ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 43

ಯೆಹೋವ ನಿಮಗೆ ಶಕ್ತಿ ಕೊಡ್ತಾನೆ

ಯೆಹೋವ ನಿಮಗೆ ಶಕ್ತಿ ಕೊಡ್ತಾನೆ

‘[ಯೆಹೋವ] ನಿಮ್ಮನ್ನ ಬಲಪಡಿಸ್ತಾನೆ, ನಿಮ್ಮನ್ನ ಗಟ್ಟಿ ನೆಲದ ಮೇಲೆ ನಿಲ್ಲಿಸ್ತಾನೆ.’—1 ಪೇತ್ರ 5:10.

ಗೀತೆ 60 ಆತನು ನಿನ್ನನ್ನು ಬಲಪಡಿಸುವನು

ಈ ಲೇಖನದಲ್ಲಿ ಏನಿದೆ? a

1. ಹಿಂದಿನ ಕಾಲದಲ್ಲಿ ಯೆಹೋವನ ಸೇವಕರು ಯಾಕೆ ಅಷ್ಟು ಶಕ್ತಿಶಾಲಿಗಳಾಗಿದ್ರು?

 ದೇವರಿಗೆ ನಿಯತ್ತಾಗಿದ್ದ ಜನ್ರನ್ನ ಬೈಬಲ್‌ ಧೈರ್ಯಶಾಲಿಗಳು, ಬಲಶಾಲಿಗಳು ಅಂತ ಕರಿಯುತ್ತೆ. ಆದ್ರೆ ಅಂಥ ಧೀರರೇ ಕೆಲವೊಮ್ಮೆ ಧೈರ್ಯಗೆಟ್ರು. ಉದಾಹರಣೆಗೆ ರಾಜ ದಾವೀದ ಕೆಲವೊಮ್ಮೆ ನನಗೆ “ಬೆಟ್ಟದಷ್ಟು ಬಲ” ಇದೆ ಅಂತ ಅಂದ್ಕೊಂಡ. ಆದ್ರೆ ಇನ್ನು ಕೆಲವೊಮ್ಮೆ ನಾನು “ನಡುಗಿಹೋದೆ” ಅಂತ ಹೇಳಿದ. (ಕೀರ್ತ. 30:7) ಸಂಸೋನನಿಗೂ ತುಂಬ ಶಕ್ತಿ ಇತ್ತು. ಅವನ ಕಾಲದಲ್ಲಿ ಅವನಿಗಿದ್ದಷ್ಟು ಶಕ್ತಿ ಬೇರೆ ಯಾರಿಗೂ ಇರಲಿಲ್ಲ. ಆದ್ರೆ ಯೆಹೋವ ಬಲ ಕೊಡದೇ ಇದ್ರೆ “ನನ್ನಲ್ಲಿರೋ ಶಕ್ತಿ ಹೋಗಿಬಿಡುತ್ತೆ. ಬೇರೆಯವರ ತರ ನಾನೂ ಮಾಮೂಲಿ ವ್ಯಕ್ತಿ ಆಗಿಬಿಡ್ತೀನಿ” ಅಂತ ಅವನು ಹೇಳಿದ. (ನ್ಯಾಯ. 14:5, 6; 16:17) ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಯೆಹೋವ ಶಕ್ತಿ ಕೊಟ್ಟಿದ್ರಿಂದಾನೇ ಇವ್ರೆಲ್ಲ ಬಲಶಾಲಿಗಳಾಗಿದ್ದು.

2. ಪೌಲನಿಗೆ ಬಲ ಇಲ್ಲದೇ ಇದ್ರೂ ಅವನು ಯಾಕೆ ತಾನು ಬಲಶಾಲಿ ಅಂತ ಹೇಳಿದ? (2 ಕೊರಿಂಥ 12:9, 10)

2 ತನಗೂ ಯೆಹೋವನಿಂದ ಶಕ್ತಿ ಬೇಕು ಅಂತ ಅಪೊಸ್ತಲ ಪೌಲನಿಗೆ ಚೆನ್ನಾಗಿ ಗೊತ್ತಿತ್ತು. (2 ಕೊರಿಂಥ 12:9, 10 ಓದಿ.) ಯಾಕಂದ್ರೆ ನಮ್ಮ ತರನೇ ಅವನಿಗೂ ತುಂಬ ಆರೋಗ್ಯ ಸಮಸ್ಯೆಗಳಿತ್ತು. (ಗಲಾ. 4:13, 14) ಕೆಲವೊಮ್ಮೆ ಸರಿಯಾಗಿರೋದನ್ನ ಮಾಡೋಕೆ ತುಂಬ ಕಷ್ಟಪಡ್ತಿದ್ದ. (ರೋಮ. 7:18, 19) ಮುಂದೆ ತನಗೆ ಏನಾಗುತ್ತೋ ಅನ್ನೋ ಭಯ-ಚಿಂತೆ ಅವನಿಗೆ ಆಗಾಗ ಕಾಡ್ತಾ ಇತ್ತು. (2 ಕೊರಿಂ. 1:8, 9) ‘ಇನ್ನು ನನ್ನಿಂದ ಆಗಲ್ಲ, ನಾನು ಸೋತುಹೋಗಿಬಿಟ್ಟೆ’ ಅಂತ ಪೌಲನಿಗೆ ಅನಿಸಿದ್ರೂ ‘ಇದನ್ನೆಲ್ಲ ತಾಳ್ಕೊಳ್ಳೋಕೆ ನನ್ನಿಂದ ಆಗುತ್ತೆ’ ಅಂತ ಹೇಳಿದ. ಯಾಕೆ? ಯಾಕಂದ್ರೆ ಯೆಹೋವ ಅವನಿಗೆ ಶಕ್ತಿ ಕೊಟ್ಟನು.

3. ಈ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳ್ಕೊತೀವಿ?

3 ಯೆಹೋವ ದೇವರು ನಮಗೂ ಶಕ್ತಿ ಕೊಡ್ತಾನೆ ಅಂತ ಮಾತು ಕೊಟ್ಟಿದ್ದಾನೆ. (1 ಪೇತ್ರ 5:10) ಆದ್ರೆ ಅದನ್ನ ಪಡ್ಕೊಳ್ಳೋಕೆ ನಾವು ಪ್ರಯತ್ನ ಹಾಕಬೇಕು. ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ, ಕಾರು ಅಂದ್ಮೇಲೆ ಇಂಜಿನ್‌ ಇದ್ದೇ ಇರುತ್ತೆ. ಆದ್ರೆ ಅದು ಮುಂದೆ ಹೋಗಬೇಕಾದ್ರೆ ಡ್ರೈವರ್‌ ಆ್ಯಕ್ಸಲರೇಟರ್‌ ಒತ್ತಬೇಕಲ್ವಾ? ಅದೇ ತರ ಯೆಹೋವ ನಮಗೆ ಶಕ್ತಿ ಕೊಡೋಕೆ ರೆಡಿಯಾಗಿ ಇದ್ದಾನೆ. ಆದ್ರೆ ನಾವು ಅದನ್ನ ಪಡ್ಕೊಳ್ಳೋಕೆ ಪ್ರಯತ್ನ ಹಾಕಬೇಕಲ್ವಾ? ಹಾಗಾದ್ರೆ ಯೆಹೋವ ನಮಗೆ ಹೇಗೆಲ್ಲ ಶಕ್ತಿ ಕೊಡ್ತಾ ಇದ್ದಾನೆ? ಅದನ್ನ ಪಡ್ಕೊಳ್ಳೋಕೆ ನಾವು ಏನು ಮಾಡಬೇಕು? ಈ ಪ್ರಶ್ನೆಗಳಿಗೆ ಉತ್ತರ ತಿಳ್ಕೊಬೇಕಂದ್ರೆ, ಯೆಹೋವ ದೇವರು ಯೋನನಿಗೆ, ಮರಿಯಗೆ ಮತ್ತು ಅಪೊಸ್ತಲ ಪೌಲನಿಗೆ ಹೇಗೆ ಶಕ್ತಿ ಕೊಟ್ಟನು ಅಂತ ನಾವು ತಿಳ್ಕೊಬೇಕು. ಅದನ್ನ ಈ ಲೇಖನದಲ್ಲಿ ನೋಡೋಣ. ಯೆಹೋವ ಅವ್ರಿಗೆ ಶಕ್ತಿ ಕೊಟ್ಟ ಹಾಗೆ ನಮಗೂ ಹೇಗೆ ಕೊಡ್ತಾನೆ ಅಂತನೂ ತಿಳ್ಕೊಳ್ಳೋಣ.

