ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 13

ಸತ್ಯ ಆರಾಧನೆಯಿಂದ ಸಂತೋಷವಾಗಿ ಇರ್ತೀರ

ಸತ್ಯ ಆರಾಧನೆಯಿಂದ ಸಂತೋಷವಾಗಿ ಇರ್ತೀರ

“ಯೆಹೋವನೇ, ನಮ್ಮ ದೇವರೇ, ಗೌರವ, ಘನತೆ, ಶಕ್ತಿಯನ್ನ ಪಡ್ಕೊಳ್ಳೋಕೆ ನೀನೇ ಯೋಗ್ಯ.”ಪ್ರಕ. 4:11.

ಗೀತೆ 26 ಓ ದೇವರೊಂದಿಗೆ ನಡೆ!

ಕಿರುನೋಟ *

1-2. ಯೆಹೋವ ನಮ್ಮ ಆರಾಧನೆಯನ್ನ ಮೆಚ್ಚಬೇಕಾದ್ರೆ ನಾವೇನು ಮಾಡಬೇಕು?

 “ಆರಾಧನೆ” ಅಂದ ತಕ್ಷಣ ನಿಮ್ಮ ಮನಸ್ಸಿಗೆ ಏನು ಬರುತ್ತೆ? ಒಬ್ಬ ಸಹೋದರ ಮಲಗೋಕೆ ಮುಂಚೆ ಮಂಡಿಯೂರಿ ಯೆಹೋವನ ಹತ್ರ ಪ್ರಾರ್ಥಿಸ್ತಾ ಇರೋದು ಅಥವಾ ಒಂದು ಕುಟುಂಬ ಖುಷಿಯಾಗಿ ಬೈಬಲ್‌ ಅಧ್ಯಯನ ಮಾಡ್ತಾ ಇರೋದು ನಿಮ್ಮ ಕಣ್ಮುಂದೆ ಬರಬಹುದು.

2 ಆ ಸಹೋದರ ಅಥವಾ ಕುಟುಂಬ ಮಾಡುತ್ತಿರೋ ಆರಾಧನೆಯನ್ನ ಯೆಹೋವ ಮೆಚ್ಚುತ್ತಾನಾ? ಅವರು ಯೆಹೋವನಿಗೆ ಇಷ್ಟ ಆಗೋ ತರ ಜೀವನ ಮಾಡ್ತಾ ಇದ್ರೆ, ಅವರಿಗೆ ಆತನ ಮೇಲೆ ಪ್ರೀತಿ ಮತ್ತು ಗೌರವ ಇದ್ರೆ ಅವರ ಆರಾಧನೆಯನ್ನ ಖಂಡಿತ ಯೆಹೋವ ಮೆಚ್ಚುತ್ತಾನೆ. ನಾವು ಯೆಹೋವನನ್ನೇ ಆರಾಧನೆ ಮಾಡ್ತಾ ಇದ್ದೀವಿ ನಿಜ, ಆದ್ರೆ ನಾವು ಆತನನ್ನ ಪ್ರೀತಿಸೋದ್ರಿಂದ ಇನ್ನೂ ಚೆನ್ನಾಗಿ ಆರಾಧನೆ ಮಾಡೋಕೆ ಇಷ್ಟ ಪಡುತ್ತೀವಿ.

3. ಈ ಲೇಖನದಲ್ಲಿ ಏನು ತಿಳಿದುಕೊಳ್ತೀವಿ?

3 ಯೆಹೋವ ದೇವರು ಇಸ್ರಾಯೇಲ್ಯರಿಗೆ ತನ್ನನ್ನು ಯಾವ ತರ ಆರಾಧಿಸಬೇಕು ಅಂತ ಹೇಳಿದ್ದನು? ಆರಾಧನೆಯಲ್ಲಿ ಸೇರಿರೋ 8 ವಿಷಯಗಳು ಯಾವುದು? ಅದನ್ನ ಈ ಲೇಖನದಲ್ಲಿ ನೋಡೋಣ. ಇದನ್ನ ಕಲಿಯುವಾಗ ನಾವು ನಮ್ಮ ಆರಾಧನೆಯನ್ನ ಇನ್ನೂ ಚೆನ್ನಾಗಿ ಮಾಡೋದು ಹೇಗೆ ಮತ್ತು ಅದರಿಂದ ನಮಗೆ ಯಾಕೆ ಖುಷಿ ಸಿಗುತ್ತೆ ಅಂತ ತಿಳಿದುಕೊಳ್ತೀವಿ.

ಹಿಂದಿನ ಕಾಲದಲ್ಲಿ ಯೆಹೋವನ ಆರಾಧನೆ

4. ಹಿಂದಿನ ಕಾಲದಲ್ಲಿ ದೇವಜನರಿಗೆ ಯೆಹೋವನ ಮೇಲೆ ಪ್ರೀತಿ ಮತ್ತು ಗೌರವ ಇದ್ದಿದ್ರಿಂದ ಏನು ಮಾಡಿದ್ರು?

4 ಹಿಂದಿನ ಕಾಲದಲ್ಲಿ ಹೇಬೆಲ, ನೋಹ, ಅಬ್ರಹಾಮ ಮತ್ತು ಯೋಬನಂಥ ಎಷ್ಟೋ ದೇವಜನರು ಯೆಹೋವನನ್ನು ಗೌರವಿಸಿ, ಪ್ರೀತಿಸಿದರು. ಅದಕ್ಕೆ ಅವರು ಆತನ ಮಾತು ಕೇಳಿದರು, ಆತನ ಮೇಲೆ ನಂಬಿಕೆ ಇಟ್ಟರು, ಆತನಿಗೋಸ್ಕರ ತ್ಯಾಗಗಳನ್ನ ಮಾಡಿದರು. ಅವರು ಆರಾಧನೆ ಮಾಡುವಾಗ ಏನೆಲ್ಲಾ ಮಾಡ್ತಿದ್ರು ಅಂತ ಬೈಬಲಲ್ಲಿ ಪೂರ್ತಿಯಾಗಿ ಮಾಹಿತಿ ಕೊಟ್ಟಿಲ್ಲ. ಆದ್ರೆ ಯೆಹೋವನನ್ನು ಗೌರವಿಸೋಕೆ, ಆತನಿಗೆ ಇಷ್ಟ ಆಗೋ ತರ ಆರಾಧಿಸೋಕೆ ತಮ್ಮಿಂದ ಆಗಿದ್ದನ್ನೆಲ್ಲ ಅವರು ಮಾಡಿದ್ರು. ಇದಾದ ಮೇಲೆ ಯೆಹೋವ ದೇವರು ಇಸ್ರಾಯೇಲ್ಯರಿಗೆ ಮೋಶೆಯ ನಿಯಮ ಪುಸ್ತಕ ಕೊಟ್ಟನು. ಯೆಹೋವನನ್ನು ಯಾವ ತರ ಆರಾಧನೆ ಮಾಡಬೇಕು ಅಂತ ಅದರಲ್ಲಿದ್ದ ನಿಯಮಗಳು ಹೇಳುತ್ತಿತ್ತು.

