ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ ದೇವರ ತರ ನೀವೂ ಸ್ತ್ರೀಯರನ್ನ ಗೌರವಿಸಿ

ಯೆಹೋವ ದೇವರ ತರ ನೀವೂ ಸ್ತ್ರೀಯರನ್ನ ಗೌರವಿಸಿ

ಯೆಹೋವನ ಮೇಲೆ ನಂಬಿಕೆ ಇರೋ ಸ್ತ್ರೀಯರ ಜೊತೆ ಆತನನ್ನ ಆರಾಧಿಸೋ ಸುಯೋಗ ನಮ್ಮೆಲ್ರಿಗೂ ಇದೆ. ಈ ಸಹೋದರಿಯರು ಎಷ್ಟೇ ಕಷ್ಟ ಆದ್ರೂ ನಿಯತ್ತಿಂದ ಯೆಹೋವನ ಸೇವೆ ಮಾಡ್ತಾರೆ! a ನಮಗೆ ಅವ್ರಂದ್ರೆ ತುಂಬ ಇಷ್ಟ, ನಾವು ಅವ್ರನ್ನ ಮೆಚ್ಕೊಳ್ತೀವಿ. ಅದ್ರಲ್ಲೂ ಸಹೋದರರು ಅವ್ರ ಜೊತೆ ಚೆನ್ನಾಗಿ ನಡ್ಕೊಳ್ಳೋಕೆ, ಅವ್ರನ್ನ ಗೌರವಿಸೋಕೆ ತುಂಬ ಪ್ರಯತ್ನ ಮಾಡ್ತಾರೆ. ಆದ್ರೆ ಅಪರಿಪೂರ್ಣತೆ ಮತ್ತು ಬೇರೆ ಕಾರಣಗಳಿಂದಾಗಿ ಅದನ್ನ ಮಾಡೋಕೆ ಕೆಲವೊಮ್ಮೆ ಕಷ್ಟ ಆಗಿಬಿಡುತ್ತೆ. ಅಂಥ ಕೆಲವು ಕಾರಣಗಳು ಯಾವುದು ಅಂತ ನಾವೀಗ ನೋಡೋಣ.

ಕೆಲವು ಸಂಸ್ಕೃತಿಯಲ್ಲಿ ಸ್ತ್ರೀಯರನ್ನ ತುಂಬಾ ಕೀಳಾಗಿ ನೋಡ್ತಾರೆ. ಉದಾಹರಣೆಗೆ ಬೊಲಿವಿಯದಲ್ಲಿ ಸಂಚರಣ ಮೇಲ್ವಿಚಾರಕರಾಗಿ ಕೆಲಸ ಮಾಡ್ತಿರೋ ಸಹೋದರಾ ಹೆನ್ಸ್‌ ಏನು ಹೇಳ್ತಾರಂದ್ರೆ “ಕೆಲವು ಸಂಸ್ಕೃತಿಯಲ್ಲಿ ಹುಡುಗರಿಗೆ ಸ್ತ್ರೀಯರಿಗಿಂತ ಅವರೇ ಮೇಲು ಅಂತ ಹೇಳಿ ಕೊಟ್ಟಿರೋದ್ರಿಂದ ಅವರು ಸ್ತ್ರೀಯರನ್ನ ತುಂಬ ಕೀಳಾಗಿ ನೋಡ್ತಾರೆ.” ತೈವಾನಲ್ಲಿರೋ ಶೆಂಗ್ಸಿಯನ್‌ ಅನ್ನೋ ಒಬ್ಬ ಹಿರಿಯ ಹೀಗೆ ಹೇಳ್ತಾರೆ: “ನಾನಿರೋ ಕಡೆ ಸ್ತ್ರೀಯರು ಗಂಡಸರ ಕೆಲಸದಲ್ಲಿ ತಲೆ ಹಾಕಬಾರದು ಅಂತ ತುಂಬ ಜನ ಅಂದ್ಕೊಳ್ತಾರೆ. ಒಂದುವೇಳೆ ಒಬ್ಬ ಪುರುಷ ಯಾವುದಾದ್ರೂ ವಿಷ್ಯದ ಬಗ್ಗೆ ಸ್ತ್ರೀಯರು ಕೊಟ್ಟ ಸಲಹೆಗಳನ್ನ ಬೇರೆ ಗಂಡಸರ ಹತ್ರ ಹೇಳಿದ್ರೆ ಅವರು ಅವನನ್ನ ತುಂಬ ಕೀಳಾಗಿ ನೋಡ್ತಾರೆ.” ಇನ್ನು ಕೆಲವು ಗಂಡಸ್ರು ಸ್ತ್ರೀಯರ ಬಗ್ಗೆ ತುಂಬ ಅಸಹ್ಯವಾದ ಜೋಕ್ಸ್‌ಗಳನ್ನ ಮಾಡ್ತಾರೆ.

ಒಬ್ಬ ಪುರುಷ ಯಾವುದೇ ಸಂಸ್ಕೃತಿಯಲ್ಲಿ ಬೆಳೆದಿದ್ರೂ ಅವನು ಬದಲಾಗಬಹುದು. ಅಂದ್ರೆ ಸ್ತ್ರೀಯರಿಗಿಂತ ತಾನೇ ಮೇಲು ಅನ್ನೋ ಯೋಚ್ನೆಯಿಂದ ಹೊರಗೆ ಬರಬಹುದು. (ಎಫೆ. 4:22-24) ಅದಕ್ಕೆ ಅವನು ಯೆಹೋವನ ತರ ನಡ್ಕೋಬೇಕು. ಹಾಗಾಗಿ ನಾವೀಗ ಯೆಹೋವ ಸ್ತ್ರೀಯರ ಜೊತೆ ಹೇಗೆ ನಡ್ಕೊಳ್ತಾನೆ? ಸ್ತ್ರೀಯರ ಜೊತೆ, ಯೆಹೋವನ ತರ ನಡ್ಕೊಳೋಕೆ ಸಹೋದರರು ಏನು ಮಾಡಬೇಕು? ಮತ್ತು ಹಿರಿಯರು ಸಹೋದರಿಯರಿಗೆ ಹೇಗೆ ಗೌರವ ತೋರಿಸ್ತಾರೆ? ಅಂತ ನೋಡೋಣ.

