ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಗೊತ್ತಿತ್ತಾ?

ನಿಮಗೆ ಗೊತ್ತಿತ್ತಾ?

ಬೈಬಲಲ್ಲಿ ಕೆಲವು ಪದಗಳನ್ನ ಮತ್ತು ವಾಕ್ಯಗಳನ್ನ ಪದೇಪದೇ ಯಾಕೆ ಹೇಳಿದ್ದಾರೆ?

ಬೈಬಲ್‌ ಬರಹಗಾರರು ಕೆಲವು ವಾಕ್ಯಗಳನ್ನ ಪದೇಪದೇ ಬರೆದಿದ್ದಾರೆ. ಅವರು ಯಾಕೆ ಹಾಗೆ ಬರೆದ್ರು ಅನ್ನೋದಕ್ಕೆ ಮೂರು ಕಾರಣ ಇರಬಹುದು.

ಅವರು ಬರೆದ ಸಮಯದಲ್ಲಿ ಪದೇಪದೇ ಹೇಳಬೇಕಿತ್ತು. ಹಿಂದಿನ ಕಾಲದಲ್ಲಿ ಎಷ್ಟೋ ಇಸ್ರಾಯೇಲ್ಯರ ಹತ್ರ ನಿಯಮ ಪುಸ್ತಕ ಇರ್ಲಿಲ್ಲ. ಅದಕ್ಕೇ ಅವರು ನಿಯಮ ಪುಸ್ತಕವನ್ನ ದೇವಾಲಯದಲ್ಲಿ ಓದ್ತಿದ್ದಾಗ ಅಲ್ಲಿ ಹೋಗಿ ಕೇಳಿಸ್ಕೊಳ್ತಿದ್ರು. (ಧರ್ಮೋ. 31:10-12) ಅವರು ಅಲ್ಲಿ ಗಂಟೆಗಟ್ಟಲೆ ನಿಂತ್ಕೊಬೇಕಿತ್ತು ಮತ್ತು ಅವ್ರ ಸುತ್ತ ಜನಜಂಗುಳಿ ಇತ್ತು. ಹಾಗಾಗಿ ಅಲ್ಲಿ ಓದ್ತಿದ್ದ ವಿಷ್ಯ ಅವ್ರಿಗೆ ಸರಿಯಾಗಿ ಕೇಳಿಸದೇ ಇದ್ದಿರಬಹುದು. (ನೆಹೆ. 8:2, 3, 7) ಅದಕ್ಕೇ ಮುಖ್ಯವಾದ ವಾಕ್ಯಗಳನ್ನ ಪದೇಪದೇ ಹೇಳ್ತಿದ್ರು. ಇದ್ರಿಂದ ಜನ್ರಿಗೆ ವಚನಗಳನ್ನ ನೆನಪಲ್ಲಿ ಇಟ್ಕೊಂಡು ಅದನ್ನ ಪಾಲಿಸೋಕೆ ಆಗ್ತಿತ್ತು. ಅಷ್ಟೇ ಅಲ್ಲ ಯೆಹೋವನ ನಿಯಮಗಳನ್ನ, ಅದ್ರ ಚಿಕ್ಕಚಿಕ್ಕ ವಿವರಗಳನ್ನ ನೆನಪಲ್ಲಿ ಇಟ್ಕೊಳ್ಳೋಕೆ ಅವ್ರಿಗೆ ಆಗ್ತಿತ್ತು.—ಯಾಜ. 18:4-22; ಧರ್ಮೋ. 5:1.

ಅವರು ಬರೆದ ಶೈಲಿ ಹಾಗಿತ್ತು. ಬೈಬಲಲ್ಲಿ, 10 ಪ್ರತಿಶತ ಹಾಡುಗಳೇ ಇದೆ. ಉದಾಹರಣೆಗೆ ಕೀರ್ತನೆ, ಪರಮ ಗೀತ, ಪ್ರಲಾಪದಂಥ ಪುಸ್ತಕಗಳು ಹಾಡಿನ ರೂಪದಲ್ಲಿದೆ. ಈ ಹಾಡುಗಳಲ್ಲಿ ಕೆಲವು ಪದಗಳನ್ನ ಪದೇಪದೇ ಹೇಳಿದ್ದಾರೆ. ಇದ್ರಿಂದ ಆ ಹಾಡಿನ ಮುಖ್ಯ ವಿಷ್ಯ ಅರ್ಥಮಾಡ್ಕೊಳ್ಳೋಕೆ ಮತ್ತು ಪದಗಳನ್ನ ನೆನಪಲ್ಲಿ ಇಟ್ಕೊಳ್ಳೋಕೆ ಜನ್ರಿಗೆ ಸುಲಭ ಆಗ್ತಿತ್ತು. ಇದಕ್ಕೊಂದು ಉದಾಹರಣೆ ಕೀರ್ತನೆ 115:9-11. ಅದ್ರಲ್ಲಿ, “ಇಸ್ರಾಯೇಲೇ ಯೆಹೋವನ ಮೇಲೆ ಭರವಸೆ ಇಡು, ಆತನು ನಿನ್ನ ಸಹಾಯಕ, ನಿನ್ನ ಗುರಾಣಿ. ಆರೋನನ ಮನೆತನವೇ ಯೆಹೋವನ ಮೇಲೆ ಭರವಸೆ ಇಡು, ಆತನು ನಿನ್ನ ಸಹಾಯಕ, ನಿನ್ನ ಗುರಾಣಿ. ಯೆಹೋವನಿಗೆ ಭಯಪಡೋರೇ, ಯೆಹೋವನ ಮೇಲೆ ಭರವಸೆ ಇಡಿ ಆತನು ನಿಮ್ಮ ಸಹಾಯಕ, ನಿಮ್ಮ ಗುರಾಣಿ” ಅಂತ ಇದೆ. ಇಲ್ಲಿ ಕೆಲವು ಪದಗಳನ್ನ ಪದೇಪದೇ ಹೇಳಿದ್ದನ್ನ ನೀವು ಗಮನಿಸಿದ್ರಾ? ಹೀಗೆ ಮಾಡಿದ್ರಿಂದ ಹಾಡುಗಾರರಿಗೆ ಮುಖ್ಯವಾದ ವಿಷ್ಯಗಳನ್ನ ನೆನಪಲ್ಲಿ ಇಟ್ಕೊಳ್ಳೋಕೆ ಆಗ್ತಿತ್ತು.

