ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ನನ್ನ ಬಲಹೀನತೆಗಳು ದೇವರಿಗೆ ಎಷ್ಟು ಶಕ್ತಿ ಇದೆ ಅಂತ ತೋರಿಸ್ತು

ನನ್ನ ಬಲಹೀನತೆಗಳು ದೇವರಿಗೆ ಎಷ್ಟು ಶಕ್ತಿ ಇದೆ ಅಂತ ತೋರಿಸ್ತು

ನಾನೂ ನನ್ನ ಹೆಂಡ್ತಿ 1985ರಲ್ಲಿ ಕೊಲಂಬಿಯಗೆ ಬಂದ್ವಿ. ಅಲ್ಲಿ ಹಿಂಸೆ, ಅನ್ಯಾಯ ತುಂಬಿಹೋಗಿತ್ತು. ಎಷ್ಟರ ಮಟ್ಟಿಗಂದ್ರೆ ಅಲ್ಲಿ ಡ್ರಗ್ಸ್‌ ಮಾರಾಟದ ದಂಧೆನೇ ನಡಿಸ್ತಿದ್ರು. ಗುಡ್ಡಗಳಲ್ಲಿ ಗೆರಿಲ್ಲಾ ಸೈನಿಕರಿದ್ರು. ಇವ್ರನ್ನ ಹಿಡಿಯೋಕೆ ಪೊಲೀಸರು ಹುಡುಕ್ತಿದ್ರು. ಸ್ವಲ್ಪ ಸಮಯ ಆದ್ಮೇಲೆ ನಾವು ಸೇವೆ ಮಾಡೋಕೆ ಮೆಡೆಜಿನ್‌ ಅನ್ನೋ ಜಾಗಕ್ಕೆ ಬಂದ್ವಿ. ಅಲ್ಲಿದ್ದ ಯುವಕರು ಗುಂಪುಗುಂಪಾಗಿ ಗನ್‌ ಹಿಡ್ಕೊಂಡು ಬೀದಿಲೇ ಇರ್ತಿದ್ರು. ಅವರು ಡ್ರಗ್ಸ್‌ ಮಾರ್ತಿದ್ರು. ಜನ್ರ ಹತ್ರ ದುಡ್ಡು ಕಿತ್ಕೊಳ್ತಿದ್ರು. ಕೊಡಲಿಲ್ಲಾಂದ್ರೆ ಅವ್ರನ್ನ ಸಾಯಿಸ್ತಿದ್ರು. ಆ ಗ್ಯಾಂಗ್‌ನಲ್ಲಿ ಇದ್ದವರು ಯಾರೂ ತುಂಬ ದಿನ ಬದುಕಲಿಲ್ಲ. ನಾವು ಅಲ್ಲಿಗೆ ಹೋದಾಗ ಯಾವುದೋ ಬೇರೆ ಲೋಕಕ್ಕೆ ಹೋದ ಹಾಗಿತ್ತು.

ಫಿನ್ಲೆಂಡ್‌ನಿಂದ ನಾನೂ ನನ್ನ ಹೆಂಡ್ತಿ ದಕ್ಷಿಣ ಅಮೆರಿಕಾಗೆ ಹೋದ್ವಿ. ನಾವು ಅಲ್ಲಿಗೆ ಯಾಕೆ ಹೋದ್ವಿ, ನಾವು ಜೀವನದಲ್ಲಿ ಏನೆಲ್ಲಾ ಕಲಿತ್ವಿ ಅನ್ನೋದನ್ನ ನಿಮಗೆ ಈಗ ಹೇಳ್ತೀನಿ ಬನ್ನಿ.

ನಾನು ಫಿನ್ಲೆಂಡ್‌ನಲ್ಲಿ ಇದ್ದಾಗ

ನಾನು 1955ರಲ್ಲಿ ಹುಟ್ಟಿದೆ. ನಮ್ಮ ಮನೆಲಿ ನಾವು ಮೂರು ಜನ ಗಂಡುಮಕ್ಕಳು. ಅವ್ರಲ್ಲಿ ನಾನೇ ಚಿಕ್ಕವನು. ನಾನು ಫಿನ್ಲೆಂಡ್‌ನ ದಕ್ಷಿಣ ಕರಾವಳಿಯಲ್ಲಿ ಬೆಳೆದೆ. ಈಗ ಆ ಜಾಗನ ವಾಂಟಾ ನಗರ ಅಂತ ಕರಿತಾರೆ.

ನಾನು ಹುಟ್ಟೋದಕ್ಕಿಂತ ಸ್ವಲ್ಪ ವರ್ಷ ಮುಂಚೆ ನಮ್ಮಮ್ಮ ದೀಕ್ಷಾಸ್ನಾನ ತಗೊಂಡು ಯೆಹೋವನ ಸಾಕ್ಷಿ ಆದ್ರು. ನಮ್ಮಪ್ಪನಿಗೆ ಯೆಹೋವನ ಬಗ್ಗೆ ಕಲಿಯೋದಂದ್ರೆ ಒಂಚೂರೂ ಇಷ್ಟ ಇರ್ಲಿಲ್ಲ. ಅಮ್ಮ ನಮಗೆ ಬೈಬಲ್‌ ಕಲಿಸೋಕೆ ಮತ್ತು ಅವರು ನಮ್ಮನ್ನ ಕೂಟಗಳಿಗೆ ಕರ್ಕೊಂಡು ಹೋಗೋಕೆ ಅಪ್ಪ ಬಿಡ್ತಾ ಇರ್ಲಿಲ್ಲ. ಅದಕ್ಕೇ ನಮ್ಮಮ್ಮ ಅಪ್ಪ ಮನೇಲಿ ಇಲ್ಲದೇ ಇದ್ದಾಗ ನಮಗೆ ಬೈಬಲ್‌ ಕಲಿಸ್ತಾ ಇದ್ರು.

ನನಗೆ ಯೆಹೋವನ ಮೇಲೆ ಎಷ್ಟು ನಂಬಿಕೆ ಇತ್ತು ಅಂತ 7 ವರ್ಷ ಇದ್ದಾಗಲೇ ತೋರಿಸಿದೆ

ನಾನು ಚಿಕ್ಕವಯಸ್ಸಿಂದಾನೂ ಯೆಹೋವನಿಗೆ ಇಷ್ಟ ಇಲ್ಲದೇ ಇರೋ ಯಾವುದನ್ನೂ ಮಾಡ್ತಾ ಇರ್ಲಿಲ್ಲ. ನನಗೆ 7 ವರ್ಷ ಇದ್ದಾಗ ಏನಾಯ್ತು ನೋಡಿ, ಫಿನ್ಲೆಂಡ್‌ನಲ್ಲಿ ರಕ್ತದಿಂದ ರೊಟ್ಟಿ ಮಾಡ್ತಿದ್ರು (ವೆರಿಲೆಟ್ಟಿಯಾ). ಅದನ್ನ ನಾನು ತಿಂತಾ ಇರ್ಲಿಲ್ಲ. ನಾನು ಆ ರೊಟ್ಟಿ ತಿಂದಿಲ್ಲ ಅಂತ ಒಂದು ಸಲ ನನ್ನ ಟೀಚರ್‌ಗೆ ತುಂಬ ಕೋಪ ಬಂತು. ನನ್ನ ಕೆನ್ನೆಗಳನ್ನ ಅದುಮಿ, ಬಾಯಿ ತೆರೆಸಿ ಆ ರೊಟ್ಟಿಯನ್ನ ನನ್ನ ಬಾಯಿಗೆ ತುರುಕೋಕೆ ಪ್ರಯತ್ನ ಮಾಡಿದ್ರು. ಆದ್ರೆ ‘ನನಗೆ ಬೇಡ’ ಅಂತ ಅದನ್ನ ನಾನು ತಳ್ಳಿಬಿಟ್ಟೆ.

