ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಚಿಂತೆಯಿಂದ ಹೊರಗೆ ಬರೋದು ಹೇಗೆ?

ಚಿಂತೆಯಿಂದ ಹೊರಗೆ ಬರೋದು ಹೇಗೆ?

ಅತಿಯಾದ ಚಿಂತೆ ನಮ್ಮನ್ನ ಕಾಡಿದಾಗ ನಮ್ಮ ಹೃದಯ ಬಾಡಿಹೋಗುತ್ತೆ. (ಜ್ಞಾನೋ. 12:25) ನೀವು ಯಾವತ್ತಾದ್ರೂ ಚಿಂತೆಯಲ್ಲಿ ಮುಳುಗಿಹೋಗಿದ್ದೀರಾ? ಇದನ್ನೆಲ್ಲಾ ನನ್ನಿಂದ ಸಹಿಸಿಕೊಳ್ಳೋಕೆ ಆಗ್ತಿಲ್ಲ, ಇನ್ಮೇಲೆ ನನಗೆ ಏನೂ ಮಾಡೋಕೆ ಆಗಲ್ಲ ಅಂತ ಅನಿಸಿದ್ಯಾ? ತುಂಬ ಜನರಿಗೆ ಆ ತರ ಆಗಿದೆ. ಹುಷಾರಿಲ್ಲದೆ ಇರೋರನ್ನ ನೋಡಿಕೊಳ್ಳೋ ಪರಿಸ್ಥಿತಿ ಬಂದಾಗ ಅಥವಾ ಯಾರಾದ್ರೂ ಮನೆಯಲ್ಲಿ ತೀರಿಹೋದಾಗ, ನೈಸರ್ಗಿಕ ವಿಪತ್ತುಗಳಾದಾಗ, ಈ ರೀತಿ ಯೋಚನೆಗಳು ಬರೋದು ಸಹಜ. ಆಗ ನಾವು ತುಂಬ ಕುಗ್ಗಿ ಹೋಗ್ತೀವಿ, ಚಿಂತೆ ಮಾಡ್ತೀವಿ, ಭಯ, ಆತಂಕ ಆಗುತ್ತೆ. ಆದ್ರೆ ಚಿಂತೆಗಳಿಂದ ಹೊರಗೆ ಬರೋದು ಹೇಗೆ? a

ಚಿಂತೆ ಮಾಡುವವರು ದಾವೀದನಿಂದ ತುಂಬ ವಿಷಯಗಳನ್ನ ಕಲಿಬಹುದು. ಅವನು ಜೀವನದಲ್ಲಿ ತುಂಬ ಕಷ್ಟಗಳನ್ನ ಅನುಭವಿಸಿದ. ಕೆಲವೊಮ್ಮೆ ಸಾಯುವ ಪರಿಸ್ಥಿತಿ ಕೂಡ ಬಂದಿತ್ತು. (1 ಸಮು. 17:34, 35; 18:10, 11) ಆ ಚಿಂತೆಗಳಿಂದ ಹೇಗೆ ಹೊರಗೆ ಬಂದ? ದಾವೀದನ ತರ ಇರೋಕೆ ನಾವೇನು ಮಾಡಬೇಕು?

ದಾವೀದ ವಿಪರೀತ ಚಿಂತೆಗಳಿಂದ ಹೇಗೆ ಹೊರಗೆ ಬಂದ?

