ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 21

ಗೀತೆ 50 ಪ್ರೀತಿಯ ದೈವಿಕ ಆದರ್ಶ

ಒಳ್ಳೇ ಸಂಗಾತಿಯನ್ನ ಹುಡುಕೋದು ಹೇಗೆ?

ಒಳ್ಳೇ ಸಂಗಾತಿಯನ್ನ ಹುಡುಕೋದು ಹೇಗೆ?

“ಒಳ್ಳೇ ಹೆಂಡತಿ ಸಿಗೋದು ಅಪರೂಪ. ಅವಳು ಹವಳಕ್ಕಿಂತ ಅಮೂಲ್ಯ.”ಜ್ಞಾನೋ. 31:10.

ಈ ಲೇಖನದಲ್ಲಿ ಏನಿದೆ?

ಒಬ್ಬ ವ್ಯಕ್ತಿಗೆ ಒಳ್ಳೇ ಸಂಗಾತಿಯನ್ನ ಹುಡುಕೋಕೆ ಸಹಾಯ ಮಾಡೋ ಬೈಬಲ್‌ ತತ್ವಗಳನ್ನ ತಿಳ್ಕೊಳ್ತೀವಿ. ಮುಂದೆ ಮದುವೆ ಆಗೋಕೆ ಇಷ್ಟಪಡೋ ಸಹೋದರ ಸಹೋದರಿಯರಿಗೆ ಸಭೆಯಲ್ಲಿ ಇರೋರು ಹೇಗೆ ಬೆಂಬಲ ಕೊಡಬಹುದು ಅಂತನೂ ಕಲಿತೀವಿ.

1-2. (ಎ) ಮದುವೆ ಆಗೋಕೆ ಯೋಚ್ನೆ ಮಾಡೋ ಮುಂಚೆ ಒಬ್ಬ ವ್ಯಕ್ತಿ ಏನು ಮಾಡಬೇಕು? (ಬಿ) “ಡೇಟಿಂಗ್‌” ಅಂದ್ರೆ ಏನು? (“ಪದ ವಿವರಣೆ” ನೋಡಿ.)

 ನೀವು ಮದುವೆ ಆಗೋಕೆ ಇಷ್ಟಪಡ್ತೀರಾ? ಖುಷಿಯಾಗಿರೋಕೆ ಮದುವೆ ಆಗ್ಲೇ ಬೇಕು ಅಂತೇನಿಲ್ಲ. ಆದ್ರೂ ತುಂಬ ಜನ ಮದುವೆ ಆಗೋಕೆ ಇಷ್ಟಪಡ್ತಾರೆ. ಆದ್ರೆ ಮದುವೆ ಆಗೋಕೆ ಮುಂಚೆ ನಿಮಗೆ ಯೆಹೋವನ ಜೊತೆ ಒಳ್ಳೇ ಸಂಬಂಧ ಇರಬೇಕು. ನಿಮ್ಮ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರಬೇಕು ಮತ್ತು ಮದುವೆ ಆದ್ಮೇಲೆ ಬರೋ ಖರ್ಚುವೆಚ್ಚಗಳನ್ನ ನೋಡ್ಕೊಬೇಕು. a (1 ಕೊರಿಂ. 7:36) ಹೀಗೆ ಮಾಡಿದ್ರೆ ನಿಮ್ಮ ಮದುವೆ ಜೀವನ ಚೆನ್ನಾಗಿ ಇರುತ್ತೆ.

2 ಆದ್ರೆ ಒಳ್ಳೇ ಸಂಗಾತಿಯನ್ನ ಕಂಡ್ಕೊಳ್ಳೋದು ಅಷ್ಟು ಸುಲಭ ಅಲ್ಲ. (ಜ್ಞಾನೋ. 31:10) ಒಂದುವೇಳೆ ಯಾರಾದ್ರು ಸಿಕ್ಕಿದ್ರೂ ಅವ್ರ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ ನೀವು ಇಷ್ಟ ಪಡಬಹುದು. ಆದ್ರೆ ಅವ್ರ ಜೊತೆ ಡೇಟಿಂಗ್‌ b ಶುರುಮಾಡೋಕೆ ಅಷ್ಟು ಸುಲಭ ಆಗಿರಲಿಕ್ಕಿಲ್ಲ. ಅದಕ್ಕೇ ಒಳ್ಳೇ ಸಂಗಾತಿಯನ್ನ ಕಂಡ್ಕೊಳ್ಳೋಕೆ ಮತ್ತು ಅವ್ರ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ ನೀವೇನು ಮಾಡಬೇಕು ಅಂತ ಈ ಲೇಖನದಲ್ಲಿ ಕಲಿತೀರ. ಅಷ್ಟೇ ಅಲ್ಲ ಮದುವೆ ಆಗೋಕೆ ಇಷ್ಟಪಡೋರಿಗೆ ಸಭೆಯಲ್ಲಿ ಇರೋರು ಹೇಗೆ ಬೆಂಬಲ ಕೊಡಬಹುದು ಅಂತಾನೂ ತಿಳ್ಕೊತೀರ.

ಒಳ್ಳೇ ಸಂಗಾತಿಯನ್ನ ಹುಡುಕೋಕೆ ಏನು ಮಾಡಬೇಕು?

3. ಮದುವೆ ಆಗೋ ಮುಂಚೆ ಯಾವೆಲ್ಲಾ ವಿಷ್ಯಗಳ ಬಗ್ಗೆ ಯೋಚ್ನೆ ಮಾಡಬೇಕು?

3 ಮದುವೆ ಆಗೋಕೆ ಇಷ್ಟಪಡೋರು ಡೇಟಿಂಗ್‌ ಶುರುಮಾಡೋಕೆ ಮುಂಚೆ ತಮ್ಮ ಸಂಗಾತಿ ಹೇಗಿರಬೇಕು ಅಂತ ಯೋಚ್ನೆ ಮಾಡಿರಬೇಕು. ಇಲ್ಲಾಂದ್ರೆ ಒಳ್ಳೇ ಹುಡುಗ, ಹುಡುಗಿ ನಿಮ್ಮ ಕಣ್ಮುಂದೆ ಇದ್ರೂ ನಿಮಗೆ ಅದು ಗೊತ್ತಾಗಲ್ಲ ಅಥವಾ ನಿಮಗೆ ಹೊಂದ್ಕೊಳ್ಳೋಕೆ ಆಗದೇ ಇರೋ ವ್ಯಕ್ತಿ ಜೊತೆ ಡೇಟಿಂಗ್‌ ಮಾಡಬೇಕಾಗುತ್ತೆ. ನೀವು ಹುಡುಕೋ ಸಂಗಾತಿಗೆ ದೀಕ್ಷಾಸ್ನಾನ ಆಗಿರಬೇಕು ನಿಜ. (1 ಕೊರಿಂ. 7:39) ಹಾಗಂತ ದೀಕ್ಷಾಸ್ನಾನ ತಗೊಂಡಿರೋ ಎಲ್ರೂ ನಿಮಗೆ ಒಂದು ಒಳ್ಳೇ ಜೋಡಿ ಆಗ್ತಾರೆ ಅಂತ ಹೇಳೋಕೆ ಆಗುತ್ತಾ? ಖಂಡಿತ ಇಲ್ಲ. ಅದಕ್ಕೇ ನೀವು, ‘ನಾನು ಯಾವೆಲ್ಲಾ ಗುರಿ ಇಟ್ಟಿದ್ದೀನಿ? ನಾನು ಮದುವೆ ಆಗೋ ವ್ಯಕ್ತಿಯಲ್ಲಿ ಯಾವೆಲ್ಲಾ ಗುಣಗಳಿರಬೇಕು? ಅವರು ಹೀಗೆ ಇರಬೇಕು, ಹಾಗೆ ಇರಬೇಕು ಅಂತ ಅತಿಯಾಗಿ ನಿರೀಕ್ಷಿಸ್ತಾ ಇದ್ದೀನಾ?’ ಅನ್ನೋ ಪ್ರಶ್ನೆಗಳನ್ನ ಕೇಳ್ಕೊಳ್ಳಿ.

