ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 2

ಗೀತೆ 8 ಕರ್ತನ ಸಂಧ್ಯಾ ಭೋಜನ

ಕ್ರಿಸ್ತನ ಮರಣದ ಸ್ಮರಣೆಗೆ ನೀವು ರೆಡಿನಾ?

ಕ್ರಿಸ್ತನ ಮರಣದ ಸ್ಮರಣೆಗೆ ನೀವು ರೆಡಿನಾ?

“ನನ್ನನ್ನ ನೆನಪಿಸ್ಕೊಳ್ಳೋಕೆ ಇದನ್ನ ಮಾಡ್ತಾ ಇರಿ.”ಲೂಕ 22:19.

ಈ ಲೇಖನದಲ್ಲಿ ಏನಿದೆ?

ಕ್ರಿಸ್ತನ ಮರಣದ ಸ್ಮರಣೆ ನಮಗೆ ಯಾಕಷ್ಟು ಮುಖ್ಯ? ನಾವದಕ್ಕೆ ಈಗಿಂದಾನೇ ಹೇಗೆ ತಯಾರಾಗಬಹುದು? ಸ್ಮರಣೆಗೆ ಬೇರೆಯವ್ರನ್ನ ಕರೆಯೋಕೆ ನಾವೇನು ಮಾಡಬೇಕು? ಅದನ್ನ ಈಗ ನೋಡೋಣ.

1. ಕ್ರಿಸ್ತನ ಮರಣದ ಸ್ಮರಣೆ ನಮಗೆ ಯಾಕಷ್ಟು ಮುಖ್ಯ? (ಲೂಕ 22:19, 20)

 ಯೆಹೋವನ ಸಾಕ್ಷಿಗಳಿಗೆ ಯೇಸು ಕ್ರಿಸ್ತನ ಮರಣದ ಸ್ಮರಣೆ ತುಂಬ ಮುಖ್ಯ. ಯೇಸು ತನ್ನ ಶಿಷ್ಯರಿಗೆ ಮಾಡೋಕೆ ಹೇಳಿದ್ದು ಇದೊಂದೇ ಆಚರಣೆ. (ಲೂಕ 22:19, 20 ಓದಿ.) ಯೇಸು ಹೇಳಿದ್ದಕ್ಕಷ್ಟೇ ಅಲ್ಲ ಇನ್ನೂ ಬೇರೆಬೇರೆ ಕಾರಣಗಳಿಗೆ ನಾವು ಕ್ರಿಸ್ತನ ಮರಣದ ಸ್ಮರಣೆಯನ್ನ ಮಾಡ್ತೀವಿ. ಅದ್ರ ಬಗ್ಗೆ ಈಗ ನೋಡೋಣ.  

2. ನಾವ್ಯಾಕೆ ಸ್ಮರಣೆಯ ದಿನಕ್ಕಾಗಿ ಕಾಯ್ತಾ ಇರ್ತೀವಿ?

2 ಕ್ರಿಸ್ತನ ಮರಣದ ಸ್ಮರಣೆಗೆ ಬರೋದ್ರಿಂದ ಯೇಸುವಿನ ಬಿಡುಗಡೆ ಬೆಲೆ ನಮಗೆ ಯಾಕಷ್ಟು ಮುಖ್ಯ ಅಂತ ಅರ್ಥ ಆಗುತ್ತೆ. ಯೇಸು ಮಾಡಿರೋ ತ್ಯಾಗಗಳಿಗೆ ನಾವೆಷ್ಟು ಋಣಿಗಳಾಗಿರಬೇಕು ಅಂತನೂ ಅದು ನೆನಪಿಸುತ್ತೆ. (2 ಕೊರಿಂ. 5:14, 15) ಅಷ್ಟೇ ಅಲ್ಲ ‘ಸಹೋದರ ಸಹೋದರಿಯರ ನಂಬಿಕೆಯಿಂದ ನಾವು ಮತ್ತು ನಮ್ಮ ನಂಬಿಕೆಯಿಂದ ಅವರು ಪ್ರೋತ್ಸಾಹ ಪಡ್ಕೊಳ್ಳೋಕೆ’ ಆಗುತ್ತೆ. (ರೋಮ. 1:12) ನಿಷ್ಕ್ರಿಯರು, ಅಂದ್ರೆ ಯೆಹೋವನಿಂದ ದೂರ ಹೋದ ಎಷ್ಟೋ ಜನ್ರು ಸ್ಮರಣೆಗೆ ಬಂದಿದ್ದಾರೆ. ಅಲ್ಲಿ ನಾವು ಅವ್ರಿಗೆ ತೋರಿಸೋ ಪ್ರೀತಿ ನೋಡಿ ಅವರು ಮತ್ತೆ ಯೆಹೋವನ ಹತ್ರ ವಾಪಸ್‌ ಬಂದಿದ್ದಾರೆ. ಅಲ್ಲಿಗೆ ಬರೋ ಹೊಸಬರು ಆ ಕಾರ್ಯಕ್ರಮದಲ್ಲಿ ನಡಿಯೋದನ್ನೆಲ್ಲ ನೋಡಿ ಮತ್ತು ಅಲ್ಲಿ ಕೊಡೋ ಭಾಷಣ ಕೇಳಿ ಬೈಬಲ್‌ ಕಲಿಯೋಕೆ ಇಷ್ಟಪಟ್ಟಿದ್ದಾರೆ. ಅದಕ್ಕೇ ಕ್ರಿಸ್ತನ ಮರಣದ ಸ್ಮರಣೆ ಅಂದ್ರೆ ನಮಗೆ ತುಂಬ ಇಷ್ಟ.

3. ಕ್ರಿಸ್ತನ ಮರಣದ ಸ್ಮರಣೆ ನಮ್ಮೆಲ್ರನ್ನ ಹೇಗೆ ಒಂದು ಮಾಡುತ್ತೆ? (ಚಿತ್ರನೂ ನೋಡಿ.)

