ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಒಬ್ಬ ಕ್ರೈಸ್ತನು ಬೈಬಲಿಗೆ ವಿರುದ್ಧವಾಗಿ ತನ್ನ ಹೆಂಡತಿಗೆ ವಿಚ್ಛೇದನ ಕೊಟ್ಟು ಇನ್ನೊಬ್ಬರನ್ನ ಮದುವೆ ಮಾಡಿಕೊಂಡ್ರೆ ಅವನ ಮೊದಲನೇ ಮತ್ತು ಎರಡನೇ ಮದುವೆಯ ಬಂಧವನ್ನ ಸಭೆಯವರು ಹೇಗೆ ನೋಡಬೇಕು?

▪ ಅಂಥ ಸನ್ನಿವೇಶದಲ್ಲಿ ಆ ವ್ಯಕ್ತಿ ಎರಡನೇ ಮದುವೆ ಮಾಡಿಕೊಂಡಿದ್ರಿಂದ ಮೊದಲನೇ ಮದುವೆ ಬಂಧ ಮುರಿದು ಹೋಗುತ್ತೆ. ಎರಡನೇ ಮದುವೆ ಆದಾಗ ಸಭೆಯವರು ಅವರನ್ನ ಗಂಡ ಹೆಂಡತಿಯಾಗಿ ನೋಡಬೇಕು. ನಾವು ಯಾಕೆ ಹಾಗೆ ಹೇಳಬಹುದು? ಅದಕ್ಕೆ ಯೇಸು ವಿಚ್ಛೇದನ ಮತ್ತು ಪುನರ್ವಿವಾಹದ ಬಗ್ಗೆ ಏನು ಹೇಳಿದನು ಅಂತ ನೋಡೋಣ.

ಮತ್ತಾಯ 19:9 ರಲ್ಲಿ ಯಾವ ಕಾರಣ ಇದ್ದರೆ ಮಾತ್ರ ವಿಚ್ಛೇದನ ಕೊಡಬಹುದು ಅಂತ ಯೇಸು ಹೇಳಿದ್ದಾನೆ? “ಲೈಂಗಿಕ ಅನೈತಿಕತೆ ಕಾರಣ ಬಿಟ್ಟು ಬೇರೆ ಯಾವುದೇ ಕಾರಣಕ್ಕೆ ಹೆಂಡತಿಗೆ ವಿಚ್ಛೇದನ ಕೊಟ್ಟು ಇನ್ನೊಬ್ಬಳನ್ನ ಮದುವೆ ಆಗುವವನು ವ್ಯಭಿಚಾರಿ ಆಗಿದ್ದಾನೆ” ಅಂತ ಆತನು ಹೇಳಿದನು. ಇದರಿಂದ ನಮಗೆ ಎರಡು ವಿಷಯ ಗೊತ್ತಾಗುತ್ತೆ. (1) ಬೈಬಲ್‌ ಪ್ರಕಾರ, ವಿಚ್ಛೇದನ ಕೊಟ್ಟು ಮದುವೆ ಬಂಧ ಮುರಿಯೋಕೆ ಇರೋ ಒಂದೇ ಕಾರಣ ಏನಂದ್ರೆ ಲೈಂಗಿಕ ಅನೈತಿಕತೆ. (2) ಒಬ್ಬ ವ್ಯಕ್ತಿ ಬೈಬಲಲ್ಲಿರೋ ಕಾರಣ ಬಿಟ್ಟು ಬೇರೆ ಕಾರಣಗಳಿಗೆ ವಿಚ್ಛೇದನ ಕೊಟ್ಟು ಇನ್ನೊಬ್ಬರನ್ನ ಮದುವೆಯಾದ್ರೆ ಅವನು ವ್ಯಭಿಚಾರಿಯಾಗ್ತಾನೆ. a

