ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ ಶಾಶ್ವತಕ್ಕೂ ತನ್ನ ಹೆಸ್ರಿಗೆ ಗೌರವ ಬರೋ ತರ ಮಾಡ್ತಾನೆ

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಜೂನ್‌ 2020ರ ಕಾವಲಿನಬುರುಜುವಿನಲ್ಲಿ “ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ” ಅನ್ನೋ ಲೇಖನ ಬಂದಿತ್ತು. ಅದು ಯೆಹೋವನ ಹೆಸ್ರಿನ ಬಗ್ಗೆ ಮತ್ತು ಆತನ ಪರಮಾಧಿಕಾರದ ಬಗ್ಗೆ ಹೇಗೆ ಇನ್ನೂ ಚೆನ್ನಾಗಿ ಅರ್ಥ ಮಾಡಿಸ್ತು?

ಆ ಲೇಖನದಲ್ಲಿ, ಎಲ್ಲ ಮನುಷ್ಯರಿಗೂ ದೇವದೂತರಿಗೂ ಸಂಬಂಧಪಟ್ಟ ಒಂದು ವಿಷ್ಯದ ಬಗ್ಗೆ ಇತ್ತು. ಅದು ಎಲ್ಲಕ್ಕಿಂತ ಮುಖ್ಯವಾದ ವಿಷ್ಯ. ಅದೇ ಯೆಹೋವ ದೇವರ ಮಹಾನ್‌ ಹೆಸ್ರಿನ ಪವಿತ್ರೀಕರಣ. ಇದ್ರಲ್ಲಿ ಎರಡು ಭಾಗ ಇತ್ತು. ಒಂದು, ಯೆಹೋವ ದೇವರ ಪರಮಾಧಿಕಾರ ಅಂದ್ರೆ ಆತನಿಂದ ಮಾತ್ರನೇ ಚೆನ್ನಾಗಿ ಆಳಕ್ಕಾಗೋದು ಅನ್ನೋ ವಿಷ್ಯ. ಎರಡು, ಮನುಷ್ಯರು ಯಾವಾಗ್ಲೂ ದೇವರಿಗೆ ನಿಯತ್ತಾಗಿ ಇರ್ತಾರಾ ಅನ್ನೋ ವಿಷ್ಯ.

ಯೆಹೋವ ದೇವರ ಹೆಸ್ರು ಮತ್ತು ಅದ್ರ ಪವಿತ್ರೀಕರಣ ವಿಶ್ವದಲ್ಲೇ ಇರೋ ಅತಿ ದೊಡ್ಡ ವಿವಾದಾಂಶ ಅಂತ ನಾವು ಯಾಕೆ ಈಗ ಹೇಳ್ತಿದ್ದೀವಿ? ಇದಕ್ಕೆ ಮೂರು ಕಾರಣ ಇದೆ.