3 ಸ್ಮರಣೆಯ ಕಾರ್ಯಕ್ರಮ ಇಡೀ ಭೂಮಿಯಲ್ಲಿರೋ ಯೆಹೋವನ ಸಾಕ್ಷಿಗಳನ್ನ ಒಂದು ಮಾಡುತ್ತೆ. ಇದನ್ನ ಹೇಗೆ ಹೇಳಬಹುದು? ಆ ದಿನ ಸೂರ್ಯ ಮುಳುಗ್ತಿದ್ದ ಹಾಗೇ ನಾವು ಆ ಕಾರ್ಯಕ್ರಮ ಶುರು ಮಾಡ್ತೀವಿ. ಆ ಕಾರ್ಯಕ್ರಮದಲ್ಲಿ ಕ್ರಿಸ್ತನ ಬಿಡುಗಡೆ ಬೆಲೆ ಯಾಕಷ್ಟು ಮುಖ್ಯ ಅಂತ ಅರ್ಥಮಾಡಿಸೋ ಒಂದು ಭಾಷಣ ಇರುತ್ತೆ. ಅಲ್ಲಿ ನಾವು 2 ಹಾಡುಗಳನ್ನ ಹಾಡ್ತೀವಿ. ರೊಟ್ಟಿ ಮತ್ತು ದ್ರಾಕ್ಷಾಮದ್ಯ ದಾಟಿಸ್ತೀವಿ. 4 ಪ್ರಾರ್ಥನೆಗಳಿಗೆ ಮನಸಾರೆ “ಆಮೆನ್‌” ಅಂತ ಹೇಳ್ತೀವಿ. 24 ಗಂಟೆಯೊಳಗೆ ಇಡೀ ಲೋಕದಲ್ಲಿರೋ ಯೆಹೋವನ ಸಾಕ್ಷಿಗಳು ಈ ಕಾರ್ಯಕ್ರಮನ ಒಂದೇ ತರ ಮಾಡ್ತಾರೆ. ಈ ತರ ನಾವೆಲ್ರೂ ಒಟ್ಟಿಗೆ ಸೇರಿ ಯೆಹೋವನಿಗೆ ಮತ್ತು ಆತನ ಮಗನಿಗೆ ಗೌರವ ಕೊಡ್ತಾ ಈ ಸ್ಮರಣೆಯನ್ನ ಮಾಡುವಾಗ ಅವ್ರಿಬ್ರಿಗೂ ಎಷ್ಟು ಖುಷಿ ಆಗುತ್ತೆ ಅಲ್ವಾ?

ಕ್ರಿಸ್ತನ ಸ್ಮರಣೆ ಇಡೀ ಲೋಕದಲ್ಲಿರೋ ನಮ್ಮ ಸಹೋದರ ಸಹೋದರಿಯರನ್ನ ಒಂದು ಮಾಡುತ್ತೆ (ಪ್ಯಾರ 3 ನೋಡಿ) f


4. ನಾವು ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ರ ತಿಳ್ಕೊತೀವಿ?

4 ನಾವು ಈ ಲೇಖನದಲ್ಲಿ, ಸ್ಮರಣೆ ದಿನಕ್ಕೆ ಈಗಿಂದಾನೇ ಹೇಗೆ ತಯಾರಾಗಬಹುದು? ಸ್ಮರಣೆಗೆ ಮುಂಚೆ ಮತ್ತು ಮುಗಿದ ಮೇಲೆ ನಾವು ಬೇರೆಯವ್ರಿಗೆ ಹೇಗೆ ಸಹಾಯ ಮಾಡಬಹುದು? ನಿಷ್ಕ್ರಿಯರಿಗೆ ಸಹಾಯ ಮಾಡೋಕೆ ನಾವು ಏನು ಮಾಡಬಹುದು? ಅನ್ನೋ 3 ಪ್ರಶ್ನೆಗಳಿಗೆ ಉತ್ರ ತಿಳ್ಕೊತೀವಿ.  

ಸ್ಮರಣೆಗೆ ನಾವು ಈಗ್ಲೇ ಹೇಗೆ ತಯಾರಾಗಬಹುದು?

5. (ಎ) ಬಿಡುಗಡೆ ಬೆಲೆ ಬಗ್ಗೆ ನಾವು ಯಾಕೆ ಯೋಚಿಸಬೇಕು? (ಕೀರ್ತನೆ 49:7, 8) (ಬಿ) ಯೇಸು ಏಕೆ ಜೀವಕೊಟ್ಟನು? ಅನ್ನೋ ವಿಡಿಯೋದಿಂದ ನೀವೇನು ಕಲಿತ್ರಿ?

5 ಕ್ರಿಸ್ತನ ಮರಣದ ಸ್ಮರಣೆಗೆ ನಾವು ತಯಾರಾಗೋಕೆ ಏನು ಮಾಡಬೇಕು? ಯೇಸು ಕ್ರಿಸ್ತ ಕೊಟ್ಟ ಬಿಡುಗಡೆ ಬೆಲೆ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಬೇಕು. ನಮಗ್ಯಾರಿಗೂ ನಮ್ಮನ್ನ ನಾವೇ ಪಾಪದಿಂದ, ಮರಣದಿಂದ ಬಿಡಿಸ್ಕೊಳ್ಳೋಕೆ ಆಗಲ್ಲ. (ಕೀರ್ತನೆ 49:7, 8 ಓದಿ; ಯೇಸು ಏಕೆ ಜೀವಕೊಟ್ಟನು? ಅನ್ನೋ ವಿಡಿಯೋ ನೋಡಿ.) a ಅದಕ್ಕೇ ಯೆಹೋವ ಒಂದು ಏರ್ಪಾಡು ಮಾಡಿದನು. ನಮಗೋಸ್ಕರ ಜೀವ ಕೊಡೋಕೆ ಯೇಸುನ ಕಳಿಸ್ಕೊಟ್ಟನು. (ರೋಮ. 6:23) ಇವ್ರಿಬ್ರೂ ಎಷ್ಟು ದೊಡ್ಡ ತ್ಯಾಗ ಮಾಡಿದ್ರು ಅಲ್ವಾ? ಈ ತ್ಯಾಗದ ಬಗ್ಗೆ ನಾವು ನೆನಸ್ಕೊಂಡಷ್ಟು ಅವ್ರ ಮೇಲಿರೋ ಪ್ರೀತಿ ಜಾಸ್ತಿ ಆಗುತ್ತೆ. ಬಿಡುಗಡೆ ಬೆಲೆ ಕೊಟ್ಟಿದ್ದಕ್ಕೆ ನಾವು ಅವ್ರಿಗೆ ಯಾವಾಗ್ಲೂ ಋಣಿಗಳಾಗಿರಬೇಕು ಅನಿಸುತ್ತೆ. ಈಗ ನಾವು ಬಿಡುಗಡೆ ಬೆಲೆ ಕೊಡೋಕೆ ಯೆಹೋವ ಮತ್ತು ಯೇಸು ಏನೆಲ್ಲಾ ಮಾಡಿದ್ರು ಅಂತ ತಿಳ್ಕೊಳ್ಳೋಣ. ಅಷ್ಟೇ ಅಲ್ಲ, ಬಿಡುಗಡೆ ಬೆಲೆ ಅಂದ್ರೆ ಏನು? ಮತ್ತು ಅದನ್ನ ಯೇಸು ಯಾಕೆ ಕೊಡಬೇಕಿತ್ತು? ಅಂತನೂ ತಿಳ್ಕೊಳ್ಳೋಣ.

