ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 11

ದೀಕ್ಷಾಸ್ನಾನ ಆದಮೇಲೂ “ಹೊಸ ವ್ಯಕ್ತಿತ್ವ” ಹಾಕೊಂಡೇ ಇರಿ

ದೀಕ್ಷಾಸ್ನಾನ ಆದಮೇಲೂ “ಹೊಸ ವ್ಯಕ್ತಿತ್ವ” ಹಾಕೊಂಡೇ ಇರಿ

“ದೇವರು ಕೊಡೋ ಹೊಸ ವ್ಯಕ್ತಿತ್ವ ಹಾಕ್ಕೊಳ್ಳಿ.”ಕೊಲೊ 3:10.

ಗೀತೆ 11 ಯೆಹೋವನ ಹೃದಯವನ್ನು ಸಂತೋಷಪಡಿಸುವುದು

ಕಿರುನೋಟ *

1. ನಮ್ಮ ವ್ಯಕ್ತಿತ್ವ ಯಾವುದರ ಮೇಲೆ ಹೊಂದಿಕೊಂಡಿದೆ?

 ಇತ್ತೀಚೆಗೆ ನಾವು ದೀಕ್ಷಾಸ್ನಾನ ತಗೊಂಡಿರಲಿ ಅಥವಾ ತುಂಬ ವರ್ಷಗಳಿಂದ ಸತ್ಯದಲ್ಲಿರಲಿ, ನಾವೆಲ್ಲರೂ ಯೆಹೋವನಿಗೆ ಇಷ್ಟ ಆಗೋ ವ್ಯಕ್ತಿಗಳಾಗಿರಬೇಕು ಅಂತ ಆಸೆ ಪಡ್ತೀವಿ. ಆ ರೀತಿ ಇರಬೇಕಂದ್ರೆ ನಾವು ಯೋಚನೆ ಮಾಡೋ ವಿಷಯದ ಬಗ್ಗೆ ಹುಷಾರಾಗಿರಬೇಕು. ಯಾಕಂದ್ರೆ ನಾವು ಹೇಗೆ ಯೋಚನೆ ಮಾಡುತ್ತೀವೋ ನಮ್ಮ ವ್ಯಕ್ತಿತ್ವನೂ ಹಾಗೇ ಇರುತ್ತೆ. ಕೆಟ್ಟದ್ದನ್ನೇ ಯೋಚನೆ ಮಾಡುತ್ತಿದ್ದರೆ ಕೆಟ್ಟದ್ದನ್ನೇ ಮಾಡಿಬಿಡುತ್ತೀವಿ. (ಎಫೆ. 4:17-19) ಆದ್ರೆ ಒಳ್ಳೇ ವಿಷ್ಯಗಳ ಬಗ್ಗೆ ಯೋಚನೆ ಮಾಡುತ್ತಿದ್ದರೆ ನಮ್ಮ ಮಾತು, ನಡತೆ ಯೆಹೋವ ಅಪ್ಪಗೆ ಇಷ್ಟ ಆಗೋ ತರ ಇರುತ್ತೆ.—ಗಲಾ. 5:16.

2. ಈ ಲೇಖನದಲ್ಲಿ ನಾವೇನು ಕಲಿತೀವಿ?

2 ಹಿಂದಿನ ಲೇಖನದಲ್ಲಿ ನೋಡಿದ ಹಾಗೆ ನಮಗೆ ಕೆಟ್ಟ ಯೋಚನೆ ಬರೋದೇ ಇಲ್ಲ ಅಂತ ಹೇಳೋಕಾಗಲ್ಲ. ಆದ್ರೆ ಆ ಯೋಚನೆಗಳನ್ನ ಅಲ್ಲಿಗೇ ನಿಲ್ಲಿಸಿ ತಪ್ಪು ಮಾಡದೇ ಇರೋ ತರ ನೋಡಿಕೊಳ್ಳಬಹುದು. ನಾವು ದೀಕ್ಷಾಸ್ನಾನ ಪಡಕೊಳ್ಳಬೇಕಾದ್ರೆ ಹಳೇ ವ್ಯಕ್ತಿತ್ವವನ್ನ ತೆಗೆದುಹಾಕಬೇಕು. ಅದಕ್ಕೆ ನಾವು ಮಾಡಬೇಕಾದ ಮೊದಲನೇ ವಿಷಯ ಏನಂದ್ರೆ ಯೆಹೋವ ದೇವರಿಗೆ ಇಷ್ಟ ಆಗದೇ ಇರೋ ಮಾತು ಮತ್ತು ನಡತೆನ ಬಿಟ್ಟುಬಿಡಬೇಕು. ಇದರ ಜೊತೆ ಯೆಹೋವನನ್ನು ಮೆಚ್ಚಿಸಬೇಕಂದ್ರೆ, ಬೈಬಲಲ್ಲಿ ಹೇಳಿರೋ ತರ ‘ಹೊಸ ವ್ಯಕ್ತಿತ್ವವನ್ನ ಹಾಕಿಕೊಳ್ಳಬೇಕು.’ (ಕೊಲೊ. 3:10) ಹಾಗಾಗಿ ಈ ಲೇಖನದಲ್ಲಿ ನಾವು “ಹೊಸ ವ್ಯಕ್ತಿತ್ವ” ಅಂದ್ರೆ ಏನು, ಅದನ್ನ ಹಾಕೊಳ್ಳೋದು ಹೇಗೆ, ಅದನ್ನ ಕಾಪಾಡಿಕೊಳ್ಳೋದು ಹೇಗೆ ಅಂತ ಕಲಿಯೋಣ.

“ಹೊಸ ವ್ಯಕ್ತಿತ್ವ” ಅಂದ್ರೆ ಏನು?

3. (ಎ) “ಹೊಸ ವ್ಯಕ್ತಿತ್ವ” ಅಂದ್ರೆ ಏನು? (ಗಲಾತ್ಯ 5:22, 23) (ಬಿ) ಅದನ್ನ ಹಾಕೊಂಡಿರೋ ವ್ಯಕ್ತಿ ಹೇಗಿರುತ್ತಾನೆ?

