ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 16

ತನುಮನದಿಂದ ಯೆಹೋವನ ಸೇವೆ ಮಾಡಿ ಖುಷಿಯಾಗಿರಿ

ತನುಮನದಿಂದ ಯೆಹೋವನ ಸೇವೆ ಮಾಡಿ ಖುಷಿಯಾಗಿರಿ

“ಪ್ರತಿಯೊಬ್ಬನು ಅವನು ಮಾಡಿದ ಕೆಲಸವನ್ನ ಚೆನ್ನಾಗಿ ಪರೀಕ್ಷಿಸ್ಕೊಳ್ಳಲಿ.”ಗಲಾ. 6:4.

ಗೀತೆ 66 ಯೆಹೋವನಿಗೆ ಪೂರ್ಣ ಪ್ರಾಣದ ಸೇವೆ ಸಲ್ಲಿಸುವುದು

ಕಿರುನೋಟ a

1. ಯಾವುದ್ರಿಂದ ನಮಗೆ ಜಾಸ್ತಿ ಖುಷಿ ಸಿಗುತ್ತೆ?

 ಯೆಹೋವ ದೇವರು ನಾವು ಖುಷಿಯಾಗಿರಬೇಕು ಅಂತ ಆಸೆಪಡುತ್ತಾನೆ. ಅದಕ್ಕೆ ಆತನು ನಮಗೆ ಪವಿತ್ರ ಶಕ್ತಿ ಕೊಟ್ಟಿದ್ದಾನೆ. ಅದರಿಂದ ಬರೋ ಒಂದು ಗುಣ ಆನಂದ. (ಗಲಾ. 5:22) ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗೋದ್ರಿಂದ ನಾವು ಸಿಹಿಸುದ್ದಿ ಸಾರುತ್ತೀವಿ, ಸಹೋದರ ಸಹೋದರಿಯರಿಗೆ ಸಹಾಯನೂ ಮಾಡ್ತೀವಿ.—ಅ. ಕಾ. 20:35.

2-3. (ಎ) ಗಲಾತ್ಯ 6:4 ರಲ್ಲಿ ಹೇಳಿರೋ ತರ ನಾವು ಖುಷಿಖುಷಿಯಾಗಿ ಯೆಹೋವನ ಸೇವೆ ಮಾಡೋಕೆ ಏನು ಮಾಡಬೇಕು? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ?

2 ಗಲಾತ್ಯ 6:4 ಓದಿ. ಈ ವಚನದಲ್ಲಿ ನಾವು ಖುಷಿಖುಷಿಯಾಗಿ ಯೆಹೋವನ ಸೇವೆ ಮಾಡೋಕೆ ಎರಡು ವಿಷಯಗಳನ್ನ ಮಾಡಬೇಕು ಅಂತ ಅಪೊಸ್ತಲ ಪೌಲ ಹೇಳಿದ್ದಾನೆ. ಒಂದನೇದು, ಯೆಹೋವನ ಸೇವೆಯನ್ನ ನಮ್ಮಿಂದ ಆದಷ್ಟು ಚೆನ್ನಾಗಿ ಮಾಡಬೇಕು. ಆಗ ನಿಮ್ಮ ಮನಸ್ಸಿಗೆ ತುಂಬ ಖುಷಿಯಾಗುತ್ತೆ. (ಮತ್ತಾ. 22:36-38) ಎರಡನೇದು, ಬೇರೆಯವರ ಜೊತೆ ನಮ್ಮನ್ನ ಹೋಲಿಸಿಕೊಳ್ಳಬಾರದು. ನಾವು ನಮಗಿರೋ ಒಳ್ಳೇ ಆರೋಗ್ಯ, ಸಿಕ್ಕಿರೋ ತರಬೇತಿ, ನಮಗಿರೋ ಸಾಮರ್ಥ್ಯದಿಂದ ಯೆಹೋವನನ್ನ ಚೆನ್ನಾಗಿ ಸೇವೆ ಮಾಡ್ತಾ ಇದ್ದೀವಿ. ಇದಕ್ಕೆ ನಾವು ಖುಷಿಪಡಬೇಕು. ಯೆಹೋವನಿಗೆ ಋಣಿಗಳಾಗಿರಬೇಕು. ಯಾಕಂದ್ರೆ ಇದನ್ನೆಲ್ಲಾ ನಮಗೆ ಯೆಹೋವನೇ ಕೊಟ್ಟಿರೋದು. ನಮ್ಮ ಸಹೋದರ ಸಹೋದರಿಯರಿಗೆ ಕೆಲವು ವಿಶೇಷ ಸಾಮರ್ಥ್ಯಗಳಿವೆ. ಆ ಸಾಮರ್ಥ್ಯಗಳನ್ನ ತಮ್ಮ ಪ್ರತಿಭೆ ತೋರಿಸಿಕೊಳ್ಳೋಕೆ ಅಲ್ಲ, ಯೆಹೋವನ ಸೇವೆಗೆ ಉಪಯೋಗಿಸುತ್ತಿದ್ದಾರೆ. ಹಾಗಾಗಿ ನಾವು ಅವರನ್ನ ನೋಡಿ ಖುಷಿಪಡಬೇಕು. ಅವರ ಜೊತೆ ಪೈಪೋಟಿ ಮಾಡದೆ ಅವರಿಂದ ಕಲಿಬೇಕು.

