ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 25

ಮನಸಾರೆ ಕ್ಷಮಿಸಿ ಆಶೀರ್ವಾದ ಗಳಿಸಿ

ಮನಸಾರೆ ಕ್ಷಮಿಸಿ ಆಶೀರ್ವಾದ ಗಳಿಸಿ

“ಯೆಹೋವ ನಿಮ್ಮನ್ನ ಉದಾರವಾಗಿ ಕ್ಷಮಿಸಿದ ತರಾನೇ ನೀವೂ ಕ್ಷಮಿಸಿ.”—ಕೊಲೊ. 3:13.

ಗೀತೆ 77 ಕ್ಷಮಿಸುವವರಾಗಿರಿ

ಕಿರುನೋಟ *

1. ಪಶ್ಚಾತ್ತಾಪಪಡುವವರಿಗೆ ಯೆಹೋವ ಏನಂತ ಮಾತು ಕೊಟ್ಟಿದ್ದಾನೆ?

 ಯೆಹೋವ ನಮ್ಮನ್ನ ಸೃಷ್ಟಿ ಮಾಡಿದ್ದಾನೆ, ನೀತಿ ನಿಯಮಗಳನ್ನ ಕೊಟ್ಟಿದ್ದಾನೆ, ನ್ಯಾಯಾಧೀಶನೂ ಆಗಿದ್ದಾನೆ. ಜೊತೆಗೆ, ನಮ್ಮನ್ನ ಪ್ರೀತಿ ಮಾಡೋ ಸ್ವರ್ಗೀಯ ಅಪ್ಪ ಆಗಿದ್ದಾನೆ. (ಕೀರ್ತ. 100:3; ಯೆಶಾ. 33:22) ನಾವು ಆತನ ವಿರುದ್ಧ ಏನಾದ್ರೂ ದೊಡ್ಡ ತಪ್ಪು ಮಾಡಿ ಅದಕ್ಕೆ ಮನಸಾರೆ ಪಶ್ಚಾತ್ತಾಪಪಟ್ಟಾಗ ಯೆಹೋವ ನಮ್ಮನ್ನ ಕ್ಷಮಿಸ್ತಾನೆ. ಅಷ್ಟೇ ಅಲ್ಲ, ನಮ್ಮನ್ನ ಕ್ಷಮಿಸೋ ಆಸೆನೂ ಆತನಿಗಿದೆ. (ಕೀರ್ತ. 86:5) “ನಿಮ್ಮ ಪಾಪಗಳು ಕಡುಗೆಂಪಾಗಿದ್ರೂ ಅವನ್ನ ಹಿಮದ ತರ ಬೆಳ್ಳಗೆ ಮಾಡ್ತೀನಿ” ಅಂತ ಯೆಹೋವ ಪ್ರವಾದಿ ಯೆಶಾಯನ ಮೂಲಕ ಹೇಳಿರೋ ಮಾತು ನಮಗೆ ಎಷ್ಟು ನೆಮ್ಮದಿ ಕೊಡುತ್ತಲ್ವಾ?—ಯೆಶಾ. 1:18.

2. ನಾವು ಎಲ್ಲರ ಜೊತೆ ಚೆನ್ನಾಗಿರೋಕೆ ಏನು ಮಾಡಬೇಕು?

2 ನಾವು ಅಪರಿಪೂರ್ಣರಾಗಿರೋದ್ರಿಂದ ಕೆಲವೊಮ್ಮೆ ಬೇರೆಯವರ ಮನಸ್ಸನ್ನ ನೋಯಿಸಿಬಿಡ್ತೀವಿ. (ಯಾಕೋ. 3:2) ಹಾಗಂತ ನಾವು ಮತ್ತೆ ಅವರ ಸ್ನೇಹವನ್ನ ಬೆಳೆಸಿಕೊಳ್ಳೋಕೆ ಆಗಲ್ಲ ಅಂತೇನಿಲ್ಲ. ನಾವು ಕ್ಷಮಿಸೋಕೆ ಕಲಿತ್ರೆ ಎಲ್ಲರ ಜೊತೆನೂ ಚೆನ್ನಾಗಿರಬಹುದು. (ಜ್ಞಾನೋ. 17:9; 19:11; ಮತ್ತಾ. 18:21, 22) ಯಾರಾದ್ರೂ ಚಿಕ್ಕ ಪುಟ್ಟ ತಪ್ಪು ಮಾಡಿ ನಮ್ಮ ಮನಸ್ಸನ್ನ ನೋಯಿಸಿಬಿಟ್ರೆ, ನಾವು ಅವರನ್ನ ಕ್ಷಮಿಸಬೇಕು ಅಂತ ಯೆಹೋವ ಬಯಸ್ತಾನೆ. (ಕೊಲೊ. 3:13) ಯಾಕಂದ್ರೆ ಯೆಹೋವ ನಮ್ಮನ್ನ ‘ಉದಾರವಾಗಿ ಕ್ಷಮಿಸಿದ್ದಾನೆ.’—ಯೆಶಾ. 55:7.

3. ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ತೀವಿ?

3 ಅಪರಿಪೂರ್ಣರಾಗಿದ್ರೂ ನಾವು ಯೆಹೋವನ ತರ ಹೇಗೆ ಕ್ಷಮಿಸಬಹುದು? ಯಾವ ತರದ ತಪ್ಪುಗಳನ್ನ ಹಿರಿಯರಿಗೆ ತಿಳಿಸಬೇಕು? ಬೇರೆಯವರನ್ನ ಕ್ಷಮಿಸಬೇಕು ಅಂತ ಯೆಹೋವ ಯಾಕೆ ನಮಗೆ ಹೇಳ್ತಾನೆ? ಬೇರೆಯವರು ಮಾಡಿದ ತಪ್ಪುಗಳಿಂದ ಕಷ್ಟ ಅನುಭವಿಸಿದ ನಮ್ಮ ಸಹೋದರ ಸಹೋದರಿಯರಿಂದ ನಾವೇನು ಕಲಿಯಬಹುದು? ಅಂತ ಈ ಲೇಖನದಲ್ಲಿ ನೊಡೋಣ.

ದೊಡ್ಡ ತಪ್ಪು ನಡೆದಾಗ

4. (ಎ) ಒಬ್ಬ ವ್ಯಕ್ತಿ ದೊಡ್ಡ ತಪ್ಪು ಮಾಡಿದಾಗ ಅವನು ಏನು ಮಾಡಬೇಕು? (ಬಿ) ಹಿರಿಯರಿಗೆ ಯಾವ ಜವಾಬ್ದಾರಿ ಇದೆ?