3 “ಹೊಸ ವ್ಯಕ್ತಿತ್ವ” ಹಾಕೊಂಡಿರೋ ವ್ಯಕ್ತಿ ಯೆಹೋವನ ತರಾನೇ ಯೋಚನೆ ಮಾಡ್ತಾನೆ ಮತ್ತು ನಡಕೊಳ್ತಾನೆ. ಅವನ ಯೋಚನೆ, ಭಾವನೆ ಮತ್ತು ನಡತೆಯಲ್ಲಿ ಪವಿತ್ರಶಕ್ತಿಯಿಂದ ಬರೋ ಗುಣಗಳನ್ನ ತೋರಿಸ್ತಾನೆ. (ಗಲಾತ್ಯ 5:22, 23 ಓದಿ.) ಉದಾಹರಣೆಗೆ, ಅವನು ಯೆಹೋವನನ್ನು ಮತ್ತು ಆತನ ಜನರನ್ನು ಪ್ರೀತಿಸ್ತಾನೆ. (ಮತ್ತಾ. 22:36-39) ಕಷ್ಟ ಬಂದಾಗಲೂ ಖುಷಿಯಾಗಿರುತ್ತಾನೆ. (ಯಾಕೋ. 1:2-4) ಜಗಳ ಆದಾಗ ಅವನಾಗೇ ಬೇರೆಯವರ ಹತ್ರ ಹೋಗಿ ಸಮಾಧಾನ ಮಾಡಿಕೊಳ್ತಾನೆ. (ಮತ್ತಾ. 5:9) ಎಲ್ಲರ ಜೊತೆ ದಯೆ, ಪ್ರೀತಿಯಿಂದ ನಡೆದುಕೊಳ್ತಾನೆ. (ಕೊಲೊ. 3:13) ಅವನು ಒಳ್ಳೇದನ್ನ ಪ್ರೀತಿಸ್ತಾನೆ ಮತ್ತು ಅದನ್ನೇ ಮಾಡ್ತಾನೆ. (ಲೂಕ 6:35) ಯೆಹೋವನ ಮೇಲೆ ನಂಬಿಕೆ ಇದೆ ಅಂತ ತೋರಿಸ್ತಾನೆ. (ಯಾಕೋ. 2:18) ಬೇರೆಯವರು ಕೆರಳಿಸಿದ್ರೂ ಅವನು ಸ್ವನಿಯಂತ್ರಣ ತೋರಿಸ್ತಾನೆ.—1 ಕೊರಿಂ. 9:25, 27; ತೀತ 3:2.

4. ಹೊಸ ವ್ಯಕ್ತಿತ್ವ ಹಾಕೊಬೇಕಾದ್ರೆ ಗಲಾತ್ಯ 5:22, 23ರಲ್ಲಿರೋ ಕೆಲವು ಗುಣಗಳನ್ನ ಬೆಳೆಸಿಕೊಂಡ್ರೆ ಸಾಕಾ? ವಿವರಿಸಿ.

4 ನಾವು ಹೊಸ ವ್ಯಕ್ತಿತ್ವವನ್ನ ಹಾಕೊಳ್ಳಬೇಕಂದ್ರೆ ಗಲಾತ್ಯ 5:22, 23ರಲ್ಲಿರೋ ಗುಣಗಳನ್ನ ಮತ್ತು ಬೈಬಲಲ್ಲಿ ತಿಳಿಸಿರೋ ಇನ್ನೂ ಬೇರೆಬೇರೆ ಗುಣಗಳನ್ನ ಬೆಳೆಸಿಕೊಳ್ಳಬೇಕು. * ಈ ಗುಣಗಳಲ್ಲಿ ಯಾವುದಾದ್ರೂ ಒಂದನ್ನ ಬೆಳೆಸಿಕೊಂಡ್ರೆ ಸಾಕಾಗಲ್ಲ. ಎಲ್ಲಾ ಗುಣಗಳನ್ನೂ ಬೆಳೆಸಿಕೊಂಡು ತೋರಿಸಬೇಕು. ಯಾಕಂದ್ರೆ ಈ ಗುಣಗಳಿಗೆ ಒಂದಕ್ಕೊಂದು ಸಂಬಂಧ ಇದೆ. ಉದಾಹರಣೆಗೆ, ನೀವು ನಿಮ್ಮ ನೆರೆಯವರನ್ನ ಪ್ರೀತಿಸಿದ್ರೆ ಅವರ ಜೊತೆ ದಯೆಯಿಂದ ನಡೆದುಕೊಳ್ಳುತ್ತೀರ ಮತ್ತು ತಾಳ್ಮೆನೂ ತೋರಿಸ್ತೀರ. ನಿಮ್ಮಲ್ಲಿ ನಿಜವಾಗಲೂ ಒಳ್ಳೇತನ ಇದ್ರೆ ಸೌಮ್ಯಭಾವ ಮತ್ತು ಸ್ವನಿಯಂತ್ರಣ ತೋರಿಸ್ತೀರ.

ನಾವು ಹೊಸ ವ್ಯಕ್ತಿತ್ವವನ್ನ ಹಾಕೊಳ್ಳೋದು ಹೇಗೆ?

ನಾವು ಯೇಸು ತರ ಯೋಚನೆ ಮಾಡೋಕೆ ಕಲಿತಷ್ಟು ಆತನ ವ್ಯಕ್ತಿತ್ವ ನಮಗೂ ಬರುತ್ತೆ (ಪ್ಯಾರ 5, 8, 10, 12, 14 ನೋಡಿ)

5. (ಎ) ‘ಕ್ರಿಸ್ತನ ಮನಸ್ಸನ್ನ ತಿಳಿದುಕೊಳ್ಳೋದರ’ ಅರ್ಥ ಏನು? (ಬಿ) ನಾವು ಆತನ ಬಗ್ಗೆ ಯಾಕೆ ತಿಳಿದುಕೊಳ್ಳಬೇಕು? (1 ಕೊರಿಂಥ 2:16)

