ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 39

ನಿಮ್ಮ ಹೆಸರು “ಜೀವದ ಪುಸ್ತಕದಲ್ಲಿ” ಇದೆಯಾ?

ನಿಮ್ಮ ಹೆಸರು “ಜೀವದ ಪುಸ್ತಕದಲ್ಲಿ” ಇದೆಯಾ?

“ಯೆಹೋವನ ಭಯ ಇರುವವ್ರ . . . ಹೆಸ್ರುಗಳನ್ನ ದೇವರು ತನ್ನ ಮುಂದೆಯಿದ್ದ ಜ್ಞಾಪಕ ಪುಸ್ತಕದಲ್ಲಿ ಬರೆದಿಡೋಕೆ ಆಜ್ಞೆ ಕೊಟ್ಟನು.”—ಮಲಾ. 3:16.

ಗೀತೆ 17 ಸಾಕ್ಷಿಗಳೇ, ಮುನ್ನಡೆಯಿರಿ!

ಕಿರುನೋಟ a

ಹೇಬೆಲನ ಕಾಲದಿಂದ ಹಿಡಿದು ಇಲ್ಲಿ ತನಕ ಯೆಹೋವ ದೇವರು “ಜೀವದ ಪುಸ್ತಕದಲ್ಲಿ” ಜನರ ಹೆಸರುಗಳನ್ನ ಬರೀತಾ ಇದ್ದಾನೆ (ಪ್ಯಾರ 1-2 ನೋಡಿ)

1. ಯೆಹೋವ ಯಾವ ಪುಸ್ತಕವನ್ನ ಬರೀತಾ ಇದ್ದಾನೆ ಮತ್ತು ಅದರಲ್ಲಿ ಏನಿದೆ? (ಮಲಾಕಿ 3:16)

 ಸಾವಿರಾರು ವರ್ಷಗಳಿಂದ ಯೆಹೋವ ದೇವರು ಒಂದು ವಿಶೇಷವಾದ ಪುಸ್ತಕವನ್ನ ಬರೀತಾ ಬಂದಿದ್ದಾನೆ. ಆ ಪುಸ್ತಕದಲ್ಲಿ ತನಗೆ ನಂಬಿಗಸ್ತನಾಗಿದ್ದ ಹೇಬೆಲನ ಹೆಸರನ್ನ ಯೆಹೋವ ಮೊದಲು ಬರೆದನು. b (ಲೂಕ 11:50, 51) ಅವತ್ತಿಂದ ಹಿಡಿದು ಇವತ್ತಿನ ತನಕ ಅದರಲ್ಲಿ ಲಕ್ಷಾಂತರ ಜನರ ಹೆಸರುಗಳನ್ನ ಆತನು ಬರೀತಾ ಇದ್ದಾನೆ. ಈ ಪುಸ್ತಕವನ್ನ ಬೈಬಲ್‌ “ಜ್ಞಾಪಕ ಪುಸ್ತಕ” ಅಥವಾ “ಜೀವದ ಪುಸ್ತಕ” ಅಂತ ಕರೆಯುತ್ತೆ. ಈ ಲೇಖನದಲ್ಲಿ ಈ ಪುಸ್ತಕವನ್ನ “ಜೀವದ ಪುಸ್ತಕ” ಅಂತ ಹೇಳಲಾಗಿದೆ.—ಮಲಾಕಿ 3:16 ಓದಿ; ಪ್ರಕ. 3:5; 17:8.

2. (ಎ) ಜೀವದ ಪುಸ್ತಕದಲ್ಲಿ ಯಾರ ಹೆಸರನ್ನ ಬರೆಯಲಾಗಿದೆ? (ಬಿ) ನಮ್ಮ ಹೆಸರನ್ನ ಅದರಲ್ಲಿ ಬರೆಸಿಕೊಳ್ಳೋಕೆ ನಾವೇನು ಮಾಡಬೇಕು?

2 ಯೆಹೋವನನ್ನು ಪ್ರೀತಿಸಿ, ಭಯಭಕ್ತಿಯಿಂದ ಆತನನ್ನು ಆರಾಧಿಸುವವರ ಹೆಸರನ್ನ ಆ ಪುಸ್ತಕದಲ್ಲಿ ಬರೆಯಲಾಗಿದೆ. ಅವರಿಗೆ ಶಾಶ್ವತ ಜೀವ ಪಡಕೊಳ್ಳೋ ಅವಕಾಶ ಸಿಗುತ್ತೆ. ನಾವು ಯೆಹೋವನ ಜೊತೆ ಒಳ್ಳೇ ಸ್ನೇಹ ಬೆಳೆಸಿಕೊಂಡ್ರೆ ಮತ್ತು ಯೇಸುವಿನ ಬಿಡುಗಡೆ ಬೆಲೆಯ ಮೇಲೆ ನಂಬಿಕೆ ಇಟ್ರೆ ನಮ್ಮ ಹೆಸರನ್ನೂ ಆ ಪುಸ್ತಕದಲ್ಲಿ ಬರೆಸಿಕೊಳ್ಳೋಕೆ ಆಗುತ್ತೆ. (ಯೋಹಾ. 3:16, 36) ನಮಗೆ ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಇರಲಿ ಅಥವಾ ಈ ಭೂಮಿ ಮೇಲೆ ಜೀವಿಸೋ ನಿರೀಕ್ಷೆ ಇರಲಿ ನಮ್ಮ ಹೆಸರುಗಳನ್ನ ಆ ಪುಸ್ತಕದಲ್ಲಿ ಬರೆಸಿಕೊಳ್ಳೋಕೆ ನಾವೆಲ್ಲರೂ ಪ್ರಯತ್ನ ಮಾಡಬೇಕು.

3-4. (ಎ) ಜೀವದ ಪುಸ್ತಕದಲ್ಲಿ ಈಗ ನಮ್ಮ ಹೆಸರು ಇದೆ ಅಂದಮಾತ್ರಕ್ಕೆ ನಮಗೆ ಶಾಶ್ವತ ಜೀವ ಸಿಕ್ಕಿಬಿಡುತ್ತೆ ಅಂತ ಅರ್ಥನಾ? ವಿವರಿಸಿ. (ಬಿ) ಈ ಲೇಖನ ಮತ್ತು ಮುಂದಿನ ಲೇಖನದಲ್ಲಿ ನಾವು ಏನು ಕಲಿತೀವಿ?

