ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 38

ಬೇರೆಯವರ ನಂಬಿಕೆ ಸಂಪಾದಿಸಿ

ಬೇರೆಯವರ ನಂಬಿಕೆ ಸಂಪಾದಿಸಿ

“ನಂಬಿಗಸ್ತ ವ್ಯಕ್ತಿ ಗುಟ್ಟನ್ನ ಗುಟ್ಟಾಗೇ ಇಡ್ತಾನೆ.”—ಜ್ಞಾನೋ. 11:13.

ಗೀತೆ 53 ಐಕ್ಯದಿಂದ ಕೆಲಸ ಮಾಡುವುದು

ಕಿರುನೋಟ a

1. ಬೇರೆಯವರ ನಂಬಿಕೆ ಉಳಿಸಿಕೊಳ್ಳೋ ವ್ಯಕ್ತಿ ಹೇಗಿರ್ತಾನೆ?

 ನಂಬಿಗಸ್ತ ವ್ಯಕ್ತಿ ತಾನು ಕೊಟ್ಟ ಮಾತನ್ನ ಯಾವಾಗಲೂ ಉಳಿಸಿಕೊಳ್ಳುತ್ತಾನೆ ಮತ್ತು ಅವನು ಯಾವತ್ತೂ ಸುಳ್ಳು ಹೇಳಲ್ಲ. (ಕೀರ್ತ. 15:4) ಜನರು ಅವನನ್ನ ನಂಬೋಕೆ ಹಿಂದೇಟು ಹಾಕಲ್ಲ. ನಮ್ಮ ಸಹೋದರ ಸಹೋದರಿಯರಿಗೂ ನಮ್ಮ ಬಗ್ಗೆ ಹಾಗೇ ಅನಿಸಬೇಕು. ಹಾಗಾಗಿ ಬೇರೆಯವರ ನಂಬಿಕೆ ಗಳಿಸೋಕೆ ನಮಗೆ ಯಾವುದು ಸಹಾಯಮಾಡುತ್ತೆ ಅಂತ ಈಗ ನೋಡೋಣ.

2. ಬೇರೆಯವರು ನಮ್ಮ ಮೇಲೆ ನಂಬಿಕೆ ಇಡಬೇಕಾದ್ರೆ ನಾವೇನು ಮಾಡಬೇಕು?

2 ನಂಬಿಕೆ ಅನ್ನೋದು ಕೇಳಿ ಪಡೆದುಕೊಳ್ಳೋದಲ್ಲ. ಇದನ್ನ ಸಂಪಾದಿಸಬೇಕು. ಇದು ದುಡ್ಡಿನ ತರ. ದುಡ್ಡನ್ನ ಸಂಪಾದಿಸೋದು ತುಂಬ ಕಷ್ಟ. ಆದ್ರೆ ಅದನ್ನ ಕಳೆದುಕೊಳ್ಳೋಕೆ ಒಂದು ಕ್ಷಣ ಸಾಕು. ಯೆಹೋವ ನಮ್ಮೆಲ್ಲರ ನಂಬಿಕೆ ಗಳಿಸಿದ್ದಾನೆ, ಆತನನ್ನು ನಾವು ಕಣ್ಮುಚ್ಚಿ ನಂಬಬಹುದು. ಯಾಕಂದ್ರೆ “ಆತನು ಮಾಡೋದೆಲ್ಲ ನಂಬೋಕೆ ಯೋಗ್ಯ.” (ಕೀರ್ತ. 33:4) ನಾವೂ ಆತನ ತರಾನೇ ಇರಬೇಕು ಅಂತ ಯೆಹೋವ ಇಷ್ಟಪಡ್ತಾನೆ. (ಎಫೆ. 5:1) ಯೆಹೋವನ ತರಾನೇ ನಂಬಿಕೆ ಉಳಿಸಿಕೊಂಡ ಕೆಲವು ಸೇವಕರ ಉದಾಹರಣೆಗಳನ್ನ ಮತ್ತು ನಾವು ನಂಬಿಗಸ್ತರಾಗಿರೋಕೆ ಸಹಾಯ ಮಾಡೋ ಐದು ಗುಣಗಳನ್ನ ಈಗ ನೋಡೋಣ.

ನಂಬಿಕೆ ಉಳಿಸಿಕೊಂಡ ಯೆಹೋವನ ಸೇವಕರಿಂದ ಕಲಿಯಿರಿ

3-4. (ಎ) ಜನರು ತನ್ನನ್ನ ನಂಬಬಹುದು ಅಂತ ದಾನಿಯೇಲ ಹೇಗೆ ತೋರಿಸಿಕೊಟ್ಟ? (ಬಿ) ನಾವು ಯಾವ ಪ್ರಶ್ನೆಗಳನ್ನ ಕೇಳಿಕೊಳ್ಳಬೇಕು?

