ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 9

ಯೇಸು ತರ ಬೇರೆಯವರ ಸೇವೆ ಮಾಡಿ

ಯೇಸು ತರ ಬೇರೆಯವರ ಸೇವೆ ಮಾಡಿ

“ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ.”—ಅ. ಕಾ. 20:35.

ಗೀತೆ 84 “ನನಗೆ ಮನಸ್ಸುಂಟು”

ಕಿರುನೋಟ *

1. ಯೆಹೋವನ ಜನರು ಯಾಕೆ ಆತನ ಸೇವೆ ಮಾಡ್ತಾರೆ?

 ಯೆಹೋವನ ಜನರು ಆತನ ಸೇವೆಗೆ “ಮನಸಾರೆ ತಮ್ಮನ್ನೇ ಕೊಟ್ಕೊಳ್ತಾರೆ” ಅಂತ ಬೈಬಲಲ್ಲಿ ಎಷ್ಟೋ ವರ್ಷಗಳ ಮುಂಚೆನೇ ಹೇಳಿತ್ತು. (ಕೀರ್ತ. 110:3) ಅದನ್ನ ಅವರು ಯೇಸು ನಿರ್ದೇಶನ ಕೊಡೋ ತರಾನೇ ಮಾಡ್ತಾರೆ ಅಂತನೂ ಹೇಳಿತ್ತು. ಆ ಭವಿಷ್ಯವಾಣಿ ಈಗ ನಿಜ ಆಗ್ತಿದೆ. ಪ್ರತಿ ವರ್ಷ ಯೆಹೋವನ ಜನರು ಕೋಟಿಗಟ್ಟಲೆ ತಾಸುಗಳು ಸಿಹಿಸುದ್ದಿ ಸಾರುತ್ತಿದ್ದಾರೆ. ಅವರು ಇದನ್ನೆಲ್ಲ ಸಂಬಳಕ್ಕೋಸ್ಕರ ಮಾಡ್ತಿಲ್ಲ. ದೇವರ ಸೇವೆ ಮಾಡಬೇಕು ಅನ್ನೋ ಆಸೆಯಿಂದ ಮಾಡ್ತಿದ್ದಾರೆ. ಅಷ್ಟೇ ಅಲ್ಲ, ಅವರು ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ತಾರೆ, ಧೈರ್ಯ ತುಂಬುತ್ತಾರೆ ಮತ್ತು ನಂಬಿಕೆ ಜಾಸ್ತಿ ಮಾಡಿಕೊಳ್ಳೋಕೆ ಸಹಾಯ ಮಾಡ್ತಾರೆ. ಹೀಗೆ ಅವರು ಒಟ್ಟಿಗೆ ಸಮಯ ಕಳಿತಾರೆ. ಸಭೆಯಲ್ಲಿರೋ ಹಿರಿಯರು ಮತ್ತು ಸಹಾಯಕ ಸೇವಕರು ಕೂಟಗಳಿಗೆ ತಯಾರಿ ಮಾಡೋಕೆ ಮತ್ತು ಸಹೋದರ ಸಹೋದರಿಯರನ್ನ ಆಗಾಗ ಭೇಟಿಮಾಡಿ ಅವರನ್ನ ಪ್ರೋತ್ಸಾಹಿಸೋಕೆ ತುಂಬ ಸಮಯ ಕೊಡ್ತಾರೆ. ಅವರು ಇದನ್ನೆಲ್ಲ ಯಾಕೆ ಮಾಡ್ತಾರೆ? ಯಾಕಂದ್ರೆ ಅವರು ಯೆಹೋವನನ್ನ ಮತ್ತು ಜನರನ್ನ ತುಂಬ ಪ್ರೀತಿಸ್ತಾರೆ.—ಮತ್ತಾ. 22:37-39.

2. ರೋಮನ್ನರಿಗೆ 15:1-3ರಲ್ಲಿ ಯೇಸು ಬಗ್ಗೆ ನಮಗೇನು ಗೊತ್ತಾಗುತ್ತೆ?

2 ಯೇಸುಗೆ ತನಗಿಂತ ಬೇರೆಯವರ ಮೇಲೆನೇ ಜಾಸ್ತಿ ಪ್ರೀತಿಯಿತ್ತು. ನಾವೂ ಆತನ ತರ ಇರೋಕೆ ತುಂಬ ಪ್ರಯತ್ನ ಮಾಡ್ತೀವಿ. (ರೋಮನ್ನರಿಗೆ 15:1-3 ಓದಿ.) ಹೀಗೆ ಮಾಡೋದ್ರಿಂದ ನಮಗೆ ತುಂಬ ಒಳ್ಳೇದಾಗುತ್ತೆ. ಯಾಕಂದ್ರೆ “ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ” ಅಂತ ಯೇಸು ಹೇಳಿದ್ದಾನೆ.—ಅ. ಕಾ. 20:35.

3. ಈ ಲೇಖನದಲ್ಲಿ ನಾವೇನು ಕಲಿತೀವಿ?

