ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 1

ದೇವರ ವಾಕ್ಯ “ಸತ್ಯಾನೇ” ಅಂತ ನಂಬಿ

ದೇವರ ವಾಕ್ಯ “ಸತ್ಯಾನೇ” ಅಂತ ನಂಬಿ

2023ರ ವರ್ಷವಚನ: “ಸತ್ಯಾನೇ ನಿನ್ನ ವಾಕ್ಯದ ಜೀವಾಳ.”—ಕೀರ್ತ. 119:160.

ಗೀತೆ 114 ದೇವರ ಸ್ವಂತ ಗ್ರಂಥ—ಒಂದು ನಿಧಿ

ಈ ಲೇಖನದಲ್ಲಿ ಏನಿದೆ? a

1. ಇವತ್ತು ಜನ ಯಾಕೆ ಬೈಬಲನ್ನ ನಂಬ್ತಿಲ್ಲ?

 ಇವತ್ತು ಜನರಿಗೆ ಯಾರನ್ನ ನಂಬಬೇಕು, ಯಾರನ್ನ ನಂಬಬಾರದು ಅಂತಾನೇ ಗೊತ್ತಾಗ್ತಿಲ್ಲ. ರಾಜಕಾರಣಿಗಳು, ವಿಜ್ಞಾನಿಗಳು ಮತ್ತು ದೊಡ್ಡದೊಡ್ಡ ಉದ್ಯಮಿಗಳು ಒಳ್ಳೇದು ಮಾಡ್ತಾರೆ ಅನ್ನೋ ನಂಬಿಕೆನ ಜನರು ಕಳ್ಕೊಂಡು ಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಪಾದ್ರಿಗಳ ಮೇಲೂ ಜನರಿಗೆ ಒಳ್ಳೇ ಅಭಿಪ್ರಾಯ ಇಲ್ಲ. ಯಾಕಂದ್ರೆ ಅವರು ಬೈಬಲಿಂದ ಜನರಿಗೆ ಕಲಿಸೋದೇ ಒಂದು, ಅವರು ಮಾಡೋದೇ ಇನ್ನೊಂದು. ಇದ್ರಿಂದ ಜನ ಅವರನ್ನೂ ನಂಬ್ತಿಲ್ಲ, ಅವರ ಕೈಯಲ್ಲಿರೋ ಬೈಬಲನ್ನೂ ನಂಬ್ತಿಲ್ಲ.

2. ಕೀರ್ತನೆ 119:160ರಲ್ಲಿ ಹೇಳಿರೋ ಹಾಗೆ ನಾವು ಏನನ್ನ ನಂಬ್ತೀವಿ?

2 ಆದ್ರೆ ನಮಗೆ ಯೆಹೋವ ‘ಸತ್ಯದ ದೇವರು’ ಮತ್ತು ಆತನು ನಮಗೆ ಒಳ್ಳೇದನ್ನೇ ಮಾಡ್ತಾನೆ ಅಂತ ಗೊತ್ತು. ನಾವು ಅದನ್ನೇ ನಂಬ್ತೀವಿ. (ಕೀರ್ತ. 31:5; ಯೆಶಾ. 48:17) ಅಷ್ಟೇ ಅಲ್ಲ, “ಸತ್ಯಾನೇ [ಆತನ] ವಾಕ್ಯದ ಜೀವಾಳ” b ಆಗಿರೋದ್ರಿಂದ ನಾವು ಬೈಬಲನ್ನೂ ನಂಬ್ತೀವಿ. (ಕೀರ್ತನೆ 119:160 ಓದಿ.) “ದೇವರ ವಾಕ್ಯದಲ್ಲಿ ಒಂದೂ ತಪ್ಪಿಲ್ಲ, ಆತನು ಹೇಳಿರೋ ಮಾತಲ್ಲಿ ಯಾವುದೂ ಸುಳ್ಳಾಗಿಲ್ಲ. ಹಾಗಾಗಿ ಆ ದೇವರನ್ನ ಪೂರ್ತಿಯಾಗಿ ನಂಬಬಹುದು. ಆತನು ಕೊಟ್ಟಿರೋ ಬೈಬಲನ್ನೂ ನಂಬಬಹುದು” ಅಂತ ಒಬ್ಬ ಬೈಬಲ್‌ ಪಂಡಿತ ಬರೆದಿದ್ದಾನೆ. ನಾವೆಲ್ಲರೂ ಈ ಮಾತನ್ನ ಒಪ್ಪಿಕೊಳ್ತೀವಿ ಅಲ್ವಾ?

3. ನಾವು ಈ ಲೇಖನದಲ್ಲಿ ಏನು ಕಲಿತೀವಿ?

3 ಬೈಬಲಲ್ಲಿ ಇರೋದೆಲ್ಲಾ ಸತ್ಯ ಅಂತ ನಂಬೋಕೆ ನಾವು ಜನರಿಗೆ ಹೇಗೆ ಸಹಾಯ ಮಾಡಬಹುದು? ಅದಕ್ಕೆ ಮೂರು ಕಾರಣಗಳನ್ನ ಈ ಲೇಖನದಲ್ಲಿ ನೋಡೋಣ. 1) ಬೈಬಲಲ್ಲಿರೋ ವಿಷ್ಯಗಳು ಯಾವತ್ತೂ ಬದಲಾಗಿಲ್ಲ. 2) ಅದ್ರಲ್ಲಿ ಹೇಳಿರೋ ಭವಿಷ್ಯವಾಣಿಗಳೆಲ್ಲ ನಿಜ ಆಗಿದೆ. 3) ಜನರ ಜೀವನವನ್ನೇ ಬದಲಾಯಿಸೋ ಶಕ್ತಿ ಬೈಬಲಿಗಿದೆ.

ಬೈಬಲಲ್ಲಿರೋ ಸಂದೇಶ ಯಾವತ್ತೂ ಬದಲಾಗಿಲ್ಲ

4. ಬೈಬಲಲ್ಲಿರೋ ಸಂದೇಶ ಬದಲಾಗಿರಬಹುದು ಅಂತ ಕೆಲವರು ಯಾಕೆ ಅಂದುಕೊಳ್ತಾರೆ?

4 ಯೆಹೋವ 40 ಜನರನ್ನ ಆರಿಸಿಕೊಂಡು ಬೈಬಲಲ್ಲಿರೋ ಎಲ್ಲಾ ಪುಸ್ತಕಗಳನ್ನ ಬರೆಸಿದನು. ಆದ್ರೆ ಅವರು ಬರೆದ ಹಸ್ತಪ್ರತಿಗಳು ಈಗ ನಮ್ಮ ಕೈಯಲ್ಲಿ ಇಲ್ಲ. c ಆ ಹಸ್ತಪ್ರತಿಗಳನ್ನ ನಕಲು ಮಾಡ್ತಾ ಮಾಡ್ತಾ ಈಗ ನಮ್ಮ ಹತ್ರ ನಕಲು ಪ್ರತಿಗಳು ಮಾತ್ರ ಇದೆ. ಅದಕ್ಕೆ ಕೆಲವರು, ‘ಹಸ್ತಪ್ರತಿಗಳಲ್ಲಿದ್ದ ವಿಷ್ಯಾನೇ ಈಗ ಬೈಬಲಲ್ಲಿದೆ ಅನ್ನೋದಕ್ಕೆ ಏನು ಗ್ಯಾರಂಟಿ, ಸ್ವಲ್ಪನಾದ್ರೂ ಬದಲಾಗಿರಲ್ವಾ’ ಅಂತ ಕೇಳ್ತಾರೆ. ನಿಮಗೂ ಹಾಗೆ ಅನಿಸಿದ್ಯಾ?

