ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 24

ಕ್ಷಮಿಸೋದ್ರಲ್ಲಿ ಯೆಹೋವನಿಗಿರೋ ಅಪೂರ್ವ ಸಾಮರ್ಥ್ಯ

ಕ್ಷಮಿಸೋದ್ರಲ್ಲಿ ಯೆಹೋವನಿಗಿರೋ ಅಪೂರ್ವ ಸಾಮರ್ಥ್ಯ

“ಯೆಹೋವನೇ, ನೀನು ಒಳ್ಳೆಯವನು, ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ ಇರ್ತಿಯ, ನಿನಗೆ ಮೊರೆಯಿಡೋ ಪ್ರತಿಯೊಬ್ರಿಗೂ ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸ್ತೀಯ.”—ಕೀರ್ತ. 86:5.

ಗೀತೆ 6 ದೇವರ ಸೇವಕನ ಪ್ರಾರ್ಥನೆ

ಕಿರುನೋಟ *

1. ಪ್ರಸಂಗಿ 7:20ರಲ್ಲಿ ರಾಜ ಸೊಲೊಮೋನ ಏನು ಹೇಳಿದ?

 “ಯಾವಾಗ್ಲೂ ಒಳ್ಳೇದನ್ನೇ ಮಾಡ್ತಾ ಪಾಪನೇ ಮಾಡದಿರೋ ನೀತಿವಂತ ಭೂಮಿ ಮೇಲೆ ಯಾರೂ ಇಲ್ಲ” ಅಂತ ರಾಜ ಸೊಲೊಮೋನ ಬರೆದ. (ಪ್ರಸಂ. 7:20) ಅವನು ಬರೆದಿದ್ದು ನೂರಕ್ಕೆ ನೂರು ಸತ್ಯ! ನಾವೆಲ್ರೂ ಪಾಪಿಗಳೇ. (1 ಯೋಹಾ. 1:8) ಹಾಗಾಗಿ ದೇವರಿಂದ ಮತ್ತು ಬೇರೆಯವ್ರಿಂದ ನಮಗೆ ಕ್ಷಮೆ ಬೇಕೇ ಬೇಕು.

2. ನಿಮ್ಮ ಸ್ನೇಹಿತರು ನಿಮ್ಮನ್ನ ಕ್ಷಮಿಸಿದಾಗ ನಿಮಗೆ ಹೇಗನಿಸುತ್ತೆ?

2 ನೀವು ಯಾವತ್ತಾದ್ರೂ ನಿಮ್ಮ ಫ್ರೆಂಡ್‌ಗೆ ಬೇಜಾರಾಗೋ ತರ ನಡಕೊಂಡಿದ್ದೀರಾ? ಆಗ ಅವರು ನಿಮ್ಮ ಮೇಲೆ ಕೋಪ ಮಾಡಿಕೊಂಡು ನಿಮ್ಮ ಜೊತೆ ಮಾತು ಬಿಟ್ಟಿರಬಹುದು. ಆದ್ರೆ ನೀವು ಅವರ ಹತ್ರ ಹೋಗಿ ‘ನಾನು ಮಾಡಿದ್ದು ತಪ್ಪಾಯ್ತು, ಕ್ಷಮಿಸು’ ಅಂತ ಕೇಳಿದಾಗ ಅವರು ನಿಮ್ಮನ್ನ ಕ್ಷಮಿಸಿರುತ್ತಾರೆ. ಆಗ ನಿಮಗೆ ಹೇಗನಿಸ್ತು? ಎದೆ ಮೇಲಿದ್ದ ಭಾರ ಇಳಿದ ಹಾಗೆ ಆಗಿರಬೇಕಲ್ವಾ? ನಿಮಗೆ ತುಂಬ ಖುಷಿನೂ ಆಗಿರುತ್ತೆ!

3. ಈ ಲೇಖನದಲ್ಲಿ ನಾವೇನು ಕಲಿತೀವಿ?

3 ಯೆಹೋವ ದೇವರು ನಮ್ಮ ಬೆಸ್ಟ್‌ಫ್ರೆಂಡ್‌ ಆಗಿರಬೇಕು ಅಂತ ನಾವು ಆಸೆಪಡ್ತೀವಿ. ಆದ್ರೆ ಕೆಲವೊಮ್ಮೆ ನಮ್ಮ ಮಾತಲ್ಲೋ, ನಡತೆಯಲ್ಲೋ ಆತನ ಮನಸ್ಸನ್ನ ನೋಯಿಸಿಬಿಡ್ತೀವಿ. ಆದ್ರೂ ಯೆಹೋವ ನಮ್ಮನ್ನ ಕ್ಷಮಿಸೋಕೆ ಇಷ್ಟಪಡ್ತಾನೆ ಅಂತ ಹೇಗೆ ಹೇಳಬಹುದು? ಕ್ಷಮಿಸೋದ್ರಲ್ಲಿ ಯೆಹೋವನಿಗೂ ನಮಗೂ ಯಾವ ವ್ಯತ್ಯಾಸ ಇದೆ? ಯಾರಿಗೆ ಆತನ ಕ್ಷಮೆ ಸಿಗುತ್ತೆ? ಅನ್ನೋದನ್ನ ಈ ಲೇಖನದಲ್ಲಿ ನೊಡೋಣ.

ಯೆಹೋವ ಕ್ಷಮಿಸೋಕೆ ಯಾವಾಗ್ಲೂ ರೆಡಿಯಾಗಿರ್ತಾನೆ

4. ಯೆಹೋವ ಕ್ಷಮಿಸೋಕೆ ಯಾವಾಗ್ಲೂ ರೆಡಿಯಾಗಿರ್ತಾನೆ ಅಂತ ನಾವ್ಯಾಕೆ ಹೇಳಬಹುದು?