4 ಬೇಕು ಬೇಕಂತ ದೇವರ ನಿಯಮನ ಮುರಿಯೋದು ದೊಡ್ಡ ತಪ್ಪಾಗಿದೆ. ಯಾರಾದ್ರೂ ಇಂಥಾ ತಪ್ಪುಗಳನ್ನ ಮಾಡಿದ್ರೆ ಹಿರಿಯರಿಗೆ ಅದನ್ನ ತಿಳಿಸಬೇಕು. ಅಂಥಾ ಕೆಲವು ತಪ್ಪುಗಳ ಬಗ್ಗೆ 1 ಕೊರಿಂಥ 6:9, 10ರಲ್ಲಿ ಹೇಳಲಾಗಿದೆ. ಹಾಗಾಗಿ ಒಬ್ಬ ವ್ಯಕ್ತಿ ಇಂಥ ತಪ್ಪುಗಳನ್ನ ಮಾಡಿದಾಗ ಅವನು ಯೆಹೋವ ದೇವರ ಹತ್ರ ಕ್ಷಮೆ ಕೇಳಬೇಕು ಮತ್ತು ಸಭೆಯಲ್ಲಿರೋ ಹಿರಿಯರ ಹತ್ರ ಅದರ ಬಗ್ಗೆ ಹೇಳಬೇಕು. (ಕೀರ್ತ. 32:5; ಯಾಕೋ. 5:14) ಯೇಸು ಕ್ರಿಸ್ತನ ಬಿಡುಗಡೆ ಬೆಲೆಯ ಆಧಾರದ ಮೇಲೆ ನಮ್ಮನ್ನ ಕ್ಷಮಿಸೋ ಅಧಿಕಾರ ಇರೋದು ಯೆಹೋವನಿಗೆ ಮಾತ್ರ. * ಹಾಗಂದಮೇಲೆ ತಪ್ಪು ಮಾಡಿರೋ ವ್ಯಕ್ತಿ ಹಿರಿಯರಿಗೆ ಯಾಕೆ ಹೇಳಬೇಕು? ಯಾಕಂದ್ರೆ ಆ ವ್ಯಕ್ತಿನ ಸಭೆಯಲ್ಲಿ ಇಟ್ಟುಕೊಳ್ಳಬೇಕಾ ಬೇಡ್ವಾ, ಅದನ್ನ ಬೈಬಲ್‌ ಒಪ್ಪುತ್ತಾ ಇಲ್ವಾ, ಅಂತ ನಿರ್ಧಾರ ಮಾಡೋಕೆ ಯೆಹೋವ ಹಿರಿಯರನ್ನ ನೇಮಿಸಿದ್ದಾನೆ. (1 ಕೊರಿಂ. 5:12) ಹಿರಿಯರು ಅದನ್ನ ನಿರ್ಧರಿಸೋಕೆ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಬೇಕು. ಆ ವ್ಯಕ್ತಿ ಬೇಕು ಬೇಕಂತ ತಪ್ಪು ಮಾಡಿದ್ದಾನಾ? ಮೋಸ ಮಾಡೋ ಉದ್ದೇಶದಿಂದನೇ ಅದನ್ನ ಮಾಡಿದ್ದಾನಾ? ಮಾಡಿದ ತಪ್ಪನ್ನ ಮುಚ್ಚಿಹಾಕೋಕೆ ಪ್ರಯತ್ನ ಮಾಡಿದ್ದಾನಾ? ತುಂಬ ವರ್ಷಗಳಿಂದ ಅಥವಾ ತುಂಬ ದಿನಗಳಿಂದ ಆ ತಪ್ಪನ್ನ ಮಾಡ್ತಾ ಬಂದಿದ್ದಾನಾ? ಎಲ್ಲಕ್ಕಿಂತ ಹೆಚ್ಚಾಗಿ ಅವನು ಪಶ್ಚಾತ್ತಾಪ ಪಟ್ಟಿದ್ದಾನಾ? ಯೆಹೋವ ಅವನನ್ನ ಕ್ಷಮಿಸಿದ್ದಾನೆ ಅನ್ನೋದಕ್ಕೆ ಸ್ಪಷ್ಟವಾದ ಆಧಾರಗಳಿದೆಯಾ? ಅಂತ ನೋಡಬೇಕು.—ಅಕಾ. 3:19.

5. ಹಿರಿಯರು ಹೇಗೆಲ್ಲಾ ಸಹಾಯ ಮಾಡ್ತಾರೆ?

5 ತಪ್ಪು ಮಾಡಿರೋ ವ್ಯಕ್ತಿ ಹತ್ರ ಹಿರಿಯರು ಮಾತಾಡಿದ ಮೇಲೆ, ಸ್ವರ್ಗದಲ್ಲಿ ಯೆಹೋವ ದೇವರು ಈಗಾಗಲೇ ಆ ವ್ಯಕ್ತಿಯ ಬಗ್ಗೆ ಏನು ನಿರ್ಧಾರ ತಗೊಂಡಿದ್ದಾನೋ, ಹಿರಿಯರು ಅದೇ ನಿರ್ಧಾರನ ತಗೊಳ್ಳೋಕೆ ತಮ್ಮ ಕೈಲಾದ ಪ್ರಯತ್ನ ಮಾಡ್ತಾರೆ. (ಮತ್ತಾ. 18:18) ಇದ್ರಿಂದ ಸಭೆಗೆ ಏನು ಪ್ರಯೋಜನ ಆಗುತ್ತೆ? ಪಶ್ಚಾತ್ತಾಪಪಡದ ವ್ಯಕ್ತಿನ ಸಭೆಯಿಂದ ಹೊರಗೆ ಹಾಕಿದ್ರೆ ಸಭೆಯಲ್ಲಿರೋ ಬೇರೆ ಸಹೋದರ ಸಹೋದರಿಯರನ್ನ ಕಾಪಾಡೋಕೆ ಆಗುತ್ತೆ. (1 ಕೊರಿಂ. 5:6, 7, 11-13; ತೀತ 3:10, 11) ಅಷ್ಟೇ ಅಲ್ಲ, ಇದ್ರಿಂದ ತಪ್ಪು ಮಾಡಿದವನು ತನ್ನ ತಪ್ಪಿಗೆ ಪಶ್ಚಾತ್ತಾಪಪಟ್ಟು ಯೆಹೋವನ ಹತ್ರ ಕ್ಷಮೆ ಪಡಕೊಳ್ಳೋಕೆ ಪ್ರಯತ್ನ ಮಾಡಬಹುದು. (ಲೂಕ 5:32) ಹಿರಿಯರು ಪಶ್ಚಾತ್ತಾಪ ಪಟ್ಟ ವ್ಯಕ್ತಿಗೋಸ್ಕರ ಪ್ರಾರ್ಥನೆ ಮಾಡಿದಾಗ ಆ ವ್ಯಕ್ತಿಗೆ ಯೆಹೋವನ ಜೊತೆ ಹಾಳಾಗಿದ್ದ ತನ್ನ ಸಂಬಂಧನ ಸರಿಮಾಡಿಕೊಳ್ಳೋಕೆ ಸಹಾಯ ಮಾಡ್ತಾರೆ.—ಯಾಕೋ. 5:15.

6. ಬಹಿಷ್ಕಾರ ಆದ ವ್ಯಕ್ತಿನ ಯೆಹೋವ ಕ್ಷಮಿಸ್ತಾನಾ? ವಿವರಿಸಿ.