3 ನಂಬಿಕೆ ಉಳಿಸಿಕೊಳ್ಳೋದ್ರಲ್ಲಿ ಪ್ರವಾದಿ ದಾನಿಯೇಲ ಒಳ್ಳೇ ಮಾದರಿ ಇಟ್ಟಿದ್ದಾನೆ. ಅವನನ್ನ ಬಾಬೆಲಿಗೆ ಕೈದಿಯಾಗಿ ಕರಕೊಂಡು ಹೋಗಿದ್ದಾಗಲೂ ಅವನಿಗೆ ಒಳ್ಳೇ ಹೆಸರಿತ್ತು. ಅವನು ಎಲ್ಲರ ನಂಬಿಕೆ ಗಳಿಸಿದ್ದ. ಯೆಹೋವನ ಸಹಾಯದಿಂದ ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನ ಕನಸಿನ ಅರ್ಥನ ಹೇಳಿದಾಗ ಅಲ್ಲಿದ್ದ ಜನ ಅವನನ್ನ ಇನ್ನೂ ಹೆಚ್ಚು ನಂಬೋಕೆ ಶುರುಮಾಡಿದ್ರು. ಒಂದುಸಲ ದಾನಿಯೇಲ ರಾಜ ನೆಬೂಕದ್ನೆಚ್ಚರನಿಗೆ ಯೆಹೋವ ಅವನ ಮೇಲೆ ಕೋಪ ಮಾಡಿಕೊಂಡಿದ್ದಾನೆ ಅಂತ ಹೇಳಬೇಕಿತ್ತು. ನೆಬೂಕದ್ನೆಚ್ಚರ ಕೋಪಿಷ್ಠನಾಗಿದ್ರೂ ದಾನಿಯೇಲ ಆ ಸಂದೇಶವನ್ನ ಧೈರ್ಯವಾಗಿ ಹೇಳಿದ. (ದಾನಿ. 2:12; 4:20-22, 25) ಇದಾಗಿ ಎಷ್ಟೋ ವರ್ಷಗಳಾದ ಮೇಲೂ ಮತ್ತೆ ಜನರ ನಂಬಿಕೆ ಗಳಿಸಿದ. ಗೋಡೆ ಮೇಲೆ ಬರೆದ ಬರಹದ ಅರ್ಥವನ್ನ ಸರಿಯಾಗಿ, ನಿಷ್ಕೃಷ್ಟವಾಗಿ ಹೇಳಿದ. (ದಾನಿ. 5:5, 25-29) ಅಷ್ಟೇ ಅಲ್ಲ, ಮೇದ್ಯನಾಗಿದ್ದ ದಾರ್ಯಾವೆಷ ಮತ್ತು ಅವನು ನೇಮಿಸಿದ ಅಧಿಕಾರಿಗಳಿಗೂ ದಾನಿಯೇಲ ‘ತುಂಬ ಸಮರ್ಥ’ ವ್ಯಕ್ತಿ ಅಂತ ಗೊತ್ತಿತ್ತು. ದಾನಿಯೇಲ “ತನ್ನ ಕೆಲಸನ ನಿಯತ್ತಿಂದ, ನಂಬಿಗಸ್ತಿಕೆಯಿಂದ ಮಾಡ್ತಿದ್ದ. ಯಾವುದೇ ರೀತಿ ಮೋಸ ಮಾಡ್ತಿರಲಿಲ್ಲ” ಅಂತಾನೂ ಅವರಿಗೆ ಗೊತ್ತಾಯ್ತು. (ದಾನಿ. 6:3, 4) ಯೆಹೋವನನ್ನು ಆರಾಧಿಸದೇ ಇರೋರು ಕೂಡ ದಾನಿಯೇಲನ ಮೇಲೆ ನಂಬಿಕೆ ಇಟ್ಟಿದ್ರು ಅಂದ್ರೆ ಅವನು ಎಷ್ಟರ ಮಟ್ಟಿಗೆ ನಂಬಿಕೆ ಉಳಿಸಿಕೊಂಡಿದ್ದ ಅಂತ ಯೋಚಿಸಿ!

4 ದಾನಿಯೇಲನ ಮಾದರಿಯನ್ನ ಮನಸ್ಸಲ್ಲಿಟ್ಟು ಈ ಪ್ರಶ್ನೆಗಳನ್ನ ಕೇಳಿಕೊಳ್ಳಿ. ಹೊರಗಿನ ಜನರ ಹತ್ರ ನಂಗೆ ಒಳ್ಳೇ ಹೆಸರಿದ್ಯಾ? ನಾನು ಜವಾಬ್ದಾರಿಯಿಂದ ಕೆಲಸ ಮಾಡೋನು, ಜನರ ನಂಬಿಕೆ ಉಳಿಸಿಕೊಳ್ಳೋನು ಅಂತ ಎಲ್ಲರೂ ಹೇಳ್ತಾರಾ? ಈ ಪ್ರಶ್ನೆನ ಕೇಳಿಕೊಳ್ಳೋದ್ರಿಂದ ನಮಗೆ ಬೇರೆಯವರ ನಂಬಿಕೆನ ಉಳಿಸಿಕೊಳ್ಳೋ ಆಸೆ ಇದೆ ಅಂತ ತೋರಿಸಿಕೊಡ್ತೀವಿ ಮತ್ತು ಯೆಹೋವನಿಗೂ ಒಳ್ಳೇ ಹೆಸರು ತರುತ್ತೀವಿ.

ನೆಹೆಮೀಯ ದೊಡ್ಡದೊಡ್ಡ ಕೆಲಸಗಳನ್ನ ಮಾಡೋಕೆ ನಂಬಿಕೆ ಉಳಿಸಿಕೊಂಡಿದ್ದ ವ್ಯಕ್ತಿಗಳನ್ನ ಆರಿಸಿಕೊಂಡ (ಪ್ಯಾರ 5 ನೋಡಿ)

5. ನಂಬಿಕೆ ಉಳಿಸಿಕೊಳ್ಳೋ ವ್ಯಕ್ತಿಯಾಗಿರೋಕೆ ಹನನ್ಯನಿಗೆ ಯಾವುದು ಸಹಾಯಮಾಡ್ತು?

5 ಕ್ರಿಸ್ತಪೂರ್ವ 455ರಲ್ಲಿ ರಾಜ್ಯಪಾಲನಾಗಿದ್ದ ನೆಹೆಮೀಯ ಯೆರೂಸಲೇಮ್‌ ಗೋಡೆಗಳನ್ನ ಪುನಃ ಕಟ್ಟಿದ. ಅದಾದ ಮೇಲೆ ಆ ಇಡೀ ಪಟ್ಟಣನ ನೋಡಿಕೊಳ್ಳೋಕೆ ಕೊಟ್ಟ ಕೆಲಸನ ಚೆನ್ನಾಗಿ, ನಂಬಿಗಸ್ತಿಕೆಯಿಂದ ಮಾಡೋ ಕೆಲವು ವ್ಯಕ್ತಿಗಳನ್ನ ಆರಿಸಿಕೊಳ್ಳಬೇಕಿತ್ತು. ಆಗ ಅವನು ಕೋಟೆಯ ಅಧಿಪತಿಯಾಗಿದ್ದ ಹನನ್ಯನನ್ನ ಆರಿಸಿಕೊಳ್ತಾನೆ. “ಯಾಕಂದ್ರೆ ಹನನ್ಯ ನಂಬಿಗಸ್ತನಾಗಿದ್ದ. ಬೇರೆಯವ್ರಿಗಿಂತ ಅವನಿಗೆ ಸತ್ಯ ದೇವರ ಮೇಲೆ ಜಾಸ್ತಿ ಭಯ ಇತ್ತು” ಅಂತ ಬೈಬಲ್‌ ಹೇಳುತ್ತೆ. (ನೆಹೆ. 7:2) ಹನನ್ಯನಿಗೆ ದೇವರ ಮೇಲೆ ಪ್ರೀತಿ ಮತ್ತು ಭಯಭಕ್ತಿ ಇದ್ದಿದ್ರಿಂದ ಅವನು ತನಗೆ ಕೊಟ್ಟ ಕೆಲಸನ ತುಂಬ ಶ್ರದ್ಧೆಯಿಂದ ಮಾಡುತ್ತಿದ್ದ. ನಾವೂ ಹನನ್ಯನ ತರ ಇದ್ರೆ ಯೆಹೋವ ನಮ್ಮನ್ನ ನಂಬಿ ದೊಡ್ಡದೊಡ್ಡ ಕೆಲಸಗಳನ್ನ ಕೊಡ್ತಾನೆ.

