ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 1

ಗೀತೆ 60 ಆತನು ನಿನ್ನನ್ನು ಬಲಪಡಿಸುವನು

ಭಯ ಮೆಟ್ಟಿನಿಲ್ಲಿ ಯೆಹೋವನ ಮೇಲೆ ನಂಬಿಕೆಯಿಡಿ

ಭಯ ಮೆಟ್ಟಿನಿಲ್ಲಿ ಯೆಹೋವನ ಮೇಲೆ ನಂಬಿಕೆಯಿಡಿ

2024ರ ವರ್ಷವಚನ: “ನನಗೆ ಭಯ ಆದಾಗ ನಾನು ನಿನ್ನ ಮೇಲೆ ಭರವಸೆ ಇಡ್ತೀನಿ.”ಕೀರ್ತ. 56:3.

ಈ ಲೇಖನದಲ್ಲಿ ಏನಿದೆ?

ಯೆಹೋವನ ಮೇಲೆ ಜಾಸ್ತಿ ನಂಬಿಕೆ ಇಡೋಕೆ ಮತ್ತು ಭಯದಿಂದ ಹೊರಗೆ ಬರೋಕೆ ಏನು ಮಾಡಬೇಕು ಅಂತ ನೋಡೋಣ.

1. ಕೆಲವೊಮ್ಮೆ ನಮಗೆ ಯಾಕೆ ಭಯ ಆಗುತ್ತೆ?

 ನಾವೆಲ್ರೂ ಕೆಲವೊಮ್ಮೆ ಭಯಪಡ್ತೀವಿ. ಆದ್ರೆ ನಾವು ಬೈಬಲನ್ನ ಕಲ್ತಿರೋದ್ರಿಂದ ಸತ್ತವ್ರಿಗೆ, ಕೆಟ್ಟ ದೇವದೂತರಿಗೆ ಭಯಪಡಲ್ಲ. ಮುಂದೆ ಏನಾಗುತ್ತೋ ಅಂತ ಹೆದರೋದೂ ಇಲ್ಲ. ಆದ್ರೂ “ಭಯಾನಕ ದೃಶ್ಯಗಳು” ಅಂದ್ರೆ ಯುದ್ಧಗಳನ್ನ, ರೋಗಗಳನ್ನ ಮತ್ತು ಕೊಲೆ ದರೋಡೆಯನ್ನ ನೋಡುವಾಗ ನಮಗೆ ಭಯ ಆಗಬಹುದು. (ಲೂಕ 21:11) ಕೆಲವೊಮ್ಮೆ ಜನ್ರಿಗೂ ನಾವು ಹೆದರಬಹುದು, ಅಂದ್ರೆ ನಮ್ಮ ಕುಟುಂಬದವರು ಅಥವಾ ಅಧಿಕಾರಿಗಳು ನಾವು ಯೆಹೋವನನ್ನ ಆರಾಧಿಸ್ತಾ ಇರೋದಕ್ಕೆ ವಿರೋಧಿಸಬಹುದು, ಹಿಂಸೆ ಕೊಡಬಹುದು. ಆಗ ನಮಗೆ ತುಂಬ ಭಯ ಆಗಿಬಿಡುತ್ತೆ. ಕೆಲವರು ಈಗಿರೋ ಸಮಸ್ಯೆಗಳನ್ನ ಹೇಗಪ್ಪಾ ನಿಭಾಯಿಸೋದು ಅಂತ ಚಿಂತೆಯಲ್ಲಿ ಮುಳುಗಿರಬಹುದು. ಇನ್ನು ಕೆಲವರು ಮುಂದೆ ಎಂಥ ಕಷ್ಟಗಳು ಬರುತ್ತೋ ಅಂತ ಹೆದರಿರಬಹುದು.

2. ದಾವೀದ ಗತ್‌ ಊರಲ್ಲಿ ಇದ್ದಾಗ ಏನಾಯ್ತು?

2 ದಾವೀದನಿಗೂ ಕೆಲವೊಮ್ಮೆ ಭಯ ಆಯ್ತು. ರಾಜ ಸೌಲ, ದಾವೀದನನ್ನ ಸಾಯಿಸಬೇಕು ಅಂತ ಹುಡುಕ್ತಾ ಇದ್ದಾಗ ದಾವೀದ ಭಯಪಟ್ಟು ಗತ್‌ ಅನ್ನೋ ಫಿಲಿಷ್ಟಿಯರ ಊರಿಗೆ ಓಡಿ ಹೋದ. ಆದ್ರೆ ಆ ಊರಿನ ರಾಜ ಆಕೀಷನಿಗೆ “ಹತ್ತು ಸಾವಿರಗಟ್ಟಲೆ” ಫಿಲಿಷ್ಟಿಯರನ್ನ ಕೊಂದ ವ್ಯಕ್ತಿ ಬೇರೆ ಯಾರೂ ಅಲ್ಲ ದಾವೀದನೇ ಅಂತ ಗೊತ್ತಾಯ್ತು. ಆಗ ದಾವೀದ “ತುಂಬ ಹೆದರಿದ.” (1 ಸಮು. 21:10-12) ಆ ರಾಜ ತನಗೇನು ಮಾಡಿಬಿಡ್ತಾನೋ ಅಂತ ದಾವೀದ ಚಿಂತೆ ಮಾಡ್ತಿದ್ದ. ಆದ್ರೂ ದಾವೀದ ಹೇಗೆ ಭಯನ ಮೆಟ್ಟಿನಿಂತ?

3. ಭಯ ಆದಾಗ ದಾವೀದ ಏನು ಮಾಡಿದ? (ಕೀರ್ತನೆ 56:1-3, 11)

3 ದಾವೀದ ಗತ್‌ ಊರಲ್ಲಿ ಇದ್ದಾಗ ತನಗೆ ಹೇಗೆ ಅನಿಸ್ತು ಅಂತ 56ನೇ ಕೀರ್ತನೆಯಲ್ಲಿ ಬರೆದಿದ್ದಾನೆ. ಅದ್ರಲ್ಲಿ ಅವನು ತನಗೆ ಯಾಕೆ ಭಯ ಆಯ್ತು ಅಂತಷ್ಟೇ ಅಲ್ಲ ಆ ಭಯದಿಂದ ಹೊರಗೆ ಬರೋಕೆ ಯಾವುದು ಸಹಾಯ ಮಾಡ್ತು ಅಂತಾನೂ ಹೇಳಿದ್ದಾನೆ. ಹಾಗಾದ್ರೆ ದಾವೀದ ತನಗೆ ಭಯ ಆದಾಗ ಏನು ಮಾಡಿದ? ಅವನು ಯೆಹೋವನ ಮೇಲೆ ನಂಬಿಕೆ ಇಟ್ಟ. (ಕೀರ್ತನೆ 56:1-3, 11 ಓದಿ.) ಯೆಹೋವ ದಾವೀದನಿಗೆ ಸಹಾಯ ಮಾಡಿದನು. ಅವನಿಗೆ ಒಂದು ಉಪಾಯ ಹೊಳೆಯೋ ತರ ಮಾಡಿದನು. ಆಗ ದಾವೀದ ಆಕೀಷನ ಮುಂದೆ ಹುಚ್ಚನ ತರ ನಾಟಕ ಮಾಡಿದ. ಅದಕ್ಕೆ ರಾಜ ತನ್ನ ಸೇವಕರಿಗೆ ‘ಇವನನ್ನ ಮೊದ್ಲು ಇಲ್ಲಿಂದ ಓಡಿಸಿ’ ಅಂತ ಹೇಳಿದ. ಹೀಗೆ ದಾವೀದ ತನ್ನ ಜೀವ ಉಳಿಸ್ಕೊಂಡ.—1 ಸಮು. 21:13–22:1.