6 ತಪ್ಪು ಮಾಡಿರೋ ವ್ಯಕ್ತಿ ಜೊತೆ ಹಿರಿಯರು ಮಾತಾಡುವಾಗ, ಅವನು ಪಶ್ಚಾತ್ತಾಪಪಟ್ಟಿಲ್ಲ ಅಂತ ಗೊತ್ತಾದ್ರೆ ಸಭೆಯಿಂದ ಬಹಿಷ್ಕಾರ ಮಾಡ್ತಾರೆ. ಒಂದುವೇಳೆ ಆ ವ್ಯಕ್ತಿ ಆ ದೇಶದ ಕಾನೂನು ಅಥವಾ ನಿಯಮನ ಮುರಿದಿದ್ರೆ, ಅದರಿಂದ ಅವನಿಗೆ ಸಿಗೋ ಶಿಕ್ಷೆಯಿಂದ ಅವನನ್ನ ಹಿರಿಯರು ಕಾಪಾಡಲ್ಲ. ಯಾಕಂದ್ರೆ ಕಾನೂನನ್ನ ಮುರಿಯೋ ವ್ಯಕ್ತಿಗಳು ಯಾರೇ ಆಗಿರಲಿ, ಅವರು ಪಶ್ಚಾತ್ತಾಪ ಪಟ್ಟರೂ ಪಡದೇ ಇದ್ದರೂ ಅವರನ್ನ ಶಿಕ್ಷಿಸೋ ಅಧಿಕಾರವನ್ನ ಯೆಹೋವ ಸರ್ಕಾರಿ ಅಧಿಕಾರಿಗಳಿಗೆ ಕೊಟ್ಟಿದ್ದಾನೆ. (ರೋಮ. 13:4) ಆದ್ರೆ ಇದೆಲ್ಲ ಆದ್ಮೇಲೆ ಒಬ್ಬ ವ್ಯಕ್ತಿ ತನ್ನ ತಪ್ಪನ್ನ ಒಪ್ಪಿಕೊಂಡು, ಮನಸಾರೆ ಪಶ್ಚಾತ್ತಾಪಪಟ್ಟು ಪೂರ್ತಿಯಾಗಿ ಬದಲಾದರೆ ಯೆಹೋವ ದೇವರು ಅವನನ್ನ ಕ್ಷಮಿಸ್ತಾನೆ. (ಲೂಕ 15:17-24) ಅವನು ಎಷ್ಟೇ ದೊಡ್ಡ ತಪ್ಪು ಮಾಡಿದ್ರೂ ಅವನನ್ನ ಮನ್ನಿಸುತ್ತಾನೆ.—2 ಪೂರ್ವ. 33:9, 12, 13; 1 ತಿಮೊ. 1:15.

7. ನಾವು ಒಬ್ಬರನ್ನ ಕ್ಷಮಿಸಿದ್ದೀವಿ ಅಂದ್ರೆ ಅದರ ಅರ್ಥ ಏನು?

7 ಪಾಪ ಮಾಡಿದ ವ್ಯಕ್ತಿನ ಯೆಹೋವ ಕ್ಷಮಿಸ್ತಾನಾ, ಇಲ್ವಾ ಅಂತ ನಾವು ಯೋಚನೆ ಮಾಡ್ತಾ ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ! ಅದು ಯೆಹೋವನ ಕೈಯಲ್ಲಿದೆ. ಆದ್ರೆ ಯಾರಾದ್ರು ನಮಗೆ ನೋವು ಮಾಡಿದಾಗ ಅವರನ್ನ ಕ್ಷಮಿಸಬೇಕಾ ಬೇಡ್ವಾ ಅನ್ನೋದು ನಮ್ಮ ಕೈಲಿರುತ್ತೆ. ಅವರು ಒಂದುವೇಳೆ ನಮ್ಮ ಹತ್ರ ಕ್ಷಮೆ ಕೇಳಿರಬಹುದು ಅಥವಾ ಕೇಳದೆ ಇರಬಹುದು. ಆದ್ರೂ ಅವರನ್ನ ಮನಸಾರೆ ಕ್ಷಮಿಸ್ತೀರಾ? ಅಥವಾ ಕೋಪನ ಮನಸ್ಸಲ್ಲಿ ಇಟ್ಟುಕೊಂಡಿರುತ್ತೀರಾ? ಅವರಿಂದ ನಿಮಗೆ ತುಂಬ ನೋವಾಗಿದ್ರೆ ಅವರನ್ನ ಕ್ಷಮಿಸೋಕೆ ಸ್ವಲ್ಪ ಸಮಯ ಹಿಡಿಯುತ್ತೆ ಮತ್ತು ತುಂಬ ಪ್ರಯತ್ನ ಮಾಡಬೇಕಾಗುತ್ತೆ ಅನ್ನೋದು ಒಪ್ಪಿಕೊಳ್ಳಬೇಕಾದ ವಿಷಯ. ಸೆಪ್ಟೆಂಬರ್‌ 15, 1994ರ ಕಾವಲಿನಬುರುಜುವನ್ನ ಓದಿದ್ರೆ ಒಬ್ಬ ವ್ಯಕ್ತಿಯನ್ನ ಕ್ಷಮಿಸುತ್ತಿದ್ದೀರ ಅಂದ್ರೆ ಅದರ ಅರ್ಥ ಅವನು ಮಾಡಿದ್ದು ಸರಿ ಅಂತ ಒಪ್ಪಿಕೊಂಡಿದ್ದೀರಿ ಅಂತಲ್ಲ ಅಂತ ಗೊತ್ತಾಗುತ್ತೆ. ಅದರಲ್ಲಿ ಹೀಗಿದೆ: “ನೀವು ಒಬ್ಬ ಪಾಪಿಯನ್ನು ಕ್ಷಮಿಸುವಾಗ, ನೀವು ಪಾಪವನ್ನು ಮನ್ನಿಸುತ್ತಿದ್ದೀರಿ ಎಂಬುದನ್ನು ಇದು ಅರ್ಥೈಸುವುದಿಲ್ಲ ಎಂಬ ವಿಷಯವನ್ನು ಸಹ ಗ್ರಹಿಸಿರಿ. ಕ್ರೈಸ್ತನಿಗೆ, ಕ್ಷಮಿಸುವುದೆಂದರೆ ವಿಷಯವನ್ನು ಭರವಸೆಯಿಂದ ಯೆಹೋವನ ಕೈಗಳಲ್ಲಿ ಬಿಡುವುದಾಗಿದೆ. ಇಡೀ ವಿಶ್ವದ ನೀತಿವಂತ ನ್ಯಾಯಾಧೀಶನು ಆತನಾಗಿದ್ದಾನೆ, ಮತ್ತು ಸರಿಯಾದ ಸಮಯದಲ್ಲಿ ಆತನು ನ್ಯಾಯವನ್ನು ನಿರ್ವಹಿಸುವನು.” ನಮ್ಮನ್ನ ನೋಯಿಸಿದವರನ್ನ ಕ್ಷಮಿಸಿ ಎಲ್ಲವನ್ನೂ ತನ್ನ ಕೈಗೆ ಬಿಟ್ಟುಬಿಡಬೇಕು ಅಂತ ಯೆಹೋವ ಯಾಕೆ ಬಯಸ್ತಾನೆ?

ನಾವು ಬೇರೆಯವರನ್ನ ಯಾಕೆ ಕ್ಷಮಿಸಬೇಕು?

8. ಯೆಹೋವನ ಕರುಣೆಗೆ ನಾವು ಋಣಿಗಳಾಗಿದ್ರೆ ಏನು ಮಾಡ್ತೀವಿ?

