ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 19

ಗೀತೆ 136 ನಿನ್ನ ರಾಜ್ಯ ಬರಲಿ!

ಯೆಹೋವ ಭವಿಷ್ಯದಲ್ಲಿ ಜನ್ರಿಗೆ ತೀರ್ಪು ಮಾಡೋದ್ರ ಬಗ್ಗೆ ನಮಗೆ ಏನು ಗೊತ್ತಿದೆ?

ಯೆಹೋವ ಭವಿಷ್ಯದಲ್ಲಿ ಜನ್ರಿಗೆ ತೀರ್ಪು ಮಾಡೋದ್ರ ಬಗ್ಗೆ ನಮಗೆ ಏನು ಗೊತ್ತಿದೆ?

“ಯಾರೂ ನಾಶ ಆಗಬಾರದು . . . ಅನ್ನೋದೇ [ಯೆಹೋವನ] ಆಸೆ.”2 ಪೇತ್ರ 3:9.

ಈ ಲೇಖನದಲ್ಲಿ ಏನಿದೆ?

ಯೆಹೋವ ದೇವರು ಜನ್ರಿಗೆ ಭವಿಷ್ಯದಲ್ಲಿ ನ್ಯಾಯದಿಂದ ತೀರ್ಪು ಮಾಡ್ತಾನೆ ಮತ್ತು ಆತನು ಸರಿಯಾಗಿರೋದನ್ನೇ ಮಾಡ್ತಾನೆ ಅಂತ ನಾವು ನಂಬಬಹುದು.

1. ನಾವು ತುಂಬ ಪ್ರಾಮುಖ್ಯವಾಗಿರೋ ಸಮಯದಲ್ಲಿ ಜೀವಿಸ್ತಾ ಇದ್ದೀವಿ ಅಂತ ಯಾಕೆ ಹೇಳಬಹುದು?

 ನಾವು ತುಂಬ ಪ್ರಾಮುಖ್ಯವಾಗಿರೋ ಸಮಯದಲ್ಲಿ ಜೀವಿಸ್ತಾ ಇದ್ದೀವಿ. ಪ್ರತಿ ದಿನ ಬೈಬಲ್‌ ಭವಿಷ್ಯವಾಣಿ ನೆರವೇರುತ್ತಾ ಇರೋದನ್ನ ನಾವು ಕಣ್ಣಾರೆ ನೋಡ್ತಿದ್ದೀವಿ. ಉದಾಹರಣೆಗೆ, “ದಕ್ಷಿಣದ ರಾಜ” ಮತ್ತು “ಉತ್ತರದ ರಾಜ” ಒಬ್ರಿಗಿಂತ ಇನ್ನೊಬ್ರು ಇಡೀ ಲೋಕದಲ್ಲಿ ತಾವೇ ಶಕ್ತಿಶಾಲಿಗಳು ಅಂತ ತೋರಿಸ್ಕೊಳ್ಳೋಕೆ ತುಂಬ ಪ್ರಯತ್ನ ಮಾಡ್ತಿದ್ದಾರೆ. (ದಾನಿ. 11:40, ಪಾದಟಿಪ್ಪಣಿ) ಅಷ್ಟೇ ಅಲ್ಲ ಸಿಹಿಸುದ್ದಿ ಸಾರೋ ಕೆಲಸ ಹಿಂದೆಂದಿಗಿಂತ ಈಗ ಜಾಸ್ತಿ ಆಗಿದೆ. ಇದ್ರಿಂದಾಗಿ ಲಕ್ಷಾಂತರ ಜನ್ರು ಯೆಹೋವನ ಬಗ್ಗೆ ಕಲಿತು ಆತನನ್ನ ಆರಾಧಿಸ್ತಿದ್ದಾರೆ. (ಯೆಶಾ. 60:22; ಮತ್ತಾ. 24:14) ಇದಷ್ಟೇ ಅಲ್ಲ ಯೆಹೋವನ ಜೊತೆ ಇರೋ ಸಂಬಂಧನ ಗಟ್ಟಿ ಮಾಡ್ಕೊಳ್ಳೋಕೆ ನಮಗೆ “ತಕ್ಕ ಸಮಯಕ್ಕೆ” ಸಾಕಷ್ಟು ಆಧ್ಯಾತ್ಮಿಕ ಆಹಾರ ಸಿಗ್ತಿದೆ.—ಮತ್ತಾ. 24:45-47.

2. (ಎ) ನಾವು ಏನನ್ನ ನಂಬಬಹುದು? (ಬಿ) ಆದ್ರೆ ನಾವು ಯಾವ ವಿಷ್ಯ ಅರ್ಥಮಾಡ್ಕೊಬೇಕು?

2 ಮುಂದೆ ನಡಿಲಿಕ್ಕಿರೋ ಪ್ರಾಮುಖ್ಯ ಘಟನೆಗಳ ಬಗ್ಗೆ ನಾವಿನ್ನೂ ಚೆನ್ನಾಗಿ ತಿಳ್ಕೊಳ್ಳೋಕೆ ಯೆಹೋವ ನಮಗೆ ಸಹಾಯ ಮಾಡ್ತಾನೇ ಇದ್ದಾನೆ. (ಜ್ಞಾನೋ. 4:18; ದಾನಿ. 2:28) ಹಾಗಾಗಿ ಮಹಾ ಸಂಕಟ ಶುರು ಆದ್ಮೇಲೆ ನಮಗೆ ಏನು ಗೊತ್ತಾಗಬೇಕೋ ಆ ವಿಷ್ಯಗಳೆಲ್ಲ ಗೊತ್ತಾಗುತ್ತೆ ಅಂತ ನಾವು ನಂಬಬಹುದು. ಇದ್ರಿಂದಾಗಿ ಆ ಸಮಯದಲ್ಲಿ ಬರೋ ಕಷ್ಟಗಳನ್ನ ನಾವು ಸಹಿಸ್ಕೊಳ್ತೀವಿ. ಅಷ್ಟೇ ಅಲ್ಲ ನಮ್ಮ ಸಹೋದರ ಸಹೋದರಿಯರ ಜೊತೆ ಒಗ್ಗಟ್ಟಾಗೂ ಇರ್ತಿವಿ. ಆದ್ರೆ ನಾವು ಒಂದು ವಿಷ್ಯ ಅರ್ಥಮಾಡ್ಕೊಬೇಕು ಅದೇನಂದ್ರೆ ಭವಿಷ್ಯದಲ್ಲಿ ನಡಿಯೋ ಕೆಲವೊಂದು ವಿಷ್ಯಗಳ ಬಗ್ಗೆ ನಮಗೀಗ ಗೊತ್ತಿಲ್ಲ. ಭವಿಷ್ಯದಲ್ಲಿ ನಡಿಯೋ ಕೆಲವು ಘಟನೆಗಳ ಬಗ್ಗೆ ನಾವು ಮುಂಚೆ ಅರ್ಥಮಾಡ್ಕೊಂಡಿದ್ದು ಈಗ ಬದಲಾಗಿದೆ. ಯಾಕೆ ಆ ಬದಲಾವಣೆ ಮಾಡಲಾಗಿದೆ ಅಂತ ನಾವು ಈ ಲೇಖನದಲ್ಲಿ ಕಲಿತೀವಿ. ಅಷ್ಟೇ ಅಲ್ಲ ಭವಿಷ್ಯದಲ್ಲಿ ನಡೆಯೋ ಕೆಲವು ಘಟನೆಗಳ ಬಗ್ಗೆ ನಮಗೆ ಏನು ಗೊತ್ತಿದೆ ಮತ್ತು ಯೆಹೋವ ಆ ಸಮಯದಲ್ಲಿ ಏನು ಮಾಡ್ತಾನೆ ಅಂತಾನೂ ಕಲಿತೀವಿ.