4 ಯೆಹೋವ ಕ್ಷಮಿಸೋಕೆ ಸಿದ್ಧನಾಗಿರೋ ದೇವರು ಅಂತ ಬೈಬಲ್‌ ಹೇಳುತ್ತೆ. ಒಂದು ಸಲ ಸಿನಾಯಿ ಬೆಟ್ಟದ ಮೇಲೆ ಮೋಶೆ ಹತ್ರ ಯೆಹೋವ ದೇವರು ತನ್ನ ದೂತನನ್ನು ಕಳಿಸಿದನು. ಆಗ ಆ ದೇವದೂತ, “ಯೆಹೋವ, ಯೆಹೋವ, ಕರುಣೆ ಮತ್ತು ಕನಿಕರ ಇರೋ ದೇವರು, ತಟ್ಟಂತ ಕೋಪ ಮಾಡ್ಕೊಳ್ಳಲ್ಲ, ಧಾರಾಳವಾಗಿ ಶಾಶ್ವತ ಪ್ರೀತಿ ತೋರಿಸ್ತಾನೆ, ಯಾವಾಗ್ಲೂ ಸತ್ಯವಂತ ಆಗಿರ್ತಾನೆ. ಶಾಶ್ವತ ಪ್ರೀತಿನ ಸಾವಿರಾರು ಪೀಳಿಗೆ ಜನ್ರಿಗೆ ತೋರಿಸ್ತಾನೆ, ತಪ್ಪು ಅಪರಾಧ ಪಾಪಗಳನ್ನ ಕ್ಷಮಿಸ್ತಾನೆ” ಅಂತ ಹೇಳಿದ. (ವಿಮೋ. 34:6, 7) ಯೆಹೋವ ಕರುಣಾಮಯಿ, ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುವವರನ್ನು ಖಂಡಿತ ಕ್ಷಮಿಸ್ತಾನೆ ಅಂತ ಇದ್ರಿಂದ ಗೊತ್ತಾಗುತ್ತೆ.—ನೆಹೆ. 9:17; ಕೀರ್ತ. 86:15.

ನಮ್ಮ ಜೀವನದಲ್ಲಿ ನಡೆದಿರೋ ಘಟನೆಗಳು ನಮ್ಮನ್ನ ಯಾವ ರೀತಿಯ ವ್ಯಕ್ತಿಗಳಾಗಿ ಮಾಡಿಬಿಟ್ಟಿದೆ ಅಂತ ಯೆಹೋವನಿಗೆ ಗೊತ್ತು (ಪ್ಯಾರ 5 ನೋಡಿ)

5. ಕೀರ್ತನೆ 103:13, 14 ಹೇಳೋ ತರ ಯೆಹೋವನಿಗೆ ನಮ್ಮ ಬಗ್ಗೆ ಎಲ್ಲಾ ಗೊತ್ತಿರೋದ್ರಿಂದ ನಮ್ಮ ಜೊತೆ ಹೇಗೆ ನಡಕೊಳ್ತಾನೆ?

5 ಯೆಹೋವ ನಮ್ಮನ್ನ ಸೃಷ್ಟಿ ಮಾಡಿರೋದ್ರಿಂದ ನಾವು ಯಾರು, ಎಂಥವರು ಅಂತ ಆತನಿಗೆ ಚೆನ್ನಾಗಿ ಗೊತ್ತು. ಈ ಭೂಮಿಯಲ್ಲಿರೋ ಪ್ರತಿಯೊಬ್ಬರ ಬಗ್ಗೆನೂ ಆತನಿಗೆ ಎಲ್ಲಾ ವಿಷಯ ಗೊತ್ತು. (ಕೀರ್ತ. 139:15-17) ಆದಾಮ ಹವ್ವರಿಂದ ಪಾಪವನ್ನ ನಾವು ಆಸ್ತಿಯಾಗಿ ಪಡೆದುಕೊಂಡಿರೋದೂ ಆತನಿಗೆ ಗೊತ್ತು. ಅಷ್ಟೇ ಅಲ್ಲ, ನಮ್ಮ ಜೀವನದಲ್ಲಿ ಏನೆಲ್ಲಾ ನಡೆದಿದೆ, ಆ ಘಟನೆಗಳಿಂದ ನಾವು ಯಾವ ರೀತಿಯ ವ್ಯಕ್ತಿಗಳಾಗಿದ್ದೀವಿ ಅಂತನೂ ಆತನು ತಿಳುಕೊಂಡಿದ್ದಾನೆ. ನಮ್ಮ ಬಗ್ಗೆ ಯೆಹೋವನಿಗೆ ಇಷ್ಟೆಲ್ಲಾ ಗೊತ್ತಿರೋದ್ರಿಂದ ಆತನು ನಮ್ಮ ಜೊತೆ ಕರುಣೆಯಿಂದ ನಡಕೊಳ್ತಾನೆ, ಪ್ರೀತಿ ತೋರಿಸ್ತಾನೆ.—ಕೀರ್ತ. 78:39; ಕೀರ್ತನೆ 103:13, 14 ಓದಿ.

6. ನಮ್ಮನ್ನ ಕ್ಷಮಿಸಬೇಕು ಅನ್ನೋ ಆಸೆ ತನಗಿದೆ ಅಂತ ಯೆಹೋವ ಹೇಗೆ ತೋರಿಸಿಕೊಟ್ಟಿದ್ದಾನೆ?

6 ಯೆಹೋವ ನಮ್ಮನ್ನ ಕ್ಷಮಿಸೋಕೆ ಸಿದ್ಧನಾಗಿದ್ದಾನೆ ಅಂತ ಈಗಾಗಲೇ ತೋರಿಸಿಕೊಟ್ಟಿದ್ದಾನೆ. ಆದಾಮ ತಪ್ಪು ಮಾಡಿದ್ರಿಂದ ಪಾಪ ಮತ್ತು ಮರಣ ಅನ್ನೋ ಶಾಪ ನಮಗೆ ಬಂತು ಅನ್ನೋದು ಆತನಿಗೆ ಚೆನ್ನಾಗಿ ಗೊತ್ತು. (ರೋಮ. 5:12) ನಾವು ನಮ್ಮನ್ನಾಗಲಿ, ಬೇರೆಯವರನ್ನಾಗಲಿ ಈ ಶಾಪದಿಂದ ಬಿಡಿಸೋಕಾಗಲ್ಲ. (ಕೀರ್ತ. 49:7-9) ಅದಕ್ಕೆ ಯೆಹೋವ ಏನು ಮಾಡಿದನು? ಯೋಹಾನ 3:16ರಲ್ಲಿ ಹೇಳೋ ಹಾಗೆ ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಕೊಟ್ಟನು. (ಮತ್ತಾ. 20:28; ರೋಮ. 5:19) ಯೇಸು, ತನ್ನ ಮೇಲೆ ನಂಬಿಕೆ ಇಡೋರನ್ನ ಬಿಡಿಸೋಕೋಸ್ಕರ ನಾವು ಅನುಭವಿಸಬೇಕಾಗಿದ್ದ ಮರಣ ಶಿಕ್ಷೆಯನ್ನ ಆತನು ಅನುಭವಿಸಿದನು. (ಇಬ್ರಿ. 2:9) ತನ್ನ ಮಗ ಇಷ್ಟೊಂದು ಕಷ್ಟಪಟ್ಟು ನೋವಿಂದ ನರಳ್ತಾ, ಅವಮಾನದಿಂದ ಸಾಯ್ತಾ ಇರೋದನ್ನ ನೋಡಿದಾಗ ಯೆಹೋವನಿಗೆ ಹೃದಯನೇ ಒಡೆದು ಹೋದಷ್ಟು ನೋವಾಗಿರಬೇಕಲ್ವಾ! ಯೆಹೋವನಿಗೆ ನಮ್ಮನ್ನ ಕ್ಷಮಿಸಬೇಕು ಅನ್ನೋ ಆಸೆ ಇಲ್ಲದೆ ಇದ್ದಿದ್ರೆ ನಮಗೋಸ್ಕರ ತನ್ನ ಮಗನನ್ನ ಸಾಯೋಕೆ ಬಿಡುತ್ತಿದ್ದನಾ?