6. ತನ್ನ ಮೇಲೆ ನಂಬಿಕೆ ಇಡಬಹುದು ಅಂತ ತುಖಿಕ ಹೇಗೆ ತೋರಿಸಿಕೊಟ್ಟ?

6 ಅಪೊಸ್ತಲ ಪೌಲ ತುಖಿಕನನ್ನ ತುಂಬ ನಂಬುತ್ತಿದ್ದ. ಅವನು ಗೃಹಬಂಧನದಲ್ಲಿ ಇದ್ದಾಗ್ಲೂ ತುಖಿಕ ಅವನಿಗೆ ತುಂಬ ಸಹಾಯ ಮಾಡಿದ. ಪೌಲ ಅವನನ್ನ “ನಂಬಿಗಸ್ತ ಸೇವಕ” ಅಂತ ಕರೆದ. (ಎಫೆ. 6:21, 22) ಎಫೆಸ ಮತ್ತು ಕೊಲೊಸ್ಸೆಯಲ್ಲಿದ್ದ ಸಹೋದರರಿಗೆ ಪತ್ರ ಕಳಿಸೋಕಷ್ಟೇ ಅಲ್ಲ, ಅವರಿಗೆ ಪ್ರೋತ್ಸಾಹ ಕೊಡೋಕೆ, ಸಾಂತ್ವನ ಕೊಡೋಕೆ ಪೌಲ ಅವನನ್ನ ಕಳಿಸುತ್ತಿದ್ದ. ಇದ್ರಿಂದ ಅವನು ತುಖಿಕನನ್ನ ಎಷ್ಟು ನಂಬುತ್ತಿದ್ದ ಅಂತ ಗೊತ್ತಾಗುತ್ತೆ. ತುಖಿಕನ ಉದಾಹರಣೆ ನೋಡುವಾಗ ಯೆಹೋವನ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ನಮಗೆ ಸಹಾಯ ಮಾಡುತ್ತಿರೋ ಎಷ್ಟೋ ನಂಬಿಗಸ್ತ ಸಹೋದರರು ನಮ್ಮ ಕಣ್ಮುಂದೆ ಬರುತ್ತಾರೆ.—ಕೊಲೊ. 4:7-9.

7. ನಂಬಿಕೆ ಉಳಿಸಿಕೊಳ್ಳೋದ್ರ ಬಗ್ಗೆ ಹಿರಿಯರು ಮತ್ತು ಸಹಾಯಕ ಸೇವಕರಿಂದ ನೀವೇನು ಕಲಿಯಬಹುದು?

7 ದಾನಿಯೇಲ, ಹನನ್ಯ, ತುಖಿಕನ ತರಾನೇ ಈಗಿರೋ ಹಿರಿಯರು ಮತ್ತು ಸಹಾಯಕ ಸೇವಕರು ತುಂಬ ಶ್ರದ್ಧೆಯಿಂದ ಕೆಲಸ ಮಾಡ್ತಾರೆ. ಇದನ್ನ ನೋಡಿದಾಗ ನಮಗೆ ತುಂಬ ಖುಷಿಯಾಗುತ್ತೆ. ಮಧ್ಯವಾರದ ಕೂಟದಲ್ಲಿ ಯಾರು ಯಾವ ನೇಮಕವನ್ನ ಮಾಡಬೇಕು ಅನ್ನೋದನ್ನ ಮುಂಚಿತವಾಗೇ ಶೆಡ್ಯೂಲ್‌ ಮಾಡಿರುತ್ತಾರೆ ಅನ್ನೋ ನಂಬಿಕೆ ನಮಗಿದೆ. ನೇಮಕ ಸಿಕ್ಕಿದವರು ಚೆನ್ನಾಗಿ ತಯಾರಿಸಿ ಅದನ್ನ ಮಾಡಿದಾಗ ಹಿರಿಯರಿಗೆ ತುಂಬ ಖುಷಿಯಾಗುತ್ತೆ. ನಾವು ನಮ್ಮ ವಿದ್ಯಾರ್ಥಿಗಳನ್ನ ಕೂಟಗಳಿಗೆ ಕರೆಯೋಕೆ ಹಿಂದೆಮುಂದೆ ನೋಡಲ್ಲ. ಕೂಟದಲ್ಲಿ ಸಾರ್ವಜನಿಕ ಭಾಷಣ ಇರುತ್ತೋ ಇಲ್ವೋ ಅನ್ನೋ ಪ್ರಶ್ನೆ ನಮ್ಮ ಮನಸ್ಸಿಗೆ ಬರಲ್ಲ. ಯಾಕಂದ್ರೆ ಯಾರು ಭಾಷಣ ಕೊಡಬೇಕು ಅಂತ ಹಿರಿಯರು ಮುಂಚೆನೇ ನೇಮಿಸಿರುತ್ತಾರೆ ಅನ್ನೋ ನಂಬಿಕೆ ನಮಗಿದೆ. ಅಷ್ಟೇ ಅಲ್ಲ, ನಮಗೆ ಬೇಕಾಗಿರೋ ಪತ್ರಿಕೆಗಳು ಸಿಗೋ ವ್ಯವಸ್ಥೆನೂ ಹಿರಿಯರು ಮಾಡಿರುತ್ತಾರೆ. ನಮ್ಮ ನಂಬಿಕೆಯನ್ನ ಗಳಿಸಿರೋ ಇಂಥ ಹಿರಿಯರನ್ನ ಕೊಟ್ಟಿರೋದಕ್ಕೆ ಯೆಹೋವನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರು ಸಾಕಾಗಲ್ಲ ಅಲ್ವಾ? ಹಾಗಾದ್ರೆ ನಾವು ಹೇಗೆ ಬೇರೆಯವರ ನಂಬಿಕೆ ಉಳಿಸಿಕೊಳ್ಳೋದು ಅಂತ ಈಗ ನೋಡೋಣ.