ದಾವೀದ ತನ್ನ ಜೀವ ಕಾಪಾಡಿಕೊಳ್ಳೋಕೆ ರಾಜ ಸೌಲನಿಂದ ಓಡಿಹೋಗ್ತಾ ಇದ್ದಾನೆ. ಇದೂ ಸಾಲದು ಅಂತ ಅವನಿಗೆ ಇನ್ನೊಂದು ಕಷ್ಟ ಬಂತು. ಒಂದು ಸಲ ದಾವೀದ ಮತ್ತು ಅವನ ಕಡೆಯವರು ಯುದ್ಧ ಮುಗಿಸಿ ಬರುವಷ್ಟರಲ್ಲಿ ಅವನ ಶತ್ರುಗಳು ದಾವೀದನ ಮತ್ತು ಅವನ ಕಡೆಯವರ ಆಸ್ತಿಯನ್ನು ಲೂಟಿಮಾಡಿ, ಅವರ ಮನೆಗಳನ್ನ ಸುಟ್ಟುಹಾಕಿ, ಅವರ ಹೆಂಡತಿ-ಮಕ್ಕಳನ್ನ ಹಿಡ್ಕೊಂಡು ಹೋಗಿದ್ರು. ಆಗ ದಾವೀದನಿಗೆ ಹೇಗೆ ಅನಿಸಿರಬೇಕಲ್ವಾ? “ದಾವೀದ, ಅವನ ಜೊತೆ ಇದ್ದವರು ಜೋರಾಗಿ ಅಳೋಕೆ ಶುರು ಮಾಡಿದ್ರು. ಅತ್ತುಅತ್ತು ಅವ್ರಲ್ಲಿ ಶಕ್ತಿ ಇಲ್ಲದ ಹಾಗೆ ಆಯ್ತು.” ಅಷ್ಟೇ ಅಲ್ಲ, ದಾವೀದನ ಜೊತೆ ಇದ್ದವರು ಅವನನ್ನ “ದಾವೀದನನ್ನ ಕಲ್ಲೆಸೆದು ಸಾಯಿಸಬೇಕು ಅಂತ ಮಾತಾಡ್ಕೊಳ್ತಿದ್ರು.” (1 ಸಮು. 30:1-6) ದಾವೀದ ಎಂಥ ಸಂಕಟದ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡ ಅಂದ್ರೆ ಈ ಎಲ್ಲಾ ಕಷ್ಟಗಳು ಅವನಿಗೆ ಒಂದೇ ಸಲ ಬಂತು. ಒಂದುಕಡೆ ಅವನ ಕುಟುಂಬದವರು ಜೀವ ಕಳೆದುಕೊಳ್ಳೋ ಪರಿಸ್ಥಿತಿಯಲ್ಲಿ ಇದ್ದಾರೆ, ಇನ್ನೊಂದು ಕಡೆ ಅವನ ಕಡೆಯವರೇ ಅವನನ್ನು ಕೊಂದುಬಿಡ್ತಾರೆ ಅನ್ನೋ ಭಯನೂ ಇತ್ತು. ಇದೂ ಸಾಲದು ಅಂತ ರಾಜ ಸೌಲ ದಾವೀದನನ್ನ ಕೊಲ್ಲೋಕೆ ಇನ್ನೂ ಹುಡುಕ್ತಾ ಇದ್ದಾನೆ. ದಾವೀದನ ಜಾಗದಲ್ಲಿ ನೀವಿದ್ದಿದ್ದರೆ ನಿಮಗೂ ಎಷ್ಟು ಗಾಬರಿ, ಚಿಂತೆ ಆಗುತ್ತಿತ್ತಲ್ವಾ?

ಆದ್ರೆ ದಾವೀದ ಏನು ಮಾಡಿದ ಗೊತ್ತಾ? ಅವನು ತಕ್ಷಣ “ತನ್ನ ದೇವರಾದ ಯೆಹೋವನಿಂದ ತನ್ನನ್ನ ಬಲಪಡಿಸ್ಕೊಂಡ.” ಅವನು ಯಾವಾಗಲೂ ಮಾಡುತ್ತಿದ್ದ ತರಾನೇ ಯೆಹೋವನಿಗೆ ಪ್ರಾರ್ಥನೆ ಮಾಡಿದ, ಈ ಹಿಂದೆ ಯೆಹೋವ ತನಗೆ ಹೇಗೆಲ್ಲಾ ಸಹಾಯ ಮಾಡಿದ್ದನು ಅನ್ನೋದನ್ನ ನೆನಪಿಸಿಕೊಂಡ. (1 ಸಮು. 17:37; ಕೀರ್ತ. 18:2, 6) ಈಗ ತಾನೇನು ಮಾಡಬೇಕು ಅಂತ ಯೆಹೋವನ ಹತ್ರ ನಿರ್ದೇಶನ ಕೇಳಿದ. ಆಮೇಲೆ ಅವನು ಯೆಹೋವ ಹೇಳಿದ ತರಾನೇ ಮಾಡಿದ್ರಿಂದ ಅವನನ್ನ ಮತ್ತು ಅವನ ಕಡೆಯವರನ್ನ ಯೆಹೋವ ಆಶೀರ್ವದಿಸಿದನು. ಹೀಗೆ ಅವರೆಲ್ಲರಿಗೂ ತಮ್ಮ ಕುಟುಂಬದವರನ್ನ ಕಾಪಾಡೋಕೆ ಆಯ್ತು ಮತ್ತು ಎಲ್ಲರಿಗೂ ಅವರವರ ವಸ್ತುಗಳು ವಾಪಸ್ಸು ಸಿಕ್ತು. (1 ಸಮು. 30:7-9, 18, 19) ದಾವೀದ ಯಾವ 3 ವಿಷ್ಯಗಳನ್ನ ಮಾಡಿದ ಅಂತ ನೀವು ಗಮನಿಸಿದ್ರಾ? ಮೊದಲನೇದಾಗಿ ಅವನು ಯೆಹೋವ ದೇವರ ಹತ್ರ ಸಹಾಯಕ್ಕಾಗಿ ಪ್ರಾರ್ಥನೆ ಮಾಡಿದ. ಎರಡನೇದಾಗಿ ಈ ಹಿಂದೆ ಯೆಹೋವ ತನಗೆ ಹೇಗೆಲ್ಲಾ ಸಹಾಯ ಮಾಡಿದ್ದಾನೆ ಅಂತ ನೆನಪಿಸಿಕೊಂಡ ಮತ್ತು ಮೂರನೇದಾಗಿ ಯೆಹೋವ ಕೊಟ್ಟ ನಿರ್ದೇಶನಗಳಿಗೆ ತಕ್ಕ ಹಾಗೆ ನಡೆದುಕೊಂಡ. ದಾವೀದನಿಂದ ನಾವೇನು ಕಲಿಯಬಹುದು?