ನಮಗೆ ಏನು ಗೊತ್ತಿಲ್ಲ?

3. (ಎ) ಮಹಾ ಸಂಕಟ ಶುರು ಆದ್ಮೇಲೆ ಯೆಹೋವ ಏನು ಮಾಡ್ತಾನೆ ಅಂತ ನಾವು ಅಂದ್ಕೊಂಡಿದ್ವಿ? (ಬಿ) ನಾವ್ಯಾಕೆ ಹಾಗೆ ಅಂದ್ಕೊಂಡಿದ್ವಿ?

3 ಮಹಾ ಸಂಕಟ ಶುರು ಆದ್ಮೇಲೆ ಜನ್ರಿಗೆ ಯೆಹೋವನ ಮೇಲೆ ನಂಬಿಕೆ ಇಡೋಕೆ ಅವಕಾಶ ಸಿಗಲ್ಲ ಮತ್ತು ಅವರು ಹರ್ಮಗೆದೋನನ್ನ ಪಾರಾಗಲ್ಲ ಅಂತ ಹಿಂದೆ ನಾವು ಅರ್ಥಮಾಡ್ಕೊಂಡಿದ್ವಿ. ಯಾಕಂದ್ರೆ ನೋಹನ ಸಮಯದಲ್ಲಿ ನಡೆದ ಜಲಪ್ರಳಯ ಮುಂದೆ ನಡಿಯೋ ಕೆಲವೊಂದು ಘಟನೆಗಳನ್ನ ಸೂಚಿಸ್ತಾ ಇತ್ತು ಅಂದ್ಕೊಂಡಿದ್ವಿ. ಉದಾಹರಣೆಗೆ ಪ್ರಳಯ ಶುರು ಆಗೋ ಮುಂಚೆ ಯೆಹೋವ ಹೇಗೆ ‘ಹಡಗಿನ ಬಾಗಿಲನ್ನ ಮುಚ್ಚಿದನೋ’ ಹಾಗೇ ಮಹಾ ಸಂಕಟ ಶುರು ಆದ್ಮೇಲೆ ಬಾಗಿಲನ್ನ ಮುಚ್ತಾನೆ. ಅಂದ್ರೆ ಜನ್ರು ತನ್ನ ಮೇಲೆ ನಂಬಿಕೆ ಇಡೋಕೆ, ತಮ್ಮ ಜೀವ ಉಳಿಸ್ಕೊಳ್ಳೋಕೆ ಅವ್ರಿಗೆ ಅವಕಾಶ ಕೊಡಲ್ಲ ಅಂತ ನಾವು ಅಂದ್ಕೊಂಡಿದ್ವಿ.—ಮತ್ತಾ. 24:37-39.

4. ನೋಹನ ಸಮಯದಲ್ಲಿ ನಡೆದ ಜಲಪ್ರಳಯ ಭವಿಷ್ಯದಲ್ಲಿ ನಡಿಯೋ ಕೆಲವು ಘಟನೆಗಳನ್ನ ಸೂಚಿಸುತ್ತಾ? ವಿವರಿಸಿ.

4 ನೋಹನ ದಿನದಲ್ಲಿ ನಡೆದ ಜಲಪ್ರಳಯ ಭವಿಷ್ಯದಲ್ಲಿ ನಡಿಯೋ ಯಾವುದೋ ಒಂದು ಘಟನೆಯನ್ನು ಸೂಚಿಸುತ್ತಾ? ಇಲ್ಲ. ಯಾಕೆ? ಯಾಕಂದ್ರೆ ಆ ತರ ಸೂಚಿಸ್ತಾ ಇದೆ ಅಂತ ಬೈಬಲಿನಲ್ಲಿ ಎಲ್ಲೂ ಇಲ್ಲ. a ಯೇಸು, ‘ನೋಹನ ದಿನಗಳಲ್ಲಿ’ ಇದ್ದ ತರಾನೇ ತಾನು ಮತ್ತೆ ಬರೋ ಕಾಲ ಇರುತ್ತೆ ಅಂತ ಹೇಳಿದ್ದು ನಿಜಾನೇ. ಆದ್ರೆ ಅಲ್ಲಿದ್ದ ವ್ಯಕ್ತಿಗಳು ಅಥವಾ ಅಲ್ಲಿ ನಡೆದ ಪ್ರತಿಯೊಂದು ವಿಷ್ಯಗಳು ಏನನ್ನೋ ಸೂಚಿಸ್ತಾ ಇದೆ ಅಂತ ಹೇಳಲಿಲ್ಲ. ಅಥವಾ ಯೆಹೋವ ಹಡಗಿನ ಬಾಗಿಲನ್ನ ಮುಚ್ಚಿದ್ದು ಭವಿಷ್ಯದಲ್ಲಿ ನಡೆಯೋ ಯಾವುದೋ ಒಂದು ಘಟನೆಯನ್ನು ಸೂಚಿಸ್ತಾ ಇದೆ ಅಂತಾನೂ ತಿಳಿಸಿಲ್ಲ. ಹಾಗಂತ ನೋಹನಿಂದ ಮತ್ತು ಅವನ ಸಮಯದಲ್ಲಿ ನಡೆದ ಜಲಪ್ರಳಯದಿಂದ ನಮಗೆ ಕಲಿಯೋಕೆ ಯಾವುದೇ ಪಾಠ ಇಲ್ಲ ಅಂತ ಅರ್ಥನಾ? ಹಾಗಲ್ಲ.