4. ಕೆಲವರು ಪ್ರಾರ್ಥನೆ ಮಾಡುವಾಗ ಏನೆಲ್ಲಾ ಕೇಳ್ಕೊಂಡಿದ್ದಾರೆ?

4 ನಿಮಗೆ ಮದುವೆ ಆಗೋ ಆಸೆ ಇದ್ರೆ ಖಂಡಿತ ನೀವು ಯೆಹೋವನ ಹತ್ರ ಪ್ರಾರ್ಥಿಸಿರುತ್ತೀರ. (ಫಿಲಿ. 4:6) ಯೆಹೋವ ಯಾರಿಗೂ ಸಂಗಾತಿಯನ್ನ ಕೊಡ್ತೀನಿ ಅಂತ ಮಾತು ಕೊಟ್ಟಿಲ್ಲ. ಆದ್ರೆ ಆತನು ನಿಮ್ಮ ಅಗತ್ಯಗಳನ್ನ ನೋಡ್ಕೊಳ್ತಾನೆ, ನಿಮ್ಮ ಭಾವನೆಗಳನ್ನ ಅರ್ಥಮಾಡ್ಕೊಳ್ತಾನೆ ಮತ್ತು ನಿಮಗೆ ಸಂಗಾತಿಯನ್ನ ಹುಡುಕೋಕೆ ಸಹಾಯನೂ ಮಾಡ್ತಾನೆ. ಹಾಗಾಗಿ ನೀವು ಆತನ ಹತ್ರ ಪ್ರಾರ್ಥನೆ ಮಾಡುವಾಗ ನಿಮ್ಮ ಆಸೆಗಳ ಬಗ್ಗೆ, ನಿಮ್ಮ ಭಾವನೆಗಳ ಬಗ್ಗೆ ಹೇಳಿ. (ಕೀರ್ತ. 62:8) ಅಷ್ಟೇ ಅಲ್ಲ ತಾಳ್ಮೆಗಾಗಿ, ವಿವೇಕಕ್ಕಾಗಿ ಬೇಡ್ಕೊಳ್ಳಿ. (ಯಾಕೋ. 1:5) ಅಮೆರಿಕದಲ್ಲಿರೋ ಸಹೋದರ ಜಾನ್‌ c ಬಗ್ಗೆ ನೋಡಿ. ಅವ್ರಿಗೆ ಇನ್ನೂ ಮದುವೆ ಆಗಿಲ್ಲ. ಅವರು ಪ್ರಾರ್ಥನೆ ಮಾಡುವಾಗ ಯಾವೆಲ್ಲ ವಿಷ್ಯಗಳ ಬಗ್ಗೆ ಮಾತಾಡ್ತಾರೆ ಅಂತ ಹೇಳಿದ್ರು. “ನಾನು ಪ್ರಾರ್ಥನೆ ಮಾಡುವಾಗ ನನ್ನ ಸಂಗಾತಿಯಲ್ಲಿ ಎಂಥ ಗುಣಗಳಿರಬೇಕು ಅಂತ ಯೆಹೋವನ ಹತ್ರ ಹೇಳ್ತೀನಿ. ಒಳ್ಳೇ ಸಂಗಾತಿಯನ್ನ ಹುಡುಕೋಕೆ ಸಹಾಯ ಮಾಡಪ್ಪಾ, ಒಳ್ಳೇ ಗಂಡನಾಗೋಕೆ ಬೇಕಾದ ಗುಣಗಳನ್ನ ಬೆಳೆಸ್ಕೊಳ್ಳೋಕೂ ಸಹಾಯ ಮಾಡಪ್ಪಾ ಅಂತ ಬೇಡ್ಕೊತೀನಿ” ಅಂತ ಅವರು ಹೇಳ್ತಾರೆ. ಶ್ರೀಲಂಕದಲ್ಲಿರೋ ಸಹೋದರಿ ಟಾನ್ಯಾ “ನಾನು ಸಂಗಾತಿಯನ್ನ ಹುಡುಕುವಾಗ ಸರಿಯಾಗಿ ಯೋಚಿಸೋಕೆ, ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ ಮತ್ತು ಖುಷಿಯಾಗಿ ಇರೋಕೆ ಸಹಾಯ ಮಾಡು ಅಂತ ಯೆಹೋವನ ಹತ್ರ ಬೇಡ್ಕೊತೀನಿ” ಅಂತ ಹೇಳ್ತಾರೆ. ಹಾಗಾಗಿ ನಿಮಗೆ ಇನ್ನೂ ಸಂಗಾತಿ ಸಿಕ್ಕಿಲ್ಲಾಂದ್ರೆ ಬೇಜಾರಾಗಬೇಡಿ. ಯಾಕಂದ್ರೆ ಯೆಹೋವ ನಿಮ್ಮ ಅಗತ್ಯಗಳನ್ನ ನೋಡ್ಕೊಳ್ತಾನೆ, ನಿಮ್ಮ ಭಾವನೆಗಳನ್ನ ಅರ್ಥಮಾಡ್ಕೊತಾನೆ.—ಕೀರ್ತ. 55:22.

5. ಮದುವೆ ಆಗದೇ ಇರೋರಿಗೆ ಒಳ್ಳೇ ಸಂಗಾತಿಯನ್ನ ಕಂಡ್ಕೊಳ್ಳೋಕೆ ಯಾವ ಅವಕಾಶ ಇದೆ? (1 ಕೊರಿಂಥ 15:58) (ಚಿತ್ರ ನೋಡಿ.)