3 ಬೇರೆಯವರ ಸೇವೆ ಮಾಡೋಕೆ ಯೇಸು ತುಂಬ ತ್ಯಾಗಗಳನ್ನ ಮಾಡಿದನು. ಅದ್ರಲ್ಲಿ ಕೆಲವು ಯಾವುವು? ಆತನ ತರ ನಡ್ಕೊಳ್ಳೋಕೆ ನಾವೇನು ಮಾಡಬೇಕು? ಬೇರೆಯವರ ಸೇವೆ ಮಾಡೋ ಮನಸ್ಸನ್ನ ಬೆಳೆಸಿಕೊಳ್ಳೋಕೆ ನಾವೇನು ಮಾಡಬೇಕು? ಇದರ ಬಗ್ಗೆ ನಾವು ಈ ಲೇಖನದಲ್ಲಿ ನೋಡೋಣ.

ಯೇಸು ತರ ಇರಿ

ಯೇಸುಗೆ ಸುಸ್ತಾಗಿದ್ರೂ ಜನ ಆತನ ಹತ್ರ ಬಂದಾಗ ಏನು ಮಾಡಿದನು? (ಪ್ಯಾರ 4 ನೋಡಿ)

4. ಯೇಸುಗೆ ಸುಸ್ತಾಗಿದ್ರೂ ಜನರಿಗೋಸ್ಕರ ಏನು ಮಾಡಿದ?

4 ಯೇಸುಗೆ ಸುಸ್ತಾಗಿದ್ರೂ ಜನರಿಗೆ ಸಹಾಯ ಮಾಡಿದನು. ಯೇಸು ಕಪೆರ್ನೌಮ್‌ನಲ್ಲಿ ಇದ್ದಾಗ ಇಡೀ ರಾತ್ರಿ ಪ್ರಾರ್ಥನೆ ಮಾಡಿದನು. ಹಾಗಾಗಿ ಮಾರನೇ ದಿನ ಆತನಿಗೆ ಸುಸ್ತಾಗಿದ್ದಿರಬೇಕು. ಆದ್ರೂ ಜನ ಆತನನ್ನ ಹುಡುಕಿಕೊಂಡು ಬಂದಾಗ ಅಲ್ಲಿದ್ದ ಬಡವರನ್ನ, ಹುಷಾರಿಲ್ಲದವರನ್ನ ನೋಡಿ ಆತನಿಗೆ ಅಯ್ಯೋ ಪಾಪ ಅನಿಸ್ತು. ಅದಕ್ಕೆ ಅವರನ್ನ ವಾಸಿ ಮಾಡಿದನು ಮತ್ತು ಅವರ ಮನಮುಟ್ಟೋ ಭಾಷಣ ಕೊಟ್ಟನು. ಅದನ್ನ ನಾವು ಬೆಟ್ಟದ ಭಾಷಣ ಅಂತ ಕರೆಯುತ್ತೀವಿ.—ಲೂಕ 6:12-20.

ನಾವು ಯೇಸು ತರ ಹೇಗೆ ತ್ಯಾಗ ಮಾಡಬಹುದು? (ಪ್ಯಾರ 5 ನೋಡಿ)

5. ಸುಸ್ತಾಗಿದ್ರೂ ಅಪ್ಪಂದಿರು ಯೇಸು ತರ ಹೇಗೆ ನಡ್ಕೊಳ್ತಾರೆ?

5 ಅಪ್ಪಂದಿರು ಯೇಸು ತರ ಹೇಗೆ ನಡಕೊಳ್ತಿದ್ದಾರೆ? ಒಂದು ಉದಾಹರಣೆ ನೋಡಿ. ಅಪ್ಪ ಕೆಲಸದಿಂದ ಮನೆಗೆ ತುಂಬ ಸುಸ್ತಾಗಿ ಬರುತ್ತಾರೆ. ಅವತ್ತು ರಾತ್ರಿ ಕುಟುಂಬ ಆರಾಧನೆ ಇರುತ್ತೆ. ಅದನ್ನ ಮಾಡೋಕೆ ಅವರಿಗೆ ಕಷ್ಟ ಆದ್ರೂ ಯೆಹೋವನ ಹತ್ರ ‘ಬಲ ಕೊಡಪ್ಪಾ’ ಅಂತ ಬೇಡಿಕೊಳ್ತಾರೆ. ಆಮೇಲೆ ಕುಟುಂಬ ಆರಾಧನೆ ಮಾಡ್ತಾರೆ. ಇದನ್ನ ನೋಡ್ತಿರೋ ಮಕ್ಕಳು ತಮ್ಮ ಹೆತ್ತವರಿಗೆ ಜೀವನದಲ್ಲಿ ಯೆಹೋವನೇ ಮುಖ್ಯ ಅಂತ ಅರ್ಥ ಮಾಡಿಕೊಳ್ತಾರೆ.

6. ಯೇಸು ಬೇರೆಯವರಿಗೋಸ್ಕರ ಸಮಯ ತ್ಯಾಗಮಾಡಿದ ಅನ್ನೋಕೆ ಒಂದು ಉದಾಹರಣೆ ಕೊಡಿ.