3 ನಮ್ಮಿಂದ ಯೆಹೋವನ ಸೇವೆನ ಜಾಸ್ತಿ ಮಾಡೋಕೆ ಆಗ್ತಿಲ್ಲ ಅಂತ ಅನಿಸಿದಾಗ ಏನು ಮಾಡೋದು? ಒಂದು ವೇಳೆ ನಮ್ಮ ಹತ್ರ ಸಾಮರ್ಥ್ಯಗಳಿದ್ದರೆ ಅದನ್ನ ಇನ್ನೂ ಚೆನ್ನಾಗಿ ಹೇಗೆ ಉಪಯೋಗಿಸಬಹುದು? ಬೇರೆಯವರ ಉದಾಹರಣೆಯಿಂದ ನಾವೇನು ಕಲಿಯಬಹುದು? ಅಂತ ಈ ಲೇಖನದಲ್ಲಿ ನೋಡೋಣ.

ನಮ್ಮಿಂದ ಜಾಸ್ತಿ ಸೇವೆ ಮಾಡೋಕೆ ಆಗ್ತಿಲ್ಲ ಅಂತ ಅನಿಸಿದಾಗ

ಜೀವನಪೂರ್ತಿ ನಮ್ಮಿಂದ ಆದಷ್ಟು ಚೆನ್ನಾಗಿ ಸೇವೆ ಮಾಡಿದ್ರೆ ಯೆಹೋವನಿಗೆ ಖುಷಿಯಾಗುತ್ತೆ (ಪ್ಯಾರ 4-6 ನೋಡಿ) b

4. ಯಾವಾಗ ನಾವು ಕುಗ್ಗಿಹೋಗಿಬಿಡ್ತೀವಿ? ಒಂದು ಉದಾಹರಣೆ ಕೊಡಿ.

4 ಕೆಲವು ಸಹೋದರ ಸಹೋದರಿಯರಿಗೆ ತುಂಬ ವಯಸ್ಸಾಗಿರೋದ್ರಿಂದ ಅಥವಾ ಅವರ ಆರೋಗ್ಯ ಸರಿಯಿಲ್ಲದೆ ಇರೋದ್ರಿಂದ ಯೆಹೋವನ ಸೇವೆಯನ್ನ ಜಾಸ್ತಿ ಮಾಡೋಕೆ ಆಗ್ತಿಲ್ಲ ಅಂತ ಕುಗ್ಗಿಹೋಗಿದ್ದಾರೆ. ಸಹೋದರಿ ಕ್ಯಾರಲ್‌ಗೂ ಹೀಗೆ ಆಯ್ತು. ಅವರು ಮುಂಚೆ ಅಗತ್ಯ ಇರೋ ಕಡೆಯೆಲ್ಲಾ ಹೋಗಿ ಸೇವೆ ಮಾಡ್ತಾ ಇದ್ರು. ಆಗ ಅವರಿಗೆ 35 ಬೈಬಲ್‌ ಸ್ಟಡಿಗಳು ಇದ್ವು. ದೀಕ್ಷಾಸ್ನಾನ ತಗೊಳ್ಳೋಕೆ ತುಂಬ ಜನರಿಗೆ ಸಹಾಯ ಮಾಡಿದ್ದಾರೆ. ಆದ್ರೆ ಸ್ವಲ್ಪ ದಿನಗಳಾದ ಮೇಲೆ ಅವರಿಗೆ ಹುಷಾರಿಲ್ಲದೆ ಮನೆಯಲ್ಲೇ ಇರಬೇಕಾಯ್ತು. ಇದ್ರಿಂದ ಅವರಿಗೆ ತುಂಬ ಬೇಜಾರಾಗಿ ಏನು ಹೇಳ್ತಾರೆ ಅಂದ್ರೆ, “ನನಗೆ ಹುಷಾರಿಲ್ಲದೆ ಇರೋದ್ರಿಂದ ಬೇರೆಯವರ ತರ ಜಾಸ್ತಿ ಸೇವೆ ಮಾಡೋಕೆ ಆಗ್ತಿಲ್ಲ, ಆಗೆಲ್ಲಾ ನನಗೆ ಅವರಷ್ಟು ನಂಬಿಕೆ ಇಲ್ಲವೇನೋ ಅಂತ ಕೆಲವೊಮ್ಮೆ ಅನಿಸಿಬಿಡುತ್ತೆ. ಒಂದುಕಡೆ ಯೆಹೋವನ ಸೇವೆ ಮಾಡಬೇಕು ಅಂತ ಆಸೆ ಇದೆ, ಇನ್ನೊಂದು ಕಡೆ ನನ್ನಿಂದ ಆಗ್ತಾ ಇಲ್ಲ, ನಾನು ಸೋತುಹೋಗಿಬಿಟ್ಟಿದ್ದೀನಿ ಅಂತ ಅನಿಸುತ್ತೆ.” ಇಷ್ಟೆಲ್ಲಾ ಕಷ್ಟ ಇದ್ರೂ ಯೆಹೋವನ ಸೇವೆನ ಚೆನ್ನಾಗಿ ಮಾಡಬೇಕು ಅಂತ ಆಸೆ ಇರೋ ಈ ಸಹೋದರಿನ ನೋಡಿದಾಗ ನಮಗೆಷ್ಟು ಹೆಮ್ಮೆಯಾಗುತ್ತೆ ಅಲ್ವಾ? ಅವರ ಮನಸ್ಸಲ್ಲಿ ಏನಿದೆ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು, ಆತನು ಅವರನ್ನ ಅರ್ಥ ಮಾಡಿಕೊಳ್ಳುತ್ತಾನೆ ಮತ್ತು ಖಂಡಿತ ಮೆಚ್ಚಿಕೊಳ್ತಾನೆ.

5. (ಎ) ಮುಂಚಿನ ತರ ನಿಮಗೆ ಸೇವೆ ಮಾಡೋಕೆ ಆಗದೇ ಇದ್ರೆ ಯಾಕೆ ಬೇಜಾರು ಮಾಡಿಕೊಳ್ಳಬಾರದು? (ಬಿ) ಚಿತ್ರದಲ್ಲಿರುವ ಸಹೋದರ ಯೆಹೋವನ ಸೇವೆನ ಹೇಗೆ ತಮ್ಮಿಂದ ಆದಷ್ಟು ಚೆನ್ನಾಗಿ ಮಾಡಿದ್ದಾರೆ?

