ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 6

ಗೀತೆ 9 ನಮ್ಮ ದೇವರಾದ ಯೆಹೋವನನ್ನು ಸ್ತುತಿಸು!

“ಯೆಹೋವನ ಹೆಸ್ರನ್ನ ಕೊಂಡಾಡಿ”

“ಯೆಹೋವನ ಹೆಸ್ರನ್ನ ಕೊಂಡಾಡಿ”

“ಯೆಹೋವನ ಸೇವಕರೇ, ಹಾಡಿಹೊಗಳಿ, ಯೆಹೋವನ ಹೆಸ್ರನ್ನ ಕೊಂಡಾಡಿ.”ಕೀರ್ತ. 113:1.

ಈ ಲೇಖನದಲ್ಲಿ ಏನಿದೆ?

ನಮಗೆ ಸಿಗೋ ಪ್ರತಿಯೊಂದು ಅವಕಾಶದಲ್ಲೂ ಯೆಹೋವನನ್ನ ಹಾಡಿಹೊಗಳೋಕೆ ಯಾವ ಮೂರು ವಿಷ್ಯಗಳು ಸಹಾಯ ಮಾಡುತ್ತೆ ಅಂತ ನೋಡೋಣ.

1-2. ಯೆಹೋವನ ಹೆಸ್ರು ಹಾಳಾದಾಗ ಆತನಿಗೆ ಹೇಗೆ ಅನಿಸಿರುತ್ತೆ? ಉದಾಹರಣೆ ಕೊಡಿ.

 ನೀವು ಇಷ್ಟಪಡ್ತಿರೋ ಒಬ್ಬ ವ್ಯಕ್ತಿ ನಿಮ್ಮ ಬಗ್ಗೆ ಸುಳ್ಳು ಹೇಳ್ತಿದ್ದಾನೆ ಅಂದ್ಕೊಳ್ಳಿ. ಅದನ್ನ ಕೆಲವು ಜನ್ರು ನಂಬ್ತಾರೆ. ಆದ್ರೆ ಅದು ಅಲ್ಲಿಗೇ ನಿಲ್ಲಲ್ಲ, ಅವರು ಇನ್ನೂ ಕೆಲವು ಜನ್ರಿಗೆ ಹೇಳ್ತಾರೆ. ಅವರೂ ಅದನ್ನ ನಂಬ್ತಾರೆ. ಆಗ ನಿಮಗೆ ಹೇಗನಿಸುತ್ತೆ? ನಿಮ್ಮ ಹೆಸ್ರು ಹಾಳಾಗ್ತಿರೋದ್ರಿಂದ ನಿಮಗೆ ತುಂಬ ನೋವಾಗುತ್ತಲ್ವಾ? ಬೇಜಾರಾಗುತ್ತಲ್ವಾ?—ಜ್ಞಾನೋ. 22:1.

2 ಯೆಹೋವ ದೇವರ ಹೆಸ್ರು ಹಾಳಾಗಿದ್ದೂ ಹೀಗೇನೇ. ಸ್ವರ್ಗದಲ್ಲಿದ್ದ ಒಬ್ಬ ದೇವದೂತ ಹವ್ವಳ ಹತ್ರ ಯೆಹೋವ ದೇವರ ಬಗ್ಗೆ ಸುಳ್ಳು ಹೇಳಿದ. ಅದನ್ನ ಅವಳು ನಂಬಿದಳು. ಇದ್ರಿಂದ ಮೊದಲನೇ ಮಾನವರಾದ ಆದಾಮ ಹವ್ವ ದೇವರ ವಿರುದ್ಧ ತಪ್ಪು ಮಾಡಿದ್ರು. ಹೀಗೆ ಎಲ್ಲ ಮನುಷ್ಯರಿಗೆ ಪಾಪ-ಮರಣ ಬಂತು. (ಆದಿ. 3:1-6; ರೋಮ. 5:12) ಅವನು ಹೇಳಿದ ಸುಳ್ಳುಗಳಿಂದ ಈಗ ಇಡೀ ಲೋಕದಲ್ಲಿ ಯುದ್ಧ, ಮರಣ ಮತ್ತು ಕೆಟ್ಟ ವಿಷ್ಯಗಳು ತುಂಬಿ ತುಳುಕ್ತಿದೆ. ಇದ್ರಿಂದ ಯೆಹೋವನಿಗೆ ಬೇಜಾರಾಯ್ತು. ಆದ್ರೆ ಆತನು ಅದನ್ನೇ ಮನಸ್ಸಲ್ಲಿಟ್ಟು ಕೊರಗ್ತಾ ಇಲ್ಲ. ಯಾಕಂದ್ರೆ ಯೆಹೋವ ‘ಖುಷಿಯಾಗಿರೋ ದೇವರು’ ಅಂತ ಬೈಬಲ್‌ ಹೇಳುತ್ತೆ.—1 ತಿಮೊ. 1:11.

3. ಯೆಹೋವನ ಹೆಸ್ರಿಗೆ ಬಂದಿರೋ ಕಳಂಕ ತೆಗೆದುಹಾಕೋಕೆ ನಾವೇನು ಮಾಡಬೇಕು?

3 ಯೆಹೋವನ ಹೆಸ್ರಿಗೆ ಬಂದಿರೋ ಕಳಂಕ ತೆಗೆದುಹಾಕೋಕೆ ನಾವೇನು ಮಾಡಬೇಕು? “ಯೆಹೋವನ ಹೆಸ್ರನ್ನ ಕೊಂಡಾಡಿ” ಅನ್ನೋ ಮಾತನ್ನ ಪಾಲಿಸಬೇಕು. (ಕೀರ್ತ. 113:1) ಅಂದ್ರೆ ಯೆಹೋವ ಎಷ್ಟು ಒಳ್ಳೇ ವ್ಯಕ್ತಿ ಅಂತ ಬೇರೆಯವ್ರಿಗೆ ಹೇಳಬೇಕು. ಹೀಗೆ ನಾವು ಆತನನ್ನ ಮನಸ್ಸಾರೆ ಹೊಗಳೋಕೆ ಮೂರು ಕಾರಣಗಳು ಸಹಾಯ ಮಾಡುತ್ತೆ. ಅದು ಯಾವುದು ಅಂತ ಈಗ ನೋಡೋಣ.

ಯೆಹೋವನ ಹೆಸ್ರನ್ನ ಹೊಗಳಿದಾಗ ಆತನನ್ನ ಖುಷಿಪಡಿಸ್ತೀವಿ

4. ನಾವು ಯೆಹೋವನನ್ನ ಹೊಗಳಿದಾಗ ಆತನಿಗೆ ಯಾಕೆ ಖುಷಿಯಾಗುತ್ತೆ? ಉದಾಹರಣೆ ಕೊಡಿ. (ಚಿತ್ರನೂ ನೋಡಿ.)