ಸೈತಾನ ಏದೆನ್‌ ತೋಟದಿಂದ ಹಿಡಿದು ಇಲ್ಲಿ ತನಕ ಯೆಹೋವ ದೇವರ ಹೆಸ್ರನ್ನ ಹಾಳು ಮಾಡ್ತಾ ಇದ್ದಾನೆ

ಒಂದನೇ ಕಾರಣ, ಏದೆನ್‌ ತೋಟದಲ್ಲಿ ಸೈತಾನ ಹಾಳು ಮಾಡಿದ್ದು ಯೆಹೋವ ದೇವರ ಹೆಸ್ರನ್ನೇ. ಅವನು ಹವ್ವಳ ಹತ್ರ ಕೇಳಿದ ಪ್ರಶ್ನೆ ಹೇಗಿತ್ತಂದ್ರೆ, ‘ಯೆಹೋವ ಒಬ್ಬ ಸ್ವಾರ್ಥಿ, ತುಂಬ ಕಟ್ಟುನಿಟ್ಟಾದ ನಿಯಮಗಳನ್ನ ಮಾಡಿ ತುಂಬ ಅನ್ಯಾಯ ಮಾಡ್ತಿದ್ದಾನೆ’ ಅಂತ ಹೇಳಿದ ಹಾಗಿತ್ತು. ಅಷ್ಟೇ ಅಲ್ಲ, ಯೆಹೋವ ಹೇಳಿದ್ದೇ ಒಂದು, ಸೈತಾನ ಹೇಳಿದ್ದೇ ಇನ್ನೊಂದು. ಹೀಗೆ ಅವನು ಯೆಹೋವನನ್ನೇ ಸುಳ್ಳುಗಾರ ಮಾಡಿಬಿಟ್ಟ. ಯೆಹೋವ ದೇವರ ಹೆಸ್ರಿಗೆ ಕಳಂಕ ತಂದಿದ್ರಿಂದ ಅವನಿಗೆ “ಪಿಶಾಚ” ಅನ್ನೋ ಹೆಸ್ರು ಬಂತು. ಪಿಶಾಚ ಅಂದ್ರೆ “ಹೆಸ್ರು ಹಾಳುಮಾಡೋನು” ಅಂತರ್ಥ. (ಯೋಹಾ. 8:44) ಸೈತಾನ ಹೇಳಿದ ಸುಳ್ಳನ್ನ ಹವ್ವ ನಂಬಿ ಯೆಹೋವನ ಮಾತನ್ನ ಕೇಳದೆ, ಆತನ ಅಧಿಕಾರದ ಕೆಳಗೆ ಇರಕ್ಕೆ ಇಷ್ಟ ಇಲ್ಲ ಅಂತ ತೋರಿಸ್ಕೊಟ್ಟಳು. (ಆದಿ. 3:1-6) ಇವತ್ತು ಕೂಡ ಸೈತಾನ ದೇವರ ಬಗ್ಗೆ ಸುಳ್ಳುಗಳನ್ನ ಹಬ್ಬಿಸ್ತಾ ಆತನ ಹೆಸ್ರನ್ನ ಹಾಳುಮಾಡ್ತಾನೇ ಇದ್ದಾನೆ. ಅವನು ಹೇಳಿದ ಸುಳ್ಳುಗಳನ್ನ ನಂಬಿದವರು ಯೆಹೋವ ದೇವರ ಮಾತನ್ನ ಕೇಳ್ತಿಲ್ಲ. ಅದಕ್ಕೇ, ದೇವಜನರು ಯೆಹೋವ ದೇವರ ಪವಿತ್ರ ಹೆಸ್ರಿಗೆ ಬಂದ ಕಳಂಕನೇ ಈ ವಿಶ್ವದಲ್ಲಿ ಆಗಿರೋ ದೊಡ್ಡ ಅನ್ಯಾಯ ಅಂತ ನಂಬ್ತಾರೆ. ಈ ಲೋಕದಲ್ಲಿರೋ ಕೆಟ್ಟತನಕ್ಕೆ, ಕಷ್ಟ-ಸಮಸ್ಯೆಗಳಿಗೆ ಮುಖ್ಯ ಕಾರಣ ದೇವರ ಹೆಸ್ರಿಗೆ ಬಂದಿರೋ ಕಳಂಕನೇ.     