7. ಯೆಹೋವನ ಕ್ಷಮೆ ಪಡೆದುಕೊಂಡವರ ಉದಾಹರಣೆ ಕೊಡಿ.

7 ಯೆಹೋವ ದೇವರು ಎಷ್ಟೋ ಜನರನ್ನ ಕ್ಷಮಿಸಿರೋ ಉದಾಹರಣೆಗಳು ಬೈಬಲ್‌ನಲ್ಲಿದೆ. (ಎಫೆ. 4:32) ಅದರಲ್ಲಿ ಒಬ್ಬ, ರಾಜ ಮನಸ್ಸೆ. ಅವನು ಯೆಹೋವನ ವಿರುದ್ಧ ತುಂಬ ಕೆಟ್ಟಕೆಟ್ಟ ಕೆಲಸ ಮಾಡಿದ. ಅವನು ಸುಳ್ಳು ದೇವರುಗಳನ್ನ ಆರಾಧನೆ ಮಾಡೋದಲ್ಲದೆ ಬೇರೆಯವರಿಗೂ ಅದನ್ನ ಮಾಡೋಕೆ ಹೇಳಿದ. ಅವನ ಸ್ವಂತ ಮಕ್ಕಳನ್ನೇ ಅವುಗಳಿಗೆ ಬಲಿ ಕೊಟ್ಟ. ಅಷ್ಟೇ ಅಲ್ಲ, ಸುಳ್ಳು ದೇವರ ಮೂರ್ತಿಯನ್ನ ಯೆಹೋವನ ಪವಿತ್ರ ಆಲಯದಲ್ಲಿ ತಂದಿಟ್ಟು ತುಂಬ ದೊಡ್ಡ ತಪ್ಪು ಮಾಡಿದ. ಹೀಗೆ ಅವನು ಇಂಥ ಕೆಲಸ ಮಾಡೋದ್ರಲ್ಲಿ “ಎಲ್ಲೆಮೀರಿ ಹೋಗಿ ಯೆಹೋವನಿಗೆ ಇಷ್ಟ ಆಗದೇ ಇರೋದನ್ನೇ ಮಾಡಿ ಆತನಿಗೆ ತುಂಬ ಕೋಪ ಬರಿಸಿದ” ಅಂತ ಬೈಬಲ್‌ ಹೇಳುತ್ತೆ. (2 ಪೂರ್ವ. 33:2-7) ಆದ್ರೆ ಮನಸ್ಸೆ ಮನಸಾರೆ ಪಶ್ಚಾತ್ತಾಪ ಪಟ್ಟಾಗ ಯೆಹೋವ ಅವನನ್ನ ಕ್ಷಮಿಸಿದನು. ಅವನಿಗೆ ಮತ್ತೆ ರಾಜನಾಗೋ ಅವಕಾಶ ಕೊಟ್ಟನು. (2 ಪೂರ್ವ. 33:12, 13) ರಾಜ ದಾವೀದನೂ ತುಂಬ ದೊಡ್ಡ ತಪ್ಪುಗಳನ್ನ ಮಾಡಿದ. ವ್ಯಭಿಚಾರ ಮಾಡಿದ, ಕೊಲೆ ಮಾಡಿದ. ಆದ್ರೆ ಅವನು ತನ್ನ ತಪ್ಪನ್ನ ಒಪ್ಪಿಕೊಂಡು ಮನಸಾರೆ ಪಶ್ಚಾತ್ತಾಪ ಪಟ್ಟಾಗ ಯೆಹೋವ ಅವನನ್ನೂ ಕ್ಷಮಿಸಿದನು. (2 ಸಮು. 12:9, 10, 13, 14) ಈ ಉದಾಹರಣೆಗಳಿಂದ ನಮಗೆ ಏನು ಗೊತ್ತಾಗುತ್ತೆ ಅಂದ್ರೆ, ಮನಸಾರೆ ಪಶ್ಚಾತ್ತಾಪ ಪಟ್ಟಾಗ ಯೆಹೋವ ಖಂಡಿತ ನಮ್ಮನ್ನ ಕ್ಷಮಿಸ್ತಾನೆ. ಆದ್ರೆ ಒಬ್ರನ್ನ ನಾವು ಕ್ಷಮಿಸೋಕೂ, ಯೆಹೋವ ಕ್ಷಮಿಸೋಕೂ ಏನಾದ್ರೂ ವ್ಯತ್ಯಾಸ ಇದ್ಯಾ?

ಯೆಹೋವನ ತರ ಯಾರೂ ಕ್ಷಮಿಸೋಕಾಗಲ್ಲ

8. ಒಬ್ಬ ವ್ಯಕ್ತಿಯನ್ನ ಕ್ಷಮಿಸಬೇಕಾ ಬೇಡವಾ ಅನ್ನೋ ನಿರ್ಧಾರವನ್ನ ಯೆಹೋವ ಸರಿಯಾಗೇ ಮಾಡ್ತಾನೆ ಅಂತ ಯಾಕೆ ಹೇಳಬಹುದು?

8 ಯೆಹೋವ ‘ಇಡೀ ಭೂಮಿಯ ನ್ಯಾಯಾಧೀಶ.’ (ಆದಿ. 18:25) ಒಬ್ಬ ನ್ಯಾಯಾಧೀಶನಿಗೆ ಕಾನೂನಿನ ಬಗ್ಗೆ ಪೂರ್ತಿಯಾಗಿ ಗೊತ್ತಿರಬೇಕು. ಆದ್ರೆ ಯೆಹೋವ, ಒಬ್ಬ ನ್ಯಾಯಾಧೀಶನಾಗಿ ಕಾನೂನು, ನಿಯಮಗಳನ್ನ ತಿಳಿದುಕೊಂಡಿರೋದು ಮಾತ್ರ ಅಲ್ಲ ಆ ನಿಯಮಗಳನ್ನ ಮಾಡಿದ್ದೇ ಆತನು. (ಯೆಶಾ. 33:22) ಆದ್ದರಿಂದ ಯಾವುದು ಸರಿ ಯಾವುದು ತಪ್ಪು ಅಂತ ಆತನಿಗಿಂತ ಸರಿಯಾಗಿ ಬೇರೆ ಯಾರಿಂದನೂ ಹೇಳೋಕಾಗಲ್ಲ. ಒಬ್ಬ ನ್ಯಾಯಾಧೀಶ ತೀರ್ಪು ಕೊಡೋಕೂ ಮುಂಚೆ ಎಲ್ಲಾ ವಿಷಯಗಳನ್ನೂ ಸಾಕ್ಷಿ ಆಧಾರಗಳ ಜೊತೆ ಚೆನ್ನಾಗಿ ತಿಳುಕೊಂಡಿರಬೇಕು. ಈ ವಿಷಯದಲ್ಲೂ ಯೆಹೋವನನ್ನು ಮೀರಿಸುವವರು ಯಾರೂ ಇಲ್ಲ.