4. ಯೆಹೋವನ ಮೇಲಿರೋ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ ಏನು ಮಾಡಬೇಕು? ಉದಾಹರಣೆ ಕೊಡಿ.

4 ನಾವು ಕೂಡ ಭಯದಿಂದ ಹೊರಗೆ ಬರಬೇಕಂದ್ರೆ ಯೆಹೋವನ ಮೇಲೆ ನಂಬಿಕೆ ಇಡಬೇಕು. ಹಾಗಾದ್ರೆ ಆತನ ಮೇಲೆ ನಮ್ಮ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ ಏನು ಮಾಡಬೇಕು? ಅದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ನಿಮಗೆ ಒಂದು ಕಾಯಿಲೆ ಇದೆ ಅಂತ ಗೊತ್ತಾದಾಗ ಮೊದ್ಲು ತುಂಬ ಭಯ ಆಗುತ್ತೆ. ಆದ್ರೆ ನಿಮಗೆ ಚಿಕಿತ್ಸೆ ಕೊಡ್ತಿರೋ ಡಾಕ್ಟರ್‌ ಈ ತರದ ಎಷ್ಟೋ ರೋಗಿಗಳನ್ನ ಈಗಾಗ್ಲೇ ವಾಸಿ ಮಾಡಿದ್ದಾರೆ ಅಂದ್ಕೊಳ್ಳಿ. ನೀವು ಅವ್ರ ಜೊತೆ ಮಾತಾಡುವಾಗ ಆ ಡಾಕ್ಟರ್‌ ಚೆನ್ನಾಗಿ ಕೇಳಿಸ್ಕೊಳ್ತಾರೆ, ನಿಮ್ಮನ್ನ ಅರ್ಥಮಾಡ್ಕೊಳ್ತಾರೆ ಮತ್ತು ಹೀಗೇ ಮಾಡಿದ್ರೆ ಚೆನ್ನಾಗಿರುತ್ತೆ ಅಂತ ಹೇಳ್ತಾರೆ ಅಂತ ನೆನಸಿ. ಆಗ ನಿಮಗೆ ಆ ಡಾಕ್ಟರ್‌ ಮೇಲೆ ನಂಬಿಕೆ ಬರುತ್ತೆ ತಾನೇ? ಅದೇ ತರ ಯೆಹೋವ ಇಲ್ಲಿ ತನಕ ನಮಗಾಗಿ ಏನೆಲ್ಲ ಮಾಡಿದ್ದಾನೆ, ಈಗ ಏನು ಮಾಡ್ತಿದ್ದಾನೆ ಮತ್ತು ಮುಂದೆ ಏನು ಮಾಡ್ತಾನೆ ಅಂತ ನೆನಸ್ಕೊಂಡಾಗ ಆತನ ಮೇಲಿರೋ ನಂಬಿಕೆ ಜಾಸ್ತಿ ಆಗುತ್ತೆ. ದಾವೀದನೂ ಇದೇ ತರ ಯೋಚಿಸಿದ. ಅವನು 56ನೇ ಕೀರ್ತನೆಯಲ್ಲಿ ಏನು ಹೇಳಿದ್ದಾನೆ ಅಂತ ಈಗ ನೋಡೋಣ.

ಯೆಹೋವ ಇಲ್ಲಿ ತನಕ ಏನೆಲ್ಲಾ ಮಾಡಿದ್ದಾನೆ?

5. ಭಯ ಆದಾಗ ದಾವೀದ ಏನು ಮಾಡಿದ? (ಕೀರ್ತನೆ 56:12, 13)

5 ದಾವೀದನ ಜೀವ ಅಪಾಯದಲ್ಲಿದ್ರೂ ಯೆಹೋವ ಈಗಾಗ್ಲೇ ಏನೆಲ್ಲಾ ಮಾಡಿದ್ದಾನೆ ಅನ್ನೋದ್ರ ಕಡೆಗೆ ಗಮನ ಕೊಟ್ಟ. (ಕೀರ್ತನೆ 56:12, 13 ಓದಿ.) ಅವನಿಗೆ ಯಾವಾಗ್ಲೂ ಈ ತರ ಯೋಚಿಸೋ ರೂಢಿ ಇತ್ತು. ಉದಾಹರಣೆಗೆ ಅವನು ಆಗಾಗ ಯೆಹೋವ ದೇವರ ಸೃಷ್ಟಿ ಬಗ್ಗೆ ಯೋಚ್ನೆ ಮಾಡ್ತಿದ್ದ. ಆಗ ಯೆಹೋವ ದೇವರಿಗೆ ಎಷ್ಟು ಶಕ್ತಿ ಇದೆ, ಮನುಷ್ಯರ ಮೇಲೆ ಎಷ್ಟು ಪ್ರೀತಿ ಇದೆ ಅಂತ ಅವನಿಗೆ ಗೊತ್ತಾಯ್ತು. (ಕೀರ್ತ. 65:6-9) ಅಷ್ಟೇ ಅಲ್ಲ ಯೆಹೋವ ಬೇರೆಯವ್ರಿಗೋಸ್ಕರ ಏನು ಮಾಡಿದ್ದಾನೆ ಅಂತ ಯೋಚಿಸ್ತಿದ್ದ. (ಕೀರ್ತ. 31:19; 37:25, 26) ತನಗೋಸ್ಕರನೂ ಏನೆಲ್ಲಾ ಮಾಡಿದ್ದಾನೆ ಅಂತ ನೆನಪಿಸ್ಕೊಳ್ತಿದ್ದ. ದಾವೀದ ಮಗುವಾಗಿ ಇದ್ದಾಗಿಂದಾನೇ ಯೆಹೋವ ಅವನನ್ನ ಚೆನ್ನಾಗಿ ನೋಡ್ಕೊಳ್ತಾ ಬಂದನು. (ಕೀರ್ತ. 22:9, 10) ಇದನ್ನೆಲ್ಲ ನೆನಸ್ಕೊಂಡಾಗ ದಾವೀದನಿಗೆ ಯೆಹೋವನ ಮೇಲಿದ್ದ ನಂಬಿಕೆ ಇನ್ನೂ ಜಾಸ್ತಿ ಆಯ್ತು.

ಯೆಹೋವ ಹಿಂದೆ ಏನು ಮಾಡಿದನು, ಈಗ ಏನು ಮಾಡ್ತಿದ್ದಾನೆ ಮತ್ತು ಮುಂದೆ ಏನು ಮಾಡ್ತಾನೆ ಅಂತ ದಾವೀದ ಯೋಚಿಸಿದ್ರಿಂದ ಆತನ ಮೇಲಿರೋ ನಂಬಿಕೆ ಅವನಿಗೆ ಜಾಸ್ತಿ ಆಯ್ತು. (ಪ್ಯಾರ 5, 8, 12 ನೋಡಿ) d


6. ಭಯ ಆದಾಗ ನಾವೇನು ಮಾಡಬೇಕು?