6 ಯೇಸು ತನಗಿಂತ ಬೇರೆಯವರಿಗೇ ಜಾಸ್ತಿ ಸಮಯ ಕೊಡ್ತಿದ್ದನು. ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನ ಕೊಲೆಯಾಗಿದೆ ಅಂತ ಕೇಳಿ ಯೇಸುಗೆ ಎಷ್ಟು ಬೇಜಾರಾಗಿರಬೇಕು ಅಂತ ಸ್ವಲ್ಪ ಯೋಚಿಸಿ. ತನ್ನ ಸ್ನೇಹಿತ ತೀರಿಹೋಗಿದ್ರಿಂದ ಯೇಸುಗೆ ತುಂಬ ದುಃಖ ಆಯ್ತು. ಅದಕ್ಕೆ ಅವನು “ದೋಣಿ ಹತ್ತಿ ಏಕಾಂತವಾಗಿರೋಕೆ ದೂರದ ಸ್ಥಳಕ್ಕೆ ಹೋದನು” ಅಂತ ಬೈಬಲ್‌ ಹೇಳುತ್ತೆ. (ಮತ್ತಾ. 14:10-13) ನಮಗೂ ದುಃಖ ಆದಾಗ ಯಾರೂ ಇಲ್ಲದೆ ಇರೋ ಜಾಗಕ್ಕೆ ಹೋಗಿ ಅಳುತ್ತೀವಿ. ಯೇಸುನೂ ತನಗೆ ದುಃಖ ಆಗಿದ್ರಿಂದ ಏಕಾಂತವಾದ ಜಾಗಕ್ಕೆ ಹೋದನು. ಆದ್ರೆ ಅಲ್ಲಿಗೂ ಜನ ಬಂದುಬಿಟ್ಟಿದ್ರು. ಇವರನ್ನ ನೋಡಿ ಯೇಸುಗೆ “ಕನಿಕರ ಹುಟ್ಟಿತು.” ಅವರಿಗೆ ದೇವರ ಬಗ್ಗೆ ಕಲಿಯೋ ಆಸೆಯಿದೆ ಅಂತ ಆತನಿಗೆ ಅರ್ಥ ಆಯ್ತು. ಅದಕ್ಕೆ “ಅವ್ರಿಗೆ [ಸ್ವಲ್ಪ ಅಲ್ಲ] ತುಂಬ ವಿಷ್ಯ ಕಲಿಸೋಕೆ ಶುರುಮಾಡಿದನು.”—ಮಾರ್ಕ 6:31-34; ಲೂಕ 9:10, 11.

7-8. ಹಿರಿಯರು ಯೇಸು ತರ ಹೇಗೆಲ್ಲಾ ತ್ಯಾಗ ಮಾಡ್ತಿದ್ದಾರೆ?

7 ಸಭೆ ಹಿರಿಯರು ಹೇಗೆ ಯೇಸು ತರ ನಡ್ಕೊಳ್ತಾರೆ? ತಮ್ಮ ಸಮಯ, ಶಕ್ತಿನೆಲ್ಲಾ ನಮಗೋಸ್ಕರ ಕೊಡೋಕೆ ಹಿರಿಯರು ಯಾವಾಗಲೂ ರೆಡಿ ಇರ್ತಾರೆ. ಅವರು ತೆರೆಹಿಂದೆನೂ ತುಂಬ ಕೆಲಸ ಮಾಡ್ತಾರೆ. ಉದಾಹರಣೆಗೆ ನಮ್ಮ ಸಹೋದರ ಸಹೋದರಿಯರು ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಇರುವಾಗ ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಯಲ್ಲಿರೋ ಹಿರಿಯರು ಅವರಿಗೆ ಸಹಾಯ ಮಾಡ್ತಾರೆ. ಸಭೆಯವರ ಮೇಲೆ ಅವರಿಗೆ ಪ್ರೀತಿ, ಕಾಳಜಿ ಇರೋದ್ರಿಂದ ಮಧ್ಯರಾತ್ರಿಯಾದ್ರೂ ಎದ್ದು ಬರುತ್ತಾರೆ! ಇದನ್ನೆಲ್ಲ ಮಾಡೋಕೆ ಹಿರಿಯರಷ್ಟೇ ಅಲ್ಲ ಅವರ ಕುಟುಂಬದವರೂ ತುಂಬ ತ್ಯಾಗಗಳನ್ನ ಮಾಡ್ತಾರೆ. ಇಂಥ ಹಿರಿಯರಿಗೆ ನಾವು ಎಷ್ಟು ಆಭಾರಿಗಳಾಗಿರಬೇಕು ಅಲ್ವಾ?

8 ಹಿರಿಯರು ಕಟ್ಟಡ ನಿರ್ಮಾಣ ಕಮಿಟಿ ಮತ್ತು ತುರ್ತು ಪರಿಹಾರ ಕಮಿಟಿಯಲ್ಲೂ ಸೇವೆ ಮಾಡ್ತಾರೆ. ಜೊತೆಗೆ ಸಹೋದರ ಸಹೋದರಿಯರಿಗೆ ನಿರ್ದೇಶನಗಳನ್ನ ಕೊಡೋಕೆ ಮತ್ತು ಪ್ರೋತ್ಸಾಹ ಕೊಡೋಕೆ ತುಂಬ ಸಮಯ ಕಳೀತಾರೆ. ಹಿರಿಯರು ಮತ್ತು ಅವರ ಕುಟುಂಬದವರು ಮಾಡ್ತಿರೋ ತ್ಯಾಗಕ್ಕೆ ನಾವೆಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ. ಯೆಹೋವ ಅವರನ್ನ ಆಶೀರ್ವದಿಸಲಿ ಅಂತ ನಾವೆಲ್ಲ ಬೇಡಿಕೊಳ್ಳೋಣ. ಆದ್ರೆ ಹಿರಿಯರು ಒಂದು ವಿಷಯ ಮರೆಯಬಾರದು. ಅದೇನಂದ್ರೆ ಸಭೆ ಕೆಲಸ ಅಂತ ಅದ್ರಲ್ಲೇ ಮುಳುಗಿ ತಮ್ಮ ಕುಟುಂಬದವರನ್ನ ಮರೆತುಬಿಡಬಾರದು.