4 ನಾವು ಯೆಹೋವನ ಹೆಸ್ರನ್ನ ಕೊಂಡಾಡಿದಾಗ ಆತನಿಗೆ ತುಂಬ ಖುಷಿಯಾಗುತ್ತೆ. (ಕೀರ್ತ. 119:108) ಮನುಷ್ಯರಾದ ನಾವು ಪ್ರೋತ್ಸಾಹ ಸಿಗೋಕೆ ಯಾರಾದ್ರೂ ನಮ್ಮನ್ನ ಹೊಗಳಲಿ ಅಂತ ಬಯಸ್ತೀವಿ. ಆದ್ರೆ ಯೆಹೋವ ದೇವರು ಈ ಕಾರಣಕ್ಕೆ ಜನ ತನ್ನನ್ನ ಹೊಗಳಬೇಕು ಅಂತ ಬಯಸಲ್ಲ. ಇದನ್ನ ಅರ್ಥಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ಒಬ್ಬ ಚಿಕ್ಕ ಹುಡುಗಿ ಓಡಿ ಹೋಗಿ ಅವಳ ಅಪ್ಪನನ್ನ ಅಪ್ಕೊಂಡು “ನೀನೇ ಎಲ್ರಿಗಿಂತ ಬೆಸ್ಟ್‌ ಡ್ಯಾಡಿ!” ಅಂತ ಹೇಳಿದಾಗ ಅವನಿಗೆ ಹೇಗನಿಸುತ್ತೆ? ತುಂಬ ಖುಷಿಯಾಗುತ್ತೆ ಅಲ್ವಾ? ಆ ಪುಟ್ಟ ಮಗು ತನ್ನನ್ನ ಹೊಗಳಬೇಕು, ಪ್ರೋತ್ಸಾಹಿಸಬೇಕು ಅಂತೇನೂ ಅವನು ಬಯಸಲ್ಲ. ಆದ್ರೂ ಅವನು ಖುಷಿಪಡ್ತಾನೆ. ಯಾಕೆ? ಯಾಕಂದ್ರೆ ತನ್ನ ಮಗಳಿಗೆ ತನ್ನ ಮೇಲೆ ಎಷ್ಟು ಪ್ರೀತಿ ಇದೆ, ತನಗೆ ಅವಳೆಷ್ಟು ಋಣಿಯಾಗಿದ್ದಾಳೆ ಅಂತ ಅವನಿಗೆ ಗೊತ್ತಾಗುತ್ತೆ. ಅಷ್ಟೇ ಅಲ್ಲ, ಅವಳಿಗೆ ಈ ಗುಣಗಳಿರೋದ್ರಿಂದ ಮುಂದೆ ಖುಷಿಯಾಗಿರ್ತಾಳೆ ಅಂತನೂ ಅವನಿಗೆ ಗೊತ್ತು. ಅದೇ ತರ ನಮ್ಮ ಯೆಹೋವ ಅಪ್ಪ ಕೂಡ. ನಾವು ಆತನ ಹೆಸ್ರನ್ನ ಹೊಗಳಿದಾಗ ಆತನಿಗೆ ಖುಷಿಯಾಗುತ್ತೆ.

ಒಬ್ಬ ಅಪ್ಪನಿಗೆ ತನ್ನ ಮಗು “ನೀನೇ ಎಲ್ರಿಗಿಂತ ಬೆಸ್ಟ್‌ ಡ್ಯಾಡಿ!” ಅಂತ ಹೇಳಿದಾಗ ಹೇಗೆ ಖುಷಿಯಾಗುತ್ತೋ ಹಾಗೇ ಯೆಹೋವನನ್ನ ನಾವು ಹೊಗಳಿದಾಗ ಆತನಿಗೂ ಖುಷಿಯಾಗುತ್ತೆ (ಪ್ಯಾರ 4 ನೋಡಿ)


5. ನಾವು ಯೆಹೋವನನ್ನ ಹೊಗಳುವಾಗ ಸೈತಾನ ಹಾಕಿದ ಯಾವ ಆರೋಪ ಸುಳ್ಳು ಅಂತ ತೋರಿಸಿ ಕೊಡ್ತೀವಿ?

5 ನಾವು ಯೆಹೋವನನ್ನ ಹೊಗಳುವಾಗ ಸೈತಾನ ಹಾಕಿದ ಇನ್ನೊಂದು ಆರೋಪನೂ ಸುಳ್ಳು ಅಂತ ತೋರಿಸಿ ಕೊಡ್ತೀವಿ. ಅದೇನು? ಕಷ್ಟಗಳು ಬಂದಾಗ ಯಾವ ಮನುಷ್ಯನೂ ಯೆಹೋವನಿಗೆ ನಿಯತ್ತಾಗಿ ಇರೋದಿಲ್ಲ. ಲಾಭ ಇದ್ರೆ ಮಾತ್ರ ಯೆಹೋವನನ್ನ ಆರಾಧಿಸ್ತಾನೆ, ಇಲ್ಲಾಂದ್ರೆ ಬಿಟ್ಟುಬಿಡ್ತಾನೆ ಅಂತ ಸೈತಾನ ಹೇಳಿದ. (ಯೋಬ 1:9-11; 2:4) ಆದ್ರೆ ಅದು ಸುಳ್ಳು ಅಂತ ಯೋಬ ತೋರಿಸಿಕೊಟ್ಟ. ನಾವೂ ಅವನ ತರ ಇರಬಹುದು. ಯೆಹೋವನ ಹೆಸ್ರನ್ನ ಕೊಂಡಾಡ್ತಾ ನಿಯತ್ತಿಂದ ಆತನ ಸೇವೆ ಮಾಡಬಹುದು. (ಜ್ಞಾನೋ. 27:11) ಹೀಗೆ ಸೈತಾನ ಶುದ್ಧ ಸುಳ್ಳುಗಾರ ಅಂತ ತೋರಿಸ್ಕೊಡೋಕೆ ನಮ್ಮೆಲ್ರಿಗೂ ಒಂದು ಅವಕಾಶ ಇದೆ.