ನನಗೆ 12 ವರ್ಷ ಇದ್ದಾಗ ನಮ್ಮಪ್ಪ ತೀರಿಹೋದ್ರು. ಆಮೇಲೆ ನಾನು ಕೂಟಗಳಿಗೆ ಹೋಗೋಕೆ ಶುರು ಮಾಡಿದೆ. ಅಲ್ಲಿದ್ದ ಸಹೋದರ ಸಹೋದರಿಯರು ನನಗೆ ತುಂಬ ಪ್ರೀತಿ ತೋರಿಸಿದ್ರು. ಇದ್ರಿಂದ ನಾನು ಯೆಹೋವನಿಗೆ ಹತ್ರ ಆಗೋಕೆ ಆಯ್ತು. ನಾನು ದಿನಾ ಬೈಬಲ್‌ ಮತ್ತು ಪ್ರಕಾಶನಗಳನ್ನ ಓದೋಕೆ ಶುರುಮಾಡಿದೆ. ಇದ್ರಿಂದ 14ನೇ ವಯಸ್ಸಲ್ಲೇ ಅಂದ್ರೆ ಆಗಸ್ಟ್‌ 8, 1969ರಲ್ಲೇ ದೀಕ್ಷಾಸ್ನಾನ ತಗೊಳ್ಳೋಕೆ ಆಯ್ತು.

ನನ್ನ ಓದು ಮುಗಿದಮೇಲೆ ನಾನು ಪಯನೀಯರಿಂಗ್‌ ಶುರು ಮಾಡಿದೆ. ಅದಾಗಿ ಸ್ವಲ್ಪ ವಾರಗಳಲ್ಲೇ ಫಿನ್ಲೆಂಡ್‌ನ ಮಧ್ಯ ಭಾಗದಲ್ಲಿರೋ ಪಿಯಾಲವೇಸೀ ಅನ್ನೋ ಜಾಗಕ್ಕೆ ಜಾಸ್ತಿ ಸೇವೆ ಮಾಡೋಕೆ ಹೋದೆ.

ಪಿಯಾಲವೇಸೀಯಲ್ಲಿ ನಂಗೆ ಸಿರ್ಕಾ ಸಿಕ್ಕಿದಳು. ಅವಳಿಗೆ ತುಂಬ ದೀನತೆ ಇತ್ತು, ಯೆಹೋವನ ಮೇಲೆ ತುಂಬ ಪ್ರೀತಿಯಿತ್ತು. ಅವಳಿಗೆ ಹಣ-ಆಸ್ತಿ ಮಾಡೋದು, ವಸ್ತುಗಳನ್ನ ಕೂಡಿಸಿಡೋದು ಇದೆಲ್ಲ ಇಷ್ಟನೇ ಇರ್ಲಿಲ್ಲ. ನಮ್ಮಿಬ್ರಿಗೂ ಯೆಹೋವನ ಸೇವೆ ಮಾಡೋಕೆ ತುಂಬ ಆಸೆಯಿತ್ತು. ಅದಕ್ಕೇ ಯಾವ ನೇಮಕ ಕೊಟ್ರೂ ಮಾಡೋಕೆ ರೆಡಿ ಇದ್ವಿ. ನಾವು ಮಾರ್ಚ್‌ 23, 1974ರಲ್ಲಿ ಮದುವೆ ಆದ್ವಿ. ಆಮೇಲೆ ನಾವು ಹನಿಮೂನ್‌ಗೆ ಹೋಗೋ ಬದ್ಲು ಕಾರ್ಟುಲಾ ಅನ್ನೋ ಜಾಗದಲ್ಲಿ ಜಾಸ್ತಿ ಅಗತ್ಯ ಇದೆ ಅಂತ ಅಲ್ಲಿ ಸೇವೆ ಮಾಡೋಕೆ ಹೋದ್ವಿ.

ಫಿನ್ಲೆಂಡ್‌ನ ಕಾರ್ಟುಲಾದಲ್ಲಿದ್ದ ನಮ್ಮ ಬಾಡಿಗೆ ಮನೆ

ಯೆಹೋವ ನಮ್ಮನ್ನ ಚೆನ್ನಾಗಿ ನೋಡ್ಕೊಂಡನು

ನನ್ನ ಅಣ್ಣ ಕೊಟ್ಟ ಕಾರು

ನಾವು ಯೆಹೋವನ ಸೇವೆಗೆ ಮೊದಲನೇ ಸ್ಥಾನ ಕೊಟ್ರೆ ನಮಗೆ ಬೇಕಾಗಿರೋದನ್ನೆಲ್ಲ ಆತನು ಕೊಟ್ಟೇ ಕೊಡ್ತಾನೆ. ಅದನ್ನ ನಾವು ಮದುವೆ ಆದ ಹೊಸದ್ರಲ್ಲೇ ಕಣ್ಣಾರೆ ನೋಡಿದ್ವಿ. (ಮತ್ತಾ. 6:33) ಉದಾಹರಣೆಗೆ, ನಾವು ಕಾರ್ಟುಲಾದಲ್ಲಿ ಇದ್ದಾಗ ಎಲ್ಲಾ ಕಡೆ ಸೈಕಲ್‌ನಲ್ಲೇ ಓಡಾಡ್ತಿದ್ವಿ. ಆದ್ರೆ ಚಳಿಗಾಲದಲ್ಲಿ ಚಳಿ ತಡ್ಕೊಳ್ಳೋಕೆ ಆಗ್ತಿರಲಿಲ್ಲ. ದೂರದಲ್ಲಿರೋ ಟೆರಿಟೊರಿಗಳಿಗೆ ಹೋಗಿ ಸಾರೋಕೂ ತುಂಬ ಕಷ್ಟ ಆಗ್ತಿತ್ತು. ಹಾಗಾಗಿ ನಮಗೆ ಒಂದು ಕಾರ್‌ ಬೇಕಿತ್ತು. ಆದ್ರೆ ಕಾರ್‌ ತಗೊಳ್ಳೋಕೆ ನಮ್ಮ ಹತ್ರ ಕಾಸಿರಲಿಲ್ಲ.