ಪ್ರಾರ್ಥನೆ ಮಾಡಿದ್ರೆ, ಬೈಬಲ್‌ ಓದಿದ್ರೆ ನಿಮಗೆ ಶಕ್ತಿ ಸಿಗುತ್ತೆ

4. ಯೆಹೋವ ಕೊಡೋ ಶಕ್ತಿ ಪಡ್ಕೊಳ್ಳೋಕೆ ನಾವು ಏನು ಮಾಡಬೇಕು?

4 ಯೆಹೋವ ಕೊಡೋ ಶಕ್ತಿಯನ್ನ ನಾವು ಪಡ್ಕೊಬೇಕಂದ್ರೆ ನಾವು ಪ್ರಾರ್ಥನೆ ಮಾಡಬೇಕು. ಆಗ “ಸಾಮಾನ್ಯವಾಗಿ ಇರೋ ಶಕ್ತಿಗಿಂತ ಇನ್ನೂ ಹೆಚ್ಚಿನ ಶಕ್ತಿನ” ಯೆಹೋವ ನಮಗೆ ಕೊಡ್ತಾನೆ. (2 ಕೊರಿಂ. 4:7) ಅಷ್ಟೇ ಅಲ್ಲ, ನಾವು ಬೈಬಲ್‌ ಓದಬೇಕು, ಓದಿದ ವಿಷ್ಯದ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಬೇಕು. (ಕೀರ್ತ. 86:11) ಯಾಕಂದ್ರೆ ದೇವರ ವಾಕ್ಯಕ್ಕೆ “ತುಂಬಾ ಶಕ್ತಿ ಇದೆ.” (ಇಬ್ರಿ. 4:12) ಹಾಗಾಗಿ ನಾವು ಪ್ರಾರ್ಥನೆ ಮಾಡಿ ಬೈಬಲ್‌ ಓದೋದ್ರಿಂದ ನಮಗೆ ಬರೋ ಕಷ್ಟಗಳನ್ನ ಸಹಿಸ್ಕೊಳ್ಳೋಕೆ, ಜೀವನದಲ್ಲಿ ಖುಷಿಯಾಗಿ ಇರೋಕೆ, ಎಂಥ ಕಷ್ಟದ ನೇಮಕನೂ ಚೆನ್ನಾಗಿ ಮಾಡೋಕೆ ಶಕ್ತಿ ಸಿಗುತ್ತೆ. ಯೆಹೋವ ದೇವರು, ಪ್ರವಾದಿ ಯೋನನಿಗೆ ಹೇಗೆ ಶಕ್ತಿ ಕೊಟ್ಟನು ಅಂತ ಈಗ ನೋಡೋಣ.

5. ಯೋನನಿಗೆ ಯಾವ ಪರಿಸ್ಥಿತಿ ಬಂತು?

5 ಒಂದು ಸಲ ಯೋನ ಯೆಹೋವ ಕೊಟ್ಟ ನೇಮಕ ಮಾಡೋಕಾಗದೇ ಓಡಿಹೋಗಿಬಿಟ್ಟ. ಅವನು ಹಡಗಲ್ಲಿ ಹೋಗ್ತಿದ್ದಾಗ ಒಂದು ದೊಡ್ಡ ಬಿರುಗಾಳಿ ಬಂತು. ಅವನಿಂದ ಹಡಗಲಿದ್ದವರೆಲ್ರ ಪ್ರಾಣ ಹೋಗೋ ಪರಿಸ್ಥಿತಿ ಬಂದುಬಿಡ್ತು. ಆಗ ಯೋನ ತನ್ನನ್ನ ಎತ್ತಿ ಸಮುದ್ರಕ್ಕೆ ಬಿಸಾಕೋಕೆ ಹೇಳಿದ. ಅವನನ್ನ ಸಮುದ್ರಕ್ಕೆ ಬಿಸಾಕಿದಾಗ ಒಂದು ದೊಡ್ಡ ಮೀನು ಅವನನ್ನ ನುಂಗಿಬಿಡ್ತು. ಆಗ ಯೋನನಿಗೆ ಹೇಗನಿಸಿರುತ್ತೆ ಅಂತ ಸ್ವಲ್ಪ ಯೋಚನೆ ಮಾಡಿ. ಸುತ್ತಮುತ್ತ ಬರೀ ಕತ್ತಲೆ ಇದೆ, ಅವನಿಗೆ ಏನೂ ಕಾಣಿಸ್ತಿಲ್ಲ. ಅವನಿಗೆ ಆಗ ‘ನನ್ನ ಕಥೆ ಇಷ್ಟೇ ಮುಗೀತು’ ಅಂತ ಅನಿಸಿರುತ್ತೆ. ಯೆಹೋವ ತನ್ನನ್ನ ಕಾಪಾಡಲ್ಲ ಅಂತ ಅಂದ್ಕೊಂಡಿರ್ತಾನೆ.

ಕಷ್ಟಗಳು ಬಂದಾಗ ನಾವು ಹೇಗೆ ಯೋನನ ತರ ಶಕ್ತಿ ಪಡ್ಕೊಬಹುದು? (ಪ್ಯಾರ 6-9 ನೋಡಿ)

6. ಯೋನ 2:1, 2, 7ರಲ್ಲಿ ಇರೋ ತರ ಧೈರ್ಯ ಪಡ್ಕೊಳ್ಳೋಕೆ ಯೋನನಿಗೆ ಯಾವುದೆಲ್ಲ ಸಹಾಯ ಮಾಡ್ತು?

