ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 7

ಗೀತೆ 59 ನಾವು ದೇವರಿಗೆ ಸಮಪಿರ್ತರು!

ನಾಜೀರರಿಂದ ನಾವೇನು ಕಲಿತೀವಿ?

ನಾಜೀರರಿಂದ ನಾವೇನು ಕಲಿತೀವಿ?

“ನಾಜೀರರಾಗಿ ಇರೋ ದಿನ ತನಕ ಅವರು ಯೆಹೋವನ ದೃಷ್ಟಿಯಲ್ಲಿ ಪವಿತ್ರ.”ಅರ. 6:8.

ಈ ಲೇಖನದಲ್ಲಿ ಏನಿದೆ?

ಧೈರ್ಯ ತೋರಿಸೋಕೆ, ಯೆಹೋವನಿಗಾಗಿ ತ್ಯಾಗಗಳನ್ನ ಮಾಡೋಕೆ ನಾಜೀರರ ಉದಾಹರಣೆ ನಮಗೆ ಹೇಗೆ ಸಹಾಯ ಮಾಡುತ್ತೆ ಅಂತ ನೋಡೋಣ.

1. ಹಿಂದಿನ ಕಾಲದಿಂದನೂ ಯೆಹೋವನ ಸೇವಕರು ಆತನಿಗಾಗಿ ಏನು ಮಾಡಿದ್ದಾರೆ?

 ನೀವು ಯೆಹೋವನನ್ನ ಪ್ರೀತಿಸ್ತೀರಾ? ಅದ್ರಲ್ಲಿ ಅನುಮಾನನೇ ಇಲ್ಲ. ನಿಮ್ಮ ತರನೇ ಹಿಂದಿನ ಕಾಲದಲ್ಲಿ ಎಷ್ಟೋ ಜನ ಯೆಹೋವನನ್ನ ಪ್ರೀತಿಸಿದ್ದಾರೆ. (ಕೀರ್ತ. 104:33, 34) ಆತನಿಗಾಗಿ ತ್ಯಾಗಗಳನ್ನೂ ಮಾಡಿದ್ದಾರೆ. ಅದ್ರಲ್ಲೂ ಇಸ್ರಾಯೇಲಲ್ಲಿ ಇದ್ದ ನಾಜೀರರು ಯೆಹೋವನಿಗಾಗಿ ಎಷ್ಟೋ ತ್ಯಾಗಗಳನ್ನ ಮಾಡಿದ್ದಾರೆ. ಈ ನಾಜೀರರು ಯಾರು? ಇವ್ರಿಂದ ನಾವೇನು ಕಲಿಬಹುದು?

2. (ಎ) ನಾಜೀರರು ಯಾರು? (ಅರಣ್ಯಕಾಂಡ 6:1, 2) (ಬಿ) ಕೆಲವು ಇಸ್ರಾಯೇಲ್ಯರು ನಾಜೀರರಾಗೋಕೆ ಯಾಕೆ ಮುಂದೆ ಬಂದ್ರು?

2 “ನಾಜೀರ” ಅನ್ನೋ ಹೀಬ್ರು ಪದಕ್ಕೆ “ಒಂಟಿ,” “ಅದಕ್ಕಂತಾನೇ ಇರೋನು” ಮತ್ತು “ಮೀಸಲು” ಅನ್ನೋ ಅರ್ಥ ಇದೆ. ಈ ನಾಜೀರರು ಯೆಹೋವನ ಸೇವೆಯನ್ನ ಜಾಸ್ತಿ ಮಾಡೋಕೆ ಆಸೆ ಇಟ್ಕೊಂಡಿದ್ದ ಇಸ್ರಾಯೇಲ್ಯರಾಗಿದ್ರು. ಇವರು ಯೆಹೋವನಿಗಾಗಿ ತುಂಬ ತ್ಯಾಗಗಳನ್ನ ಮಾಡ್ತಿದ್ರು ಮತ್ತು ಆತನಿಗಾಗಿ ವಿಶೇಷ ಹರಕೆ ಹೊತ್ಕೊಂಡಿದ್ರು. ಮೋಶೆಯ ನಿಯಮದ ಪ್ರಕಾರ ಗಂಡಸ್ರಾಗಲಿ, ಹೆಂಗಸ್ರಾಗಲಿ ಯಾರು ಬೇಕಾದ್ರೂ ಅವರು ಇಷ್ಟಪಡುವಷ್ಟು ಸಮಯ ನಾಜೀರರಾಗಿ ಇರ್ತೀವಿ ಅಂತ ಮಾತು ಕೊಡಬಹುದಿತ್ತು. a (ಅರಣ್ಯಕಾಂಡ 6:1, 2 ಓದಿ.) ನಾಜೀರರಿಗೆ ಅಂತಾನೇ ಕೆಲವು ನಿಯಮಗಳಿತ್ತು. ಇದನ್ನ ಬೇರೆ ಇಸ್ರಾಯೇಲ್ಯರು ಪಾಲಿಸಬೇಕಾಗಿರಲಿಲ್ಲ. ಹಾಗಿದ್ರೂ ಕೆಲವು ಇಸ್ರಾಯೇಲ್ಯರು ನಾಜೀರರಾಗೋಕೆ ಮುಂದೆ ಬರ್ತಿದ್ರು. ಯಾಕೆ? ಯಾಕಂದ್ರೆ ಅವ್ರಿಗೆ ಯೆಹೋವನ ಮೇಲೆ ತುಂಬ ಪ್ರೀತಿ ಇತ್ತು, ಯೆಹೋವ ಮಾಡಿದ ವಿಷ್ಯಗಳಿಗೆ ಥ್ಯಾಂಕ್ಸ್‌ ಹೇಳೋಕೆ ಅವ್ರಿಗೆ ಆಸೆ ಇತ್ತು.—ಧರ್ಮೋ. 6:5; 16:17.

3. ನಾಜೀರರ ತರ ಇವತ್ತು ಯೆಹೋವನ ಸೇವಕರು ಏನು ಮಾಡ್ತಿದ್ದಾರೆ?