5 1 ಕೊರಿಂಥ 2:16 ಓದಿ. ಹೊಸ ವ್ಯಕ್ತಿತ್ವವನ್ನ ಹಾಕೊಳ್ಳಬೇಕಾದ್ರೆ ‘ಕ್ರಿಸ್ತನ ಮನಸ್ಸನ್ನ ತಿಳಿದುಕೊಳ್ಳಬೇಕು.’ ಇನ್ನೊಂದು ಮಾತಲ್ಲಿ ಹೇಳೋದಾದ್ರೆ, ಯೇಸು ಕ್ರಿಸ್ತನ ಹಾಗೇ ಯೋಚಿಸಬೇಕು ಮತ್ತು ಆತನ ತರಾನೇ ನಡಕೊಳ್ಳಬೇಕು. ಪವಿತ್ರಶಕ್ತಿಯಿಂದ ಬರೋ ಎಲ್ಲಾ ಗುಣಗಳನ್ನ ಆತನು ತೋರಿಸಿದನು. ಆತನು ಯೋಚನೆ ಮಾಡುತ್ತಿದ್ದಿದ್ದು, ನಡಕೊಳ್ತಾ ಇದ್ದಿದ್ದೆಲ್ಲಾ ಯೆಹೋವನ ತರಾನೇ ಇತ್ತು. ನಾವೂ ಯೇಸುವಿನ ಬಗ್ಗೆ ತಿಳಿದುಕೊಳ್ಳಬೇಕಾದ್ರೆ ಆತನ ಬಗ್ಗೆ ಓದಬೇಕು. (ಇಬ್ರಿ. 1:3) ನಾವು ಯೇಸುವಿನ ಬಗ್ಗೆ ತಿಳಿದುಕೊಂಡಷ್ಟು ಆತನ ತರಾನೇ ಯೋಚನೆ ಮಾಡೋಕೆ ಆಗುತ್ತೆ, ಆತನ ತರಾನೇ ನಡಕೊಳ್ಳೋಕೆ ಆಗುತ್ತೆ.—ಫಿಲಿ. 2:5.

6. ನಮ್ಮಿಂದ ಯೇಸು ತರ ಇರೋಕೆ ಆಗಲ್ಲ ಅಂತ ಅನಿಸಿದಾಗ ಯಾವ ವಿಷಯಗಳನ್ನ ಮನಸ್ಸಲ್ಲಿ ಇಟ್ಟುಕೊಳ್ಳಬೇಕು?

6 ‘ನಾನು ಯೇಸು ತರ ಪರಿಪೂರ್ಣ ವ್ಯಕ್ತಿ ಅಲ್ಲ. ನನ್ನಿಂದ ಆತನ ತರ ಇರೋಕಾಗಲ್ಲ’ ಅಂತ ನಾವು ಯೋಚಿಸಬಹುದು. ಆದ್ರೆ ನಾವು ಕೆಲವು ವಿಷಯಗಳನ್ನ ಮನಸ್ಸಲ್ಲಿ ಇಡಬೇಕು. ಒಂದು, ನಾವು ಯೆಹೋವ ಮತ್ತು ಯೇಸು ತರ ಸೃಷ್ಟಿಯಾಗಿದ್ದೀವಿ. ಅವರಲ್ಲಿರೋ ಗುಣಗಳನ್ನ ನಮ್ಮಿಂದಾನೂ ತೋರಿಸೋಕೆ ಆಗುತ್ತೆ. ಹಾಗಾಗಿ ಒಂದುಮಟ್ಟಿಗೆ ನಾವು ಅವರ ತರ ಇರಬಹುದು. (ಆದಿ. 1:26) ಎರಡು, ಯೆಹೋವ ನಮಗೆ ಪವಿತ್ರಶಕ್ತಿ ಕೊಡ್ತಾನೆ. ಈ ಶಕ್ತಿನಾ ಬೇರೆ ಯಾವುದಕ್ಕೂ ಹೋಲಿಸೋಕೆ ಆಗಲ್ಲ. ನಮ್ಮಿಂದ ಮಾಡೋಕೆ ಆಗದಿರೋ ಎಷ್ಟೋ ಕೆಲಸಗಳನ್ನ ಈ ಪವಿತ್ರಶಕ್ತಿಯ ಸಹಾಯದಿಂದ ಮಾಡಬಹುದು. ಮೂರು, ಪವಿತ್ರಶಕ್ತಿಯಿಂದ ಬರೋ ಎಲ್ಲಾ ಗುಣಗಳನ್ನ ನಾವು ಈಗಲೇ ತೋರಿಸಬೇಕು ಅಂತ ಯೆಹೋವ ನಮ್ಮಿಂದ ಕೇಳಿಕೊಳ್ಳುತ್ತಿಲ್ಲ. ಅವನ್ನ ಬೆಳೆಸಿಕೊಳ್ಳೋಕೆ ಅಂತಾನೇ 1,000 ವರ್ಷಗಳನ್ನ ಇಟ್ಟಿದ್ದಾನೆ. ಆಗ ನಾವು ಎಲ್ಲಾ ಗುಣಗಳನ್ನ ಪರಿಪೂರ್ಣವಾಗಿ ತೋರಿಸಬಹುದು. ಆದ್ರೆ ಅಲ್ಲಿ ತನಕ ನಾವು ಯೇಸು ತರ ಇರೋಕೆ ಪ್ರಯತ್ನ ಮಾಡಬೇಕು. (ಪ್ರಕ. 20:1-3) ಅದನ್ನ ಮಾಡೋಕೆ ನಮಗೆ ಕಷ್ಟ ಆದಾಗ ತನ್ನ ಹತ್ರ ಸಹಾಯ ಕೇಳಬೇಕು ಅಂತ ಯೆಹೋವ ಬಯಸ್ತಾನೆ.

7. ನಾವು ಯಾವ ವಿಷಯ ಚರ್ಚೆ ಮಾಡ್ತೀವಿ?

7 ನಾವು ಎಷ್ಟರ ಮಟ್ಟಿಗೆ ಯೇಸು ತರ ಇದ್ದೀವಿ ಅಂತ ನೋಡೋಣ. ಅದಕ್ಕೆ ಪವಿತ್ರಶಕ್ತಿಯಿಂದ ಬರೋ 4 ಗುಣಗಳನ್ನ ಈಗ ಚರ್ಚೆ ಮಾಡೋಣ. ಯೇಸು ಈ ಗುಣಗಳನ್ನ ಹೇಗೆ ತೋರಿಸಿದ ಅಂತ ತಿಳಿದುಕೊಳ್ಳುವಾಗ ನಾವು ಹೊಸ ವ್ಯಕ್ತಿತ್ವವನ್ನ ಬೆಳೆಸಿಕೊಂಡಿದ್ದೀವಾ ಮತ್ತು ಈ ಗುಣಗಳನ್ನ ಇನ್ನೂ ಚೆನ್ನಾಗಿ ತೋರಿಸೋಕೆ ಆಗುತ್ತಾ ಅಂತ ಕಲಿಯೋಣ.