6 ಈ ತರ ಚಿಂತೆಯಲ್ಲಿ ಮುಳುಗಿದ್ದ ಯೋನ ಧೈರ್ಯ ಪಡ್ಕೊಳ್ಳೋಕೆ ಏನು ಮಾಡಿದ? ಅವನು ಪ್ರಾರ್ಥನೆ ಮಾಡಿದ. (ಯೋನ 2:1, 2, 7 ಓದಿ.) ‘ನಾನು ಯೆಹೋವನ ಮಾತನ್ನ ಮೀರಿ ಬಿಟ್ಟಿದ್ದೀನಿ, ಯೆಹೋವ ನನ್ನ ಪ್ರಾರ್ಥನೆಯನ್ನ ಕೇಳ್ತಾನೋ ಇಲ್ವೋ’ ಅಂತ ಯೋಚಿಸ್ತಾ ಕೂರಲಿಲ್ಲ. ಯೆಹೋವ ತನ್ನ ಪ್ರಾರ್ಥನೆಯನ್ನ ಖಂಡಿತ ಕೇಳಿಸ್ಕೊಳ್ತಾನೆ ಅಂತ ಭರವಸೆ ಇಟ್ಟ. ಅಷ್ಟೇ ಅಲ್ಲ ಪ್ರಾರ್ಥನೆ ಮಾಡುವಾಗ ಕೀರ್ತನೆಯಲ್ಲಿರೋ ಪದಗಳನ್ನ ಅವನು ಹೇಳಿದ. ಅವನು ಮಾಡಿದ ಪ್ರಾರ್ಥನೆ ಯೋನ 2ನೇ ಅಧ್ಯಾಯದಲ್ಲಿ ಇದೆ. (ಉದಾಹರಣೆಗೆ, ಯೋನ 2:2, 5ನ್ನ ಕೀರ್ತನೆ 69:1; 86:7ಕ್ಕೆ ಹೋಲಿಸಿ ನೋಡಿ.) ಇದ್ರಿಂದ ಯೋನ ಕೀರ್ತನೆಯಲ್ಲಿದ್ದ ವಚನಗಳನ್ನ ಚೆನ್ನಾಗಿ ತಿಳ್ಕೊಂಡಿದ್ದ ಅಂತ ನಮಗೆ ಗೊತ್ತಾಗುತ್ತೆ. ಈ ವಚನಗಳನ್ನ ನೆನಪಿಸ್ಕೊಂಡಿದ್ರಿಂದ ಯೆಹೋವ ತನ್ನನ್ನ ಖಂಡಿತ ಕಾಪಾಡ್ತಾನೆ, ತನ್ನ ಕೈಬಿಡಲ್ಲ ಅನ್ನೋ ನಂಬಿಕೆ ಅವನಿಗೆ ಜಾಸ್ತಿ ಆಯ್ತು. ಅವನ ನಂಬಿಕೆ ಸುಳ್ಳಾಗಲಿಲ್ಲ, ಯೆಹೋವ ಅವನನ್ನ ಕಾಪಾಡಿದನು. ಯೆಹೋವ ಕೊಟ್ಟ ನೇಮಕವನ್ನ ಮಾಡೋಕೂ ಅವನು ರೆಡಿಯಾದ.—ಯೋನ 2:10–3:4.

7-8. ಕಷ್ಟಗಳು ಬಂದಾಗ ಅದನ್ನ ತಾಳ್ಕೊಳ್ಳೋಕೆ ಸಹೋದರ ಜ಼ಿಮಿಂಗ್‌ಗೆ ಯಾವುದೆಲ್ಲ ಸಹಾಯ ಮಾಡ್ತು?

7 ಕಷ್ಟ ಬಂದಾಗ ನಾವು ಏನು ಮಾಡಬೇಕು ಅಂತ ಯೋನನಿಂದ ಕಲಿತೀವಿ. ನಾವೀಗ ಥೈವಾನ್‌ ದೇಶದಲ್ಲಿರೋ ಜ಼ಿಮಿಂಗ್‌ b ಅನ್ನೋ ಸಹೋದರನ ಉದಾಹರಣೆ ನೋಡೋಣ. ಅವ್ರಿಗೆ ತುಂಬ ಗಂಭೀರವಾದ ಕಾಯಿಲೆಗಳಿವೆ. ಅವರು ಯೆಹೋವನ ಸಾಕ್ಷಿ ಆಗಿರೋದ್ರಿಂದ ಅವ್ರ ಕುಟುಂಬದವರು ತುಂಬ ಹಿಂಸೆ ಕೊಡ್ತಾರೆ. “ಇಂಥ ಕಷ್ಟಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಾಗ ನಂಗೆ ಸಮಾಧಾನವಾಗಿ ಕೂತು ಬೈಬಲ್‌ ಓದೋಕೆ ಆಗಲ್ಲ” ಅಂತ ಆ ಸಹೋದರ ಹೇಳ್ತಾರೆ. ಆಗ ಅವರು ಏನು ಮಾಡ್ತಾರೆ ಗೊತ್ತಾ? “ನಾನು ಯೆಹೋವ ದೇವ್ರಿಗೆ ಪ್ರಾರ್ಥನೆ ಮಾಡ್ತೀನಿ. ಆಮೇಲೆ ಇಯರ್‌ಫೋನ್‌ ಹಾಕೊಂಡು ನಮ್ಮ ಹಾಡುಗಳನ್ನ ಕೇಳಿಸ್ಕೊಳ್ತೀನಿ. ಕೆಲವು ಸಲ ಸಮಾಧಾನ ಆಗೋ ವರೆಗೂ ಜೊತೆಗೇ ಹಾಡ್ತೀನಿ. ಸಮಾಧಾನ ಆದ್ಮೇಲೆ ಬೈಬಲ್‌ ಓದ್ತೀನಿ” ಅಂತ ಅವರು ಹೇಳ್ತಾರೆ. ಹೀಗೆ ಅವ್ರಿಗೆ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಪ್ರಾರ್ಥನೆ, ಬೈಬಲ್‌ ಮತ್ತು ನಮ್ಮ ಪುಸ್ತಕ ಪತ್ರಿಕೆಗಳು ಸಹಾಯ ಮಾಡ್ತು.

8 ಒಮ್ಮೆ ಸಹೋದರ ಜ಼ಿಮಿಂಗ್‌ಗೆ ಒಂದು ದೊಡ್ಡ ಆಪರೇಷನ್‌ ಆಯ್ತು. ಆಗ ನರ್ಸ್‌ ‘ನಿಮಗೆ ಕೆಂಪು ರಕ್ತ ಕಣಗಳು ತುಂಬ ಕಡಿಮೆ ಇದೆ, ನೀವು ರಕ್ತ ತಗೋಬೇಕಾಗುತ್ತೆ’ ಅಂತ ಹೇಳಿದ್ರು. ಆಗ ಆ ಸಹೋದರ ಒಬ್ಬ ಸಹೋದರಿಯ ಅನುಭವವನ್ನ ನೆನಪಿಸ್ಕೊಂಡ್ರು. ಆ ಅನುಭವವನ್ನ ಅವರು ಆಪರೇಷನ್‌ ನಡಿಯೋ ಹಿಂದಿನ ರಾತ್ರಿ ಓದಿದ್ರು. ಆ ಸಹೋದರಿಗೂ ಇದೇ ತರದ ಆಪರೇಷನ್‌ ಆಗಿತ್ತು. ಅವ್ರಿಗೆ ಕೆಂಪು ರಕ್ತ ಕಣಗಳು ಈ ಸಹೋದರನಿಗಿಂತ ಕಡಿಮೆ ಆಗಿತ್ತು. ಆಗಲೂ ಅವರು ರಕ್ತ ತಗೊಳ್ಳದೇ ಬೇಗ ಚೇತರಿಸ್ಕೊಂಡ್ರು. ಈ ಸಹೋದರಿಯ ಅನುಭವ ಓದಿದ್ರಿಂದ ಸಹೋದರ ಜ಼ಿಮಿಂಗ್‌ ಯೆಹೋವನಿಗೆ ನಿಯತ್ತಾಗಿ ಇರೋಕಾಯ್ತು.