5. (ಎ) ಪ್ರಳಯ ಬರೋಕೂ ಮುಂಚೆ ನೋಹನಿಗೆ ದೇವರ ಮೇಲೆ ನಂಬಿಕೆ ಇದೆ ಅಂತ ಹೇಗೆ ತೋರಿಸಿದ? (ಇಬ್ರಿಯ 11:7; 1 ಪೇತ್ರ 3:20) (ಬಿ) ಸಿಹಿಸುದ್ದಿ ಸಾರೋ ವಿಷ್ಯದಲ್ಲಿ ನಮಗೂ ನೋಹನಿಗೂ ಯಾವ ಹೋಲಿಕೆ ಇದೆ?

5 ಯೆಹೋವ ದೇವರು ಜಲಪ್ರಳಯ ತರ್ತೀನಿ ಅಂತ ನೋಹನಿಗೆ ಎಚ್ಚರಿಕೆ ಕೊಟ್ಟಾಗ ತನಗೆ ಯೆಹೋವನ ಮೇಲೆ ನಂಬಿಕೆ ಇದೆ ಅಂತ ತೋರಿಸೋಕೆ ಅವನು ಹಡಗು ಕಟ್ಟಿದ. (ಇಬ್ರಿಯ 11:7; 1 ಪೇತ್ರ 3:20 ಓದಿ.) ಅದೇ ತರ ಇವತ್ತೂ ಜನ್ರು ಸಿಹಿಸುದ್ದಿ ಕೇಳಿಸ್ಕೊಂಡಾಗ ಅವ್ರಿಗೆ ದೇವರ ಮೇಲೆ ಎಷ್ಟು ನಂಬಿಕೆ ಇದೆ ಅಂತ ಅವ್ರ ಜೀವನದಲ್ಲಿ ತೋರಿಸ್ಕೊಡಬೇಕು. (ಅ. ಕಾ. 3:17-20) ನೋಹ “ನೀತಿಯ ಬಗ್ಗೆ ಸಾರಿದ” ಅಂತ ಪೇತ್ರ ಹೇಳಿದ. (2 ಪೇತ್ರ 2:5) ಆದ್ರೆ ನಾವು ಹಿಂದಿನ ಲೇಖನದಲ್ಲಿ ನೋಡಿದ ಹಾಗೆ ಪ್ರಳಯ ಬರೋ ಮುಂಚೆ ಅವನು ಇಡೀ ಭೂಮಿಯಲ್ಲಿ ಪ್ರತಿಯೊಬ್ರಿಗೂ ಸಾರಿದನಾ ಇಲ್ವಾ ಅಂತ ನಮಗೆ ಗೊತ್ತಿಲ್ಲ. ಇವತ್ತು ನಾವೂ ಅದೇ ತರ ಹುರುಪಿನಿಂದ ತುಂಬ ಜನ್ರಿಗೆ ಸಿಹಿಸುದ್ದಿ ಸಾರುತ್ತಾ ಇದ್ದೀವಿ. ಹಾಗಂತ ಅಂತ್ಯ ಬರೋಕೂ ಮುಂಚೆ ಈ ಭೂಮಿಯಲ್ಲಿರೋ ಪ್ರತಿಯೊಬ್ರಿಗೂ ಸಾರೋಕೆ ಆಗುತ್ತಾ? ಇಲ್ಲ. ಯಾಕೆ?

6-7. ಅಂತ್ಯ ಬರೋಕೂ ಮುಂಚೆ ಪ್ರತಿಯೊಬ್ಬ ವ್ಯಕ್ತಿಗೆ ಸಿಹಿಸುದ್ದಿ ಸಾರೋಕೆ ಆಗಲ್ಲ ಅಂತ ಯಾಕೆ ಹೇಳಬಹುದು? ವಿವರಿಸಿ.

6 ಸಿಹಿಸುದ್ದಿ ಸಾರೋದ್ರ ಬಗ್ಗೆ ಯೇಸು ಏನು ಹೇಳಿದನು ನೋಡಿ. ಸಿಹಿಸುದ್ದಿ “ಲೋಕದಲ್ಲಿ ಇರೋ ಎಲ್ಲ ದೇಶಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ” ಅಂತ ಆತನು ಹೇಳಿದನು. (ಮತ್ತಾ. 24:14) ಈ ಭವಿಷ್ಯವಾಣಿ ಮುಂಚೆಗಿಂತ ಈಗ ಜಾಸ್ತಿ ನೆರವೇರುತ್ತಾ ಇದೆ. jw.org ವೆಬ್‌ಸೈಟ್‌ನಲ್ಲಿ ಸಾವಿರಕ್ಕಿಂತ ಹೆಚ್ಚು ಭಾಷೆಗಳಲ್ಲಿ ದೇವರ ಆಳ್ವಿಕೆಯ ಸಂದೇಶ ಇದೆ. ಇದ್ರಿಂದ ಲೋಕದ ಎಲ್ಲಾ ಕಡೆ ಇರೋ ಜನ್ರಿಗೆ ಸಿಹಿಸುದ್ದಿ ತಿಳ್ಕೊಳ್ಳೋಕೆ ಆಗ್ತಿದೆ.