3 “ಕ್ರಿಸ್ತನ ನಿಯಮ” ಬಂದಾಗ ಮೋಶೆಯ ನಿಯಮ ನಿಂತು ಹೋಯ್ತು. ಹಾಗಾಗಿ ಇಸ್ರಾಯೇಲ್ಯರು ನಾಜೀರರಾಗಿ ಸೇವೆ ಮಾಡೋದೂ ನಿಂತೋಯ್ತು. (ಗಲಾ. 6:2; ರೋಮ. 10:4) ಆದ್ರೆ ನಾಜೀರರ ತರ ಇವತ್ತು ಎಷ್ಟೋ ಯೆಹೋವನ ಸೇವಕರು ಪೂರ್ಣ ಪ್ರಾಣ, ಹೃದಯ, ಮನಸ್ಸು ಮತ್ತು ಶಕ್ತಿಯಿಂದ ಯೆಹೋವನನ್ನ ಆರಾಧಿಸೋಕೆ ಇಷ್ಟ ಪಡ್ತಾರೆ. (ಮಾರ್ಕ 12:30) ಅದಕ್ಕೇ ಯೆಹೋವನಿಗೆ ಸಮರ್ಪಿಸಿಕೊಂಡು ಇನ್ಮುಂದೆ ನಿನ್ನನ್ನೇ ಆರಾಧಿಸ್ತೀವಿ ಅಂತ ಮಾತು ಕೊಡ್ತಾರೆ. ಆ ಮಾತನ್ನ ಉಳಿಸ್ಕೊಳ್ಳೋಕೆ ಆತನಿಗೆ ಇಷ್ಟ ಇರೋದನ್ನೇ ಮಾಡ್ತಾರೆ ಮತ್ತು ತುಂಬ ತ್ಯಾಗಗಳನ್ನೂ ಮಾಡ್ತಾರೆ. ಹಾಗಾಗಿ ನಾವೀಗ, ಕೊಟ್ಟ ಮಾತನ್ನ ಉಳಿಸ್ಕೊಳ್ಳೋಕೆ ನಾಜೀರರು ಏನು ಮಾಡಿದ್ರು? ಅವ್ರಿಂದ ನಾವೇನು ಕಲಿಬಹುದು? ಅಂತ ನೋಡೋಣ. bಮತ್ತಾ. 16:24.

ತ್ಯಾಗಗಳನ್ನ ಮಾಡಿ

4. ನಾಜೀರರು ಯಾವ ತ್ಯಾಗ ಮಾಡಿದ್ರು? (ಅರಣ್ಯಕಾಂಡ 6:3, 4)

4 ಅರಣ್ಯಕಾಂಡ 6:3, 4 ಓದಿ. ನಾಜೀರರು ದ್ರಾಕ್ಷಾಮದ್ಯ ಕುಡಿಬಾರದಿತ್ತು. ದ್ರಾಕ್ಷಿ, ಒಣ ದ್ರಾಕ್ಷಿನೂ ತಿನ್ನಬಾರದಿತ್ತು. ಅವ್ರ ಸುತ್ತಮುತ್ತ ಇದ್ದ ಜನ ಇದನ್ನೆಲ್ಲ ತಿಂತಿದ್ರು, ಕುಡಿತಿದ್ರು. ಅದೇನೂ ತಪ್ಪಾಗಿರಲಿಲ್ಲ. ಯಾಕಂದ್ರೆ ಯೆಹೋವ ಇದನ್ನೆಲ್ಲ ಗಿಫ್ಟಾಗಿ ಕೊಟ್ಟಿದ್ದಾನೆ. ಅದಕ್ಕೇ ಬೈಬಲ್‌ ‘ದ್ರಾಕ್ಷಾಮದ್ಯ ಮನುಷ್ಯರ ಹೃದಯಗಳನ್ನ ಸಂತೋಷಪಡಿಸುತ್ತೆ’ ಅಂತ ಹೇಳುತ್ತೆ. (ಕೀರ್ತ. 104:14, 15) ಹಾಗಿದ್ರೂ ನಾಜೀರರು ಇದನ್ನೆಲ್ಲ ತ್ಯಾಗ ಮಾಡಿದ್ರು. c

ನಾಜೀರರ ತರ ತ್ಯಾಗಗಳನ್ನ ಮಾಡೋಕೆ ನೀವೂ ಮುಂದೆ ಬರ್ತೀರಾ? (ಪ್ಯಾರ 4-6 ನೋಡಿ)


5. ಮಾಡಿಯಾನ್‌ ಮತ್ತು ಮಾರ್ಸೆಲ ಯಾವ ತ್ಯಾಗಗಳನ್ನ ಮಾಡಿದ್ರು ಮತ್ತು ಯಾಕೆ?

5 ನಾಜೀರರ ತರ ಇವತ್ತು ಯೆಹೋವನ ಜನ್ರು ತುಂಬ ತ್ಯಾಗಗಳನ್ನ ಮಾಡ್ತಿದ್ದಾರೆ. ಮಾಡಿಯಾನ್‌ ಮತ್ತು ಮಾರ್ಸೆಲ d ಅವ್ರ ಉದಾಹರಣೆ ನೋಡಿ. ಅವ್ರ ಜೀವನದಲ್ಲಿ ಯಾವುದಕ್ಕೂ ಕಮ್ಮಿ ಇರ್ಲಿಲ್ಲ. ಕೈತುಂಬ ಸಂಬಳ ಬರ್ತಿತ್ತು, ದೊಡ್ಡ ಮನೆಲಿ ಇದ್ರು, ಅವ್ರ ಜೀವನ ಆರಾಮಾಗಿತ್ತು. ಆದ್ರೆ ಅವ್ರಿಗೆ ಯೆಹೋವನ ಸೇವೆ ಜಾಸ್ತಿ ಮಾಡಬೇಕು ಅಂತ ಆಸೆ ಆಯ್ತು. ಅದಕ್ಕೆ ಅವರು ಯಾವೆಲ್ಲ ತ್ಯಾಗ ಮಾಡಿದ್ರು? “ಖರ್ಚು ಕಡಿಮೆ ಮಾಡಿದ್ವಿ, ದೊಡ್ಡಮನೆ ಬಿಟ್ಟು ಚಿಕ್ಕ ಮನೆಗೆ ಹೋದ್ವಿ, ಕಾರ್‌ ಮಾರಿದ್ವಿ” ಅಂತ ಅವರು ಹೇಳ್ತಾರೆ. ಮಾಡಿಯಾನ್‌ ಮತ್ತು ಮಾರ್ಸೆಲ ಈ ತ್ಯಾಗನೆಲ್ಲ ಮಾಡಬೇಕು ಅಂತೇನೂ ಇರ್ಲಿಲ್ಲ. ಆದ್ರೂ ಯೆಹೋವನ ಸೇವೆ ಜಾಸ್ತಿ ಮಾಡಬೇಕು ಅನ್ನೋ ಆಸೆಯಿಂದ ಇದನ್ನೆಲ್ಲ ಮಾಡಿದ್ರು. ಅವರು ಈ ನಿರ್ಧಾರ ತಗೊಂಡಿದ್ದಕ್ಕೆ ಈಗ ಖುಷಿಖುಷಿಯಾಗಿ ಇದ್ದಾರೆ ಮತ್ತು ತೃಪ್ತಿಯಿಂದ ಇದ್ದಾರೆ.