ಎರಡನೇ ಕಾರಣ, ಎಲ್ಲರ ಒಳ್ಳೇದಕ್ಕಾಗಿ ಯೆಹೋವ ದೇವರು ತನ್ನ ಹೆಸ್ರಿನ ನಿರ್ದೋಷೀಕರಣ ಮಾಡ್ತಾನೆ ಅಂದ್ರೆ ತನ್ನ ಹೆಸ್ರಿಗೆ ಬಂದಿರೋ ಕಳಂಕನ ತೆಗೆದುಹಾಕ್ತಾನೆ. ಯೆಹೋವ ದೇವರಿಗೇ ಈ ವಿಷ್ಯ ಎಲ್ಲಕ್ಕಿಂತ ಮುಖ್ಯ. ಅದಕ್ಕೆ ಆತನು, “ನನ್ನ ಮಹಾ ಹೆಸ್ರನ್ನ ನಾನು ಪವಿತ್ರ ಮಾಡೇ ಮಾಡ್ತೀನಿ” ಅಂತ ಹೇಳಿದ್ದಾನೆ. (ಯೆಹೆ. 36:23) ಯೇಸುಗೂ ಈ ವಿಷ್ಯ ತುಂಬ ಮುಖ್ಯ ಆಗಿತ್ತು. ಅದಕ್ಕೆ ಯೆಹೋವನ ಆರಾಧಕರಿಗೆ ಹೇಗೆ ಪ್ರಾರ್ಥಿಸಬೇಕು ಅಂತ ಕಲಿಸುವಾಗ “ನಿನ್ನ ಹೆಸ್ರು ಪವಿತ್ರವಾಗಲಿ” ಅಂತ ಮೊದಲು ಹೇಳೋಕೆ ಕಲಿಸ್ಕೊಟ್ಟನು. (ಮತ್ತಾ. 6:9) ಅಷ್ಟೇ ಅಲ್ಲ, ಯೆಹೋವ ದೇವರ ಹೆಸ್ರಿಗೆ ಗೌರವ ಕೊಡೋದು ಎಷ್ಟು ಮುಖ್ಯ ಅಂತ ಬೈಬಲಲ್ಲಿ ತುಂಬ ಕಡೆ ಇದೆ. ಉದಾಹರಣೆಗೆ “ಯೆಹೋವನ ಹೆಸ್ರಿಗೆ ಕೊಡಬೇಕಾದ ಗೌರವವನ್ನ ಕೊಡಿ.” (1 ಪೂರ್ವ. 16:29; ಕೀರ್ತ. 96:8) “ಗೌರವದಿಂದ ಕೂಡಿರೋ ಆತನ ಹೆಸ್ರನ್ನ ಹಾಡಿ ಹೊಗಳಿ.” (ಕೀರ್ತ. 66:2) “ಶಾಶ್ವತವಾಗಿ ನಿನ್ನ ಹೆಸ್ರಿಗೆ ಗೌರವ ಕೊಡ್ತೀನಿ” ಅಂತ ಇದೆ. (ಕೀರ್ತ. 86:12) ಯೇಸು ಯೆರೂಸಲೇಮ್‌ ದೇವಾಲಯದ ಹತ್ರ ಇದ್ದಾಗ “ಅಪ್ಪಾ, ಎಲ್ಲ ಜನ್ರಿಗೂ ನಿನ್ನ ಹೆಸ್ರು ಗೊತ್ತಾಗಲಿ, ಅವರು ಅದಕ್ಕೆ ಗೌರವ ಕೊಡಲಿ” ಅಂತ ಹೇಳಿದನು. ಆಗ ಸ್ವತಃ ಯೆಹೋವ ದೇವರೇ, “ಅದಕ್ಕೆ ಗೌರವ ಬರೋ ತರ ಮಾಡಿದ್ದೀನಿ. ಇನ್ಮುಂದೆನೂ ಮಾಡ್ತೀನಿ” ಅಂತ ಹೇಳಿದನು.—ಯೋಹಾ. 12:28. a