5 ಬೈಬಲ್‌ ನಮಗೆ “ಒಡೆಯನ ಕೆಲಸವನ್ನ ಹೆಚ್ಚೆಚ್ಚು ಮಾಡಿ” ಅಂತ ಪ್ರೋತ್ಸಾಹ ಕೊಡುತ್ತೆ. (1 ಕೊರಿಂಥ 15:58 ಓದಿ.) ಹಾಗಾಗಿ ನೀವು ಯೆಹೋವನ ಸೇವೆಲಿ ಬಿಜ಼ಿಯಾಗಿದ್ರೆ, ಸಹೋದರ ಸಹೋದರಿಯರ ಜೊತೆ ಸಮಯ ಕಳೆದ್ರೆ ನೀವು ಖುಷಿಯಾಗಿ ಇರ್ತೀರ. ಈ ತರ ನೀವು ಸಮಯ ಕಳೆದ್ರೆ ನಿಮ್ಮ ತರ ಯೆಹೋವನ ಸೇವೆ ಮಾಡ್ತಿರೋ ಮದುವೆ ಆಗದಿರೋ ಸಹೋದರ ಸಹೋದರಿಯರನ್ನ ಭೇಟಿ ಆಗ್ತೀರ. ಹೀಗೆ ನೀವು ಯೆಹೋವನಿಗೆ ಇಷ್ಟ ಆಗಿರೋದನ್ನ ಮಾಡಿದ್ರೆ ಯಾವಾಗ್ಲೂ ಸಂತೋಷವಾಗಿ ಇರ್ತೀರ.

ನೀವು ಯೆಹೋವನ ಸೇವೆಲಿ ಬಿಜ಼ಿಯಾಗಿ ಇದ್ರೆ ಮತ್ತು ಬೇರೆಬೇರೆ ಸಹೋದರ ಸಹೋದರಿಯರ ಜೊತೆ ಸಮಯ ಕಳೆದ್ರೆ ಮದುವೆ ಆಗದಿರೋ ಸಹೋದರ ಸಹೋದರಿಯರನ್ನ ಭೇಟಿ ಆಗೋಕೆ ಅವಕಾಶ ಸಿಗುತ್ತೆ (ಪ್ಯಾರ 5 ನೋಡಿ)


6. ಸಂಗಾತಿಯನ್ನ ಹುಡುಕೋರು ಯಾವ ವಿಷ್ಯದ ಬಗ್ಗೆ ಎಚ್ಚರವಾಗಿರಬೇಕು?

6 ನೀವು ಒಂದು ವಿಷ್ಯದಲ್ಲಿ ಎಚ್ಚರವಾಗಿ ಇರಬೇಕು. ಹುಡುಗ-ಹುಡುಗಿ ಹುಡ್ಕೊದೇ ನಿಮ್ಮ ಜೀವನದಲ್ಲಿ ಮುಖ್ಯ ಆಗಿಬಿಡಬಾರದು. (ಫಿಲಿ. 1:10) ಯಾಕಂದ್ರೆ ನಿಜವಾದ ಖುಷಿ ನೀವು ಮದುವೆ ಆಗಿದ್ದೀರೋ ಇಲ್ವೋ ಅನ್ನೋದ್ರಿಂದಲ್ಲ, ಯೆಹೋವನ ಜೊತೆಗಿರೋ ಫ್ರೆಂಡ್‌ಶಿಪ್‌ನಿಂದ ಸಿಗುತ್ತೆ. (ಮತ್ತಾ. 5:3) ನಿಮಗಿನ್ನೂ ಮದುವೆ ಆಗಿಲ್ಲ ಅಂದ್ರೆ ಯೆಹೋವನ ಸೇವೆ ಮಾಡೋಕೆ ತುಂಬ ಅವಕಾಶ ಸಿಗುತ್ತೆ. (1 ಕೊರಿಂ. 7:32, 33) ಹಾಗಾಗಿ ನಿಮ್ಮ ಸಮಯನ ಚೆನ್ನಾಗಿ ಉಪಯೋಗಿಸಿ. ಅಮೆರಿಕದಲ್ಲಿರೋ ಸಹೋದರಿ ಜೆಸಿಕಾ ಹತ್ತತ್ರ 40 ವಯಸ್ಸಿದ್ದಾಗ ಮದುವೆ ಆದ್ರು. ಅವರು ಹೀಗೆ ಹೇಳ್ತಾರೆ: “ನಂಗೆ ಮದುವೆ ಆಗೋಕೆ ಆಸೆ ಇದ್ರೂ ಯೆಹೋವನ ಸೇವೆಲಿ ತುಂಬ ಬಿಜ಼ಿ ಆಗಿ ಇದ್ದಿದ್ರಿಂದ ತೃಪ್ತಿಯಾಗಿದ್ದೆ.”

ಚೆನ್ನಾಗಿ ಗಮನಿಸಿ

7. ಒಬ್ಬ ವ್ಯಕ್ತಿ ನಿಮಗೆ ಇಷ್ಟ ಆದ್ರೆ ಅದನ್ನ ಅವ್ರ ಹತ್ರ ಹೇಳೋ ಮುಂಚೆ ಗಮನಿಸೋದು ಯಾಕೆ ಮುಖ್ಯ? (ಜ್ಞಾನೋಕ್ತಿ 13:16)

7 ‘ಇವ್ರೇ ನನಗೆ ಸರಿಯಾದ ಜೋಡಿ’ ಅಂತ ನಿಮಗೆ ಅನಿಸಿದ್ರೆ ಏನು ಮಾಡ್ತೀರಾ? ತಕ್ಷಣ ಅವ್ರ ಹತ್ರ ಹೋಗಿ ಮನಸ್ಸಲ್ಲಿ ಇರೋದನ್ನೆಲ್ಲಾ ಹೇಳಿಬಿಡ್ತೀರಾ? ಬುದ್ಧಿವಂತ ಏನಾದ್ರೂ ಮಾಡೋಕೆ ಮುಂಚೆ ಯೋಚ್ನೆ ಮಾಡ್ತಾನೆ ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 13:16 ಓದಿ.) ಹಾಗಾಗಿ ನಿಮಗೆ ಯಾರಾದ್ರೂ ಇಷ್ಟ ಇದ್ರೆ ತಕ್ಷಣ ಹೋಗಿ ಅವ್ರ ಹತ್ರ ಅದನ್ನ ಹೇಳಬೇಡಿ. ಅವ್ರನ್ನ ಚೆನ್ನಾಗಿ ಗಮನಿಸಿ. ನೆದರ್ಲೆಂಡ್ಸ್‌ನಲ್ಲಿರೋ ಅಶ್ವಿನ್‌ ಹೀಗೆ ಹೇಳ್ತಾರೆ: “ಭಾವನೆಗಳು ಬೇಗ ಕೆರಳುತ್ತೆ, ಹಾಗೇ ಬೇಗ ಕಣ್ಮರೆ ಆಗುತ್ತೆ. ಹಾಗಾಗಿ ನಿಮಗೆ ಇಷ್ಟ ಇರೋ ವ್ಯಕ್ತಿಯನ್ನ ಚೆನ್ನಾಗಿ ಗಮನಿಸಿ. ಆಗ ಭಾವನೆಗಳನ್ನ ನಂಬಿ ಡೇಟಿಂಗ್‌ ಮಾಡೋಕೆ ಹೋಗಲ್ಲ.” ನೀವು ಈ ತರ ಒಬ್ಬ ವ್ಯಕ್ತಿಯನ್ನ ಚೆನ್ನಾಗಿ ಗಮನಿಸಿದ್ರೆ ಅವರು ನಿಮಗೆ ಸರಿಯಾದ ಜೋಡಿನಾ, ಅಲ್ವಾ ಅಂತ ಗೊತ್ತಾಗುತ್ತೆ.