6 ನಿಮಗೂ ಭಯ ಆದಾಗ ಯೆಹೋವ ಇಲ್ಲಿ ತನಕ ಏನೆಲ್ಲಾ ಮಾಡಿದ್ದಾನೆ ಅಂತ ನೆನಸ್ಕೊಳ್ಳಿ. ಆತನು ಏನೆಲ್ಲಾ ಸೃಷ್ಟಿ ಮಾಡಿದ್ದಾನೆ ಅಂತ “ಚೆನ್ನಾಗಿ ನೋಡಿ.” (ಮತ್ತಾ. 6:25-32) ಪಕ್ಷಿಗಳಿಗೆ, ಹೂಗಳಿಗೆ ಯೆಹೋವ ತನ್ನ ಗುಣಗಳನ್ನಿಟ್ಟು ಸೃಷ್ಟಿಮಾಡಿಲ್ಲ ಮತ್ತು ಅವು ಆತನನ್ನ ಆರಾಧಿಸೋದೂ ಇಲ್ಲ. ಆದ್ರೂ ಯೆಹೋವ ಅವುಗಳನ್ನ ಚೆನ್ನಾಗಿ ನೋಡ್ಕೊಳ್ತಿದ್ದಾನೆ. ಇದನ್ನ ನೆನಸ್ಕೊಂಡಾಗ ಆತನು ನಮ್ಮನ್ನೂ ತುಂಬ ಚೆನ್ನಾಗಿ ನೋಡ್ಕೊಳ್ತಾನೆ ಅನ್ನೋ ನಂಬಿಕೆ ನಿಮಗೆ ಜಾಸ್ತಿ ಆಗುತ್ತೆ. ಅಷ್ಟೇ ಅಲ್ಲ ಯೆಹೋವ ಹಿಂದಿನ ಕಾಲದಲ್ಲಿ ತನ್ನ ಮೇಲೆ ನಂಬಿಕೆ ಇಟ್ಟ ಜನ್ರನ್ನ ಹೇಗೆ ನೋಡ್ಕೊಂಡನು ಮತ್ತು ಈಗಿರೋ ತನ್ನ ಸೇವಕರನ್ನ ಹೇಗೆ ನೋಡ್ಕೊಳ್ತಿದ್ದಾನೆ ಅಂತ ತಿಳ್ಕೊಳ್ಳಿ. a ಯೆಹೋವ ನಿಮ್ಮನ್ನ ಇಲ್ಲಿ ತನಕ ಹೇಗೆ ನೋಡ್ಕೊಂಡಿದ್ದಾನೆ? ಆತನ ಬಗ್ಗೆ ತಿಳ್ಕೊಳ್ಳೋಕೆ ನಿಮಗೆ ಹೇಗೆ ಸಹಾಯ ಮಾಡಿದ್ದಾನೆ? (ಯೋಹಾ. 6:44) ನಿಮ್ಮ ಪ್ರಾರ್ಥನೆಗಳಿಗೆ ಹೇಗೆ ಉತ್ರ ಕೊಟ್ಟಿದ್ದಾನೆ? (1 ಯೋಹಾ. 5:14) ತನ್ನ ಮಗನನ್ನ ನಿಮಗೋಸ್ಕರ ಬಿಡುಗಡೆ ಬೆಲೆಯಾಗಿ ಕೊಟ್ಟಿದ್ರಿಂದ ನಿಮಗೆ ಏನೆಲ್ಲಾ ಪ್ರಯೋಜನ ಆಗ್ತಿದೆ? ಅಂತ ಯೋಚ್ನೆ ಮಾಡಿ.—ಎಫೆ. 1:7; ಇಬ್ರಿ. 4:14-16.

ಯೆಹೋವ ಹಿಂದೆ ಏನು ಮಾಡಿದ್ದಾನೆ, ಈಗ ಏನು ಮಾಡ್ತಿದ್ದಾನೆ ಮತ್ತು ಮುಂದೆ ಏನು ಮಾಡ್ತಾನೆ ಅಂತ ಯೋಚಿಸಿದ್ರೆ ನಮಗೆ ಆತನ ಮೇಲಿರೋ ನಂಬಿಕೆ ಜಾಸ್ತಿ ಆಗುತ್ತೆ. (ಪ್ಯಾರ 6, 9-10, 13-14 ನೋಡಿ) e


7. ದಾನಿಯೇಲನ ಬಗ್ಗೆ ಯೋಚ್ನೆ ಮಾಡಿದ್ರಿಂದ ಸಹೋದರಿ ವೆನೆಸ್ಸಾಗೆ ಹೇಗೆ ಸಹಾಯ ಆಯ್ತು?

7 ಹೈಟಿಯಲ್ಲಿರೋ ಸಹೋದರಿ ವೆನೆಸ್ಸಾಗೆ b ಒಂದ್ಸಲ ತುಂಬ ಭಯ ಆಯ್ತು. ಅವ್ರ ಮನೆ ಹತ್ರ ಇರೋ ಒಬ್ಬ ವ್ಯಕ್ತಿ ತನ್ನ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋಕೆ ಒತ್ತಾಯ ಮಾಡ್ತಿದ್ದ. ಅಷ್ಟೇ ಅಲ್ಲ ದಿನಾ ಕಾಲ್‌ ಮಾಡ್ತಿದ್ದ, ಮೆಸೇಜ್‌ ಮಾಡ್ತಿದ್ದ. ಆದ್ರೆ ಸಹೋದರಿ ‘ಇದೆಲ್ಲಾ ನಂಗೆ ಇಷ್ಟ ಇಲ್ಲ’ ಅಂತ ಹೇಳಿದ್ರು. ಆಗ ಅವನಿಗೆ ತುಂಬ ಕೋಪ ಬಂತು. ‘ನೀನು ಒಪ್ಕೊಳಲ್ಲ ಅಂದ್ರೆ ನಿನ್ನ ಸುಮ್ನೆ ಬಿಡಲ್ಲ ನಿಂಗೇನಾದ್ರೂ ಮಾಡಿಬಿಡ್ತೀನಿ’ ಅಂತ ಹೆದರಿಸಿದ. “ಆಗ ನಂಗೆ ತುಂಬ ಭಯ ಆಯ್ತು” ಅಂತ ವೆನೆಸ್ಸಾ ಹೇಳ್ತಾಳೆ. ಆದ್ರೂ ಧೈರ್ಯದಿಂದ ಇರೋಕೆ ಅವಳು ಏನು ಮಾಡಿದಳು? ಇದ್ರ ಬಗ್ಗೆ ಪೊಲೀಸ್‌ ಹತ್ರ ಮಾತಾಡೋಕೆ ಒಬ್ಬ ಹಿರಿಯ ಹೇಳಿದ್ರು. ಹೀಗೆ ವೆನೆಸ್ಸಾ ಹುಷಾರಾಗಿರೋಕೆ ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಿದಳು. ಅಷ್ಟೇ ಅಲ್ಲ ಈ ಹಿಂದೆ ಯೆಹೋವ ತನ್ನ ಜನ್ರನ್ನ ಹೇಗೆಲ್ಲ ಕಾಪಾಡಿದನು ಅಂತ ನೆನಸ್ಕೊಂಡಳು. “ನನಗೆ ತಕ್ಷಣ ನೆನಪು ಬಂದಿದ್ದು ಪ್ರವಾದಿ ದಾನಿಯೇಲ. ಅವನು ತಪ್ಪು ಮಾಡಿಲ್ಲಾಂದ್ರೂ ಅವನನ್ನ ಸಿಂಹದ ಗುಂಡಿಗೆ ಹಾಕಿದ್ರು. ಆದ್ರೆ ಯೆಹೋವ ಅವನನ್ನ ಕಾಪಾಡಿದನು. ನಾನೂ ಯೆಹೋವ ದೇವರ ಹತ್ರ ಕಾಪಾಡಪ್ಪಾ ಅಂತ ಬೇಡ್ಕೊಂಡೆ. ಆಮೇಲೆ ನನಗೆ ಧೈರ್ಯ ಬಂತು” ಅಂತ ವೆನೆಸ್ಸಾ ಹೇಳ್ತಾಳೆ.—ದಾನಿ. 6:12-22.