8. ಯೇಸು ಹೇಗೆಲ್ಲಾ ಪ್ರೀತಿ ತೋರಿಸಿದನು?

8 ಯೇಸುಗೆ ಯೆಹೋವ ದೇವರ ಮೇಲೆ ತುಂಬ ಪ್ರೀತಿ ಇದ್ದಿದ್ರಿಂದ ಆತನಿಗೋಸ್ಕರ ಮತ್ತು ನಮಗೋಸ್ಕರ ಎಷ್ಟೋ ತ್ಯಾಗಗಳನ್ನ ಮಾಡಿದನು. (ಯೋಹಾ. 14:31; 15:13) ಯೇಸು ಭೂಮಿಯಲ್ಲಿದ್ದಾಗ ಜನರ ಮೇಲೆ ಪ್ರೀತಿ ಇದೆ ಅಂತ ತೋರಿಸಿದನು. ಉದಾಹರಣೆಗೆ, ತನ್ನನ್ನ ದ್ವೇಷಿಸುತ್ತಿದ್ದವರನ್ನೂ ಪ್ರೀತಿಸಿದನು, ಅವರಿಗೆ ಕಾಳಜಿ ತೋರಿಸಿದನು. ಎಲ್ಲಕ್ಕಿಂತ ಮುಖ್ಯವಾಗಿ ಜನರಿಗೆ ದೇವರ ಸರ್ಕಾರದ ಬಗ್ಗೆ ಕಲಿಸಿದನು. (ಲೂಕ 4:43, 44) ಅಷ್ಟೇ ಅಲ್ಲ, ತುಂಬ ನೋವು, ಹಿಂಸೆಯನ್ನ ಅನುಭವಿಸಿ ಜನರಿಗೋಸ್ಕರ ಪ್ರಾಣ ಕೊಟ್ಟನು. ಹೀಗೆ ಎಲ್ಲರೂ ನಿತ್ಯಜೀವ ಪಡೆಯೋಕೆ ಸಹಾಯ ಮಾಡಿದನು.

9. ಯೇಸು ತರ ನಾವು ಹೇಗೆಲ್ಲಾ ಪ್ರೀತಿ ತೋರಿಸಬಹುದು?

9 ನಮಗೆ ಯೆಹೋವ ದೇವರ ಮೇಲೆ ಪ್ರೀತಿ ಇರೋದ್ರಿಂದಾನೇ ದೀಕ್ಷಾಸ್ನಾನ ತಗೊಂಡ್ವಿ. ನಾವು ಯೆಹೋವನಿಗೆ ಇನ್ನೂ ಹೇಗೆಲ್ಲಾ ಪ್ರೀತಿ ತೋರಿಸಬಹುದು? ಯೇಸು ತರ ಜನರನ್ನ ಪ್ರೀತಿಸಬೇಕು. ಇದರ ಬಗ್ಗೆ ಅಪೊಸ್ತಲ ಯೋಹಾನ ಏನು ಹೇಳಿದ ಅಂದ್ರೆ “ಯಾರಾದ್ರೂ ‘ನಾನು ದೇವರನ್ನ ಪ್ರೀತಿಸ್ತೀನಿ’ ಅಂತ ಹೇಳಿ ತನ್ನ ಸಹೋದರನ ಮೇಲೆ ದ್ವೇಷ ಬೆಳಿಸ್ಕೊಂಡ್ರೆ ಅವನು ಹೇಳ್ತಿರೋದು ಸುಳ್ಳು. ಕಣ್ಣಿಗೆ ಕಾಣೋ ಸಹೋದರನನ್ನ ಪ್ರೀತಿ ಮಾಡಿಲ್ಲಾಂದ್ರೆ ಕಣ್ಣಿಗೆ ಕಾಣದ ದೇವರನ್ನ ಹೇಗೆ ಪ್ರೀತಿ ಮಾಡಕ್ಕಾಗುತ್ತೆ?” (1 ಯೋಹಾ. 4:20) ಹಾಗಾಗಿ ನಾವು ನಮ್ಮನ್ನೇ ಕೆಲವು ಪ್ರಶ್ನೆಗಳನ್ನ ಕೇಳಿಕೊಳ್ಳೋಣ: “ನಾನು ಜನರನ್ನ ಎಷ್ಟರ ಮಟ್ಟಿಗೆ ಪ್ರೀತಿಸ್ತೀನಿ? ಅವರು ನನ್ನ ಜೊತೆ ಕೋಪದಿಂದ ನಡೆದುಕೊಂಡ್ರೂ ನಾನು ಪ್ರೀತಿ ತೋರಿಸ್ತೀನಾ? ಎಲ್ಲರ ಜೊತೆ ಪ್ರೀತಿಯಿಂದ ಮಾತಾಡ್ತೀನಾ? ಯೆಹೋವ ದೇವರ ಬಗ್ಗೆ ಜನರಿಗೆ ಕಲಿಸೋಕೆ ನನ್ನ ಸಮಯ ಶಕ್ತಿನೆಲ್ಲಾ ಕೊಡ್ತೀನಾ? ನಾನು ಪ್ರೀತಿ ತೋರಿಸಿದಾಗ ತುಂಬ ಜನ ಅದಕ್ಕೆ ಬೆಲೆ ಕೊಡದೇ ಇದ್ದಾಗಲೂ, ನನ್ನನ್ನು ವಿರೋಧಿಸಿದಾಗಲೂ ಅವರಿಗೆ ಪ್ರೀತಿ ತೋರಿಸ್ತಾ ಇರುತ್ತೀನಾ? ಜನರನ್ನ ಶಿಷ್ಯರನ್ನಾಗಿ ಮಾಡೋಕೆ ನಾನು ಜಾಸ್ತಿ ಪ್ರಯತ್ನ ಹಾಕ್ತಿದ್ದೀನಾ?”—ಎಫೆ. 5:15, 16.

10. ಯೇಸು ಶಾಂತಿ ಸಮಾಧಾನದಿಂದ ಇರುತ್ತಿದ್ದನು ಅಂತ ನಮಗೆ ಹೇಗೆ ಗೊತ್ತು?