ಹೀಬ್ರು ಪುಸ್ತಕಗಳನ್ನ ನಕಲು ಮಾಡುವಾಗ ದೇವರ ಸಂದೇಶ ಬದಲಾಗದ ಹಾಗೆ ನಕಲುಗಾರರು ಹುಷಾರಾಗಿ ನೋಡಿಕೊಂಡಿದ್ದಾರೆ (ಪ್ಯಾರ 5 ನೋಡಿ)

5. ಹೀಬ್ರು ಪುಸ್ತಕಗಳನ್ನ ಹೇಗೆ ನಕಲು ಮಾಡ್ತಿದ್ರು? (ಮುಖಪುಟ ಚಿತ್ರ ನೋಡಿ.)

5 ಕಾಲಗಳೇ ಉರುಳಿದ್ರೂ ಪವಿತ್ರ ಗ್ರಂಥದಲ್ಲಿರೋ ಸಂದೇಶ ಬದಲಾಗಬಾರದು ಅಂತ ಯೆಹೋವ ಬಯಸಿದನು. ಅದಕ್ಕೆ ಅದನ್ನ ನಕಲು ಮಾಡೋಕೆ ವ್ಯವಸ್ಥೆ ಮಾಡಿದನು. ಇಸ್ರಾಯೇಲಿನ ರಾಜರಿಗೆ, ನಿಯಮ ಪುಸ್ತಕವನ್ನ ಕೈಯಾರೆ ಬರೆದು ಇಟ್ಟುಕೊಳ್ಳಬೇಕು ಅಂತ ಹೇಳಿದನು. ಅಷ್ಟೇ ಅಲ್ಲ, ನಿಯಮ ಪುಸ್ತಕದಲ್ಲಿರೋ ವಿಷ್ಯಗಳನ್ನ ಜನರಿಗೆ ಕಲಿಸೋಕೆ ಲೇವಿಯರನ್ನೂ ನೇಮಿಸಿದನು. (ಧರ್ಮೋ. 17:18; 31:24-26; ನೆಹೆ. 8:7) ಯೆಹೂದ್ಯರು ಬಾಬೆಲ್‌ನಿಂದ ವಾಪಸ್‌ ಬಂದಮೇಲೆ ಹೀಬ್ರು ಪುಸ್ತಕಗಳನ್ನ ನಕಲು ಮಾಡೋಕೆ ಶುರುಮಾಡಿದ್ರು. ಅದಕ್ಕೆ ಅಂತಾನೇ ನಕಲುಗಾರರ ಒಂದು ಗುಂಪಿತ್ತು. (ಎಜ್ರ 7:6, ಪಾದಟಿಪ್ಪಣಿಗಳು) ಅವರು ತುಂಬ ಪ್ರತಿಗಳನ್ನ ನಕಲು ಮಾಡಿದ್ರು. ಈ ಕೆಲಸವನ್ನ ಅವರು ತುಂಬ ಹುಷಾರಾಗಿ ಮಾಡ್ತಿದ್ರು. ಮೊದಮೊದಲು ಮೂಲ ಹಸ್ತಪ್ರತಿಯಲ್ಲಿ ಎಷ್ಟು ಪದಗಳಿದೆ ಅಂತ ನೋಡಿ ನಕಲು ಮಾಡ್ತಿದ್ರು. ಹೋಗ್ತಾ ಹೋಗ್ತಾ, ಅದ್ರಲ್ಲಿ ಎಷ್ಟು ಅಕ್ಷರಗಳಿದೆ ಅಂತಾನೂ ಲೆಕ್ಕಮಾಡಿ ನಕಲು ಮಾಡೋಕೆ ಶುರುಮಾಡಿದ್ರು. ಅವರೂ ಮನುಷ್ಯರೇ ಅಲ್ವಾ? ಹಾಗಾಗಿ ಚಿಕ್ಕಪುಟ್ಟ ತಪ್ಪುಗಳು ಆಗ್ತಿತ್ತು. ಆದ್ರೆ ತುಂಬ ಪ್ರತಿಗಳು ಇದ್ದಿದ್ರಿಂದ, ಆ ಚಿಕ್ಕಪುಟ್ಟ ತಪ್ಪುಗಳನ್ನೂ ಮುಂದೆ ಕಂಡುಹಿಡಿಯೋಕೆ ಆಯ್ತು. ಹೇಗೆ?

6. ನಕಲು ಪ್ರತಿಗಳಲ್ಲಿ ಇರೋ ತಪ್ಪುಗಳನ್ನ ಹೇಗೆ ಕಂಡುಹಿಡಿತಾರೆ?

6 ಬೈಬಲಿನ ನಕಲು ಪ್ರತಿಗಳಲ್ಲಿ ಆಗಿರೋ ತಪ್ಪುಗಳನ್ನ ಇವತ್ತಿನ ಪಂಡಿತರು ತುಂಬ ಸುಲಭವಾಗಿ ಕಂಡುಹಿಡಿತಾರೆ. ಇದನ್ನ ಅರ್ಥಮಾಡಿಕೊಳ್ಳೋಕೆ ಒಂದು ಉದಾಹರಣೆ ನೋಡಿ. ಒಂದು ಪುಟದಲ್ಲಿರೋ ವಿಷ್ಯವನ್ನ ನಕಲು ಮಾಡೋಕೆ 100 ಜನರಿಗೆ ಹೇಳಿದ್ದಾರೆ ಅಂತ ಅಂದ್ಕೊಳ್ಳೋಣ. ಅವರಲ್ಲಿ ಒಬ್ಬ, ಒಂದು ಚಿಕ್ಕ ತಪ್ಪು ಮಾಡಿದ್ದಾನೆ ಅಂದ್ಕೊಳ್ಳಿ. ಆದ್ರೆ ಅವನು ಬರೆದಿರೋ ಆ ಪ್ರತಿಯನ್ನ ಮಿಕ್ಕ 99 ಪ್ರತಿಗಳ ಜೊತೆ ಹೋಲಿಸಿ ನೋಡಿದಾಗ ಎಲ್ಲಿ, ಏನು ತಪ್ಪಾಗಿದೆ ಅಂತ ಗೊತ್ತಾಗಿಬಿಡುತ್ತೆ. ಅದೇ ತರಾನೇ ಬೈಬಲ್‌ ನಕಲು ಪ್ರತಿಗಳನ್ನ ಒಂದಕ್ಕೊಂದು ಹೋಲಿಸಿ ನೋಡಿದಾಗ, ಅದ್ರಲ್ಲಿ ಏನಾದ್ರೂ ತಪ್ಪಾಗಿದ್ಯಾ, ಏನಾದ್ರೂ ಮಾಹಿತಿ ಬಿಟ್ಟುಹೋಗಿದ್ಯಾ ಅಂತ ಪಂಡಿತರಿಗೆ ಗೊತ್ತಾಗುತ್ತೆ.