ಯೆಹೋವ ಈಗ ಏನು ಮಾಡ್ತಿದ್ದಾನೆ ಅಂತ ಯೋಚಿಸಿ

8. ದಾವೀದನಿಗೆ ಏನು ಗೊತ್ತಿತ್ತು? (ಕೀರ್ತನೆ 56:8)

8 ಗತ್‌ ಊರಲ್ಲಿದ್ದಾಗ ದಾವೀದನ ಜೀವಕ್ಕೆ ಅಪಾಯ ಇದ್ರೂ ಅವನು ಗಾಬರಿ ಪಡ್ಲಿಲ್ಲ. ಯೆಹೋವ ತನಗೆ ಆ ಸಮಯದಲ್ಲಿ ಹೇಗೆ ಸಹಾಯ ಮಾಡ್ತಿದ್ದಾನೆ ಅಂತ ಯೋಚಿಸಿದ. ಯೆಹೋವ ತನಗೆ ದಾರಿ ತೋರಿಸ್ತಿದ್ದಾನೆ, ತನ್ನನ್ನ ಕಪಾಡ್ತಿದ್ದಾನೆ ತನ್ನ ಪರಿಸ್ಥಿತಿಯನ್ನ ಅರ್ಥ ಮಾಡ್ಕೊತಿದ್ದಾನೆ ಅಂತ ದಾವೀದನಿಗೆ ಗೊತ್ತಾಯ್ತು. (ಕೀರ್ತನೆ 56:8 ಓದಿ.) ಅಷ್ಟೇ ಅಲ್ಲ ಯೋನಾತಾನ, ಮಹಾ ಪುರೋಹಿತ ಅಹಿಮೆಲೇಕನಂತ ಇನ್ನೂ ಕೆಲವು ಸ್ನೇಹಿತರು ದಾವೀದನಿಗೆ ಬೆನ್ನೆಲುಬಾಗಿ ನಿಂತರು. (1 ಸಮು. 20:41, 42; 21:6, 8, 9) ದಾವೀದನನ್ನ ಕೊಲ್ಲಬೇಕು ಅಂತ ರಾಜ ಸೌಲ ಎಷ್ಟೇ ಪ್ರಯತ್ನ ಮಾಡಿದ್ರೂ ಅವನು ತಪ್ಪಿಸ್ಕೊಂಡ. ಆಗ ಯೆಹೋವ ತನ್ನ ಪರಿಸ್ಥಿತಿಯನ್ನ ಮತ್ತು ಭಾವನೆಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದಾನೆ ಅಂತ ದಾವೀದನಿಗೆ ಗೊತ್ತಾಯ್ತು. ಆತನ ಮೇಲಿದ್ದ ನಂಬಿಕೆ ಇನ್ನೂ ಜಾಸ್ತಿ ಆಯ್ತು.

9. ನಮಗೆ ಕಷ್ಟ ಬಂದಾಗ ಯೆಹೋವನಿಗೆ ಹೇಗನಿಸುತ್ತೆ?

9 ನಮಗೆ ಕಷ್ಟ ಬಂದಾಗ ನಮ್ಮ ಪರಿಸ್ಥಿತಿಯನ್ನ ಮಾತ್ರ ಅಲ್ಲ ನಮಗಾಗ್ತಿರೋ ನೋವನ್ನೂ ಯೆಹೋವ ಅರ್ಥಮಾಡ್ಕೊಳ್ತಾನೆ. ಉದಾಹರಣೆಗೆ, ಈಜಿಪ್ಟಿನಲ್ಲಿ ಇಸ್ರಾಯೇಲ್ಯರು ಕಷ್ಟಪಡ್ತಿದ್ದಾಗ ಅವ್ರ “ನೋವು ನರಳಾಟವನ್ನ” ಯೆಹೋವ ಅರ್ಥಮಾಡ್ಕೊಂಡನು. (ವಿಮೋ. 3:7) ದಾವೀದನೂ ತನ್ನ “ಸಂಕಟವನ್ನ” ಮತ್ತು “ಮನದಾಳದ ಯಾತನೆಯನ್ನ” ಯೆಹೋವ ನೋಡಿದ್ದಾನೆ ಅಂತ ಹೇಳಿದ. (ಕೀರ್ತ. 31:7) ಯೆಹೋವನ ಸೇವಕರೂ ಮೂರ್ಖತನದಿಂದ ಕೆಲವು ತೀರ್ಮಾನಗಳನ್ನ ತಗೊಂಡು ಸಂಕಟದಲ್ಲಿದ್ದಾಗ “ಆತನಿಗೂ ಸಂಕಟ ಆಯ್ತು” ಅಂತ ಬೈಬಲ್‌ ಹೇಳುತ್ತೆ. (ಯೆಶಾ. 63:9) ಇದ್ರಿಂದ ನಮಗೇನು ಗೊತ್ತಾಗುತ್ತೆ? ನಮಗೂ ಭಯ ಆದಾಗ ಯೆಹೋವ ನಮ್ಮನ್ನ ಅರ್ಥಮಾಡ್ಕೊಳ್ತಾನೆ. ಭಯದಿಂದ ಹೊರಗೆ ಬರೋಕೆ ನಮಗೆ ಸಹಾಯ ಮಾಡ್ತಾನೆ.

10. ಯೆಹೋವ ನಿಮ್ಮನ್ನ ಇಷ್ಟ ಪಡ್ತಾನೆ ಮತ್ತು ನಿಮಗೆ ಸಹಾಯ ಮಾಡ್ತಾನೆ ಅಂತ ನೀವ್ಯಾಕೆ ನಂಬ್ತೀರ?

