ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 30

ನಿರೀಕ್ಷೆ ಕೊಡೋ ಭವಿಷ್ಯವಾಣಿ

ನಿರೀಕ್ಷೆ ಕೊಡೋ ಭವಿಷ್ಯವಾಣಿ

“ನಿನ್ನ ಮತ್ತು ಸ್ತ್ರೀಯ ಮಧ್ಯ, . . . ದ್ವೇಷ ಇರೋ ಹಾಗೆ ಮಾಡ್ತೀನಿ.”—ಆದಿ. 3:15.

ಗೀತೆ 109 ಯೆಹೋವನ ಜ್ಯೇಷ್ಠ ಪುತ್ರನಿಗೆ ಜೈ!

ಕಿರುನೋಟ a

1. ಆದಾಮ ಹವ್ವ ತಪ್ಪು ಮಾಡಿದ ತಕ್ಷಣ ಯೆಹೋವ ಏನು ಮಾಡಿದನು? (ಆದಿಕಾಂಡ 3:15)

 ಆದಾಮ ಹವ್ವ ತಪ್ಪು ಮಾಡಿದಾಗ ಅವರಿಗೆ ಯಾವ ನಿರೀಕ್ಷೆನೂ ಇಲ್ಲದೆ ಹೋಯ್ತು. ಆದ್ರೆ ಯೆಹೋವ ದೇವರು ಇದನ್ನೆಲ್ಲ ಸರಿ ಮಾಡ್ತೀನಿ ಅಂತ ಒಂದು ಭವಿಷ್ಯವಾಣಿ ಹೇಳಿದನು. ಇದರಿಂದ ಅವರ ಸಂತತಿಯವರಿಗೆ ನಿರೀಕ್ಷೆಯ ಬೆಳಕು ಸಿಕ್ತು. ಆ ಭವಿಷ್ಯವಾಣಿ ಆದಿಕಾಂಡ 3:15ರಲ್ಲಿದೆ.ಓದಿ.

2. ಈ ಭವಿಷ್ಯವಾಣಿಯ ವಿಶೇಷತೆ ಏನು?

2 ದೇವರು ಹೇಳಿದ ಈ ಭವಿಷ್ಯವಾಣಿ ಬೈಬಲ್‌ನ ಮೊದಲನೇ ಪುಸ್ತಕದಲ್ಲೇ ಇದೆ. ಈ ಭವಿಷ್ಯವಾಣಿಗೂ ಬೈಬಲ್‌ನ ಬೇರೆ ಪುಸ್ತಕಗಳಿಗೂ ಒಂದು ನಂಟಿದೆ. ಈ ಭವಿಷ್ಯವಾಣಿಯನ್ನ, ಒಂದು ಸರದ ಮಣಿಗಳನ್ನ ಪೋಣಿಸಿರೋ ದಾರಕ್ಕೆ ಹೋಲಿಸಬಹುದು. ಬೈಬಲ್‌ನ ಬೇರೆಬೇರೆ ಪುಸ್ತಕಗಳಲ್ಲಿರೋ ಸಂದೇಶಗಳನ್ನ ಹಿಡಿದಿಟ್ಟುಕೊಂಡಿರೋ ದಾರನೇ ಈ ಭವಿಷ್ಯವಾಣಿ. ಇದರ ಮುಖ್ಯ ತಿರುಳು ಏನಂದ್ರೆ ನಮ್ಮನ್ನೆಲ್ಲ ಬಿಡುಗಡೆ ಮಾಡೋಕೆ ಒಬ್ಬನನ್ನ ಕಳಿಸಿಕೊಡಲಾಗುತ್ತೆ. ಅವನು ಬಂದು ಸೈತಾನನನ್ನ ಮತ್ತು ಅವನ ಹಿಂಬಾಲಕರನ್ನ ಸಂಪೂರ್ಣವಾಗಿ ನಾಶ ಮಾಡ್ತಾನೆ. b ಯೆಹೋವನನ್ನು ಪ್ರೀತಿಸುವವರಿಗೆ ಇದೊಂದು ದೊಡ್ಡ ಆಶೀರ್ವಾದ!

3. ಈ ಲೇಖನದಲ್ಲಿ ಏನು ಕಲಿತೀವಿ?

3 ಆದಿಕಾಂಡ 3:15ರಲ್ಲಿರೋ ಭವಿಷ್ಯವಾಣಿಯನ್ನ ಓದಿದಾಗ ನಮಗೆ ಬರೋ ಕೆಲವು ಪ್ರಶ್ನೆಗಳಿಗೆ ಈಗ ಉತ್ತರ ತಿಳಿದುಕೊಳ್ಳೋಣ. ಈ ಭವಿಷ್ಯವಾಣಿ ಯಾರ ಬಗ್ಗೆ ಹೇಳುತ್ತೆ? ಇದು ಹೇಗೆ ನೆರವೇರುತ್ತೆ? ಇದ್ರಿಂದ ನಮಗೇನು ಪ್ರಯೋಜನ?

ಈ ಭವಿಷ್ಯವಾಣಿಯಲ್ಲಿ ಯಾರೆಲ್ಲಾ ಇದ್ದಾರೆ?

4. ಭವಿಷ್ಯವಾಣಿಯಲ್ಲಿ ಹೇಳಿರೋ ‘ಹಾವು’ ಯಾರು ಮತ್ತು ಅದು ನಮಗೆ ಹೇಗೆ ಗೊತ್ತು?

