ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಅಪೊಸ್ತಲ ಪೌಲ ತಾನು ‘ದಿನ ತುಂಬೋ ಮೊದ್ಲೇ ಹುಟ್ಟಿದವನು’ ಅಂತ ಹೇಳಿದ್ದರ ಅರ್ಥ ಏನು? (1 ಕೊರಿಂಥ 15:8)

ಪೌಲ ಒಂದನೇ ಕೊರಿಂಥ 15:8ರಲ್ಲಿ “ಕೊನೆಗೆ, ದಿನ ತುಂಬೋ ಮೊದ್ಲೇ ಹುಟ್ಟಿದವನ ತರ ಇರೋ ನನಗೂ ಕಾಣಿಸ್ಕೊಂಡನು” ಅಂತ ಹೇಳಿದನು. ಸ್ವರ್ಗದಲ್ಲಿ ಮಹಿಮೆಯಿಂದಿರೋ ಯೇಸುವನ್ನ ದರ್ಶನದಲ್ಲಿ ನೋಡಿದ್ರ ಬಗ್ಗೆ ಇಲ್ಲಿ ಅಪೊಸ್ತಲ ಪೌಲ ಮಾತಾಡ್ತಾ ಇದ್ದಾನೆ ಅಂತ ನಾವು ಅಂದುಕೊಂಡಿದ್ವಿ. ಅಂದ್ರೆ ಪೌಲ ಆತ್ಮಿಕ ಜೀವಕ್ಕಾಗಿ ಮತ್ತೆ ಎದ್ದು ಬಂದ ಅಥವಾ ಹುಟ್ಟಿದ ಹಾಗೂ ಸ್ವರ್ಗಕ್ಕೆ ಹೋಗೋ ಬಹುಮಾನ ಅವನಿಗೆ ಸಿಕ್ಕಿತ್ತು ಅಂತ ಅರ್ಥ ಮಾಡಿಕೊಂಡಿದ್ವಿ. ಆದ್ರೆ ಯೆಹೋವ ಜನರನ್ನ ಸ್ವರ್ಗಕ್ಕೆ ಕರೆದುಕೊಳ್ಳೋ ಏರ್ಪಾಡನ್ನ ಆಗಿನ್ನೂ ಮಾಡಿರಲಿಲ್ಲ. ಈ ವಚನದ ಬಗ್ಗೆ ಹೆಚ್ಚು ಸಂಶೋಧನೆ ಮಾಡಿದಾಗ ಇದರ ಅರ್ಥ ಏನು ಅಂತ ನಮಗೆ ಗೊತ್ತಾಯ್ತು.

ಪೌಲ ಕ್ರೈಸ್ತನಾದಾಗ ಏನಾಯ್ತು ಅನ್ನೋದರ ಬಗ್ಗೆ ಇಲ್ಲಿ ಹೇಳ್ತಿದ್ದಾನೆ ನಿಜ. ಆದ್ರೆ “ದಿನ ತುಂಬೋ ಮೊದ್ಲೇ ಹುಟ್ಟಿದವನ” ತರ ಇದ್ದೀನಿ ಅಂತ ಅವನು ಹೇಳಿದ ಮಾತಿಗೆ ಬೇರೆಬೇರೆ ಅರ್ಥಗಳಿರಬಹುದು.