5. ಯೇಸುವಿನ ಪುನರುತ್ಥಾನ ಆದಮೇಲೆ ಸತ್ಯಾರಾಧನೆಯಲ್ಲಿ ಯಾವ ಬದಲಾವಣೆ ಆಯ್ತು?

5 ಯೇಸು ಸತ್ತು ಪುನರುತ್ಥಾನ ಆದಮೇಲೆ ಕ್ರೈಸ್ತರು ಮೋಶೆಯ ನಿಯಮ ಪುಸ್ತಕವನ್ನ ಪಾಲಿಸೋ ಅಗತ್ಯ ಇರಲಿಲ್ಲ. (ರೋಮ. 10:4) ಅವರು ಹೊಸ ನಿಯಮವನ್ನ ಅಂದ್ರೆ ‘ಕ್ರಿಸ್ತನ ನಿಯಮನ’ ಪಾಲಿಸಬೇಕಿತ್ತು. (ಗಲಾ. 6:2) ಈ ‘ನಿಯಮದಲ್ಲಿ’ ನಾವು ಏನು ಮಾಡಬೇಕು, ಏನು ಮಾಡಬಾರದು ಅಂತ ದೊಡ್ಡ ಪಟ್ಟಿ ಕೊಟ್ಟಿಲ್ಲ. ಹಾಗಾಗಿ ನಾವು ಎಲ್ಲಾ ನಿಯಮನ ನೆನಪಲ್ಲಿಟ್ಟು ಪಾಲಿಸೋ ಅಗತ್ಯ ಇಲ್ಲ. ನಾವು ಯೇಸು ಕ್ರಿಸ್ತನ ತರ ನಡೆಯಬೇಕು ಮತ್ತು ಆತನು ಕಲಿಸಿದ್ದನ್ನ ಪಾಲಿಸಬೇಕು. ನಾವು ಯೇಸು ತರ ಇರೋಕೆ ನಮ್ಮ ಕೈಲಾದ ಪ್ರಯತ್ನ ಮಾಡಿದ್ರೆ ಯೆಹೋವ ದೇವರನ್ನ ಖುಷಿಪಡಿಸ್ತೀವಿ ಮತ್ತು “ಹೊಸಬಲ” ಪಡೆಯುತ್ತೀವಿ.—ಮತ್ತಾ. 11:29.

6. ಈ ಲೇಖನದಲ್ಲಿ ನೀವೇನು ಕಲಿಬಹುದು?

6 ಆರಾಧನೆಯಲ್ಲಿ ಸೇರಿರೋ ಒಂದೊಂದೇ ವಿಷಯವನ್ನ ಚರ್ಚೆ ಮಾಡುವಾಗ, ‘ನಾನು ಇಲ್ಲಿ ತನಕ ಈ ವಿಷಯನ ಹೇಗೆ ಮಾಡಿಕೊಂಡು ಬಂದಿದ್ದೀನಿ? ಇದನ್ನ ಇನ್ನೂ ಚೆನ್ನಾಗಿ ಮಾಡೋಕೆ ಏನು ಮಾಡಬೇಕು?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ. ನೀವು ಈಗಾಗ್ಲೇ ಯೆಹೋವನನ್ನು ಹೇಗೆ ಆರಾಧನೆ ಮಾಡ್ತಾ ಇದ್ದೀರೋ ಅದಕ್ಕೆ ಖುಷಿಪಡಿ. ಆದ್ರೆ ಅದನ್ನ ಇನ್ನೂ ಚೆನ್ನಾಗಿ ಮಾಡೋಕೆ ಯೆಹೋವನ ಹತ್ರ ಸಹಾಯ ಕೇಳಿ.

ನಾವು ಮಾಡೋ ಆರಾಧನೆಯಲ್ಲಿ ಏನೆಲ್ಲಾ ಸೇರಿದೆ?

7. ನಾವು ಮನಸಾರೆ ಮಾಡೋ ಪ್ರಾರ್ಥನೆ ಯೆಹೋವನಿಗೆ ಹೇಗನಿಸುತ್ತೆ?

7 ಪ್ರಾರ್ಥನೆ. ನಾವು ಮಾಡೋ ಪ್ರಾರ್ಥನೆಗಳು ಪವಿತ್ರ ಡೇರೆಯಲ್ಲಿ ಅಥವಾ ಆಲಯದಲ್ಲಿ ಅರ್ಪಿಸುತ್ತಿದ್ದ ಧೂಪದ ತರ ಇದೆ ಅಂತ ಬೈಬಲ್‌ ಹೇಳುತ್ತೆ. (ಕೀರ್ತ. 141:2) ಆ ಧೂಪವನ್ನ ವಿಶೇಷವಾಗಿ ತಯಾರಿಸುತ್ತಿದ್ದರು. ಅದರಿಂದ ಬರೋ ಸುವಾಸನೆ ಯೆಹೋವ ದೇವರಿಗೆ ತುಂಬ ಇಷ್ಟ ಆಗುತ್ತಿತ್ತು. ನಾವು ಮಾಡೋ ಪ್ರಾರ್ಥನೆಗಳು ಹಾಗೇನೇ. ಅವು ಆಡಂಬರವಾಗಿರಬೇಕು ಅಂತೇನಿಲ್ಲ. ನಾವು ಮನಸಾರೆ ಯೆಹೋವನ ಹತ್ರ ಮಾತಾಡಿದ್ರೆ ಅದನ್ನ “ಖುಷಿಯಿಂದ ಕೇಳ್ತಾನೆ.” (ಜ್ಞಾನೋ. 15:8; ಧರ್ಮೋ. 33:10) ನಾವು ಯೆಹೋವನನ್ನು ಎಷ್ಟು ಪ್ರೀತಿಸುತ್ತೀವಿ, ಆತನಿಗೆ ಎಷ್ಟು ಋಣಿಗಳಾಗಿದ್ದೀವಿ ಅಂತ ಹೇಳುವಾಗ ಅದನ್ನ ಕೇಳೋಕೆ ಯೆಹೋವ ಇಷ್ಟ ಪಡುತ್ತಾನೆ. ಅಷ್ಟೇ ಅಲ್ಲ, ನಮ್ಮ ಸುಖ-ದುಃಖ, ಇಷ್ಟ-ಕಷ್ಟಗಳನ್ನ ಕೇಳೋಕೂ ಆತನು ಕಾಯ್ತಾ ಇರುತ್ತಾನೆ. ಅದಕ್ಕೆ ನಾವು ಪ್ರಾರ್ಥನೆ ಮಾಡೋಕೆ ಮುಂಚೆ ಏನು ಹೇಳಬೇಕು ಅಂತ ಯೋಚನೆ ಮಾಡೋದು ಒಳ್ಳೇದು. ಹೀಗೆ ಮಾಡುವಾಗ ನಮ್ಮ ಪ್ರಾರ್ಥನೆಗಳು ಸ್ವರ್ಗೀಯ ಅಪ್ಪ ಯೆಹೋವನಿಗೆ ಸುವಾಸನೆ ಕೊಡೋ ‘ಧೂಪದ’ ತರ ಇರುತ್ತೆ.