ಮೂರನೇ ಕಾರಣ, ಯೆಹೋವನ ಉದ್ದೇಶಕ್ಕೂ ಆತನ ಹೆಸ್ರಿಗೂ ಯಾವಾಗ್ಲೂ ಸಂಬಂಧ ಇರುತ್ತೆ. ಯೇಸುವಿನ ಸಾವಿರ ವರ್ಷದ ಆಳ್ವಿಕೆ ಮುಗಿದ ಮೇಲೆ ಕೊನೆ ಪರೀಕ್ಷೆ ಇರುತ್ತೆ. ಅದಾದ ಮೇಲೂ ದೇವದೂತರಿಗೆ ಮತ್ತು ಮನುಷ್ಯರಿಗೆ ಯೆಹೋವ ದೇವರ ಹೆಸ್ರು ಈಗಿರೋಷ್ಟೇ ಮುಖ್ಯವಾಗಿ ಇರುತ್ತೆ. ಹೇಗೆ ಹೇಳಬಹುದು? ಈ ಮುಖ್ಯ ವಿವಾದಾಂಶಕ್ಕೆ ಸಂಬಂಧಪಟ್ಟ ಎರಡು ವಿಷ್ಯಗಳನ್ನ ನೆನಪಿಸ್ಕೊಳ್ಳಿ. ಮೊದಲನೇದಾಗಿ, ಆ ಸಮಯದಲ್ಲಿ ಜನ್ರು ಯೆಹೋವ ದೇವರಿಗೆ ನಿಯತ್ತಾಗಿ ಇರ್ತಾರಾ ಇಲ್ವಾ ಅನ್ನೋ ಪ್ರಶ್ನೆ ಬರಲ್ಲ. ಯಾಕಂದ್ರೆ ಆಗ ಅವರು ಪರಿಪೂರ್ಣರಾಗಿ ಇರ್ತಾರೆ ಮತ್ತು ಕೊನೇ ಪರೀಕ್ಷೆಯಲ್ಲಿ ನಿಯತ್ತಾಗಿ ಇರ್ತೀವಿ ಅಂತ ತೋರಿಸ್ಕೊಟ್ಟಿರ್ತಾರೆ. ಅದಕ್ಕೇ ಯೆಹೋವ ಅವ್ರಿಗೆ ಶಾಶ್ವತ ಜೀವವನ್ನ ಕೊಟ್ಟುಬಿಟ್ಟಿರ್ತಾನೆ. ಎರಡನೇದಾಗಿ, ಯೆಹೋವ ದೇವರು ಆಳ್ವಿಕೆ ಮಾಡೋ ವಿಧ ಸರಿನಾ ಇಲ್ವಾ ಅನ್ನೋ ಪ್ರಶ್ನೆ ಬರಲ್ಲ. ಯಾಕಂದ್ರೆ ಅಷ್ಟೋತ್ತಿಗಾಗ್ಲೇ ಎಲ್ಲ ದೇವದೂತರು ಮತ್ತು ಮನುಷ್ಯರು ಯೆಹೋವನ ಆಳ್ವಿಕೆನೇ ಬೇಕು, ಅದೇ ಸರಿ ಅಂತ ಒಪ್ಕೊಂಡಿರ್ತಾರೆ. ಆದ್ರೂ ಯೆಹೋವ ದೇವರ ಹೆಸ್ರು ಆತನ ಜನ್ರಿಗೆ ಮುಖ್ಯ ಆಗಿರುತ್ತೆ. ಯಾಕೆ?