6. (ಎ) ಬಿಡುಗಡೆ ಬೆಲೆ ಅಂದ್ರೆ ಏನು? (ಬಿ) ಯೇಸುನೇ ಯಾಕೆ ಬಿಡುಗಡೆ ಬೆಲೆ ಕೊಡಬೇಕಿತ್ತು?

6 ಒಂದು ವಸ್ತುನ ಮತ್ತೆ ವಾಪಸ್‌ ಪಡ್ಕೊಳ್ಳೋಕೆ ಕೊಡೋ ಬೆಲೆನೇ ಬಿಡುಗಡೆ ಬೆಲೆ. ಮೊದಲನೇ ಮನುಷ್ಯನಾದ ಆದಾಮ ಪರಿಪೂರ್ಣನಾಗಿದ್ದ. ಆದ್ರೆ ಅವನು ಪಾಪ ಮಾಡಿದಾಗ ಶಾಶ್ವತವಾಗಿ ಜೀವಿಸೋ ಅವಕಾಶ ಕಳ್ಕೊಂಡುಬಿಟ್ಟ. ಅವನಷ್ಟೇ ಅಲ್ಲ, ಅವನ ಮಕ್ಕಳಾಗಿರೋ ನಾವೆಲ್ರೂ ಅದನ್ನ ಕಳ್ಕೊಂಡ್ವಿ. ಆದಾಮ ಕಳ್ಕೊಂಡಿದ್ದನ್ನ ಮತ್ತೆ ವಾಪಸ್‌ ಪಡ್ಕೊಳ್ಳೋಕೆ ಯೇಸು ತನ್ನ ಪರಿಪೂರ್ಣ ಜೀವವನ್ನ ತ್ಯಾಗ ಮಾಡಿದನು. ಅಂದ್ರೆ ತನ್ನ ಜೀವವನ್ನ ಬಿಡುಗಡೆ ಬೆಲೆಯಾಗಿ ಕೊಟ್ಟನು. ಯೇಸು ಭೂಮಿಲಿದ್ದಾಗ “ಯಾವ ಪಾಪನೂ ಮಾಡಲಿಲ್ಲ, ಆತನ ಬಾಯಲ್ಲಿ ಮೋಸದ ಮಾತುಗಳೇ ಬರಲಿಲ್ಲ” ಅಂತ ಬೈಬಲ್‌ ಹೇಳುತ್ತೆ. (1 ಪೇತ್ರ 2:22) ಇದ್ರಿಂದ ನಮಗೇನು ಗೊತ್ತಾಗುತ್ತೆ? ಆದಾಮನ ತರ ಯೇಸು ಪರಿಪೂರ್ಣನಾಗಿದ್ರಿಂದ, ಜನ್ರನ್ನ ಪಾಪದಿಂದ ಬಿಡಿಸೋಕೆ ಆದಾಮ ಕಳ್ಕೊಂಡ ಪರಿಪೂರ್ಣ ಜೀವಕ್ಕೆ ಸರಿಸಮವಾಗಿ ಬಿಡುಗಡೆ ಬೆಲೆ ಕೊಟ್ಟನು.—1 ಕೊರಿಂ. 15:45; 1 ತಿಮೊ. 2:6.

7. ಭೂಮಿಲಿದ್ದಾಗ ಯೇಸುಗೆ ಯಾವೆಲ್ಲ ಪರೀಕ್ಷೆಗಳು ಬಂತು?

7 ಯೇಸುಗೆ ಭೂಮಿಲಿದ್ದಾಗ ತುಂಬ ಕಷ್ಟಗಳು ಬಂತು. ಆದ್ರೂ ಯೆಹೋವನ ಮಾತನ್ನ ಕೇಳ್ತಿದ್ದನು. ಅವನ ಅಪ್ಪ ಅಮ್ಮ ಅಪರಿಪೂರ್ಣರಾಗಿದ್ರೂ ಯಾವಾಗ್ಲೂ ಅವ್ರ ಮಾತು ಕೇಳ್ತಿದ್ದನು. (ಲೂಕ 2:51) ಆತನು ಹದಿಪ್ರಾಯಕ್ಕೆ ಬಂದಾಗ ಜನ್ರು ‘ಅಪ್ಪ ಅಮ್ಮನ ಮಾತು ಕೇಳಬೇಡ, ಯೆಹೋವನ ಮಾತು ಕೇಳಬೇಡ’ ಅಂತ ಒತ್ತಾಯ ಮಾಡಿರಬಹುದು. ಆದ್ರೂ ಆ ಒತ್ತಡಕ್ಕೆ ಆತನು ಮಣಿಲಿಲ್ಲ. ಅಷ್ಟೇ ಅಲ್ಲ, ಯೇಸು ದೊಡ್ಡವನಾದ ಮೇಲೆ ಸೈತಾನ ಆತನನ್ನ ಪರೀಕ್ಷಿಸಿದ. (ಮತ್ತಾ. 4:1-11) ಯೇಸು ತಪ್ಪು ಮಾಡಬೇಕು ಅಂತ ಕುತಂತ್ರ ಮಾಡಿದ. ಯೆಹೋವನ ಮಾತು ಕೇಳಬೇಡ ಅಂತ ಹೇಳಿದ. ಯಾಕಂದ್ರೆ ಯೇಸು ಪಾಪ ಮಾಡಿಬಿಟ್ರೆ ಬಿಡುಗಡೆ ಬೆಲೆ ಕೊಡೋಕೇ ಆಗಲ್ಲ ಅಂತ ಸೈತಾನನಿಗೆ ಚೆನ್ನಾಗಿ ಗೊತ್ತಿತ್ತು.