8. ಯೆಹೋವನನ್ನು ಸ್ತುತಿಸೋಕೆ ನಮಗೆ ಯಾವ ಅವಕಾಶ ಇದೆ?

8 ಸ್ತುತಿ. (ಕೀರ್ತ. 34:1) ನಾವು ಯೆಹೋವನ ಅದ್ಭುತ ಗುಣಗಳನ್ನ ಮತ್ತು ಆತನು ಮಾಡಿರೋ ಸೃಷ್ಟಿನ ನೆನಪಿಸಿಕೊಂಡಾಗ ಆತನ ಬಗ್ಗೆ ಬೇರೆಯವರಿಗೆ ಹೇಳಬೇಕು ಅಂತ ಅನಿಸುತ್ತೆ. ಆತನು ಮಾಡಿರೋ ಎಷ್ಟೋ ವಿಷಯಗಳನ್ನ ನೆನಸಿಕೊಂಡು ಆತನನ್ನು ಹೊಗಳುತ್ತೀವಿ. ಯೆಹೋವ ನಮಗೆ ಏನೆಲ್ಲಾ ಒಳ್ಳೇದು ಮಾಡಿದ್ದಾನೆ ಅಂತ ಸಮಯ ಮಾಡಿಕೊಂಡು ಚೆನ್ನಾಗಿ ಯೋಚಿಸಿದ್ರೆ ಆತನನ್ನು ಹೊಗಳೋಕೆ ನಮ್ಮ ಇಡೀ ಜೀವಮಾನನೇ ಸಾಕಾಗಲ್ಲ ಅಂತ ಅನಿಸುತ್ತೆ. ಸಿಹಿಸುದ್ದಿ ಸಾರುವಾಗ ಯೆಹೋವನನ್ನು ಹೊಗಳೋಕೆ ಒಂದು ಒಳ್ಳೇ ಅವಕಾಶ ಸಿಗುತ್ತೆ. ಆಗ ‘ನಾವು ದೇವರಿಗೆ ಸ್ತುತಿ ಅನ್ನೋ ಬಲಿಯನ್ನ ಕೊಡೋಕೆ ನಮ್ಮ ತುಟಿಗಳನ್ನ ಬಳಸುತ್ತೀವಿ.’ (ಇಬ್ರಿ. 13:15) ನಾವು ಪ್ರಾರ್ಥನೆ ಮಾಡೋ ಮುಂಚೆ ಹೇಗೆ ಚೆನ್ನಾಗಿ ಯೋಚನೆ ಮಾಡುತ್ತೀವೋ, ಅದೇ ತರ ಬೇರೆಯವರಿಗೆ ಸಿಹಿಸುದ್ದಿ ಸಾರೋ ಮುಂಚೆ ಚೆನ್ನಾಗಿ ಯೋಚನೆ ಮಾಡಿ ಮಾತಾಡಬೇಕು. ನಮ್ಮ “ಸ್ತುತಿ ಅನ್ನೋ ಬಲಿ” ಅತ್ಯುತ್ತಮವಾಗಿ ಇರಬೇಕು ಅನ್ನೋದೇ ನಮ್ಮ ಆಸೆ. ಹಾಗಾಗಿ ನಾವು ಸಿಹಿಸುದ್ದಿ ಸಾರುವಾಗ ಖುಷಿಖುಷಿಯಿಂದ ಸಾರುತ್ತೀವಿ.

9. ಇಸ್ರಾಯೇಲ್ಯರ ತರ ನಾವು ಯಾಕೆ ಕೂಟಗಳಿಗೆ ಹೋಗಬೇಕು? ಇದ್ರಿಂದ ನಿಮಗೆ ಯಾವ ಪ್ರಯೋಜನ ಆಗಿದೆ?