10 ಕೆಲವೊಮ್ಮೆ ನೀವು ಕಷ್ಟದಲ್ಲಿ ಮುಳುಗಿಹೋದಾಗ ಯೆಹೋವ ಹೇಗೆ ಸಹಾಯ ಮಾಡ್ತಿದ್ದಾನೆ ಅನ್ನೋದು ಗೊತ್ತಾಗದೆ ಹೋಗಬಹುದು. ಆಗ ಏನು ಮಾಡಬಹುದು? ‘ನೀನು ಹೇಗೆ ಸಹಾಯ ಮಾಡ್ತಿದ್ದೀಯ ಅನ್ನೋದನ್ನ ತೋರಿಸ್ಕೊಡಪ್ಪಾ’ ಅಂತ ಯೆಹೋವನ ಹತ್ರ ಕೇಳಿ. (2 ಅರ. 6:15-17) ಆಮೇಲೆ ಹೀಗೆ ಕೇಳ್ಕೊಳ್ಳಿ: ‘ಕೂಟದಲ್ಲಿ ಕೇಳಿಸ್ಕೊಂಡಿರೋ ಯಾವುದಾದ್ರೂ ಭಾಷಣ ಅಥವಾ ಉತ್ರ ನನಗೆ ಸಹಾಯ ಮಾಡಿದ್ಯಾ?’ ‘ಯಾವುದಾದ್ರೂ ವಿಡಿಯೋ ಅಥವಾ ಬ್ರಾಡ್‌ಕಾಸ್ಟಿಂಗ್‌ ಹಾಡು ನನಗೆ ಪ್ರೋತ್ಸಾಹ ಕೊಟ್ಟಿದ್ಯಾ?’ ‘ಯಾರಾದ್ರೂ ತೋರಿಸಿರೋ ಒಂದು ವಚನದಿಂದ ನನಗೆ ಧೈರ್ಯ ಸಿಕ್ಕಿದ್ಯಾ?’ ಅಂತ ಯೋಚ್ನೆ ಮಾಡಿ. ಬೈಬಲಿಂದ ಮತ್ತು ನಮ್ಮ ಸಹೋದರ ಸಹೋದರಿಯರಿಂದ ಸಿಗೋ ಸಹಾಯವನ್ನ ಕೆಲವೊಮ್ಮೆ ನಾವು ಮರೆತು ಬಿಡ್ತೀವಿ. ಆದ್ರೆ ಇದೆಲ್ಲಾ ಯೆಹೋವನಿಂದ ಬಂದಿರೋ ಗಿಫ್ಟ್‌ಗಳು. (ಯೆಶಾ. 65:13; ಮಾರ್ಕ 10:29, 30) ಯೆಹೋವ ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ಇದ್ರಿಂದ ಗೊತ್ತಾಗುತ್ತೆ. (ಯೆಶಾ. 49:14-16) ಆತನ ಮೇಲೆ ನಂಬಿಕೆ ಇಡಬಹುದು ಅಂತನೂ ಗೊತ್ತಾಗುತ್ತೆ.

11. ಭಯದಿಂದ ಹೊರಗೆ ಬರೋಕೆ ಐಡಾಗೆ ಯಾವುದು ಸಹಾಯ ಮಾಡ್ತು?

11 ಸೆನೆಗಲ್‌ನಲ್ಲಿರೋ ಸಹೋದರಿ ಐಡಾ ತನಗೆ ಯೆಹೋವ ಹೇಗೆ ಸಹಾಯ ಮಾಡಿದನು ಅನ್ನೋದನ್ನ ಗಮನಿಸಿದಳು. ಅವ್ರ ಮನೆಲಿ ಅವಳು ದೊಡ್ಡ ಮಗಳಾಗಿದ್ರಿಂದ ಕುಟುಂಬನ ಚೆನ್ನಾಗಿ ನೋಡ್ಕೊಳ್ತಾಳೆ ಅಂತ ಅಪ್ಪಅಮ್ಮ ಅಂದ್ಕೊಂಡಿದ್ರು. ಆದ್ರೆ ಅವಳು ಪಯನೀಯರಿಂಗ್‌ ಮಾಡಬೇಕು ಅಂತ ಜೀವನ ಸರಳ ಮಾಡ್ಕೊಂಡಿದ್ರಿಂದ ಅವಳ ಹತ್ರ ಅಷ್ಟು ಹಣ ಇರ್ಲಿಲ್ಲ. ಇದ್ರಿಂದ ಅವಳ ಅಪ್ಪಅಮ್ಮಗೆ ತುಂಬ ಕೋಪ ಬಂತು. ಅವಳನ್ನ ಬೈತಾ ಇದ್ರು. “ನಂಗೆ ನನ್ನ ಅಪ್ಪಅಮ್ಮನ್ನ ಚೆನ್ನಾಗಿ ನೋಡ್ಕೊಳ್ಳೋಕೆ ಆಗಲ್ವೇನೋ, ಜನ ನನ್ನ ನೋಡಿ ಏನು ಅಂದ್ಕೊಳ್ತಾರೋ ಅಂತ ಭಯ ಆಯ್ತು. ಈ ತರ ಆಗೋಕೆ ಬಿಟ್ಟಿದ್ದಕ್ಕೆ ಯೆಹೋವನಿಗೂ ನಾನು ಬೈದುಬಿಟ್ಟೆ. ಆದ್ರೆ ಯೆಹೋವ ನಮ್ಮ ಮನಸ್ಸಲ್ಲಿರೋ ನೋವನ್ನ ಅರ್ಥಮಾಡ್ಕೊಳ್ತಾನೆ ಅಂತ ಒಂದು ಭಾಷಣದಲ್ಲಿ ಕೇಳಿಸ್ಕೊಂಡೆ. ಅಷ್ಟೇ ಅಲ್ಲ ಹಿರಿಯರು ಮತ್ತು ಸಹೋದರ ಸಹೋದರಿಯರು ಯೆಹೋವ ನನ್ನನ್ನ ಎಷ್ಟು ಪ್ರೀತಿಸ್ತಾನೆ ಅಂತ ಅರ್ಥಮಾಡ್ಕೊಳ್ಳೋಕೆ ಸಹಾಯ ಮಾಡಿದ್ರು. ಆಮೇಲೆ ಯೆಹೋವ ನನಗೆ ಸಹಾಯ ಮಾಡ್ತಾನೆ ಅನ್ನೋ ನಂಬಿಕೆಯಿಂದ ಪ್ರಾರ್ಥನೆ ಮಾಡಿದೆ. ಇದ್ರಿಂದ ನನಗೆ ನೆಮ್ಮದಿ ಸಿಕ್ತು ಮತ್ತು ನನ್ನ ಪ್ರಾರ್ಥನೆಗಳಿಗೆ ಉತ್ರನೂ ಸಿಕ್ತು” ಅಂತ ಐಡಾ ಹೇಳ್ತಾರೆ. ಕೆಲವು ದಿವಸಗಳಾದ ಮೇಲೆ ಐಡಾಗೆ ಕೆಲಸ ಸಿಕ್ತು. ಇದ್ರಿಂದ ಅವಳಿಗೆ ಪಯನೀಯರಿಂಗ್‌ ಮಾಡೋಕೂ ಆಯ್ತು, ಅಪ್ಪಅಮ್ಮನ್ನ ಚೆನ್ನಾಗಿ ನೋಡ್ಕೊಳ್ಳೋಕೂ ಆಯ್ತು. “ನಾನೀಗ ಯೆಹೋವನ ಮೇಲೆ ಪೂರ್ತಿ ನಂಬಿಕೆ ಇಡೋಕೆ ಕಲ್ತಿದ್ದೀನಿ. ನಂಗೆ ಭಯ ಆದಾಗೆಲ್ಲ ಆತನಿಗೆ ಪ್ರಾರ್ಥನೆ ಮಾಡ್ತೀನಿ. ಆಗ ನಂಗೆ ಧೈರ್ಯ ಸಿಗುತ್ತೆ” ಅಂತ ಐಡಾ ಹೇಳ್ತಾರೆ.

ಯೆಹೋವ ಮುಂದೆ ಏನು ಮಾಡ್ತಾನೆ?

12. ದಾವೀದನಿಗೆ ಯಾವ ಗ್ಯಾರಂಟಿ ಇತ್ತು ಅಂತ ಕೀರ್ತನೆ 56:9 ಹೇಳುತ್ತೆ?