10 ಯೇಸು ಜನರ ಜೊತೆ ಯಾವಾಗಲೂ ಶಾಂತಿ ಸಮಾಧಾನದಿಂದ ಇರುತ್ತಿದ್ದನು. ಯಾರಾದ್ರೂ ಅವನಿಗೆ ಕೆಟ್ಟದು ಮಾಡಿದ್ರೂ ಆತನು ಅವರಿಗೆ ಕೆಟ್ಟದ್ದು ಮಾಡುತ್ತಿರಲಿಲ್ಲ. ಆತನೇ ಮೊದಲು ಹೋಗಿ ಸಮಾಧಾನ ಮಾಡಿಕೊಳ್ಳುತ್ತಿದ್ದನು ಮತ್ತು ಬೇರೆಯವರಿಗೂ ಅದೇ ತರ ಇರೋಕೆ ಕಲಿಸುತ್ತಿದ್ದನು. ಒಬ್ಬ ವ್ಯಕ್ತಿ ತನ್ನ ಸಹೋದರನ ಜೊತೆ ಸಮಾಧಾನವಾಗಿ ಇದ್ರೆ ಮಾತ್ರ ಯೆಹೋವ ಅವನ ಆರಾಧನೆಯನ್ನ ಮೆಚ್ಚುತ್ತಾನೆ ಅಂತ ಕಲಿಸಿದನು. (ಮತ್ತಾ. 5:9, 23, 24) ತಮ್ಮ ಮಧ್ಯೆ ಯಾರು ದೊಡ್ಡವರು ಅಂತ ಅಪೊಸ್ತಲರು ಜಗಳವಾಡ್ತಾ ಇದ್ದರು. ಆಗೆಲ್ಲಾ ಯೇಸು ಅವರಿಗೆ ಜಗಳ ಆಡಬಾರದು, ಸಮಾಧಾನವಾಗಿರಬೇಕು ಅಂತ ಹೇಳುತ್ತಿದ್ದನು.—ಲೂಕ 9:46-48; 22:24-27.

11. ಜಗಳ ಆದಾಗ ನಾವೇನು ಮಾಡಬೇಕು?

11 ಶಾಂತಿ ಸಮಾಧಾನದಿಂದ ಇರೋಕೆ ಜಗಳ ಮಾಡದೇ ಇದ್ರೆ ಮಾತ್ರ ಸಾಕಾಗಲ್ಲ. ಬದಲಿಗೆ ಯಾರಾದ್ರೂ ನಮ್ಮ ಜೊತೆ ಜಗಳವಾಡಿದ್ರೆ ನಾವೇ ಮೊದಲು ಹೋಗಿ ಅದನ್ನ ಸರಿಪಡಿಸಿಕೊಳ್ಳಬೇಕು. ಅಷ್ಟೇ ಅಲ್ಲ, ಬೇರೆ ಯಾರಾದ್ರೂ ಜಗಳಮಾಡಿಕೊಂಡಿದ್ದಾರೆ ಅಂತ ಗೊತ್ತಾದ್ರೆ ಅದನ್ನ ಬಗೆಹರಿಸಿಕೊಳ್ಳೋಕೆ ಅವರಿಗೂ ಪ್ರೋತ್ಸಾಹಿಸಬೇಕು. (ಫಿಲಿ. 4:2, 3; ಯಾಕೋ. 3:17, 18) ನಾವು ಈ ಪ್ರಶ್ನೆಗಳನ್ನ ಕೇಳಿಕೊಂಡ್ರೆ ಒಳ್ಳೇದು: ‘ಬೇರೆಯವರ ಜೊತೆ ಒಳ್ಳೇ ಸಂಬಂಧ ಕಾಪಾಡಿಕೊಳ್ಳೋಕೆ ನಾನು ಎಷ್ಟರ ಮಟ್ಟಿಗೆ ಪ್ರಯತ್ನ ಮಾಡುತ್ತಿದ್ದೀನಿ? ನನಗೆ ಬೇಜಾರು ಮಾಡಿದವರ ಮೇಲೆ ಮುನಿಸಿಕೊಳ್ಳುತ್ತೀನಾ? ನಾನೇ ಹೋಗಿ ಸಮಾಧಾನ ಮಾಡಿಕೊಳ್ಳುತ್ತೀನಾ? ಅಥವಾ ಅವರೇ ಬಂದು ನನ್ನ ಹತ್ರ ಮಾತಾಡಲಿ ಅಂತ ಕಾಯುತ್ತೀನಾ? ಸಭೆಯಲ್ಲಿ ಯಾರಾದ್ರೂ ಜಗಳ ಮಾಡಿಕೊಂಡಿದ್ದಾರೆ ಅಂತ ಗೊತ್ತಾದಾಗ ಅವರಿಗೂ ಸರಿಮಾಡಿಕೊಳ್ಳೋಕೆ ಹೇಳುತ್ತೀನಾ?’

12. ಯೇಸು ಹೇಗೆಲ್ಲಾ ಕರುಣೆ ತೋರಿಸಿದನು?