9 ಕೂಟಗಳು. ‘ವರ್ಷದಲ್ಲಿ ಮೂರು ಸಲ ನಿಮ್ಮಲ್ಲಿರೋ ಗಂಡಸರೆಲ್ಲಾ ನಿಮ್ಮ ದೇವರಾದ ಯೆಹೋವ ಆರಿಸಿಕೊಳ್ಳೋ ಸ್ಥಳದಲ್ಲಿ ಆತನ ಮುಂದೆ ಬರಬೇಕು’ ಅಂತ ಯೆಹೋವ ದೇವರು ಇಸ್ರಾಯೇಲ್ಯರಿಗೆ ಹೇಳಿದ್ದನು. (ಧರ್ಮೋ. 16:16) ಅಲ್ಲಿಗೆ ಹೋಗೋಕೆ ಇಸ್ರಾಯೇಲ್ಯರು ತಮ್ಮ ಮನೆ, ಹೊಲವನ್ನೆಲ್ಲ ಬಿಟ್ಟುಹೋಗಬೇಕಿತ್ತು. ಆದ್ರೆ “ನಿಮ್ಮ ದೇವರಾದ ಯೆಹೋವನ ಮುಂದೆ ಬರುವಾಗ ಯಾರೂ ನಿಮ್ಮ ಪ್ರದೇಶನ ವಶ ಮಾಡ್ಕೊಳ್ಳೋಕೆ ಆಸೆಪಡಲ್ಲ” ಅಂತ ಯೆಹೋವ ದೇವರು ಇಸ್ರಾಯೇಲ್ಯರಿಗೆ ಮಾತು ಕೊಟ್ಟಿದ್ದನು. (ವಿಮೋ. 34:24) ಇಸ್ರಾಯೇಲ್ಯರಿಗೆ ಯೆಹೋವನ ಮೇಲೆ ನಂಬಿಕೆ ಇದ್ದಿದ್ರಿಂದ ಪ್ರತಿವರ್ಷ ಹಬ್ಬಗಳಿಗೆ ಹೋಗುತ್ತಿದ್ದರು. ಇದರಿಂದ ಅವರಿಗೆ ತುಂಬ ಪ್ರಯೋಜನ ಆಯ್ತು. ಯೆಹೋವನ ನಿಯಮದ ಬಗ್ಗೆ ಮತ್ತು ಆತನು ಅವರಿಗೆ ಏನೆಲ್ಲಾ ಮಾಡಿದ್ದಾನೆ ಅನ್ನೋದರ ಬಗ್ಗೆ ತಿಳಿದುಕೊಂಡ್ರು. ಅಷ್ಟೇ ಅಲ್ಲ, ಯೆಹೋವನನ್ನ ಪ್ರೀತಿಸೋ ಜನರ ಜೊತೆ ಇರೋಕೆ ಅವರಿಗೆ ಅವಕಾಶನೂ ಸಿಕ್ಕಿತು. (ಧರ್ಮೋ. 16:15) ನಾವು ಕೂಟಗಳಿಗೆ ಹಾಜರಾಗೋಕೆ ಇದೇ ತರ ತ್ಯಾಗಗಳನ್ನ ಮಾಡಿದ್ರೆ ತುಂಬ ಪ್ರಯೋಜನಗಳನ್ನು ಪಡೆದುಕೊಳ್ತೀವಿ. ಅಷ್ಟೇ ಅಲ್ಲ, ನಾವು ಚೆನ್ನಾಗಿ ತಯಾರಿ ಮಾಡಿ ಹೇಳೋ ಉತ್ತರಗಳನ್ನ ಕೇಳಿಸಿಕೊಂಡಾಗ ಯೆಹೋವ ದೇವರಿಗೆ ಖುಷಿಯಾಗುತ್ತೆ.

10. ಯೆಹೋವನನ್ನು ಹಾಡಿ ಹೊಗಳೋದು ಯಾಕೆ ಮುಖ್ಯ?

10 ಹಾಡು. (ಕೀರ್ತ. 28:7) ಆರಾಧನೆ ಮಾಡುವಾಗ ಯೆಹೋವನನ್ನು ಹಾಡಿ ಹೊಗಳೋದು ತುಂಬ ಮುಖ್ಯ ಅಂತ ಇಸ್ರಾಯೇಲ್ಯರಿಗೆ ಗೊತ್ತಿತ್ತು. ದೇವರ ಆಲಯದಲ್ಲಿ ಹಾಡು ಹಾಡೋಕೆ ಅಂತಾನೇ ರಾಜ ದಾವೀದ 288 ಲೇವಿಯರನ್ನ ನೇಮಿಸಿದ್ದ. (1 ಪೂರ್ವ. 25:1, 6-8) ಈಗ ನಮಗೂ ಹಾಡೋ ಅವಕಾಶ ಇದೆ. ನಾವು ಹಾಡುವಾಗ ಯೆಹೋವನನ್ನು ಎಷ್ಟು ಪ್ರೀತಿಸುತ್ತೀವಿ ಅಂತ ತೋರಿಸೋಕೆ ಆಗುತ್ತೆ. ‘ನನ್ನದು ಕಾಗೆ ಕಂಠ. ಅಷ್ಟು ಚೆನ್ನಾಗಿ ಹಾಡೋಕೆ ಬರಲ್ಲ’ ಅಂತ ಅನಿಸಬಹುದು. ಉದಾಹರಣೆಗೆ, ನಾವು ಮಾತಾಡುವಾಗ ತಡವರಿಸುತ್ತೀವಿ, “ತುಂಬ ಸಲ ತಪ್ಪು ಮಾಡ್ತೀವಿ.” ಹಾಗಂತ ನಾವು ಮಾತಾಡೋದನ್ನ ಅಥವಾ ಬೇರೆಯವರಿಗೆ ಸಿಹಿಸುದ್ದಿ ಸಾರೋದನ್ನ ಬಿಟ್ಟುಬಿಟ್ಟಿದ್ದೀವಾ? (ಯಾಕೋ. 3:2) ಅದೇ ತರ ನಮಗೆ ಚೆನ್ನಾಗಿ ಹಾಡೋಕೆ ಬರದೇ ಇದ್ರೂ ಯೆಹೋವನನ್ನು ಹಾಡಿ ಹೊಗಳೋದನ್ನ ನಿಲ್ಲಿಸಬಾರದು.

11. ಕೀರ್ತನೆ 48:13ರಲ್ಲಿ ಹೇಳೋ ಹಾಗೆ ಕುಟುಂಬದಲ್ಲಿ ಇರೋರೆಲ್ಲಾ ಯಾಕೆ ಒಟ್ಟಿಗೆ ಬೈಬಲ್‌ ಅಧ್ಯಯನ ಮಾಡಬೇಕು?