ತ್ಯಾಗ ಮಾಡೋ ಮನಸ್ಸನ್ನ ಬೆಳೆಸಿಕೊಳ್ಳಿ

9. ಫಿಲಿಪ್ಪಿ 2:4, 5ರಲ್ಲಿ ಹೇಳೋ ಹಾಗೆ ನಾವು ಯಾವ ತರ ಇರಬೇಕು?

9 ಫಿಲಿಪ್ಪಿ 2:4, 5 ಓದಿ. ಬರೀ ಹಿರಿಯರಲ್ಲ, ನಾವು ಕೂಡ ಯೇಸು ತರ ತ್ಯಾಗ ಮಾಡೋಕೆ ಕಲಿಬೇಕು. ಯೇಸು “ದಾಸನಾಗಿರೋಕೆ ಒಪ್ಕೊಂಡನು” ಅಂತ ಬೈಬಲ್‌ ಹೇಳುತ್ತೆ. (ಫಿಲಿ. 2:7) ಒಬ್ಬ ದಾಸ ಅಥವಾ ಸೇವಕ ತನ್ನ ಯಜಮಾನನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಪ್ರಯತ್ನ ಮಾಡ್ತಿರುತ್ತಾನೆ. ನಾವೂ ಯೆಹೋವನಿಗೆ ಮತ್ತು ಸಹೋದರ ಸಹೋದರಿಯರಿಗೆ ಸೇವಕರಾಗಿದ್ದೀವಿ. ಹಾಗಾಗಿ ಅವರಿಗೋಸ್ಕರ ಏನು ಮಾಡಕ್ಕೂ ರೆಡಿ ಇರಬೇಕು. ಹಾಗಾಗಿ ಸೇವೆ ಮಾಡೋ ಮನಸ್ಸನ್ನ ಬೆಳೆಸಿಕೊಳ್ಳೋಕೆ ಏನು ಮಾಡಬೇಕು ಅಂತ ಈಗ ನೋಡೋಣ.

10. ನಾವು ಯಾವ ಪ್ರಶ್ನೆಗಳನ್ನ ಕೇಳಿಕೊಳ್ಳಬೇಕು?

10 ‘ನನಗೆ ಸಹಾಯ ಮಾಡೋ ಮನಸ್ಸಿದೆಯಾ’ ಅಂತ ಕೇಳಿಕೊಳ್ಳಿ. ‘ಯಾರಿಗಾದ್ರೂ ಸಹಾಯ ಬೇಕಿದ್ದಾಗ ನನ್ನ ಸಮಯ, ಶಕ್ತಿನೆಲ್ಲಾ ತ್ಯಾಗ ಮಾಡೋಕೆ ನಾನು ರೆಡಿ ಇದ್ದೀನಾ? ಉದಾಹರಣೆಗೆ, ಆಸ್ಪತ್ರೆಯಲ್ಲಿರೋ ಒಬ್ಬ ಸಹೋದರನನ್ನ ನೋಡಿಕೊಂಡು ಬರೋಕೆ ಅಥವಾ ವಯಸ್ಸಾದ ಸಹೋದರಿಯನ್ನ ಕೂಟಕ್ಕೆ ಕರ್ಕೊಂಡು ಬರೋಕೆ ಯಾರಾದ್ರೂ ನನಗೆ ಹೇಳಿದಾಗ ನಾನು ಅದನ್ನ ಮಾಡ್ತೀನಾ? ಅಧಿವೇಶನದ ಹಾಲ್‌ ಅಥವಾ ಸಭಾಗೃಹ ಕ್ಲೀನ್‌ ಮಾಡೋಕೆ ಸ್ವಯಂಸೇವಕರು ಬೇಕು ಅಂತ ಗೊತ್ತಾದಾಗ ನಾನು ಹೆಸರು ಕೊಡ್ತೀನಾ?’ ಅಂತ ನಮ್ಮನ್ನೇ ಕೇಳಿಕೊಳ್ಳಬೇಕು. ನಾವು ಬೇರೆಯವರಿಗೋಸ್ಕರ ಸಮಯ, ಶಕ್ತಿ, ಹಣವನ್ನ ತ್ಯಾಗ ಮಾಡುವಾಗ ಯೆಹೋವನಿಗೆ ತುಂಬ ಖುಷಿಯಾಗುತ್ತೆ. ಆದ್ರೆ ಈ ತರ ತ್ಯಾಗ ಮಾಡೋಕೆ ಮನಸ್ಸಿಲ್ಲ ಅಂದ್ರೆ ಏನು ಮಾಡೋದು?

11. ತ್ಯಾಗ ಮಾಡೋಕೆ ಮನಸ್ಸಿಲ್ಲ ಅಂದ್ರೆ ಏನು ಮಾಡಬೇಕು?