ಹಾಗಾದ್ರೆ ಒಬ್ಬ ವ್ಯಕ್ತಿ ಲೈಂಗಿಕ ಅನೈತಿಕತೆ ಮಾಡಿ ತನ್ನ ಹೆಂಡತಿಗೆ ವಿಚ್ಛೇದನ ಕೊಟ್ಟಿದ್ದಾನೆ ಅಂದಮಾತ್ರಕ್ಕೆ ಬೇರೆ ಮದುವೆ ಆಗಬಹುದು ಅಂತ ಯೇಸು ಇಲ್ಲಿ ಹೇಳುತ್ತಿದ್ದಾನಾ? ಇಲ್ಲ. ಈ ರೀತಿಯ ಸನ್ನಿವೇಶಗಳಲ್ಲಿ ತಪ್ಪು ಮಾಡಿರದ ಹೆಂಡತಿಯ ನಿರ್ಣಯ ಮುಖ್ಯವಾಗಿರುತ್ತೆ. ಅವನನ್ನ ಕ್ಷಮಿಸಿ ಅವನ ಜೊತೆ ಜೀವನ ಮಾಡಬೇಕಾ ಬೇಡವಾ ಅನ್ನೋದು ಅವಳಿಗೆ ಬಿಟ್ಟಿದ್ದು. ಒಂದುವೇಳೆ ಅವಳಿಗೆ ಅವನ ಜೊತೆ ಜೀವನ ಮಾಡೋಕೆ ಇಷ್ಟ ಇಲ್ಲಾಂದ್ರೆ ಕಾನೂನಿನ ಪ್ರಕಾರ ವಿಚ್ಛೇದನ ಪಡೆದುಕೊಂಡ ಮೇಲೆ ಅವರಿಬ್ಬರು ಬೇರೆ ಮದುವೆಯಾಗಬಹುದು.

ಆದ್ರೆ ತಪ್ಪು ಮಾಡಿಲ್ಲದ ಹೆಂಡತಿ ತನ್ನ ಮದುವೆ ಬಂಧವನ್ನ ಕಾಪಾಡಿಕೊಳ್ಳೋಕೆ ಇಷ್ಟಪಟ್ಟು ಗಂಡನನ್ನ ಮನಸಾರೆ ಕ್ಷಮಿಸುತ್ತಾಳೆ ಅಂತ ನೆನಸಿ. ಆದ್ರೆ ವ್ಯಭಿಚಾರ ಮಾಡಿರೋ ಗಂಡ ತನಗೆ ವಿಚ್ಛೇದನ ಬೇಕು ಅಂತ ಹೇಳಿ ಹೆಂಡತಿಯ ಒಪ್ಪಿಗೆ ಇಲ್ಲದೆ ವಿಚ್ಛೇದನ ಕೊಟ್ಟರೆ ಆಗೇನು? ಅವನ ಹೆಂಡತಿ ಅವನನ್ನ ಮನಸಾರೆ ಕ್ಷಮಿಸಿ ತನ್ನ ಮದುವೆ ಬಂಧವನ್ನ ಉಳಿಸಿಕೊಳ್ಳೋಕೆ ಆಸೆ ಪಡುತ್ತಿರೋದ್ರಿಂದ ಅವನು ಇನ್ನೊಬ್ಬರನ್ನ ಮದುವೆ ಆಗೋದು ಬೈಬಲ್‌ ಪ್ರಕಾರ ತಪ್ಪಾಗಿರುತ್ತೆ. ಒಂದುವೇಳೆ ಅವನು ಬೈಬಲ್‌ಗೆ ವಿರುದ್ಧವಾಗಿ ಇನ್ನೊಬ್ಬರನ್ನ ಮದುವೆಯಾದ್ರೆ ಅವನು ಪುನಃ ವ್ಯಭಿಚಾರ ಮಾಡಿದ್ದಾನೆ. ಆಗ ಮತ್ತೆ ಹಿರಿಯರು ಅವನ ಮೇಲೆ ನ್ಯಾಯನಿರ್ಣಾಯಕ ಕ್ರಮಗಳನ್ನ ತೆಗೆದುಕೊಳ್ಳುತ್ತಾರೆ.—1 ಕೊರಿಂ. 5:1, 2; 6:9, 10.