8. ಯೇಸು ಇನ್ನೂ ಯಾವೆಲ್ಲಾ ಕಷ್ಟ ಅನುಭವಿಸಿದನು?

8 ಯೇಸು ಸಿಹಿಸುದ್ದಿ ಸಾರೋಕೆ ಶುರುಮಾಡಿದಾಗ್ಲೂ ತುಂಬ ಕಷ್ಟ ಅನುಭವಿಸಿದನು. ವಿರೋಧಿಗಳು ಆತನನ್ನ ಕೊಲ್ಲೋಕೆ ಹೊಂಚುಹಾಕ್ತಿದ್ರು. (ಲೂಕ 4:28, 29; 13:31) ಆತನ ಶಿಷ್ಯರು ಪದೇಪದೇ ತಪ್ಪು ಮಾಡಿದಾಗ ಅದನ್ನ ಸಹಿಸ್ಕೊಂಡನು. (ಮಾರ್ಕ 9:33, 34) ಯೇಸು ಸಾಯೋ ಮುಂಚೆ ಜನ್ರು ತುಂಬ ಹಿಂಸೆ ಕೊಟ್ರು, ಹೀಯಾಳಿಸಿದ್ರು, ಅವಮಾನ ಮಾಡಿದ್ರು. ಕೊನೆಗೆ ತುಂಬ ನೋವಿಂದ ನರಳಾಡ್ತಾ ಆತನು ಸಾಯಬೇಕಾಯ್ತು. (ಇಬ್ರಿ. 12:1-3) ಇದನ್ನೆಲ್ಲ ಆತನು ಒಬ್ಬನೇ ಸಹಿಸ್ಕೊಬೇಕಿತ್ತು. ಯಾಕಂದ್ರೆ ಆ ಸಮಯದಲ್ಲಿ ಯೆಹೋವ ತನ್ನನ್ನ ಕಾಪಾಡಲ್ಲ ಅಂತ ಆತನಿಗೆ ಚೆನ್ನಾಗಿ ಗೊತ್ತಿತ್ತು. bಮತ್ತಾ. 27:46.

9. ಯೇಸು ಮಾಡಿದ ತ್ಯಾಗದ ಬಗ್ಗೆ ನಿಮಗೆ ಹೇಗನಿಸುತ್ತೆ? (1 ಪೇತ್ರ 1:8)

9 ಯೇಸು ಬಿಡುಗಡೆ ಬೆಲೆ ಕೊಡೋಕೆ ತುಂಬ ಕಷ್ಟ ಹಿಂಸೆ ಅನುಭವಿಸಿದನು. ಇಷ್ಟೆಲ್ಲ ಅನುಭವಿಸಬೇಕಾಗುತ್ತೆ ಅಂತ ಗೊತ್ತಿದ್ರೂ ನಮಗೋಸ್ಕರ ಜೀವ ಕೊಡೋಕೆ ಆತನು ಮುಂದೆ ಬಂದನು. ಇದನ್ನ ನೆನಸ್ಕೊಂಡಾಗ ಆತನ ಮೇಲೆ ಪ್ರೀತಿ ಉಕ್ಕಿ ಬರುತ್ತಲ್ವಾ?—1 ಪೇತ್ರ 1:8 ಓದಿ.

10. ಯೆಹೋವ ಯಾವ ತ್ಯಾಗ ಮಾಡಿದನು?

10 ಯೇಸು ಬಿಡುಗಡೆ ಬೆಲೆ ಕೊಡುವಾಗ ಯೆಹೋವ ದೇವರೂ ತ್ಯಾಗ ಮಾಡಿದನು. ಅದನ್ನ ನಾವು ಹೇಗೆ ಹೇಳಬಹುದು? ಯೆಹೋವ ಮತ್ತು ಯೇಸು ಮಧ್ಯ ಇದ್ದ ನಂಟು ತುಂಬ ಗಟ್ಟಿಯಾಗಿತ್ತು. (ಜ್ಞಾನೋ. 8:30) ಯೇಸು ಭೂಮಿಲಿದ್ದಾಗ ಕಷ್ಟಪಡ್ತಿದ್ದನ್ನ ನೋಡಿ ಯೆಹೋವನಿಗೆ ಎಷ್ಟು ನೋವಾಗಿರುತ್ತೆ ಅಂತ ಸ್ವಲ್ಪ ಯೋಚಿಸಿ. ಜನ್ರು ಯೇಸುನ ಹೀಯಾಳಿಸಿದಾಗ, ಅವಮಾನ ಮಾಡಿದಾಗ ಯೆಹೋವನಿಗೆ ಹೃದಯಾನೇ ಹಿಂಡಿದಾಗೆ ಆಗಿರುತ್ತೆ. ಇದನ್ನೆಲ್ಲ ನೋಡೋಕೆ ಕಷ್ಟ ಆದ್ರೂ ಸಹಿಸ್ಕೊಂಡು ಸುಮ್ನೆ ಇರೋದೇ ಯೆಹೋವ ಮಾಡಿದ ದೊಡ್ಡ ತ್ಯಾಗ ಆಗಿತ್ತು.

11. ಯೇಸು ಸಾಯೋದನ್ನ ನೋಡಿದಾಗ ಯೆಹೋವನಿಗೆ ಹೇಗನಿಸಿರುತ್ತೆ? ಒಂದು ಉದಾಹರಣೆ ಕೊಡಿ.