11 ಬೈಬಲ್‌ ಅಧ್ಯಯನ ಮಾಡೋದು, ಮಕ್ಕಳಿಗೆ ಕಲಿಸುವುದು. ಸಬ್ಬತ್‌ ದಿನದಲ್ಲಿ ಇಸ್ರಾಯೇಲ್ಯರು ಯಾವ ಕೆಲಸನೂ ಮಾಡದೆ ಯೆಹೋವನ ಬಗ್ಗೆ ಕಲಿಯೋಕೆ ಸಮಯ ಕೊಡಬೇಕಿತ್ತು. (ವಿಮೋ. 31:16, 17) ಅವರು ಯೆಹೋವನ ಬಗ್ಗೆ, ಆತನ ಗುಣಗಳ ಬಗ್ಗೆ ತಮ್ಮ ಮಕ್ಕಳಿಗೆ ಕಲಿಸಿಕೊಡುತ್ತಿದ್ದರು. ಅದೇ ತರ ನಾವು ಕೂಡ ಬೈಬಲ್‌ ಅಧ್ಯಯನ ಮಾಡೋಕೆ ಶೆಡ್ಯೂಲ್‌ ಮಾಡಿಕೊಳ್ಳಬೇಕು. ಯಾಕಂದ್ರೆ ಇದೂ ಕೂಡ ನಮ್ಮ ಆರಾಧನೆಯಲ್ಲಿ ಸೇರಿದೆ. ಇದರಿಂದ ಯೆಹೋವನ ಜೊತೆ ಒಳ್ಳೇ ಸ್ನೇಹ ಬೆಳೆಸಿಕೊಳ್ಳೋಕೆ ಆಗುತ್ತೆ. (ಕೀರ್ತ. 73:28) ಅಷ್ಟೇ ಅಲ್ಲ, ಕುಟುಂಬದಲ್ಲಿ ಎಲ್ಲರೂ ಒಟ್ಟಿಗೆ ಬೈಬಲ್‌ ಅಧ್ಯಯನ ಮಾಡೋದರಿಂದ ನಮ್ಮ ಮಕ್ಕಳು ಸ್ವರ್ಗೀಯ ಅಪ್ಪ ಯೆಹೋವನಿಗೆ ಒಳ್ಳೇ ಫ್ರೆಂಡ್ಸ್‌ ಆಗುತ್ತಾರೆ.ಕೀರ್ತನೆ 48:13 ಓದಿ.

12. (ಎ) ಪವಿತ್ರ ಡೇರೆಯ ಕೆಲಸ ಮತ್ತು ಅದಕ್ಕೆ ಸಂಬಂಧಪಟ್ಟ ಬೇರೆ ಕೆಲಸಗಳನ್ನ ಯೆಹೋವ ಯಾವ ತರ ನೋಡಿದನು? (ಬಿ) ಇದ್ರಿಂದ ನಾವೇನು ಕಲಿತೀವಿ?

12 ಕಟ್ಟಡ ನಿರ್ಮಾಣ ಕೆಲಸ ಮತ್ತು ಆರಾಧನಾ ಸ್ಥಳಗಳನ್ನ ನೋಡಿಕೊಳ್ಳೋದು. ಪವಿತ್ರ ಡೇರೆಯನ್ನ ಕಟ್ಟೋ ಕೆಲಸ ಮತ್ತು ಅದಕ್ಕೆ ಸಂಬಂಧಪಟ್ಟ ಬೇರೆ ಕೆಲಸಗಳನ್ನ “ಪವಿತ್ರ ಸೇವೆ” ಅಂತ ಬೈಬಲ್‌ ಹೇಳುತ್ತೆ. (ವಿಮೋ. 36:1, 4 ಮತ್ತು ಪಾದಟಿಪ್ಪಣಿ) ಈಗ ನಾವು ರಾಜ್ಯ ಸಭಾಗೃಹ ಮತ್ತು ಯೆಹೋವನ ಆರಾಧನೆಗೆ ಸಂಬಂಧಪಟ್ಟ ಬೇರೆ ಕಟ್ಟಡಗಳನ್ನ ಕಟ್ಟುತ್ತೀವಿ. ಇದು ಕೂಡ ಪವಿತ್ರ ಸೇವೆಯಾಗಿದೆ. ಕೆಲವು ಸಹೋದರರು ಕಟ್ಟಡ ನಿರ್ಮಾಣ ಕೆಲಸದಲ್ಲಿ ತುಂಬ ಸಮಯ ಕಳೆಯುತ್ತಾರೆ. ಇಂಥ ಸಹೋದರ ಸಹೋದರಿಯರು ಮಾಡೋ ತ್ಯಾಗವನ್ನ ನಾವು ಖಂಡಿತ ಮೆಚ್ಚುತ್ತೀವಿ. ಇವರು ಸಿಹಿಸುದ್ದಿನೂ ಸಾರುತ್ತಾರೆ. ಇವರಲ್ಲಿ ಕೆಲವರಿಗೆ ಪಯನೀಯರ್‌ ಆಗೋಕೂ ಆಸೆ ಇದೆ. ಹಾಗಾಗಿ ಇಂಥ ಸಹೋದರ ಸಹೋದರಿಯರು ಅರ್ಜಿ ಸಲ್ಲಿಸಿದಾಗ ಅವರಿಗೆ ಅರ್ಹತೆ ಇದ್ದರೆ ಸಭಾ ಹಿರಿಯರು ಅವರಿಗೆ ಒಪ್ಪಿಗೆ ಕೊಟ್ಟು ಪಯನೀಯರಿಂಗ್‌ ಮಾಡೋಕೆ ಅವಕಾಶ ಮಾಡಿಕೊಡಬೇಕು. ಹೀಗೆ ಮಾಡಿದಾಗ ಹಿರಿಯರು ಸಹ ಕಟ್ಟಡ ನಿರ್ಮಾಣ ಕೆಲಸಕ್ಕೆ ಬೆಂಬಲ ಕೊಟ್ಟ ಹಾಗೆ ಆಗುತ್ತೆ. ನಮಗೆ ಕಟ್ಟಡ ಕಟ್ಟೋ ಕೌಶಲ್ಯ ಇಲ್ಲದೇ ಇದ್ರೂ ನಾವೆಲ್ಲರೂ ಆರಾಧನಾ ಸ್ಥಳನ ಶುದ್ಧವಾಗಿ, ಚೆನ್ನಾಗಿ ಇಟ್ಟುಕೊಳ್ಳಬೇಕು.

13. ಕಾಣಿಕೆ ಕೊಡುವಾಗ ನಾವು ಏನನ್ನ ಮನಸ್ಸಲ್ಲಿ ಇಡಬೇಕು?