11 ಯೆಹೋವನ ಹತ್ರ ಬೇಡಿಕೊಳ್ಳಿ. ಬೇರೆಯವರಿಗೆ ಸಹಾಯ ಮಾಡೋಕೆ ನಮಗೆ ಮನಸ್ಸಿಲ್ಲ ಅಥವಾ ತ್ಯಾಗ ಮಾಡೋಕೆ ನಮಗೆ ಕಷ್ಟ ಆಗ್ತಿದೆ ಅಂತ ಗೊತ್ತಾದಾಗ, ಯೆಹೋವನ ಹತ್ರ ಮನಸ್ಸುಬಿಚ್ಚಿ ಪ್ರಾರ್ಥನೆ ಮಾಡಿ. ನಿಮ್ಮ ಮನಸ್ಸಲ್ಲಿ ಇರೋದನ್ನ ಮುಚ್ಚುಮರೆಯಿಲ್ಲದೆ ಯೆಹೋವನ ಹತ್ರ ಹೇಳಿ. ಬೇರೆಯವರಿಗೋಸ್ಕರ ತ್ಯಾಗ ಮಾಡೋ “ಬಯಕೆಯನ್ನ . . . ಶಕ್ತಿನ” ಕೊಡಪ್ಪಾ ಅಂತ ಯೆಹೋವ ಹತ್ರ ಬೇಡಿಕೊಳ್ಳಿ.—ಫಿಲಿ. 2:13.

12. ಯುವ ಸಹೋದರರು ಸಭೆಗೋಸ್ಕರ ಏನೆಲ್ಲಾ ಮಾಡಬಹುದು?

12 ನೀವು ದೀಕ್ಷಾಸ್ನಾನ ಪಡ್ಕೊಂಡಿರೋ ಯುವ ಸಹೋದರನಾಗಿದ್ರೆ, ‘ನನಗೆ ಸಹೋದರ ಸಹೋದರಿಯರ ಸೇವೆ ಮಾಡೋ ಮನಸ್ಸು ಕೊಡಪ್ಪಾ’ ಅಂತ ಯೆಹೋವನ ಹತ್ರ ಬೇಡಿಕೊಳ್ಳಿ. ಕೆಲವು ದೇಶಗಳಲ್ಲಿ ಹಿರಿಯರಿಗಿಂತ ಸಹಾಯಕ ಸೇವಕರು ಕಡಿಮೆ ಇದ್ದಾರೆ. ಅವರಲ್ಲಿ ತುಂಬ ಜನ ವಯಸ್ಸಾದವರೇ ಇದ್ದಾರೆ. ಅಷ್ಟೇ ಅಲ್ಲ, ಈಗ ಜಾಸ್ತಿ ಜನ ಸತ್ಯಕ್ಕೆ ಬರುತ್ತಿರೋದ್ರಿಂದ ಸಭೆಗಳೂ ಜಾಸ್ತಿಯಾಗ್ತಿದೆ. ಹಾಗಾಗಿ ಅವರನ್ನ ನೋಡಿಕೊಳ್ಳೋಕೆ ಯುವ ಸಹೋದರರು ಬೇಕಾಗಿದ್ದಾರೆ. ನೀವು ಅಂಥ ಕಡೆ ಹೋಗಿ ಸೇವೆ ಮಾಡಿದ್ರೆ ನಿಮಗೆ ತುಂಬ ಖುಷಿ ಸಿಗುತ್ತೆ. ಯಾಕಂದ್ರೆ ಹೀಗೆ ಮಾಡೋದ್ರಿಂದ ನೀವು ಯೆಹೋವ ದೇವರನ್ನ ಮೆಚ್ಚಿಸುತ್ತೀರ, ಸಹೋದರ ಸಹೋದರಿಯರೂ ನಿಮ್ಮನ್ನ ಗೌರವಿಸುತ್ತಾರೆ ಮತ್ತು ನಿಮಗೂ ಬೇರೆಯವರಿಗೆ ಸಹಾಯ ಮಾಡಿದ ತೃಪ್ತಿ ಸಿಗುತ್ತೆ.

ಯೂದಾಯದಲ್ಲಿದ್ದ ಕ್ರೈಸ್ತರು ಯೊರ್ದನ್‌ ನದಿಯಾಚೆ ಇರೋ ಪೆಲ ಅನ್ನೋ ಜಾಗಕ್ಕೆ ಓಡಿಹೋದ್ರು. ಅಲ್ಲಿಗೆ ಈಗಾಗಲೇ ಹೋಗಿದ್ದ ಕ್ರೈಸ್ತರು ಆಗಷ್ಟೇ ಬಂದಿರೋ ಸಹೋದರ ಸಹೋದರಿಯರಿಗೆ ಆಹಾರ ಹಂಚ್ತಿದ್ದಾರೆ (ಪ್ಯಾರ 13 ನೋಡಿ)

13-14. ನಮ್ಮ ಸಹೋದರ ಸಹೋದರಿಯರಿಗೆ ನಾವು ಹೇಗೆಲ್ಲಾ ಸಹಾಯ ಮಾಡಬಹುದು? (ಮುಖಪುಟ ಚಿತ್ರ ನೋಡಿ.)