6. ಇವತ್ತು ಯೆಹೋವನ ಜನ್ರು ಯಾಕೆ ತ್ಯಾಗಗಳನ್ನ ಮಾಡ್ತಿದ್ದಾರೆ? (ಚಿತ್ರನೂ ನೋಡಿ.)

6 ಇವತ್ತು ಎಷ್ಟೋ ಯೆಹೋವನ ಸೇವಕರು ಆತನ ಸೇವೆ ಜಾಸ್ತಿ ಮಾಡೋಕೆ ಖುಷಿಖುಷಿಯಿಂದ ತುಂಬ ತ್ಯಾಗಗಳನ್ನ ಮಾಡ್ತಿದ್ದಾರೆ. (1 ಕೊರಿಂ. 9:3-6) ಯೆಹೋವ ಈ ರೀತಿ ತ್ಯಾಗಗಳನ್ನ ಮಾಡೋಕೆ ನಮ್ಮಿಂದ ಕೇಳ್ಕೊಳ್ತಿಲ್ಲ, ಹಾಗಂತ ಇದನ್ನ ಮಾಡೋದು ತಪ್ಪೂ ಅಲ್ಲ. ಯೆಹೋವನ ಸೇವೆ ಜಾಸ್ತಿ ಮಾಡೋಕೆ ಕೆಲವರು ಒಳ್ಳೇ ಕೆಲಸ ಬಿಟ್ಟಿದ್ದಾರೆ, ಸ್ವಂತ ಮನೆ ತಗೊಳ್ಳೋಕೆ, ಮನೆಲಿ ಪ್ರಾಣಿಗಳನ್ನ ಸಾಕೋಕೆ ಆಸೆ ಇದ್ರೂ ಅದನ್ನ ತ್ಯಾಗ ಮಾಡಿದ್ದಾರೆ. ಕೆಲವರು ಲೇಟಾಗಿ ಮದುವೆ ಮಾಡ್ಕೊಳ್ಳೋಕೆ ತೀರ್ಮಾನ ಮಾಡಿದ್ದಾರೆ. ಇನ್ನು ಕೆಲವರು ಮದುವೆ ಆದ್ರೂ ಕೆಲವು ವರ್ಷ ಮಕ್ಕಳು ಬೇಡ ಅಂತ ತೀರ್ಮಾನ ಮಾಡಿದ್ದಾರೆ. ಕೆಲವ್ರಿಗೆ ಕುಟುಂಬ ಬಿಟ್ಟು ದೂರ ಹೋಗೋಕೆ ಕಷ್ಟ ಆದ್ರೂ ಅಗತ್ಯ ಇರೋ ಕಡೆ ಹೋಗ್ತಾರೆ. ಇವ್ರೆಲ್ಲ ಯಾಕೆ ಈ ತ್ಯಾಗ ಮಾಡ್ತಿದ್ದಾರೆ? ಯೆಹೋವನ ಸೇವೆಯನ್ನ ತಮ್ಮ ಕೈಲಾದಷ್ಟು ಮಾಡಬೇಕು ಅನ್ನೋ ಆಸೆಯಿಂದಾನೇ. ನೀವು ಮಾಡೋ ತ್ಯಾಗ ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಯೆಹೋವ ಅದನ್ನ ಗಮನಿಸ್ತಾನೆ ಮತ್ತು ಅಮೂಲ್ಯವಾಗಿ ನೋಡ್ತಾನೆ.—ಇಬ್ರಿ. 6:10.

ಲೋಕದ ಜನ್ರಿಗೂ ನಿಮಗೂ ವ್ಯತ್ಯಾಸ ಇದೆ ಅಂತ ತೋರಿಸ್ಕೊಡಿ

7. ನಾಜೀರರಿಗೆ ಕೊಟ್ಟ ಮಾತನ್ನ ಉಳಿಸ್ಕೊಳ್ಳೋಕೆ ಯಾಕೆ ಕಷ್ಟ ಆಗಬಹುದಿತ್ತು? (ಅರಣ್ಯಕಾಂಡ 6:5) (ಚಿತ್ರನೂ ನೋಡಿ.)

7 ಅರಣ್ಯಕಾಂಡ 6:5 ಓದಿ. ನಾಜೀರರು ತಮ್ಮ ತಲೆ ಕೂದಲನ್ನ ಕತ್ತರಿಸಲ್ಲ ಅಂತ ಮಾತು ಕೊಟ್ಟಿದ್ರು. ಹೀಗೆ ತಾವು ಯಾವಾಗ್ಲೂ ಯೆಹೋವನ ಮಾತನ್ನ ಕೇಳ್ತೀವಿ ಅಂತ ತೋರಿಸ್ತಿದ್ರು. ಅವರು ಎಷ್ಟು ವರ್ಷ ನಾಜೀರರಾಗಿ ಇದ್ರೋ ಅವರ ಕೂದಲೂ ಅಷ್ಟು ಉದ್ದ ಇರ್ತಿತ್ತು. ಅದನ್ನ ಜನ್ರು ಗಮನಿಸ್ತಾ ಇದ್ರು. ಸುತ್ತಮುತ್ತ ಇದ್ದ ಜನ್ರು ಸಹಕಾರ ಕೊಟ್ಟಿದ್ದಿದ್ರೆ ನಾಜೀರರಿಗೆ ತಾವು ಕೊಟ್ಟ ಮಾತನ್ನ ಉಳಿಸ್ಕೊಳ್ಳೋಕೆ ಸುಲಭ ಆಗ್ತಿತ್ತು. ಆದ್ರೆ ಕೆಲವರು ಅವ್ರಿಗೆ ಸಹಕಾರ ಕೊಡ್ತಿರಲಿಲ್ಲ, ಗೌರವ ಕೊಡ್ತಿರಲಿಲ್ಲ. ಉದಾಹರಣೆಗೆ ಪ್ರವಾದಿ ಆಮೋಸನ ಕಾಲದಲ್ಲಿದ್ದ ಕೆಲವು ಭ್ರಷ್ಟ ಇಸ್ರಾಯೇಲ್ಯರು “ನಾಜೀರರಿಗೆ ದ್ರಾಕ್ಷಾಮದ್ಯ ಕುಡಿಸ್ತಾ” ಇದ್ರು. (ಆಮೋ. 2:12) ಹೀಗೆ ಅವರು ನಾಜೀರರು ಕೊಟ್ಟ ಮಾತನ್ನ ಮುರಿಯೋಕೆ ಒತ್ತಾಯ ಮಾಡ್ತಿದ್ರು. ಹಾಗಾಗಿ ನಾಜೀರರು ದೇವರಿಗೆ ಕೊಟ್ಟ ಮಾತನ್ನ ಮುರಿದೇ ಇರೋಕೆ ಧೈರ್ಯ ತೋರಿಸಬೇಕಿತ್ತು. ಅಷ್ಟೇ ಅಲ್ಲ, ತಮಗೂ ಬೇರೆಯವ್ರಿಗೂ ವ್ಯತ್ಯಾಸ ಇದೆ ಅಂತ ತೋರಿಸೋಕೆ ಅವರು ಹೆದರಬಾರದಿತ್ತು.