4 ಆದಿಕಾಂಡ 3:14, 15ರಲ್ಲಿ ಒಂದು ‘ಹಾವು’ ಮತ್ತು ಅದರ “ಸಂತಾನ,” ಒಬ್ಬ ‘ಸ್ತ್ರೀ’ ಮತ್ತು ಅವಳ “ಸಂತಾನದ” ಬಗ್ಗೆ ಹೇಳುತ್ತೆ. ಇವರೆಲ್ಲ ಯಾರು ಅನ್ನೋದನ್ನ ಬೈಬಲ್‌ ಸ್ಪಷ್ಟವಾಗಿ ತೋರಿಸಿಕೊಡುತ್ತೆ. c ಮೊದಲು ನಾವು ಆ ‘ಹಾವು’ ಯಾರು ಅಂತ ತಿಳಿದುಕೊಳ್ಳೋಣ. ಏದೆನ್‌ ತೋಟದಲ್ಲಿ ಯೆಹೋವ ದೇವರು ಮಾತಾಡಿದ್ದು ನಿಜವಾದ ಹಾವಿನ ಜೊತೆ ಅಲ್ಲ. ಯಾಕಂದ್ರೆ ಇದನ್ನೆಲ್ಲ ಅರ್ಥ ಮಾಡಿಕೊಳ್ಳೋ ಸಾಮರ್ಥ್ಯ ಪ್ರಾಣಿಗಳಿಗೆ ಇಲ್ಲ. ಯೆಹೋವ ಆಗ ನ್ಯಾಯತೀರ್ಪು ಕೊಟ್ಟಿದ್ದು ಒಬ್ಬ ಬುದ್ಧಿವಂತ ಜೀವಿಗೆ. ಅವನು ಯಾರು ಅಂತ ಪ್ರಕಟನೆ 12:9 ಸ್ಪಷ್ಟವಾಗಿ ಹೇಳುತ್ತೆ. ಅಲ್ಲಿ “ಹಳೇ ಹಾವು” ಅಂದ್ರೆ ಪಿಶಾಚನಾದ ಸೈತಾನ ಅಂತ ಹೇಳಿದೆ. ಆದ್ರೆ ಆ ಹಾವಿನ ಸಂತಾನದವರು ಯಾರು?

ಹಾವು

ಪಿಶಾಚನಾದ ಸೈತಾನ, ಪ್ರಕಟನೆ 12:9 ಇವನನ್ನ “ಹಳೇ ಹಾವು” ಅಂತ ಕರೆಯುತ್ತೆ (ಪ್ಯಾರ 4 ನೋಡಿ)

5. ಹಾವಿನ ಸಂತಾನದವರು ಯಾರು?

5 ಬೈಬಲ್‌ನಲ್ಲಿ ಒಬ್ಬ ವ್ಯಕ್ತಿಯ ಸಂತಾನದ ಬಗ್ಗೆ ಮಾತಾಡುವಾಗ ಅವರ ಮಕ್ಕಳ ಬಗ್ಗೆನೇ ಹೇಳುತ್ತಿದೆ ಅಂತ ಅರ್ಥ ಅಲ್ಲ, ಯಾರಾದ್ರೂ ಆ ವ್ಯಕ್ತಿ ತರಾನೇ ಯೋಚಿಸ್ತಾ ಇದ್ರೆ ನಡೆದುಕೊಳ್ತಾ ಇದ್ರೆ ಅವರನ್ನೂ ಆ ವ್ಯಕ್ತಿಯ ಸಂತಾನದವರು ಅಥವಾ ಮಕ್ಕಳು ಅಂತ ಕರೆಯುತ್ತೆ. ಹಾಗಾದ್ರೆ ಹಾವಿನ ಸಂತಾನ ಅಂದ್ರೆ ಸೈತಾನನ ತರ ಯೆಹೋವನನ್ನು ಮತ್ತು ಆತನ ಜನರನ್ನು ವಿರೋಧಿಸುತ್ತಿರೋ, ವ್ಯಕ್ತಿಗಳನ್ನ ಹಾಗೂ ಕೆಟ್ಟ ದೇವದೂತರನ್ನ ಸೂಚಿಸುತ್ತೆ. ನೋಹನ ಕಾಲದಲ್ಲಿ ಯೆಹೋವ ದೇವರ ಮಾತನ್ನ ಕೇಳದೆ ಸ್ವರ್ಗನ ಬಿಟ್ಟುಬಂದ ದೇವದೂತರೂ ಈ ಗುಂಪಲ್ಲಿ ಇದ್ದಾರೆ. ಹಾಗಾಗಿ ಇವರನ್ನ ಸೈತಾನನ ಸಂತಾನದವರು ಅಂತ ಕರೆಯಬಹುದು.—ಆದಿ. 6:1, 2; ಯೋಹಾ. 8:44; 1 ಯೋಹಾ. 5:19; ಯೂದ 6.

ಹಾವಿನ ಸಂತಾನ

ಯೆಹೋವ ದೇವರನ್ನು ಮತ್ತು ಆತನ ಜನರನ್ನು ದ್ವೇಷಿಸೋ ಕೆಟ್ಟ ಜನರು ಹಾಗೂ ಕೆಟ್ಟ ದೇವದೂತರು (ಪ್ಯಾರ 5 ನೋಡಿ)

6. ಆ ‘ಸ್ತ್ರೀ’ ಹವ್ವ ಅಲ್ಲ ಅಂತ ಯಾಕೆ ಹೇಳಬಹುದು?