12 ಯೇಸು ಎಲ್ಲರಿಗೂ ದಯೆ ತೋರಿಸುತ್ತಿದ್ದನು. (ಮತ್ತಾ. 11:28-30) ಆತನಿಗೆ ಎಷ್ಟೇ ಕಷ್ಟ ಇದ್ರೂ ಬೇರೆಯವರ ಪರಿಸ್ಥಿತಿ ಅರ್ಥಮಾಡಿಕೊಂಡು ಅವರ ಜೊತೆ ಪ್ರೀತಿಯಿಂದ ನಡಕೊಳ್ಳುತ್ತಿದ್ದನು. ಒಮ್ಮೆ ಫೊಯಿನಿಕೆಯ ಸ್ತ್ರೀ ತನ್ನ ಮಗುವನ್ನು ವಾಸಿಮಾಡೋಕೆ ಕೇಳಿಕೊಂಡು ಬಂದಾಗ ಯೇಸು ಅದಕ್ಕೆ ಮೊದಮೊದಲು ಒಪ್ಪಲಿಲ್ಲ. ಆದ್ರೆ ಆಕೆ ತೋರಿಸಿದ ನಂಬಿಕೆಯನ್ನು ನೋಡಿ ಯೇಸುಗೆ ಕರುಣೆ ಉಕ್ಕಿಬಂತು. ಆತನು ಆ ಮಗುನ ವಾಸಿಮಾಡಿದನು. (ಮತ್ತಾ. 15:22-28) ಯೇಸು ದಯೆ ತೋರಿಸುತ್ತಿದ್ದನು ನಿಜ, ಆದ್ರೆ ತಿದ್ದಬೇಕಾದ ಸಮಯ ಬಂದಾಗ ತಿದ್ದುತ್ತಿದ್ದನು. ಉದಾಹರಣೆಗೆ, ಯೆಹೋವನಿಗೆ ಇಷ್ಟ ಇಲ್ಲದಿರೋ ತರ ನಡಕೊಳ್ಳೋಕೆ ಪೇತ್ರ ಯೇಸುಗೆ ಹೇಳಿದಾಗ ಯೇಸು ಅವನನ್ನು ಎಲ್ಲರ ಮುಂದೆ ತಿದ್ದಿದನು. (ಮಾರ್ಕ 8:32, 33) ಪೇತ್ರನಿಗೆ ಅವಮಾನ ಮಾಡಬೇಕು ಅಂತ ಯೇಸು ಹೀಗೆ ಮಾಡಲಿಲ್ಲ. ಬದಲಿಗೆ ತಮ್ಮ ಬಗ್ಗೆನೇ ಜಾಸ್ತಿ ಯೋಚಿಸಬಾರದು ಅಂತ ಬೇರೆ ಶಿಷ್ಯರಿಗೂ ಕಲಿಸೋಕೆ ಹೀಗೆ ಮಾಡಿದನು. ತನ್ನನ್ನು ಹೀಗೆ ತಿದ್ದಿದ್ರಿಂದ ಪೇತ್ರನಿಗೆ ಬೇಜಾರಾಗಿರಬಹುದು. ಆದ್ರೆ ಇದ್ರಿಂದ ಮುಂದೆ ಅವನಿಗೆ ಒಳ್ಳೇದಾಯ್ತು.

13. ನಾವು ದಯೆ ತೋರಿಸೋ ಒಂದು ವಿಧ ಯಾವುದು?

13 ನಾವು ಯಾರನ್ನ ಪ್ರೀತಿಸುತ್ತೀವೋ ಕೆಲವೊಮ್ಮೆ ಅವರಿಗೆ ಬುದ್ಧಿವಾದ ಹೇಳಬೇಕಾಗುತ್ತೆ. ಇದೂ ಒಂದರ್ಥದಲ್ಲಿ ಅವರಿಗೆ ದಯೆ ತೋರಿಸಿದ ಹಾಗೆ. ಆದ್ರೆ ಸಲಹೆ ಕೊಡುವಾಗ ಯೇಸು ತರ ಪ್ರೀತಿಯಿಂದ ನಡಕೊಳ್ಳಿ, ಬೈಬಲಿಂದ ಸಲಹೆ ಕೊಡಿ. ಅವರು ತಿದ್ದಿಕೊಳ್ಳುತ್ತಾರೆ ಅಂತ ನಂಬಿ. “ನಮ್ಮವರು ಯಾರಾದರೂ ತಪ್ಪು ಮಾಡಿದಾಗ ಧೈರ್ಯವಾಗಿ ಹೋಗಿ ಅವರನ್ನ ತಿದ್ದುತ್ತೀನಾ? ಸಲಹೆ ಕೊಡುವಾಗ ಕೋಪದಿಂದ ಕೊಡುತ್ತೀನಾ ಅಥವಾ ಪ್ರೀತಿಯಿಂದ ಕೊಡುತ್ತೀನಾ? ನಾನು ಯಾಕೆ ಅವರಿಗೆ ಸಲಹೆ ಕೊಡುತ್ತಿದ್ದೀನಿ? ನಾನು ಸಲಹೆ ಕೊಡುತ್ತಿರೋದು ಅವರು ಮಾಡಿದ್ದು ನನಗೆ ಸರಿ ಅನಿಸಲಿಲ್ಲ ಅಂತಾನಾ ಅಥವಾ ಅವರಿಗೆ ಒಳ್ಳೇದಾಗಲಿ ಅಂತಾನಾ?” ಅಂತ ನಿಮ್ಮನ್ನೇ ಕೇಳಿಕೊಳ್ಳಿ.

14. ಯೇಸು ಹೇಗೆ ಒಳ್ಳೇತನ ತೋರಿಸಿದನು?

14 ಯೇಸು ಯಾವುದು ಒಳ್ಳೇದು ಅಂತ ತಿಳಿದುಕೊಂಡಿದ್ದಷ್ಟೇ ಅಲ್ಲ ಅದನ್ನ ಮಾಡಿದನು. ಯೇಸುಗೆ ಯೆಹೋವನ ಮೇಲೆ ಪ್ರೀತಿ ಇದ್ದಿದ್ರಿಂದ ಸರಿಯಾದ ಉದ್ದೇಶದಿಂದಾನೇ ಬೇರೆಯವರಿಗೆ ಸಹಾಯ ಮಾಡಿದನು. ಒಬ್ಬ ಒಳ್ಳೇ ವ್ಯಕ್ತಿ ಬೇರೆಯವರಿಗೆ ಹೇಗೆಲ್ಲಾ ಒಳ್ಳೇದು ಮಾಡಬಹುದು ಅನ್ನೋದರ ಬಗ್ಗೆನೇ ಯೋಚನೆ ಮಾಡುತ್ತಿರುತ್ತಾನೆ. ಹಾಗೇ ನಾವೂ ಜನರಿಗೆ ಸಹಾಯ ಮಾಡುವಾಗ ಒಳ್ಳೇ ಉದ್ದೇಶದಿಂದಾನೇ ಮಾಡಬೇಕು. ಆದ್ರೆ ‘ಒಬ್ಬ ವ್ಯಕ್ತಿ ಕೆಟ್ಟ ಉದ್ದೇಶದಿಂದ ಹೇಗೆ ಬೇರೆಯವರಿಗೆ ಸಹಾಯ ಮಾಡೋಕೆ ಆಗುತ್ತೆ?’ ಅಂತ ನಿಮ್ಮ ಮನಸ್ಸಿಗೆ ಬರಬಹುದು. ಬೇರೆಯವರು ನೋಡಬೇಕು ಅಂತಾನೇ ಬಡವರಿಗೆ ಸಹಾಯ ಮಾಡಿದವರ ಬಗ್ಗೆ ಯೇಸು ಹೇಳಿದ್ದನ್ನ ನೆನಪಿಸಿಕೊಳ್ಳಿ. ಇಂಥ ದುರುದ್ದೇಶದಿಂದ ಸಹಾಯ ಮಾಡೋರನ್ನ ಕಂಡರೆ ಯೆಹೋವನಿಗೆ ಒಂಚೂರು ಇಷ್ಟ ಆಗಲ್ಲ.—ಮತ್ತಾ. 6:1-4.