ಒಂದು ಸಲ ನನ್ನ ಎರಡನೇ ಅಣ್ಣ ನಮ್ಮನ್ನ ನೋಡೋಕೆ ಬಂದಿದ್ದ. ಆಗ ಅವನ ಕಾರನ್ನ ನಮಗೇ ಕೊಟ್ಟುಬಿಟ್ಟ. ಇನ್ಶೂರೆನ್ಸ್‌ ಕೂಡ ಅವನೇ ಕಟ್ಟಿದ್ದ. ನಾವು ಅದಕ್ಕೆ ಪೆಟ್ರೋಲ್‌ ಹಾಕಿದ್ರೆ ಸಾಕಿತ್ತು. ಈ ಕಾರ್‌ ಇದ್ದಿದ್ರಿಂದ ನಾವು ಬೇರೆಬೇರೆ ಕಡೆ ಹೋಗಿ ಸೇವೆ ಮಾಡೋಕಾಯ್ತು.

ಹೀಗೆ ಯೆಹೋವ ದೇವರು ನಮಗೆ ಬೇಕಾಗಿರೋದನ್ನ ಕೊಟ್ಟು ನಮ್ಮನ್ನ ಚೆನ್ನಾಗಿ ನೋಡ್ಕೊಂಡನು. ಆದ್ರೆ ನಾವು ಯೆಹೋವನ ಸೇವೆಗೆ ಮೊದಲನೇ ಸ್ಥಾನ ಕೊಡಬೇಕಿತ್ತು ಅಷ್ಟೇ.

ಗಿಲ್ಯಡ್‌ ಶಾಲೆ

1978ರಲ್ಲಿ ನಮ್ಮ ಪಯನೀಯರ್‌ ಸೇವಾ ಶಾಲೆ

1978ರಲ್ಲಿ ನಾವು ಪಯನೀಯರ್‌ ಶಾಲೆಗೆ ಹೋಗಿದ್ವಿ. ಅಲ್ಲಿ ಕಲಿಸ್ತಿದ್ದ ಒಬ್ಬ ರೈಮೊ ಕ್ವೋಕಾನೆನ್‌ a ಅನ್ನೋ ಸಹೋದರ, ನಮಗೆ ಗಿಲ್ಯಡ್‌ ಶಾಲೆಗೆ ಅರ್ಜಿ ಹಾಕೋಕೆ ಪ್ರೋತ್ಸಾಹಿಸಿದ್ರು. ಆ ಶಾಲೆಗೆ ಹೋಗೋಕೆ ನಮಗೆ ಆಸೆ ಇದ್ದಿದ್ರಿಂದ ಇಂಗ್ಲಿಷ್‌ ಕಲಿಯೋಕೆ ಶುರು ಮಾಡಿದ್ವಿ. ಅರ್ಜಿ ಹಾಕೋಕೂ ಮುಂಚೆ 1980ರಲ್ಲಿ ಫಿನ್ಲೆಂಡ್‌ ಬ್ರಾಂಚ್‌ಗೆ ನಮ್ಮನ್ನ ಕರೆದ್ರು. ಆ ಸಮಯದಲ್ಲಿ, ಬೆತೆಲಿನಲ್ಲಿ ಇರೋರು ಗಿಲ್ಯಡ್‌ಗೆ ಅರ್ಜಿ ಹಾಕೋ ಹಾಗೆ ಇರ್ಲಿಲ್ಲ. ಆದ್ರೂ ನಾವು ಬೆತೆಲಿಗೆ ಹೋದ್ವಿ. ಯಾಕಂದ್ರೆ ನಮ್ಮ ಇಷ್ಟ ಮಾಡೋದಕ್ಕಿಂತ ಯೆಹೋವನ ಇಷ್ಟ ಮಾಡೋದೆ ಮುಖ್ಯ ಆಗಿತ್ತು. ಮುಂದೆ ಯಾವತ್ತಾದ್ರೂ ಗಿಲ್ಯಡ್‌ ಶಾಲೆಗೆ ಹೋಗೋ ಅವಕಾಶ ಸಿಗಬಹುದೇನೋ ಅಂತ ನೆನಸಿ ನಾವು ಇಂಗ್ಲಿಷ್‌ ಕಲಿಯೋದನ್ನ ಹಾಗೆ ಮುಂದುವರಿಸಿದ್ವಿ.

ಸ್ವಲ್ಪ ವರ್ಷ ಆದ್ಮೇಲೆ, ಬೆತೆಲಲ್ಲಿ ಇರೋರು ಇನ್ನು ಮೇಲೆ ಗಿಲ್ಯಡ್‌ ಶಾಲೆಗೆ ಅರ್ಜಿ ಹಾಕಬಹುದು ಅಂತ ಹೇಳಿದ್ರು. ಅದಕ್ಕೆ ನಾವು ತಕ್ಷಣ ಅರ್ಜಿ ಹಾಕಿದ್ವಿ. ಹಾಗಂತ ನಾವು ಬೆತೆಲಲ್ಲಿ ಖುಷಿಯಾಗಿ ಇರ್ಲಿಲ್ಲ ಅಂತ ಅಲ್ಲ. ಬದ್ಲಿಗೆ ಇಲ್ಲಿಗಿಂತ ಬೇರೆ ಕಡೆ ಜಾಸ್ತಿ ಅಗತ್ಯ ಇದ್ರೆ ಅಲ್ಲಿ ಹೋಗಿ ಸೇವೆ ಮಾಡೋಕೆ ನಾವು ರೆಡಿ ಇದ್ವಿ. ನಾವು 79ನೇ ಗಿಲ್ಯಡ್‌ ಶಾಲೆಯಲ್ಲಿ ತರಬೇತಿ ಪಡ್ಕೊಂಡ್ವಿ. 1985 ಸೆಪ್ಟೆಂಬರ್‌ನಲ್ಲಿ ನಮಗೆ ಪದವಿ ಸಿಕ್ತು. ಆಮೇಲೆ ಕೊಲಂಬಿಯದಲ್ಲಿ ನಮಗೆ ನೇಮಕ ಸಿಕ್ತು.