7. ಬೈಬಲ್‌ ನಕಲುಗಾರರು ತಮ್ಮ ಕೆಲಸವನ್ನ ಎಷ್ಟು ಚೆನ್ನಾಗಿ ಮಾಡಿದ್ದಾರೆ?

7 ಬೈಬಲ್‌ ಹಸ್ತಪ್ರತಿಗಳನ್ನ ನಕಲು ಮಾಡಿದವರು ಅದನ್ನ ಸರಿಯಾಗಿ ಮಾಡೋಕೆ ತುಂಬ ಕಷ್ಟಪಟ್ಟಿದ್ದಾರೆ. ಇದಕ್ಕೊಂದು ಉದಾಹರಣೆ ನೋಡಿ. ಕ್ರಿಸ್ತ ಶಕ 1008 ಅಥವಾ 1009ರಲ್ಲಿ ಮಾಡಿರೋ ಪೂರ್ತಿ ಹೀಬ್ರು ಪುಸ್ತಕಗಳ ಒಂದು ನಕಲು ಪ್ರತಿ ಸಿಕ್ಕಿದೆ. ಅದನ್ನ ಲೆನಿನ್‌ಗ್ರಾಡ್‌ ಕೋಡೆಕ್ಸ್‌ ಅಂತ ಕರೀತಾರೆ. ಆದ್ರೆ ಅದಕ್ಕಿಂತ 1,000 ವರ್ಷ ಹಿಂದೆ ಇದ್ದ ಕೆಲವು ಹಸ್ತಪ್ರತಿಗಳು ಮತ್ತು ಅದರ ಕೆಲವು ಭಾಗಗಳು ಇತ್ತೀಚೆಗೆ ಸಿಕ್ಕಿವೆ. ಹಾಗಾಗಿ ಲೆನಿನ್‌ಗ್ರಾಡ್‌ ಕೋಡೆಕ್ಸ್‌ಗೂ ಮತ್ತು 1,000 ವರ್ಷದ ಹಿಂದೆ ಬರೆದ ಆ ಹಸ್ತಪ್ರತಿಗಳಿಗೂ ಖಂಡಿತ ತುಂಬ ವ್ಯತ್ಯಾಸ ಇರುತ್ತೆ ಅಂತ ಕೆಲವರು ಅಂದುಕೊಂಡಿದ್ರು. ಆದ್ರೆ ಅವೆರಡನ್ನೂ ಹೋಲಿಸಿ ನೋಡಿದಾಗ ದೊಡ್ಡ ವ್ಯತ್ಯಾಸ ಏನೂ ಇರಲಿಲ್ಲ. ಕೆಲವು ಪದಗಳಲ್ಲಿ ಬದಲಾವಣೆ ಆಗಿತ್ತು, ಆದ್ರೆ ಅದರಲ್ಲಿ ಇರೋ ವಿಷ್ಯಗಳು ಒಂದೇ ತರ ಇತ್ತು.

8. ಗ್ರೀಕ್‌ ಪುಸ್ತಕಗಳ ನಕಲು ಪ್ರತಿಗಳನ್ನ ಬೇರೆ ಪುಸ್ತಕಗಳ ನಕಲು ಪ್ರತಿಗಳ ಜೊತೆ ಹೋಲಿಸಿ ನೋಡಿದಾಗ ಏನು ಗೊತ್ತಾಯ್ತು?

8 ನಕಲುಗಾರರು ಹೀಬ್ರು ಪುಸ್ತಕಗಳನ್ನ ಹೇಗೆ ನಕಲು ಮಾಡಿದ್ರೋ, ಅದೇ ತರ ಒಂದನೇ ಶತಮಾನದಲ್ಲಿದ್ದ ನಕಲುಗಾರರು ಗ್ರೀಕ್‌ ಪುಸ್ತಕಗಳನ್ನೂ ನಕಲು ಮಾಡಿದ್ರು. ಅವರು 27 ಪುಸ್ತಕಗಳ ಎಷ್ಟೋ ನಕಲು ಪ್ರತಿಗಳನ್ನ ಮಾಡಿದ್ರು. ಅದನ್ನ ಸಭೆಯಲ್ಲೂ ಬಳಸ್ತಿದ್ರು ಮತ್ತು ಬೇರೆಯವರಿಗೆ ಸಾರೋಕೂ ಉಪಯೋಗಿಸ್ತಿದ್ರು. ಆ ನಕಲು ಪ್ರತಿಗಳನ್ನ ಆ ಸಮಯದಲ್ಲಿ ಇದ್ದ ಬೇರೆ ಪುಸ್ತಕಗಳ ನಕಲು ಪ್ರತಿಗಳ ಜೊತೆ ಹೋಲಿಸಿ ನೋಡಿದಾಗ ಏನು ಗೊತ್ತಾಯ್ತು? ಒಬ್ಬ ವಿದ್ವಾಂಸ ಹೀಗೆ ಹೇಳ್ತಾರೆ: “ಬೇರೆ ಪುಸ್ತಕಗಳ ನಕಲು ಪ್ರತಿಗಳಿಗಿಂತ [ಗ್ರೀಕ್‌ ಪುಸ್ತಕಗಳ ನಕಲು ಪ್ರತಿಗಳು] ಜಾಸ್ತಿ ಸಿಕ್ಕಿವೆ ಮತ್ತು ಅದರ ಎಲ್ಲಾ ಪುಸ್ತಕಗಳೂ ಸಿಕ್ಕಿವೆ.” ಅನಾಟಮಿ ಆಫ್‌ ದ ನ್ಯೂ ಟೆಸ್ಟಮೆಂಟ್‌ ಅನ್ನೋ ಪುಸ್ತಕ ಏನು ಹೇಳುತ್ತೆ ನೋಡಿ: “ಬೈಬಲ್‌ ಬರಹಗಾರರು ಏನು ಬರೆದರೋ, ಅದೇ ಇವತ್ತು ಚೆನ್ನಾಗಿ ಭಾಷಾಂತರ ಆಗಿರೋ [ಗ್ರೀಕ್‌ ಪುಸ್ತಕಗಳಲ್ಲೂ] ಇದೆ ಅಂತ ನಾವು ನಂಬಬಹುದು.”

9. ಬೈಬಲಲ್ಲಿರೋ ಸಂದೇಶದ ಬಗ್ಗೆ ಯೆಶಾಯ 40:8 ಏನು ಹೇಳುತ್ತೆ?

9 ಅವತ್ತು ಬೈಬಲ್‌ ಬರಹಗಾರರು ಏನು ಬರೆದರೋ ಅದೇ ಇವತ್ತು ನಮ್ಮ ಕೈಯಲ್ಲಿರೋ ಬೈಬಲಲ್ಲೂ ಇದೆ ಅಂತ ನಾವು ಪೂರ್ತಿಯಾಗಿ ನಂಬಬಹುದು. d ಯಾಕಂದ್ರೆ ಅದನ್ನ ನಕಲು ಮಾಡಿದವರು ತಮ್ಮ ಕೆಲಸವನ್ನ ತುಂಬ ಹುಷಾರಾಗಿ ಮಾಡಿದ್ದಾರೆ. ಹೀಗೆ ಯೆಹೋವ ದೇವರು ಬೈಬಲಲ್ಲಿರೋ ಈ ಸಂದೇಶ ಬದಲಾಗದೇ ಇರೋ ತರ ನೋಡಿಕೊಂಡಿದ್ದಾನೆ. (ಯೆಶಾಯ 40:8 ಓದಿ.) ಬೈಬಲಲ್ಲಿರೋ ಸಂದೇಶ ಬದಲಾಗಿಲ್ಲ ಅಂದ ತಕ್ಷಣ ಅದನ್ನ ದೇವರೇ ಬರೆಸಿರೋದು ಅಂತ ಹೇಳಕ್ಕಾಗಲ್ಲ ಅಂತ ಕೆಲವರು ಹೇಳ್ತಾರೆ. ಆದ್ರೆ ಬೈಬಲನ್ನ ದೇವರೇ ಬರೆಸಿರೋದು ಅಂತ ಹೇಳೋಕೆ ಕೆಲವು ಆಧಾರಗಳನ್ನ ಈಗ ನೋಡೋಣ.