ಗುಟ್ಟನ್ನ ಗುಟ್ಟಾಗೇ ಇಡಿ, ನಂಬಿಕೆ ಉಳಿಸಿಕೊಳ್ಳಿ

8. ಸಹೋದರರ ಮೇಲೆ ಪ್ರೀತಿ ಇದೆ ಅಂತ ನಾವು ಏನು ಮಾಡಿಬಿಡಬಾರದು? (ಜ್ಞಾನೋಕ್ತಿ 11:13)

8 ನಮಗೆ ನಮ್ಮ ಸಹೋದರ ಸಹೋದರಿಯರ ಮೇಲೆ ತುಂಬ ಪ್ರೀತಿ ಇದೆ. ಅದಕ್ಕೆ ಅವರು ಹೇಗಿದ್ದಾರೆ, ಅವರ ಜೀವನ ಹೇಗೆ ನಡೀತಾ ಇದೆ ಅಂತ ತಿಳಿದುಕೊಳ್ಳೋಕೆ ನಾವು ಇಷ್ಟಪಡ್ತೀವಿ. ಹಾಗಂತ ನಾವು ಅವರ ವೈಯಕ್ತಿಕ ವಿಷಯದಲ್ಲೆಲ್ಲಾ ಮೂಗು ತೂರಿಸಬಾರದು. ಒಂದನೇ ಶತಮಾನದ ಕ್ರೈಸ್ತರಲ್ಲಿ ಕೆಲವರು ‘ಹರಟೆ ಹೊಡೀತಾ ಬೇರೆಯವ್ರ ವಿಷ್ಯದಲ್ಲಿ ತಲೆಹಾಕ್ತಾ ಮಾತಾಡಬಾರದ ವಿಷ್ಯಗಳನ್ನೆಲ್ಲ ಮಾತಾಡ್ತಿದ್ರು.’ (1 ತಿಮೊ. 5:13) ನಮಗೆ ಅವರ ತರ ಇರೋಕೆ ಇಷ್ಟ ಇಲ್ಲ. ಆದ್ರೆ ಯಾರಾದ್ರೂ ನಿಮ್ಮನ್ನ ನಂಬಿ ಅವರ ವೈಯಕ್ತಿಕ ವಿಚಾರಗಳನ್ನ ನಿಮ್ಮ ಹತ್ರ ಹೇಳಿಕೊಂಡ್ರೆ ಏನು ಮಾಡ್ತೀರಾ? ಉದಾಹರಣೆಗೆ ಒಬ್ಬ ಸಹೋದರಿ ನಿಮ್ಮ ಹತ್ರ ಬಂದು ಅವರಿಗಿರೋ ಆರೋಗ್ಯದ ಸಮಸ್ಯೆನೋ ಅಥವಾ ಅವರ ಜೀವನದಲ್ಲಿ ಎದುರಿಸುತ್ತಿರೋ ಸಮಸ್ಯೆ ಬಗ್ಗೆನೋ ಹೇಳಬಹುದು. ಇದನ್ನ ಯಾರಿಗೂ ಹೇಳಬೇಡಿ ಅಂತ ಆ ಸಹೋದರಿ ಹೇಳಿದಾಗ ನೀವು ಅವರ ಮಾತಿಗೆ ಬೆಲೆ ಕೊಡಬೇಕು. ಅದನ್ನ ಯಾರಿಗೂ ಹೇಳಬಾರದು. b (ಜ್ಞಾನೋಕ್ತಿ 11:13 ಓದಿ.) ಈ ತರ ಇನ್ನೂ ಕೆಲವು ಸನ್ನಿವೇಶಗಳಲ್ಲಿ ಕೆಲವು ವಿಷಯಗಳನ್ನ ಗುಟ್ಟಾಗಿ ಇಡಬೇಕಾಗುತ್ತೆ. ಅವು ಯಾವುವು ಅಂತ ಈಗ ನೋಡೋಣ.

9. ಕುಟುಂಬದಲ್ಲಿರೋ ಪ್ರತಿಯೊಬ್ಬರೂ ಹೇಗೆ ನಂಬಿಕೆ ಉಳಿಸಿಕೊಳ್ಳಬಹುದು?

9 ಕುಟುಂಬದಲ್ಲಿ ನಂಬಿಕೆ ಉಳಿಸಿಕೊಳ್ಳಿ. ಕುಟುಂಬದಲ್ಲಿ ಕೆಲವು ವಿಷ್ಯಗಳನ್ನ ಗುಟ್ಟಾಗಿ ಇಡಬೇಕಾಗುತ್ತೆ. ಅದನ್ನ ಬೇರೆಯವರಿಗೆ ಹೇಳೋಕಾಗಲ್ಲ. ಮನೆಯ ವಿಷಯವನ್ನ ಗುಟ್ಟಾಗಿ ಇಡೋದು ಮನೆಲಿರೋ ಪ್ರತಿಯೊಬ್ಬರ ಜವಾಬ್ದಾರಿ. ಉದಾಹರಣೆಗೆ, ಹೆಂಡತಿ ಮಾಡೋ ಯಾವುದೋ ಒಂದು ವಿಷಯ ಗಂಡನಿಗೆ ತಮಾಷೆ ಅಂತ ಅನಿಸಬಹುದು. ಅದು ಅವರಿಗೆ ನಗು ಬರಿಸಬಹುದು. ಹಾಗಂತ ಆ ವಿಷಯನ ಬೇರೆಯವರ ಹತ್ರ ಹೋಗಿ ಹೇಳಿದ್ರೆ ಹೆಂಡತಿಗೆ ಬೇಜಾರಾಗುತ್ತೆ. ಗಂಡ ತನ್ನ ಹೆಂಡತಿನ ತುಂಬ ಪ್ರೀತಿಸಬೇಕು. ಹಾಗಾಗಿ ಬೇರೆಯವರ ಮುಂದೆ ಅವರಿಗೆ ಅವಮಾನ ಮಾಡಬಾರದು. (ಎಫೆ. 5:33) ಹದಿವಯಸ್ಸಿನ ಮಕ್ಕಳಿಗೆ ತಾವು ಮಾಡಿದ ತಪ್ಪನ್ನ ಅಪ್ಪ-ಅಮ್ಮ ಬೇರೆಯವರ ಮುಂದೆ ಹೇಳಿದ್ರೆ ಇಷ್ಟ ಆಗಲ್ಲ. ಅದನ್ನ ಹೆತ್ತವರು ಅರ್ಥ ಮಾಡಿಕೊಳ್ಳಬೇಕು. ಮಕ್ಕಳು ಮಾಡಿದ ತಪ್ಪನ್ನ ಬೇರೆಯವರ ಮುಂದೆ ಎತ್ತಿ ಆಡ್ತಾ ಅವರಿಗೆ ಅವಮಾನ ಮಾಡಬಾರದು. (ಕೊಲೊ. 3:21) ಮಕ್ಕಳು ಕೂಡ ಗುಟ್ಟಾಗಿ ಇಡಬೇಕಾದ ವಿಷಯವನ್ನ ಗುಟ್ಟಾಗೇ ಇಡಬೇಕು. ಅದನ್ನ ಬೇರೆಯವರಿಗೆ ಹೋಗಿ ಹೇಳಿಬಿಡಬಾರದು. (ಧರ್ಮೋ. 5:16) ಕುಟುಂಬದಲ್ಲಿರೋ ಪ್ರತಿಯೊಬ್ಬರೂ ಹೀಗೆ ನಡಕೊಂಡ್ರೆ ಅವರ ಮಧ್ಯೆ ಇರೋ ಬಾಂಧವ್ಯ ಗಟ್ಟಿಯಾಗುತ್ತೆ.