9. ಕಷ್ಟಗಳಿಂದ ಒದ್ದಾಡ್ತಿರೋದಾದ್ರೆ ನೀವೇನು ಮಾಡಬೇಕು? (ಚಿತ್ರಗಳನ್ನೂ ನೋಡಿ.)

9 ಸಿಕ್ಕಾಪಟ್ಟೆ ಚಿಂತೆ ಆದಾಗ ಎಲ್ಲಾನೂ ಯೆಹೋವ ದೇವ್ರ ಹತ್ರ ಹೇಳ್ಕೊಳ್ಳೋಕೆ ಕಷ್ಟ ಆಗ್ತಿದೆಯಾ? ಸುಸ್ತಾದಾಗ ಬೈಬಲ್‌ ಓದೋಕೆ ಶಕ್ತಿನೇ ಇಲ್ಲ ಅಂತ ಅನಿಸ್ತಿದೆಯಾ? ಹಾಗಿದ್ರೆ ಬೇಜಾರು ಮಾಡ್ಕೊಬೇಡಿ, ಯೆಹೋವ ದೇವರು ನಿಮ್ಮನ್ನ ಅರ್ಥಮಾಡ್ಕೊತಾನೆ. ನೀವೊಂದು ಚಿಕ್ಕ ಪ್ರಾರ್ಥನೆ ಮಾಡಿದ್ರೂ ಅದನ್ನ ಆತನು ಕೇಳಿಸ್ಕೊಳ್ತಾನೆ. ನಿಮಗೆ ನಿಜವಾಗ್ಲೂ ಏನು ಬೇಕು ಅಂತ ಅರ್ಥಮಾಡ್ಕೊಂಡು ಅದನ್ನ ಕೊಟ್ಟೇ ಕೊಡ್ತಾನೆ. (ಎಫೆ. 3:20) ನಿಮಗೆ ಹುಷಾರಿಲ್ಲದೆ ಇರೋದ್ರಿಂದ, ತುಂಬ ಸುಸ್ತಾಗಿ ಇರೋದ್ರಿಂದ ಅಥವಾ ಚಿಂತೆ ತುಂಬ್ಕೊಂಡಿರೋದ್ರಿಂದ ಬೈಬಲ್‌ ಓದೋಕೆ ಆಗದೇ ಇರಬಹುದು. ಆಗ ಬೈಬಲ್‌ ಮತ್ತು ನಮ್ಮ ಪುಸ್ತಕ, ಪತ್ರಿಕೆಗಳ ಆಡಿಯೋ ಕೇಳಿಸ್ಕೊಳ್ಳಿ. ಅಷ್ಟೇ ಅಲ್ಲ jw.orgನಲ್ಲಿರೋ ಒಂದು ಹಾಡನ್ನಾದ್ರೂ ಕೇಳಿಸ್ಕೊಳ್ಳಿ ಅಥವಾ ಒಂದು ವಿಡಿಯೋನಾದ್ರೂ ನೋಡಿ. ಆಗ ನಿಮಗೆ ಸಮಾಧಾನ ಆಗುತ್ತೆ. ನೀವು ಯೆಹೋವನಿಗೆ ಪ್ರಾರ್ಥನೆ ಮಾಡಿ, ಆತನು ನಿಮಗೆ ಹೇಗೆಲ್ಲಾ ಉತ್ತರ ಕೊಡ್ತಿದ್ದಾನೆ ಅಂತ ಕಂಡುಹಿಡಿಯೋಕೆ ಪ್ರಯತ್ನಿಸಿ. ಈ ತರ ಮಾಡಿದ್ರೆ ಯೆಹೋವನಿಂದ ಬಲ ಪಡ್ಕೊಳ್ಳೋಕೆ ನೀವೇ ಬಾಗಿಲು ತೆಗೆದ ಹಾಗಿರುತ್ತೆ.

ಸಹೋದರ ಸಹೋದರಿಯರು ನಿಮಗೆ ಬಲ ತುಂಬ್ತಾರೆ

10. ಸಹೋದರ ಸಹೋದರಿಯರು ನಮಗೆ ಹೇಗೆ ಬೆನ್ನೆಲುಬಾಗಿ ಇರ್ತಾರೆ?

10 ಯೆಹೋವ ದೇವರು ನಮಗೆ ಸಹೋದರ ಸಹೋದರಿಯರಿಂದ ಶಕ್ತಿ ಕೊಡ್ತಾನೆ. ಕಷ್ಟ ಬಂದಾಗ ಅಥವಾ ಯೆಹೋವ ದೇವರ ಸೇವೆಯನ್ನ ಮಾಡೋಕೆ ನಿಮ್ಮ ಕೈಯಲ್ಲಿ ಆಗದೇ ಇದ್ದಾಗ, ಅವರು “ಬಲಪಡಿಸ್ತಾ ಸಹಾಯ” ಮಾಡ್ತಾರೆ. (ಕೊಲೊ. 4:10, 11) ಈ ಸಹೋದರ ಸಹೋದರಿಯರು “ಕಷ್ಟಕಾಲದಲ್ಲಿ” ಬೆನ್ನೆಲುಬಾಗಿರೋ ಸ್ನೇಹಿತರ ತರ ಇರ್ತಾರೆ. (ಜ್ಞಾನೋ. 17:17) ಇವರು ನಮಗೆ ಏನು ಬೇಕು ಅಂತ ನೋಡಿ ಸಹಾಯ ಮಾಡ್ತಾರೆ. ನಾವು ಹೇಳೋದನ್ನೆಲ್ಲಾ ಕೇಳಿಸ್ಕೊಂಡು ಸಮಾಧಾನ ಮಾಡ್ತಾರೆ. ಅಷ್ಟೇ ಅಲ್ಲ, ಯೆಹೋವ ದೇವರ ಸೇವೆಯನ್ನ ಮಾಡ್ತಾ ಇರೋಕೆ ನಮಗೆ ಬೆಂಬಲ ಕೊಡ್ತಾರೆ. ಈ ತರ ಸಹಾಯ ಪಡ್ಕೊಂಡ ಯೇಸುವಿನ ತಾಯಿ ಮರಿಯಳ ಬಗ್ಗೆ ನಾವೀಗ ನೋಡೋಣ.

11. ಮರಿಯಗೆ ಯಾಕೆ ಬೇರೆಯವ್ರ ಸಹಾಯ ಬೇಕಾಗಿತ್ತು?