ವಿಪರೀತ ಚಿಂತೆ ಕಾಡಿದಾಗ ದಾವೀದನ ತರಾನೇ ಮಾಡಿ

1. ಪ್ರಾರ್ಥಿಸಿ. ನಿಮಗೆ ಗಾಬರಿ, ಚಿಂತೆ ಆದಾಗೆಲ್ಲಾ ಯೆಹೋವನ ಹತ್ರ ವಿವೇಕಕ್ಕಾಗಿ, ಸಹಾಯಕ್ಕಾಗಿ ಬೇಡಿಕೊಳ್ಳಿ. ನಮ್ಮ ಮನಸ್ಸಲ್ಲಿರೋ ದುಃಖನೆಲ್ಲಾ ಕಡಿಮೆ ಮಾಡಿಕೊಳ್ಳೋಕೆ ನಾವು ಯೆಹೋವನ ಹತ್ರ ಮನಸ್ಸು ಬಿಚ್ಚಿ ಪ್ರಾರ್ಥನೆ ಮಾಡಬಹುದು. ಒಂದುವೇಳೆ ಆ ತರ ಪ್ರಾರ್ಥನೆ ಮಾಡೋಕೆ ಆಗ್ತಿಲ್ಲ ಅಂದ್ರೆ ಮೌನವಾಗಿ ಒಂದು ಚಿಕ್ಕ ಪ್ರಾರ್ಥನೆ ಮಾಡಬಹುದು. ಆಗ ಯೆಹೋವ ದೇವರು ಖಂಡಿತ ಸಹಾಯ ಮಾಡುತ್ತಾನೆ. ಆಗ ದಾವೀದನ ತರ “ಯೆಹೋವ ನನ್ನ ಕಡಿದಾದ ಬಂಡೆ, ನನ್ನ ಭದ್ರ ಕೋಟೆ, ಆತನೇ ನನ್ನ ರಕ್ಷಕ. ನನ್ನ ದೇವರೇ ನನ್ನ ಬಂಡೆ, ಆತನಲ್ಲೇ ನಾನು ಆಶ್ರಯಿಸ್ತೀನಿ” ಅಂತ ನಾವೂ ಹೇಳೋಕೆ ಆಗುತ್ತೆ. (ಕೀರ್ತ. 18:2) ಪ್ರಾರ್ಥನೆ ಮಾಡುವಾಗ ನಿಜವಾಗಲೂ ಸಹಾಯ ಸಿಗುತ್ತಾ? ಕಾಲಿಯಾ ಅನ್ನೋ ಪಯನೀಯರ್‌ ಸಹೋದರಿ ಹೀಗೆ ಹೇಳ್ತಾರೆ: “ನಾನು ಪ್ರಾರ್ಥನೆ ಮಾಡಿದಾಗ ನೆಮ್ಮದಿ ಸಿಕ್ಕಿದೆ, ಯೆಹೋವನ ತರ ಯೋಚನೆ ಮಾಡೋಕೆ ಆಗಿದೆ ಮತ್ತು ಆತನ ಮೇಲಿರೋ ನನ್ನ ನಂಬಿಕೆನೂ ಜಾಸ್ತಿಯಾಗಿದೆ.” ಪ್ರಾರ್ಥನೆ ಅನ್ನೋದು ಯೆಹೋವನಿಂದ ಸಿಕ್ಕಿರೋ ಗಿಫ್ಟ್‌. ಚಿಂತೆಯಿಂದ ಹೊರಬರೋಕೆ ಇದು ಸಹಾಯ ಮಾಡುತ್ತೆ.