15. ಒಳ್ಳೇತನ ಅಂದ್ರೆ ಏನು?

15 ನಮಗೇನಾದ್ರೂ ಲಾಭ ಆಗುತ್ತೆ ಅಂತ ಬೇರೆಯವರಿಗೆ ಸಹಾಯ ಮಾಡೋದು ಒಳ್ಳೇತನ ಅಲ್ಲ. ಹಾಗಾಗಿ “ಬೇರೆಯವರಿಗೆ ಸಹಾಯ ಮಾಡಬೇಕು ಅಂತ ಗೊತ್ತಿದ್ರೂ ಸುಮ್ಮನೆ ಕೂತಿದ್ದೀನಾ ಅಥವಾ ಹೋಗಿ ಅವರಿಗೆ ಸಹಾಯ ಮಾಡುತ್ತಿದ್ದೀನಾ? ಒಂದುವೇಳೆ ಸಹಾಯ ಮಾಡಿದ್ರೂ ಯಾಕೆ ಮಾಡುತ್ತಿದ್ದೀನಿ?” ಅಂತ ನಿಮ್ಮನ್ನೇ ಕೇಳಿಕೊಳ್ಳಿ.

ಹೊಸ ವ್ಯಕ್ತಿತ್ವವನ್ನ ಯಾವಾಗಲೂ ಹಾಕೊಂಡಿರೋಕೆ ಏನು ಮಾಡಬೇಕು?

16. ಪ್ರತಿದಿನ ನಾವೆಲ್ಲರೂ ಏನು ಮಾಡ್ತಾ ಇರಬೇಕು ಮತ್ತು ಯಾಕೆ?

16 ದೀಕ್ಷಾಸ್ನಾನ ತಗಳ್ಳೋ ವರೆಗೂ ಹೊಸ ವ್ಯಕ್ತಿತ್ವ ಹಾಕಿಕೊಂಡಿದ್ರೆ ಸಾಕು ಅಂತ ನಾವು ನೆನಸಬಾರದು. ಅದೊಂದು ಹೊಸ ಬಟ್ಟೆ ತರ. ಅದನ್ನ ಯಾವಾಗಲೂ ಚೆನ್ನಾಗಿ ಇಟ್ಟುಕೊಳ್ಳಬೇಕು. ಅದಕ್ಕೇ ಪವಿತ್ರಶಕ್ತಿಯಿಂದ ಬರೋ ಗುಣಗಳನ್ನ ಪ್ರತಿದಿನ ತೋರಿಸ್ತಾ ಇರಬೇಕು. ನಾವು ಯಾಕೆ ಅವನ್ನ ಪ್ರತಿದಿನ ತೋರಿಸಬೇಕು? ಯಾಕಂದ್ರೆ ಯೆಹೋವ ತರ ನಾವು ಇರಬೇಕು. ಆತನು ಇವತ್ತಿನ ತನಕ ಕೆಲಸ ಮಾಡುತ್ತಾ ಇದ್ದಾನೆ, ಪವಿತ್ರಶಕ್ತಿ ಕೂಡ ಕೆಲಸ ಮಾಡ್ತಾ ಇದೆ. (ಆದಿ. 1:2) ಹಾಗಾಗಿ ನಾವೂ ಕೆಲಸ ಮಾಡುತ್ತಾ ಇರಬೇಕು. ಅಷ್ಟೇ ಅಲ್ಲ, “ಒಳ್ಳೇ ಕೆಲಸ ಇಲ್ಲದೆ ಇರೋ ನಂಬಿಕೆನೂ ಸತ್ತದ್ದೇ” ಅಂತ ಶಿಷ್ಯನಾದ ಯಾಕೋಬ ಬರೆದ. (ಯಾಕೋ. 2:26) ಹಾಗಾಗಿ ಪವಿತ್ರಶಕ್ತಿಯಿಂದ ಬರೋ ಬೇರೆ ಗುಣಗಳನ್ನೂ ನಾವು ಪ್ರತಿದಿನ ತೋರಿಸ್ತಾ ಇರಬೇಕು ಅಂತ ಇದ್ರಿಂದ ಗೊತ್ತಾಗುತ್ತೆ. ಈ ರೀತಿ ಮಾಡುವಾಗ ಪವಿತ್ರಶಕ್ತಿ ನಮ್ಮಲ್ಲಿ ಕೆಲಸ ಮಾಡುತ್ತಾ ಇದೆ ಅಂತ ನಾವು ತೋರಿಸಿಕೊಡುತ್ತೀವಿ.

17. ಪವಿತ್ರಶಕ್ತಿಯಿಂದ ಬರೋ ಗುಣಗಳನ್ನ ನಾವು ಕೆಲವೊಮ್ಮೆ ತೋರಿಸದೇ ಹೋದಾಗ ಏನು ಮಾಡಬೇಕು?