11 ಗಬ್ರಿಯೇಲ ದೇವದೂತ ಮರಿಯಳ ಹತ್ರ ಬಂದು ‘ನೀನು ಗರ್ಭಿಣಿ ಆಗ್ತೀಯ’ ಅಂತ ಹೇಳಿದಾಗ, ಅವಳಿಗೆ ಹೇಗೆ ಅನಿಸಿರಬೇಕು ಅಂತ ಸ್ವಲ್ಪ ಯೋಚನೆ ಮಾಡಿ. ಅವಳಿಗಿನ್ನೂ ಮದುವೆನೇ ಆಗಿರ್ಲಿಲ್ಲ. ಅವಳಿಗೆ ಎಷ್ಟು ಗಾಬರಿಯಾಗಿರಬೇಕು ಅಲ್ವಾ? ಅದೂ ಅಲ್ಲದೆ ಅವಳು ಇದುವರೆಗೂ ಯಾವ ಮಕ್ಕಳನ್ನೂ ಬೆಳೆಸಿರಲಿಲ್ಲ. ಅದ್ರಲ್ಲೂ ಮೆಸ್ಸೀಯನನ್ನ ಅವಳು ಬೆಳೆಸಬೇಕಾಗಿತ್ತು. ಅವಳಿಗೆ ಇನ್ನೂ ಮದುವೆ ಆಗದೆ ಇದ್ದಿದ್ರಿಂದ ‘ನಾನು ಗರ್ಭಿಣಿ’ ಅಂತ ಯೋಸೇಫನಿಗೆ ಹೇಳೋಕೆ ಎಷ್ಟು ಕಷ್ಟ ಆಗಿರಬೇಕು ಅಂತ ಅವಳ ಜಾಗದಲ್ಲಿ ನಿಂತು ಯೋಚಿಸಿ. ಈಗ ಮರಿಯಗೆ ಖಂಡಿತ ಯಾರದಾದ್ರೂ ಸಹಾಯ ಬೇಕಾಗಿರುತ್ತೆ ಅಲ್ವಾ?—ಲೂಕ 1:26-33.

12. ಮರಿಯ ಹೇಗೆ ಸಹಾಯ ಪಡ್ಕೊಂಡಳು? (ಲೂಕ 1:39-45)

12 ಮರಿಯಗೆ ದೊಡ್ಡ ಜವಾಬ್ದಾರಿ ಸಿಕ್ಕಿದೆ. ಅದನ್ನ ಮಾಡಿ ಮುಗಿಸೋಕೆ ಅವಳಿಗೆ ಬೇರೆಯವ್ರ ಸಹಾಯ ಬೇಕೇಬೇಕಿತ್ತು. ಅದನ್ನ ಅವಳು ಪಡ್ಕೊಂಡಳು. ಅದಕ್ಕೆ ಅವಳು ಗಬ್ರಿಯೇಲನ ಹತ್ರ ಜಾಸ್ತಿ ವಿಷ್ಯ ಕೇಳಿ ತಿಳ್ಕೊಂಡಳು. (ಲೂಕ 1:34) ಅಷ್ಟೇ ಅಲ್ಲ, ಅವಳು ತನ್ನ ಸಂಬಂಧಿಕಳಾದ ಎಲಿಸಬೆತ್‌ನ ನೋಡೋಕೆ “ಬೆಟ್ಟಗುಡ್ಡಗಳ ಪ್ರದೇಶವಾಗಿದ್ದ” ಯೆಹೂದದ ಒಂದು ಪಟ್ಟಣಕ್ಕೆ ಹೋದಳು. ಎಲಿಸಬೆತ್‌ ಮರಿಯಳನ್ನ ನೋಡಿದ ತಕ್ಷಣ ಖುಷಿಪಟ್ಟಳು, ಅವಳನ್ನ ಹೊಗಳಿದಳು. ಅಷ್ಟೇ ಅಲ್ಲ, ಮರಿಯಳ ಹೊಟ್ಟೆಯಲ್ಲಿರೋ ಮಗುವಿನ ಬಗ್ಗೆ ಒಂದು ಭವಿಷ್ಯವಾಣಿ ಹೇಳೋ ತರ ಯೆಹೋವ ಅವಳನ್ನ ಪ್ರೇರಿಸಿದನು. (ಲೂಕ 1:39-45 ಓದಿ.) ಇದನ್ನೆಲ್ಲ ಕೇಳಿದಾಗ ಮರಿಯಾಗೆ ಪ್ರೋತ್ಸಾಹ ಸಿಕ್ತಾ? ಹೌದು. “ದೇವರು ತನ್ನ ಕೈಯಿಂದ ಶಕ್ತಿಶಾಲಿ ಕೆಲಸಗಳನ್ನ ಮಾಡಿದ್ದಾನೆ” ಅಂತ ಅವಳು ಹೇಳಿದಳು. (ಲೂಕ 1:46-51) ಹೀಗೆ ಗಬ್ರಿಯೇಲ ಮತ್ತು ಎಲಿಸಬೆತ್‌ನಿಂದ ಯೆಹೋವ ದೇವರು ಮರಿಯಗೆ ಸಹಾಯ ಮಾಡಿದನು.

13. ದಾಸುರಿ ಸಹೋದರ ಸಹೋದರಿಯರ ಸಹಾಯ ಪಡ್ಕೊಂಡಿದ್ರಿಂದ ಏನು ಪ್ರಯೋಜನ ಆಯ್ತು?

13 ಮರಿಯ ತರ ನಾವೂ ಸಹೋದರ ಸಹೋದರಿಯರ ಸಹಾಯ ಪಡ್ಕೊಬೇಕು. ಬೊಲಿವಿಯದಲ್ಲಿರೋ ದಾಸುರಿ ಅನ್ನೋ ಸಹೋದರಿ ಹೇಗೆ ಸಹಾಯ ಪಡ್ಕೊಂಡಳು ಅಂತ ನೋಡಿ. ಅವ್ರ ಅಪ್ಪಾಗೆ ತುಂಬ ಹುಷಾರಿರ್ಲಿಲ್ಲ. ವಾಸಿನೇ ಆಗದಿರೋ ಕಾಯಿಲೆ ಇತ್ತು. ಅವರು ಹಾಸ್ಪಿಟಲಲ್ಲಿ ಇದ್ದಾಗ ಈ ಸಹೋದರಿ ಅವ್ರ ಜೊತೆನೇ ಇದ್ದು ಅವ್ರನ್ನ ನೋಡ್ಕೊಳ್ತಿದ್ದಳು. (1 ತಿಮೊ. 5:4) ಆಗ ಅವಳಿಗೆ ತುಂಬ ಕಷ್ಟ ಆಗ್ತಿತ್ತು. ಅದಕ್ಕೆ ಅವಳು ಬೇರೆಯವ್ರ ಸಹಾಯ ಕೇಳಿದಳಾ? “ತುಂಬ ಸಲ ಅಪ್ಪನ್ನ ನಾನು ಒಬ್ಬಳೇ ನೋಡ್ಕೊಳ್ತಾ ಇದ್ದಿದ್ರಿಂದ ನಂಗೆ ಸಾಕಾಗಿ ಹೋಗ್ತಿತ್ತು. ಆದ್ರೆ ಸಹೋದರರಿಗೆ ಹೇಳಿ ಯಾಕೆ ಅವ್ರಿಗೆ ಸುಮ್ಮನೆ ತೊಂದ್ರೆ ಕೊಡೋದು ಅಂತ ಅನಿಸ್ತಿತ್ತು. ಯೆಹೋವ ದೇವರು ನನಗೆ ಹೇಗಾದ್ರೂ ಸಹಾಯ ಮಾಡ್ತಾನೆ ಬಿಡು ಅಂತ ಅಂದ್ಕೊಳ್ತಿದ್ದೆ. ಆದ್ರೆ ನಾನು ಒಬ್ಬಳೇ ಹೆಣಗಾಡೋದ್ರಿಂದ ನನ್ನ ಸಮಸ್ಯೆಯನ್ನ ಬಗೆಹರಿಸೋಕೆ ಆಗಲ್ಲ ಅಂತ ನನಗೆ ಗೊತ್ತಾಯ್ತು” ಅಂತ ಅವಳು ಹೇಳ್ತಾಳೆ. (ಜ್ಞಾನೋ. 18:1) ಅದಕ್ಕೆ ದಾಸುರಿ ಸಹೋದರ ಸಹೋದರಿಯರಿಗೆ ಪತ್ರ ಬರೆದು ಅವಳ ಕಷ್ಟನೆಲ್ಲ ಹೇಳ್ಕೊಂಡಳು. ಆಗ ಏನಾಯ್ತು? “ಸಹೋದರರು ಊಟ ತಗೊಂಡು ಹಾಸ್ಪಿಟಲಿಗೆ ಬರ್ತಾ ಇದ್ರು, ಬೈಬಲ್‌ ವಚನಗಳನ್ನ ಹೇಳಿ ಸಮಾಧಾನ ಮಾಡ್ತಿದ್ರು. ಯೆಹೋವ ದೇವರು ಇಂಥ ದೊಡ್ಡ ಕುಟುಂಬವನ್ನ ಕೊಟ್ಟಿರೋದಕ್ಕೆ ಆತನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ. ಯಾಕಂದ್ರೆ ಇವರು ಕಷ್ಟ ಬಂದಾಗ ಕೈಹಿಡಿತಾರೆ. ನಮ್ಮ ಕಣ್ಣೀರನ್ನ ಒರೆಸ್ತಾರೆ” ಅಂತ ದಾಸುರಿ ಹೇಳ್ತಾಳೆ.