ಬೇರೆಯವ್ರಿಗೂ ತಮಗೂ ವ್ಯತ್ಯಾಸ ಇದ್ರೂ ನಾಜೀರರು ತಾವು ಕೊಟ್ಟ ಮಾತನ್ನ ಉಳಿಸ್ಕೊಳ್ತಿದ್ರು (ಪ್ಯಾರ 7 ನೋಡಿ)


8. ಬೆಂಜಮಿನ್‌ ಉದಾಹರಣೆಯಿಂದ ನೀವೇನು ಕಲಿತ್ರಿ?

8 ನಮಗೆ ನಾಚಿಕೆ ಸ್ವಭಾವ ಇದ್ರೂ ಯೆಹೋವನ ಸಹಾಯದಿಂದ ಧೈರ್ಯವಾಗಿ ಇರಬಹುದು. ಬೇರೆಯವ್ರಿಗೂ ನಮಗೂ ವ್ಯತ್ಯಾಸ ಇದೆ ಅಂತ ತೋರಿಸಬಹುದು. ನಾರ್ವೆಯಲ್ಲಿರೋ ಬೆಂಜಮಿನ್‌ ಅನ್ನೋ ಹತ್ತು ವರ್ಷದ ಹುಡುಗನ ಉದಾಹರಣೆ ನೋಡಿ. ಯುಕ್ರೇನ್‌ ದೇಶದಲ್ಲಿ ಯುದ್ಧ ನಡಿತಿದ್ದಾಗ ಆ ದೇಶದ ಜನ್ರನ್ನ ಬೆಂಬಲಿಸೋಕೆ ಅವನ ಶಾಲೆಯ ಟೀಚರ್ಸ್‌ ತೀರ್ಮಾನಿಸಿದ್ರು. ಅದಕ್ಕೆ ಮಕ್ಕಳೆಲ್ರೂ ಯುಕ್ರೇನ್‌ ದೇಶದ ಧ್ವಜದಲ್ಲಿರೋ ಬಣ್ಣಗಳ ಬಟ್ಟೆಯನ್ನ ಹಾಕೊಂಡು ಒಂದು ಹಾಡು ಹಾಡಬೇಕಿತ್ತು. ಆದ್ರೆ ಇದ್ರಲ್ಲಿ ಭಾಗವಹಿಸೋಕೆ ಬೆಂಜಮಿನ್‌ಗೆ ಇಷ್ಟ ಇರಲಿಲ್ಲ. ಅದಕ್ಕೆ ಅವನು ದೂರದಲ್ಲಿ ನಿಂತ್ಕೊಂಡಿದ್ದ. ಆಗ ಟೀಚರ್‌ ಅವನನ್ನ ನೋಡಿ ಜೋರಾಗಿ ಕರೆದ್ರು. “ಬೇಗ ಬಂದು ಇಲ್ಲಿ ನಿಂತ್ಕೊ. ನಾವೆಲ್ಲ ನಿಂಗೋಸ್ಕರನೇ ಕಾಯ್ತಿದ್ದೀವಿ” ಅಂತ ಹೇಳಿದ್ರು. ಆಗ ಬೆಂಜಮಿನ್‌ ಆ ಟೀಚರ್‌ ಹತ್ರ ಬಂದು ಧೈರ್ಯದಿಂದ “ನಾನು ಇದನ್ನೆಲ್ಲ ಮಾಡಲ್ಲ, ರಾಜಕೀಯ ವಿಷ್ಯಗಳಲ್ಲಿ ತಲೆಹಾಕಲ್ಲ. ಯುದ್ಧಕ್ಕೆ ಹೋಗದೇ ಇರೋದಕ್ಕೇ ಎಷ್ಟೋ ಯೆಹೋವನ ಸಾಕ್ಷಿಗಳನ್ನ ಜೈಲಿಗೆ ಹಾಕಿದ್ದಾರೆ” ಅಂತ ಹೇಳಿದ. ಅವನು ಹೇಳಿದ್ದನ್ನ ಟೀಚರ್‌ ಒಪ್ಕೊಂಡ್ರು, ಅವನು ಬಂದಿಲ್ಲಾಂದ್ರೂ ಪರವಾಗಿಲ್ಲ ಅಂತ ಹೇಳಿದ್ರು. ಆದ್ರೆ ಅವನ ಫ್ರೆಂಡ್ಸ್‌ “ನೀನು ಯಾಕೆ ಬರ್ಲಿಲ್ಲ” ಅಂತ ಕೇಳಿದಾಗ ಅವನಿಗೆ ಹೇಳೋಕೆ ಕಷ್ಟ ಆಗ್ತಿತ್ತು, ಅಳುನೂ ಬರ್ತಿತ್ತು. ಆದ್ರೂ ಅವನು, ಟೀಚರ್‌ ಹತ್ರ ಏನು ಹೇಳಿದನೋ ಅದನ್ನೇ ಅವರಿಗೂ ಧೈರ್ಯವಾಗಿ ಹೇಳಿದ. ಇದೆಲ್ಲ ಆಗಿ ಅವನು ಮನೆಗೆ ಹೋದ್ಮೇಲೆ ಶಾಲೆಯಲ್ಲಿ ಏನಾಯ್ತು, ಯೆಹೋವ ಅವನಿಗೆ ಹೇಗೆ ಧೈರ್ಯ ಕೊಟ್ಟನು ಅಂತ ಅವನ ಅಪ್ಪಅಮ್ಮನಿಗೆ ಹೇಳಿದ.