ಯೆಹೋವ ಸ್ತ್ರೀಯರ ಜೊತೆ ಹೇಗೆ ನಡ್ಕೊಳ್ತಾನೆ?

ಸ್ತ್ರೀಯರನ್ನ ಗೌರವಿಸೋದ್ರಲ್ಲಿ ಯೆಹೋವನೇ ಎತ್ತಿದ ಕೈ. ಆತನು ಅನುಕಂಪ ತೋರಿಸೋ ಒಳ್ಳೆ ಅಪ್ಪ. ಅಷ್ಟೇ ಅಲ್ಲ ತನ್ನ ಮಕ್ಕಳಂದ್ರೆ ಆತನಿಗೆ ತುಂಬ ಪ್ರೀತಿ. (ಯೋಹಾ. 3:16) ಅದ್ರಲ್ಲೂ ಆತನ ಮೇಲೆ ತುಂಬ ನಂಬಿಕೆ ಇಟ್ಟು ಸೇವೆ ಮಾಡೋ ಸ್ತ್ರೀಯರಂದ್ರೆ ಪಂಚಪ್ರಾಣ. ಅದಕ್ಕೇ ಆತನು ಸ್ತ್ರೀಯರನ್ನ ಗೌರವಿಸ್ತಾನೆ. ಅದ್ರ ಬಗ್ಗೆ ಈಗ ನೋಡೋಣ.

ಯೆಹೋವ ಯಾವತ್ತೂ ಭೇದಭಾವ ಮಾಡಲ್ಲ. ಯೆಹೋವ ತನ್ನನ್ನ ಹೋಲೋ ರೀತಿಯಲ್ಲಿ ಪುರುಷರನ್ನ ಮತ್ತು ಸ್ತ್ರೀಯರನ್ನ ಸೃಷ್ಟಿ ಮಾಡಿದ್ದಾನೆ. (ಆದಿ. 1:27) ಆತನು ಅವರನ್ನ ಸೃಷ್ಟಿ ಮಾಡುವಾಗ ಸ್ತ್ರೀಯರಿಗಿಂತ ಪುರುಷರಿಗೆ ಜಾಸ್ತಿ ಜ್ಞಾನ, ಬುದ್ಧಿ ಮತ್ತು ಸಾಮರ್ಥ್ಯ ಕೊಟ್ಟಿಲ್ಲ ಅಥವಾ ಆತನು ಸ್ತ್ರೀಯರಿಗಿಂತ ಪುರುಷರೇ ಮೇಲು ಅಂತ ನೆನಸಲ್ಲ. (2 ಪೂರ್ವ. 19:7) ಯೆಹೋವ ಇಬ್ರಿಗೂ ಒಂದೇ ತರ ಬುದ್ಧಿ-ಶಕ್ತಿ ಕೊಟ್ಟಿದ್ದಾನೆ. ಇದ್ರಿಂದ ಅವ್ರಿಗೆ ಬೈಬಲ್‌ ಸತ್ಯಗಳನ್ನ ಅರ್ಥಮಾಡ್ಕೊಳ್ಳೋಕೆ ಆಗ್ತಿದೆ ಮತ್ತು ಯೆಹೋವನಲ್ಲಿರೋ ಗುಣಗಳನ್ನ ಬೆಳೆಸ್ಕೊಳ್ಳೋಕೆ ಆಗ್ತಿದೆ. ಆತನು ಗಂಡಸ್ರಿಗಾಗಲಿ, ಹೆಂಗಸ್ರಿಗಾಗಲಿ ಭೇದಭಾವ ಮಾಡಲ್ಲ. ಇಬ್ರೂ ಯೆಹೋವನ ಮೇಲೆ ನಂಬಿಕೆ ಇಟ್ರೆ ಇದೇ ಭೂಮಿಲಿ ಶಾಶ್ವತವಾಗಿ ಜೀವಿಸೋಕೆ ಅಥವಾ ಸ್ವರ್ಗದಲ್ಲಿ ಯೇಸು ಜೊತೆ ರಾಜರಾಗಿ ಮತ್ತು ಪುರೋಹಿತರಾಗಿ ಆಳೋಕೆ ಅವಕಾಶ ಕೊಡ್ತಾನೆ.

ಯೆಹೋವ ಚೆನ್ನಾಗಿ ಕೇಳಿಸ್ಕೊಳ್ತಾನೆ. ಸ್ತ್ರೀಯರಿಗೆ ಹೇಗನಿಸುತ್ತೆ, ಅವ್ರ ಸಮಸ್ಯೆಗಳೇನು ಅಂತ ತಿಳ್ಕೊಳೋಕೆ ಯೆಹೋವ ಬಯಸ್ತಾನೆ. ಅದಕ್ಕೇ ಹನ್ನ ಮತ್ತು ರಾಹೇಲ್‌ ಮಾಡಿದ ಪ್ರಾರ್ಥನೆಯನ್ನ ಯೆಹೋವ ಕೇಳಿಸ್ಕೊಂಡು ಅದಕ್ಕೆ ಉತ್ರ ಕೊಟ್ಟನು. (ಆದಿ. 30:22; 1 ಸಮು. 1:10, 11, 19, 20) ಅಷ್ಟೇ ಅಲ್ಲ ಸ್ತ್ರೀಯರ ಮಾತನ್ನ ಕೇಳಿದ ಪುರುಷರ ಬಗ್ಗೆ ತನ್ನ ವಾಕ್ಯವಾದ ಬೈಬಲಲ್ಲಿ ಬರೆಸಿದನು. ಉದಾಹರಣೆಗೆ, ಅಬ್ರಹಾಮ ತನ್ನ ಹೆಂಡತಿ ಸಾರಳ ಮಾತನ್ನ ಕೇಳಬೇಕು ಅಂತ ಯೆಹೋವ ಅವನಿಗೆ ಹೇಳಿದನು. (ಆದಿ. 21:12-14) ರಾಜ ದಾವೀದನೂ ಅಬೀಗೈಲ್‌ ಹೇಳಿದ ಮಾತನ್ನ ಕೇಳಿದ. ಅಷ್ಟೇ ಅಲ್ಲ ಯೆಹೋವನೇ ಅವಳನ್ನ ಕಳಿಸಿದ್ದು ಅಂತ ಅರ್ಥಮಾಡ್ಕೊಂಡ. (1 ಸಮು. 25:32-35) ಯೆಹೋವನ ಗುಣಗಳನ್ನ ತೋರಿಸಿದ ಯೇಸುನೂ ತನ್ನ ತಾಯಿಯಾದ ಮರಿಯಳ ಮಾತನ್ನ ಕೇಳ್ತಿದ್ದನು. (ಯೋಹಾ. 2:3-10) ಈ ಉದಾಹರಣೆಗಳಿಂದ ನಮಗೆ ಏನು ಅರ್ಥ ಆಗುತ್ತೆ? ಯೆಹೋವ ಸ್ತ್ರೀಯರನ್ನ ಗೌರವಿಸ್ತಾನೆ, ಅವರು ಹೇಳೋದನ್ನ ಚೆನ್ನಾಗಿ ಕೇಳಿಸ್ಕೊಳ್ತಾನೆ.