ಬೈಬಲ್‌ ಭವಿಷ್ಯವಾಣಿಗಳು ನಿಜ ಆಗಿವೆ

Left: C. Sappa/​DeAgostini/​Getty Images; right: Image © Homo Cosmicos/​Shutterstock

ಬೈಬಲ್‌ನಲ್ಲಿದ್ದ ಭವಿಷ್ಯವಾಣಿಗಳು ಹಿಂದೆನೂ ನಿಜ ಆಯ್ತು, ಈಗಲೂ ನಿಜ ಆಗ್ತಿದೆ (ಪ್ಯಾರ 10-11 ನೋಡಿ) f

10. ಎರಡನೇ ಪೇತ್ರ 1:21ರಲ್ಲಿರೋ ಮಾತು ನಿಜ ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ. (ಚಿತ್ರಗಳನ್ನ ನೋಡಿ.)

10 ಬೈಬಲಲ್ಲಿ ತುಂಬ ಭವಿಷ್ಯವಾಣಿಗಳಿವೆ. ನೂರಾರು ವರ್ಷಗಳ ನಂತರ ನಡಿಯೋ ಕೆಲವು ಘಟನೆಗಳನ್ನ ಬೈಬಲ್‌ ಮುಂಚೆನೇ ಹೇಳಿತ್ತು. ಬೈಬಲ್‌ನಲ್ಲಿ ಹೇಳಿದ ಘಟನೆಗಳು ಚಾಚೂತಪ್ಪದೆ ನಡಿತು ಅಂತ ಇತಿಹಾಸನೂ ಒಪ್ಪಿಕೊಳ್ಳುತ್ತೆ. ಈ ಎಲ್ಲಾ ಭವಿಷ್ಯವಾಣಿಗಳನ್ನ ಬರೆಸಿದ್ದು ಯೆಹೋವ ದೇವರು. ಅದಕ್ಕೇ ಅದೆಲ್ಲ ನಿಜ ಆಯ್ತು. (2 ಪೇತ್ರ 1:21 ಓದಿ.) ನಾವೀಗ, ಬಾಬೆಲ್‌ ನಾಶ ಆಗೋದರ ಬಗ್ಗೆ ಬೈಬಲ್‌ ಏನು ಹೇಳಿತ್ತು ಅಂತ ನೋಡೋಣ. ಬಾಬೆಲ್‌ ಮಹಾನಗರ ಬೇರೆಯವರ ಕೈವಶ ಆಗುತ್ತೆ ಅಂತ ಯೆಹೋವ ಬೈಬಲ್‌ನಲ್ಲಿ ಬರೆಸಿದ್ದನು. ಆ ಪಟ್ಟಣವನ್ನ ಕೋರೆಷ ಅನ್ನೋ ರಾಜ ವಶಮಾಡಿಕೊಳ್ತಾನೆ ಅಂತ ಹೇಳಿದ್ದನು. ಅದನ್ನ ಹೇಗೆ ವಶಮಾಡಿಕೊಳ್ತಾನೆ ಅನ್ನೋದನ್ನೂ ಬರೆಸಿದ್ದನು. (ಯೆಶಾ. 44:27–45:2) ಅಷ್ಟೇ ಅಲ್ಲ, ಮುಂದಕ್ಕೆ ಆ ಪಟ್ಟಣ ಸಂಪೂರ್ಣವಾಗಿ ನಾಶ ಆಗುತ್ತೆ ಮತ್ತು ಆ ಪಟ್ಟಣದಲ್ಲಿ ಜನರು ಯಾರೂ ವಾಸ ಮಾಡೋಕೆ ಆಗದಷ್ಟು ಆ ಪಟ್ಟಣ ಹಾಳಾಗುತ್ತೆ ಅಂತನೂ ಹೇಳಿದ್ದನು. (ಯೆಶಾ. 13:19, 20) ಇದನ್ನೆಲ್ಲ ಕ್ರಿಸ್ತ ಪೂರ್ವ 8ನೇ ಶತಮಾನದಲ್ಲಿ ಯೆಶಾಯನ ಕೈಯಿಂದ ಬರೆಸಿದ್ದನು. ಯೆಹೋವ ದೇವರು ಹೇಳಿದ ತರಾನೇ ನಡೀತು. ಕ್ರಿಸ್ತ ಪೂರ್ವ 539ರಲ್ಲಿ ಮೇದ್ಯ-ಪರ್ಷಿಯನ್ನರು ಬಾಬೆಲನ್ನ ವಶಮಾಡಿಕೊಂಡ್ರು. ಒಂದು ಕಾಲದಲ್ಲಿ ಮಹಾನಗರ ಆಗಿದ್ದ ಪಟ್ಟಣ ಈಗ ಹಾಳು ಕೊಂಪೆ ಆಗಿದೆ.—ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ ಪಾಠ 03 ಉಪಶೀರ್ಷಿಕೆ 5ರಲ್ಲಿರೋ ಬಾಬೆಲ್‌ ನಾಶನದ ಬಗ್ಗೆ ಮುಂತಿಳಿಸಿದ ಬೈಬಲ್‌ ಅನ್ನೋ ವಿಡಿಯೋ ನೋಡಿ. ಇದು ಎಲೆಕ್ಟ್ರಾನಿಕ್‌ ಪ್ರತಿಯಲ್ಲಿ ಸಿಗುತ್ತೆ.

11. ದಾನಿಯೇಲ 2:41-43ರಲ್ಲಿರೋ ಭವಿಷ್ಯವಾಣಿ ಈಗ ಹೇಗೆ ನಿಜ ಆಗ್ತಿದೆ ಅಂತ ವಿವರಿಸಿ.