9. ಯೆಹೋವನ ಮನಸ್ಸನ್ನ ಖುಷಿಪಡಿಸೋಕೆ ನಾವೇನು ಮಾಡಬೇಕು?

9 ನಾವು ಎಲ್ಲಾ ವಿಷ್ಯದಲ್ಲಿ ಯೆಹೋವನ ಮಾತು ಕೇಳೋದ್ರಿಂದ ನಮಗೂ ಬೇರೆಯವ್ರಿಗೂ ಎಷ್ಟು ವ್ಯತ್ಯಾಸ ಇದೆ ಅಂತ ಜನ ಗಮನಿಸ್ತಾರೆ. ಅದಕ್ಕೇ ನಾವು ಶಾಲೆಯಲ್ಲಿ, ಕೆಲಸದ ಜಾಗದಲ್ಲಿ ಎಲ್ಲೇ ಇದ್ರೂ ಯೆಹೋವನ ಸಾಕ್ಷಿಗಳು ಅಂತ ಹೇಳೋಕೆ ಹೆದರಬಾರದು. ಈ ಲೋಕದ ಜನ್ರು ನಡ್ಕೊಳ್ಳೋ ರೀತಿ ಮತ್ತು ಅವ್ರ ಯೋಚನೆ ತುಂಬ ಕೀಳ್ಮಟ್ಟಕ್ಕೆ ಇಳಿದಿದೆ. ಹಾಗಾಗಿ ಯೆಹೋವ ಹೇಳಿದ ಹಾಗೆ ನಡ್ಕೊಳ್ಳೋಕೆ ಮತ್ತು ಸಿಹಿಸುದ್ದಿ ಸಾರೋಕೆ ಕೆಲವೊಮ್ಮೆ ನಮಗೆ ಕಷ್ಟ ಆಗಬಹುದು. (2 ತಿಮೊ. 1:8; 3:13) ಆದ್ರೂ ನಾವು ಧೈರ್ಯ ತೋರಿಸಿದ್ರೆ ‘ಯೆಹೋವನ ಮನಸ್ಸನ್ನ ಖುಷಿಪಡಿಸೋಕೆ’ ಆಗುತ್ತೆ.—ಜ್ಞಾನೋ. 27:11; ಮಲಾ. 3:18.

ನಿಮ್ಮ ಜೀವನದಲ್ಲಿ ಯೆಹೋವನೇ ಮುಖ್ಯ ಅಂತ ತೋರಿಸಿ

10. ಅರಣ್ಯಕಾಂಡ 6:6, 7ರಲ್ಲಿ ಇರೋದನ್ನ ಪಾಲಿಸೋಕೆ ನಾಜೀರರಿಗೆ ಯಾಕೆ ಕಷ್ಟ ಆಗಿರಬಹುದು?

10 ಅರಣ್ಯಕಾಂಡ 6:6, 7 ಓದಿ. ನಾಜೀರರು ಶವದ ಹತ್ರ ಹೋಗಬಾರದಿತ್ತು. ಇದು ಕೂಡ ಒಂದು ತ್ಯಾಗನೇ. ಯಾಕಂದ್ರೆ ಅವ್ರ ಸಂಬಂಧಿಕರು, ಸ್ನೇಹಿತರು ತೀರಿ ಹೋದ್ರೂ ಅವರು ಅಲ್ಲಿಗೆ ಹೋಗೋ ಹಾಗಿರಲಿಲ್ಲ. ಅದೂ ಅಲ್ಲದೇ ಆ ಕಾಲದಲ್ಲಿ ಶವ ಸಂಸ್ಕಾರವನ್ನ ಯೆಹೂದ್ಯರ ಪದ್ಧತಿ ಪ್ರಕಾರ ಮಾಡೋಕೆ ಶವದ ಹತ್ರನೇ ಹೋಗಬೇಕಿತ್ತು. (ಯೋಹಾ. 19:39, 40; ಅ. ಕಾ. 9:36-40) ಅದನ್ನೂ ಅವರು ಮಾಡೋ ಹಾಗಿರಲಿಲ್ಲ. ಅವರು ಎಷ್ಟು ದುಃಖದಲ್ಲಿ ಇದ್ರೂ ಯೆಹೋವನ ಮಾತನ್ನ ಮುರಿತಿರಲಿಲ್ಲ. ಹೀಗೆ ಅವರು ಯೆಹೋವನ ಮೇಲೆ ಎಷ್ಟು ನಂಬಿಕೆ ಇದೆ ಅಂತ ತೋರಿಸ್ತಿದ್ರು. ಆಗ ಯೆಹೋವನೂ ಅದನ್ನೆಲ್ಲ ಸಹಿಸ್ಕೊಳ್ಳೋಕೆ ಅವ್ರಿಗೆ ಖಂಡಿತ ಸಹಾಯ ಮಾಡಿರ್ತಾನೆ.

11. ನಾವು ಕುಟುಂಬಕ್ಕೆ ಸಂಬಂಧಪಟ್ಟ ನಿರ್ಧಾರಗಳನ್ನ ಮಾಡುವಾಗ ಯಾವ ವಿಷ್ಯ ಮರಿಬಾರದು? (ಚಿತ್ರನೂ ನೋಡಿ.)