14. ನಾವ್ಯಾಕೆ ಹಿರಿಯರ ಸಹಾಯ ಪಡ್ಕೊಬೇಕು?

14 ಯೆಹೋವ ಹಿರಿಯರಿಂದಾನೂ ನಮಗೆ ಶಕ್ತಿ ಕೊಡ್ತಾನೆ. ಅವರು ನಮಗೆ ಗಿಫ್ಟ್‌ ತರ. ಕಷ್ಟಕಾಲದಲ್ಲಿ ಅವರು ನಮಗೆ ಆಸರೆ ಆಗಿರ್ತಾರೆ. (ಯೆಶಾ. 32:1, 2) ಹಾಗಾಗಿ ನಿಮಗೇನಾದ್ರೂ ಚಿಂತೆ ಕಾಡ್ತಿದ್ರೆ ನಿಮ್ಮ ಮನಸ್ಸಲ್ಲಿ ಇರೋದನ್ನೆಲ್ಲ ಅವ್ರ ಹತ್ರ ಹೇಳ್ಕೊಳ್ಳಿ. ಅವ್ರೇನಾದ್ರೂ ಸಹಾಯ ಮಾಡೋಕೆ ಮುಂದೆ ಬಂದಾಗ ಅದನ್ನ ಪಡ್ಕೊಳ್ಳಿ. ಹೀಗೆ ಮಾಡಿದಾಗ ಯೆಹೋವ ಕೊಡೋ ಶಕ್ತಿಯನ್ನ ಪಡ್ಕೊಂಡ ಹಾಗೆ ಇರುತ್ತೆ.

ಹೊಸ ಲೋಕವನ್ನ ಕಲ್ಪಿಸಿಕೊಳ್ಳಿ, ಶಕ್ತಿ ಪಡ್ಕೊಳ್ಳಿ

15. ನಮ್ಮೆಲ್ರಿಗೂ ಮುಂದೆ ಯಾವ ಆಶೀರ್ವಾದ ಸಿಗುತ್ತೆ?

15 ಮುಂದೆ ನಮಗೆ ಸಿಗೋ ಆಶೀರ್ವಾದದ ಬಗ್ಗೆನೂ ಬೈಬಲ್‌ ಹೇಳುತ್ತೆ. ಅದನ್ನ ನೆನಸ್ಕೊಂಡಾಗ್ಲೂ ನಮಗೆ ಶಕ್ತಿ ಸಿಗುತ್ತೆ. (ರೋಮ. 4:3, 18-20) ನಮ್ಮಲ್ಲಿ ತುಂಬ ಜನ್ರಿಗೆ ಈ ಭೂಮಿ ಮೇಲೆ ಶಾಶ್ವತವಾಗಿ ಜೀವಿಸೋ ಅವಕಾಶ ಇದೆ. ಇನ್ನು ಕೆಲವ್ರಿಗೆ ಸ್ವರ್ಗದಲ್ಲಿ ಶಾಶ್ವತವಾಗಿ ಜೀವಿಸೋ ಅವಕಾಶ ಇದೆ. ಈ ಆಶೀರ್ವಾದದ ಬಗ್ಗೆ ನೆನಸ್ಕೊಂಡಾಗ ಈಗಿರೋ ಕಷ್ಟಗಳನ್ನ ತಾಳ್ಕೊಳ್ಳೋಕೆ, ಸಿಹಿಸುದ್ದಿ ಸಾರೋಕೆ ಮತ್ತು ಸಭೆಯಲ್ಲಿ ಯಾವ ನೇಮಕ ಸಿಕ್ಕಿದ್ರೂ ಅದನ್ನ ಮಾಡೋಕೆ ನಮಗೆ ಶಕ್ತಿ ಸಿಗುತ್ತೆ. (1 ಥೆಸ. 1:3) ಅಪೊಸ್ತಲ ಪೌಲ ಕೂಡ ತನಗಿರೋ ಆಶೀರ್ವಾದದ ಬಗ್ಗೆ ಯೋಚನೆ ಮಾಡಿನೇ ಶಕ್ತಿ ಪಡ್ಕೊಂಡ.

16. ಅಪೊಸ್ತಲ ಪೌಲನಿಗೆ ಯಾಕೆ ಬಲ ಬೇಕಿತ್ತು?

16 ಪೌಲನಿಗೂ ಬಲ ಬೇಕಿತ್ತು. ಅವನು ಕೊರಿಂಥದವ್ರಿಗೆ ಪತ್ರ ಬರೀತಾತಿದ್ದಾಗ ತನ್ನನ್ನ ಮಣ್ಣಿನ ಪಾತ್ರೆಗೆ ಹೋಲಿಸಿಕೊಂಡ. ಯಾಕಂದ್ರೆ ನನ್ನನ್ನ “ಜಜ್ಜಲಾಗಿದೆ”, ನಾನು “ಒದ್ದಾಡ್ತಾ” ಇದ್ದೀನಿ, ನನಗೆ “ಹಿಂಸೆ ಬರ್ತಾನೇ ಇದೆ”, ನನ್ನನ್ನ “ಕೆಳಗೆ ಬೀಳಿಸಿದ್ದಾರೆ” ಅಂತ ಅವನು ಹೇಳಿದ. ಅಷ್ಟೇ ಅಲ್ಲ ಅವನ ಜೀವನೂ ಅಪಾಯದಲ್ಲಿತ್ತು. (2 ಕೊರಿಂ. 4:8-10) ಪೌಲ ಈ ಪತ್ರ ಬರಿಯುವಾಗ ಮೂರನೇ ಮಿಷನರಿ ಪ್ರಯಾಣದಲ್ಲಿದ್ದ. ಆಮೇಲೆ ಅವನಿಗೆ ಇನ್ನೂ ಕಷ್ಟಗಳು ಬಂತು. ಜನ್ರೆಲ್ಲ ಸೇರ್ಕೊಂಡು ಅವನನ್ನ ಆಕ್ರಮಣ ಮಾಡಿದ್ರು. ಅವನು ಹೋಗ್ತಿದ್ದ ಹಡಗೂ ಒಡೆದು ಹೋಯ್ತು. ಅಷ್ಟೇ ಅಲ್ಲ ಅವನು ಜೈಲಿಗೂ ಹೋಗಬೇಕಾಯ್ತು.

17. ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಪೌಲನಿಗೆ ಯಾವುದು ಸಹಾಯ ಮಾಡ್ತು ಅಂತ 2 ಕೊರಿಂಥ 4:16-18 ಹೇಳುತ್ತೆ?

17 ಪೌಲ ಮುಂದೆ ಸಿಗೋ ಆಶೀರ್ವಾದಗಳ ಬಗ್ಗೆ ಯೋಚಿಸಿದ್ರಿಂದ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಅವನಿಗೆ ಬಲ ಸಿಕ್ತು. (2 ಕೊರಿಂಥ 4:16-18 ಓದಿ.) ಅವನ “ದೇಹ ಅಳಿದು ಹೋಗ್ತಿದ್ರೂ” ಅದ್ರಿಂದ ಕುಗ್ಗಿಹೋಗಲ್ಲ ಅಂತ ಅವನು ಕೊರಿಂಥದವ್ರಿಗೆ ಹೇಳಿದ. ಯಾಕಂದ್ರೆ ಪೌಲ ಮುಂದೆ ತನಗೆ ಸ್ವರ್ಗದಲ್ಲಿ ಸಿಗೋ ಶಾಶ್ವತ ಜೀವದ ಬಗ್ಗೆ ಯೋಚಿಸ್ತಿದ್ದ. ಈ ಆಶೀರ್ವಾದ ಅವನಿಗೆ “ತುಂಬ ಶ್ರೇಷ್ಠ” ಆಗಿತ್ತು. ಇದಕ್ಕೆ ಹೋಲಿಸಿದ್ರೆ ತಾನು ಪಡ್ತಿದ್ದ ಕಷ್ಟಗಳು ಏನೇನೂ ಅಲ್ಲ ಅಂತ ಅವನಿಗೆ ಅನಿಸ್ತು. ಈ ತರ ಅವನು ಆಶೀರ್ವಾದದ ಬಗ್ಗೆ ಯೋಚಿಸಿದ್ರಿಂದ ಅವನ ಮನಸ್ಸು ‘ದಿನದಿನ ಹೊಸದಾಗ್ತಾ’ ಇತ್ತು.

18. ಮುಂದೆ ಸಿಗೋ ಆಶೀರ್ವಾದಗಳ ಬಗ್ಗೆ ಯೋಚಿಸಿದ್ರಿಂದ ಟೋನಿ ಮತ್ತು ಅವ್ರ ಕುಟುಂಬದವರಿಗೆ ಹೇಗೆ ಬಲ ಸಿಕ್ತು?

18 ಬಲ್ಗೇರಿಯಾದಲ್ಲಿರೋ ಟೋನಿ ಅನ್ನೋ ಸಹೋದರನ ಉದಾಹರಣೆ ನೋಡಿ. ಅವರು ಆಶೀರ್ವಾದಗಳ ಬಗ್ಗೆ ಯೋಚಿಸಿದ್ರಿಂದ ತಾಳ್ಕೊಳ್ಳೋಕೆ ಶಕ್ತಿ ಸಿಕ್ತು. ಕೆಲವು ವರ್ಷಗಳ ಹಿಂದೆ ಅವ್ರ ತಮ್ಮ ಸ್ಯಾಮ್‌ ಆ್ಯಕ್ಸಿಡೆಂಟಲ್ಲಿ ತೀರಿಕೊಂಡುಬಿಟ್ರು. ಸುಮಾರು ದಿನಗಳ ತನಕ ಆ ಘಟನೆಯನ್ನ ನೆನಸ್ಕೊಂಡು ಟೋನಿ ಮತ್ತು ಅವ್ರ ಕುಟುಂಬದವರು ದುಃಖಪಡ್ತಿದ್ರು. ಈ ದುಃಖದಿಂದ ಹೊರಗೆ ಬರೋಕೆ ಮುಂದೆ ಯೆಹೋವ ದೇವರು ಮತ್ತೆ ಸ್ಯಾಮ್‌ನ ಎಬ್ಬಿಸುವಾಗ ಹೇಗಿರುತ್ತೆ ಅಂತ ಅವರು ಕಲ್ಪಿಸ್ಕೊಂಡ್ರು. “ಸ್ಯಾಮ್‌ನ ಯೆಹೋವ ಮತ್ತೆ ಎಬ್ಬಿಸುವಾಗ ಅವನನ್ನ ನಾವು ಎಲ್ಲಿ ಭೇಟಿ ಮಾಡಬೇಕು? ಅವನು ಬಂದಾಗ ತಿನ್ನೋಕೆ ಏನು ಮಾಡಿ ಕೊಡಬೇಕು? ಅವನ ಜೊತೆ ಸೇರಿ ಗೆಟ್‌ ಟುಗೆದರ್‌ ಮಾಡಿದಾಗ ಯಾರನ್ನೆಲ್ಲ ಕರೀಬೇಕು? ಕೊನೇ ದಿನಗಳ ಬಗ್ಗೆ ಅವನ ಹತ್ರ ಹೇಳುವಾಗ ಹೇಗಿರುತ್ತೆ ಅಂತೆಲ್ಲ ಯೋಚಿಸಿದ್ವಿ” ಅಂತ ಟೋನಿ ಹೇಳ್ತಾರೆ. ಈ ತರ ಕಲ್ಪಿಸ್ಕೊಂಡಿದ್ರಿಂದ ಆ ಇಡೀ ಕುಟುಂಬದವ್ರಿಗೆ ತಾಳ್ಕೊಳ್ಳೋಕೆ ಆಗ್ತಿದೆ. ಅಷ್ಟೇ ಅಲ್ಲ ಯೆಹೋವ ಸ್ಯಾಮ್‌ನ ಮತ್ತೆ ಎಬ್ಬಿಸೋ ತನಕ ಕಾಯೋಕೆ ಆಗ್ತಿದೆ.

ಹೊಸ ಲೋಕದಲ್ಲಿ ನೀವೇನು ಮಾಡಬೇಕು ಅಂತಿದ್ದೀರಾ? (ಪ್ಯಾರ 19 ನೋಡಿ) c

19. ಯೆಹೋವ ಕೊಡೋ ಆಶೀರ್ವಾದಗಳ ಮೇಲೆ ನಮ್ಮ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ ಏನು ಮಾಡಬೇಕು? (ಚಿತ್ರನೂ ನೋಡಿ.)