11 ಬೈಬಲ್‌ ಭವಿಷ್ಯವಾಣಿಗಳು ಹಿಂದಿನ ಕಾಲದಲ್ಲಿ ಅಷ್ಟೇ ಅಲ್ಲ, ನಮ್ಮ ಕಾಲದಲ್ಲೂ ನಿಜ ಆಗ್ತಿದೆ. ಉದಾಹರಣೆಗೆ, ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿಯ ಬಗ್ಗೆ ದಾನಿಯೇಲ ಪುಸ್ತಕ ಹೇಳಿದ ಭವಿಷ್ಯವಾಣಿಯನ್ನ ನೋಡಿ. (ದಾನಿಯೇಲ 2:41-43 ಓದಿ.) ಈ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿಯ ಒಂದು ಭಾಗ “ಕಬ್ಬಿಣದ ತರ ಗಟ್ಟಿಯಾಗಿರುತ್ತೆ,” ಇನ್ನೊಂದು ಭಾಗ ಜೇಡಿ ಮಣ್ಣಿನ ಹಾಗೆ “ನಾಜೂಕು ಆಗಿರುತ್ತೆ” ಅಂತ ಹೇಳಿತ್ತು. ಅದು ಹೇಗೆ ನಿಜ ಆಗ್ತಿದೆ? ಎರಡು ಮಹಾಯುದ್ಧಗಳನ್ನ ಗೆಲ್ಲೋ ವಿಷ್ಯದಲ್ಲಿ ಬ್ರಿಟನ್‌ ಮತ್ತು ಅಮೆರಿಕ ಮುಖ್ಯ ಪಾತ್ರವಹಿಸ್ತು. ಈಗಲೂ ಅವು ಮಿಲಿಟರಿ ಶಕ್ತಿಯಲ್ಲಿ ಎತ್ತಿದ ಕೈ. ಹೀಗೆ ಅದರ ಒಂದು ಭಾಗ ಕಬ್ಬಿಣದಷ್ಟು ಗಟ್ಟಿ ಅಂತ ತೋರಿಸಿದೆ. ಆದ್ರೆ ಆ ದೇಶಗಳ ಜನರು ಕಾರ್ಮಿಕ ಚಳುವಳಿಗಳನ್ನ ಮಾಡ್ತಿದ್ದಾರೆ. ಮಾನವ ಹಕ್ಕುಗಳಿಗಾಗಿ ಹೋರಾಡ್ತಾ ಇದ್ದಾರೆ. ಅಲ್ಲಿನ ವ್ಯಾಪಾರ-ವಹಿವಾಟು ಮತ್ತು ಸರ್ಕಾರದ ವಿರುದ್ಧ ದಂಗೆ ಏಳ್ತಿದ್ದಾರೆ. ಹೀಗೆ ಆ ಲೋಕಶಕ್ತಿಯ ಇನ್ನೊಂದು ಭಾಗ ಜೇಡಿಮಣ್ಣಿನಷ್ಟು ನಾಜೂಕಾಗಿದೆ ಅನ್ನೋದನ್ನ ತೋರಿಸಿದೆ. ಸರ್ಕಾರಗಳ ಬಗ್ಗೆ ವಿಮರ್ಶೆ ಮಾಡೋ ಒಬ್ಬ ವ್ಯಕ್ತಿ ಹೀಗೆ ಹೇಳ್ತಾನೆ: “ಅಮೆರಿಕ ಒಂದು ಪ್ರಜಾಪ್ರಭುತ್ವ ರಾಷ್ಟ್ರ ಆಗಿದ್ರೂ ಅಲ್ಲಿನ ಸರ್ಕಾರಗಳಲ್ಲಿ ಇರೋ ಗೊಂದಲ, ಅಸ್ತವ್ಯಸ್ತತೆ ಬೇರೆಲ್ಲೂ ಇಲ್ಲ.” ಅಷ್ಟೇ ಅಲ್ಲ, ಬ್ರಿಟನ್‌ ಕೂಡ ಭವಿಷ್ಯವಾಣಿಯಲ್ಲಿ ಹೇಳಿದ ಹಾಗೆ ಬಲಹೀನ ಆಗ್ತಿದೆ. ಯಾಕಂದ್ರೆ ಯೂರೋಪ್‌ ಒಕ್ಕೂಟದಲ್ಲಿ ಇರೋ ರಾಷ್ಟ್ರಗಳ ಜೊತೆ ಬ್ರಿಟನ್‌ ಒಳ್ಳೇ ಸಂಬಂಧ ಇಟ್ಟುಕೊಳ್ಳಬೇಕಾ ಬೇಡ್ವಾ ಅನ್ನೋ ವಿಷ್ಯದಲ್ಲಿ ಅದರ ಪ್ರಜೆಗಳಿಗೆ ಬೇರೆಬೇರೆ ಅಭಿಪ್ರಾಯ ಇದೆ. ಅದಕ್ಕೆ ಬ್ರಿಟನ್‌ಗೆ ಬೇಕಾದ ಬೆಂಬಲ ಸಿಗ್ತಾ ಇಲ್ಲ. ಹೀಗೆ ಅಮೆರಿಕ ಮತ್ತು ಬ್ರಿಟನ್‌ ಸೇರಿ ಸಾಧಿಸಬೇಕು ಅಂದುಕೊಂಡಿರೋದನ್ನ ಸಾಧಿಸೋಕೆ ಆಗ್ತಿಲ್ಲ.

12. ಭವಿಷ್ಯವಾಣಿಗಳಿಂದ ನಮ್ಮ ನಂಬಿಕೆ ಹೇಗೆ ಜಾಸ್ತಿ ಆಗುತ್ತೆ?

12 ಬೈಬಲಲ್ಲಿರೋ ಭವಿಷ್ಯವಾಣಿಗಳು ಈಗಾಗಲೇ ನಿಜ ಆಗಿರೋದನ್ನ ನೋಡುವಾಗ ಮುಂದೆ ಕೂಡ ನಿಜ ಆಗುತ್ತೆ ಅನ್ನೋ ನಂಬಿಕೆ ಜಾಸ್ತಿ ಆಗುತ್ತೆ. ಕೀರ್ತನೆಗಾರ ದಾವೀದನಿಗೂ ಹೀಗೇ ಅನಿಸ್ತು. ಅವನು ಯೆಹೋವನಿಗೆ “ನೀನು ಕೊಡೋ ರಕ್ಷಣೆಗಾಗಿ ನಾನು ಹಾತೊರಿತಾ ಇದ್ದೀನಿ, ಯಾಕಂದ್ರೆ ನಿನ್ನ ವಾಕ್ಯನೇ ನನ್ನ ನಿರೀಕ್ಷೆ” ಅಂತ ಪ್ರಾರ್ಥಿಸಿದ. (ಕೀರ್ತ. 119:81) ‘ನಮ್ಮ ಭವಿಷ್ಯ ಚೆನ್ನಾಗಿರಬೇಕು’ ಅನ್ನೋದೇ ಯೆಹೋವ ದೇವರ ಆಸೆ. ಅದಕ್ಕೇ ಆತನು ಬೈಬಲಲ್ಲಿ ನಮಗೆ ನಿರೀಕ್ಷೆ ಕೊಟ್ಟಿದ್ದಾನೆ. (ಯೆರೆ. 29:11) ಈ ನಿರೀಕ್ಷೆ ನಿಜ ಆಗುತ್ತಾ ಇಲ್ವಾ ಅಂತ ನಾವು ಸಂಶಯ ಪಡಬೇಕಾಗಿಲ್ಲ. ಯಾಕಂದ್ರೆ ಈ ಮಾತನ್ನ ಕೊಟ್ಟಿರೋದು ಮನುಷ್ಯರಲ್ಲ, ಯೆಹೋವ ದೇವರು. ಹಾಗಾಗಿ ಆತನ ಮೇಲೆ ನಂಬಿಕೆಯನ್ನ ಇನ್ನೂ ಜಾಸ್ತಿ ಮಾಡಿಕೊಳ್ಳೋಕೆ ಬೈಬಲನ್ನ, ಅದರಲ್ಲಿ ಇರೋ ಭವಿಷ್ಯವಾಣಿಗಳನ್ನ ಓದಿ ಅರ್ಥ ಮಾಡಿಕೊಳ್ಳೋಕೆ ಪ್ರಯತ್ನ ಮಾಡೋಣ.