10. ನಿಜವಾದ ಸ್ನೇಹಿತರು ಏನು ಮಾಡಲ್ಲ? (ಜ್ಞಾನೋಕ್ತಿ 17:17)

10 ಸ್ನೇಹಿತರ ನಂಬಿಕೆ ಉಳಿಸಿಕೊಳ್ಳಿ. ಕೆಲವೊಮ್ಮೆ ನಮಗೆ ಸ್ನೇಹಿತರ ಹತ್ರ ನಮ್ಮ ಮನಸ್ಸಲ್ಲಿರೋದೆಲ್ಲಾ ಹೇಳಬೇಕು ಅಂತ ಅನಿಸುತ್ತೆ. ಆದ್ರೆ ನಾವು ಹೇಳಿಕೊಂಡ ಮೇಲೆ ಅವರು ಅದನ್ನ ಬೇರೆಯವರ ಹತ್ರ ಹೇಳಿಬಿಟ್ರೆ ನಮಗೆ ತುಂಬ ಬೇಜಾರಾಗುತ್ತೆ. ಅದಕ್ಕೆ ಬೇರೆಯವರ ಹತ್ರ ಮನಸ್ಸಲ್ಲಿರೋದನ್ನ ಹೇಳೋಕೆ ಹಿಂದೆಮುಂದೆ ನೋಡ್ತೀವಿ. ಆದ್ರೆ ಕೆಲವರು ನಾವು ಹೇಳಿದ ವಿಷಯನ ಯಾರಿಗೂ ಹೇಳಲ್ಲ. ಅಂಥವರೇ ನಮ್ಮ “ನಿಜವಾದ ಸ್ನೇಹಿತರು.”—ಜ್ಞಾನೋಕ್ತಿ 17:17 ಓದಿ.

ಗುಟ್ಟಾಗಿ ಇಡಬೇಕಾದ ವಿಷಯನ ಹಿರಿಯರು ತಮ್ಮ ಕುಟುಂಬದವರಿಗೆ ಹೇಳಲ್ಲ (ಪ್ಯಾರ 11 ನೋಡಿ) c

11. (ಎ) ಹಿರಿಯರು ಮತ್ತು ಅವರ ಹೆಂಡತಿಯರು ನಾವು ಇಟ್ಟಿರೋ ನಂಬಿಕೆನ ಹೇಗೆ ಉಳಿಸಿಕೊಂಡಿದ್ದಾರೆ? (ಬಿ) ಉದಾಹರಣೆಯಲ್ಲಿ ತಿಳಿಸಿರೋ ಹಿರಿಯನಿಂದ ನೀವು ಯಾವ ಪಾಠ ಕಲಿತ್ರಿ? (ಚಿತ್ರ ನೋಡಿ.)

11 ಸಭೆಯಲ್ಲಿ ನಂಬಿಕೆ ಉಳಿಸಿಕೊಳ್ಳಿ. ನಾವು ಹೇಳಿದ ವಿಷಯನ ಗುಟ್ಟಾಗಿ ಇಟ್ಟುಕೊಳ್ಳೋ ಹಿರಿಯರು ನಮಗೆ “ಬಿರುಗಾಳಿಯಿಂದ ಮರೆಮಾಡೋ ಆಸರೆ ತರ, . . . ಆಶ್ರಯದ ತರ ಇರ್ತಾರೆ.” (ಯೆಶಾ. 32:2) ನಾವು ನಮ್ಮ ಮನಸ್ಸಲ್ಲಿ ಇರೋದನ್ನೆಲ್ಲಾ ಅವರ ಹತ್ರ ಹೇಳಬಹುದು. ಅವರು ಅದನ್ನ ಯಾರಿಗೂ ಹೇಳಲ್ಲ. ಗುಟ್ಟಾಗಿ ಇಟ್ಟುಕೊಂಡಿರೋ ವಿಷಯನ ನಮಗೆ ಹೇಳಬೇಕು ಅಂತ ನಾವೂ ಅವರನ್ನ ಒತ್ತಾಯ ಮಾಡಬಾರದು. ಈ ವಿಷಯದಲ್ಲಿ ಹಿರಿಯರ ಹೆಂಡತಿಯರನ್ನ ನಾವು ಮೆಚ್ಚಿಕೊಳ್ತೀವಿ. ಯಾಕಂದ್ರೆ ತಮ್ಮ ಗಂಡ ಗುಟ್ಟಾಗಿ ಇಟ್ಟಿರೋ ವಿಷಯನ ಅವರು ಕೇಳೋಕೆ ಹೋಗಲ್ಲ. ಇಂಥ ವಿಷಯಗಳನ್ನ ತಿಳಿದುಕೊಳ್ಳದೇ ಇದ್ರೆ ಅವರಿಗೇ ಒಳ್ಳೇದು. ಇದರ ಬಗ್ಗೆ ಒಬ್ಬ ಹಿರಿಯನ ಹೆಂಡತಿ ಹೀಗೆ ಹೇಳ್ತಾರೆ: “ನಮ್ಮ ಯಜಮಾನರು ಸಹೋದರ ಸಹೋದರಿಯರಿಗೆ ಪರಿಪಾಲನಾ ಭೇಟಿ ಮಾಡೋಕೆ ಹೋದಾಗ ಯಾರ ಹತ್ರ ಹೋದ್ರು, ಏನು ಮಾತಾಡಿದ್ರು ಅಂತ ಯಾವುದನ್ನೂ ನನ್ನ ಹತ್ರ ಹೇಳಲ್ಲ. ಅವರು ಅದನ್ನ ಹೇಳದೇ ಇರೋದಕ್ಕೆ ನಾನು ಅವರಿಗೆ ತುಂಬ ಥ್ಯಾಂಕ್ಸ್‌ ಹೇಳ್ತೀನಿ. ಇದ್ರಿಂದ ಬೇರೆಯವರ ಸಮಸ್ಯೆ ನನಗೆ ಗೊತ್ತಾಗೋದೂ ಇಲ್ಲ, ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳೋಕೂ ಹೋಗಲ್ಲ. ಎಲ್ಲರ ಜೊತೆ ಚೆನ್ನಾಗಿರ್ತೀನಿ. ಅಷ್ಟೇ ಅಲ್ಲ, ನಾನು ನನ್ನ ಮನೆಯವರ ಹತ್ರ ಮನಸ್ಸಲ್ಲಿರೋದನ್ನ ಹೇಳಿದಾಗ ಅವರು ಅದನ್ನ ಯಾರಿಗೂ ಹೇಳಲ್ಲ ಅನ್ನೋ ನಂಬಿಕೆ ನನಗಿದೆ.” ಈ ಹಿರಿಯನ ತರಾನೇ ನಾವು ನಂಬಿಕೆ ಉಳಿಸಿಕೊಳ್ಳೋಕೆ ಪ್ರಯತ್ನ ಮಾಡಬೇಕು. ಇದಕ್ಕೆ ಸಹಾಯ ಮಾಡೋ 5 ಗುಣಗಳನ್ನ ನೋಡೋಣ.