8 ಯೆಹೋವನ ಕರುಣೆಗೆ ಕೃತಜ್ಞತೆ ತೋರಿಸೋಕೆ. ಯಜಮಾನನ ಹತ್ರ ತುಂಬ ಸಾಲ ಮಾಡಿದ್ದ ಒಬ್ಬ ಸೇವಕನ ಬಗ್ಗೆ ಯೇಸು ಒಂದು ಕಥೆ ಹೇಳಿದನು. ಆ ಸೇವಕನಿಗೆ ಸಾಲ ತೀರಿಸೋಕೆ ಆಗದೇ ಇದ್ದಾಗ ಆ ಯಜಮಾನ ಕರುಣೆ ತೋರಿಸಿ ಅವನ ಸಾಲವನ್ನ ಮನ್ನಾ ಮಾಡಿಬಿಟ್ಟ. ಆದ್ರೆ ಈ ಸೇವಕ ತನ್ನ ಹತ್ರ ಸ್ವಲ್ಪ ಸಾಲ ತಗೊಂಡಿದ್ದ ಇನ್ನೊಬ್ಬ ವ್ಯಕ್ತಿಗೆ ಕರುಣೆ ತೋರಿಸಲಿಲ್ಲ. ಅವನ ಸಾಲವನ್ನ ಮನ್ನಾ ಮಾಡಲಿಲ್ಲ. (ಮತ್ತಾ. 18:23-35) ಈ ಕಥೆಯಿಂದ ಯೇಸು ನಮಗೆ ಕಲಿಸಿದ ಒಂದು ಮುಖ್ಯ ವಿಷಯ ಏನಂದ್ರೆ, ಯೆಹೋವ ದೇವರು ಕರುಣೆ ತೋರಿಸಿದ ಆ ಯಜಮಾನನ ತರ ಇದ್ದಾನೆ. ನಾವು ಯೆಹೋವನ ಕರುಣೆಗೆ ಋಣಿಗಳಾಗಿದ್ರೆ ಬೇರೆಯವರನ್ನ ಕ್ಷಮಿಸ್ತೀವಿ. (ಕೀರ್ತ. 103:9) ತುಂಬ ವರ್ಷಗಳ ಹಿಂದೆ ಬಂದ ಒಂದು ಕಾವಲಿನಬುರುಜುವಿನಲ್ಲಿ ಹೀಗಿದೆ: “ನಾವು ನಮ್ಮ ಸಹೋದರ ಸಹೋದರಿಯರನ್ನ ಎಷ್ಟು ಸಲ ಕ್ಷಮಿಸಿದರೂ ಯೆಹೋವ ದೇವರು ನಮ್ಮನ್ನ ಯೇಸು ಕ್ರಿಸ್ತನ ಬಿಡುಗಡೆ ಬೆಲೆಯ ಆಧಾರದ ಮೇಲೆ ಕ್ಷಮಿಸಿರೋದಕ್ಕೆ ಸಮ ಆಗಲ್ಲ.”

9. ಯೆಹೋವ ಯಾರಿಗೆ ಕರುಣೆ ತೋರಿಸ್ತಾನೆ? (ಮತ್ತಾಯ 6:14, 15)

9 ಕ್ಷಮಿಸುವವರಿಗೆ ಕ್ಷಮೆ ಸಿಗುತ್ತೆ. ಕರುಣೆ ತೋರಿಸುವವರಿಗೆ ಯೆಹೋವ ಕರುಣೆ ತೋರಿಸ್ತಾನೆ. (ಮತ್ತಾ. 5:7; ಯಾಕೋ. 2:13) ಪ್ರಾರ್ಥನೆ ಮಾಡೋದನ್ನ ಹೇಳಿಕೊಡುವಾಗ ತನ್ನ ಶಿಷ್ಯರಿಗೆ ಯೇಸು ಇದನ್ನೇ ಹೇಳಿ ಕೊಟ್ಟನು. (ಮತ್ತಾಯ 6:14, 15 ಓದಿ.) ಯೆಹೋವ ಯೋಬನಿಗೂ ಇದೇ ಪಾಠನ ಕಲಿಸಿದನು. ಎಲೀಫಜ, ಬಿಲ್ದದ ಮತ್ತು ಚೋಫರ ಒರಟಾಗಿ ಮಾತಾಡಿದ್ರಿಂದ ಯೋಬನಿಗೆ ತುಂಬ ನೋವಾಯ್ತು. ಆದ್ರೂ ಅವರಿಗೋಸ್ಕರ ಪ್ರಾರ್ಥನೆ ಮಾಡು ಅಂತ ಯೆಹೋವ ಯೋಬನಿಗೆ ಹೇಳಿದನು. ಅವನು ಹಾಗೆ ಮಾಡಿದ್ದಕ್ಕೆ ಯೆಹೋವ ಅವನನ್ನ ಆಶೀರ್ವದಿಸಿದನು.—ಯೋಬ 42:8-10.

10. ದ್ವೇಷ ಬೆಳೆಸಿಕೊಳ್ಳೋದು ಯಾಕೆ ಅಪಾಯ? (ಎಫೆಸ 4:31, 32)

10 ದ್ವೇಷ ಅನ್ನೋದು ಮಡಿಲಲ್ಲಿರೋ ಬೆಂಕಿ ತರ. ಹಾಗಾಗಿ ಅದನ್ನ ಬಿಟ್ಟುಬಿಡಬೇಕು. ನಾವು ಸಂತೋಷ ನೆಮ್ಮದಿಯಿಂದ ಇರಬೇಕು ಅಂತ ಯೆಹೋವ ಇಷ್ಟಪಡ್ತಾನೆ. (ಎಫೆಸ 4:31, 32 ಓದಿ.) “ಕೋಪವನ್ನ ಬಿಟ್ಟುಬಿಡು, ಕ್ರೋಧವನ್ನ ತೊರೆದುಬಿಡು” ಅಂತ ಯೆಹೋವ ನಮಗೆ ಹೇಳ್ತಾನೆ. (ಕೀರ್ತ. 37:8) ಇದು ಒಳ್ಳೇ ಸಲಹೆ. ಯಾಕಂದ್ರೆ ಬೇರೆಯವರ ಮೇಲೆ ನಾವು ದ್ವೇಷ ಬೆಳೆಸಿಕೊಂಡ್ರೆ ನಮ್ಮ ಮನಸ್ಸು ಮತ್ತು ಆರೋಗ್ಯನ ಹಾಳು ಮಾಡಿಕೊಳ್ತೀವಿ. (ಜ್ಞಾನೋ. 14:30) ಒಬ್ಬರ ಮೇಲೆ ದ್ವೇಷ ಬೆಳೆಸಿಕೊಂಡ್ರೆ ಅದು ಅವರಿಗಲ್ಲ ನಮಗೇ ಹಾನಿ ಮಾಡುತ್ತೆ. ಅದು ಹೇಗಿರುತ್ತೆ ಅಂದ್ರೆ ನಾವು ವಿಷ ಕುಡಿದು ಇನ್ನೊಬ್ಬ ವ್ಯಕ್ತಿ ಸಾಯೋಕೆ ಕಾಯೋ ತರ ಇರುತ್ತೆ. ಆದ್ರೆ ನಾವು ಬೇರೆಯವರನ್ನ ಕ್ಷಮಿಸಿದ್ರೆ ನಮಗೆ ನಾವೇ ಒಳ್ಳೇದು ಮಾಡಿಕೊಂಡ ಹಾಗಾಗುತ್ತೆ. (ಜ್ಞಾನೋ. 11:17) ನಾವು ನೆಮ್ಮದಿ, ಶಾಂತಿಯಿಂದ ಇರುತ್ತೀವಿ ಮತ್ತು ಯೆಹೋವನ ಸೇವೆನೂ ಸಂತೋಷದಿಂದ ಮಾಡ್ತೀವಿ.

