ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಈ ಭೂಮಿ ಮೇಲೆ ಮತ್ತೆ ಜೀವಂತವಾಗಿ ಯಾರೆಲ್ಲಾ ಎದ್ದು ಬರ್ತಾರೆ? ಮತ್ತು ಯಾಕೆ ಎದ್ದು ಬರ್ತಾರೆ?

ಇದಕ್ಕೆ ಬೈಬಲ್‌ ಕೊಡೋ ಉತ್ತರ ನೊಡೋಣ.

“ನೀತಿವಂತರು ಮತ್ತು ಅನೀತಿವಂತರು ಮತ್ತೆ ಬದುಕೋ ತರ ದೇವರು ಮಾಡ್ತಾನೆ” ಅಂತ ಅಪೊಸ್ತಲರ ಕಾರ್ಯ 24:15 ಹೇಳುತ್ತೆ. ನೀತಿವಂತರು, ತೀರಿಹೋಗೋ ಮುಂಚೆ ದೇವರ ಮಾತನ್ನ ಕೇಳಿ ಅದನ್ನ ಪಾಲಿಸಿದ್ರಿಂದ ಅವರ ಹೆಸರು ಜೀವದ ಪುಸ್ತಕದಲ್ಲಿದೆ. (ಮಲಾ. 3:16) ಆದ್ರೆ ಅನೀತಿವಂತರಿಗೆ ಅವರು ತೀರಿಹೋಗೋ ಮುಂಚೆ ದೇವರ ಬಗ್ಗೆ ತಿಳಿದುಕೊಳ್ಳೋಕೆ ಸಾಕಷ್ಟು ಅವಕಾಶ ಸಿಗದೆ ಇದ್ದಿದ್ರಿಂದ ಅವರ ಹೆಸರು ಜೀವದ ಪುಸ್ತಕದಲ್ಲಿ ಇಲ್ಲ.

ಅಪೊಸ್ತಲರ ಕಾರ್ಯ 24:15ರಲ್ಲಿ ಹೇಳಿರೋ ಅದೇ ವಿಷಯ ಯೋಹಾನ 5:28, 29 ರಲ್ಲೂ ಇದೆ. ಅಲ್ಲಿ ಯೇಸು, “ಒಳ್ಳೇ ಕೆಲಸ ಮಾಡಿದವರು” “ಜೀವ ಪಡೆದುಕೊಳ್ಳೋಕೆ” ಎದ್ದು ಬರ್ತಾರೆ, “ಕೆಟ್ಟ ಕೆಲಸ ಮಾಡ್ತಾ ಇದ್ದವರು” “ನ್ಯಾಯತೀರ್ಪಿಗಾಗಿ” ಎದ್ದು ಬರ್ತಾರೆ ಅಂತ ಹೇಳಿದ್ದನು. ನೀತಿವಂತರು ತೀರಿಹೋಗೋ ಮುಂಚೆ ಒಳ್ಳೇ ಕೆಲಸ ಮಾಡಿದ್ದಾರೆ. ಅವರ ಹೆಸರು ಜೀವದ ಪುಸ್ತಕದಲ್ಲಿ ಇರೋದ್ರಿಂದ ಅವರು ಜೀವ ಪಡೆದುಕೊಳ್ಳೋಕೆ ಎದ್ದು ಬರ್ತಾರೆ. ಆದ್ರೆ ಅನೀತಿವಂತರು ಸಾಯೋಕೆ ಮುಂಚೆ ಕೆಟ್ಟ ಕೆಲಸಗಳನ್ನ ಮಾಡ್ತಾ ಇದ್ದಿದ್ರಿಂದ ಅವರು ನ್ಯಾಯತೀರ್ಪಿಗಾಗಿ ಎದ್ದು ಬರ್ತಾರೆ. ಅವರ ಹೆಸರು ಜೀವದ ಪುಸ್ತಕದಲ್ಲಿ ಇರಲ್ಲ. ಅದಕ್ಕೆ ಅವರು ಎದ್ದು ಬಂದಮೇಲೆ ಅವರನ್ನ ಪರೀಕ್ಷೆ ಮಾಡಲಾಗುತ್ತೆ. ಆಗ ಅವರಿಗೆ ಯೆಹೋವನ ಬಗ್ಗೆ ತಿಳಿದುಕೊಳ್ಳೋಕೆ ಮತ್ತು ಜೀವದ ಪುಸ್ತಕದಲ್ಲಿ ತಮ್ಮ ಹೆಸರನ್ನ ಬರೆಸಿಕೊಳ್ಳೋಕೆ ಒಂದು ಅವಕಾಶ ಕೊಡಲಾಗುತ್ತೆ.