12 ಕೀರ್ತನೆ 56:9 ಓದಿ. ಈ ವಚನ ದಾವೀದನಿಗೆ ಭಯದಿಂದ ಹೊರಗೆ ಬರೋಕೆ ಸಹಾಯ ಮಾಡಿದ ಇನ್ನೊಂದು ವಿಷ್ಯದ ಬಗ್ಗೆ ಹೇಳುತ್ತೆ. ಅವನ ಜೀವಕ್ಕೆ ತುಂಬ ಅಪಾಯ ಇದ್ರೂ ಯೆಹೋವ ದೇವರು ತನಗೋಸ್ಕರ ಮುಂದೆ ಏನೆಲ್ಲ ಮಾಡ್ತಾನೆ ಅನ್ನೋದ್ರ ಬಗ್ಗೆ ದಾವೀದ ಯೋಚಿಸಿದ. ಅಷ್ಟೇ ಅಲ್ಲ ಯೆಹೋವ ಸರಿಯಾದ ಸಮಯಕ್ಕೆ ತನ್ನನ್ನ ಕಾಪಾಡೇ ಕಾಪಾಡ್ತಾನೆ ಅನ್ನೋ ಗ್ಯಾರಂಟಿನೂ ಅವನಿಗಿತ್ತು. ಯಾಕಂದ್ರೆ ಇಸ್ರಾಯೇಲಿನ ಮುಂದಿನ ರಾಜ ದಾವೀದನೇ ಅಂತ ಯೆಹೋವ ಈಗಾಗ್ಲೇ ಹೇಳಿದ್ದನು. (1 ಸಮು. 16:1, 13) ಯೆಹೋವ ಕೊಟ್ಟ ಮಾತು ನಿಜ ಆಗೇ ಆಗುತ್ತೆ ಅಂತ ದಾವೀದ ನಂಬಿದ್ದ.

13. ಯೆಹೋವ ನಮಗೋಸ್ಕರ ಏನು ಮಾಡ್ತಾನೆ?

13 ಯೆಹೋವ ನಿಮಗೂ ಒಂದು ಮಾತು ಕೊಟ್ಟಿದ್ದಾನೆ. ಈಗಿರೋ ಸಮಸ್ಯೆಗಳನ್ನ ಆತನು ಅದ್ಭುತ ಮಾಡಿ ತೆಗೆದು ಹಾಕಲ್ಲ ನಿಜ. c ಆದ್ರೆ ಮುಂದೆ ಹೊಸ ಲೋಕದಲ್ಲಿ ಆ ತೊಂದ್ರೆಗಳು ಇಲ್ಲದೆ ಇರೋ ತರ ನೋಡ್ಕೊಳ್ತೀನಿ ಅಂತ ಹೇಳಿದ್ದಾನೆ. (ಯೆಶಾ. 25:7-9) ನಮ್ಮ ನೋವನ್ನ ಮತ್ತು ನೋವು ಕೊಡ್ತಿರೋರನ್ನ ತೆಗೆದು ಹಾಕೋಕೆ, ಕಾಯಿಲೆಗಳನ್ನ ವಾಸಿ ಮಾಡೋಕೆ, ಅಷ್ಟೇ ಅಲ್ಲ ಸತ್ತವ್ರನ್ನ ಎಬ್ಬಿಸೋಕೆ ಯೆಹೋವನಿಗೆ ಶಕ್ತಿ ಇದೆ.—1 ಯೋಹಾ. 4:4.

14. ನಾವು ಯಾವುದ್ರ ಬಗ್ಗೆ ಮಾತಾಡಬಹುದು?

14 ನಿಮಗೆ ಭಯ ಆದಾಗೆಲ್ಲಾ ಯೆಹೋವ ಮುಂದೆ ಏನೆಲ್ಲ ಮಾಡ್ತಾನೆ ಅಂತ ಯೋಚಿಸಿ. ಆಗ ಸೈತಾನ ಮತ್ತು ಕೆಟ್ಟ ಜನ್ರು ಇರಲ್ಲ, ಒಳ್ಳೆಯವರು ಮಾತ್ರ ಇರ್ತಾರೆ. ಅಷ್ಟೇ ಅಲ್ಲ, ನಾವು ಪರಿಪೂರ್ಣರಾಗ್ತಾ ಹೋಗ್ತೀವಿ ಅಂತ ನೆನಸ್ಕೊಂಡಾಗ ನಮಗೆ ಎಷ್ಟು ಖುಷಿಯಾಗುತ್ತೆ ಅಲ್ವಾ? 2014ರ ಪ್ರಾದೇಶಿಕ ಅಧಿವೇಶನದಲ್ಲಿ ಒಂದು ಅಭಿನಯ ಇತ್ತು. ಅದ್ರಲ್ಲಿ ಒಬ್ಬ ಅಪ್ಪ ತನ್ನ ಕುಟುಂಬದ ಜೊತೆ 2 ತಿಮೊತಿ 3:1-5ರಲ್ಲಿ ಪರದೈಸ್‌ ಬಗ್ಗೆ ಹೇಳಿದಿದ್ರೆ ಹೇಗಿರ್ತಿತ್ತು ಅಂತ ಚರ್ಚೆ ಮಾಡಿದ್ರು. “ಹೊಸ ಲೋಕದಲ್ಲಿ ಪರಿಸ್ಥಿತಿ ತುಂಬ ಚೆನ್ನಾಗಿರುತ್ತೆ. ಎಲ್ರೂ ಖುಷಿಯಾಗಿ ಇರ್ತಾರೆ. ಯಾಕಂದ್ರೆ ಅಲ್ಲಿ ಜನ್ರು ಬೇರೆಯವ್ರ ಬಗ್ಗೆ ಯೋಚಿಸೋರು, ಯೆಹೋವನನ್ನ ಇಷ್ಟ ಪಡೋರು, ತಮ್ಮ ಇತಿಮಿತಿಯನ್ನ ಅರ್ಥಮಾಡ್ಕೊಂಡಿರೋರು, ದೀನತೆ ಇರೋರು, ಯೆಹೋವನನ್ನ ಹೊಗಳೋರು, ಅಪ್ಪಅಮ್ಮನ ಮಾತು ಕೇಳೋರು, ಕೃತಜ್ಞತೆ ಇರೋರು, ನಂಬಿಕೆ ಉಳಿಸ್ಕೊಳ್ಳೋರು, ಕುಟುಂಬದವ್ರನ್ನ ಪ್ರೀತಿಸೋರು, ಒಪ್ಕೊಳ್ಳೋಕೆ ರೆಡಿ ಇರೋರು, ಬೇರೆಯವ್ರ ಬಗ್ಗೆ ಒಳ್ಳೇದನ್ನೇ ಮಾತಾಡೋರು, ಸ್ವನಿಯಂತ್ರಣ ಇರೋರು, ಮೃದು ಸ್ವಭಾವದವರು, ಒಳ್ಳೇತನವನ್ನ ಪ್ರೀತಿಸೋರು, ಬಿಟ್ಟುಕೊಡೋರು, ತಮಗಿಂತ ಬೇರೆಯವ್ರನ್ನ ಶ್ರೇಷ್ಠವಾಗಿ ನೋಡೋರು, ಆಸೆಗಳನ್ನ ತೀರಿಸ್ಕೊಳ್ಳದೆ ದೇವರನ್ನ ಇಷ್ಟ ಪಡೋರು, ದೇವರ ಮೇಲೆ ಭಕ್ತಿ ಇರೋರು ಇರ್ತಾರೆ. ಯಾವಾಗ್ಲೂ ಇಂಥವ್ರ ಜೊತೆನೇ ಇರು.” ಈ ತರ ನೀವೂ ನಿಮ್ಮ ಕುಟುಂಬದವ್ರ ಜೊತೆ ಯಾವತ್ತಾದ್ರೂ ಮಾತಾಡಿದ್ದೀರಾ?

15. ಭಯ ಆದ್ರೂ ಧೈರ್ಯ ತೋರಿಸೋಕೆ ಟಾನ್ಯಾಗೆ ಯಾವುದು ಸಹಾಯ ಮಾಡ್ತು?