3 ನಮ್ಮ ಹೆಸರು ಆ ಪುಸ್ತಕದಲ್ಲಿ ಬರೆದಿದೆ ಅಂದಮಾತ್ರಕ್ಕೆ ನಮಗೆ ಶಾಶ್ವತ ಜೀವ ಸಿಕ್ಕಿಬಿಡುತ್ತೆ ಅಂತ ಅರ್ಥನಾ? ಈ ಪ್ರಶ್ನೆಗೆ ಉತ್ತರ ವಿಮೋಚನಕಾಂಡ 32:33ರಲ್ಲಿ ಸಿಗುತ್ತೆ. ಅಲ್ಲಿ ಯೆಹೋವ ಮೋಶೆಗೆ “ನನ್ನ ವಿರುದ್ಧ ಪಾಪಮಾಡಿದವರ ಹೆಸರುಗಳನ್ನೇ ನಾನು ನನ್ನ ಪುಸ್ತಕದಿಂದ ಅಳಿಸಿಹಾಕ್ತೀನಿ” ಅಂದನು. ಇನ್ನೊಂದು ಮಾತಲ್ಲಿ ಹೇಳೋದಾದ್ರೆ, ಆ ಪುಸ್ತಕದಲ್ಲಿ ಈಗ ಬರೆದಿರೋ ಹೆಸರುಗಳು ಪೆನ್ಸಿಲ್ನಲ್ಲಿ ಬರೆದ ಹಾಗೆ ಇದೆ. ಅದನ್ನ ಯೆಹೋವ ಯಾವಾಗ ಬೇಕಾದ್ರೂ ಅಳಿಸಬಹುದು. (ಪ್ರಕ. 3:5) ಆದ್ರೆ ಅದನ್ನ ಆತನು ಶಾಶ್ವತವಾಗಿ ಪೆನ್ನಿನಲ್ಲಿ ಬರೆಯೋ ತರ ನಡಕೊಳ್ಳೋದು ನಮ್ಮ ಕೈಯಲ್ಲಿದೆ.

4 ನಮಗೆ ಇದರ ಬಗ್ಗೆ ಕೆಲವು ಪ್ರಶ್ನೆಗಳು ಬರಬಹುದು. ಉದಾಹರಣೆಗೆ, ಆ ಪುಸ್ತಕದಲ್ಲಿ ಯಾರ ಹೆಸರಿದೆಯೋ ಮತ್ತು ಯಾರ ಹೆಸರಿಲ್ಲವೋ ಅವರ ಬಗ್ಗೆ ಬೈಬಲ್‌ ಏನು ಹೇಳುತ್ತೆ? ಅದರಲ್ಲಿ ಯಾರ ಹೆಸರಿದೆಯೋ ಅವರಿಗೆ ಯಾವಾಗ ಶಾಶ್ವತ ಜೀವ ಸಿಗುತ್ತೆ? ಯೆಹೋವನ ಬಗ್ಗೆ ತಿಳಿದುಕೊಳ್ಳೋ ಅವಕಾಶನೇ ಸಿಗದೇ ಸತ್ತು ಹೋದವರಿಗೆ ಏನಾಗುತ್ತೆ ಮತ್ತು ಅವರು ತಮ್ಮ ಹೆಸರುಗಳನ್ನ ಆ ಪುಸ್ತಕದಲ್ಲಿ ಬರೆಸಿಕೊಳ್ಳೋಕೆ ಆಗುತ್ತಾ? ಈ ಪ್ರಶ್ನೆಗಳಿಗೆ ಉತ್ತರವನ್ನ ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ನೋಡೋಣ.

ಆ ಪುಸ್ತಕದಲ್ಲಿ ಯಾರ ಹೆಸರಿದೆ?

5-6. (ಎ) ಫಿಲಿಪ್ಪಿ 4:3 ಹೇಳೋ ತರ ಯಾರ ಹೆಸರು ಜೀವದ ಪುಸ್ತಕದಲ್ಲಿದೆ? (ಬಿ) ಅದರಲ್ಲಿ ಅವರ ಹೆಸರನ್ನ ಶಾಶ್ವತವಾಗಿ ಯಾವಾಗ ಬರೆಯಲಾಗುತ್ತೆ?

5 ಜೀವದ ಪುಸ್ತಕದಲ್ಲಿ ಕೆಲವರ ಹೆಸರನ್ನ ಬರೆಯಲಾಗಿದೆ, ಇನ್ನು ಕೆಲವರ ಹೆಸರನ್ನ ಬರೆಯಲಾಗಿಲ್ಲ. ಯಾರ ಹೆಸರು ಅದರಲ್ಲಿದೆ ಅಂತ ತಿಳಿದುಕೊಳ್ಳೋಕೆ ನಾವು ಐದು ಗುಂಪಿನ ಜನರ ಬಗ್ಗೆ ತಿಳಿದುಕೊಳ್ಳಬೇಕು.

6 ಮೊದಲನೇ ಗುಂಪಿನವರು ಯಾರಂದ್ರೆ ಯೇಸು ಜೊತೆ ಸ್ವರ್ಗದಲ್ಲಿ ಆಳುವವರು. ಅವರ ಹೆಸರು ಈಗ ಜೀವದ ಪುಸ್ತಕದಲ್ಲಿ ಇದೆಯಾ? ಖಂಡಿತ ಇದೆ. ಅದನ್ನ ನಾವು ಹೇಗೆ ಹೇಳಬಹುದು? ಅದಕ್ಕೆ ಉತ್ತರ ಅಪೊಸ್ತಲ ಪೌಲ ಫಿಲಿಪ್ಪಿ ಸಭೆಯಲ್ಲಿದ್ದ “ಜೊತೆ ಕೆಲಸಗಾರರಿಗೆ” ಹೇಳಿದ ಮಾತಲ್ಲಿದೆ. ಯೇಸು ಜೊತೆ ಆಳ್ವಿಕೆ ಮಾಡೋ ಅವಕಾಶ ಸಿಕ್ಕಿರೋ ಅಭಿಷಿಕ್ತ ಕ್ರೈಸ್ತರ ಹೆಸರು ಈಗಾಗಲೇ ಜೀವದ ಪುಸ್ತಕದಲ್ಲಿದೆ ಅಂತ ಅವನು ಹೇಳಿದ. (ಫಿಲಿಪ್ಪಿ 4:3 ಓದಿ.) ಅಭಿಷಿಕ್ತರಲ್ಲಿ ಕೆಲವರಿಗೆ ಅವರು ಸಾಯೋದಕ್ಕಿಂತ ಮುಂಚೆ ಕೊನೆ ಮುದ್ರೆ ಸಿಗುತ್ತೆ. ಇನ್ನೂ ಕೆಲವರಿಗೆ ಮಹಾ ಸಂಕಟ ಶುರುವಾಗೋ ಸ್ವಲ್ಪ ಮುಂಚೆ ಸಿಗುತ್ತೆ. ಒಟ್ಟಿನಲ್ಲಿ ಅವರು ಕೊನೆ ಮುದ್ರೆ ಸಿಗೋ ತನಕ ನಂಬಿಕೆ ಉಳಿಸಿಕೊಳ್ಳಬೇಕು. ಆಗ ಮಾತ್ರ ಅವರ ಹೆಸರುಗಳು ಆ ಸಾಂಕೇತಿಕ ಪುಸ್ತಕದಲ್ಲಿ ಶಾಶ್ವತವಾಗಿ ಬರೆಯಲಾಗುತ್ತೆ.—ಪ್ರಕ. 7:3.

7. ಬೇರೆ ಕುರಿಗಳ ದೊಡ್ಡ ಗುಂಪಿನವರ ಹೆಸರು ಶಾಶ್ವತವಾಗಿ ಜೀವದ ಪುಸ್ತಕದಲ್ಲಿ ಯಾವಾಗ ಬರೆಯಲಾಗುತ್ತೆ ಅಂತ ಪ್ರಕಟನೆ 7:16, 17 ಹೇಳುತ್ತೆ?