11. ಸೇಡು ತೀರಿಸೋ ಬಗ್ಗೆ ಬೈಬಲ್‌ ಏನು ಹೇಳುತ್ತೆ? (ರೋಮನ್ನರಿಗೆ 12:19-21)

11 ಸೇಡು ತೀರಿಸೋದು ಯೆಹೋವನ ಕೆಲಸ. ಯಾರಾದ್ರೂ ನಮ್ಮ ಮನಸ್ಸನ್ನ ನೋಯಿಸಿದ್ರೆ ಅವರನ್ನ ಶಿಕ್ಷಿಸೋ ಅಧಿಕಾರನ ಯೆಹೋವ ನಮಗೆ ಕೊಟ್ಟಿಲ್ಲ. (ರೋಮನ್ನರಿಗೆ 12:19-21 ಓದಿ.) ನಾವು ಅಪರಿಪೂರ್ಣರು. ಹಾಗಾಗಿ ನಾವು ದೇವರ ತರ ಸರಿಯಾಗಿ ತೀರ್ಪು ಮಾಡೋಕೆ ಆಗಲ್ಲ. (ಇಬ್ರಿ. 4:13) ಕೆಲವೊಂದು ಸಲ ವಿಷಯಗಳನ್ನ ಮನಸ್ಸಿಗೆ ತಗೊಂಡಾಗ ತುಂಬ ದುಃಖ ಆಗುತ್ತೆ ಅಥವಾ ಕೋಪ ಬಂದುಬಿಡುತ್ತೆ. ಆಗ ಸರಿಯಾಗಿ ಯೋಚನೆನೂ ಮಾಡೋಕಾಗಲ್ಲ. ಅದಕ್ಕೆ “ಮನುಷ್ಯ ಕೋಪ ಮಾಡ್ಕೊಂಡ್ರೆ ದೇವರ ದೃಷ್ಟಿಯಲ್ಲಿ ಸರಿಯಾಗಿ ಇರೋದನ್ನ ಮಾಡಕ್ಕಾಗಲ್ಲ” ಅಂತ ಯೆಹೋವ ಯಾಕೋಬನ ಮೂಲಕ ಬೈಬಲಲ್ಲಿ ಬರೆಸಿದ್ದಾನೆ. (ಯಾಕೋ. 1:20) ನಮಗೆ ಅನ್ಯಾಯ ಆದಾಗ ಎಲ್ಲವನ್ನ ಯೆಹೋವನ ಕೈಗೆ ಬಿಟ್ಟುಬಿಟ್ರೆ, ಇವತ್ತಲ್ಲ ನಾಳೆ ನಮಗೆ ನ್ಯಾಯ ಸಿಕ್ಕೇ ಸಿಗುತ್ತೆ.

ಕೋಪ ಮತ್ತು ದ್ವೇಷನ ಮನಸ್ಸಲ್ಲಿ ಇಟ್ಟುಕೊಳ್ಳದೆ ಎಲ್ಲವನ್ನ ಯೆಹೋವನಿಗೆ ಬಿಟ್ಟುಬಿಡಿ. ಪಾಪದಿಂದ ಆಗಿರುವ ಎಲ್ಲಾ ಸಮಸ್ಯೆಗಳನ್ನೂ ಆತನು ಸರಿ ಮಾಡ್ತಾನೆ (ಪ್ಯಾರ 12 ನೋಡಿ)

12. ಯೆಹೋವ ನ್ಯಾಯ ಕೊಡಿಸುತ್ತಾನೆ ಅನ್ನೋ ನಂಬಿಕೆ ನಮಗಿದೆ ಅಂತ ಹೇಗೆ ತೋರಿಸಿಕೊಡಬಹುದು?

12 ಯೆಹೋವ ನ್ಯಾಯ ಕೊಡಿಸುತ್ತಾನೆ ಅನ್ನೋ ನಂಬಿಕೆ ಇದೆ ಅಂತ ತೋರಿಸ್ತೀವಿ. ಯೆಹೋವ ಯಾವಾಗಲೂ ಸರಿಯಾಗೇ ತೀರ್ಪು ಮಾಡ್ತಾನೆ. ಹಾಗಾಗಿ ನಮಗೆ ಬಂದಿರೋ ಪಾಪದಿಂದ ಆದ ಎಲ್ಲಾ ತೊಂದರೆಗಳನ್ನ, ಅನಾಹುತಗಳನ್ನ ಪೂರ್ತಿಯಾಗಿ ಸರಿಮಾಡ್ತಾನೆ ಅನ್ನೋ ನಂಬಿಕೆ ನಮಗಿದ್ರೆ ಎಲ್ಲವನ್ನ ಆತನ ಕೈಯಲ್ಲಿ ಬಿಟ್ಟುಬಿಡ್ತೀವಿ. ದೇವರು ಮಾತುಕೊಟ್ಟಿರೋ ಹೊಸಲೋಕದಲ್ಲಿ ನಮ್ಮ ಮನಸ್ಸಿಗೆ ಆಗಿರೋ ಗಾಯಗಳು ಪೂರ್ತಿಯಾಗಿ ವಾಸಿಯಾಗುತ್ತೆ. “ಹಳೇ ಸಂಗತಿಗಳು ನೆನಪಿಗೆ ಬರಲ್ಲ, ಅವುಗಳನ್ನ ಯಾರೂ ಕನಸುಮನಸ್ಸಲ್ಲೂ ಜ್ಞಾಪಿಸಿಕೊಳ್ಳಲ್ಲ.” (ಯೆಶಾ. 65:17) ಆದ್ರೆ ಯಾರಾದ್ರೂ ನಮ್ಮ ಮನಸ್ಸಿಗೆ ವಾಸಿಯಾಗದೆ ಇರುವಷ್ಟು ದೊಡ್ಡ ಗಾಯ ಮಾಡಿಬಿಟ್ರೆ ಕೋಪವನ್ನ ಮನಸ್ಸಲ್ಲಿ ಇಟ್ಟುಕೊಳ್ಳದೆ, ಸೇಡು ತೀರಿಸಿಕೊಳ್ಳದೆ ಅವರನ್ನ ಕ್ಷಮಿಸೋಕೆ ಆಗುತ್ತಾ? ಆ ರೀತಿ ಕ್ಷಮಿಸಿದವರ ಬಗ್ಗೆ ಈಗ ನಾವು ನೊಡೋಣ.

ಕ್ಷಮಿಸೋದ್ರಿಂದ ಸಿಗೋ ಆಶೀರ್ವಾದಗಳು

13-14. ಟೋನಿ ಮತ್ತು ಜೋಸೆಫ್‌ನ ಅನುಭವದಿಂದ ಕ್ಷಮಿಸೋದರ ಬಗ್ಗೆ ಏನು ಕಲಿತ್ರಿ?

13 ಕೆಲವರು ಮಾಡಿದ ತಪ್ಪಿಂದ ನಮ್ಮ ಸಹೋದರ ಸಹೋದರಿಯರು ತುಂಬ ಕಷ್ಟಗಳನ್ನ ಅನುಭವಿಸಿದ್ದಾರೆ. ಆದ್ರೂ ಅಂಥವರನ್ನ ಅವರು ಕ್ಷಮಿಸಿದ್ದಾರೆ. ಇದ್ರಿಂದ ಅವರಿಗೆ ಏನೆಲ್ಲಾ ಆಶೀರ್ವಾದಗಳು ಸಿಕ್ಕಿದೆ?