ಯೆಹೋವ ಸ್ತ್ರೀಯರನ್ನ ನಂಬ್ತಾನೆ. ಯೆಹೋವ ದೇವರಿಗೆ ಹವ್ವಳ ಮೇಲೆ ತುಂಬಾನೇ ನಂಬಿಕೆ ಇತ್ತು. ಅದಕ್ಕೇ ಇಡೀ ಭೂಮಿಯನ್ನ ನೋಡ್ಕೊಳ್ಳೋಕೆ ಅವಳಿಗೂ ಹೇಳಿದನು. (ಆದಿ. 1:28) ಹೀಗೆ ಯೆಹೋವ ಹವ್ವಳನ್ನ ಆದಾಮನಿಗೆ ಸೇವಕಿಯಾಗಿ ಅಲ್ಲ, ಸಹಾಯಕಿಯಾಗಿ ಕೊಟ್ಟನು. ಯೆಹೋವ ಪ್ರವಾದಿನಿಯರಾದ ಹುಲ್ದ ಮತ್ತು ದೆಬೋರಳನ್ನೂ ನಂಬಿದನು. ಇವರು ಜನ್ರಿಗೆ ಸಲಹೆ ಕೊಡ್ತಿದ್ರು, ಅಷ್ಟೇ ಅಲ್ಲ ಹುಲ್ದ ಒಬ್ಬ ರಾಜನಿಗೆ ಮತ್ತು ದೆಬೋರ ಒಬ್ಬ ನ್ಯಾಯಾಧೀಶನಿಗೆ ಸಲಹೆ ಕೊಟ್ಟರು. (ನ್ಯಾಯ. 4:4-9; 2 ಅರ. 22:14-20) ಇವತ್ತೂ ಯೆಹೋವ ಸ್ತ್ರೀಯರನ್ನ ನಂಬಿ ಅವ್ರಿಗೆ ಕೆಲಸಗಳನ್ನ ವಹಿಸಿಕೊಟ್ಟಿದ್ದಾನೆ. ಹಾಗಾಗಿ ಇವರು ಪ್ರಚಾರಕರಾಗಿ, ಪಯನೀಯರರಾಗಿ, ಮಿಷನರಿಗಳಾಗಿ ಸೇವೆ ಮಾಡ್ತಾರೆ. ಅಷ್ಟೇ ಅಲ್ಲ ರಾಜ್ಯ ಸಭಾಗೃಹ ಮತ್ತು ಬ್ರಾಂಚ್‌ ನಿರ್ಮಾಣ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡ್ತಾರೆ. ಕೆಲವರು ಬೆತೆಲ್‌ಗಳಲ್ಲಿ, ಇನ್ನು ಕೆಲವರು ಭಾಷಾಂತರ ಕಚೇರಿಗಳಲ್ಲಿ ಕೆಲಸ ಮಾಡ್ತಾರೆ. ಯೆಹೋವ ತನ್ನ ಕೆಲಸ ಮಾಡೋಕೆ ಸ್ತ್ರೀಯರ ಒಂದು ದೊಡ್ಡ ಸಮೂಹನೇ ಬಳಸ್ತಿದ್ದಾನೆ. (ಕೀರ್ತ. 68:11) ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಯೆಹೋವ ಯಾವತ್ತೂ ಸ್ತ್ರೀಯರನ್ನ ಕೀಳಾಗಿ ನೋಡಲ್ಲ. ಅವರು ಕೈಲಾಗದವರು ಅಂತ ನೆನಸಲ್ಲ.

ಸ್ತ್ರೀಯರ ಜೊತೆ, ಯೆಹೋವನ ತರ ನಡ್ಕೊಳ್ಳೋಕೆ ಸಹೋದರರು ಏನು ಮಾಡಬೇಕು?

ಸಹೋದರರೇ, ಯೆಹೋವ ಸ್ತ್ರೀಯರ ಜೊತೆ ನಡ್ಕೊಳೋ ತರ ನೀವು ನಡ್ಕೋಬೇಕು. ಅದಕ್ಕೇ ನೀವು ಯೋಚಿಸೋ ಮತ್ತು ನಡ್ಕೊಳ್ಳೋ ರೀತಿನ ಪರೀಕ್ಷಿಸಬೇಕು. ಅದನ್ನ ಮಾಡೋಕೆ ಸಹಾಯ ಬೇಕು. ಉದಾಹರಣೆಗೆ, ಎಕ್ಸರೇ ಮಾಡಿದಾಗ ಒಬ್ಬ ವ್ಯಕ್ತಿ ಆರೋಗ್ಯವಾಗಿ ಇದ್ದಾನಾ ಇಲ್ವಾ ಅಂತ ತಿಳ್ಕೊಳ್ಳೋಕೆ ಆಗುತ್ತೆ. ಅದೇ ತರ ಒಬ್ಬ ಸಹೋದರ ಸ್ತ್ರೀಯರ ಬಗ್ಗೆ ತಪ್ಪಾಗಿ ಯೋಚ್ನೆ ಮಾಡ್ತಿದ್ದಾನಾ, ಇಲ್ವಾ ಅಂತ ತಿಳ್ಕೊಳಕ್ಕೆ ಒಳ್ಳೇ ಸ್ನೇಹಿತರು ಮತ್ತು ದೇವರ ವಾಕ್ಯ ಸಹಾಯ ಮಾಡುತ್ತೆ. ಆದ್ರೆ ಆ ಸಹಾಯ ಪಡ್ಕೊಳ್ಳೋಕೆ ನಾವೇನು ಮಾಡಬೇಕು ಅಂತ ಈಗ ನೋಡೋಣ.