13 ಕಾಣಿಕೆ. ಕೈಯಲ್ಲಿ ಕಾಣಿಕೆ ಇಲ್ಲದೇ ಯೆಹೋವನ ಆಲಯಕ್ಕೆ ಬರಬಾರದು ಅಂತ ಇಸ್ರಾಯೇಲ್ಯರಿಗೆ ಗೊತ್ತಿತ್ತು. (ಧರ್ಮೋ. 16:16) ಅದಕ್ಕೆ ಅವರ ಕೈಲಾದ ಕಾಣಿಕೆಗಳನ್ನ ಅವರು ತಂದು ಕೊಡುತ್ತಿದ್ದರು. ಹೀಗೆ ಕಾಣಿಕೆ ಕೊಡೋ ಮೂಲಕ ಅವರು ಯೆಹೋವನನ್ನ ಎಷ್ಟು ಪ್ರೀತಿಸುತ್ತಿದ್ದರು, ಆತನು ಮಾಡಿರೋ ಸಹಾಯಕ್ಕೆ ಎಷ್ಟು ಋಣಿಗಳಾಗಿದ್ದರು ಅಂತ ತೋರಿಸಿ ಕೊಟ್ಟರು. ಯೆಹೋವ ನಮಗೂ ಎಷ್ಟೋ ಒಳ್ಳೇ ವಿಷಯಗಳನ್ನ ಮಾಡಿದ್ದಾನೆ. ಕಾಣಿಕೆ ಕೊಡೋದ್ರಿಂದ ಆತನಿಗೆ ನಾವೆಷ್ಟು ಋಣಿಗಳಾಗಿದ್ದೀವಿ ಅಂತ ತೋರಿಸ್ತೀವಿ. ಸಭೆಯ ಖರ್ಚುವೆಚ್ಚಗಳಿಗೆ ಮತ್ತು ಲೋಕವ್ಯಾಪಕ ಕೆಲಸಕ್ಕೆ ನಮ್ಮಿಂದಾದಷ್ಟು ಕಾಣಿಕೆಗಳನ್ನ ನಾವು ಕೊಡಬಹುದು. “ಮನಸಾರೆ ಕೊಡೋದಾದ್ರೆ ದೇವರು ಅದನ್ನ ಮೆಚ್ತಾನೆ. ಯಾಕಂದ್ರೆ ದೇವರು ಒಬ್ಬನ ಹತ್ರ ಇಲ್ಲದೇ ಇರೋದನ್ನ ಕೇಳಲ್ಲ, ಇರೋದನ್ನೇ ಕೇಳ್ತಾನೆ” ಅಂತ ಅಪೊಸ್ತಲ ಪೌಲ ಹೇಳಿದ. (2 ಕೊರಿಂ. 8:4, 12) ಹಾಗಾಗಿ ನಾವು ಕಾಣಿಕೆ ಕೊಡುವಾಗ ಎಷ್ಟು ಕೊಡ್ತಾ ಇದ್ದೀವಿ ಅಂತಲ್ಲ, ಮನಸಾರೆ ಕೊಡುತ್ತಾ ಇದ್ದೀವಾ ಅನ್ನೋದೇ ಮುಖ್ಯ.—ಮಾರ್ಕ 12:42-44; 2 ಕೊರಿಂ. 9:7.

14. ನಾವು ಮಾಡೋ ಸಹಾಯವನ್ನ ಯೆಹೋವ ಹೇಗೆ ನೋಡ್ತಾನೆ ಅಂತ ಜ್ಞಾನೋಕ್ತಿ 19:17 ಹೇಳುತ್ತೆ?

14 ಸಹಾಯ. ಬಡವರಿಗೆ ಸಹಾಯ ಮಾಡುವವರನ್ನ ಆಶೀರ್ವದಿಸುತ್ತೀನಿ ಅಂತ ಯೆಹೋವ ದೇವರು ಇಸ್ರಾಯೇಲ್ಯರಿಗೆ ಮಾತುಕೊಟ್ಟಿದ್ದನು. (ಧರ್ಮೋ. 15:7, 10) ಇವತ್ತು ನಾವು ಸಹೋದರ ಸಹೋದರಿಯರಿಗೆ ಸಹಾಯ ಮಾಡುವಾಗ ಯೆಹೋವ ಅದನ್ನ ತನಗೇ ಗಿಫ್ಟ್‌ ಕೊಟ್ಟ ಹಾಗೆ ನೋಡುತ್ತಾನೆ. (ಜ್ಞಾನೋಕ್ತಿ 19:17 ಓದಿ.) ಉದಾಹರಣೆಗೆ, ಫಿಲಿಪ್ಪಿಯಲ್ಲಿದ್ದ ಕ್ರೈಸ್ತರು ಜೈಲಲ್ಲಿದ್ದ ಪೌಲನಿಗೆ ಉಡುಗೊರೆ ಕೊಟ್ಟಾಗ ‘ಆ ಉಡುಗೊರೆ ದೇವರನ್ನ ಖುಷಿಪಡಿಸೋ ಬಲಿ ತರ ಇದೆ’ ಅಂತ ಹೇಳಿದ. (ಫಿಲಿ. 4:18) ಹಾಗಾಗಿ ಸಭೆಯಲ್ಲಿ ಯಾರಿಗಾದರೂ ಸಹಾಯ ಬೇಕಾ ಅಂತ ಯೋಚನೆ ಮಾಡಿ. ನಿಮ್ಮ ಸಮಯ, ಶಕ್ತಿ ಮತ್ತು ವಸ್ತುಗಳನ್ನ ಬೇರೆಯವರಿಗೆ ಸಹಾಯ ಮಾಡೋಕೆ ಉಪಯೋಗಿಸುವಾಗ ಯೆಹೋವನಿಗೆ ತುಂಬ ಖುಷಿಯಾಗುತ್ತೆ. ಯಾಕಂದ್ರೆ ಸಹೋದರ ಸಹೋದರಿಯರಿಗೆ ಸಹಾಯ ಮಾಡೋದೂ ನಮ್ಮ ಆರಾಧನೆಯಲ್ಲಿ ಸೇರಿದೆ.—ಯಾಕೋ. 1:27.

ಯೆಹೋವನನ್ನು ಆರಾಧಿಸಿದ್ರೆ ಖುಷಿಯಾಗಿ ಇರ್ತೀರ

15. ಯೆಹೋವನ ಆರಾಧನೆ ನಮಗೆ ಯಾಕೆ ಕಷ್ಟ ಅನಿಸಲ್ಲ?