14 ಫಿಲಿಪ್ಪೀನ್ಸ್‌ನಲ್ಲಿರೋ ಸಹೋದರ ಟೋನಿಯ * ಉದಾಹರಣೆ ನೋಡಿ. ಅವನು ಬೈಬಲ್‌ನ ಕಲಿಯೋಕೂ ಎಷ್ಟೋ ವರ್ಷಗಳ ಮುಂಚೆ ಜೋಸೆಫ್‌ ಅನ್ನೋ ವ್ಯಕ್ತಿ ಟೋನಿಯ ಅಣ್ಣನನ್ನ ಕೊಲೆ ಮಾಡಿದ್ದ. ಟೋನಿ ತುಂಬ ಕೋಪಿಷ್ಠನಾಗಿದ್ದ ಮತ್ತು ಜೋಸೆಫ್‌ ಮೇಲೆ ಸೇಡು ತೀರಿಸಿಕೊಳ್ಳಬೇಕು ಅಂತ ಯೋಚನೆ ಮಾಡ್ತಿದ್ದ. ಜೋಸೆಫ್‌ ಕೊಲೆ ಮಾಡಿದ ಅಪರಾಧಕ್ಕೆ ಜೈಲಿಗೆ ಹೋದ. ಆದ್ರೆ ಅವನು ಜೈಲಿಂದ ಹೊರಗೆ ಬಂದಮೇಲೆ ಟೋನಿ, ‘ನಾನು ಜೋಸೆಫ್‌ನ ಸುಮ್ನೆ ಬಿಡಲ್ಲ, ಅವನನ್ನ ಕೊಂದು ಹಾಕ್ತೀನಿ’ ಅಂತ ಶಪಥ ಮಾಡಿದ್ದ. ಅದಕ್ಕಾಗಿ ಒಂದು ಗನ್‌ ತಗೊಂಡಿದ್ದ. ಆದ್ರೆ ಸ್ವಲ್ಪ ಸಮಯ ಆದಮೇಲೆ ಟೋನಿ ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯೋಕೆ ಶುರುಮಾಡಿದ. “ನಾನು ಬೈಬಲ್‌ನ ಕಲಿತಾ-ಕಲಿತಾ ನನ್ನ ಕೋಪವನ್ನೆಲ್ಲಾ ಬಿಟ್ಟುಬಿಡಬೇಕು, ನಾನು ಬದಲಾಗಬೇಕು ಅನ್ನೋದನ್ನ ಅರ್ಥಮಾಡಿಕೊಂಡೆ” ಅಂತ ಅವನು ಹೇಳ್ತಾನೆ. ಸ್ವಲ್ಪ ದಿನ ಆದ್ಮೇಲೆ ಟೋನಿ ದೀಕ್ಷಾಸ್ನಾನ ತಗೊಂಡ. ಆಮೇಲೆ ಅವನು ಸಭೆಯಲ್ಲಿ ಹಿರಿಯನಾದ. ಒಂದು ದಿನ ಅವನು, ತನ್ನ ಕಡುವೈರಿಯಾಗಿದ್ದ ಜೋಸೆಫ್‌ ಯೆಹೋವನ ಸಾಕ್ಷಿಯಾಗಿರೋದನ್ನ ನೋಡಿದ. ಆಗ ಅವನ ಕಣ್ಣನ್ನ ಅವನಿಗೇ ನಂಬೋಕಾಗಲಿಲ್ಲ. ಅವರಿಬ್ರೂ ಭೇಟಿಯಾದಾಗ ಟೋನಿ ಅವನನ್ನ ತಬ್ಬಿಕೊಂಡು ಅವನನ್ನ ಕ್ಷಮಿಸಿದ್ದೀನಿ ಅಂತ ಹೇಳಿದ. ಒಬ್ಬರನ್ನ ಕ್ಷಮಿಸುವಾಗ ಮನಸ್ಸಲ್ಲಿರೋ ಭಾರ ಎಲ್ಲ ಕಡಿಮೆ ಆಗುತ್ತೆ. ಮನಸ್ಸಿಗೆ ನೆಮ್ಮದಿ, ಸಂತೋಷ ಸಿಗುತ್ತೆ. ಆ ಭಾವನೆಗಳನ್ನ ಮಾತಲ್ಲಿ ಹೇಳೋಕೆ ಆಗಲ್ಲ ಅಂತ ಟೋನಿ ಹೇಳ್ತಾನೆ. ಈ ರೀತಿ ಕ್ಷಮಿಸಿದ್ರಿಂದ ಟೋನಿಗೆ ಯೆಹೋವನ ಆಶೀರ್ವಾದ ಸಿಕ್ತು.

ಕೋಪ ಮತ್ತು ದ್ವೇಷನ ಬಿಟ್ಟುಬಿಡೋಕೆ ಆಗುತ್ತೆ ಅಂತ ಸಹೋದರ ಪೀಟರ್‌ ಮತ್ತು ಸೂ ಅವರಿಂದ ಕಲಿತೀವಿ (ಪ್ಯಾರ 15-16 ನೋಡಿ)

15-16. ಪೀಟರ್‌ ಮತ್ತು ಸೂ ಅನುಭವದಿಂದ ಕ್ಷಮಿಸೋದ್ರ ಬಗ್ಗೆ ನೀವೇನು ಕಲಿತ್ರಿ?

15 ಇಸವಿ 1985ರಲ್ಲಿ ಪೀಟರ್‌ ಮತ್ತು ಸೂ ಕೂಟಕ್ಕೆ ಹೋಗಿದ್ದಾಗ ಬಾಂಬ್‌ ಸ್ಫೋಟ ಆಯ್ತು. ಅದನ್ನ ಒಬ್ಬ ದುಷ್ಕರ್ಮಿ ರಾಜ್ಯಸಭಾಗೃಹದಲ್ಲಿ ಇಟ್ಟಿದ್ದ. ಬಾಂಬ್‌ ಸ್ಫೋಟ ಆಗಿದ್ರಿಂದ ಸಹೋದರಿ ಸೂಗೆ ತುಂಬ ಗಾಯಗಳಾಯ್ತು. ಅವರು ತಮ್ಮ ದೃಷ್ಟಿ ಕಳಕೊಂಡ್ರು, ಕಿವಿ ಕೇಳಿಸದ ಹಾಗಾಯ್ತು ಮತ್ತು ವಾಸನೆ ಕಂಡುಹಿಡಿಯೋ ಸಾಮರ್ಥ್ಯನೂ ಕಳಕೊಂಡ್ರು. ಪೀಟರ್‌ ಮತ್ತು ಸೂಗೆ ಆ ವ್ಯಕ್ತಿ ಮೇಲೆ ತುಂಬ ಕೋಪ ಇತ್ತು. ‘ಅವನಿಗೆ ಸ್ವಲ್ಪನೂ ಮನುಷ್ಯತ್ವನೇ ಇಲ್ವಾ?’ ಅಂತ ಅಂದುಕೊಂಡ್ರು. ತುಂಬ ವರ್ಷಗಳಾದ ಮೇಲೆ ಆ ದುಷ್ಕರ್ಮಿನ ಪೊಲೀಸರು ಅರೆಸ್ಟ್‌ ಮಾಡಿದ್ರು ಮತ್ತು ಅವನಿಗೆ ಜೀವಾವಧಿ ಶಿಕ್ಷೆನೂ ಸಿಕ್ತು. ಒಂದು ಸಲ ಪೀಟರ್‌ ಮತ್ತು ಸೂನ ‘ನೀವು ಆ ವ್ಯಕ್ತಿನ ಕ್ಷಮಿಸಿದ್ರಾ’ ಅಂತ ಕೇಳಿದಾಗ ಅವರು, “ದ್ವೇಷನ ನಾವು ಮನಸ್ಸಲ್ಲೇ ಇಟ್ಟುಕೊಂಡ್ರೆ ನಮ್ಮ ನೆಮ್ಮದಿ, ಸಂತೋಷ ಮತ್ತು ನಮ್ಮ ಆರೋಗ್ಯ ಹಾಳಾಗುತ್ತೆ ಅಂತ ಯೆಹೋವ ಹೇಳಿಕೊಟ್ಟಿದ್ದಾನೆ. ಹಾಗಾಗಿ ಈ ಘಟನೆ ನಡೆದ ತಕ್ಷಣ ನಾವು ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿದ್ವಿ. ಆ ವ್ಯಕ್ತಿನ ದ್ವೇಷಿಸದೇ ಇರೋಕೆ ಮತ್ತು ಮನಸಾರೆ ಕ್ಷಮಿಸೋಕೆ ನಮಗೆ ಒಳ್ಳೇ ಮನಸ್ಸು ಕೊಡಪ್ಪಾ ಅಂತ ಬೇಡಿಕೊಂಡ್ವಿ” ಅಂತ ಅವರು ಹೇಳಿದ್ರು.