9. ಒಬ್ಬ ವ್ಯಕ್ತಿಯನ್ನ ಕ್ಷಮಿಸಬೇಕಾ ಬೇಡವಾ ಅಂತ ತೀರ್ಮಾನ ಮಾಡೋಕೂ ಮುಂಚೆ ಯೆಹೋವನಿಗೆ ಏನೆಲ್ಲಾ ಗೊತ್ತಿರುತ್ತೆ?

9 ನ್ಯಾಯಾಧೀಶರಿಗೆ ಇಲ್ಲದಿರೋ ಇನ್ನೊಂದು ಸಾಮರ್ಥ್ಯ ಯೆಹೋವನಿಗಿದೆ. ಒಂದು ಕೇಸ್‌ಗೆ ತೀರ್ಪು ಕೊಡೋಕೂ ಮುಂಚೆ ಅದರ ಹಿಂದಿರೋ ಸತ್ಯಾಂಶ ಯೆಹೋವನಿಗೆ ಚೆನ್ನಾಗಿ ಗೊತ್ತಿರುತ್ತೆ. (ಆದಿ. 18:20, 21; ಕೀರ್ತ. 90:8) ನ್ಯಾಯಾಧೀಶರು ಸಾಮಾನ್ಯವಾಗಿ ಏನು ಕೇಳಿಸಿಕೊಳ್ತಾರೋ ಅಥವಾ ನೋಡ್ತಾರೋ ಅದರ ಮೇಲೆ ತೀರ್ಪು ಕೊಡ್ತಾರೆ. ಆದ್ರೆ ಯೆಹೋವ ದೇವರು ಆ ತರ ಅಲ್ಲ. ಒಬ್ಬ ವ್ಯಕ್ತಿ ತಪ್ಪು ಮಾಡಿದಾಗ ಅವನು ಯಾಕೆ ಹಾಗೆ ಮಾಡಿದ? ಅವನ ಹುಟ್ಟುಗುಣ ಏನು? ಅವನು ಬೆಳೆದು ಬಂದ ರೀತಿ, ಯೋಚನೆ ಮಾಡೋ ರೀತಿ, ಅವನ ಪರಿಸ್ಥಿತಿ ಮತ್ತು ಭಾವನೆಗಳೇನು? ಅಂತ ಯೆಹೋವ ನೋಡ್ತಾನೆ. ಅಷ್ಟೇ ಅಲ್ಲ, ಆ ವ್ಯಕ್ತಿ ತಪ್ಪು ಮಾಡುವಾಗ ಅವನ ಮನಸ್ಸಲ್ಲಿ ಏನಿತ್ತು ಅಂತ ಆತನಿಗೆ ಗೊತ್ತಿರುತ್ತೆ. ಅವನ ಆಸೆ ಆಕಾಂಕ್ಷೆಗಳೇನು, ಅವನು ಯಾವ ಉದ್ದೇಶ ಇಟ್ಟುಕೊಂಡು ಹೀಗೆ ಮಾಡಿದ ಅನ್ನೋದನ್ನೆಲ್ಲ ಆತನು ತಿಳಿದುಕೊಂಡಿರುತ್ತಾನೆ. ಆತನಿಗೆ ಗೊತ್ತಿಲ್ಲದೆ ಇರೋ ವಿಷಯ ಯಾವುದೂ ಇಲ್ಲ. (ಇಬ್ರಿ. 4:13) ಯೆಹೋವ ಆ ವ್ಯಕ್ತಿಯ ಬಗ್ಗೆ ಪೂರ್ತಿಯಾಗಿ ತಿಳಿದುಕೊಂಡಿದ್ದಾನೆ. ಇದ್ರಿಂದ ಅವನನ್ನ ಕ್ಷಮಿಸಬೇಕಾ ಬೇಡವಾ ಅಂತ ನಿರ್ಧರಿಸುತ್ತಾನೆ.

ಯೆಹೋವನು ನ್ಯಾಯವಂತ, ಬೇಧ-ಭಾವ ಮಾಡಲ್ಲ, ಆತನಿಗೆ ಯಾರೂ ಲಂಚ ಕೊಡೋಕಾಗಲ್ಲ (ಪ್ಯಾರ 10 ನೋಡಿ)

10. ಯೆಹೋವ ಕೊಡೋ ತೀರ್ಪು ಯಾವಾಗಲೂ ನ್ಯಾಯವಾಗೇ ಇರುತ್ತೆ ಅಂತ ನಾವು ಯಾಕೆ ಹೇಳಬಹುದು? (ಧರ್ಮೋಪದೇಶಕಾಂಡ 32:4)

10 ಯೆಹೋವ ಯಾವಾಗಲೂ ನ್ಯಾಯವಾಗಿ ತೀರ್ಪು ಕೊಡ್ತಾನೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಅನ್ನೋ ತರ ಯಾವತ್ತೂ ನಡಕೊಳ್ಳಲ್ಲ. ಒಬ್ಬರ ಅಂದ-ಚಂದ, ಆಸ್ತಿಪಾಸ್ತಿ, ಸ್ಥಾನಮಾನ ಅಥವಾ ಅವರಲ್ಲಿರೋ ಸಾಮರ್ಥ್ಯನ ನೋಡಿ ಆತನು ಕ್ಷಮಿಸಲ್ಲ. (1 ಸಮು. 16:7; ಯಾಕೋ. 2:1-4) ಯೆಹೋವ ಕೊಡೋ ತೀರ್ಪನ್ನ ಲಂಚ ಕೊಟ್ಟು, ಬೆದರಿಕೆ ಹಾಕಿ ಅಥವಾ ಒತ್ತಾಯ ಮಾಡಿ ಬದಲಾಯಿಸೋಕೆ ಯಾರಿಂದಾನೂ ಆಗಲ್ಲ. (2 ಪೂರ್ವ. 19:7) ಆತನು ಕೋಪದಲ್ಲಿ ಮನಸ್ಸಿಗೆ ಬಂದ ಹಾಗೆ ತೀರ್ಪು ಕೊಡಲ್ಲ ಅಥವಾ ಜನರ ಮೊಸಳೆ ಕಣ್ಣೀರಿಗೆ ಕರಗುವುದೂ ಇಲ್ಲ. (ವಿಮೋ. 34:7) ಯೆಹೋವ ನಮ್ಮ ಬಗ್ಗೆ, ನಮ್ಮ ಪರಿಸ್ಥಿತಿ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರೋದ್ರಿಂದ ಆತನ ತರ ನ್ಯಾಯವಾಗಿ ಬೇರೆ ಯಾರಿಂದನೂ ತೀರ್ಪು ಕೊಡೋಕಾಗಲ್ಲ.—ಧರ್ಮೋಪದೇಶಕಾಂಡ 32:4 ಓದಿ.