6 ನಾವೀಗ ಆ ‘ಸ್ತ್ರೀ’ ಯಾರು ಅಂತ ಕಂಡುಹಿಡಿಯೋಣ. ಇಲ್ಲಿ ಹೇಳಿರೋ ಸ್ತ್ರೀ ಹವ್ವ ಅಲ್ಲ. ನಾವು ಹೀಗೆ ಹೇಳೋಕೆ ಒಂದು ಕಾರಣ ಏನಂದ್ರೆ ಸ್ತ್ರೀಯ ಸಂತಾನ ಹಾವಿನ ತಲೆಯನ್ನ ‘ಜಜ್ಜುತ್ತೆ’ ಅಂತ ಆ ಭವಿಷ್ಯವಾಣಿಯಲ್ಲಿ ಹೇಳಿತ್ತು. ನಾವು ಈಗಾಗಲೇ ನೋಡಿದ ಹಾಗೆ ಈ ಹಾವು ಬಲಶಾಲಿ ದೂತನಾಗಿರೋ ಸೈತಾನನನ್ನ ಸೂಚಿಸುತ್ತೆ. ಹಾಗಾದ್ರೆ ಸಾಧಾರಣ ಮನುಷ್ಯರಾಗಿರೋ ಹವ್ವಳ ಸಂತಾನದವರು ಸೈತಾನನನ್ನ ಜಜ್ಜೋಕೆ ಅಥವಾ ನಾಶಮಾಡೋಕೆ ಆಗಲ್ಲ. ಹಾಗಾದ್ರೆ ಈ ಸ್ತ್ರೀ ಯಾರು?

7. ಆದಿಕಾಂಡ 3:15ರಲ್ಲಿ ಹೇಳಿರೋ ಸ್ತ್ರೀ ಯಾರು ಅಂತ ಪ್ರಕಟನೆ 12:1, 2, 5, 10 ಹೇಳುತ್ತೆ?

7 ಆದಿಕಾಂಡ 3:15ರಲ್ಲಿ ಹೇಳಿರೋ ಸ್ತ್ರೀ ಯಾರು ಅಂತ ಬೈಬಲಿನ ಕೊನೆಯ ಪುಸ್ತಕ ಅಂದ್ರೆ ಪ್ರಕಟನೆ ಪುಸ್ತಕದಲ್ಲಿ ತಿಳಿಸಿದೆ. (ಪ್ರಕಟನೆ 12:1, 2, 5, 10 ಓದಿ.) ಇವಳು ನಮ್ಮ ತರ ಒಬ್ಬ ಸಾಧಾರಣ ಸ್ತ್ರೀ ಅಲ್ಲ! ಯಾಕಂದ್ರೆ ಅವಳ ಕಾಲ ಕೆಳಗೆ ಚಂದ್ರ ಇದೆ, ಅವಳ ತಲೆ ಮೇಲೆ 12 ನಕ್ಷತ್ರ ಇರೋ ಒಂದು ಕಿರೀಟ ಇದೆ. ಅವಳು ಒಂದು ವಿಶೇಷವಾದ ಮಗುವಿಗೆ ಅಂದ್ರೆ ದೇವರ ಸರ್ಕಾರಕ್ಕೆ ಜನ್ಮ ನೀಡುತ್ತಾಳೆ. ಈ ಸ್ತ್ರೀ ಸ್ವರ್ಗೀಯ ಸಂಘಟನೆಯನ್ನ ಸೂಚಿಸುತ್ತಾಳೆ. ಈ ಸಂಘಟನೆಯಲ್ಲಿ ನಂಬಿಗಸ್ತ ದೇವದೂತರಿದ್ದಾರೆ.—ಗಲಾ. 4:26.

ಸ್ತ್ರೀ

ನಂಬಿಗಸ್ತ ದೇವದೂತರಿರೋ ಯೆಹೋವನ ಸ್ವರ್ಗೀಯ ಸಂಘಟನೆ (ಪ್ಯಾರ 7 ನೋಡಿ)

8. ಸ್ತ್ರೀಯ ಸಂತಾನದ ಮುಖ್ಯ ವ್ಯಕ್ತಿ ಯಾರು? ಆತನು ಯಾವಾಗ ಸ್ತ್ರೀಯ ಸಂತಾನ ಆದನು? (ಆದಿಕಾಂಡ 22:15-18)

8 ದೇವರ ವಾಕ್ಯವನ್ನ ಓದುವಾಗ ಸ್ತ್ರೀಯ ಸಂತಾನ ಯಾರು ಅಂತ ನಮಗೆ ಪತ್ತೆಹಚ್ಚೋಕೆ ಆಗುತ್ತೆ. ಈ ಸಂತಾನ ಅಬ್ರಹಾಮನ ವಂಶದಿಂದ ಬರುತ್ತಾನೆ ಅಂತ ದೇವರು ಹೇಳಿದ್ದನು. (ಆದಿಕಾಂಡ 22:15-18 ಓದಿ.) ಯೇಸು ಅಬ್ರಹಾಮನ ವಂಶದಿಂದ ಬಂದವನು. (ಲೂಕ 3:23, 34) ಆದ್ರೆ ಪಿಶಾಚನಾದ ಸೈತಾನನನ್ನ ನಾಶಮಾಡೋಕೆ ಆ ಸಂತಾನ ಅಥವಾ ಯೇಸು ಒಬ್ಬ ಸಾಮಾನ್ಯ ಮನುಷ್ಯ ಆಗಿದ್ರೆ ಸಾಕಾಗಲ್ಲ. ಅವನಿಗೆ ಮನುಷ್ಯರಿಗಿಂತ ಜಾಸ್ತಿ ಶಕ್ತಿ ಬೇಕು. ಅದಕ್ಕೇ ಯೇಸು 30ನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ತೆಗೆದುಕೊಂಡಾಗ ಯೆಹೋವ ದೇವರು ಆತನನ್ನು ಪವಿತ್ರಶಕ್ತಿಯಿಂದ ಅಭಿಷೇಕಿಸಿದನು. ಹೀಗೆ ಯೇಸು ಆ ಸ್ತ್ರೀಯ ಸಂತಾನದ ಮುಖ್ಯ ವ್ಯಕ್ತಿಯಾದನು. (ಗಲಾ. 3:16) ಅಷ್ಟೇ ಅಲ್ಲ, ಯೇಸು ಸತ್ತು ಮತ್ತೆ ಜೀವ ಪಡೆದುಕೊಂಡ ಮೇಲೆ ಯೆಹೋವ “ಅವನಿಗೆ ಮಹಿಮೆ ಗೌರವನ ಕಿರೀಟವಾಗಿ” ಕೊಟ್ಟನು ಮತ್ತು “ಸ್ವರ್ಗದಲ್ಲೂ ಭೂಮಿಯಲ್ಲೂ . . . ಎಲ್ಲ ಅಧಿಕಾರ” ಕೊಟ್ಟನು. ಅಷ್ಟೇ ಅಲ್ಲ, ‘ಸೈತಾನ ಹಾಳುಮಾಡಿರೋ ಕೆಲಸಗಳನ್ನ ಸರಿ ಮಾಡೋಕೂ’ ಅಧಿಕಾರ ಕೊಟ್ಟನು.—ಇಬ್ರಿ. 2:7; ಮತ್ತಾ. 28:18; 1 ಯೋಹಾ. 3:8.