15 ಯೆಹೋವನನ್ನು ಆರಾಧಿಸೋಕೆ ಸಮಯ ಕೊಡಬೇಕಾಗುತ್ತೆ, ಪ್ರಯತ್ನನೂ ಮಾಡಬೇಕಾಗುತ್ತೆ. ಆದ್ರೆ ಅದು ಕಷ್ಟ ಅಲ್ಲ. (1 ಯೋಹಾ. 5:3) ಯಾಕಂದ್ರೆ ನಾವು ಯೆಹೋವನನ್ನು ಪ್ರೀತಿಸುತ್ತೀವಿ. ಇದನ್ನ ಅರ್ಥ ಮಾಡಿಕೊಳ್ಳೋಕೆ ಒಂದು ಉದಾಹರಣೆ ನೋಡೋಣ. ಒಬ್ಬ ಮಗ ತಂದೆಗೆ ಒಂದು ಚಿತ್ರ ಬಿಡಿಸಿಕೊಡಬೇಕು ಅಂತ ಅಂದುಕೊಳ್ತಾನೆ. ಆ ಚಿತ್ರ ಬಿಡಿಸೋಕೆ ತುಂಬ ಸಮಯ ಹಿಡಿಯುತ್ತೆ. ಆದರೆ ಅದರ ಬಗ್ಗೆ ಅವನು ಚಿಂತೆ ಮಾಡಲ್ಲ. ಯಾಕಂದ್ರೆ ಅವನ ಅಪ್ಪ ಅಂದ್ರೆ ಅವನಿಗೆ ಇಷ್ಟ. ನಮಗೂ ಯೆಹೋವನ ಮೇಲೆ ಪ್ರೀತಿ ಇರೋದ್ರಿಂದ ಆತನ ಆರಾಧನೆಗೋಸ್ಕರ ನಮ್ಮ ಸಮಯ, ಶಕ್ತಿನ ಕೊಡೋಕೆ ರೆಡಿಯಾಗಿ ಇರ್ತೀವಿ.

16. ನಮ್ಮಲ್ಲಿ ಪ್ರತಿಯೊಬ್ಬರೂ ಮಾಡೋ ಪ್ರಯತ್ನವನ್ನ ನೋಡುವಾಗ ಯೆಹೋವನಿಗೆ ಹೇಗನಿಸುತ್ತೆ? (ಇಬ್ರಿಯ 6:10)

16 ಎಲ್ಲಾ ಮಕ್ಕಳು ಒಂದೇ ತರ ಗಿಫ್ಟ್‌ ಕೊಡಬೇಕು ಅಂತ ಯಾವ ಅಪ್ಪ-ಅಮ್ಮನೂ ಬಯಸಲ್ಲ. ಯಾಕಂದ್ರೆ ಎಲ್ಲಾ ಮಕ್ಕಳು ಒಂದೇ ತರ ಇರಲ್ಲ ಅಂತ ಅವರಿಗೆ ಗೊತ್ತಿರುತ್ತೆ. ಅದೇ ತರ ನಾವೆಲ್ಲರೂ ಒಂದೇ ತರ ಇಲ್ಲ, ನಮ್ಮೆಲ್ಲರ ಸನ್ನಿವೇಶ ಮತ್ತು ಸಾಮರ್ಥ್ಯ ಬೇರೆಬೇರೆ ಅಂತ ಯೆಹೋವನಿಗೆ ಗೊತ್ತು. ನೀವು ಬೇರೆಯವರಿಗಿಂತ ಚೆನ್ನಾಗಿ ಸೇವೆ ಮಾಡುತ್ತಾ ಇರಬಹುದು. ಆದ್ರೆ ಕೆಲವೊಮ್ಮೆ ನಿಮಗೆ ವಯಸ್ಸಾಗಿರೋದರಿಂದ, ಹುಷಾರಿಲ್ಲದೆ ಇರೋದರಿಂದ, ಕುಟುಂಬದ ಜವಾಬ್ದಾರಿಗಳಿಂದ ಕಡಿಮೆ ಸೇವೆ ಮಾಡ್ತಾ ಇರಬಹುದು. ಆಗ ಬೇಜಾರು ಮಾಡಿಕೊಳ್ಳಬೇಡಿ. (ಗಲಾ. 6:4) ಯಾಕಂದ್ರೆ ಯೆಹೋವ ದೇವರು ನೀವು ಮಾಡೋ ಸೇವೆಯನ್ನ ಯಾವತ್ತೂ ಮರೆಯಲ್ಲ. ಆತನ ಮೇಲಿರೋ ಪ್ರೀತಿಯಿಂದ ನಿಮ್ಮ ಕೈಲಾದಷ್ಟು ಸೇವೆ ಮಾಡೋದನ್ನ ನೋಡುವಾಗ ಆತನಿಗೆ ತುಂಬ ಖುಷಿಯಾಗುತ್ತೆ. (ಇಬ್ರಿಯ 6:10 ಓದಿ.) ಆತನ ಸೇವೆ ಮಾಡೋಕೆ ನಿಮಗೆಷ್ಟು ಆಸೆಯಿದೆ ಅಂತ ಆತನಿಗೆ ಗೊತ್ತು. ನೀವು ಸಂತೋಷ, ಸಂತೃಪ್ತಿಯಿಂದ ಆತನನ್ನ ಆರಾಧನೆ ಮಾಡಬೇಕು ಅಂತ ಆಸೆ ಪಡ್ತಾನೆ.

17. (ಎ) ಆರಾಧನೆಯಲ್ಲಿ ಸೇರಿರೋ ಯಾವುದಾದರೂ ಒಂದು ವಿಷಯವನ್ನ ಮಾಡೋಕೆ ನಿಮಗೆ ಕಷ್ಟ ಆದ್ರೆ ಏನು ಮಾಡಬೇಕು? (ಬಿ) “ ನಿಮ್ಮ ಖುಷಿಯನ್ನ ಹೆಚ್ಚಿಸಿಕೊಳ್ಳಿ” ಅನ್ನೋ ಚೌಕದಲ್ಲಿರೋ ಯಾವ ವಿಷಯವನ್ನ ಮಾಡೋಕೆ ನೀವು ಪ್ರಯತ್ನ ಮಾಡ್ತಿದ್ದೀರಾ?