11. ಯೆಹೋವನ ತರ ಯಾರೂ ಕ್ಷಮಿಸೋಕೆ ಆಗಲ್ಲ ಅಂತ ಯಾಕೆ ಹೇಳಬಹುದು?

11 ಹೀಬ್ರು ಶಾಸ್ತ್ರಗ್ರಂಥವನ್ನು ಬರೆದವರು, ಯೆಹೋವನ ತರ ಯಾರೂ ಕ್ಷಮಿಸೋಕಾಗಲ್ಲ ಅಂತ ಅರ್ಥಮಾಡಿಕೊಂಡಿದ್ರು. ಆತನ ಕ್ಷಮೆ ಬಗ್ಗೆ ಮಾತಾಡುವಾಗ ಅವರು ಒಂದು ಪದ ಬಳಸ್ತಿದ್ರು. ಅದರ ಬಗ್ಗೆ ಒಂದು ರೆಫೆರೆನ್ಸ್‌ ಹೀಗೆ ಹೇಳುತ್ತೆ: “ಆ ಬರಹಗಾರರು, ಯೆಹೋವ ಒಬ್ಬರನ್ನ ಕ್ಷಮಿಸೋದರ ಬಗ್ಗೆ ಮಾತಾಡುವಾಗ ಮಾತ್ರ ಆ ಪದನ ಬಳಸ್ತಿದ್ರು. ಮನುಷ್ಯರು ಒಬ್ಬರನ್ನ ಕ್ಷಮಿಸೋದ್ರ ಬಗ್ಗೆ ಹೇಳುವಾಗ ಆ ಪದವನ್ನ ಬಳಸ್ತಾ ಇರಲಿಲ್ಲ.” ಯೆಹೋವನಿಗೆ ಮಾತ್ರನೇ ಪಶ್ಚಾತ್ತಾಪ ಪಟ್ಟ ವ್ಯಕ್ತಿನ ಪೂರ್ತಿಯಾಗಿ ಕ್ಷಮಿಸೋಕೆ ಆಗೋದು. ಹಾಗಾದರೆ ಯೆಹೋವ ನಮ್ಮನ್ನ ಕ್ಷಮಿಸಿದಾಗ ನಮಗೆ ಏನೆಲ್ಲಾ ಒಳ್ಳೆದಾಗುತ್ತೆ?

12-13. (ಎ) ಯೆಹೋವ ಒಬ್ಬ ವ್ಯಕ್ತಿನ ಕ್ಷಮಿಸಿದಾಗ ಆ ವ್ಯಕ್ತಿಗೆ ಹೇಗನಿಸುತ್ತೆ? (ಬಿ) ಯೆಹೋವ ಒಬ್ಬ ವ್ಯಕ್ತಿನ ಎಷ್ಟರ ಮಟ್ಟಿಗೆ ಕ್ಷಮಿಸ್ತಾನೆ?

12 ಯೆಹೋವ ನಮ್ಮನ್ನ ಕ್ಷಮಿಸ್ತಾನೆ ಅಂತ ಅರ್ಥಮಾಡಿಕೊಂಡಾಗ ನಮಗೆ “ನೆಮ್ಮದಿ” ಸಿಗುತ್ತೆ. ನಾವು ಮಾಡಿದ ತಪ್ಪಿಂದ ನಮ್ಮ ಮನಸ್ಸಾಕ್ಷಿ ಚುಚ್ಚುತ್ತಾ ಇರಲ್ಲ, ಶುದ್ಧವಾಗುತ್ತೆ. ಈ ರೀತಿಯ ಕ್ಷಮೆ ಮನುಷ್ಯರಿಂದ ಅಲ್ಲ, ‘ಯೆಹೋವನಿಂದ’ ಮಾತ್ರ ಸಿಗುತ್ತೆ. (ಅ. ಕಾ. 3:19) ಯೆಹೋವ ನಮ್ಮನ್ನ ಕ್ಷಮಿಸಿದಾಗ ಆತನ ಜೊತೆಗಿದ್ದ ಸಂಬಂಧವನ್ನ ಎಷ್ಟರ ಮಟ್ಟಿಗೆ ಸರಿಮಾಡ್ತಾನೆ ಅಂದ್ರೆ ಆ ತಪ್ಪು ನಡೆದೇ ಇಲ್ಲವೇನೋ ಅನ್ನೋ ತರ ಇರುತ್ತೆ.

13 ಒಂದು ಸಲ ಯೆಹೋವ ನಮ್ಮನ್ನ ಕ್ಷಮಿಸಿದ ಮೇಲೆ ಆ ತಪ್ಪನ್ನ ಮತ್ತೆಮತ್ತೆ ಎತ್ತಿ ಆಡಲ್ಲ ಅಥವಾ ಅದಕ್ಕೆ ಶಿಕ್ಷೆ ಕೊಡಲ್ಲ. (ಯೆಶಾ. 43:25; ಯೆರೆ. 31:34) “ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರ ಇದೆಯೋ, ಆತನು ನಮ್ಮ ಅಪರಾಧಗಳನ್ನ ನಮ್ಮಿಂದ ಅಷ್ಟೇ ದೂರ ಎಸಿತಾನೆ.” * (ಕೀರ್ತ. 103:12) ಇದಕ್ಕಾಗಿ ನಾವು ಯೆಹೋವನಿಗೆ ತುಂಬ ಋಣಿಗಳಾಗಿರಬೇಕು. (ಕೀರ್ತ. 130:4) ಆದ್ರೆ ಇಂಥ ಕ್ಷಮೆ ಯಾರಿಗೆ ಮಾತ್ರ ಸಿಗುತ್ತೆ?