8. ಮದುವೆ ಆಗೋಕೆ ಇಷ್ಟಪಡೋರು ಒಬ್ಬ ವ್ಯಕ್ತಿಯನ್ನ ಹೇಗೆ ಗಮನಿಸಬೇಕು? (ಚಿತ್ರ ನೋಡಿ.)

8 ಒಬ್ಬ ವ್ಯಕ್ತಿಯನ್ನ ಹೇಗೆ ಗಮನಿಸಬಹುದು? ಕೂಟಗಳಿಗೆ ಹೋದಾಗ, ಗೆಟ್‌-ಟುಗೆದರ್‌ನಲ್ಲಿ ಸಿಕ್ಕಾಗ ನೀವು ಅವ್ರನ್ನ ಗಮನಿಸಬಹುದು. ಆಗ ಅವರು ಯೆಹೋವನನ್ನ ಪ್ರೀತಿಸ್ತಾರಾ, ಅವರು ಎಂಥ ವ್ಯಕ್ತಿ ಮತ್ತು ಅವರು ಹೇಗೆ ನಡ್ಕೊಳ್ತಾರೆ ಅಂತ ಗೊತ್ತಾಗುತ್ತೆ. ಅವ್ರ ಸ್ನೇಹಿತರು ಯಾರು, ಅವರು ಯಾವುದ್ರ ಬಗ್ಗೆ ಮಾತಾಡ್ತಾರೆ ಅಂತೆಲ್ಲ ಗಮನಿಸಿ. (ಲೂಕ 6:45) ಅಷ್ಟೇ ಅಲ್ಲ ನಿಮಗೆ ಇರೋ ಗುರಿಗಳು ಅವ್ರಿಗೂ ಇದ್ಯಾ ಅಂತ ಗಮನಿಸಿ. ಅವ್ರ ಬಗ್ಗೆ ಇನ್ನೂ ತಿಳ್ಕೊಳ್ಳೋಕೆ ಅವ್ರ ಸಭೆಯ ಹಿರಿಯರ ಹತ್ರ, ಅವ್ರ ಬಗ್ಗೆ ಚೆನ್ನಾಗಿ ಗೊತ್ತಿರೋ ಪ್ರೌಢ ಕ್ರೈಸ್ತರ ಹತ್ರ ಕೇಳಿ. (ಜ್ಞಾನೋ. 20:18) ನೀವು ಅವ್ರ ಹತ್ರ ಆ ವ್ಯಕ್ತಿಗೆ ಒಳ್ಳೇ ಹೆಸ್ರಿದ್ಯಾ, ಅವ್ರಲ್ಲಿ ಯಾವೆಲ್ಲ ಗುಣಗಳಿವೆ ಅಂತ ಕೇಳಬಹುದು. (ರೂತ್‌ 2:11) ಆದ್ರೆ ಒಂದು ವಿಷ್ಯ ನೆನಪಿಡಿ: ನೀವು ಆ ವ್ಯಕ್ತಿಯನ್ನ ಗಮನಿಸುವಾಗ ಅವ್ರಿಗೆ ಮುಜುಗರ ಆಗೋ ತರ ನಡ್ಕೊಬೇಡಿ. ಪ್ರತಿಯೊಂದು ವಿಷ್ಯನ ಹುಡುಕ್ತಾ ಯಾವಾಗ್ಲೂ ಅವ್ರ ಹಿಂದೆನೇ ಇರಬೇಡಿ.

ನಿಮ್ಮ ಇಷ್ಟವನ್ನ ಹೋಗಿ ಹೇಳೋಕೆ ಮುಂಚೆ ಸ್ವಲ್ಪ ಸಮಯ ಅವ್ರನ್ನ ಚೆನ್ನಾಗಿ ಗಮನಿಸಿ (ಪ್ಯಾರ 7-8 ನೋಡಿ)


9. ನೀವು ಇಷ್ಟಪಡೋ ವ್ಯಕ್ತಿ ಹತ್ರ ಹೋಗಿ ಮಾತಾಡೋ ಮುಂಚೆ ಏನು ನೆನಪಲ್ಲಿ ಇಡಬೇಕು?

9 ಒಬ್ಬ ವ್ಯಕ್ತಿಯನ್ನ ಗಮನಿಸೋಕೆ ಎಷ್ಟು ಸಮಯ ತಗೊಬೇಕು? ಒಂದುವೇಳೆ ನೀವು ಇಷ್ಟಪಡೋ ವ್ಯಕ್ತಿ ಹತ್ರ ತುಂಬ ಬೇಗ ಹೋಗಿ ನಿಮ್ಮ ತೀರ್ಮಾನ ಹೇಳಿದ್ರೆ ನೀವು ಯೋಚ್ನೆ ಮಾಡ್ದೇ ಒಂದು ತೀರ್ಮಾನ ತಗೊಂಡಿದ್ದೀರ ಅಂತ ಅವರು ಅಂದ್ಕೊಬಹುದು. (ಜ್ಞಾನೋ. 29:20) ನಿಮ್ಮ ತೀರ್ಮಾನ ಹೇಳೋಕೆ ತುಂಬ ತಡ ಮಾಡಿದ್ರೂ ಒಂದು ತೀರ್ಮಾನ ಹೇಳೋಕೆ ನೀವು ಅತಿಯಾಗಿ ಯೋಚ್ನೆ ಮಾಡ್ತಿದ್ದೀರ, ಅದನ್ನ ಹೇಳೋಕೆ ಹಿಂದೆ-ಮುಂದೆ ನೋಡ್ತಿದ್ದೀರ ಅಂತನೂ ಅಂದ್ಕೊಬಹುದು. (ಪ್ರಸಂ. 11:4) ಹಾಗಾಗಿ ನೀವು ಅವ್ರ ಹತ್ರ ಹೋಗಿ ಮಾತಾಡೋಕೆ ಮುಂಚೆ ಒಂದು ವಿಷ್ಯ ನೆನಪಿಡಿ. ನೀವು ಆ ವ್ಯಕ್ತಿನೇ ಮದುವೆ ಆಗ್ತೀರ ಅಂತ ಅಂದ್ಕೊಬಾರದು. ಆದ್ರೆ ನೀವು ಮದುವೆ ಆಗೋಕೆ ರೆಡಿ ಇದ್ದೀರ ಮತ್ತು ಆ ವ್ಯಕ್ತಿ ನಿಮಗೆ ಒಳ್ಳೇ ಸಂಗಾತಿ ಆಗಬಹುದು ಅನ್ನೋ ನಂಬಿಕೆ ನಿಮಗಿರಬೇಕು.