ನಮ್ಮ ಮೊದಲನೇ ಮಿಷನರಿ ಸೇವೆ

ಕೊಲಂಬಿಯಾಗೆ ಹೋದಾಗ ನಂಗೆ ಬ್ರಾಂಚ್‌ ಆಫೀಸ್‌ನಲ್ಲಿ ಕೆಲಸ ಮಾಡೋ ನೇಮಕ ಸಿಕ್ತು. ಅಲ್ಲಿ ನಾನು ನನ್ನಿಂದ ಆದಷ್ಟು ಚೆನ್ನಾಗಿ ಸೇವೆ ಮಾಡಿದೆ. ಆದ್ರೆ ಒಂದು ವರ್ಷ ಆದ್ಮೇಲೆ ನಮಗೆ ಬೇರೆ ನೇಮಕ ಸಿಕ್ಕಿದ್ರೆ ಚೆನ್ನಾಗಿ ಇರ್ತಿತ್ತು ಅಂತ ಅನಿಸ್ತು. ಅದಕ್ಕೆ ನಾನು ಸಹೋದರರ ಹತ್ರ ಹೋಗಿ ನಮಗೆ ಬೇರೆ ನೇಮಕ ಕೊಡಿ ಅಂತ ಕೇಳಿದೆ. ನಾನು ಕೇಳಿದ್ದು ಅದೇ ಮೊದಲನೇ ಸಲ. ಆಗ ಸಹೋದರರು ನನಗೆ ವೀಲಾದಲ್ಲಿರೋ ನೇವಾ ಅನ್ನೋ ಸಿಟಿಗೆ ಮಿಷನರಿಯಾಗಿ ಕಳಿಸಿದ್ರು.

ನಾನು ಸೇವೆಯನ್ನ ಯಾವಾಗ್ಲೂ ಎಂಜಾಯ್‌ ಮಾಡಿದ್ದೀನಿ. ನಾನು ಫಿನ್ಲೆಂಡಲ್ಲಿ ಪಯನೀಯರ್‌ ಆಗಿ ಇದ್ದಾಗ್ಲೂ ಬೆಳಿಗ್ಗೆಯಿಂದ ಸಂಜೆ ತನಕ ಸೇವೆ ಮಾಡ್ತಾ ಇದ್ದೆ. ಮದುವೆ ಆದ್ಮೇಲೂ ನಾನು ಮತ್ತು ಸಿರ್ಕಾ ಅದೇ ತರ ಸೇವೆ ಮಾಡ್ತಾ ಇದ್ವಿ. ಕೆಲವೊಂದು ಸಲ ನಾವು ದೂರದೂರದ ಟೆರಿಟೊರಿಗೆ ಹೋಗ್ತಾ ಇದ್ವಿ. ಸಂಜೆ ಕಾರಲ್ಲೇ ಮಲಗಿಬಿಡ್ತಿದ್ವಿ. ಇದ್ರಿಂದ ನಾವು ಮನೆಗೆ ಹೋಗಿ ಮತ್ತೆ ಟೆರಿಟೊರಿಗೆ ಬರೋ ಸಮಯನ ಉಳಿಸೋಕೆ ಆಗ್ತಿತ್ತು ಮತ್ತು ಮಾರನೇ ದಿನ ಬೆಳಿಗ್ಗೆ ಬೇಗ ಎದ್ದು ಸೇವೆ ಶುರು ಮಾಡೋಕೆ ಆಗ್ತಾ ಇತ್ತು.

ನಾನು ಮುಂಚೆ ಸಿಹಿಸುದ್ದಿ ಸಾರುವಾಗ ಇದ್ದಷ್ಟು ಉತ್ಸಾಹ ಮಿಷನರಿ ಆದಾಗ್ಲೂ ಇತ್ತು. ಕೊಲಂಬಿಯದಲ್ಲಿದ್ದ ಸಹೋದರ ಸಹೋದರಿಯರು ಜಾಸ್ತಿ ಆದ್ರು, ಅವರು ನಮಗೆ ತುಂಬ ಗೌರವ ಕೊಡ್ತಾ ಇದ್ರು, ಪ್ರೀತಿ ತೋರಿಸ್ತಾ ಇದ್ರು, ಒಬ್ರನ್ನೊಬ್ರು ತುಂಬ ಪ್ರೋತ್ಸಾಹಿಸ್ತಾ ಇದ್ರು. ನಾವೆಲ್ಲಾ ತುಂಬ ಸಂತೋಷವಾಗಿ ಇದ್ವಿ.

ಪ್ರಾರ್ಥನೆಗಿರೋ ಶಕ್ತಿ

ನೇವಾದ ಸುತ್ತಮುತ್ತ ಇರೋ ಹಳ್ಳಿಗಳಲ್ಲಿ ಯೆಹೋವನ ಸಾಕ್ಷಿಗಳೇ ಇರಲಿಲ್ಲ. ಹಾಗಾಗಿ ಆ ಊರುಗಳಿಗೆ ಹೇಗಪ್ಪಾ ಸತ್ಯ ತಲುಪುತ್ತೆ ಅಂತ ನಾನು ಯೋಚ್ನೆ ಮಾಡ್ತಾ ಇದ್ದೆ. ಅಲ್ಲಿ ಆಗಾಗ ಗೆರಿಲ್ಲಾ ಯುದ್ಧಗಳು ನಡಿತಾ ಇತ್ತು. ಹಾಗಾಗಿ ಆ ಊರಿನವರು ಬಿಟ್ರೆ ಬೇರೆಯವರು ಆ ಊರಿಗೆ ಹೋಗೋಕೆ ಆಗ್ತಾ ಇರಲಿಲ್ಲ. ಹೋದ್ರೆ ಅಪಾಯ ಆಗ್ತಿತ್ತು. ಅದಕ್ಕೇ ಅಲ್ಲಿರೋ ಯಾರಾದ್ರೂ ಒಬ್ರು ಸತ್ಯ ಕಲಿಲಿ ಅಂತ ಯೆಹೋವ ದೇವರ ಹತ್ರ ನಾನು ಪ್ರಾರ್ಥನೆ ಮಾಡಿದೆ. ಆ ಊರಲ್ಲಿ ಇರೋ ಯಾವುದಾದ್ರೂ ವ್ಯಕ್ತಿ ನೇವಾಗೆ ಬಂದು ಸತ್ಯ ಕಲಿತು, ದೀಕ್ಷಾಸ್ನಾನ ತಗೊಂಡು ಮತ್ತೆ ಅವನ ಹಳ್ಳಿಲಿರೋ ಎಲ್ರಿಗೂ ಸಿಹಿಸುದ್ದಿ ಸಾರೋ ತರ ಮಾಡಪ್ಪಾ ಅಂತ ಬೇಡ್ಕೊಂಡೆ. ನಾನು ಹೀಗೆಲ್ಲಾ ಯೋಚ್ನೆ ಮಾಡಿದ್ದೆ. ಆದ್ರೆ ಯೆಹೋವನ ಪ್ಲ್ಯಾನ್‌ ಬೇರೆನೇ ಆಗಿತ್ತು.