5 ಕೆಲವೊಮ್ಮೆ ನಿಮ್ಮಿಂದ ಜಾಸ್ತಿ ಸೇವೆ ಮಾಡೋಕೆ ಆಗ್ತಿಲ್ಲ ಅಂತ ಅನಿಸಿದಾಗ ‘ನಾನೇನು ಮಾಡಿದ್ರೆ ಯೆಹೋವ ಇಷ್ಟಪಡ್ತಾನೆ?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ. ಈಗಿರೋ ಪರಿಸ್ಥಿತಿಯಲ್ಲಿ ನಿಮ್ಮಿಂದ ಏನೆಲ್ಲಾ ಮಾಡೋಕೆ ಆಗುತ್ತೋ ಅದನ್ನ ಮಾಡಿ ಅಂತ ಯೆಹೋವ ಕೇಳಿಕೊಳ್ತಾನೆ. 80 ವರ್ಷದ ಒಬ್ಬ ಸಹೋದರಿ 40 ವರ್ಷದ ಹಿಂದೆ ಮಾಡುತ್ತಿದ್ದ ಹಾಗೆ ಈಗ ಸೇವೆ ಮಾಡೋಕೆ ಆಗ್ತಿಲ್ಲ ಅಂತ ತುಂಬ ಬೇಜಾರು ಮಾಡಿಕೊಳ್ತಾರೆ. ಈಗ ತನ್ನಿಂದ ಆಗ್ತಿರೋದನ್ನೆಲ್ಲಾ ಮಾಡ್ತಿದ್ರೂ ಯೆಹೋವ ನನ್ನ ಸೇವೆನ ಇಷ್ಟಪಡ್ತಾನಾ, ಮೆಚ್ಚಿಕೊಳ್ತಾನಾ? ಅಂತ ಸಂಶಯ ಪಡ್ತಾರೆ. ನಿಜ ಏನಂದ್ರೆ ಆ ಸಹೋದರಿಗೆ 40 ವಯಸ್ಸಲ್ಲಿ ಎಷ್ಟು ಮಾಡೋಕೆ ಆಯ್ತೋ ಅಷ್ಟನ್ನ ಮಾಡಿದ್ರು. ಈಗಲೂ ತಮ್ಮಿಂದ ಎಷ್ಟಾಗುತ್ತೋ ಅಷ್ಟನ್ನ ಮಾಡ್ತಾ ಇದ್ದಾರೆ. ನಮಗೂ ಆ ಸಹೋದರಿ ತರ ಅನಿಸಿದಾಗ ಒಂದು ವಿಷಯನ ನೆನಪಲ್ಲಿಟ್ಟುಕೊಳ್ಳಬೇಕು. ನಮ್ಮಿಂದ ಎಷ್ಟು ಸೇವೆ ಮಾಡೋಕೆ ಆಗುತ್ತೆ ಅನ್ನೋದು ಯೆಹೋವನಿಗೆ ಚೆನ್ನಾಗಿ ಗೊತ್ತು. ಹಾಗಾಗಿ ನಮ್ಮಿಂದ ಆಗೋದನ್ನ ಮಾಡುವಾಗ ಯೆಹೋವ ನಮ್ಮನ್ನ ನೋಡಿ “ಶಭಾಷ್‌!” ಅಂತ ಹೇಳ್ತಾನೆ.—ಮತ್ತಾಯ 25:20-23 ಹೋಲಿಸಿ.

6. ಸಹೋದರಿ ಮರಿಯ ಅವರಿಂದ ನಮಗೇನು ಪಾಠ?

6 ನಮ್ಮಿಂದ ಏನು ಮಾಡೋಕೆ ಆಗುತ್ತೋ ಅದರ ಮೇಲೆ ಗಮನ ಕೊಟ್ರೆ ಖುಷಿಯಾಗಿ ಇರ್ತೀವಿ. ಮರಿಯ ಅನ್ನೋ ಸಹೋದರಿಯ ಉದಾಹರಣೆ ನೋಡಿ. ಅವರಿಗೆ ಕಾಯಿಲೆ ಬಂದಿದ್ರಿಂದ ಮುಂಚಿನ ತರ ಚೆನ್ನಾಗಿ ಸೇವೆ ಮಾಡೋಕೆ ಆಗಲ್ಲ. ಮೊದಮೊದಲು ಅವರು ತುಂಬ ಕುಗ್ಗಿಹೋದ್ರು, ತಾನು ಯಾವುದಕ್ಕೂ ಲಾಯಕ್ಕಿಲ್ಲ ಅಂತ ಅಂದುಕೊಂಡರು. ಆದ್ರೆ ಆಮೇಲೆ ಅವರು ತಮ್ಮ ಸಭೆಲಿರೋ ಒಬ್ಬ ಸಹೋದರಿನ ನೆನಪಿಸಿಕೊಂಡ್ರು. ಆ ಸಹೋದರಿಗೆ ಹಾಸಿಗೆ ಬಿಟ್ಟು ಮೇಲೆ ಏಳೋಕೆ ಆಗ್ತಿರಲಿಲ್ಲ. ಅವರಿಗೆ ಸಹಾಯ ಮಾಡೋಕೆ ಮರಿಯ ನಿರ್ಧಾರ ಮಾಡಿದ್ರು. “ನಾನು ಅವರ ಜೊತೆ ಟೆಲಿಫೋನ್‌ ಮತ್ತು ಪತ್ರಗಳಿಂದ ಜನರಿಗೆ ಸಿಹಿಸುದ್ದಿ ಸಾರೋ ಏರ್ಪಾಡುಗಳನ್ನ ಮಾಡಿಕೊಂಡೆ. ಪ್ರತಿದಿನ ನಾನು ಅವರ ಜೊತೆ ಸೇವೆ ಮಾಡಿ ಮನೆಗೆ ಬಂದಾಗೆಲ್ಲಾ ನಾನು ಅವರಿಗೆ ಸಹಾಯ ಮಾಡಿದೆ ಅನ್ನೋ ಖುಷಿ ಇರ್ತಿತ್ತು. ಮನಸ್ಸಿಗೆ ನೆಮ್ಮದಿ ಆಗ್ತಿತ್ತು” ಅಂತ ಮರಿಯ ಹೇಳ್ತಾರೆ. ಅದೇತರ ನಾವು ನಮ್ಮಿಂದ ಏನು ಮಾಡೋಕೆ ಆಗಲ್ವೋ ಅದರ ಮೇಲಲ್ಲ, ಏನು ಮಾಡೋಕೆ ಆಗುತ್ತೋ ಅದರ ಮೇಲೆ ಗಮನ ಕೊಟ್ರೆ ಖುಷಿಯಾಗಿ ಇರ್ತೀವಿ. ಆದ್ರೆ ನಮ್ಮಿಂದ ಇನ್ನೂ ಜಾಸ್ತಿ ಸೇವೆ ಮಾಡೋಕೆ ಆಗುತ್ತೆ ಅನ್ನೋದಾದ್ರೆ ನಾವೇನು ಮಾಡಬೇಕು?