10. ನಿಮ್ಮನ್ನ ಒಬ್ರು ಇಷ್ಟಪಡ್ತಿದ್ದಾರೆ ಅಂತ ಗೊತ್ತಾದಾಗ ನೀವು ಏನು ಮಾಡಬೇಕು?

10 ನಿಮ್ಮನ್ನ ಒಬ್ರು ಇಷ್ಟಪಡ್ತಿದ್ದಾರೆ ಅಂತ ಗೊತ್ತಾದಾಗ ನೀವು ಏನು ಮಾಡಬೇಕು? ಒಂದುವೇಳೆ ನಿಮಗೆ ಆ ವ್ಯಕ್ತಿ ಜೊತೆ ಡೇಟಿಂಗ್‌ ಮಾಡೋಕೆ ಇಷ್ಟ ಇಲ್ಲಾ ಅಂದ್ರೆ ನೀವು ನಡ್ಕೊಳ್ಳೋ ರೀತಿಲಿ ಅದನ್ನ ತೋರಿಸ್ಕೊಡಬೇಕು. ಇಲ್ಲಾಂದ್ರೆ ನೀವು ಅವ್ರನ್ನ ಇಷ್ಟಪಡ್ತಾ ಇದ್ದೀರ ಅಂತ ಆ ವ್ಯಕ್ತಿ ತಪ್ಪರ್ಥ ಮಾಡ್ಕೊಬಹುದು.—1 ಕೊರಿಂ. 10:24; ಎಫೆ. 4:25.

11. ಡೇಟಿಂಗ್‌ಗೆ ಅಥವಾ ಮದುವೆಗೆ ಏರ್ಪಾಡು ಮಾಡೋ ಕುಟುಂಬದವರು ಮತ್ತು ಸಂಬಂಧಿಕರು ಏನನ್ನ ಮನಸ್ಸಲ್ಲಿ ಇಡಬೇಕು?

11 ಕೆಲವು ದೇಶಗಳಲ್ಲಿ ಅಪ್ಪಅಮ್ಮ ಅಥವಾ ಸಂಬಂಧಿಕರು ಹುಡುಗ-ಹುಡುಗಿ ಹುಡುಕ್ತಾರೆ. ಇನ್ನು ಕೆಲವು ದೇಶಗಳಲ್ಲಿ ಅವ್ರ ಕುಟುಂಬದವರು ಅಥವಾ ಸ್ನೇಹಿತರು ಹುಡುಕ್ತಾರೆ. ಆಮೇಲೆ ಅವ್ರಿಬ್ರು ಭೇಟಿಮಾಡೋಕೆ ಅವಕಾಶ ಮಾಡಿ ಕೊಡ್ತಾರೆ. ಆದ್ರೆ ಅವರು ಹುಡುಗ-ಹುಡುಗಿಗೆ ಏನಿಷ್ಟ, ಏನು ಇಷ್ಟ ಇಲ್ಲ ಅಂತ ತಿಳ್ಕೊಂಡು ಡೇಟಿಂಗ್‌ಗೆ ಅಥವಾ ಮದುವೆಗೆ ಏರ್ಪಾಡು ಮಾಡ್ಕೊಟ್ರೆ ಚೆನ್ನಾಗಿರುತ್ತೆ. ಒಂದು ಹುಡುಗ-ಹುಡುಗಿ ಒಳ್ಳೇ ಜೋಡಿ ಆಗ್ತಾರೆ ಅಂತ ನಿಮಗೆ ಅನಿಸಿದ್ರೆ ಮೊದ್ಲು ನೀವು ಅವ್ರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳಿ. ಅವ್ರಲ್ಲಿ ಎಂಥ ಗುಣಗಳಿವೆ? ಅವ್ರಿಗೆ ಯೆಹೋವನ ಜೊತೆ ಒಳ್ಳೇ ಸಂಬಂಧ ಇದ್ಯಾ ಇಲ್ವಾ? ಅಂತ ತಿಳ್ಕೊಳ್ಳಿ. ಯಾಕಂದ್ರೆ ಹಣ, ಶಿಕ್ಷಣ, ಸ್ಥಾನಮಾನ ಇದೆಲ್ಲದ್ದಕ್ಕಿಂತ ಯೆಹೋವನ ಜೊತೆ ಇರೋ ಸ್ನೇಹನೇ ತುಂಬ ಮುಖ್ಯ. ಅಷ್ಟೇ ಅಲ್ಲ ನೀವು ನೆನಪಿಡಬೇಕಾದ ಇನ್ನೊಂದು ವಿಷ್ಯ ಏನಂದ್ರೆ, ಮದುವೆ ಆಗಬೇಕಾ, ಬೇಡ್ವಾ ಅನ್ನೋ ಕೊನೇ ನಿರ್ಣಯ ಹುಡುಗ ಹುಡುಗಿನೇ ಮಾಡಬೇಕು.—ಗಲಾ. 6:5.

ಡೇಟಿಂಗ್‌ ಶುರು ಮಾಡೋದು ಹೇಗೆ?

12. ನೀವು ಇಷ್ಟಪಡೋ ವ್ಯಕ್ತಿ ಜೊತೆ ಡೇಟಿಂಗ್‌ ಶುರು ಮಾಡಬೇಕು ಅಂದ್ಕೊಂಡ್ರೆ ಅದನ್ನ ಅವ್ರಿಗೆ ಹೇಗೆ ಹೇಳಬಹುದು?

12 ನೀವು ಇಷ್ಟಪಡೋ ವ್ಯಕ್ತಿ ಜೊತೆ ಡೇಟಿಂಗ್‌ ಶುರು ಮಾಡಬೇಕು ಅಂದ್ಕೊಂಡ್ರೆ ಅದನ್ನ ಅವ್ರಿಗೆ ಹೇಗೆ ಹೇಳಬಹುದು? d ಅವ್ರ ಹತ್ರ ಮಾತಾಡೋಕೆ ನೀವು ಜನ ಇರೋ ಜಾಗದಲ್ಲಿ ಹೋಗಬಹುದು ಅಥವಾ ಫೋನಲ್ಲಿ ಮಾತಾಡಬಹುದು. ನೀವು ಅವ್ರನ್ನ ಮದುವೆ ಆಗೋಕೆ ಇಷ್ಟಪಡ್ತಿದ್ದೀರ ಅನ್ನೋದನ್ನ ಸ್ಪಷ್ಟವಾಗಿ ಹೇಳಿ. (1 ಕೊರಿಂ. 14:9) ಅವ್ರಿಗೆ ಯೋಚಿಸೋಕೆ ಸಮಯ ಬೇಕಿದ್ರೆ ಅದಕ್ಕೆ ಅವಕಾಶ ಕೊಡಿ. (ಜ್ಞಾನೋ. 15:28) ಒಂದುವೇಳೆ ಆ ವ್ಯಕ್ತಿ ನಿಮ್ಮನ್ನ ಮದುವೆ ಆಗೋಕೆ ಇಷ್ಟ ಇಲ್ಲ ಅಂತ ಹೇಳಿದ್ರೆ ಬೇಜಾರು ಮಾಡ್ಕೊಬೇಡಿ. ಅವ್ರ ಅಭಿಪ್ರಾಯನ ಗೌರವಿಸಿ.