ಒಬ್ಬ ವ್ಯಕ್ತಿ ಬೈಬಲಿಗೆ ವಿರುದ್ಧವಾಗಿ ಎರಡನೇ ಮದುವೆ ಮಾಡಿಕೊಂಡ್ರೆ ಅವರ ಮೊದಲನೇ ಮತ್ತು ಎರಡನೇ ಮದುವೆಯ ಬಂಧವನ್ನ ಸಭೆಯವರು ಹೇಗೆ ನೋಡಬೇಕು? ಅವರ ಮೊದಲನೇ ಮದುವೆಯ ಬಂಧ ಕಾನೂನಿನ ಪ್ರಕಾರ ಮುರಿದು ಹೋಗಿದ್ದರೂ ಬೈಬಲ್‌ ಪ್ರಕಾರ ಅವರಿಬ್ಬರೂ ಇನ್ನೂ ಗಂಡ-ಹೆಂಡತಿಯಾಗೇ ಇರುತ್ತಾರಾ? ತನ್ನ ಮಾಜಿ ಗಂಡನನ್ನು ಕ್ಷಮಿಸಬಹುದಾ ಇಲ್ವಾ ಅನ್ನೋ ನಿರ್ಧಾರ ಮಾಡೋದು ಈಗಲೂ ಆ ಹೆಂಡತಿ ಕೈಯಲ್ಲಿ ಇರುತ್ತಾ? ಆ ವ್ಯಕ್ತಿ ಎರಡನೇ ಹೆಂಡತಿ ಜೊತೆ ಜೀವನ ಮಾಡುತ್ತಿರೋದು ವ್ಯಭಿಚಾರ ಅಂತ ಹೇಳೋಕಾಗುತ್ತಾ?

ತಪ್ಪು ಮಾಡಿಲ್ಲದ ಹೆಂಡತಿ ಇನ್ನೂ ಬದುಕಿದ್ದರೆ, ಅವಳು ಇನ್ನೂ ಬೇರೆಯವರನ್ನ ಮದುವೆಯಾಗಿಲ್ಲದಿದ್ರೆ, ಅಥವಾ ಬೇರೆಯವರ ಜೊತೆ ಲೈಂಗಿಕ ಸಂಬಂಧ ಇಟ್ಟುಕೊಂಡಿಲ್ಲದಿದ್ರೆ ಗಂಡ ಮಾಡಿಕೊಂಡಿರೋ ಎರಡನೇ ಮದುವೆಯನ್ನ ನಾವು ವ್ಯಭಿಚಾರದ ಜೀವನ ಅಂತ ಮುಂಚೆ ಅಂದುಕೊಂಡಿದ್ವಿ. ಆದ್ರೆ ಯೇಸು ವಿಚ್ಛೇದನ ಮತ್ತು ಪುನರ್ವಿವಾಹದ ಬಗ್ಗೆ ಮಾತಾಡುವಾಗ ತಪ್ಪು ಮಾಡಿಲ್ಲದ ಸಂಗಾತಿಯ ಬಗ್ಗೆ ಏನೂ ಹೇಳಲಿಲ್ಲ. ಅದರ ಬದಲು ಯಾರು ಬೈಬಲಲ್ಲಿ ಹೇಳಿರೋ ಕಾರಣವನ್ನ ಬಿಟ್ಟು ಬೇರೆ ಕಾರಣಕ್ಕೆ ವಿಚ್ಛೇದನ ಕೊಟ್ಟು ಇನ್ನೊಂದು ಮದುವೆಯಾಗಿದ್ದಾರೋ ಅವರು ವ್ಯಭಿಚಾರ ಮಾಡಿದ್ದಾರೆ ಅಂತ ಹೇಳಿದ. ಈ ರೀತಿ ವಿಚ್ಛೇದನ ಕೊಟ್ಟು ಎರಡನೇ ಮದುವೆ ಮಾಡಿಕೊಳ್ಳೋದ್ರಿಂದ ಮೊದಲನೇ ಮದುವೆಯ ಬಂಧ ಮುರಿದು ಹೋಗುತ್ತೆ.

“ಲೈಂಗಿಕ ಅನೈತಿಕತೆ ಕಾರಣ ಬಿಟ್ಟು ಬೇರೆ ಯಾವುದೇ ಕಾರಣಕ್ಕೆ ಹೆಂಡತಿಗೆ ವಿಚ್ಛೇದನ ಕೊಟ್ಟು ಇನ್ನೊಬ್ಬಳನ್ನ ಮದುವೆ ಆಗುವವನು ವ್ಯಭಿಚಾರಿ ಆಗಿದ್ದಾನೆ.”—ಮತ್ತಾ. 19:9