ಒಬ್ಬ ಒಳ್ಳೆ ಸ್ನೇಹಿತನನ್ನ ಕೇಳಿ ನೋಡಿ. (ಜ್ಞಾನೋ. 18:17) ನಿಮಗೆ ಕಾಳಜಿ ತೋರಿಸೋ, ಸರಿಯಾಗಿ ಯೋಚಿಸೋ ಮತ್ತು ನೀವು ತುಂಬ ನಂಬೋ ಒಬ್ಬ ಒಳ್ಳೇ ಫ್ರೆಂಡ್‌ ಇದ್ರೆ ಅವನತ್ರ ಹೀಗೆ ಕೇಳಿ ನೋಡಿ: ನಾನು ಸಹೋದರಿಯರ ಹತ್ರ ಹೇಗೆ ನಡ್ಕೊಳ್ತಿದ್ದೀನಿ? ನಾನವರಿಗೆ ಗೌರವ ಕೊಡ್ತಿದ್ದೀನಿ ಅನ್ನೋದು ಅವ್ರಿಗೆ ಗೊತ್ತಾಗ್ತಿದೆಯಾ? ನಾನು ಅವ್ರ ಜೊತೆ ನಡ್ಕೊಳೋ ರೀತಿಲಿ ಏನಾದ್ರೂ ಬದಲಾವಣೆ ಮಾಡ್ಕೊಬೇಕಾ? ಒಂದುವೇಳೆ ನಿಮ್ಮ ಫ್ರೆಂಡ್‌ ‘ನೀನು ಬದಲಾವಣೆಗಳನ್ನ ಮಾಡ್ಕೋಬೇಕು’ ಅಂತ ಹೇಳಿದ್ರೆ ‘ನಾನು ಆ ತರ ಇಲ್ಲವೇ ಇಲ್ಲ’ ಅಂತ ವಾದಕ್ಕಿಳಿಬೇಡಿ ಅಥವಾ ಬೇಜಾರಾಗಬೇಡಿ, ಬದಲಾವಣೆ ಮಾಡ್ಕೊಳ್ಳಿ.

ದೇವರ ವಾಕ್ಯನ ಚೆನ್ನಾಗಿ ಓದಿ ಅರ್ಥ ಮಾಡ್ಕೊಳ್ಳಿ. ಸ್ತ್ರೀಯರ ಬಗ್ಗೆ ನಾವು ಹೇಗೆ ಯೋಚಿಸ್ತಿದ್ದೀವಿ, ಅವ್ರ ಜೊತೆ ಹೇಗೆ ನಡ್ಕೊಳ್ತಿದ್ದೀವಿ ಅಂತ ಪರೀಕ್ಷೆ ಮಾಡ್ಕೊಳ್ಳೋಕೆ ದೇವರ ವಾಕ್ಯ ನಮಗೆ ಸಹಾಯ ಮಾಡುತ್ತೆ. (ಇಬ್ರಿ. 4:12) ನಾವು ಬೈಬಲಲ್ಲಿ ಸ್ತ್ರೀಯರ ಜೊತೆ ಚೆನ್ನಾಗಿ ನಡ್ಕೊಂಡ ಮತ್ತು ನಡ್ಕೊಳ್ಳದೆ ಇರೋ ಪುರುಷರ ಬಗ್ಗೆ ಓದ್ತೀವಿ. ಆಗ ನಾವು ಯಾರ ತರ ಇದ್ದೀವಿ ಅಂತ ನಮ್ಮನ್ನೇ ಪರೀಕ್ಷೆ ಮಾಡ್ಕೊಳ್ಳೋಕೆ ಆಗುತ್ತೆ. ಆದ್ರೆ ಒಂದು ವಿಷ್ಯದಲ್ಲಿ ನಾವು ಎಚ್ಚರ ವಹಿಸಬೇಕು. ಅದೇನಂದ್ರೆ ನಮಗೆ ಸ್ತ್ರೀಯರ ಬಗ್ಗೆ ತಪ್ಪಾದ ನೋಟ ಇದ್ರೆ ಅದಕ್ಕೆ ಬೆಂಬಲಿಸೋ ಯಾವುದಾದ್ರೂ ಒಂದು ವಚನ ಹಿಡ್ಕೊಂಡು ಕೂರಬಾರದು. ಬದ್ಲಿಗೆ ಪುರುಷರು ಸ್ತ್ರೀಯರ ಜೊತೆ ಹೇಗೆ ನಡ್ಕೊಬೇಕು ಅಂತ ತಿಳಿಸೋ ವಚನಗಳನ್ನ ಹುಡುಕಬೇಕು. ಆಗ ಯೆಹೋವ ಸ್ತ್ರೀಯರ ಜೊತೆ ಹೇಗೆ ನಡ್ಕೊಳ್ತಾನೆ ಅಂತ ಗೊತ್ತಾಗುತ್ತೆ. ಉದಾಹರಣೆಗೆ 1 ಪೇತ್ರ 3:7ರಲ್ಲಿ “ಸ್ತ್ರೀಯರು ನಿಮಗಿಂತ ಬಲಹೀನರು, ನಾಜೂಕಾದ ಪಾತ್ರೆ” b ಅಂತ ಹೇಳುತ್ತೆ. ಅಂದ್ರೆ ಸ್ತ್ರೀಯರು ಪುರುಷರಿಗಿಂತ ತುಂಬಾ ಕೀಳು, ಕೈಲಾಗದವರು ಅಥವಾ ಬುದ್ಧಿ ಕಡಿಮೆ ಇರುವವರು ಅಂತನಾ? ಖಂಡಿತ ಇಲ್ಲ. ಗಲಾತ್ಯ 3:26-29ರಲ್ಲಿ ಯೆಹೋವ ಯೇಸುವಿನ ಜೊತೆ ಆಳ್ವಿಕೆ ಮಾಡೋಕೆ ಸ್ತ್ರೀಯರನ್ನೂ ಆರಿಸ್ಕೊಂಡಿದ್ದಾನೆ ಅಂತ ಪೇತ್ರ ಹೇಳಿದ. ಹಾಗಾಗಿ ಸ್ತ್ರೀಯರ ಜೊತೆ ಹೇಗೆ ನಡ್ಕೋಬೇಕು ಅಂತ ದೇವರ ವಾಕ್ಯದಿಂದ ಓದಿ ಅರ್ಥ ಮಾಡ್ಕೊಂಡ್ರೆ, ನಮ್ಮ ಫ್ರೆಂಡ್ಸ್‌ ಕೊಡೋ ಸಲಹೆಗಳನ್ನ ಪಾಲಿಸಿದ್ರೆ ಸ್ತ್ರೀಯರ ಜೊತೆ ಗೌರವದಿಂದ ನಡ್ಕೊಳ್ಳೋಕೆ ಆಗುತ್ತೆ.