ಸ್ತ್ರೀಯ ಸಂತಾನ

ಯೇಸು ಕ್ರಿಸ್ತ ಮತ್ತು ಆತನ ಜೊತೆ ಆಳೋ 1,44,000 ಅಭಿಷಿಕ್ತರು (ಪ್ಯಾರ 8-9 ನೋಡಿ)

9-10. (ಎ) ಸ್ತ್ರೀಯ ಸಂತಾನದಲ್ಲಿ ಯಾರೆಲ್ಲಾ ಇದ್ದಾರೆ ಮತ್ತು ಅವರು ಯಾವಾಗ ಸ್ತ್ರೀಯ ಸಂತಾನ ಆಗ್ತಾರೆ? (ಬಿ) ನಾವೀಗ ಏನು ಕಲಿತೀವಿ?

9 ಈ ಸಂತಾನದಲ್ಲಿ ಇನ್ನೊಂದು ಗುಂಪಿನವರೂ ಇದ್ದಾರೆ. ಅಪೊಸ್ತಲ ಪೌಲ, ಯೆಹೂದಿ ಮತ್ತು ಅನ್ಯಜನಾಂಗದಿಂದ ಬಂದ ಅಭಿಷಿಕ್ತರಿಗೆ ಹೀಗೆ ಹೇಳಿದ: “ನೀವು ಕ್ರಿಸ್ತನಿಗೆ ಸೇರಿರೋದ್ರಿಂದ ನಿಜವಾಗ್ಲೂ ಅಬ್ರಹಾಮನ ಸಂತತಿ ಆಗಿದ್ದೀರ ಮತ್ತು ಅವನಿಗೆ ಕೊಟ್ಟ ಮಾತಿನ ಪ್ರಕಾರ ಆಸ್ತಿ ಪಡ್ಕೊಳ್ತೀರ.” (ಗಲಾ. 3:28, 29) ಒಬ್ಬ ವ್ಯಕ್ತಿಯನ್ನ ಯೆಹೋವ ದೇವರು ಪವಿತ್ರಶಕ್ತಿಯಿಂದ ಅಭಿಷೇಕಿಸಿದಾಗ ಅವನು ಸ್ತ್ರೀಯ ಸಂತಾನ ಆಗುತ್ತಾನೆ. ಹಾಗಾಗಿ ಈ ಆದಿಕಾಂಡ 3:15ರಲ್ಲಿ ಹೇಳಿರೋ ಸಂತಾನದಲ್ಲಿ ಯೇಸು ಕ್ರಿಸ್ತ ಮತ್ತು ಅವನ ಜೊತೆ ರಾಜರಾಗಿ ಆಳೋ 1,44,000 ಅಭಿಷಿಕ್ತರು ಇದ್ದಾರೆ. (ಪ್ರಕ. 14:1) ಇವರೆಲ್ಲ ತಮ್ಮ ತಂದೆಯಾದ ಯೆಹೋವನ ತರಾನೇ ಯೋಚಿಸುತ್ತಾರೆ ಮತ್ತು ನಡೆದುಕೊಳ್ತಾರೆ.

10 ಆದಿಕಾಂಡ 3:15ರಲ್ಲಿ ಯಾರ ಬಗ್ಗೆ ಹೇಳಲಾಗಿದೆ ಅಂತ ನಮಗೆ ಈಗ ಗೊತ್ತಾಯ್ತು. ಈ ಭವಿಷ್ಯವಾಣಿಯಲ್ಲಿ ಹೇಳಿರೋ ಮಾತುಗಳನ್ನ ಯೆಹೋವ ಹೇಗೆ ಒಂದೊಂದಾಗಿ ನೆರವೇರಿಸ್ತಿದ್ದಾನೆ ಮತ್ತು ಇದ್ರಿಂದ ನಮಗೇನು ಪ್ರಯೋಜನ ಅಂತ ಈಗ ನೋಡೋಣ.

ಭವಿಷ್ಯವಾಣಿ ಹೇಗೆ ನೆರವೇರಿತು?

11. ಸ್ತ್ರೀಯ ಸಂತಾನದ “ಹಿಮ್ಮಡಿಗೆ” ಗಾಯ ಆಗುತ್ತೆ ಅನ್ನೋ ಮಾತು ಹೇಗೆ ನಿಜ ಆಯ್ತು?