6. ರಾಜ ದಾವೀದ ಮತ್ತು ಲೇವಿಯರ ತರ ನಾವೇನು ಮಾಡಬೇಕು? (ನೆಹೆಮೀಯ 9:5)

6 ನಮಗೆ ಯೆಹೋವನ ಮೇಲೆ ಪ್ರೀತಿ ಇರೋದ್ರಿಂದ ಮನಸ್ಸಾರೆ ಆತನ ಹೆಸ್ರನ್ನ ಹೊಗಳ್ತೀವಿ. ದಾವೀದ “ನನ್ನ ಮನ ಯೆಹೋವನನ್ನ ಹೊಗಳಲಿ, ನನ್ನಲ್ಲಿರೋ ಎಲ್ಲವೂ ಆತನ ಪವಿತ್ರ ಹೆಸ್ರನ್ನ ಕೊಂಡಾಡಲಿ” ಅಂತ ಹೇಳಿದ. (ಕೀರ್ತ. 103:1) ಯೆಹೋವನ ಹೆಸ್ರನ್ನ ಹೊಗಳಿದ್ರೆ ಯೆಹೋವನನ್ನೇ ಹೊಗಳಿದಂಗೆ ಅಂತ ದಾವೀದ ಅರ್ಥಮಾಡ್ಕೊಂಡಿದ್ದ. ಯೆಹೋವನ ಹೆಸ್ರಿನ ಬಗ್ಗೆ ಯೋಚಿಸಿದಾಗ ಆತನಲ್ಲಿರೋ ಒಳ್ಳೇ ಗುಣಗಳು, ಆತನು ಹಿಂದೆ ಮಾಡಿರೋ ಅದ್ಭುತ ಕೆಲಸಗಳು ನೆನಪಾಗುತ್ತೆ. ದಾವೀದನಿಗೆ ಯೆಹೋವನ ಪವಿತ್ರ ಹೆಸ್ರನ್ನ ಗೌರವಿಸೋಕೆ, ಮನಸ್ಸಾರೆ ಕೊಂಡಾಡೋಕೆ ತುಂಬ ಆಸೆ ಇತ್ತು. ಅದಕ್ಕೇ “ನನ್ನಲ್ಲಿರೋ ಎಲ್ಲವೂ ಆತನ ಪವಿತ್ರ ಹೆಸ್ರನ್ನ ಕೊಂಡಾಡಲಿ” ಅಂತ ಹೇಳಿದ. ಇವನ ತರನೇ ಲೇವಿಯರೂ ಯೆಹೋವನ ಹೆಸ್ರನ್ನ ಕೊಂಡಾಡಿದ್ರು. ಆತನ ಹೆಸ್ರನ್ನ ಎಷ್ಟು ಹೊಗಳಿದ್ರೂ, ಸ್ತುತಿಸಿದ್ರೂ ಅದು ಕಡಿಮೆನೇ ಅಂತ ಅವರು ನೆನಸಿದ್ರು. (ನೆಹೆಮೀಯ 9:5 ಓದಿ.) ಆದ್ರೆ ಇವ್ರೆಲ್ರೂ ಮನಸ್ಸಾರೆ ತನ್ನ ಹೆಸ್ರನ್ನ ಹೊಗಳಿದಾಗ ಯೆಹೋವನಿಗೆ ಖುಷಿಯಾಗಿರುತ್ತೆ ಅನ್ನೋದ್ರಲ್ಲಿ ಅನುಮಾನನೇ ಇಲ್ಲ!

7. ನಾವು ಯೆಹೋವನನ್ನ ಹೇಗೆಲ್ಲ ಹೊಗಳಬಹುದು?

7 ನಾವೂ ಯೆಹೋವನನ್ನ ಖುಷಿಪಡಿಸೋಕೆ ಏನು ಮಾಡಬೇಕು? ನಾವು ಆತನನ್ನ ಎಷ್ಟು ಪ್ರೀತಿಸ್ತೀವಿ, ಆತನಿಗೆ ಎಷ್ಟು ಋಣಿಗಳಾಗಿದ್ದೀವಿ ಅಂತ ಜನ್ರಿಗೆ ಹೇಳಬೇಕು. ಯೆಹೋವನಿಗೆ ಹತ್ರ ಆಗೋಕೆ ಮತ್ತು ಆತನ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ನಾವು ಅವ್ರಿಗೆ ಸಹಾಯ ಮಾಡಬೇಕು. (ಯಾಕೋ. 4:8) ಇದೇ ನಮ್ಮ ಮುಖ್ಯ ಗುರಿಯಾಗಿರಬೇಕು. ಯೆಹೋವನಲ್ಲಿರೋ ಪ್ರೀತಿ, ನ್ಯಾಯ, ವಿವೇಕ, ಶಕ್ತಿ ಮತ್ತು ಬೇರೆ ಗುಣಗಳ ಬಗ್ಗೆ ಬೈಬಲಿಂದ ತೋರಿಸಬೇಕು. ಅದಷ್ಟೇ ಅಲ್ಲ, ನಾವು ಇನ್ನೊಂದು ವಿಷ್ಯನೂ ಮಾಡಬೇಕು. ನಾವು ಯೆಹೋವನ ತರ ಇರೋಕೆ ಆದಷ್ಟು ಪ್ರಯತ್ನ ಮಾಡಬೇಕು. (ಎಫೆ. 5:1) ಈ ತರ ಮಾಡೋದ್ರಿಂದ ಬೇರೆಯವ್ರಿಗೂ ನಮಗೂ ಎಷ್ಟು ವ್ಯತ್ಯಾಸ ಇದೆ ಅಂತ ಜನ್ರು ಗಮನಿಸ್ತಾರೆ. (ಮತ್ತಾ. 5:14-16) ನಾವು ಅವ್ರ ಜೊತೆ ಚೆನ್ನಾಗಿ ನಡ್ಕೊಂಡಾಗ್ಲೂ ಯೆಹೋವನನ್ನ ಹೊಗಳೋಕೆ ನಮಗೊಂದು ಅವಕಾಶ ಸಿಗುತ್ತೆ. ಇದ್ರಿಂದ ಒಳ್ಳೇ ಮನಸ್ಸಿನ ಜನ್ರು ಯೆಹೋವನ ಜೊತೆ ಸ್ನೇಹ ಬೆಳೆಸ್ಕೊಳ್ತಾರೆ.—1 ತಿಮೊ. 2:3, 4.

ಯೆಹೋವನ ಹೆಸ್ರನ್ನ ಹೊಗಳಿದಾಗ ಯೇಸುವನ್ನ ಖುಷಿಪಡಿಸ್ತೀವಿ

8. ಯೆಹೋವನ ಹೆಸ್ರನ್ನ ಹೊಗಳೋದ್ರಲ್ಲಿ ಯೇಸುನೇ ಎತ್ತಿದ ಕೈ ಅಂತ ನಾವ್ಯಾಕೆ ಹೇಳಬಹುದು?