7 ಹಾಗಿದ್ರೂ ಯೇಸು ತನ್ನ ಶಿಷ್ಯರಿಗೆ ತಾನು ಬರೋದಕ್ಕಿಂತ ಮುಂಚೆ ‘ನೀವು ಊರುಗಳಲ್ಲಿ ಮತ್ತು ಹಳ್ಳಿಗಳಲ್ಲಿ ಸಾರೋ ಕೆಲಸ ಮುಗಿಸಿರಲ್ಲ’ ಅಂತಾನೂ ಹೇಳಿದನು. (ಮತ್ತಾ. 10:23; 25:31-33) ಯೇಸು ಹೇಳಿದ ಮಾತು ಇವತ್ತಿಗೂ ನಿಜ ಆಗ್ತಿದೆ. ಅಂದ್ರೆ ಕೆಲವು ದೇಶಗಳಲ್ಲಿ ನಿರ್ಬಂಧ ಇರೋದ್ರಿಂದ ಅಲ್ಲಿ ಸಿಹಿಸುದ್ದಿ ಸಾರೋಕೆ ಕಷ್ಟ ಆಗ್ತಿದೆ. ಅಷ್ಟೇ ಅಲ್ಲ ಪ್ರತಿ ನಿಮಿಷಕ್ಕೆ ನೂರಾರು ಮಕ್ಕಳು ಹುಟ್ತಿದ್ದಾರೆ. ಹಾಗಾಗಿ “ಎಲ್ಲ ದೇಶ, ಕುಲ, ಭಾಷೆ, ಜಾತಿಯ ಜನ್ರಿಗೆ” ಸಿಹಿಸುದ್ದಿ ಸಾರೋಕೆ ನಮ್ಮಿಂದಾದ ಎಲ್ಲಾ ಪ್ರಯತ್ನ ಮಾಡ್ತಾ ಇದ್ದೀವಿ. (ಪ್ರಕ. 14:6) ಆದ್ರೆ ಅಂತ್ಯ ಬರೋಕೂ ಮುಂಚೆ ಪ್ರತಿಯೊಬ್ಬ ವ್ಯಕ್ತಿಗೆ ಸಿಹಿಸುದ್ದಿ ಸಾರೋಕೆ ಆಗಲ್ಲ ಅನ್ನೋದನ್ನ ನಾವು ನೆನಪಲ್ಲಿ ಇಡಬೇಕು.

8. ನಮ್ಮ ಮನಸ್ಸಿಗೆ ಯಾವ ಪ್ರಶ್ನೆ ಬರಬಹುದು? (ಚಿತ್ರಗಳನ್ನ ನೋಡಿ.)

8 ಆದ್ರೆ ನಮ್ಮ ಮನಸ್ಸಿಗೆ ಒಂದು ಪ್ರಶ್ನೆ ಬರಬಹುದು. ಮಹಾ ಸಂಕಟ ಶುರು ಆಗೋದಕ್ಕಿಂತ ಮುಂಚೆ ಸಿಹಿಸುದ್ದಿಯನ್ನ ಕೇಳಿಸ್ಕೊಳ್ಳೋಕೆ ಒಂದು ಸಲನೂ ಅವಕಾಶ ಸಿಗದೇ ಇರೋರಿಗೆ ಏನಾಗುತ್ತೆ? ಯೆಹೋವ ಮತ್ತು ಯೇಸು ಅವ್ರಿಗೆ ಹೇಗೆ ತೀರ್ಪು ಕೊಡ್ತಾರೆ? (ಯೋಹಾ. 5:19, 22, 27; ಅ. ಕಾ. 17:31) ಈ ಲೇಖನದ ಮುಖ್ಯ ವಚನದಲ್ಲಿ ಯೆಹೋವ “ಯಾರೂ ನಾಶ ಆಗಬಾರದು” ಅಂತ ತಾಳ್ಮೆಯಿಂದ ಕಾಯ್ತಾ ಇದ್ದಾನೆ, ಎಲ್ರಿಗೂ “ತಮ್ಮ ತಪ್ಪನ್ನ ತಿದ್ಕೊಳ್ಳೋಕೆ ಅವಕಾಶ ಸಿಗಬೇಕು ಅನ್ನೋದೇ” ಆತನ ಆಸೆ ಅಂತ ನೋಡಿದ್ವಿ. (2 ಪೇತ್ರ 3:9; 1 ತಿಮೊ. 2:4) ಹಾಗಾಗಿ ಯೆಹೋವ ಇಂಥ ಜನ್ರಿಗೆ ಹೇಗೆ ನ್ಯಾಯ ತೀರಿಸ್ತಾನೆ ಅಂತ ನಮಗೆ ಗೊತ್ತಿಲ್ಲ. ಯಾಕಂದ್ರೆ ಅದನ್ನ ಆತನು ನಮಗೆ ಹೇಳಿಲ್ಲ. ಅಷ್ಟೇ ಅಲ್ಲ ಆತನು ಈಗಾಗ್ಲೇ ಏನು ಮಾಡಿದ್ದಾನೆ, ಮುಂದೆ ಏನು ಮಾಡ್ತಾನೆ ಅಂತ ನಮಗೆ ಹೇಳೋ ಅಗತ್ಯನೂ ಇಲ್ಲ.

ಮಹಾ ಸಂಕಟ ಶುರು ಆಗೋದಕ್ಕಿಂತ ಮುಂಚೆ ಸಿಹಿಸುದ್ದಿ ಕೇಳಿಸ್ಕೊಳ್ಳೋಕೆ ಒಂದು ಸಲನೂ ಅವಕಾಶ ಸಿಗದಿರೋರಿಗೆ ಯೆಹೋವ ಹೇಗೆ ನ್ಯಾಯ ತೀರಿಸ್ತಾನೆ? (ಪ್ಯಾರ 8 ನೋಡಿ) c


9. ಯೆಹೋವ ನಮಗೆ ಯಾವ ವಿಷ್ಯವನ್ನ ತಿಳಿಸಿದ್ದಾನೆ?

9 ಯೆಹೋವ ಮುಂದೆ ಮಾಡ್ಲಿಕ್ಕಿರೋ ಕೆಲವು ವಿಷ್ಯಗಳ ಬಗ್ಗೆ ನಮಗೆ ತಿಳಿಸಿದ್ದಾನೆ. ಉದಾಹರಣೆಗೆ, ಸಿಹಿಸುದ್ದಿಯನ್ನ ಕೇಳಿ ತಮ್ಮ ಜೀವನವನ್ನ ಬದಲಾಯಿಸ್ಕೊಳ್ಳೋಕೆ ಅವಕಾಶ ಸಿಗದೇ ಇರೋ ‘ಅನೀತಿವಂತರನ್ನ’ ಮತ್ತೆ ಬದುಕಿಸ್ತೀನಿ ಅಂತ ಆತನು ಮಾತು ಕೊಟ್ಟಿದ್ದಾನೆ. (ಅ. ಕಾ. 24:15; ಲೂಕ 23:42, 43) ಆದ್ರೆ ಇದನ್ನ ಕೇಳಿದಾಗ ನಮ್ಮ ಮನಸ್ಸಿಗೆ ಇನ್ನೂ ಕೆಲವು ಪ್ರಶ್ನೆ ಬರಬಹುದು.