ಹಿರಿಯರು ಸಹೋದರಿಯರಿಗೆ ಹೇಗೆ ಗೌರವ ತೋರಿಸ್ತಾರೆ?

ಸಹೋದರಿಯರಿಗೆ ಗೌರವ ತೋರಿಸೋದ್ರಲ್ಲಿ ಹಿರಿಯರು ಒಳ್ಳೇ ಮಾದರಿ. ಹಾಗಾಗಿ ಸಹೋದರರೇ ನೀವು ಅವರನ್ನ ನೋಡಿ ಕಲಿರಿ. ಈಗ ನಾವು ಹಿರಿಯರು ಸಹೋದರಿಯರಿಗೆ ಹೇಗೆಲ್ಲಾ ಗೌರವ ತೋರಿಸ್ತಾರೆ ಅಂತ ನೋಡೋಣ.

ಹಿರಿಯರು ಸಹೋದರಿಯರನ್ನ ಹೊಗಳ್ತಾರೆ. ಅಪೊಸ್ತಲ ಪೌಲ ಹಿರಿಯರಿಗೆ ಒಳ್ಳೇ ಮಾದರಿ. ಅವನು ರೋಮ್‌ನಲ್ಲಿದ್ದ ಸಭೆಗೆ ಪತ್ರ ಬರೆದಾಗ ಅಲ್ಲಿದ್ದ ಸಹೋದರಿಯರ ಬಗ್ಗೆ ಹೇಳಿ ಅವ್ರನ್ನ ಹೊಗಳಿದ. (ರೋಮ. 16:12) ಆ ಪತ್ರನ ಸಭೆಲಿ ಓದಿದಾಗ ಅಲ್ಲಿದ್ದ ಸಹೋದರಿಯರಿಗೆ ಎಷ್ಟು ಖುಷಿಯಾಗಿರಬೇಕು ಅಂತ ಸ್ವಲ್ಪ ಊಹಿಸಿ ನೋಡಿ. ಇವತ್ತೂ ಸಹೋದರಿಯರು ಎಷ್ಟೋ ತ್ಯಾಗಗಳನ್ನ ಮಾಡಿ ಯೆಹೋವನ ಸೇವೆ ಮಾಡ್ತಾರೆ ಮತ್ತು ಒಳ್ಳೇ ಗುಣಗಳನ್ನ ತೋರಿಸ್ತಾರೆ. ಇದನ್ನ ನೋಡಿ ಹಿರಿಯರು ಪೌಲನ ತರ ಹೊಗಳಿದಾಗ ಸಹೋದರಿಯರಿಗೆ ತುಂಬ ಖುಷಿಯಾಗುತ್ತೆ ಮತ್ತು ಅವ್ರಿಗೆ ತಮ್ಮನ್ನ ಗೌರವಿಸ್ತಿದ್ದಾರೆ ಅಂತ ಅನಿಸುತ್ತೆ. ಅಷ್ಟೇ ಅಲ್ಲ, ಯೆಹೋವನ ಸೇವೆ ಮಾಡೋಕೆ ಅವ್ರಿಗೆ ಇನ್ನೂ ಪ್ರೋತ್ಸಾಹ ಸಿಗುತ್ತೆ.—ಜ್ಞಾನೋ. 15:23.

ಹೊಗಳಿ

ಹಿರಿಯರೇ ನೀವು ಸಹೋದರಿಯರನ್ನ ಮನಸಾರೆ ಹೊಗಳಿ. ಅವರು ಮಾಡ್ತಿರೋ ಒಳ್ಳೇ ವಿಷ್ಯಗಳನ್ನ ಗುರುತಿಸಿ ಅವ್ರಿಗೆ ಹೇಳಿ. ಯಾಕೆ? ಜೆಸ್ಸಿಕಾ ಅನ್ನೋ ಸಹೋದರಿ ಏನು ಹೇಳ್ತಾರೆ ನೋಡಿ: “ಸಹೋದರರು ‘ನೀವು ಒಳ್ಳೇ ಕೆಲಸ ಮಾಡಿದ್ದೀರ’ ಅಂತ ಹೇಳುವಾಗ ನಮಗೆ ಖುಷಿಯಾಗುತ್ತೆ. ಆದ್ರೆ ನಾವು ಮಾಡ್ತಿರೋ ಒಳ್ಳೇ ವಿಷ್ಯಗಳನ್ನ ಗುರುತಿಸಿ ಅದನ್ನ ಹೇಳಿದಾಗ ಇನ್ನೂ ಖುಷಿಯಾಗುತ್ತೆ. ಉದಾಹರಣೆಗೆ, ಮೀಟಿಂಗ್‌ನಲ್ಲಿ ಗಲಾಟೆ ಮಾಡದೇ ಸುಮ್ನೆ ಕೂತ್ಕೊಳ್ಳೋಕೆ ನಿಮ್ಮ ಮಕ್ಕಳಿಗೆ ಕಲಿಸಿದ್ದೀರ ಅಂತ ಹೇಳಿದಾಗ ಖುಷಿಯಾಗುತ್ತೆ. ಅಷ್ಟೇ ಅಲ್ಲ ನಿಮ್ಮ ಬೈಬಲ್‌ ವಿದ್ಯಾರ್ಥಿಗಳನ್ನ ಕೂಟಕ್ಕೆ ಕರ್ಕೊಂಡು ಬರೋಕೆ ನೀವು ಸಮಯ ಕೊಡ್ತಿದ್ದೀರ, ತುಂಬ ಪ್ರಯತ್ನ ಹಾಕ್ತಿದ್ದೀರ ಅಂತ ಹೇಳಿದಾಗ ತುಂಬ ಖುಷಿಯಾಗುತ್ತೆ” ಅಂತ ಅವರು ಹೇಳ್ತಾರೆ. ಹೀಗೆ ಹಿರಿಯರು ಸಹೋದರಿಯರನ್ನ ಮನಸಾರೆ ಹೊಗಳಿದ್ರೆ ಸಭೆಲಿ ತಮಗೆ ಬೆಲೆ ಇದೆ ಅಂತ ಸಹೋದರಿಯರಿಗೆ ಅರ್ಥ ಆಗುತ್ತೆ.