ಸ್ವಲ್ಪದ್ರಲ್ಲೇ ನಾನು ಫರ್ನಾಂಡೋ ಗೋನ್ಸಾಲಿಸ್‌ ಅನ್ನೋ ಯುವಕನಿಗೆ ಬೈಬಲ್‌ ಕಲಿಸೋಕೆ ಶುರು ಮಾಡಿದೆ. ಅವನು ಅಲೆಸೀರಸ್‌ ಊರಿನವನು. ಅಲ್ಲಿ ಯೆಹೋವನ ಸಾಕ್ಷಿಗಳೇ ಇರ್ಲಿಲ್ಲ. ಅವನು ಕೆಲಸಕ್ಕೆ ಅಂತ 50 ಕಿಲೋಮಿಟರ್‌ಗಿಂತ ಜಾಸ್ತಿ ಪ್ರಯಾಣ ಮಾಡಿ ನೇವಾಗೆ ಬರ್ತಿದ್ದ. ಅವನು ಪ್ರತಿಸಲ ಸ್ಟಡಿಗೆ ಚೆನ್ನಾಗಿ ತಯಾರಿ ಮಾಡ್ಕೊಂಡು ಬರ್ತಿದ್ದ, ಎಲ್ಲಾ ಕೂಟಗಳಿಗೂ ಬರ್ತಿದ್ದ. ಅವನು ಸ್ಟಡಿ ತಗೊಂಡ ವಾರದಿಂದಾನೇ ಅವನ ಊರಿಗೆ ಹೋಗಿ ಅಲ್ಲಿದ್ದ ಜನ್ರನ್ನ ಒಟ್ಟು ಸೇರಿಸಿ ಕಲಿತಿದ್ದನ್ನೆಲ್ಲ ಅವ್ರಿಗೆ ಹೇಳ್ತಿದ್ದ.

1993ರಲ್ಲಿ ಫರ್ನಾಂಡೋ ಜೊತೆ

ಫರ್ನಾಂಡೋ ಬೈಬಲ್‌ ಕಲಿಯೋಕೆ ಶುರುಮಾಡಿ ಆರು ತಿಂಗಳಾದ ಮೇಲೆ 1990ರ ಜನವರಿಯಲ್ಲಿ ದೀಕ್ಷಾಸ್ನಾನ ತಗೊಂಡ. ಆಮೇಲೆ ಅವನು ಪಯನೀಯರ್‌ ಆದ. ಅಲೆಸೀರಸ್‌ನಲ್ಲಿ ಮುಂಚೆ ಯಾರೂ ಯೆಹೋವನ ಸಾಕ್ಷಿಗಳು ಇದ್ದಿರಲಿಲ್ಲ. ಆದ್ರೆ ಫರ್ನಾಂಡೋ ಯೆಹೋವನ ಸಾಕ್ಷಿ ಆದ್ಮೇಲೆ ಬ್ರಾಂಚ್‌ ಅಲ್ಲಿಗೆ ವಿಶೇಷ ಪಯನೀಯರರನ್ನ ನೇಮಿಸ್ತು. ಫೆಬ್ರವರಿ, 1992ರಲ್ಲಿ ಅಲ್ಲಿ ಒಂದು ಸಭೆನೂ ಶುರುವಾಯ್ತು.

ಫರ್ನಾಂಡೋ ತನ್ನ ಊರಲ್ಲಿ ಅಷ್ಟೇ ಅಲ್ಲ, ಬೇರೆ ಕಡೆನೂ ಹೋಗಿ ಸೇವೆ ಮಾಡಿದ. ಮದುವೆ ಆದ್ಮೇಲೆ ಅವನೂ ಮತ್ತು ಅವನ ಹೆಂಡ್ತಿ ಆಲ್ಗ ಯೆಹೋವನ ಸಾಕ್ಷಿಗಳೇ ಇಲ್ಲದಿರೋ ಸ್ಯಾನ್‌ ವಿಸೀಂಟೀ ಡೆಲ್‌ ಕವಾನ್‌ ಅನ್ನೋ ಪಟ್ಟಣಕ್ಕೆ ಹೋಗಿ ಸೇವೆ ಮಾಡಿದ್ರು. ಅಲ್ಲಿ ಅವರು ಒಂದು ಸಭೆಯನ್ನ ಶುರು ಮಾಡಿದ್ರು. 2002ರಲ್ಲಿ ಫರ್ನಾಂಡೋ ಸಂಚರಣ ಮೇಲ್ವಿಚಾರಕನಾದ. ಈಗ್ಲೂ ಅವನು ಮತ್ತು ಅವನ ಹೆಂಡ್ತಿ ಸಂಚರಣ ಕೆಲಸ ಮಾಡ್ತಾ ಇದ್ದಾರೆ.

ನಿರ್ದಿಷ್ಟವಾಗಿ ಒಂದು ವಿಷ್ಯ ಹೇಳಿ ಪ್ರಾರ್ಥನೆ ಮಾಡೋದು ತುಂಬ ಮುಖ್ಯ ಅಂತ ಈ ಅನುಭವದಿಂದ ನಾನು ಕಲಿತೆ. ಬೆಳೆ ನಮ್ಮದಲ್ಲ, ಯೆಹೋವನದ್ದು. ಹಾಗಾಗಿ ನಮ್ಮ ಕೈಯಲ್ಲಿ ಆಗದೇ ಇರೋದನ್ನ ಯೆಹೋವ ಚೆನ್ನಾಗಿ ಮಾಡ್ತಾನೆ.—ಮತ್ತಾ. 9:38.

ಯೆಹೋವನೇ ನಮಗೆ “ಬಯಕೆಯನ್ನ, ಅದ್ರ ಪ್ರಕಾರ ನಡ್ಕೊಳ್ಳೋ ಶಕ್ತಿನ” ಕೊಡ್ತಾನೆ

1990ರಲ್ಲಿ ನಮಗೆ ಸಂಚರಣ ಕೆಲಸ ಮಾಡೋ ನೇಮಕ ಸಿಕ್ತು. ನಮ್ಮ ಮೊದಲನೇ ಸಂಚರಣ ಕೆಲಸ ಕೊಲಂಬಿಯದ ರಾಜಧಾನಿಯಾಗಿರೋ ಬೊಗೋಟದಲ್ಲಿ ಸಿಕ್ತು. ನಮಗೆ ಸಿಕ್ಕಿರೋ ಈ ನೇಮಕವನ್ನ ಅಷ್ಟು ಚೆನ್ನಾಗಿ ಮಾಡೋಕಾಗಲ್ಲ ಅನ್ನೋ ಭಯ ನಮಗಿತ್ತು. ಯಾಕಂದ್ರೆ ನನಗೆ ಮತ್ತು ನನ್ನ ಹೆಂಡ್ತಿಗೆ ಅಷ್ಟು ದೊಡ್ಡ ಸಾಮರ್ಥ್ಯ ಇರ್ಲಿಲ್ಲ. ನಾವು ತುಂಬ ಸಾಧಾರಣದವರಾಗಿದ್ವಿ ಮತ್ತು ನಮಗೆ ಇಂಥ ದೊಡ್ಡ ಸಿಟಿಯಲ್ಲಿ ಇದ್ದು ಅಷ್ಟು ಅಭ್ಯಾಸ ಇರ್ಲಿಲ್ಲ. ಆದ್ರೆ ಫಿಲಿಪ್ಪಿ 2:13ರಲ್ಲಿ ‘ಯೆಹೋವ ತನಗೆ ಇಷ್ಟ ಆಗೋ ಕೆಲಸಗಳನ್ನ ಮಾಡೋಕೆ ನಮಗೆ ಬಯಕೆಯನ್ನ, ಅದ್ರ ಪ್ರಕಾರ ನಡ್ಕೊಳ್ಳೋ ಶಕ್ತಿನ ಕೊಡ್ತೀನಿ’ ಅಂತ ಮಾತು ಕೊಟ್ಟಿದ್ದಾನೆ. ಅದು ನಮ್ಮ ಜೀವನದಲ್ಲಿ ನಿಜ ಆಯ್ತು.