ಬೈಬಲ್‌ ಜನರ ಜೀವನವನ್ನ ಬದಲಾಯಿಸಿದೆ

13. ಬೈಬಲನ್ನ ನಂಬೋಕೆ ಇನ್ನೊಂದು ಕಾರಣ ಏನಂತ ಕೀರ್ತನೆ 119:66, 138 ಹೇಳುತ್ತೆ?

13 ಬೈಬಲನ್ನ ನಂಬೋಕೆ ಇನ್ನೊಂದು ಕಾರಣ ಏನಂದ್ರೆ, ಅದು ಎಷ್ಟೋ ಜನರ ಜೀವನವನ್ನ ಬದಲಾಯಿಸಿದೆ. ಬೈಬಲ್‌ನಲ್ಲಿರೋ ಬುದ್ಧಿಮಾತುಗಳನ್ನ ಪಾಲಿಸಿದ್ರಿಂದ ಜನರು ಸಂತೋಷವಾಗಿದ್ದಾರೆ. (ಕೀರ್ತನೆ 119:66, 138 ಓದಿ.) ಉದಾಹರಣೆಗೆ, ವಿಚ್ಛೇದನ ಕೊಡಬೇಕು ಅಂತ ಅಂದ್ಕೊಂಡಿದ್ದ ದಂಪತಿಗಳು ಬೈಬಲ್‌ ಬುದ್ಧಿಮಾತುಗಳನ್ನ ಪಾಲಿಸಿದ್ರಿಂದ ಮತ್ತೆ ಒಂದಾಗಿದ್ದಾರೆ. ತಮ್ಮ ಮಕ್ಕಳನ್ನ ಪ್ರೀತಿಯಿಂದ, ಚೆನ್ನಾಗಿ ಬೆಳೆಸ್ತಿದ್ದಾರೆ. ಇದ್ರಿಂದ ಇಡೀ ಕುಟುಂಬನೇ ಖುಷಿಖುಷಿಯಾಗಿದೆ.—ಎಫೆ. 5:22-29.

14. ಜನರನ್ನ ಬದಲಾಯಿಸೋ ಶಕ್ತಿ ಬೈಬಲ್‌ಗೆ ಇದೆ ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ.

14 ಬೈಬಲ್‌ನಲ್ಲಿರೋ ಬುದ್ಧಿಮಾತುಗಳನ್ನ ಪಾಲಿಸಿದ್ರಿಂದ ದೊಡ್ಡ ದೊಡ್ಡ ಅಪರಾಧ ಮಾಡಿರೋರು ಕೂಡ ಒಳ್ಳೆಯವರಾಗಿದ್ದಾರೆ. ಜ್ಯಾಕ್‌ ಅನ್ನೋ ಕೈದಿಯ ಉದಾಹರಣೆ ನೋಡಿ. e ಜೈಲ್‌ನಲ್ಲಿ ಅವನ ಜೊತೆ ಇದ್ದ ಇನ್ನೂ ಕೆಲವರಿಗೆ ಮರಣ ದಂಡನೆ ವಿಧಿಸಲಾಗಿತ್ತು. ಅವರಲ್ಲಿ ಜ್ಯಾಕ್‌ ತುಂಬ ಕ್ರೂರಿಯಾಗಿದ್ದ. ಒಂದಿನ ಜೈಲ್‌ನಲ್ಲಿ ಕೈದಿಗಳು ಬೈಬಲ್‌ ಕಲಿತಾ ಇದ್ದಾಗ ಇವನೂ ಹೋಗಿ ಕೂತ್ಕೊಂಡ. ಸಹೋದರರು ನಡ್ಕೊಳ್ತಿದ್ದ ರೀತಿ, ಅವರು ತೋರಿಸಿದ ಪ್ರೀತಿ ಅವನಿಗೆ ತುಂಬ ಇಷ್ಟ ಆಯ್ತು. ಅವನೂ ಬೈಬಲ್‌ ಕಲಿಯೋಕೆ ಶುರು ಮಾಡಿದ. ಬೈಬಲ್‌ ಕಲಿತಾ ಕಲಿತಾ ಅವನು ಬದಲಾದ. ಸ್ವಲ್ಪ ದಿನದಲ್ಲೇ ಅವನು ಪ್ರಚಾರಕನಾದ. ಆಮೇಲೆ ದೀಕ್ಷಾಸ್ನಾನನೂ ಪಡ್ಕೊಂಡ. ಅಲ್ಲಿದ್ದ ಕೈದಿಗಳಿಗೆ ದೇವರ ಸರ್ಕಾರದ ಬಗ್ಗೆ ಸಾರ್ತಿದ್ದ. ನಾಲ್ಕು ಜನರಿಗೆ ಬೈಬಲ್‌ ಅಧ್ಯಯನ ಮಾಡ್ತಿದ್ದ. ಅವನ ಮರಣದಂಡನೆಯ ದಿನ ಬರುವಷ್ಟರಲ್ಲಿ ಅವನು ಒಳ್ಳೆಯವನಾಗಿದ್ದ. ಕೆಟ್ಟ ದಾರಿಯನ್ನ ಬಿಟ್ಟುಬಿಟ್ಟಿದ್ದ. “ನಾನು 20 ವರ್ಷದ ಹಿಂದೆ ನೋಡಿದ್ದ ಜ್ಯಾಕೇ ಬೇರೆ, ಈಗ ನೋಡ್ತಿರೋ ಜ್ಯಾಕೇ ಬೇರೆ. ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿತಿದ್ರಿಂದ ಅವನು ಪೂರ್ತಿಯಾಗಿ ಬದಲಾಗಿದ್ದಾನೆ” ಅಂತ ಅವನ ವಕೀಲ ಹೇಳಿದ. ಶಿಕ್ಷೆ ಬದಲಾಗದೆ ಇದ್ರೂ ಜ್ಯಾಕ್‌ ಬದಲಾಗಿದ್ದ. ಇದ್ರಿಂದ ಬೈಬಲನ್ನ ನಾವು ನಂಬಬಹುದು, ಅದಕ್ಕೆ ಎಂಥವರನ್ನ ಬೇಕಾದ್ರೂ ಬದಲಾಯಿಸೋ ಶಕ್ತಿ ಇದೆ ಅಂತ ನಮಗೆ ಗೊತ್ತಾಗುತ್ತೆ.—ಯೆಶಾ. 11:6-9.

ಬೈಬಲ್‌ನಲ್ಲಿರೋ ಬುದ್ಧಿಮಾತುಗಳು ಎಷ್ಟೋ ಜನರನ್ನ ಒಳ್ಳೆಯವರನ್ನಾಗಿ ಮಾಡಿದೆ (ಪ್ಯಾರ 15 ನೋಡಿ) g

15. ಯೆಹೋವನ ಸಾಕ್ಷಿಗಳು ಬೈಬಲ್‌ನಲ್ಲಿ ಇರೋದನ್ನ ಪಾಲಿಸ್ತಾ ಇರೋದ್ರಿಂದ ಹೇಗೆ ನಡಕೊಳ್ತಾರೆ? (ಚಿತ್ರ ನೋಡಿ.)