7 ಎರಡನೇ ಗುಂಪಿನವರು ಯಾರಂದ್ರೆ ಬೇರೆ ಕುರಿಗಳ ದೊಡ್ಡ ಗುಂಪು. ಇವರ ಹೆಸರು ಈಗ ಜೀವದ ಪುಸ್ತಕದಲ್ಲಿ ಇದೆಯಾ? ಹೌದು ಇದೆ. ಹರ್ಮಗೆದೋನನ್ನ ಪಾರಾದ ಮೇಲೆ ಅವರ ಹೆಸರು ಆ ಪುಸ್ತಕದಲ್ಲಿ ಇರುತ್ತಾ? ಇರುತ್ತೆ. (ಪ್ರಕ. 7:14) ಕುರಿಗಳ ತರ ಇರೋ ಇವರಿಗೆ “ಶಾಶ್ವತ ಜೀವ” ಸಿಗುತ್ತೆ ಅಂತ ಯೇಸು ಹೇಳಿದನು. (ಮತ್ತಾ. 25:46) ಹಾಗಂತ ಹರ್ಮಗೆದೋನ್‌ ಪಾರಾದ ತಕ್ಷಣ ಇವರಿಗೆ ಶಾಶ್ವತ ಜೀವ ಸಿಗಲ್ಲ. ಯಾಕಂದ್ರೆ ಒಂದರ್ಥದಲ್ಲಿ ಅವರ ಹೆಸರುಗಳು ಇನ್ನೂ ಪೆನ್ಸಿಲ್ನಲ್ಲಿ ಬರೆದಿರೋ ತರ ಇರುತ್ತೆ. ಸಾವಿರ ವರ್ಷದ ಆಳ್ವಿಕೆಯ ಸಮಯದಲ್ಲಿ ಯೇಸು “ಕುರುಬನ ತರ ಅವ್ರನ್ನ ನೋಡ್ಕೊತಾನೆ. ಜೀವಜಲದ ಹತ್ರ ಅವ್ರನ್ನ ಕರ್ಕೊಂಡು ಹೋಗ್ತಾನೆ.” ಯಾರು ಯೇಸು ಕ್ರಿಸ್ತನ ಮಾತನ್ನ ಕೇಳ್ತಾರೋ ಮತ್ತು ಯೆಹೋವನಿಗೆ ನಂಬಿಗಸ್ತರಾಗಿದ್ದಾರೆ ಅಂತ ಕೊನೆಯಲ್ಲಿ ತೀರ್ಪಾಗುತ್ತೋ ಅವರ ಹೆಸರನ್ನ ಮಾತ್ರ ಜೀವದ ಪುಸ್ತಕದಲ್ಲಿ ಶಾಶ್ವತವಾಗಿ ಬರೆಯಲಾಗುತ್ತೆ.—ಪ್ರಕಟನೆ 7:16, 17 ಓದಿ.

8. ಜೀವದ ಪುಸ್ತಕದಲ್ಲಿ ಯಾರ ಹೆಸರು ಇಲ್ಲ, ಮತ್ತು ಅವರಿಗೆ ಏನಾಗುತ್ತೆ?

8 ಮೂರನೇ ಗುಂಪಲ್ಲಿ ಆಡುಗಳ ತರ ಇರೋ ಜನರಿದ್ದಾರೆ. ಇವರು ಹರ್ಮಗೆದೋನ್‌ ಯುದ್ಧದಲ್ಲಿ ನಾಶ ಆಗ್ತಾರೆ. ಇವರ ಹೆಸರು ಜೀವದ ಪುಸ್ತಕದಲ್ಲಿ ಇಲ್ಲ. ಇವರಿಗೆ “ಶಾಶ್ವತ ಸಾವು” ಸಿಗುತ್ತೆ ಅಂತ ಯೇಸು ಹೇಳಿದನು. (ಮತ್ತಾ. 25:46) ಇದರ ಬಗ್ಗೆ ಪೌಲ “ಪ್ರಭು ಅವ್ರಿಗೆ ನ್ಯಾಯತೀರಿಸ್ತಾನೆ. ಅವ್ರನ್ನ ಸರ್ವನಾಶ ಮಾಡಿ ಶಿಕ್ಷಿಸ್ತಾನೆ” ಅಂತ ಹೇಳಿದ. (2 ಥೆಸ. 1:9; 2 ಪೇತ್ರ 2:9) ಆಡುಗಳ ತರಾನೇ ಯಾರೆಲ್ಲಾ ಬೇಕು-ಬೇಕು ಅಂತ ಪವಿತ್ರ ಶಕ್ತಿಯ ವಿರುದ್ಧ ತಪ್ಪು ಮಾಡಿದ್ದಾರೋ ಅವರಿಗೂ ಶಾಶ್ವತ ಜೀವ ಸಿಗಲ್ಲ. ಅವರು ನಾಶ ಆಗ್ತಾರೆ. ಯೆಹೋವ ಅವರಿಗೆ ಮತ್ತೆ ಜೀವ ಕೊಟ್ಟು ಎಬ್ಬಿಸಲ್ಲ. (ಮತ್ತಾ. 12:32; ಮಾರ್ಕ 3:28, 29; ಇಬ್ರಿ. 6:4-6) ಉಳಿದಿರೋ 2 ಗುಂಪಿನ ಜನರ ಬಗ್ಗೆ ಈಗ ನೋಡೋಣ. ಇವರು ಭೂಮಿ ಮೇಲೆ ಮತ್ತೆ ಜೀವಂತವಾಗಿ ಎದ್ದು ಬರುತ್ತಾರೆ.

ಮತ್ತೆ ಜೀವಂತವಾಗಿ ಎದ್ದು ಬರುವವರು

9. (ಎ) ಯಾವ ಎರಡು ಗುಂಪಿನ ಜನರಿಗೆ ಈ ಭೂಮಿಯಲ್ಲಿ ಮತ್ತೆ ಜೀವ ಸಿಗುತ್ತೆ ಅಂತ ಅಪೊಸ್ತಲರ ಕಾರ್ಯ 24:15 ಹೇಳುತ್ತೆ? (ಬಿ) ಈ ಎರಡು ಗುಂಪಿನವರ ಮಧ್ಯೆ ಯಾವ ವ್ಯತ್ಯಾಸ ಇದೆ?