ಆಮೇಲೆ ನಮಗೆ ಮೆಡೆಜಿನ್‌ನಲ್ಲಿ ಸರ್ಕಿಟ್‌ ಕೆಲಸ ಮಾಡೋ ನೇಮಕ ಸಿಕ್ತು. ಈ ಜಾಗದ ಬಗ್ಗೆನೇ ನಾನು ನನ್ನ ಕಥೆಯ ಶುರುವಿನಲ್ಲಿ ಹೇಳಿದ್ದು. ಅಲ್ಲಿ ತುಂಬ ಹಿಂಸೆ ಇತ್ತು. ಜನ ಅದಕ್ಕೆ ಒಗ್ಗಿ ಹೋಗಿಬಿಟ್ಟಿದ್ರು. ಅದು ಅವ್ರಿಗೆ ಮಾಮೂಲಿಯಾಗಿ ಬಿಟ್ಟಿತ್ತು. ಒಂದು ಸಲ ಏನಾಯ್ತು ಅಂದ್ರೆ ನಾನು ಒಂದು ಮನೆಗೆ ಸ್ಟಡಿಗೆ ಅಂತ ಹೋಗಿದ್ದೆ. ಅವ್ರ ಮನೆ ಹೊರಗಡೆ ಕೆಲವರು ಗುಂಡು ಹಾರಿಸೋಕೆ ಶುರು ಮಾಡಿದ್ರು. ಆಗ ನಾನು ಭಯದಿಂದ ತಲೆ ಕೆಳಗೆ ಮಾಡಿ ಬಗ್ಗೋಕೆ ಹೋಗ್ತಿದ್ದೆ, ಆದ್ರೆ ನನ್ನ ಬೈಬಲ್‌ ವಿದ್ಯಾರ್ಥಿ ಅವ್ರ ಪಾಡಿಗೆ ಅವರು ಪ್ಯಾರ ಓದ್ತಾ ಇದ್ರು. ಅವ್ರಿಗೆ ಒಂಚೂರೂ ಭಯನೇ ಆಗ್ಲಿಲ್ಲ. ಅವರು ಪ್ಯಾರ ಓದಿ ಆದ್ಮೇಲೆ ‘ಒಂದು ನಿಮಿಷ’ ಅಂತ ಹೇಳಿ ಹೊರಗಡೆ ಹೋದ್ರು. ಆಮೇಲೆ ಬರ್ತಾ ಇಬ್ರು ಮಕ್ಕಳನ್ನ ಕರ್ಕೊಂಡು ಬಂದ್ರು. ಆಮೇಲೆ ನನ್ನ ಹತ್ರ “ಕ್ಷಮಿಸಿ, ನಾನು ಮಕ್ಕಳನ್ನ ಕರ್ಕೊಂಡು ಬರೋಕೆ ಹೋಗಿದ್ದೆ” ಅಂದ್ರು.

ಈ ತರ ಆಗಿದ್ದು ಇದು ಒಂದೇ ಸಲ ಅಲ್ಲ. ಇನ್ನೊಂದು ಸಲ ಮನೆಮನೆ ಸೇವೆ ಮಾಡ್ತಿದ್ದಾಗ ನನ್ನ ಹೆಂಡ್ತಿ ಎದ್ನೋ ಬಿದ್ನೋ ಅಂತ ನನ್ನ ಹತ್ರ ಓಡಿ ಬಂದಳು. ಯಾರೋ ನನಗೆ ಗುಂಡು ಹಾರಿಸೋಕೆ ನೋಡ್ತಿದ್ದಾರೆ ಅಂದಳು. ಇದನ್ನ ಕೇಳಿದಾಗ ನಾನು ನಡುಗಿ ಹೋದೆ. ಆದ್ರೆ ಗುಂಡು ಹಾರಿಸಿದ್ದು ಅವಳಿಗಲ್ಲ, ಅವಳ ಪಕ್ಕದಲ್ಲಿ ಹೋಗ್ತಿದ್ದ ಒಬ್ಬ ವ್ಯಕ್ತಿಗೆ ಅಂತ ಆಮೇಲೆ ಗೊತ್ತಾಯ್ತು.

ಹೋಗ್ತಾ ಹೋಗ್ತಾ ಇದೆಲ್ಲ ಮಾಮೂಲಿ ಆಗಿ ಬಿಡ್ತು. ಯಾಕಂದ್ರೆ ಈ ತರ ನಮಗಷ್ಟೇ ಅಲ್ಲ, ಅಲ್ಲಿದ್ದ ಬೇರೆ ಯೆಹೋವನ ಸಾಕ್ಷಿಗಳಿಗೂ ಆಗ್ತಿತ್ತು. ಅವ್ರಿಗೆ ನಮಗಿಂತ ಜಾಸ್ತಿ ಅಪಾಯ ಬಂದಿತ್ತು. ಅವ್ರಿಗೆ ಯೆಹೋವ ಸಹಾಯ ಮಾಡ್ತಿದ್ದಾನೆ ಅಂದ ಮೇಲೆ ನಮಗೂ ಖಂಡಿತ ಸಹಾಯ ಮಾಡ್ತಾನೆ ಅಂದ್ಕೊಂಡ್ವಿ. ಅದಕ್ಕೇ ಹಿರಿಯರು ಕೊಡೋ ನಿರ್ದೇಶನ ಪಾಲಿಸಿದ್ವಿ, ಹುಷಾರಾಗಿ ಇರೋಕೆ ನೋಡಿದ್ವಿ. ಉಳಿದಿದ್ದನ್ನ ಯೆಹೋವನಿಗೆ ಬಿಟ್ಟುಬಿಟ್ವಿ.