ನಿಜನೇ, ಅಷ್ಟೋತ್ತಿಗಾಗ್ಲೇ ಎಲ್ಲ ಜನ್ರಿಗೆ ಯೆಹೋವ ಎಷ್ಟು ಒಳ್ಳೇ ದೇವರು ಅಂತ ಗೊತ್ತಾಗಿರುತ್ತೆ. ಆತನ ಹೆಸ್ರಿಗೆ ಬಂದಿರೋ ಕಳಂಕ ಎಲ್ಲ ಹೋಗಿರುತ್ತೆ. ಆದ್ರೂ ಭೂಮಿಯಲ್ಲಿ ಮತ್ತು ಸ್ವರ್ಗದಲ್ಲಿ ಇರೋ ಎಲ್ರಿಗೆ ಯೆಹೋವ ದೇವರ ಹೆಸ್ರು ಮುಂದಕ್ಕೂ ಮುಖ್ಯ ಆಗಿರುತ್ತೆ. ಯಾಕಂದ್ರೆ ಯೆಹೋವ ಅದ್ಭುತ ವಿಷ್ಯಗಳನ್ನ ಮಾಡೋದನ್ನ ಅವರು ಆಗ್ಲೂ ನೋಡ್ತಾ ಇರ್ತಾರೆ. ಉದಾಹರಣೆಗೆ, ಯೇಸು ದೀನತೆಯಿಂದ ತನ್ನ ಎಲ್ಲ ಅಧಿಕಾರವನ್ನ ಯೆಹೋವನಿಗೆ ವಾಪಸ್‌ ಕೊಡುವಾಗ ಯೆಹೋವ “ಎಲ್ರಿಗೂ ಎಲ್ಲ ಆಗ್ತಾನೆ.” (1 ಕೊರಿಂ. 15:28, ಪಾದಟಿಪ್ಪಣಿ) ಅದಾದ್ಮೇಲೆ ಭೂಮಿ ಮೇಲೆ ಇರೋ ಎಲ್ಲ ಜನ್ರು “ದೇವರ ಮಕ್ಕಳಿಗೆ ಸಿಗೋ ಮಹಿಮೆಯ ಸ್ವಾತಂತ್ರ್ಯ” ಪಡ್ಕೊಂಡು ಖುಷಿಯಾಗಿ ಇರ್ತಾರೆ. (ರೋಮ. 8:21) ಅಷ್ಟೇ ಅಲ್ಲ, ಯೆಹೋವ ದೇವರು ತನ್ನ ಹೆಸ್ರಿಗೆ ತಕ್ಕ ಹಾಗೆ ನಡೀತಾ ತನ್ನ ಉದ್ದೇಶವನ್ನ ನೆರವೇರಿಸ್ತಾನೆ. ಅಂದ್ರೆ ಸ್ವರ್ಗದಲ್ಲಿ ಭೂಮಿಯಲ್ಲಿ ಇರೋ ಎಲ್ರನ್ನ ಸೇರಿಸಿ ಒಂದೇ ಕುಟುಂಬವಾಗಿ ಮಾಡ್ತಾನೆ.—ಎಫೆ. 1:10.

ಇದೆಲ್ಲ ಆಗೋದನ್ನ ನೋಡುವಾಗ ಯೆಹೋವನ ಕುಟುಂಬದಲ್ಲಿ ಇರೋ ಎಲ್ರಿಗೂ ಹೇಗನಿಸುತ್ತೆ? ಯೆಹೋವ ದೇವರ ಅದ್ಭುತ ಹೆಸ್ರನ್ನ ಹೊಗಳಬೇಕು, ಅದಕ್ಕೆ ಇನ್ನೂ ಹೆಚ್ಚು ಗೌರವ ಕೊಡಬೇಕು ಅನ್ನೋ ಆಸೆ ಜಾಸ್ತಿ ಆಗುತ್ತೆ. ಕೀರ್ತನೆಗಾರ ದಾವೀದ ಬರೆದ ತರ “ಯೆಹೋವನಿಗೆ ಹೊಗಳಿಕೆ ಸಿಗಲಿ . . . ಗೌರವ ಇರೋ ಆತನ ಹೆಸ್ರಿಗೆ ಸದಾಕಾಲಕ್ಕೂ ಹೊಗಳಿಕೆ ಸಿಗಲಿ” ಅಂತ ನಾವೂ ಹಾರೈಸ್ತೀವಿ. (ಕೀರ್ತ. 72:18, 19) ಯುಗಯುಗಗಳು ಕಳೆದ ಹಾಗೆ ಯೆಹೋವ ದೇವರನ್ನ ಹೊಗಳೋಕೆ ನಮಗೆ ಹೊಸಹೊಸ ಕಾರಣಗಳು ಸಿಗ್ತಾನೇ ಇರುತ್ತೆ, ಯೆಹೋವ ನಮ್ಮನ್ನ ಆಶ್ಚರ್ಯಪಡಿಸ್ತಾನೇ ಇರ್ತಾನೆ.