15 ಉತ್ತರ ಮಕೆದೋನ್ಯದಲ್ಲಿರೋ ಟಾನ್ಯಾ ಅನ್ನೋ ಸಹೋದರಿಯ ಉದಾಹರಣೆ ನೋಡಿ. ಅವಳು ಸತ್ಯ ಕಲಿಯೋಕೆ ಶುರು ಮಾಡಿದಾಗ ಅವಳ ಅಪ್ಪಅಮ್ಮನಿಗೆ ಇಷ್ಟ ಆಗ್ಲಿಲ್ಲ. ಅವರು ಅವಳಿಗೆ ತುಂಬ ಹಿಂಸೆ ಕೊಟ್ರು. ಆದ್ರೆ ಮುಂದೆ ಸಿಗೋ ಆಶೀರ್ವಾದದ ಬಗ್ಗೆ ಟಾನ್ಯಾ ನೆನಸ್ಕೊಂಡಿದ್ರಿಂದ ಭಯ ಆದ್ರೂ ಅವಳು ಯೆಹೋವನನ್ನ ಬಿಟ್ಟು ಹೋಗ್ಲಿಲ್ಲ. “ನಾನು ಏನು ಆಗಬಾರದು ಅಂದ್ಕೊಂಡಿದ್ದೆನೋ ಅದೇ ಆಯ್ತು. ಪ್ರತಿವಾರ ಮೀಟಿಂಗ್‌ ಮುಗಿಸ್ಕೊಂಡು ಬಂದ್ಮೇಲೆ ನಮ್ಮಮ್ಮ ಹೊಡಿತಿದ್ರು. ಯೆಹೋವನ ಸಾಕ್ಷಿ ಆದ್ರೆ ನಿನ್ನ ಸಾಯಿಸಿ ಬಿಡ್ತೀವಿ ಅಂತ ಅಪ್ಪಅಮ್ಮ ಹೇಳ್ತಿದ್ರು” ಅಂತ ಟಾನ್ಯಾ ಹೇಳಿದಳು. ಕೊನೆಗೆ ಅವರು ಅವಳನ್ನ ಮನೆಯಿಂದ ಹೊರಗೆ ಹಾಕಿಬಿಟ್ರು. ಆಗ ಅವಳು ಏನು ಮಾಡಿದಳು? “ನಾನು ಈಗ ಧೈರ್ಯ ತೋರಿಸಿದ್ರೆ ಮುಂದೆ ಖುಷಿಖುಷಿಯಾಗಿ ಇರೋ ತರ ಯೆಹೋವ ನನ್ನ ನೋಡ್ಕೊಳ್ತಾನೆ ಅಂತ ನೆನಸ್ಕೊಂಡೆ. ಅಷ್ಟೇ ಅಲ್ಲ ಈಗ ನಾನು ಏನೆಲ್ಲಾ ಕಳ್ಕೊಂಡಿದ್ದೀನೋ ಅದನ್ನೆಲ್ಲ ಯೆಹೋವ ಹೊಸ ಲೋಕದಲ್ಲಿ ಕೊಡ್ತಾನೆ ಅಂತ ಯೋಚ್ನೆ ಮಾಡಿದೆ. ಈ ಕಹಿ ಘಟನೆಗಳೆಲ್ಲ ಆಗ ನನ್ನ ನೆನಪಿಗೂ ಬರಲ್ಲ” ಅಂತ ಅವಳು ಹೇಳಿದಳು. ಅದೇನೇ ಆದ್ರೂ ಟಾನ್ಯಾ ಯೆಹೋವನನ್ನ ಬಿಡ್ಲಿಲ್ಲ. ಯೆಹೋವ ಅವಳಿಗೆ ಆಸರೆಯಾಗಿದ್ದನು. ಅವಳಿಗೊಂದು ಮನೆ ಸಿಗೋ ತರ ನೋಡ್ಕೊಂಡನು. ಈಗ ಟಾನ್ಯಾ ಮದುವೆ ಆಗಿದ್ದಾಳೆ. ಅವಳು ಮತ್ತು ಅವಳ ಗಂಡ ಖುಷಿಖುಷಿಯಿಂದ ಪೂರ್ಣ ಸಮಯದ ಸೇವೆ ಮಾಡ್ತಿದ್ದಾರೆ.

ಈಗಿಂದಾನೇ ನಿಮ್ಮ ನಂಬಿಕೆ ಜಾಸ್ತಿ ಮಾಡ್ಕೊಳ್ಳಿ

16. ಲೂಕ 21:26-28ರಲ್ಲಿರೋ ಘಟನೆಗಳು ನಡೆಯುವಾಗ ನಾವು ಧೈರ್ಯವಾಗಿ ಇರೋಕೆ ಯಾವುದು ಸಹಾಯ ಮಾಡುತ್ತೆ?

16 ಮಹಾಸಂಕಟದಲ್ಲಿ ಆಗೋ ವಿಷ್ಯಗಳನ್ನ ನೋಡಿ “ಭಯದಿಂದ ಜನ ತಲೆ ತಿರುಗಿ ಬೀಳ್ತಾರೆ.” ಆದ್ರೆ ದೇವಜನ್ರು ತಲೆ ಮೇಲೆತ್ತಿ ಧೈರ್ಯವಾಗಿ ನಿಲ್ತಾರೆ. (ಲೂಕ 21:26-28 ಓದಿ.) ಯಾಕೆ? ಯಾಕಂದ್ರೆ ಯೆಹೋವನ ಮೇಲೆ ನಮಗೆ ನಂಬಿಕೆ ಇರುತ್ತೆ. ಟಾನ್ಯಾ ಹಿಂದೆ ಕಷ್ಟಪಟ್ಟಿದ್ರಿಂದ ಈಗ ಎಷ್ಟೋ ಸನ್ನಿವೇಶಗಳನ್ನ ಎದುರಿಸೋಕೆ ಅವಳಿಗೆ ಆಗ್ತಿದೆ. “ಯೆಹೋವನ ಕೈಯಲ್ಲಿ ಸರಿಮಾಡೋಕೆ ಆಗದಿರೋ ವಿಷ್ಯಗಳು ಯಾವುದೂ ಇಲ್ಲ ಅಂತ ನಮಗೆ ಗೊತ್ತು. ಕೆಲವರು ನಮಗೆ ತುಂಬ ಕಷ್ಟ ಕೊಡ್ತಾ ಇರ್ತಾರೆ. ಆದ್ರೆ ಯೆಹೋವ ಎಲ್ಲಿ ತನಕ ಅವ್ರಿಗೆ ಅನುಮತಿ ಕೊಟ್ಟಿದ್ದಾನೋ ಅಲ್ಲಿ ತನಕಾನೇ ಅವ್ರ ಆಟ ನಡೆಯೋದು. ಅವ್ರಿಗಿಂತ ಯೆಹೋವ ದೇವರಿಗೆ ತುಂಬ ಶಕ್ತಿ ಇದೆ. ಈಗಿರೋ ಕಷ್ಟ ಸಹಿಸ್ಕೊಳ್ಳೋಕೆ ಆಗ್ತಿಲ್ಲ ಅಂತ ನಮಗೆ ಅನಿಸಬಹುದು. ಆದ್ರೆ ಒಂದಲ್ಲಾ ಒಂದು ದಿನ ಅದು ಕೊನೆ ಆಗುತ್ತೆ” ಅಂತ ಟಾನ್ಯಾ ಹೇಳ್ತಾರೆ.