ಕೆಲವೊಂದು ಸಲ ನಾವು ಅಂದ್ಕೊಂಡಿದ್ದೇ ಒಂದಾಗಿದ್ರೆ, ಅಲ್ಲಿ ನಡಿತಾ ಇದ್ದಿದ್ದೇ ಇನ್ನೊಂದು ಆಗಿರುತಿತ್ತು. ಒಂದು ಸಲ ನಾನು ಒಬ್ಬ ಸ್ತ್ರೀ ಮನೆಗೆ ಹೋಗಿದ್ದೆ. ಅವ್ರ ಮನೆ ಹೊರಗಡೆ ಯಾರೋ ಇಬ್ರು ಹೆಂಗಸ್ರು ಕಿರುಚಾಡ್ತಾ, ಒಬ್ರಿಗೊಬ್ರು ಬೈಕೊಳ್ತಾ ಇದ್ದಿದ್ದು ಕೇಳಿಸ್ತು. ಆಗ ಆ ಸ್ತ್ರೀ ನನ್ನನ್ನ ಹೊರಗೆ ಬನ್ನಿ ಅಂತ ಕರೆದ್ರು. ಆದ್ರೆ ನನಗೆ ಆ ಜಗಳ ಎಲ್ಲಾ ನೋಡೋಕೆ ಇಷ್ಟ ಇರ್ಲಿಲ್ಲ. ಆದ್ರೂ ಆ ಸ್ತ್ರೀ ಬಲವಂತವಾಗಿ ಕರೆದಾಗ ಹೋಗಿ ನೋಡಿದೆ. ಆಗ ಎರಡು ಗಿಳಿಗಳು ಪಕ್ಕದ ಮನೆ ಹೆಂಗಸ್ರ ತರ ಮಿಮಿಕ್ರಿ ಮಾಡ್ತಾ ಇದ್ವು. ಆ ಹೆಂಗಸ್ರು ಯಾವಾಗ್ಲೂ ಜಗಳ ಆಡ್ತಿದ್ರು.

ಹೊಸ ನೇಮಕಗಳು ಸಿಕ್ತು, ಸಮಸ್ಯೆಗಳೂ ಬಂತು

1997ರಲ್ಲಿ ಶುಶ್ರೂಷಾ ತರಬೇತಿ ಶಾಲೆಗೆ ನನ್ನನ್ನ ಶಿಕ್ಷಕನಾಗಿ ನೇಮಿಸಿದ್ರು. b ಈ ಮುಂಚೆ ನಾನು ಇಂಥ ಶಾಲೆಗಳಲ್ಲಿ ಕಲಿಯೋಕೆ ಅಂತ ಹೋಗ್ತಿದ್ದೆ. ಆದ್ರೆ ಈ ಸಲ ನನ್ನನ್ನ ಅಲ್ಲಿ ಕಲಿಸೋಕೆ ನೇಮಿಸಿದ್ರು. ಈ ತರ ಒಂದು ಅವಕಾಶ ಸಿಗುತ್ತೆ ಅಂತ ನಾನು ಕನಸು ಮನಸ್ಸಲ್ಲೂ ನೆನಸಿರಲಿಲ್ಲ.

ಆಮೇಲೆ ನಾನು ಜಿಲ್ಲಾ ಮೇಲ್ವಿಚಾರಕನಾಗಿ ಸೇವೆ ಮಾಡೋಕೆ ಶುರು ಮಾಡಿದೆ. ಆದ್ರೆ ಈ ಏರ್ಪಾಡನ್ನ ನಿಲ್ಲಿಸಿದ ಮೇಲೆ ನಾನು ಮತ್ತೆ ಸಂಚರಣ ಕೆಲಸಕ್ಕೆ ವಾಪಸ್‌ ಹೋದೆ. ಸುಮಾರು 30 ವರ್ಷ ನಾನು ಸಂಚರಣ ಮೇಲ್ವಿಚಾರಕನಾಗಿ ಮತ್ತು ಬೈಬಲ್‌ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಮಾಡಿದೆ. ಇದ್ರಿಂದ ನನಗೆ ತುಂಬ ಖುಷಿ ಸಿಕ್ಕಿದೆ ಮತ್ತು ಆಶೀರ್ವಾದಗಳನ್ನೂ ಪಡ್ಕೊಂಡಿದ್ದೀನಿ. ಆದ್ರೆ ಈ ನೇಮಕಗಳೆಲ್ಲ ಹೂವಿನ ಹಾಸಿಗೆ ತರ ಇರ್ಲಿಲ್ಲ. ಯಾಕೆ ಅಂತ ಹೇಳ್ತೀನಿ ಬನ್ನಿ.

ನನಗೆ ತುಂಬ ಧೈರ್ಯ ಇತ್ತು. ಹಾಗಾಗಿ ಎಷ್ಟೇ ಕಷ್ಟದ ಪರಿಸ್ಥಿತಿ ಬಂದ್ರೂ ಅದನ್ನ ನಿಭಾಯಿಸ್ತಿದ್ದೆ. ಸಭೆಯಲ್ಲಿರೋ ಸಮಸ್ಯೆಗಳನ್ನ ಸರಿ ಮಾಡೋಕೆ ನಾನು ಸಹೋದರರ ಹತ್ರ ಹೀಗೆ ಮಾಡಬೇಕು, ಹಾಗೆ ಮಾಡಬೇಕು ಅಂತ ಕೆಲವೊಂದು ಸಲ ಒತ್ತಡ ಹಾಕ್ತಿದ್ದೆ. ಕೆಲವು ಸಹೋದರರಿಗೆ ‘ನೀವು ಸಹೋದರ ಸಹೋದರಿಯರಿಗೆ ಇನ್ನೂ ಪ್ರೀತಿ ತೋರಿಸಬೇಕು, ಬಿಟ್ಟು ಕೊಡೋ ಸ್ವಭಾವ ಬೆಳೆಸ್ಕೊಬೇಕು’ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳ್ತಿದ್ದೆ. ಆದ್ರೆ ಆ ಸಮಯದಲ್ಲಿ ನಾನೇ ಅದನ್ನ ಮಾಡೋಕೆ ಮರೆತುಬಿಡ್ತಿದ್ದೆ.—ರೋಮ. 7:21-23.