ಹಿರಿಯರು, ಸಹೋದರಿಯರು ಮಾತಾಡುವಾಗ ಕೇಳಿಸ್ಕೊಳ್ತಾರೆ. ದೀನತೆ ಇರೋ ಹಿರಿಯರು ಎಲ್ಲನೂ ತಮಗೆ ಮಾತ್ರ ಗೊತ್ತು ಅಂತ ಅಂದ್ಕೊಳ್ಳಲ್ಲ. ಅದ್ರ ಬದ್ಲು ಸಹೋದರಿಯರ ಹತ್ರ ಸಲಹೆಗಳನ್ನ ಕೇಳ್ತಾರೆ, ಅವರು ಮಾತಾಡುವಾಗ ಗಮನ ಕೊಟ್ಟು ಕೇಳಿಸ್ಕೊಳ್ತಾರೆ. ಈ ತರ ಮಾಡೋದ್ರಿಂದ ಅವ್ರಿಗೂ ಪ್ರಯೋಜನ ಆಗುತ್ತೆ, ಸಹೋದರಿಯರಿಗೆ ಪ್ರೋತ್ಸಾಹ ಕೊಡೋಕೂ ಆಗುತ್ತೆ. ಅದು ಹೇಗೆ? ಬೆತೆಲ್‌ನಲ್ಲಿ ಸೇವೆ ಮಾಡ್ತಿರೋ ಜೆರಾರ್ಡೋ ಅನ್ನೋ ಒಬ್ಬ ಹಿರಿಯ ಏನು ಹೇಳ್ತಾರಂದ್ರೆ, “ಸಹೋದರಿಯರ ಹತ್ರ ಸಲಹೆಗಳನ್ನ ಕೇಳಿದ್ರಿಂದ ನನ್ನ ಕೆಲಸನ ಚೆನ್ನಾಗಿ ಮಾಡೋಕಾಯ್ತು. ಯಾಕಂದ್ರೆ ಅಲ್ಲಿರೋ ಸಹೋದರರಿಗಿಂತ ಸಹೋದರಿಯರಿಗೇ ಆ ಕೆಲಸದಲ್ಲಿ ಜಾಸ್ತಿ ಅನುಭವ ಇತ್ತು.” ಸಭೆಯಲ್ಲಿ ಹೆಚ್ಚಾಗಿ ಸಹೋದರಿಯರೇ ಪಯನೀಯರ್‌ ಸೇವೆ ಮಾಡೋದ್ರಿಂದ ಸುತ್ತಮುತ್ತ ಇರೋ ಜನ್ರ ಬಗ್ಗೆ ಅವ್ರಿಗೆ ಚೆನ್ನಾಗಿ ಗೊತ್ತಿರುತ್ತೆ. ಹಿರಿಯರಾಗಿ ಸೇವೆ ಮಾಡ್ತಿರೋ ಸಹೋದರ ಬ್ರೈಯನ್‌ “ಸಹೋದರಿಯರಿಗೆ ತುಂಬ ಒಳ್ಳೇ ಗುಣಗಳು ಮತ್ತು ಕೌಶಲಗಳು ಇರೋದ್ರಿಂದ ಸಂಘಟನೆಗೆ ಅವ್ರಿಂದ ತುಂಬ ಪ್ರಯೋಜನ ಆಗ್ತಿದೆ. ಹಾಗಾಗಿ ಅವ್ರ ಅನುಭವಗಳಿಂದ ಪ್ರಯೋಜನ ಪಡ್ಕೊಬೇಕು” ಅಂತ ಹೇಳ್ತಾರೆ.

ಕೇಳಿಸ್ಕೊಳ್ಳಿ

ಸಹೋದರಿಯರು ಸಲಹೆ ಕೊಟ್ಟಾಗ ವಿವೇಕ ಇರೋ ಹಿರಿಯರು ಹಿಂದೆಮುಂದೆ ಯೋಚ್ನೆ ಮಾಡದೇ ಅದನ್ನ ಬೇಡ ಅಂತ ಹೇಳಲ್ಲ. ಯಾಕೆ? “ಸಹೋದರಿಯರು ಕೊಡೋ ಸಲಹೆಗಳಿಂದ ಒಂದು ವಿಷ್ಯನ ಪೂರ್ತಿಯಾಗಿ ಅರ್ಥ ಮಾಡ್ಕೊಳ್ಳೋಕೆ ಆಗುತ್ತೆ. ಅಷ್ಟೇ ಅಲ್ಲ, ಬೇರೆಯವ್ರ ಭಾವನೆಗಳನ್ನೂ ಅರ್ಥ ಮಾಡ್ಕೊಳ್ಳೋಕೆ ಆಗುತ್ತೆ” ಅಂತ ಎಡ್ವರ್ಡ್‌ ಅನ್ನೋ ಒಬ್ಬ ಹಿರಿಯ ಹೇಳ್ತಾರೆ. (ಜ್ಞಾನೋ. 1:5) ಒಂದುವೇಳೆ ಸಹೋದರಿಯರು ಕೊಟ್ಟ ಸಲಹೆಗಳಿಂದ ಪ್ರಯೋಜನ ಆಗ್ಲಿಲ್ಲ ಅಂದ್ರುನೂ ಅವ್ರಿಗೆ ಥ್ಯಾಂಕ್ಸ್‌ ಹೇಳ್ತಾರೆ, ‘ನೀವು ತುಂಬ ಚೆನ್ನಾಗಿ ಯೋಚ್ನೆ ಮಾಡ್ತೀರ’ ಅಂತ ಹೊಗಳ್ತಾರೆ.