9 ಎರಡು ಗುಂಪಿನ ಜನರನ್ನ ಮತ್ತೆ ಜೀವಂತವಾಗಿ ಎಬ್ಬಿಸಲಾಗುತ್ತೆ ಅಂತ ಬೈಬಲ್‌ ಹೇಳುತ್ತೆ. ಅವರಿಗೆ ಶಾಶ್ವತವಾಗಿ ಈ ಭೂಮಿ ಮೇಲೆ ಜೀವಿಸೋ ಅವಕಾಶ ಕೊಡಲಾಗುತ್ತೆ. ಅದರಲ್ಲಿ ಒಂದು ‘ನೀತಿವಂತರ’ ಗುಂಪು, ಇನ್ನೊಂದು ‘ಅನೀತಿವಂತರ’ ಗುಂಪು. (ಅಪೊಸ್ತಲರ ಕಾರ್ಯ 24:15 ಓದಿ.) ಯಾರು ಬದುಕಿರೋ ತನಕ ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಂಡು ಆತನನ್ನ ಆರಾಧಿಸಿದ್ರೋ ಅವರು “ನೀತಿವಂತರು.” ಯಾರು ಯೆಹೋವ ದೇವರನ್ನ ಆರಾಧಿಸಲಿಲ್ವೋ ಅವರು “ಅನೀತಿವಂತರು,” ಇವರಲ್ಲಿ ತುಂಬ ಜನ ಕೆಟ್ಟ ಕೆಲಸ ಮಾಡ್ತಿದ್ದರು. ಈ ಎರಡು ಗುಂಪಿನವರು ಮತ್ತೆ ಎದ್ದು ಬರ್ತಾರೆ ಅಂದಮಾತ್ರಕ್ಕೆ ಅವರ ಹೆಸರು ಜೀವದ ಪುಸ್ತಕದಲ್ಲಿ ಬರೆದಿದೆ ಅಂತನಾ? ಅದನ್ನ ಅರ್ಥಮಾಡಿಕೊಳ್ಳೋಕೆ ಒಂದೊಂದು ಗುಂಪಿನ ಬಗ್ಗೆನೂ ಈಗ ಸೂಕ್ಷ್ಮವಾಗಿ ನೋಡೋಣ.

10. (ಎ) “ನೀತಿವಂತರು” ಯಾಕೆ ಮತ್ತೆ ಜೀವ ಪಡಿತಾರೆ? (ಬಿ) ಅವರಲ್ಲಿ ಕೆಲವರಿಗೆ ಯಾವ ಸುಯೋಗ ಇದೆ? (ಭೂಮಿ ಮೇಲೆ ಮತ್ತೆ ಜೀವ ಪಡೆದುಕೊಳ್ಳೋದರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳೋಕೆ ಈ ಸಂಚಿಕೆಯ “ವಾಚಕರಿಂದ ಪ್ರಶ್ನೆಗಳು” ನೋಡಿ.)

10 ನಾಲ್ಕನೇ ಗುಂಪಿನವರು “ನೀತಿವಂತರು.” ಅವರು ತೀರಿಹೋಗೋ ಮುಂಚೆ ಜೀವದ ಪುಸ್ತಕದಲ್ಲಿ ಅವರ ಹೆಸರಿತ್ತು. ಆದ್ರೆ ಅವರು ಸತ್ತಮೇಲೆ ಅವರ ಹೆಸರು ಆ ಪುಸ್ತಕದಿಂದ ಅಳಿಸಿ ಹೋಯ್ತಾ? ಇಲ್ಲ. ಯಾಕಂದ್ರೆ ಯೆಹೋವನ ಜ್ಞಾಪಕದಲ್ಲಿ ಅವರು ಇನ್ನೂ “ಬದುಕಿದ್ದಾರೆ.” ಯೆಹೋವ “ಸತ್ತವರಿಗಲ್ಲ, ಬದುಕಿರೋರಿಗೆ ದೇವರಾಗಿದ್ದಾನೆ. ಯಾಕಂದ್ರೆ ಅವ್ರೆಲ್ಲ ಆತನ ದೃಷ್ಟಿಯಲ್ಲಿ ಇನ್ನೂ ಬದುಕಿದ್ದಾರೆ” ಅಂತ ಬೈಬಲ್‌ ಹೇಳುತ್ತೆ. (ಲೂಕ 20:38) ಹಾಗಾಗಿ ನೀತಿವಂತರು ಮತ್ತೆ ಜೀವಂತವಾಗಿ ಈ ಭೂಮಿ ಮೇಲೆ ಎದ್ದು ಬಂದಾಗ ಅವರ ಹೆಸರುಗಳು ಆ ಜೀವದ ಪುಸ್ತಕದಲ್ಲಿ ಹಾಗೇ ಇರುತ್ತೆ. ಆದ್ರೆ ಅದು “ಪೆನ್ಸಿಲ್ನಲ್ಲಿ” ಬರೆದಿರೋ ತರ ಇರುತ್ತೆ. (ಲೂಕ 14:14) ಇವರಲ್ಲಿ ಕೆಲವರಿಗೆ “ಭೂಮಿಯಲ್ಲೆಲ್ಲ ಅಧಿಕಾರಿಗಳಾಗಿ” ಸೇವೆ ಮಾಡೋ ಸುಯೋಗ ಸಿಗುತ್ತೆ.—ಕೀರ್ತ. 45:16.

11. “ಅನೀತಿವಂತರು” ತಮ್ಮ ಹೆಸರನ್ನ ಜೀವದ ಪುಸ್ತಕದಲ್ಲಿ ಬರೆಸಿಕೊಳ್ಳೋಕೆ ಅವರು ಏನನ್ನ ಕಲಿಬೇಕಾಗುತ್ತೆ?

11 ಐದನೇ ಗುಂಪಿನವರು “ಅನೀತಿವಂತರು.” ಇವರಿಗೆ ಯೆಹೋವನ ಬಗ್ಗೆ, ಆತನ ನೀತಿ-ನಿಯಮಗಳ ಬಗ್ಗೆ ಗೊತ್ತಿರಲಿಲ್ಲ. ಹಾಗಾಗಿ ಇವರು ತೀರಿಹೋಗೋ ಮುಂಚೆ ಒಳ್ಳೆಯವರಾಗಿ ನಡೆದುಕೊಂಡಿರಲಿಲ್ಲ. ಅದಕ್ಕೆ ಇವರ ಹೆಸರುಗಳು ಜೀವದ ಪುಸ್ತಕದಲ್ಲಿ ಇಲ್ಲ. ಆದ್ರೆ ಇವರಿಗೆ ಯೆಹೋವ ದೇವರು ಮತ್ತೆ ಜೀವ ಕೊಟ್ಟು ಆ ಪುಸ್ತಕದಲ್ಲಿ ಅವರ ಹೆಸರನ್ನ ಬರೆಸಿಕೊಳ್ಳೋಕೆ ಒಂದು ಅವಕಾಶ ಕೊಡ್ತಾನೆ. ಆ ‘ಅನೀತಿವಂತರು’ ಯೆಹೋವನ ಬಗ್ಗೆ ಕಲಿಬೇಕಾಗುತ್ತೆ. ಅದ್ರಲ್ಲೂ ಕೆಲವರು ಹಿಂದಿನ ಜೀವನದಲ್ಲಿ ತುಂಬ ಕೆಟ್ಟ ಕೆಲಸಗಳನ್ನ ಮಾಡಿದ್ರಿಂದ ಯೆಹೋವನ ನೀತಿ-ನಿಯಮಗಳ ಬಗ್ಗೆ ಇನ್ನೂ ಜಾಸ್ತಿ ಕಲಿಬೇಕಾಗುತ್ತೆ. ಅದಕ್ಕೆ ದೇವರ ಸರಕಾರದಲ್ಲಿ ಅವರಿಗೆ ಯೆಹೋವನ ಬಗ್ಗೆ ಕಲಿಸೋಕೆ ಒಂದು ದೊಡ್ಡ ಶೈಕ್ಷಣಿಕ ಕೆಲಸ ನಡಿಯುತ್ತೆ.

