೆ ಇದ್ದು’ ತನ್ನ ತಂದೆಯಿಂದ ತುಂಬ ವಿಷಯಗಳನ್ನ ಕಲಿತನು. (ಜ್ಞಾನೋ. 8:27) ಆಮೇಲೆ ಯೇಸು ಭೂಮಿಗೆ ಬಂದಾಗ ತನ್ನ ಶಿಷ್ಯರಿಗೆ ತನ್ನ ತಂದೆಯಿಂದ ‘ಕೇಳಿಸ್ಕೊಂಡ ಎಲ್ಲ ವಿಷ್ಯವನ್ನ’ ಖುಷಿಯಿಂದ ಅವರಿಗೆ ಹೇಳಿಕೊಟ್ಟನು. (ಯೋಹಾ. 15:15) ನಾವು ಯೇಸು ತರ ಇರಬೇಕು. ನಾವು ಕಲಿತ ವಿಷಯವನ್ನ ಬೇರೆಯವರಿಗೆ ಹೇಳಿಕೊಡೋದ್ರಿಂದ ನುಣುಚಿಕೊಳ್ಳಬಾರದು. ಅವರಿಗೆ ಧಾರಾಳವಾಗಿ, ಖುಷಿಯಿಂದ ಹೇಳಿಕೊಡಬೇಕು. ಬೇರೆಯವರನ್ನ ನಮ್ಮ ಕಪಿಮುಷ್ಠಿಯಲ್ಲೇ ಇಟ್ಟುಕೊಳ್ಳಬೇಕು ಅಂತ ಅವರಿಗೆ ಕಲಿಸಬೇಕಾದ ವಿಷಯವನ್ನ ಕಲಿಸದೆ ಇರಬಾರದು.

ಯಾರಾದ್ರೂ ನಮಗೆ “ನೀವು ತುಂಬ ಚೆನ್ನಾಗಿ ಕೆಲಸ ಮಾಡ್ತಿದ್ದೀರ” ಅಂತ ಹೇಳಿದ್ರೆ ಖುಷಿ ಆಗುತ್ತೆ ಅಲ್ವಾ? ಅದೇ ತರ ನಾವು ಕೂಡ ಬೇರೆಯವರು ಚೆನ್ನಾಗಿ ಕೆಲಸ ಮಾಡುವಾಗ ಅವರಿಗೆ ಪ್ರೋತ್ಸಾಹದ ಮಾತುಗಳನ್ನ ಹೇಳಬೇಕು. ಯೇಸು ಕೂಡ ತನ್ನ ಶಿಷ್ಯರು ಮಾಡಿದ ಒಳ್ಳೆ ಕೆಲಸಗಳನ್ನ ನೋಡಿ ಹೊಗಳಿದನು. (ಮತ್ತಾಯ 25:19-23; ಲೂಕ 10:17-20 ಹೋಲಿಸಿ.) ಅದ್ರಲ್ಲೂ ಅವರು ತನಗಿಂತ ‘ದೊಡ್ಡದೊಡ್ಡ ಕೆಲಸಗಳನ್ನ’ ಮಾಡ್ತಾರೆ ಅಂತ ಆತನು ಹೇಳಿದನು. (ಯೋಹಾ. 14:12) ತಾನು ಸಾಯೋ ಹಿಂದಿನ ರಾತ್ರಿ ಯೇಸು ತನ್ನ ಶಿಷ್ಯರಿಗೆ, “ನೀವು ನನ್ನ ಕಷ್ಟಗಳಲ್ಲಿ ನನ್ನ ಜೊತೆ ಯಾವಾಗ್ಲೂ ಇದ್ರಿ” ಅಂತ ಹೇಳಿ ಅವರ ಬೆನ್ನು ತಟ್ಟಿದನು. (ಲೂಕ 22:28) ಇದನ್ನ ಕೇಳಿಸಿಕೊಂಡಾಗ ಶಿಷ್ಯರಿಗೆ ಎಷ್ಟು ಖುಷಿಯಾಗಿರಬೇಕಲ್ವಾ! ಇನ್ನೂ ಜಾಸ್ತಿ ಕೆಲಸ ಮಾಡೋಕೆ ಈ ಮಾತುಗಳು ಅವರಿಗೆ ಸಹಾಯ ಮಾಡಿರಬೇಕು. ಯೇಸು ತರ ನಾವು ನಮ್ಮ ಸಹೋದರ ಸಹೋದರಿಯರಿಗೆ ಪ್ರೋತ್ಸಾಹದ ಮಾತುಗಳನ್ನ ಹೇಳಿದ್ರೆ ಅವರು ಇನ್ನೂ ಜಾಸ್ತಿ ಕೆಲಸ ಮಾಡೋಕೆ ಮುಂದೆ ಬರುತ್ತಾರೆ.

ಒಳ್ಳೆ ಜೊತೆಕೆಲಸಗಾರ ಆಗೋಕೆ ನಿಮ್ಮಿಂದ ಆಗುತ್ತೆ.

ಸಹೋದರ ಕಯೋಡೆ ಹೇಳೋದು: “ಒಬ್ಬ ವ್ಯಕ್ತಿ ಒಳ್ಳೆ ಜೊತೆಕೆಲಸಗಾರ ಅಂತ ಅನಿಸಿಕೊಳ್ಳೋಕೆ ಅವನು ಪರಿಪೂರ್ಣನಾಗಿ ಇರಬೇಕಾಗಿಲ್ಲ, ಬದಲಿಗೆ ತನ್ನ ಜೊತೆಕೆಲಸಗಾರರನ್ನ ಖುಷಿಯಾಗಿ ಕೆಲಸ ಮಾಡೋ ತರ ನೋಡಿಕೊಳ್ಳಬೇಕು ಅಷ್ಟೇ.” ನೀವೂ ಈ ತರ ಇದ್ದೀರಾ ಅಂತ ನಿಮ್ಮ ಸಹೋದರ ಸಹೋದರಿಯರ ಹತ್ರ ಕೇಳಿ ನೋಡಿ. ಯೇಸುವಿನ ಶಿಷ್ಯರು ಆತನ ಜೊತೆ ಖುಷಿಖುಷಿಯಿಂದ ಕೆಲಸ ಮಾಡಿದ ತರಾನೇ, ನಿಮ್ಮ ಜೊತೆನೂ ಸಹೋದರ ಸಹೋದರಿಯರು ಖುಷಿಯಿಂದ ಕೆಲಸ ಮಾಡುತ್ತಿದ್ದಾರೆ ಅಂತಾದ್ರೆ ಪೌಲ ಹೇಳಿದ ಹಾಗೆ “ನಿಮ್ಮ ಖುಷಿಗಾಗಿ ನಾವು ನಿಮ್ಮ ಜೊತೆ ಕೆಲಸ ಮಾಡ್ತಿದ್ದೀವಿ” ಅಂತ ಧೈರ್ಯವಾಗಿ ಹೇಳಬಹುದು.—2 ಕೊರಿಂ. 1:24.