ಹಿರಿಯರು ಸಹೋದರಿಯರಿಗೆ ತರಬೇತಿ ಕೊಡ್ತಾರೆ. ವಿವೇಕ ಇರೋ ಹಿರಿಯರು ಸಭೆಲಿರೋ ಸಹೋದರಿಯರಿಗೆ ತರಬೇತಿ ಕೊಡೋಕೆ ಅವಕಾಶಕ್ಕಾಗಿ ಹುಡುಕ್ತಾರೆ. ಉದಾಹರಣೆಗೆ ಹಿರಿಯರು ಸಹೋದರಿಯರಿಗೆ ದೀಕ್ಷಾಸ್ನಾನ ತಗೊಂಡ ಸಹೋದರರು ಇಲ್ಲದೇ ಇರುವಾಗ ಕ್ಷೇತ್ರ ಸೇವಾ ಕೂಟವನ್ನ ಹೇಗೆ ನಡೆಸೋದು ಅಂತ ತರಬೇತಿ ಕೊಡಬಹುದು. ದೊಡ್ಡದೊಡ್ಡ ಮಷೀನ್‌ಗಳನ್ನ ಬಳಸೋದು ಹೇಗೆ ಅಂತ ಕಲಿಸಿಕೊಡಬಹುದು. ಆಗ ಕಟ್ಟಡ ನಿರ್ಮಾಣ ಪ್ರಾಜೆಕ್ಟ್‌ಗಳಲ್ಲಿ ಅವ್ರಿಗೆ ಚೆನ್ನಾಗಿ ಕೆಲಸ ಮಾಡೋಕೆ ಆಗುತ್ತೆ. ಅಷ್ಟೇ ಅಲ್ಲ, ಬೆತೆಲ್‌ನಲ್ಲೂ ಸಹೋದರರು ಬೇರೆಬೇರೆ ನೇಮಕವನ್ನ ಮಾಡೋಕೆ ಸಹೋದರಿಯರಿಗೆ ತರಬೇತಿ ಕೊಡ್ತಾರೆ. ಉದಾಹರಣೆಗೆ ಮೇಂಟೆನೆನ್ಸ್‌, ಪರ್ಚೇಸಿಂಗ್‌, ಅಕೌಂಟಿಂಗ್‌, ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಇಂಥ ಕೆಲಸಗಳನ್ನ ಮಾಡೋಕೆ ಹೇಳ್ಕೊಡ್ತಾರೆ. ಹೀಗೆ ಹಿರಿಯರು ಅವ್ರ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದಾರೆ ಅಂತ ತೋರಿಸ್ತಾರೆ.

ತರಬೇತಿ ಕೊಡಿ

ಹಿರಿಯರಿಂದ ತರಬೇತಿ ಪಡ್ಕೊಂಡ ಎಷ್ಟೋ ಸಹೋದರಿಯರು ಬೇರೆಯವ್ರಿಗೂ ಸಹಾಯ ಮಾಡಿದ್ದಾರೆ. ಉದಾಹರಣೆಗೆ ಕೆಲವರು ಕಟ್ಟಡ ನಿರ್ಮಾಣ ಪ್ರಾಜೆಕ್ಟ್‌ನಲ್ಲಿ ತರಬೇತಿ ಪಡ್ಕೊಂಡಿದ್ರಿಂದ ವಿಪತ್ತುಗಳಾದಾಗ ಮನೆ ಕಟ್ಟೋಕೆ ಸಹಾಯ ಮಾಡಿದ್ದಾರೆ. ಚೆನ್ನಾಗಿ ಸಾರ್ವಜನಿಕ ಸೇವೆ ಮಾಡೋಕೆ ಕಲ್ತಿರೋ ಸಹೋದರಿಯರು ಬೇರೆಯವ್ರಿಗೂ ಹೇಳ್ಕೊಟ್ಟಿದ್ದಾರೆ. ಹೀಗೆ ಹಿರಿಯರಿಂದ ತರಬೇತಿ ಸಿಕ್ಕಿದಾಗ ಸಹೋದರಿಯರಿಗೆ ಹೇಗನಿಸುತ್ತೆ? ಇದ್ರ ಬಗ್ಗೆ ಜೆನಿಫರ್‌ ಅನ್ನೋ ಸಹೋದರಿ ಏನು ಹೇಳ್ತಾರೆ ನೋಡಿ. “ನಾನೊಂದು ರಾಜ್ಯ ಸಭಾಗೃಹ ನಿರ್ಮಾಣ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡ್ತಿದ್ದಾಗ ಒಬ್ಬ ಸಹೋದರ ನನಗೆ ತರಬೇತಿ ಕೊಡೋಕೆ ಸಮಯ ಮಾಡ್ಕೊಂಡ್ರು. ನಾನು ಮಾಡ್ತಿದ್ದ ಕೆಲಸನ ಗಮನಿಸಿ ಹೊಗಳ್ತಿದ್ರು. ಅವ್ರ ಜೊತೆ ಕೆಲಸ ಮಾಡೋಕೆ ನನಗೆ ತುಂಬ ಖುಷಿ ಆಗ್ತಿತ್ತು. ಯಾಕಂದ್ರೆ ಅವರು ನನ್ನನ್ನ ನಂಬಿ ಕೆಲಸಗಳನ್ನ ಕೊಡ್ತಿದ್ರು. ಇದ್ರಿಂದ ನನ್ನಿಂದನೂ ಕೆಲಸ ಮಾಡೋಕೆ ಆಗುತ್ತೆ ಅನ್ನೋ ಧೈರ್ಯ ಬಂತು.”