ಯೆಹೋವ ಯಾರನ್ನ ಕ್ಷಮಿಸ್ತಾನೆ?

14. ಒಬ್ಬ ವ್ಯಕ್ತಿಯನ್ನ ಕ್ಷಮಿಸಬೇಕಾ ಬೇಡವಾ ಅಂತ ಯೆಹೋವ ಹೇಗೆ ನಿರ್ಧರಿಸುತ್ತಾನೆ?

14 ನಾವು ಇಲ್ಲಿ ತನಕ ಏನು ಕಲಿತ್ವಿ? ಒಬ್ಬ ವ್ಯಕ್ತಿ ಎಷ್ಟು ದೊಡ್ಡ ತಪ್ಪು ಮಾಡಿದ್ದಾನೆ ಅನ್ನೋದನ್ನ ನೋಡಿ ಯೆಹೋವ ಅವನನ್ನ ಕ್ಷಮಿಸಬೇಕಾ ಬೇಡವಾ ಅಂತ ನಿರ್ಧರಿಸಲ್ಲ. ಬದಲಿಗೆ ಆತನು ನಮ್ಮ ಸೃಷ್ಟಿಕರ್ತ ಆಗಿರೋದ್ರಿಂದ, ಆತನೇ ನೀತಿ-ನಿಯಮಗಳನ್ನ ಕೊಟ್ಟಿರೋದ್ರಿಂದ ಮತ್ತು ನ್ಯಾಯಾಧೀಶ ಆಗಿರೋದ್ರಿಂದ ನಮ್ಮ ಬಗ್ಗೆ ಎಲ್ಲ ತಿಳುಕೊಂಡು ಕ್ಷಮಿಸಬೇಕಾ ಬೇಡವಾ ಅನ್ನೋದನ್ನ ನಿರ್ಧರಿಸುತ್ತಾನೆ ಅಂತ ಕಲಿತ್ವಿ. ಯೆಹೋವ ಒಬ್ಬ ವ್ಯಕ್ತಿನ ಕ್ಷಮಿಸೋಕೂ ಮುಂಚೆ ಇನ್ನೂ ಯಾವ ವಿಷಯಗಳನ್ನ ನೋಡ್ತಾನೆ?

15. ಲೂಕ 12:47, 48 ಹೇಳೋ ತರ ಒಬ್ಬ ವ್ಯಕ್ತಿನ ಕ್ಷಮಿಸೋಕೂ ಮುಂಚೆ ಯೆಹೋವ ಏನನ್ನ ನೋಡ್ತಾನೆ?

15 ಒಬ್ಬ ವ್ಯಕ್ತಿ ಗೊತ್ತಿದ್ದೂ ತಪ್ಪು ಮಾಡ್ತಿದ್ದಾನಾ ಅಂತ ಯೆಹೋವ ನೋಡ್ತಾನೆ. ಲೂಕ 12:47, 48ರಲ್ಲಿ ಯೇಸು ಇದನ್ನೇ ಹೇಳಿದನು. (ಓದಿ.) ಒಬ್ಬ ವ್ಯಕ್ತಿ ಗೊತ್ತಿದ್ದೂ ಬೇಕುಬೇಕು ಅಂತ ತಪ್ಪು ಮಾಡಿದ್ರೆ ಅದು ದೊಡ್ಡ ಪಾಪ. ಆ ವ್ಯಕ್ತಿಗೆ ಯೆಹೋವನ ಕ್ಷಮೆ ಸಿಗದೆ ಹೋಗಬಹುದು. (ಮಾರ್ಕ 3:29; ಯೋಹಾ. 9:41) ಆದ್ರೆ ಕೆಲವೊಮ್ಮೆ ನಾವು ಗೊತ್ತಿದ್ದೂ ತಪ್ಪು ಮಾಡಿಬಿಡಬಹುದು, ಆಮೇಲೆ ಆ ತಪ್ಪನ್ನ ಮಾಡಬಾರದಿತ್ತು ಅಂತ ನಮಗೆ ಅನಿಸಬಹುದು. ಆಗ ಯೆಹೋವ ನಮ್ಮನ್ನ ಕ್ಷಮಿಸುತ್ತಾನಾ? ಹೌದು! ಆದ್ರೆ ಆಗ ನಮ್ಮನ್ನ ಕ್ಷಮಿಸೋಕೆ ಯೆಹೋವ ಇನ್ನೊಂದು ವಿಷಯ ನೋಡ್ತಾನೆ.

ನಾವು ಪಶ್ಚಾತ್ತಾಪ ಪಟ್ರೆ ಯೆಹೋವ ನಮ್ಮನ್ನ ಖಂಡಿತ ಕ್ಷಮಿಸ್ತಾನೆ (ಪ್ಯಾರ 16-17 ನೋಡಿ)

16. (ಎ) ಪಶ್ಚಾತ್ತಾಪ ಪಡೋದು ಅಂದ್ರೆ ಏನು? (ಬಿ) ನಾವ್ಯಾಕೆ ಪಶ್ಚಾತ್ತಾಪ ಪಡಬೇಕು?

16 ಒಬ್ಬ ವ್ಯಕ್ತಿನ ಕ್ಷಮಿಸೋಕೂ ಮುಂಚೆ ಅವನು ಪಶ್ಚಾತ್ತಾಪ ಪಟ್ಟಿದ್ದಾನಾ ಇಲ್ವಾ ಅಂತ ಯೆಹೋವ ನೋಡ್ತಾನೆ. ಪಶ್ಚಾತ್ತಾಪ ಪಡೋದು ಅಂದ್ರೇನು? ಪಶ್ಚಾತ್ತಾಪ ಪಡೋದು ಅಂದ್ರೆ “ಒಬ್ಬ ವ್ಯಕ್ತಿ ತನ್ನ ಮನಸ್ಸನ್ನ, ಯೋಚನೆಗಳನ್ನ ಮತ್ತು ಉದ್ದೇಶಗಳನ್ನ ಬದಲಾಯಿಸಿಕೊಳ್ಳೋದು.” ಪಶ್ಚಾತ್ತಾಪ ಪಡೋ ವ್ಯಕ್ತಿ ತಾನು ಮಾಡಿದ ತಪ್ಪಿಗೆ ಬೇಜಾರು ಮಾಡಿಕೊಳ್ಳೋದಷ್ಟೇ ಅಲ್ಲ, ಯೆಹೋವನ ಜೊತೆಗಿದ್ದ ತನ್ನ ಸಂಬಂಧ ಹಾಳಾಗೋಯ್ತಲ್ಲಾ ಅಂತನೂ ದುಃಖ ಪಡ್ತಾನೆ. ರಾಜ ಮನಸ್ಸೆ ಮತ್ತು ದಾವೀದ ತುಂಬ ದೊಡ್ಡ ಪಾಪಗಳನ್ನ ಮಾಡಿದ್ರು. ಆದ್ರೂ ಅವರು ಮನಸಾರೆ ಪಶ್ಚಾತ್ತಾಪ ಪಟ್ಟಿದ್ದಕ್ಕೆ ಯೆಹೋವ ಅವರನ್ನ ಕ್ಷಮಿಸಿದನು. (1 ಅರ. 14:8) ಹಾಗಾಗಿ ಇದ್ರಿಂದ ನಮಗೆ ಏನು ಗೊತ್ತಾಗುತ್ತಂದ್ರೆ, ಯೆಹೋವ ನಮ್ಮನ್ನ ಕ್ಷಮಿಸೋಕೂ ಮುಂಚೆ ನಾವು ಮನಸಾರೆ ಪಶ್ಚಾತ್ತಾಪ ಪಟ್ಟಿದ್ದೀವಾ ಇಲ್ವಾ ಅಂತ ನೋಡ್ತಾನೆ. ಆದ್ರೆ ಪಶ್ಚಾತ್ತಾಪ ಪಡೋದರ * ಜೊತೆಗೆ ನಾವು ಇನ್ನೂ ಒಂದು ವಿಷಯ ಮಾಡಬೇಕು ಅಂತ ಯೆಹೋವ ಬಯಸ್ತಾನೆ. ಅದೇನು?