11 ಕ್ರೈಸ್ತರಾದ ನಾವೂ ಯೆಹೋವನಿಗೆ ನಮ್ಮನ್ನ ಸಮರ್ಪಿಸ್ಕೊಂಡಿದ್ದೀವಿ. ಹಾಗಾಗಿ ನಾವಾತನಿಗೆ ಕೊಟ್ಟ ಮಾತನ್ನ ಯಾವತ್ತೂ ಹಗುರವಾಗಿ ತಗೊಳ್ಳಲ್ಲ. ನಾವು ನಮ್ಮ ಕುಟುಂಬದ ಜವಾಬ್ದಾರಿಗಳನ್ನ ಮಾಡ್ತೀವಿ ನಿಜ. ಆದ್ರೆ ನಮ್ಮ ಕುಟುಂಬದವ್ರ ಇಷ್ಟಕ್ಕಿಂತ ಯೆಹೋವ ನಮ್ಮಿಂದ ಏನು ಕೇಳ್ಕೊಳ್ತಾನೋ ಅದನ್ನ ನಾವು ಮೊದ್ಲು ಮಾಡ್ತೀವಿ. (ಮತ್ತಾ. 10:35-37; 1 ತಿಮೊ. 5:8) ಕೆಲವೊಮ್ಮೆ ನಾವು ತಗೊಳ್ಳೋ ನಿರ್ಧಾರಗಳು ನಮ್ಮ ಕುಟುಂಬದವ್ರಿಗೆ ಇಷ್ಟ ಆಗದೇ ಇರಬಹುದು. ಆದ್ರೆ ಅದು ಯೆಹೋವನನ್ನ ಖುಷಿಪಡಿಸುತ್ತೆ ಅಂದ್ರೆ ನಾವದನ್ನ ಮಾಡ್ತೀವಿ.

ಎಷ್ಟೇ ಕಷ್ಟ ಆದ್ರೂ ಯೆಹೋವನೇ ನಿಮ್ಮ ಜೀವನದಲ್ಲಿ ಮುಖ್ಯ ಅಂತ ತೋರಿಸ್ತೀರಾ? (ಪ್ಯಾರ 11 ನೋಡಿ) e


12. ತನ್ನ ಹೆಂಡತಿ ಬೈಬಲ್‌ ಕಲಿಯೋಕೆ ಒಪ್ಪದೇ ಇದ್ರೂ ಅಲೆಕ್ಸಾಂಡ್ರು ಏನು ಮಾಡಿದ್ರು ಮತ್ತು ಏನು ಮಾಡಲಿಲ್ಲ?

12 ಅಲೆಕ್ಸಾಂಡ್ರು ಮತ್ತು ಡೋರಿನ ಉದಾಹರಣೆ ನೋಡಿ. ಅವ್ರಿಬ್ರೂ ಬೈಬಲ್‌ ಕಲಿಯೋಕೆ ಶುರುಮಾಡಿದ್ರು. ಆದ್ರೆ ಒಂದು ವರ್ಷ ಆದ್ಮೇಲೆ ಡೋರಿನ ಬೈಬಲ್‌ ಕಲಿಯೋದನ್ನ ನಿಲ್ಲಿಸಿದ್ರು. ಅಲೆಕ್ಸಾಂಡ್ರುಗೂ ನಿಲ್ಲಿಸೋಕೆ ಒತ್ತಾಯ ಮಾಡಿದ್ರು. ಆದ್ರೆ ಅಲೆಕ್ಸಾಂಡ್ರು ಬೈಬಲ್‌ ಕಲಿಯೋದನ್ನ ನಿಲ್ಲಿಸಲ್ಲ ಅಂತ ಡೋರಿನಗೆ ಅರ್ಥಮಾಡಿಸಿದ್ರು. ಆದ್ರೆ ಡೋರಿನ ಅದಕ್ಕೆ ಒಪ್ತಾ ಇರಲಿಲ್ಲ. ಡೋರಿನ ಯಾಕೆ ಹೀಗೆ ಮಾಡ್ತಿದ್ದಾಳೆ ಅಂತ ಅರ್ಥಮಾಡ್ಕೊಳ್ಳೋಕೆ ಅವರು ತುಂಬ ಪ್ರಯತ್ನ ಮಾಡಿದ್ರು. ಆದ್ರೆ ಕೆಲವೊಮ್ಮೆ ಡೋರಿನ ತುಂಬ ಒರಟಾಗಿ ನಡ್ಕೊಳ್ತಾ ಇದ್ದಿದ್ರಿಂದ ಬೈಬಲ್‌ ಕಲಿಯೋದನ್ನ ನಿಲ್ಲಿಸಿಬಿಡೋಣ ಅಂತ ಅಲೆಕ್ಸಾಂಡ್ರುಗೆ ಅನಿಸ್ತಿತ್ತು. ಹಾಗಿದ್ರೂ ಅವರು ತಮ್ಮ ಹೆಂಡತಿಗೆ ಪ್ರೀತಿ ತೋರಿಸ್ತಿದ್ರು, ಗೌರವ ಕೊಡ್ತಿದ್ರು. ತಮ್ಮ ಜೀವನದಲ್ಲಿ ಯೆಹೋವನೇ ಮುಖ್ಯ ಅಂತ ತೋರಿಸಿದ್ರು. ಕೊನೆಗೆ ಅವ್ರನ್ನ ನೋಡಿ ಅವ್ರ ಹೆಂಡತಿನೂ ಬೈಬಲನ್ನ ಮತ್ತೆ ಕಲಿಯೋಕೆ ಶುರುಮಾಡಿದ್ರು. ಕೊನೆಗೆ ದೀಕ್ಷಾಸ್ನಾನ ತಗೊಂಡ್ರು.—“ಸತ್ಯ ಜೀವನವನ್ನು ಬದಲಾಯಿಸಿತು” ಅನ್ನೋ ವಿಡಿಯೋ ಸರಣಿಯಲ್ಲಿ ಅಲೆಕ್ಸಾಂಡ್ರು ಮತ್ತು ಡೋರಿನ ವಾಕರ್‌: ‘ಪ್ರೀತಿ, ತಾಳ್ಮೆ ಮತ್ತು ದಯೆ ತೋರಿಸುತ್ತೆ’ ವಿಡಿಯೋ ನೋಡಿ.

13. ಯೆಹೋವನನ್ನೂ ಮತ್ತು ನಮ್ಮ ಕುಟುಂಬದವ್ರನ್ನೂ ಪ್ರೀತಿಸ್ತೀವಿ ಅಂತ ಹೇಗೆ ತೋರಿಸಬಹುದು?