ಮತ್ತೆ ಜೀವ ಪಡೆದುಕೊಂಡವರೆಲ್ಲರೂ ‘ಸುರುಳಿಯಲ್ಲಿ ಇರೋ ವಿಷ್ಯಗಳನ್ನ’ ಅಂದ್ರೆ ಹೊಸ ಲೋಕದಲ್ಲಿ ದೇವರು ಕೊಡೋ ನಿಯಮಗಳನ್ನ ಪಾಲಿಸಬೇಕು ಅಂತ ಪ್ರಕಟನೆ 20:12, 13 ಹೇಳುತ್ತೆ. ಯಾರೆಲ್ಲ ಪಾಲಿಸಲ್ವೋ ಅವರು ನಾಶ ಆಗ್ತಾರೆ.—ಯೆಶಾ. 65:20.

ಮಣ್ಣಲ್ಲಿ ಮಣ್ಣಾಗಿ ದೀರ್ಘನಿದ್ದೆ ಮಾಡ್ತಿರೋರಲ್ಲಿ “ಕೆಲವರು ಶಾಶ್ವತವಾಗಿ ಜೀವಿಸೋಕೆ ಏಳ್ತಾರೆ. ಉಳಿದವರು ಅವಮಾನ ಪಡ್ಕೊಳ್ಳೋಕೆ, ಶಾಶ್ವತವಾದ ತಿರಸ್ಕಾರ ಪಡ್ಕೊಳ್ಳೋಕೆ ಎದ್ದೇಳ್ತಾರೆ” ಅಂತ ದಾನಿಯೇಲ 12:2 ಹೇಳಿತ್ತು. ಈ ವಚನ, ಮತ್ತೆ ಜೀವಂತ ಎದ್ದು ಬಂದವರು ಹೇಗೆ ನಡೆದುಕೊಳ್ತಾರೆ ಅನ್ನೋ ಆಧಾರದ ಮೇಲೆ ಅವರಿಗಾಗೋ ಕೊನೇ ತೀರ್ಪಿನ ಬಗ್ಗೆ ಮಾತಾಡ್ತಿದೆ, ಅಂದ್ರೆ ಅವರಿಗೆ ‘ಶಾಶ್ವತ ಜೀವ’ ಸಿಗುತ್ತಾ ಅಥವಾ “ಶಾಶ್ವತವಾದ ತಿರಸ್ಕಾರ” ಸಿಗುತ್ತಾ ಅನ್ನೋದರ ಬಗ್ಗೆ ಇಲ್ಲಿ ಹೇಳ್ತಿದೆ. ಹಾಗಾಗಿ 1,000 ವರ್ಷದ ಕೊನೆಯಲ್ಲಿ ಕೆಲವರು ಶಾಶ್ವತ ಜೀವ ಪಡ್ಕೊಳ್ತಾರೆ ಉಳಿದವರು ಶಾಶ್ವತವಾಗಿ ನಾಶ ಆಗ್ತಾರೆ.—ಪ್ರಕ. 20:15; 21:3, 4.