2. ಯೆಹೋವ ಮಾಡಿರೋ ಸಹಾಯನ ನೆನಪಿಸಿಕೊಳ್ಳಿ. ನೀವು ಕಷ್ಟದಲ್ಲಿದ್ದಾಗ ಯೆಹೋವ ನಿಮಗೆ ಸಹಾಯ ಮಾಡಿದ್ದು ನಿಮಗೆ ನೆನಪಿದೆಯಾ? ನಿಮಗೆ ಮತ್ತು ಹಿಂದಿನ ಕಾಲದ ತನ್ನ ಸೇವಕರಿಗೆ ಯೆಹೋವ ಹೇಗೆಲ್ಲಾ ಸಹಾಯ ಮಾಡಿದ್ದಾನೆ ಅಂತ ಯೋಚನೆ ಮಾಡುವಾಗ ಆತನ ಮೇಲಿರೋ ನಂಬಿಕೆ, ಭರವಸೆ ಇನ್ನೂ ಜಾಸ್ತಿಯಾಗುತ್ತೆ. (ಕೀರ್ತ. 18:17-19) ಜೋಶುವ ಅನ್ನೋ ಹಿರಿಯ ಹೀಗೆ ಹೇಳ್ತಾರೆ: “ಯೆಹೋವ ನನ್ನ ಪ್ರಾರ್ಥನೆಗೆ ಉತ್ತರ ಕೊಟ್ಟಾಗೆಲ್ಲಾ ನಾನು ಅದನ್ನ ಬರೆದು ಇಡ್ತೀನಿ. ಇದು ಕಷ್ಟ ಬಂದಾಗೆಲ್ಲಾ ಯೆಹೋವ ನನಗೆ ಬೇಕಾಗಿರೋದನ್ನ ಕೊಟ್ಟಿದ್ದಾರೆ ಅಂತ ನೆನಪಿಸುತ್ತೆ.” ಯೆಹೋವ ನಮಗಾಗಿ ಮಾಡಿರೋ ವಿಷಯಗಳನ್ನ ಜ್ಞಾಪಿಸಿಕೊಂಡಾಗ ನಮಗೆ ಧೈರ್ಯ ಬರುತ್ತೆ, ಚಿಂತೆಯಿಂದ ಹೊರಗೆ ಬರೋಕೆ ಆಗುತ್ತೆ.