10. ನಮಗೆ ಇನ್ನೂ ಯಾವ ಪ್ರಶ್ನೆಗಳು ಬರಬಹುದು?

10 ಮಹಾ ಸಂಕಟದ ಸಮಯದಲ್ಲಿ ತೀರಿ ಹೋದವರು ಮತ್ತೆ ಜೀವಂತವಾಗಿ ಬರ್ತಾರಾ? ಯಾರು ಯೆಹೋವನನ್ನ ವಿರೋಧಿಸ್ತಾರೋ ಅವ್ರನ್ನ ಯೆಹೋವ ಮತ್ತು ಆತನ ಸೈನ್ಯ ಹರ್ಮಗೆದೋನ್‌ ಯುದ್ಧದಲ್ಲಿ ನಾಶ ಮಾಡ್ತಾರೆ. ಹಾಗಾಗಿ ಅವರು ಮತ್ತೆ ಜೀವಂತವಾಗಿ ಬರಲ್ಲ ಅಂತ ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತೆ. (2 ಥೆಸ. 1:6-10) ಆದ್ರೆ ಕೆಲವರು ಆ ಸಮಯದಲ್ಲಿ ವಯಸ್ಸಾಗೋದ್ರಿಂದ, ಅನಾರೋಗ್ಯದಿಂದ, ಅಪಘಾತದಿಂದ ಅಥವಾ ಬೇರೆಯವರು ಹಾನಿ ಮಾಡೋದ್ರಿಂದ ತೀರಿ ಹೋಗಬಹುದು. ಇವ್ರ ಬಗ್ಗೆ ಏನು? (ಪ್ರಸಂ. 9:11; ಜೆಕ. 14:13) ಹೊಸ ಲೋಕದಲ್ಲಿ ಯೆಹೋವ ದೇವರು ‘ಅನೀತಿವಂತರನ್ನ’ ಮತ್ತೆ ಜೀವಂತವಾಗಿ ಎಬ್ಬಿಸುವಾಗ ಇವರೂ ಬರ್ತಾರಾ? ಅದು ನಮಗೆ ಗೊತ್ತಿಲ್ಲ.

ನಮಗೆ ಏನು ಗೊತ್ತಿದೆ?

11. ಯಾವುದ್ರ ಆಧಾರದ ಮೇಲೆ ಹರ್ಮಗೆದೋನ್‌ ಸಮಯದಲ್ಲಿ ಜನ್ರಿಗೆ ತೀರ್ಪಾಗುತ್ತೆ?

11 ಜನ್ರು ಕ್ರಿಸ್ತನ ಸಹೋದರರಾದ ಅಭಿಷಿಕ್ತರ ಜೊತೆ ಹೇಗೆ ನಡ್ಕೊಂಡ್ರೋ ಅದ್ರ ಮೇಲೆ ಅವ್ರಿಗೆ ಹರ್ಮಗೆದೋನ್‌ ಸಮಯದಲ್ಲಿ ತೀರ್ಪಾಗುತ್ತೆ ಅಂತ ನಮಗೆ ಗೊತ್ತಿದೆ. (ಮತ್ತಾ. 25:40) ಯಾರೆಲ್ಲಾ ಕ್ರಿಸ್ತನಿಗೆ ಮತ್ತು ಆತನ ಸಹೋದರರಿಗೆ ಈಗಾಗ್ಲೇ ಬೆಂಬಲ ಕೊಟ್ಟಿದ್ದಾರೋ ಅವ್ರನ್ನ ಕುರಿಗಳು ಅಂತ ತೀರ್ಪು ಮಾಡಲಾಗುತ್ತೆ. ಅಷ್ಟೇ ಅಲ್ಲ ಮಹಾ ಸಂಕಟ ಶುರು ಆದ್ಮೇಲೂ ಕೆಲವು ಅಭಿಷಿಕ್ತ ಕ್ರೈಸ್ತರು ಭೂಮಿ ಮೇಲೆ ಇರ್ತಾರೆ ಮತ್ತು ಅವರು ಹರ್ಮಗೆದೋನ್‌ ಶುರುವಾಗೋ ಸ್ವಲ್ಪ ಮುಂಚೆ ಸ್ವರ್ಗಕ್ಕೆ ಹೋಗ್ತಾರೆ ಅಂತಾನೂ ನಮಗೆ ಗೊತ್ತು. ಮಹಾ ಸಂಕಟ ಶುರು ಆದ್ಮೇಲೂ ಅಭಿಷಿಕ್ತರು ಭೂಮಿ ಮೇಲೆ ಇರೋದ್ರಿಂದ ಇವ್ರಿಗೆ ಮತ್ತು ಇವರು ಮಾಡೋ ಕೆಲಸಕ್ಕೆ ಬೆಂಬಲ ಕೊಡೋಕೆ ಆಗ್ಲೂ ಒಳ್ಳೆ ಮನಸ್ಸಿನ ಜನ್ರಿಗೆ ಅವಕಾಶ ಇರುತ್ತೆ. (ಮತ್ತಾ. 25:31, 32; ಪ್ರಕ. 12:17) ಯಾಕೆ ಹಾಗೆ ಹೇಳಬಹುದು?

12-13. ಮಹಾ ಬಾಬೆಲ್‌ ನಾಶ ಆಗೋದನ್ನ ನೋಡಿದಾಗ ಕೆಲವರು ಏನು ಮಾಡಬಹುದು? (ಚಿತ್ರಗಳನ್ನ ನೋಡಿ.)