13 ಯಾರಿಗಾದರೂ ಸಹಾಯ ಬೇಕಾ ಅಂತ ಯಾವಾಗಲೂ ನೋಡ್ತಾ ಇರಿ. ಯೂದಾಯದಲ್ಲಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲ, “ಒಳ್ಳೇದನ್ನ ಮಾಡೋಕೆ ಮತ್ತು ನಿಮ್ಮ ಹತ್ರ ಇರೋದನ್ನ ಬೇರೆಯವ್ರ ಜೊತೆ ಹಂಚ್ಕೊಳ್ಳೋಕೆ ಮರಿಬೇಡಿ. ಯಾಕಂದ್ರೆ ಇಂಥ ಬಲಿಗಳಿಂದ ದೇವರಿಗೆ ತುಂಬ ಖುಷಿ ಆಗುತ್ತೆ” ಅಂತ ಹೇಳಿದ. (ಇಬ್ರಿ. 13:16) ಪೌಲ ಈ ಬುದ್ಧಿವಾದ ಕೊಟ್ಟಿದ್ದು ಒಳ್ಳೇದೇ ಆಯ್ತು. ಯಾಕಂದ್ರೆ ಸ್ವಲ್ಪದ್ರಲ್ಲೇ ಅಲ್ಲಿದ್ದ ಕ್ರೈಸ್ತರು ತಮ್ಮ ಮನೆ, ಸಂಬಂಧಿಕರು ಮತ್ತು ಊರನ್ನ ಬಿಟ್ಟು ‘ಬೆಟ್ಟಗಳಿಗೆ ಓಡಿಹೋಗಬೇಕಿತ್ತು.’ (ಮತ್ತಾ. 24:16) ಆಗ ಅವರು ಒಬ್ರಿಗೊಬ್ಬರು ಸಹಾಯ ಮಾಡಬೇಕಿತ್ತು. ಪೌಲ ಹೇಳಿದ ಸಲಹೆಯನ್ನು ಅವರು ಪಾಲಿಸುತ್ತಾ ಇದ್ದಿದ್ರೆ ಮುಂದೆ ಅವರು ಬೇರೆ ಊರಿಗೆ ಹೋದ ಮೇಲೂ ಆ ಸಲಹೆಯನ್ನ ಪಾಲಿಸೋಕೆ ಆಗ್ತಿತ್ತು. ಆಗ ಹೊಸ ಜಾಗದಲ್ಲಿ ಜೀವನ ಮಾಡೋಕೆ ಅವರಿಗೆ ಸುಲಭ ಆಗ್ತಿತ್ತು.

14 ನಮ್ಮ ಸಹೋದರ ಸಹೋದರಿಯರು ‘ಸಹಾಯ ಬೇಕು’ ಅಂತ ಅವರಾಗೇ ಬಂದು ಕೇಳಲ್ಲ. ಉದಾಹರಣೆಗೆ, ಒಬ್ಬ ಸಹೋದರನ ಹೆಂಡತಿ ತೀರಿಹೋದಾಗ ಅಡುಗೆ ಮಾಡೋಕೆ, ಅಂಗಡಿಗೆ ಹೋಗೋಕೆ ಅಥವಾ ಮನೆ ಕೆಲಸ ಮಾಡೋಕೆ ಅವರಿಗೆ ಸಹಾಯ ಬೇಕಾಗುತ್ತೆ. ಆದ್ರೆ ಅವರು ಬೇರೆಯವರ ಹತ್ರ ಕೇಳದೇ ಇರಬಹುದು, “ನನ್ನಿಂದ ಅವ್ರಿಗೆ ಯಾಕೆ ತೊಂದ್ರೆ” ಅಂತ ನೆನಸಬಹುದು. ಆದ್ರೆ ಇಂಥ ಕೆಲಸಗಳನ್ನ ನಾವು ಮಾಡಿಕೊಟ್ರೆ ಅವರಿಗೆ ಖಂಡಿತ ಖುಷಿಯಾಗುತ್ತೆ. “ಅವ್ರನ್ನ ಬೇರೆ ಯಾರಾದ್ರು ನೋಡಿಕೊಳ್ತಾರೆ ಬಿಡು” ಅಥವಾ “ಅವರಿಗೆ ಸಹಾಯ ಬೇಕಿದ್ರೆ ಬಂದು ಕೇಳ್ತಿದ್ರು” ಅಂತ ನಾವು ನೆನಸಬಾರದು. ಯಾಕಂದ್ರೆ ನಾವು ಅವರ ಜಾಗದಲ್ಲಿ ಇದ್ದಿದ್ರೆ ನಮಗೂ ಯಾರಾದ್ರೂ ಬಂದು ಸಹಾಯ ಮಾಡಿದಾಗ ಎಷ್ಟು ಖುಷಿಯಾಗುತ್ತಿತ್ತು ಅಲ್ವಾ?

15. ಬೇರೆಯವರು ನಮ್ಮ ಹತ್ರ ಸಹಾಯ ಕೇಳಬೇಕಂದ್ರೆ ನಾವು ಎಂಥವರಾಗಿರಬೇಕು?