13 ಯೆಹೋವನೇ ಕುಟುಂಬಗಳನ್ನ ಮಾಡಿದ್ದಾನೆ. ಕುಟುಂಬದಲ್ಲಿರೋ ಎಲ್ರೂ ಖುಷಿಯಾಗಿರಬೇಕು ಅಂತಾನೂ ಆತನು ಇಷ್ಟಪಡ್ತಾನೆ. (ಎಫೆ. 3:14, 15) ಹಾಗಾಗಿ ನಾವು ಖುಷಿಯಾಗಿ ಇರಬೇಕಂದ್ರೆ ಆತನಿಗೆ ಏನು ಇಷ್ಟಾನೋ ಅದನ್ನೇ ಮಾಡಬೇಕು. ನಾವು ಹೀಗೆ ಯೆಹೋವನ ಸೇವೆಗೋಸ್ಕರ ತ್ಯಾಗಗಳನ್ನ ಮಾಡೋದ್ರ ಜೊತೆಗೆ ಕುಟುಂಬದವ್ರಿಗೆ ಪ್ರೀತಿ, ಗೌರವ ತೋರಿಸುವಾಗ ಆತನು ನಮ್ಮನ್ನ ಆಶೀರ್ವದಿಸ್ತಾನೆ.—ರೋಮ. 12:10.

ನಾಜೀರರ ತರ ಇರೋಕೆ ಪ್ರೋತ್ಸಾಹಿಸಿ

14. ನಾವು ಯಾರನ್ನೆಲ್ಲ ಪ್ರೋತ್ಸಾಹಿಸಬೇಕು?

14 ಯಾರೆಲ್ಲ ಯೆಹೋವನನ್ನ ಪ್ರೀತಿಸ್ತಾರೋ ಅವರು ತ್ಯಾಗಗಳನ್ನ ಮಾಡೋಕೆ ಮುಂದೆ ಬರ್ತಾರೆ. ಆದ್ರೆ ಕೆಲವೊಂದು ಸಲ ಇದು ಹೇಳಿದಷ್ಟು ಸುಲಭ ಅಲ್ಲ. ಹಾಗಾದ್ರೆ ಅಂಥವ್ರಿಗೆ ನಾವು ಹೇಗೆ ಸಹಾಯ ಮಾಡಬಹುದು? ಅವ್ರನ್ನ ಪ್ರೋತ್ಸಾಹಿಸಬೇಕು, ಹುರಿದುಂಬಿಸೋ ತರ ಮಾತಾಡಬೇಕು. (ಯೋಬ 16:5) ಯೆಹೋವನ ಸೇವೆ ಜಾಸ್ತಿ ಮಾಡೋಕೆ ತಮ್ಮ ಜೀವನವನ್ನ ಸರಳ ಮಾಡ್ಕೊಂಡವರು ಯಾರಾದ್ರೂ ನಿಮ್ಮ ಸಭೆಯಲ್ಲಿ ಇದ್ದಾರಾ? ಶಾಲೆಯಲ್ಲಿ ಕಷ್ಟ ಆದ್ರೂ ತಾನೊಬ್ಬ ಯೆಹೋವನ ಸಾಕ್ಷಿ ಅಂತ ತೋರಿಸ್ಕೊಳ್ಳೋಕೆ ಭಯಪಡದೇ ಇರೋ ಯುವಜನ್ರು ಯಾರಾದ್ರೂ ನಿಮಗೆ ಗೊತ್ತಿದ್ದಾರಾ? ಕುಟುಂಬದವ್ರಿಂದ ವಿರೋಧ, ಹಿಂಸೆ ಬಂದ್ರೂ ಯೆಹೋವನಿಗೆ ನಿಯತ್ತಿಂದ ಇರೋ ಸಹೋದರ ಸಹೋದರಿಯರು, ಬೈಬಲ್‌ ವಿದ್ಯಾರ್ಥಿಗಳು ನಿಮಗೆ ಪರಿಚಯ ಇದ್ದಾರಾ? ಹಾಗಾದ್ರೆ ಅವ್ರನ್ನ ಪ್ರೋತ್ಸಾಹಿಸೋಕೆ ಸಿಗೋ ಪ್ರತಿಯೊಂದು ಅವಕಾಶವನ್ನ ಉಪಯೋಗಿಸ್ಕೊಳ್ಳಿ. ‘ನೀವು ತುಂಬ ಧೈರ್ಯ ತೋರಿಸ್ತಿದ್ದೀರ’ ಅಂತ ಹೊಗಳಿ.—ಫಿಲೆ. 4, 5, 7.

15. ಪೂರ್ಣ ಸಮಯದ ಸೇವೆ ಮಾಡ್ತಿರುವವ್ರಿಗೆ ಕೆಲವರು ಹೇಗೆ ಸಹಾಯ ಮಾಡಿದ್ದಾರೆ?

15 ಪೂರ್ಣ ಸಮಯದ ಸೇವೆ ಮಾಡ್ತಿರುವವ್ರಿಗೆ ನಾವು ಸಹಾಯನೂ ಮಾಡಬಹುದು. (ಜ್ಞಾನೋ. 19:17; ಇಬ್ರಿ. 13:16) ಶ್ರೀಲಂಕದಲ್ಲಿರೋ ಒಬ್ಬ ವಯಸ್ಸಾದ ಸಹೋದರಿಯ ಉದಾಹರಣೆ ನೋಡಿ. ಅವ್ರಿಗೆ ಪೆನ್ಶನ್‌ ಜಾಸ್ತಿ ಆದಾಗ, ಹಣದ ಸಮಸ್ಯೆ ಇರೋ ಇಬ್ರು ಪಯನೀಯರ್‌ ಸಹೋದರಿಯರಿಗೆ ಸಹಾಯ ಮಾಡಬೇಕು ಅಂದ್ಕೊಂಡ್ರು. ಅದಕ್ಕೇ ಅವರು ಪ್ರತಿ ತಿಂಗಳು ಅವ್ರ ಫೋನ್‌ ಬಿಲ್‌ ಕಟ್ಟೋಕೆ ಹಣ ಕೊಡ್ತಿದ್ರು. ಬೇರೆಯವ್ರಿಗೆ ಸಹಾಯ ಮಾಡೋಕೆ ಈ ಸಹೋದರಿಗೆ ಎಷ್ಟು ಧಾರಾಳ ಮನಸ್ಸಿದೆ ಅಲ್ವಾ!

16. ನಾಜೀರರಿಂದ ನಾವೇನು ಕಲಿತ್ವಿ?