8 ಯೆಹೋವನ ಬಗ್ಗೆ ಯೇಸುಗೆ ಗೊತ್ತಿರೋಷ್ಟು ಬೇರೆ ಯಾರಿಗೂ ಗೊತ್ತಿಲ್ಲ. (ಮತ್ತಾ. 11:27) ಯೇಸುಗೆ ತನ್ನ ಅಪ್ಪ ಅಂದ್ರೆ ಪಂಚಪ್ರಾಣ. ಯೆಹೋವನನ್ನ ಹೊಗಳೋದ್ರಲ್ಲಿ ಆತನೇ ಎತ್ತಿದ ಕೈ. (ಯೋಹಾ. 14:31) ಯೇಸು ಭೂಮಿಯಲ್ಲಿ ಇದ್ದಾಗ ಮುಖ್ಯವಾಗಿ ಮಾಡಿದ ಕೆಲಸ ಇದೇನೇ. ಅದಕ್ಕೇ ಆತನು ಸಾಯೋ ಹಿಂದಿನ ರಾತ್ರಿ ಯೆಹೋವನಿಗೆ ಪ್ರಾರ್ಥಿಸುವಾಗ “ನಾನು ನಿನ್ನ ಹೆಸ್ರನ್ನ [ಶಿಷ್ಯರಿಗೆ] ಚೆನ್ನಾಗಿ ಹೇಳ್ಕೊಟ್ಟಿದ್ದೀನಿ” ಅಂತ ಹೇಳಿದನು. (ಯೋಹಾ. 17:26) ಆತನು ಹಾಗೆ ಹೇಳಿದ್ರ ಅರ್ಥ ಏನು?

9. ತನ್ನ ಅಪ್ಪನ ಬಗ್ಗೆ ಜನ್ರಿಗೆ ಚೆನ್ನಾಗಿ ಅರ್ಥಮಾಡಿಸೋಕೆ ಯೇಸು ಯಾವ ಉದಾಹರಣೆ ಹೇಳಿದನು?

9 ಯೆಹೂದ್ಯರಿಗೆ ದೇವರ ಹೆಸ್ರು ಏನು ಅಂತ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಯೇಸು ಅವ್ರಿಗೆ ದೇವರ ಹೆಸ್ರು “ಯೆಹೋವ” ಅಂತ ಹೇಳಿದ್ದಷ್ಟೇ ಅಲ್ಲ, ‘ದೇವರ ಬಗ್ಗೆ ವಿವರಿಸಿದನು.’ (ಯೋಹಾ. 1:17, 18) ಉದಾಹರಣೆಗೆ ಹೀಬ್ರು ವಚನಗಳಲ್ಲಿ ಯೆಹೋವ ಕರುಣೆ ಮತ್ತು ಕನಿಕರ ಇರೋ ದೇವರು ಅಂತ ಹೇಳುತ್ತೆ. (ವಿಮೋ. 34:5-7) ಅದನ್ನ ಯೇಸು, ದಾರಿತಪ್ಪಿದ ಮಗನ ಮತ್ತು ಅವನ ಅಪ್ಪನ ಉದಾಹರಣೆ ಹೇಳಿ ಅರ್ಥ ಮಾಡಿಸಿದನು. ಈ ಉದಾಹರಣೆಯಲ್ಲಿ ಅಪ್ಪ, “ಮಗ ಇನ್ನೂ ತುಂಬ ದೂರ ಇರುವಾಗಲೇ” ಅವನ ಹತ್ರ ಓಡಿಹೋಗಿ ಅವನನ್ನ ತಬ್ಬಿಕೊಳ್ತಾನೆ. ಅವನನ್ನ ಮನಸ್ಸಾರೆ ಕ್ಷಮಿಸ್ತಾನೆ. ಇದು ಯೆಹೋವನಿಗೆ ಎಷ್ಟು ಕರುಣೆ ಮತ್ತು ಕನಿಕರ ಇದೆ ಅಂತ ತೋರಿಸುತ್ತೆ. (ಲೂಕ 15:11-32) ಹೀಗೆ ಯೆಹೋವ ಎಷ್ಟು ಒಳ್ಳೇ ದೇವರು ಅಂತ ಯೇಸು ಜನ್ರಿಗೆ ಅರ್ಥಮಾಡಿಸಿದನು.

10. (ಎ) ಯೇಸು ಯೆಹೋವನ ಹೆಸ್ರನ್ನ ತಿಳಿಸೋಕೆ ಇಷ್ಟಪಟ್ಟನು ಅಂತ ನಮಗೆ ಹೇಗೆ ಗೊತ್ತು? (ಮಾರ್ಕ 5:19) (ಚಿತ್ರನೂ ನೋಡಿ.) (ಬಿ) ನಾವೇನು ಮಾಡಬೇಕು ಅಂತ ಯೇಸು ಬಯಸ್ತಾನೆ?

10 ಯೇಸುವಿನ ಕಾಲದಲ್ಲಿದ್ದ ಕೆಲವು ಧರ್ಮಗುರುಗಳು ದೇವರ ಹೆಸ್ರು ಕರೆಯೋದು ತಪ್ಪು, ಅದು ಆತನಿಗೆ ಗೌರವ ಕೊಟ್ಟ ಹಾಗೆ ಇರಲ್ಲ ಅಂತ ನೆನಸ್ತಿದ್ರು. ಆದ್ರೆ ಯೇಸು, ಎಲ್ರೂ ದೇವರ ಹೆಸ್ರು ಹೇಳಬೇಕು ಅಂತ ಇಷ್ಟಪಟ್ಟನು. ಇದಕ್ಕೊಂದು ಉದಾಹರಣೆ ನೋಡಿ: ಗೆರಸ ಪಟ್ಟಣದಲ್ಲಿ ಕೆಟ್ಟ ದೇವದೂತ ಹಿಡಿದಿದ್ದ ಒಬ್ಬ ವ್ಯಕ್ತಿಯನ್ನ ಯೇಸು ವಾಸಿ ಮಾಡಿದನು. ಆಗ ಆ ಊರಲ್ಲಿದ್ದ ಜನ್ರು ಹೆದರಿ ಯೇಸು ಹತ್ರ ತಮ್ಮ ಊರು ಬಿಟ್ಟು ಹೋಗೋಕೆ ಬೇಡ್ಕೊಂಡಾಗ ಅವನು ಅಲ್ಲಿಂದ ಹೊರಟನು. (ಮಾರ್ಕ 5:16, 17) ಆದ್ರೆ ಹೊರಡುವಾಗ ಯೆಹೋವನ ಹೆಸ್ರು ಎಲ್ರಿಗೂ ಗೊತ್ತಾಗಲಿ ಅಂತ ವಾಸಿಯಾದ ವ್ಯಕ್ತಿ ಹತ್ರ ತಾನೇನು ಮಾಡಿದನೋ ಅದನ್ನಲ್ಲ, ಯೆಹೋವ ಮಾಡಿದ್ದನ್ನ ಎಲ್ರಿಗೂ ಹೇಳೋಕೆ ಹೇಳಿದನು. (ಮಾರ್ಕ 5:19 ಓದಿ.) a ಇವತ್ತು ನಾವೂ ಯೆಹೋವನ ಹೆಸ್ರನ್ನ ಎಲ್ರಿಗೂ ತಿಳಿಸಬೇಕು ಅನ್ನೋದೇ ಯೇಸುವಿನ ಆಸೆ. (ಮತ್ತಾ. 24:14; 28:19, 20) ನಾವಿದನ್ನ ಮಾಡಿದ್ರೆ ನಮ್ಮ ರಾಜ ಯೇಸುಗೆ ತುಂಬ ಖುಷಿಯಾಗುತ್ತೆ.