19 ಯೆಹೋವ ಕೊಡೋ ಆಶೀರ್ವಾದಗಳ ಮೇಲೆ ನಮ್ಮ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ ಏನು ಮಾಡಬೇಕು? ಪರದೈಸಲ್ಲಿ ನಮ್ಮ ಜೀವನ ಹೇಗಿರುತ್ತೆ ಅಂತ ಕಲ್ಪಿಸ್ಕೊಬೇಕು. ಇದ್ರ ಬಗ್ಗೆ ಬೈಬಲಲ್ಲಿ ಓದಬೇಕು ಮತ್ತು ಯೋಚ್ನೆ ಮಾಡಬೇಕು. (ಯೆಶಾ. 25:8; 32:16-18) ನೀವೀಗ ಹೊಸಲೋಕದಲ್ಲಿ ಇದ್ದೀರ ಅಂದ್ಕೊಳ್ಳಿ. ಈಗ ನಿಮ್ಮ ಕಣ್ಮುಂದೆ ಯಾರಿದ್ದಾರೆ, ನಿಮಗೆ ಏನು ಕೇಳಿಸ್ತಿದೆ, ನಿಮಗೆ ಹೇಗೆ ಅನಿಸ್ತಿದೆ ಅಂತ ಯೋಚ್ನೆ ಮಾಡಿ. ನಿಮಗೆ ಒಂದುವೇಳೆ ಕಲ್ಪಿಸ್ಕೊಳ್ಳೋಕೆ ಕಷ್ಟ ಆಗ್ತಿದ್ರೆ ನಮ್ಮ ಪುಸ್ತಕ ಪತ್ರಿಕೆಗಳಲ್ಲಿರೋ ಪರದೈಸ್‌ ಚಿತ್ರವನ್ನ ನೋಡಿ. ಅಥವಾ ಹೊಸಲೋಕದಲ್ಲಿ . . ., ಒಂಚೂರು ತಾಳು ಮತ್ತು ಹರ್ಷಗೀತೆ ನೀ ಹಾಡು ಅನ್ನೋ ಸಂಗೀತ ವಿಡಿಯೋಗಳನ್ನ ನೋಡಿ. ಹೊಸಲೋಕವನ್ನ ಮನಸ್ಸಲ್ಲಿ ಇಟ್ರೆ, ಈಗ ನಾವು ಅನುಭವಿಸ್ತಿರೋ ಕಷ್ಟಗಳು “ಸ್ವಲ್ಪ ಕಾಲಕಷ್ಟೇ ಮತ್ತು ಅವೆಲ್ಲ ತುಂಬಾ ಚಿಕ್ಕದು” ಅಂತ ಅನಿಸುತ್ತೆ. (2 ಕೊರಿಂ. 4:17) ಯೆಹೋವ ಕೊಡೋ ಆಶೀರ್ವಾದಗಳನ್ನ ನೆನಸ್ಕೊಂಡಾಗ ಈ ಕಷ್ಟಗಳನ್ನೆಲ್ಲ ತಾಳ್ಕೊಳ್ಳೋಕೆ ನಮಗೆ ಶಕ್ತಿ ಸಿಗುತ್ತೆ.

20. ಯೆಹೋವ ಕೊಡೋ ಶಕ್ತಿಯನ್ನ ಪಡ್ಕೊಳ್ಳೋಕೆ ನಾವು ಏನು ಮಾಡಬೇಕು?

20 ನನ್ನ ಕೈಯಲ್ಲಿ ಆಗ್ತಿಲ್ಲ, ನಾನು ಸೋತುಹೋಗಿದ್ದೀನಿ ಅಂತ ಅನಿಸಿದ್ರೂ “ದೇವರಿಂದ ನಾವು ಬಲ ಪಡ್ಕೊತೀವಿ.” (ಕೀರ್ತ. 108:13) ನಾವು ಯೆಹೋವ ಕೊಡೋ ಶಕ್ತಿಯನ್ನ ಪಡ್ಕೊಳ್ಳೋಕೆ ಏನು ಮಾಡಬೇಕು ಅಂತ ಆತನು ಈಗಾಗ್ಲೇ ತಿಳಿಸಿದ್ದಾನೆ. ಹಾಗಾಗಿ ಒಂದು ನೇಮಕ ಮಾಡೋಕೆ ಕಷ್ಟ ಆದ್ರೆ, ಬರೋ ಸಮಸ್ಯೆಗಳನ್ನ ಸಹಿಸ್ಕೊಳ್ಳೋಕೆ ಆಗದೇ ಇದ್ರೆ, ಖುಷಿಯನ್ನ ಕಳ್ಕೊಳ್ತಿದ್ದೀವಿ ಅಂತ ಅನಿಸ್ತಿದ್ರೆ ಪ್ರಾರ್ಥಿಸಿ, ಬೈಬಲ್‌ ಓದಿ ಮತ್ತು ಓದಿದ ವಿಷ್ಯದ ಬಗ್ಗೆ ಯೋಚಿಸಿ. ಸಹೋದರ ಸಹೋದರಿಯರು ಕೊಡೋ ಪ್ರೋತ್ಸಾಹವನ್ನ ಪಡ್ಕೊಳ್ಳಿ ಮತ್ತು ಆಶೀರ್ವಾದಗಳ ಬಗ್ಗೆ ಆಗಾಗ ಕಲ್ಪಿಸ್ಕೊಳ್ಳಿ. ನೀವು ಹೀಗೆ ಮಾಡಿದ್ರೆ “ಮಹಿಮೆಯಿಂದ ತುಂಬಿರೋ ದೇವರ ಶಕ್ತಿ ನಿಮಗೆ ಎಲ್ಲವನ್ನ ತಾಳ್ಮೆ, ಆನಂದದಿಂದ ಸಹಿಸ್ಕೊಳ್ಳೋಕೆ ಬೇಕಾದ ಶಕ್ತಿ” ಕೊಡುತ್ತೆ.—ಕೊಲೊ. 1:11.

ಗೀತೆ 38 ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು

a ನಿಮಗೆ ಒಂದು ಸಮಸ್ಯೆನ ಸಹಿಸ್ಕೊಳ್ಳೋಕೆ ತುಂಬ ಕಷ್ಟ ಆಗ್ತಿದ್ಯಾ? ಅಥವಾ ಒಂದು ನೇಮಕನ ಮಾಡೋಕೆ ಆಗ್ತಿಲ್ಲ ಅನಿಸ್ತಿದ್ಯಾ? ಹಾಗಿದ್ರೆ ಯೋಚ್ನೆ ಮಾಡಬೇಡಿ. ಯೆಹೋವ ನಿಮಗೆ ಶಕ್ತಿ ಕೊಡ್ತಾನೆ. ಆದ್ರೆ ಆತನು ಹೇಗೆ ಕೊಡ್ತಾನೆ? ಅದನ್ನ ಪಡ್ಕೊಳ್ಳೋಕೆ ನೀವೇನು ಮಾಡಬೇಕು?

b ಕೆಲವ್ರ ಹೆಸ್ರು ಬದಲಾಗಿದೆ.

c ಚಿತ್ರ ವಿವರಣೆ: ಕಿವಿ ಕೇಳಿಸದಿರೋ ಒಬ್ಬ ಸಹೋದರಿ ಸಂಗೀತ ವಿಡಿಯೋ ನೋಡ್ತಾ ಪರದೈಸಲ್ಲಿ ಅವ್ರ ಜೀವನ ಹೇಗಿರುತ್ತೆ ಅಂತ ಕಲ್ಪಿಸಿಕೊಳ್ತಿದ್ದಾರೆ.