12. (ಎ) ಅನೀತಿವಂತರಿಗೆ ಯೆಹೋವನ ಬಗ್ಗೆ ಯಾರು ಹೇಳಿಕೊಡ್ತಾರೆ? (ಬಿ) ಕಲ್ತಿದ್ದನ್ನ ಪಾಲಿಸದೇ ಇರೋರಿಗೆ ಏನಾಗುತ್ತೆ?

12 ಈ ಅನೀತಿವಂತರಿಗೆ ಯೆಹೋವನ ಬಗ್ಗೆ ಯಾರು ಹೇಳಿಕೊಡ್ತಾರೆ? ಮತ್ತೆ ಜೀವಂತವಾಗಿ ಎದ್ದು ಬಂದ ನೀತಿವಂತರು ಮತ್ತು ದೊಡ್ಡ ಗುಂಪಿನವರು ಅವರಿಗೆ ಕಲಿಸ್ತಾರೆ. ಯೆಹೋವ ದೇವರು ಅನೀತಿವಂತರ ಹೆಸರನ್ನ ಜೀವದ ಪುಸ್ತಕದಲ್ಲಿ ಬರಿಬೇಕಂದ್ರೆ ಅವರು ಆತನನ್ನು ಆರಾಧಿಸಬೇಕು. ಆತನ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಳ್ಳಬೇಕು ಮತ್ತು ಆತನಿಗೆ ತಮ್ಮನ್ನ ಸಮರ್ಪಿಸಿಕೊಳ್ಳಬೇಕು. ಅವರು ಕಲಿಯೋದನ್ನೆಲ್ಲ ತಮ್ಮ ಜೀವನದಲ್ಲಿ ಪಾಲಿಸ್ತಿದ್ದಾರಾ ಇಲ್ಲವಾ ಅಂತ ಯೇಸು ಕ್ರಿಸ್ತ ಮತ್ತು ಅಭಿಷಿಕ್ತರು ಸ್ವರ್ಗದಿಂದ ನೋಡುತ್ತಿರುತ್ತಾರೆ. (ಪ್ರಕ. 20:4) ಯಾರು ಕಲ್ತಿದ್ದನ್ನ ಜೀವನದಲ್ಲಿ ಪಾಲಿಸುವುದಿಲ್ಲವೋ ಅವರು ಹೊಸ ಲೋಕದಲ್ಲಿ ಇರಲ್ಲ. ಅವರಿಗೆ ಎಷ್ಟೇ ವಯಸ್ಸಾಗಿದ್ರೂ, 100 ವರ್ಷ ಆಗಿದ್ರೂ ಅವರು ನಾಶ ಆಗ್ತಾರೆ. (ಯೆಶಾ. 65:20) ಯೆಹೋವ ಮತ್ತು ಯೇಸು ಕ್ರಿಸ್ತನಿಗೆ ಪ್ರತಿಯೊಬ್ಬರ ಮನಸ್ಸಲ್ಲೂ ಏನಿದೆ ಅಂತ ಚೆನ್ನಾಗಿ ಗೊತ್ತಾಗುತ್ತೆ. ಹಾಗಾಗಿ ಹೊಸಲೋಕದಲ್ಲಿ ಬೇರೆಯವರಿಗೆ ತೊಂದ್ರೆ ಕೊಡೋರನ್ನ ಇಟ್ಟುಕೊಳ್ಳಲ್ಲ.—ಯೆಶಾ. 11:9; 60:18; 65:25; ಯೋಹಾ. 2:25.

ಜೀವ ಪಡೆದುಕೊಳ್ಳೋಕೆ ಮತ್ತು ನ್ಯಾಯತೀರ್ಪಿಗಾಗಿ ಎದ್ದು ಬರುವವರು

13-14. (ಎ) ಯೋಹಾನ 5:29ರಲ್ಲಿ ಯೇಸು ಹೇಳಿದ ಮಾತುಗಳನ್ನ ನಾವು ಮುಂಚೆ ಹೇಗೆ ಅರ್ಥ ಮಾಡಿಕೊಂಡಿದ್ವಿ? (ಬಿ) ಆದ್ರೆ ಈಗ ಹೇಗೆ ಅರ್ಥಮಾಡಿಕೊಂಡಿದ್ದೀವಿ?

13 ಭೂಮಿ ಮೇಲೆ ಮತ್ತೆ ಜೀವ ಪಡೆದುಕೊಳ್ಳುವವರ ಬಗ್ಗೆ ಯೇಸು ಹೀಗೆ ಹೇಳಿದ್ದನು: “ಒಂದು ಸಮಯ ಬರುತ್ತೆ, ಆಗ ಸಮಾಧಿಗಳಲ್ಲಿ ಇರೋರೆಲ್ಲ ಆತನ ಸ್ವರ ಕೇಳಿ ಜೀವಂತ ಎದ್ದು ಬರ್ತಾರೆ. ಒಳ್ಳೇ ಕೆಲಸ ಮಾಡಿದವರು ಜೀವ ಪಡೆದುಕೊಳ್ಳೋಕೆ ಎದ್ದು ಬರ್ತಾರೆ, ಕೆಟ್ಟ ಕೆಲಸ ಮಾಡ್ತಾ ಇದ್ದವರು ನ್ಯಾಯತೀರ್ಪಿಗಾಗಿ ಎದ್ದು ಬರ್ತಾರೆ.” (ಯೋಹಾ. 5:28, 29) ಯೇಸು ಹೇಳಿದ ಮಾತಿನ ಅರ್ಥ ಏನು?

14 ತೀರಿಹೋದವರು ಜೀವಂತವಾಗಿ ಎದ್ದು ಬಂದ ಮೇಲೆ ಕೆಲವರು ಒಳ್ಳೇ ಕೆಲಸ ಮಾಡ್ತಾರೆ, ಇನ್ನೂ ಕೆಲವರು ಕೆಟ್ಟ ಕೆಲಸ ಮಾಡ್ತಾರೆ ಅಂತ ನಾವು ಮುಂಚೆ ಅಂದುಕೊಂಡಿದ್ವಿ. ಆದ್ರೆ ಇಲ್ಲಿ ಯೇಸು, ಸಮಾಧಿಗಳಿಂದ ಎದ್ದು ಬಂದಮೇಲೆ ಕೆಲವರು ಒಳ್ಳೇದು ಮಾಡ್ತಾರೆ ಇನ್ನೂ ಕೆಲವರು ಕೆಟ್ಟದು ಮಾಡ್ತಾರೆ ಅಂತ ಹೇಳಿಲ್ಲ. ಬದಲಿಗೆ “ಒಳ್ಳೇ ಕೆಲಸ ಮಾಡಿದವರು” “ಕೆಟ್ಟ ಕೆಲಸ ಮಾಡ್ತಾ ಇದ್ದವರು” ಅಂತ ಹೇಳಿದನು. ಅಂದ್ರೆ ಅವರು ಸಾಯೋದಕ್ಕಿಂತ ಮುಂಚೆ ಹೇಗೆ ನಡ್ಕೊಳ್ತಿದ್ರು ಅನ್ನೋದರ ಬಗ್ಗೆ ಯೇಸು ಇಲ್ಲಿ ಮಾತಾಡುತ್ತಿದ್ದಾನೆ. ಅದೂ ಅಲ್ಲದೆ, ಹೊಸ ಲೋಕದಲ್ಲಿ ಜನರು ಕೆಟ್ಟ ಕೆಲಸ ಮಾಡೋಕೆ ಯೆಹೋವ ದೇವರು ಅನುಮತಿ ಕೊಡಲ್ಲ. ಹಾಗಾದ್ರೆ ಅನೀತಿವಂತರು ತೀರಿಹೋಗೋ ಮುಂಚೆ ಮಾಡಿದ್ದ ಕೆಟ್ಟ ಕೆಲಸಗಳ ಬಗ್ಗೆ ಯೇಸು ಇಲ್ಲಿ ಹೇಳ್ತಿದ್ದಾನೆ. ಆದ್ರೆ ಈ ವಚನದಲ್ಲಿ ಕೆಲವರು “ಜೀವ ಪಡೆದುಕೊಳ್ಳೋಕೆ” ಎದ್ದು ಬರ್ತಾರೆ ಇನ್ನು ಕೆಲವರು “ನ್ಯಾಯತೀರ್ಪಿಗಾಗಿ” ಎದ್ದು ಬರ್ತಾರೆ ಅಂತ ಯೇಸು ಹೇಳಿದ್ದರ ಅರ್ಥ ಏನು?