ಯೇಸು ಕೆಟ್ಟ ದೇವದೂತ ಹಿಡಿದಿದ್ದ ವ್ಯಕ್ತಿ ಹತ್ರ ಯೆಹೋವ ಅವನಿಗೆ ವಾಸಿಯಾಗೋಕೆ ಹೇಗೆ ಸಹಾಯ ಮಾಡಿದನು ಅಂತ ಜನ್ರಿಗೆ ತಿಳಿಸೋಕೆ ಹೇಳಿದನು (ಪ್ಯಾರ 10 ನೋಡಿ)


11. (ಎ) ಯೇಸು ತನ್ನ ಶಿಷ್ಯರಿಗೆ ಏನಂತ ಪ್ರಾರ್ಥನೆ ಮಾಡೋಕೆ ಹೇಳಿಕೊಟ್ಟನು? (ಬಿ) ಅದು ಯಾಕಷ್ಟು ಮುಖ್ಯ ಆಗಿತ್ತು? (ಯೆಹೆಜ್ಕೇಲ 36:23)

11 ತನ್ನ ಹೆಸ್ರಿಗೆ ಬಂದಿರೋ ಕಳಂಕನ ತೆಗೆದು ಹಾಕಿ ಅದನ್ನ ಪವಿತ್ರ ಮಾಡಬೇಕು ಅನ್ನೋದೇ ಯೆಹೋವನ ಉದ್ದೇಶ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೇ ಆತನು ತನ್ನ ಶಿಷ್ಯರಿಗೆ “ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ” ಅಂತ ಪ್ರಾರ್ಥನೆ ಮಾಡೋಕೆ ಕಲಿಸಿದನು. (ಮತ್ತಾ. 6:9) ಇಡೀ ವಿಶ್ವದಲ್ಲೇ ಮೊದ್ಲು ಸರಿ ಮಾಡಬೇಕಾದ ವಿಷ್ಯ ಇದೇನೇ ಅಂತ ಯೇಸು ಚೆನ್ನಾಗಿ ಅರ್ಥಮಾಡ್ಕೊಂಡಿದ್ದನು. (ಯೆಹೆಜ್ಕೇಲ 36:23 ಓದಿ.) ಯೆಹೋವನ ಹೆಸ್ರಿಗೆ ಬಂದಿರೋ ಕಳಂಕ ತೆಗೆದು ಹಾಕೋಕೆ ಯೇಸು ಪ್ರಯತ್ನ ಮಾಡಿದಷ್ಟು ಬೇರೆ ಯಾರೂ ಮಾಡಿಲ್ಲ. ಅಂಥದ್ರಲ್ಲಿ ಯೇಸುವಿನ ಶತ್ರುಗಳು ‘ಇವನು ದೇವರ ವಿರುದ್ಧ ಪಾಪ ಮಾಡಿದ್ದಾನೆ’ ಅಂತ ಆರೋಪ ಹಾಕಿದಾಗ ಅವನಿಗೆ ಎಷ್ಟು ನೋವಾಗಿರುತ್ತೆ ಅಲ್ವಾ? ತನ್ನ ಅಪ್ಪನ ಹೆಸ್ರಿಗೆ ಕಳಂಕ ತರೋದು ಎಲ್ಲಾ ಪಾಪಗಳಿಗಿಂತ ದೊಡ್ಡ ಪಾಪ ಅಂತ ಗೊತ್ತಿದ್ರಿಂದ ಶತ್ರುಗಳು ಅವನನ್ನ ಹಿಡ್ಕೊಂಡು ಹೋಗೋಕೆ ಬರುವಾಗ ಅವನ “ಮನಸ್ಸಲ್ಲಿ ದುಃಖ, ಚಿಂತೆ ತುಂಬಿಹೋಗಿತ್ತು.”—ಲೂಕ 22:41-44.

12. ಯೆಹೋವ ದೇವರ ಹೆಸ್ರಿಗೆ ಬಂದಿರೋ ಕಳಂಕ ತೆಗೆಯೋಕೆ ಯೇಸು ಏನೆಲ್ಲ ಮಾಡಿದನು?