ಸಹೋದರಿಯರನ್ನ ನಿಮ್ಮ ಕುಟುಂಬದವ್ರ ತರ ನೋಡಿ

ಯೆಹೋವ ದೇವರ ತರ ನಾವೂ ಸಹೋದರಿಯರನ್ನ ಪ್ರೀತಿಸೋದ್ರಿಂದ ಅವ್ರನ್ನ ನಮ್ಮ ಕುಟುಂಬದವ್ರ ತರ ನೋಡ್ತೀವಿ. (1 ತಿಮೊ. 5:1, 2) ಅವ್ರ ಜೊತೆ ಸೇರಿ ಯೆಹೋವನನ್ನ ಆರಾಧಿಸೋಕೆ ನಾವು ತುಂಬ ಹೆಮ್ಮೆ ಪಡ್ತೀವಿ. ನಾವು ಅವ್ರನ್ನ ಪ್ರೀತಿಸುವಾಗ, ಬೆಂಬಲಿಸುವಾಗ ಅವ್ರಿಗೆ ತುಂಬ ಖುಷಿಯಾಗುತ್ತೆ. ಅವ್ರನ್ನ ನೋಡಿ ನಮಗೂ ಖುಷಿಯಾಗುತ್ತೆ. “ನಾನು ಯೆಹೋವನ ಸಂಘಟನೆಯಲ್ಲಿ ಇರೋಕೆ ತುಂಬ ಖುಷಿಪಡ್ತೀನಿ. ಯಾಕಂದ್ರೆ ಇಲ್ಲಿರೋ ಸಹೋದರರು ನನಗೆ ಪ್ರೋತ್ಸಾಹ ಕೊಡ್ತಾರೆ” ಅಂತ ವೆನೆಸ್ಸಾ ಅನ್ನೋ ಸಹೋದರಿ ಹೇಳ್ತಾರೆ. ಥೈವಾನಲ್ಲಿರೋ ಒಬ್ಬ ಸಹೋದರಿ ಹೀಗೆ ಹೇಳ್ತಾರೆ: “ಯೆಹೋವ ಮತ್ತು ಆತನ ಸಂಘಟನೆಯಲ್ಲಿ ಇರೋರು ಸ್ತ್ರೀಯರಿಗೆ ಬೆಲೆ ಕೊಡ್ತಾರೆ. ಅವ್ರ ಭಾವನೆಗಳನ್ನ ಅರ್ಥ ಮಾಡ್ಕೊತಾರೆ. ಇಂಥ ಸಂಘಟನೆಯಲ್ಲಿ ಇರೋಕೆ ನನಗೆ ತುಂಬ ಹೆಮ್ಮೆ ಅನಿಸುತ್ತೆ. ಇದ್ರಿಂದ ನನ್ನ ನಂಬಿಕೆ ಮುಂಚೆಗಿಂತ ಇನ್ನೂ ಜಾಸ್ತಿಯಾಗಿದೆ.”

ಯೆಹೋವನ ತರಾನೇ ಸಹೋದರರು ಸ್ತ್ರೀಯರ ಜೊತೆ ನಡ್ಕೊಂಡ್ರೆ ಆತನಿಗೆ ತುಂಬ ಖುಷಿ ಆಗುತ್ತೆ. (ಜ್ಞಾನೋ. 27:11) ಸ್ಕಾಟ್‌ಲ್ಯಾಂಡಲ್ಲಿರೋ ಬೆಂಜಮಿನ್‌ ಅನ್ನೋ ಒಬ್ಬ ಹಿರಿಯ ಏನು ಹೇಳ್ತಾರಂದ್ರೆ, “ಈ ಲೋಕದಲ್ಲಿ ಸ್ತ್ರೀಯರನ್ನ ತುಂಬ ಕೀಳಾಗಿ ನೋಡ್ತಾರೆ, ಅವ್ರಿಗೆ ಗೌರವ ಕೊಡಲ್ಲ. ಆದ್ರೆ ಯೆಹೋವನ ಸಂಘಟನೆ ಹಾಗಲ್ಲ ಅನ್ನೋದು ಸ್ತ್ರೀಯರಿಗೆ ಅರ್ಥ ಆಗಬೇಕು. ಅದಕ್ಕೇ ಅವರು ಸಭಾಗೃಹಕ್ಕೆ ಬಂದಾಗ ನಾವು ಅವ್ರನ್ನ ಪ್ರೀತಿಯಿಂದ ಮಾತಾಡಿಸ್ತೀವಿ, ಗೌರವ ಕೊಡ್ತೀವಿ.” ಹಾಗಾಗಿ ಯೆಹೋವನ ತರ ನಾವೆಲ್ರೂ ನಮ್ಮ ಸಹೋದರಿಯರನ್ನ ಪ್ರೀತಿಸೋಣ ಅವ್ರಿಗೆ ಗೌರವ ಕೊಡೋಣ. ಯಾಕಂದ್ರೆ ಅವ್ರಿಗೆ ಅದನ್ನ ಪಡೆಯೋ ಯೋಗ್ಯತೆ ಇದೆ.—ರೋಮ. 12:10.

a ಈ ಲೇಖನದಲ್ಲಿ ಹೇಳಿರೋ “ಸಹೋದರಿಯರು” ಕ್ರೈಸ್ತ ಸಹೋದರಿಯರು. ಒಬ್ಬ ವ್ಯಕ್ತಿಯ ಸ್ವಂತ ಅಕ್ಕತಂಗಿಯರಲ್ಲ.

b “ನಾಜೂಕಾದ ಪಾತ್ರೆ” ಅನ್ನೋ ಪದದ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ 2006, ಮೇ 15ರ ಕಾವಲಿನಬುರುಜುವಿನಲ್ಲಿರೋ “ಒಂದು ‘ಬಲಹೀನ ಪಾತ್ರೆಯ’ ಮೌಲ್ಯ” ಮತ್ತು 2005, ಮಾರ್ಚ್‌ 1ರ ಕಾವಲಿನಬುರುಜುವಿನಲ್ಲಿರೋ “ವಿವಾಹಿತ ದಂಪತಿಗಳಿಗಾಗಿ ವಿವೇಕಭರಿತ ಮಾರ್ಗದರ್ಶನೆ” ಅನ್ನೋ ಲೇಖನಗಳನ್ನ ನೋಡಿ.