13. ಯಾರಾದ್ರೂ ನಿಮ್ಮ ಹತ್ರ ಬಂದು ನಿಮ್ಮನ್ನ ಮದುವೆ ಆಗೋಕೆ ಇಷ್ಟಪಡ್ತಿದ್ದೀನಿ ಅಂತ ಹೇಳಿದ್ರೆ ನೀವೇನು ಮಾಡ್ತೀರಾ? (ಕೊಲೊಸ್ಸೆ 4:6)

13 ಒಬ್ಬ ವ್ಯಕ್ತಿ ನಿಮ್ಮ ಹತ್ರ ಬಂದು ನಿಮ್ಮನ್ನ ಇಷ್ಟಪಡ್ತಿದ್ದೀನಿ ಅಂತ ಹೇಳಿದ್ರೆ ನೀವೇನು ಮಾಡಬೇಕು? ಅವರು ಈ ವಿಷ್ಯನ ನಿಮ್ಮ ಹತ್ರ ಬಂದು ಹೇಳೋಕೆ ಧೈರ್ಯ ತೋರಿಸಿರ್ತಾರೆ. ಅದಕ್ಕೆ ಅವ್ರನ್ನ ಗೌರವಿಸಿ, ಅವ್ರ ಜೊತೆ ದಯೆಯಿಂದ ಮಾತಾಡಿ. (ಕೊಲೊಸ್ಸೆ 4:6 ಓದಿ.) ಡೇಟಿಂಗ್‌ ಮಾಡೋಕೆ ಇಷ್ಟ ಇದ್ಯಾ ಇಲ್ವಾ ಅಂತ ಯೋಚಿಸೋಕೆ ಸಮಯ ಬೇಕಿದ್ರೆ ಅದನ್ನ ಅವ್ರ ಹತ್ರ ಹೇಳಿ. ಹಾಗಂತ ತುಂಬ ಸಮಯ ತಗೋಬೇಡಿ, ಆದಷ್ಟು ಬೇಗ ಹೇಳಿ. (ಜ್ಞಾನೋ. 13:12) ನಿಮಗೆ ಇಷ್ಟ ಇಲ್ಲ ಅಂದ್ರೆ ಅದನ್ನ ಅವ್ರಿಗೆ ಸ್ಪಷ್ಟವಾಗಿ ಮತ್ತು ಬೇಜಾರಾಗದೇ ಇರೋ ತರ ಹೇಳಿ. ಆಸ್ಟ್ರಿಯದಲ್ಲಿರೋ ಹಾನ್ಸ್‌ ಅನ್ನೋ ಸಹೋದರನ ಹತ್ರ ಒಬ್ಬ ಸಹೋದರಿ ಬಂದು ಅವ್ರನ್ನ ಇಷ್ಟಪಡ್ತಿದ್ದೀನಿ ಅಂತ ಹೇಳಿದಾಗ ಇವರು ಏನು ಮಾಡಿದ್ರು ನೋಡಿ. “ನನ್ನ ನಿರ್ಧಾರ ಏನು ಅಂತ ಅವ್ರಿಗೆ ಬೇಜಾರಾಗದಿರೋ ತರ ಸ್ಪಷ್ಟವಾಗಿ ಹೇಳಿದೆ ಮತ್ತು ತಕ್ಷಣ ಹೇಳಿದೆ. ಯಾಕಂದ್ರೆ ಅವ್ರ ಜೊತೆ ನಂಗೆ ಡೇಟಿಂಗ್‌ ಮಾಡೋಕೆ ಇಷ್ಟ ಇದೆ ಅಂತ ತಪ್ಪು ತಿಳ್ಕೊಬಾರದು ಅಂತ ಹಾಗೆ ಮಾಡಿದೆ. ಇದಾದ್ಮೇಲೂ ನಾನು ಅವ್ರಿಗೆ ತಪ್ಪರ್ಥ ಬರೋ ತರ ನಡ್ಕೊಂಡಿಲ್ಲ” ಅಂತ ಅವರು ಹೇಳಿದ್ರು. ಆದ್ರೆ ನಿಮ್ಮನ್ನ ಇಷ್ಟಪಡೋ ವ್ಯಕ್ತಿ ಜೊತೆ ಡೇಟಿಂಗ್‌ ಮಾಡೋಕೆ ನೀವೂ ಇಷ್ಟಪಟ್ರೆ ಏನು ಮಾಡ್ತೀರಾ? ನಿಮ್ಮ ಭಾವನೆಗಳನ್ನ ಮನಸ್ಸಾರೆ ಹಂಚ್ಕೊಳ್ಳಿ, ಒಬ್ರು ಇನ್ನೊಬ್ರಿಂದ ಏನು ನಿರೀಕ್ಷಿಸ್ತೀರ ಅಂತಾನೂ ಮಾತಾಡಿ. ಯಾಕಂದ್ರೆ ನೀವು ಬೇರೆಬೇರೆ ಸಂಸ್ಕೃತಿಯವರಾಗಿದ್ರೆ ನೀವು ಇಷ್ಟಪಡೋ ವಿಷ್ಯಗಳೂ ಬೇರೆಬೇರೆ ಆಗಿರುತ್ತೆ.

ಮದುವೆ ಆಗದೇ ಇರೋರಿಗೆ ಬೇರೆಯವರು ಹೇಗೆ ಸಹಾಯ ಮಾಡಬಹುದು?

14. ಮದುವೆ ಆಗದಿರೋ ಸಹೋದರ ಸಹೋದರಿಯರ ಹತ್ರ ನಾವು ಹೇಗೆ ಮಾತಾಡಬೇಕು?