ಮುಖ್ಯವಾದ ವಿಷ್ಯಗಳನ್ನ ಒತ್ತಿ ಹೇಳಬೇಕಿತ್ತು. ಬೈಬಲ್‌ ಬರಹಗಾರರು ಮುಖ್ಯವಾದ ವಿಷ್ಯನ ಪದೇಪದೇ ಹೇಳ್ತಿದ್ರು. ಉದಾಹರಣೆಗೆ, ರಕ್ತ ತುಂಬ ಅಮೂಲ್ಯ ಮತ್ತು ರಕ್ತ ಜೀವ ಆಗಿದೆ ಅಂತ ಯೆಹೋವ ಇಸ್ರಾಯೇಲ್ಯರಿಗೆ ಅರ್ಥ ಮಾಡಿಸಬೇಕಿತ್ತು. ಅದಕ್ಕೇ ರಕ್ತ ತಿನ್ನಬೇಡಿ ಅಂತ ಮೋಶೆ ಹತ್ರ ಪದೇಪದೇ ಹೇಳಿಸಿದನು. (ಯಾಜ. 17:11, 14) ಇದಾಗಿ ಕೆಲವು ವರ್ಷಗಳಾದ್ಮೇಲೆ ಅಪೊಸ್ತಲರು ಮತ್ತು ಯೆರೂಸಲೇಮಿನ ಹಿರಿಯರೂ ರಕ್ತದಿಂದ ದೂರ ಇರಿ ಅಂತ ಮತ್ತೆ ಹೇಳಿದ್ರು. ಹೀಗೆ ಯೆಹೋವನಿಗೆ ಇಷ್ಟ ಇಲ್ಲದ ವಿಷ್ಯನ ಕ್ರೈಸ್ತರು ಮಾಡಬಾರದು ಅಂತ ನೆನಪಿಸಿದ್ರು.—ಅ. ಕಾ. 15:20, 29.

ಬೈಬಲಲ್ಲಿ ಕೆಲವು ಪದಗಳನ್ನ ಪದೇಪದೇ ಹೇಳಿದೆ ಅಂದತಕ್ಷಣ, ನಾವು ಆ ಪದಗಳನ್ನ ಮತ್ತೆಮತ್ತೆ ಹೇಳಬೇಕಂತಿಲ್ಲ. ಅದಕ್ಕೇ ಯೇಸು, “ಪ್ರಾರ್ಥನೆ ಮಾಡುವಾಗ . . . ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಬೇಡ” ಅಂದನು. (ಮತ್ತಾ. 6:7) ಅಷ್ಟೇ ಅಲ್ಲ ಯೆಹೋವನಿಗೆ ಇಷ್ಟ ಆಗೋ ತರ ಹೇಗೆ ಪ್ರಾರ್ಥನೆ ಮಾಡಬೇಕಂತನೂ ಹೇಳಿ ಕೊಟ್ಟನು. (ಮತ್ತಾ. 6:9-13) ಇದ್ರಿಂದ ನಮಗೇನು ಗೊತ್ತಾಗುತ್ತೆ? ನಾವೂ ಪ್ರಾರ್ಥನೆ ಮಾಡುವಾಗ ಹೇಳಿದ್ದನ್ನೇ ಪದೇಪದೇ ಹೇಳಬಾರದು ನಿಜ, ಆದ್ರೆ ಒಂದು ವಿಷ್ಯದ ಬಗ್ಗೆ ಪದೇಪದೇ ಪ್ರಾರ್ಥನೆ ಮಾಡಬಹುದು.—ಮತ್ತಾ. 7:7-11.

ನಮ್ಮ ಮಹಾ ಬೋಧಕನಾದ ಯೆಹೋವ, ಬೈಬಲಲ್ಲಿ ಈ ರೀತಿ ಕೆಲವು ವಾಕ್ಯಗಳನ್ನ ಪದೇಪದೇ ಬಳಸಿ ಕಲಿಸಿದ್ರಿಂದ ನಮಗೆ ತುಂಬ ಪ್ರಯೋಜನ ಆಗ್ತಿದೆ. ಆತನು ಹೀಗೆ ಮಾಡಿದ್ದು ಎಷ್ಟು ಒಳ್ಳೇದಾಯ್ತಲ್ವಾ!—ಯೆಶಾ. 48:17, 18.