ನಿಮಗೆ ಸಾಮರ್ಥ್ಯಗಳಿದ್ದಾಗ ಅದನ್ನು “ಬಳಸಿ”!

7. ಸಹೋದರ ಸಹೋದರಿಯರು ಏನು ಮಾಡಬೇಕು ಅಂತ ಅಪೊಸ್ತಲ ಪೇತ್ರ ಹೇಳಿದ?

7 ಅಪೊಸ್ತಲ ಪೇತ್ರ ತನ್ನ ಮೊದಲನೇ ಪತ್ರದಲ್ಲಿ ದೇವರು ಕೊಟ್ಟಿರೋ ಸಾಮರ್ಥ್ಯ ಅಥವಾ ಪ್ರತಿಭೆಯನ್ನು ಸಹೋದರರಿಗೆ ಪ್ರೋತ್ಸಾಹ ಮಾಡೋಕೆ ಉಪಯೋಗಿಸಬೇಕು ಅಂತ ಹೇಳಿದ. “ನಿಮ್ಮೆಲ್ಲರಿಗೂ ಒಂದೊಂದು ಸಾಮರ್ಥ್ಯ ಇದೆ. ಅದನ್ನ ದೇವರ ಅಪಾರ ಕೃಪೆ ಪಡೆದಿರೋ ಒಳ್ಳೇ ಸೇವಕರ ತರ ಇನ್ನೊಬ್ರ ಸೇವೆ ಮಾಡೋಕೆ ಬಳಸಿ” ಅಂತ ಬರೆದ. (1 ಪೇತ್ರ 4:10) ಬೇರೆಯವರಿಗೆ ಬೇಜಾರಾಗಬಹುದು ಅಥವಾ ಹೊಟ್ಟೆಕಿಚ್ಚು ಆಗಬಹುದು ಅಂತ ಅಂದುಕೊಂಡು ನಾವು ನಮ್ಮ ಸಾಮರ್ಥ್ಯನ ಯೆಹೋವನ ಸೇವೆಲಿ ಬಳಸದೆ ಸುಮ್ಮನಿರಬಾರದು. ಹಾಗೆ ಮಾಡಿಬಿಟ್ರೆ ನಮಗೆ ಎಲ್ಲಾ ಸಾಮರ್ಥ್ಯ ಇದ್ರೂ ಯೆಹೋವನ ಸೇವೆನ ಚೆನ್ನಾಗಿ ಮಾಡೋಕೆ ಆಗಲ್ಲ.

8. ಒಂದನೇ ಕೊರಿಂಥ 4:6, 7 ರಲ್ಲಿ ಹೇಳಿರೋ ತರ ನಾವು ಯಾಕೆ ನಮ್ಮ ಸಾಮರ್ಥ್ಯದ ಬಗ್ಗೆ ಕೊಚ್ಚಿಕೊಳ್ಳಬಾರದು?