ಗಂಡ ಈಗಾಗಲೇ ಎರಡನೇ ಮದುವೆ ಮಾಡಿಕೊಂಡಿದ್ರಿಂದ ಅವನನ್ನ ಕ್ಷಮಿಸೋದು ಬಿಡೋದು ಇನ್ಮೇಲೆ ತಪ್ಪು ಮಾಡಿರದ ಹೆಂಡತಿ ಕೈಯಲ್ಲಿ ಇರಲ್ಲ. ಅಂಥ ಕಷ್ಟವಾದ ನಿರ್ಧಾರ ಮಾಡೋ ಅವಶ್ಯಕತೆನೂ ಅವಳಿಗೆ ಇರಲ್ಲ. ಹಾಗಾಗಿ ಆ ವ್ಯಕ್ತಿ ಮಾಡಿಕೊಂಡಿರೋ ಎರಡನೇ ಮದುವೆಯ ಬಂಧವನ್ನ ಸಭೆಯವರು ಹೇಗೆ ನೋಡಬೇಕು? ಅದನ್ನ ವ್ಯಭಿಚಾರದ ಜೀವನದ ತರ ನೋಡಬಾರದು. ಯಾಕಂದ್ರೆ ಮಾಜಿ ಹೆಂಡತಿಯ ಪರಿಸ್ಥಿತಿಯ ಆಧಾರದ ಮೇಲೆ ನಾವು ಎರಡನೇ ಮದುವೆಯನ್ನು ಅಳೆಯಲ್ಲ. ಅಂದ್ರೆ ಮಾಜಿ ಹೆಂಡತಿ ಇನ್ನೂ ಬದುಕಿದ್ದಾಳಾ, ಅವಳು ಬೇರೆಯವರನ್ನ ಮದುವೆ ಆಗಿದ್ದಾಳಾ, ಬೇರೆಯವರ ಜೊತೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಾಳಾ ಅನ್ನೋದರ ಮೇಲೆ ಈ ಎರಡನೇ ಮದುವೆಯನ್ನ ಅಳೆಯೋಕಾಗಲ್ಲ. b

ನಾವು ಇಲ್ಲಿ ತನಕ ಗಂಡ ವ್ಯಭಿಚಾರ ಮಾಡಿ ವಿಚ್ಛೇದನ ಪಡೆದುಕೊಂಡ್ರೆ ಏನಾಗುತ್ತೆ ಅಂತ ನೋಡಿದ್ವಿ. ಆದ್ರೆ ಒಂದುವೇಳೆ ಗಂಡ ವ್ಯಭಿಚಾರ ಮಾಡದೆ ವಿಚ್ಛೇದನ ತಗೊಂಡು ಇನ್ನೊಬ್ಬರನ್ನ ಮದುವೆಯಾದರೆ ಏನಾಗುತ್ತೆ? ಅಥವಾ ಒಬ್ಬ ವ್ಯಕ್ತಿ ವಿಚ್ಛೇದನ ಪಡೆದುಕೊಳ್ಳೋ ಮುಂಚೆ ಅಲ್ಲ ವಿಚ್ಛೇದನ ಪಡೆದುಕೊಂಡ ಮೇಲೆ ಲೈಂಗಿಕ ಅನೈತಿಕತೆಯಲ್ಲಿ ಒಳಗೂಡಿದ್ದಾನೆ ಅಂದುಕೊಳ್ಳಿ. ಅವನನ್ನ ಹೆಂಡತಿ ಕ್ಷಮಿಸೋಕೆ ರೆಡಿ ಇದ್ದರೂ ಅವನು ಇನ್ನೊಬ್ಬರನ್ನ ಮದುವೆಯಾದ್ರೆ ಆಗ ಏನಾಗುತ್ತೆ? ಈ ಎಲ್ಲಾ ಸನ್ನಿವೇಶಗಳಲ್ಲೂ ಗಂಡ ವಿಚ್ಛೇದನ ಕೊಟ್ಟು ಇನ್ನೊಂದು ಮದುವೆಯಾಗಿರೋದ್ರಿಂದ ಅವನು ವ್ಯಭಿಚಾರ ಮಾಡಿದ್ದಾನೆ. ಹಾಗಾಗಿ ಅವನ ಮೊದಲನೇ ಮದುವೆ ಬಂಧ ಅಲ್ಲಿಗೇ ಮುಗಿದು ಹೋಗುತ್ತೆ ಮತ್ತು ಎರಡನೇ ಮದುವೆಯ ಜೀವನವನ್ನ ಹೊಸ ಮದುವೆಯ ಬಂಧವಾಗಿ ನೋಡಬೇಕಾಗುತ್ತೆ. ನವೆಂಬರ್‌ 15, 1979ರ ಕಾವಲಿನಬುರುಜುವಿನ (ಇಂಗ್ಲಿಷ್‌) ಪುಟ 32ರಲ್ಲಿ ಹೀಗಿದೆ: “ಗಂಡ ಎರಡನೇ ಮದುವೆ ಮಾಡಿಕೊಂಡ ಮೇಲೆ ಎರಡನೇ ಹೆಂಡತಿಯನ್ನ ಬಿಟ್ಟು ತನ್ನ ಮೊದಲನೇ ಹೆಂಡತಿ ಹತ್ತಿರ ವಾಪಸ್‌ ಬರೋಕಾಗಲ್ಲ. ಯಾಕಂದ್ರೆ ವಿಚ್ಛೇದನ, ವ್ಯಭಿಚಾರ ಮತ್ತು ಎರಡನೇ ಮದುವೆ ಆಗಿರೋದರಿಂದ ಅವನ ಮೊದಲನೇ ಮದುವೆ ಬಂಧ ಅಲ್ಲಿಗೇ ಮುಗಿದು ಹೋಗುತ್ತೆ.”