14 ಮದುವೆ ಆಗೋಕೆ ಇಷ್ಟಪಡೋ ಸಹೋದರ ಸಹೋದರಿಯರಿಗೆ ನಾವು ಹೇಗೆ ಸಹಾಯ ಮಾಡಬಹುದು, ಹೇಗೆ ಪ್ರೋತ್ಸಾಹ ಕೊಡಬಹುದು? ಮುಖ್ಯವಾಗಿ ಮಾಡಬೇಕಾಗಿರೋ ಒಂದು ವಿಷ್ಯ ಏನಂದ್ರೆ ನಾವು ಅವ್ರಿಗೆ ಬೇಜಾರಾಗೋ ತರ ಮಾತಾಡಬಾರದು. (ಎಫೆ. 4:29) ಹಾಗಾಗಿ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ: ‘ಮದುವೆ ಆಗೋಕೆ ಇಷ್ಟಪಡೋ ಸಹೋದರ ಸಹೋದರಿಯರಿಗೆ ನಾನು ಕಾಡಿಸ್ತೀನಾ? ಅವ್ರ ಕಾಲೆಳಿತೀನಾ? ಒಂದು ಹುಡುಗ, ಹುಡುಗಿ ಮಾತಾಡ್ತಿದ್ರೆ ಅವ್ರ ಮಧ್ಯ ಏನೋ ಇದೆ ಅಂತ ಅಂದ್ಕೊತೀನಾ?’ (1 ತಿಮೊ. 5:13) ಅವರು ಮದುವೆ ಆಗಿಲ್ಲಾಂದ್ರೆ ಅವ್ರ ಜೀವನದಲ್ಲಿ ಏನೋ ಒಂದು ಕಮ್ಮಿ ಇದೆ ಅಂತ ಅವ್ರಿಗೆ ಅನಿಸೋ ತರ ನಾವು ಮಾತಾಡಬಾರದು. ಹಾನ್ಸ್‌ ಅನ್ನೋ ಸಹೋದರ ಮತ್ತೆ ಏನು ಹೇಳ್ತಾರೆ ನೋಡಿ. “ಕೆಲವು ಸಹೋದರರು ನನಗೆ: ‘ನೀನ್ಯಾಕೆ ಇನ್ನೂ ಮದುವೆ ಆಗಿಲ್ಲ? ನಿಂಗೆ ವಯಸ್ಸಾಗ್ತಾ ಇದೆ’ ಅಂತ ಹೇಳಿದ್ರು. ಈ ತರ ಮಾತಾಡುವಾಗ ಮದುವೆ ಆಗದೇ ಇರೋರಿಗೆ ತುಂಬ ಬೇಜಾರಾಗುತ್ತೆ. ಅಷ್ಟೇ ಅಲ್ಲ ಮದುವೆ ಆಗೋಕೆ ಒತ್ತಡ ಹಾಕಿದಂಗೆ ಇರುತ್ತೆ” ಅಂತ ಆ ಸಹೋದರ ಹೇಳ್ತಾರೆ. ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಇನ್ನೂ ಮದುವೆ ಆಗದಿರೋ ಸಹೋದರ ಸಹೋದರಿಯರನ್ನ ಹೊಗಳಬೇಕು ಮತ್ತು ಪ್ರೋತ್ಸಾಹಿಸಬೇಕು.—1 ಥೆಸ. 5:11.

15. (ಎ) ಹುಡುಗ ಹುಡುಗಿ ಹುಡುಕೋಕೆ ಸಹಾಯ ಮಾಡೋ ಮುಂಚೆ ನಾವು ಏನು ಯೋಚ್ನೆ ಮಾಡಬೇಕು? (ಚಿತ್ರ ನೋಡಿ.) (ಬಿ) ಈ ವಿಡಿಯೋದಿಂದ ನೀವೇನು ಕಲಿತ್ರಿ?

15 ಒಬ್ಬ ಸಹೋದರ ಮತ್ತು ಸಹೋದರಿ ಒಳ್ಳೇ ಜೋಡಿ ಆಗ್ತಾರೆ ಅಂತ ನಿಮಗನಿಸಿದ್ರೆ ಏನು ಮಾಡಬೇಕು? ಬೇರೆಯವ್ರ ಭಾವನೆಗಳಿಗೆ ಬೆಲೆ ಕೊಡಿ ಅಂತ ಬೈಬಲ್‌ ಹೇಳುತ್ತೆ. (ರೋಮನ್ನರಿಗೆ 15:2 ಓದಿ.) ಮದುವೆ ಆಗದಿರೋ ಕೆಲವ್ರಿಗೆ ಬೇರೆಯವರು ಹುಡುಗ ಹುಡುಗಿಯನ್ನ ಪರಿಚಯಿಸೋದು ಇಷ್ಟ ಆಗಲ್ಲ. ಅದನ್ನ ನಾವು ತಪ್ಪು ಅಂತ ಹೇಳೋಕೆ ಆಗಲ್ಲ. (2 ಥೆಸ. 3:11) ಕೆಲವ್ರಿಗೆ ಹುಡುಗ ಅಥವಾ ಹುಡುಗಿಯನ್ನ ಪರಿಚಯಿಸಿದ್ರೆ ಇಷ್ಟ ಆಗುತ್ತೆ. ಆದ್ರೆ ಹಾಗೆ ಮಾಡೋಕೆ ಮುಂಚೆ ಅವ್ರ ಹತ್ರ ಒಂದು ಮಾತು ಕೇಳಿ. e (ಜ್ಞಾನೋ. 3:27) ಇನ್ನು ಕೆಲವ್ರಿಗೆ ನೇರವಾಗಿ ಪರಿಚಯ ಮಾಡೋ ಬದ್ಲು ಬೇರೆ ರೀತಿಯಲ್ಲಿ ಮಾಡಿದ್ರೆ ಇಷ್ಟ ಆಗುತ್ತೆ. ಜರ್ಮನಿಯಲ್ಲಿರೋ ಮದುವೆ ಆಗದಿರೋ ಸಹೋದರಿ ಲಿಡಿಯಾ ಇದ್ರ ಬಗ್ಗೆ ಏನು ಹೇಳ್ತಾರೆ ನೋಡಿ. “ಯಾವುದಾದ್ರೂ ಒಂದು ಗೆಟ್‌-ಟುಗೆದರ್‌ ಮಾಡುವಾಗ ನಿಮಗೆ ಪರಿಚಯ ಇರೋ ಆ ಸಹೋದರನನ್ನ ಮತ್ತು ಸಹೋದರಿಯನ್ನ ಕರೆದ್ರೆ ಚೆನ್ನಾಗಿರುತ್ತೆ. ಅಲ್ಲಿಗೆ ಬಂದ್ಮೇಲೆ ಅವ್ರಿಬ್ರಿಗೆ ಮಾತಾಡೋಕೆ ಅವಕಾಶ ಮಾಡ್ಕೊಡಿ. ಆಮೇಲೆ ಯಾವ ತೀರ್ಮಾನ ಮಾಡಬೇಕು ಅನ್ನೋದನ್ನ ಅವ್ರಿಗೆ ಬಿಟ್ಟುಬಿಡಿ.”