ಇದ್ರಿಂದ ಕೆಲವೊಂದು ಸಲ ನನ್ನ ಮೇಲೆ ನನಗೆ ತುಂಬ ಬೇಜಾರಾಗ್ತಿತ್ತು. (ರೋಮ. 7:24) ಎಷ್ಟರ ಮಟ್ಟಿಗೆ ಅಂದ್ರೆ ಒಂದು ಸಲ ನಾನು ‘ಇನ್ನು ಇಲ್ಲಿ ಮಿಷನರಿ ಸೇವೆ ಮಾಡೋದಕ್ಕಿಂತ ಫಿನ್ಲೆಂಡ್‌ಗೆ ವಾಪಸ್‌ ಹೋಗೋದೇ ಒಳ್ಳೇದು’ ಅಂತ ಹೇಳಿ ಪ್ರಾರ್ಥನೆ ಮಾಡಿದೆ. ಆವತ್ತು ಸಂಜೆ ನಾನು ಕೂಟಕ್ಕೆ ಹೋದೆ. ಅಲ್ಲಿ ನಾನು ಕೇಳಿಸ್ಕೊಂಡ ವಿಷ್ಯ ಈ ನೇಮಕವನ್ನ ಮುಂದುವರಿಸ್ಕೊಂಡು ಹೋಗೋಕೆ ಮತ್ತು ನನ್ನ ತಪ್ಪುಗಳನ್ನ ತಿದ್ಕೊಳ್ಳೋಕೆ ನನಗೆ ಪ್ರೋತ್ಸಾಹ ಕೊಡ್ತು. ಆವತ್ತು ನಾನು ಮಾಡಿದ ಪ್ರಾರ್ಥನೆಗೆ ಯೆಹೋವ ಹೇಗೆ ಉತ್ರ ಕೊಟ್ಟನು ಅಂತ ಇವತ್ತಿಗೂ ನಾನು ಮರೆತಿಲ್ಲ. ಅಷ್ಟೇ ಅಲ್ಲ, ನನ್ನ ಕೊರತೆಗಳನ್ನ ಸರಿ ಮಾಡ್ಕೊಳ್ಳೋಕೂ ಆತನು ಸಹಾಯ ಮಾಡಿದನು. ಅದಕ್ಕೆ ಯೆಹೋವನಿಗೆ ತುಂಬ ಥ್ಯಾಂಕ್ಸ್‌ ಹೇಳ್ತೀನಿ.

ಯೆಹೋವ ಮುಂದೆನೂ ನಮ್ಮ ಜೊತೆ ಇರ್ತಾನೆ

ನಮ್ಮ ಜೀವನ ಪೂರ್ತಿ ಪೂರ್ಣ ಸಮಯದ ಸೇವೆ ಮಾಡೋಕೆ ಅವಕಾಶ ಕೊಟ್ಟಿದ್ದಕ್ಕೆ ನಾನು ಸಿರ್ಕಾ ಯೆಹೋವನಿಗೆ ಋಣಿಗಳಾಗಿ ಇರ್ತೀವಿ. ಯಾವಾಗ್ಲೂ ನನ್ನ ಜೊತೆ ಇರೋ ನನ್ನ ಪ್ರೀತಿಯ ಹೆಂಡ್ತಿಯನ್ನ ಕೊಟ್ಟಿದ್ದಕ್ಕೂ ನಾನು ಆತನಿಗೆ ಥ್ಯಾಂಕ್ಸ್‌ ಹೇಳ್ತೀನಿ.

ಇನ್ನು ಸ್ವಲ್ಪದ್ರಲ್ಲೇ ನನಗೆ 70 ವರ್ಷ ಆಗುತ್ತೆ. ಆಗ ಬೈಬಲ್‌ ಶಾಲೆಯಲ್ಲಿ ನಾನು ಕಲಿಸೋದನ್ನ, ಸಂಚರಣ ಮೇಲ್ವಿಚಾರಕನಾಗಿ ಸೇವೆ ಮಾಡೋದನ್ನ ನಿಲ್ಲಿಸಬೇಕಾಗುತ್ತೆ. ಆದ್ರೆ ನಾನು ಬೇಜಾರು ಮಾಡ್ಕೊಳಲ್ಲ. ಯಾಕೆ ಗೊತ್ತಾ? ಯಾಕಂದ್ರೆ ನಾವು ದೊಡ್ಡದೊಡ್ಡ ಜವಾಬ್ದಾರಿಗಳನ್ನ ಮಾಡಿದ್ರೆ ಮಾತ್ರ ಯೆಹೋವನನ್ನ ಖುಷಿ ಪಡಿಸ್ತೀವಿ ಅಂತಲ್ಲ, ನಮ್ಮ ಇತಿಮಿತಿಗಳನ್ನ ಅರ್ಥಮಾಡ್ಕೊಂಡು ಆತನ ಸೇವೆ ಮಾಡಿದ್ರೆ, ಮನಸ್ಸಾರೆ ಆತನನ್ನ ಪ್ರೀತಿಸಿದ್ರೆ, ಹೊಗಳಿದ್ರೆ ಯೆಹೋವನ ಮನಸ್ಸನ್ನ ಖುಷಿಪಡಿಸ್ತೀವಿ.—ಮೀಕ 6:8; ಮಾರ್ಕ 12:32-34.

ನಾನು ಹಿಂದೆ ಮಾಡಿರೋ ನೇಮಕಗಳನ್ನ ನೆನಪಿಸ್ಕೊಂಡಾಗ ಏನು ಗೊತ್ತಾಯ್ತು ಅಂದ್ರೆ ಯೆಹೋವ ನನಗೆ ಈ ನೇಮಕಗಳನ್ನ ಕೊಟ್ಟಿದ್ದು ನಾನು ಬೇರೆಯವ್ರಿಗಿಂತ ಚೆನ್ನಾಗಿ ಈ ನೇಮಕಗಳನ್ನ ಮಾಡ್ತೀನಿ ಅಂತಾನೋ ಅಥವಾ ನನಗೆ ಏನೋ ವಿಶೇಷ ಸಾಮರ್ಥ್ಯ ಇದೆ ಅಂತಾನೋ ಅಲ್ಲ. ಬದ್ಲಿಗೆ ಯೆಹೋವ ತೋರಿಸಿರೋ ಅಪಾರ ಕೃಪೆಯಿಂದಾನೇ. ನನಗೆ ಕೊರತೆಗಳು ಇದ್ರೂ ಈ ನೇಮಕ ಮಾಡೋಕೆ ಯೆಹೋವ ನನ್ನನ್ನ ಆರಿಸ್ಕೊಂಡನು. ಆತನ ಸಹಾಯ ಇರೋದ್ರಿಂದಾನೇ ನನ್ನಿಂದ ಈ ನೇಮಕಗಳನ್ನ ಮಾಡೋಕೆ ಆಯ್ತು. ಹೀಗೆ ನನ್ನಲ್ಲಿರೋ ಕುಂದು ಕೊರತೆಗಳು, ಬಲಹೀನತೆಗಳು ಯೆಹೋವನಿಗೆ ಎಷ್ಟು ಶಕ್ತಿ ಇದೆ ಅಂತ ತೋರಿಸ್ತು.—2 ಕೊರಿಂ. 12:9.

a ರೈಮೊ ಕ್ವೋಕಾನೆನ್‌ ಅವ್ರ ಜೀವನ ಕಥೆ ಏಪ್ರಿಲ್‌ 1, 2006ರ ಕಾವಲಿನಬುರುಜುವಿನಲ್ಲಿ “ಯೆಹೋವನನ್ನು ಸೇವಿಸಲು ದೃಢನಿಶ್ಚಿತರು” ಅನ್ನೋ ಲೇಖನದಲ್ಲಿ ಇದೆ.

b ಈಗ ಈ ಶಾಲೆಗೆ ಬದಲಾಗಿ ರಾಜ್ಯ ಪ್ರಚಾರಕರ ಶಾಲೆ ಬಂದಿದೆ.