ಪೌಲ ದಿಢೀರ್‌ ಅಂತ ಯೇಸುವಿನ ಶಿಷ್ಯನಾದ ಮತ್ತು ಆಗ ಅವನು ತುಂಬ ಹೆದರಿಕೊಂಡಿದ್ದ. ದಿನ ತುಂಬೋ ಮೊದಲೇ ಮಗು ಹುಟ್ಟುತ್ತೆ ಅಂತ ಅಪ್ಪ ಅಮ್ಮನಿಗೆ ಗೊತ್ತಾದಾಗ ಅವರಿಗೆ ಭಯ, ಆತಂಕ ಆಗುತ್ತೆ. ಯಾಕಂದ್ರೆ ಹೀಗಾಗುತ್ತೆ ಅಂತ ಅವರು ಅಂದುಕೊಂಡೇ ಇರಲ್ಲ. ಸೌಲ (ಪೌಲ) ಕ್ರೈಸ್ತರನ್ನ ಹಿಂಸಿಸೋಕೆ ದಮಸ್ಕಕ್ಕೆ ಹೋಗುತ್ತಿದ್ದಾಗ ಒಂದು ದರ್ಶನ ನೋಡಿದ. ಅದರಲ್ಲಿ ಜೀವಂತವಾಗಿ ಎದ್ದು ಬಂದಿದ್ದ ಯೇಸು ಅವನಿಗೆ ಕಾಣಿಸಿಕೊಂಡನು. ತನಗೆ ಈ ದರ್ಶನ ಸಿಗುತ್ತೆ ಅಂತ ಪೌಲ ಕನಸು-ಮನಸ್ಸಲ್ಲೂ ಅಂದುಕೊಂಡಿರಲಿಲ್ಲ. ಈ ಘಟನೆಯಿಂದ ಅವನು ಎಷ್ಟು ಬೆಚ್ಚಿಬಿದ್ದ ಅಂದ್ರೆ ಅವನಿಗೆ ಕೆಲವು ದಿನಗಳ ತನಕ ಕಣ್ಣು ಕಾಣದೇ ಹೋಯ್ತು. (ಅ. ಕಾ. 9:1-9, 17-19) ಆದ್ರೆ ಅವನು ಯೇಸುವಿನ ಶಿಷ್ಯನಾಗಿದ್ದನ್ನ ನೋಡಿ ಅವನಿಗೆ ಮಾತ್ರ ಅಲ್ಲ ಅವನನ್ನ ನೋಡಿ ಭಯ ಪಡುತ್ತಿದ್ದ ಕ್ರೈಸ್ತರಿಗೂ ಆಶ್ಚರ್ಯ ಆಯ್ತು.

ಅವನು “ತಪ್ಪಾದ ಸಮಯದಲ್ಲಿ” ಯೇಸುವಿನ ಶಿಷ್ಯನಾದ. ‘ದಿನ ತುಂಬೋ ಮೊದ್ಲೇ ಹುಟ್ಟೋದು’ ಅನ್ನೋ ಗ್ರೀಕ್‌ ಪದ “ತಪ್ಪಾದ ಸಮಯದಲ್ಲಿ ಹುಟ್ಟೋದು” ಅನ್ನೋ ಅರ್ಥವನ್ನೂ ಕೊಡುತ್ತೆ. ಇದೇ ವಚನ ದಿ ಜೆರೂಸಲೇಮ್‌ ಬೈಬಲ್‌ನಲ್ಲಿ ಹೀಗಿದೆ: “ಯಾರೂ ನಿರೀಕ್ಷಿಸದ ಸಮಯದಲ್ಲಿ ಹುಟ್ಟಿದವನ ತರ ನಾನಿದ್ದೆ.” ಪೌಲ ಶಿಷ್ಯನಾಗೋ ಮುಂಚೆನೇ ಯೇಸು ಸ್ವರ್ಗಕ್ಕೆ ಹೋಗಿದ್ದನು. ಪೌಲ ಈಗಾಗಲೇ ಹಿಂದಿನ ವಚನಗಳಲ್ಲಿ ಹೇಳಿದ ತರ ಯೇಸು ಜೀವಂತವಾಗಿ ಎದ್ದು ಬಂದಿದ್ದನ್ನ ತುಂಬ ಜನರು ನೋಡಿದ್ರು. ಆದ್ರೆ ಪೌಲ ನೋಡಿರಲಿಲ್ಲ. (1 ಕೊರಿಂ. 15:4-8) ಯೇಸುನೇ ಪೌಲನಿಗೆ ದಿಢೀರಂತ ಕಾಣಿಸಿಕೊಂಡಿದ್ದು ಒಂದು ಒಳ್ಳೇ ಅವಕಾಶ ಆಗಿದ್ರೂ ಒಂದರ್ಥದಲ್ಲಿ ಅದು “ತಪ್ಪಾದ ಸಮಯದಲ್ಲಿ” ನಡೆದ ಹಾಗೆ ಅವನಿಗೆ ಅನಿಸ್ತು.