8 ನಿಮ್ಮಲ್ಲಿರೋ ಸಾಮರ್ಥ್ಯನ ಯೆಹೋವನ ಸೇವೆಗೆ ಬಳಸಬೇಕೇ ಹೊರತು ಅದರ ಬಗ್ಗೆ ಕೊಚ್ಚಿಕೊಳ್ಳಬಾರದು. (1 ಕೊರಿಂಥ 4:6, 7 ಓದಿ.) ಉದಾಹರಣೆಗೆ, ಸುಲಭವಾಗಿ ಬೈಬಲ್‌ ಅಧ್ಯಯನವನ್ನ ಶುರುಮಾಡೋ ಸಾಮರ್ಥ್ಯ ನಿಮಗಿದ್ರೆ ಅದನ್ನ ಬಳಸಿ. ಆದ್ರೆ ಅದರ ಬಗ್ಗೆ ಹೆಮ್ಮೆಪಟ್ಟುಕೊಂಡು ಬೇರೆಯವರ ಹತ್ರ ಕೊಚ್ಚಿಕೊಳ್ಳಬೇಡಿ. ಒಂದಿನ ನಿಮ್ಮ ಕ್ಷೇತ್ರ ಸೇವಾ ಗುಂಪಲ್ಲಿರೋ ಎಲ್ಲಾ ಸಹೋದರ ಸಹೋದರಿಯರು ಮಾತಾಡ್ತಾ ಇದ್ದೀರ ಅಂತ ನೆನಸಿ. ಆಗ ಒಬ್ಬ ಸಹೋದರಿ ಆಸಕ್ತಿ ಇರೋ ವ್ಯಕ್ತಿಗೆ ಪತ್ರಿಕೆ ಕೊಟ್ಟಿದ್ದರ ಬಗ್ಗೆ ಖುಷಿಖುಷಿಯಾಗಿ ಹೇಳ್ತಿದ್ದಾರೆ. ಆದ್ರೆ ನೀವು ಒಂದು ಬೈಬಲ್‌ ಅಧ್ಯಯನವನ್ನ ಶುರುಮಾಡಿದ್ದೀರ. ಈಗ ನಿಮ್ಮ ಅನುಭವವನ್ನ ನೀವು ಎಲ್ಲರ ಮುಂದೆ ಹೇಳಿಕೊಳ್ತೀರಾ? ಹಾಗೆ ಮಾಡಿದ್ರೆ ಆ ಸಹೋದರಿಗೆ ತಾನು ಮಾಡಿದ್ದು ಏನೇನೂ ಅಲ್ಲ ಅಂತ ಅನಿಸಿಬಿಡುತ್ತೆ. ಅವರ ಖುಷಿಗೆ ತಣ್ಣೀರು ಎರಚಿದ ಹಾಗೆ ಇರುತ್ತೆ. ಹಾಗಾಗಿ ನಿಮ್ಮ ಅನುಭವವನ್ನ ಬೇರೆ ಯಾವತ್ತಾದ್ರೂ ಹೇಳೋಣ ಅಂತ ನೀವು ಅಂದುಕೊಳ್ಳಬಹುದು. ಹೀಗೆ ಮಾಡಿದ್ರೆ ನೀವು ಆ ಸಹೋದರಿಗೆ ಪ್ರೀತಿ ತೋರಿಸಿದ ಹಾಗಾಗುತ್ತೆ. ಹಾಗಂತ ನಿಮ್ಮಲ್ಲಿರೋ ಸಾಮರ್ಥ್ಯನ ಬಳಸದೆ ಇರಬೇಡಿ. ಬೈಬಲ್‌ ಅಧ್ಯಯನ ಶುರುಮಾಡೋ ಸಾಮರ್ಥ್ಯ ನಿಮಗಿದೆ ಅಂದಮೇಲೆ ಅದನ್ನ ಮಾಡ್ತಾ ಇರಿ.

9. ನಮಗಿರೋ ಸಾಮರ್ಥ್ಯನ ನಾವು ಯಾವುದಕ್ಕೆ ಉಪಯೋಗಿಸಬೇಕು?

9 ನಮ್ಮಲ್ಲಿ ಏನೇ ಸಾಮರ್ಥ್ಯ ಇದ್ರೂ ಅದು ಯೆಹೋವ ನಮಗೆ ಕೊಟ್ಟಿರೋ ಗಿಫ್ಟ್‌ ಅನ್ನೋದನ್ನ ನಾವು ಯಾವತ್ತೂ ಮರೆಯಬಾರದು. ನಾವು ಈ ಸಾಮರ್ಥ್ಯಗಳನ್ನ ಸಭೆಯಲ್ಲಿರೋ ಸಹೋದರ ಸಹೋದರಿಯರಿಗಾಗಿ ಬಳಸಿಕೊಳ್ಳಬೇಕೇ ವಿನಃ ಜಂಬ ಕೊಚ್ಚಿಕೊಳ್ಳೋಕೆ ಅಲ್ಲ. (ಫಿಲಿ. 2:3) ನಾವು ನಮ್ಮ ಶಕ್ತಿ-ಸಾಮರ್ಥ್ಯವನ್ನೆಲ್ಲ, ನಾನೇ ಮೇಲು ಅಥವಾ ಎಲ್ಲರಿಗಿಂತ ನಾನೇ ಸ್ಪೆಷಲ್‌ ಅಂತ ತೋರಿಸಿಕೊಳ್ಳೋಕೆ ಅಲ್ಲ, ಯೆಹೋವನ ಸೇವೆ ಮಾಡೋಕೆ ಬಳಸಬೇಕು. ಆಗ ನಾವು ಯೆಹೋವನಿಗೆ ಗೌರವ ತರುತ್ತೀವಿ, ಇದರಿಂದ ನಮಗೆ ಖುಷಿ ಸಿಗುತ್ತೆ.

10. ನಾವ್ಯಾಕೆ ನಮ್ಮನ್ನ ಇನ್ನೊಬ್ಬರ ಜೊತೆ ಹೋಲಿಸಿಕೊಳ್ಳಬಾರದು?