17. 2024ರ ವರ್ಷವಚನ ನಮಗೆ ಹೇಗೆ ಸಹಾಯ ಮಾಡುತ್ತೆ? (ಮುಖಪುಟ ಚಿತ್ರ ನೋಡಿ.)

17 ನಮಗೆ ಇವತ್ತು ತುಂಬ ವಿಷ್ಯಗಳಿಗೆ ಭಯ ಆಗುತ್ತೆ ನಿಜ. ಆದ್ರೆ ನಾವು ದಾವೀದನ ತರ ಧೈರ್ಯವಾಗಿರಬೇಕು. ದಾವೀದ “ನನಗೆ ಭಯ ಆದಾಗ ನಾನು ನಿನ್ನ ಮೇಲೆ ಭರವಸೆ ಇಡ್ತೀನಿ” ಅಂತ ಯೆಹೋವನಿಗೆ ಹೇಳಿದ. (ಕೀರ್ತ. 56:3) ಇದೇ 2024ರ ವರ್ಷವಚನ. ದಾವೀದ ಹೇಳಿದ ಮಾತಿನ ಬಗ್ಗೆ ಒಂದು ಬೈಬಲ್‌ ರೆಫರೆನ್ಸ್‌ ಹೀಗೆ ಹೇಳುತ್ತೆ: “ದಾವೀದ ಯಾವ ವಿಷ್ಯಗಳಿಗೆ ಹೆದರುತ್ತಿದ್ದನೋ ಅದ್ರ ಬಗ್ಗೆನೇ ಯೋಚ್ನೆ ಮಾಡ್ಕೊಂಡು ಕೂತಿರಲಿಲ್ಲ, ಬದ್ಲಿಗೆ ತನಗೆ ಸಹಾಯ ಮಾಡೋ ವ್ಯಕ್ತಿ ಮೇಲೆ ನಂಬಿಕೆ ಇಟ್ಟ.” ನೀವೂ ಕೂಡ ಬರೋ ದಿನಗಳಲ್ಲಿ ಅದ್ರಲ್ಲೂ ನಿಮಗೆ ಭಯ ಆಗೋ ಸನ್ನಿವೇಶಗಳಲ್ಲಿ ಈ ವರ್ಷವಚನ ನೆನಪಿಸ್ಕೊಳ್ಳಿ. ಯೆಹೋವ ಈ ಮುಂಚೆ ಏನು ಮಾಡಿದ್ದಾನೆ, ಈಗ ಏನು ಮಾಡ್ತಿದ್ದಾನೆ ಮತ್ತು ಮುಂದೆ ಏನು ಮಾಡ್ತಾನೆ ಅಂತ ಯೋಚ್ನೆ ಮಾಡಿ. ಆಗ ನೀವೂ ದಾವೀದನ ತರ “ದೇವರಲ್ಲಿ ನಾನು ಭರವಸೆ ಇಟ್ಟಿದ್ದೀನಿ. ನಾನು ಭಯಪಡಲ್ಲ” ಅಂತ ಹೇಳ್ತೀರ.—ಕೀರ್ತ. 56:4.

ವಿಪತ್ತಾದಾಗ ಒಬ್ಬ ಸಹೋದರಿ ವರ್ಷವಚನ ನೆನಪಿಸ್ಕೊಳ್ತಿದ್ದಾರೆ (ಪ್ಯಾರ 17 ನೋಡಿ)

ಭಯದಿಂದ ಹೊರಗೆ ಬರೋಕೆ . . .

  • ಹಿಂದೆ ಯೆಹೋವ ಮಾಡಿದ್ದನ್ನ ನೆನಸ್ಕೊಳ್ಳೋದು ಹೇಗೆ ಸಹಾಯ ಮಾಡುತ್ತೆ?

  • ಯೆಹೋವ ಈಗ ಏನು ಮಾಡ್ತಿದ್ದಾನೆ ಅಂತ ಯೋಚಿಸೋದು ಹೇಗೆ ಸಹಾಯ ಮಾಡುತ್ತೆ?

  • ಯೆಹೋವ ಮುಂದೆ ಏನು ಮಾಡ್ತಾನೆ ಅಂತ ತಿಳ್ಕೊಳ್ಳೋದು ಹೇಗೆ ಸಹಾಯ ಮಾಡುತ್ತೆ?

ಗೀತೆ 38 ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು

a ನಿಮ್ಮ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ jw.org ವೆಬ್‌ಸೈಟ್‌ ಸಹಾಯ ಮಾಡುತ್ತೆ. ಅದ್ರಲ್ಲಿ ಹುಡುಕು ಅನ್ನೋ ಟ್ಯಾಬ್‌ ಇದೆ. ಅಲ್ಲಿ “ಅವರ ನಂಬಿಕೆಯನ್ನು ಅನುಕರಿಸಿ” ಅಥವಾ “ಅನುಭವಗಳು” ಅಂತ ಟೈಪ್‌ ಮಾಡಿ. JW ಲೈಬ್ರರಿ ಆ್ಯಪಲ್ಲಿ “ಅವರ ನಂಬಿಕೆಯನ್ನು ಅನುಕರಿಸಿ” ಅಥವಾ “ಯೆಹೋವನ ಸಾಕ್ಷಿಗಳ ಜೀವನ ಕಥೆಗಳು” ಅನ್ನೋ ಲೇಖನ ಸರಣಿಗಳನ್ನ ನೋಡಿ.

b ಕೆಲವ್ರ ಹೆಸ್ರು ಬದಲಾಗಿದೆ.

d ಚಿತ್ರ ವಿವರಣೆ: ಯೆಹೋವ ದಾವೀದನಿಗೆ ಒಂದು ಕರಡಿಯನ್ನ ಸೀಳಿ ಹಾಕುವಷ್ಟು ಶಕ್ತಿ ಕೊಟ್ಟನು, ಅಹೀಮೆಲೆಕನಿಂದ ಸಹಾಯ ಸಿಗೋ ಹಾಗೆ ಮಾಡಿದನು, ಮುಂದೆ ಅವನನ್ನ ರಾಜನಾಗಿ ಮಾಡ್ತೀನಿ ಅಂತ ಮಾತು ಕೊಟ್ಟನು. ಇದನ್ನೆಲ್ಲ ದಾವೀದ ನೆನಪಿಸ್ಕೊಳ್ತಿದ್ದಾನೆ.

e ಚಿತ್ರ ವಿವರಣೆ: ಜೈಲಲ್ಲಿರೋ ಒಬ್ಬ ಸಹೋದರ ಈ ಹಿಂದೆ ಯೆಹೋವ ತನಗೆ ಸಿಗರೇಟ್‌ ಸೇದೋದನ್ನ ಬಿಡೋಕೆ ಹೇಗೆ ಸಹಾಯ ಮಾಡಿದನು, ಈಗ ಬೇರೆಯವ್ರಿಂದ ತನ್ನನ್ನ ಹೇಗೆ ಪ್ರೋತ್ಸಾಹಿಸ್ತಾ ಇದ್ದಾನೆ ಮತ್ತು ಮುಂದೆ ಹೊಸ ಲೋಕದಲ್ಲಿ ತನಗೆ ಶಾಶ್ವತ ಜೀವ ಕೊಡುವಾಗ ಹೇಗಿರುತ್ತೆ ಅನ್ನೋದ್ರ ಬಗ್ಗೆ ಯೋಚಿಸ್ತಿದ್ದಾನೆ.