16 ಈ ದಂಪತಿಗಳಿಗೆ ಆ ವ್ಯಕ್ತಿನ ಮನಸಾರೆ ಕ್ಷಮಿಸೋಕೆ ಸ್ವಲ್ಪ ಕಷ್ಟ ಆಗ್ತಿತ್ತು. ಯಾಕೆ ಅಂತ ಅವರ ಮಾತಲ್ಲೇ ಕೇಳಿ. ಅವರು ಹೇಳಿದ್ದು, “ಆ ಅನಾಹುತದಿಂದ ಸೂ ಈಗಲೂ ತುಂಬಾ ನೋವನ್ನ ಅನುಭವಿಸ್ತಿದ್ದಾಳೆ. ಅದನ್ನ ನೋಡಿದಾಗೆಲ್ಲಾ ನನಗೆ ತುಂಬ ಕೋಪ ಬರುತ್ತೆ. ಆದ್ರೆ ನಾವು ಆ ವಿಷಯನ ಅಲ್ಲಿಗೇ ಬಿಟ್ಟುಬಿಡ್ತೀವಿ ಆಗ ಕೋಪ ಹೋಗಿಬಿಡುತ್ತೆ. ಒಂದಲ್ಲಾ ಒಂದಿನ ಆ ವ್ಯಕ್ತಿ ನಮ್ಮ ಸಹೋದರನಾದ್ರೆ ನಾವು ಅವನನ್ನ ಖಂಡಿತ ಪ್ರೀತಿಸ್ತೀವಿ. ನಮ್ಮ ಜೀವನದಲ್ಲಿ ನಡೆದ ಈ ಘಟನೆಯಿಂದ ನಾವು ಒಂದು ಪಾಠ ಕಲಿತ್ವಿ. ಅದೇನಂದ್ರೆ ಬೈಬಲ್‌ ತತ್ವಗಳನ್ನ ಪಾಲಿಸಿದ್ರೆ ನಾವು ದ್ವೇಷ ಅಥವಾ ಸೇಡನ್ನ ಇಟ್ಟುಕೊಳ್ಳಲ್ಲ. ಜೀವನದಲ್ಲಿ ಸಂತೋಷವಾಗಿ ನೆಮ್ಮದಿಯಿಂದ ಇರುತ್ತೀವಿ. ನಮಗಾಗಿರೋ ತೊಂದರೆಗಳನ್ನೆಲ್ಲಾ ಯೆಹೋವ ಆದಷ್ಟು ಬೇಗ ಸರಿಮಾಡ್ತಾರೆ ಅಂತ ನೆನಸಿಕೊಂಡಾಗೆಲ್ಲಾ ನಮಗೆ ಸಮಾಧಾನ ಆಗುತ್ತೆ.”

17. ಮಯೂರಿಯ ಉದಾಹರಣೆಯಿಂದ ಕ್ಷಮಿಸೋದ್ರ ಬಗ್ಗೆ ಏನು ಕಲಿತ್ರಿ?

17 ಮಯೂರಿ ಅನ್ನೋ ಸಹೋದರಿ ಬೈಬಲ್‌ ಕಲಿಯುವಾಗ ಈಗಾಗಲೇ ಮದುವೆಯಾಗಿ ಇಬ್ಬರು ಚಿಕ್ಕ ಮಕ್ಕಳಿದ್ರು. ಆದ್ರೆ ಅವರ ಗಂಡನಿಗೆ ಬೈಬಲ್‌ ಕಲಿಯೋಕೆ ಇಷ್ಟ ಇರಲಿಲ್ಲ. ಸ್ವಲ್ಪ ಸಮಯ ಆದ್ಮೇಲೆ ಅವರ ಗಂಡ ವ್ಯಭಿಚಾರ ಮಾಡಿ ಮನೆಬಿಟ್ಟುಹೋದ್ರು. “ನಮ್ಮ ಮನೆಯವರು ನನ್ನನ್ನ, ನನ್ನ ಮಕ್ಕಳನ್ನ ಬಿಟ್ಟು ಹೋದಾಗ ನನಗೆ ತುಂಬ ದುಃಖ ಆಯ್ತು. ನಾವು ತುಂಬ ಪ್ರೀತಿಸೋ ಯಾರಾದ್ರೂ ನಮಗೆ ದ್ರೋಹ ಮಾಡಿ ಬಿಟ್ಟುಹೋದ್ರೆ ನಮಗೆ ಆಕಾಶನೇ ತಲೆ ಮೇಲೆ ಬಿದ್ದ ಹಾಗೆ ಆಗುತ್ತೆ. ನಂಬಿಕೆನೇ ಕಳಕೊಂಡುಬಿಡ್ತೀವಿ, ತುಂಬ ದುಃಖ ಆಗುತ್ತೆ, ಅವರು ಹೀಗೆ ಆಗೋಕೆ ನಾವೇ ಕಾರಣನಾ ಅಂತ ಅನಿಸಿಬಿಡುತ್ತೆ, ತುಂಬ ಕೋಪ ಬರುತ್ತೆ. ನನಗೂ ಹೀಗೆಲ್ಲಾ ಅನಿಸ್ತು. ನಾವಿಬ್ರೂ ಈಗ ಗಂಡ ಹೆಂಡ್ತಿಯಾಗಿಲ್ಲದಿದ್ರೂ ಅವರು ನನಗೆ ದ್ರೋಹ ಮಾಡಿಬಿಟ್ರಲ್ಲಾ ಅನ್ನೋ ನೋವು ನನಗೆ ಈಗಲೂ ಕಾಡುತ್ತೆ. ನಾನು ನೋವಲ್ಲಿ ಎಷ್ಟು ಮುಳುಗಿಹೋಗಿದ್ದೆ ಅಂದ್ರೆ ಅದ್ರಿಂದ ಹೊರಗೆ ಬರೋಕೆ ತಿಂಗಳುಗಳೇ ಹಿಡಿತು. ಇದ್ರಿಂದ ಯೆಹೋವನ ಜೊತೆ ಮತ್ತು ಬೇರೆಯವ್ರ ಜೊತೆ ನನಗಿದ್ದ ಫ್ರೆಂಡ್‌ಶಿಪ್‌ ಕೂಡ ಹಾಳಾಯ್ತು” ಅಂತ ಮಯೂರಿ ಹೇಳ್ತಾಳೆ. ದ್ರೋಹ ಮಾಡಿದ ತನ್ನ ಗಂಡನಿಗೆ ಕೆಟ್ಟದಾಗಬೇಕು ಅಂತ ಈಗ ಅವಳು ಯೋಚನೆ ಮಾಡಲ್ಲ ಮತ್ತು ಅವರ ಮೇಲೆ ಇನ್ನೂ ಕೋಪ ಇಟ್ಟುಕೊಂಡಿಲ್ಲ. ಒಂದಲ್ಲಾ ಒಂದಿನ ತನ್ನ ಗಂಡನೂ ಯೆಹೋವನ ಹತ್ರ ಬರಬಹುದು ಅಂತ ನಿರೀಕ್ಷೆ ಇಟ್ಟುಕೊಂಡಿದ್ದಾಳೆ. ಈ ರೀತಿ ಹಿಂದೆ ನಡೆದಿದ್ದನ್ನೆಲ್ಲ ಯೋಚನೆ ಮಾಡೋದನ್ನ ಬಿಟ್ಟು ಮುಂದೆ ಆಗೋದ್ರ ಬಗ್ಗೆ ಗಮನ ಕೊಟ್ಟಿದ್ರಿಂದ ಮಯೂರಿ ತನ್ನ ಮಕ್ಕಳನ್ನ ಯೆಹೋವನಿಗೆ ಇಷ್ಟ ಆಗೋ ತರ ಬೆಳೆಸಿದ್ದಾಳೆ. ಈಗ ಅವಳು ತನ್ನ ಮಕ್ಕಳು ಮತ್ತು ಅವರ ಕುಟುಂಬದವರ ಜೊತೆ ಯೆಹೋವನ ಸೇವೆನ ಸಂತೋಷದಿಂದ ಮಾಡ್ತಿದ್ದಾಳೆ.