15. “ಜೀವ ಪಡೆದುಕೊಳ್ಳೋಕೆ ಎದ್ದು ಬರುವವರು” ಯಾರು ಮತ್ತು ಅವರು ಯಾಕೆ ಎದ್ದು ಬರ್ತಾರೆ?

15 ತೀರಿಹೋಗೋ ಮುಂಚೆ ಒಳ್ಳೇ ಕೆಲಸಗಳನ್ನ ಮಾಡಿದ ನೀತಿವಂತರು “ಜೀವ ಪಡೆದುಕೊಳ್ಳೋಕೆ ಎದ್ದು ಬರ್ತಾರೆ.” ಯಾಕಂದ್ರೆ ಅವರ ಹೆಸರು ಜೀವದ ಪುಸ್ತಕದಲ್ಲಿದೆ. ಹಾಗಾಗಿ ಯೋಹಾನ 5:29ರಲ್ಲಿ ಹೇಳಿರೋ ‘ಒಳ್ಳೇ ಕೆಲಸ ಮಾಡಿದವರೇ’ ಅಪೊಸ್ತಲರ ಕಾರ್ಯ 24:15ರಲ್ಲಿ ಹೇಳಿರೋ “ನೀತಿವಂತರು.” ಈ ತರ ಹೇಳೋಕೆ ಕಾರಣ ಏನು ಅಂತ ರೋಮನ್ನರಿಗೆ 6:7ರಲ್ಲಿ ಇದೆ. ಅಲ್ಲಿ “ಸತ್ತವನಿಗೆ ಅವನ ಪಾಪಗಳಿಂದ ಬಿಡುಗಡೆ ಆಗಿದೆ” ಅಂತ ಹೇಳುತ್ತೆ. ಇದರರ್ಥ ನೀತಿವಂತರು ಸತ್ತಾಗ ಅವರ ಪಾಪಗಳನ್ನ ಅಳಿಸಿಹಾಕಲಾಗುತ್ತೆ. ಆದ್ರೆ ಅವರು ಮಾಡಿದ ಒಳ್ಳೇ ಕೆಲಸಗಳನ್ನ, ಅವರು ತೋರಿಸಿದ ನಂಬಿಕೆಯನ್ನ ಯೆಹೋವ ಇನ್ನೂ ನೆನಪಲ್ಲಿ ಇಟ್ಟುಕೊಂಡಿರುತ್ತಾನೆ. (ಇಬ್ರಿ. 6:10) ಅದಕ್ಕೇ ಆತನು ಅವರಿಗೆ ಮತ್ತೆ ಜೀವ ಕೊಡ್ತಾನೆ. ಆದ್ರೆ ತಮ್ಮ ಹೆಸರುಗಳು ಜೀವದ ಪುಸ್ತಕದಲ್ಲಿ ಶಾಶ್ವತವಾಗಿ ಇರಬೇಕಂದ್ರೆ ಈ ನೀತಿವಂತರು ಹೊಸ ಲೋಕದಲ್ಲೂ ನಂಬಿಗಸ್ತರಾಗಿ ಇರಬೇಕು.

16. “ನ್ಯಾಯತೀರ್ಪಿಗಾಗಿ ಎದ್ದು ಬರ್ತಾರೆ” ಅನ್ನೋದರ ಅರ್ಥ ಏನು?

16 ತೀರಿಹೋಗೋ ಮುಂಚೆ ಕೆಟ್ಟ ಕೆಲಸ ಮಾಡ್ತಾ ಇದ್ದವರಿಗೆ ಏನಾಗುತ್ತೆ? ಇವರು ಸತ್ತಾಗ ಇವರ ಪಾಪಗಳನ್ನೂ ಯೆಹೋವ ಕ್ಷಮಿಸಿಬಿಡ್ತಾನೆ ನಿಜ, ಆದ್ರೆ ಇವರು ಸಾಯೋದಕ್ಕಿಂತ ಮುಂಚೆ ಆತನನ್ನ ಆರಾಧಿಸುತ್ತಿರಲಿಲ್ಲ. ಅದಕ್ಕೇ ಇವರ ಹೆಸರು ಜೀವದ ಪುಸ್ತಕದಲ್ಲಿ ಬರೆದಿರಲ್ಲ. ಹಾಗಾಗಿ ಯೋಹಾನ ಪುಸ್ತಕದಲ್ಲಿ ಹೇಳಿರೋ ‘ಕೆಟ್ಟ ಕೆಲಸ ಮಾಡ್ತಾ ಇದ್ದವರೇ’ ಅಪೊಸ್ತಲರ ಕಾರ್ಯ 24:15ರಲ್ಲಿ ಹೇಳಿರೋ “ಅನೀತಿವಂತರು.” ಇವರು “ನ್ಯಾಯತೀರ್ಪಿಗಾಗಿ ಎದ್ದು ಬರ್ತಾರೆ.” c ಜೀವಂತವಾಗಿ ಎದ್ದು ಬಂದಮೇಲೆ ಇವರು ಹೇಗೆ ನಡ್ಕೊಳ್ತಾರೆ ಅಂತ ಯೇಸು ಕ್ರಿಸ್ತ ಗಮನಿಸ್ತಾ ಇರುತ್ತಾನೆ ಮತ್ತು ಅವರನ್ನ ಪರಿಶೀಲಿಸ್ತಾನೆ. (ಲೂಕ 22:30) ಇವರ ಹೆಸರನ್ನ ಜೀವದ ಪುಸ್ತಕದಲ್ಲಿ ಬರಿಬೇಕಾ ಬೇಡ್ವಾ ಅಂತ ನಿರ್ಧರಿಸೋಕೆ ಸಮಯ ಹಿಡಿಯುತ್ತೆ. ಇವರು ತೀರಿಹೋಗೋ ಮುಂಚೆ ಮಾಡ್ತಿದ್ದ ಕೆಟ್ಟ ಕೆಲಸಗಳನ್ನ ಬಿಟ್ಟು ತಮ್ಮ ಜೀವನವನ್ನ ಬದಲಾಯಿಸಿಕೊಂಡು ಯೆಹೋವನಿಗೆ ತಮ್ಮನ್ನ ಸಮರ್ಪಿಸಿಕೊಂಡ್ರೆ ಮಾತ್ರ ಅವರ ಹೆಸರನ್ನ ಜೀವದ ಪುಸ್ತಕದಲ್ಲಿ ಬರೆಯಲಾಗುತ್ತೆ.