15 ಇವತ್ತು ಜನ ದೇಶ, ಭಾಷೆ, ಜಾತಿ ಅಂತ ಹೇಳಿಕೊಂಡು ಒಬ್ಬರಿಗೊಬ್ಬರು ಹೊಡೆದಾಡ್ತಾರೆ. ಆದ್ರೆ ಯೆಹೋವನ ಜನರು ಬೈಬಲ್‌ನಲ್ಲಿ ಕಲ್ತಿದ್ದನ್ನ ಜೀವನದಲ್ಲೂ ಪಾಲಿಸ್ತಾ ಇರೋದಕ್ಕೇ ಒಗ್ಗಟ್ಟಾಗಿ ಇದ್ದಾರೆ, ಸಂತೋಷವಾಗಿ ಇದ್ದಾರೆ. (ಯೋಹಾ. 13:35; 1 ಕೊರಿಂ. 1:10) ಯೆಹೋವನ ಜನರು ಒಗ್ಗಟ್ಟಾಗಿ ಇರೋದನ್ನ ನೋಡಿ ಜೀನ್‌ ಅನ್ನೋ ಯುವಕನಿಗೆ ಆಶ್ಚರ್ಯ ಆಯ್ತು. ಅವನು ಆಫ್ರಿಕ ದೇಶದಲ್ಲಿ ಹುಟ್ಟಿ ಬೆಳೆದ. ಅವನ ದೇಶದಲ್ಲಿ ಯಾವಾಗಲೂ ಅಂತರ್ಯುದ್ಧ ನಡಿತಾ ಇತ್ತು. ಅದಕ್ಕೆ ಅವನು ಮಿಲಿಟರಿಗೆ ಸೇರಿಕೊಂಡ. ಸ್ವಲ್ಪ ದಿನ ಆದಮೇಲೆ ಅವನು ಬೇರೆ ದೇಶಕ್ಕೆ ಓಡಿಹೋಗಿಬಿಟ್ಟ. ಅಲ್ಲಿ ಅವನು ಯೆಹೋವನ ಸಾಕ್ಷಿಗಳನ್ನ ಭೇಟಿಯಾದ. ಅವನು ಹೇಳಿದ್ದು: “ದೇವರಿಗೆ ಇಷ್ಟ ಆಗೋ ತರ ನಡಕೊಳ್ಳೋರು ರಾಜಕೀಯಕ್ಕೆ ತಲೆ ಹಾಕಲ್ಲ. ಅವರು ಒಬ್ಬರಿಗೊಬ್ಬರು ಕಚ್ಚಾಡಲ್ಲ, ಪ್ರೀತಿ ತೋರಿಸ್ತಾರೆ ಅಂತ ನನಗೆ ಗೊತ್ತಾಯ್ತು. ಇದಕ್ಕೆ ಮುಂಚೆ ನಾನು ದೇಶಕ್ಕಾಗಿ ಜೀವ ಕೊಡೋಕೆ ರೆಡಿಯಾಗಿದ್ದೆ. ಆದ್ರೆ ಬೈಬಲ್‌ ಕಲಿತ ಮೇಲೆ ಜೀವನಪೂರ್ತಿ ನಾನು ಯೆಹೋವನ ಸೇವೆ ಮಾಡಬೇಕು ಅಂತ ನಿರ್ಧಾರ ಮಾಡಿದ್ದೀನಿ.” ಹೀಗೆ ಜೀನ್‌ ತನ್ನ ಜೀವನದ ಗುರಿಯನ್ನೇ ಬದಲಾಯಿಸಿಕೊಂಡಿದ್ದಾನೆ. ಜನರು ಒಗ್ಗಟ್ಟಾಗಿರೋಕೆ ಸಹಾಯ ಮಾಡೋ ಬೈಬಲ್‌ ಸತ್ಯವನ್ನ ಕಲಿಸ್ತಿದ್ದಾನೆ. ಬೈಬಲನ್ನ ಕಲಿತು ಅದನ್ನ ಪಾಲಿಸ್ತಾ ಇರೋದ್ರಿಂದ ಬೇರೆಬೇರೆ ದೇಶ, ಭಾಷೆಯ ಜನರು ಪ್ರಯೋಜನ ಪಡಕೊಳ್ತಿದ್ದಾರೆ. ಇದು ಬೈಬಲನ್ನ ನಂಬೋಕೆ ಇರೋ ಇನ್ನೊಂದು ಆಧಾರ.

ಬೈಬಲ್‌ ಮೇಲೆ ನಂಬಿಕೆ ಕಳಕೊಳ್ಳಬೇಡಿ

16. ದೇವರ ವಾಕ್ಯದ ಮೇಲಿರೋ ನಮ್ಮ ನಂಬಿಕೆಯನ್ನ ಈಗಲೇ ಯಾಕೆ ಜಾಸ್ತಿ ಮಾಡ್ಕೊಬೇಕು?

16 ಲೋಕದ ಪರಿಸ್ಥಿತಿ ಇನ್ನೂ ಹದಗೆಡುತ್ತೆ. ಇದ್ರಿಂದ ಹೋಗ್ತಾ-ಹೋಗ್ತಾ ನಮಗೆ ಬೈಬಲ್‌ ಮೇಲಿರೋ ನಂಬಿಕೆನೂ ಕಮ್ಮಿ ಆಗಿಬಿಡುತ್ತೆ. ಬೈಬಲ್‌ನಲ್ಲಿ ಹೇಳಿರೋದೆಲ್ಲ ನಿಜನಾ? ನಂಬಿಗಸ್ತ, ವಿವೇಕಿ ಆಗಿರೋ ಆಳಿಂದನೇ ಯೆಹೋವ ನಮಗೆ ಇವತ್ತು ನಿರ್ದೇಶನ ಕೊಡ್ತಿದ್ದಾನಾ ಅಂತ ಜನರು ನಮ್ಮಲ್ಲಿ ಸಂಶಯ ಹುಟ್ಟಿಸಬಹುದು. ಆದ್ರೆ ಯೆಹೋವನ ವಾಕ್ಯವಾದ ಬೈಬಲ್‌ನಲ್ಲಿ ಇರೋದೆಲ್ಲ ಸತ್ಯ ಅಂತ ನಾವು ಚೆನ್ನಾಗಿ ಅರ್ಥ ಮಾಡಿಕೊಂಡ್ರೆ ಜನರು ಹೇಳೋದನ್ನ ನಂಬಲ್ಲ. ದೇವರ “ನಿಯಮಗಳನ್ನ ಜೀವನಪರ್ಯಂತ ಅನುಸರಿಸಬೇಕಂತ, ಕೊನೇ ಉಸಿರು ಇರೋ ತನಕ ಪಾಲಿಸಬೇಕಂತ” ದೃಢ ತೀರ್ಮಾನ ಮಾಡಿಕೊಳ್ತೀವಿ. (ಕೀರ್ತ. 119:112) ಬೈಬಲ್‌ನಲ್ಲಿ ಇರೋದೆಲ್ಲ ಸತ್ಯ, ಅದನ್ನ ಜೀವನದಲ್ಲಿ ಪಾಲಿಸಿ ಅಂತ ಜನರಿಗೆ ಹೇಳೋಕೆ ನಾವು “ನಾಚಿಕೆಪಡಲ್ಲ.” (ಕೀರ್ತ. 119:46) ಅಷ್ಟೇ ಅಲ್ಲ, ಏನೇ ಕಷ್ಟ ಬರಲಿ, ಎಷ್ಟೇ ವಿರೋಧ-ಹಿಂಸೆ ಬರಲಿ ಅದನ್ನೆಲ್ಲ “ತಾಳ್ಮೆ, ಆನಂದದಿಂದ ಸಹಿಸ್ಕೊಳ್ಳೋಕೆ” ನಮ್ಮಿಂದ ಆಗುತ್ತೆ.—ಕೊಲೊ. 1:11; ಕೀರ್ತ. 119:143, 157.