11 ಆದಿಕಾಂಡ 3:15ರಲ್ಲಿ ಹಾವು ಸ್ತ್ರೀಯ ಸಂತಾನದ “ಹಿಮ್ಮಡಿಗೆ” ಗಾಯಮಾಡುತ್ತೆ ಅಂತ ಹೇಳಿದೆ. ಯೆಹೂದ್ಯರು ಮತ್ತು ರೋಮನ್ನರು ದೇವರ ಮಗನನ್ನ ಕೊಲ್ಲೋ ತರ ಸೈತಾನ ಮಾಡಿದ. ಹೀಗೆ ಆ ಭವಿಷ್ಯವಾಣಿಯಲ್ಲಿ ಹೇಳಿದ್ದ ಮಾತು ನಿಜ ಆಯ್ತು. (ಲೂಕ 23:13, 20-24) ಹಿಮ್ಮಡಿಗೆ ಗಾಯ ಆದ್ರೆ ಒಬ್ಬ ಮನುಷ್ಯನಿಗೆ ಸ್ವಲ್ಪ ದಿನ ಹೇಗೆ ನಡಿಯೋಕೆ ಆಗಲ್ವೋ ಅದೇ ತರ ಯೇಸು ಸತ್ತು ಮೂರು ದಿನ ಸಮಾಧಿಯಲ್ಲಿ ಇದ್ದಾಗ ಆತನಿಂದ ಯಾವ ಕೆಲಸನೂ ಮಾಡೋಕೆ ಆಗಲಿಲ್ಲ.—ಮತ್ತಾ. 16:21.

12. ಹಾವಿನ ತಲೆಯನ್ನ ಹೇಗೆ ಮತ್ತು ಯಾವಾಗ ಜಜ್ಜಲಾಗುತ್ತೆ?

12 ಆದ್ರೆ ಯೇಸು ಸತ್ತು ಸಮಾಧಿಯಲ್ಲೇ ಇರಲ್ಲ ಅಂತ ಆದಿಕಾಂಡ 3:15ರಿಂದ ಗೊತ್ತಾಗುತ್ತೆ. ಯಾಕಂದ್ರೆ ಆ ಹಾವಿನ ತಲೆಯನ್ನ ಜಜ್ಜುವುದು ಸ್ತ್ರೀಯ ಸಂತಾನನೇ ಅಂತ ಅಲ್ಲಿ ಹೇಳಿದೆ. ಇದರರ್ಥ, ಯೇಸುವಿನ ಹಿಮ್ಮಡಿಗೆ ಆದ ಗಾಯ ವಾಸಿಯಾಗಬೇಕಿತ್ತು. ಇದು ಹೇಗೆ ನೆರವೇರಿತು ಅಂದ್ರೆ ಯೇಸು ಸತ್ತ ಮೂರನೇ ದಿನಕ್ಕೆ ಯೆಹೋವ ಆತನಿಗೆ ಮತ್ತೆ ಜೀವ ಕೊಟ್ಟನು ಮತ್ತು ಅವನನ್ನ ಅಮರ ಆತ್ಮಜೀವಿಯಾಗಿ ಮಾಡಿದನು. ಯೆಹೋವ ದೇವರು ಹೇಳೋ ಸಮಯದಲ್ಲಿ ಯೇಸು ಸೈತಾನನನ್ನ ಪೂರ್ತಿಯಾಗಿ ನಾಶ ಮಾಡಿಬಿಡುತ್ತಾನೆ. (ಇಬ್ರಿ. 2:14) ಅಷ್ಟೇ ಅಲ್ಲ, ಯೇಸು ಮತ್ತು ಅವನ ಜೊತೆ ಆಳುವವರು ಹಾವಿನ ಸಂತಾನದವರನ್ನ ಅಂದ್ರೆ ಕೆಟ್ಟ ಜನರನ್ನ ಈ ಭೂಮಿಯಿಂದ ತೆಗೆದುಹಾಕ್ತಾರೆ.—ಪ್ರಕ. 17:14; 20:4, 10. d

ಈ ಭವಿಷ್ಯವಾಣಿಯಿಂದ ನಮಗೇನು ಪ್ರಯೋಜನ?

13. ಈ ಭವಿಷ್ಯವಾಣಿಯ ನೆರವೇರಿಕೆಯಿಂದ ನಮಗೆ ಏನೆಲ್ಲಾ ಪ್ರಯೋಜನ ಆಗಿದೆ?

13 ದೇವಜನರಾಗಿರೋ ನಮ್ಮೆಲ್ಲರಿಗೆ ಈ ಭವಿಷ್ಯವಾಣಿಯ ನೆರವೇರಿಕೆಯಿಂದ ಪ್ರಯೋಜನ ಆಗ್ತಿದೆ. ಯೇಸು ಈ ಭೂಮಿ ಮೇಲೆ ಇದ್ದಾಗ ಯೆಹೋವ ಎಂಥ ದೇವರು ಅಂತ ನಮಗೆ ತೋರಿಸಿಕೊಟ್ಟನು. (ಯೋಹಾ. 14:9) ಇದ್ರಿಂದ ನಾವು ಯೆಹೋವನ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಆತನನ್ನ ಪ್ರೀತಿಸೋಕೆ ಸಹಾಯ ಆಗಿದೆ. ಯೇಸು ಕಲಿಸಿಕೊಟ್ಟ ವಿಷಯಗಳಿಂದ ಮತ್ತು ಆತನು ಈ ಸಂಘಟನೆಯನ್ನ ನಡೆಸುತ್ತಿರೋದ್ರಿಂದ ನಮಗೆ ಪ್ರಯೋಜನ ಆಗ್ತಿದೆ. ಇದ್ರಿಂದ ಯಾವ ತರ ಜೀವನ ಮಾಡಿದ್ರೆ ಯೆಹೋವನಿಗೆ ಇಷ್ಟ ಆಗುತ್ತೆ ಅಂತನೂ ತಿಳಿದುಕೊಂಡಿದ್ದೀವಿ. ಯೇಸು ಕ್ರಿಸ್ತನ ಹಿಮ್ಮಡಿಗೆ ಆದ ಗಾಯದಿಂದ ಅಂದ್ರೆ ಆತನ ಮರಣದಿಂದನೂ ನಮಗೆ ಪ್ರಯೋಜನ ಆಗಿದೆ. ಯೇಸು ಜೀವ ಮತ್ತು ರಕ್ತವನ್ನ ನಮಗೋಸ್ಕರ ಧಾರೆಯೆರೆದಿದ್ದಾನೆ. ಇದರ ಆಧಾರದ ಮೇಲೆ ಯೆಹೋವ “ನಮ್ಮ ಪಾಪಗಳನ್ನೆಲ್ಲ ಕ್ಷಮಿಸ್ತಾನೆ.”—1 ಯೋಹಾ. 1:7.