12 ಯೆಹೋವ ದೇವರ ಹೆಸ್ರಿಗೆ ಬಂದಿರೋ ಕಳಂಕ ತೆಗೆದು ಹಾಕೋಕೆ ಯೇಸು ತುಂಬ ಪ್ರಯತ್ನ ಮಾಡಿದನು. ಅದಕ್ಕೇ ಜನ ಎಷ್ಟೇ ಹಿಂಸೆ ಕೊಟ್ರೂ, ಅವಮಾನ ಮಾಡಿದ್ರೂ, ಸುಳ್ಳಾರೋಪ ಹಾಕಿದ್ರೂ ಅದನ್ನೆಲ್ಲ ಸಹಿಸ್ಕೊಂಡನು. ಎಲ್ಲ ವಿಷ್ಯದಲ್ಲೂ ತಾನು ಯೆಹೋವನ ಮಾತನ್ನ ಕೇಳಿದ್ದೀನಿ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೇ ಜನ ಅವಮಾನ ಮಾಡಿದಾಗ್ಲೂ ಆತನು ನಾಚಿಕೆ ಪಡ್ಲಿಲ್ಲ. (ಇಬ್ರಿ. 12:2) ಆ ಸಮಯದಲ್ಲಿ ಎಲ್ಲಾ ಕಷ್ಟನ ಸೈತಾನನೇ ತರ್ತಿದ್ದಾನೆ ಅಂತನೂ ಆತನಿಗೆ ಗೊತ್ತಿತ್ತು. (ಲೂಕ 22:2-4; 23:33, 34) ಆದ್ರೆ ಸೈತಾನ ಯೇಸುವಿನ ನಿಯತ್ತನ್ನ ಮುರಿಯೋಕೆ ಎಷ್ಟೇ ಪ್ರಯತ್ನ ಮಾಡಿದ್ರೂ ಅದೆಲ್ಲ ಮಣ್ಣುಮುಕ್ತು. ಹೀಗೆ ಸೈತಾನ ಒಬ್ಬ ಸುಳ್ಳುಗಾರ ಅಂತ ಯೇಸು ತೋರಿಸಿಕೊಟ್ಟನು. ಅಷ್ಟೇ ಅಲ್ಲ, ಎಷ್ಟೇ ಕಷ್ಟ ಬಂದ್ರೂ ಯೆಹೋವನಿಗೆ ನಿಯತ್ತಿಂದ ಸೇವೆ ಮಾಡುವವರೂ ಇದ್ದಾರೆ ಅಂತ ಸಾಬೀತು ಮಾಡಿದನು.

13. ನಿಮ್ಮ ರಾಜನನ್ನ ಖುಷಿಪಡಿಸೋಕೆ ನೀವೇನು ಮಾಡಬೇಕು?

13 ನೀವು ನಿಮ್ಮ ರಾಜನಾದ ಯೇಸುವನ್ನ ಖುಷಿಪಡಿಸಬೇಕಾ? ಹಾಗಾದ್ರೆ ಯೆಹೋವನನ್ನ ಹೊಗಳ್ತಾ ಇರಿ. ಆತನು ಎಷ್ಟು ಒಳ್ಳೇ ದೇವರು ಅಂತ ಜನ್ರಿಗೆ ಅರ್ಥಮಾಡಿಸಿ. ನೀವು ಹೀಗೆ ಮಾಡಿದ್ರೆ ಯೇಸು ತರ ನಡ್ಕೊಳ್ತೀರ. (1 ಪೇತ್ರ 2:21) ಆತನ ತರ ಯೆಹೋವನ ಮನಸ್ಸನ್ನ ಖುಷಿಪಡಿಸ್ತೀರ ಮತ್ತು ಸೈತಾನ ಎಂಥ ನಾಚಿಕೆಗೆಟ್ಟ ಸುಳ್ಳುಗಾರ ಅಂತ ಸಾಬೀತು ಮಾಡ್ತೀರ!

ಯೆಹೋವನ ಹೆಸ್ರನ್ನ ಹೊಗಳಿದಾಗ ಜನ್ರ ಜೀವ ಉಳಿಸ್ತೀವಿ

14-15. ನಾವು ಜನ್ರಿಗೆ ಯೆಹೋವನ ಬಗ್ಗೆ ಕಲಿಸುವಾಗ ಏನೆಲ್ಲಾ ಪ್ರಯೋಜನ ಆಗುತ್ತೆ?

14 ನಾವು ಯೆಹೋವನ ಹೆಸ್ರನ್ನ ಹೊಗಳುವಾಗ ಜನ್ರು ತಮ್ಮ ಜೀವ ಉಳಿಸ್ಕೊಳ್ಳೋಕೆ ಸಹಾಯ ಮಾಡ್ತೀವಿ. ಅದು ಹೇಗೆ? ಸೈತಾನ ‘ನಂಬಿಕೆಯಿಲ್ಲದ ಜನ್ರ ಮನಸ್ಸನ್ನ ಕುರುಡು ಮಾಡಿದ್ದಾನೆ’ ಅಂತ ಬೈಬಲ್‌ ಹೇಳುತ್ತೆ. (2 ಕೊರಿಂ. 4:4) ಇದ್ರಿಂದಾಗಿ ಜನ್ರು ದೇವರೇ ಇಲ್ಲ, ಆತನು ನಮ್ಮಿಂದ ತುಂಬ ದೂರ ಇದ್ದಾನೆ, ಆತನು ಕಲ್ಲು ಹೃದಯದವನು, ತಪ್ಪು ಮಾಡಿದವ್ರನ್ನ ಕ್ರೂರವಾಗಿ ಶಿಕ್ಷಿಸ್ತಾನೆ ಅನ್ನೋ ಸುಳ್ಳನ್ನ ನಂಬಿದ್ದಾರೆ. ಯಾಕೆ ಸೈತಾನ ಈ ತರ ಸುಳ್ಳು ಹೇಳ್ತಿದ್ದಾನೆ? ದೇವರ ಹೆಸ್ರನ್ನ ಹಾಳು ಮಾಡಬೇಕು ಮತ್ತು ಜನ್ರು ಆತನಿಗೆ ಹತ್ರ ಆಗಬಾರದು ಅನ್ನೋದೇ ಅವನ ಉದ್ದೇಶ. ಆದ್ರೆ ಸೈತಾನ ತನ್ನ ಗುರಿ ಮುಟ್ಟದೇ ಇರೋಕೆ ನಾವೇನು ಮಾಡಬೇಕು? ಜನ್ರಿಗೆ ಯೆಹೋವನ ಬಗ್ಗೆ ಇರೋ ಸತ್ಯ ಹೇಳಬೇಕು ಮತ್ತು ಆತನ ಹೆಸ್ರನ್ನ ಹೊಗಳ್ತಾ ಇರಬೇಕು.