11 ಮಕ್ಕಳು ತೀರಿಹೋಗೋದನ್ನ ನೋಡುವಾಗ ಅಪ್ಪಅಮ್ಮಗೆ ಹೇಗನಿಸುತ್ತೆ? ಅವ್ರ ಎದೆನೇ ಒಡೆದುಹೋಗುತ್ತೆ ಅಲ್ವಾ? ಸತ್ತವರು ಮತ್ತೆ ಬದುಕಿ ಬರ್ತಾರೆ ಅನ್ನೋ ನಂಬಿಕೆ ಇದ್ರೂ ಅವ್ರಿಗೆ ಆ ನೋವನ್ನ ಸಹಿಸ್ಕೊಳ್ಳೋಕೆ ಆಗಲ್ಲ. ಕ್ರಿಸ್ತ ಶಕ 33ರಲ್ಲಿ ಯೇಸು ಕೊನೆಯುಸಿರು ಎಳೆದಾಗ ಯೆಹೋವ ದೇವರಿಗೂ ಹೀಗೇ ಅನಿಸಿರುತ್ತೆ. ಯೇಸು ನೋವು ಅನುಭವಿಸಿ ನರಳೋದನ್ನ ನೋಡಿದಾಗ ಆತನಿಗೆ ತುಂಬ ದುಃಖ ಆಗಿರುತ್ತೆ. cಮತ್ತಾ. 3:17.

12. ಸ್ಮರಣೆ ದಿನಕ್ಕೆ ನಾವು ಹೇಗೆ ತಯಾರಾಗಬಹುದು?

12 ಸ್ಮರಣೆ ದಿನಕ್ಕೆ ನೀವು ಈಗಿಂದನೇ ತಯಾರಾಗೋಕೆ ಏನು ಮಾಡಬಹುದು? ಬಿಡುಗಡೆ ಬೆಲೆ ಬಗ್ಗೆ ಚೆನ್ನಾಗಿ ಅಧ್ಯಯನ ಮಾಡಿ. ನಿಮ್ಮ ಕುಟುಂಬ ಆರಾಧನೆಯಲ್ಲಿ ಪ್ರಾಜೆಕ್ಟ್‌ ಮಾಡಿ. ಅದಕ್ಕೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಅನ್ನೋ ಪುಸ್ತಕನ ಅಥವಾ ಬೇರೆ ಪ್ರಕಾಶನಗಳನ್ನ ಬಳಸ್ಕೊಳ್ಳಿ. d ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿಯಲ್ಲಿ ಬರೋ ಸ್ಮರಣೆಯ ಬೈಬಲ್‌ ಓದುವಿಕೆ ಮಾಡಿ. ಸ್ಮರಣೆ ದಿನ ಒಂದು ಮಾರ್ನಿಂಗ್‌ ವರ್ಶಿಪ್‌ ವಿಡಿಯೋ ಇರುತ್ತೆ, ಅದನ್ನ ನೋಡೋಕೆ ಮರಿಬೇಡಿ. ಹೀಗೆ ನಾವು ಈಗಿಂದಾನೇ ತಯಾರಾಗಿದ್ರೆ ಬೇರೆಯವ್ರಿಗೂ ಸಹಾಯ ಮಾಡೋಕೆ ಆಗುತ್ತೆ.—ಎಜ್ರ 7:10.

ಬೇರೆಯವ್ರಿಗೆ ಸಹಾಯ ಮಾಡಿ

13. ಸ್ಮರಣೆಗೆ ಬೇರೆಯವ್ರನ್ನ ಕರಿಯೋಕೆ ಏನು ಮಾಡಬೇಕು?

13 ಬೇರೆಯವರು ಈ ಸ್ಮರಣೆ ಕಾರ್ಯಕ್ರಮದಿಂದ ಪ್ರಯೋಜನ ಪಡಿಬೇಕಂದ್ರೆ ನೀವೇನು ಮಾಡಬಹುದು? ಸೇವೆಲಿ ಸಿಗೋರನ್ನ, ಪರಿಚಯ ಇರೋರನ್ನ ಕರಿಯೋಕೆ ಒಂದು ಪಟ್ಟಿ ಮಾಡಿ, ಅವ್ರನ್ನ ಆಮಂತ್ರಿಸಿ. ನಿಮ್ಮ ಸಂಬಂಧಿಕರನ್ನ, ನಿಮ್ಮ ಜೊತೆ ಕೆಲಸ ಮಾಡೋರನ್ನ, ಸ್ಕೂಲ್‌ ಫ್ರೆಂಡ್ಸನ್ನ ಮತ್ತು ಬೇರೆಯವ್ರನ್ನೂ ಕರಿಬಹುದು. ಒಂದುವೇಳೆ ಅವ್ರನ್ನ ಕರಿಯೋಕೆ ನಿಮ್ಮ ಹತ್ರ ಆಮಂತ್ರಣ ಪತ್ರಗಳು ಇಲ್ಲಾಂದ್ರೆ ಅದ್ರ ಲಿಂಕನ್ನ ಕಳಿಸಿ. ನೀವು ಇಷ್ಟೆಲ್ಲ ಪ್ರಯತ್ನ ಮಾಡಿ ಸ್ಮರಣೆಗೆ ತುಂಬ ಜನ ಬಂದಿರೋದನ್ನ ನೋಡಿದಾಗ ನಿಮಗೆಷ್ಟು ಖುಷಿಯಾಗುತ್ತೆ ಅಲ್ವಾ?—ಪ್ರಸಂ. 11:6.

14. ಪ್ರತಿಯೊಬ್ರಿಗೂ ಆಮಂತ್ರಣ ಪತ್ರ ಕೊಡೋದು ಯಾಕಷ್ಟು ಮುಖ್ಯ? ಉದಾಹರಣೆ ಕೊಡಿ.