14. ಏದೆನ್‌ ತೋಟದಲ್ಲಿ ಹೇಳಿದ್ದ ಭವಿಷ್ಯವಾಣಿ ತಕ್ಷಣ ನೆರವೇರಲಿಲ್ಲ ಅಂತ ನಮಗೆ ಹೇಗೆ ಗೊತ್ತು? ವಿವರಿಸಿ.

14 ಏದೆನ್‌ ತೋಟದಲ್ಲಿ ಹೇಳಿದ ಭವಿಷ್ಯವಾಣಿ ಪೂರ್ತಿಯಾಗಿ ನೆರವೇರೋಕೆ ಸ್ವಲ್ಪ ಸಮಯ ಹಿಡಿಯುತ್ತೆ ಅಂತ ಯೆಹೋವನ ಮಾತಿನಿಂದ ಗೊತ್ತಾಗುತ್ತೆ. ಯಾಕಂದ್ರೆ ಸ್ತ್ರೀಯು ತನ್ನ ಸಂತಾನದವರಿಗೆ ಜನ್ಮ ನೀಡೋಕೆ, ಪಿಶಾಚ ತನ್ನ ಕಡೆಯವರನ್ನ ಸೇರಿಸಿಕೊಳ್ಳೋಕೆ ಮತ್ತು ಈ ಎರಡೂ ಸಂತಾನದವರ ಮಧ್ಯೆ ದ್ವೇಷ (ಅಥವಾ ಹಗೆತನ) ಬೆಳೆಯೋಕೆ ಸಮಯ ಬೇಕು. ಈ ಭವಿಷ್ಯವಾಣಿಯನ್ನ ಅರ್ಥ ಮಾಡಿಕೊಂಡಿದ್ರಿಂದ ನಾವು ಹುಷಾರಾಗಿ ಇರೋಕೆ ಆಯ್ತು. ಯಾಕಂದ್ರೆ ಈ ಭೂಮಿನ ಸೈತಾನ ಆಳುತ್ತಿದ್ದಾನೆ ಮತ್ತು ಯೆಹೋವನ ಆರಾಧಕರನ್ನ ಅವನು ದ್ವೇಷಿಸುತ್ತಿದ್ದಾನೆ ಅಂತ ಈ ಭವಿಷ್ಯವಾಣಿ ಎಚ್ಚರಿಕೆ ಕೊಡ್ತಿದೆ. ಯೇಸು ಕೂಡ ತನ್ನ ಶಿಷ್ಯರಿಗೆ ಇದೇ ಎಚ್ಚರಿಕೆಯನ್ನ ಕೊಟ್ಟನು. (ಮಾರ್ಕ 13:13; ಯೋಹಾ. 17:14) ಈ ಭವಿಷ್ಯವಾಣಿ ನೆರವೇರುತ್ತಾ ಇರೋದನ್ನ ನಾವು ಕಣ್ಣಾರೆ ನೋಡ್ತಿದ್ದೀವಿ. ಅದ್ರಲ್ಲೂ ಕಳೆದ 100 ವರ್ಷಗಳಿಂದ ಇದು ನೆರವೇರುತ್ತಿರೋದಕ್ಕೆ ತುಂಬ ಸಾಕ್ಷಿಗಳಿವೆ. ಅದರ ಬಗ್ಗೆ ಈಗ ನೋಡೋಣ.

15. ಲೋಕದಲ್ಲಿರೋ ಜನ ಯಾಕೆ ನಮ್ಮನ್ನ ಇಷ್ಟು ದ್ವೇಷಿಸ್ತಾರೆ? ಆದ್ರೆ ನಾವ್ಯಾಕೆ ಸೈತಾನನಿಗೆ ಹೆದರಬಾರದು?

15 ಯೇಸು 1914ರಲ್ಲಿ ದೇವರ ಸರ್ಕಾರದ ರಾಜನಾದ ತಕ್ಷಣ, ಸೈತಾನನನ್ನ ಸ್ವರ್ಗದಿಂದ ಭೂಮಿಗೆ ತಳ್ಳಿಬಿಟ್ಟ. ಭೂಮಿಯಲ್ಲಿ ತನಗೆ ಜಾಸ್ತಿ ದಿನ ಉಳಿದಿಲ್ಲ ಅಂತ ಸೈತಾನನಿಗೆ ತುಂಬ ಚೆನ್ನಾಗಿ ಗೊತ್ತು. (ಪ್ರಕ. 12:9, 12) ಹಾಗಂತ ಅವನು ಸುಮ್ಮನೆ ಕೈ ಕಟ್ಟಿಕೊಂಡು ಕೂತಿಲ್ಲ, ಕೋಪದಿಂದ ಕೆಂಡ ಕಾರುತ್ತಿದ್ದಾನೆ. ಅದಕ್ಕೆ ಇಡೀ ಲೋಕನೇ ದೇವಜನರನ್ನ ದ್ವೇಷಿಸೋ ತರ ಮಾಡಿಬಿಟ್ಟಿದ್ದಾನೆ. (ಪ್ರಕ. 12:13, 17) ನಾವು ಸೈತಾನನನ್ನ ಮತ್ತು ಅವನ ಜನರನ್ನ ನೋಡಿ ಭಯಪಡೋ ಅವಶ್ಯಕತೆ ಇಲ್ಲ. ಅಪೊಸ್ತಲ ಪೌಲನ ತರ “ದೇವರು ನಮ್ಮ ಕಡೆ ಇದ್ರೆ ನಮ್ಮನ್ನ ಎದುರಿಸೋಕೆ ಯಾರಿಂದಾಗುತ್ತೆ?” ಅಂತ ಹೇಳಬಹುದು. (ರೋಮ. 8:31) ಆದಿಕಾಂಡ 3:15ರಲ್ಲಿ ಯೆಹೋವ ಹೇಳಿದ ಭವಿಷ್ಯವಾಣಿಯಲ್ಲಿ ಎಷ್ಟೋ ವಿಷಯಗಳು ನಿಜ ಆಗಿರೋದ್ರಿಂದ ಆತನ ಮೇಲಿರೋ ನಮ್ಮ ಭರವಸೆ ಇನ್ನೂ ಜಾಸ್ತಿಯಾಗಿದೆ.