ತಿಳುವಳಿಕೆ ಬದಲಾವಣೆ ಆಗಿರೋದರ ಅರ್ಥ, ನಾವು ಮದುವೆಯ ಬಂಧವನ್ನ ಹಗುರವಾಗಿ ನೋಡಬೇಕು ಅಂತಾಗಲಿ ಅಥವಾ ವ್ಯಭಿಚಾರ ಮಾಡಿದ ವ್ಯಕ್ತಿ ಅಂಥಾ ದೊಡ್ಡ ತಪ್ಪೇನು ಮಾಡಿಲ್ಲ ಅಂತಾಗಲಿ ಅಲ್ಲ. ಬೈಬಲಿಗೆ ವಿರುದ್ಧವಾಗಿ ವಿಚ್ಛೇದನ ಕೊಟ್ಟು ಇನ್ನೊಬ್ಬರನ್ನ ಮದುವೆಯಾಗುವ ಗಂಡ ವ್ಯಭಿಚಾರ ಮಾಡಿದ್ದಾನೆ. ಅವನ ಮೇಲೆ ಹಿರಿಯರು ನ್ಯಾಯನಿರ್ಣಾಯಕ ಕ್ರಮಗಳನ್ನ ತೆಗೆದುಕೊಳ್ತಾರೆ. (ಒಂದುವೇಳೆ ಎರಡನೇ ಹೆಂಡತಿನೂ ಕ್ರೈಸ್ತಳಾಗಿದ್ದರೆ, ಅವಳ ಮೇಲೂ ಹಿರಿಯರು ನ್ಯಾಯನಿರ್ಣಾಯಕ ಕ್ರಮಗಳನ್ನ ತೆಗೆದುಕೊಳ್ತಾರೆ. ಯಾಕಂದ್ರೆ ಅವಳೂ ಲೈಂಗಿಕ ಅನೈತಿಕತೆ ಮಾಡಿದ್ದಾಳೆ.) ಅವರ ಎರಡನೇ ಮದುವೆ ಜೀವನವನ್ನ ನಾವು ವ್ಯಭಿಚಾರವಾಗಿ ನೋಡದೇ ಇದ್ದರೂ ಆ ವ್ಯಕ್ತಿಗೆ ತುಂಬ ವರ್ಷಗಳ ತನಕ ಸಭೆಯಲ್ಲಿ ವಿಶೇಷ ಸುಯೋಗಗಳು ಸಿಗಲ್ಲ. ಆದ್ರೆ ತುಂಬ ವರ್ಷಗಳಾದ ಮೇಲೆ ಜನರು ಆ ವ್ಯಕ್ತಿ ಮಾಡಿದ ತಪ್ಪಿಂದ ಇನ್ನೂ ಬೇಜಾರಲ್ಲಿ ಇಲ್ಲಾಂದ್ರೆ ಅಥವಾ ಅವನನ್ನ ಈಗ ಗೌರವಿಸುತ್ತಿದ್ರೆ ವಿಶೇಷ ಸುಯೋಗಗಳು ಸಿಗಬಹುದು. ಅಷ್ಟೇ ಅಲ್ಲ, ಇವನ್ನು ಕೊಡೋಕೆ ಮುಂಚೆ ಹಿರಿಯರು ಇನ್ನೂ ಕೆಲವು ವಿಷಯಗಳನ್ನ ನೋಡ್ತಾರೆ. ಒಂದುವೇಳೆ ಅವನು ಮೊದಲನೇ ಹೆಂಡತಿಗೆ ದ್ರೋಹ ಮಾಡಿದ್ರೆ ಈಗ ಅವಳ ಪರಿಸ್ಥಿತಿ ಹೇಗಿದೆ, (ಆರ್ಥಿಕ, ಭಾವನಾತ್ಮಕ ಮತ್ತು ಇತರ) ಮತ್ತು ಒಂದುವೇಳೆ ಅವನು ಬಿಟ್ಟುಬಂದ ಮಕ್ಕಳು ಈಗ ಅಪ್ರಾಪ್ತ ವಯಸ್ಸಿನವರಾಗಿದ್ರೆ, ಅವರ ಪರಿಸ್ಥಿತಿ ಹೇಗಿದೆ ಅಂತ ಹಿರಿಯರು ಯೋಚಿಸ್ತಾರೆ.—ಮಲಾ. 2:14-16.