ಯೆಹೋವ ದೇವರ ಹೆಸ್ರನ್ನ ನೆನಪಿಸ್ಕೊಂಡಾಗ ಆತನು ತೋರಿಸಿದ ಪ್ರೀತಿ ನೆನಪಾಗುತ್ತೆ. (1 ಯೋಹಾ. 4:8) ಆತನಿಗೆ ನಮ್ಮ ಮೇಲೆ ಪ್ರೀತಿ ಇರೋದ್ರಿಂದಾನೇ ನಮ್ಮನ್ನ ಸೃಷ್ಟಿ ಮಾಡಿದ್ದಾನೆ, ಆತನಿಗೆ ನಮ್ಮ ಮೇಲೆ ಪ್ರೀತಿ ಇರೋದ್ರಿಂದಾನೇ ನಮಗೆ ಬಿಡುಗಡೆ ಬೆಲೆ ಕೊಟ್ಟಿದ್ದಾನೆ ಅಂತ ನಾವು ನೆನಪಿಸ್ಕೊಳ್ತೀವಿ. ಯೆಹೋವ ದೇವರು ಆಳ್ವಿಕೆ ಮಾಡೋ ವಿಧ ಸರಿಯಾಗಿದೆ, ಅದ್ರಲ್ಲೂ ಪ್ರೀತಿ ತುಂಬಿದೆ ಅಂತಾನೂ ನೆನಪಿಸ್ಕೊಳ್ತೀವಿ. ಅಷ್ಟೇ ಅಲ್ಲ, ಯೆಹೋವ ದೇವರು ತನ್ನ ಮಕ್ಕಳ ಮೇಲೆ ಪ್ರೀತಿಯ ಸುರಿಮಳೆ ಸುರಿಸೋದನ್ನ ಕಣ್ಣಾರೆ ನೋಡ್ತಾನೇ ಇರ್ತೀವಿ. ಅದಕ್ಕೆ ಕೊನೆನೇ ಇರಲ್ಲ. ಯೆಹೋವ ನಮಗೆ ಪ್ರೀತಿಯ ಅಪ್ಪಾ ಆಗಿರ್ತಾನೆ. ನಾವು ಆತನಿಗೆ ಇನ್ನೂ ಹತ್ರ ಆಗ್ತೀವಿ. ಆತನ ಅದ್ಭುತ ಹೆಸ್ರನ್ನ ಹಾಡಿ ಹೊಗಳ್ತಾನೇ ಇರ್ತೀವಿ.—ಕೀರ್ತ. 73:28.

a ಯೆಹೋವ ತನ್ನ “ಹೆಸ್ರಿಗೆ ತಕ್ಕ ಹಾಗೆ ನಡೀತಾನೆ” ಅನ್ನೋದು ಕೂಡ ನಮಗೆ ಬೈಬಲಿಂದ ಗೊತ್ತಾಗುತ್ತೆ. ಉದಾಹರಣೆಗೆ ಆತನು ತನ್ನ ಜನ್ರನ್ನ ಮಾರ್ಗದರ್ಶಿಸಿದ್ದಾನೆ, ಸಹಾಯ ಮಾಡಿದ್ದಾನೆ, ಕಾಪಾಡಿದ್ದಾನೆ, ಕ್ಷಮಿಸಿದ್ದಾನೆ, ನಾಶಮಾಡದೆ ಉಳಿಸಿದ್ದಾನೆ. ಇದೆಲ್ಲ ಮಾಡಿರೋದು “ಯೆಹೋವ” ಅನ್ನೋ ತನ್ನ ಹೆಸ್ರಿಗೋಸ್ಕರನೇ.—ಕೀರ್ತ. 23:3; 31:3; 79:9; 106:8; 143:11.