3. ಯೆಹೋವ ಹೇಳೋ ತರ ಮಾಡಿ. ಒಂದು ನಿರ್ಧಾರ ಮಾಡೋ ಮುಂಚೆ ಆ ವಿಷಯದ ಬಗ್ಗೆ ಯೆಹೋವ ಏನು ಹೇಳ್ತಾನೆ ಅಂತ ತಿಳಿದುಕೊಳ್ಳೋಕೆ ನಾವು ಬೈಬಲನ್ನ ಓದಬೇಕು. (ಕೀರ್ತ. 19:7, 11) ಕೆಲವರು ಬೈಬಲ್‌ ವಚನಗಳನ್ನ ಚೆನ್ನಾಗಿ ಸಂಶೋಧನೆ ಮಾಡಿದ್ರಿಂದ ತಾವಿರೋ ಕಷ್ಟದ ಸನ್ನಿವೇಶದಲ್ಲಿ ಹೇಗೆ ನಡೆದುಕೊಳ್ಳಬೇಕು ಅಂತ ಅರ್ಥಮಾಡಿಕೊಂಡಿದ್ದಾರೆ. ಜೆರಾಡ್‌ ಅನ್ನೋ ಹಿರಿಯ ಏನು ಹೇಳ್ತಾರೆ ಅಂದ್ರೆ, “ನಾನು ಒಂದು ವಚನದ ಬಗ್ಗೆ ಸಂಶೋಧನೆ ಮಾಡಿದಾಗ ತುಂಬ ವಿಷಯಗಳನ್ನ ಕಲಿಯೋಕೆ ಆಗುತ್ತೆ ಮತ್ತು ನಾನೇನು ಮಾಡಬೇಕು ಅಂತ ಯೆಹೋವ ಹೇಳ್ತಿದ್ದಾನೆ ಅಂತನೂ ಅರ್ಥ ಆಗುತ್ತೆ. ಅಷ್ಟೇ ಅಲ್ಲ, ಬೈಬಲ್‌ ಮೇಲಿರೋ ನನ್ನ ನಂಬಿಕೆ ಜಾಸ್ತಿ ಆಗೋದ್ರಿಂದ ಯೆಹೋವ ಹೇಳಿದ ಹಾಗೆ ನಡೆದುಕೊಳ್ತೀನಿ.” ಬೈಬಲಲ್ಲಿ ಸಿಗೋ ಯೆಹೋವನ ನಿರ್ದೇಶನ ಪ್ರಕಾರ ನಾವು ನಡೆದುಕೊಂಡಾಗ ಚಿಂತೆಯಿಂದ ಹೊರಗೆ ಬರಬಹುದು.

ಯೆಹೋವ ಸಹಾಯ ಮಾಡ್ತಾನೆ

ಚಿಂತೆಯಿಂದ ಹೊರಗೆ ಬರೋಕೆ ಯೆಹೋವನ ಸಹಾಯ ಬೇಕೇ ಬೇಕು ಅಂತ ದಾವೀದ ಅರ್ಥಮಾಡಿಕೊಂಡಿದ್ದ. ಯೆಹೋವನ ಸಹಾಯ ಸಿಕ್ಕಿದಾಗ ಅವನು “ದೇವರ ಬಲದಿಂದ ನಾನು ಗೋಡೆಯನ್ನೂ ಜಿಗಿತೀನಿ, ನನಗೆ ಸತ್ಯ ದೇವರೇ ಬಲವನ್ನ ಬಟ್ಟೆ ತರ ತೊಡಿಸ್ತಾನೆ” ಅಂತ ಹೇಳಿದ. (ಕೀರ್ತ. 18:29, 32) ನಮಗೂ ನಮ್ಮ ಕಷ್ಟಗಳು ದೊಡ್ಡದೊಡ್ಡ ಗೋಡೆಗಳ ತರ ಕಾಣಿಸಬಹುದು. ಆದ್ರೆ ಯೆಹೋವನ ಸಹಾಯದಿಂದ ನಾವೂ ಅಂಥ ಗೋಡೆಗಳನ್ನ ಜಿಗಿಯೋಕೆ ಆಗುತ್ತೆ. ನಾವು ಯೆಹೋವನಿಗೆ ಪ್ರಾರ್ಥನೆ ಮಾಡಬೇಕು, ಹಿಂದೆ ಹೇಗೆಲ್ಲಾ ಸಹಾಯ ಮಾಡಿದ್ದಾನೆ ಅಂತ ನೆನಪಿಸಿಕೊಳ್ಳಬೇಕು ಮತ್ತು ಆತನು ಕೊಡೋ ನಿರ್ದೇಶನಗಳಿಗೆ ತಕ್ಕ ಹಾಗೆ ನಡೆದುಕೊಳ್ಳಬೇಕು. ಆಗ ಚಿಂತೆಯಿಂದ ಹೊರಗೆ ಬರೋಕೆ ಬೇಕಾಗಿರೋ ಶಕ್ತಿ ಮತ್ತು ಬುದ್ಧಿ ಎರಡನ್ನೂ ಯೆಹೋವ ದೇವರು ನಮಗೆ ಕೊಟ್ಟೇ ಕೊಡ್ತಾನೆ!

a ಒಬ್ಬ ವ್ಯಕ್ತಿಗೆ ವಿಪರೀತ ಚಿಂತೆ ಅಥವಾ ಖಿನ್ನತೆ ಇರೋದಾದ್ರೆ ಡಾಕ್ಟರ್‌ ಹತ್ರ ಹೋಗೋದು ಒಳ್ಳೇದು.