15 ನಾವು ಹೀಗೆ ಯೆಹೋವನ ಬಗ್ಗೆ ಇರೋ ಸತ್ಯನ ಜನ್ರಿಗೆ ಹೇಳಿದಾಗ ತುಂಬ ಪ್ರಯೋಜನ ಆಗುತ್ತೆ. ಬೈಬಲ್‌ ಸತ್ಯ ಅವ್ರ ಜೀವನವನ್ನ ಬದಲಾಯಿಸುತ್ತೆ. ಯಾಕಂದ್ರೆ ಯೆಹೋವನಲ್ಲಿರೋ ಒಳ್ಳೊಳ್ಳೇ ಗುಣಗಳ ಬಗ್ಗೆ ನಾವು ಜನ್ರಿಗೆ ಕಲಿಸ್ತಾ ಹೋದ ಹಾಗೆ ಸೈತಾನ ಅವ್ರ ಮುಂದೆ ಹಾಕಿರೋ ಪರದೆಯನ್ನ ನಿಧಾನವಾಗಿ ಸರಿಸ್ತಾ ಹೋಗ್ತೀವಿ. ಆಗ ಯೆಹೋವನಲ್ಲಿ ಎಷ್ಟೊಳ್ಳೇ ಗುಣಗಳಿವೆ ಅಂತ ಅವ್ರಿಗೆ ಸ್ಪಷ್ಟವಾಗಿ ಕಾಣಿಸುತ್ತೆ. ಆತನ ಶಕ್ತಿ ನೋಡಿ ಅವರು ಮೂಕವಿಸ್ಮಿತರಾಗ್ತಾರೆ. (ಯೆಶಾ. 40:26) ಆತನು ಮಾಡೋದೆಲ್ಲ ಯಾವಾಗ್ಲೂ ನ್ಯಾಯವಾಗಿರುತ್ತೆ ಅಂತ ನಂಬ್ತಾರೆ. (ಧರ್ಮೋ. 32:4) ಆತನಲ್ಲಿರೋ ಅಪಾರ ವಿವೇಕ ನೋಡಿ ಎಷ್ಟೋ ಒಳ್ಳೇ ವಿಷ್ಯಗಳನ್ನ ಕಲಿತಾರೆ. (ಯೆಶಾ. 55:9; ರೋಮ. 11:33) ದೇವರು ಪ್ರೀತಿಯಾಗಿದ್ದಾನೆ ಅಂತ ಅರ್ಥಮಾಡ್ಕೊಂಡಾಗ ಅವ್ರಿಗೆ ನೆಮ್ಮದಿ ಅನಿಸುತ್ತೆ. (1 ಯೋಹಾ. 4:8) ಹೀಗೆ ಅವರು ದೇವರಿಗೆ ಹತ್ರ ಆಗ್ತಾರೆ. ಆಗ ಅವ್ರಿಗೆ ತಾವು ಶಾಶ್ವತಕ್ಕೂ ದೇವರ ಮಕ್ಕಳಾಗಿ ಇರ್ತೀವಿ ಅನ್ನೋ ನಂಬಿಕೆನೂ ಜಾಸ್ತಿ ಆಗುತ್ತೆ. ನಾವು ಈ ತರ ಜನ್ರಿಗೆ ಸಹಾಯ ಮಾಡಿದ್ರೆ ಯೆಹೋವ ನಮ್ಮನ್ನ ‘ತನ್ನ ಜೊತೆ ಕೆಲಸಗಾರರಾಗಿ’ ನೋಡ್ತಾನೆ. ಇದು ಎಷ್ಟೊಳ್ಳೇ ಸುಯೋಗ ಅಲ್ವಾ!—1 ಕೊರಿಂ. 3:5, 9.

16. ಯೆಹೋವ ದೇವರ ಹೆಸ್ರನ್ನ ತಿಳ್ಕೊಂಡಾಗ ಕೆಲವ್ರಿಗೆ ಹೇಗನಿಸ್ತು? ಉದಾಹರಣೆ ಕೊಡಿ.

16 ನಾವು ಮೊದಮೊದ್ಲು ದೇವರ ಹೆಸ್ರು “ಯೆಹೋವ” ಅಂತ ಹೇಳೋದು ಒಂದು ಚಿಕ್ಕ ವಿಷ್ಯ ಅಂತ ಅನಿಸಬಹುದು. ಆದ್ರೆ ಅದೇ ಹೆಸ್ರು ಅವ್ರ ಜೀವನನೇ ಬದಲಾಯಿಸ್ತು ಅಂತ ಗೊತ್ತಾದಾಗ ನಮಗೆ ಆಶ್ಚರ್ಯ ಆಗುತ್ತೆ. ಆಲಿಯಾ b ಬಗ್ಗೆ ನೋಡಿ. ಅವಳು ಕ್ರೈಸ್ತಳಾಗಿರಲಿಲ್ಲ, ಅವಳಿದ್ದ ಧರ್ಮದಲ್ಲಿ ಅವಳಿಗೆ ಖುಷಿನೂ ಸಿಕ್ತಿರಲಿಲ್ಲ. ಅದಕ್ಕೇ ಅವಳಿಗೆ ದೇವರಿಗೆ ಹತ್ರ ಆಗೋಕೆ ಆಗ್ಲಿಲ್ಲ. ಆದ್ರೆ ಯಾವಾಗ ಯೆಹೋವನ ಸಾಕ್ಷಿಗಳು ಅವಳಿಗೆ ಬೈಬಲ್‌ ಸ್ಟಡಿ ಶುರು ಮಾಡಿದ್ರೋ ಆವಾಗ ಅವಳ ಜೀವನನೇ ಬದಲಾಯ್ತು. ಯೆಹೋವನನ್ನ ಫ್ರೆಂಡ್‌ ತರ ನೋಡೋಕೆ ಶುರು ಮಾಡಿದಳು. ತುಂಬ ಬೈಬಲ್‌ಗಳಲ್ಲಿ ಯೆಹೋವ ಅನ್ನೋ ಹೆಸ್ರನ್ನ ತೆಗೆದು “ಕರ್ತ” ಅನ್ನೋ ಬಿರುದುಗಳನ್ನ ಹಾಕಿರೋದು ಗೊತ್ತಾದಾಗ ಅವಳಿಗೆ ತುಂಬ ಬೇಜಾರಾಯ್ತು. ಆದ್ರೆ ದೇವರ ಹೆಸ್ರು ಯೆಹೋವ ಅಂತ ತಿಳ್ಕೊಂಡಾಗ ಅವಳಿಗೆ ಹೇಗನಿಸ್ತು? “ನನ್ನ ಬೆಸ್ಟ್‌ ಫ್ರೆಂಡಿಗೂ ಒಂದು ಹೆಸ್ರಿದೆ ಅಂತ ತಿಳ್ಕೊಂಡಾಗ ನಂಗೆ ಸಮಾಧಾನ ಆಯ್ತು. ಆತನ ಹೆಸ್ರನ್ನ ತಿಳ್ಕೊಳ್ಳೋಕೆ ನನಗೆ ಒಂದು ಅವಕಾಶ ಸಿಕ್ಕಿದ್ದಕ್ಕೆ ಖುಷಿನೂ ಆಯ್ತು” ಅಂತ ಅವಳು ಹೇಳ್ತಾಳೆ. ಸ್ಟೀವ್‌ ಬಗ್ಗೆ ನೋಡಿ. ಅವನು ಒಬ್ಬ ಸಂಗೀತಗಾರನಾಗಿದ್ದ. ಅವನು ಮುಂಚೆ ಯೆಹೂದಿ ಧರ್ಮದವನಾಗಿದ್ದ. ಅಲ್ಲಿದ್ದವರು ಹೇಳೋದೊಂದು ಮಾಡೋದೊಂದು ಅಂತ ಗೊತ್ತಾದಾಗ ಅಲ್ಲಿ ಇರೋಕೆ ಅವನಿಗೆ ಇಷ್ಟ ಆಗ್ತಿರಲಿಲ್ಲ. ಅವನ ಅಮ್ಮ ತೀರಿಕೊಂಡಾಗ ಅವನಿಗೆ ತುಂಬ ದುಃಖ ಆಗ್ತಿತ್ತು. ಅದಕ್ಕೇ ಒಂದ್ಸಲ ಬೇರೆಯವರು ಬೈಬಲ್‌ ಸ್ಟಡಿ ತಗೊಳ್ಳುವಾಗ ಇವನೂ ಹೋಗಿ ಕೂತ್ಕೊಂಡ. ದೇವರ ಹೆಸ್ರು ಯೆಹೋವ ಅಂತ ಆವತ್ತೇ ಅವನಿಗೆ ಗೊತ್ತಾಯ್ತು. ಆಗ ಅವನಿಗೆ ಹೇಗನಿಸ್ತು? “ನಾನು ಯಾವತ್ತೂ ದೇವರ ಹೆಸ್ರು ಕೇಳಿಸ್ಕೊಂಡಿರಲಿಲ್ಲ. ಆದ್ರೆ ಕೇಳಿಸ್ಕೊಂಡ ಮೇಲೆ ದೇವರು ನಿಜವಾಗ್ಲೂ ಇದ್ದಾನೆ ಅಂತ ಗೊತ್ತಾಯ್ತು. ಈಗ ಆತನು ನನ್ನ ಬೆಸ್ಟ್‌ ಫ್ರೆಂಡೂ ಆಗಿದ್ದಾನೆ” ಅಂತ ಹೇಳ್ತಾರೆ.