17. ನಮ್ಮ ವರ್ಷವಚನ ಯಾವುದಕ್ಕೆ ಸಹಾಯ ಮಾಡುತ್ತೆ?

17 ನಾವು ಯೆಹೋವನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ. ಯಾಕಂದ್ರೆ ಇವತ್ತು ಜನರಿಗೆ ಯಾರನ್ನ ನಂಬಬೇಕು, ಯಾರನ್ನ ನಂಬಬಾರದು, ಏನು ಮಾಡಬೇಕು, ಏನು ಮಾಡಬಾರದು ಅಂತನೇ ಗೊತ್ತಾಗ್ತಿಲ್ಲ. ಆದ್ರೆ ಯೆಹೋವ ನಮಗೆ ಬೈಬಲನ್ನ ಕೊಟ್ಟು ಸತ್ಯ ಏನು ಅಂತ ತಿಳಿಸಿದ್ದಾನೆ. ಇದ್ರಿಂದ, ನಮಗೆ ಏನೇ ಕಷ್ಟ ಬಂದ್ರೂ ಭಯಪಡದೆ ಧೈರ್ಯವಾಗಿ ಇದ್ದೀವಿ. ಮುಂದೆ ದೇವರ ಸರ್ಕಾರದಲ್ಲಿ ನಮ್ಮ ಜೀವನ ಚೆನ್ನಾಗಿರುತ್ತೆ ಅನ್ನೋ ನಂಬಿಕೆಯಲ್ಲಿ ಬದುಕ್ತಿದ್ದೀವಿ. ಹಾಗಾಗಿ ದೇವರ ವಾಕ್ಯದಲ್ಲಿ ಇರೋದೆಲ್ಲ ಸತ್ಯಾನೇ ಅಂತ ಪೂರ್ತಿಯಾಗಿ ನಂಬಿ. ಆ ನಂಬಿಕೆನ ಜಾಸ್ತಿ ಮಾಡೋಕೆ ಈ 2023ರ ವರ್ಷವಚನ ನಿಮಗೆ ಸಹಾಯ ಮಾಡಲಿ.—ಕೀರ್ತ. 119:160.

ಗೀತೆ 113 ದೇವರ ವಾಕ್ಯಕ್ಕಾಗಿ ಕೃತಜ್ಞರು

a 2023ರ ವರ್ಷವಚನ ನಮ್ಮ ನಂಬಿಕೆಯನ್ನ ಬಲಪಡಿಸುತ್ತೆ. ಅದು ಹೀಗೆ ಹೇಳುತ್ತೆ: “ಸತ್ಯಾನೇ ನಿನ್ನ ವಾಕ್ಯದ ಜೀವಾಳ.” (ಕೀರ್ತ. 119:160) ಇದನ್ನ ನಾವೆಲ್ಲರೂ ಒಪ್ಪಿಕೊಳ್ತೀವಿ. ಆದ್ರೆ ತುಂಬ ಜನ ‘ಬೈಬಲಲ್ಲಿ ಇರೋದೆಲ್ಲಾ ನಿಜ ಅಲ್ಲ, ಅದರಲ್ಲಿ ಇರೋ ಬುದ್ಧಿ ಮಾತುಗಳಿಂದ ಪ್ರಯೋಜನ ಆಗಲ್ಲ’ ಅಂತ ಹೇಳ್ತಾರೆ. ಆದ್ರೆ ಬೈಬಲಲ್ಲಿ ಇರೋದೆಲ್ಲಾ ಸತ್ಯ ಅಂತ ಒಳ್ಳೇ ಮನಸ್ಸಿನ ಜನರಿಗೆ ಅರ್ಥಮಾಡಿಸೋಕೆ ಮೂರು ಕಾರಣಗಳನ್ನ ಈ ಲೇಖನದಲ್ಲಿ ನೋಡೋಣ.

b ಪದ ವಿವರಣೆ: ಈ ವಚನದಲ್ಲಿರೋ “ಜೀವಾಳ” ಅನ್ನೋ ಪದದ ಹೀಬ್ರು ಪದಕ್ಕೆ ಸಾರ, ತಿರುಳು ಮತ್ತು ಒಂದು ವಸ್ತು ಅಥವಾ ಒಂದು ವಿಷ್ಯದಲ್ಲಿ ಮುಖ್ಯವಾಗಿರೋ ಅಂಶ ಅನ್ನೋ ಅರ್ಥ ಇದೆ.

c “ಹಸ್ತಪ್ರತಿ” ಅಂದ್ರೆ ಹಿಂದಿನ ಕಾಲದಲ್ಲಿ ಜನರು ತಮ್ಮ ಕೈಯಾರೆ ಬರೆದಿರೋ ಪ್ರತಿ.

d ಇವತ್ತು ಬೈಬಲ್‌ ನಮಗೆ ಪೂರ್ತಿಯಾಗಿ ಹೇಗೆ ಸಿಕ್ಕಿದೆ? ಅದರಲ್ಲಿ ಇರೋ ಸಂದೇಶ ಬದಲಾಗಿಲ್ಲ ಅಂತ ಹೇಗೆ ಹೇಳಬಹುದು? ಇದನ್ನ ತಿಳ್ಕೊಳ್ಳೋಕೆ jw.orgನಲ್ಲಿ “ಇತಿಹಾಸ ಮತ್ತು ಬೈಬಲ್‌” ಅಂತ ಟೈಪ್‌ ಮಾಡಿ ಹುಡುಕಿ.

e ಕೆಲವರ ಹೆಸರು ಬದಲಾಗಿದೆ.

f ಚಿತ್ರ ವಿವರಣೆ: ಬಾಬೆಲ್‌ ನಗರ ನಾಶ ಆಗುತ್ತೆ ಅಂತ ದೇವರು ಮುಂಚೆನೇ ಹೇಳಿದ್ದನು.

g ಚಿತ್ರ ವಿವರಣೆ: ಒಬ್ಬ ಯುವಕ ಯುದ್ಧ ಮಾಡೋದನ್ನ ಬಿಟ್ಟುಬಿಟ್ಟಿದ್ದಾನೆ. ಬೇರೆಯವರ ಜೊತೆ ಸಮಾಧಾನವಾಗಿ ಇರೋದು ಹೇಗೆ ಅಂತ ಬೈಬಲ್‌ನಿಂದ ಕಲ್ತಿದ್ದಾನೆ. ಅದನ್ನ ಬೇರೆಯವರಿಗೂ ಕಲಿಸ್ತಿದ್ದಾನೆ.