ನಂಬಿಕೆ ಉಳಿಸಿಕೊಳ್ಳೋಕೆ ಸಹಾಯ ಮಾಡೋ ಗುಣಗಳು

12. ಬೇರೆಯವರು ನಮ್ಮ ಮೇಲಿಟ್ಟಿರೋ ನಂಬಿಕೆನ ಉಳಿಸಿಕೊಳ್ಳೋಕೆ ಪ್ರೀತಿ ಹೇಗೆ ಸಹಾಯ ಮಾಡುತ್ತೆ? ಉದಾಹರಣೆ ಕೊಡಿ.

12 ಪ್ರೀತಿ ಇಲ್ಲದೇ ನಂಬಿಕೆ ಹುಟ್ಟಲ್ಲ. ಯೆಹೋವನನ್ನು ಮತ್ತು ಬೇರೆಯವರನ್ನು ಪ್ರೀತಿಸಬೇಕು ಅನ್ನೋ ಎರಡು ದೊಡ್ಡ ಆಜ್ಞೆಗಳನ್ನ ಯೇಸು ಕೊಟ್ಟನು. (ಮತ್ತಾ. 22:37-39) ಯೆಹೋವನನ್ನು ನಾವು ಪ್ರೀತಿಸೋದ್ರಿಂದ ಆತನ ತರ ನಾವೂ ಬೇರೆಯವರು ನಮ್ಮ ಮೇಲೆ ಇಟ್ಟಿರೋ ನಂಬಿಕೆನ ಉಳಿಸಿಕೊಳ್ಳೋಕೆ ಪ್ರಯತ್ನ ಮಾಡ್ತೀವಿ. ಉದಾಹರಣೆಗೆ, ಸಹೋದರ ಸಹೋದರಿಯರನ್ನ ನಾವು ಪ್ರೀತಿಸ್ತಾ ಇರೋದ್ರಿಂದ ಅವರ ಸ್ವಂತ ವಿಷಯಗಳನ್ನ ನಾವು ಬೇರೆಯವರಿಗೆ ಹೇಳೋಕೆ ಹೋಗಲ್ಲ. ಅವರಿಗೆ ಅವಮಾನ ಅಥವಾ ನೋವಾಗೋ ತರ ನಡಕೊಳ್ಳಲ್ಲ.—ಯೋಹಾ. 15:12.

13. ನಂಬಿಕೆ ಉಳಿಸಿಕೊಳ್ಳೋಕೆ ದೀನತೆ ಹೇಗೆ ಸಹಾಯ ಮಾಡುತ್ತೆ?

13 ನಂಬಿಕೆ ಉಳಿಸಿಕೊಳ್ಳೋಕೆ ದೀನತೆ ಬೇಕು. ದೀನತೆ ಇರೋ ವ್ಯಕ್ತಿ, ಬೇರೆಯವರ ಮುಂದೆ ಹೀರೋ ಆಗಬೇಕು ಅಂತ ಗುಟ್ಟಾಗಿ ಇಡಬೇಕಾದ ವಿಷಯಗಳನ್ನ ಬೇರೆಯವರಿಗೆ ಹೇಳಲ್ಲ. (ಫಿಲಿ. 2:3) ಯಾರಿಗೂ ಗೊತ್ತಿಲ್ಲದ ವಿಷ್ಯ ತನಗೆ ಗೊತ್ತಿದೆ ಅನ್ನೋ ತರ ನಡೆದುಕೊಳ್ಳಲ್ಲ. ಬೈಬಲಲ್ಲಿ ಅಥವಾ ನಮ್ಮ ಪ್ರಕಾಶನಗಳಲ್ಲಿ ಇಲ್ಲದಿರೋ ವಿಷಯಗಳ ಬಗ್ಗೆ ತನ್ನ ಸ್ವಂತ ಅಭಿಪ್ರಾಯವನ್ನ ಅಥವಾ ತನಗೆ ಅನಿಸಿದ್ದನ್ನ ಎಲ್ಲರಿಗೂ ಹಬ್ಬಿಸೋಕೆ ಹೋಗಲ್ಲ.

14. ನಂಬಿಕೆ ಉಳಿಸಿಕೊಳ್ಳೋಕೆ ವಿವೇಚನೆ ಹೇಗೆ ಸಹಾಯ ಮಾಡುತ್ತೆ?

14 ವಿವೇಚನೆ ಇರೋ ವ್ಯಕ್ತಿ “ಸುಮ್ಮನಿರೋಕೆ ಒಂದು ಸಮಯ, ಮಾತಾಡೋಕೆ ಒಂದು ಸಮಯ” ಇದೆ ಅಂತ ಅರ್ಥಮಾಡಿಕೊಳ್ತಾನೆ. (ಪ್ರಸಂ. 3:7) “ಮಾತು ಬೆಳ್ಳಿ, ಮೌನ ಬಂಗಾರ” ಅನ್ನೋ ಗಾದೆನ ನೀವೆಲ್ಲರೂ ಕೇಳಿರುತ್ತೀರ. ಕೆಲವೊಮ್ಮೆ ಮಾತಾಡೋದಕ್ಕಿಂತ ಸುಮ್ಮನಿರೋದೇ ವಾಸಿ. “ಬುದ್ಧಿ ಇರುವವನು ಮೌನವಾಗಿ ಇರ್ತಾನೆ” ಅಂತ ಜ್ಞಾನೋಕ್ತಿ 11:12 ಹೇಳುತ್ತೆ. ಇದಕ್ಕೆ ಒಂದು ಉದಾಹರಣೆ ನೋಡಿ. ಅನುಭವ ಇರೋ ಒಬ್ಬ ಹಿರಿಯನ ಹತ್ರ ಬೇರೆ ಸಭೆಯ ಹಿರಿಯರು ಕೆಲವೊಮ್ಮೆ ಸಲಹೆ ಕೇಳ್ತಿದ್ರು. ಆ ಹಿರಿಯನ ಬಗ್ಗೆ ಒಬ್ಬ ಸಹೋದರ ಹೀಗೆ ಹೇಳಿದ್ರು: “ಅವರು ಒಂದು ಸಭೆಯ ವಿಷಯನ ಇನ್ನೊಂದು ಸಭೆಯವರ ಹತ್ರ ಯಾವತ್ತೂ ಹೇಳ್ತಿರಲಿಲ್ಲ, ಆ ಸಭೆಯ ಗುಟ್ಟನ್ನ ರಟ್ಟು ಮಾಡ್ತಿರಲಿಲ್ಲ. ತುಂಬ ಹುಷಾರಾಗಿರುತ್ತಿದ್ರು.” ಆ ಹಿರಿಯ ಹೀಗೆ ವಿವೇಚನೆಯಿಂದ ನಡಕೊಳ್ತಿದ್ರಿಂದ ಅವರ ಸಭೆಯ ಹಿರಿಯರು ಅವರನ್ನ ಗೌರವಿಸ್ತಿದ್ರು ಮತ್ತು ಅವರನ್ನ ನಂಬ್ತಿದ್ರು.