17-18. (ಎ) ಭೂಮಿ ಮೇಲೆ ಜೀವಂತವಾಗಿ ಎದ್ದು ಬಂದವರೆಲ್ಲ ಏನು ಮಾಡಬೇಕಾಗುತ್ತೆ? (ಬಿ) ಪ್ರಕಟನೆ 20:12, 13ರಲ್ಲಿ ಹೇಳಿರೋ ‘ಕೆಲಸಗಳು’ ಅನ್ನೋ ಪದ ಯಾವುದರ ಬಗ್ಗೆ ಮಾತಾಡ್ತಿದೆ?

17 ನೀತಿವಂತರೇ ಆಗಿರಲಿ ಅನೀತಿವಂತರೇ ಆಗಿರಲಿ ಮತ್ತೆ ಜೀವ ಪಡೆದುಕೊಂಡ ಮೇಲೆ 1,000 ವರ್ಷದ ಆಳ್ವಿಕೆಯ ಸಮಯದಲ್ಲಿ ಹೊಸ ಸುರುಳಿಗಳಲ್ಲಿರೋ ನಿಯಮಗಳನ್ನ ಪಾಲಿಸಲೇಬೇಕು. ಅಪೊಸ್ತಲ ಯೋಹಾನ ದರ್ಶನದಲ್ಲಿ ನೋಡಿದ ವಿಷಯಗಳನ್ನ ವಿವರಿಸ್ತಾ “ಸಿಂಹಾಸನದ ಮುಂದೆ ಸತ್ತವರು ನಿಂತಿರೋದನ್ನ ನೋಡ್ದೆ. ಅವ್ರಲ್ಲಿ ದೊಡ್ಡವರು, ಚಿಕ್ಕವರು ಇದ್ರು. ಆಗ ದೇವರು ಸುರುಳಿಗಳನ್ನ ತೆರೆದನು. ಆಮೇಲೆ ಇನ್ನೊಂದು ಸುರುಳಿಯನ್ನ ದೇವರು ತೆರೆದನು. ಅದು ಜೀವದ ಸುರುಳಿ. ಸುರುಳಿಗಳಲ್ಲಿ ಇದ್ದ ವಿಷ್ಯಗಳ ಆಧಾರದ ಮೇಲೆ ಅವರವರು ಮಾಡಿದ ಕೆಲಸಕ್ಕೆ ತಕ್ಕ ಹಾಗೆ ಆತನು ಸತ್ತವ್ರಿಗೆ ನ್ಯಾಯತೀರ್ಪು ಕೊಟ್ಟನು” ಅಂದ.—ಪ್ರಕ. 20:12, 13.

18 ಜೀವಂತವಾಗಿ ಎದ್ದು ಬಂದವರಿಗೆ ಅವರು ಮಾಡಿದ ಯಾವ “ಕೆಲಸಕ್ಕೆ” ನ್ಯಾಯತೀರ್ಪಾಗುತ್ತೆ? ತೀರಿಹೋಗೋ ಮುಂಚೆ ಅವರು ಮಾಡಿದ ಕೆಲಸದ ಬಗ್ಗೆ ಇಲ್ಲಿ ಹೇಳುತ್ತಿಲ್ಲ. ಯಾಕಂದ್ರೆ ಅವರು ಸತ್ತಾಗಲೇ ಅವರ ಪಾಪಗಳು ಅಳಿಸಿಹೋದ್ವು ಅಂತ ನಾವು ತಿಳ್ಕೊಂಡ್ವಿ. ಹಾಗಾಗಿ ಅವರು ಹಿಂದಿನ ಜೀವನದಲ್ಲಿ ಮಾಡಿದ ‘ಕೆಲಸಗಳ’ ಆಧಾರದ ಮೇಲಲ್ಲ, ಬದಲಿಗೆ ಅವರು ಜೀವಂತವಾಗಿ ಎದ್ದು ಬಂದಮೇಲೆ ಹೊಸ ಲೋಕದಲ್ಲಿ ಅವರಿಗೆ ತರಬೇತಿ ಸಿಕ್ಕಿದ ಮೇಲೆ ಹೇಗೆ ನಡೆದುಕೊಳ್ಳುತ್ತಾರೋ ಅದರ ಆಧಾರದ ಮೇಲೆ ಅವರಿಗೆ ತೀರ್ಪಾಗುತ್ತೆ. ನೋಹ, ಸಮುವೇಲ, ದಾವೀದ ಮತ್ತು ದಾನಿಯೇಲನಂಥ ಇನ್ನೂ ಅನೇಕ ನೀತಿವಂತರು ಕೂಡ ಹೊಸ ಲೋಕದಲ್ಲಿ ಯೇಸು ಬಗ್ಗೆ ಕಲಿಬೇಕಾಗುತ್ತೆ, ಆತನು ಕೊಟ್ಟ ಬಿಡುಗಡೆ ಬೆಲೆ ಮೇಲೆ ನಂಬಿಕೆ ಬೆಳೆಸಿಕೊಳ್ಳಬೇಕಾಗುತ್ತೆ. ಅವರೇ ಇಷ್ಟೆಲ್ಲಾ ಕಲಿಬೇಕಿರುತ್ತೆ ಅಂದಮೇಲೆ ಅನೀತಿವಂತರು ಇನ್ನೂ ಎಷ್ಟೋ ವಿಷಯಗಳನ್ನ ಕಲಿಬೇಕಿರುತ್ತೆ ಅಲ್ವಾ!

19. ದೇವರು ಕೊಡೋ ಅವಕಾಶವನ್ನ ಬೇಡ ಅಂತ ಹೇಳೋ ಜನರಿಗೆ ಕೊನೆಯಲ್ಲಿ ಏನಾಗುತ್ತೆ?