ಯೆಹೋವನ ತೀರ್ಪು ನ್ಯಾಯವಾಗಿ ಇರುತ್ತೆ

18. ಯೆಹೋವನ ತೀರ್ಪಿನ ಮೇಲೆ ನಾವು ನಂಬಿಕೆ ಇಡಬಹುದಾ?

18 ನಾವು ಯಾರಿಗೂ ತೀರ್ಪು ಕೊಡಬೇಕಾದ ಅವಶ್ಯಕತೆ ಇಲ್ಲ ಅಂತ ತಿಳಿದುಕೊಂಡಿರೋದು ನಮಗೆ ಎಷ್ಟು ನೆಮ್ಮದಿ ಕೊಡುತ್ತಲ್ವಾ? ಯೆಹೋವನೇ ಎಲ್ರಿಗಿಂತ ದೊಡ್ಡ ನ್ಯಾಯಾಧೀಶ, ಆತನೇ ಈ ಕೆಲಸ ಮಾಡ್ತಾನೆ. (ರೋಮ. 14:10-12) ಆತನು ಯಾವುದು ಸರಿ ಯಾವುದು ತಪ್ಪು ಅಂತ ತಾನು ಕೊಟ್ಟಿರೋ ನಿಯಮಗಳ ಆಧಾರದ ಮೇಲೆನೇ ತೀರ್ಪು ಕೊಡ್ತಾನೆ. (ಆದಿ. 18:25; 1 ಅರ. 8:32) ಹಾಗಾಗಿ ಆತನು ಯಾವತ್ತೂ ತಪ್ಪಾಗಿ ತೀರ್ಪು ಕೊಡಲ್ಲ ಅಂತ ನಾವು ಪೂರ್ತಿಯಾಗಿ ನಂಬಬಹುದು.

19. ಯೆಹೋವ ಮುಂದೆ ಏನು ಮಾಡ್ತಾನೆ?

19 ಅಪರಿಪೂರ್ಣತೆ ಮತ್ತು ಪಾಪದಿಂದ ಬಂದಿರೋ ಎಲ್ಲಾ ಸಮಸ್ಯೆಗಳನ್ನ ಯೆಹೋವ ದೇವರು ತೆಗೆದುಹಾಕೋ ಕಾಲಕ್ಕಾಗಿ ನಾವು ಕಾಯ್ತಾ ಇದ್ದೀವಿ. ಆಗ ನಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಆಗಿರೋ ಎಲ್ಲಾ ತರದ ಗಾಯಗಳನ್ನ ಯೆಹೋವ ದೇವರು ವಾಸಿ ಮಾಡ್ತಾನೆ. (ಕೀರ್ತ. 72:12-14; ಪ್ರಕ. 21:3, 4) ಆ ನೋವು ಇನ್ಯಾವತ್ತೂ ನಮ್ಮ ನೆನಪಿಗೆ ಬರಲ್ಲ. ಆ ಸಂತೋಷದ ಕ್ಷಣಗಳಿಗೋಸ್ಕರ ನಾವು ಕಾಯ್ತಾ ಇದ್ದೀವಿ. ಆದ್ರೆ ಈಗ ನಾವು ಸಂತೋಷವಾಗಿ ಇರಬೇಕಂದ್ರೆ ಬೇರೆಯವ್ರನ್ನ ಮನಸಾರೆ ಕ್ಷಮಿಸಬೇಕು. ಯೆಹೋವನು ನಮಗೆ ಆತನ ತರ ಕ್ಷಮಿಸೋ ಸಾಮರ್ಥ್ಯವನ್ನ ಕೊಟ್ಟಿರೋದಕ್ಕೆ ನಾವು ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ!

ಗೀತೆ 149 ವಿಮೋಚನಾ ಮೌಲ್ಯಕ್ಕಾಗಿ ಕೃತಜ್ಞತೆ

^ ಪಶ್ಚಾತ್ತಾಪ ಪಡುವವರನ್ನು ಕ್ಷಮಿಸೋಕೆ ಯೆಹೋವ ತುದಿಗಾಲಲ್ಲಿ ನಿಂತಿರುತ್ತಾನೆ. ನಮ್ಮ ಮನಸ್ಸನ್ನ ಯಾರಾದ್ರೂ ನೋಯಿಸಿದ್ರೆ ನಾವೂ ಯೆಹೋವನ ತರಾನೇ ನಡಕೊಳ್ಳಬೇಕು. ಹಾಗಾದ್ರೆ ನಾವು ಯಾಕೆ ಬೇರೆಯವರನ್ನ ಕ್ಷಮಿಸಬೇಕು? ಯಾವ ತಪ್ಪುಗಳನ್ನ ನಾವು ಕ್ಷಮಿಸಬೇಕು ಮತ್ತು ಯಾವ ತಪ್ಪುಗಳನ್ನ ಹಿರಿಯರ ಹತ್ರ ಹೋಗಿ ಹೇಳಬೇಕು? ಅಷ್ಟೇ ಅಲ್ಲ, ಬೇರೆಯವ್ರನ್ನ ಕ್ಷಮಿಸಿದ್ರೆ ನಮಗೆ ಏನೆಲ್ಲಾ ಒಳ್ಳೇದಾಗುತ್ತೆ ಅಂತ ಈ ಲೇಖನದಲ್ಲಿ ನೊಡೋಣ.

^ ಏಪ್ರಿಲ್‌ 15, 1996ರ ಕಾವಲಿನಬುರುಜುವಿನ “ವಾಚಕರಿಂದ ಪ್ರಶ್ನೆಗಳು” ನೋಡಿ.

^ ಕೆಲವರ ಹೆಸರು ಬದಲಾಗಿದೆ.