15. ನಾವು ಪ್ರಾಮಾಣಿಕರಾಗಿದ್ರೆ ಬೇರೆಯವರು ನಮ್ಮನ್ನ ನಂಬ್ತಾರೆ ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ.

15 ನಾವು ಪ್ರಾಮಾಣಿಕರಾಗಿದ್ರೆ ಬೇರೆಯವರ ನಂಬಿಕೆ ಉಳಿಸಿಕೊಳ್ತೀವಿ. ಒಬ್ಬ ಪ್ರಾಮಾಣಿಕ ವ್ಯಕ್ತಿ ಯಾವಾಗಲೂ ಸತ್ಯಾನೇ ಹೇಳ್ತಾನೆ. (ಎಫೆ. 4:25; ಇಬ್ರಿ. 13:18) ಅದಕ್ಕೆ ನಾವು ಅವನನ್ನ ನಂಬ್ತೀವಿ. ಉದಾಹರಣೆಗೆ ನಿಮಗೆ ಕೂಟದಲ್ಲಿ ಒಂದು ನೇಮಕ ಸಿಕ್ಕಿದೆ ಅಂದುಕೊಳ್ಳಿ. ಅದನ್ನ ಚೆನ್ನಾಗಿ ಮಾಡಬೇಕು ಅನ್ನೋ ಆಸೆ ನಿಮಗಿದೆ. ಅದಕ್ಕೆ ಯಾರಾದ್ರೂ ನೀವು ಮಾಡೋ ನೇಮಕವನ್ನ ನೋಡಿ ಅದನ್ನ ಇನ್ನೂ ಚೆನ್ನಾಗಿ ಮಾಡೋಕೆ ಏನು ಮಾಡಬೇಕು ಅಂತ ಹೇಳಿದ್ರೆ ಚೆನ್ನಾಗಿರುತ್ತೆ ಅಂತ ನಿಮಗನಿಸುತ್ತೆ. ಆಗ ನೀವು ಯಾರ ಹತ್ರ ಹೋಗುತ್ತೀರ? ಸಲಹೆ ಕೊಟ್ರೆ ನಿಮಗೆಲ್ಲಿ ಬೇಜಾರಾಗುತ್ತೋ ಅಂತ ‘ನೀವು ಚೆನ್ನಾಗೇ ಮಾಡ್ತಾ ಇದ್ದೀರ’ ಅಂತ ಹೇಳೋರ ಹತ್ರನಾ? ಅಥವಾ ಮುಚ್ಚುಮರೆಯಿಲ್ಲದೆ, ಪ್ರೀತಿಯಿಂದ ನೀವು ಎಲ್ಲಿ ಸರಿಮಾಡಿಕೊಳ್ಳಬೇಕು, ನೇಮಕವನ್ನ ಇನ್ನೂ ಚೆನ್ನಾಗಿ ಮಾಡೋಕೆ ಏನು ಮಾಡಬೇಕು ಅಂತ ಹೇಳೋರ ಹತ್ರನಾ? “ಒಳಗೇ ಇಟ್ಟಿರೋ ಪ್ರೀತಿಗಿಂತ ಬೇರೆಯವ್ರ ಮುಂದೆ ತಿದ್ದೋದು ಎಷ್ಟೋ ಒಳ್ಳೇದು” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋ. 27:5, 6) ಅವರು ಕೊಟ್ಟ ಸಲಹೆಯಿಂದ ಮೊದಮೊದಲು ನಿಮಗೆ ಬೇಜಾರಾದ್ರೂ ಆಮೇಲೆ ಅದರಿಂದ ತುಂಬ ಪ್ರಯೋಜನ ಆಗುತ್ತೆ.

16. ನಮಗೆ ಯಾಕೆ ಸ್ವನಿಯಂತ್ರಣ ಬೇಕು? (ಜ್ಞಾನೋಕ್ತಿ 10:19)

16 ಬೇರೆಯವರು ನಮ್ಮನ್ನ ನಂಬಬೇಕು ಅಂದ್ರೆ ನಮಗೆ ಸ್ವನಿಯಂತ್ರಣ ಇರಲೇಬೇಕು. ಗುಟ್ಟಾಗಿ ಇಡಬೇಕಾದ ವಿಷಯನ ಬೇರೆಯವರಿಗೆ ಹೇಳದೇ ಇರೋಕೆ ಈ ಗುಣ ನಮಗೆ ಸಹಾಯ ಮಾಡುತ್ತೆ. (ಜ್ಞಾನೋಕ್ತಿ 10:19 ಓದಿ.) ಅದ್ರಲ್ಲೂ ಸೋಶಿಯಲ್‌ ಮೀಡಿಯಾ ಬಳಸುವಾಗ ನಾವು ತುಂಬ ಹುಷಾರಾಗಿರಬೇಕು. ಯಾಕಂದ್ರೆ ನಾವು ಗುಟ್ಟಾಗಿ ಇಡಬೇಕಾದ ಮಾಹಿತಿಯನ್ನ ನಮಗೇ ಗೊತ್ತಿಲ್ಲದೆ ಬರಿ ಒಂದು ಸಲ ಪೋಸ್ಟ್‌ ಮಾಡಿದ್ರೂ ಅದು ಎಲ್ಲರ ಕೈಗೆ ಸಿಕ್ಕಿಬಿಡುತ್ತೆ. ಆಮೇಲೆ ಆ ಮಾಹಿತಿನ ಯಾರು ಹೇಗೆ ಬೇಕಾದ್ರೂ ಬಳಸಿಕೊಳ್ಳಬಹುದು. ಇದ್ರಿಂದ ತುಂಬ ತೊಂದ್ರೆಗಳಾಗುತ್ತೆ. ಯೆಹೋವನ ಸಾಕ್ಷಿಗಳನ್ನ ನಿಷೇಧಿಸಿರೋ ದೇಶದಲ್ಲಿ ನೀವಿದ್ರೆ ಪೊಲೀಸರು ನಿಮ್ಮನ್ನ ವಿಚಾರಣೆ ಮಾಡುವಾಗ ಸ್ವನಿಯಂತ್ರಣ ತೋರಿಸಬೇಕು. ವಿರೋಧಿಗಳು ಸಭೆಯ ಮಾಹಿತಿಯನ್ನ ನಿಮ್ಮಿಂದ ಬಾಯಿಬಿಡಿಸೋಕೆ ತುಂಬ ಪ್ರಯತ್ನ ಮಾಡ್ತಾರೆ. ಆಗ ನಾವು ಎಲ್ಲಾ ಹೇಳಿಬಿಟ್ರೆ ಸಹೋದರ ಸಹೋದರಿಯರ ಜೀವಕ್ಕೆ ಅಪಾಯ ಆಗಬಹುದು. ಇಂಥ ಸಂದರ್ಭಗಳಲ್ಲಿ ನಮ್ಮ “ಬಾಯಿಗೆ ಕಡಿವಾಣ” ಹಾಕಬೇಕು. (ಕೀರ್ತ. 39:1) ನಮ್ಮ ಕುಟುಂಬದವರ, ಸಹೋದರರ, ಸಭೆಯ ಮತ್ತು ಯೆಹೋವ ದೇವರ, ಹೀಗೆ ಎಲ್ಲರ ನಂಬಿಕೆನ ಉಳಿಸಿಕೊಳ್ಳಬೇಕು. ಆ ನಂಬಿಕೆ ಉಳಿಸಿಕೊಳ್ಳಬೇಕಂದ್ರೆ ನಮಗೆ ಸ್ವನಿಯಂತ್ರಣ ಇರಬೇಕು.