17 ಯೆಹೋವನ ಆರಾಧನೆಯಲ್ಲಿ ಸೇರಿರೋ ವಿಷಯಗಳನ್ನ ನಾವು ಇಲ್ಲಿ ತನಕ ಕಲಿತ್ವಿ. ಅದ್ರಲ್ಲಿ ಕೆಲವೊಂದನ್ನು ಮಾಡೋಕೆ ಅಂದ್ರೆ ಬೈಬಲ್‌ ಓದಿ ಅಧ್ಯಯನ ಮಾಡೋಕೆ, ಸಿಹಿಸುದ್ದಿ ಸಾರೋಕೆ ನಮಗೆ ಕಷ್ಟ ಆದ್ರೆ ಏನು ಮಾಡೋದು? ಒಂದು ಕೆಲಸನ ಜಾಸ್ತಿ ಮಾಡಿದಷ್ಟು ಅದು ನಮಗೆ ಇಷ್ಟ ಆಗುತ್ತೆ, ಅದರಿಂದ ನಮಗೆ ಪ್ರಯೋಜನ ಸಿಗುತ್ತೆ. ಉದಾಹರಣೆಗೆ, ನೀವು ಪಿಯಾನೋ ನುಡಿಸೋಕೆ ಕಲಿಯುತ್ತಾ ಇದ್ದೀರ ಅಂದುಕೊಳ್ಳಿ. ನೀವು ಯಾವಾಗ್ಲೋ ಒಂದು ಸಲ ಪ್ರಾಕ್ಟೀಸ್‌ ಮಾಡಿದ್ರೆ ಅದನ್ನ ಚೆನ್ನಾಗಿ ಕಲಿಯೋಕೆ ಆಗಲ್ಲ. ಪ್ರತಿದಿನ ಪ್ರಾಕ್ಟೀಸ್‌ ಮಾಡಬೇಕು. ಮೊದಮೊದಲು ನೀವು ಸ್ವಲ್ಪ ಹೊತ್ತು ಮಾತ್ರ ಪ್ರಾಕ್ಟೀಸ್‌ ಮಾಡ್ತೀರ. ಆದ್ರೆ ಕೆಲವು ದಿನಗಳಾದ ಮೇಲೆ ಪ್ರಾಕ್ಟೀಸ್‌ ಮಾಡ್ತಾ-ಮಾಡ್ತಾ ನಿಮಗೆ ಹೊತ್ತು ಹೋಗೋದೇ ಗೊತ್ತಾಗಲ್ಲ. ಕೊನೆಗೆ ಅದನ್ನ ಚೆನ್ನಾಗಿ ಕಲಿತಾಗ ನಿಮಗೆ ತುಂಬ ಖುಷಿಯಾಗುತ್ತೆ. ಇನ್ನೂ ನುಡಿಸಬೇಕು ಅಂತ ಆಸೆಯಾಗುತ್ತೆ. ಅದೇ ತರ ಬೈಬಲ್‌ ಅಧ್ಯಯನ ಮಾಡೋದನ್ನ, ಸಿಹಿಸುದ್ದಿ ಸಾರೋದನ್ನ ಪ್ರಾಕ್ಟೀಸ್‌ ಮಾಡ್ತಾ ಇದ್ರೆ ಕೊನೆಗೆ ಒಂದಿನ ನೀವು ಅದನ್ನ ಚೆನ್ನಾಗಿ ಕಲಿಯುತ್ತೀರ ಮತ್ತು ಅದರಿಂದ ನಿಮಗೆ ತುಂಬ ಖುಷಿ ಸಿಗುತ್ತೆ.

18. (ಎ) ನಮ್ಮ ಜೀವನಕ್ಕೆ ಯಾವಾಗ ಅರ್ಥ ಸಿಗುತ್ತೆ? (ಬಿ) ಇದರಿಂದ ನಮಗೆ ಏನೆಲ್ಲಾ ಆಶೀರ್ವಾದಗಳು ಸಿಗುತ್ತೆ?

18 ಯೆಹೋವನನ್ನ ಮನಸಾರೆ ಆರಾಧಿಸಲಿಲ್ಲ ಅಂದ್ರೆ ನಮ್ಮ ಜೀವನಕ್ಕೆ ಅರ್ಥನೇ ಇರಲ್ಲ. ಆರಾಧಿಸಿದ್ರೆ, ನಮ್ಮ ಜೀವನದಲ್ಲಿ ಸಂತೋಷ, ಸಂತೃಪ್ತಿ ಇರುತ್ತೆ ಮತ್ತು ಯೆಹೋವನನ್ನು ಯಾವಾಗಲೂ ಆರಾಧಿಸೋ ಅವಕಾಶ ಸಿಗುತ್ತೆ. (ಜ್ಞಾನೋ. 10:22) ತನ್ನ ಸೇವಕರು ಕಷ್ಟದಲ್ಲಿದ್ದಾಗ ಯೆಹೋವ ಖಂಡಿತ ಸಹಾಯ ಮಾಡುತ್ತಾನೆ ಅನ್ನೋ ಭರವಸೆ ನಮಗಿದೆ. (ಯೆಶಾ. 41:9, 10) ‘ಗೌರವ, ಘನತೆ ಪಡೆಯೋ ಯೋಗ್ಯತೆ ಇರೋ’ ಯೆಹೋವನನ್ನು ಆರಾಧಿಸುವುದರಿಂದ ನಾವು ಸಂತೋಷವಾಗಿ ಇರುತ್ತೀವಿ ಅನ್ನೋದ್ರಲ್ಲಿ ಸಂಶಯನೇ ಇಲ್ಲ.—ಪ್ರಕ. 4:11.

ಗೀತೆ 107 ಬನ್ನಿ ಯೆಹೋವನ ಪರ್ವತಕ್ಕೆ

^ ಯೆಹೋವನೇ ಎಲ್ಲವನ್ನ ಸೃಷ್ಟಿ ಮಾಡಿರೋದ್ರಿಂದ ನಾವು ಆತನನ್ನು ಆರಾಧಿಸಬೇಕು. ಆತನ ನಿಯಮಗಳನ್ನ ಮತ್ತು ತತ್ವಗಳನ್ನ ನಾವು ಪಾಲಿಸಿದ್ರೆ ನಮ್ಮ ಆರಾಧನೆ ಆತನಿಗೆ ಖುಷಿ ತರುತ್ತೆ. ಹಾಗಾಗಿ ಆರಾಧನೆಯಲ್ಲಿ ಸೇರಿರುವ 8 ವಿಷಯಗಳನ್ನ ಈ ಲೇಖನದಲ್ಲಿ ನೋಡೋಣ. ಅದನ್ನ ನಾವು ಈಗಾಗಲೇ ಮಾಡ್ತಾ ಇದ್ದೀವಿ. ಆದ್ರೆ ಅದನ್ನ ಇನ್ನೂ ಚೆನ್ನಾಗಿ ಮಾಡೋದು ಹೇಗೆ ಮತ್ತು ಇದ್ರಿಂದ ನಮ್ಮ ಖುಷಿ ಹೇಗೆ ಜಾಸ್ತಿಯಾಗುತ್ತೆ ಅಂತ ನೋಡೋಣ.