12 ಮಹಾ ಸಂಕಟ ಶುರು ಆದ್ಮೇಲೂ ಕೆಲವು ಜನ್ರು “ಮಹಾ ಬಾಬೆಲ್‌” ನಾಶ ಆಗೋದನ್ನ ನೋಡಿ ಯೆಹೋವನ ಸಾಕ್ಷಿಗಳು ಎಷ್ಟೋ ವರ್ಷಗಳಿಂದ ಇದನ್ನ ಹೇಳ್ತಿದ್ರು ಅಂತ ನೆನಪು ಮಾಡ್ಕೊಬಹುದು. ಇದನ್ನೆಲ್ಲ ನೋಡಿ ಆಗ ಜನ್ರು ಬದಲಾಗಬಹುದಾ?—ಪ್ರಕ. 17:5; ಯೆಹೆ. 33:33.

13 ಈ ತರ ಆಗುವಾಗ ಮೋಶೆ ಸಮಯದಲ್ಲಿ ನಡೆದ ಒಂದು ಘಟನೆ ನಿಮಗೆ ನೆನಪಾಗಬಹುದು. ಮೋಶೆ ಇಸ್ರಾಯೇಲ್ಯರನ್ನ ಈಜಿಪ್ಟ್‌ನಿಂದ ಬಿಡಿಸ್ಕೊಂಡು ಹೋಗುವಾಗ ಅವ್ರ ಜೊತೆ ಅಲ್ಲಿದ್ದ “ಬೇರೆ ಜನ್ರು ಸಹ ಹೊರಟ್ರು.” ಮೋಶೆ ಹೇಳಿದ 10 ಶಿಕ್ಷೆ ನಿಜ ಆಗಿದ್ದನ್ನ ನೋಡಿದಾಗ ಅಲ್ಲಿದ್ದ ಕೆಲವು ಜನ್ರು ಯೆಹೋವನ ಮೇಲೆ ನಂಬಿಕೆ ಬೆಳೆಸ್ಕೊಂಡ್ರು. (ವಿಮೋ. 12:38) ಅದೇ ತರ ಮಹಾ ಸಂಕಟದ ಸಮಯದಲ್ಲೂ ಮಹಾ ಬಾಬೆಲ್‌ ನಾಶ ಆಗೋದನ್ನ ನೋಡಿದಾಗ ಕೆಲವು ಜನ್ರು ಯೆಹೋವನ ಮೇಲೆ ನಂಬಿಕೆ ಬೆಳೆಸ್ಕೊಬಹುದು. ಅಂತ್ಯ ಬರೋ ಸ್ವಲ್ಪ ಮುಂಚೆ ಜನ್ರು ಈ ತರ ಬದಲಾವಣೆ ಮಾಡ್ಕೊಳ್ಳೋದನ್ನ ನೋಡಿದಾಗ ನಾವು ಬೇಜಾರು ಮಾಡ್ಕೊಬೇಕಾ? ಖಂಡಿತ ಇಲ್ಲ. ನಾವು ಯೆಹೋವ ದೇವರ ತರ ಇರಬೇಕು. ಆತನು “ಕರುಣೆ ಮತ್ತು ಕನಿಕರ ಇರೋ ದೇವರು, ತಟ್ಟಂತ ಕೋಪ ಮಾಡ್ಕೊಳ್ಳಲ್ಲ, ಧಾರಾಳವಾಗಿ ಶಾಶ್ವತ ಪ್ರೀತಿ ತೋರಿಸ್ತಾನೆ, ಯಾವಾಗ್ಲೂ ಸತ್ಯವಂತ ಆಗಿರ್ತಾನೆ.” bವಿಮೋ. 34:6.

ಕೆಲವರು “ಮಹಾ ಬಾಬೆಲ್‌” ನಾಶ ಆಗೋದನ್ನ ನೋಡುವಾಗ ಯೆಹೋವನ ಸಾಕ್ಷಿಗಳು ಇದ್ರ ಬಗ್ಗೆ ಎಷ್ಟೋ ಮುಂಚೆ ಹೇಳಿದ್ರು ಅಂತ ನೆನಪು ಮಾಡ್ಕೊತಾರೆ (ಪ್ಯಾರ 12-13 ನೋಡಿ) d


14-15. ಒಬ್ಬ ವ್ಯಕ್ತಿಗೆ ಶಾಶ್ವತ ಜೀವ ಸಿಗುತ್ತಾ ಇಲ್ವಾ ಅನ್ನೋದು ಆ ವ್ಯಕ್ತಿ ಯಾವಾಗ ತೀರಿಕೊಳ್ತಾನೆ ಮತ್ತು ಅವನು ಎಲ್ಲಿದ್ದಾನೆ ಅನ್ನೋದ್ರ ಮೇಲೆ ಹೊಂದ್ಕೊಂಡಿದ್ಯಾ? ವಿವರಿಸಿ. (ಕೀರ್ತನೆ 33:4, 5)

14 ಕೆಲವರು ಸತ್ಯದಲ್ಲಿ ಇಲ್ಲದೇ ಇರೋ ಸಂಬಂಧಿಕರ ಬಗ್ಗೆ “ಅವರು ಮಹಾ ಸಂಕಟ ಬರೋ ಮುಂಚೆ ತೀರಿ ಹೋದ್ರೆ ಚೆನ್ನಾಗಿರುತ್ತೆ. ಯಾಕಂದ್ರೆ ಅವ್ರಿಗೆ ಮತ್ತೆ ಜೀವಿಸೋಕೆ ನಿರೀಕ್ಷೆ ಸಿಗುತ್ತೆ” ಅಂತ ಹೇಳೋದನ್ನ ನೀವು ಕೇಳಿಸ್ಕೊಂಡಿರಬಹುದು. ಈ ತರ ಹೇಳೋದ್ರ ಹಿಂದೆ ಒಳ್ಳೇ ಉದ್ದೇಶ ಇದೆ ನಿಜ. ಆದ್ರೆ ಅವ್ರಿಗೆ ಶಾಶ್ವತ ಜೀವ ಸಿಗುತ್ತಾ ಇಲ್ವಾ ಅನ್ನೋದು ಅವರು ಯಾವಾಗ ತೀರಿಕೊಳ್ತಾರೆ ಅನ್ನೋದ್ರ ಮೇಲೆ ಹೊಂದ್ಕೊಂಡಿಲ್ಲ. ಯೆಹೋವ ಪರಿಪೂರ್ಣನಾಗಿರೋ ನ್ಯಾಯಾಧೀಶ. ಹಾಗಾಗಿ ಆತನು ನೀತಿ ನ್ಯಾಯದಿಂದ ತೀರ್ಮಾನಗಳನ್ನ ಮಾಡ್ತಾನೆ. (ಕೀರ್ತನೆ 33:4, 5 ಓದಿ.) ಅದಕ್ಕೇ “ಇಡೀ ಭೂಮಿಯ ನ್ಯಾಯಾಧೀಶನಾದ” ಯೆಹೋವ ಸರಿಯಾಗಿರೋದನ್ನೇ ಮಾಡ್ತಾನೆ ಅಂತ ನಾವು ಕಣ್ಮುಚ್ಚಿ ನಂಬಬಹುದು.—ಆದಿ. 18:25.