16-18. ಕರ್ಟಿಸ್‌, ಅರ್ಸುಲ ಮತ್ತು ಜೆಸ್ಸಿಕ ಆದಿಕಾಂಡ 3:15ರಲ್ಲಿರೋ ಭವಿಷ್ಯವಾಣಿಯನ್ನ ಅರ್ಥ ಮಾಡಿಕೊಂಡಿದ್ರಿಂದ ಹೇಗೆ ಪ್ರಯೋಜನ ಪಡೆದುಕೊಂಡರು?

16 ನಮಗೆ ಬರೋ ಕಷ್ಟಗಳನ್ನ ಜಯಿಸೋಕೆ ಆದಿಕಾಂಡ 3:15ರಲ್ಲಿ ಯೆಹೋವ ಹೇಳಿರೋ ಮಾತುಗಳು ಸಹಾಯ ಮಾಡುತ್ತೆ. ಗ್ವಾಮ್‌ನಲ್ಲಿ ಮಿಷನರಿಯಾಗಿ ಸೇವೆ ಮಾಡ್ತಿರೋ ಸಹೋದರ ಕರ್ಟಿಸ್‌ ಹೇಳಿದ್ದು, “ನನಗೆ ಕಷ್ಟಗಳು ಬಂದಾಗ ತುಂಬ ಸಲ ಕುಗ್ಗಿಹೋಗಿದ್ದೀನಿ ಮತ್ತು ಯೆಹೋವನ ಸೇವೆ ಮಾಡೋಕೂ ಕಷ್ಟ ಆಗಿದೆ. ಆಗೆಲ್ಲ ನಾನು ಆದಿಕಾಂಡ 3:15ರಲ್ಲಿ ಹೇಳಿರೋ ಭವಿಷ್ಯವಾಣಿಯ ಬಗ್ಗೆ ಯೋಚಿಸ್ತಿದ್ದೆ. ಇದ್ರಿಂದ ಯೆಹೋವನ ಮೇಲಿರೋ ನಂಬಿಕೆ ಜಾಸ್ತಿ ಆಯ್ತು.” ಈ ಕಷ್ಟಗಳನ್ನೆಲ್ಲ ಯೆಹೋವ ತೆಗೆದುಹಾಕೋ ದಿನಕ್ಕೋಸ್ಕರ ಸಹೋದರ ಕರ್ಟಿಸ್‌ ಕಾಯ್ತಿದ್ದಾರೆ.

17 ಬವೆರೀಯದಲ್ಲಿರೋ ಸಹೋದರಿ ಅರ್ಸುಲಗೆ ಬೈಬಲ್‌ನ ದೇವರ ವಾಕ್ಯ ಅಂತ ನಂಬೋಕೆ ಆದಿಕಾಂಡ 3:15 ಸಹಾಯ ಮಾಡಿತು. ಈ ಭವಿಷ್ಯವಾಣಿ ಬೈಬಲ್‌ನಲ್ಲಿರೋ ಬೇರೆ ಭವಿಷ್ಯವಾಣಿಗಳಿಗೆ ಹೇಗೆ ಸಂಬಂಧಿಸಿದೆ ಅಂತ ಅರ್ಥ ಮಾಡಿಕೊಂಡಾಗ ಅವರ ನಂಬಿಕೆ ಇನ್ನೂ ಜಾಸ್ತಿ ಆಯ್ತು. “ಮನುಷ್ಯರಿಗೆ ಯಾವ ನಿರೀಕ್ಷೆನೂ ಇಲ್ಲದೆ ಇದ್ದಾಗ, ಎಲ್ಲವನ್ನ ಸರಿ ಮಾಡೋಕೆ ಯೆಹೋವ ದೇವರು ತಕ್ಷಣ ಕೆಲವು ಏರ್ಪಾಡುಗಳನ್ನ ಮಾಡಿದ್ರು. ಇದು ನನ್ನ ಮನಸ್ಸು ಮುಟ್ಟಿತು” ಅಂತ ಸಹೋದರಿ ಹೇಳ್ತಾರೆ.

18 ಮೈಕ್ರೋನೇಷಿಯಾದಲ್ಲಿರೋ ಸಹೋದರಿ ಜೆಸ್ಸಿಕ ಹೀಗೆ ಹೇಳ್ತಾರೆ: “ಮೊದಮೊದಲು ಸತ್ಯ ಕಲಿತಾಗ ನನಗೆ ಹೇಗನಿಸ್ತು ಅಂತ ಇನ್ನೂ ನೆನಪಿದೆ. ಆದಿಕಾಂಡ 3:15ರಲ್ಲಿ ಹೇಳಿರೋ ಭವಿಷ್ಯವಾಣಿ ಹೇಗೆ ನೆರವೇರುತ್ತಿದೆ ಅಂತ ಅರ್ಥಮಾಡಿಕೊಂಡಾಗ ನಾವು ಈ ತರ ಕಷ್ಟ ಪಡ್ತಾ ಜೀವನ ಮಾಡಬೇಕು ಅನ್ನೋದು ಯೆಹೋವನ ಆಸೆಯಾಗಿರಲಿಲ್ಲ ಅಂತ ಗೊತ್ತಾಯ್ತು. ಅಷ್ಟೇ ಅಲ್ಲ, ಆತನ ಸೇವೆ ಮಾಡಿದ್ರೆ ನನ್ನ ಜೀವನ ಈಗಲೂ, ಮುಂದಕ್ಕೂ ಚೆನ್ನಾಗಿರುತ್ತೆ ಅಂತ ತಿಳಿದುಕೊಂಡೆ.”