14 ಪ್ರತಿಯೊಬ್ರಿಗೂ ಆಮಂತ್ರಣ ಪತ್ರ ಕೊಟ್ಟು ಸ್ಮರಣೆಗೆ ಕರಿಯೋದು ತುಂಬ ಮುಖ್ಯ. ಯಾಕೆ ಅಂತ ಅರ್ಥ ಮಾಡ್ಕೊಳ್ಳೋಕೆ ಒಬ್ಬ ಸಹೋದರಿಯ ಉದಾಹರಣೆ ನೋಡಿ. ಅವ್ರ ಗಂಡ ಸತ್ಯದಲ್ಲಿ ಇಲ್ಲ. ಆದ್ರೂ ಅವರು ಪ್ರತಿ ವರ್ಷ ಸ್ಮರಣೆಗೆ ತಮ್ಮ ಗಂಡನನ್ನ ಆಮಂತ್ರಿಸ್ತಾನೇ ಇದ್ರು. ಆದ್ರೆ ಅವರು ಬರ್ತಾ ಇರಲಿಲ್ಲ, ಒಂದು ಸಲ ‘ಸ್ಮರಣೆಗೆ ಬರ್ತೀನಿ’ ಅಂತ ಹೇಳಿದಾಗ ಸಹೋದರಿಗೆ ಆಶ್ಚರ್ಯ ಆಯ್ತು. ಏನು ಕಾರಣ ಅಂತ ತಿಳ್ಕೊಳ್ಳೋಕೆ ಅವ್ರ ಗಂಡನನ್ನ ಕೇಳಿದ್ರು. ಆಗ ಅವ್ರ ಗಂಡ “ನನಗೆ ಆಮಂತ್ರಣ ಪತ್ರ ಕೊಟ್ರು” ಅಂತ ಹೇಳಿದ್ರು. ಅವ್ರಿಗೆ ಪರಿಚಯ ಇದ್ದ ಒಬ್ಬ ಹಿರಿಯ ಅವ್ರನ್ನ ಆಮಂತ್ರಿಸಿದ್ರು. ಹೀಗೆ ಅವರು ಅದೊಂದೇ ವರ್ಷ ಅಲ್ಲ, ಸುಮಾರು ವರ್ಷಗಳು ಸ್ಮರಣೆಗೆ ಹಾಜರಾಗ್ತಾ ಇದ್ರು.

15. ಜನ್ರನ್ನ ಸ್ಮರಣೆಗೆ ಆಮಂತ್ರಿಸುವಾಗ ನಾವು ಏನನ್ನ ಮನಸ್ಸಲ್ಲಿ ಇಟ್ಕೊಬೇಕು?

15 ನೀವು ಸ್ಮರಣೆಗೆ ಆಮಂತ್ರಿಸಿದವರು ಆ ಕಾರ್ಯಕ್ರಮದ ಬಗ್ಗೆ ಕೆಲವು ಪ್ರಶ್ನೆಗಳನ್ನ ಕೇಳಬಹುದು. ಅದ್ರಲ್ಲೂ ಕೂಟಗಳಿಗೆ ಒಂದು ಸಲನೂ ಬರದೆ ಇದ್ದವ್ರ ಮನಸ್ಸಲ್ಲಿ ಏನಾದ್ರೂ ಒಂದು ಪ್ರಶ್ನೆ ಇದ್ದೇ ಇರುತ್ತೆ. ಹಾಗಾಗಿ ಅವ್ರ ಪ್ರಶ್ನೆಗೆ ಉತ್ರ ಕೊಡೋಕೆ ನೀವು ತಯಾರಾಗಿರಬೇಕು. (ಕೊಲೊ. 4:6) ಉದಾಹರಣೆಗೆ, ಅವರು ನಿಮ್ಮ ಹತ್ರ ‘ಆ ಕಾರ್ಯಕ್ರಮದಲ್ಲಿ ಏನು ನಡಿಯುತ್ತೆ?’ ‘ಅದು ಎಷ್ಟು ಹೊತ್ತು ಇರುತ್ತೆ?’ ‘ಆ ಕಾರ್ಯಕ್ರಮಕ್ಕೆ ನಾನು ಯಾವ ತರ ಬಟ್ಟೆ ಹಾಕಬೇಕು?’ ‘ಅಲ್ಲಿ ಹಣ ಏನಾದ್ರು ಕೊಡಬೇಕಾ?’ ಅಂತ ಕೇಳಬಹುದು. ಅದಕ್ಕೇ ಜನ್ರನ್ನ ನೀವು ಸ್ಮರಣೆಗೆ ಆಮಂತ್ರಿಸುವಾಗ “ನಿಮಗೆ ಏನಾದ್ರೂ ಪ್ರಶ್ನೆ ಇದ್ಯಾ” ಅಂತ ನೀವೇ ಅವ್ರ ಹತ್ರ ಕೇಳಿ. ಅವರು ಏನಾದ್ರೂ ಕೇಳಿದ್ರೆ ಉತ್ರ ಕೊಡಿ. ಅಷ್ಟೇ ಅಲ್ಲ, ಯೇಸುವಿನ ಮರಣವನ್ನು ಸ್ಮರಿಸಿ ಅನ್ನೋ ವಿಡಿಯೋ ತೋರಿಸಬಹುದು. ನಮ್ಮ ಕೂಟಗಳು ಹೇಗಿರುತ್ತೆ ಅಂತ ತಿಳಿಸೋಕೆ ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಅನ್ನೋ ವಿಡಿಯೋ ತೋರಿಸಬಹುದು. ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ ಪಾಠ 28​ರಲ್ಲೂ ಈ ವಿಷ್ಯದ ಬಗ್ಗೆ ಇದೆ. ಅದನ್ನೂ ತೋರಿಸಬಹುದು.

16. ಸ್ಮರಣೆಗೆ ಬಂದ್ಮೇಲೆ ಕೆಲವರು ಇನ್ನೂ ಯಾವ ಪ್ರಶ್ನೆಗಳನ್ನ ಕೇಳಬಹುದು?