ಇದನ್ನ ಅರ್ಥ ಮಾಡಿಕೊಳ್ಳೋಕೆ ಒಂದು ಉದಾಹರಣೆ ನೋಡೋಣ. ಮತ್ತೆ ಜೀವಂತವಾಗಿ ಎದ್ದು ಬರೋ ಎರಡು ಗುಂಪಿನ ಜನರನ್ನ ವಿದೇಶಕ್ಕೆ ಹೋಗೋ ಜನರಿಗೆ ಹೋಲಿಸಬಹುದು. ನೀತಿವಂತರು ಒಂದು ದೇಶದಲ್ಲಿ ಕೆಲಸ ಮಾಡೋಕೆ ಅಥವಾ ಅಲ್ಲೇ ಜೀವಿಸೋಕೆ ವೀಸಾ ತಗೊಂಡಿರೋ ಜನರ ತರ ಇದ್ದಾರೆ. ಆ ರೀತಿ ಹೋಗೋ ಜನರಿಗೆ ಸಾಮಾನ್ಯವಾಗಿ ಸ್ವಲ್ಪಮಟ್ಟಿಗೆ ಸ್ವಾತಂತ್ರ್ಯ ಸಿಗುತ್ತೆ, ಜನರೂ ಅವರನ್ನ ತಮ್ಮ ದೇಶದವರ ತರಾನೇ ನೋಡ್ತಾರೆ. ಆದ್ರೆ ಅನೀತಿವಂತರು ತಾತ್ಕಾಲಿಕ ವೀಸಾ ಅಥವಾ ಪ್ರವಾಸಿಗರ ವೀಸಾನಾ ತಗೊಂಡು ಹೋಗಿರೋ ಜನರ ತರ ಇದ್ದಾರೆ. ವಿದೇಶಕ್ಕೆ ಹೋದವರು ಆ ದೇಶದಲ್ಲಿ ಉಳಿದುಕೊಳ್ಳಬೇಕಂದ್ರೆ ಅಲ್ಲಿರೋಕೆ ತಮಗೆ ಯೋಗ್ಯತೆ ಇದೆ ಅಂತ ತೋರಿಸಿಕೊಡಬೇಕು ಮತ್ತು ಅಲ್ಲಿನ ನಿಯಮಗಳನ್ನ ಪಾಲಿಸಬೇಕು. ಅದೇ ತರ ಅನೀತಿವಂತರು ಜೀವಂತವಾಗಿ ಎದ್ದು ಬಂದಮೇಲೆ ಯೆಹೋವನ ನೀತಿ ನಿಯಮಗಳನ್ನ ಪಾಲಿಸಬೇಕು. ತಮಗೆ ಪರದೈಸ್ನಲ್ಲಿ ಇರೋ ಯೋಗ್ಯತೆ ಇದೆ ಅಂತ ತೋರಿಸಿಕೊಡಬೇಕು. ಆಗ ಮಾತ್ರ ಅವರು ಅಲ್ಲಿರೋಕೆ ಆಗುತ್ತೆ. ಒಂದಂತೂ ನಿಜ, ವಿದೇಶಕ್ಕೆ ಹೋಗುವವರಿಗೆ ಯಾವ ರೀತಿಯ ವೀಸಾ ಸಿಕ್ಕಿದ್ರೂ ಅವರು ಅಲ್ಲಿರುವಾಗ ಹೇಗೆ ನಡ್ಕೊಳ್ತಾರೋ ಅದ್ರಿಂದನೇ ಅವರು ಆ ದೇಶದ ನಾಗರೀಕರಾಗ್ತಾರಾ ಅಥವಾ ಆ ದೇಶದಿಂದ ಹೊರಗೆ ಹೋಗ್ತಾರಾ ಅನ್ನೋದು ನಿರ್ಧಾರ ಆಗುತ್ತೆ. ಅವರು ಎಂಥವರು ಮತ್ತು ಅವರು ಅಲ್ಲಿ ಹೇಗೆ ನಡ್ಕೊಳ್ತಾರೆ ಅನ್ನೋದು ತುಂಬ ಮುಖ್ಯವಾಗಿರುತ್ತೆ. ಅದೇ ತರನೇ ಮತ್ತೆ ಜೀವಂತವಾಗಿ ಎದ್ದು ಬಂದವರೆಲ್ಲರಿಗೂ ಕೊನೆಗೆ ಏನಾಗುತ್ತೆ ಅನ್ನೋದು ಅವರು ಹೊಸ ಲೋಕದಲ್ಲಿ ತೋರಿಸೋ ನಂಬಿಕೆ ಮತ್ತು ಅವರು ನಡೆದುಕೊಳ್ಳೋ ರೀತಿ ಮೇಲೆ ಹೊಂದಿಕೊಂಡಿರುತ್ತೆ.

ಯೆಹೋವ ಕರುಣೆಯಿರೋ ದೇವರಷ್ಟೇ ಅಲ್ಲ ನ್ಯಾಯ ನೀತಿಯಿಂದ ನಡಕೊಳ್ಳೋ ದೇವರು. (ಧರ್ಮೋ. 32:4; ಕೀರ್ತ. 33:5) ಸತ್ತು ಹೋಗಿರೋ ನೀತಿವಂತರಿಗೆ ಮತ್ತು ಅನೀತಿವಂತರಿಗೆ ಮತ್ತೆ ಜೀವ ಕೊಟ್ಟು ಎಲ್ಲರಿಗೂ ಯೆಹೋವ ಪ್ರೀತಿ ತೋರಿಸ್ತಾನೆ. ಎಲ್ಲರೂ ಆತನ ನೀತಿ ನಿಯಮನ ಪಾಲಿಸಬೇಕು ಅಂತ ಆಸೆ ಪಡ್ತಾನೆ. ಹಾಗಾಗಿ ಹೊಸಲೋಕದಲ್ಲಿ ಯಾರು ಆತನನ್ನ ಪ್ರೀತಿಸ್ತಾರೋ ಆತನು ಹೇಳಿದ ತರ ನಡ್ಕೊಳ್ತಾರೋ ಅವರು ಮಾತ್ರನೇ ಅಲ್ಲಿ ಶಾಶ್ವತವಾಗಿ ಇರ್ತಾರೆ.