15 ಯಾರಾದ್ರೂ ಸಹಾಯ ಕೇಳ್ಕೊಂಡು ನನ್ನ ಹತ್ರ ಬರುತ್ತಾರಾ? ಯಾರಿಗಾದ್ರೂ ಸಹಾಯ ಬೇಕಾದಾಗ ಖುಷಿಖುಷಿಯಾಗಿ ಸಹಾಯ ಮಾಡೋ ಸಹೋದರ ಸಹೋದರಿಯರು ನಮ್ಮ ಸಭೆಗಳಲ್ಲಿ ಖಂಡಿತ ಇದ್ದಾರೆ. ನಮಗೆ ಸಹಾಯ ಬೇಕಾದಾಗ ಅವರ ಹತ್ರ ಕೇಳೋಕೆ ನಾವು ಹಿಂದೆ ಮುಂದೆ ನೋಡಲ್ಲ. ನಾವೂ ಅವರ ತರಾನೇ ಇರಬೇಕು ಅಂತ ಆಸೆ ಪಡ್ತೀವಿ. 45 ವರ್ಷದ ಆ್ಯಲನ್‌ ಅನ್ನೋ ಹಿರಿಯನ ಉದಾಹರಣೆ ನೋಡಿ. ಅವರು ಹೇಳಿದ್ದು: “ಸಹಾಯ ಬೇಕಾದಾಗ ಜನ ಯೇಸುನ ಹುಡುಕಿಕೊಂಡು ಹೋಗ್ತಿದ್ರು. ಯಾಕಂದ್ರೆ ಆತನು ಎಷ್ಟೇ ಬಿಝಿಯಾಗಿದ್ರೂ ಸಹಾಯ ಮಾಡ್ತಾನೆ ಅಂತ ಅವರಿಗೆ ಗೊತ್ತಿತ್ತು. ತಮ್ಮ ಮೇಲೆ ಯೇಸುಗೆ ಎಷ್ಟು ಪ್ರೀತಿಯಿದೆ ಅಂತ ಅವರು ನೋಡಿದ್ರು. ನಾನೂ ಯೇಸು ತರ ಇರ್ಬೇಕು, ಎಲ್ರೂ ನನ್ನನ್ನ ಫ್ರೆಂಡ್‌ ತರ ನೋಡಬೇಕು ಮತ್ತು ಅವರಿಗೆ ಸಹಾಯ ಬೇಕಾದಾಗ ನನ್ನ ಹತ್ರ ಬರೋಕೆ ಹಿಂದೆ ಮುಂದೆ ನೋಡಬಾರದು ಅಂತ ಆಸೆ ಪಡ್ತೀನಿ.”

16. ಕೀರ್ತನೆ 119:59, 60ರಲ್ಲಿ ಹೇಳಿರೋ ಹಾಗೆ ನಾವು ಯೇಸು ತರಾನೇ ನಡೆದುಕೊಳ್ಳಬೇಕಂದ್ರೆ ಏನು ಮಾಡಬೇಕು?

16 ನಾವು ಯೇಸು ತರ ಪರಿಪೂರ್ಣರಾಗಿ ಇರೋಕೆ ಆಗಲ್ಲ, ಹಾಗಂತ ನಾವು ಬೇಜಾರು ಮಾಡಿಕೊಳ್ಳಬಾರದು. (ಯಾಕೋ. 3:2) ಇದನ್ನ ಅರ್ಥ ಮಾಡಿಕೊಳ್ಳೋಕೆ ಒಂದು ಉದಾಹರಣೆ ನೊಡೋಣ. ಒಬ್ಬ ವಿದ್ಯಾರ್ಥಿ ಟೀಚರ್‌ ಹತ್ರ ಚಿತ್ರ ಬಿಡಿಸೋದನ್ನ ಕಲಿತುಕೊಳ್ತಾನೆ. ಆ ವಿದ್ಯಾರ್ಥಿ ಸೇರಿಕೊಂಡ ಹೊಸದ್ರಲ್ಲೇ ಅವನ ಟೀಚರ್‌ ತರ ಚಿತ್ರ ಬಿಡಿಸೋಕೆ ಆಗಲ್ಲ. ಮೊದಮೊದಲು ಬಿಡಿಸುವಾಗ ತುಂಬ ತಪ್ಪುಗಳನ್ನ ಮಾಡ್ತಾನೆ. ಆದ್ರೆ ಹೋಗ್ತಾ-ಹೋಗ್ತಾ ಟೀಚರಿಂದ ಕಲಿತಾಗ, ತನ್ನ ತಪ್ಪುಗಳನ್ನ ತಿದ್ದಿಕೊಂಡು ಒಂದು ದಿನ ಟೀಚರ್‌ ತರಾನೇ ಅವನೂ ಚಿತ್ರ ಬಿಡಿಸ್ತಾನೆ. ಅದೇ ತರ ನಾವು ಬೈಬಲ್‌ ಓದುವಾಗ, ನಮ್ಮ ತಪ್ಪುಗಳನ್ನ ತಿದ್ದಿಕೊಂಡಾಗ ಯೇಸು ತರಾನೇ ನಾವೂ ನಡೆದುಕೊಳ್ಳೋಕೆ ಆಗುತ್ತೆ.—ಕೀರ್ತನೆ 119:59, 60 ಓದಿ.

ತ್ಯಾಗ ಮಾಡೋದ್ರಲ್ಲಿ ಖುಷಿಯಿದೆ

ಹಿರಿಯರು ಯೇಸು ತರ ಬೇರೆಯವರಿಗೋಸ್ಕರ ತ್ಯಾಗ ಮಾಡಿದಾಗ ಯುವಜನರು ಅವರನ್ನ ನೋಡಿ ಕಲಿತಾರೆ (ಪ್ಯಾರ 17 ನೋಡಿ) *

17-18. ಯೇಸು ತರ ತ್ಯಾಗ ಮಾಡೋದ್ರಿಂದ ಏನೆಲ್ಲಾ ಒಳ್ಳೇದಾಗುತ್ತೆ?