17. ಪರಿವರ್ತನೆ ಅಂದ್ರೇನು? ಅದು ಯಾಕೆ ಮುಖ್ಯ? (ಯೆಶಾಯ 55:7)

17 ಒಬ್ಬ ವ್ಯಕ್ತಿನ ಕ್ಷಮಿಸೋ ಮುಂಚೆ ಆ ವ್ಯಕ್ತಿ ಪರಿವರ್ತನೆ ಮಾಡಿಕೊಂಡಿದ್ದಾನಾ ಅಂತನೂ ಯೆಹೋವ ನೋಡ್ತಾನೆ. ಪರಿವರ್ತನೆ ಅಂದ್ರೆ ‘ತಿರುಗಿಕೊಳ್ಳೋದು.’ ಇದರ ಅರ್ಥ ಒಬ್ಬ ವ್ಯಕ್ತಿ ತಾನು ಮಾಡ್ತಿರೋ ತಪ್ಪನ್ನ ಬಿಟ್ಟು ಯೆಹೋವನಿಗೆ ಇಷ್ಟ ಆಗೋ ತರ ಜೀವನ ಮಾಡೋಕೆ ಶುರುಮಾಡಬೇಕು. (ಯೆಶಾಯ 55:7 ಓದಿ.) ಜೊತೆಗೆ, ಯೆಹೋವನ ತರ ಯೋಚನೆ ಮಾಡೋಕೆ ಶುರುಮಾಡಬೇಕು. (ರೋಮ. 12:2; ಎಫೆ. 4:23) ಅಷ್ಟೇ ಅಲ್ಲ, ಆ ತಪ್ಪನ್ನ ಮತ್ತೆ ಮಾಡಬಾರದು ಮತ್ತು ಅದನ್ನ ಮಾಡೋದರ ಬಗ್ಗೆ ಯೋಚಿಸಲೂಬಾರದು. (ಕೊಲೊ. 3:7-10) ಯೇಸುವಿನ ಬಿಡುಗಡೆ ಬೆಲೆ ಮೇಲೆ ನಾವು ನಂಬಿಕೆಯಿಟ್ರೆ ನಮ್ಮ ಪಾಪಗಳನ್ನೆಲ್ಲ ಕ್ಷಮಿಸೋಕೆ ಯೆಹೋವ ದೇವರು ರೆಡಿಯಾಗಿ ಇರ್ತಾನೆ ನಿಜ. ಆದ್ರೆ ಆತನು ನಮ್ಮನ್ನ ಕ್ಷಮಿಸಬೇಕಂದ್ರೆ ನಾವು ಆ ತಪ್ಪನ್ನ ಮತ್ತೆ ಮಾಡದೆ ಇರೋಕೆ ಪ್ರಯತ್ನ ಮಾಡ್ತಾ ಇರಬೇಕು.—1 ಯೋಹಾ. 1:7.

ಯೆಹೋವ ದೇವರು ನಮ್ಮನ್ನ ಖಂಡಿತ ಕ್ಷಮಿಸ್ತಾನೆ

18. ನಾವು ಇಲ್ಲಿ ತನಕ ಏನು ಕಲಿತ್ವಿ?

18 ಇಲ್ಲಿ ತನಕ ನಾವೇನು ಕಲಿತ್ವಿ? ಯೆಹೋವನ ತರ ಯಾರೂ ಕ್ಷಮಿಸೋಕೆ ಆಗಲ್ಲ. ಯಾಕಂದ್ರೆ ಮೊದಲನೇದಾಗಿ, ಯೆಹೋವ ನಮ್ಮನ್ನ ಕ್ಷಮಿಸೋಕೆ ಯಾವಾಗಲೂ ರೆಡಿ ಇರ್ತಾನೆ. ಎರಡನೇದಾಗಿ, ನಾವು ಯಾರು, ಎಂಥವರು, ಯಾವ ಪರಿಸ್ಥಿತಿಯಲ್ಲಿ ಇದ್ದೀವಿ ಅಂತ ಆತನಿಗೆ ಗೊತ್ತು ಮತ್ತು ನಾವು ನಿಜವಾಗಲೂ ಪಶ್ಚಾತ್ತಾಪ ಪಟ್ಟಿದ್ದೀವಾ ಇಲ್ವಾ ಅನ್ನೋದನ್ನ ನೋಡಿ ನಮ್ಮನ್ನ ಕ್ಷಮಿಸಬೇಕಾ ಬೇಡ್ವಾ ಅಂತ ನಿರ್ಧಾರ ಮಾಡ್ತಾನೆ. ಮೂರನೇದಾಗಿ, ಯೆಹೋವ ಒಂದು ಸಲ ನಮ್ಮ ತಪ್ಪನ್ನ ಕ್ಷಮಿಸಿಬಿಟ್ರೆ ಅದನ್ನ ಇನ್ಯಾವತ್ತೂ ನೆನಪಿಸಿಕೊಳ್ಳಲ್ಲ. ಆ ತಪ್ಪುಗಳನ್ನ ಪೂರ್ತಿಯಾಗಿ ಅಳಿಸಿಬಿಡ್ತಾನೆ. ಇದ್ರಿಂದ ನಮಗೆ ಒಳ್ಳೇ ಮನಸ್ಸಾಕ್ಷಿ ಇರುತ್ತೆ ಮತ್ತು ನಾವು ಖುಷಿಯಿಂದ ಆತನನ್ನು ಆರಾಧಿಸೋಕೆ ಆಗುತ್ತೆ.