16 ಹೊಸಬರು ಸ್ಮರಣೆಗೆ ಬಂದ್ಮೇಲೆ ಇನ್ನೂ ಕೆಲವು ಪ್ರಶ್ನೆಗಳನ್ನ ಕೇಳಬಹುದು. ‘ರೊಟ್ಟಿ ಮತ್ತು ದ್ರಾಕ್ಷಾಮದ್ಯನ ಎಲ್ರೂ ಯಾಕೆ ತಗೊಳ್ಳಲ್ಲ?’ ‘ವರ್ಷಕ್ಕೆ ಎಷ್ಟು ಸಲ ನೀವು ಈ ಸ್ಮರಣೆನ ಆಚರಿಸ್ತೀರ?’ ‘ನಿಮ್ಮ ಕೂಟಗಳು ಇದೇ ತರ ನಡಿಯುತ್ತಾ?’ ಇದನ್ನೆಲ್ಲ ಸ್ಮರಣೆಯ ಭಾಷಣದಲ್ಲಿ ಹೇಳಿದ್ರೂ ಅವ್ರಿಗೆ ಈ ವಿಷ್ಯದ ಬಗ್ಗೆ ಇನ್ನೂ ಜಾಸ್ತಿ ತಿಳ್ಕೊಬೇಕು ಅಂತ ಅನಿಸಬಹುದು. ಇಂಥ ಕೆಲವು ಪ್ರಶ್ನೆಗಳಿಗೆ jw.orgನಲ್ಲಿರೋ “ಯೇಸುವಿನ ಮರಣದ ಸ್ಮರಣೆಯನ್ನ ಯೆಹೋವನ ಸಾಕ್ಷಿಗಳು ಯಾಕೆ ಬೇರೆ ತರಾನೇ ಮಾಡ್ತಾರೆ?” ಅನ್ನೋ ಲೇಖನದಲ್ಲಿ ಉತ್ರ ಇದೆ. “ಒಳ್ಳೇ ಮನಸ್ಸಿನ” ಜನ್ರು ಸ್ಮರಣೆಯಿಂದ ಪ್ರಯೋಜನ ಪಡ್ಕೊಬೇಕು ಅನ್ನೋದೆ ನಮ್ಮಾಸೆ. (ಅ. ಕಾ. 13:48) ಅದಕ್ಕೇ ಅವರು ಸ್ಮರಣೆಗೆ ಬರೋಕೆ ಮುಂಚೆ ಮತ್ತು ಬಂದ್ಮೇಲೆ ಏನೇ ಪ್ರಶ್ನೆ ಕೇಳಿದ್ರೂ ಉತ್ರ ಕೊಡೋಕೆ ತಯಾರಾಗಿ ಇರ್ತೀವಿ.

ನಿಷ್ಕ್ರಿಯರಿಗೆ ಸಹಾಯ ಮಾಡಿ

17. ಯೆಹೋವನಿಂದ ದೂರ ಹೋಗಿರೋ ನಿಷ್ಕ್ರಿಯರಿಗೆ ಹಿರಿಯರು ಹೇಗೆ ಸಹಾಯ ಮಾಡಬಹುದು? (ಯೆಹೆಜ್ಕೇಲ 34:12, 16)

17 ಹಿರಿಯರೇ, ಯೆಹೋವನಿಂದ ದೂರ ಹೋಗಿರೋ ನಿಷ್ಕ್ರಿಯರಿಗೆ ಸ್ಮರಣೆ ಸಮಯದಲ್ಲಿ ನೀವು ಹೇಗೆ ಸಹಾಯ ಮಾಡಬಹುದು? ನೀವು ಅವ್ರನ್ನ ಎಷ್ಟು ಪ್ರೀತಿಸ್ತೀರ ಅಂತ ತೋರಿಸಿ. (ಯೆಹೆಜ್ಕೇಲ 34:12, 16 ಓದಿ.) ಅವ್ರನ್ನ ತಪ್ಪದೆ ಸ್ಮರಣೆಗೆ ಕರಿಯೋಕೆ ನಿಮ್ಮಿಂದಾದ ಎಲ್ಲ ಪ್ರಯತ್ನ ಮಾಡಿ. ‘ನಿಮಗೆ ಸಹಾಯ ಮಾಡೋಕೆ ನಮಗೆ ತುಂಬ ಆಸೆ ಇದೆ’ ಅಂತ ಹೇಳಿ. ಅವರು ಸ್ಮರಣೆಗೆ ಬಂದಾಗ ಪ್ರೀತಿಯಿಂದ ಅಪ್ಕೊಂಡು ಅವ್ರನ್ನ ಸ್ವಾಗತಿಸಿ. ಸ್ಮರಣೆ ಆದ್ಮೇಲೂ ಅವ್ರ ಜೊತೆ ಆಗಾಗ ಮಾತಾಡ್ತಾ ಇರಿ. ಅವರು ಯೆಹೋವನ ಹತ್ರ ವಾಪಸ್‌ ಬರೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ.—1 ಪೇತ್ರ 2:25.

18. ನಿಷ್ಕ್ರಿಯರಿಗೆ ಸಭೆಯವರು ಹೇಗೆ ಸಹಾಯ ಮಾಡಬಹುದು? (ರೋಮನ್ನರಿಗೆ 12:10)

18 ಸ್ಮರಣೆ ಸಮಯದಲ್ಲಿ ಹಿರಿಯರಷ್ಟೇ ಅಲ್ಲ, ಸಭೆಲಿರೋ ಸಹೋದರ ಸಹೋದರಿಯರೂ ನಿಷ್ಕ್ರಿಯರಿಗೆ ಸಹಾಯ ಮಾಡಬಹುದು. ಅದು ಹೇಗೆ? ಅವ್ರ ಮೇಲೆ ನಿಮಗೆಷ್ಟು ಪ್ರೀತಿ, ಕಾಳಜಿ ಇದೆ ಅಂತ ತೋರಿಸಿ. ಅವ್ರ ಜೊತೆ ಗೌರವದಿಂದ ಮಾತಾಡಿ. (ರೋಮನ್ನರಿಗೆ 12:10 ಓದಿ.) ಕೂಟಕ್ಕೆ ಬರುವಾಗ ಯಾರಾದ್ರೂ ಏನಾದ್ರೂ ಅಂದ್ಕೊಳ್ತಾರೋ ಅನ್ನೋ ಭಯ ಅವ್ರಿಗೆ ಒಳಗೊಳಗೇ ಇರುತ್ತೆ. e ಹಾಗಾಗಿ ಮುಜುಗರ ಆಗೋ ತರ ಪ್ರಶ್ನೆ ಕೇಳಬೇಡಿ. ಅವ್ರ ಮನಸ್ಸಿಗೆ ನೋವಾಗೋ ತರ ಮಾತಾಡಬೇಡಿ. (1 ಥೆಸ. 5:11) ಅವರೂ ನಮ್ಮ ಸಹೋದರ ಸಹೋದರಿಯರೇ ಅನ್ನೋದನ್ನ ನೆನಪಿಡಿ. ಮತ್ತೆ ಅವ್ರ ಜೊತೆ ಸೇರ್ಕೊಂಡು ಯೆಹೋವನನ್ನ ಒಟ್ಟಾಗಿ ಆರಾಧಿಸುವಾಗ ಎಷ್ಟು ಖುಷಿಯಾಗುತ್ತೆ ಅಂತ ಯೋಚಿಸಿ.—ಕೀರ್ತ. 119:176; ಅ. ಕಾ. 20:35.