17 ನಾವು ಒಬ್ರಿಗೆ ಸಹಾಯ ಮಾಡೋದನ್ನ ನೋಡಿದಾಗ ಬೇರೆಯವರೂ ಅದ್ರಿಂದ ಕಲಿತಾರೆ. ಟಿಮ್‌ ಅನ್ನೋ ಹಿರಿಯ ಹೀಗೆ ಹೇಳ್ತಾರೆ: “ನಮ್ಮ ಸಭೆಯಲ್ಲಿ ಸಹೋದರ ಸಹೋದರಿಯರು ಬೇರೆಯವರಿಗೆ ಸಹಾಯ ಮಾಡ್ತಿದ್ರು. ಇದನ್ನ ನೋಡಿದ ಯುವ ಸಹೋದರರೂ ಬೇರೆಯವರಿಗೆ ಸಹಾಯ ಮಾಡೋದನ್ನ ಕಲಿತ್ರು. ಇದ್ರಿಂದ ಅವರು ಸಹಾಯಕ ಸೇವಕರಾಗೋಕೆ ಆಯ್ತು. ಇವರು ಸಭೆಗೂ ಹಿರಿಯರಿಗೂ ತುಂಬ ಸಹಾಯ ಮಾಡ್ತಿದ್ದಾರೆ.”

18 ಎಲ್ಲಿ ನೋಡಿದ್ರೂ ಸ್ವಾರ್ಥ ತುಂಬಿರೋ ಲೋಕದಲ್ಲಿ ನಾವು ಜೀವನ ಮಾಡ್ತಿದ್ದೀವಿ. ಆದ್ರೆ ಯೆಹೋವನ ಸಾಕ್ಷಿಗಳಾದ ನಾವು ಆ ರೀತಿ ಅಲ್ಲ, ಯೇಸು ಕ್ರಿಸ್ತನ ತರ ಬೇರೆಯವರಿಗೋಸ್ಕರ ತ್ಯಾಗ ಮಾಡೋಕೆ ಯಾವಾಗಲೂ ರೆಡಿ ಇರುತ್ತೀವಿ. ನಾವೆಲ್ರೂ ಯೇಸು ತರ ಪರಿಪೂರ್ಣರಾಗಿ ಇರೋಕಾಗಲ್ಲ, ಆದ್ರೆ ‘ಆತನ ತರ ನಡಿಯೋಕೆ’ ಪ್ರಯತ್ನ ಮಾಡೋಕಾಗುತ್ತೆ. (1 ಪೇತ್ರ 2:21) ನಾವು ಯೇಸು ತರ ತ್ಯಾಗ ಮಾಡೋಕೆ ನಮ್ಮಿಂದ ಆಗೋದನ್ನೆಲ್ಲಾ ಮಾಡುವಾಗ ಖುಷಿಯಾಗಿ ಇರುತ್ತೀವಿ ಮತ್ತು ಯೆಹೋವ ಕೂಡ ನಮ್ಮನ್ನ ಇಷ್ಟ ಪಡ್ತಾನೆ.

ಗೀತೆ 5 ನಮಗೆ ಆದರ್ಶಪ್ರಾಯನಾದ ಕ್ರಿಸ್ತನು

^ ಪ್ಯಾರ. 5 ಯೇಸುಗೆ ತನಗಿಂತ ಬೇರೆಯವರ ಮೇಲೆ ಜಾಸ್ತಿ ಪ್ರೀತಿ ಇತ್ತು. ಯೇಸು ತರ ನಾವು ಹೇಗೆ ಜನರಿಗೆ ಪ್ರೀತಿ ತೋರಿಸೋದು ಮತ್ತು ಇದ್ರಿಂದ ನಮಗೆ ಏನೆಲ್ಲಾ ಒಳ್ಳೇದಾಗುತ್ತೆ ಅಂತ ಈ ಲೇಖನದಲ್ಲಿ ನೋಡೋಣ.

^ ಪ್ಯಾರ. 57 ಚಿತ್ರ ವಿವರಣೆ: ಡ್ಯಾನ್‌ನ ಅಪ್ಪ ಆಸ್ಪತ್ರೆಯಲ್ಲಿದ್ದಾಗ ಅವರನ್ನ ನೊಡೋಕೆ ಇಬ್ಬರು ಹಿರಿಯರು ಬಂದಿದ್ದಾರೆ. ಇದನ್ನ ಡ್ಯಾನ್‌ ನೋಡ್ತಿದ್ದಾನೆ. ಅವನಿಗೆ ಎಷ್ಟು ಇಷ್ಟ ಆಯ್ತು ಅಂದ್ರೆ ‘ನಾನೂ ಅವರ ತರ ಇರಬೇಕು’ ಅಂತ ಅಂದ್ಕೊಳ್ತಿದ್ದಾನೆ. ಆಮೇಲೆ ಅವನು ಬೇರೆ ಸಹೋದರ ಸಹೋದರಿಯರಿಗೆ ಸಹಾಯ ಮಾಡ್ತಿದ್ದಾನೆ. ಅವನು ಸಹಾಯ ಮಾಡ್ತಿರೋದನ್ನ ಬೆನ್‌ ನೋಡ್ತಿದ್ದಾನೆ. ಆಮೇಲೆ ಅವನೂ ಡ್ಯಾನ್‌ ಜೊತೆಗೆ ಸಭಾಗೃಹ ಶುಚಿ ಮಾಡೋ ಕೆಲಸದಲ್ಲಿ ಕೈ ಜೋಡಿಸಿದ್ದಾನೆ.