15 ಒಬ್ಬ ವ್ಯಕ್ತಿಗೆ ಶಾಶ್ವತ ಜೀವ ಸಿಗುತ್ತಾ ಇಲ್ವಾ ಅನ್ನೋದು ಅವನು ಎಲ್ಲಿದ್ದಾನೋ ಅದ್ರ ಮೇಲೂ ಹೊಂದ್ಕೊಂಡಿಲ್ಲ. ಯಾಕೆ? ಯಾಕಂದ್ರೆ ಕೆಲವು ದೇಶಗಳಲ್ಲಿರೋ ಲಕ್ಷಾಂತರ ಜನ್ರಿಗೆ ಯೆಹೋವ ದೇವರ ಬಗ್ಗೆ ತಿಳ್ಕೊಳ್ಳೋಕೆ ಒಂದು ಸಲನೂ ಅವಕಾಶ ಸಿಕ್ಕಿಲ್ಲ. ಹಾಗಾಗಿ ಯೆಹೋವ ಅವ್ರನ್ನ ‘ಆಡುಗಳು’ ಅಂತ ಪಟ್ಟಿ ಕಟ್ಟಿ ಬಿಟ್ಟುಬಿಡಲ್ಲ. (ಮತ್ತಾ. 25:46) ಇಡೀ ಭೂಮಿಯ ನ್ಯಾಯಾಧೀಶನಾಗಿರೋ ಯೆಹೋವನಿಗೆ ಆ ಜನ್ರ ಬಗ್ಗೆ ನಮಗಿಂತ ಚೆನ್ನಾಗಿ ಗೊತ್ತಿದೆ ಮತ್ತು ಆತನು ಅವ್ರ ಬಗ್ಗೆ ಯೋಚ್ನೆನೂ ಮಾಡ್ತಾನೆ. ಅಷ್ಟೇ ಅಲ್ಲ ಮಹಾ ಸಂಕಟದ ಸಮಯದಲ್ಲಿ ಆತನು ಸನ್ನಿವೇಶವನ್ನ ಹೇಗೆ ಬದಲಾಯಿಸ್ತಾನೆ ಅಂತ ನಮಗೆ ಗೊತ್ತಿಲ್ಲ. ಹಾಗಾಗಿ ಯೆಹೋವ ಇಡೀ ಲೋಕದ ಜನ್ರಿಗೆ ತನ್ನ ಹೆಸ್ರನ್ನ ತಿಳಿಸುವಾಗ ಈ ಜನ್ರಲ್ಲಿ ಕೆಲವ್ರಿಗೆ ಆತನ ಬಗ್ಗೆ ಕಲಿಯೋಕೆ, ಆತನ ಮೇಲೆ ನಂಬಿಕೆ ಇಡೋಕೆ ಮತ್ತು ಆತನ ಪಕ್ಷ ನಿಲ್ಲೋಕೆ ಅವಕಾಶ ಸಿಗಬಹುದು.—ಯೆಹೆ. 38:16.

ಮಹಾ ಸಂಕಟ ಶುರು ಆದ್ಮೇಲೂ . . . ಇದನ್ನೆಲ್ಲ ನೋಡಿ ಆಗ ಜನ್ರು ಬದಲಾಗಬಹುದಾ?

16. ಯೆಹೋವನ ಬಗ್ಗೆ ನಮಗೆ ಏನು ಗೊತ್ತು? (ಚಿತ್ರ ನೋಡಿ.)

16 ಯೆಹೋವ ದೇವರಿಗೆ ನಾವಂದ್ರೆ ಎಷ್ಟು ಇಷ್ಟ, ಆತನು ನಮ್ಮನ್ನ ಎಷ್ಟು ಅಮೂಲ್ಯವಾಗಿ ನೋಡ್ತಾನೆ ಅಂತ ಬೈಬಲ್‌ ಓದುವಾಗ ನಮಗೆ ಗೊತ್ತಾಗುತ್ತೆ. ನಾವು ಶಾಶ್ವತ ಜೀವ ಪಡಿಯೋಕೆ ಆತನು ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಕೊಟ್ಟನು. (ಯೋಹಾ. 3:16) ಇದ್ರಿಂದ ಯೆಹೋವ ದೇವರಿಗೆ ನಮ್ಮ ಮೇಲೆ ಎಷ್ಟು ಕನಿಕರ ಇದೆ, ಪ್ರೀತಿ ಇದೆ ಅಂತ ಗೊತ್ತಾಗುತ್ತೆ. (ಯೆಶಾ. 49:15) ಯೆಹೋವ ದೇವರಿಗೆ ಪ್ರತಿಯೊಬ್ರ ಬಗ್ಗೆನೂ ಚೆನ್ನಾಗಿ ಗೊತ್ತು. ಒಂದುವೇಳೆ ನಾವು ತೀರಿಹೋದ್ರೂ ನಮ್ಮನ್ನ ಮತ್ತೆ ಬದುಕಿಸೋ ಶಕ್ತಿ ಆತನಿಗಿದೆ. ಯಾಕಂದ್ರೆ ನಮ್ಮ ಬಗ್ಗೆ ಚಿಕ್ಕಪುಟ್ಟ ವಿಷ್ಯಗಳು, ನಮ್ಮ ಮನಸ್ಸಲ್ಲಿರೋ ಒಂದೊಂದು ನೆನಪುಗಳೂ ಆತನಿಗೆ ಚೆನ್ನಾಗಿ ಗೊತ್ತಿದೆ. (ಮತ್ತಾ. 10:29-31) ಹಾಗಾಗಿ ಯೆಹೋವ ತೀರ್ಪು ಮಾಡುವಾಗ ಸರಿಯಾಗಿರೋದನ್ನೇ ಮಾಡ್ತಾನೆ ಅಂತ ನಂಬಬಹುದು. ಯಾಕಂದ್ರೆ ಆತನು ವಿವೇಕಿ, ನೀತಿವಂತ ಮತ್ತು ಕರುಣಾಮಯಿ ದೇವರಾಗಿದ್ದಾನೆ.—ಯಾಕೋ. 2:13.