ತಾನೇನೂ ಅಲ್ಲ ಅಂತ ಪೌಲ ದೀನತೆಯಿಂದ ಒಪ್ಪಿಕೊಳ್ತಿದ್ದಾನೆ. ಆ ಕಾಲದಲ್ಲಿ ದಿನ ತುಂಬೋ ಮೊದಲು ಮಗು ಹುಟ್ಟಿಬಿಟ್ರೆ ಅದನ್ನ ಜನ ಕೀಳಾಗಿ ನೋಡ್ತಿದ್ರು. ಪೌಲ ತನ್ನ ಬಗ್ಗೆ ಹೀಗೆ ಹೇಳಿಕೊಂಡಿದ್ರಿಂದ ಅವನು ತನ್ನನ್ನೇ ತಾನು ಕೀಳು ಅಂದುಕೊಳ್ತಿದ್ದ ಅಂತ ಕೆಲವು ಪಂಡಿತರು ಹೇಳ್ತಾರೆ. ಪೌಲ ತಾನು ಅಪೊಸ್ತಲನಾಗಿರೋಕೆ ಲಾಯಕ್ಕಿಲ್ಲ ಅಂತ ಅಂದುಕೊಳ್ಳುತ್ತಿದ್ದ. ಅದಕ್ಕೆ ಅವನು, “ನಾನು ಅಪೊಸ್ತಲರಲ್ಲೇ ತುಂಬ ಕನಿಷ್ಠನು. ಎಷ್ಟಂದ್ರೆ ದೇವರ ಸಭೆಗೆ ಹಿಂಸೆ ಕೊಟ್ಟ ನನಗೆ ಅಪೊಸ್ತಲ ಅಂತ ಕರೆಸಿಕೊಳ್ಳೋ ಯೋಗ್ಯತೆ ಇಲ್ಲ. ಆದ್ರೆ ದೇವರ ಅಪಾರ ಕೃಪೆಯಿಂದಾನೇ ನಾನು ಅಪೊಸ್ತಲನಾಗಿದ್ದೀನಿ. ಆತನು ನನಗೆ ತೋರಿಸಿದ ಅಪಾರ ಕೃಪೆ ವ್ಯರ್ಥ ಆಗಲಿಲ್ಲ” ಅಂತ ಹೇಳಿದ.—1 ಕೊರಿಂ. 15:9, 10.

ಹಾಗಾದ್ರೆ ಅಪೊಸ್ತಲ ಪೌಲ “ದಿನ ತುಂಬೋ ಮೊದ್ಲೇ ಹುಟ್ಟಿದವನ” ತರ ಇದ್ದೀನಿ ಅಂತ ಹೇಳಿದ ಮಾತಿನ ಅರ್ಥವೇನು? ಬಹುಶಃ ಅವನು ಶಿಷ್ಯನಾಗೋ ಮುಂಚೆನೇ ಯೇಸು ಅವನಿಗೆ ಕಾಣಿಸಿಕೊಂಡಿದ್ರಿಂದ ಅಥವಾ ತಾನು ದಿಢೀರಂತ ಶಿಷ್ಯನಾಗಿದ್ರಿಂದ ಅಥವಾ ತನಗೆ ಅಪೊಸ್ತಲನಾಗೋಕೆ ಯಾವ ಯೋಗ್ಯತೆನೂ ಇಲ್ಲ ಅಂತ ಅವನಿಗೆ ಅನಿಸಿದ್ರಿಂದ ಅವನು ಹೀಗೆ ಹೇಳಿರಬಹುದು. ಪೌಲನಿಗೆ ಆದ ಈ ಅನುಭವ ಜೀವನದಲ್ಲೇ ದೊಡ್ಡ ತಿರುಗು ಬಿಂದುವಾಗಿತ್ತು. ಯೇಸು ಜೀವಂತವಾಗಿ ಎದ್ದು ಬಂದಿದ್ದಾನೆ ಅಂತ ನಂಬೋಕೆ ಅವನಿಗೆ ತುಂಬ ಆಧಾರಗಳು ಸಿಕ್ತು. ಹಾಗಾಗಿ ಯೇಸು ಮತ್ತೆ ಜೀವ ಪಡೆದುಕೊಂಡಿದ್ದಾನೆ ಅಂತ ಜನರಿಗೆ ಸಾರುವಾಗ ಪೌಲ ತನಗಾದ ಅನುಭವವನ್ನ ಖಂಡಿತ ಅವರಿಗೆ ಹೇಳಿರುತ್ತಾನೆ.—ಅ. ಕಾ. 22:6-11; 26:13-18.