17. ಸಭೆಲಿರೋರು ಒಬ್ಬರನ್ನೊಬ್ಬರು ನಂಬೋಕೆ ನಾವೇನು ಮಾಡಬಹುದು?

17 ನಮ್ಮನ್ನ ಪ್ರೀತಿಸೋ, ನಮ್ಮ ನಂಬಿಕೆನ ಉಳಿಸಿಕೊಂಡಿರೋ ಸಹೋದರ ಸಹೋದರಿಯರನ್ನ ಕೊಟ್ಟಿರೋದಕ್ಕೆ ನಾವು ಯೆಹೋವನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ. ನಮ್ಮ ಸಹೋದರ ಸಹೋದರಿಯರ ನಂಬಿಕೆ ಉಳಿಸಿಕೊಳ್ಳೋ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ. ಅದಕ್ಕೆ ನಾವು ಪ್ರೀತಿ, ದೀನತೆ, ವಿವೇಚನೆ, ಪ್ರಾಮಾಣಿಕತೆ ಮತ್ತು ಸ್ವನಿಯಂತ್ರಣ ಅನ್ನೋ ಗುಣಗಳನ್ನ ಬೆಳೆಸಿಕೊಳ್ಳಬೇಕು. ಆಗ ನಮ್ಮನ್ನ ನೋಡಿ ಸಭೆಲಿರೋ ಬೇರೆಯವರೂ ಕಲಿತಾರೆ. ನಾವು ಬೇರೆಯವರ ನಂಬಿಕೆನ ಒಂದು ಸಲ ಉಳಿಸಿಕೊಂಡ್ರೆ ಸಾಕಾಗಲ್ಲ, ಅದನ್ನ ಯಾವಾಗಲೂ ಉಳಿಸಿಕೊಳ್ಳಬೇಕು. ಅದಕ್ಕೆ ಯೆಹೋವನ ತರ ನಾವೂ ಬೇರೆಯವರು ನಮ್ಮ ಮೇಲಿಟ್ಟಿರೋ ನಂಬಿಕೆನ ಉಳಿಸಿಕೊಳ್ಳೋಣ.

ಗೀತೆ 125 ದೇವಪ್ರಭುತ್ವಾತ್ಮಕ ಕ್ರಮಕ್ಕೆ ನಿಷ್ಠೆಯ ಅಧೀನತೆ

a ಬೇರೆಯವರು ನಮ್ಮನ್ನ ನಂಬಬೇಕಾದ್ರೆ ಮೊದಲು ನಾವು ಅವರ ನಂಬಿಕೆಯನ್ನ ಉಳಿಸಿಕೊಳ್ಳಬೇಕು. ನಾವ್ಯಾಕೆ ಒಬ್ಬರನ್ನೊಬ್ಬರು ನಂಬಬೇಕು ಮತ್ತು ಬೇರೆಯವರ ನಂಬಿಕೆ ಉಳಿಸಿಕೊಳ್ಳೋ ವ್ಯಕ್ತಿಗಳಾಗೋಕೆ ನಮಗೆ ಯಾವ ಗುಣಗಳು ಸಹಾಯ ಮಾಡುತ್ತೆ ಅಂತ ಈ ಲೇಖನದಲ್ಲಿ ನೋಡೋಣ.

b ಸಭೆಯಲ್ಲಿ ಯಾರಾದರೂ ಯೆಹೋವನ ವಿರುದ್ಧ ತುಂಬ ದೊಡ್ಡ ತಪ್ಪು ಮಾಡಿದ್ದಾರೆ ಅಂತ ಗೊತ್ತಾದಾಗ ನಾವು ಅವರಿಗೆ ಹಿರಿಯರ ಹತ್ರ ಸಹಾಯ ಪಡಕೊಳ್ಳೋಕೆ ಹೇಳಬೇಕು. ಅವರು ಒಂದುವೇಳೆ ಹೇಳಲಿಲ್ಲ ಅಂದ್ರೆ ಆಧ್ಯಾತ್ಮಿಕ ಕುರುಬ ತರ ಇರೋ ಹಿರಿಯರ ಹತ್ರ ನಾವೇ ಹೋಗಿ ಹೇಳಬೇಕು. ಆಗ ಯೆಹೋವ ಮತ್ತು ಸಭೆಲಿರೋರು ನಮ್ಮ ಮೇಲಿಟ್ಟಿರೋ ನಂಬಿಕೆನ ಉಳಿಸಿಕೊಂಡ ಹಾಗಾಗುತ್ತೆ.

c ಚಿತ್ರ ವಿವರಣೆ: ಒಬ್ಬ ಹಿರಿಯ ಸಭೆ ವಿಷಯವನ್ನ ಮನೆಯವರಿಗೆ ಹೇಳದೆ ಗುಟ್ಟಾಗಿ ಇಟ್ಟಿದ್ದಾನೆ.