16 ಈ ಲೇಖನದಲ್ಲಿ ನಾವು ನಾಜೀರರಿಂದ ತುಂಬ ವಿಷ್ಯಗಳನ್ನ ಕಲಿತ್ವಿ ಅಲ್ವಾ? ಅವ್ರ ಬಗ್ಗೆ ತಿಳ್ಕೊಳ್ಳುವಾಗ ಯೆಹೋವನ ಬಗ್ಗೆನೂ ಕೆಲವು ವಿಷ್ಯಗಳು ನಮಗೆ ಗೊತ್ತಾಯ್ತು. ಅದೇನಂದ್ರೆ, ಯೆಹೋವನ ಮನಸ್ಸನ್ನ ಖುಷಿಪಡಿಸೋಕೆ ನಾವು ತುಂಬ ಆಸೆ ಪಡ್ತೀವಿ ಅಂತ ಆತನಿಗೆ ಚೆನ್ನಾಗಿ ಗೊತ್ತು. ಸಮರ್ಪಣೆಯಲ್ಲಿ ನಾವು ಕೊಟ್ಟ ಮಾತನ್ನ ಉಳಿಸ್ಕೊಳ್ಳೋಕೆ ತ್ಯಾಗಗಳನ್ನ ಮಾಡೋಕೂ ರೆಡಿ ಇದ್ದೀವಿ ಅಂತ ಆತನಿಗೆ ಗೊತ್ತು. ಅದಕ್ಕೇ ನಾವು ಆತನನ್ನ ಎಷ್ಟು ಪ್ರೀತಿಸ್ತೀವಿ ಅಂತ ತೋರಿಸೋಕೆ ನಮಗೊಂದು ಅವಕಾಶ ಕೊಟ್ಟಿದ್ದಾನೆ. (ಜ್ಞಾನೋ. 23:15, 16; ಮಾರ್ಕ 10:28-30; 1 ಯೋಹಾ. 4:19) ನಾಜೀರರ ತರ ನಾವು ಮಾಡೋ ತ್ಯಾಗಗಳನ್ನ ಆತನು ನೆನಪಲ್ಲಿ ಇಟ್ಕೊಳ್ತಾನೆ, ಅಮೂಲ್ಯವಾಗಿ ನೋಡ್ತಾನೆ. ಹಾಗಾಗಿ ಆತನ ಸೇವೆಯನ್ನ ಮನಸ್ಸಾರೆ ಮಾಡೋಕೆ ನಮ್ಮಿಂದಾದ ಎಲ್ಲಾ ತ್ಯಾಗಗಳನ್ನ ಮಾಡ್ತಾ ಇರೋಣ.

ನೀವೇನು ಹೇಳ್ತಿರಾ?

  • ನಾಜೀರರು ಯಾವೆಲ್ಲ ತ್ಯಾಗಗಳನ್ನ ಮಾಡಿದ್ರು? ಹೇಗೆ ಧೈರ್ಯ ತೋರಿಸಿದ್ರು?

  • ನಾಜೀರರ ತರ ಇರೋಕೆ ಬೇರೆಯವ್ರಿಗೆ ಹೇಗೆ ಪ್ರೋತ್ಸಾಹಿಸಬಹುದು?

  • ನಾಜೀರರ ಬಗ್ಗೆ ತಿಳ್ಕೊಳ್ಳೋದ್ರಿಂದ ಯೆಹೋವನ ಬಗ್ಗೆ ಏನು ಗೊತ್ತಾಗುತ್ತೆ?

ಗೀತೆ 63 ಸದಾ ನಿಷ್ಠರು

a ಕೆಲವ್ರನ್ನ ಯೆಹೋವನೇ ನಾಜೀರರಾಗಿ ನೇಮಿಸಿದನು. ಆದ್ರೆ ತುಂಬ ಇಸ್ರಾಯೇಲ್ಯರು ತಾವಾಗೇ ನಾಜೀರರಾಗೋಕೆ ಮುಂದೆ ಬಂದ್ರು. ಅವರು ತಮಗೆ ಇಷ್ಟ ಆಗುವಷ್ಟು ಸಮಯ ಆ ಸೇವೆ ಮಾಡಿದ್ರು.—“ ಯೆಹೋವ ನೇಮಿಸಿದ ನಾಜೀರರು” ಅನ್ನೋ ಚೌಕ ನೋಡಿ.

b ಈ ಹಿಂದೆ ನಮ್ಮ ಪ್ರಕಾಶನಗಳಲ್ಲಿ ನಾಜೀರರನ್ನ ಪೂರ್ಣ ಸಮಯದ ಸೇವಕರಿಗೆ ಹೋಲಿಸಿದ್ರು. ಆದ್ರೆ ಈ ಲೇಖನದಲ್ಲಿ ಯೆಹೋವನಿಗೆ ಸಮರ್ಪಿಸ್ಕೊಂಡಿರೋ ಎಲ್ರೂ ನಾಜೀರರ ತರ ಇರಬಹುದು ಅಂತ ಪ್ರೋತ್ಸಾಹಿಸ್ತಾ ಇದ್ದಾರೆ.

c ನಾಜೀರರು ಯಾವ ತರದ ಕೆಲಸ ಮಾಡಬೇಕು ಅಂತೇನೂ ಯೆಹೋವ ಹೇಳಿರಲಿಲ್ಲ.

d jw.orgನಲ್ಲಿ “ಯೆಹೋವನ ಸಾಕ್ಷಿಗಳ ಅನುಭವಗಳು” ಅನ್ನೋ ಲೇಖನ ಸರಣಿಯಲ್ಲಿ “ಸರಳ ಜೀವನ ಸರಿಯಾದ ತೀರ್ಮಾನ” ಅನ್ನೋ ಲೇಖನ ನೋಡಿ.

e ಚಿತ್ರ ವಿವರಣೆ: ಒಬ್ಬ ನಾಜೀರನ ಕುಟುಂಬದಲ್ಲಿ ಯಾರೋ ಒಬ್ರು ತೀರಿ ಹೋಗಿದ್ದಾರೆ. ಆ ಶವ ಹೊತ್ಕೊಂಡು ಹೋಗೋದನ್ನ ನಾಜೀರ ಮಹಡಿ ಮೇಲಿಂದ ನೋಡ್ತಿದ್ದಾನೆ. ಅಲ್ಲಿಗೆ ಹೋಗೋಕಾಗದೆ ತುಂಬ ದುಃಖ ಪಡ್ತಿದ್ದಾನೆ. ಆದ್ರೂ ಯೆಹೋವನಿಗೆ ಕೊಟ್ಟ ಮಾತನ್ನ ಉಳಿಸ್ಕೊಳ್ತಿದ್ದಾನೆ.