ಯೆಹೋವ ವಿವೇಕಿ, ನೀತಿವಂತ ಮತ್ತು ಕರುಣಾಮಯಿ ದೇವರಾಗಿರೋದ್ರಿಂದ ಪ್ರತಿಯೊಬ್ರಿಗೂ ಸರಿಯಾಗೇ ತೀರ್ಪು ಮಾಡ್ತಾನೆ ಅಂತ ನಾವು ನಂಬಬಹುದು (ಪ್ಯಾರ 16 ನೋಡಿ)


17. ಮುಂದಿನ ಲೇಖನದಲ್ಲಿ ನಾವೇನು ಕಲಿತೀವಿ?

17 ಹೊಸ ತಿಳುವಳಿಕೆ ಅರ್ಥಮಾಡ್ಕೊಂಡ ಮೇಲೆ ಸಾರೋ ಕೆಲಸನ ಮುಂಚೆಗಿಂತ ಜಾಸ್ತಿ ಮಾಡಬೇಕಂತ ನಮಗೀಗ ಗೊತ್ತಾಗಿದೆ. ಯಾಕೆ ಹಾಗೆ ಹೇಳಬಹುದು? ಹುರುಪಿನಿಂದ ಸಿಹಿಸುದ್ದಿ ಸಾರುತ್ತಾ ಇರೋಕೆ ನಮಗೆ ಯಾವುದು ಸಹಾಯ ಮಾಡುತ್ತೆ? ಅದನ್ನ ನಾವು ಮುಂದಿನ ಲೇಖನದಲ್ಲಿ ಚರ್ಚೆ ಮಾಡೋಣ.

ಗೀತೆ 153 ಹೇಗನಿಸುತ್ತದೆ?

a ಈ ಬದಲಾವಣೆ ಯಾಕೆ ಮಾಡಲಾಯ್ತು ಅಂತ ತಿಳ್ಕೊಳೋಕೆ ಮಾರ್ಚ್‌ 15, 2015ರ ಕಾವಲಿನಬುರುಜುವಿನ ಪುಟ 7-11ರಲ್ಲಿರೋ ‘ನೀನು ಒಪ್ಪುವ ಮಾರ್ಗ’ ಅನ್ನೋ ಲೇಖನ ನೋಡಿ.

b ಮಹಾ ಬಾಬೆಲ್‌ ನಾಶ ಆದ್ಮೇಲೆ ಮಾಗೋಗಿನ ಗೋಗ ಎಲ್ಲ ದೇವಜನ್ರ ಮೇಲೆ ಆಕ್ರಮಣ ಮಾಡ್ತಾನೆ. ಆಗ ಅವರೆಲ್ರ ನಂಬಿಕೆ ಪರೀಕ್ಷೆ ಆಗುತ್ತೆ. ಅಷ್ಟೇ ಅಲ್ಲ ಮಹಾ ಬಾಬೆಲ್‌ ನಾಶ ಆದ್ಮೇಲೆ ಯೆಹೋವನ ಜನ್ರ ಜೊತೆ ಯಾರೆಲ್ಲ ಸೇರಿಕೊಳ್ತಾರೋ ಅವ್ರ ನಂಬಿಕೆನೂ ಪರೀಕ್ಷೆ ಆಗುತ್ತೆ.

c ಚಿತ್ರ ವಿವರಣೆ: ಸಿಹಿಸುದ್ದಿ ಎಲ್ರಿಗೂ ಯಾಕೆ ಸಾರೋಕೆ ಆಗಲ್ಲ ಅಂತ ತೋರಿಸೋ ಮೂರು ಚಿತ್ರಗಳು: (1) ಸಿಹಿಸುದ್ದಿ ಸಾರೋಕೆ ಕಷ್ಟ ಆಗಿರೋ ಒಂದು ದೇಶದಲ್ಲಿರೋ ಸ್ತ್ರೀಯನ್ನ ತೋರಿಸಲಾಗಿದೆ. (2) ಬೇರೆ ಧರ್ಮದಲ್ಲಿರೋದು ನಿಯಮಕ್ಕೆ ವಿರುದ್ಧ ಅಂತ ಸರ್ಕಾರ ಹೇಳೋ ಒಂದು ದೇಶದಲ್ಲಿರೋ ದಂಪತಿ (3) ಕಾಡಲ್ಲಿರೋ ಮತ್ತು ಅಲ್ಲಿಗೆ ಹೋಗೋಕೆ ಆಗದಿರೋ ಬುಡಕಟ್ಟು ಜನಾಂಗದಲ್ಲಿರೋ ಒಬ್ಬ ವ್ಯಕ್ತಿ.

d ಚಿತ್ರ ವಿವರಣೆ: ಸತ್ಯ ಬಿಟ್ಟು ಹೋದ ಒಬ್ಬ ಸ್ತ್ರೀ “ಮಹಾ ಬಾಬೆಲ್‌” ನಾಶ ಆಗೋದ್ರ ಬಗ್ಗೆ ಕಲಿತಿದ್ದನ್ನ ನೆನಪು ಮಾಡ್ಕೊತಿದ್ದಾಳೆ. ಆಗ ಅವಳು ಮನಸ್ಸು ಬದಲಾಯಿಸಿ ಯೆಹೋವನನ್ನ ಆರಾಧಿಸ್ತಿರೋ ಅಪ್ಪ ಅಮ್ಮ ಹತ್ರ ಬಂದಿದ್ದಾಳೆ. ಈ ತರ ಜನ್ರು ಬದಲಾಗುವಾಗ ನಾವೂ ಯೆಹೋವನ ತರ ಕನಿಕರ ಮತ್ತು ಕರುಣೆ ತೋರಿಸಬೇಕು. ಅಷ್ಟೇ ಅಲ್ಲ ಅವರು ವಾಪಾಸ್‌ ಬಂದಿದ್ದಕ್ಕೆ ಖುಷಿ ಪಡಬೇಕು.