ಗೆಟ್‌ಟುಗೆದರ್‌ ಮಾಡುವಾಗ ಮದುವೆ ಆಗದಿರೋ ಸಹೋದರ ಸಹೋದರಿಯರಿಗೆ ಭೇಟಿ ಮಾಡೋಕೆ ಒಂದು ಅವಕಾಶ ಸಿಗುತ್ತೆ (ಪ್ಯಾರ 15 ನೋಡಿ)


16. ಮದುವೆ ಆಗದಿರೋ ಸಹೋದರ ಸಹೋದರಿಯರು ಏನು ನೆನಪಿಡಬೇಕು?

16 ನಮಗೆ ಮದುವೆ ಆಗಿರಲಿ, ಇಲ್ಲದೇ ಇರಲಿ ನಾವೆಲ್ರೂ ಖುಷಿಖುಷಿಯಾಗಿ ಇರಬಹುದು, ತೃಪ್ತಿಯಿಂದಾನೂ ಇರಬಹುದು. (ಕೀರ್ತ. 128:1) ಒಂದುವೇಳೆ ನಿಮಗೆ ಮದುವೆ ಆಗೋ ಆಸೆ ಇದ್ದೂ ಹುಡುಗ, ಹುಡುಗಿ ಸಿಕ್ಕಿಲ್ಲಾಂದ್ರೆ ಬೇಜಾರಾಗಬೇಡಿ. ಯೆಹೋವನ ಸೇವೆಲಿ ಬಿಜ಼ಿಯಾಗಿರಿ. ಮಕಾವುದಲ್ಲಿರೋ ಸಹೋದರಿ ಸೆನ್‌ ಯೇ “ಈಗ ನೀವು ಮದುವೆ ಆಗದೇ ಕಳೆಯೋ ಸಮಯನ ಪರದೈಸಲ್ಲಿ ನಿಮ್ಮ ಸಂಗಾತಿ ಜೊತೆ ಕಳೆಯೋ ಸಮಯಕ್ಕೆ ಹೋಲಿಸಿದ್ರೆ ಅದು ತುಂಬ ಕಮ್ಮಿನೇ. ಹಾಗಾಗಿ ಈಗ ನಿಮಗಿರೋ ಸಮಯ ತುಂಬ ಅಮೂಲ್ಯ, ಅದನ್ನ ಚೆನ್ನಾಗಿ ಬಳಸಿ” ಅಂತ ಹೇಳ್ತಾರೆ. ಆದ್ರೆ ನಿಮಗೆ ಈಗಾಗ್ಲೇ ಒಳ್ಳೇ ಹುಡುಗ ಅಥವಾ ಹುಡುಗಿ ಸಿಕ್ಕಿದ್ರೆ ಮತ್ತು ಅವ್ರ ಜೊತೆ ಡೇಟಿಂಗ್‌ ಶುರುಮಾಡಿದ್ರೆ ನೀವೇನು ಮಾಡಬೇಕು? ಒಳ್ಳೇ ತೀರ್ಮಾನ ಹೇಗೆ ತಗೊಳ್ಳೋದು ಅನ್ನೋದನ್ನ ಮುಂದಿನ ಲೇಖನದಲ್ಲಿ ನೋಡೋಣ.

ಗೀತೆ 86 ನಂಬಿಗಸ್ತೆಯರು, ಕ್ರೈಸ್ತ ಸೋದರಿಯರು

a ಮದುವೆ ಆಗೋಕೆ ನೀವು ರೆಡಿ ಇದ್ದೀರಾ ಅಂತ ತಿಳ್ಕೊಳ್ಳೋಕೆ jw.orgನಲ್ಲಿ “ಡೇಟಿಂಗ್‌—ಭಾಗ 1: ಆ್ಯಮ್‌ ಐ ರೆಡಿ ಟು ಡೇಟ್‌?” ಅನ್ನೋ ಲೇಖನ ನೋಡಿ.

b ಪದ ವಿವರಣೆ: ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ “ಡೇಟಿಂಗ್‌” ಬಗ್ಗೆ ನೋಡ್ತೀವಿ. ಡೇಟಿಂಗ್‌ ಅಂದ್ರೆ ಇದು ಮದುವೆ ಆಗೋ ಮುಂಚೆ ಇರೋ ಒಂದು ಸಮಯ. ಈ ಸಮಯದಲ್ಲಿ ಹುಡುಗ, ಹುಡುಗಿ ಒಬ್ರನ್ನೊಬ್ರು ಚೆನ್ನಾಗಿ ತಿಳ್ಕೊಳ್ತಾರೆ. ಆಮೇಲೆ ಮದುವೆ ಆಗಬೇಕೋ ಬೇಡ್ವೋ ಅಂತ ನಿರ್ಣಯ ಮಾಡ್ತಾರೆ. ಇದನ್ನ ಕೋರ್ಟ್‌ಶಿಪ್‌ ಅಂತನೂ ಹೇಳ್ತಾರೆ. ಒಂದು ಹುಡುಗ, ಹುಡುಗಿ ತಾವು ಒಬ್ರನ್ನೊಬ್ರು ಇಷ್ಟಪಡ್ತಾರೆ ಅಂತ ಹೇಳಿದಾಗ್ಲೇ ಡೇಟಿಂಗ್‌ ಶುರುವಾಗುತ್ತೆ. ಆದ್ರೆ ಇದು ಕೊನೆ ಆಗೋದು ಒಂದಾ ಹುಡುಗ-ಹುಡುಗಿ ಮದುವೆ ಆಗುವಾಗ, ಇಲ್ಲಾಂದ್ರೆ ಮದುವೆ ಆಗಲ್ಲ ಅಂತ ಅವರು ತೀರ್ಮಾನ ಮಾಡುವಾಗ.

c ಕೆಲವ್ರ ಹೆಸ್ರು ಬದಲಾಗಿದೆ.

d ಕೆಲವು ಸಂಸ್ಕೃತಿಯಲ್ಲಿ ಸಹೋದರರೇ ಹೋಗಿ ಸಹೋದರಿಯರ ಹತ್ರ ತಮ್ಮ ಇಷ್ಟ ಹೇಳ್ತಾರೆ. ಆದ್ರೆ ಸಹೋದರಿಯರೂ ಸಹೋದರರ ಹತ್ರ ಹೋಗಿ ಹೇಳೋದ್ರಲ್ಲಿ ಏನೂ ತಪ್ಪಿಲ್ಲ. (ರೂತ್‌ 3:1-13) ಹೆಚ್ಚನ್ನ ತಿಳ್ಕೊಳ್ಳೋಕೆ ಅಕ್ಟೋಬರ್‌ 22, 2004ರ ಎಚ್ಚರ! ಪತ್ರಿಕೆಯಲ್ಲಿರೋ “ಯುವ ಜನರ ಪ್ರಶ್ನೆಗಳು . . . ಹೌವ್‌ ಕ್ಯಾನ್‌ ಐ ಟೆಲ್‌ ಹಿಮ್‌ ಹೌವ್‌ ಐ ಫೀಲ್‌?” ಅನ್ನೋ ಇಂಗ್ಲಿಷ್‌ ಲೇಖನ ನೋಡಿ.