19. ಭವಿಷ್ಯವಾಣಿಯಲ್ಲಿರೋ ಎಲ್ಲಾ ಮಾತುಗಳು ನಿಜ ಆಗುತ್ತೆ ಅಂತ ನಾವು ಹೇಗೆ ಹೇಳಬಹುದು?

19 ಆದಿಕಾಂಡ 3:15ರಲ್ಲಿರೋ ವಿಷಯಗಳು ಈಗ ನೆರವೇರುತ್ತಾ ಇದೆ. ಸ್ತ್ರೀಯ ಸಂತಾನದವರು ಯಾರು, ಹಾವಿನ ಸಂತಾನದವರು ಯಾರು ಅಂತ ನಾವು ಪತ್ತೆಹಚ್ಚಿದ್ದೀವಿ. ಸ್ತ್ರೀಯ ಸಂತಾನ ಆಗಿರೋ ಯೇಸುವಿನ ಹಿಮ್ಮಡಿಯ ಗಾಯ ವಾಸಿಯಾಗಿದೆ. ಈಗ ಅವನು ಶಕ್ತಿಶಾಲಿಯಾದ ಅಮರ ರಾಜನಾಗಿದ್ದಾನೆ. ಸ್ತ್ರೀಯ ಸಂತಾನದಲ್ಲಿ ಉಳಿದವರನ್ನ ಆಯ್ಕೆ ಮಾಡೋ ಕೆಲಸ ಈಗಾಗಲೇ ಮುಗಿತಾ ಬಂದಿದೆ. ಈ ಭವಿಷ್ಯವಾಣಿಯಲ್ಲಿ ಹೇಳಿದ್ದ ಎಷ್ಟೋ ವಿಷಯಗಳು ನಿಜ ಆಗಿದೆ. ಹಾಗಾಗಿ ಹಾವಿನ ತಲೆಯನ್ನ ಜಜ್ಜಲಾಗುತ್ತೆ ಅನ್ನೋದೂ ನಿಜ ಆಗುತ್ತೆ ಅನ್ನೋದರಲ್ಲಿ ಯಾವ ಸಂಶಯನೂ ಇಲ್ಲ. ಸೈತಾನ ಇಲ್ಲದೆ ಹೋದಾಗ ನಮ್ಮ ಜೀವನ ಎಷ್ಟು ಚೆನ್ನಾಗಿರುತ್ತೆ ಅನ್ನೋದನ್ನ ಸ್ವಲ್ಪ ಕಲ್ಪಿಸಿಕೊಳ್ಳಿ. ಆಗ ಯೆಹೋವ ದೇವರು ಸ್ತ್ರೀಯ ಸಂತಾನದ ಮೂಲಕ “ಭೂಮಿಯ ಎಲ್ಲ ದೇಶದ ಜನರಿಗೆ” ಆಶೀರ್ವಾದ ಕೊಡುತ್ತಾನೆ. (ಆದಿ. 22:18) ಅಷ್ಟರ ತನಕ ಆತನ ಮೇಲೆ ನಮಗಿರೋ ನಂಬಿಕೆಯನ್ನ ಜಾಸ್ತಿ ಮಾಡಿಕೊಳ್ತಾ ಇರೋಣ, ಆತನ ಸೇವೆ ಮಾಡ್ತಾ ಇರೋಣ.

ಗೀತೆ 30 ಯೆಹೋವನು ತನ್ನ ಆಳ್ವಿಕೆಯನ್ನು ಆರಂಭಿಸುತ್ತಾನೆ

a ಆದಿಕಾಂಡ 3:15ರಲ್ಲಿ ಹೇಳಿರೋ ಭವಿಷ್ಯವಾಣಿ ಬಗ್ಗೆ ತಿಳಿದುಕೊಂಡ್ರೆನೇ ಬೈಬಲಲ್ಲಿರೋ ಸಂದೇಶ ನಮಗೆ ಪೂರ್ತಿಯಾಗಿ ಅರ್ಥ ಆಗೋದು. ಇದ್ರಿಂದ ಯೆಹೋವನ ಮೇಲೆ ನಮಗಿರೋ ನಂಬಿಕೆ ಜಾಸ್ತಿಯಾಗುತ್ತೆ. ಅಷ್ಟೇ ಅಲ್ಲ, ಯೆಹೋವ ಕೊಟ್ಟಿರೋ ಮಾತುಗಳು ನಡೆದೇ ನಡಿಯುತ್ತೆ ಅನ್ನೋ ಭರವಸೆನೂ ಜಾಸ್ತಿಯಾಗುತ್ತೆ.

b ಹೊಸ ಲೋಕ ಭಾಷಾಂತರದಲ್ಲಿ “ಬೈಬಲಿನ ಸಂದೇಶ” ಅನ್ನೋ ಪರಿಶಿಷ್ಟ ಬಿ1 ನೋಡಿ.

cಆದಿಕಾಂಡ 3:14, 15ರ ಭವಿಷ್ಯವಾಣಿಯಲ್ಲಿ ಯಾರೆಲ್ಲಾ ಇದ್ದಾರೆ?” ಅನ್ನೋ ಚೌಕ ನೋಡಿ.