17 ದೀಕ್ಷಾಸ್ನಾನ ತಗೊಂಡು ತುಂಬ ವರ್ಷಗಳಾಗಿದ್ರೂ ಕೆಲವೊಮ್ಮೆ ನಮಗೆ ಪವಿತ್ರಶಕ್ತಿಯಿಂದ ಬರೋ ಗುಣಗಳನ್ನ ತೋರಿಸೋಕೆ ಆಗದೇ ಇರಬಹುದು. ಆದ್ರೆ ನಾವು ಸೋತು ಹೋಗಬಾರದು, ಪ್ರಯತ್ನ ಮಾಡುತ್ತಾ ಇರಬೇಕು. ಇದಕ್ಕೊಂದು ಉದಾಹರಣೆ ನೋಡಿ. ನಿಮಗೆ ಇಷ್ಟವಾಗಿರೋ ಬಟ್ಟೆ ಹರಿದು ಹೋದರೆ ನೀವು ಅದನ್ನ ಬಿಸಾಡುತ್ತೀರಾ? ಇಲ್ಲ. ಅದನ್ನ ಹೊಲಿದು ಜೋಪಾನವಾಗಿ ಇಟ್ಟುಕೊಳ್ಳುತ್ತೀರ. ಅದೇ ತರ ನೀವು ಕೆಲವೊಮ್ಮೆ ಪ್ರೀತಿ, ದಯೆ ತೋರಿಸದೆ ಬೇರೆಯವರ ಮನಸ್ಸನ್ನ ನೋಯಿಸಿಬಿಡಬಹುದು. ಹಾಗಂತ ಬೇಜಾರು ಮಾಡಿಕೊಳ್ಳಬೇಡಿ, ಅವರ ಹತ್ರ ಹೋಗಿ ಮನಸಾರೆ ಕ್ಷಮೆ ಕೇಳಿ, ಆಗ ಎಲ್ಲಾ ಸರಿಹೋಗುತ್ತೆ. ಮುಂದೆ ಮತ್ತೆ ಇಂಥ ತಪ್ಪು ಆಗದೇ ಇರೋ ತರ ನೋಡಿಕೊಳ್ಳಿ.

18. ನಾವೇನನ್ನ ನೆನಪಲ್ಲಿ ಇಟ್ಟುಕೊಳ್ಳಬೇಕು?

18 ಯೇಸುವಿನ ಉದಾಹರಣೆಯಿಂದ ನಾವು ಎಷ್ಟೊಂದು ಪಾಠಗಳನ್ನ ಕಲಿತ್ವಿ ಅಲ್ವಾ! ನಾವು ಯೇಸು ತರ ಯೋಚಿಸಿದ್ರೆ ಆತನ ತರಾನೇ ನಡಕೊಳ್ಳೋಕೆ ಆಗುತ್ತೆ. ಆತನ ತರ ನಡಕೊಂಡ್ರೆ ಹೊಸ ವ್ಯಕ್ತಿತ್ವವನ್ನ ಹಾಕೊಳ್ಳೋಕೆ ಸುಲಭ ಆಗುತ್ತೆ. ಈ ಲೇಖನದಲ್ಲಿ ಪವಿತ್ರಶಕ್ತಿಯ 4 ಗುಣಗಳನ್ನ ನೋಡಿದ್ವಿ. ಇನ್ನೂ ಉಳಿದಿರೋ ಗುಣಗಳ ಬಗ್ಗೆ ಚೆನ್ನಾಗಿ ಕಲಿತು ಅದನ್ನ ತೋರಿಸೋಕೆ ಪ್ರಯತ್ನ ಮಾಡಿ. ಇದಕ್ಕೆ ಸಂಬಂಧಪಟ್ಟ ಲೇಖನಗಳು ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಅನ್ನೋ ಪುಸ್ತಕದಲ್ಲಿ ಸಿಗುತ್ತೆ. ಅದರಲ್ಲಿ “ಕ್ರೈಸ್ತ ಜೀವನ” ಅನ್ನೋ ವಿಷಯದ ಕೆಳಗೆ “ಪವಿತ್ರಾತ್ಮದ ಫಲ” ಅನ್ನೋ ಉಪ-ವಿಷಯ ನೋಡಿ. ನೀವು ಹೊಸ ವ್ಯಕ್ತಿತ್ವವನ್ನ ಹಾಕೊಳ್ಳೋಕೆ ಮತ್ತು ಉಳಿಸಿಕೊಳ್ಳೋಕೆ ನಿಮ್ಮ ಕೈಲಾದ ಎಲ್ಲವನ್ನ ಮಾಡಿದ್ರೆ ಯೆಹೋವ ಖಂಡಿತ ಸಹಾಯ ಮಾಡುತ್ತಾನೆ ಅನ್ನೋದನ್ನ ನೆನಪಲ್ಲಿಡಿ.

ಗೀತೆ 61 ನಾನು ಯಾವ ರೀತಿಯ ವ್ಯಕ್ತಿಯಾಗಿರಬೇಕು?

^ ನಾವು ಮುಂಚೆ ಎಷ್ಟೇ ಕೆಟ್ಟವರಾಗಿದ್ರೂ ಈಗ ‘ಹೊಸ ವ್ಯಕ್ತಿತ್ವವನ್ನ’ ಹಾಕಿಕೊಳ್ಳೋಕೆ ಆಗುತ್ತೆ. ಅದಕ್ಕೆ ಈಗ ನಮ್ಮ ಯೋಚನೆಯನ್ನ ಸರಿಮಾಡಿಕೊಳ್ಳಬೇಕು ಮತ್ತು ಯೇಸು ತರ ಇರೋಕೆ ಪ್ರಯತ್ನ ಮಾಡಬೇಕು. ಹಾಗಾಗಿ ಈ ಲೇಖನದಲ್ಲಿ ಯೇಸು ಹೇಗೆಲ್ಲಾ ಯೋಚನೆ ಮಾಡುತ್ತಿದ್ದನು ಮತ್ತು ಯಾವ ತರ ನಡಕೊಳ್ಳುತ್ತಿದ್ದನು ಅಂತ ನೋಡೋಣ. ದೀಕ್ಷಾಸ್ನಾನ ಆದಮೇಲೂ ನಾವು ಆತನ ತರ ಇರೋಕೆ ಏನು ಮಾಡಬೇಕು ಅಂತನೂ ನೋಡೋಣ.

^ ಗಲಾತ್ಯ 5:22, 23ರಲ್ಲಿ ಪವಿತ್ರಶಕ್ತಿಯಿಂದ ಬರೋ ಎಲ್ಲಾ ಗುಣಗಳನ್ನ ಪಟ್ಟಿಮಾಡಿಲ್ಲ. ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳೋಕೆ ಜೂನ್‌ 2020ರ ಕಾವಲಿನಬುರುಜುವಿನಲ್ಲಿರೋ “ವಾಚಕರಿಂದ ಪ್ರಶ್ನೆಗಳು” ಲೇಖನ ನೋಡಿ.