10 ನಮ್ಮೆಲ್ಲರಿಗೂ ಒಂದೊಂದು ಸಾಮರ್ಥ್ಯ ಇದೆ. ಹಾಗಾಗಿ ನಮ್ಮ ಸಾಮರ್ಥ್ಯನ ಬೇರೆಯವರ ಜೊತೆ ಹೋಲಿಸಿಕೊಳ್ಳಬಾರದು. ಉದಾಹರಣೆಗೆ, ಒಬ್ಬ ಸಹೋದರನಿಗೆ ತುಂಬ ಚೆನ್ನಾಗಿ ಭಾಷಣ ಕೊಡೋಕೆ ಬರುತ್ತೆ ಅಂದುಕೊಳ್ಳಿ. ಅದು ಅವನಲ್ಲಿರೋ ಪ್ರತಿಭೆ. ಹಾಗಂತ ಅವನು ಚೆನ್ನಾಗಿ ಭಾಷಣ ಕೊಡೋಕೆ ಬರದೇ ಇರೋ ಸಹೋದರನನ್ನ ಕೀಳಾಗಿ ನೋಡಬಾರದು. ಯಾಕಂದ್ರೆ ಆ ಸಹೋದರನಿಗೆ ಭಾಷಣ ಕೊಡೋದ್ರಲ್ಲಿ ಅಷ್ಟು ಸಾಮರ್ಥ್ಯ ಇಲ್ಲದೇ ಇರಬಹುದು. ಆದ್ರೆ ಆ ಸಹೋದರ ಅತಿಥಿ ಸತ್ಕಾರ ಮಾಡೋದ್ರಲ್ಲಿ, ತಮ್ಮ ಮಕ್ಕಳನ್ನ ಚೆನ್ನಾಗಿ ಬೆಳೆಸಿ ಅವರಿಗೆ ತರಬೇತಿ ಕೊಡೋದ್ರಲ್ಲಿ ಅಥವಾ ಸೇವೆ ಮಾಡೋದ್ರಲ್ಲಿ ಎತ್ತಿದ ಕೈಯಾಗಿರಬಹುದು. ನಮ್ಮ ಸಹೋದರ ಸಹೋದರಿಯರಿಗೆ ಎಷ್ಟೋ ಒಳ್ಳೇ ಸಾಮರ್ಥ್ಯಗಳಿವೆ. ಆದ್ರೆ ಅವರು ಯಾರೂ ತಮ್ಮನ್ನ ಬೇರೆಯವರ ಜೊತೆ ಹೋಲಿಸಿಕೊಳ್ಳಲ್ಲ. ತಮ್ಮ ಸಾಮರ್ಥ್ಯನ ಯೆಹೋವನ ಸೇವೆ ಮಾಡೋಕೆ ಬಳಸಿಕೊಳ್ಳುತ್ತಿದ್ದಾರೆ. ಇಂಥ ಸಹೋದರ ಸಹೋದರಿಯರನ್ನ ಕೊಟ್ಟಿದ್ದಕ್ಕೆ ನಾವು ಯೆಹೋವನಿಗೆ ಎಷ್ಟು ಥ್ಯಾಂಕ್ಸ್‌ ಹೇಳಬೇಕಲ್ವಾ?

ಬೇರೆಯವರಿಂದ ಕಲಿಯಿರಿ

11. ನಾವ್ಯಾಕೆ ಯೇಸುವಿನಿಂದ ಕಲಿಯಬೇಕು?

11 ನಮ್ಮನ್ನ ನಾವು ಬೇರೆಯವರ ಜೊತೆ ಹೋಲಿಸಿಕೊಳ್ಳಲ್ಲ ನಿಜ. ಆದ್ರೆ ಬೇರೆಯವರ ಒಳ್ಳೇ ಮಾದರಿಯಿಂದ ತುಂಬ ವಿಷಯಗಳನ್ನ ಕಲಿಬಹುದು. ಯೇಸು ಒಬ್ಬ ಪರಿಪೂರ್ಣ ವ್ಯಕ್ತಿಯಾಗಿದ್ದ. ಅವನಲ್ಲಿ ಒಳ್ಳೇ ಗುಣಗಳಿದ್ದವು. ನಾವು ಅಪರಿಪೂರ್ಣರಾಗಿದ್ರೂ ಆತನಿಂದ ಒಳ್ಳೇ ವಿಷಯಗಳನ್ನ ಕಲಿಬಹುದು. (1 ಪೇತ್ರ 2:21) ಯೇಸು ತರ ಇರೋಕೆ ನಮ್ಮಿಂದಾದಷ್ಟು ಪ್ರಯತ್ನ ಮಾಡಿದ್ರೆ ನಾವು ಯೆಹೋವನ ಮನಸ್ಸನ್ನ ಮೆಚ್ಚಿಸ್ತೀವಿ ಮತ್ತು ಚೆನ್ನಾಗಿ ಸೇವೆ ಮಾಡ್ತೀವಿ.

12-13. ರಾಜ ದಾವೀದನಿಂದ ನಾವೇನು ಕಲಿತೀವಿ?

12 ಬೈಬಲಲ್ಲಿರೋ ವ್ಯಕ್ತಿಗಳು ಅಪರಿಪೂರ್ಣರಾಗಿದ್ರೂ ಅವರಿಂದ ನಾವು ತುಂಬ ವಿಷಯಗಳನ್ನ ಕಲಿಬಹುದು. (ಇಬ್ರಿ. 6:12) ದಾವೀದನ ಉದಾಹರಣೆ ನೋಡಿ. “ದಾವೀದ ಅಂದ್ರೆ ನನ್ನ ಮನಸ್ಸಿಗೆ ತುಂಬ ಇಷ್ಟ” ಅಂತ ಯೆಹೋವ ಹೇಳಿದನು. (ಅ. ಕಾ. 13:22) ಅವನು ದೊಡ್ಡದೊಡ್ಡ ತಪ್ಪುಗಳನ್ನ ಮಾಡಿದ. ಆದ್ರೂ ನಾವು ಅವನಿಂದ ಒಳ್ಳೇ ವಿಷ್ಯಗಳನ್ನ ಕಲಿಬಹುದು. ಯಾಕಂದ್ರೆ ಅವನನ್ನ ತಿದ್ದಿದಾಗ ಅವನು ತನ್ನ ತಪ್ಪನ್ನ ಸಮರ್ಥಿಸಿಕೊಳ್ಳಲಿಲ್ಲ, ಒಪ್ಪಿಕೊಂಡು ಮನಸಾರೆ ಪಶ್ಚಾತ್ತಾಪಪಟ್ಟ. ಹಾಗಾಗಿ ಯೆಹೋವ ಅವನನ್ನ ಕ್ಷಮಿಸಿದನು.—ಕೀರ್ತ. 51:3, 4, 10-12.