19 ದೇವರು ಕೊಡೋ ಈ ಒಳ್ಳೇ ಅವಕಾಶನ ಬೇಡ ಅಂತ ಹೇಳೋ ಜನರಿಗೆ ಕೊನೆಯಲ್ಲಿ ಏನಾಗುತ್ತೆ ಅಂತ ಪ್ರಕಟನೆ 20:15ರಲ್ಲಿ ಹೇಳುತ್ತೆ. ‘ಜೀವದ ಪುಸ್ತಕದಲ್ಲಿ ಯಾರ ಹೆಸ್ರು ಇಲ್ವೋ ಅವ್ರನ್ನೆಲ್ಲ ಆ ಬೆಂಕಿ ಕೆರೆಗೆ ತಳ್ಳಿಬಿಡಲಾಗುತ್ತೆ’ ಅಂದ್ರೆ ಅವರು ಸಂಪೂರ್ಣವಾಗಿ ನಾಶ ಆಗ್ತಾರೆ. ಹಾಗಾದ್ರೆ ನಮ್ಮ ಹೆಸರನ್ನ ಜೀವದ ಪುಸ್ತಕದಲ್ಲಿ ಬರೆಸಿಕೊಳ್ಳೋದು ಮತ್ತು ಅಲ್ಲಿಂದ ಅಳಿಸಿ ಹೋಗದೇ ಇರೋ ತರ ನೋಡಿಕೊಳ್ಳೋದು ಎಷ್ಟು ಮುಖ್ಯ ಅಲ್ವಾ!

1,000 ವರ್ಷದ ಆಳ್ವಿಕೆಯಲ್ಲಿ ದೊಡ್ಡ ಶೈಕ್ಷಣಿಕ ಕೆಲಸ ನಡಿತಿದೆ. ಅಲ್ಲಿ ಒಬ್ಬ ಸಹೋದರ ಬೇರೆಯವರಿಗೆ ಕಲಿಸ್ತಿದ್ದಾನೆ (ಪ್ಯಾರ 20 ನೋಡಿ)

20. ಸಾವಿರ ವರ್ಷದ ಆಳ್ವಿಕೆಯಲ್ಲಿ ಯಾವ ಅದ್ಭುತವಾದ ಕೆಲಸ ನಡೆಯುತ್ತೆ? (ಮುಖಪುಟ ಚಿತ್ರ ನೋಡಿ.)

20 ಸಾವಿರ ವರ್ಷದ ಆಳ್ವಿಕೆಯಲ್ಲಿ ತುಂಬ ಅದ್ಭುತವಾದ ವಿಷಯಗಳು ನಡೆಯುತ್ತೆ. ಇದುವರೆಗೆ ಚರಿತ್ರೆಯಲ್ಲೇ ನಡೆದಿಲ್ಲದ ಶೈಕ್ಷಣಿಕ ಕೆಲಸ ಆಗ ನಡಿಯುತ್ತೆ. ಅಷ್ಟೇ ಅಲ್ಲ, ಆ ಸಮಯದಲ್ಲಿ ನೀತಿವಂತರು ಮತ್ತು ಅನೀತಿವಂತರು ಶಾಶ್ವತ ಜೀವ ಪಡ್ಕೊಳ್ತಾರಾ ಇಲ್ಲವಾ ಅಂತ ಪರೀಕ್ಷಿಸಲಾಗುತ್ತೆ. (ಯೆಶಾ. 26:9; ಅ. ಕಾ. 17:31) ಹಾಗಾಗಿ ಯೆಹೋವನ ಬಗ್ಗೆ ಕಲಿಸೋ ಈ ಶೈಕ್ಷಣಿಕ ಕೆಲಸ ಹೇಗೆ ನಡೆಯುತ್ತೆ ಅಂತ ಮುಂದಿನ ಲೇಖನದಲ್ಲಿ ನಾವು ಕಲಿತೀವಿ.

ಗೀತೆ 12 ನಿತ್ಯಜೀವದ ವಾಗ್ದಾನ

a ಯೇಸು ಯೋಹಾನ 5:28, 29ರಲ್ಲಿ ಕೆಲವರು “ಜೀವ ಪಡೆದುಕೊಳ್ಳೋಕೆ ಎದ್ದು ಬರ್ತಾರೆ” ಮತ್ತು ಇನ್ನು ಕೆಲವರು “ನ್ಯಾಯತೀರ್ಪಿಗಾಗಿ ಎದ್ದು ಬರ್ತಾರೆ” ಅಂತ ಹೇಳಿದ್ದಾನೆ. ಈ ಲೇಖನದಲ್ಲಿ ಈ ವಚನದ ಹೊಸ ತಿಳುವಳಿಕೆಯನ್ನ ನೋಡೋಣ ಮತ್ತು ಜೀವ ಪಡೆದುಕೊಳ್ಳೋಕೆ ಯಾರು ಎದ್ದು ಬರ್ತಾರೆ, ನ್ಯಾಯತೀರ್ಪಿಗಾಗಿ ಯಾರು ಎದ್ದು ಬರ್ತಾರೆ ಅಂತನೂ ನೋಡೋಣ.

b ಯೆಹೋವ ದೇವರು ಜೀವದ ಪುಸ್ತಕವನ್ನ “ಲೋಕ ಹುಟ್ಟಿದಾಗಿಂದ” ಬರೆಯೋಕೆ ಶುರುಮಾಡಿದನು. ಇಲ್ಲಿ ಹೇಳಿರೋ “ಲೋಕ” ಪಾಪದಿಂದ ಬಿಡುಗಡೆ ಪಡೆದುಕೊಳ್ಳೋ ಯೋಗ್ಯತೆ ಇರೋ ಜನರನ್ನ ಸೂಚಿಸುತ್ತೆ. (ಮತ್ತಾ. 25:34; ಪ್ರಕ. 17:8) ದೇವರಿಗೆ ನಂಬಿಕೆ ತೋರಿಸಿದವರಲ್ಲಿ ಹೇಬೆಲನೇ ಮೊದಲನೆಯವನು. ಅದಕ್ಕೆ ಮೊದಲು ಅವನ ಹೆಸರನ್ನೇ ಆ ಪುಸ್ತಕದಲ್ಲಿ ಬರೆದಿರಬೇಕು.

c ಈ ಮುಂಚೆ ನಾವು ‘ನ್ಯಾಯತೀರ್ಪು’ ಅಂದ್ರೆ ಶಿಕ್ಷೆ ಅಥವಾ ದಂಡನೆ ಅಂತ ಅಂದುಕೊಂಡಿದ್ವಿ. ನಿಜ, ‘ನ್ಯಾಯತೀರ್ಪು’ ಅನ್ನೋ ಪದಕ್ಕೆ ಈ ಅರ್ಥ ಇರಬಹುದು. ಆದ್ರೆ ಈ ಸನ್ನಿವೇಶದಲ್ಲಿ ಯೇಸು ‘ನ್ಯಾಯತೀರ್ಪು’ ಅನ್ನೋ ಪದವನ್ನ ಬಳಸಿದಾಗ ಅದು ಒಬ್ಬ ವ್ಯಕ್ತಿಯನ್ನ ಗಮನಿಸೋದು, ಪರೀಕ್ಷಿಸೋದು ಅನ್ನೋ ಅರ್ಥದಲ್ಲಿ ಹೇಳಿರಬಹುದು. ‘ನ್ಯಾಯತೀರ್ಪು’ ಅಂದ್ರೆ ಒಬ್ಬ ವ್ಯಕ್ತಿಯ “ನಡತೆಯನ್ನ ಸೂಕ್ಷ್ಮವಾಗಿ ಪರಿಶೀಲಿಸುವುದು” ಅಂತ ಒಂದು ಗ್ರೀಕ್‌ ಬೈಬಲ್‌ ಡಿಕ್ಷನರಿ ಹೇಳುತ್ತೆ.