19. ಯೇಸುವಿನ ಮರಣದ ಸ್ಮರಣೆ ಮಾಡೋದ್ರಿಂದ ಏನೆಲ್ಲಾ ಪ್ರಯೋಜನ ಸಿಗುತ್ತೆ?

19 ಪ್ರತಿ ವರ್ಷ ಸ್ಮರಣೆ ಕಾರ್ಯಕ್ರಮ ಮಾಡೋಕೆ ಯೇಸು ನಮಗೆ ಹೇಳಿದ್ದಾನೆ. ಅದಕ್ಕೆ ನಾವು ಆತನಿಗೆ ತುಂಬ ಥ್ಯಾಂಕ್ಸ್‌ ಹೇಳಬೇಕು. ಯಾಕಂದ್ರೆ ಯೇಸು ಕೊಟ್ಟ ಬಿಡುಗಡೆ ಬೆಲೆಯಿಂದ ನಮಗಷ್ಟೇ ಅಲ್ಲ, ಎಲ್ರಿಗೂ ಪ್ರಯೋಜನ ಆಗ್ತಿದೆ. (ಯೆಶಾ. 48:17, 18) ಯೆಹೋವ ಮತ್ತು ಯೇಸು ಮಾಡಿರೋ ತ್ಯಾಗ ಎಷ್ಟು ದೊಡ್ಡದು ಅಂತ ತಿಳ್ಕೊಂಡಾಗ ಅವ್ರ ಮೇಲಿರೋ ಪ್ರೀತಿ ಜಾಸ್ತಿಯಾಗುತ್ತೆ. ಸಹೋದರ ಸಹೋದರಿಯರ ಮಧ್ಯ ಇರೋ ಬಾಂಧವ್ಯನೂ ಗಟ್ಟಿಯಾಗುತ್ತೆ. ಯೇಸುವಿನ ಬಿಡುಗಡೆ ಬೆಲೆಯಿಂದ ನಮ್ಮೆಲ್ರಿಗೂ ಆಶೀರ್ವಾದ ಸಿಕ್ಕಿದೆ. ಅದನ್ನ ಬೇರೆಯವರೂ ಪಡ್ಕೊಳ್ಳೋಕೆ ನಾವು ಸಹಾಯ ಮಾಡಬೇಕು. ಹಾಗಾಗಿ ಯೇಸುವಿನ ಮರಣದ ಸ್ಮರಣೆಗೆ ಈಗಿಂದನೇ ತಯಾರಾಗೋಣ. ಹೀಗೆ ನಮ್ಮ ಜೀವನದಲ್ಲಿ ಆ ದಿನ ಎಷ್ಟು ಪ್ರಾಮುಖ್ಯ ಅಂತ ತೋರಿಸೋಣ!

ನಾವು ಹೇಗೆ . . .

  • ಈಗಿಂದನೇ ಸ್ಮರಣೆಗೆ ತಯಾರಾಗಬಹುದು?

  • ಬೇರೆಯವರು ಸ್ಮರಣೆಯಿಂದ ಪ್ರಯೋಜನ ಪಡ್ಕೊಳ್ಳೋಕೆ ಸಹಾಯ ಮಾಡಬಹುದು?

  • ಯೆಹೋವನಿಂದ ದೂರ ಹೋಗಿರೋ ನಿಷ್ಕ್ರಿಯರಿಗೆ ಸಹಾಯ ಮಾಡಬಹುದು?

ಗೀತೆ 149 ವಿಮೋಚನಾ ಮೌಲ್ಯಕ್ಕಾಗಿ ಕೃತಜ್ಞತೆ

a ಇಲ್ಲಿ ಕೊಟ್ಟಿರೋ ವಿಡಿಯೋಗಳನ್ನ ಮತ್ತು ಲೇಖನಗಳನ್ನ ಹುಡುಕೋಕೆ jw.orgನಲ್ಲಿ ಹುಡುಕಿ ಅನ್ನೋ ಟ್ಯಾಬಲ್ಲಿ ವಿಷ್ಯನ ಟೈಪ್‌ ಮಾಡಿ.

b ಏಪ್ರಿಲ್‌ 2021ರ ಕಾವಲಿನಬುರುಜುವಿನಲ್ಲಿರೋ “ವಾಚಕರಿಂದ ಪ್ರಶ್ನೆಗಳು” ನೋಡಿ.

e ಸಭೆಯವರು ಹೇಗೆ ನಡ್ಕೊಂಡ್ರು?” ಅನ್ನೋ ಚಿತ್ರ ಮತ್ತು ಚೌಕ ನೋಡಿ. ನಿಷ್ಕ್ರಿಯನಾಗಿರೋ ಒಬ್ಬ ಸಹೋದರ ರಾಜ್ಯ ಸಭಾಗೃಹಕ್ಕೆ ಹೋಗೋಕೆ ಹಿಂದೆಮುಂದೆ ನೋಡ್ತಿದ್ದಾನೆ. ಆದ್ರೆ ಒಳಗೆ ಹೋದ್ಮೇಲೆ ಸಹೋದರರು ಅವನನ್ನ ಪ್ರೀತಿಯಿಂದ ಮಾತಾಡಿಸ್ತಿದ್ದಾರೆ.

f ಚಿತ್ರ ವಿವರಣೆ: ಒಂದು ದೇಶದಲ್ಲಿರೋ ಯೆಹೋವನ ಸಾಕ್ಷಿಗಳು ಸ್ಮರಣೆ ಕಾರ್ಯಕ್ರಮ ಮಾಡ್ತಿದ್ದಾರೆ, ಅದೇ ಸಮಯದಲ್ಲಿ ಇನ್ನೊಂದು ದೇಶದಲ್ಲಿರೋ ಯೆಹೋವನ ಸಾಕ್ಷಿಗಳು ಆ ಕಾರ್ಯಕ್ರಮಕ್ಕೆ ಬೇಕಾದ ತಯಾರಿ ಮಾಡ್ತಿದ್ದಾರೆ.