13 ದಾವೀದನ ಬಗ್ಗೆ ಓದಿದಾಗ ನಿಮ್ಮನ್ನೇ ಕೆಲವು ಪ್ರಶ್ನೆಗಳನ್ನ ಕೇಳಿಕೊಳ್ಳಿ: “ಯಾರಾದ್ರೂ ನನ್ನನ್ನ ತಿದ್ದಿದಾಗ ನಾನೇನು ಮಾಡ್ತೀನಿ? ನನ್ನ ತಪ್ಪನ್ನ ಸಮರ್ಥಿಸಿಕೊಳ್ತೀನಾ? ಅದನ್ನ ಬೇರೆಯವರ ಮೇಲೆ ಹಾಕ್ತೀನಾ? ಅಥವಾ ತಪ್ಪನ್ನ ಒಪ್ಪಿಕೊಂಡು ಅದನ್ನ ಇನ್ಮುಂದೆ ಮಾಡದೇ ಇರೋಕೆ ಪ್ರಯತ್ನ ಮಾಡ್ತೀನಾ?” ಬೈಬಲಲ್ಲಿರೋ ಬೇರೆ ವ್ಯಕ್ತಿಗಳ ಬಗ್ಗೆ ಓದುವಾಗಲೂ ಇದೇ ತರ ಮಾಡಿ. ನೀವಿರೋ ಪರಿಸ್ಥಿತಿಯಲ್ಲೇ ಅವರೂ ಇದ್ದಿರಬಹುದು. ಅಂಥ ಸಂದರ್ಭಗಳಲ್ಲಿ ಅವರು ಯಾವ ಗುಣಗಳನ್ನ ತೋರಿಸಿದ್ರು ಅಂತ ಯೋಚಿಸಿ. “ಅವರ ತರ ಇರೋಕೆ ನಾನೇನು ಮಾಡಬೇಕು” ಅಂತ ನಿಮ್ಮನ್ನೇ ಕೇಳಿಕೊಳ್ಳಿ.

14. ನಮ್ಮ ಸಹೋದರ ಸಹೋದರಿಯರಿಂದ ಹೇಗೆ ಕಲಿಬಹುದು?

14 ನಾವು ಬೇರೆಯವರಿಂದ ತುಂಬ ವಿಷಯಗಳನ್ನ ಕಲಿಬಹುದು. ಅವರು ದೊಡ್ಡವರಾಗಿರಲಿ ಅಥವಾ ಚಿಕ್ಕವರಾಗಿರಲಿ ಎಲ್ಲರಿಂದಾನೂ ಒಳ್ಳೇ ವಿಷಯಗಳನ್ನ ಕಲಿಬಹುದು. ಕೆಲವರು ಸಮಾನಸ್ಥರ ಒತ್ತಡ, ಮನೆಯವರಿಂದ ವಿರೋಧ ಅಥವಾ ಆರೋಗ್ಯ ಸಮಸ್ಯೆಯಿಂದ ಕಷ್ಟಪಡ್ತಾ ಇದ್ದಾರೆ. ಇಷ್ಟೆಲ್ಲಾ ಕಷ್ಟಗಳಿದ್ರೂ ಸಹಿಸಿಕೊಂಡು ನಿಯತ್ತಿಂದ ಅವರು ಯೆಹೋವನ ಸೇವೆ ಮಾಡ್ತಾ ಇದ್ದಾರೆ. ಅವರಿಂದ ನೀವು ಒಳ್ಳೇ ಗುಣಗಳನ್ನ ಮತ್ತು ಸಹಿಸಿಕೊಳ್ಳೋದನ್ನ ಕಲಿಬಹುದು. ಇಂಥ ಸಹೋದರ ಸಹೋದರಿಯರು ನಮ್ಮ ಸಭೆಯಲ್ಲಿರೋದು ಎಷ್ಟು ದೊಡ್ಡ ಸೌಭಾಗ್ಯ ಅಲ್ವಾ!—ಇಬ್ರಿ. 13:7; ಯಾಕೋ. 1:2, 3.

ನೀವು ಮಾಡ್ತಿರೋ ಸೇವೆಯಲ್ಲಿ ಖುಷಿಪಡಿ

15. ನಾವು ಯೆಹೋವನ ಸೇವೆನ ಖುಷಿಯಾಗಿ ಮಾಡ್ತಾ ಇರೋಕೆ ಅಪೊಸ್ತಲ ಪೌಲ ಯಾವ ಸಲಹೆ ಕೊಟ್ಟ?