17. ಯೆಹೋವ ದೇವರ ಹೆಸ್ರನ್ನ ಯಾವಾಗ್ಲೂ ಕೊಂಡಾಡಬೇಕು ಅಂತ ನೀವ್ಯಾಕೆ ಅಂದ್ಕೊಂಡಿದ್ದೀರಾ? (ಚಿತ್ರನೂ ನೋಡಿ.)

17 ಸಿಹಿಸುದ್ದಿ ಸಾರುವಾಗ ಮತ್ತು ಬೈಬಲ್‌ ಕಲಿಸುವಾಗ ನೀವು ಜನ್ರಿಗೆ ಯೆಹೋವನ ಹೆಸ್ರನ್ನ ಹೇಳ್ತೀರಾ? ಯೆಹೋವ ಎಷ್ಟೊಳ್ಳೇ ದೇವರು, ಆತನಲ್ಲಿ ಎಂಥ ಒಳ್ಳೇ ಗುಣಗಳಿವೆ ಅಂತ ಹೇಳ್ತೀರಾ? ನೀವು ಈ ರೀತಿ ಮಾಡಿದ್ರೆ ಯೆಹೋವನ ಹೆಸ್ರನ್ನ ಯಾವಾಗ್ಲೂ ಹೊಗಳ್ತಾ ಇರೋಕೆ ಆಗುತ್ತೆ. ಅಷ್ಟೇ ಅಲ್ಲ, ಜನ್ರಿಗೆ ತಮ್ಮ ಜೀವ ಉಳಿಸ್ಕೊಳ್ಳೋಕೆ ಸಹಾಯ ಮಾಡಿದ ಹಾಗೂ ಇರುತ್ತೆ. ಹೀಗೆ ಮಾಡಿದ್ರೆ ಯೇಸುನ ಖುಷಿ ಪಡಿಸ್ತೀವಿ, ಮುಖ್ಯವಾಗಿ ಯೆಹೋವನನ್ನ ಖುಷಿ ಪಡಿಸ್ತೀವಿ. ಆಗ ಕೀರ್ತನೆಗಾರನ ತರ ನಾವೂ “ಯಾವಾಗ್ಲೂ ನಾನು ನಿನ್ನ ಹೆಸ್ರನ್ನ ಸ್ತುತಿಸ್ತೀನಿ” ಅಂತ ಯೆಹೋವನಿಗೆ ಹೇಳೋಕಾಗುತ್ತೆ.—ಕೀರ್ತ. 145:2.

ಜನ್ರಿಗೆ ಯೆಹೋವನ ಬಗ್ಗೆ ಕಲಿಸುವಾಗ ಮತ್ತು ನಾವು ಆತನಿಗೆ ಇಷ್ಟ ಆಗೋ ತರ ಜೀವಿಸುವಾಗ ನಾವು ಯೆಹೋವನ ಹೆಸ್ರನ್ನ ಹೊಗಳಿದ ಹಾಗೆ ಆಗುತ್ತೆ (ಪ್ಯಾರ 17 ನೋಡಿ)

ಯೆಹೋವನ ಹೆಸ್ರನ್ನ ಕೊಂಡಾಡಿದ್ರೆ . . .

  • ಯೆಹೋವನಿಗೆ ಹೇಗೆ ಖುಷಿಯಾಗುತ್ತೆ?

  • ಯೇಸುಗೆ ಹೇಗೆ ಖುಷಿಯಾಗುತ್ತೆ?

  • ಜನ್ರ ಜೀವ ಉಳಿಸೋಕೆ ಹೇಗೆ ಆಗುತ್ತೆ?

ಗೀತೆ 138 ಯೆಹೋವ ನಿನ್ನ ನಾಮ

a ಯೇಸುವಿನ ಮಾತುಗಳನ್ನ ಬರಿಯುವಾಗ ಮಾರ್ಕ ತನ್ನ ಪುಸ್ತಕದಲ್ಲಿ ದೇವರ ಹೆಸ್ರನ್ನ ಬರೆದಿದ್ದಾನೆ ಅಂತ ಸಿಕ್ಕಿರೋ ಆಧಾರಗಳಿಂದ ಗೊತ್ತಾಗುತ್ತೆ. ಅದಕ್ಕೇ ಹೊಸ ಲೋಕ ಭಾಷಾಂತರ ಬೈಬಲಿನ ಈ ವಚನದಲ್ಲಿ ಯೆಹೋವ ಅನ್ನೋ ಹೆಸ್ರನ್ನ ಹಾಕಿದ್ದಾರೆ.

b ಕೆಲವ್ರ ಹೆಸ್ರು ಬದಲಾಗಿದೆ.