ಬೈಬಲಲ್ಲಿ ಹೇಳಿರೋ ಕಾರಣವನ್ನ ಬಿಟ್ಟು ಬೇರೆ ಕಾರಣಗಳಿಗೆ ವಿಚ್ಛೇದನ ಕೊಟ್ಟು ಇನ್ನೊಬ್ಬರನ್ನ ಮದುವೆಯಾಗುವವರಿಗೆ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಹಾಗಾಗಿ ಕ್ರೈಸ್ತರು ಯೆಹೋವನ ತರ ಮದುವೆ ಬಂಧವನ್ನ ಪವಿತ್ರವಾಗಿ ನೋಡಬೇಕು.—ಪ್ರಸಂ. 5:4, 5; ಇಬ್ರಿ. 13:4.

a ಈ ವಿಷ್ಯನ ಚೆನ್ನಾಗಿ ಅರ್ಥ ಮಾಡಿಕೊಳ್ಳೋಕೆ ಈ ಲೇಖನದಲ್ಲಿ ಹೆಂಡತಿ ಏನೂ ತಪ್ಪು ಮಾಡಿಲ್ಲ, ಗಂಡ ವ್ಯಭಿಚಾರ ಮಾಡಿದ್ದಾನೆ ಅಂತ ಹೇಳಲಾಗಿದೆ. ಆದ್ರೆ ಮಾರ್ಕ 10:11, 12 ರಲ್ಲಿ ಯೇಸು ಹೇಳಿರೋದು ಗಂಡ-ಹೆಂಡತಿ ಇಬ್ಬರಿಗೂ ಅನ್ವಯಿಸುತ್ತೆ.

b ತಪ್ಪು ಮಾಡಿರದ ಹೆಂಡತಿ ಇನ್ನೂ ಬದುಕಿದ್ದರೆ, ಅವಳು ಇನ್ನೂ ಬೇರೆಯವರನ್ನ ಮದುವೆ ಆಗಿರದಿದ್ದರೆ, ಅಥವಾ ಬೇರೆಯವರ ಜೊತೆ ಲೈಂಗಿಕ ಸಂಬಂಧ ಇಟ್ಟುಕೊಂಡಿಲ್ಲದಿದ್ರೆ ಗಂಡ ಮಾಡಿಕೊಂಡಿರೋ ಎರಡನೇ ಮದುವೆಯ ಜೀವನವನ್ನ ನಾವು ವ್ಯಭಿಚಾರದ ಜೀವನ ಅಂತ ಅಂದುಕೊಂಡಿದ್ವಿ. ಆದ್ರೆ ಈಗ ಈ ತಿಳುವಳಿಕೆ ಬದಲಾಗಿದೆ.