15 ಸಭೆಯಲ್ಲಿ ಎಲ್ಲರೂ ಶಾಂತಿ ಮತ್ತು ಒಗ್ಗಟ್ಟಿಂದ ಇರೋಕೆ ಪ್ರತಿಯೊಬ್ಬರೂ ಪ್ರಯತ್ನ ಮಾಡಬೇಕು. ಒಂದನೇ ಶತಮಾನದ ಕ್ರೈಸ್ತರು ಇದನ್ನೇ ಮಾಡಿದ್ರು. ಅವರಿಗೆ ಬೇರೆ-ಬೇರೆ ಸಾಮರ್ಥ್ಯ ಮತ್ತು ಜವಾಬ್ದಾರಿಗಳಿತ್ತು. (1 ಕೊರಿಂ. 12:4, 7-11) ಈ ಸಾಮರ್ಥ್ಯಗಳನ್ನ ಪೈಪೋಟಿ ಮಾಡೋಕಲ್ಲ, ಬದಲಿಗೆ ‘ಕ್ರಿಸ್ತನ ದೇಹವನ್ನ ಕಟ್ಟೋಕೆ’ ಬಳಸಬೇಕು ಅಂತ ಪೌಲ ಅವರಿಗೆ ಹೇಳಿದ. “ಪ್ರತಿಯೊಂದು ಅಂಗ ಅದ್ರ ಕೆಲಸವನ್ನ ಸರಿಯಾಗಿ ಮಾಡಿದ್ರೆ ಇಡೀ ದೇಹ ಚೆನ್ನಾಗಿ ಬೆಳೆದು ಪ್ರೀತಿಯಲ್ಲಿ ಬಲವಾಗುತ್ತೆ” ಅಂತ ಬರೆದ. (ಎಫೆ. 4:1-3, 11, 12, 16) ಪೌಲನ ಮಾತನ್ನ ಕೇಳಿದ್ರಿಂದ ಎಫೆಸದಲ್ಲಿದ್ದ ಸಭೆಯವರು ಪ್ರೀತಿ ಮತ್ತು ಒಗ್ಗಟ್ಟಿಂದ ಇದ್ರು ಮತ್ತು ನಾವೂ ಅದೇ ತರ ಇದ್ದೀವಿ.

16. ನಾವು ಏನನ್ನ ಮರೆಯಬಾರದು ಅಂತ ಈ ಲೇಖನದಲ್ಲಿ ಕಲಿತ್ವಿ? (ಇಬ್ರಿಯ 6:10)

16 ನಿಮ್ಮನ್ನ ಯಾವತ್ತೂ ಬೇರೆಯವರ ಜೊತೆ ಹೋಲಿಸಿಕೊಳ್ಳಬೇಡಿ, ಬದಲಿಗೆ ಯೇಸು ತರ ನಡಕೊಳ್ಳೋಕೆ ಪ್ರಯತ್ನ ಮಾಡಿ. ಬೈಬಲ್‌ ಕಾಲದ ವ್ಯಕ್ತಿಗಳಿಂದ ಮತ್ತು ಸಹೋದರ ಸಹೋದರಿಯರಿಂದ ಕಲಿಯಿರಿ. ನಿಮ್ಮ ಕೈಲಾದಷ್ಟು ಯೆಹೋವನಿಗೆ ಸೇವೆ ಮಾಡುವಾಗ ಆತನು ನಿಮ್ಮ “ಕೆಲಸವನ್ನ . . . ಮರಿಯಲ್ಲ. ಯಾಕಂದ್ರೆ ಆತನು ಅನ್ಯಾಯ ಮಾಡಲ್ಲ.” (ಇಬ್ರಿಯ 6:10 ಓದಿ.) ನಿಮ್ಮ ಪೂರ್ಣ ಪ್ರಾಣದ ಸೇವೆಯನ್ನ ಯೆಹೋವ ಮೆಚ್ಚಿಕೊಳ್ತಾನೆ ಅನ್ನೋದನ್ನ ಯಾವತ್ತೂ ಮರೆಯಬೇಡಿ.

ಗೀತೆ 45 ಮುನ್ನಡೆ!

a ಬೇರೆಯವರಿಂದ ನಾವು ತುಂಬ ವಿಷ್ಯಗಳನ್ನ ಕಲಿಬಹುದು. ಆದ್ರೆ ನಾವು ನಮ್ಮನ್ನ ಬೇರೆಯವರ ಜೊತೆಗೆ ಹೋಲಿಸಿಕೊಂಡಾಗ ಅದರಿಂದ ಅಪಾಯನೂ ಇದೆ. ಕೆಲವೊಮ್ಮೆ ನಿರುತ್ತೇಜನ ಆಗುತ್ತೆ ಅಥವಾ ನಮಗೆ ಅಹಂಕಾರ ಬಂದುಬಿಡುತ್ತೆ. ಇದರಿಂದ ಯೆಹೋವನ ಸೇವೆಯನ್ನ ಖುಷಿಖುಷಿಯಾಗಿ ಮಾಡೋಕಾಗಲ್ಲ. ಹಾಗಾಗಿ ನಮ್ಮನ್ನ ಬೇರೆಯವರ ಜೊತೆ ಹೋಲಿಸಿಕೊಳ್ಳದೆ ಯೆಹೋವನ ಸೇವೆನ ಖುಷಿಖುಷಿಯಾಗಿ ಮಾಡೋಕೆ ಏನು ಮಾಡಬೇಕು ಅಂತ ಈ ಲೇಖನದಲ್ಲಿ ನೋಡೋಣ.

b ಚಿತ್ರ ವಿವರಣೆ ಪುಟ: ಒಬ್ಬ ಸಹೋದರ ಯುವಕನಾಗಿದ್ದಾಗ ಬೆತೆಲ್‌ನಲ್ಲಿ ಸೇವೆ ಮಾಡಿದ್ರು. ಮದುವೆ ಆದಮೇಲೆ ಹೆಂಡತಿ ಜೊತೆ ಪಯನೀಯರಿಂಗ್‌ ಮಾಡಿದ್ರು. ಅವರ ಮಕ್ಕಳಿಗೂ ಸೇವೆ ಮಾಡೋಕೆ ತರಬೇತಿ ಕೊಟ್ಟರು. ಈಗ ಅವರಿಗೆ ವಯಸ್ಸಾಗಿದೆ. ಆದ್ರೂ ಪತ್ರ ಬರೆದು ಸಿಹಿಸುದ್ದಿ ಸಾರುತ್ತಾ ತಮ್ಮಿಂದ ಆದಷ್ಟು ಸೇವೆ ಮಾಡ್ತಾ ಇದ್ದಾರೆ.