19. ನಾವು ಅಪರಿಪೂರ್ಣತೆಯಿಂದ ಮಾಡೋ ತಪ್ಪಿಗೆ ಯಾಕೆ ಕೊರಗುತ್ತಾ ಇರೋ ಅವಶ್ಯಕತೆ ಇಲ್ಲ?

19 ನಾವು ಅಪರಿಪೂರ್ಣರಾಗಿರೋದ್ರಿಂದ ನಾವು ತಪ್ಪೇ ಮಾಡಲ್ಲ ಅಂತ ಹೇಳೋಕಾಗಲ್ಲ. ಆಗ ಶಾಸ್ತ್ರಗಳ ಒಳನೋಟ ಪುಸ್ತಕದ ಸಂಪುಟ 2, ಪುಟ 771ರಲ್ಲಿರೊ ಈ ಮಾತುಗಳು ನಮಗೆ ಸಾಂತ್ವನ ಕೊಡುತ್ತೆ: “ನಮ್ಮಲ್ಲಿ ಬಲಹೀನತೆಗಳಿವೆ ಅಂತ ಯೆಹೋವ ದೇವರಿಗೆ ಗೊತ್ತಿದೆ. ಹಾಗಾಗಿ ನಾವು ತಪ್ಪು ಮಾಡಿ ಅದಕ್ಕಾಗಿ ಪಶ್ಚಾತ್ತಾಪ ಪಟ್ಟ ಮೇಲೂ ಅದಕ್ಕಾಗಿ ಕೊರಗುತ್ತಾ ಇರೋ ಅವಶ್ಯಕತೆ ಇಲ್ಲ. (ಕೀರ್ತ 103:8-14; 130:3) ನಾವು ಯೆಹೋವನಿಗೆ ಇಷ್ಟ ಆಗೋ ತರ ನಡೆದುಕೊಳ್ಳೋಕೆ ನಮ್ಮ ಕೈಲಾದಷ್ಟು ಪ್ರಯತ್ನ ಮಾಡ್ತಿದ್ರೆ ನಾವು ಸಂತೋಷವಾಗಿ ಇರಬಹುದು. (ಫಿಲಿ 4:4-6; 1ಯೋಹಾ 3:19-22).” ಇದನ್ನ ತಿಳುಕೊಂಡಾಗ ಮನಸ್ಸಿಗೆ ಎಷ್ಟು ಸಮಾಧಾನ ಆಗುತ್ತಲ್ವಾ!

20. ಮುಂದಿನ ಲೇಖನದಲ್ಲಿ ನಾವು ಏನನ್ನ ಕಲಿತೀವಿ?

20 ನಾವು ತಪ್ಪುಮಾಡಿ ಪಶ್ಚಾತ್ತಾಪ ಪಟ್ಟಾಗ ಯೆಹೋವ ನಮ್ಮನ್ನ ಕ್ಷಮಿಸೋಕೆ ಯಾವಾಗಲೂ ಸಿದ್ಧನಾಗಿರ್ತಾನೆ. ಅದಕ್ಕಾಗಿ ನಾವು ತುಂಬ ಋಣಿಗಳಾಗಿರಬೇಕು. ಆದ್ರೆ ನಾವು ಯೆಹೋವನ ತರ ಕ್ಷಮಿಸೋದು ಹೇಗೆ? ಕ್ಷಮಿಸೋ ವಿಷಯದಲ್ಲಿ ಯೆಹೋವನಿಗೂ ನಮಗೂ ಯಾವ ಹೋಲಿಕೆಗಳಿವೆ ಮತ್ತು ಯಾವ ವ್ಯತ್ಯಾಸಗಳಿವೆ? ಇದನ್ನ ನಾವು ಯಾಕೆ ತಿಳಿದುಕೊಳ್ಳಬೇಕು? ಈ ಪ್ರಶ್ನೆಗಳಿಗೆ ಮುಂದಿನ ಲೇಖನದಲ್ಲಿ ಉತ್ತರ ನೋಡೋಣ.

ಗೀತೆ 57 ನನ್ನ ಹೃದಯದ ಧ್ಯಾನ

^ ಪಶ್ಚಾತ್ತಾಪ ಪಡುವವರನ್ನು ಕ್ಷಮಿಸಬೇಕು ಅನ್ನೋ ಆಸೆ ಯೆಹೋವ ದೇವರಿಗೆ ಇದೆ ಅಂತ ಬೈಬಲ್‌ ಹೇಳುತ್ತೆ. ಆದ್ರೆ ಕೆಲವೊಮ್ಮೆ ಆ ಕ್ಷಮೆ ಪಡಕೊಳ್ಳೋ ಯೋಗ್ಯತೆ ನಮಗಿಲ್ಲ ಅಂತ ಅನಿಸಬಹುದು. ನಮ್ಮ ತಪ್ಪಿಗೆ ನಿಜವಾಗ್ಲೂ ಪಶ್ಚಾತ್ತಾಪ ಪಟ್ರೆ, ಯೆಹೋವ ನಮ್ಮನ್ನ ಕ್ಷಮಿಸ್ತಾನೆ ಅಂತ ನಂಬೋಕೆ ಈ ಲೇಖನ ಸಹಾಯ ಮಾಡುತ್ತೆ.

^ ಪದವಿವರಣೆ: “ಪಶ್ಚಾತ್ತಾಪ” ಅನ್ನೋ ಪದ ಸಾಮಾನ್ಯವಾಗಿ ಈ ಹಿಂದೆ ಮಾಡಿದ ತಪ್ಪುಗಳನ್ನ ನೆನಸಿ ಅಥವಾ ಒಳ್ಳೇದನ್ನ ಮಾಡದೆ ಇದ್ದಿದ್ದಕ್ಕೆ ವಿಷಾದಿಸುತ್ತಾ ಮನಸಾರೆ ದುಃಖ ಪಡೋದನ್ನ ಸೂಚಿಸುತ್ತೆ. ನಿಜವಾಗ್ಲೂ ಪಶ್ಚಾತ್ತಾಪ ಪಡೋ ವ್ಯಕ್ತಿ ಅದನ್ನ ಕ್ರಿಯೆಯಲ್ಲಿ ತೋರಿಸ್ತಾ ಮುಂದೆಂದೂ ಆ ತಪ್ಪನ್ನ ಮಾಡಲ್ಲ.